Daily Archives: January 22, 2017

ಕಂಬಳ ಮತ್ತು ಫ್ಯೂಡಲ್ ವ್ಯವಸ್ಥೆಯ ಹುನ್ನಾರ


-ಎನ್.ಎಸ್


 

ಜಲ್ಲಿಕಟ್ಟು ಎಂಬ ಹಿಂಸಾವಿನೋದಿ ಕ್ರೀಡೆಯ ಬಗ್ಗೆ ಜನರ ಸಮೂಹ ಸನ್ನಿಗೆ ಕೇಂದ್ರ ಸರಕಾರ ಮಣಿದಿರುವ ಬೆನ್ನಿಗೇ ತುಳುವನಾಡಿನkambala-mangalore ಕಂಬಳದ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಗಳು ಪ್ರಾರಂಭವಾಗಿವೆ. ಕಂಬಳ ಎನ್ನುವುದು ತುಳುವರ ಜನಪದ ಕ್ರೀಡೆ, ತುಳುವರ ಸಾಂಸ್ಕೃತಿಕ ಆಸ್ಮಿತೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಯಂತಿರುವ ಕಂಬಳದ ಪರ ಹೋರಾಟಗಳಲ್ಲಿ ಜಾತಿ ಆಧಾರಿತ ಅಸಮಾನತೆ ಮತ್ತು ಸಾಂಸ್ಕೃತಿಕ ಯಜಮಾನ್ಯದ ಪಾರಂಪರಿಕ ಆಚರಣೆಗಳನ್ನು ಇನ್ನೂ ಜಾರಿಯಲ್ಲಿಡುವ ವ್ಯವಸ್ಥಿತ ಹುನ್ನಾರವಿದೆ. ಒಂದು ನಿರ್ದಿಷ್ಟ ಜಾತಿಯ ಮೆರೆದಾಟಕ್ಕೆ ಮತ್ತು ಕೆಳಜಾತಿ, ಕೆಳವರ್ಗಗಳ ದಬ್ಬಾಳಿಕೆಗೆ ಮಾಧ್ಯಮವಾಗಿದ್ದ ಕಂಬಳವನ್ನು ಇಡೀ ತುಳುನಾಡಿನ ಸಾಂಸ್ಕೃತಿಕ ಐಡೆಂಟಿಟಿಯ ರೂಪದಲ್ಲಿ ಬಿಂಬಿಸಲು ಹೊರಟಿರುವ ಪ್ರಯತ್ನಗಳು ಆಘಾತಕಾರಿಯಾಗಿವೆ.

ರೈತರು ತಮ್ಮ ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ, ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದರ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಕಂಬಳದ ಸಮರ್ಥನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಬಳದಲ್ಲಿ ಕಂಡುಬರುವ ‘ಸ್ಪರ್ಧೆ’ ಅಥವಾ ‘ಕ್ರೀಡೆ’ ಅನ್ನುವುದು ಕುಂಟಾಬಿಲ್ಲೆ ಅಥವಾ ಕಬ್ಬಡ್ಡಿಯಂತಹ ಸಹಜ ಮನೋರಂಜಕ ಪಂದ್ಯಾಟವಲ್ಲ. ಬದಲಿಗೆ ಅದು ಉಳ್ಳವರ ಆಟ- ಮೇಲಾಟದ, ಪೌರುಷದ ಮತ್ತು ಯಜಮಾನಿಕೆಯ ಅಭಿವ್ಯಕ್ತಿಯಾಗಿದೆ. ಮೂಲದಲ್ಲಿ ಕಂಬಳ ಬಂಟರ ಗುತ್ತಿನ ಅಧಿಕಾರವನ್ನು ಪ್ರತಿಷ್ಠಾಪಿಸಲು ಮತ್ತು ಅದಕ್ಕೆ ಸಾಂಸ್ಕೃತಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಸೃಷ್ಠಿಯಾದ ಒಂದು ಆಚರಣೆಯಾಗಿದೆ. ಅಂದರೆ ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಅಧ್ಯಯನಾರ್ಹ ವಿಚಾರವಾಗಿದೆ.  

ಮೂಲದಲ್ಲಿ ಕಂಬಳದ ಕೋಣಗಳು ಬಂಟರ ಗುತ್ತಿನ ಮನೆಗಳಲ್ಲಿ ಮಾತ್ರ ಇರುತ್ತಿದ್ದವು. ಉಳುಮೆ ಮಾಡದ ಕೋಣಗಳನ್ನುkambala-2 ಕಂಬಳಕ್ಕಾಗಿಯೇ ಸಾಕುವುದು ಗುತ್ತಿನ ಮನೆಯ ಫ್ಯಾಶನ್ ಆಗಿತ್ತು. ದಷ್ಟಪುಷ್ಟವಾಗಿ ಕೊಬ್ಬಿರುತ್ತಿದ್ದ ಕಂಬಳದ ಕೋಣಗಳು ಗುತ್ತಿನ ಮನೆಗಳ ಗತ್ತಿಗೆ, ಪೌರುಷಕ್ಕೆ ಸಾಕ್ಷಿಯಾಗಿರುತ್ತಿದ್ದವು. ಅಂತಹ ಕೋಣಗಳನ್ನು ಸಾಕಿ ಸಲಹುವ ತಾಕತ್ತಿಲ್ಲದ ಬಡ ಹಾಗೂ  ಸಣ್ಣ ರೈತರ, ಒಕ್ಕಲುದಾರರ ಮತ್ತು ಕೆಳಜಾತಿಗಳ ನಡುವೆ ಕಂಬಳ ಬಂಟರ ಗುತ್ತಿನ ಮನೆಗಳಿಗೆ ಕಲಿತನದ ಹಿರಿಮೆಯನ್ನೂ, ಫ್ಯೂಡಲ್ ಅಧಿಕಾರದ ಛತ್ರವನ್ನೂ ನೀಡುತಿತ್ತು; ಮತ್ತು ಇದೇ ಫ್ಯೂಡಲ್ ಅಧಿಕಾರದ ಬಲದಲ್ಲಿ ಗುತ್ತಿನ ಮನೆಗಳು ಸಮುದಾಯಗಳ ಸಂಪನ್ಮೂಲ ಹಾಗೂ ಉತ್ಪಾದನೆಯ ಮೇಲೂ ನಿಯಂತ್ರಣ ಸಾಧಿಸುತ್ತಿದ್ದವು. ಕಂಬಳದ ಕೋಣಗಳನ್ನು ಕೊಬ್ಬಿಸಲು, ಅವುಗಳಿಗೆ ಅಕ್ಕಿಯಲ್ಲಿ ಗಂಜಿ ಮಾಡಿ ತಿನ್ನಿಸಲು ದ್ರವ್ಯಗಳನ್ನು ಒಕ್ಕಲಿನ ರೈತರಿಂದ ಸಂಗ್ರಹಿಸಿಲಾಗುತ್ತಿತ್ತು. ಕೋಣಗಳಿಗೆ ತೆಂಗಿನ ಎಣ್ಣೆ ಹಚ್ಚಿ ರೈಕೆ ಮಾಡಲೆಂದೇ ಬಿಲ್ಲವರು, ದಲಿತರು ಮತ್ತಿತರ ಕೆಳವರ್ಗಗಳ ಹತ್ತಾರು ಸಂಖ್ಯೆಯ ಆಳುಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಒಕ್ಕಲುದಾರ ಬಡ ರೈತ ಹಾಗೂ ಕೆಳಜಾತಿಗಳ ಶ್ರಮ ಹಾಗೂ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು ಕಂಬಳ ಒಂದು ಮಾಧ್ಯಮದಂತೆ ಬಳಕೆಯಾಗುತಿತ್ತು. ಹೀಗಾಗಿಯೇ ಆ ಕಾಲದಲ್ಲಿ ರೈತ ಹಸಿವಿನಿಂದ ಸಾಯುತ್ತಿದ್ದರೂ ಊರ ಗುತ್ತಿನ ಕಂಬಳದ ಕೋಣಗಳಿಗೆ ಅಕ್ಕಿ ಗಂಜಿ, ಹುರುಳಿ ಕಾಳಿನ ಗಂಜಿಗೆ ಕೊರತೆಯಾಗುತ್ತಿರಲಿಲ್ಲ.

ಹೀಗೆ ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ kambala-5 ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು. ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ‘ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು. ‘ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊರಗರು ಓಡಿ ಪರಿಶೀಲನೆಯನ್ನು ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.

ಸದ್ಯ ಕರಾವಳಿಯ ಹಲವೆಡೆ ನಡೆಯುತ್ತಿರುವ ಕಂಬಳದ ಸಂಚಾಲಕ ಸಮಿತಿಗಳನ್ನು ನೋಡಿದಲ್ಲಿ ಅದರ ವರ್ಗೀಯ ಮತ್ತು ಜಮೀನ್ದಾರಿkambala-1 ಸ್ವರೂಪ ಮನದಟ್ಟಾಗುತ್ತದೆ. ಕರಾವಳಿಯ ಬಾರಾಡಿ ಬೀಡು (ಕಾರ್ಕಳದ ಸಮೀಪ), ಈದು (ಕಾರ್ಕಳ), ಮಿಯಾರು (ಕಾರ್ಕಳದ ಸಮೀಪ), ಐಕಳ ಬಾವ (ಮೂಡುಬಿದಿರೆ-ಮುಲ್ಕಿ ಮಧ್ಯೆ), ಬಂಗಾಡಿ (ಬೆಳ್ತಂಗಡಿ), ಹೊಕ್ಯಾಡಿಗೋಳಿ (ಬಂಟ್ವಾಳ), ಪಜೀರು (ಬಂಟ್ವಾಳ), ಪಿಲಿಕುಳ ನಿಸರ್ಗಧಾಮ (ಮಂಗಳೂರ ಸಮೀಪ), ಜಪ್ಪಿನಮೊಗರು (ಮಂಗಳೂರ ಸಮೀಪ), ತಲಪಾಡಿ ಪಂಜಾಳ (ಮಂಗಳೂರ ಸಮೀಪ), ಅಲ್ತಾರು (ಉಡುಪಿ), ಕಟಪಾಡಿ (ಉಡುಪಿ), ಅಡ್ವೆ, ನಂದಿಕೂರು, ಮೂಡುಬಿದಿರೆ, ಮುಲ್ಕಿ, ವೇಣೂರು, ಉಪ್ಪಿನಂಗಡಿ, ಪುತ್ತೂರು, ತೋನ್ಸೆಯಲ್ಲಿ ಕಂಬಳಗಳು ನಡೆಯುತ್ತಿದೆ. ಎಲ್ಲಾ ಕಂಬಳಗಳಲ್ಲಿ ಒಂದೋ ಬಂಟರು ಮುಖ್ಯಸ್ಥರಾಗಿರುತ್ತಾರೆ ಅಥವಾ ಜೈನರು ಸಂಚಾಲಕರಾಗಿರುತ್ತಾರೆ. ಕೋಣ ಓಡಿಸುವವರು, ಕೋಣದ ಚಾಕರಿ ಮಾಡುವವರು, ಕಂಬಳದ ಸ್ವಯಂಸೇವಕರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮುಲ್ಕಿ ಪಯ್ಯೊಟ್ಟು ಸದಾಶಿ ಸಾಲಾನ್ ಹೊರತುಪಡಿಸಿದಲ್ಲಿ ಬಹುತೇಕ ಕೋಣಗಳ ಮಾಲೀಕರು ಮಾತ್ರ ಈಗಲೂ ಗುತ್ತಿನ ಬಂಟರೇ ಆಗಿದ್ದಾರೆ ಎಂಬುದು ಗಮನಾರ್ಹ.

ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ.‌ ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ.