ಪಿನರಾಯಿ ವಿಜಯನ್ ಮತ್ತು ಸಂಘಪರಿವಾರದ ಬಿಲ್ಲವ ವಿರೋಧಿ ಅಜೆಂಡಾ


-ಎನ್.ಎಸ್


 

ಫೆಬ್ರವರಿ 25 ರಂದು ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಪಿನರಾಯಿ ವಿಜಯನ್ ಗೆPinarayi-Vijayan-cpim ಸಂಘಪರಿವಾರ ವಿರೋಧ ವ್ಯಕ್ತಪಡಿಸಿದೆ. ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸಲಿರುವ ದಿನವಾದ ಫೆಬ್ರವರಿ 25 ರಂದು ಸಂಘಪರಿವಾರ ಜಿಲ್ಲಾ ಬಂದ್ ಗೆ ಕರೆ ನೀಡಿದೆ. ಸ್ಪರ್ಧಾತ್ಮಕ ರಾಜಕೀಯದ ಹಿನ್ನಲೆಯಲ್ಲಿ ಇಂತಹ ವಿರೋಧವನ್ನು ಸಹಜ ರಾಜಕೀಯ ನಡೆಯೆಂದು ಪರಿಗಣಿಸಬಹುದಿತ್ತೇನೋ. ಆದರೆ ಸದ್ಯದ ಸಂದರ್ಭದಲ್ಲಿ ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಪರಿವಾರ ಜಿದ್ದಿನ ವಿರೋಧವನ್ನು ಒಡ್ಡುವಲ್ಲಿ ಕರಾವಳಿಯ ಬಹುಸಂಖ್ಯಾತ ಹಿಂದುಳಿದ ಸಮುದಾಯ ಬಿಲ್ಲವರನ್ನು ರಾಜಕೀಯ ಕ್ಷೇತ್ರದಲ್ಲಿ ಅಪ್ರಮುಖರನ್ನಾಗಿಸುವ, ದಮನಿಸುವ ಕಾರ್ಯಸೂಚಿ ಅಡಗಿದೆ.

ಹಾಗೆ ನೋಡಿದಲ್ಲಿ ಪಿನರಾಯಿ ವಿಜಯನ್ ಭಾಗವಹಿಸುವ ಫೆಬ್ರವರಿ 25 ರ ಐಕ್ಯತಾ ಸಮಾವೇಶ ಹಿಂದುಳಿದ ವರ್ಗಗಳ, ಅದರಲ್ಲೂ ವಿಶೇಷವಾಗಿ ಬಿಲ್ಲವರ ಸ್ವಾಭಿಮಾನದ ಸಮಾವೇಶವಾಗಿದೆ. ದಕ್ಷಿಣ ಕನ್ನಡದ ಬಿಲ್ಲವರು ಮತ್ತು ಕೆಳವರ್ಗಗಳಿಗೆ ಸ್ವಾಭಿಮಾನದ ಬದುಕು ರೂಪಿಸಿದ ನಾರಾಯಣ ಗುರುಗಳ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ವಿಜಯನ್ ಈ ಸಂದರ್ಭದಲ್ಲಿ ಕರಾವಳಿ ಜೊತೆ ಸಂವಾದ ನಡೆಸುವುದು ಹೆಚ್ಚು ಅರ್ಥಪೂರ್ಣ. ಚಳುವಳಿಗಳ ಹಿನ್ನಲೆಯಿಂದ ರಾಜಕೀಯ ನೆಲೆ ಕಂಡುಕೊಂಡು ಮುಖ್ಯಮಂತ್ರಿ ಗಾದಿಗೇರಿರುವ ಹಿಂದುಳಿದ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ಕರಾವಳಿಯ ಅಧಿಕಾರ ಕೇಂದ್ರದಲ್ಲಿ ನ್ಯಾಯಯುತ ಪ್ರಾತಿನಿಧ್ಯ ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುವ ಬಿಲ್ಲವ ಮೊದಲಾದ ಹಿಂದುಳಿದ ಸಮುದಾಯಗಳ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ದನಿಯಾಗಬಲ್ಲರು. ರಾಜಕೀಯ ಆಟ ಮೇಲಾಟ, ಸಂಘರ್ಷ ಮತ್ತು ಕೋಮು ವೈಷಮ್ಯಗಳಲ್ಲಿ ಮಾತ್ರವೇ ಕಾಲಾಳುಗಳಾಗಿ ಬಳಕೆಯಾಗುತ್ತಿರುವ ಬಿಲ್ಲವ ಸಮುದಾಯಕ್ಕೆ ಪಿನರಾಯಿ ಭೇಟಿ ಅದರ ಅಗಾಧ ರಾಜಕೀಯ ಸಾಧ್ಯತೆಗಳ ದೃಷ್ಟಿಯಿಂದ ಬಹಳ ಮಹತ್ವದ್ದಾದದ್ದು. ಇದೇ ಕಾರಣಕ್ಕಾಗಿ ಸಂಘಪರಿವಾರ ಪಿನರಾಯಿ ವಿಜಯನ್ ಗೆ ಪ್ರತಿಭಟನೆಯ ಮೂಲಕ ಸ್ವಾಗತಕೋರಲು ಸಿದ್ಧತೆ ನಡೆಸಿದೆ.

ನಾರಾಯಣ ಗುರುಗಳು ಮುನ್ನಡೆಸಿದ್ದ ಸಮಾಜ ಸುಧಾರಣಾ ಚಳುವಳಿ ಕರಾವಳಿಯ ಸಾಮಾಜಿಕ ಸಂರಚನೆಯಲ್ಲಿ ಹಲವು ಕ್ರಾಂತಿಕಾರಿ ಪಲ್ಲಟಗಳಿಗೆnarayana-guru ಕಾರಣವಾಗಿತ್ತು. ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳಿಗೆ ವೈದಿಕರು ಅರ್ಚಕರಾಗಿರುವ ಮೇಲ್ವರ್ಗದ ಆಡಳಿತದ ದೇವಸ್ಥಾನಗಳಿಗೆ ಪ್ರವೇಶ ನಿಷಿದ್ಧವಾಗಿದ್ದ ಸಂಧರ್ಭದಲ್ಲಿ ಬಿಲ್ಲವರ ಸ್ವಾಭಿಮಾನದ ದ್ಯೋತಕವಾಗಿ ನಾರಾಯಣ ಗುರುಗಳು ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ನಿರ್ಮಿಸಿದ್ದರು. ಸಾಮಾಜಿಕ ಸಬಲೀಕರಣದ ಮುಂದುವರಿದ ಭಾಗವಾಗಿ ಬಿಲ್ಲವರ ಸಂಘಗಳು, ಬಿಲ್ಲವ ಯುವ ವಾಹಿನಿ, ಬಿಲ್ಲವರ ಬ್ಯಾಂಕುಗಳು ಸ್ಥಾಪನೆಯಾದವು. ಬಿಲ್ಲವರ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ದಾಖಲಾದದ್ದು ಭೂಸುಧಾರಣಾ ಕಾನೂನು ಬಂದ ತರುವಾಯದಲ್ಲಿ. ಅರಸು ಜಾರಿಗೆ ತಂದ ಕ್ರಾಂತಿಕಾರಿ ಭೂಸುದಾರಣೆ ಕಾಯಿದೆಯು ಬಿಲ್ಲವರಿಗೆ ಭೂಮಿಯ ಒಡೆತನವನ್ನು ನೀಡಿತು. ಇನ್ನೂ ಕೈಗಾರೀಕರಣಕ್ಕೆ ಒಳಗಾಗಿರದ ಸಮಾಜದಲ್ಲಿ ಭೂಒಡೆತನ ಎಂಬುವುದು ಸಮುದಾಯಗಳ ಸಾಮಾಜಿಕ ಆಸ್ಮಿತೆಯ ಬಹಳ ಪ್ರಮುಖ ಅಂಶವಾಗಿರುತ್ತದೆ. ಆದ್ದರಿಂದಲೇ ಭೂಸುಧಾರಣಾ ಕಾನೂನು ಕರಾವಳಿಯ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಬಿಲ್ಲವರು ಬೆಳೆಯಲು ಪೂರಕ ವಾತಾವರಣ ನಿರ್ಮಿಸಿತು. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ದೇಶದಾದ್ಯಂತ ಭೂಸುಧಾರಣೆಯು ಇನ್ನೂ ವ್ಯಾಪಕವಾಗಿ ಅನುಷ್ಠಾನವಾಗಿರದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಅದರ ಯಶಸ್ಸಿಗೆ ಶ್ರಮಿಸಿದ್ದು ಇಲ್ಲಿಯ ಕಮ್ಯುನಿಷ್ಟರು. ಬಿಲ್ಲವರಿಗೆ ಭೂಮಿಯನ್ನು ಕೊಡಿಸುವಲ್ಲಿ ಕರಾವಳಿ ಭಾಗದ ಕಮ್ಯುನಿಷ್ಟರ ಪಾತ್ರ ದೊಡ್ಡದು. ಪಕ್ಷದ ಮಟ್ಟದಲ್ಲಿ ಸೈದ್ಧಾಂತಿಕವಾಗಿ ಜಾತಿಯ ಸಮೀಕರಣವನ್ನು ಒಪ್ಪಿರದಿದ್ದರೂ ಅಂದು ಕರಾವಳಿ ಭಾಗದ ಕಮ್ಯುನಿಷ್ಟ್ ಪಕ್ಷಗಳಲ್ಲಿದ್ದ ಹಿಂದುಳಿದ ವರ್ಗಗಳ ನಾಯಕತ್ವ ಅಂತಹ ಸಾಧನೆಗೆ ಕಾರಣವಾಗಿತ್ತು. ಈಗ ಸಾಂಸ್ಕೃತಿಕವಾಗಿ ಕರಾವಳಿಯ ಅವಳಿಯಂತಿರುವ ಕೇರಳದ ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವ ಬಹುಮಟ್ಟಿಗೆ ಹಿಂದುಳಿದ ವರ್ಗಗಳ ಕೈಯಲ್ಲಿದೆ. ಇಂತಹ ಸನ್ನಿವೇಶದಲ್ಲಿ, ಕೇರಳ ಕಮ್ಯುನಿಷ್ಟ್ ಪಕ್ಷದ ಈಳವ ನಾಯಕತ್ವ ಕರಾವಳಿಯಲ್ಲಿ ಬಿಲ್ಲವರ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಬಹುದೆನ್ನುವ ಆತಂಕದಲ್ಲಿ ಸಂಘಪರಿವಾರ ಪಿನರಾಯಿ ವಿಜಯನ್ ಅವರ ಭೇಟಿಗೆ ಇನ್ನಿಲ್ಲದ ವಿರೋಧವನ್ನು ಒಡ್ಡುತ್ತಿದೆ. ಯಾಕೆಂದರೆ ಅಂತಹ ಸಾಧ್ಯತೆಗಳು ಬಿಲ್ಲವರನ್ನು ದಾಳವನ್ನಾಗಿ ಬಳಸುವ ಸಂಘಪರಿವಾರದ ಕೋಮು ರಾಜಕೀಯಕ್ಕೆ ಪ್ರತಿಯಾಗಿ ನಿಲ್ಲುತ್ತವೆ.

ಸಂಘಪರಿವಾರದ ಕೋಮು ರಾಜಕಾರಣದ ಫಲವಾಗಿ ಇಂದು ಅಸಂಖ್ಯ ಬಿಲ್ಲವರು ಜೈಲುಗಳಲ್ಲಿ ಕೊಳೆಯುವಂತಾಗಿದೆ. ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್ ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಅದೇ ಬಿಲ್ಲವ ಸಮುದಾಯಯದ ರಾಜಕೀಯ ಸಾಧ್ಯತೆಗಳಿಗೆ ಪ್ರತಿನಿಧಿಯಂತಿರುವ ಪಿನರಾಯಿ ವಿಜಯನ್ ಎಂಬ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ಷೇತ್ರವಾಗಿದ್ದ ಈಳವ ಸಮುದಾಯದ ನಾಯಕನ ಆಗಮನಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಪಿನರಾಯಿ ವಿಜಯನ್ ಮಂಗಳೂರು ಭೇಟಿ ಬಿಲ್ಲವರ ಸ್ವಾಭಿಮಾನದ ವಿಷಯವಾಗಿದೆ. ಪಿನರಾಯಿ ಕೇರಳ ಮತ್ತು ತುಳುವನಾಡಿನಲ್ಲಿkoti-chennay ಸಾಮಾಜಿಕ ಸ್ಥಾನಮಾನಕ್ಕಾಗಿ, ಸ್ವಾಭಿಮಾನಕ್ಕಾಗಿ ನಾರಾಯಣ ಗುರುಗಳು ನಡೆಸಿದ್ದ ಅವಿರತ ಹೋರಾಟದ ಫಲಶ್ರುತಿಯ ಪ್ರತೀಕವಾಗಿದ್ದಾರೆ. ಕೇರಳ ರಾಜ್ಯ ಕಮ್ಯೂನಿಷ್ಟ್ ರಾಜ್ಯವಾಗುವುದಕ್ಕೂ, ಸಾಕ್ಷರ ನಾಡಾಗುವುದಕ್ಕೂ ಅದರ ಫಲವಾಗಿ ವಿ ಎಸ್ ಅಚ್ಯುತಾನಂದನ್, ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಗಳಾಗುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ನಾರಾಯಣ ಗುರುಗಳ ಸಮಾಜ ಸುಧಾರಣಾ ಚಳುವಳಿಯ ಫಲವಾಗಿಯೇ ಕೇರಳದಲ್ಲಿ ಇಂತಹ ಕ್ರಾಂತಿ ಆಗುವುದಕ್ಕೆ ಸಾಧ್ಯವಾಗಿದೆ. ಆದರೆ ಅಂತಹ ಮಹತ್ತರವಾದ ರಾಜಕೀಯ ಸಾಧನೆಗಳು ಕರಾವಳಿಯಲ್ಲಿ ಕಂಡುಬಂದಿಲ್ಲ ಎನ್ನಬಹುದೇನೋ. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಜನಾರ್ಧನ ಪೂಜಾರಿ ಕೇಂದ್ರದ ಮಂತ್ರಿಯಾಗಿದ್ದು ಬಿಟ್ಟರೆ ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿದ್ದು ಕಡಿಮೆಯೇ. ಸಂಘಪರಿವಾರದ ರಾಜಕೀಯ ಘಟಕವಾದ ಬಿಜೆಪಿಯಲ್ಲಂತೂ ಬಿಲ್ಲವರು ಕಾಲಾಳುಗಳಾಗಿದ್ದಾರೆಯೇ ವಿನಹ ಪೂರ್ಣಾವಧಿ ಮಂತ್ರಿಯಾಗಲೂ ಸಾಧ್ಯವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಬಿಲ್ಲವರ ರಾಜಕೀಯ ಪ್ರಾತಿನಿಧ್ಯವನ್ನು ತಡೆದ ಪ್ರತಿಗಾಮಿ ಶಕ್ತಿಗಳೇ ಇಂದು ಬಿಲ್ಲವರ /ಈಳವರ ನಾಯಕನ ಆಗಮನಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ.

ಕರಾವಳಿ ಐಕ್ಯತಾ ಸಮಾವೇಶ ಎಂಬುದು ಯಾವುದೇ ನೆಲೆಯಲ್ಲಿ ಹಿಂದೂ ಧರ್ಮ ವಿರೋಧಿ ಸಮಾವೇಶವಲ್ಲ. ಜಾತಿ ಶ್ರೇಣೀಕರಣದ, ಜಾತಿ ದೌರ್ಜನ್ಯದ ಚರ್ಚೆಯನ್ನು ಇನ್ನೂ ಮುನ್ನಲೆಗೆ ತಂದಲ್ಲಿ ಇದು ಹಿಂದುಳಿದ ವರ್ಗಗಳ, ಬಿಲ್ಲವರ, ದಲಿತರ, ಮಹಿಳೆಯರ ಸ್ವಾಭಿಮಾನದ ಸಮಾವೇಶವಾಗಲ್ಲದು. ಇಂತಹ ಅಪರೂಪದ ಸನ್ನಿವೇಶದಲ್ಲಿ ಕೇರಳ ಅಥವಾ ಕರ್ನಾಟಕದಲ್ಲಿ ನಡೆದ ರಾಜಕೀಯ ಹತ್ಯೆಗಳ ಪಟ್ಟಿ ನೀಡುವ ಅಸಹ್ಯಕರ ಪೈಪೋಟಿ ನಮ್ಮ ಆದ್ಯತೆಯಾಗಬಾರದು. ಕರ್ನಾಟಕದಲ್ಲಿ, ಕೇರಳದಲ್ಲಿ ಅಥವಾRSS ದೇಶದ ಯಾವುದೇ ಭಾಗದಲ್ಲಿ ಕೋಮು ವಿಛ್ಛಿದ್ರಕಾರಿ ಶಕ್ತಿಗಳಿಗೆ, ರಾಜಕೀಯ ಸಂಘರ್ಷಗಳಿಗೆ ಹಿಂದುಳಿದ ವರ್ಗಗಳ ಹುಡುಗರು ಬಲಿಯಾಗುವುದನ್ನು ತಡೆಯುವುದು ಹೇಗೆ ಮತ್ತು ರಾಜಕೀಯ ಅಧಿಕಾರದಲ್ಲಿ ಅವರಿಗೆ ನ್ಯಾಯಯುತವಾದ ಪಾಲು ಸಿಗುವುದು ಹೇಗೆ ಎಂಬ ಚರ್ಚೆ ಇಲ್ಲಿ ಮುಖ್ಯವಾಗಬೇಕು. ಇಲ್ಲಿ ಅಂತಹ ಚರ್ಚೆಯ ನಾಯಕತ್ವವನ್ನು ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗಗಳ ನಾಯಕರೇ ವಹಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪಿನರಾಯಿ ವಿಜಯನ್ ಮಾತುಗಳು ಕಡಲ ತಡಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವರು ಮಂಗಳೂರಿಗೆ ಬರುವ ದಿನದಂದು ಸಂಘಪರಿವಾರ ಕರೆ ಕೊಟ್ಟಿರುವ ಬಂದ್ ಅನ್ನು ಧಿಕ್ಕರಿಸಿ ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರವನ್ನು ಪಡೆಯುವ ಕಡೆಗೆ ಕಟಿಬದ್ಧರಾಗಬೇಕು. ಈ ಕಾರಣಕ್ಕಾಗಿ ಸಂಘಪರಿವಾರದ ವಿರೋಧಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕರಾವಳಿ ಭೇಟಿಯನ್ನು ಬಿಲ್ಲವರು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಳ್ಳುವುದು ಅವರ ರಾಜಕೀಯ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ.

3 thoughts on “ಪಿನರಾಯಿ ವಿಜಯನ್ ಮತ್ತು ಸಂಘಪರಿವಾರದ ಬಿಲ್ಲವ ವಿರೋಧಿ ಅಜೆಂಡಾ

  1. Akshatha Humchadakatte

    ಉತ್ತಮ ವಿಶ್ಲೇಷಣೆ ನವೀನ್ ….. ನಿಜವಾದ ಆಯಾಮವನ್ನು ಗುರುತಿಸಿ ಬರೆದಿದ್ದೀಯ … ಕನ್ನಡದ ರಾಜಕೀಯ ಚಿಂತಕರ ಸಾಲಿನಲ್ಲಿ ನಮ್ಮ ನವೀನನನ್ನ ನೋಡಲು ಹೆಮ್ಮೆ ಆಗತ್ತೆ …

    Reply
  2. Anonymous

    Think in other way who lost their life even small kids and parents killed in front of children just they are supporting RSS .its not correct to think in other way

    Reply

Leave a Reply

Your email address will not be published. Required fields are marked *