ಜೈಲು ತುಂಬುತ್ತಿರುವ ಅನುಮಾನಾಸ್ಪದ ಮುಸ್ಲೀಮರು ಮತ್ತು ಅವಮಾನಿತ ಸಮುದಾಯದ ಪ್ರಜ್ಞಾವಂತ ಯುವ ಜನತೆಯ ಸಮಾವೇಶ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ಮೇ 14 ಮತ್ತು 15 ರಂದು ಅನುಮಾನಿತರು ಮತ್ತುpic-logo ಅವಮಾನಿತರ ಸಮುದಾಯದ ಯುವ ಸಮಾವೇಶ ನಡೆಯುತ್ತಿದೆ. ಇದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ನಾನು ಸಂಘಪರಿವಾರದ  ನೈತಿಕ ಪೊಲೀಸ್ ಗಿರಿ ವಿರುದ್ಧ ಸುದ್ದಿ ಮಾಡಿದ್ದ ಕಾರಣಕ್ಕಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಾಲ್ಕುವರೆ ತಿಂಗಳು ಜೈಲಿನಲ್ಲಿ ಇರಬೇಕಾದ ಸಂಧರ್ಭದಲ್ಲಿ ನೂರಾರು ಅನುಮಾನಿತ ಮತ್ತು ಅವಮಾನಿತರ ಜೊತೆ ಸಮಯ ಕಳೆಯುವ ಅವಕಾಶ ದೊರಕಿತ್ತು. ಮಂಗಳೂರು ಜೈಲಿನಲ್ಲಿ ಎರಡು ವಿಭಾಗಗಳಿವೆ. ಎ ವಿಭಾಗ ಮತ್ತು ಬಿ ವಿಭಾಗ. ಮುಸ್ಲಿಂ ವಿಚಾರಣಾಧೀನ ಕೈದಿಗಳನ್ನು ಎ ವಿಭಾಗದಲ್ಲೂ, ಹಿಂದೂ ವಿಚಾರಣಾಧೀನ ಕೈದಿಗಳನ್ನು ಬಿ ವಿಭಾಗದಲ್ಲೂ ಹಾಕುತ್ತಾರೆ. ನನ್ನ ಹೆಸರು ಹಿಂದೂ ಹೆಸರಾಗಿದ್ದರೂ ಜೈಲು ಅಧಿಕಾರಿಗಳು ಮತ್ತು ಪೊಲೀಸರು ಸಮಾಲೋಚನೆ ನಡೆಸಿ, ಭದ್ರತೆಯ ದೃಷ್ಟಿಯಿಂದ ಮುಸ್ಲಿಂ ಕೈದಿಗಳಿರುವ ಎ ವಿಭಾಗದಲ್ಲಿ ನನ್ನನ್ನು ಇಡಲಾಗಿತ್ತು. ಬೇರೆ ಬೇರೆ ಕಾರಣಕ್ಕಾಗಿ ಕೈದಿಗಳಾಗಿದ್ದ ನಾಲ್ಕು ನೂರಕ್ಕೂ ಅಧಿಕ ಕೈದಿಗಳ ಜೊತೆ ಈ ಸಂಧರ್ಭದಲ್ಲಿ ಚರ್ಚೆ ನಡೆಸಿದ್ದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಗೆ ಜೈಲು ಸೇರುವ ಒಂದೊಂದು ಮುಸ್ಲೀಮನ ಕತೆಯೂ ಧಂಗು ಬಡಿಸುವಂತಿದೆ.

ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರೆಹಮಾನ್. 85 ವರ್ಷದ ಈ ಅಜ್ಜ ಉರೂಸ್ ಗಳಿಗೆ ತೆರಳಿ ಅಲ್ಲಿ ಹಾಡು ಹಾಡಿ ಸಂಪಾದನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಲವಾರು ಬಾರಿ ಓಡಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು, ಮಡಿಕೇರಿಗಳಲ್ಲಿ ಉರೂಸು ಬಹಳಾನೇ ನಡೆಯುತ್ತಿರುವುದರಿಂದ ಈ ಪ್ರದೇಶಗಳು ರೆಹಮಾನ್ ಗೆ ಅಚ್ಚುಮೆಚ್ಚು ಮಾತ್ರವಲ್ಲ ಸಲೀಸು ಕೂಡಾ. ಅಂದೂ ಕೂಡಾ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಉರೂಸಿಗಾಗಿ ರೆಹಮಾನ್ ರತ್ನಗಿರಿಯಿಂದ ಬಂದಿದ್ದರು. 85 ವರ್ಷ ಪ್ರಾಯದ ಅವರಿಗೆ ವಯೋ ಸಹಜ ಖಾಯಿಲೆಗಳೂ ಇದ್ದಿದ್ದರಿಂದ ಯಾರದ್ದೋ ಸಲಹೆಯ ಮೇರೆಗೆ ಯನಪೊಯ ಆಸ್ಪತ್ರೆಯ ಉಚಿತ ಚಿಕಿತ್ಸೆಯ ”ಆಫರ್ ” ಲಾಭ ಪಡೆದುಕೊಳ್ಳಲು ಮಂಗಳೂರಿಗೆ ಬಂದಿದ್ದರು. ಮಂಗಳೂರು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿದ ರೆಹಮಾನ್ ಹಳೆ ಬಂದರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುತ್ತಿದ್ದರು. ಅಷ್ಟರಲ್ಲಿ ಮುಬ್ಬು ಕತ್ತಲೆಯಾಗಿತ್ತು. ಹಳೆ ಬಂದರಿನ ಪೊಲೀಸ್ ಠಾಣೆಯ ಎದುರು ನಡೆದುಕೊಂಡು ಬರುತ್ತಿದ್ದಾಗ ಪೊಲೀಸನೊಬ್ಬ ರೆಹಮಾನ್ ರನ್ನು ಠಾಣೆಯ ಕಂಪೌಂಡ್ ಒಳಗೆ ಕರೆದ. ಕರೆದಿರುವುದು ಪೊಲೀಸ್ ಮತ್ತು ಅದು ಪೊಲೀಸ್ ಠಾಣೆ ಎಂದು ಅರಿವಾದ ರೆಹಮಾನ್ ಕಾಳೆದುಕೊಳ್ಳುತ್ತಾ ಪೊಲೀಸ್ ಠಾಣೆ ಹೊಕ್ಕಿದರು. ಪೊಲೀಸ್ ಸಿಬ್ಬಂದಿ “ನಿನ್ನ ಹೆಸರೇನು ?” ಎಂದು ಪ್ರಶ್ನಿಸಿದ. “ರೆಹಮಾನ್” ಎಂದು ಹಿಂದಿಯಲ್ಲಿ ಮರಳಿ ಉತ್ತರ ಬಂದಿತ್ತು. “ತುಮ್ ಕಂಹಾ ಸೇ ಆಯೀ ಹೋ  ?” ಮರಳಿ ಪ್ರಶ್ನೆ ಪೊಲೀಸನಿಂದ. “ಮಹಾರಾಷ್ಟ್ರಕೆ ರತ್ನಗಿರಿ ಸೆ” ಎಂದರು ರೆಹಮಾನ್. ಅಷ್ಟೆ. ನಂತರ ಈ 85 ವರ್ಷದ ಅಜ್ಜ ರೆಹಮಾನ್ ರನ್ನು ಥೇಟ್ ಭಯೋತ್ಪಾದಕರನ್ನು ವಿಚಾರಣೆಗೊಳಪಡಿಸುವ ರೀತಿಯಲ್ಲಿ ವಿಚಾರಣೆ ನಡೆಸಲಾಯಿತು.

ರೆಹಮಾನ್ ಗೆ ಪೊಲೀಸರ ಪ್ರಶ್ನೆಗಳು ಸರಳವಾಗಿದ್ದವು. “ಮಹಾರಾಷ್ಟ್ರದ ಮುಸ್ಲೀಮನಿಗೆ ಮಂಗಳೂರಿನಲ್ಲಿ ಏನು ಕೆಲಸ ? ಮಹಾರಾಷ್ಟ್ರದಲ್ಲಿpic- rehman ಮಸೀದಿ ಇಲ್ಲವೇ ? ಅಲ್ಲಿ ಉರೂಸು ನಡೆಯುವುದಿಲ್ಲವೇ? ನೀನು ರತ್ನಗಿರಿಯ ಮಸೀದಿ ಎದುರುಗಡೆ ನಿಂತು ಹಾಡಿದರೆ ಅಲ್ಲಿನ ಮುಸ್ಲೀಮರಿಗೆ ಕಿವಿ ಕೇಳುವುದಿಲ್ಲವೇ ? ನಿನಗೆ ಭಟ್ಕಳದಲ್ಲಿ ಯಾರ್ಯಾರು ಗೊತ್ತು ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ರೆಹಮಾನ್ ಉತ್ತರ ನೀಡಿದ್ದಾರೆ. ಮಧ್ಯೆ ಮಧ್ಯೆ ಅತ್ತಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಅನುಮಾನಗಳು ಮುಗಿದಿಲ್ಲ. ರೆಹಮಾನ್ ಮೊಬೈಲನ್ನು ವಶಪಡಿಸಿಕೊಂಡ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಅನ್ನು ಸಂಪೂರ್ಣ ಪರಿಶೀಲಿಸಿದರು. ರೆಹಮಾನ್ ವಿಳಾಸದ ದಾಖಲೆಗಳನ್ನು ಸಂಪೂರ್ಣ ದೃಡೀಕರಿಸಿದರು. 85 ವರ್ಷದ ಮುದುಕನೊಬ್ಬನನ್ನು ಈ ರೀತಿ ವಿಚಾರಣೆಗೆ ಒಳಪಡಿಸುವುದು ಅಮಾನವೀಯ ಎಂದೆಣಿಸಿದ್ದರೂ ಖಾಕಿ ತೊಟ್ಟುಕೊಂಡ ನಂತರ ಅವರಿಗಿದೆಲ್ಲಾ ಅನ್ವಯಿಸೋದಿಲ್ಲ ಎಂದುಕೊಳ್ಳೋಣಾ. ತನಿಖೆ ಎಲ್ಲಾ ಮುಗಿದ ನಂತರ ಬಿಟ್ಟು ಬಿಡುತ್ತಾರೆ ಎಂದು ರೆಹಮಾನ್ ಅಂದುಕೊಂಡಿದ್ದರಂತೆ. ಪೊಲೀಸ್ ಇನ್ಸ್ ಸ್ಪೆಕ್ಟರ್ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದು ರೆಹಮಾನ್ ಗೆ ಪೊಲೀಸ್ ಸಿಬ್ಬಂದಿಯೊಬ್ಬ ಹೇಳಿದ್ದ. ಗಂಟೆ ರಾತ್ರಿ 11 ಆದರೂ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಗೆ ಬರಲೇ ಇಲ್ಲ. ಅಷ್ಟರಲ್ಲಿ ಬಂದ ಸಿಬ್ಬಂದಿಯೊಬ್ಬ ರೆಹಮಾನ್ ರನ್ನು ಲಾಕಪ್ಪಿನಲ್ಲಿ ಕೂರಲು ಹೇಳಿದ. ಸ್ನಾನವೂ ಇಲ್ಲ. ನಮಾಜೂ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಲ್ಲಿದ್ದ ಅಷ್ಟೂ ಪೊಲೀಸ್ ಸಿಬ್ಬಂದಿಗಳ ಅಪ್ಪನ ಪ್ರಾಯದವರಾಗಿದ್ದ ರೆಹಮಾನ್ ರನ್ನು ಅಂಗಿ, ಪ್ಯಾಂಟು ಕಳಚಿ ಒಳ ಉಡುಪನ್ನು ಮಾತ್ರ ಧರಿಸಿ ಮಲಗುವಂತೆ ಹೇಳಲಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಿನ ! ನಾಲ್ಕನೇ ದಿನ ರೆಹಮಾನ್ ಮೇಲೆ “ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ” ಎಂಬ ಆರೋಪ ಹೊರಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ರೆಹಮನ್ ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದರು. ರೆಹಮಾನ್ ರನ್ನು ಮಂಗಳೂರು ಸಬ್ ಜೈಲಿಗೆ ಹಾಕಲಾಯಿತು.

ಪೊಲೀಸರು ರೆಹಮಾನ್ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ ವ್ಯಕ್ತಿ” ಎಂದು ಕೇಸು ದಾಖಲಿಸಿದ್ದರು. ಈ ರೀತಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆತನ ಪರವಾಗಿ ವಾದಿಸಲು ವಕೀಲರಿದ್ದರೆ ಅಥವಾ ಜಾಮೀನು ನೀಡಲು ವ್ಯಕ್ತಿಗಳು ಸಿದ್ದರಿದ್ದರೆ ತಕ್ಷಣ ಜಾಮೀನು ದೊರೆಯುತ್ತದೆ. ಅಥವಾ ದಂಡ ಕಟ್ಟಿಯೂ ಬಿಡುಗಡೆ ಹೊಂದಬಹುದು. ಆದರೆ ಇವೆರಡೂ ರೆಹಮಾನ್ ಬಳಿ ತಕ್ಷಣಕ್ಕೆ ಲಭ್ಯ ಇರಲಿಲ್ಲ. ಜೈಲಿನಲ್ಲಿ ಕರಾವಳಿಯ ಊಟ ಸೇರದೆ, ಮತ್ತೊಂದೆಡೆ ವಯೋ ಸಹಜ ಕಾಯಿಲೆಗಳಿಂದ ನಿತ್ಯ ನರಳಾಡುತ್ತಿದ್ದ ರೆಹಮಾನ್ ಕತೆಯನ್ನು ನನ್ನನ್ನು ನಿತ್ಯ ಭೇಟಿಯಾಗುತ್ತಿದ್ದ ಡಿವೈಎಫ್ ಐ ಅಂದಿನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಹೇಳಿದಾಗ, ಆತ ತಕ್ಷಣ ಕಾರ್ಯಪ್ರವೃತ್ತನಾಗಿ ರೆಹಮಾನ್ ಬಿಡುಗಡೆಗೆ ಪಯತ್ನ ನಡೆಸಿ ಯಶಸ್ವಿಯಾದ್ರು. 2013 ಫೆಬ್ರವರಿ 23 ರಂದು ಅಮಾಯಕ ರೆಹಮಾನ್ ಮಂಗಳೂರು ಜೈಲಿನಿಂದ ಬಿಡುಗಡೆಯಾದ್ರು.

ಇದಾಗಿ ಕೆಲವು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗೆದ್ದು ನೋಡುವಾಗ ಚಿಕ್ಕ ಹುಡುಗನೊಬ್ಬ ಜೈಲಿನಲ್ಲಿ ಬಟ್ಟೆ ಒಗೆಯುತ್ತಿದ್ದಾನೆ. ಇದ್ಯಾರ ಬಟ್ಟೆ ಎಂದು ಕೇಳಿದ್ರೆ, ಅವರದ್ದು ಎಂದು ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಕಡೆ ಕೈ ತೋರಿಸಿದ್ದ. ನಾನಿದ್ದ ಬ್ಲಾಕ್ ನಲ್ಲೇ ಭೂಗತ ಪಾತಕಿ ಎಂಬ ಆರೋಪ ಹೊತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಇದ್ದರು. ನನ್ನನ್ನು ಬಹಳವಾಗಿ ಗೌರವಿಸುತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿಯ ಕೆಲಸದಿಂದ ಈ ಹುಡುಗನನ್ನು ಬೇರ್ಪಡಿಸುವುದು ನನಗೆ ಕಷ್ಟವಾಗಲಿಲ್ಲ. ಈ ಚಿಕ್ಕ ಹುಡುಗ ಇಬ್ರಾಹಿಂ ಜೈಲಿಗೆ ಯಾಕೆ ಬಂದಿದ್ದಾನೆ ಎಂಬುದು ಆತನಿಗೇ ಗೊತ್ತಿಲ್ಲ.

ಆತನ ಹೆಸರು ಇಬ್ರಾಹಿಂ. ನೋಡಲು ಹತ್ತು ವರ್ಷದವನಂತೆ ಕಾಣುವpic-mangalore jail ಆತನ ವಯಸ್ಸು 15.  ಬೆಳ್ತಂಗಡಿ ನಿವಾಸಿಯಾದ ಇಬ್ರಾಹಿಂನ ತಂದೆ ಖಾಯಿಲೆ ಬಿದ್ದು ಕಳೆದ ಎರಡು ವರ್ಷದಿಂದ ಹಾಸಿಗೆ ಪಾಲಾಗಿದ್ದಾರೆ. ತಾಯಿ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ರಾಹಿಂಗೊಬ್ಬಳು ಸಣ್ಣ ತಂಗಿ ಇದ್ದಾಳೆ. ತಂಗಿ ಮತ್ತು ತಂದೆಯ ಜೊತೆಗೆ ನನ್ನನ್ನೂ ತಾಯಿ ಸಾಕಬೇಕು ಎಂಬುದು ಕಷ್ಟಕರ ಸಂಗತಿ ಎಂದು ತಿಳಿದುಕೊಂಡ ಇಬ್ರಾಹಿಂ ಶಾಲೆ ಬಿಟ್ಟು ಮಂಗಳೂರಿನ ಮೂಡುಶೆಡ್ಡೆ ಬಳಿ ಇರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ಅಂದೂ ಶನಿವಾರ ಸಂಜೆ ಮನೆಗೆ ಬಂದು ರವಿವಾರ ರಾತ್ರಿ ಮನೆಯಿಂದ ವಾಪಸ್ಸು ಹೊರಟಿದ್ದ. ರಾತ್ರಿ 11 ಗಂಟೆಯಾಗಿದೆ. ನಾಳೆ ಬೆಳಿಗ್ಗೆ ಬೇಗನೆ ಫ್ಯಾಕ್ಟರಿಯಲ್ಲಿರಬೇಕಾದ್ದರಿಂದ ತಡ ರಾತ್ರಿ ಬರುವ ಸರಕಾರಿ ಬಸ್ಸೋ, ಟ್ಯಾಂಕರೋ ಹತ್ತಿ ಮಂಗಳೂರು ತಲುಪಬೇಕು ಎಂಬ ನಿರೀಕ್ಷೆಯಲ್ಲಿದ್ದ ಇಬ್ರಾಹಿಂ. ಅಷ್ಟರಲ್ಲಿ ಒರ್ವ ಪೊಲೀಸ್ ಬಂದು ಇಬ್ರಾಹಿಂ ನಲ್ಲಿ ಮಾತನಾಡಿದ್ದಾನೆ. ಹೆಸರು, ವಿಳಾಸ, ಬಸ್ ನಿಲ್ದಾಣದಲ್ಲಿ ನಿಂತಿರೋದಕ್ಕೆ ಕಾರಣ ಕೇಳಿದ್ದಾನೆ. ಎಲ್ಲದಕ್ಕೂ ಇಬ್ರಾಹಿಂ ಉತ್ತರಿಸಿದ್ದರೂ ಇಬ್ರಾಹಿಂನನ್ನು ಪೊಲೀಸ್ ಪೇದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದ.

ಬೆಳ್ತಂಗಡಿ ಠಾಣೆಯಲ್ಲಿ ರಾತ್ರಿ ಪೂರ್ತಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ತನ್ನ ಮನೆಯ ಎಲ್ಲಾ ಪರಿಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದರೂ, ನಾಳೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿಕೊಂಡರೂ ಇಬ್ರಾಹಿಂ ನನ್ನು ಪೊಲೀಸರು ಬಿಡುಗಡೆ ಮಾಡಲಿಲ್ಲ. ಅಂಗಿ ಕಳಚಿ ಲಾಕಪ್ಪಿನಲ್ಲಿ ಕೂರುವಂತೆ ಹೇಳಲಾಯಿತು. ರಾತ್ರಿ ಒಬ್ಬೊಬ್ಬರಾಗಿ ಬರೋ ಪೊಲೀಸ್ ಪೇದೆಗಳು ಪ್ರತ್ಯೇಕವಾಗಿ ಹೊಡೆದು ವಿಚಾರಣೆ ಮಾಡುತ್ತಿದ್ದರು. ರಾತ್ರಿ ಮೂರು ಗಂಟೆಯ ನಂತರ ಪೊಲೀಸರು ಇಬ್ರಾಹಿಂಗೆ ಮಲಗಲು ಹೇಳಿದ್ರು.  ಸೊಳ್ಳೆ ಕಚ್ಚಿಸಿಕೊಂಡು ಬೆಳಗ್ಗಿನವರೆಗೆ ನಿದ್ದೆ ಮಾಡದೆ ಕುಳಿತುಕೊಂಡೇ ಇದ್ದ ಇಬ್ರಾಹಿಂನನ್ನು ಮದ್ಯಾಹ್ನದ ವೇಳೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಇಬ್ರಾಹಿಂ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ” ಕೇಸು ದಾಖಲಿಸಿದ್ದರು. ನ್ಯಾಯಾಧೀಶರು ಕನಿಷ್ಠ ಈತನ ಮುಖ ನೋಡಿ ವಯಸ್ಸನ್ನೂ ಕೇಳದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 18 ವರ್ಷ ತುಂಬದ ಮಕ್ಕಳನ್ನು ಹಿಂದೆ ರಿಮಾಂಡ್ ಹೋಂ ಎಂದು ಕರೆಯಲ್ಪಡುತ್ತಿದ್ದ “ಮಕ್ಕಳ ಪರಿವೀಕ್ಷಣಾಲಯ”ದಲ್ಲಿ ಇರಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ನ್ಯಾಯಾಧೀಶರಿಗೆ ಇರಲಿಲ್ಲವೇ ಎಂಬುದು ಆಶ್ಚರ್ಯಕರ ವಿಷಯ.

ಅಂತೂ ಪೊಲೀಸರಿಗೆ 15 ರ ಹುಡುಗ, ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಾಸ್ಪದವಾಗಿ ಕಂಡು ಜೈಲು ಸೇರಿದ. ಪೊಲೀಸರಿಗೆ ಕ್ಲೀಯರ್ ಮಾಡಿಕೊಳ್ಳಲಾಗದ ಅನುಮಾನ ಈ ಹುಡುಗನಲ್ಲಿ ಏನು ಬಂತೋ ಗೊತ್ತಿಲ್ಲ. ನಾಲ್ಕೋ, ಐದೋ ಮರ್ಡರ್ ಮಾಡಿದ ವೃತ್ತಿಪರ ರೌಡಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರಿಗೆ ಡೌಟ್ ಬಂದು ವಿಚಾರಣೆ ನಡೆಸಿದಾಗಲೂ ಆತ ಬಾಯ್ಬಿಡದ ರೌಡಿಯಾಗಿದ್ದರೆ, “ಕೆಪಿ ಆ್ಯಕ್ಟ್ 96 ಪ್ರಕಾರ ಅನುಮಾನಾಸ್ಪದ ಕೇಸು” ದಾಖಲಿಸಿ ಜೈಲಿಗಟ್ಟುವುದು ಸರಿಯಾದ ಕ್ರಮ. ಈ ಬಾಲಕನ ಮೇಲೆ ಈ ಮೊದಲು ಯಾವ ಪ್ರಕರಣಗಳೂ ಇಲ್ಲ. ಈತನಿಗೆ ಪೊಲೀಸ್ ಠಾಣೆ, ಜೈಲು ಎಲ್ಲವೂ ಹೊಸತು. ವಕೀಲ ಯಾರು, ಜಡ್ಜ್ ಯಾರು ಎಂದೂ ತಿಳಿಯದೆ ಕರಿ ಕೋಟು ಹಾಕಿದ್ದವರನ್ನೆಲ್ಲಾ ಜಡ್ಜುಗಳು ಎಂದು ತಿಳಿದಿದ್ದ. ಅಂತದ್ದರಲ್ಲಿ ಈ ಹುಡುಗನ ಮೇಲೆ ಅನುಮಾನಗಳೇನಾದರೂ ಬಂದಿದ್ದರೆ ಆತನ ತಂದೆ ತಾಯಿಯನ್ನು ಕರೆಸಿ ವಿಚಾರಣೆ ಮಾಡಬಹುದಿತ್ತು. ಹುಡುಗನನ್ನು ಆತನ ಮನೆಗೆ ಕರೆದೊಯ್ದು ವಿಚಾರಣೆಯನ್ನು ಮಾಡಬಹುದಿತ್ತು. ಇಷ್ಟಕ್ಕೂ ತೃಪ್ತಿಯಾಗದಿದ್ದರೆ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿ ಪೊಲೀಸರ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಬಹುದಿತ್ತು. ಎಂತೆಂಥ ಭಯೋತ್ಪಾಧಕರನ್ನು ಲಾಠಿಯಿಂದ ಬಾಯಿ ಬಿಡಿಸುವ ಪೊಲೀಸರಿಗೆ ಯಕಶ್ಚಿತ್ ಹುಡುಗನೊಬ್ಬನಿಗೆ ರಾತ್ರಿ ಪೂರ್ತಿ ಹೊಡೆದರೂ ಬಾಯಿ ಬಿಡಿಸಲಾಗಲಿಲ್ಲ ಮತ್ತು ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಲಾಗಿಲ್ಲ ಎಂದರೆ ಅರ್ಥ ಏನು ? ಮತ್ತೆ ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ದಂಡ ಕಟ್ಟಿ ಜೈಲಿನಿಂದ ಬಿಡುಗಡೆಯಾಗುವಂತೆ ಮಾಡಲಾಯ್ಮಾತು.  ನಂತರ ಇವರೆಡೂ ಪ್ರಕರಣಗಳನ್ನು ಇಟ್ಟುಕೊಂಡು ಅನುಮಾನಸ್ಪದ ಪ್ರಕರಣದ ಅಡಿಯಲ್ಲಿ ಅಮಾಯಕ ಮುಸ್ಲೀಮರನ್ನು ಬಂಧನ ಮಾಡುವ ಪೊಲೀಸರ ಬಗ್ಗೆ ಡಿವೈಎಫ್ ಐ ಪ್ರತಿಭಟನೆ ನಡೆಸಿತು. ಪೊಲೀಸ್ ಆಯುಕ್ತರ ಬಳಿ ನಿಯೋಗ ಕೊಂಡೊಯ್ದು ಎಚ್ಚರಿಕೆಯನ್ನು ನೀಡಿದ ಬಳಿಕ ಸ್ವಲ್ಪ ಸಮಯ ಕೆಪಿ ಅ್ಯಕ್ಟ್ 96 ಅಡಿಯಲ್ಲಿ ಅಮಾಯಕ ಮುಸ್ಲೀಮರು ಮಂಗಳೂರು ಜೈಲು ಸೇರುವುದು ಕಡಿಮೆಯಾಗಿತ್ತು.

ಭಯೋತ್ಪಾಧಕರಿಗೆ ಹವಾಲ ಹಣ ಹಂಚಿಕೆ ಮಾಡುತ್ತಿದ್ದಾಳೆ ಎಂದು ಮಹಿಳೆ ಮತ್ತು ಪುಟ್ಟ ಮಗುವನ್ನು ಪೊಲೀಸರು ಬಂಧಿಸಿದ್ದರು. ಕೇವಲ ಹಣಕಾಸಿನ ಅಪರಾಧವನ್ನು ಮುಸ್ಲಿಂ ಹೆಸರಿನ ಮಹಿಳೆ ಎಂಬ ಕಾರಣಕ್ಕಾಗಿ ಭಯೋತ್ಪಾಧನೆಯನ್ನು ತಳಕು ಹಾಕಲಾಗಿತ್ತು. ಆಕೆ ಭಯೋತ್ಪಾಧಕಿ ಅಲ್ಲ ಎಂದು ಮಂಗಳೂರಿನಂತಹ ಪ್ರದೇಶದಲ್ಲಿ ಸಾರುವಷ್ಟರ ಹೊತ್ತಿಗೆ ಡಿವೈಎಫ್ ಐ ಹೈರಾಣಾಗಿತ್ತು. ಇಂತಹ ನೂರಾರು ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ನೂರಾರು ಅಮಾಯಕ ಕೈದಿಗಳು ಜೈಲು ಸೇರಿದ್ದಾರೆ, ಇನ್ನೂ ಸೇರಲಿದ್ದಾರೆ.

ಪ್ರಶ್ನೆಯಿರುವುದು ಮಂಗಳೂರು ಪೊಲೀಸರು ಯಾಕೆ ಮುಸ್ಲೀಮರ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದರ ಬಗ್ಗೆ. ಯಾವ ಪ್ರಕರಣಗಳೂ ದಾಖಲಾಗದ ವೃದ್ದ ಮುಸ್ಲೀಮರನ್ನೋ, ಮುಸ್ಲೀಮ್ ಬಾಲಕರನ್ನೋ ಯಾಕೆ ಎತ್ತಾಕಿಕೊಂಡು ಬರುತ್ತಾರೆ ? ಮುಸ್ಲೀಮರನ್ನು ಕಂಡಾಗ ಪೊಲೀಸರಿಗೆ ಯಾಕೆ ಅನುಮಾನಗಳು ಬರುತ್ತದೆ ಎಂಬ ಹಿನ್ನಲೆಯನ್ನು ಇಟ್ಟುಕೊಂಡು, ಅಧ್ಯಯನ ನಡೆಸಿ, ಕೆಪಿ ಆ್ಯಕ್ಟ್ 96 ಬಳಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರವನ್ನು ಆಗ್ರಹಿಸಬೇಕಾಗಿದೆ. ದೇಶ ಕಟ್ಟಿದ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣಗಳೇನು ಎಂಬುದರ ಬಗ್ಗೆ ಅನುಮಾನಿತ ಮತ್ತು ಅವಮಾನಿತ ಸಮುದಾಯಗಳ ವಿದ್ಯಾವಂತ, ಪ್ರಜ್ಞಾವಂತ ಪ್ರತಿನಿಧಿಗಳು ಮುಸ್ಲಿಂ ಯುವ ಸಮಾವೇಶದಲ್ಲಿ ಭಾಗಿಯಾಗಿ ಚರ್ಚಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರದ್ದೂ.

Leave a Reply

Your email address will not be published. Required fields are marked *