ಚಿತ್ರದುರ್ಗ: ಹಿಂದೂ ಮಹಾಗಣಪತಿ – ದಲಿತ ಮಹಾಗಣಪತಿ

– ಶಿವರಾಂ ಕೆಳಗೋಟೆ

ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದೇ 24 ರಂದು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ವಿಸರ್ಜನೆ ನಿಗದಿಯಾಗಿದೆ. ದಿನ ಹತ್ತಿರವಾಗುತ್ತಿದ್ದಂತೆಯೇ ಚಿತ್ರದುರ್ಗದ ಜನರಲ್ಲಿ ಅವ್ಯಕ್ತ ಆತಂಕ, ಏನಾಗುತ್ತದೆಯೋ ಎಂಬ ಭಯದ ವಾತಾವರಣ. ಏಕೆಂದರೆ, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ ವಿಸರ್ಜನೆ ದಿನದ ಮೆರವಣಿಗೆಗಳಲ್ಲಿ ಬೇರೆ ಬೇರೆ ಊರುಗಳಿಂದ ನೂರಾರು ಜನ ನಗರಕ್ಕೆ ಬಂದು ಕೇಸರಿ ವಸ್ತ್ರ ಧರಿಸಿ ಪಾಲ್ಗೊಳ್ಳುತ್ತಾರೆ. ಕೋಮು ಭಾವನೆ ಕೆರಳಿಸುವ, ಹಿಂದೂ ಉನ್ಮಾದದ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಾರೆ. ಮೆರವಣಿಗೆ ಮುಗಿವ ಹೊತ್ತಿಗೆ ನಗರದ ಯಾವ ಭಾಗದಲ್ಲಾದರೂ ಹಿಂಸೆಯ ಕಿಡಿ ಹಬ್ಬುತ್ತದೇನೋ ಎಂಬ ಆತಂಕದಲ್ಲಿ ಜನರು ಇರುತ್ತಾರೆ.

ಸಮಾಜದ ನೆಮ್ಮದಿ ಹಾಗೂ ಶಾಂತಿಗಾಗಿ ದೇವರ ಪೂಜೆ ನಡೆಸುವುದು ಪದ್ಧತಿ. ವಿಪರ್ಯಾಸ ಎಂದರೆ ಇಂತಹ ಸಂದರ್ಭದಲ್ಲಿಯೇ ಶಾಂತಿ ಕದಡಬಹುದೇನೋ ಎಂಬ ಆತಂಕದಿಂದ ಪೊಲೀಸ್ ಇಲಾಖೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಬಂದೋಬಸ್ತ್ ಗೆ ನಿಯೋಜಿಸುತ್ತಾರೆ. ಸ್ವತಃ ಜಿಲ್ಲಾ ರಕ್ಷಣಾಧಿಕಾರಿಯೇ ಕಂಟ್ರೋಲ್ ರೂಮ್ganesh-ugra ನಲ್ಲಿ ಕೂತು ಡ್ರೋನ್ ಕೆಮರಾಗಳ ಮೂಲಕ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸುತ್ತಾರೆ. ಕಳೆದ ವರ್ಷಗಳಲ್ಲಿ ಮೆರವಣಿಗೆ ವೇಳೆ ಸಣ್ಣ ಪುಟ್ಟ ಗಲಭೆಗಳೂ ನಡೆದಿವೆ.

ಇದೆಲ್ಲವನ್ನೂ ಕಂಡು ಬೇಸತ್ತ ಕೆಲ ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಈ ಬೆಳವಣಿಗೆಯನ್ನು ಎದುರಿಸುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದು ಈ ಬಾರಿ ದಲಿತ ಗಣಪತಿ ಎಂದು ಪರ್ಯಾಯ ಉತ್ಸವಕ್ಕೆ ನಾಂದಿ ಹಾಡಿದ್ದಾರೆ. ಅವರು ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಇದೇ 22 ರಂದು ವಿಸರ್ಜನೆ ಹಮ್ಮಿಕೊಂಡಿದ್ದಾರೆ. ಆ ವೇಳೆ ನಡೆಯುವ ಮೆರವಣಿಗೆಗೆ ಏಕತಾ ಯಾತ್ರೆ ಎಂಬ ಹೆಸರಿಟ್ಟಿದ್ದಾರೆ. ಪ್ರತಿಷ್ಟಾಪನೆ ನಂತರ ಪ್ರ ತಿ ದಿನ ವಿವಿಧ ಧಾರ್ಮಿಕ ಮುಖಂಡರು (ಅನ್ಯ ಧರ್ಮೀಯರೂ ಸೇರಿದಂತೆ) ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಮಹಾಲಿಂಗಪ್ಪ ಈ ವ್ಯವಸ್ಥೆ ಮಾಡುವಲ್ಲಿ ನೇತೃತ್ವ ವಹಿಸಿದ್ದಾರೆ.

“ಹಿಂದೂ ಮಹಾ ಗಣಪತಿ ಆಯೋಜಕರಿಗೆ ಬೆಂಗಾವಲಾಗಿ ನಿಂತು ಅವರ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅವರ ಘೋಷಣೆಗಳನ್ನು ಏರಿದ ದನಿಯಲ್ಲಿ ಕೂಗುತ್ತಿದ್ದವರು ನಮ್ಮದೇ ಮನೆಯ ದಲಿತ ಹಾಗೂ ಹಿಂದುಳಿದ ಹುಡುಗರು. ಆದರೆ, ಅಲ್ಲಿಯ ಆಚರಣೆ ರೀತಿ-ನೀತಿಗಳಿಂದ ಆಗುವ ಅಪಾಯಗಳ ಪರಿಚಯ ಆ ಹುಡುಗರಿಗೆ ಇಲ್ಲ. ಅವರನ್ನು ಇತ್ತ ಸೆಳೆಯಬೇಕೆಂದರೆ, ಅವರಿಗೆ ಪರ್ಯಾಯ ಬೇಕು. ದಲಿತ ಮಹಾಗಣಪತಿ ಪ್ರತಿಷ್ಟಾಪನೆ ಒಂದು ವೈಚಾರಿಕ ಪರ್ಯಾಯ ಅಲ್ಲದಿರಬಹುದು, ಆದರೆ, ಆರಂಭದಲ್ಲಿ ಅವರನ್ನು ಸರಿದಾರಿಗೆ ಸೆಳೆಯುವುದಕ್ಕೆ ಒಂದು ತಂತ್ರವಾಗಿಯಾದರೂ ಇಂತಹದೊಂದು ಕಾರ್ಯಕ್ರಮದ ಅಗತ್ಯವಿದೆ” ಎನ್ನುತ್ತಾರೆ ದಲಿತ ಮಹಾಗಣಪತಿ ಉತ್ಸವದ ಸಮರ್ಥಕರೊಬ್ಬರು.

ಜನರಿಗೆ ತಪ್ಪು, ಸರಿಗಳ ಸ್ಪಷ್ಟ ಅರಿವಿದೆ. ಆದರೆ, ಒಂದು ತಪ್ಪಿನ ಎದುರಿಗೆ ಮತ್ತೊಂದು ಸರಿಯನ್ನು ತೋರಿಸಿದಾಗಲೇ ಅವರು ತಪ್ಪಿನ ಬಗ್ಗೆ ಮಾತನಾಡಲಾರಂಭಿಸುವುದು. ಎಲ್ಲರಿಗೂ ಗೊತ್ತು, ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ದಿನ, ಅವರೊಂದಿಗೆ ಅನ್ಯಧರ್ಮಿಯರು ಪಾಲ್ಗೊಳ್ಳಲು ಸಾಧ್ಯವಿಲ್ಲ. ಅದೊಂದು ದಿನ ನಗರದಲ್ಲಿ ಏನೋ ಘಟಿಸಬಹುದು ಎಂಬ ಆತಂಕದಿಂದ ಕೆಲವರು ಊರು ಬಿಡುವ ಸಂದರ್ಭಗಳೂ ಇವೆ. ಆದರೆ, ಅವರಿಗೆ ‘ಏಕತಾ ಯಾತ್ರೆ’ ಯಂತಹ ಕಾರ್ಯಕ್ರಮದಲ್ಲಿ ಅಂತಹ ಆತಂಕಗಳಿರುವುದಿಲ್ಲ. ಮೇಲಾಗಿ ಬಹುಸಂಖ್ಯಾತ ಜನರಿಗೆ, ಸಮಾಜವನ್ನು ಒಡೆಯುವ ಯಾತ್ರೆಗಿಂತ ಏಕತಾ ಯಾತ್ರೆಯೇ ನಮ್ಮ ಆಯ್ಕೆಯಾಗಬೇಕು ಎಂದು ಮನವರಿಕೆ ಆಗುತ್ತದೆ, ಎನ್ನುವುದು ಅವರ ವಾದ.

ಹೀಗೆ ಮಾತನಾಡುತ್ತಿರುವಾganesh-dalitಗಲೆ ಇಪ್ಪತ್ತರ ಆಸುಪಾಸಿನಲ್ಲಿರುವ ಹುಡುಗನೊಬ್ಬ ತನ್ನ ಪಲ್ಸರ್ ಗಾಡಿಯಲ್ಲಿ ದಲಿತ ಮಹಾಗಣಪತಿ ಪೆಂಡಾಲ್ಗೆ ಬಂದ. ಅವನ ಗಾಡಿಯ ಮುಂಭಾಗ ಭಗತ್ ಸಿಂಗ್ ಚಿತ್ರ ಇತ್ತು. ಹಿಂದೆ ಜೈ ಹನುಮಾನ್ ಚಿತ್ರ. ‘ನಾನೇಕೆ ನಾಸ್ತಿಕ?’ ಎಂದು ಪುಸ್ತಕ ಬರೆದ ಭಗತ್ ಸಿಂಗ್ ಹಾಗೂ ಜೈ ಹನುಮಾನ್ ಚಿತ್ರ ಒಟ್ಟಿಗೆ ಹೋಗಲಾರವು. ಆ ಹುಡುಗನ ಅಸ್ಪಷ್ಟ, ಗೊಂದಲಕಾರಿ ಮನಸ್ಥಿತಿ ಇದುವರೆಗೆ ಹಿಂದೂ ಮಹಾಗಣಪತಿಗೆ ಪ್ರಮುಖ ಕಾರ್ಯಕರ್ತನನ್ನಾಗಿ ಮಾಡಿತ್ತು. ಈ ವರ್ಷವೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗ ವಿರಾಮದ ವೇಳೆ ದಲಿತ ಮಹಾಗಣಪತಿ ಪೆಂಡಾಲ್ ಭೇಟಿ ಕೊಟ್ಟಿದ್ದ. ದಲಿತ ಸಂಘಟನೆ ಕಾರ್ಯಕರ್ತರು ಬಯಸಿದ್ದು ಇದನ್ನೇ.

ವಿಗ್ರಹ ಸ್ವರೂಪ:
ಎರಡೂ ಗುಂಪಿನವರು ಪ್ರತಿಷ್ಟಾಪಿಸಿರುವ ಗಣೇಶನ ವಿಗ್ರಹಗಳು ವಿಶಿಷ್ಟವಾಗಿವೆ. ದಲಿತ ಮಹಾಗಣಪತಿ ಹೆಗಲ ಮೇಲೆ ನೇಗಿಲು ಇದೆ. ಪ್ರತಿಷ್ಟಾಪನೆ ದಿನವೇ ರೈತ ಸಂಘದವರು ಭೇಟಿ ನೀಡಿ ವಿಗ್ರಹಕ್ಕೆ ಹಸಿರು ಶಾಲು ಹೊದಿಸಿ, ಆತನನ್ನು ರೈತ ಗಣಪತಿಯನ್ನಾಗಿ ಮಾಡಿದರು. ಈ ನೆಲದ ಬಹುಜನರ ಪ್ರತಿನಿಧಿಯಾಗಿ ಆ ಗಣಪ ಕಂಡರೆ ಅಚ್ಚರಿಯೇನಿಲ್ಲ.

ಆದರೆ ಹಿಂದೂ ಮಹಾಗಣಪತಿ ಹಾಗಲ್ಲ. ಆತ ಬೃಹದಾಕಾರವಾಗಿರುವ ಉಗ್ರನರಸಿಂಹನ ವಿಗ್ರಹದ ಮೇಲೆ ಸಣ್ಣದಾಗಿ ಗಣಪ ಕೂತಿದ್ದಾನೆ. ಉತ್ಸವ ಗಣೇಶನದೋ ಉಗ್ರನರಸಿಂಹನದೋ ಎಂಬ ಸಂಶಯ ಬರುತ್ತದೆ. ಜೊತೆಗೆ ಈ ರೂಪಕ್ಕೆ ಏನಾದರೂ ಹಿನ್ನೆಲೆ ಇದೆಯೇ ಎಂದು ಯೋಚಿಸಿದರೆ, ಏನೂ ತಿಳಿಯುತ್ತಿಲ್ಲ. ಉಗ್ರ ನರಸಿಂಹನಿಗೂ, ಶಿವನ ಮಗನಾದ ಗಣಪನಿಗೂ ಸಂಬಂಧವೆಲ್ಲಿ?

4 comments

  1. ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ತಮ್ಮ ಫೇಸ್ ಬುಕ್ ನ ಪುಟದಲ್ಲಿ ‘ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ ಕಾರ್ಯಕ್ರಮ’ದಲ್ಲಿ ಹಿಂದೂ ಮಹಾ ಗಣಪತಿಯ ವಿಸರ್ಜನೆ ಚಿತ್ರದುರ್ಗದಲ್ಲಿ ಆಯಿತು ಎಂದು ಕೆಲವು ಭಾವಚಿತ್ರಗಳನ್ನೂ ಹಾಕಿಕೊಂಡಿದ್ದರು. ಒಂದು ಲಕ್ಷ ಎನ್ನುವುದು ಉತ್ಪ್ರೇಕ್ಷೆ ಅನ್ನಿಸಿದರೂ ಹಲವಾರು ಸಾವಿರ ಜನ ಜಮಾಯಿಸಿದ್ದಂತೂ ಸುಳ್ಳಲ್ಲ. ನಿಮ್ಮ ವರದಿಯ ಪ್ರಕಾರ ದಲಿತ ಗಣಪತಿಯ ಉತ್ಸವಕ್ಕೆ ಹೆಚ್ಚು ಜನ ಸೇರಬೇಕಿತ್ತಲ್ಲ! ವಿಸರ್ಜನೆ ಬೇರೆ ದಿನ ಇಟ್ಟುಕೊಂಡಿದ್ದೀರಾ? ನಿಮ್ಮ ಪತ್ರಿಕೆಯ ವರದಿಯ ಉದ್ದೇಶವೇ ಅರ್ಥವಾಗುತ್ತಿಲ್ಲ.

Leave a Reply

Your email address will not be published.