ಸ್ವರ್ಗ ಹಾಗೂ ನರಕದ ಕಲ್ಪನೆ ಮತ್ತು ರಮ್ಯಾ ಹೇಳಿಕೆ


-ಇರ್ಷಾದ್ ಉಪ್ಪಿನಂಗಡಿ


 

ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಪಾಕಿಸ್ತಾನ ನರಕ ಎಂಬ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ನರಕವಲ್ಲ ಅಲ್ಲೂ ನಮ್ಮಂತಹಾ ಒಳ್ಳೆಯ ಮನಸ್ಸಿನ ಜನರಿದ್ದಾರೆ ಎಂಬ ಮಾಜಿ ಸಂಸದೆ ನಟಿ ರಮ್ಯಾ ನೀಡಿದ ಹೇಳಿಕೆ ಸದ್ಯ ವಿವಾದದ ಕೇಂದ್ರ ಬಿಂದು. ಪಾಕಿಸ್ತಾನದ ಜನರ ಪರವಾಗಿ ರಮ್ಯಾ ನೀಡಿದ ಹೇಳಿಕೆ ಇಂದು ಅವರನ್ನು “ದೇಶದ್ರೋಹಿ” ಪಟ್ಟಕ್ಕೆ ಏರಿಸಿದೆ.

ಹೇಳಿಕೆಗಳನ್ನು ಖಂಡಿಸಿ ಅಲ್ಲಲ್ಲಿ ಸಂಘಪರಿವಾರದ ಪ್ರತಿಭಟನೆಗಳನ್ನು ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಮ್ಯಾramya-siddaramaiah ವಿರುದ್ಧ ಕೀಳು ಮಟ್ಟದ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಭಕ್ತರ ವಲಯ. ಅಷ್ಟಕ್ಕೂ ಪಾಕಿಸ್ತಾನದ ಭಾರತದ ಶತ್ರು ರಾಷ್ಟ್ರವಾಗಿರಹುದು. ಎರಡೂ ದೇಶಗಳ ನಡುವೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿರಬಹುದು. ಇದು ಎರಡೂ ದೇಶಗಳ ನಡುವಿನ ರಾಜಕೀಯ ಸಂಘರ್ಷ. ಆದರೆ ಅಲ್ಲೂ ಜನಪರ, ಜೀವಪರ ಜ್ಯಾತ್ಯಾತೀತ ಮನಸ್ಸುಗಳಿವೆ. ತಮ್ಮ ಹಾಡಿನ ಮೂಲಕ ಜನರ ಮನಸ್ಸಿನಲ್ಲಿ ಶಾಂತಿ, ಪ್ರೀತಿಯನ್ನು ಬಿತ್ತುವ ಆಬಿದಾ ಪರ್ವೀನ್ , ನುಸ್ರತ್ ಫತೇ ಅಲಿಖಾನ್, ಗುಲಾಮ್ ಅಲಿ ಹಾಗೂ ಇತ್ತೀಚೆಗೆ ಉಗ್ರರ ಕೈಯಿಂದ ಹತರಾದ ಅಜ್ಮದ್ ಸಾಬ್ರಿಯಂತಹಾ ಸೂಫಿ ಗಾಯಕರನ್ನು ಶತ್ರುಗಳಾಗಿ ಕಾಣಲು ಸಾಧ್ಯವೇ ?

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ. 2 ರಷ್ಟಿರುವ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಕ್ರೈಸ್ತರು ಹಾಗೂ ಮಹಿಳಾ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವ ಅಸ್ಮಾ ಜಹಾಂಗೀರ್, ಅನ್ಸಾರ್ ಬರ್ನಿ, ಮಲಾಲ ಯೂಸುಫ್ ಝೈನಿ ಹಾಗೂ ಇತ್ತೀಚೆಗೆ ಮೂಲಭೂತವಾದಿಗಳಿಂದ ಹತ್ಯೆಗೊಳಗಾದ ಸಬೀನ್ ಮೆಹಮೂದ್ ರಂತಹಾ ನೂರಾರು ಹೋರಾಟಗಳನ್ನು ತಿರಸ್ಕರಿಸಲು ಸಾಧ್ಯವೇ ? ಆದರೆ ಪಾಕಿಸ್ತಾನದಲ್ಲಿ ಬೆಳೆದು ನಿಂತ ಮುಸ್ಲಿಮ್ ಮೂಲಭೂತವಾದಿ ಶಕ್ತಿಗಳು ಆ ದೇಶವನ್ನು ನರಕ ಮಾಡಲು ಹೊರಟಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಅಭಿವ್ಯಕ್ತಿಯ ಹರಣವಾಗುತ್ತಿವೆ. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತುವ ಪ್ರಗತಿಪರ, ಜ್ಯಾತ್ಯಾತೀತ ಹೋರಾಟಗಾರರನ್ನು ಸಂಗೀತಗಾರರನ್ನು ಹತ್ಯೆಮಾಡಲಾಗುತ್ತಿದೆ. ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲೂ ದೌರ್ಜನ್ಯಗಳು, ಉಗ್ರವಾದಿ ಚಟುವಟಿಕೆಗಳು ಪಾಕಿಸ್ತಾನದಲ್ಲಿ ಮಿತಿಮೀರುತ್ತಿವೆ ಎಂಬುವುದು ಆತಂಕಕಾರಿ ವಿಚಾರ.

ಇದು ಕೇವಲ ಪಾಕಿಸ್ತಾನದ ಸಮಸ್ಯೆ ಮಾತ್ರವಲ್ಲ. ಭಾರತದಲ್ಲೂ ಇಂತಹದ್ದೇ ಸನ್ನಿವೇಶವನ್ನು ಇಲ್ಲಿರುವ ಮತಾಂಧ ಶಕ್ತಿಗಳು ಸೃಷ್ಟಿಸುತ್ತಿವೆ. ಪಾಕಿಸ್ತಾನ ನರಕವಾದರೆ ಭಾರತ ಸ್ವರ್ಗವೇ ಎಂಬ ಪ್ರೆಶ್ನೆಗೆ ನಮ್ಮ ಮುಂದೆ ನಡೆಯುವ ನೂರಾರು ನಿದರ್ಶನಗಳು ಉತ್ತರವಾಗಿವೆ. ಪ್ರತಿದೇಶದಲ್ಲೂ ಉಳ್ಳವರ ಪಾಲಿಗೆ ಖಂಡಿತಾ ಸ್ವರ್ಗವಿದೆ. ಆ ದೇಶದಲ್ಲಿ ನರಕದ ಪರಿಸ್ಥಿತಿಯನ್ನು ಅನುಭವಿಸುವವರು ಅಲ್ಲಿರುವ ಬಡವರು, ನಿರ್ಗತಿಕರು, ಶೋಷಿತರು ಹಾಗೂ ದುರ್ಬಲರು.

ಅಷ್ಟಕ್ಕೂ ನಮ್ಮ ಭವ್ಯ ಭಾರತ ಸ್ವರ್ಗಾನಾ..? ಹೌದು ಖಂಡಿತಾ ಸ್ವರ್ಗ. ಅದು ಯಾರ ಪಾಲಿಗೆ ಅಂದರೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಧನಿಗಳINDIA-BHOPAL-POLLUTION-ACCIDENT-25YRS ಪಾಲಿಗಷ್ಟೇ. ಬದಲಾಗಿ ಒಡಿಸ್ಸಾದ ದಾನಾ ಸಿಂಗ್ ಮಾಝಿ ಪಾಲಿಗಲ್ಲ. ಊನಾದ ದಲಿತರ ಪಾಲಿಗೂ ಅಲ್ಲ. ಮಜಾಫರನಗರದ ಮುಸ್ಲಿಮರ ಪಾಲಿಗೂ ಅಲ್ಲ. ಕಂದಮಾಲಿನ ಕ್ರೈಸ್ತರ ಪಾಲಿಗೂ ಅಲ್ಲ. ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಘಟನೆ ಸದ್ಯ ಭವ್ಯ ಭಾರತದ ನರಕದ ಬದುಕನ್ನು ನಮ್ಮ ಮುಂದೆ ತೆರೆದಿಟ್ಟಿದೆ. ದಾನಾ ಸಿಂಗ್ ಮಾಝಿ ಎಂಬ ಬಡ ವ್ಯಕ್ತಿ, ಕ್ಷಯ ರೋಗದಿಂದ ಬಳಲಿ ಸಾವನ್ನಪ್ಪಿದ ತನ್ನ ಪತ್ನಿಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು ವಾಹನವನ್ನು ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿತ್ತು. ಪರಿಣಾಮ ಹೆಂಡತಿಯ ಶವವನ್ನು ಹೆಗಲಲ್ಲೇ ಹೊತ್ತು 10 ಕಿಲೋ ಮೀಟರ್ ನಡೆದುಕೊಂಡು ಊರಿನತ್ತ ತೆರಳುವ ದೃಶ್ಯ ಸ್ವರ್ಗದಲ್ಲಿ ಕಾಣಲು ಸಾಧ್ಯವೇ ? ಸತ್ತ ತಾಯಿಯ ಹೆಣವನ್ನು ಹೊತ್ತುಕೊಂಡು ಹೋಗುವ ತಂದೆ ಜೊತೆಯಲ್ಲಿ ಕಣ್ಣೀರಿಡುತ್ತಾ ನಡೆಯುತ್ತಿದ್ದ ದಾನಾ ಸಿಂಗ್ ಮಾಝಿ ಮಗಳಲ್ಲಿ ಸ್ವರ್ಗ ಯಾವುದು ನರಕ ಯಾವುದು ಎಂದು ಕೇಳಿದ್ರೆ ಸ್ಪಷ್ಟ ಉತ್ತರ ಎಲ್ಲರಿಗೂ ಸಿಗಬಹುದು. ಮಾಯಾ ನಗರಿ ಮುಂಬಯಿನಲ್ಲಿರುವ ಧಾರಾವಿ ಸ್ಲಮ್ ಬಗ್ಗೆ ನಿಮಗೂ ತಿಳಿದಿರಬಹುದು. ಭವ್ಯ ಮುಂಬಯಿ ನಗರದ ಮಧ್ಯ ಭಾಗದಲ್ಲೇ ಇರುವ ಈ ಸ್ಲಮ್ ಏಷ್ಯಾದಲ್ಲೇ ಅತೀ ದೊಡ್ಡ ಸ್ಲಮ್ ಎಂಬ “ಹೆಗ್ಗಳಿಕೆಯನ್ನು” ಪಡೆದುಕೊಂಡಿದೆ. ಈ ಸ್ಲಮ್ ಇರುವುದು ನಮ್ಮ ಭವ್ಯ ಭಾರತದಲ್ಲೇ ಅಲ್ಲವೇ ? ಸ್ಲಮ್ ನಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳಲ್ಲಿ ಹೋಗಿ ನೀವು ಸ್ವರ್ಗದಲ್ಲಿ ಬದುಕುತ್ತೀದ್ದೀರಾ ಅಥವಾ ನರಕದಲ್ಲಾ ಎಂದು ಪ್ರಶ್ನಿಸಿದರೆ ಬಹುಷಃ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಗೂ ಉತ್ತರ ಸಿಗಬಹುದೇನೋ !.

ಇಂದಿಗೂ ಬಡವರು , ಆದಿವಾಸಿಗಳು ಕನಿಷ್ಠ ಮೂಲಸೌಕರ್ಯವಿಲ್ಲದೆ ನರಕದಂತಹಾ ಬದುಕನ್ನೇ ಸಾಗಿಸುತ್ತಿದ್ದಾರೆ. ಇದು ಒಂದೆಡೆಯಾದರೆ Kalburgiಇನ್ನೊಂದೆಡೆ ಮತಾಂಧರು ಸೃಷ್ಟಿಸಿದ ನರಕ ಅತ್ಯಂತ ಭಯಾನಕವಾದುದು. ಗುಜರಾತ್ ಹತ್ಯಾಕಾಂಡ, ಸಿಖ್ ಹತ್ಯಾಕಾಂಡ, ಮತಾಂತರದ ಆರೋಪದಲ್ಲಿ ನಡೆದ ಓಡಿಸ್ಸಾ ಕಂದಮಾಲ್ ಹತ್ಯಾಕಾಂಡ, ಮುಝಫರ್ ನಗರ್, ಖೈರ್ಲಾಂಜಿ ಹಾಗೂ ಕಂಬಾಲಪಳ್ಳಿಯಲ್ಲಿ ಹತ್ಯಾಕಾಂಡಗಳಲ್ಲಿ ಕಾಣುವ ಭೀಕರತೆಗಳು ಸ್ವರ್ಗದ ಕಲ್ಪನೆಯಲ್ಲಿ ಖಂಡಿತಾ ಕಾಣೋದಕ್ಕೆ ಸಿಗುವುದಿಲ್ಲ. ಈ ಕರಾಳ ಅನುಭವಗಳನ್ನು ಅನುಭವಿಸಿದ ಜನರಲ್ಲಿ ಹೋಗಿ ವಿಚಾರಿಸಿದರೆ ಅವರು ಅನುಭವಿಸಿದ ನರಕದ ಬದುಕಿನ ದರ್ಶನವಾಗಬಹುದು. ಪಾಕಿಸ್ತಾನದ ಮೂಲಭೂತವಾದಿಗಳು ನಡೆಸುವ ಕೃತ್ಯದಂತೆ ನಮ್ಮ ದೇಶದಲ್ಲೂ ನಡೆದ ವಿಚಾರವಾದಿಗಳ ಹತ್ಯೆ ಏನನ್ನು ಸೂಚಿಸುತ್ತದೆ. ದಾಭೋಲ್ಕರ್, ಪನ್ಸಾರೆ ಹಾಗೂ ಡಾ.ಕಲಬುರ್ಗಿಯವರ ಹತ್ಯೆಗಳನ್ನು ನಡೆಸೋ ಮೂಲಕ ಭಾರತವನ್ನು ನರಕವನ್ನಾಗಿ ಮಾಡಲು ಹೊರಟಿಲ್ಲವೇ ನಮ್ಮ ದೇಶದ ಕೋಮುವಾದಿಗಳು.

ಇನ್ನು ಮಂಗಳೂರಿನ ವಿಚಾರಕ್ಕೆ ಬರೋಣ. ಖಾಸಗಿ ವಾಹಿನಿಯೊಂದಕ್ಕೆ ನಟಿ ರಮ್ಯಾ ನೀಡಿದ ಸಂದರ್ಶನದಲ್ಲಿ ಮಂಗಳೂರಿನಲ್ಲೂ ನರಕ ಇದೆ ಎಂಬ ಹೇಳಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಗುರುವಾರ ಮಂಗಳೂರಿನಲ್ಲಿ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮ್ಯಾ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿವಾರದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಮುಂದುವರಿದು ರಮ್ಯಾ ಪ್ರಯಾಣಿಸುತ್ತಿದ್ದ ಕಾರಿಗೂ ಮೊಟ್ಟೆ ಎಸೆದದ್ದು ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ವೇದಿಕೆಯತ್ತ ಮೊಟ್ಟೆ ಎಸೆದು “ಪೌರುಷ” ಪ್ರದರ್ಶಿಸಿದ್ದರು.

ನಟಿ ರಮ್ಯಾ ಯಾವ ಅರ್ಥದಲ್ಲಿ ಮಂಗಳೂರಿನಲ್ಲಿ ನರಕ ಇದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಮಂಗಳೂರು ಒಂದು ವರ್ಗದ ಜನರ ಪಾಲಿಗೆ ಖಂಡಿತವಾಗಿಯೂ ನರಕ. ಒಂದು ಭಾಗದಲ್ಲಿ ಪಶ್ವಿಮ ಘಟ್ಟದ ಹಚ್ಚ ಹಸುರಿನ ಸುಂದರ ಪ್ರದೇಶ, ಇನ್ನೊಂದೆಡೆ ಕಡಲ ತೀರದ ವೈಭವ. ಜೊತೆಗೆ ಮಂಗಳೂರು ಕಲೆ ಸಂಸ್ಕೃತಿ ತಿಂಡಿತಿನಿಸುಗಳಲ್ಲಿ ಪ್ರಸಿದ್ದಿ ಪಡೆದ ಜಿಲ್ಲೆ. ಹೀಗೆ ನೋಡಲು ಸ್ವರ್ಗದಂತಿರುವ ಈ ಜಿಲ್ಲೆಯನ್ನು ಇಲ್ಲಿಯ ಹಿಂದೂ ಮುಸ್ಲಿಮ್ ಮತಾಂಧರು ನರಕ ಮಾಡಲು ಹೊರಟಿದ್ದಾರೆ. ಅದರಲ್ಲಿ ಯಶಸ್ಸನ್ನೂ ಕಾಣುತ್ತಿದ್ದಾರೆ.

ಕಲ್ಲಡ್ಕದಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಮ್ ಹುಡುಗಿ ಜೊತೆಯಲ್ಲಿ ನಡೆದಾಡುವುದೂ ತಪ್ಪು. ಅವರನ್ನು ಸುತ್ತುವರಿಸಿದು ಪ್ರಶ್ನಿಸಿ ಮತಾಂಧರುmangalore_moral1 ನೈತಿಕ ಪೊಲೀಸ್ ಗಿರಿ ನಡೆಸುತ್ತಾರೆ. ಹಿಂದೂ ಯುವತಿಯ ಜೊತೆ ಕಾರಲ್ಲಿ ಪ್ರಯಾಣಿಸಿದ ಎಂಬ ಕಾರಣಕ್ಕಾಗಿ ಮಂಗಳೂರಿನ ಅತ್ತಾವರದಲ್ಲಿ ಯುವಕನೊಬ್ಬನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸುತ್ತಾರೆ. ಮುಸ್ಲಿಮ್ ಯುವತಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕಾಗಿ ಪತ್ರಕರ್ತನೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಯುವಕ ಯುವತಿಯರು ಹುಟ್ಟುಹಬ್ಬದ ಪಾರ್ಟಿ ಆಚರಣೆ ಮಾಡಿದಾಗಲೂ ದಾಳಿ ನಡೆಸಿ ಸುಸಂಸ್ಕೃತಿಯ ಪ್ರದರ್ಶನ ಮಾಡ್ತಾರೆ. ದನ ಸಾಗಾಟ ಮಾಡಿದ್ದಾರೆಂಬ ಆರೋಪ ಹೊರಿಸಿ ಆದಿ ಉಡುಪಿಯಲ್ಲಿ ಹಾಜಬ್ಬ ಹಸನಬ್ಬರನ್ನು ಬೆತ್ತಲೆಗೊಳಿಸಿ ಅಮಾನವೀಯತೆಯನ್ನ ಮೆರೆಯುತ್ತಾರೆ. ದನ ಸಾಗಾಟದ ಆರೋಪದಲ್ಲಿ ಮನಬಂದಂತೆ ಹಲ್ಲೆ ನಡೆಸಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡುತ್ತಾರೆ. ಸಾಯುವ ಸಂಧರ್ಭದಲ್ಲಿ ಕುಡಿಯಲು ಸ್ವಲ್ಪ ನೀರು ಕೇಳಿದಾಗಲೂ ಕರುಣೆ ತೋರದೆ ಮನುಷ್ಯತ್ವವನ್ನೇ ಮರೆಯುವ ಇಂಥಹಾ ಘಟನೆಗಳು ಖಂಡಿತಾ ಸ್ವರ್ಗದ ಕಲ್ಪನೆಯಲ್ಲಿ ಕಾಣಲು ಸಾಧ್ಯವಿಲ್ಲ. ಇವುಗಳು ಮತಾಂಧರು ಮಂಗಳೂರನ್ನು ಹೇಗೆ ನರಕವನ್ನಾಗಿ ಪರಿವರ್ತಿಸಿದ್ದಾರೆ ಎಂಬುವುದರ ಉದಾಹರಣೆಗಳಷ್ಟೇ.. ಸ್ವರ್ಗವೆಂದರೆ ಅಲ್ಲಿ ಯಾವ ಭಯವೂ ಇಲ್ಲವಂತೆ. ವಿಪರ್ಯಾಸವೆಂದರೆ ಮಂಗಳೂರಿನಲ್ಲಿ ಭಯದಲ್ಲೇ ಜೀವನ ನಡೆಸುವಂತಾ ನರಕದ ಬದುಕನ್ನು ಇಲ್ಲಿಯ ಮತಾಂಧರು ಸೃಷ್ಟಿಮಾಡ್ತಿದ್ದಾರೆ.

ಮತಾಂಧರು ಸೃಷ್ಟಿಸುತ್ತಿರುವ ನರಕ ಒಂದೆಡೆಯಾದರೆ. ಮಂಗಳೂರಿನಲ್ಲಿ ಕಂಡುಬರುತ್ತಿರುವಂತಹಾ ಆರ್ಥಿಕ ಅಸಮಾನತೆಯ ವ್ಯಾಪಕತೆ ಇಲ್ಲಿ ನರಕದ ಇರುವಿಕೆಯತ್ತಲೇ ಬೊಟ್ಟುಮಾಡಿ ತೋರಿಸುತ್ತಿದೆ. ಆರ್ಥಿಕ ಬೆಳೆವಣಿಗೆಯಲ್ಲಿ ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್, ಬೃಹತ್ ಕೈಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳು ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಕಂಡಿದೆ. ಆದರೆ ಈ ಅಭಿವೃದ್ದಿಯ ಫಲ ಸಮಾನವಾಗಿ ಹಂಚಿಕೆಯಾಗಿದೆಯೇ ? ಮಂಗಳೂರಿನಲ್ಲಿ ಈ ಅಭಿವೃದ್ಧಿಯ ಫಲಗಳನ್ನುಂಡ ಸಮುದಾಯಗಳಾವುವು ? ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಪಾರ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿರುವ ಈ ಕ್ಷೇತ್ರಗಳಲ್ಲಿ ಹಿಂದುಳಿದವರ, ದಲಿತರ, ಕೊರಗರ, ಮಲೆಕುಡಿಯರ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಎಷ್ಟಿದೆ? ಈ ಕ್ಷೇತ್ರಗಳಲ್ಲಿ ನಿರ್ವಾಹಕ ಹುದ್ದೆ ಮತ್ತು ಕೂಲಿಕಾರ ಹುದ್ದೆಗಳ ಸಾಮಾಜಿಕ ಸಂರಚನೆ ಯಾವ ರೂಪದಲ್ಲಿದೆ? ಮಂಗಳೂರಿನಲ್ಲಿ ಬೇಕಾದಷ್ಟು ಹೈಟೆಕ್ ಮಲ್ಟೀ ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ರಾಜ್ಯದ ವಿವಿಧ ಮೂಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಹಣ ಚೆಲ್ಲಲು ತಾಕತ್ತಿದ್ದರಿಗೆ ಇಲ್ಲಿಯ ಆಸ್ಪತ್ರೆಗಳಲ್ಲಿ ಯೋಗ್ಯ ರೀತಿಯ ಚಿಕಿತ್ಸೆಯೂ ದೊರಕುತ್ತದೆ. ಆದ್ರೆ ಬಡವನ ಪಾಲಿಗಂತ್ತೂ ಇದು ದೂರದ ಮಾತು.

ಇದೇ ಮಂಗಳೂರಿನಲ್ಲಿ ಬಡ ರೋಗಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಲ್ಲಿ ಆಸ್ಪತ್ರೆಯ ದುಬಾರಿ ಬಿಲ್ ಪಾವತಿಸಲಾಗದೆ ಹೆಣವನ್ನುMRPL ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಹಾ ಪರಿಸ್ಥಿತಿಯೂ ಇಲ್ಲಿದೆ. ಹೆಣ ಪಡೆದುಕೊಳ್ಳಲೂ ಸಾಲಕ್ಕೆ ಮೋರೆ ಹೋಗುವ ಬಡವನಲ್ಲಿ ಕೇಳಿದ್ರೆ ಮಂಗಳೂರಿನ ವೈದ್ಯಕೀಯ ದಂಧೆಯ ನರಕ ದರ್ಶನವನ್ನು ನಿಮ್ಮ ಕಣ್ಣ ಮುಂದೆ ಕಟ್ಟಿಕೊಡಬಹುದು. ಇದರ ಜೊತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೂ ಮಂಗಳೂರಿನಲ್ಲಿ ಕೊರತೆಯಿಲ್ಲ. ಸಮಾಜ ಸೇವೆಯ ಮುಖವಾಡ ತೊಟ್ಟು ಶಿಕ್ಷಣವನ್ನ ದಂಧೆ ಮಾಡುವ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ಮಂಗಳೂರಿನಲ್ಲಿ ತಲೆಎತ್ತುತ್ತಿವೆ. ಮಗುವಿಗೆ ಎಲ್.ಕೆ.ಜಿ ಶಿಕ್ಷಣ ಕೊಡಿಸಲು ಲಕ್ಷ ಲಕ್ಷ ರೂಪಾಯಿ ಡೊನೇಷನ್ ಕೊಡಬೇಕಾದ ಪರಿಸ್ಥಿತಿ ಇಲ್ಲಿಯ ಪೋಷಕರದ್ದು. ಇನ್ನು ಮಂಗಳೂರಿನಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಆದ್ರೆ ಈ ಜಿಲ್ಲೆಯ ಬಡವನೊಬ್ಬನ ಮಗ ಅಥವಾ ಮಗಳು ಡಾಕ್ಟರ್ ಆಗಬೇಕು ಎಂಬ ಕನಸು ಅವನಲ್ಲಿ ನರಕದ ಅನುಭವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ಇನ್ನು ಅಭಿವೃದ್ದಿಯ ಪಥದತ್ತ ದಾಪುಗಾಲಿಡುತ್ತಿರುವ ಮಂಗಳೂರಿನ ಧಾರಣಾ ಸಾರರ್ಥ್ಯವನ್ನು ಮೀರಿ ಕೈಗಾರಿಕೆಗಳು ಹಾಗೂ ಸುಸ್ತಿರವಲ್ಲದ ಆರ್ಥಿಕ ಚಟುವಟಿಕೆಗಳು ಕಾಲಿಡುತ್ತಿವೆ. ಮಂಗಳೂರು ಒಂದು ಸೂಕ್ಷ್ಮ ಪರಿಸರ ವಲಯ. ಆದರೆ ಅಂಕೆ ಮೀರಿದ ಹಾಗೂ ಪರಿಸರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಆರ್ಥಿಕ ಅಭಿವೃದ್ಧಿ ಮಂಗಳೂರಿನ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಂಗಳೂರಿನಲ್ಲಿ ಸ್ವರ್ಗ ನಿರ್ಮಿಸುತ್ತೇವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಮಂಗಳೂರಿಗೆ ಕಾಲಿಟ್ಟ ಎಸ್.ಇ.ಜೆಡ್, ಎಮ್.ಆರ್.ಪಿ.ಎಲ್ ಕೈಗಾರಿಕೆಗಳು ಸೃಷ್ಟಿಸಿದ ಸ್ವರ್ಗ ಹೇಗಿದೆ ಎಂಬುವುದನ್ನು ತಿಳಿಯಬೇಕಾದರೆ ಒಂದುಬಾರಿ ಮಂಗಳೂರಿನ ಜೋಕಟ್ಟೆ ಪರಿಸರಕ್ಕೆ ಭೇಟಿ ಕೊಡಬೇಕು. ಸ್ವರ್ಗದಲ್ಲಿ ಸಿಗುವ ಶುದ್ಧಜಲವಂತೂ ಇಲ್ಲಿ ಹುಡುಕಿದರೂ ಸಿಗುವುದಿಲ್ಲ ಬಿಡಿ. ಏರುತ್ತಿರುವ ಬಿಸಿ ವಾತಾವರಣ, ಮೂಗುಮುಚ್ಚೋ ಕೆಟ್ಟ ವಾಸನೆ ಹಾಗೂ ಕೋಕ್ ಸಲ್ಫರ್ ಹಾರುಬೂದಿಗಳು ಇಲ್ಲಿಯ ವಾತಾವರಣವನ್ನು ಅಕ್ಷರಸಃ ನರಕವನ್ನಾಗಿಸಿದೆ.

ಇದೀಗ ಮತ್ತೆ ಎಮ್.ಆರ್.ಪಿ.ಎಲ್ ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ 1050 ಎಕರೆ ಭೂಮಿಯ ಬೇಡಿಕೆ ಇಟ್ಟಿದೆ. ಇದು ಜಾರಿಯಾದಲ್ಲಿ ಸ್ವರ್ಗದ ಉದ್ಯಾನವನಗಳಂತಿರುವ ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳ ಜನರೂ ನರಕವಾಸಿಗಳಾಗಿ ಜೀವಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಪಶ್ವಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುವ ಎತ್ತಿನಹೊಳೆ ಯೋಜನೆಯೂ ಚುರುಕುಪಡೆದುಕೊಳ್ಳುತ್ತಿದೆ.

ಆದರೆ ಇದ್ಯಾವುದರ ಬಗ್ಗೆ ಯೂ ತಲೆಕೆಡಿಸಿಕೊಳ್ಳದ ಮತಾಂಧ ಸಂಘಟನೆಗಳು ಇದೀಗ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಮೊಟ್ಟೆ ಬಿಸಾಡುತ್ತಿದ್ದಾರೆ. ರಮ್ಯಾಳಿಗೆ ಮೊಟ್ಟೆ ಬಿಸಾಡಿದ ಯುವಕರೇ ನಿಮ್ಮ ತಂದೆ –ತಾಯಂದಿರ ಬಳಿ ಹೋಗಿ ಒಮ್ಮೆ ವಿಚಾರಿಸಿ ಮಂಗಳೂರು ನಿಮ್ಮ ಪಾಲಿಗೆ ಸ್ವರ್ಗವೇ ಎಂದು ? ಬಹುಷಃ ನಿಮಗೂ ಉತ್ತರ ಸಿಗಬಹುದು.

ಆಂದಹಾಗೆ, ಮಂಗಳೂರು ಹಾಗೂ ಕಾಸರಗೋಡು ಗಡಿ ಭಾಗದಲ್ಲಿ ಒಂದು ಊರಿದೆ. ಆ ಊರಿನ ಹೆಸರೇ ಸ್ವರ್ಗ. ಊರ ಹೆಸರು ನೋಡಿ ಅಲ್ಲಿಗೆendosulfan-250 ಭೇಟಿ ಕೊಟ್ಟರೆ ಆ ಗ್ರಾಮದ ನರಕ ಸದೃಶ್ಯ ಬದುಕಿನ ಅರಿವು ನಿಮಗಾಗುತ್ತದೆ. ಗ್ರಾಮದ ಜನರು ಎಂಡೋಸಲ್ಪಾನ್ ಕೀಟನಾಶಕ ಸಿಂಪಡನೆಯ ಪರಿಣಾಮ ಅನುಭವಿಸುತ್ತಿರುವ ಕರಾಳ ಅನುಭವ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಊರಿನ ಬಹುತೇಕ ಮನೆಗಳಲ್ಲಿ ಎಂಡೋ ಪೀಡಿತ ಮಕ್ಕಳು ನಿಮಗೆ ಕಾಣಲು ಸಾಧ್ಯ. ಅಸಲಿಗೆ ಈ ಸ್ವರ್ಗ ಎಂಬ ಊರು ಅಲ್ಲಿನ ಗ್ರಾಮಸ್ಥರ ಪಾಲಿಗೆ ನಿಜಕ್ಕೂ ನರಕ. ಆದ್ದರಿಂದ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ್ದಾರೆಂಬ ಹೇಳಿಕೆಯಲ್ಲಿ ಖಂಡಿತಾ ತಪ್ಪಿಲ್ಲ. ಸುಂದರ ಜಿಲ್ಲೆಯನ್ನು ನರಕ ಮಾಡಲು ಹೊರಟಿರುವ ಈ ಎಲ್ಲಾ ದುಷ್ಟ ಶಕ್ತಿಗಳನ್ನು ಹೇಗೆ ಸೋಲಿಸಬಹುದೆಂಬುವುದು ನಮ್ಮ ಮುಂದಿರುವ ಸವಾಲು.

1 thought on “ಸ್ವರ್ಗ ಹಾಗೂ ನರಕದ ಕಲ್ಪನೆ ಮತ್ತು ರಮ್ಯಾ ಹೇಳಿಕೆ

Leave a Reply

Your email address will not be published.