Daily Archives: July 8, 2016

ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

                                                                                                             – ನವೀನ್ ಸೂರಿಂಜೆ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಈಗ ಚರ್ಚೆಯ ವಿಷಯವಾಗಿದೆ. ಈ ಗಣಪತಿಗೆ ಒಂದು ಇತಿಹಾಸವಿದೆ. ಮಂಗಳೂರಿನ ಚರ್ಚ್ ದಾಳಿಯಲ್ಲಿ ಆಗ ಕದ್ರಿ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿ ಪಾತ್ರವನ್ನು ನಾನು ಕಣ್ಣಾರೆ ಕಂಡಿದ್ದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭಜರಂಗದಳದಿಂದ ಪ್ರಾರಂಭವಾದ ಚರ್ಚ್ ದಾಳಿಯನ್ನು ಪೊಲೀಸ್ ಯೂನಿಫಾರಂ ಮೂಲಕವೇ ಮುನ್ನಡೆಸಿದವರು ಎಂ.ಕೆ ಗಣಪತಿ.

 

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸ್ ಅಧಿಕಾರಿಯೊಬ್ಬನ ಸಾವಿಗೆ ಮರುಕವಿದೆ. ಆದರೆ ಆ ಪೊಲೀಸ್ ಅಧಿಕಾರಿಯನ್ನು ಹೀರೋ ಮಾಡುವ ಮುನ್ನ ಆತನ ಇತಿಹಾಸ ಅರಿಯುವುದು ಮುಖ್ಯ.

 

2008 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಕ್ರಿಶ್ಚಿಯನ್ನರ ಧರ್ಮಶಾಲೆ ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಇದು ಮಂಗಳೂರಿನಲ್ಲಿ ಆ ವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ ಸಮುದಾಯ ಬೀದಿಗಿಳಿಯುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಭಜರಂಗದಳ ನಡೆಸಿದ ದಾಳಿಗೆ ಪೂರಕವಾಗಿ ಪೊಲೀಸರೂ ವರ್ತಿಸತೊಡಗಿದ್ರು.

 

ಅಡೋರೇಷನ್ ಮೊನೆಸ್ಟ್ರಿ ಮೇಲೆ ದಾಳಿ ನಡೆದ ಮಾಹಿತಿ ದೊರೆತ ತಕ್ಷಣ ನಾವು ಪತ್ರಕರ್ತರೂ ಚರ್ಚಗೆ ಭೇಟಿ ನೀಡಲಾರಂಭಿಸಿದೆವು. ನಂತರ ಮಂಗಳೂರಿನಾದ್ಯಂತ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯಲಾರಂಭಿಸಿತು. ದಾಳಿ ಎಲ್ಲೆಲ್ಲಿ ನಡೆಯಿತೋ ಅಲ್ಲೆಲ್ಲಾ ಪತ್ರಕರ್ತರಾದ ನಾವುಗಳೂ ಇರುತ್ತಿದ್ದೆವು. ವಾಸ್ತವವಾಗಿ ಭಜರಂಗಿಗಳು ದಾಳಿ ನಡೆಸಿದ್ದು ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಮಠದ ಮಾಧರಿಯ ಧರ್ಮಶಾಲೆಗೆ ಮಾತ್ರ. ಉಳಿದಂತೆ ಬಿಜೈ ಚರ್ಚ್, ಕುಲಶೇಖರ ಚರ್ಚ್ಗಳಿಗೆ ನಡೆದ ದಾಳಿಯ ವೇಳೆ ಒಂದೇ ಒಂದು ಭಜರಂಗಿಗಳು ಇರಲಿಲ್ಲ. ಆದರೂ ದಾಳಿಯಾಗಿತ್ತು.

 

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಯುವಕರು ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕದ್ರಿ ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ ಕೆ ಗಣಪತಿ ನೇತೃತ್ವದಲ್ಲಿ ಪೊಲೀಸರು ಕುಲಶೇಖರ ಚಚರ್್ಗೆ ಧಾವಿಸಿದ್ರು. ಎಂ ಕೆ ಗಣಪತಿ ಮತ್ತು ತಂಡ ಕುಲಶೇಖರ ಚರ್ಚ್ ಗೆ ಬರುತ್ತಿದ್ದಂತೆಯೇ ನಾನೂ ಕೂಡಾ ಕುಲಶೇಖರ ಚರ್ಚ್ ಆವರಣ ಪ್ರವೇಶಿಸಿದ್ದೆ. ಕುಲಶೇಖರ ಚರ್ಚ್ ಒಳಗೆ ಕ್ರಿಶ್ಚಿಯನ್ನರು ಪ್ರಾರ್ಥನೆ ನಡೆಸುತ್ತಿದ್ದರು. ಪ್ರಾರ್ಥನೆ ಜೋರಾಗಿ ಹೊರಗೆ ಕೇಳಿಸುತ್ತಿತ್ತು.

 

ವಾಹನದಿಂದ ಇಳಿದ ಎಂ ಕೆ ಗಣಪತಿ ಕ್ರಿಶ್ಚಿಯನ್ನರು ಪ್ರಾರ್ಥನೆ ನಿಲ್ಲಿಸಿ ಹೊರಬರುವಂತೆ ಸೂಚಿಸಿದ್ರು. ಪ್ರಾರ್ಥನನಿರತರು ಹೊರಬರಲು ಒಪ್ಪಲಿಲ್ಲ. ಅಷ್ಟರಲ್ಲಿ ಚರ್ಚ್ ಒಳಗೆ ನುಗ್ಗುವಂತೆ ಪೊಲೀಸರಿಗೆ ಎಂ ಕೆ ಗಣಪತಿ ಸೂಚಿಸಿದ್ರು. ಆಗ ಹಿರಿಯ ವಕೀಲರಾದ ಮರಿಯಮ್ಮ ಥಾಮಸ್ ಮತ್ತು ಚರ್ಚ್ ನ ಫಾದರ್ ಒಬ್ಬರು ಮಧ್ಯ ಪ್ರವೇಶಿಸಿದರು. ಕೊನೆಗೆ ಎಂ ಕೆ ಗಣಪತಿ ಸೂಚನೆಯಂತೆ ಚರ್ಚ್ ಒಳಗಿದ್ದ ಮಹಿಳೆಯರು, ಮಕ್ಕಳು, ನನ್ ಗಳನ್ನು ಸರತಿ ಸಾಲಿನಲ್ಲಿ ಹೊರಗೆ ಬರುವಂತೆ ಮಾಡಲಾಯ್ತು. ಶಿಸ್ತುಬದ್ದವಾಗಿ, ಶಾಂತಿಯುತವಾಗಿ ಹೊರಬರುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಧಾರ್ಮಿಕ ಸಮGanapatiವಸ್ತ್ರ ಧರಿಸಿದ್ದ ನನ್ ಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ನನ್ ಗಳ ತೊಡೆ, ಕೈ ಕಾಲುಗಳು ಬಾತು ಹೋಗುವಂತೆ ಬಾರಿಸಲಾಗಿತ್ತು. ಆ ಚರ್ಚಿನಲ್ಲಿ ಪೊಲೀಸರ ಆಗಮನಕ್ಕೂ ಕಾರಣಗಳಿಲ್ಲದೇ ಇರುವ ಸಂಧರ್ಭದಲ್ಲಿ ಆರ್ ಎಸ್ ಎಸ್ ಹಿನ್ನಲೆಯ ಎಂ ಕೆ ಗಣಪತಿ ವಿನಾಕಾರಣ ದಾಳಿ ನಡೆಸಿದ್ದರು.

 

ಇದಾದ ನಂತರ ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯ್ತು. ಮರುದಿನವೇ ರಾಜ್ಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರು ಬೇಟಿ ಮಾಡಿ ಚರ್ಚ್ ದಾಳಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಮೇರಿಕಾದ ಅಧ್ಯಕ್ಷರೂ ಕೂಡಾ ಮಂಗಳೂರು ಚರ್ಚ್ ದಾಳಿ ಬಗ್ಗೆ ಮಾತನಾಡಿದ ನಂತರ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಕೇಂದ್ರ ಗೃಹ ಕಾರ್ಯದರ್ಶಿಯನ್ನು ಮಂಗಳೂರಿಗೆ ಕಳುಹಿಸಿತ್ತು. ಮಂಗಳೂರಿಗೆ ಬಂದ ಕೇಂದ್ರ ಗೃಹ ಕಾರ್ಯದರ್ಶಿ ಕೆಲವು ಚರ್ಚ್ ಗಳ ವಿಸಿಟ್ ಮಾಡಿದ ನಂತರ ಕುಲಶೇಖರ ಚರ್ಚ್ ಗೂ ಬೇಟಿ ನೀಡಿದ್ರು. ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು. ಈ ಸಂಧರ್ಭ ಕೇಂದ್ರ ಗೃಹ ಕಾರ್ಯದರ್ಶಿಯವರ ನಿಯೋಗಕ್ಕೆ ಭದ್ರತೆ ನೀಡಲು ಇದೇ ಎಂ ಕೆ ಗಣಪತಿ ಬಂದಿದ್ದರು.

 

ನಿಯೋಗಕ್ಕೆ ಪೊಲೀಸರ ದಾಳಿಯನ್ನು ಜನ ವಿವರಿಸುತ್ತಿರಬೇಕಾದರೆ ಸ್ವಲ್ಪ ಆಚೆ ಬಂದ ಎಂ. ಕೆ. ಗಣಪತಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ಫೋನಾಯಿಸಿದ್ದರು. ನಾನು ಅಲ್ಲೇ ಇರುವುದನ್ನು ಗಮನಿಸದ ಎಂ ಕೆ ಗಣಪತಿ ಹಿಂದೂ ಸಂಘಟನೆಗಳನ್ನು ಗುಂಪು ಸೇರಿಸಲು ಪ್ರಯತ್ನಿಸುತ್ತಿದ್ದರು. “ಕ್ರಿಶ್ಚಿಯನ್ನರು ಅವರ ಮನವಿ ನೀಡ್ತಾ ಇದ್ದಾರೆ. ನೀವೂ ಕೂಡಾ ಬಂದು ಮತಾಂತರ ಮಾಡುತ್ತಿದ್ದನ್ನು ಹೇಳಿ” ಎಂದು ನನ್ನೆದುರಿಗೇ ಹೇಳಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಚರ್ಚ್ ಆವರಣದಿಂದ ಹೊರಬರುತ್ತಿದ್ದಂತೆ ನೂರಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅವರು ದಾಳಿಕೋರ ಸಂಘಟನೆಯವರು ಎಂದು ತಿಳಿದ ಕೇಂದ್ರ ಗೃಹ ಕಾರ್ಯದರ್ಶಿ ಅವರ ಮನವಿಯನ್ನು ಚರ್ಚ್ ಆವರಣ ಸುತ್ತಮುತ್ತ ಸ್ವೀಕರಿಸಲು ನಿರಾಕರಿಸಿದ್ರು. ಹಿಂದೂ ಸಂಘಟನೆಗಳು ಮನವಿ ನೀಡಬೇಕಾದ್ರೆ ಸರ್ಕ್ಯೂಟ್ ಹೌಸ್ ಗೆ ಬರಲಿ ಎಂದರು. ಇದರಿಂದ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇಂದ್ರ ಗೃಹ ಕಾರ್ಯದರ್ಶಿ ಕಾರನ್ನು ತಡೆಯಲು ಮುಂದಾದ್ರು. ಆಗ ಭದ್ರತೆಗೆ ನಿಯೋಜಿತರಾಗಿದ್ದ ಎಂ ಕೆ ಗಣಪತಿ ಸುಮ್ಮನಿದ್ದರು. ಇದು ಬಿಜೆಪಿ ಸರಕಾರವಿದ್ರೂ ಅಧಿಕಾರಿಗಳ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

 

ಚರ್ಚ್ ದಾಳಿಯಲ್ಲಿ ಎಂ ಕೆ ಗಣಪತಿ ಪಾತ್ರ ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಭೀಕರ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ನಾನು ಚರ್ಚ್ ದಾಳಿಗಳ ವಿಚಾರಣಾ ಆಯೋಗದ ನ್ಯಾಯಮೂರ್ತಿಯಾಗಿದ್ದ ಸೋಮಶೇಖರ್ ರವರ ಬಳಿ ಮಾಹಿತಿ ಹಂಚಿಕೊಂಡಿದ್ದೆ.
ನಂತರ ಉರ್ವಸ್ಟೋರ್ ಎಂಬ ಪ್ರದೇಶದಲ್ಲಿ ಸಿಂಗಲ್ ನಂಬರ್ ದಂಧೆ ಹೆಚ್ಚಾದಾಗ ಡಿವೈಎಫ್ಐ ಹೋರಾಟಕ್ಕಿಳಿದಿತ್ತು. ಈ ಸಿಂಗಲ್ ನಂಬರ್ ದಂಧೆಯ ಹಿಂದೆ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಕೈವಾಡವಿತ್ತು. ಪ್ರತಿಭಟನೆ ನಡೆದ್ರೂ ಕೂಡಾ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಸಿಂಗಲ್ ನಂಬರ್ ಅಡ್ಡೆಗಳ ಮೇಲೆ ದಾಳಿ ನಡೆಸಲು ಸಿದ್ದರಿರಲಿಲ್ಲ. ಆಗ ಮಂಗಳೂರಿನಲ್ಲಿ ಐಜಿಪಿಯಾಗಿದ್ದವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಅಶಿತ್ ಮೋಹನ್ ಪ್ರಸಾದ್. ಡಿವೈಎಫ್ ಐ ಐಜಿಪಿ ಅಶಿತ್ ಮೋಹನ್ ಪ್ರಸಾದ್ ಗೆ ದೂರು ನೀಡಿದಾಗ ಅವರೂ ಕೂಡಾ ಇನ್ಸ್ ಸ್ಪೆಕ್ಟರ್ ಗಣಪತಿ ಪಾತ್ರ ಇರುವುದನ್ನು ಮನಗಂಡು ನೇರವಾಗಿ ಸಿಂಗಲ್ ನಂಬರ್ ದಂಧೆಯ ಮೇಲೆ ದಾಳಿ ನಡೆಸಿದ್ದರು.
ನಾನೊಬ್ಬ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವನು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದ ಎಂ ಕೆ ಗಣಪತಿ ಎಡಪಂಥೀಯ ಸಂಘಟನೆಗಳು ಮತ್ತು ಮುಸ್ಲೀಮರ ವಿರೋಧಿ ನಿಲುವನ್ನು ಹೊಂದಿದ್ದರು. ನೀರಿನ ಖಾಸಗೀಕರಣವನ್ನು ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಡಿವೈಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯ ಸ್ಥಳ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯದ್ದು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಇದೇ ಎಂ ಕೆ ಗಣಪತಿ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಆಗುವ ಬಗ್ಗೆ ಖುದ್ದು ಬಂದರು ಠಾಣೆಗೆ ಮಾಹಿತಿ ಇರಲಿಲ್ಲ. ಸೈದ್ದಾಂತಿಕವಾಗಿ ವಿರೋಧಿಸುತ್ತಿದ್ದವರನ್ನು ಹಣಿಯಲು ಎಂ ಕೆ ಗಣಪತಿ ಪೊಲೀಸ್ ಯೂನಿಫಾರಂ ಅನ್ನು ಬಳಸುತ್ತಿದ್ದರು.
ನಕಲಿ ಎನ್ ಕೌಂಟರ್, ಚರ್ಚ್ ದಾಳಿಯ ವೇಳೆ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಇದೀಗ ಸಾವಿನ ನಂತರ ಹೀರೋ ಆಗುತ್ತಿದ್ದಾರೆ.

 

ಅವರ ಸಾವು ನ್ಯಾಯಯುತವಾದುದಲ್ಲ. ಅವರಿಗೆ ಪೊಲೀಸ್ ಉನ್ನತಾಧಿಕಾರಿಗಳು, ಸಚಿವರುಗಳು ಕಿರುಕುಳ ನೀಡಿದ್ದರೆ ಅದು ಶಿಕ್ಷಾರ್ಹ. ಆದರೆ ಎಂ ಕೆ ಗಣಪತಿ ಒಬ್ಬ ದಕ್ಷ, ಕೆಚ್ಚೆದೆಯ ಪ್ರಾಮಾಣಿಕ, ರಿಯಲ್ ಹೀರೋ ಎಂದೆಲ್ಲಾ ಕರೆದರೆ ಅದು ಅಪ್ಪಟ ಸುಳ್ಳಾಗುತ್ತದೆ.