ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?


-ಶ್ರೀಧರ ಪ್ರಭು


 

ಮೊದಲೇ ವಿಚಾರವೆಂದರೆ, ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ. ಇವರೆಲ್ಲರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ೫೫% ರಷ್ಟಿದೆ.

ಇಂದು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಬಹುಸಂಖ್ಯಾತ ಒಬಿಸಿಗಳಿಗಾದ ಅನ್ಯಾಯವೆಂಬಂತೆ ಬಿಂಬಿಸಲಾಗುತ್ತಿದೆ. ೧೮% ಬಡ್ತಿ ಮೀಸಲಾತಿ ಪಡೆದ ಪರಿಶಿಷ್ಟರು ೮೨ ಜನ ಅಲ್ಪಸಂಖ್ಯಾತ ಮತ್ತು ಒಬಿಸಿಗಳ ವಿರುದ್ಧವಾಗಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಬಂದಿರುವ ತೀರ್ಪಿನಿಂದಾಗಿ ಈ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಅನೇಕರು ಪ್ರಚಾರಮಾಡುತ್ತಿದ್ದಾರೆ.

ನಿಜವಾಗಿ ನೋಡಿದರೆ, ಒಬಿಸಿಗಳಿಗೆ ಅನ್ಯಾಯವಾಗಿದ್ದು ನಿಜ. ಆದರೆ, ಈ ಅನ್ಯಾಯಕ್ಕೆ ಪರಿಶಿಷ್ಟರು ಕಾರಣವಲ್ಲ. ನ್ಯಾಯಾಲಯದ ತೀರ್ಪಿನ ಅಂಶಗಳನ್ನು, ಅದರಲ್ಲೂ ಇಂದ್ರ ಸಹನಿ ತೀರ್ಪಿನ ಅಂಶಗಳನ್ನು ಸರಿಪಡಿಸದೇ ೧೯೯೨ ರಿಂದಲೂ ಈ ದೇಶವನ್ನಾಳಿದ ಸರ್ಕಾರಗಳು ಒಬಿಸಿಗಳಿಗೆ ಮೋಸ ಮಾಡಿವೆ.

೧೬ ನವೆಂಬರ್ ೧೯೯೨ ರಲ್ಲಿ ಬಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇಂದ್ರಾ ಸಹನಿ ತೀರ್ಪಿನಲ್ಲಿ ಮಂಡಲ್ ವರದಿ ಜಾರಿಗೊಳಿಸಿದ್ದನ್ನು ಎತ್ತಿಹಿಡಿಯಲಾಯಿತಾದರೂ, ಪರಿಶಿಷ್ಟರಿಗೆ ಯಾವುದೇ ಕಾರಣಕ್ಕೂ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ತೀರ್ಮಾನಿಸಲಾಯಿತು. ಹಾಗೆಯೇ, ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಕೆನೆಪದರನ್ನು ಅನ್ವಯಿಸಬೇಕು ಮತ್ತು ಬಡ್ತಿಯಲ್ಲಿ ಮೀಸಲಾತಿ ಕೊಡಲೇಬಾರದು ಎಂದೂ ತೀರ್ಮಾನಿಸಲಾಯಿತು. ದುರದೃಷ್ಟವಶಾತ್ ಇಂದ್ರಾ ಸಾಹ್ನಿ ತೀರ್ಪನ್ನು ಒಬಿಸಿಗಳು ಸರಿಯಾಗ ಅರ್ಥೈಸಲೇಯಿಲ್ಲ. ಈ ಜಾಗೃತಿ ಮೂಡದಿರುವ ಕಾರಣದಿಂದ ಅಳುವ ಮನುವಾದಿ ಸರ್ಕಾರಗಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.

ಈ ತೀರ್ಪಿನಲ್ಲಾದ ಅನ್ಯಾಯವನ್ನು ಪರಿಶಿಷ್ಟರ ಮಟ್ಟಿಗೆ ಸರಿಪಡಿಸಲು ೨೦೧೧ ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೬ (೪) (ಎ) ಪರಿಚ್ಛೇದವನ್ನು ಸೇರಿಸಲಾಯಿತು. ಈ ಪರಿಚ್ಛೇದದ ಪ್ರಕಾರ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅನುವುಮಾಡಿಕೊಡಲಾಯಿತು. ಆದರೆ, ಹಿಂದುಳಿದ ವರ್ಗಗಳಿಗಾದ ಅನ್ಯಾಯವನ್ನು ಸರಿಪಡಿಸಲಲಿಲ್ಲ. ಕೆನೆಪದರು ನಿಯಮ ಹಾಗೆಯೇ ಉಳಿಯಿತು. ಬಡ್ತಿಯಲ್ಲಿ ಮೀಸಲಾತಿ ಸಹ ಸಿಗಲಿಲ್ಲ. ಈ ಹಂತದಲ್ಲಿ ಎಲ್ಲಾ ಪಕ್ಷಗಳು ಒಬಿಸಿಗಳಿಗೆ ನ್ಯಾಯ ಒದಗಿಸಬೇಕಿತ್ತು. ದುರದೃಷ್ಟವಶಾತ್ ಹೀಗಾಗಲಿಲ್ಲ. ಇನ್ನು ಒಬಿಸಿಗಳಂತೂ ತಮ್ಮದೇ ಪರವಾಗಿದ್ದ ಮಂಡಲ್ ವರದಿಯ ವಿರುದ್ಧ ಬಸ್ಸುಗಳಿಗೆ ಕಲ್ಲು ತೂರುವುದರಲ್ಲಿ, ಮಸೀದಿ ಬೀಳಿಸುವುದರಲ್ಲಿ ಖುಷಿ ಕಂಡುಕೊಂಡಿದ್ದರು. ಈ ಕಲ್ಲುಗಳು ತಮ್ಮ ಭವಿಷ್ಯದ ಸೌಧಕ್ಕೆ ಬೀಳುತ್ತಿವೆ ಎಂದು ಒಬಿಸಿಗಳು ಅಂದಿಗೂ, ಬಹಳಷ್ಟು ಮಟ್ಟಿಗೆ ಇಂದಿಗೂ ಗ್ರಹಿಸಲಾಗಿಲ್ಲ.

ಪರಿಶಿಷ್ಟರು ಎಚ್ಚೆತ್ತುಕೊಂಡ ಕಾರಣದಿಂದ, ಸಂವಿಧಾನಕ್ಕೆ ಮೇಲ್ಕಂಡ ತಿದ್ದುಪಡಿ ತಂದಿದ್ದು ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ, ೨೦೦೨ ರಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಕಾಯಿದೆಗಳನ್ನೂ ಆಯಾ ರಾಜ್ಯಗಳಲ್ಲಿ ಜಾರಿಮಾಡಲಾಯಿತು. ಈಗ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳ ಕಾಯಿದೆಗಳನ್ನು ಅಸಿಂಧುವೆಂದು ಘೋಷಿಸಿದೆ. ಆದರೆ, ಕಾಯಿದೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿದರೆ, ಹಾಗೆಯೇ. ಪ್ರಮುಖವಾಗಿ ಹಿಂದೆ ರಾಜ್ಯಸಭೆಯಲ್ಲಿ ಪಾಸಾಗಿ ಈಗ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ೧೧೭ ನೇ ತಿದ್ದುಪಡಿ ವಿಧೇಯಕವನ್ನು ಪಾಸುಮಾಡಿಸಿದರೆ ಪರಿಶಿಷ್ಟರ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಒಬಿಸಿಗಳ ಸಮಸ್ಯೆ ಹಾಗೆಯೇ ಉಳಿಯುತ್ತದೆ.

ಒಬಿಸಿಗಳಿಗೆ ಎರಡು ರೀತಿಗಳಲ್ಲಿ ಅನ್ಯಾಯವಾಗಿದೆ. ಮೊದಲೇ ಅನ್ಯಾಯವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸದೇ ಆರ್ಥಿಕ ಮಾನದಂಡಗಳನ್ನು ಮುಂದೆ ಮಾಡಿ ಕೆನೆಪದರನ್ನು ತಂದದ್ದು. ಎರಡನೇ ಅನ್ಯಾಯ, ಪ್ರಾತಿನಿಧ್ಯವನ್ನು ಬಡ್ತಿಗೆ ವಿಸ್ತರಿಸದೇ ಮೊಟಕುಗೊಳಿಸಿದ್ದು. ಇವೆರಡೂ ಅಂಶಗಳು ಈಗಲೂ ಜಾರಿಯಲ್ಲಿರುವುದಕ್ಕೆ ಕಾರಣವೆಂದರೆ ಮನುವಾದಿ ಸರ್ಕಾರಗಳು ಇಂದ್ರ ಸಹನಿ ತೀರ್ಪನ್ನು ಸರಿಪಡಿಸದೇ ಹೋಗಿದ್ದು. ಒಬಿಸಿಗಳನ್ನು ಸೇರಿಸಿ ಪಡೆಕಟ್ಟಿ ರಾಜಕೀಯಕ್ಕೆ ಬಳಸಿಕೊಂಡ ಸಂಘ ಪರಿವಾರ ಇಂದು ಒಬಿಸಿ ಗಳಿಗಾದ ಈ ಅನ್ಯಾಯವನ್ನು ಏಕೆ ಸರಿಪಡಿಸಬಾರದು? ಕಾಂಗ್ರೆಸ್ ಸರ್ಕಾರ ಒಬಿಸಿಗಳಿಗೆ ಮೋಸ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಒಬಿಸಿಗಳಿಗೆ ಏನು ಮಾಡಿದೆ? ಮಂಡಲ್ ವರದಿಯನ್ನು ವಿರೋಧಿಸಿದ ಬಿಜೆಪಿ ಒಬಿಸಿಗಳ ಮೊದಲ ಶತ್ರು. ಮಂಡಲ್ ವರದಿ ಜಾರಿ ಮಾಡಿದ ನರಸಿಂಹ ರಾವ್ ಸರ್ಕಾರ ಸಹ ಇಂದ್ರಾ ಸಹನಿ ತೀರ್ಪಿನ ಲೋಪದೋಷಗಳನ್ನು ಸರಿಪಡಿಸಲಿಲ್ಲ. ಹೋಗಲಿ, ವಾಜಪೇಯಿ ಸರ್ಕಾರ ಏನು ಮಾಡಿದೆ? ಇಂದಿನ ಮೋದಿ ಸರ್ಕಾರ ಏಕೆ ಸುಮ್ಮನಿದೆ?

ಈಗ ಒಬಿಸಿಗಳು ಏನು ಮಾಡಬೇಕು?

ಮೊದಲನೇದ್ದಾಗಿ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗುತ್ತಿರುವ ಮೀಸಲಾತಿಯ ಪ್ರಮಾಣ ೧೮% ಮಾತ್ರ. ಒಬಿಸಿಗಳ ಜನಸಂಖ್ಯಾ ಅನುಪಾತದಲ್ಲಿ ಉಳಿದ ಹುದ್ದೆಗಳಿಗೆ ತಮಗೂ ಪ್ರಾತಿನಿಧ್ಯ ಸಿಗಬೇಕೆಂದು ಒಬಿಸಿಗಳು ಆಗ್ರಹಿಸಬೇಕಿದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ೧೧೭ ನೇ ವಿಧೇಯಕದ ಮಾದರಿಯಲ್ಲೇ ಒಬಿಸಿಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ವಿಧೇಯಕವನ್ನು ಜಾರಿ ಮಾಡಲು ಒಬಿಸಿಗಳು ಒತ್ತಾಯಿಸಬೇಕಿದೆ. ಇದರಲ್ಲಿ ರಾಜ್ಯಸರ್ಕಾರದ್ದೇನೂ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಇಂದ್ರಾ ಸಹನಿ ತೀರ್ಪಿನಲ್ಲಾದ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾದರೆ, ಒಬಿಸಿಗಳು ಸಂವಿಧಾನ ತಿದ್ದುಪಡಿ ಮಾಡಿ ತಮಗೂ ಬಡ್ತಿ ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಬೇಕಿದೆ. ಹೀಗೆ ಮಾಡಿದರೆ, ಸಹಜವಾಗಿ ಪರಿಶಿಷ್ಟರ ಬೆಂಬಲವೂ ಒಬಿಸಿಗಳಿಗೆ ದೊರೆಯುತ್ತದೆ. ನಿಜವಾಗಿ ನೋಡಿದರೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಅವರ ಜನಸಂಖ್ಯಾ ಪ್ರಮಾಣದಷ್ಟಿಲ್ಲ. ಅದನ್ನು ಆಗ್ರಹಿಸುವುದು ಬಿಟ್ಟು ಸಾಮಾನ್ಯ ವರ್ಗದವರೊಂದಿಗೆ ಸೇರಿಕೊಂಡರೆ, ಒಬಿಸಿಗಳಿಗೆ ಏನೂ ಪ್ರಯೋಜನವಿಲ್ಲ. ಬಹುಜನರ ಒಗ್ಗಟ್ಟು ಮುರಿದುಹೋದರೆ ಎಲ್ಲರ ಪ್ರತಿನಿಧ್ಯವೂ ಒಟ್ಟಿಗೇ ಕೊನೆಗೊಳ್ಳುತ್ತದೆ.

ಈಗ ಬಂದಿರುವ ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮಾಣವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ, ಪ್ರಾತಿನಿಧ್ಯ ಕಲ್ಪಿಸುವುದರಿಂದ ಕಾರ್ಯದಕ್ಷತೆಗೆ ಹಾನಿ ಎನ್ನಲಾಗಿದೆ. ಪ್ರಾತಿನಿಧ್ಯ ಕಲ್ಪಿಸಿದರೆ ಕಾರ್ಯದಕ್ಷತೆಯೇ ಪ್ರಧಾನ ಎಂಬ ಸಂವಿಧಾನದ ೩೩೫ ನೇ ಪರಿಚ್ಛೇದಕ್ಕೆ ಅಪಚಾರವಾಗುತ್ತದೆ ಎನ್ನಲಾಗಿದೆ.

ಈ ಅಂಶವನ್ನು ಸರಿಪಡಿಸಲೆಂದೇ, ೧೧೭ ನೇ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಈ ವಿಧೇಯಕದಲ್ಲಿ, ಸಂವಿಧಾನದ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಲೇಬೇಕು ಮತ್ತು ಇದರಿಂದ ೩೩೫ ನೇ ಪರಿಚ್ಛೇದಕ್ಕೆ ಏನೂ ಹಾನಿಯಿಲ್ಲ ಎಂದು ಹೇಳಲಾಗಿದೆ. ಇದೇ ರೀತಿಯ ಕಾನೂನನ್ನು ಒಬಿಸಿಗಳಿಗೂ ಜಾರಿಮಾಡದಿದ್ದರೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೆ ಯಾವುದೇ ಮೀಸಲಾತಿ ಸಿಗದೇ ಹೋಗಬಹುದು.

ಆದ ಕಾರಣ, ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ಬೆಂಬಲಿಸಬೇಕು; ಹಾಗೆಯೇ, ತಮಗೂ ತಮ್ಮ ಜನಸಂಖ್ಯೆಯಷ್ಟು ಪ್ರಾತಿನಿಧ್ಯ ಸಿಗಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪರಿಶಿಷ್ಟರ ಜನಸಂಖ್ಯೆ ಖಂಡಿತವಾಗಲೂ ೧೮% ಗಿಂತ ಜಾಸ್ತಿಯಿದೆ. ಹಾಗಿದ್ದರೂ, ಪರಿಶಿಷ್ಟರು ೧೮% ಪ್ರಾತಿನಿಧ್ಯಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ. ಇಷ್ಟು ಹಕ್ಕು ಅವರಿಗೆ ಸಂವಿಧಾನಬದ್ಧವಾಗಿಯೇ ಸಿಕ್ಕಿದೆ. ಆದರೆ. ಒಬಿಸಿಗಳಿಗೆ ತಮ್ಮ ಜನಸಂಖ್ಯೆಯಷ್ಟು ಹೋಗಲಿ.. ಏನೊಂದು ಪ್ರತಿನಿಧ್ಯವೂ ಸಿಕ್ಕಿಲ್ಲ. ಇದನ್ನು ಒಬಿಸಿಗಳು ಮನಗಂಡೇಯಿಲ್ಲ.

ಒಬಿಸಿಗಳ ಈ ಹೋರಾಟಕ್ಕೆ ಖಂಡಿತವಾಗಲೂ ಪರಿಶಿಷ್ಠರ ಬೆಂಬಲ ದೊರಕುತ್ತದೆ. ಒಂದು ವೇಳೆ ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ವಿರೋಧಿಸಿದರೆ, ಏನೂ ಸಾಧಿಸಿದಂತಾಗುವುದಿಲ್ಲ. ಕೊನೆಗೆ ಒಬಿಸಿ ಗಳಿಗೂ ಸೇರಿದಂತೆ ಯಾರಿಗೂ ಪ್ರಾತಿನಿಧ್ಯ ಸಿಗುವುದಿಲ್ಲ. ಆದ್ದರಿಂದ ಒಬಿಸಿ ಗಳು ೧೮% ಪ್ರಾತಿನಿಧ್ಯ ವಿರೋಧಿ ಹೋರಾಟವನ್ನು ಕೈಬಿಟ್ಟು, ತಮ್ಮ ಜನಸಂಖ್ಯಾ ಪ್ರಮಾಣದಷ್ಟು ಪ್ರಾತಿನಿಧ್ಯಕ್ಕಾಗಿ, ಪರಿಶಿಷ್ಟರೊಡನೆ ಕೈಜೋಡಿಸಿ ಐಕ್ಯ ಹೋರಾಟ ಕಟ್ಟಬೇಕಿದೆ.

ದೇಶದ ೮೫% ರಷ್ಟು ಬಹುಜನರ ಭವಿಷ್ಯ ೮೫% ರಷ್ಟು ಬಹುಜನರ ಒಗ್ಗಟ್ಟಿನಲ್ಲಿದೆ. ಈ ಒಗ್ಗಟ್ಟನ್ನು ಮುರಿದರೆ, ೮೫% ಜನರು ಒಟ್ಟಿಗೇ ಮುಳುಗುತ್ತಾರೆ. ಒಗ್ಗಟ್ಟಿದ್ದರೆ ಎಲ್ಲರೂ ಒಟ್ಟಿಗೇ ದಡಸೇರುತ್ತಾರೆ.

ಬಹುಜನರ ಐಕ್ಯತೆ ಚಿರಾಯುವಾಗಲಿ!

1 thought on “ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?

  1. Krishnaraj Barvathaya

    “ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ”

    ಬ್ರಾಹ್ಮಣರನ್ನು ಹೊರತುಪಡಿಸಿ ಇಳಿದೆಲ್ಲ ಜಾತಿಗಳು ಸೇರಿವೆ…

    Reply

Leave a Reply

Your email address will not be published.