Daily Archives: June 25, 2016

ಪ್ರೊ.ಕೆ.ರಾಮದಾಸ್ ಪ್ರತಿಭಟನೆ ಮತ್ತು ‘ರಾಮ’ ರಾಜ್ಯ!

ಕೆ.ಎಸ್. ಮಧು

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲ. ಮೈಸೂರಿನ ಉಸ್ತುವಾರಿ ಅಂದಿನ ಸಚಿವ ಎಚ್.ವಿಶ್ವನಾಥ್ ರ ಕೈಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜು ಆವರಣದಲ್ಲೊಂದು ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಭಾಗವಹಿಸಿದ್ದರು. ಅವರು ಇನ್ನೇನು ತಮ್ಮ ಮಾತುಗಳನ್ನು ಆರಂಭಿಸಬೇಕಿತ್ತು. ಆಗ ಅದೆಲ್ಲಿದ್ದವರೋ ಎಂಬಂತೆ ವಿಚಾರವಾದಿ ಕೆ.ರಾಮದಾಸ್ ಎದ್ದು ನಿಂತರು. ‘ನಿಷೇಧವಾಗಿರುವ ಪ್ರಾಣಿ ಬಲಿಯನ್ನು ಮಾಡಿಬಂದಿರುವ ಮಂತ್ರಿ ನೀನು. ನೀನು ಆ ಹುದ್ದೆಗೆ ನಾಲಾಯಕ್..” ಎಂದು ದನಿ ಎತ್ತಿದರು. ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾದ ‘ನೀವು ನಾಲಾಯಕ್ ವಿಚಾರವಾದಿ’ ಎಂದು ಜಗಳಕ್ಕೆ ನಿಂತರು.

ಸಚಿವರಾದ ವಿಶ್ವನಾಥ್ ಅವರ ಕುಟುಂಬ ಕೆಲವೇ ದಿನಗಳ ಹಿಂದೆ ತಮ್ಮ ಊರಿನ ಹತ್ತಿರದ ದೇವರಿಗೆ ಕುರಿ ಬಲಿ ಕೊಟ್ಟು ಊಟ ಏರ್ಪಡಿಸಿದ್ದರು ಎಂಬ ಸುದ್ದಿ ಅದೇ ದಿನ ವರದಿಯಾಗಿತ್ತು. ಆ ಸುದ್ದಿಯನ್ನು ಓದಿದ ರಾಮದಾಸ್ ಅವರು, ಒಬ್ಬ ಮಂತ್ರಿಯಾದವProf.Ramadas-3ರು ಹೀಗೆ ಮಾಡುವುದು ಸರಿಯಲ್ಲ, ಹಾಗಾಗಿ ಅವರನ್ನು ನೇರಾನೇರ ಎಲ್ಲರ ಎದುರು ಟೀಕಿಸಬೇಕು ಎಂದು ತಮ್ಮ ಒಂದೆರಡು ಗೆಳೆಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಹಾಗೆ ವಾದಕ್ಕಿಳಿದಿದ್ದರು.

ನೆನಪಿರಲಿ. ಅಂದಿಗೆ, ರಾಮದಾಸ್ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ವಿಶ್ವನಾಥ್ ಕ್ಯಾಬಿನೆಟ್ ದರ್ಜೆಯ ಮಂತ್ರಿ. ಇಂದು ರಾಮದಾಸ್ ನಮ್ಮ ಮಧ್ಯೆ ಇಲ್ಲ. ಆದರೆ ವಿಶ್ವನಾಥ್ ಸೇರಿದಂತೆ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅನೇಕರು ಇಂದು ಇದ್ದಾರೆ.

ಈಗ ಹೇಳಿ, ಇಂತಹದೊಂದು ಸನ್ನಿವೇಶವನ್ನು ನಾವು ಇಂದು ಕಾಣಬಹುದೇ? ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಡ, ತನ್ನ ಊರಿನ ಶಾಸಕನನ್ನು ಟೀಕಿಸುವುದು ಒತ್ತಟ್ಟಿಗಿರಲಿ, ಎದುರು ನಿಂತು ಕತ್ತು ಬಗ್ಗಿಸದೆ ಮಾತನಾಡುವ ಸಾಮರ್ಥ್ಯ ಎಷ್ಟು ಪ್ರಾಧ್ಯಾಪಕರಿಗಿದೆ? ಕೆಲ ಕಾಲೇಜುಗಳಲ್ಲಿ ಶಾಸಕರು ಬಂದಾಗ ಕಾಲಿಗೆ ಬಿದ್ದ ಪ್ರಾಂಶುಪಾಲರುಗಳಿದ್ದಾದರೆ, ಪ್ರಾಧ್ಯಾಪಕರುಗಳಿದ್ದಾರೆ. ಇಂತಹವರಿಂದ ಹುಡುಗರು ಕಲಿಯುವುದೇನನ್ನು?

ಪ್ರೊ.ಕೆ.ರಾಮದಾಸ್ ಅವರ ಉದಾಹರಣೆಯನ್ನು ಈಗಿನ ಕೆಲ ಹುಡುಗರಿಗೆ ಹೇಳಿದರೆ, ‘ಇವನ್ಯಾರೋ ಸುಳ್ಳು ಹೇಳುತ್ತಿದ್ದಾನೆ’ ಎನ್ನಿಸಬಹುದು. ಏಕೆಂದರೆ ಇಂದಿನ ಪರಿಸ್ಥಿತಿ ಹಾಗಿದೆ. ಅಂತಹದೊಂದು ಘಟನೆ ಈ ಹೊತ್ತಲ್ಲಿ ನಡೆದಿದ್ದರೆ, ಏನೆಲ್ಲಾ ಆಗುತ್ತಿತ್ತು ಎನ್ನುವುದನ್ನು ಒಂದ್ಸಾರಿ ಯೋಚನೆ ಮಾಡೋಣ. “ಏ. Vishwa-1ಯಾರಲ್ಲಿ ಪೊಲೀಸರು, ಈತನನ್ನು ಒಳಗೆ ಹಾಕಿ..” – ಎಂದು ಆಜ್ಞೆ ಹೊರಡಿಸಬಹುದಾದ ಮಂತ್ರಿ, ಶಾಸಕರು ನಮ್ಮ ಮಧ್ಯೆ ಇದ್ದಾರೆ. “ಅದ್ಸರಿ, ಹೀಗೆ ಅವರು ಮಂತ್ರಿಯವರನ್ನು ಟೀಕೆ ಮಾಡಲು ಹೋಗುವಾಗ, ಕಾಲೇಜಿಗೆ ರಜೆ ಹಾಕಿದ್ರಾ..ಅಥವಾ ಹುಡಗರಿಗೆ ಪಾಠ ಮಾಡೋದನ್ನು ಬಿಟ್ಟು ಮಂತ್ರಿಗೆ ಪಾಠ ಮಾಡೋಕೆ ಬಂದಿದ್ದರಾ.?” – ಹೀಗೆ ಪ್ರಶ್ನೆ ಮಾಡುವ ಮಾಧ್ಯಮದವರಿದ್ದಾರೆ.

ರಾಮದಾಸ್ ಅಂತಹವರು ತಮ್ಮ ಅಂತಹದೊಂದು ಪ್ರತಿಭಟನೆಯ ಮೂಲಕ ಒಬ್ಬ ಶಿಕ್ಷಕ ಒಂದು ವರ್ಷ ಕಾಲ ಪಾಠ ಮಾಡಿ ಹುಡುಗರಿಗೆ ತಿಳಿಸುವುದಕ್ಕಿಂತ ಹೆಚ್ಚಿನ ಮೌಲ್ಯಯುತವಾದದ್ದನ್ನು ಬೋಧಿಸಿದ್ದರು. ಹಾಗೆ ಪಾಠ ಮಾಡುವವರು ಇಂದು ಬೇಕಾಗಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಕ್ಕೆ ಇಂತಹವರ ಅಗತ್ಯ ಇದ್ದಂತೆ ಕಾಣುವುದಿಲ್ಲ. ಇಲ್ಲವಾಗಿದ್ದಲ್ಲಿ, ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಬಂಧನವಾಗುತ್ತಿರಲಿಲ್ಲ. ಅವರು ತಮ್ಮ ಮಾನವ ಹಕ್ಕುಗಳ ಬಗೆಗಿನ ಉಪನ್ಯಾಸದಲ್ಲಿ ಹೇಳಿದ್ದಿಷ್ಟೆ. “ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ”. ಅದೊಂದು ಮಾತನ್ನು ಸಹಿಸಿಕೊಳ್ಳಲಾಗದವರು ದೂರು ಕೊಟ್ಟರು. ಅವರ ಬಂಧನವಾಯ್ತು. ಅಷ್ಟರ ಮಟ್ಟಿಗೆ ನಮ್ಮದು ರಾಮ ರಾಜ್ಯ…ಸಿದ್ದರಾಮ ರಾಜ್ಯ!