Daily Archives: August 21, 2016

“ದೇವಸ್ಥಾನ ತೊರೆದು ಗರಡಿಗೆ ಬರದಿದ್ದರೆ ಬಿಲ್ಲವರಿಗೆ ಉಳಿಗಾಲವಿಲ್ಲ..”

Naveen Soorinje


ನವೀನ್ ಸೂರಿಂಜೆ


 

ಉಡುಪಿಯಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಎರಡು ಕೊಲೆಗಳು ಸುದ್ದಿ ಮಾಡಿದವು. ಒಂದು ಬಹುಕೋಟಿ ಒಡೆಯ ಬಾಸ್ಕರ ಶೆಟ್ಟಿ ಕೊಲೆ. ಎರಡನೆಯದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ. ಭಾಸ್ಕರ ಶೆಟ್ಟಿಯದ್ದು ತೀPoojaryರಾ ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ. ಪ್ರವೀಣ್ ಪೂಜಾರಿಯದ್ದು ಸಾಮಾಜಿಕ, ರಾಜಕೀಯ ಕಾರಣಕ್ಕಾಗಿ ನಡೆದ ಕೊಲೆ. ಚರ್ಚೆ ಇರುವುದು ಎರಡೂ ಕೊಲೆಗಳನ್ನು ಆಯಾ ಸಮಾಜ ತೆಗೆದುಕೊಂಡ ರೀತಿಯ ಬಗ್ಗೆ. ಭಾಸ್ಕರ ಶೆಟ್ಟಿಯ ವೈಯುಕ್ತಿಕ ಕಾರಣದ ಕೊಲೆಯನ್ನು ಬಂಟರ ಸಂಘಟನೆ ಗಂಭೀರವಾಗಿ ತೆಗೆದುಕೊಂಡು ಸಭೆಗಳ ಮೇಲೆ ಸಭೆ ನಡೆಸ್ತು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಾಡಿತ್ತು. ಆದರೆ ಪ್ರವೀಣ್ ಪೂಜಾರಿ ಕೊಲೆ ? ಪ್ರವೀಣ್ ಪೂಜಾರಿ ಸಾವು ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ನಡೆದ ಸಾವಲ್ಲ. ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ ಆರೋಪಿಗಳ ಮುಖ್ಯಸ್ಥರು ಹಿಂದೆಯೂ ಹಲವು ಬಿಲ್ಲವರ ಆಹುತಿ ತೆಗೆದುಕೊಂಡಿದ್ದರು. ಮುಂದೆಯೂ ತಮ್ಮ ಅಜೆಂಡಾ ಜಾರಿಗಾಗಿ ಹಲವು ಬಿಲ್ಲವರ ರಕ್ತತರ್ಪಣಕ್ಕಾಗಿ ಈ ಕೊಲೆಗಡುಕರ ಮುಖ್ಯಸ್ಥರು ಕಾಯುತ್ತಿದ್ದಾರೆ. ಆದರೂ ಬಿಲ್ಲವ ಸಂಘಟನೆಗಳು ತುಟಿಪಿಟಿಕ್ ಎನ್ನುತ್ತಿಲ್ಲ. ಅಗಾಧ ಸಂಖ್ಯೆಯ ವಿದ್ಯಾವಂತ ಬಿಲ್ಲವ ಯುವಕರ ಸದಸ್ಯತ್ವವನ್ನು ಹೊಂದಿರುವ ಬಿಲ್ಲವ ಯುವ ವಾಹಿನಿಯೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ದುರಂತ. ಕರಾವಳಿಯ ಅತಿ ದೊಡ್ಡ ಸಮುದಾಯವಾಗಿರುವ ಬಿಲ್ಲವರು ಇತ್ತಿಚೆಗೆ ಒಂದೋ ಕೋಮುಸಂಬಂಧಿ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾಗುತ್ತಿದ್ದಾರೆ. ಅಥವಾ ಜೈಲು ಸೇರುತ್ತಾರೆ. ಮಂಗಳೂರು ಮತ್ತು ಉಡುಪಿಯ ಜೈಲುಗಳಲ್ಲಿ ಮುಸ್ಲೀಮರನ್ನು ಹೊರತುಪಡಿಸಿದ್ರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಗಳಾಗಿರುವವರು ಬಿಲ್ಲವರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಮತ್ತು ಬಂಟರು ಅತ್ಯಂತ ಹೆಚ್ಚು ಪ್ರಾಬಲ್ಯವನ್ನು ಹೊಂದಿರುವ ಸಮುದಾಯ. narayana-guruಇತೀಚ್ಚೆಗೆ ಎಲ್ಲಾ ಕ್ಷೇತ್ರದಲ್ಲೂ ಬಿಲ್ಲವರು ಬಂಟರಿಗೆ ಪೈಪೋಟಿ ಕೊಡುತ್ತಿದ್ದಾರೇನೋ ಎಂದು ಕಂಡು ಬಂದರೂ ಅದು ತೋರಿಕೆಗೆ ಮಾತ್ರ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಂಟರು ತುಂಬಿ ಹೋಗಿದ್ದರೆ ಬಿಲ್ಲವರು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸ್ವಾತಂತ್ರ್ಯಾ ನಂತರದ ಕರಾವಳಿಯಲ್ಲಿ ಬ್ಯಾಂಕಿಂಗ್, ಔದ್ಯಮಿಕ, ಹೊಟೇಲ್, ವಲಸೆ ಕ್ಷೇತ್ರದಲ್ಲಿ ಅಭಿವೃದ್ದಿಯಾದ್ರೂ ಇದರ ಭರಪೂರ ಲಾಭ ಪಡೆದಿದ್ದು ಮೇಲ್ವರ್ಗಗಳಾಗಿರುವ ಬಂಟರು ಮತ್ತು ಬ್ರಾಹ್ಮಣರು. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವರು ಇದ್ದಾರೆ ಅನ್ನುವಂತೆ ಕಂಡು ಬಂದರೂ ಅದು ತೀರಾ ಕೆಳ ದರ್ಜೆಯ ಕೆಲಸಗಳಲ್ಲಿ ಅಥವಾ ತೀರಾ ನಗಣ್ಯ ಸಂಖ್ಯೆಯಲ್ಲಿ.

ಸಿನೇಮಾ ಕ್ಷೇತ್ರದಿಂದ ಹಿಡಿದು ಅಂಡರ್ ವಲ್ಡ್ ವರೆಗೆ ಬಂಟರಿಗೆ ಪೈಪೋಟಿ ಕೊಡುವ ಬಿಲ್ಲವರು ಕಂಡು ಬರುತ್ತಾರೆ. ಆದರೆ ಅಂಡರ್ ವಲ್ಡ್ ಡಾನ್ ಆಗಿರುವ ಬಂಟರೆಲ್ಲರೂ ನಿಧಾನಕ್ಕೆ ಉದ್ಯಮಿಗಳಾದರೆ, ಬಿಲ್ಲವ ಡಾನ್ ಗಳಿಗೆ ವಯಸ್ಸಾದರೂ ಅಂಡರ್ ವಲ್ಡ್ ನಿಂದ ಹೊರಗೆ ಬರಲಾಗದ ಸ್ಥಿತಿ ಇದೆ. ಇದೇ ರೀತಿ ಭಜರಂಗದಳ ಸೇರಿದ ಬಂಟರ ಹುಡುಗರು ತನ್ನಿಂತಾನೇ ಬಿಜೆಪಿ ನಾಯಕರಾಗುತ್ತಾರೆ. ಆದರೆ ಬಿಲ್ಲವ ಹುಡುಗರು ಸಾಯುವಾಗಲೂ ಭಜರಂಗದಳದಲ್ಲೇ ಇದ್ದು ಅದಕ್ಕಾಗಿ ಸಾಯಬೇಕಾಗುತ್ತದೆ.

ಎಲ್ಲಾ ಕೆಳಜಾತಿಗಳಂತೆ ಬಿಲ್ಲವ ಸಮುದಾಯ ಕೂಡಾ ಕಿರುಸಂಸ್ಕೃತಿಯ ಸಮುದಾಯ. ಭೂತಾರಾಧನೆ, ಪೂರ್ವಜರ ಆರಾಧನೆಯೇ ಬಿಲ್ಲವರ ಸಂಸ್ಕೃತಿಯಾಗಿತ್ತು. ಆದರೆ ವೈದಿಕ ಧರ್ಮದ ಪ್ರಭಾವಕ್ಕೊಳಗಾಗಿ ದೇವಸ್ಥಾನ ಆರಾಧನೆಯ ಪ್ರಧಾನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತು. ಗರ್ಭಗುಡಿಯ ಹೊರಗಡೆ ಅಂಗಿ ಹಾಕದೆ ಕೆಲಸ ಮಾಡುವುದೇ ಬಿಲ್ಲವರ ಅದೃಷ್ಟವಾಯಿತು. ಬಿಲ್ಲವರಂತೆ ಬಂಟರೂ ಕೂಡಾ ಗರ್ಭಗುಡಿಯ ಹೊರಗೇ ಇದ್ದರೂ ಬಿಳಿ ವಸ್ತ್ರಧಾರಿಯಾಗಿ ಇಡೀ ಕಾರ್ಯಕ್ರಮದ ಯಜಮಾನಿಕೆಯನ್ನು ಪಡೆದುಕೊಂಡರು. ಈಗಲೂ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಕೇಸರಿ ಲುಂಗಿದಾರಿಯಾಗಿ ಸ್ವಯಂ ಸೇವಕರಾಗಿದ್ದರೆ, ಬಂಟರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುತ್ತಾರೆ.

ದೇವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ದಾರಗಳಲ್ಲಿ ಕಾಲಕಳೆಯುವ, ಆ ಮೂಲಕ ಕೇಸರಿ ವಸ್ತ್ರಧಾರಿಗಳಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋkoti-chennay ಹಿಂದೂ ಸಂಘಟನೆ ಸೇರುವ ಬಿಲ್ಲವ ಯುವಕರು ಇದೀಗ ಮದುವೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇವಸ್ಥಾನದ ಕೆಲಸಗಳಲ್ಲಿ ಬಹುಪಾಲು ಸಮಯವನ್ನು ಸ್ವಯಂಸೇವಕರಾಗಿಯೋ, ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಬಿಲ್ಲವ ಯುವಕರು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ದಿಯತ್ತಾ ಗಮನ ಕೊಡುವುದಿಲ್ಲ. ಹಿಂದೊಮ್ಮೆ ನೈತಿಕ ಪೊಲೀಸ್ ಗಿರಿ ಮಾಡಿ 40 ಜನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜೈಲು ಸೇರಿದಾಗ, ಅವರ ಕುಟುಂಬದ ಹಿನ್ನಲೆ ಅಧ್ಯಯನ ನಡೆಸಿದ್ದೆ. ಅದರಲ್ಲಿ ಬಂಧಿಯಾಗಿದ್ದ ಮೂವರು ಬಿಲ್ಲವ ಯುವಕರ ಮನೆಯಲ್ಲಿ ಈ ದಿನಗಳಲ್ಲೂ ವಿದ್ಯುತ್ ಸಂಪರ್ಕ ಇಲ್ಲ. ಅವರ ಮನೆಯ ದೇವರ ಫೋಟೋಗೆ ದೀಪ ಇಡಲೂ ಎಣ್ಣೆಗೆ ದುಡ್ಡಿಲ್ಲದ ಪರಿಸ್ಥಿತಿ ಇದೆ. ಆದರೆ ಅವರ ಮನೆಯ ಯುವಕ ದೇವಸ್ಥಾನದಲ್ಲಿ ಬ್ರಾಹ್ಮಣರ ಹೊಟ್ಟೆ ತುಂಬಿಸಲು, ಧರ್ಮ ರಕ್ಷಣೆಗಾಗಿ ದುಡಿದು ಜೈಲು ಸೇರುತ್ತಾರೆ ಅಥವಾ ಕೊಲೆಯಾಗುತ್ತಾನೆ.

ಈಗ ಬಿಲ್ಲವ ಸಮುದಾಯ ಯೋಚಿಸಬೇಕಾದ ಸಮಯ. ಉದಯ ಪೂಜಾರಿಯಿಂದ ಪ್ರಾರಂಭವಾಗಿ ಪ್ರವೀಣ್ ಪೂಜಾರಿಯವರೆಗೆ ಕೋಮು ಕಾರಣಕ್ಕಾಗಿ ಸತ್ತ ಬಿಲ್ಲವರೆಷ್ಟು, ಬಂಟರೆಷ್ಟು, ಬ್ರಾಹ್ಮಣರೆಷ್ಟು ಎಂದು ಲೆಕ್ಕ ಹಾಕಬೇಕಿದೆ. ಇದಕ್ಕೆಲ್ಲಾ ಕಾರಣ ಕೇಸರಿ ಲುಂಗಿ ಧರಿಸುವಂತೆ ಮಾಡುವ ದೇವಸ್ಥಾನ ಸಂಸ್ಕೃತಿ. ಬಿಲ್ಲವರು ಮತ್ತೆ ತಮ್ಮ ಕಿರು ಸಂಸ್ಕೃತಿಯಾದ ಗರಡಿಯತ್ತಾ ತೆರಳಬೇಕಿದೆ. ಗರಡಿ ಎನ್ನುವುದೇ ಬಿಲ್ಲವರ ಸ್ವಾಭಿಮಾನದ ಸಂಕೇತ. ದೇವಸ್ಥಾನ ಎನ್ನುವುದು ಬಿಲ್ಲವರನ್ನು ಅಧೀನರಾಗಿಸುವ ಸಂಕೇತ. ದೇವಸ್ಥಾನವೆಂಬ ವೈದಿಕ ಸಂಸ್ಕೃತಿಯಿಂದ ದೂರವಾಗಿ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಗರಡಿಯತ್ತಾ ತೆರಳದಿದ್ದರೆ ಬಿಲ್ಲವ ಸಮುದಾಯಕ್ಕೆ ದುರಂತಮಯ ಭವಿಷ್ಯವನ್ನು ಕಾಣಲಿದೆ.