Monthly Archives: January 2017

ಕಂಬಳ ಮತ್ತು ಜಾತಿ ವಿನಾಶ


-ಎನ್.ಎಸ್


 

‘ಜಲ್ಲಿಕಟ್ಟು ಉಳಿಯುವುದಾದರೆ ಕಂಬಳ ಕೂಡಾ ಉಳಿಯಲಿ’ ಎಂಬ ನಿಟ್ಟಿನಲ್ಲಿ ಹೋರಾಟಗಳು ಪ್ರಾರಂಭವಾಗಿದೆ. ಸಮಾಜದಲ್ಲಿ ಸಮಾನತೆ ಬಯಸುವ ಹಲವು ಪ್ರಗತಿಪರರೂ ಕೂಡಾ ಕಂಬಳದ ಉಳಿವಿನ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. “ಫ್ಯೂಡಲ್ ಜಾತಿಗಳ ಯಜಮಾನಿಕೆಯಿಂದ ವಿಮುಕ್ತಗೊಂಡು ಅಪ್ಪಟ ದೇಸಿ ಕ್ರೀಡೆಯ ರೂಪದಲ್ಲಿ ಕಂಬಳ ಉಳಿಯಲಿ; ಜಾತಿಯ ಸೋಂಕಿಲ್ಲದೆ, ಮೇಲು ಕೀಲು ಮಡಿ ಮೈಲಿಗೆಯ ವಾಸನೆಯಿಲ್ಲದೆ ಸಹಜ ಮನೋರಂಜಕ ಜನಪದ ಆಟವಾಗಿ ಕಂಬಳ ಬೆಳೆಯಲಿ” ಎಂದು ಹಲವು ಪ್ರಗತಿರರು ಕಂಬಳದ ಪರ ಹೋರಾಟಕ್ಕೆ ಇಳಿದಿದ್ದಾರೆ, ಆಶಿಸುತಿದ್ದಾರೆ.

ಆದರೆ ನಮ್ಮ ಪ್ರಗತಿಪರರ ಈ ಆಶಯ ಅದೆಷ್ಟರಮಟ್ಟಿಗೆ ಕಾರ್ಯಸಾಧು ಎಂಬುವುದು ಇಲ್ಲಿಯ ಪ್ರಶ್ನೆ. ಜಾತಿ ಅನ್ನುವುದು ನಮ್ಮ ಸಮಾಜದ ವಾಸ್ತವ.kambala 2 ಅದು ನಮ್ಮ ಸಮಾಜೋ ಸಾಂಸ್ಕೃತಿಕ ಜೀವನದಲ್ಲಿ ನಿನ್ನೆಯೂ ಪ್ರಭಾವಿಯಾಗಿತ್ತು, ಇವತ್ತೂ ಪ್ರಭಾವಿಯಾಗಿದೆ. ಹೀಗಿರುವಾಗ ನಮ್ಮ ದೇಶದ ಜನಜೀವನದ ಪ್ರತಿಯೊಂದು ಅಂಶವೂ- ಭಾಷೆ, ಆಹಾರ, ಹಬ್ಬಗಳು, ಕ್ರೀಡೆ, ಕಲೆ, ಸಂಗೀತ, ನೃತ್ಯ, ಕ್ರೀಡೆ, ವೇಷಭೂಷಣ ಇವೆಲ್ಲವೂ- ಜಾತಿ ಶ್ರೇಣೀಕರಣದೊಂದಿಗೆ ತಳುಕು ಹಾಕಿಕೊಂಡಿದೆ. ಜಾತಿಯಾಧಾರಿತ ಅಸಮಾನತೆಗಳು ಮತ್ತು ಪೂರ್ವಾಗ್ರಹಗಳು ಡಾಳಾಗಿ ಕಾಣಿಸುವಷ್ಟು ನಿಚ್ಚಳವಾಗಿ ಅವುಗಳು ಆಚರಿಸಲ್ಪಡುತ್ತವೆ. ಹಾಗೆಂದು ಜಾತಿಯ ಕಾರಣಕ್ಕೆ ಒಂದೊಂದನ್ನು ನಿಷೇದಿಸಲು ಹೊರಟರೆ ಕಡೆಗೆ ಎಲ್ಲವನ್ನೂ ನಿಷೇದಿಸಬೇಕಾಗುತ್ತದೆ ಎನ್ನುವ ವಾದವನ್ನು ಹಲವರು ಮುಂದಿಡುತ್ತಿದ್ದಾರೆ. ಹೀಗಿರುವಾಗ ಅವುಗಳನ್ನು ಜಾತಿಯ ಸ್ಪರ್ಶದಿಂದ ಮುಕ್ತಗೊಳಿಸಿ ಪುನರ್ ಸ್ವೀಕರಿಸಿಬಹುದಲ್ಲವೇ ಎನ್ನುವ ಆಯ್ಕೆಯನ್ನು ಅವರು ನೀಡುತ್ತಾರೆ. ಇಲ್ಲಿ ಅವರು ಭರತನಾಟ್ಯವನ್ನು ಉದಾಹರಣೆಯಾಗಿ ಕೊಡುತ್ತಾರೆ.

ಆದರೆ ಪ್ರಗತಿಪರರ ಇಂತಹ ವಾದಗಳು ಜಾತಿ ವಿನಾಶದ ಪರಿಕಲ್ಪನೆ ಮತ್ತು ಆಶಯಗಳಿಗೆ ಪ್ರತಿಯಾಗಿ ನಿಲ್ಲುತ್ತವೆ. ಅಂತಹ ಅಭಿಪ್ರಾಯಗಳು ವಾಸ್ತವದಲ್ಲಿ ಯಥಾಸ್ಥಿತಿವಾದಿ ಮತ್ತು ತಂತ್ರಗಾರಿಕೆಯ ವಾದವಾಗಿರುತ್ತವೆ. ಜಾತಿ ವಿನಾಶ ಅನ್ನುವುದು ನಮ್ಮ ಜಡ್ಡುಗಟ್ಟಿದ ಸಮಾಜಕ್ಕೆ ನೀಡಲೇಬೇಕಾದ ಅತ್ಯಂತ ದೊಡ್ಡ ಶಾಕ್ ಆಗಿರುತ್ತದೆ. ಅದು ನಮ್ಮ ಸಮಾಜದಲ್ಲಿ ಆದಿಯಿಂದ ಅಂತ್ಯದ ವರೆಗೆ ಸರ್ವವನ್ನೂ ಪ್ರಭಾವಿಸಲಿದೆ. ಹಳೆಯ ಜಾತ್ಯಾಧಾರಿತ ಸಂರಚನೆಗಳೆಲ್ಲವನ್ನೂ ಅದು ಧ್ವಂಸ ಮಾಡಲಿದೆ. ಪುರಾತನ ಸಾಮಾಜಿಕ ಸಂಬಂಧಗಳು ಮತ್ತು ಸಂಸ್ಥೆಗಳನ್ನು ಅದು ಅಲ್ಲೋಲ ಕಲ್ಲೋಲ ಮಾಡುತ್ತದೆ. ಆದರೆ ಅಂತಹ ಅಘಾತವನ್ನು ನಮ್ಮ ಸಮಾಜ ಪಡೆದಿದೆಯೇ ಅಥವಾ ಪಡೆಯುವುದು ಸಾಧ್ಯವೇ ಎಂಬುವುದು ಇಲ್ಲಿಯ ಪ್ರಶ್ನೆ. ಹೌದು! ಅಂಬೇಡ್ಕರ್ ಅನ್ನುವ ಚಿಂತನೆ ಅಂತಹ ಅಘಾತವನ್ನು ನೀಡಿತ್ತು, ಸಂವಿಧಾನ-ಮೀಸಲಾತಿ-ದಲಿತ ಹೋರಾಟಗಳು ನಮ್ಮ ಸಮಾಜಕ್ಕೆ ಅಂತಹ ಶಾಕ್ ನೀಡಿದ್ದವು. ಜಾತಿ ವಿನಾಶದ ಹಾದಿಯಲ್ಲಿ ಇಂತಹ ಅಘಾತಗಳು ಅತ್ಯಗತ್ಯ. ಇದು ನಿನ್ನೆ ಮತ್ತು ಇವತ್ತು ನಮ್ಮ ಸಮಾಜೋ ಸಾಂಸ್ಕೃತಿಕ ಜೀವನದಲ್ಲಿ ಪ್ರಭಾವಿಯಾಗಿರತಕ್ಕಂತಹ ಜಾತಿಯನ್ನು ನಾಳೆಯ ನಮ್ಮ ಬದುಕಿನಿಂದ ಸಂಪೂರ್ಣವಾಗಿ ಕಿತ್ತುಹಾಕುವ ಬಗೆ. ಆದರೆ ಹಿಂದಿನದೆಲ್ಲವನ್ನೂ ಕಿತ್ತು ಹಾಕಿ ತರುವಾಯದಲ್ಲಿ ಸ್ವೀಕರಿಸುವುದು ಯಾವುದನ್ನ, ಆಚರಿಸುವುದು ಯಾವುದನ್ನ ಎಂಬುವುದು ಇನ್ನೊಂದು ಪ್ರಶ್ನೆ. ಅದನ್ನು ನಿರ್ಧರಿಸುವುದು ನಾಗರಿಕತೆಯ ವಿಕಾಸ ಮತ್ತು ಆಧುನಿಕತೆ. 

ಹಾಗಾದರೆ ಈ ಹಂತದಲ್ಲಿ ಜಾತಿವಿನಾಶದ ಮಾನದಂಡದಲ್ಲಿ ಕಂಬಳ ಅನ್ನುವುದು ಎಲ್ಲಿ ನಿಲ್ಲುತ್ತದೆ? ಇಲ್ಲಿ ಗಮನಿಸಬೇಕಾದ ಮಹತ್ವದ ವಿಚಾರವೆಂದರೆ ಕಂಬಳದಲ್ಲಿ ಹಿಂದೆಯೂ ಜಾತಿ ಆಧಾರಿತ ಅಮಾನವೀಯ, ಅಸಮಾನ ಆಚರಣೆಗಳು ಇದ್ದವು. ಈಗಲೂ ಇವೆ. ಕಂಬಳ ಉಳಿಯಬೇಕೋ ಬೇಡವೋ ಎಂಬ ಪ್ರಶ್ನೆ ಎದ್ದಿರುವುದು ಅದು ಜಾತಿಯ ಸೋಂಕಿನಿದ ಇನ್ನೂ ಬಳಲುತ್ತಿರುವ ಸಂದರ್ಭದಲ್ಲೇ. ಇಂತಹ ಸನ್ನಿವೇಶದಲ್ಲಿ ನಮ್ಮ ಹೋರಾಟ ಮತ್ತು ಒತ್ತಡ ಪ್ಯೂಡಲ್ ಜಾತಿಗಳ ಪ್ರತಿಷ್ಠೆಯ ಕ್ರೀಡೆಯಾಗಿರುವ ಕಂಬಳವನ್ನು ತ್ಯಜಿಸಿ ಸಮಸಮಾಜದ ನಿರ್ಮಾಣದ ಕಡೆಗೆಯೇ ಹೊರತು ಅದನ್ನು ಮತ್ತದೇ ಕೊಳಕಲ್ಲಿ ತೊಳೆದು, ಹೊಸ ಪ್ಯಾಕೆಟ್ಟಿನಲ್ಲಿ ನೀಡುವ ಪಿತೂರಿಯ ಕಡೆಗಲ್ಲ. ಇಲ್ಲಿ ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡುವುದು ಎಂದರೇನೇ ಫ್ಯೂಡಲ್ ವ್ಯವಸ್ಥೆಯನ್ನು ಚಾಲ್ತಿಯಲ್ಲಿಡುವುದು ಎಂದಾಗುತ್ತದೆ.

ಇಲ್ಲಿ ಇನ್ನೊಂದು ಮಹತ್ವದ ವಿಚಾರ. ದಕ್ಷಿಣ ಕನ್ನಡದಲ್ಲಿ ಗುತ್ತು ಮತ್ತು ಅರಸು ಮನೆತನಗಳ ಯಜಮಾನಿಕೆ ಇನ್ನೂ ಅಸ್ತಿತ್ವದಲ್ಲಿದೆ. ಉಳುವವನೇ ಹೊಲದೊಡೆಯKambala 4 (1) ಕಾನೂನು ಬಂದ ನಂತರ ಅರಸರ ಕೃಷಿ ಭೂಮಿಗಳು, ಗುತ್ತಿನ ಮನೆಯ ಕೃಷಿ ಭೂಮಿಗಳಷ್ಠೇ ಹಿಂದುಳಿದ ವರ್ಗಗಳ ಪಾಲಾದವು. ಗುತ್ತುಗಳು, ಅರಸೊತ್ತೊತ್ತಿಗೆಗಳು, ಗುತ್ತಿನ ಕಂಬಳದ ಗದ್ದೆಗಳು, ಗುತ್ತಿನ ದೈವಗಳು ಇವ್ಯಾವುವೂ ಶ್ರೀಸಾಮಾನ್ಯರ ಹತೋಟಿಗೆ ಬರಲಿಲ್ಲ. ಅವು ಇನ್ನೂ ಅದೇ ಗುತ್ತುಗಳ ನಿಯಂತ್ರಣದಲ್ಲಿವೆ. ಅವುಗಳ ಬಲದಿಂದಲೇ ಕರಾವಳಿಯಲ್ಲಿ ಪರೋಕ್ಷ ಪ್ರಭುತ್ವವೊಂದು, ಸಾಂಸ್ಕ್ರತಿಕ ಯಜಮಾನಿಕೆಯೊಂದು ಇನ್ನೂ ಅಸ್ತಿತ್ವದಲ್ಲಿದೆ. ದಲಿತರು ಹಿಂದುಳಿದವರಿಗೆ ಭೂಮಿ ಬಂತೇ ಹೊರತು ಸಾಮಾಜಿಕ ಅಧಿಕಾರ ಬರಲಿಲ್ಲ. ಹಿಂದೆ ಅಧಿಕಾರದ ಕಾರಣಕ್ಕಾಗಿ ಗುತ್ತು ಮನೆಗಳಿಗೆ ದಲಿತರು, ಹಿಂದುಳಿದ ವರ್ಗಗಳು ತಗ್ಗಿಬಗ್ಗಿ ನಡೆಯುತ್ತಿದ್ದರೆ, ಈಗ ದೈವಸ್ಥಾನ ಮತ್ತು ಅದರ ಯಜಮಾನಿಕೆಯ ಕಾರಣಕ್ಕಾಗಿ ತಗ್ಗಿಬಗ್ಗಿ ನಡೆಯತ್ತಿದ್ದಾರೆ. ಕಂಬಳಕ್ಕೂ, ಊರಿನ ದೈವಸ್ಥಾನಕ್ಕೂ, ಗುತ್ತಿಗೂ ಬಿಡಸಲಾರದ ನಂಟಿದೆ. ಗುತ್ತಿನ ಮನೆಯಲ್ಲಿರುವ ರಾಜನ್ ದೈವಗಳು(ಉಚ್ಚ ದೈವಗಳು) ಕಂಬಳ ಸೇವೆಯನ್ನು ಕೇಳುತ್ತವೆ. ಅಂತಹ ಗುತ್ತು ಮತ್ತು ಅರಸು ಮನೆತನಗಳು ಒಂದೋ ಬಂಟರು ಅಥವಾ ಜೈನರ ನಿಯಂತ್ರಣದಲ್ಲಿವೆ. ಅಂದರೆ ದೈವ ಸಂಪ್ರದಾಯದಂತೆ ನಡೆಯುವ ಎಲ್ಲಾ ಕಂಬಳಗಳಿಗೂ ಗುತ್ತಿನ ಯಜಮಾನಿಕೆ ಅಥವಾ ಫ್ಯೂಡಲ್ ವ್ಯವಸ್ಥೆ ಅನ್ವಯಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಕಂಬಳವನ್ನು ಫ್ಯೂಡಲ್ ನಿಯಂತ್ರಣದಿಂದ ಹೊರತಂದು ಜನಪದವನ್ನಾಗಿಸಬೇಕಾದರೆ ಅಲ್ಲಿ ನಡೆಯಬೇಕಿರೋದು ಕಂಬಳದ ಪರ ಹೋರಾಟವಲ್ಲ. ಬದಲಿಗೆ ಜಾತಿ ವಿನಾಶದ ಹೋರಾಟ ಅಥವಾ ಗುತ್ತು ಯಾ ಅರಸೊತ್ತಿಗೆಯನ್ನು ದಲಿತರು, ಹಿಂದುಳಿದವರಿಗೆ ಹಂಚುವ ಹೋರಾಟ. ಆದರೆ ಗುತ್ತು ಮತ್ತು ಅರಸೊತ್ತಿಗೆ ಅಳಿಯಬೇಕು ಎಂದು ಹೋರಾಟ ಮಾಡಬೇಕಾದ ಪ್ರಗತಿಪರರು ಕಂಬಳ ಪರ ಹೋರಾಟ ಕೈಗೆತ್ತಿಕೊಂಡು ಮತ್ತದೇ ಸಾಂಸ್ಕೃತಿಕ ಯಾಜಮಾನ್ಯದ ಬೆಂಬಲಕ್ಕೆ ನಿಂತಿರುವುದು ಮಾತ್ರ ವಿಪರ್ಯಾಸವೇ ಸರಿ.

ಹಿಂದುಳಿದ ವರ್ಗಗಳನ್ನು ಶೋಷಿಸಲು ಕಂಬಳ ಮತ್ತು ದೈವಸ್ಥಾನದ ನಂಟನ್ನು ಗುತ್ತಿನ ಬಂಟರು ಹೇಗೆ ದುರುಪಯೋಗಪಡಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆ ಕೊಡಲು ಇತಿಹಾಸಕ್ಕೆ ಹೋಗಬೇಕಿಲ್ಲ. 2005-06 ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಪೆರ್ಮುದೆ, ಕಳವಾರಿನ 1800 ಎಕರೆ ಕೃಷಿ ಭೂಮಿಯನ್ನು ನೋಟಿಫಿಕೇಷನ್ ಮಾಡಲಾಗುಯಿತು. ಇಡೀ ಎರಡು ಊರಿನ ರೈತರು ಭೂಸ್ವಾಧೀನವನ್ನು ವಿರೋಧಿಸುತ್ತಾರೆ. ರಕ್ತಕೊಟ್ಟರೂ ಭೂಮಿ ಕೊಡುವುದಿಲ್ಲ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಾರೆ. ಕಾರಣ, ಭೂಸ್ವಾಧೀನವಾಗುತ್ತಿದ್ದ ಕೃಷಿ ಭೂಮಿ ಮೂರು ಬೆಳೆ ಬೆಳೆಯುತ್ತಿದ್ದ ಫಲವತ್ತಾದ ನೀರಾವರಿ ಜಮೀನು ಆಗಿತ್ತು. ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ. ಸಹಜವಾಗಿ ಹೋರಾಟದ ನೇತೃತ್ವದವನ್ನು ಪೆರ್ಮುದೆ ಪಾರಳಗುತ್ತುವಿನ ಭುಜಂಗಶೆಟ್ಟರು ವಹಿಸಿಕೊಳ್ಳುತ್ತಾರೆ. ರೈತರು ಪೆರ್ಮುದೆ ಗುತ್ತಿನ ಭುಜಂಗ ಶೆಟ್ಟರ ನೇತೃತ್ವವನ್ನು ಮನಸಾರೆ ಒಪ್ಪಿಕೊಳ್ಳೋಕೆ ಮುಖ್ಯ ಕಾರಣ ಗುತ್ತಿನ ದೈವಗಳು ಮತ್ತು ಅದಕ್ಕೆ ಜನ ಸಲ್ಲಿಸುತಿದ್ದ ಗೌರವ, ನಿಷ್ಠೆ. ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಸಂಧರ್ಭದಲ್ಲೇ ರಿಯಲ್ ಎಸ್ಟೇಟ್ ಏಜೆಂಟರೂ ಆಗಿದ್ದ ಭುಜಂಗ ಶೆಟ್ಟರ ಜೊತೆ ಎಸ್ ಈ ಝಡ್ ಅಧಿಕಾರಿಗಳು ಒಪ್ಪಂದಕ್ಕಿಳಿಯುತ್ತಾರೆ. ಅಂತಿಮವಾಗಿ ಹೋರಾಟವನ್ನು ಕೈಬಿಟ್ಟು ಭೂಮಿಯನ್ನು ನೀಡಲು ರೈತರನ್ನು ಗುತ್ತಿನ ಯಜಮಾನ ಭುಜಂಗಶೆಟ್ಟರು ಒಪ್ಪಿಸುತ್ತಾರೆ. ಅದರೆ ಇದಕ್ಕೆ ಪ್ರತಿಯಾಗಿ ದಿಟ್ಟ ರೈತ ಗ್ರೆಗೋರಿ ಪತ್ರಾವೋಗೆ ವಿದ್ಯಾ ದಿನಕರ್ ಮತ್ತು ಅವರ ತಂಡದ ಬೆಂಬಲ ಸಿಕ್ಕಿದ್ದರಿಂದ ಗ್ರೆಗೋರಿ ಪತ್ರಾವೋ ಮಾತ್ರ ಭೂಮಿಯನ್ನು ನೀಡುವುದಿಲ್ಲ. ಕೊನೆಗೂ ಗ್ರೆಗೋರಿ ಪತ್ರಾವೋ ಭೂಮಿಯನ್ನು ಹೊರತುಪಡಿಸಿ ಇಡೀ ಊರಿನ ಕೃಷಿ ಭೂಮಿ ಎಸ್.ಇ.ಝಡ್ ಪಾಲಾಗುತ್ತದೆ. ಇದು ಸಮಾಜದಲ್ಲಿ ಸಾಂಪ್ರದಾಯಿಕ ಜಾತ್ಯಾಧಾರಿತ ಪ್ಯೂಡಲ್ ನಾಯಕತ್ವಕ್ಕೂ ಹೊಸಕಾಲದ ಚಿಂತನೆಗಳನ್ನಾಧರಿಸಿದ ಪರ್ಯಾಯ ನಾಯಕತ್ವಕ್ಕೂ ಇರುವ ವ್ಯತ್ಯಾಸ.

ಹೀಗೆ ಸಂತ್ರಸ್ತರಾದ ರೈತರಿಗೆ ಪರಿಹಾರದ ಜೊತೆಗೆ ಕುಳಾಯಿ ಗುಡ್ಡೆ ಎಂಬ ಗುಡ್ಡ ಪ್ರದೇಶದಲ್ಲಿ ಪುನರ್ವಸತಿ ಕಾಲನಿಯನ್ನು ನಿರ್ಮಿಸಲಾಗುತ್ತದೆ.kudubi 1 ಆದರೆ ಗುತ್ತಿನ ಮನೆತನದವರು ಕುಳಾಯಿ ಗುಡ್ಡ ಪುನರ್ವಸತಿ ಪ್ರದೇಶಕ್ಕೆ ಹೋಗಲು ಸಿದ್ದರಿಲ್ಲ. ನೂರಾರು ಸಂಖ್ಯೆಯ ಸಣ್ಣ ರೈತರ ಕುಟುಂಬಗಳನ್ನು ಕುಳಾಯಿ ಗುಡ್ಡಕ್ಕೆ ಶಿಫ್ಟ್ ಮಾಡಲಾಯಿತು. ಗುತ್ತಿನ ಮನೆತನದವರು ಕುಳಾಯಿ ಗುಡ್ಡಕ್ಕೆ ಶಿಫ್ಟ್ ಆಗದಿರುವುದು ಪ್ರತಿಷ್ಠೆಯ ಕಾರಣಕ್ಕಾದರೂ ನೆಪ ನೀಡಿದ್ದು ದೈವಸ್ಥಾನ ಮತ್ತು ಕಂಬಳದ್ದು. ಗುತ್ತಿನ ಮನೆತನ ಶಿಫ್ಟ್ ಆದರೆ ಗುತ್ತಿಗೆ ಸಂಬಂಧಿಸಿದ ದೈವಸ್ಥಾನ ಮತ್ತು ಕಂಬಳದ ಕತೆ ಏನು? ಆದುದರಿಂದ ಗದ್ದೆಗಳು ಇಲ್ಲದ ನೀರಿಲ್ಲದ ಗುಡ್ಡೆಯಲ್ಲಿ ಕಂಬಳ ಗದ್ದೆ ಮಾಡಲು ಅಸಾದ್ಯವಾಗಿರೋದ್ರಿಂದ ಗುತ್ತಿನ ಮನೆಗೆ ಪ್ರತ್ಯೇಕ ಪುನವರ್ವಸತಿ ಕಾಲನಿ ನೀಡಬೇಕು ಎಂದು ಆಗ್ರಹಿಸಿದರು. ರೈತರ ಜಮೀನನ್ನು ಕಿತ್ತುಕೊಳ್ಳಲು ಸಹಕರಿಸಿದ ಗುತ್ತಿನ ಮನೆಗಳಿಗೆ ಅಧಿಕಾರಿಗಳು ಅಷ್ಟಾದರೂ ಕೃತಜ್ಞತೆ ತೋರದಿದ್ದಲ್ಲಿ ಹೇಗೆ? ಗುತ್ತಿನ ಬಂಟರ ದೈವಸ್ಥಾನ ಮತ್ತು ಕಂಬಳ ಗದ್ದೆಗಾಗಿಯೇ ಬಡ ಮತ್ತು ಮುಗ್ದರೂ ಆಗಿರುವ, ಆದಿವಾಸಿಗಳ ಜೀವನ ಶೈಲಿ ಹೊಂದಿರುವ ಕುಡುಬಿಗಳ ಜಮೀನನ್ನು ಭೂಸ್ವಾಧೀನ ಮಾಡಲಾಯಿತು. ಕುಡುಬಿಗಳಿಗೆ ಕೃಷಿ ಬಿಟ್ಟು ಬೇರೇನೂ ಗೊತ್ತಿಲ್ಲ. ಅವರ ಕೃಷಿ ಭೂಮಿಯಲ್ಲಿ ಬೋರ್ ವೆಲ್ ಗಳಾಗಲೀ, ಪಂಪ್ ಸೆಟ್ ಗಳಾಗಲೀ ಇಲ್ಲ. ನೈಸರ್ಗಿಕವಾಗಿ ವರ್ಷದ ಎಲ್ಲಾ ದಿನಗಳಲ್ಲಿ ಹರಿಯುವ ಒರತೆಯ ತೋಡು ಅವರ ಕೃಷಿಗೆ ಆಧಾರವಾಗಿತ್ತು. 365 ದಿನವೂ ಹಸಿರಿನಿಂದ ನಳನಳಿಸುತ್ತಿದ್ದ ಕುಡುಬಿಗಳ ಕೃಷಿ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಗುತ್ತಿನ ಬಂಟರ ಕಂಬಳ ಗದ್ದೆ ನಿರ್ಮಿಸಲಾಗಿದೆ. ಈಗ ಕುಡುಬಿಗಳು ಕೃಷಿ ಭೂಮಿಯೂ ಇಲ್ಲದೆ, ಬೇರೆ ಕೆಲಸವೂ ಇಲ್ಲದೆ ಹಸಿವಿನಿಂದ ಇದ್ದಾರೆ. ಆದರೆ ಅವರ ಜಮೀನಿನಲ್ಲಿ ‘ಜನಪದ’ ಕಂಬಳ ಕ್ರೀಡೆ ನಡೆಯುತ್ತಿದೆ.

ದೈವಸ್ಥಾನ, ಕೋಲ, ನೇಮ ಎನ್ನುವುದು ನಮ್ಮ ಜನಪದ ಸಂಸ್ಕೃತಿ, ಕಿರು ಸಂಸ್ಕೃತಿ ಎಂಬುದೇನೋ ನಿಜ. ಆದರೆ ದೈವಸ್ಥಾನಗಳು, ಕೋಲ ನೇಮದ ಮಧ್ಯೆ ಬಲಾಡ್ಯರು ಮತ್ತು ಕೆಳವರ್ಗಗಳ ಸಣ್ಣ ಗೆರೆಯಿದೆ. ಅದನ್ನು ಅರಿತುಕೊಳ್ಳದೆ ಅದರ ಆಚರಣೆಗಳ ಪರ ಹೋರಾಟಕ್ಕಿಳಿಯುವುದು ಜಾತಿ ವಿನಾಶದ ದೃಷ್ಠಿಯಿಂದ ಅಪಾಯ. ಕೆಳ ವರ್ಗಗಳ ದೈವಸ್ಥಾನ, ಭೂತ ಕೋಲ ನೇಮಗಳಿಗೂ ಕಂಬಳಗಳಿಗೂ ಸಂಬಂಧವೇ ಇಲ್ಲ. ಆದರೆ ಅರಸೊತ್ತಿಗೆಯ ಆಶ್ರಯದಲ್ಲಿರುವ ರಾಜನ್ ದೈವಗಳಿಗೂ ಕಂಬಳಗಳಿಗೂ ಸಂಬಂಧವಿದೆ. ಅಂತಹ ಯಜಮಾನಿಕೆಯು ಕಂಬಳದ ಮರೆಯಲ್ಲಿ ತನ್ನ ಸ್ಥಾನಮಾನವನ್ನು ಯಥಾಸ್ಥಿತಿಯಲ್ಲಿಡಲು ಬಯಸುತ್ತದೆ.

ಈ ರೀತಿ ಇತಿಹಾಸ ಮತ್ತು ವರ್ತಮಾನ ಕಾಲದಲ್ಲಿ ಕಂಬಳ ಎಂಬುದು ಶೋಷಕರ ಕ್ರೀಡೆಯೇ ಆಗಿದೆ. ಆದುದರಿಂದ ಸಮಾನತೆ ಬಯಸುವ ಪ್ರಗತಿಪರರು ಕಂಬಳದಿಂದ ಜಾತಿಯನ್ನು ತೊಡೆಯಬೇಕು ಎಂದಿದ್ದರೆ ಅವರ ಆದ್ಯತೆಯ ಹೋರಾಟ ಜಾತಿ ವಿನಾಶ ಮತ್ತು ಅರಮನೆ, ಗುತ್ತುಗಳ ಅಧಿಕಾರವನ್ನು ಹಿಂದುಳಿದವರಿಗೆ ನೀಡುವಂತೆ ಮಾಡುವುದೇ ಹೊರತು ಅಂತಹ ಶಕ್ತಿಗಳ ಬಲವರ್ಧಿಸುವ ಕಂಬಳದ ಪರ ಅಲ್ಲ.


ಚಿತ್ರಗಳು

೧. ಮುಲ್ಕಿ ಅರಸರ ಕಂಬಳ ಉದ್ಘಾಟಿಸಿ, ಉಚ್ಚ ಪೀಠದಲ್ಲಿ ಕುಳಿತು ಮುಲ್ಕಿ ಸೀಮೆಯ ಅರಸರು ವೀಕ್ಷಿಸುತ್ತಿರುವುದು.

೨. ಕಂಬಳ ಗದ್ದೆಯ ಎದುರು ದಲಿತರು ಡೋಲು ಬಡಿಯುತ್ತಿರುವುದು. 

೩. ಈಗ ಗುತ್ತಿನ ಕಂಬಳದ ಗದ್ದೆಯಾಗಿರುವ ಕುಡುಬಿಗಳ ಕೃಷಿ ಜಮೀನಿನ 2005 ರ ಚಿತ್ರ.


ಕಂಬಳ ಮತ್ತು ಫ್ಯೂಡಲ್ ವ್ಯವಸ್ಥೆಯ ಹುನ್ನಾರ


-ಎನ್.ಎಸ್


 

ಜಲ್ಲಿಕಟ್ಟು ಎಂಬ ಹಿಂಸಾವಿನೋದಿ ಕ್ರೀಡೆಯ ಬಗ್ಗೆ ಜನರ ಸಮೂಹ ಸನ್ನಿಗೆ ಕೇಂದ್ರ ಸರಕಾರ ಮಣಿದಿರುವ ಬೆನ್ನಿಗೇ ತುಳುವನಾಡಿನkambala-mangalore ಕಂಬಳದ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಗಳು ಪ್ರಾರಂಭವಾಗಿವೆ. ಕಂಬಳ ಎನ್ನುವುದು ತುಳುವರ ಜನಪದ ಕ್ರೀಡೆ, ತುಳುವರ ಸಾಂಸ್ಕೃತಿಕ ಆಸ್ಮಿತೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಯಂತಿರುವ ಕಂಬಳದ ಪರ ಹೋರಾಟಗಳಲ್ಲಿ ಜಾತಿ ಆಧಾರಿತ ಅಸಮಾನತೆ ಮತ್ತು ಸಾಂಸ್ಕೃತಿಕ ಯಜಮಾನ್ಯದ ಪಾರಂಪರಿಕ ಆಚರಣೆಗಳನ್ನು ಇನ್ನೂ ಜಾರಿಯಲ್ಲಿಡುವ ವ್ಯವಸ್ಥಿತ ಹುನ್ನಾರವಿದೆ. ಒಂದು ನಿರ್ದಿಷ್ಟ ಜಾತಿಯ ಮೆರೆದಾಟಕ್ಕೆ ಮತ್ತು ಕೆಳಜಾತಿ, ಕೆಳವರ್ಗಗಳ ದಬ್ಬಾಳಿಕೆಗೆ ಮಾಧ್ಯಮವಾಗಿದ್ದ ಕಂಬಳವನ್ನು ಇಡೀ ತುಳುನಾಡಿನ ಸಾಂಸ್ಕೃತಿಕ ಐಡೆಂಟಿಟಿಯ ರೂಪದಲ್ಲಿ ಬಿಂಬಿಸಲು ಹೊರಟಿರುವ ಪ್ರಯತ್ನಗಳು ಆಘಾತಕಾರಿಯಾಗಿವೆ.

ರೈತರು ತಮ್ಮ ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ, ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದರ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಕಂಬಳದ ಸಮರ್ಥನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಬಳದಲ್ಲಿ ಕಂಡುಬರುವ ‘ಸ್ಪರ್ಧೆ’ ಅಥವಾ ‘ಕ್ರೀಡೆ’ ಅನ್ನುವುದು ಕುಂಟಾಬಿಲ್ಲೆ ಅಥವಾ ಕಬ್ಬಡ್ಡಿಯಂತಹ ಸಹಜ ಮನೋರಂಜಕ ಪಂದ್ಯಾಟವಲ್ಲ. ಬದಲಿಗೆ ಅದು ಉಳ್ಳವರ ಆಟ- ಮೇಲಾಟದ, ಪೌರುಷದ ಮತ್ತು ಯಜಮಾನಿಕೆಯ ಅಭಿವ್ಯಕ್ತಿಯಾಗಿದೆ. ಮೂಲದಲ್ಲಿ ಕಂಬಳ ಬಂಟರ ಗುತ್ತಿನ ಅಧಿಕಾರವನ್ನು ಪ್ರತಿಷ್ಠಾಪಿಸಲು ಮತ್ತು ಅದಕ್ಕೆ ಸಾಂಸ್ಕೃತಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಸೃಷ್ಠಿಯಾದ ಒಂದು ಆಚರಣೆಯಾಗಿದೆ. ಅಂದರೆ ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಅಧ್ಯಯನಾರ್ಹ ವಿಚಾರವಾಗಿದೆ.  

ಮೂಲದಲ್ಲಿ ಕಂಬಳದ ಕೋಣಗಳು ಬಂಟರ ಗುತ್ತಿನ ಮನೆಗಳಲ್ಲಿ ಮಾತ್ರ ಇರುತ್ತಿದ್ದವು. ಉಳುಮೆ ಮಾಡದ ಕೋಣಗಳನ್ನುkambala-2 ಕಂಬಳಕ್ಕಾಗಿಯೇ ಸಾಕುವುದು ಗುತ್ತಿನ ಮನೆಯ ಫ್ಯಾಶನ್ ಆಗಿತ್ತು. ದಷ್ಟಪುಷ್ಟವಾಗಿ ಕೊಬ್ಬಿರುತ್ತಿದ್ದ ಕಂಬಳದ ಕೋಣಗಳು ಗುತ್ತಿನ ಮನೆಗಳ ಗತ್ತಿಗೆ, ಪೌರುಷಕ್ಕೆ ಸಾಕ್ಷಿಯಾಗಿರುತ್ತಿದ್ದವು. ಅಂತಹ ಕೋಣಗಳನ್ನು ಸಾಕಿ ಸಲಹುವ ತಾಕತ್ತಿಲ್ಲದ ಬಡ ಹಾಗೂ  ಸಣ್ಣ ರೈತರ, ಒಕ್ಕಲುದಾರರ ಮತ್ತು ಕೆಳಜಾತಿಗಳ ನಡುವೆ ಕಂಬಳ ಬಂಟರ ಗುತ್ತಿನ ಮನೆಗಳಿಗೆ ಕಲಿತನದ ಹಿರಿಮೆಯನ್ನೂ, ಫ್ಯೂಡಲ್ ಅಧಿಕಾರದ ಛತ್ರವನ್ನೂ ನೀಡುತಿತ್ತು; ಮತ್ತು ಇದೇ ಫ್ಯೂಡಲ್ ಅಧಿಕಾರದ ಬಲದಲ್ಲಿ ಗುತ್ತಿನ ಮನೆಗಳು ಸಮುದಾಯಗಳ ಸಂಪನ್ಮೂಲ ಹಾಗೂ ಉತ್ಪಾದನೆಯ ಮೇಲೂ ನಿಯಂತ್ರಣ ಸಾಧಿಸುತ್ತಿದ್ದವು. ಕಂಬಳದ ಕೋಣಗಳನ್ನು ಕೊಬ್ಬಿಸಲು, ಅವುಗಳಿಗೆ ಅಕ್ಕಿಯಲ್ಲಿ ಗಂಜಿ ಮಾಡಿ ತಿನ್ನಿಸಲು ದ್ರವ್ಯಗಳನ್ನು ಒಕ್ಕಲಿನ ರೈತರಿಂದ ಸಂಗ್ರಹಿಸಿಲಾಗುತ್ತಿತ್ತು. ಕೋಣಗಳಿಗೆ ತೆಂಗಿನ ಎಣ್ಣೆ ಹಚ್ಚಿ ರೈಕೆ ಮಾಡಲೆಂದೇ ಬಿಲ್ಲವರು, ದಲಿತರು ಮತ್ತಿತರ ಕೆಳವರ್ಗಗಳ ಹತ್ತಾರು ಸಂಖ್ಯೆಯ ಆಳುಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಒಕ್ಕಲುದಾರ ಬಡ ರೈತ ಹಾಗೂ ಕೆಳಜಾತಿಗಳ ಶ್ರಮ ಹಾಗೂ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು ಕಂಬಳ ಒಂದು ಮಾಧ್ಯಮದಂತೆ ಬಳಕೆಯಾಗುತಿತ್ತು. ಹೀಗಾಗಿಯೇ ಆ ಕಾಲದಲ್ಲಿ ರೈತ ಹಸಿವಿನಿಂದ ಸಾಯುತ್ತಿದ್ದರೂ ಊರ ಗುತ್ತಿನ ಕಂಬಳದ ಕೋಣಗಳಿಗೆ ಅಕ್ಕಿ ಗಂಜಿ, ಹುರುಳಿ ಕಾಳಿನ ಗಂಜಿಗೆ ಕೊರತೆಯಾಗುತ್ತಿರಲಿಲ್ಲ.

ಹೀಗೆ ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ kambala-5 ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು. ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ‘ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು. ‘ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊರಗರು ಓಡಿ ಪರಿಶೀಲನೆಯನ್ನು ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.

ಸದ್ಯ ಕರಾವಳಿಯ ಹಲವೆಡೆ ನಡೆಯುತ್ತಿರುವ ಕಂಬಳದ ಸಂಚಾಲಕ ಸಮಿತಿಗಳನ್ನು ನೋಡಿದಲ್ಲಿ ಅದರ ವರ್ಗೀಯ ಮತ್ತು ಜಮೀನ್ದಾರಿkambala-1 ಸ್ವರೂಪ ಮನದಟ್ಟಾಗುತ್ತದೆ. ಕರಾವಳಿಯ ಬಾರಾಡಿ ಬೀಡು (ಕಾರ್ಕಳದ ಸಮೀಪ), ಈದು (ಕಾರ್ಕಳ), ಮಿಯಾರು (ಕಾರ್ಕಳದ ಸಮೀಪ), ಐಕಳ ಬಾವ (ಮೂಡುಬಿದಿರೆ-ಮುಲ್ಕಿ ಮಧ್ಯೆ), ಬಂಗಾಡಿ (ಬೆಳ್ತಂಗಡಿ), ಹೊಕ್ಯಾಡಿಗೋಳಿ (ಬಂಟ್ವಾಳ), ಪಜೀರು (ಬಂಟ್ವಾಳ), ಪಿಲಿಕುಳ ನಿಸರ್ಗಧಾಮ (ಮಂಗಳೂರ ಸಮೀಪ), ಜಪ್ಪಿನಮೊಗರು (ಮಂಗಳೂರ ಸಮೀಪ), ತಲಪಾಡಿ ಪಂಜಾಳ (ಮಂಗಳೂರ ಸಮೀಪ), ಅಲ್ತಾರು (ಉಡುಪಿ), ಕಟಪಾಡಿ (ಉಡುಪಿ), ಅಡ್ವೆ, ನಂದಿಕೂರು, ಮೂಡುಬಿದಿರೆ, ಮುಲ್ಕಿ, ವೇಣೂರು, ಉಪ್ಪಿನಂಗಡಿ, ಪುತ್ತೂರು, ತೋನ್ಸೆಯಲ್ಲಿ ಕಂಬಳಗಳು ನಡೆಯುತ್ತಿದೆ. ಎಲ್ಲಾ ಕಂಬಳಗಳಲ್ಲಿ ಒಂದೋ ಬಂಟರು ಮುಖ್ಯಸ್ಥರಾಗಿರುತ್ತಾರೆ ಅಥವಾ ಜೈನರು ಸಂಚಾಲಕರಾಗಿರುತ್ತಾರೆ. ಕೋಣ ಓಡಿಸುವವರು, ಕೋಣದ ಚಾಕರಿ ಮಾಡುವವರು, ಕಂಬಳದ ಸ್ವಯಂಸೇವಕರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮುಲ್ಕಿ ಪಯ್ಯೊಟ್ಟು ಸದಾಶಿ ಸಾಲಾನ್ ಹೊರತುಪಡಿಸಿದಲ್ಲಿ ಬಹುತೇಕ ಕೋಣಗಳ ಮಾಲೀಕರು ಮಾತ್ರ ಈಗಲೂ ಗುತ್ತಿನ ಬಂಟರೇ ಆಗಿದ್ದಾರೆ ಎಂಬುದು ಗಮನಾರ್ಹ.

ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ.‌ ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ.