ಮುಸ್ಲೀಮ್ ಯುವ ಸಮಾವೇಶ ಇಂದಿನ ತುರ್ತು ಅಗತ್ಯ

Naveen Soorinje


ನವೀನ್ ಸೂರಿಂಜೆ


 

ಕೋಮುವಾದದಿಂದ ಜರ್ಜರಿತವಾಗಿರುವ ಮಂಗಳೂರಿನಲ್ಲಿ ಡಿವೈಎಫ್ ಐ ಎಡ ಯುವ ಸಂಘಟನೆ ಮುಸ್ಲಿಂ ಯುವ ಸಮಾವೇಶdyfi-1 ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಹಿರಿಯ ಚಿಂತಕರು ಪತ್ರಕರ್ತರು ಸೇರಿದಂತೆ ಹಲವರು ಪ್ರತಿಯಿಸಿದ್ದಾರೆ. ”ಕಮ್ಯೂನಿಷ್ಟರು ಮುಸ್ಲಿಂ ಸಮಾವೇಶ ಮಾಡುವುದು ಕುತೂಹಲಕರ. ಆದರೆ ಮುಂದೆ ಹಿಂದೂ ಸಮಾವೇಶ, ಕ್ರಿಶ್ಚಿಯನ್ ಸಮಾವೇಶಗಳನ್ನೂ ಮಾಡುವರೇ ಎನ್ನುವುದು ಪ್ರಶ್ನೆ. ಹಾಗೆ ಮಾಡುವುದಿದ್ದರೆ, ಅದರ ಬದಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ವಿರಾಟ್ ಸಮಾವೇಶ ಮಾಡುವುದು ಒಳ್ಳೆಯದಲ್ಲವೇ ?” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಗಳು ಮತ್ತು ಗುಂಪುಗಳು ತಳ, ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಸಂಘಟಿಸುವುದು ಆಯಾ ಸಮುದಾಯಗಳ ಸಬಲೀಕರಣ ಮತ್ತು ಅವರನ್ನು ಶೋಷಕ ಶಕ್ತಿಗಳ ಪಿತೂರಿಯಿಂದ ರಕ್ಷಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಸಂಘಟನೆಗೆ ಎರಡು ಬಗೆಯ ಆಯಾಮಗಳಿವೆ. ಮೊದಲನೆಯದ್ದು ಅಂತಹ ವರ್ಗಗಳನ್ನು ಅವರು ಜೀವಿಸುತ್ತಿರುವ ಪ್ರತಿಕೂಲ ವಾತವರಣದಲ್ಲಿ ಯಜಮಾನ್ಯ ಮತ್ತು ಶೋಷಕ ಶಕ್ತಿಗಳ ದಾಳಿಯಿಂದ ರಕ್ಷಿಸುವುದು. ಎರಡನೆಯದ್ದು ಆಯಾ ಸಮುದಾಯದೊಳಗೇ ಇರತಕ್ಕಂತಹ ಅನಾಚಾರಗಳನ್ನು, ಅಸಮತೆಗಳನ್ನು ತೊಡೆದು ಹಾಕುವಂತಹ ಸುಧಾರಣಾವಾದಿ ಚಳುವಳಿಯನ್ನು ಮುನ್ನಡೆಸುವುದು.

ನಮ್ಮ ದೇಶ ಬಹುಸಂಖ್ಯಾತ ಪ್ರಭಾವಿ ಸಮಾಜೋ ರಾಜಕೀಯ ಚೌಕಟ್ಟನ್ನು ಹೊಂದಿದೆ. ಇಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕೂಡಾ ಬಹುಸಂಖ್ಯಾಕ ಹಿಂದೂ ಕಟ್ಟಳೆಗಳು,RSS ಪರಂಪರೆಗಳು ಸಹಜವೆಂಬತೆ ಆಚರಿಸಲ್ಪಡುತ್ತವೆ. ರಾಜ್ಯದ ಪ್ರಾಯೋಜಕತ್ವದಲ್ಲೇ ಹಿಂದೂ ಹಬ್ಬ-ಮೇಳಗಳು ಇಲ್ಲಿಯ ನೆಲದ ಪರಂಪರೆ ಎಂಬ ನೆಪದಲ್ಲಿ ನಡೆಯುತ್ತವೆ. ಇವೆಲ್ಲದರ ಜೊತೆಗೆ ದೇಶದಲ್ಲಿ ಪ್ರತಿಗಾಮಿ ಹಿಂದೂ ಸಾಂಸ್ಕೃತಿಕ ಯಾಜಮಾನ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ; ಜೀವನದ ಪ್ರತೀ ಕ್ಷೇತ್ರವನ್ನೂ ವ್ಯಾಪಿಸುತ್ತಿದೆ. ಸಾರ್ವಜನಿಕ ಬದುಕನ್ನು ಪೂರ್ತಿಯಾಗಿ ಹಿಂದೂವನ್ನಾಗಿಸುವ ಪ್ರಯತ್ನದಲ್ಲಿ ಅದು ನಿರತವಾಗಿದೆ. ಆಹಾರದಂತಹ ತೀರಾ ಖಾಸಾಗಿ ವಿಷಯದಲ್ಲೂ ತನ್ನ ನಿಯಂತ್ರಣವನ್ನು ಸಾಧಿಸಲು ಹೊರಟಿದೆ.

ಇಂತಹ ಬಹುಸಂಖ್ಯಾತ ನಿಷ್ಠ ವಾತಾವರಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಹಲವು ಆತಂಕಗಳು ಎದುರಾಗುತ್ತವೆ. ಭಾರತದ ಪ್ರಧಾನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅಂತಹ ಹತ್ತು ಹಲವು ಆತಂಕಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿದ್ದಾರೆ. ಸದ್ಯದ ಹಿಂದುತ್ವವಾದಿ ಶಕ್ತಿಗಳ ಆಡಳಿತದಲ್ಲಿ ಅವರ ಅಸ್ತಿತ್ವವೇ ಪ್ರಶ್ನೆಯಲ್ಲಿದೆ. ಮುಸ್ಲೀಮ್ ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ, ಮೊಟುಕುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ವಿಷಮ ಸನ್ನಿವೇಶದಲ್ಲಿ ಮುಸ್ಲೀಮ್ ಸಮುದಾಯವನ್ನು ಸಂಘಟಿಸುವುದು ಅವರನ್ನು ಹಿಂದುತ್ವವಾದಿ ಶಕ್ತಿಗಳ ದಾಳಿಯಿಂದ ಕಾಪಾಡುವ ಹಾಗೂ ಅವರ ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ ಅತ್ಯಗತ್ಯ. ಸಂಘಟನೆಯು ಶೋಷಿತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಂತಹ ಸಂಘಟನಾತ್ಮಕ ಹೋರಾಟಗಳು ಪ್ರತಿಕೂಲ ಪರಿಸರದಲ್ಲೂ ಘನತೆಯಿಂದ ಬದುಕುವ ಹಕ್ಕನ್ನು ಅವರಿಗೆ ದಕ್ಕಿಸಿಕೊಡುತ್ತವೆ.

ಇಲ್ಲಿ ಇನ್ನೊಂದು ವಿಚಾರ ಬಹಳ ಮುಖ್ಯ. ಮುಸ್ಲೀಮರ ಪರವಾದ ಹೋರಾಟ ಮತ್ತು ಮುಸ್ಲೀಮರನ್ನು ಒಳಗೊಳ್ಳುವುದು ಎಂದರೆ ಮುಸ್ಲಿಂ ಮೂಲಭೂತವಾದಿmuslims460 ಮತ್ತು ಕೋಮುವಾದಿ ಸಂಘಟನೆಗಳನ್ನು ತಮ್ಮ ಹೋರಾಟದ ಸಹಭಾಗಿಯನ್ನಾಗಿಸುವುದಲ್ಲ. ಅಂತಹ ತಪ್ಪನ್ನು ನಮ್ಮ ಹಲವು ಪ್ರಗತಿಪರ ಸಂಘಟನೆಗಳು ಮಾಡುತ್ತಿವೆ. ಮೂಲಭೂತವಾದೀ ಸಂಘಟನೆಗಳ ಸಾಹಚರ್ಯ ಆಯಾ ಸಮುದಾಯದೊಳಗೇ ಸುಧಾರಣೆಗಳನ್ನು ತರುವ ಪ್ರಯತ್ನಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಿಂದೂಗಳೆಂದರೆ ಭಜರಂಗದಳ, ವಿ.ಎಚ್.ಪಿ, ಆರ್.ಎಸ್.ಎಸ್ ಹೇಗೆ ಅಲ್ಲವೋ, ಮುಸ್ಲೀಮರೆಂದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳಲ್ಲ ಎಂಬುದು ಇನ್ನೂ ಕೂಡಾ ಕೆಲ ಎಡ ಚಿಂತಕರಿಗೆ ಮನದಟ್ಟಾಗಿಲ್ಲ. ಒಂದೆಡೆ ಹಿಂದೂ ಕೋಮುವಾದದ ಭೀಕರತೆ, ಮತ್ತೊಂದೆಡೆ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಂ ಕೋಮುವಾದ ತಂದೊಡ್ಡಿರುವ ಆತಂಕಗಳು; ಇವೆರಡರ ಮಧ್ಯೆ ಹಿಂದೂ ಕೋಮುವಾದದ ಅತಿರೇಕವನ್ನು ಮುಸ್ಲಿಂ ಮೂಲಭೂತವಾದಿ-ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಖಂಡಿಸಿ ಮಾತನಾಡುವ ಎಡಚಿಂತಕರು. ಇಂತಹ ವಿಪರ್ಯಾಸಗಳ ಮಧ್ಯೆ ಮಂಗಳೂರಿನಲ್ಲಿ ಡಿವೈಎಫ್ಐ ”ಮುಸ್ಲಿಂ ಯುವ ಸಮಾವೇಶ” ಹಮ್ಮಿಕೊಂಡಿರುವಂತದ್ದು ಸರಿಯಾದ ನಡೆಯೇ ಆಗಿದೆ.

ಹಿಂದೂ ಸಂಘಟನೆಗಳ ಕೋಮುವಾದದ ಅತಿರೇಕಗಳನ್ನು ಮುಸ್ಲಿಂ ಯುವ ಜನರ ಮುಂದಿಟ್ಟು ಮುಸ್ಲಿಂ ಮತಾಂಧ ಸಂಘಟನೆಗಳನ್ನು ಬೆಳೆಸಲಾಗುತ್ತಿದೆ. ಈ ಮತಾಂಧ ಸಂಘಟನೆಗಳಲ್ಲಿ ಇರುವ ಕೆಲ ಯುವಕರ ಕುಕೃತ್ಯದಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಈ ಅನುಮಾನದ ಭಾಗವಾಗಿಯೇ ಪೊಲೀಸ್ ದೌರ್ಜನ್ಯಗಳು, ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದೆ. ಈ ರೀತಿ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಮುಸ್ಲಿಂ ಯುವ ಸಮುದಾಯದ ಹೋರಾಟದ ದಾರಿ ಯಾವುದಿರಬೇಕು ಎಂದು ಚಿಂತಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶಗಳ ಅಗತ್ಯ ಇದೆ.

ಮುಸ್ಲಿಂ ಸಮಾವೇಶ ಮಾತ್ರವಲ್ಲದೆ ಹಿಂದೂ ಸಮಾವೇಶವನ್ನು ಎಡಪಂಥೀಯರು ಆಯೋಜಿಸುತ್ತಾರೆಯೇ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಪ್ರಶ್ನಿಸುತ್ತಾರೆ. narayana-guruಹಿಂದೂ ಎಂಬುದು ಶೋಷಿತರನ್ನು, ದಲಿತರನ್ನು ಪ್ರತಿನಿಧಿಸುವುದಿಲ್ಲ. ಹಿಂದೂ ಸಾಮಾಜಿಕ ಸಂರಚನೆಯಲ್ಲಿ, ಚಲನೆಯಲ್ಲಿ ಹಿಂದುಳಿದ ವರ್ಗಗಳು ಬಳಕೆಯಾಗುತ್ತಿರುವುದು ಕೇವಲ ಮೇಲ್ವರ್ಗದ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಪಿತೂರಿಯಲ್ಲಿ ಕಾಲಾಳುಗಳಾಗಿಯಷ್ಟೇ. ಕರಾವಳಿಯ ಸಂದರ್ಭದಲ್ಲಿ ಹೇಳುವುದಾದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ತಳವರ್ಗಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜೀವಪರ ಪ್ರಗತಿಪರ ಸಮುದಾಯಗಳು ದಲಿತರು, ಬಿಲ್ಲವರು, ಮೊಗವೀರರು, ಕುಲಾಲರು, ಕೊರಗರು, ಆದಿವಾಸಿಗಳ ಪ್ರತ್ಯೇಕ ಪ್ರತ್ಯೇಕ ಸಮಾವೇಶಗಳನ್ನು ಮಾಡಬೇಕಿದೆ. ನಾರಾಯಣ ಗುರು, ಕೋಡ್ದಬ್ಬು, ತನ್ನಿಮಾನಿಗ, ಸಿರಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಸ್ಥಾನಮಾನ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಹಿಂದುಳಿದ ಸಮುದಾಯಗಳ ಯುವಕರು ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರಿಗೆ ತಿಳಿ ಹೇಳಬೇಕಾಗಿದೆ. ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಸಂಘಟಿಸಲು ಹೊರಟ ಎಡಪಂಥೀಯರು, ಅವಿಭಜಿತ ಜಿಲ್ಲೆಯಲ್ಲಿ ಅದರಷ್ಟೇ ಅನಿವಾರ್ಯತೆ ಇರುವ, ಹಿಂದುಳಿದ ಜಾತಿಗಳನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದುತ್ವಕ್ಕೆ ನಾರಾಯಣ ಗುರುಗಳ ಸುಧಾರಣಾವಾದಿ ಚಳುವಳಿಗಿಂತ ಬೇರೆ ಉತ್ತರವೇ ಬೇಕಿಲ್ಲ. ನಾರಾಯಣ ಗುರುಗಳ ಐಡಿಯಾಲಜಿಯ ಆಧಾರದಲ್ಲಿ ಬಿಲ್ಲವರು ಮತ್ತು ಇತರೆ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿದಲ್ಲಿ ಕರಾವಳಿಯ ಕೋಮುವಾದಿ ವಾತಾವರಣದಲ್ಲೂ ಹಲವು ಪೂರಕ ಬೆಳವಣಿಗೆಗಳು ಕಂಡುಬರುತ್ತವೆ. ಯಾಕೆಂದರೆ ಆರ್.ಎಸ್.ಎಸ್.ನ ಹಿಂದುತ್ವವಾದಿ ವ್ಯವಸ್ಥೆಯ ಅನುಷ್ಠಾನಕ್ಕೆ ಕಾಲಾಳುಗಳಾಗಿ ಬಳಕೆಯಾಗುತ್ತಿರುವುದು ಇದೇ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಬಡ ಯುವಕರು. ಅವರನ್ನು ಸಂಘಟಿಸುವ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವನ್ನು ಎಡಪಕ್ಷಗಳು ಮಾಡಬೇಕಾಗಿದೆ. ಮತ್ತೊಂದೆಡೆ ಆರ್.ಎಸ್.ಎಸ್ ಗೆ ಆರ್.ಎಸ್.ಎಸ್ ಮಾದರಿಯಲ್ಲೇ ಪ್ರತಿಕ್ರೀಯೆ ನೀಡುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಅನಕ್ಷರಸ್ಥ ಬಡ ಮುಸ್ಲೀಮರು ಕಾಲಾಳುಗಳಾಗುವುದನ್ನು ತಪ್ಪಿಸಿದಲ್ಲಿ ಮುಸ್ಲಿಂ ಯುವಕರು ಜೈಲು ಸೇರುವುದನ್ನೂ, ಸಾಯುವುದನ್ನೂ ತಪ್ಪಿಸಬಹುದಾಗಿದೆ. ಆರ್.ಎಸ್.ಎಸ್ ಕೋಮುವಾದಕ್ಕೆ ಇಸ್ಲಾಂ ಕೋಮುವಾದದ ಮೂಲಕ ಉತ್ತರ ಕೊಡದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರೀಯೆ ನೀಡುವ ನಿಟ್ಟಿನಲ್ಲಿ ಮುಸ್ಲಿಂ ಯುವ ಸಮಾವೇಶಗಳನ್ನು ಆಯೋಜಿಸಲು ಎಡ ಯುವ ಸಂಘಟನೆಗಳು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

 

 

One comment

  1. Agreed mr naveen. But muslim india never belive in cpim. They ruled west bengal 32 years but bengali muslims are most backward .
    In kerala also LDF not given proper share to muslims in govt and party. Why dont they bring private secter reservation to ahinda in kerala.
    Then how you define islamic comunalism and fundamentalism . Can give any example. Thanks

Leave a Reply

Your email address will not be published.