Daily Archives: July 12, 2016

ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ


-ಇರ್ಷಾದ್ ಉಪ್ಪಿನಂಗಡಿ


 

ವಿವಾದಿತ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಜಾಕಿರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾಯ್ಕ್ ಕುರಿತಾಗಿ ಚರ್ಚೆಗಳು ನಡಿಯುತ್ತಿವೆ. ಝಾಕಿರ್ ನಾಯ್ಕ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಲು ಕಾರಣ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ. 25 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ರೂವಾರಿಗಳು ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳಿಂದ ಪ್ರಭಾವಿತಗೊಂಡಿದ್ದರು ಎಂಬ ಮಾಹಿತಿ. ಪರಿಣಾಮ ತನಿಖಾ ಸಂಸ್ಥೆಗಳು ಝಾಕಿರ್ ನಾಯ್ಕ್ ದೇಶ ವಿದೇಶಗಳಲ್ಲಿ ಮಾಡಿರುವ ಧರ್ಮ ಪ್ರಚಾರ ಭಾಷಣಗಳ ತನಿಖೆಗೂ ಮುಂದಾಗಿವೆ. ಮಾಧ್ಯಮಗಳು “ಬ್ಯಾನ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಮೂಲಕ ಕ್ಯಾಂಪೇನ್ ನಡೆಸುತ್ತಿವೆ. ಇನ್ನೊಂದೆಡೆ ಝಾಕಿರ್ ನಾಯ್ಕ್ ಅಭಿಮಾನಿಗಳ “ಐ ಆಮ್ ವಿಥ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಕ್ಯಾಂಪೇನ್ ಕೂಡಾ ಜೋರಾಗಿದೆ. ಹಾಗಾದರೆ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳೇನು? ಯುವ ಮನಸ್ಸುಗಳಲ್ಲಿ ಕ್ರೌರ್ಯವನ್ನು ತುಂಬುವಷ್ಟು ವಿಷಪೂರಿತವಾಗಿವೆಯಾ ನಾಯ್ಕ್ ಚಿಂತನೆಗಳು? ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿಯೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕಿದೆ.

ಯಾರು ಈ ಡಾ. ಝಾಕಿರ್ ನಾಯ್ಕ್?

ಪೀಸ್ ಟಿವಿ ಎಂಬ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ವಾಹಿನಿಯನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಡಾ. ಝಾಕಿರ್ ನಾಯ್ಕ್ ಚಿರಪರಿಚಿತ. dr zhakir naikತಲೆಗೊಂದು ಟೊಪ್ಪಿ, ಮೀಸೆಯನ್ನು ಕತ್ತರಿಸಿ ಗಡ್ಡ ಬಿಟ್ಟು ಸೂಟ್ ಧರಿಸಿ ವಿದ್ಯುತ್ ಅಲಂಕಾರಗಳಿಂದ ಕೂಡಿರುವ ಜಗಮಗಿಸುವ ಸೆಟ್ ನಲ್ಲಿ ನಿಂತು ಸಾವಿರಾರು ಜನರ ಮುಂದೆ ಧರ್ಮಪ್ರವಚನ ನೀಡುತ್ತಾ ಇಸ್ಲಾಮ್ ಧರ್ಮದ ಪ್ರಚಾರ ಮಾಡುತ್ತಾರೆ. ಸಭಿಕರು ಇಸ್ಲಾಮ್ ಕುರಿತಾಗಿ ಕೇಳುವ ಪ್ರೆಶ್ನೆಗಳಿಗೆ ಕುರುಆನ್ ಹಾಗೂ ಹದೀಸ್ ಗಳನ್ನು ಮುಂದಿಟ್ಟುಕೊಂಡು ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕೊಡುವ ಚಾಣಾಕ್ಷ ಮಾತುಗಾರ ಡಾ. ಝಾಕಿರ್ ನಾಯ್ಕ್. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾಗಿರುವ ಝಾಕಿರ್ ನಾಯ್ಕ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ಬರುವವರು ಕೇವಲ ಮುಸ್ಲಿಮರಷ್ಟೇ ಅಲ್ಲ, ಹಿಂದೂ ಕ್ರೈಸ್ತ ಸಮುದಾಯದವರೂ ಬರುತ್ತಾರೆ. ಇಸ್ಲಾಮ್ ಕುರಿತಾಗಿ ತಮ್ಮ ಪ್ರೆಶ್ನೆಗಳನ್ನು ಡಾ. ನಾಯ್ಕ್ ಮುಂದಿಡುತ್ತಾರೆ. ಹೀಗೆ ಪ್ರೆಶ್ನೆ ಕೇಳುತ್ತಾ ಚರ್ಚೆ ನಡೆಸುತ್ತಾ ನೂರಾರು ಮಂದಿ ಇಸ್ಲಾಮ್ ಧರ್ಮವನ್ನು ಬಹಿರಂಗವಾಗಿಯೇ ಸ್ವೀಕಾರ ಮಾಡುತ್ತಾರೆ. ಪೀಸ್ ಟಿವಿ ಮೂಲಕ ಜನಜನಿತವಾಗಿರುವ ಡಾ.ಜಾಕಿರ್ ನಾಯ್ಕ್ ಗೆ ದೇಶ ವಿದೇಶಗಳಾದ್ಯಂತ ಅಭಿಮಾನಿಗಳಿದ್ದಾರೆ. ಡಾ. ಝಾಕಿರ್ ನಾಯ್ಕ್ ಇದುವರೆಗೂ ಪ್ರಪಂಚದಾದ್ಯಂತ 4000 ಕ್ಕೂ ಅಧಿಕ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವೆಲ್ಲವೂ ಪೀಸ್ ಟಿವಿ ಮೂಲಕ ಪ್ರಸಾರವಾಗುತ್ತವೆ. ಕೆಲವು ದೇಶಗಳಲ್ಲಿ ಇವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಹಾಗೂ ಇವರ ಭಾಷಣಗಳನ್ನು ಪ್ರಸಾರ ಮಾಡುವ ಪೀಸ್ ಟಿವಿ ವಾಹಿನಿಗೂ ನಿಷೇಧವಿದೆ. ಗಮನಾರ್ಹವಾದ ಸಂಗತಿ ಏನೆಂದರೆ ಮುಸ್ಲಿಮ್ ಯುವ ಸಮೂಹ ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳತ್ತ ಇತ್ತೀಚೆಗೆ ಹೆಚ್ಚಾಗಿ ವಾಲುತ್ತಿವೆ. ಮನೆ ಮನೆಗಳಲ್ಲಿ ಟಿವಿ ಮೂಲಕ ಇವರ ಧಾರ್ಮಿಕ ವಿಚಾರಧಾರೆಗಳನ್ನು ವೀಕ್ಷಿಸುವವರಲ್ಲಿ ಯುವ ಸಮೂಹದ್ದೇ ಅಧಿಕ ಪಾಲು.

ಡಾ. ಜಾಕಿರ್ ನಾಯ್ಕ್ ಹಾಗೂ ಧರ್ಮ ಶ್ರೇಷ್ಠತಾ ವ್ಯಸನ

ಡಾ. ಜಾಕಿರ್ ನಾಯ್ಕ್ ವಹಾಬಿ ಇಸ್ಲಾಮ್ ಪ್ರತಿಪಾದಕ. 18 ನೇ ಶತಮಾನದಲ್ಲಿ ಅರೇಬಿಯಾದಲ್ಲಿ ಅಬ್ದುಲ್ ವಹಾಬ್ ಎಂಬುವವರು ಈ ಪಂಥವನ್ನು ಹುಟ್ಟುಹಾಕಿದರು. ಭಾರತೀಯ ಮುಸ್ಲಿಮರು ಪಾಲಿಸಿಕೊಂಡು ಬಂದ ಸೂಫೀ ಪರಂಪರೆಯ ಇಸ್ಲಾಮ್ ಧರ್ಮವನ್ನು ಈ ವಹಾಬಿ ಸಿದ್ದಾಂತವಾದಿಗಳು ಒಪ್ಪುವುದಿಲ್ಲ. ಕಾರಣ ಭಾರತೀಯ ಮುಸ್ಲಿಮರು ಪಾಲಿಸುವ ಇಸ್ಲಾಮ್ “ಅಶುದ್ಧಿಯಾಗಿದೆ” ಹಾಗೂ ಸೂಫಿ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಇತರ ಧರ್ಮಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೂ ಇಸ್ಲಾಮ್ ಧರ್ಮದಲ್ಲಿ ಅಳವಡಿಸಿಕೊಂಡಿವೆ. ಇದು ಧರ್ಮ ನಿಷಿದ್ಧ ಕಾರ್ಯ ಎಂಬುವುದು ವಹಾಬಿ ಮೂಲಭೂತವಾದಿಗಳ ವಾದ. ಈ ಕಾರಣಕ್ಕಾಗಿ ಧರ್ಮದ ಪರಿಶುದ್ದೀಕರಣದ ಹೆಸರಲ್ಲಿ ಸೌದಿ ಅರೇಬಿಯಾದ ಕಟ್ಟರ್ ವಹಾಬಿ ಚಿಂತನೆಯನ್ನು ನೈಜ್ಯ ಇಸ್ಲಾಮ್ ಎಂದು ಬಿಂಬಿಸಲು ಇವರು ಹೊರಟಿದ್ದಾರೆ. ಡಾ. ಜಾಕಿರ್ ನಾಯ್ಕ್ ಮಾಡುತ್ತಿರುವುದು ಈ ಕಾರ್ಯವನ್ನೇ. ಪರಿಶುದ್ದ ಇಸ್ಲಾಮ್ ಹೆಸರಿನಲ್ಲಿ ವಹಾಬಿ ಮೂಲಭೂತವಾದ ಸಿದ್ದಾಂತವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವುದು ನಾಯ್ಕ್ ನೇತ್ವತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಪ್ರಮುಖ ಉದ್ದೇಶ. ಇವರ ಧಾರ್ಮಿಕ ಪ್ರವಚನಗಳನ್ನು ಆಲಿಸಿದಾಗ ಅವರಲ್ಲಿರುವ ಧರ್ಮ ಶ್ರೇಷ್ಠತಾ ವ್ಯಸನ ಎದ್ದು ಕಾಣುತ್ತದೆ. ಇಸ್ಲಾಮ್ ಧರ್ಮ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ನ್ಯೂನ್ಯತೆಯಿಂದ ಕೂಡಿದೆ ಎಂಬ ವಾದ ಇವರ ಮತಪ್ರವಚನಗಳಲ್ಲಿ ಪದೇ ಪದೇ ಉಲ್ಲೇಖವಾಗುತ್ತದೆ. ತಾನು ಪಾಲಿಸುತ್ತಿರುವ ಧರ್ಮವನ್ನು ಸಮರ್ಥಿಸುತ್ತಾ ಹಾಗೂ ಅದರ ಶ್ರೇಷ್ಠತೆಯನ್ನು ಸಾರುತ್ತಾ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮನೋಭಾವ ಯಾವ ಧರ್ಮದಲ್ಲೇ ಇರಲಿ ಅದು ತೀರಾ ಅಪಾಯಕಾರಿ.

ಇತರ ಧರ್ಮಗಳ ಬಗ್ಗೆ ವಿಮರ್ಶಿಸುವುದು ಖಂಡಿತಾ ತಪ್ಪಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಥವಾ ಇನ್ನಾವುದೇ ಧರ್ಮದ ಅನುಯಾಯಿಗಳುdr zhakir naik_1 ಪರಸ್ಪರ ಎಲ್ಲಾ ಧರ್ಮಗಳ ಕುರಿತಾಗಿ ಚರ್ಚೆ ನಡೆಸಲು ಹಾಗೂ ವಿಮರ್ಶಿಸಲು ಅವಕಾಶವಿದೆ, ಇರಬೇಕು ಕೂಡಾ. ಆದರೆ ಇದು ವೈಜ್ಞಾನಿಕ ನೆಲೆಯಲ್ಲಿರಬೇಕು. ಹಾಗಲ್ಲದೆ, ತನ್ನ ಧರ್ಮದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ಮತ್ತೊಂದು ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿಸುವುದು ಹಾಗೂ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು ಮಾತ್ರ ಅತಿರೇಕದ ನಡವಳಿಕೆ. ಡಾ. ಝಾಕಿರ್ ನಾಯ್ಕ್ ಬಹುತೇಕ ವಾದಗಳಲ್ಲೂ ಪರಧರ್ಮ ಅಸಹಿಷ್ಠುತಾ ಮನೋಭಾವ ಹೊಂದಿರುವುದು ಎದ್ದು ಕಾಣುತ್ತಿದೆ. ಇದು ಕೇವಲ ಝಾಕಿರ್ ನಾಯ್ಕ್ ರಲ್ಲಿ ಮಾತ್ರವಲ್ಲ ಅವರ ವಿಚಾರಧಾರೆಗಳನ್ನು ಪಾಲಿಸುವ ಸಿದ್ದಾಂತವಾದಿಗಳಲ್ಲೂ ಕಂಡುಬರುತ್ತದೆ. ಡಾ. ಝಾಕಿರ್ ನಾಯ್ಕ್ ಅವರ ಚಿಂತನೆಯನ್ನು ಪ್ರಚಾರ ಪಡಿಸುವ ಸಲಫೀ, ಅಹ್ಲೆಹದೀಸ್ ಸಿದ್ದಾಂತವಾದಿಗಳಲ್ಲಿ ಚರ್ಚೆ ನಡೆಸಿದರೆ ಅವರಲ್ಲಿ ಪರಧರ್ಮ ಅಸಹಿಷ್ಠುತಾ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ನಾವು ಕಾಣಬಹುದು. ಇಸ್ಲಾಮ್ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದ ಅಸ್ತಿತ್ವವನ್ನೇ ಇವರು ಒಪ್ಪಲು ತಯಾರಿಲ್ಲ.

“ಬಹುಸಂಸ್ಕೃತಿ, ಕೂಡುಕೊಳ್ಳುವಿಕೆ ಮುಸ್ಲಿಮರ ಪಾಲಿಗೆ ಧರ್ಮ ನಿಷಿದ್ಧ. ನೈಜ್ಯ ಮುಸಲ್ಮಾನನೊಬ್ಬ ಹಿಂದೂಗಳ ಹಬ್ಬಹರಿದಿನಗಳಲ್ಲಿ ಭಾಗವಹಿಸಲಾರ, ಅವರು ಕೊಡುವ ಹಬ್ಬದೂಟವನ್ನೂ ಸ್ವೀಕರಿಸುವುದು ಧರ್ಮಬಾಹಿರ” ಎನ್ನುತ್ತಾರೆ ಮಂಗಳೂರಿನ ಸಲಫಿ ಮೂಮೆಂಟ್ ಮುಖಂಡರೊಬ್ಬರು. ಧರ್ಮಾಂಧತೆಯ ನಶೆಯಲ್ಲಿ ಮುಳುಗಿರುವ ಬಹುತೇಕ ಯುವಕರು ವಾದ ಮಾಡುವವಾಗ ಬಳಸುವುದು ಡಾ. ಝಾಕಿರ್ ನಾಯ್ಕ್ ಬಳಸೋ ಮೆಟೀರಿಯಲ್ ಗಳನ್ನೇ. ಬಹುಸಂಸ್ಕೃತಿ ವಿರೋಧಿ ಮನೋಭಾವ ಹಾಗೂ ಸ್ವಧರ್ಮ ಶ್ರೇಷ್ಠತಾ ವ್ಯಸನ ಯುವಮನಸ್ಸುಗಳಲ್ಲಿ ಆಳವಾಗಿ ಬೆರೂರುತ್ತಿರುವುದಕ್ಕೆ ಡಾ.ನಾಯ್ಕ್ ಕೊಡುಗೆ ತುಂಬಾನೇ ಇದೆ. ಇನ್ನೂ ಅಪಾಯಕಾರಿಯಾದ ಸಂಗತಿ ಏನಂದರೆ ಝಾಕಿರ್ ನಾಯ್ಕ್ ಮುಸ್ಲಿಮ್ ಯುವಮನಸ್ಸುಗಳಲ್ಲಿ ಸರ್ವಶ್ರೇಷ್ಠ ಮುಸ್ಲಿಮ್ ಧರ್ಮಗುರುವಾಗಿ ಸ್ಥಾನಪಡೆದುಕೊಳ್ಳುತ್ತಿರುವುದು. ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳಿಗೆ ಭಿನ್ನವಾದ ಚಿಂತನೆಗಳು ಇಸ್ಲಾಮ್ ಧರ್ಮದಲ್ಲಿದ್ದರೂ ಅಲ್ಲದೆ ಅವರು ಪ್ರಚುರಪಡಿಸುವ ವಹಾಬಿ ಮೂಲಭೂತವಾದಿ ಚಿಂತನೆಗೆ ಮುಸ್ಲಿಮ್ ಸಮೂಹದಲ್ಲಿ ವಿರೋಧವಿದ್ದರೂ ಇಂದಿನ ಯುವಕರ ಪಾಲಿಗೆ ಡಾ. ಝಾಕಿರ್ ನಾಯ್ಕ್ ಪ್ರಮುಖ ಮುಸ್ಲಿಮ್ ಧಾರ್ಮಿಕ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚೆಗೆ ಕೆಲ ಮುಸ್ಲಿಮ್ ಯುವಕರಂತೂ ಅತಿಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ. ಧಾರ್ಮಿಕತೆಯ ಗುಂಗಿನಲ್ಲೇ ದಿನದ ಅಧಿಕ ಸಮಯವನ್ನು ಕಳೆಯುವ ಸುಶಿಕ್ಷಿತ ಮುಸ್ಲಿಮ್ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಯೋಸಹಜ ನಡವಳಿಕೆಗೆ ಬದಲಾಗಿ ಪರಲೋಕ ಸ್ವರ್ಗ ನರಕಗಳ ಕುರಿತಾದ ವಿಚಾರಗಳಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಾರೆ. ಸಂಗೀತ, ಕಲೆ, ಸಿನಿಮಾಗಳ ವಿರುದ್ಧವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇಂತಹಾ ಮನಸ್ಥಿತಿ ಹೊಂದಿರುವ ಯುವಕರು ಲೌಕಿಕ ಜೀವನದ ಕುರಿತಾಗಿ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ಈ ಲೌಕಿಕ ಜೀವನವಿರುವುದೇ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಲು; ನಮ್ಮ ಬದುಕು ಏನಿದ್ದರೂ ಪರಲೋಕದಲ್ಲ ಎಂಬ ನಂಬಿಕೆ ಅತಿಯಾಗಿ ಧರ್ಮಪಾಲನೆ ಹಾಗೂ ಧರ್ಮರಕ್ಷಣೆಯೇ ಈ ಯುವಕರ ಜೀವನದ ಪರಮ ಗುರಿಯಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಮಧ್ಯಾಹ್ಮದ ನಮಾಜ್ ಮಾಡಲು ಕಚೇರಿಯಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಸಿಕ್ಕಿದ್ದ ಉತ್ತಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ಐಸೀಸ್ ಗೆ ಸೇರಿದ್ದಾರೆಂದು ಶಂಕಿಸಲ್ಪಡುತ್ತಿರುವ ಕೇರಳದ ಯುವಕರ ಪೋಷಕರೊಬ್ಬರು ತನ್ನ ಮಗನ ಅತಿಧಾರ್ಮಿಕತೆಯ ಬಗ್ಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಆ ಯುವಕನ ಅತಿಧಾರ್ಮಿಕತೆ ಎಷ್ಟಿತ್ತೆಂದರೆ ತನ್ನ ತಂದೆಯನ್ನೇ “ಕಾಫಿರ್ ” ಎಂದು ಕರೆದಿದ್ದ. ಶರಿಯಾ ಕಾನೂನು ಜಾರಿಗಾಗಿ ಹೋರಾಡುತ್ತೇನೆ ಎಂದಿದ್ದನಂತೆ. ತನ್ನ ಹೋರಾಟದ ಮೂಲಕ ಸ್ವರ್ಗ ಪಡೆಯುತ್ತೇನೆ ಎನ್ನುತ್ತಿದ್ದನಂತೆ. ಈ ರೀತಿಯಲ್ಲಿ ಅತಿಧಾರ್ಮಿಕತೆಯತ್ತ ವಾಲುತ್ತಿರುವ ಯುವಮನಸ್ಸುಗಳ ಮೇಲೆ ಡಾ.ಝಾಕಿರ್ ನಾಯ್ಕ್ ಪ್ರಭಾವ ಬಹಳಷ್ಟಿದೆ. ಅತಿಧಾರ್ಮಿಕತೆ ಮಿತಿಮೀರಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುವುದು ಇಂದು ನಾವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹಾ ನೆರೆ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ.

ಕೇಂದ್ರ ಸರ್ಕಾರದ ಕಣ್ಣು ಕೇವಲ ಡಾ. ಝಾಕಿರ್ ನಾಯ್ಕ್ ವಿರುದ್ಧ ಯಾಕೆ ?

ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾಧನಾ ಕೃತ್ಯದ ನಂತರ ಡಾ. ಝಾಕಿರ್ ನಾಯ್ಕ್ ಮೇಲೆ ನಿಗಾ ಇಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.gujarat_violence_1 ಆದರೆ ಡಾ. ಝಾಕಿರ್ ನಾಯ್ಕ್ ಎಂಬ ಇಸ್ಲಾಮ್ ಮೂಲಭೂತವಾದಿ ಧಾರ್ಮಿಕ ಮುಖಂಡನನ್ನು ಮಾತ್ರ ನಿಯಂತ್ರಿಸಿದರೆ ಸಾಕೇ? ಹಿಂದುತ್ವದ ಹೆಸರಲ್ಲಿ ಅಮಾಯಕರ ರಕ್ತ ಹರಿಸಲು ಪ್ರೇರೇಪಿಸುವ ಫ್ಯಾಸಿಸ್ಟ್ ಕೋಮುವಾದಿಗಳ ಬಾಯಿಗೆ ಬೀಗ ಹಾಕುವವರು ಯಾರು? ಬಾಂಗ್ಲಾದ ಇಸ್ಲಾಮಿಕ್ ಭಯೋತ್ಪಾದಕರು ಡಾ. ಝಾಕಿರ್ ನಾಯ್ಕ್ ರಿಂದ ಪ್ರಭಾವಿತರಾದರೆ ಹಿಂದುತ್ವದ ಹೆಸರಲ್ಲಿ ಅಮಾಯಕ ಮುಸ್ಲಿಮರ ರಕ್ತ ಹರಿಸುವವರಿಗೆ ಅಥವಾ ದಾಬೋಳ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಮಾಡಿದ ಹಿಂದುತ್ವ ಭಯೋತ್ಪಾದಕರಿಗೆ ಸಾದ್ವಿ ಪ್ರಾಗ್ಯ, ಮಾಯಾ ಕೊಡ್ನಾನಿ, ಪ್ರವೀಣ್ ತೊಗಾಡಿಯಾ, ಸ್ವಾದ್ವಿ ಪ್ರಾಚಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥರಂತಹಾ ಹಿಂದೂ ಮೂಲಭೂತವಾದಿಗಳು ಆದರ್ಶಪ್ರಾಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರಚೋದನೆಯಿಂದ ಕೂಡಿದ ಹೇಳಿಕೆಯನ್ನು ನೀಡುತ್ತಾ ಮುಝಾಫರ್ ನಗರ್, ದಾದ್ರಿಯಂತಹಾ ಹತ್ತಾರು ಅಮಾನುಷ ಘಟನೆಗಳಿಗೆ ಕಾರಣರಾದವರಲ್ಲವೇ ಇವರು. ಡಾ. ನಾಯ್ಕ್ ರಂತೆ ಧರ್ಮ ಶ್ರೇಷ್ಠತಾ ವ್ಯಸನ ಪ್ರಖರ ಹಿಂದುತ್ವವಾದಿಗಳಲ್ಲೂ ಹೆಚ್ಚಾಗುತ್ತಿದೆ. ಈ ಕೋಮುವಾದಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನಾರ್ಹ ಸಂಗತಿ.

ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದ ಮನುಕುಲಕ್ಕೆ ಅಪಾಯಕಾರಿ. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡರೆ ಸಾಲದು. ಬದಲಾವಣೆಯಾಗಬೇಕಾಗಿರೋದು ಜನರ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖರಾಗಬೇಕಿದೆ. ಧಾರ್ಮಿಕತೆಗೆ ವಿರೋಧವಿಲ್ಲ. ಆದರೆ ಅತಿ ಧಾರ್ಮಿಕತೆ ಯಾವತ್ತೂ ಅಪಾಯಕಾರಿ. ಸಂವಿಧಾನದ ಪ್ರಕಾರ ಎಲ್ಲರಿಗೂ ತಮ್ಮ ತಮ್ಮ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರಚುರಪಡಿಸಲು ಹಕ್ಕಿದೆ. ಆದರೆ ಸದ್ಯ ನಮಗೆಲ್ಲಾ ಬೇಕಾಗಿರೋದು ಡಾ. ಝಾಕಿರ್ ನಾಯ್ಕ್ ಪ್ರಚಾರ ಪಡಿಸುವ ಇಸ್ಲಾಂ ಮೂಲಭೂತವಾದಿ ಸಿದ್ದಾಂತವಲ್ಲ ಅಥವಾ ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದಿ ಸಿದ್ದಾಂತವದ ಪ್ರಚಾರವಲ್ಲ. ಬದಲಾಗಿ ಅಗತ್ಯವಿರೋದು ಮಾನವೀಯತೆ ಹಾಗೂ ಜೀವಪರ ವಿಚಾರಗಳನ್ನು ಯುವಮನಸ್ಸಿನೊಳಗೆ ಬಿತ್ತುವ ವಿಚಾರಾಧಾರೆಗಳು. ಒಡೆದುಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಿರುವುದು ಇಂದಿನ ಜರೂರತ್ತು.

ಕೊನೆಗೊಂದು ಮಾತು ಹೇಳಲೇ ಬೇಕು. ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಕುರಾನ್ ಪಠಿಸಲು ಬಾರದವರ ಕತ್ತುಸೀಳಿ ಹತ್ಯೆ ಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳತಿ ತರುಷಿ ಜೊತೆಗಿದ್ದ ಮುಸ್ಲಿಮ್ ಯುವಕ ಫರಾಜ್ ಹುಸೇನ್ ಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ಉಗ್ರರು ಜೀವದಾನವನ್ನು ನೀಡಿದ್ದರು. ಆದರೆ ಅದನ್ನ ತಿರಸ್ಕರಿಸಿ ಹುಸೇನ್ ಗೆಳತಿಯೊಡನೆ ತನ್ನ ಪ್ರಾಣತೆತ್ತ. ಈತನ ಪ್ರಾಣವನ್ನು ಕಸಿದುಕೊಂಡ ಉಗ್ರರಿಗೆ ಡಾ.ಝಾಕಿರ್ ನಾಯ್ಕ್ ಮಾದರಿಯಾದರೆ ನಮಗೆ ಮಾದರಿಯಾಗಬೇಕಾಗಿರುವುದು ಧರ್ಮಾಂಧರನ್ನು ಧಿಕ್ಕರಿಸಿ ಮಾನವಧರ್ಮವನ್ನು ಎತ್ತಿಹಿಡಿದ ನೈಜ್ಯ ಮುಸ್ಲಿಮ್ ಫರಾಜ್ ಹುಸೇನ್.