ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ


-ಇರ್ಷಾದ್ ಉಪ್ಪಿನಂಗಡಿ


 

ವಿವಾದಿತ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಜಾಕಿರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾಯ್ಕ್ ಕುರಿತಾಗಿ ಚರ್ಚೆಗಳು ನಡಿಯುತ್ತಿವೆ. ಝಾಕಿರ್ ನಾಯ್ಕ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಲು ಕಾರಣ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ. 25 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ರೂವಾರಿಗಳು ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳಿಂದ ಪ್ರಭಾವಿತಗೊಂಡಿದ್ದರು ಎಂಬ ಮಾಹಿತಿ. ಪರಿಣಾಮ ತನಿಖಾ ಸಂಸ್ಥೆಗಳು ಝಾಕಿರ್ ನಾಯ್ಕ್ ದೇಶ ವಿದೇಶಗಳಲ್ಲಿ ಮಾಡಿರುವ ಧರ್ಮ ಪ್ರಚಾರ ಭಾಷಣಗಳ ತನಿಖೆಗೂ ಮುಂದಾಗಿವೆ. ಮಾಧ್ಯಮಗಳು “ಬ್ಯಾನ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಮೂಲಕ ಕ್ಯಾಂಪೇನ್ ನಡೆಸುತ್ತಿವೆ. ಇನ್ನೊಂದೆಡೆ ಝಾಕಿರ್ ನಾಯ್ಕ್ ಅಭಿಮಾನಿಗಳ “ಐ ಆಮ್ ವಿಥ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಕ್ಯಾಂಪೇನ್ ಕೂಡಾ ಜೋರಾಗಿದೆ. ಹಾಗಾದರೆ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳೇನು? ಯುವ ಮನಸ್ಸುಗಳಲ್ಲಿ ಕ್ರೌರ್ಯವನ್ನು ತುಂಬುವಷ್ಟು ವಿಷಪೂರಿತವಾಗಿವೆಯಾ ನಾಯ್ಕ್ ಚಿಂತನೆಗಳು? ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿಯೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕಿದೆ.

ಯಾರು ಈ ಡಾ. ಝಾಕಿರ್ ನಾಯ್ಕ್?

ಪೀಸ್ ಟಿವಿ ಎಂಬ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ವಾಹಿನಿಯನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಡಾ. ಝಾಕಿರ್ ನಾಯ್ಕ್ ಚಿರಪರಿಚಿತ. dr zhakir naikತಲೆಗೊಂದು ಟೊಪ್ಪಿ, ಮೀಸೆಯನ್ನು ಕತ್ತರಿಸಿ ಗಡ್ಡ ಬಿಟ್ಟು ಸೂಟ್ ಧರಿಸಿ ವಿದ್ಯುತ್ ಅಲಂಕಾರಗಳಿಂದ ಕೂಡಿರುವ ಜಗಮಗಿಸುವ ಸೆಟ್ ನಲ್ಲಿ ನಿಂತು ಸಾವಿರಾರು ಜನರ ಮುಂದೆ ಧರ್ಮಪ್ರವಚನ ನೀಡುತ್ತಾ ಇಸ್ಲಾಮ್ ಧರ್ಮದ ಪ್ರಚಾರ ಮಾಡುತ್ತಾರೆ. ಸಭಿಕರು ಇಸ್ಲಾಮ್ ಕುರಿತಾಗಿ ಕೇಳುವ ಪ್ರೆಶ್ನೆಗಳಿಗೆ ಕುರುಆನ್ ಹಾಗೂ ಹದೀಸ್ ಗಳನ್ನು ಮುಂದಿಟ್ಟುಕೊಂಡು ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕೊಡುವ ಚಾಣಾಕ್ಷ ಮಾತುಗಾರ ಡಾ. ಝಾಕಿರ್ ನಾಯ್ಕ್. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾಗಿರುವ ಝಾಕಿರ್ ನಾಯ್ಕ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ಬರುವವರು ಕೇವಲ ಮುಸ್ಲಿಮರಷ್ಟೇ ಅಲ್ಲ, ಹಿಂದೂ ಕ್ರೈಸ್ತ ಸಮುದಾಯದವರೂ ಬರುತ್ತಾರೆ. ಇಸ್ಲಾಮ್ ಕುರಿತಾಗಿ ತಮ್ಮ ಪ್ರೆಶ್ನೆಗಳನ್ನು ಡಾ. ನಾಯ್ಕ್ ಮುಂದಿಡುತ್ತಾರೆ. ಹೀಗೆ ಪ್ರೆಶ್ನೆ ಕೇಳುತ್ತಾ ಚರ್ಚೆ ನಡೆಸುತ್ತಾ ನೂರಾರು ಮಂದಿ ಇಸ್ಲಾಮ್ ಧರ್ಮವನ್ನು ಬಹಿರಂಗವಾಗಿಯೇ ಸ್ವೀಕಾರ ಮಾಡುತ್ತಾರೆ. ಪೀಸ್ ಟಿವಿ ಮೂಲಕ ಜನಜನಿತವಾಗಿರುವ ಡಾ.ಜಾಕಿರ್ ನಾಯ್ಕ್ ಗೆ ದೇಶ ವಿದೇಶಗಳಾದ್ಯಂತ ಅಭಿಮಾನಿಗಳಿದ್ದಾರೆ. ಡಾ. ಝಾಕಿರ್ ನಾಯ್ಕ್ ಇದುವರೆಗೂ ಪ್ರಪಂಚದಾದ್ಯಂತ 4000 ಕ್ಕೂ ಅಧಿಕ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವೆಲ್ಲವೂ ಪೀಸ್ ಟಿವಿ ಮೂಲಕ ಪ್ರಸಾರವಾಗುತ್ತವೆ. ಕೆಲವು ದೇಶಗಳಲ್ಲಿ ಇವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಹಾಗೂ ಇವರ ಭಾಷಣಗಳನ್ನು ಪ್ರಸಾರ ಮಾಡುವ ಪೀಸ್ ಟಿವಿ ವಾಹಿನಿಗೂ ನಿಷೇಧವಿದೆ. ಗಮನಾರ್ಹವಾದ ಸಂಗತಿ ಏನೆಂದರೆ ಮುಸ್ಲಿಮ್ ಯುವ ಸಮೂಹ ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳತ್ತ ಇತ್ತೀಚೆಗೆ ಹೆಚ್ಚಾಗಿ ವಾಲುತ್ತಿವೆ. ಮನೆ ಮನೆಗಳಲ್ಲಿ ಟಿವಿ ಮೂಲಕ ಇವರ ಧಾರ್ಮಿಕ ವಿಚಾರಧಾರೆಗಳನ್ನು ವೀಕ್ಷಿಸುವವರಲ್ಲಿ ಯುವ ಸಮೂಹದ್ದೇ ಅಧಿಕ ಪಾಲು.

ಡಾ. ಜಾಕಿರ್ ನಾಯ್ಕ್ ಹಾಗೂ ಧರ್ಮ ಶ್ರೇಷ್ಠತಾ ವ್ಯಸನ

ಡಾ. ಜಾಕಿರ್ ನಾಯ್ಕ್ ವಹಾಬಿ ಇಸ್ಲಾಮ್ ಪ್ರತಿಪಾದಕ. 18 ನೇ ಶತಮಾನದಲ್ಲಿ ಅರೇಬಿಯಾದಲ್ಲಿ ಅಬ್ದುಲ್ ವಹಾಬ್ ಎಂಬುವವರು ಈ ಪಂಥವನ್ನು ಹುಟ್ಟುಹಾಕಿದರು. ಭಾರತೀಯ ಮುಸ್ಲಿಮರು ಪಾಲಿಸಿಕೊಂಡು ಬಂದ ಸೂಫೀ ಪರಂಪರೆಯ ಇಸ್ಲಾಮ್ ಧರ್ಮವನ್ನು ಈ ವಹಾಬಿ ಸಿದ್ದಾಂತವಾದಿಗಳು ಒಪ್ಪುವುದಿಲ್ಲ. ಕಾರಣ ಭಾರತೀಯ ಮುಸ್ಲಿಮರು ಪಾಲಿಸುವ ಇಸ್ಲಾಮ್ “ಅಶುದ್ಧಿಯಾಗಿದೆ” ಹಾಗೂ ಸೂಫಿ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಇತರ ಧರ್ಮಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೂ ಇಸ್ಲಾಮ್ ಧರ್ಮದಲ್ಲಿ ಅಳವಡಿಸಿಕೊಂಡಿವೆ. ಇದು ಧರ್ಮ ನಿಷಿದ್ಧ ಕಾರ್ಯ ಎಂಬುವುದು ವಹಾಬಿ ಮೂಲಭೂತವಾದಿಗಳ ವಾದ. ಈ ಕಾರಣಕ್ಕಾಗಿ ಧರ್ಮದ ಪರಿಶುದ್ದೀಕರಣದ ಹೆಸರಲ್ಲಿ ಸೌದಿ ಅರೇಬಿಯಾದ ಕಟ್ಟರ್ ವಹಾಬಿ ಚಿಂತನೆಯನ್ನು ನೈಜ್ಯ ಇಸ್ಲಾಮ್ ಎಂದು ಬಿಂಬಿಸಲು ಇವರು ಹೊರಟಿದ್ದಾರೆ. ಡಾ. ಜಾಕಿರ್ ನಾಯ್ಕ್ ಮಾಡುತ್ತಿರುವುದು ಈ ಕಾರ್ಯವನ್ನೇ. ಪರಿಶುದ್ದ ಇಸ್ಲಾಮ್ ಹೆಸರಿನಲ್ಲಿ ವಹಾಬಿ ಮೂಲಭೂತವಾದ ಸಿದ್ದಾಂತವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವುದು ನಾಯ್ಕ್ ನೇತ್ವತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಪ್ರಮುಖ ಉದ್ದೇಶ. ಇವರ ಧಾರ್ಮಿಕ ಪ್ರವಚನಗಳನ್ನು ಆಲಿಸಿದಾಗ ಅವರಲ್ಲಿರುವ ಧರ್ಮ ಶ್ರೇಷ್ಠತಾ ವ್ಯಸನ ಎದ್ದು ಕಾಣುತ್ತದೆ. ಇಸ್ಲಾಮ್ ಧರ್ಮ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ನ್ಯೂನ್ಯತೆಯಿಂದ ಕೂಡಿದೆ ಎಂಬ ವಾದ ಇವರ ಮತಪ್ರವಚನಗಳಲ್ಲಿ ಪದೇ ಪದೇ ಉಲ್ಲೇಖವಾಗುತ್ತದೆ. ತಾನು ಪಾಲಿಸುತ್ತಿರುವ ಧರ್ಮವನ್ನು ಸಮರ್ಥಿಸುತ್ತಾ ಹಾಗೂ ಅದರ ಶ್ರೇಷ್ಠತೆಯನ್ನು ಸಾರುತ್ತಾ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮನೋಭಾವ ಯಾವ ಧರ್ಮದಲ್ಲೇ ಇರಲಿ ಅದು ತೀರಾ ಅಪಾಯಕಾರಿ.

ಇತರ ಧರ್ಮಗಳ ಬಗ್ಗೆ ವಿಮರ್ಶಿಸುವುದು ಖಂಡಿತಾ ತಪ್ಪಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಥವಾ ಇನ್ನಾವುದೇ ಧರ್ಮದ ಅನುಯಾಯಿಗಳುdr zhakir naik_1 ಪರಸ್ಪರ ಎಲ್ಲಾ ಧರ್ಮಗಳ ಕುರಿತಾಗಿ ಚರ್ಚೆ ನಡೆಸಲು ಹಾಗೂ ವಿಮರ್ಶಿಸಲು ಅವಕಾಶವಿದೆ, ಇರಬೇಕು ಕೂಡಾ. ಆದರೆ ಇದು ವೈಜ್ಞಾನಿಕ ನೆಲೆಯಲ್ಲಿರಬೇಕು. ಹಾಗಲ್ಲದೆ, ತನ್ನ ಧರ್ಮದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ಮತ್ತೊಂದು ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿಸುವುದು ಹಾಗೂ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು ಮಾತ್ರ ಅತಿರೇಕದ ನಡವಳಿಕೆ. ಡಾ. ಝಾಕಿರ್ ನಾಯ್ಕ್ ಬಹುತೇಕ ವಾದಗಳಲ್ಲೂ ಪರಧರ್ಮ ಅಸಹಿಷ್ಠುತಾ ಮನೋಭಾವ ಹೊಂದಿರುವುದು ಎದ್ದು ಕಾಣುತ್ತಿದೆ. ಇದು ಕೇವಲ ಝಾಕಿರ್ ನಾಯ್ಕ್ ರಲ್ಲಿ ಮಾತ್ರವಲ್ಲ ಅವರ ವಿಚಾರಧಾರೆಗಳನ್ನು ಪಾಲಿಸುವ ಸಿದ್ದಾಂತವಾದಿಗಳಲ್ಲೂ ಕಂಡುಬರುತ್ತದೆ. ಡಾ. ಝಾಕಿರ್ ನಾಯ್ಕ್ ಅವರ ಚಿಂತನೆಯನ್ನು ಪ್ರಚಾರ ಪಡಿಸುವ ಸಲಫೀ, ಅಹ್ಲೆಹದೀಸ್ ಸಿದ್ದಾಂತವಾದಿಗಳಲ್ಲಿ ಚರ್ಚೆ ನಡೆಸಿದರೆ ಅವರಲ್ಲಿ ಪರಧರ್ಮ ಅಸಹಿಷ್ಠುತಾ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ನಾವು ಕಾಣಬಹುದು. ಇಸ್ಲಾಮ್ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದ ಅಸ್ತಿತ್ವವನ್ನೇ ಇವರು ಒಪ್ಪಲು ತಯಾರಿಲ್ಲ.

“ಬಹುಸಂಸ್ಕೃತಿ, ಕೂಡುಕೊಳ್ಳುವಿಕೆ ಮುಸ್ಲಿಮರ ಪಾಲಿಗೆ ಧರ್ಮ ನಿಷಿದ್ಧ. ನೈಜ್ಯ ಮುಸಲ್ಮಾನನೊಬ್ಬ ಹಿಂದೂಗಳ ಹಬ್ಬಹರಿದಿನಗಳಲ್ಲಿ ಭಾಗವಹಿಸಲಾರ, ಅವರು ಕೊಡುವ ಹಬ್ಬದೂಟವನ್ನೂ ಸ್ವೀಕರಿಸುವುದು ಧರ್ಮಬಾಹಿರ” ಎನ್ನುತ್ತಾರೆ ಮಂಗಳೂರಿನ ಸಲಫಿ ಮೂಮೆಂಟ್ ಮುಖಂಡರೊಬ್ಬರು. ಧರ್ಮಾಂಧತೆಯ ನಶೆಯಲ್ಲಿ ಮುಳುಗಿರುವ ಬಹುತೇಕ ಯುವಕರು ವಾದ ಮಾಡುವವಾಗ ಬಳಸುವುದು ಡಾ. ಝಾಕಿರ್ ನಾಯ್ಕ್ ಬಳಸೋ ಮೆಟೀರಿಯಲ್ ಗಳನ್ನೇ. ಬಹುಸಂಸ್ಕೃತಿ ವಿರೋಧಿ ಮನೋಭಾವ ಹಾಗೂ ಸ್ವಧರ್ಮ ಶ್ರೇಷ್ಠತಾ ವ್ಯಸನ ಯುವಮನಸ್ಸುಗಳಲ್ಲಿ ಆಳವಾಗಿ ಬೆರೂರುತ್ತಿರುವುದಕ್ಕೆ ಡಾ.ನಾಯ್ಕ್ ಕೊಡುಗೆ ತುಂಬಾನೇ ಇದೆ. ಇನ್ನೂ ಅಪಾಯಕಾರಿಯಾದ ಸಂಗತಿ ಏನಂದರೆ ಝಾಕಿರ್ ನಾಯ್ಕ್ ಮುಸ್ಲಿಮ್ ಯುವಮನಸ್ಸುಗಳಲ್ಲಿ ಸರ್ವಶ್ರೇಷ್ಠ ಮುಸ್ಲಿಮ್ ಧರ್ಮಗುರುವಾಗಿ ಸ್ಥಾನಪಡೆದುಕೊಳ್ಳುತ್ತಿರುವುದು. ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳಿಗೆ ಭಿನ್ನವಾದ ಚಿಂತನೆಗಳು ಇಸ್ಲಾಮ್ ಧರ್ಮದಲ್ಲಿದ್ದರೂ ಅಲ್ಲದೆ ಅವರು ಪ್ರಚುರಪಡಿಸುವ ವಹಾಬಿ ಮೂಲಭೂತವಾದಿ ಚಿಂತನೆಗೆ ಮುಸ್ಲಿಮ್ ಸಮೂಹದಲ್ಲಿ ವಿರೋಧವಿದ್ದರೂ ಇಂದಿನ ಯುವಕರ ಪಾಲಿಗೆ ಡಾ. ಝಾಕಿರ್ ನಾಯ್ಕ್ ಪ್ರಮುಖ ಮುಸ್ಲಿಮ್ ಧಾರ್ಮಿಕ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚೆಗೆ ಕೆಲ ಮುಸ್ಲಿಮ್ ಯುವಕರಂತೂ ಅತಿಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ. ಧಾರ್ಮಿಕತೆಯ ಗುಂಗಿನಲ್ಲೇ ದಿನದ ಅಧಿಕ ಸಮಯವನ್ನು ಕಳೆಯುವ ಸುಶಿಕ್ಷಿತ ಮುಸ್ಲಿಮ್ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಯೋಸಹಜ ನಡವಳಿಕೆಗೆ ಬದಲಾಗಿ ಪರಲೋಕ ಸ್ವರ್ಗ ನರಕಗಳ ಕುರಿತಾದ ವಿಚಾರಗಳಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಾರೆ. ಸಂಗೀತ, ಕಲೆ, ಸಿನಿಮಾಗಳ ವಿರುದ್ಧವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇಂತಹಾ ಮನಸ್ಥಿತಿ ಹೊಂದಿರುವ ಯುವಕರು ಲೌಕಿಕ ಜೀವನದ ಕುರಿತಾಗಿ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ಈ ಲೌಕಿಕ ಜೀವನವಿರುವುದೇ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಲು; ನಮ್ಮ ಬದುಕು ಏನಿದ್ದರೂ ಪರಲೋಕದಲ್ಲ ಎಂಬ ನಂಬಿಕೆ ಅತಿಯಾಗಿ ಧರ್ಮಪಾಲನೆ ಹಾಗೂ ಧರ್ಮರಕ್ಷಣೆಯೇ ಈ ಯುವಕರ ಜೀವನದ ಪರಮ ಗುರಿಯಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಮಧ್ಯಾಹ್ಮದ ನಮಾಜ್ ಮಾಡಲು ಕಚೇರಿಯಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಸಿಕ್ಕಿದ್ದ ಉತ್ತಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ಐಸೀಸ್ ಗೆ ಸೇರಿದ್ದಾರೆಂದು ಶಂಕಿಸಲ್ಪಡುತ್ತಿರುವ ಕೇರಳದ ಯುವಕರ ಪೋಷಕರೊಬ್ಬರು ತನ್ನ ಮಗನ ಅತಿಧಾರ್ಮಿಕತೆಯ ಬಗ್ಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಆ ಯುವಕನ ಅತಿಧಾರ್ಮಿಕತೆ ಎಷ್ಟಿತ್ತೆಂದರೆ ತನ್ನ ತಂದೆಯನ್ನೇ “ಕಾಫಿರ್ ” ಎಂದು ಕರೆದಿದ್ದ. ಶರಿಯಾ ಕಾನೂನು ಜಾರಿಗಾಗಿ ಹೋರಾಡುತ್ತೇನೆ ಎಂದಿದ್ದನಂತೆ. ತನ್ನ ಹೋರಾಟದ ಮೂಲಕ ಸ್ವರ್ಗ ಪಡೆಯುತ್ತೇನೆ ಎನ್ನುತ್ತಿದ್ದನಂತೆ. ಈ ರೀತಿಯಲ್ಲಿ ಅತಿಧಾರ್ಮಿಕತೆಯತ್ತ ವಾಲುತ್ತಿರುವ ಯುವಮನಸ್ಸುಗಳ ಮೇಲೆ ಡಾ.ಝಾಕಿರ್ ನಾಯ್ಕ್ ಪ್ರಭಾವ ಬಹಳಷ್ಟಿದೆ. ಅತಿಧಾರ್ಮಿಕತೆ ಮಿತಿಮೀರಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುವುದು ಇಂದು ನಾವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹಾ ನೆರೆ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ.

ಕೇಂದ್ರ ಸರ್ಕಾರದ ಕಣ್ಣು ಕೇವಲ ಡಾ. ಝಾಕಿರ್ ನಾಯ್ಕ್ ವಿರುದ್ಧ ಯಾಕೆ ?

ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾಧನಾ ಕೃತ್ಯದ ನಂತರ ಡಾ. ಝಾಕಿರ್ ನಾಯ್ಕ್ ಮೇಲೆ ನಿಗಾ ಇಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.gujarat_violence_1 ಆದರೆ ಡಾ. ಝಾಕಿರ್ ನಾಯ್ಕ್ ಎಂಬ ಇಸ್ಲಾಮ್ ಮೂಲಭೂತವಾದಿ ಧಾರ್ಮಿಕ ಮುಖಂಡನನ್ನು ಮಾತ್ರ ನಿಯಂತ್ರಿಸಿದರೆ ಸಾಕೇ? ಹಿಂದುತ್ವದ ಹೆಸರಲ್ಲಿ ಅಮಾಯಕರ ರಕ್ತ ಹರಿಸಲು ಪ್ರೇರೇಪಿಸುವ ಫ್ಯಾಸಿಸ್ಟ್ ಕೋಮುವಾದಿಗಳ ಬಾಯಿಗೆ ಬೀಗ ಹಾಕುವವರು ಯಾರು? ಬಾಂಗ್ಲಾದ ಇಸ್ಲಾಮಿಕ್ ಭಯೋತ್ಪಾದಕರು ಡಾ. ಝಾಕಿರ್ ನಾಯ್ಕ್ ರಿಂದ ಪ್ರಭಾವಿತರಾದರೆ ಹಿಂದುತ್ವದ ಹೆಸರಲ್ಲಿ ಅಮಾಯಕ ಮುಸ್ಲಿಮರ ರಕ್ತ ಹರಿಸುವವರಿಗೆ ಅಥವಾ ದಾಬೋಳ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಮಾಡಿದ ಹಿಂದುತ್ವ ಭಯೋತ್ಪಾದಕರಿಗೆ ಸಾದ್ವಿ ಪ್ರಾಗ್ಯ, ಮಾಯಾ ಕೊಡ್ನಾನಿ, ಪ್ರವೀಣ್ ತೊಗಾಡಿಯಾ, ಸ್ವಾದ್ವಿ ಪ್ರಾಚಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥರಂತಹಾ ಹಿಂದೂ ಮೂಲಭೂತವಾದಿಗಳು ಆದರ್ಶಪ್ರಾಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರಚೋದನೆಯಿಂದ ಕೂಡಿದ ಹೇಳಿಕೆಯನ್ನು ನೀಡುತ್ತಾ ಮುಝಾಫರ್ ನಗರ್, ದಾದ್ರಿಯಂತಹಾ ಹತ್ತಾರು ಅಮಾನುಷ ಘಟನೆಗಳಿಗೆ ಕಾರಣರಾದವರಲ್ಲವೇ ಇವರು. ಡಾ. ನಾಯ್ಕ್ ರಂತೆ ಧರ್ಮ ಶ್ರೇಷ್ಠತಾ ವ್ಯಸನ ಪ್ರಖರ ಹಿಂದುತ್ವವಾದಿಗಳಲ್ಲೂ ಹೆಚ್ಚಾಗುತ್ತಿದೆ. ಈ ಕೋಮುವಾದಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನಾರ್ಹ ಸಂಗತಿ.

ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದ ಮನುಕುಲಕ್ಕೆ ಅಪಾಯಕಾರಿ. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡರೆ ಸಾಲದು. ಬದಲಾವಣೆಯಾಗಬೇಕಾಗಿರೋದು ಜನರ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖರಾಗಬೇಕಿದೆ. ಧಾರ್ಮಿಕತೆಗೆ ವಿರೋಧವಿಲ್ಲ. ಆದರೆ ಅತಿ ಧಾರ್ಮಿಕತೆ ಯಾವತ್ತೂ ಅಪಾಯಕಾರಿ. ಸಂವಿಧಾನದ ಪ್ರಕಾರ ಎಲ್ಲರಿಗೂ ತಮ್ಮ ತಮ್ಮ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರಚುರಪಡಿಸಲು ಹಕ್ಕಿದೆ. ಆದರೆ ಸದ್ಯ ನಮಗೆಲ್ಲಾ ಬೇಕಾಗಿರೋದು ಡಾ. ಝಾಕಿರ್ ನಾಯ್ಕ್ ಪ್ರಚಾರ ಪಡಿಸುವ ಇಸ್ಲಾಂ ಮೂಲಭೂತವಾದಿ ಸಿದ್ದಾಂತವಲ್ಲ ಅಥವಾ ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದಿ ಸಿದ್ದಾಂತವದ ಪ್ರಚಾರವಲ್ಲ. ಬದಲಾಗಿ ಅಗತ್ಯವಿರೋದು ಮಾನವೀಯತೆ ಹಾಗೂ ಜೀವಪರ ವಿಚಾರಗಳನ್ನು ಯುವಮನಸ್ಸಿನೊಳಗೆ ಬಿತ್ತುವ ವಿಚಾರಾಧಾರೆಗಳು. ಒಡೆದುಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಿರುವುದು ಇಂದಿನ ಜರೂರತ್ತು.

ಕೊನೆಗೊಂದು ಮಾತು ಹೇಳಲೇ ಬೇಕು. ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಕುರಾನ್ ಪಠಿಸಲು ಬಾರದವರ ಕತ್ತುಸೀಳಿ ಹತ್ಯೆ ಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳತಿ ತರುಷಿ ಜೊತೆಗಿದ್ದ ಮುಸ್ಲಿಮ್ ಯುವಕ ಫರಾಜ್ ಹುಸೇನ್ ಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ಉಗ್ರರು ಜೀವದಾನವನ್ನು ನೀಡಿದ್ದರು. ಆದರೆ ಅದನ್ನ ತಿರಸ್ಕರಿಸಿ ಹುಸೇನ್ ಗೆಳತಿಯೊಡನೆ ತನ್ನ ಪ್ರಾಣತೆತ್ತ. ಈತನ ಪ್ರಾಣವನ್ನು ಕಸಿದುಕೊಂಡ ಉಗ್ರರಿಗೆ ಡಾ.ಝಾಕಿರ್ ನಾಯ್ಕ್ ಮಾದರಿಯಾದರೆ ನಮಗೆ ಮಾದರಿಯಾಗಬೇಕಾಗಿರುವುದು ಧರ್ಮಾಂಧರನ್ನು ಧಿಕ್ಕರಿಸಿ ಮಾನವಧರ್ಮವನ್ನು ಎತ್ತಿಹಿಡಿದ ನೈಜ್ಯ ಮುಸ್ಲಿಮ್ ಫರಾಜ್ ಹುಸೇನ್.

19 thoughts on “ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ

  1. Girish, Bajpe

    ನಾನೂ ಡಾ. ಝಕೀರ್ ನಾಯ್ಕ್ ರ ಕಾರ್ಯಕ್ರಮಗಳನ್ನು ನಿಯಮಿತವಾಗಿ ನೋಡುತ್ತಾ ಬಂದವನು. ವೇದ ಪುರಾಣಾದಿ ಹೆಚ್ಚಿನೆಲ್ಲಾ ಧರ್ಮಗೃಂಥಗಳನ್ನು ಅಧ್ಯಯನ ಮಾಡಿರುವ ನಾಯ್ಕ್‌ ಅದ್ಭುತವೆನ್ನಬಹುದಾದ ಸ್ಮರಣ ಶಕ್ತಿಯನ್ನು ಹೊಂದಿದ್ದಾರೆ. ಅವರ ಮತ್ತೊಂದು ಆಕರ್ಷಣೆ ಸರಳ ಹಾಗೂ ನಿರರ್ಗಳ ಇಂಗ್ಲಿಷ್. ನನ್ನನ್ನೂ ಪೀಸ್ ಟಿ ವಿ ಯ ಕಡೆ ಆಕರ್ಷಿಸಿರುವುದು ಅದೇ ಎನ್ನಬಹುದು! ಇನ್ನು ಧರ್ಮಗ್ರಂಥಗಳ ಪುಟ ಶ್ಲೋಕ ಸಂಖ್ಯಾ ಸಹಿತ ಉದಾಹರಿಸುವ ಅವರ ಅಧ್ಯಯನದ ಫಲಿತ ಬಹುಭಾಗ ಜ್ಞಾನ ಇಸ್ಲಾಮಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದಕ್ಕೇ ಸೀಮಿತ. ಇಂದು ಆಂಗ್ಲ ಭಾಷಾ ಮಾಧ್ಯಮದ ಬೆಳವಣಿಗೆ ಪ್ರಾಯಶಃ ಯುವಜನತೆಯನ್ನು ಅವರತ್ತ ಹೆಚ್ಚೇ ಎನ್ನುವಂತೆ ಆಕರ್ಷಿಸುತ್ತಿದೆ.ಅಂತಹವರಲ್ಲಿ ಹೆಚ್ಚಿನವರಿಗೆ ಅವರೊಬ್ಬ ಅತಿಮಾನವನಂತೆ ಕಂಡು ಬರುತ್ತಿದ್ದಾರೆ. ನಾಯ್ಕ್‌ರೇ ಹೇಳುವ ಪ್ರಕಾರ ಅವರ ಬಳಗದಲ್ಲಿರುವ ಬಹಳಷ್ಟು ವಿದ್ವಾಂಸರು/ಭಾಷಣಕಾರರು ಜನ್ಮತಃ ಮುಸ್ಲಿಮರಲ್ಲ. ತಾವು ಬರೆದಿರುವ “ಸ್ವಧರ್ಮ ಶ್ರೇಷ್ಠತಾ ವ್ಯಸನ” ಇವರಿಗೆ ಒಪ್ಪುವ ವ್ಯಾಖ್ಯಾನ. ವಹಾಬಿಗಳ ವಿಚಾರ ಈ ತನಕ ನನಗೆ ಗೊತ್ತಿರಲಿಲ್ಲ. ಈಗಷ್ಟೇ ತಿಳಿಯಿತು. ಯಾವ ಜಾತಿ ಧರ್ಮವೇ ಆಗಿರಲಿ, ಕಟ್ಟರ್ ಅನಿಸಿಕೊಳ್ಳುವವರ ಯಾವುದೇ ಪ್ರಚೋದನಾತ್ಮಕ ವಿಚಾರಗಳೂ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮಾಹಿತಿಪೂರ್ಣ ಬರಹಕ್ಕಾಗಿ ಧನ್ಯವಾದಗಳು.

    Reply
    1. Lalith Prashanth

      “ವೇದ ಪುರಾಣಾದಿ ಹೆಚ್ಚಿನೆಲ್ಲಾ ಧರ್ಮಗೃಂಥಗಳನ್ನು ಅಧ್ಯಯನ ಮಾಡಿರುವ ನಾಯ್ಕ್‌”

      His knowledge of Vedas are laughable at best. He has studies them not with the intention of enlightening himself but with the intention of deriding them. Cunning man.

      Reply
  2. Lalith Prashanth

    “ನಾನೂ ಡಾ. ಝಕೀರ್ ನಾಯ್ಕ್ ರ ಕಾರ್ಯಕ್ರಮಗಳನ್ನು ನಿಯಮಿತವಾಗಿ ನೋಡುತ್ತಾ ಬಂದವನು.”

    Be careful you might get radicalised by his programs. When you know that he is a bigot, why do you watch him?

    Reply
    1. Girish, Bajpe

      ನಾನು ನಾಯ್ಕ್‌ರ ಕಾರ್ಯಕ್ರಮ ಮಾತ್ರವಲ್ಲ ಜಗ್ಗಿ ವಾಸುದೇವ್‌‌ರವರ ಕಾರ್ಯಕ್ರಮಗಳನ್ನೂ ಅವಕಾಶ ಸಿಕ್ಕಾಗ ನೋಡುತ್ತೇನೆ. ಇಂಗ್ಲಿಷ್‌ನಲ್ಲಿ ಅವರೂ ಅಪ್ರತಿಮ. ಯಾರ ಭಾಷಣವೇ ಇರಲಿ, ತಿಳಿದು ಕೊಳ್ಳುವಂತಹದಿದ್ದರೆ ಮಾತ್ರ ಸ್ವೀಕರಿಸಿದರಾಯಿತು. ಬೇಡದ ಅಂಶಗಳಿದ್ದರೆ ಬಿಟ್ಟು ಬಿಡೋಣ. ಗುಣಕ್ಕೆ ಮತ್ಸರ ಬೇಡ. ಸರಿ ತಾನೆ?

      Reply
  3. Salam Bava

    ಇದು ಇಂದಿನ ನಮ್ಮ ಘನ ಸರಕಾರದ ಮತ್ತು ಅದರ ಪೋಷಕರಾದ ಬಂಡವಾಳಶಾಹಿ ಮಾಧ್ಯಮಗಳ ಅದರಲ್ಲ್ಲೂ ಟೈಂಸ್ ನೌ ನ ಅರ್ನಾಬ್ ಎಂಬ ಆರ್ಭಟಿಗನ “ಮಾಧ್ಯಮ ವಿಚಾರಣೆಯ “ಝಲಕ್ ! ಇಂದು ದೇಶದಲ್ಲಿ ಸುಟ್ಟು ಸುಡುವಂಥಾ ಸಾವಿರಾರು ಇಸ್ಯು ಗಳು ಇರುವಾಗ ,ಕೇವಲ ಎಲ್ಲಿಯೋ ನಡೆದಂತ ಒಂದು ಘಟನೆಗೆ ಝಕೀರ್ ನ್ಯಾಕರನ್ನು ಥಳಕು ಹಾ ಕುವುದು ಒಂದು ದೊಡ್ಡ ಷಡ್ಯಂತ್ರ !
    ಪ್ರಜಾಪ್ರಭುತ್ವದಲ್ಲಿ ಒಂದು ಬಹುಮತವಿರುವ ಬಲಪಂಥೀಯ ರಾಜಕೀಯ ಪಕ್ಸ ,ಜಗತ್ತಿನ ಅತ್ಯಂತ ಬಲಿಷ್ಟ ಪ್ಯಾಸಿಸ್ಟ್ ಸಂಘಟನೆ ,ದೇಶದ ಬಲಿಷ್ಠ ಬಂಡವಾಳಶಾಹಿಗಳು ಮತ್ತು ಅವರ ಎಲ್ಲಾ ರಿಸೋರ್ಸ್ ,ಇದೆಲ್ಲದಕ್ಕಿಂತ ಮಿಗಿಲಾಗಿ ಬಲಿಷ್ಠ ಮಧ್ಯಮ ವರ್ಗ ಮತ್ತು ಯಾವುದಕ್ಕೂ ಪ್ರತಿಕಯಿಸದ ಸೈಲೆಂಟ್ ಮೆಜಾರಿಟಿ- ಈ ಎಲ್ಲಾ ಡೇಡ್ಲಿ ಕಾಂಬಿನೇಷನ್ ಸೇರಿದರೆ ಏನೆಲ್ಲಾ ನಡೆಯಬಹುದೋ ಅದೆಲ್ಲಾ ಈಗ ನಮ್ಮ ದೇಶದಲ್ಲಿ ಕಾರ್ಯ ರೂಪಕ್ಕೆ ಬರುತ್ತಿದೆ . ಪ್ರಜಾಪ್ರಭುತ್ವದಲ್ಲಿ ಎಷ್ಟರ ವರೆಗೆ ಕೇವಲ ಮೆಜಾರಿಟಿ ( ಜಾತಿ ,ಧರ್ಮದಿಂದ ಅಲ್ಲ ) ಯಲ್ಲಿ ಸರ್ವ ಅಧಿಕಾರ ಕೇಂದ್ರೀಕೃತ ವಾದರೆ -ವೈಚಾರಿಕ ,ಧಾರ್ಮಿಕ ಅಥವಾ ಇನ್ನಾವುದೇ ಭಿನ್ನಾಭಿಪ್ರಾಯವನ್ನು ಅವರು ಯಾವುದೇ ರೀತಿಯಲ್ಲಿ ಹೊಸಕಿ ಹಾಕುತ್ತಾರೆ. ಬಿನಾಯಕ ಸೇನೆ,ಜೆಎನ್ಯೂ ವಿನಿಂದ ಈಗ ಅದರ ಪರಂಪರೆ ಮುಂದುವರಿಯುತ್ತಾ ಇದೆ .

    ಇದು ಹಿಟ್ಲರ್ ನ ಅಧಿಕಾರಿಶಾಹಿಯ್ ತದ್ರೂಪ ,ನಟರು ಆಚೀಚೆ ಬದಲಾಗಿರಬಹುದು !

    ಕೆಲವರು ಅದರಲ್ಲೂ ಜಾತ್ಯತೀತ ಪ್ರಗತಿಪರರು ಝಾಕಿರ್ ನಾಯ್ಕ್ ರನ್ನು ವಿರೋಧಿಸುತ್ತಾರೆ. ಮುಸ್ಲಿಮರಲ್ಲ್ಲೂ ಹಲವರಿಗೆ ಝಾಕಿರ್ ನಾಯ್ಕ್ ರವರ ಬಗ್ಗೆ ಭಿನ್ನಾಭಿಪ್ರಾಯ ಇದೆ.
    ಝಾಕಿರ್ ನಾಯ್ಕ್ ಒಬ್ಬ ಮುಸ್ಲಿಮ್ ಎಂಬ ಕಾರಣಕ್ಕಾಗಿ ಬೆಂಬಲ ವ್ಯಕ್ತ ಪಡಿಸಲಾಗುತ್ತಿದೆ ಎನ್ನುವುದು ದೊಡ್ಡ ತಪ್ಪು ಗ್ರಹಿಕೆ ಆಗಿದೆ.
    ಬಿನಾಯಕ್ ಸೇನ್ ರವರ ಮೇಲೆ ಆರೋಪ ಬಂದಾಗ ಅಲ್ಲಿ ಅವರ ಧರ್ಮ ನೋಡಲಿಲ್ಲ, ಸಿದ್ದಾಂತ ವೈಚಾರಿಕತೆ ನೋಡಲಿಲ್ಲ ಅವರೊಂದಿಗೆ ಭಿನ್ನಾಭಿಪ್ರಾಯ ಇದ್ದವರೂ ಧ್ವನಿ ಎತ್ತಿದರು ಯಾಕೆಂದರೆ ಅದೊಂದು ನ್ಯಾಯಪರ ಧ್ವನಿಯಾಗಿತ್ತು.
    ಜೆಎನ್ಯೂ ವಿದ್ಯಾರ್ಥಿಗಳನ್ನು ಮಟ್ಟ ಹಾಕಲು ಪ್ರಯತ್ನ ಪಡಲಾಯಿತು, ಆರೋಪಗಳು ಕೇಳಿ ಬಂದವು ಆಗಲೂ ಅವರ ಪರವಾಗಿ ಮೂಲಭೂತವಾದಿಗಳೆಂದು ಕರೆಯಲ್ಪಡುವವರೂ ಧ್ವನಿ ಎತ್ತಿದರು. ಯಾಕೆಂದರೆ ಭಿನ್ನಾಭಿಪ್ರಾಯ ಬೇರೆ. ಸಂವಿಧಾನ ನೀಡಿದ ಹಕ್ಕು,, ಅಭಿವ್ಯಕ್ತಿ ಸ್ವಾತಂತ್ರ್ಯ ಬೇರೆ. ಇಲ್ಲಿ ಹೋರಾಟ ಇರುವುದು ಅದಕ್ಕೇ ಆಗಿದೆ.
    ೧. ಝಾಕಿರ್ ನಾಯಕ್ ಒಬ್ಬ ಭಾಷಣಕಾರ ಮಾತ್ರ.. ಅವರು ಹೇಳಿದ್ದು ವೇದ ವಾಕ್ಯ ಅಲ್ಲ. ಬಹಳಷ್ಟು ತಪ್ಪುಗಳೂ ತೋರಿಸಬಹುದು. ಬಹಳಷ್ಟು ಜನರು ಅವರ ಮಾತಿಗೆ ಕನ್ವಿಂಸ್ ಆಗಿದ್ದಾರೆ. ಕನ್ವಿಂಸ್ ಆಗದವರೂ ಇದ್ದಾರೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ತೆರೆದ ಮೈದಾನದಲ್ಲಿ ಅವರು ಮಾತಾಡುತ್ತಾರೆ.
    ಅದೇ ರೀತಿ
    ಅವರ ಮಾತನ್ನು ತಪ್ಪು ಎಂದು ತೋರಿಸಲು, ತನ್ನ ಧರ್ಮದ ವಿಚಾರಗಳನ್ನು ಜನರ ಮುಂದೆ ತೆರೆದಿಡಲು ಸಂವಿಧಾನ ನಿಮಗೂ ಅನುಮತಿ ನೀಡುತ್ತದೆ. ಒಂದು ಚಾನೆಲ್ ಪ್ರಾರಂಭಿಸಿ ಜನರನ್ನು ಸೇರಿಸಿ ದಾರಿ ತಪ್ಪುತ್ತಿರುವ ಜನರನ್ನು ಸರಿದಾರಿಗೆ ತರಬಹುದು. ಅಥವಾ ಅವರನ್ನು ವಿಮರ್ಶೆ ನಡೆಸಬಹುದು.
    ಯೋಗವನ್ನು ಒಂದೆಡೆ ವಿರೋಧಿಸುವಾಗ ಇನ್ನೊಂದು ಕಡೆ ಯೋಗಕ್ಕೆ ಕನ್ವಿಂಸ್ ಆದ ಮುಸ್ಲಿಮರಿಲ್ಲವೇ?. ವಿಚಾರ ವೈಚಾರಿಕತೆಯನ್ನು ತಡೆಹಿಡಿಯಲು ಯಾರಿಗೂ ಸಾಧ್ಯವಿಲ್ಲ. ನಾಸ್ತಿಕ ಕಮ್ಯೂನಿಸ್ಟ್ ಚಿಂತನೆಗೆ ಕನ್ವಿಂಸ್ ಆದ ಮುಸ್ಲಿಮರಿಲ್ಲವೇ? ಅದರ ಬಗ್ಗೆ ಯಾರಾದರೂ ತಗಾದೆ ಎತ್ತುತ್ತಾರೆಯೇ? ಆದ್ದರಿಂದ ಝಾಕಿರ್ ನಾಯಕ್ ಭಿನಾಬಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ , ಮತ್ತು ಆರೋಪಗಳನ್ನು ಭಿನ್ನಭಿನ್ನವಾಗಿ ನೋಡಬೇಕು.
    ೨. ಝಾಕಿರ್ ನಾಯಕ್ ಭಾಷಣದಿಂದ ಕೋಮು ಗಲಭೆ ನಡೆದ ಒಂದೇ ಒಂದು ಉದಾಹರಣೆ ಇಲ್ಲ. ದ್ವೇಷ ಕಾರುವ ಭಾಷಣವನ್ನು ಅವರು ಮಾಡಿಲ್ಲ.
    ಇನ್ನು ಇತರ ಧರ್ಮವನ್ನು ಕೀಳಾಗಿ ಕಾಣುತ್ತಾರೆ ತನ್ನ ಧರ್ಮವೇ ಸರಿ ಎನ್ನುತ್ತಾರೆ ಅದು ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಹೊರತು ಈ ದೇಶದ ಕಾನೂನು ಅಲ್ಲ. ಪ್ರತಿಯೊಬ್ಬರಿಗೆ ತನ್ನ ಧರ್ಮ ಶೇಷ್ಟ ಅನ್ನಬಹುದು. ಪ್ರತಿಯೊಬ್ಬ ವಿಚಾರವಂತನಿಗೆ ತನ್ನ ವಿಚಾರ ಸರಿ ಎನ್ನುವುದು ಇರುತ್ತದೆ. ಕೋಮುವಾದಿ ಪ್ರಗತಿಪರರನ್ನು ದೂರುತ್ತಾರೆ ಮತ್ತು ಪ್ರಗತಿಪರರು ಕೋಮುವಾದಿಗಳನ್ನು ದೂರುವುದಿಲ್ಲವೇ? ನಾಸ್ತಿಕರು ದೇವವಿಶ್ವಾಸಿಗಳನ್ನು ಗೇಲಿ ಮಾಡುವುದಿಲ್ಲವೇ?
    ಝಾಕಿರ್ ನಾಯಕ್ ಎಪ್ರೋಚ್ ಸರಿ ಎನ್ನುವವರೂ ಮತ್ತು ಅವರ ಎಪ್ರೋಚ್ ಸರಿಯಲ್ಲ ಎನ್ನುವವರೂ ಮುಸ್ಲಿಮರಲ್ಲಿ ಇದ್ದಾರೆ. ಬಹುಸಂಸ್ಕೃತಿ ಸಮಾಜದಲ್ಲಿ ವಾದ ಪ್ರತಿವಾದಗಳಲ್ಲಿ ಸೌಮ್ಯತೆ ಯುಕ್ತಿ ಎಲ್ಲವೂ ಬೇಕು. ಝಾಕಿರ್ ನಾಯಕ್ ಎಪ್ರೋಚ್ ಬಗ್ಗೆ ತಮಗೆ ವಿಮರ್ಶೆ ನಡೆಸಬಹುದು. ತಮ್ಮದೇ ಸ್ವಂತ ವೇದಿಕೆಗಳನ್ನು ಕಟ್ಟಿ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬಹುದು. ಝಾಕಿರ್ ನಾಯಕ್ ರನ್ನು ವಿರೋಧಿಸಿ ಎಷ್ಟೋ ವೀಡಿಯೋ ಗಳು ಯೂಟೂಬ್ ನಲ್ಲಿ ಇದೆ. ಅದಕ್ಕೆ ಮುಕ್ತ ಅವಕಾಶ ವಿದೆ. ಅದು ಬಿಟ್ಟು ಕೈಲಾಗದವನು ಮೈ ಪರಚಿಕೊಳ್ಳುವುದು ಸರಿಯಲ್ಲ.

    ೩. ಝಾಕಿರ್ ನಾಯಕ್ ಯಾರಿಗೂ ಬಲವಂತದ ಆಮಿಷ ಒಡ್ಡಿದ ಇತಿಹಾಸ ಇಲ್ಲ. ಜನರು ಸ್ವ ಇಚ್ಛೆಯಿಂದ ಪ್ರಶ್ನೆ ಕೇಳುತ್ತಾರೆ. ಅವರು ತಮ್ಮ ವೈಚಾರಿಕತೆಗೆ ಅನುಗುಣವಾಗಿ ಉತ್ತರಿಸುತ್ತಾರೆ. ಕೆವರಿಗೆ ತೃಪ್ತಿ ಇನ್ನು ಕೆಲವರಿಗೆ ಅತೃಪ್ತಿ ಆಗುತ್ತದೆ. ಅಂತೂ ಓರ್ವ ವ್ಯಕ್ತಿಯ ಅಭಿಪ್ರಾಯ ತಾನೇ. ಅವರನ್ನು ಯಾವ ಲೇಬಲ್ ನಿಂದ ಕರೆಯಬಹುದು. ಅವರು ತನ್ನನ್ನು ಮುಸ್ಲಿಮ್ ಎನ್ನುತ್ತಾರೆ.
    ಅವರಿಗೆ ಪರಿಚಯವಿಲ್ಲದ ಅದೆಷ್ಟೋ ಜನರು ಜಾತಿ ಧರ್ಮ ಬೇದ ಮರೆತು ಅವರಿಗೆ ಪ್ರಭಾವಿತರಾದರೆ ಅವರ ತಪ್ಪೇನು?
    ಫ್ಯಾನ್ ಮಾಡಿದ ತಪ್ಪಿಗೆ ಸೆಲೆಬ್ರಿಟಿ ಗಳನ್ನು ಯಾರಾದರೂ ಅಪರಾಧಿಯನ್ನಾಗಿ ಮಾಡಲಾಗುತ್ತದೆಯೇ?

    ೪. ಝಾಕಿರ್ ನಾಯಕ್ ಭಯೋತ್ಪಾದನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.ಆ ಬಗ್ಗೆ ಅವರ ಭಾಷಣ ಕೇಳಬಹುದು. ಅವರ ವೀಡಿಯೋ ವನ್ನು ಖಂಡತುಂಡವಾಗಿ ತೋರಿಸಿ ಜನರಲ್ಲಿ ತಪ್ಪುಕಲ್ಪನೆ ಬಿತ್ತಲಾಗುತ್ತದೆ. ವಿಶೇಷವಾಗಿ ಮಾಧ್ಯಮಗಳು.
    ಅವರು ಎನ್ಡಿಟಿವಿಯಲ್ಲಿ ಚರ್ಚೆಯಲ್ಲಿ ವೇದಿಕೆ ಹಂಚಿದ್ದಾರೆ. ರವಿಶಂಕರ್ ರವರ ಜೊತೆ ಇನ್ನಿತರರ ಜೊತೆ ವೇದಿಕೆ ಹಂಚಿದ್ದಾರೆ. ಎಲ್ಲೂ ಶಾಂತಿಗೆ ವಿರುದ್ಧವಾಗಿ ಮಾತಾಡಿಲ್ಲ. ಅವರು ಮಾತಾಡಿದ ಸರಿ ತಪ್ಪುಗಳು ಏನೇ ಇದ್ದರೂ. ದ್ವೇಷ ಅಸಹಿಷ್ಣುತೆಯ ಮಾತಾಡಿಲ್ಲ.
    ಒಟ್ಟಿನಲ್ಲಿ ಸ್ವಯಂ ನನಗೆ ಅವರ ಎಪ್ರೋಚ್ ಇಷ್ಟವಿಲ್ಲ. ಹಲವಾರು ಭಿನ್ನಾಭಿಪ್ರಾಯಗಳು ಇವೆ. ಆದರೆ ಅವರ ಪರ ಯಾಕೆಂದರೆ ಅವರೊಬ್ಬ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಅಲ್ಲ.
    ಪ್ರಜಾಸತ್ತಾತ್ಮಕ ವ್ಯವಸ್ಥೆಯ ಉಳಿವಿಗಾಗಿ, ಸಂವಿಧಾನ, ಮಾನವಹಕ್ಕು , ಭದ್ರತೆಯ ಉಳಿವಿಗಾಗಿ. ನ್ಯಾಯದ ಉಳಿವಿಗಾಗಿ.
    ನಮ್ಮ ದೇಶದಲ್ಲಿ ಚರ್ಚಿಸಲು ಬೆಲೆಯೇರಿಕೆ,ಹಗರಣಗಳು, ರೈತರ ಸಮಸ್ಯೆಗಳು ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳಿವೆ. ಭಾವನಾತ್ಮಕ ವಿಷಯಗಳನ್ನು ಎತ್ತಿದರೆ ಜ್ವಲಂತ ಸಮಸ್ಯೆಗಳು ಮೂಲೆ ಗುಂಪಾಗುತ್ತದೆ. ಅಥವಾ ಮೂಲೆಗುಂಪು ಮಾಡುವ ಷಢ್ಯಂತ್ರವಾಗಿರಬಹುದು.

    Reply
  4. Sha

    you are free to have differences with zakir naik. but to say that he inspired terrorists is completely wrong. one of the terrorist in dhaka was a fan of shradhdha kapoor… why cant you say she inpired him with the same logic…

    Reply
  5. M A Sriranga

    ಸಲಾಂ ಬಾವ ಅವರೇ ಇರ್ಷಾದ್ ಅವರ ಲೇಖನದಲ್ಲಿ ‘ಇತ್ತೀಚೆಗೆ ಕೆಲ ಮುಸ್ಲಿಂ ಯುವಕರಂತೂ ಅತಿ ಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ ———-‘ ಎಂದು ಪ್ರಾರಂಭವಾಗುವ ಇಡೀ ಪ್ಯಾರವನ್ನು ಒಮ್ಮೆ ಓದಿ ನೋಡಿ. ಆರ್ಥಿಕವಾಗಿ ದುರ್ಬಲರಾಗಿದ್ದರೆ ಕೆಲವೊಂದು ಉಗ್ರ ಧಾರ್ಮಿಕ ಸಂಘಟನೆಗಳು ಒಡ್ಡುವ ಇಹ(ಹಣ) ಮತ್ತು ಪರದ(ಸತ್ತ ನಂತರದ ಸ್ವರ್ಗದ) ಆಸೆಯಿಂದ ಅತಿ ಧಾರ್ಮಿಕತೆಗೆ ಬಲಿಪಶುಗಳಾಗುತ್ತಿರಬಹುದು ಎಂದು ಭಾವಿಸಬಹುದಾಗಿತ್ತು. ಆದರೆ ಬಡತನವೊಂದೇ ಕಾರಣ ಅಲ್ಲ ಎಂದು ಇರ್ಷಾದ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದರೆ ಅವರುಗಳ ಬ್ರೈನ್ ವಾಷ್ ಮಾಡುತ್ತಿರುವ ‘ಬಾಹ್ಯ ಶಕ್ತಿ’ಯಾವುದು? ಇರ್ಷಾದ್ ಅವರು ಹೇಳಿರುವಂತೆ ಹಿಂದುಗಳಲ್ಲೂ ಕೆಲವು ನಾಯಕರು ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ. ಇಲ್ಲವೆಂದಲ್ಲ. ಆದರೆ ಹಿಂದೂ ಯುವಕರು ಅವರ ಭಾಷಣ ಕೇಳಿ ತಮಾಷೆ ನೋಡಿ ವಾಪಸ್ ಮನೆಗೆ ಬರುತ್ತಾರೆ. ಜೀವನಾಧಾರವಾದ ಹೊಟ್ಟೆಪಾಡಿನ ಕೆಲಸವನ್ನು ಬಿಡುವುದಿಲ್ಲ. ಒಂದು ವೇಳೆ ಬಿಟ್ಟರೆ ಅವನಿಗೆ ಮದುವೆಗೆ ಹೆಣ್ಣು ಸಿಗುವುದಿಲ್ಲ: ಮದುವೆಯಾಗಿದ್ದಾರೆ ಹೆಂಡತಿಯೇ ಅಂತವಹನನ್ನು ಬಿಟ್ಟು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾಳೆ. ನಮ್ಮ ಬುದ್ಧಿಜೀವಿಗಳು ಸಮಯ ಸಿಕ್ಕಾಗಲೆಲ್ಲಾ ‘ಮನುಸ್ಮೃತಿ’,’ಪುರೋಹಿತಶಾಹಿ’,’ಬ್ರಾಹ್ಮಣಶಾಹಿ’ ಎಂದು ಜರಿಯುತ್ತಿರುತ್ತಾರೆ. ಆದರೆ ಹಿಂದುಗಳಲ್ಲಿ ಬಹುಪಾಲು ಯಾರೂ ಆ ‘ಮನುಸ್ಮೃತಿ’ಯ ಪುಸ್ತಕವನ್ನೇ ನೋಡಿಲ್ಲ. ಇನ್ನು ಅದನ್ನು ಓದಿ,ಪಾಲಿಸುವ ಮಾತು ಎಲ್ಲಿ ಬಂತು? ಮೇಲ್ಜಾತಿಯವರು, ಇವರಿಂದಲೇ ಸಮಾಜ ಹಾಳಾಗಿರುವುದು ಎಂದು ಬೈಗುಳವನ್ನು ಕೇಳುತ್ತಲೇ ಇರುವ ಬ್ರಾಹ್ಮಣರಲ್ಲಿ ಆಗಿರುವಷ್ಟು ಅಂತರ್ಜಾತಿ ವಿವಾಹಗಳು, ವಿವಾಹ ವಿಚ್ಛೇದಿತ ಗಂಡು ಹೆಣ್ಣುಗಳ ಮರುಮದುವೆ ಹಿಂದುಗಳಲ್ಲಿ ಇರುವ ಇತರ ಮೂರು ಪ್ರಮುಖ ಜಾತಿಗಳಲ್ಲಿ ಆಗಿಲ್ಲ. ಬ್ರಾಹ್ಮಣ ಜಾತಿಗೆ ಸೇರಿದ ಯುವಕನಿಗೆ ಹಳ್ಳಿಯಲ್ಲಿ ಸಾಕಷ್ಟು ಜಾಮೀನು,ತೋಟ ಇದ್ದರೂ ಸಹ ಸರ್ಕಾರಿ/ಖಾಸಗಿ ಕೆಲಸವಿಲ್ಲದಿದ್ದರೆ ಮದುವೆಯಾಗಲು ಹೆಣ್ಣು ಸಿಗುವುದು ಕಷ್ಟ. ಇಷ್ಟೆಲ್ಲಾ ಇರುವಾಗ ಯಾವ ಬಾಹ್ಯಶಕ್ತಿಯೂ ಅವರನ್ನು ದಾರಿ ತಪ್ಪಿಸುವುದು ಸಾಧ್ಯವಾಗದ ಮಾತು. ಇನ್ನು ತಾವು ಈ ಸಲ ಬಿ ಜೆ ಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದೇ ತಪ್ಪು ಎಂದು ವಾದಿಸಿದ್ದೀರಿ. ಇನ್ನು ಮೂರು ವರ್ಷಗಳ ನಂತರ ಜನಗಳಿಗೆ ಈ ಪಕ್ಷದ ಸರ್ಕಾರ ಬೇಡವಾದರೆ ಬೇರೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಬೇಕಾದರೆ ಸಹನೆಯೂ ಇರಬೇಕು. ಅರ್ನಾಬ್ ಗೋಸ್ವಾಮಿಯವರು News hourನಲ್ಲಿ ನಡೆಸಿಕೊಡುವ debateಗಳ ರೀತಿಯ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಆತ ಹೇಳುವ ‘ಸತ್ಯಗಳನ್ನೇ’ ಸುಳ್ಳು ಎನ್ನುವವರು ತಮಗೆ ತಾವೇ ಮೋಸಮಾಡಿಕೊಳ್ಳುತ್ತಾರೆ ಅಷ್ಟೇ.

    Reply
  6. Sha

    Lookin at the media trial of whole zakir naik episode i just remembered Sudarshan Faakir’s shayari

    Mera Kaatil hi mere munsif hain
    kya mere haq mein faisla dega??

    or shall i say

    mera munsif hi mera kaatil hain…

    Reply
  7. Sha


    First they came for the Socialists, and I did not speak out—
    Because I was not a Socialist.

    Then they came for the Trade Unionists, and I did not speak out—
    Because I was not a Trade Unionist.

    Then they came for the Jews, and I did not speak out—
    Because I was not a Jew.

    Then they came for me—and there was no one left to speak for me.

    Reply
  8. Anonymous

    ಇರ್ಷಾದ್ರವರು ಮೌಢ್ಯ ಮತ್ತು ಅಂಧ ವಿಸ್ವಾಸಗಳ ಮೂಲಕವಾಗಿ ಪಾಪಾದ ಜನರನ್ನು ಹೇದರಿಸಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿರುವ ಮುಂಡಾಸುದಾರಿ ಪುರೋಹಿತರುಗಳ ಮನಒಲಿಸಿಕೊಳ್ಳಲು ಬಾರಿ ಸರ್ಕಸ್ ಮಾಡಿದ್ದಾರೆ, ಯಾಕೇಂದರೆ ಈ ಪುರೋಹಿತರುಗಳ ಅನುಯಾಯಿಗಳು ಬರೆಯುವುದೆ ಈಗೆ,,, ಇನ್ನು ಪುರೋಹಿತಶಾಹಿಗಳ ಮುಂದೆ ಇರ್ಷಾದ್ ಉಂಪಿನಂಗಡಿ ಹೀರೊ.

    Reply
  9. Ananda Prasad

    ಮಾನವೀಯ ಸಮಾಜದ ನಿರ್ಮಾಣ ಆಗಬೇಕಾದರೆ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯನ್ನು ಕಲಿಸುವ ಕೆಲಸ ಆಗಬೇಕು. ಜನರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯದೆ ಸಮಾಜದ ಪ್ರಗತಿ ಸಾಧ್ಯವಿಲ್ಲ. ಪುರಾಣಗಳನ್ನು, ಎಲ್ಲ ಧರ್ಮಗ್ರಂಥಗಳನ್ನು, ಅವುಗಳ ಹೂರಣವನ್ನು ವಿಮರ್ಶೆ ಮಾಡುವ, ಪ್ರಶ್ನಿಸುವ ಮನೋಭಾವ ಎಳೆಯ ವಯಸ್ಸಿನಿಂದಲೇ ಮೂಡಿಸಬೇಕು. ಇದನ್ನು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಕಲಿಸುತ್ತಲೇ ಇಲ್ಲ.

    ನಮ್ಮ ಪ್ರಧಾನ ಮಂತ್ರಿ ಮೋದಿಯವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲ. ಅವರು ರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ನಮ್ಮ ದೇಶದಲ್ಲಿ ಪುರಾಣ ಕಥೆಗಳ ಕಾಲದಲ್ಲಿಯೇ (ಮಹಾಭಾರತ ಕಾಲದಲ್ಲಿ) ಪ್ರನಾಳ ಶಿಶು ತಂತ್ರಜ್ಞಾನ ಇತ್ತು ಎಂದು ಹೇಳಿದ್ದರು. ಇದು ಭಾರತದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿತ್ತು. ಕೌರವರು ಪ್ರನಾಳ ಶಿಶು ತಂತ್ರಜ್ಞಾನದಿಂದ ಹುಟ್ಟಿದ್ದು ಎಂಬುದು ಮೋದಿಯವರ ಪ್ರತಿಪಾದನೆ. ಮಹಾಭಾರತದಲ್ಲಿ ಹೇಳಿದ ಕಥೆಯ ಪ್ರಕಾರ ಗಾಂಧಾರಿ ವ್ಯಾಸ ಮುನಿಯ ವರದ ಮೂಲಕ ನೂರೊಂದು ಮಕ್ಕಳನ್ನು ಪಡೆದಳು. ಗಾಂಧಾರಿ ಗರ್ಭಿಣಿಯಾಗಿ ಎರಡು ವರ್ಷ ಆದರೂ ಹೆರಿಗೆ ಆಗಲಿಲ್ಲ. ನಂತರ ಹೆರಿಗೆ ಆದರೂ ಅವಳು ಜನ್ಮ ನೀಡಿದ್ದು ಜೀವಂತ ಮಗುವಿಗಲ್ಲ ಒಂದು ಮಾಂಸದ ಮುದ್ದೆಗೆ. ಇದನ್ನೇ ನಂತರ ವ್ಯಾಸ ಮುನಿಯು ನೂರೊಂದು ತುಂಡು ಮಾಡಿ ತುಪ್ಪ ತುಂಬಿದ ನೂರೊಂದು ಗಡಿಗೆಗಳಲ್ಲಿ ತುಂಬಿಸಿ ಎರಡು ವರ್ಷಗಳವರೆಗೆ ಇರಿಸಿದ ನಂತರ ಆ ಗಡಿಗೆಗಳನ್ನು ತೆರೆದಾಗ ನೂರೊಂದು ಮಕ್ಕಳು ಜನ್ಮ ತಳೆದರು ಎಂಬುದು ಕಥೆ. ಇದನ್ನು ಇಂದಿನ ಪ್ರನಾಳ ಶಿಶು ತಂತ್ರಜ್ಞಾನಕ್ಕೆ ಹೋಲಿಸಿದಾಗ ಇವು ಹೋಲಿಕೆಯೇ ಆಗುವುದಿಲ್ಲ. ಪ್ರನಾಳ ಶಿಶು ತಂತ್ರಜ್ಞಾನದಲ್ಲಿ ತಾಯಿಯಿಂದ ತೆಗೆದ ಅಂಡಾಣುವನ್ನು ದಾನಿಯ ವೀರ್ಯಾಣು ಜೊತೆ ಪ್ರಯೋಗಶಾಲೆಯಲ್ಲಿ ಮಿಲನಗೊಳಿಸಿ ನಂತರ ಬೆಳವಣಿಗೆಯ ಮಾಧ್ಯಮದಲ್ಲಿ ಐದು ದಿನಗಳ ಕಾಲ ಇರಿಸಿ ನಂತರ ಅದನ್ನು ಬಾಡಿಗೆ ತಾಯಿಯ ಗರ್ಭಾಶಯಕ್ಕೆ ವರ್ಗಾವಣೆ ಮಾಡುತ್ತಾರೆ. ಭ್ರೂಣ ವರ್ಗಾವಣೆ ಮಾಡುವ ಮೊದಲು ಬಾಡಿಗೆ ತಾಯಿಯ ಗರ್ಭಕೋಶ ಭ್ರೂಣವನ್ನು ಸ್ವೀಕರಿಸುವಂತೆ ಹಾರ್ಮೋನುಗಳನ್ನು ನೀಡಿ ಮೊದಲೇ ಸಿದ್ಧಗೊಳಿಸಬೇಕಾಗುತ್ತದೆ. ತಾಯಿಯಿಂದ ಅಂಡಾಣು ತೆಗೆಯಲೂ ಲ್ಯಾಪರೊಸ್ಕೋಪಿ ತಂತ್ರಜ್ಞಾನದ ಮೂಲಕ ಬಲಿತ ಅಂಡಾಣುವನ್ನು ಮಾತ್ರವೇ ತೆಗೆಯಬೇಕಾಗುತ್ತದೆ. ಈ ಎಲ್ಲ ತಂತ್ರಜ್ಞಾನವಾಗಲಿ, ತಿಳುವಳಿಕೆಯಾಗಲಿ ಮಹಾಭಾರತ ಕಾಲದಲ್ಲಿ ಇರಲೇ ಇಲ್ಲ. ಹೀಗಿದ್ದರೂ ಪ್ರಧಾನಿ ಮೋದಿಯವರು ರಾಷ್ಟ್ರೀಯ ವಿಜ್ಞಾನ ಸಮ್ಮೇಳನ ಉದ್ಘಾಟನೆ ಮಾಡಿ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಲ್ಲಿಯೇ ಪ್ರನಾಳ ಶಿಶು ತಂತ್ರಜ್ಞಾನ ಇತ್ತು ಎಂದು ಬಡಾಯಿ ಕೊಚ್ಚುತ್ತಾರೆ ಎಂಬುದು ನಮ್ಮ ಪ್ರಧಾನಿಗಳ ವೈಜ್ಞಾನಿಕ ಮನೋಭಾವದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪ್ರಧಾನ ಮಂತ್ರಿಯೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದೇ ಮೂಢನಂಬಿಕೆಗಳನ್ನು ವೈಭವೀಕರಿಸಿದರೆ ದೇಶದ ಮಕ್ಕಳು ಹೇಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸ್ಫೂರ್ತಿ ಸಿಗುತ್ತದೆ? ಪ್ರಧಾನ ಮಂತ್ರಿ ಹೇಳಿದ್ದು ಎಂದು ನಮ್ಮ ಮಕ್ಕಳು ಅದನ್ನು ಕುರುಡಾಗಿ ಅನುಸರಿಸುವುದು ಯೋಗ್ಯವಲ್ಲ.

    ಎಲ್ಲ ಧರ್ಮಗಳನ್ನು ಅವುಗಳ ಒಳಗೆ ಇರುವ ಹುಳುಕುಗಳನ್ನು ವಿಮರ್ಶಿಸುವ, ಪ್ರಶ್ನಿಸುವ ಮನೋಭಾವ ನಮ್ಮ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಇಲ್ಲದೆ ಇದ್ದರೆ ಧಾರ್ಮಿಕ ಮೂಲಭೂತವಾದವನ್ನು ಹಾಗೂ ಅದು ಹುಟ್ಟು ಹಾಕುವ ಅಸಹಿಷ್ಣುತೆ, ಹಿಂಸೆ, ಪರಧರ್ಮ ದ್ವೇಷದ ಮನೋಭಾವನೆಯನ್ನು ನಿವಾರಿಸಲು ಸಾಧ್ಯವಿಲ್ಲ.

    Reply
  10. Muhammad

    ಇಲ್ಲಿ ಇರ್ಷಾದ್ ಉಪ್ಪಿನಂಗಡಿಯವರು ಪುರೋಹಿತರುಗಳ ಆಶಿರ್ವಾದಗಳಿಸಲು ಬಾರಿ ಸರ್ಕಸ್ ಮಾಡಿದ್ದಾರೆ. ಹಣಕ್ಕಾಗಿ ಮೂಢನಂಬಿಕೆ, ಅಂಧ ವಿಸ್ವಾಸಗಳ ಮೂಲಕ ಮುಗ್ಧ ಜನರನ್ನ ಹೆದರಿಸಿ ವಂಚಿಸಿ ತನ್ನ ಹೊಟ್ಟೆ ಮತ್ತು ಜೋಬನ್ನು ತುಂಬಿಸಿ ಕೊಳ್ಳುತ್ತಿರುವ ಪುರೋಹಿತಶಾಹಿಗಳನ್ನು ಒಲಿಸಿಕೊಳ್ಳಲು ಉತ್ತಮ ಅವಕಾಶವನ್ನ ಬಳಸಿಕೊಂಡಿದ್ದಾರೆ.

    ಇಸ್ಲಾಂ ಮಹಿಳೆಯರಿಗೆ ಕೊಟ್ಟ ಹಕ್ಕುಗಳನ್ನು ಕಸಿದು ಕೊಂಡು ಮಹಿಳೆಯರಿಗೆ ಮಸೀದಿ ಪ್ರವೇಶವನ್ನ ಹರಾಂ ಮಾಡಿರುವ ಈ ಪುರೋಹಿತಶಾಹಿಗಳಿಗೆ ಸಿಂಹ ಸ್ವಪ್ನವಾಗಿರುವವರು ಈ ಝಾಕೀರ್ ನಾಯ್ಕ್.

    ಮುಗ್ಧ ಜನರನ್ನ ಹೆದರಿಸಿ ಮೂಢನಂಬಿಕೆ ಅಂಧ ವಿಸ್ವಾಸಗಳನ್ನು ಭಯವನ್ನ ಬಿತ್ತಿ ಹೆದರಿಸಿ ಹಣವನ್ನ ಲೂಟ್ಟಿ ತನ್ನ ಹೊಟ್ಟೆ ಮತ್ತು ಜೇಬ್ಬನ್ನು ತುಂಬಿಸಿ ಕೊಳ್ಳುತ್ತಿರುವ ಮುಂಢಾಸುದಾರಿ ಪುರೋಹಿತರುಗಳಿಗೆ ಈ ಝಾಕೀರ್ ನಾಯ್ಕ್ ತಡೆಯಾಗಿದ್ದಾರೆ.

    ಪುರೋಹಿತರುಗಳಿಗೆ ಇನ್ನು ಮುಂದೆ ಇರ್ಷಾದ್ರವರು ಹೀರೊ ಆಗಲ್ಲಿದ್ದಾರೆ.

    Reply
  11. Salam Bava

    ಶ್ರೀರಂಗರವರೇ ,ನಾನು ನನ್ನ ಮೊದಲಿನ ಕಮೆಂಟಿನಲ್ಲಿ ಅತೀ ಸ್ವಷ್ಟವಾಗಿ ಹೇಳಿದ್ದೇನೆ -ಝಕೀರ್ ನಾಯ್ಕ್ ರೊಂದಿಗೆ ,ನನಗೆ ವ್ಯೆಚಾರಿಕ ಭಿನ್ನತೆಗಳಿವೆ,ಆದರ್ಶದ ವೈರುದ್ಧ್ಯಗಳಿವೆ ,ಅವರು ಧರ್ಮ ಪ್ರಚಾರ ನಡೆಸಲು ಆಯ್ದುಕೊಂಡ ರೀತಿಗೆ ಸಮ್ಮತಿ ಇಲ್ಲ . ಆದರೆ “ಮಾಧ್ಯಮ ಭಯೋತ್ಪಾದನೆಯ” ಎದುರು ಓರ್ವ ಆತ್ಮಸಾಕ್ಷಿ ಉಳ್ಳ ಸಾಮಾನ್ಯ ಪ್ರಜೆಯಾಗಿ ,ಈ ಸಂದಿಗ್ದ ಘಟ್ಟದಲ್ಲಿ ಅವರೊಂದಿಗೆ ನಿಲ್ಲವುದು ,ಅವರ ನೋವಿಗೆ ಸ್ವಂದಿಸುವುದು ನನ್ನ ಕರ್ತ್ಯವ್ಯ . ಎಲ್ಲಾ ಪ್ರಗತಿಪರರು,ಅವರ ಸಂಘಟನೆಗಳು “ಭಯೋತ್ಪಾದಕನ ಸಪ್ಪೋರ್ಟ್ಸ್ ” ಎಂಬ ಬ್ರಾಂಡ್ ಬೀಳಬಹುದು ಎಂಬ ಒಂದೇ ಕಾರಣದಿಂದ ಮೌನ ವ್ರತ ಪಾಲಿಸಿದ್ದಾರೆ . “ಇತ್ತೀಚೆಗೆ ಕೆಲ ಮುಸ್ಲಿಂ ಯುವಕರಂತೂ ಅತಿ ಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ”-ಇದಕ್ಕೆ ಯಾವುದೇ ಪುರಾವೆ ಇಲ್ಲ. ಒಂದಾ ಧಾರ್ಮಿಕವಾಗಿ ಉನ್ನತ ಶಿಕ್ಷಣ ಸಿಕ್ಕಿ ,ಉತ್ತಮ ಸಮುದಾಯದ ,ಸಮಾಜದ ಸ್ಥಾಪನೆಯಲ್ಲಿ ಅವರು ಸಹಕರಿಸಿದರೆ ಒಳ್ಳೆಯದೇ ಅಲ್ಲವೇ ?

    ಎಲ್ಲಾ ಧರ್ಮಗಳಲ್ಲೂ ,ರಾಷ್ಟ್ರಗಳ್ಲಲೂ ,ಕೆಲವೊಂದು ಅತ್ಯಂತ ಉಗ್ರವಾದಿಗಳಿದ್ದಾರೆ ,ಸಂಘಟನೆಗಳಿವೆ . ಆರೆಸ್ಸ್ ,ನಕ್ಸಲ್ವಾದಿ,ಇಲ್ಟಿಟಿಇ ,ಬೋಡೋ,ಐರಿಷ್ ರೆಪಬ್ಲಿಕೇನ್ ಅಮೈ,ಕುಕ್ಸ್ಕ್ಲಾನ್ – ಇದೆಲ್ಲಾ ಇಸ್ಲಾಮ್ ಪ್ರೇರಿತ ಸಂಘಟನೆಗಲ್ಲವಲ್ಲ ! ಇದರ ಅರ್ಥ ನಾನು ಇವರು ಯಾರನ್ನೂ ಸಮರ್ಥಿಸುತೇನೆ ಅಂತಲ್ಲಾ .

    ” ಆದರೆ ಹಿಂದೂ ಯುವಕರು ಅವರ ಭಾಷಣ ಕೇಳಿ ತಮಾಷೆ ನೋಡಿ ವಾಪಸ್ ಮನೆಗೆ ಬರುತ್ತಾರೆ”- ಇದು ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆದದ್ದೇ ?

    ಕ್ಸ್ ಮಿಸಿ ಈ ಕೆಳಗಿನ quote

    To celebrate the centenary of the Guardian and his 50th anniversary as editor, CP Scott wrote ‘A Hundred Years’ in 1921.

    The essay’s famous sentence ‘

    “Comment is free, but facts are sacred’
    has endured as the ultimate statement of values for a free press and continues to underpin the traditions of the Guardian newspaper

    ಟೈಂಸ್ ನೌ ನ ಅರ್ನಾಬ್ ಎಂಬ ಆರ್ಭಟಿಗನಿಗೆ
    ದಿನಕ್ಕೊಬ್ಬ ಹರಕೆ ಇಟ್ಟಂತೆ ಕೈ ಕಡಿಯಬೇಕು, ಕಾಲು ಕಡಿಯಬೇಕು, ರುಂಡ ಚೆಂಡಾಡಬೇಕು ಅಂಥ ಹೇಳುವುದ್ಯಾವುದೂ ಭಯೋತ್ಪಾದನೆ ಯಾಗಲ್ಲ. ಅವರೆಲ್ಲ ಇವರ ಹೀರೋಗಳು.! ಕೆಡುಕನ್ನು ವಿರೋಧಿಸಿ ಅಂಥ ಹೇಳುವವರು, ಅದಕ್ಕಾಗಿ ದುಡಿಯುವವರು ಭಯೋತ್ಪಾದಕರು! ಮಾದ್ಯಮಗಳು ಶಾಂತಿಯುತ ಸಮಾಜದ ಸೃಷ್ಟಿಗೆ ಕಾರಣವಾಗಬೇಕೆ ಹೊರತು ಇಂಥಹಾ ಅನಾರೋಗ್ಯ ಚರ್ಚೆಗಳಿಗಲ್ಲ. ಅವು ಧನಾತ್ಮಕತೆಯನ್ನು ಬೆಳೆಸಬೇಕೆ ಹೊರತು ಜಿಗುಪ್ಸೆಯನ್ನೊ, ಅರಾಜಕತೆಯನ್ನೊ, ಅವಿವೇಕಿತನವನ್ನೊ ಅಲ್ಲ. ಮಾದ್ಯಮಗಳೆಂದರೆ ಧಮನಿತ ವರ್ಗ ನಂಬಿಕೆ ಇಟ್ಟಿರುವ ಪವಿತ್ರ ಭೂಮಿಕೆ. ನ್ಯಾಯದ ವಕ್ತಾರರು ನೀವೆಂದು ಅದೆಷ್ಟೋ ಜನರು ಅವರನ್ನು ನಂಬಿದ್ದಾರೆ…
    ರಾಜದೀಪ ಸರ್ದೇಸಾಯಿ,ರವಿ ಕುಮಾರ್,ಸಾಯಿನಾಥ್ ಯಂತ ಉನ್ನತ ಪತ್ರಕರ್ತರನ್ನು ಎಲ್ಲರೂ ಅತ್ಯಂತ ಗೌರವಯುತವಾಗಿ ಕಾಣುವುದಿಲ್ಲವೇ
    ಓರ್ವನು ತನ್ನ ಆದರ್ಶ,ವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಆದರ್ಶ ದೃಢತೆ ಇಲ್ಲದ ಪ್ರಭೋದನೆಯೂ ಫಲಕಾರಿಯಾಗದು. ಉದ್ದೇಶ ಎಷ್ಟು ಪರಿಶುದ್ಧವೋ ಅದನ್ನು ಗಳಿಸಲು ಆಯ್ದುಕೊಳ್ಳುವ ಆಯ್ಕೆಯೂ ಅಷ್ಟೇ ಅಪರಂಜಿಯಾಗಿರಬೇಕು.ಕೇವಲ trp ಯೊಂದೇ ಮಾನದಂಡವಾದರೆ ವಿಪತ್ತ್ತು ತಪ್ಪಿದ್ದ್ದಲ್ಲ !ಭಾರತದ ಭವಿಷ್ಯಕ್ಕೆ ಬಂದೊದಗಬಹುದಾದ ಮಹಾ ವಿಪತ್ತನ್ನು ಅರ್ಥಮಾಡಿಕ್ಕೊಂಡು ಜೀವ ವಿರೋಧಿ ಮಾದ್ಯಮಗಳ ಅಷಾಡಭೂತಿ ನಿಲುವನ್ನು, ಅಕ್ಷರ ಭಯೋತ್ಪಾದಬೆಯನ್ನು ವಿರೋಧಿಸಿ ಹಕ್ಕಿಗಾಗಿ ಹೋರಾಡಬೇಕು.
    ನಾನೀಗ ಝಾಕಿರ್ ನಾಯ್ಕ್ ಎಂಬ ವ್ಯಕ್ತಿಯನ್ನು ಬೆಂಬಲಿಸುತ್ತೇನೆ ಅವರ ಆದರ್ಶವನ್ನಲ್ಲ.ಭಯೋತ್ಪಾದನೆ ಯನ್ನು ಯಾವರೀತಿ ವಿರೋಧಿಸುತ್ತೇನೋ ಅದೇ ರೀತಿ ಮಾದ್ಯಮ ಭಯೋತ್ಪಾದನೆಯನ್ನೂ ವಿರೋಧಿಸುತ್ತೇನೆ. ಧಾರ್ಮಿಕ ಸ್ವಾತಂತ್ರ್ಯ ,ಅಭಿವ್ಯಕ್ತಿ ಸ್ವಾತಂತ್ರ್ಯ ನನಗಿರುವ ಸಾಂವಿಧಾನಿಕ ಅವಕಾಶ ಅದನ್ನು ಕಸಿಯಲು ಯಾವುದೇ ಟೈಮ್ಸ್ ನ್ನೂ ಬಿಡಲ್ಲ,ಕಪಟ ಆರ್ಭಟಿಗನನ್ನು ಸಹಾ !

    ಝಾಕಿರ್ ನಾಯ್ಕರ ಆದರ್ಶದೊಂದಿಗೆ ನಾನಿಲ್ಲ, ಆದರೆ ಅವರೊಂದಿಗೆ ಕೆಲವು ಮಾದ್ಯಮಗಳು, ಅದೇ ರೀತಿ ಆಡಳಿತ ವರ್ಗ ನಡೆಸುತ್ತಿರುವ ಸಲ್ಲದ ಆರೋಪಗಳ ವಿರುದ್ಧ ಹೋರಾಡಲು ಎಲ್ಲರ ಜೊತೆ ನಾನೂ ಇದ್ದೇನೆ.

    “quote-unquote”

    ತಾವು ವಾದಿಸುವ ಹಾಗೆ ಮಂತ್ರಿ,ಅಧಿಕಾರಿಗಳು ರಾಜೀನಾಮೆ ಕೊಡಲು ಶುರುಮಾಡಿದರೆ -ಕೇಂದ್ರ ಮತ್ತು ಭಾರತದ ಎಲ್ಲಾ ರಾಜ್ಯ ಸರಕಾರಗಳ ೯೦% ಮಂದಿ ಪ್ರತೀ ತಿಂಗಳೂ ರಾಜೀನಾಮೆ ಕೊಡುತ್ತಿರಬೇಕು . ಸ್ವಾಮಿ -ನಮ್ಮ ಪ್ರಜಾಪ್ರಭುತ್ವ u.s.a ,u.k. ಅಥವಾ Europe ನಷ್ಟು mature ಆದಾಗ ನೋಡುವಾ
    ———————————————————————————————-

    A joke- as received -just for Fun

    “ಮನೆಯಲ್ಲಿ ನಿಲ್ಲಿಸಿದ ನನ್ನ ಕಾರಿನ Glass ನಿನ್ನೆ ಒಡೆದಿದೆ. ನೆರೆಮನೆಯ ಮಕ್ಕಳು Cricket ಆಡಿದ್ದು. ಆ ತುಂಟ ಹುಡುಗರ ಬಗ್ಗೆ ನಾನು ವಿಚಾರಿಸಿದಾಗ Facebook ನಲ್ಲಿ ಅವರು ಸಚಿನ್ ನ ಅಭಿಮಾನಿಗಳೆಂದು ನನಗೆ ಗೊತ್ತಾಯಿತು. Gallary ಯ ಹೊರಗೆ ಸಿಕ್ಸರ್ ಭಾರಿಸಲು ಸಚಿನ್ ಅವರಿಗೆ ತುಂಬಾ ಉತ್ತೇಜನ ನೀಡಿದ್ದಾರಂತೆ!. ಏನೇ ಆಗಲಿ ಸಚಿನ್ ನ ವಿರುದ್ಧ ಕೇಸ್ ಕೊಡುದಾಗಿದೆ ನನ್ನ ಮುಂದಿನ ತೀರ್ಮಾನ . ಸಾಧ್ಯವಾದರೆ ಕೇಂದ್ರ ಸರಕಾರದೊಂದಿಗೆ ಅವರ Passport ರದ್ದುಪಡಿಸಲು ಕೋರುತ್ತೇನೆ “

    Reply
  12. Girish, Bajpe

    ಕೆಲವು ಭಾಷಣಗಳು, ಕೆಲವು ಕಥೆ, ಕವನಗಳು ಅಭಿಮಾನಿಗಳಲ್ಲಿ ಸ್ಪೂರ್ತಿ, ಅಭಿಮಾನ ಉಕ್ಕಿಸುತ್ತವೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಕೆಲವರು ಪಾಸಿಟಿವ್‌ ವಿಷಯಗಳಿಗಷ್ಟೇ ಗಮನ ನೀಡಿದರೆ ಇನ್ನು ಕೆಲವರು ನೆಗೆಟಿವ್ ವಿಷಯಗಳತ್ತ ಹೆಚ್ಚು ಗಂಭೀರವಾಗಿ ಆಸಕ್ತರಾಗುತ್ತಿದ್ದಾರೆ. ಕೆಲವು ರಾಜಕಾರಣಿಗಳ ಅಭಿಮಾನಿ ಗಡಣವೂ ಇದೇ ರೀತಿ ವರ್ತಿಸುತ್ತಿದೆ. “ನಾವು ಅವನಿಗಿಂತ ಮೇಲು” ಎನ್ನುವುದು “ಅವನು ನಮಗಿಂತ ಕೀಳು” ಅನ್ನುವುದಕ್ಕೆ ಸಮ ಅಲ್ಲವೇ? ನೋವುಂಟು ಮಾಡುವಲ್ಲಿ ನೇರ ಮತ್ತು ಪರೋಕ್ಷ ಎರಡೂ ವಿದ್ಯಮಾನಗಳೂ ಒಂದೇ. ಇಲ್ಲದೇ ಹೋದಲ್ಲಿ ಕೆಲವೊಮ್ಮೆ “ಭಾವನೆಗಳಿಗೆ ನೋವುಂಟು ಮಾಡಿದೆ” ಎಂದು ಯಾವುದೋ ಒಂದು ಸಿನೆಮಾದ ಅಥವಾ ಪತ್ರಿಕೆಯ ಅಥವಾ ಕಥೆಗಾರನ ವಿರುದ್ಧ ಪ್ರತಿಭಟಿಸುವ ಅಗತ್ಯ ಏನಿರುತ್ತದೆ? ಅದೊಂದು ಸಿನೆಮಾ/ ಕಥೆ ಮಾತ್ರ, ಬೇಕಾದವರು ನೋಡಲಿ/ ಓದಲಿ ಎಂದು ಬಿಟ್ಟು ಬಿಡಬಹುದಲ್ಲವೇ? ಜನರ ಭಾವನೆಗಳ ಕುರಿತು ಮಾತನಾಡುವಾಗ ಎಲ್ಲರಿಗೂ ಒಂದೇ ಗುಣವನ್ನು ಅನ್ವಯಿಸಲಾಗದು. ಧಾರ್ಮಿಕತೆ ಅಥವಾ ಇತರ ಆಚರಣೆಗಳೇನೇ ಇರಲಿ ನಾವು ಮಾಡುವುದು ಮಾತ್ರ ಸರಿ ಎಂದು ವಾದ ಮಾಡುವ ಜನರ ಚಾಳಿ ಕೆಲವೊಮ್ಮೆ ಅನಗತ್ಯವಾಗಿ ಇತರರ ವಿರಸಕ್ಕೆ ಕಾರಣವಾಗಬಹುದು.

    Reply
  13. john

    Why do people turn to religion?

    Why do people turn to religion? The human power of formal reasoning has an unavoidable limit. We can never be entirely sure of the logical basis of our conclusions; so we begin to recognize that there are unsolvable mysteries. And this feeling of being surrounded with mysteries, one cannot grasp, turns into indescribable awe. Fear of unknown make people turn to religion.

    Fear of unknown is at the root of all religions; and all personal religious experiences have their root and center in mystical states of human consciousness. Like drugs, the religions too may produce a psychotropic influence on human mind; and stimulate the mystical faculties of human nature. Even so, religions do bring a sense of inner happiness, though short-lived, in a state of false inner tranquility and balance; but over passionate pursuance may produce mild euphoria, cause hallucination; and even alter perception and thinking pattern.

    Almost all religions are designed to bring about a packaged peace of mind. These turnkey packages come in complete with ready for use set of strongly held beliefs, values, and attitudes to live by. But do they really get you conditioned to deep solutions?

    All religions aim to give comfort and moral instruction for life on Earth, and to inspire hope for life after death. The religion should rather counsel contemplation and endurance; shape common sense and awaken the believers because hope is but the dream of those that wake.

    The religions have few things to hope for and many things to fear. One among them is the fear of hell. Fear of hell alarms the believers successively to the point that they dose themselves heavily by every specific remedy the religions offers. The consequence is that the fears, which had first been imaginary, become real and in the state of living, they become more dead than alive.

    Posted by Achilles @ 9/18/2008 8:05 AM

    Reply

Leave a Reply to Lalith Prashanth Cancel reply

Your email address will not be published. Required fields are marked *