ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು


-ಇರ್ಷಾದ್ ಉಪ್ಪಿನಂಗಡಿ


“ನನಗೆ ನಾಲ್ಕು ಎಕರೆ ಕೃಷಿ ಇದೆ. ಕೃಷಿ ನನ್ನ ಪಾಲಿನ ದೇವರು. ಕಷ್ಟ ಪಟ್ಟು ತನ್ನ ಮಕ್ಕಳಂತೆ ಈ ಜಮೀನಿನಲ್ಲಿ ಮರಗಿಡಗಳನ್ನು  ನೆಟ್ಟು ಬೆಳೆಸಿದ್ದೇನೆ. ಇದೀಗ ಕೈಗಾರಿಕೆಗಂತ ನನ್ನ ಭೂಮಿಯನ್ನ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಜೀವ ಹೋದರೂ ನನ್ನMRPL ಜಮೀನನ್ನು ಕಂಪನಿಗೆ ಬಿಟ್ಟು ಕೊಡುವುದಿಲ್ಲ. ನನ್ನ ಬದುಕನ್ನು ಉಳಿಸಿಕೊಳ್ಳಲು ಅದ್ಯಾವ ರೀತಿಯ ಹೋರಾಟಕ್ಕೂ ನಾನು ತಯಾರಿದ್ದೀನಿ” ಹೀಗೆ ಆಕ್ರೋಶ ಭರಿತ ದುಖಃದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರ ಹೆಸರು ಮೊಂತಿ ಡಿಸೋಜಾ. ಮಂಗಳೂರಿನ ಪೆರ್ಮುದೆ ನಿವಾಸಿಯಾಗಿರುವ ಮೊಂತಿ ಡಿಸೋಜಾಗೆ 78 ವರ್ಷ. ನಡೆಯಲು ಆಧಾರಕ್ಕಾಗಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಬೆಳೆದು ನಿಂತ ಪೈರು, ಹಚ್ಚ ಹಸಿರಾಗಿರುವ ತೋಟವನ್ನು ತೋರಿಸುತ್ತಾ ಕಂಪನಿಯವರು ಕೇಳ್ತಾರಂತಾ ಇದನ್ನೆಲ್ಲಾ ಬಿಟ್ಟುಕೊಟ್ಟು ನಾನು ಎಲ್ಲಿಗೆ ಹೋಗಲಿ ಅಂದಾಗ ಅವರ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತಿತ್ತು. ಹತ್ತು ವರ್ಷದ ಹಿಂದೆ ಕೂಡಾ ಮೊಂತಿ ಡಿಸೋಜಾರಿಗೆ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಭಾರೀ ಹೋರಾಟ ನಡೆಸಿ ಮೊಂತಿ ಡಿಸೋಜಾ ತನ್ನ ಕೃಷಿ ಭೂಮಿಯನ್ನ ಉಳಿಸಿಕೊಂಡಿದ್ದರು. ಒಲಿದುಕೊಂಡ ಭೂಮಿಯಲ್ಲಿ ಕೃಷಿ ಅಭಿವೃದ್ದಿಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಏನಂತೆ, ಇದೀಗ ಮತ್ತೆ ಎಂ.ಆರ್.ಪಿ.ಎಲ್  ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಮುಂದಾಗಿದೆ. ಪರಿಣಾಮ ಭೂಸ್ವಾಧೀನದ ಭೂತ ಮೊಂತಿಬಾಯಿಯವರನ್ನು ಮತ್ತೊಮ್ಮೆ ಕಾಡಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಎಂ.ಆರ್.ಪಿ.ಎಲ್ ಕಾಲಿಟ್ಟಾಗಿನಿಂದಲೂ ಅದು ಸ್ಥಳೀಯರ ನಿದ್ದೆಗೆಡೆಸಿದೆ. 2006 ರಲ್ಲಿ ಎಂ.ಆರ್.ಪಿ.ಎಲ್wiliyam disoza ನೇತ್ರತ್ವ ಹಾಗೂ ಪಾಲುಗಾರಿಕೆಯಲ್ಲಿ ರೂಪು ತಳೆದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ರಾಜ್ಯ ಸರ್ಕಾರ ಈಗಾಗಲೇ 2017 ಎಕರೆ ಜಮೀನನ್ನು ರೈತರಿಂದ ಕಿತ್ತು ಕೊಟ್ಟಿದೆ. ಈ ಪೈಕಿ ಎಸ್.ಇ.ಜೆಡ್ ನೊಳಗೆ ವಿವಿಧ ಘಟಕಗಳ ಸ್ಥಾಪನೆಗಾಗಿ ಬಳಕೆಯಾಗಿರುವುದು ಕೇವಲ 717 ಎಕರೆ. ಉಳಿದ 1300 ಎಕರೆ ಜಮೀನು ಖಾಲಿ ಇದ್ದರೂ ತೃಪ್ತಿಗೊಳ್ಳದ ಎಂ.ಆರ್.ಪಿ.ಎಲ್ ಇದೀಗ ಮತ್ತೆ ಮಂಗಳೂರು ತಾಲೂಕಿನ ತೂಕೂರು, ಬೈಕಂಪಾಡಿ, ತಣ್ಣೀರುಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಹಾಗೂ ದೇಲಂತಬೆಟ್ಟು ಗ್ರಾಮಗಳ ಸುಮಾರು 1050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅಲ್ಲದೆ ಮುಂದಿನ ಹಂತದಲ್ಲಿ 3000 ಎಕರೆಗೂ ಮೀರಿದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುವ ಗುರಿ ಎಮ್.ಆರ್.ಪಿ.ಎಲ್ ನದ್ದು. ಸರ್ಕಾರವೂ ಕಂಪನಿಯ ಈ ಎಲ್ಲಾ ಬೇಡಿಕೆಗೆ ಅಸ್ತು ಅಂದಿದೆ. ಪರಿಣಾಮ ಜನರು ತಾವು ಶ್ರಮಪಟ್ಟು ಬೆಳೆಸಿದ ಕೃಷಿ, ಜಮೀನು, ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪೆರ್ಮುದೆ, ಕುತ್ತೆತ್ತೂರು ಗ್ರಾಮ ಮಂಗಳೂರು ನಗರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಸುಮಾರುpermude-sez-3 6000. ಗ್ರಾಮದ ಶೇ. 75 ರಷ್ಟು ಜನರು ಕೃಷಿಕರು. ಭತ್ತ, ಅಡಿಕೆ, ತೆಂಗು, ಬಾಳೆ, ತರಕಾರಿ ಇಲ್ಲಿಯ ಪ್ರಮುಖ ಕೃಷಿ. 2006 ರಲ್ಲಿ ಎಸ್.ಇ.ಜೆಡ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಹಾಗೂ ದೇಲಂತ ಬೆಟ್ಟು ಗ್ರಾಮಗಳು ಒಳಗೊಂಡಿದ್ದವು. ಆದರೆ ಬಲವಂತದ ಭೂಸ್ವಾಧೀನದ ವಿರುದ್ಧವಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ 2011 ರಲ್ಲಿ ಭೂಸ್ವಾಧೀನದಿಂದ ಈ ಗ್ರಾಮಗಳನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಎಮ್.ಆರ್.ಪಿ.ಎಲ್ ನಾಲ್ಕನೇ ಹಂತಕ್ಕಾಗಿ ಭೂಸ್ವಾಧೀನದ ಪ್ರಕ್ರಿಯೆ ಚುರುಕು ಪಡೆಯುತ್ತಿರುವಂತೆ ಈ ಗ್ರಾಮದ ಜನರು ಆತಂಕಿತರಾಗಿದ್ದಾರೆ.

ವಿಲಿಯಂ ಡಿಸೋಜಾ ಕುತ್ತೆತ್ತೂರಿನ ನಿವಾಸಿ. ನಮ್ಮನ್ನು ಬರಮಾಡಿಕೊಂಡು ಕುತ್ತೆತ್ತೂರಿನ ಹಚ್ಚ ಹಸಿರಾದ ವಾತಾವರಣವನ್ನು ತೋರಿಸಲು ತಮ್ಮ ಜೀಪ್ ನಲ್ಲಿ ಕರೆದೊಯ್ದರು. ವಿಲಿಯಂ ಡಿಸೋಜಾರಿಗೆ 15 ಎಕರೆ ಜಮೀನಿದೆ. ಇವರ ಜಮೀನಿನಲ್ಲೊಮ್ಮೆ ನಿಂತು ಎಲ್ಲಿ ಕಣ್ಣು ಹಾಯಿಸಿದರೂ ಸಮೃದ್ದವಾಗಿ ಬೆಳೆದು ನಿಂತ ಕೃಷಿತೋಟ ನಮ್ಮನ್ನು ಸೆಳೆಯುತ್ತದೆ. ಪುಟ್ಟ ಮನೆ, ಹೆಂಡತಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯ ಪರಿಸರದಲ್ಲಿ ಜೀವನ ನಡೆಸುತ್ತಿರುವ ವಿಲಿಯಂಗೆ ಇದೀಗ ಎಲ್ಲವನ್ನೂ ಕಳೆದುಕೊಳ್ಳುತ್ತೇನೆಂಬ ಆತಂಕ. “ನಾನು ನನ್ನ ಸ್ವಂತ ಜಮೀನನ್ನು ಮಾರಿ ಬಿಟ್ಟು ಎಂ.ಆರ್.ಪಿ.ಎಲ್ ಕೂಲಿಯಾಳಾಗಲು ತಯಾರಿಲ್ಲ. ಮೈಮುರಿದು ಗದ್ದೆ ತೋಟ ಬೆಳೆಸಿದ್ದೇನೆ. ಉತ್ತಮ ಆದಾಯಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಇದೀಗ ಎಮ್.ಆರ್.ಪಿ.ಎಲ್ ಕಂಪನಿ ನನ್ನ ಜಮೀನಿಗೆ ಕನ್ನ ಹಾಕ್ತಿದೆ. ನನ್ನನ್ನು ಕೊಂದರೂ ನನ್ನ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ” ಅಂತಿದ್ದಾರೆ ವಿಲಿಯಂ. ವಿಲಿಯಂ ಡಿಸೋಜಾ ಎಂ.ಆರ್.ಪಿ.ಎಲ್ ಭೂಸ್ವಾಧೀನದಿಂದ ರೈತರ ಕೃಷಿ ಭೂಮಿಯನ್ನ ಸಂರಕ್ಷಿಸಲು ಹುಟ್ಟಿಕೊಂಡ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು. ಗ್ರಾಮದ ಮನೆಮನೆಗಳನ್ನು ಸುತ್ತಿಕೊಂಡು ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಧುಮುಕುವಂತೆ ರೈತರನ್ನು ಸಂಘಟಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇದು ಕೇವಲ ಮೊಂತಿ ಡಿಸೋಜಾ, ವಿಲಿಯಂ ಡಿಸೋಜಾರಂತಹ ಕೃಷಿಕರ ಆತಂಕ ಮಾತ್ರವಲ್ಲ. ಪೆರ್ಮುದೆ, ಕುತ್ತೆತ್ತೂರು ಗ್ರಾಮದpermude-sez ಎಲ್ಲಾ ಕೃಷಿಕರ ಆತಂಕ ಕೂಡಾ ಹೌದು. ಕುತ್ತೆತ್ತೂರಿನ ನಾಗೇಶ್ ಎಂಬುವವರಿಗೆ 6 ಎಕರೆ ಜಮೀನಿದೆ. ಇವರ ತೋಟ ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತೆ. ಎಲ್ಲಾ ರೀತಿಯ ಬೇಸಾಯವನ್ನು ತನ್ನ ಫಲವತ್ತಾದ ಭೂಮಿಯಲ್ಲಿ ನಾಗೇಶ್ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕೃಷಿ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದ್ದು ಅವರ ಮನೆ ದೈವದ ಸ್ಥಾನ. “ಕೃಷಿ ದೈವದೇವರುಗಳನ್ನು ಬಿಟ್ಟು ಇಲ್ಲಿಂದ ಹೊರಹೋಗೋದಕ್ಕಿಂತ ಹೋರಾಡಿ ಸಾಯೋದೇ ಲೇಸು” ಅನ್ನುತ್ತಾರೆ ನಾಗೇಶ್. ಇವರಂತೆ ಪೆರ್ಮುದೆಯ ನಿವಾಸಿ ರಾಘವೇಂದ್ರ. ಇವರು ವೃತ್ತಿಯಲ್ಲಿ ಅರ್ಚಕರು. ತೋಟದ ನಡುವಿನ ಮನೆಗೆ ಅವರನ್ನ ಮಾತನಾಡಿಸಲೆಂದು ಹೋದಾಗ ಮಾವಿನ ರಸದಿಂದ ತಯಾರಿಸಿದ ರುಚಿಯಾದ ತಿಂಡಿಯನ್ನು ನಮಗೆ ಸವಿಯಲು ನೀಡಿ ಇದು ನಿಮ್ಮ ಸಿಟಿಯಲ್ಲಿ ಸಿಗುತ್ತಾ ಮಾರಾಯರೇ ಎಂದು ನಗುತ್ತಾ ಮಾತಿಗಿಳಿದರು. “ನಾವೇನು ಕೈಗಾರಿಕೆಗಳ ವಿರೋಧಿಗಳಲ್ಲ ಆದ್ರೆ ಇವರಿಗೆ ಕೃಷಿ ಭೂಮಿಯೇ ಯಾಕೆ ಬೇಕು? ಎಮ್.ಆರ್.ಪಿ.ಎಲ್ ನಂತಹಾ ಕೈಗಾರಿಕೆ ಇಲ್ಲಿಗೆ ಬಂದ ನಂತರ ಇಲ್ಲಿನ ಪರಿಸರ, ಜೀವವೈವಿದ್ಯ ನಾಶವಾಗುತ್ತಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ  ಕೈಗಾರಿಕೆ ಬೆಳೆಯುತ್ತಿದೆ” ಎನ್ನುತ್ತಾ ತಮ್ಮ ತೋಟದ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಎರಡೂವರೆ ಎಕರೆ ಜಮೀನಿನಲ್ಲಿ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ರಾಘವೇಂದ್ರ ಬೆಳೆಸಿದ್ದಾರೆ. ಉತ್ತಮ ಪರಿಹಾರ ಸಿಗುತ್ತಲ್ಲಾ, ಕೈತುಂಬಾ ಹಣ ಸಿಗುತ್ತಲ್ವಾ ಮತ್ತೆ ನೀವು ಯಾಕೆ ಎಮ್.ಆರ್.ಪಿ.ಎಲ್ ಗೆ ಭೂಮಿ ಕೊಡುವುದಿಲ್ಲಾ ಎಂಬ ಪ್ರಶ್ನೆಗೆ “ಈ ಹಿಂದೆ ಹಣದ ದುರಾಸೆಗೆ ಬಿದ್ದು ಭೂಮಿ ಕೊಟ್ಟವರ ದುಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ನಾವು ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಭಾವನೆಗಳಿವೆ, ಇಲ್ಲಿ ನಮಗೆ ನೆಮ್ಮದಿಯಿದೆ ನಮ್ಮ ಬದುಕನ್ನು ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎನ್ನುತ್ತಾ ಮಾತು ಮುಗಿಸುವಾಗ ಅರ್ಚಕರ ಕಣ್ಣು ಕೆಂಪಾಗಿತ್ತು.

ಹೀಗೆ ಪೆರ್ಮುದೆ, ಕುತ್ತೆತ್ತೂರು ಗ್ರಾಮದಲ್ಲಿ ಮಾತಿಗೆ ಸಿಕ್ಕ ಬಹುತೇಕ ರೈತರ ಅಭಿಪ್ರಾಯ ಒಂದೇ ಆಗಿತ್ತು. ಯಾವುದೇ ಕಾರಣಕ್ಕೂVidya ಕಂಪನಿಗೆ ನಮ್ಮ ಕೃಷಿ ಭೂಮಿಯನ್ನು ನೀಡುವುದಿಲ್ಲವೆಂಬುವುದಾಗಿದೆ. ರೈತರ ವಿರೋಧದ ನಡುವೆಯೂ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಎಮ್.ಆರ್.ಪಿ.ಎಲ್ ವಿರುದ್ಧ ಇವರೆಲ್ಲಾ ಸಂಘಟಿತರಾಗುತಿದ್ದಾರೆ. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ತಮ್ಮ ನೆಲ ಜನ ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ. “ನಮಗೆ ರೈತರ ಕೃಷಿ ಭೂಮಿ ಹಾಗೂ ಅವರ ಬದುಕು ಇಲ್ಲಿಯ ಪರಿಸರ ಮುಖ್ಯವಾಗಿವೆಯೇ ಹೊರತು ಎಮ್.ಆರ್.ಪಿ.ಎಲ್ ನಂತಹ ಕಂಪನಿಯಲ್ಲ. ಖಾಲಿ ಬಿದ್ದಿರುವ ಹೆಚ್ಚುವರಿ ಭೂಮಿ ಎಮ್.ಆರ್.ಪಿ.ಎಲ್ ಬಳಿ ಇದ್ದರೂ ಮತ್ತೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗೋ ಉದ್ದೇಶವೇನು” ಎಂದು ಪ್ರಶ್ನಿಸುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮುಂದಾಳತ್ವವನ್ನು ನೀಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್. “ಭೂಮಿ ಕೊಡಲೊಪ್ಪದ ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಈ ಹಿಂದೆ ಎಸ್.ಇ.ಜೆಡ್ ಗಾಗಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಾಗ ಅದರ ವಿರುದ್ಧ ಹೋರಾಟ ನಡೆಸಿ ಭೂಮಿ ಉಳಿಸಿಕೊಂಡಿದ್ದೇವೆ. ಇದೀಗ ಮತ್ತೊಂದು ಹಂತದ ಹೋರಾಟ ಶುರುವಾಗಿದೆ” ಅನ್ನುತ್ತಾರೆ ವಿದ್ಯಾ ದಿನಕರ್.

ಪೆರ್ಮುದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಜನರಿಗೆ ಹಾಗೂ ಸ್ಥಳೀಯ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಗುಪ್ತವಾಗಿ ಭೂಸ್ವಾಧೀನದ ಪ್ರಕ್ರಿಯೆಗೆ ಎಮ್.ಆರ್.ಪಿ.ಎಲ್ ಮುಂದಾಗುತ್ತಿರುವುದು ಆತಂಕಕಾರಿ ವಿಚಾರ ಎಂಬುವುದು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ಅಭಿಪ್ರಾಯ. ಇಷ್ಟೆಲ್ಲಾ ಪ್ರಬಲ ವಿರೋಧಗಳ ನಡುವೆಯೂ ಎಮ್.ಆರ್.ಪಿ.ಎಲ್ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಹಿಂಭಾಗಿಲ ಮೂಲಕ ಪ್ರಯತ್ನ ನಡೆಸುತ್ತಿದೆ. ಊರಿನ ಜನರಿಗೂ, ಸ್ಥಳೀಯ ಗ್ರಾಮಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೆ ಗ್ರಾಮದ ಸರ್ವೇ ಕಾರ್ಯ ನಡೆಸಲು ಎಮ್.ಆರ್.ಪಿ.ಎಲ್ ಸಿಬಂಧಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನ ಬೆನ್ನಟ್ಟಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪನಿ ಹಾಗೂ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಸ್ಥಳೀಯರನ್ನು ಚೂಬಿಟ್ಟು ರೈತರಿಗೆ ಅಮಿಷ ಒಡ್ಡುವ ಕೆಲಸದಲ್ಲೂ ಕಂಪನಿ ನಿರತವಾಗಿದೆ.

ದೈತ್ಯ ಕಂಪನಿಯ ದುರಾಸೆಯ ಭೂಬೇಡಿಕೆ ವಿರುದ್ಧದ ಹೋರಾಟ ಕೇವಲ ಪೆರ್ಮುದೆ ಕುತ್ತೆತ್ತೂರು ಗ್ರಾಮದ ಜನರಿಗಷ್ಟೇ ಸೀಮಿತವಾಗಬಾರದು. ಕಾರಣ ಎಮ್,ಆರ್.ಪಿ.ಎಲ್ ಭೂಬೇಡಿಕೆ ಅಷ್ಟು ಸುಲಭವಾಗಿ ತಣಿಯುವಂತಹದಲ್ಲ. ಇಂದು ಪೆರ್ಮುದೆ, ಕುತ್ತೆತ್ತೂರು ಗ್ರಾಮಸ್ಥರು ಎದುರಿಸುತ್ತಿರುವ ಆತಂಕ, ಅತಂತ್ರತೆ ಮುಂದಿನ ದಿನಗಳಲ್ಲಿ ಮಂಗಳೂರಿನ ಸುತ್ತಮುತ್ತಲ ಹಳ್ಳಿಯ ಜನರದ್ದಾಗಬಹುದು. ಈ ನಿಟ್ಟಿನಲ್ಲಿ ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆಯ ವಿರುದ್ಧದ ರೈತ ಹೋರಾಟಕ್ಕೆ ಕೈಜೋಡಿಸಬೇಕಿದೆ. ಇಲ್ಲವಾದಲ್ಲಿ ಕೈಗಾರೀಕರಣ ಎಂಬ ಹೆಸರಿನ ಬುಲ್ಡೋಜರ್ ಬಾಯಿಗೆ ಮತ್ತಷ್ಟು ರೈತ ಸಮುದಾಯ ಬಲಿಯಾಗೋದಂತೂ ನಿಶ್ಚಿತ.

One thought on “ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು

  1. Ananda Prasad

    ರೈತರು ಸಂಘಟಿತರಾಗಿಲ್ಲದಿರುವುದೇ ಅವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಷಣೆ ಮಾಡಲು ಪ್ರಧಾನ ಕಾರಣವಾಗಿದೆ. ರಾಜ್ಯದ ಅಥವಾ ದೇಶದ ಕೃಷಿಕರು ಒಟ್ಟು ಜನಸಂಖ್ಯೆಯ ೬೦% ಎಂದು ಹೇಳಿದರೂ ಇವರು ಇದುವರೆಗೂ ಸರಕಾರದ ನೀತಿ ನಿರೂಪಣೆಯ, ಕಾನೂನು ರೂಪಿಸುವಿಕೆಯ ಭಾಗ ಆಗಿಲ್ಲ. ಕೃಷಿಕರಿಗೆ ಕಾನೂನುಗಳನ್ನು ರೂಪಿಸುವವರು ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತ ಮಣ್ಣಿನ ಸ್ಪರ್ಶವಿಲ್ಲದ ಅಧಿಕಾರಿಗಳು. ಕೆಂಪು ಪಟ್ಟಿಯ ಅರ್ಥವಿಲ್ಲದ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿಗಳು ತಾವು ಯಾವ ರೀತಿ ಕೃಷಿಕರನ್ನು ಶೋಷಿಸಬಹುದು ಎಂಬುದಕ್ಕೆ ಆದ್ಯತೆ ಕೊಟ್ಟು ಕಾನೂನುಗಳನ್ನು ರೂಪಿಸುತ್ತಾರೆ. ಇವುಗಳಿಗೆ ಶಾಸನಸಭೆಗಳಲ್ಲಿ ಕುಳಿತ ಶಾಸಕರು ಕಣ್ಣುಮುಚ್ಚಿ ಒಪ್ಪಿಗೆ ಸೂಚಿಸುತ್ತಾರೆ. ಇದರಿಂದಾಗಿ ಬಳಲುವವರು ರೈತರು. ಇದು ಸ್ವಾತಂತ್ರ್ಯ ಬರುವ ಮೊದಲು ಮತ್ತು ಸ್ವಾತಂತ್ರ್ಯ ಬಂದ ನಂತರವೂ ನಮ್ಮ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವಾಗಿದೆ. ರೈತರು ಒಟ್ಟು ಜನಸಂಖ್ಯೆಯ ಶೇಕಡಾವಾರು ಲೆಕ್ಕದಲ್ಲಿ ಬಹಳ ದೊಡ್ಡ ಗಾತ್ರವಾಗಿದ್ದರೂ ಪರಸ್ಪರ ಸಂಪರ್ಕ ಹಾಗೂ ಸಂಘಟನೆ ಇಲ್ಲದ ಕಾರಣ ರೈತರ ಸಮಸ್ಯೆಗಳಿಗೆ ಮಾಧ್ಯಮಗಳು (ಇದರಲ್ಲಿ ಪತ್ರಿಕಾ ಮಾಧ್ಯಮ, ಟಿವಿ ಮಾಧ್ಯಮ ಎಲ್ಲವೂ ಬರುತ್ತದೆ) ಕೂಡ ಯಾವುದೇ ಗಮನ ನೀಡುವುದಿಲ್ಲ.

    ರಾಜ್ಯದಲ್ಲಿ ರೈತಸಂಘಟನೆಗಳು ಇಂದು ತೀರಾ ದುರ್ಬಲವಾಗಿವೆ. ಇರುವ ರೈತ ಸಂಘಟನೆಗಳು ಕೂಡ ರೈತರನ್ನು ಸಂಘಟಿಸುವ ಬಗ್ಗೆ ಗಮನಹರಿಸುತ್ತಿಲ್ಲ. ರೈತರ ಸಂಘಟನೆಗಳು ಇಂದಿನ ಅಂತರ್ಜಾಲ ಯುಗದಲ್ಲಿ ಒಂದು ವೆಬ್ ಸೈಟ್ ಕೂಡ ಹೊಂದಿಲ್ಲ. ರೈತರ ಪತ್ರಿಕೆಗಳು ಕೂಡ ಇಲ್ಲ (ಇರುವ ಕೆಲವು ಪತ್ರಿಕೆಗಳು ಬರಿಯ ಕೃಷಿ ವಿಚಾರಗಳನ್ನು ಮಾತ್ರವೇ ಚರ್ಚಿಸುತ್ತವೆಯೇ ಹೊರತು ಕೃಷಿಕರು ಎದುರಿಸುವ ಬೇರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದೇ ಇಲ್ಲ). ಇಂದು ಸಾಕಷ್ಟು ರೈತರು ವಿದ್ಯಾವಂತರಾಗಿದ್ದರೂ, ಸ್ಮಾರ್ಟ್ ಫೋನ್ ಉಪಯೋಗಿಸುತ್ತಿದ್ದರೂ ರೈತರನ್ನು ಸಂಘಟಿಸುವ, ಅವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ, ಅವರಲ್ಲಿ ಪರಸ್ಪರ ಸಂಪರ್ಕ ಸಾಧಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುವ ವೆಬ್ ಸೈಟ್ ಅಥವಾ ಅಂತರ್ಜಾಲ ಪತ್ರಿಕೆ ಇಲ್ಲ. ಹೆಚ್ಚಿನ ಬಂಡವಾಳ ಇಲ್ಲದೆ ರೂಪಿಸಬಹುದಾದ ಇದನ್ನು ಮಾಡಲು ಯಾರೂ ಮುಂದೆ ಬರದೇ ಇರುವುದು ನಿಜಕ್ಕೂ ಆಶ್ಚರ್ಯ.

    ರೈತರು ವಿವಿಧ ರಾಜಕೀಯ ಪಕ್ಷಗಳಲ್ಲಿ, ವಿಭಿನ್ನ ಸಿದ್ಧಾಂತಗಳಲ್ಲಿ ಹಂಚಿಹೋಗಿರುವ ಕಾರಣ ರೈತರು ತಮ್ಮ ಸಮೂಹಕ್ಕೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ. ಒಗ್ಗಟ್ಟಿನ ಕೊರತೆಯೇ ರೈತರ ಪ್ರಧಾನ ಸಮಸ್ಯೆ. ಇದುವೇ ರೈತರನ್ನು ಎಲ್ಲರೂ ಶೋಷಿಸಲು ಕಾರಣ.

    Reply

Leave a Reply

Your email address will not be published. Required fields are marked *