ಏಸುಕ್ರಿಸ್ತ ಮಹಾತ್ಮೆ ಮತ್ತು ಕರಾವಳಿ ಯಕ್ಷಗಾನ ವಿರಚಿತ ಕೋಮುವಾದ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ನಡೆಯಲಿರುವ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ತಾಳಮದ್ದಳೆಗೆ ಹಿಂದುತ್ವವಾದಿಗಳಿಂದ ವಿರೋಧpic 3 ವ್ಯಕ್ತವಾಗುತ್ತಿದೆ. ಯಕ್ಷಗಾನ ಎಂಬ ವೈದಿಕರ ಕ್ಷೇತ್ರಕ್ಕೆ ಏಸು ಕ್ರಿಸ್ತ ಮಹಾತ್ಮೆ ಬಂದಿರೋದು ಮತಾಂತರದ ಉದ್ದೇಶದಿಂದ ಎಂಬ ಆರೋಪ ಹಿಂದುತ್ವವಾದಿಗಳದ್ದು. ಯಕ್ಷಗಾನ ಎಂಬುದು ಕೇವಲ ಕಲೆ, ಸಂಸ್ಕೃತಿಯಲ್ಲ. ಇದರ ಹಿಂದೆ ವೈಧಿಕ ಧರ್ಮದ ಪ್ರಸಾರದ ತಂತ್ರವಿತ್ತು. ವೈದಿಕರು ಮತಾಂತರಕ್ಕಾಗಿಯೇ ಯಕ್ಷಗಾನವನ್ನು ಬಳಸಿ ತನ್ನ ಕಾರ್ಯ ಪೂರ್ಣಗೊಳಿಸಿದ ಬಳಿಕ ಈಗ ಅದನ್ನೇ ಕೋಮುವಾದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕರಾವಳಿಯ ಜನರ ತಲೆಯೊಳಗೆ ಈ ಪರಿಯ ಕೋಮುವಾದವನ್ನು ತುಂಬಿಸಿದವರು ಯಾರು ಎಂದು ಅಧ್ಯಯನ ಮಾಡಿದಾಗ ಅದರ ಮೊದಲ ಆರೋಪಿಯಾಗಿ ಕಾಣುವುದೇ ಈ ಯಕ್ಷಗಾನ. ಕರಾವಳಿಯ ಗಂಡುಕಲೆ, ಸಾಂಸ್ಕೃತಿಕ ಹಿರಿಮೆ ಎಂದು ಹೇಳುವ ಯಕ್ಷಗಾನ ಶೂದ್ರ ಪರಂಪರೆಯನ್ನು ನಿಧಾನವಾಗಿ ಕೊಲ್ಲುತ್ತಲೇ ಬಂತು.

ಯಕ್ಷಗಾನ ಎಂಬುದು ಪ್ರಾರಂಭವಾಗಿದ್ದು ಮಹಾಭಾರತ, ರಾಮಾಯಣ, ಕೃಷ್ಣ, ವಿಷ್ಣು, ದೇವಿಯ ಪ್ರಚಾರಕ್ಕೆ. ಯಕ್ಷಗಾನವನ್ನು ಆಟ, ಬಯಲಾಟ ಎಂದು ಕರೆಯುತ್ತಾರೆ. 1614ರಲ್ಲಿ ತಂಜಾವರದ ಅರಸು ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹ ಎಂಬ ಯಕ್ಷಗಾನ ಪ್ರಬಂಧವೇ ಮೊದಲ ಕೃತಿ ಎನ್ನಲಾಗುತ್ತದೆ. ಇದರ ಬಗ್ಗೆ ತಕರಾರು ಚರ್ಚೆಗಳೂ ಇವೆ. ‘‘ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ’’ ಎಂದು ಸಂಶೋಧಕಿ ಡಾ ಸುನೀತಾ ಶೆಟ್ಟಿಯವರು ತಮ್ಮ ಬರಹದಲ್ಲಿ ಹೇಳುತ್ತಾರೆ. ಹೀಗೆ ಪುರಾಣದ ಕತೆಯ ಮೇಲೆ ಪ್ರಾರಂಭವಾದ ಯಕ್ಷಗಾನವು ಪುರಾಣಗಳನ್ನು ಜನರ ತಲೆಗೆ ತುಂಬುವಲ್ಲಿ ಯಶಸ್ವಿಯಾಗುತ್ತದೆ.

ಕರಾವಳಿ ಭಾಗದಲ್ಲಿ ವೈದಿಕ ಧರ್ಮ ಹರಡುವುದು ಸುಲಭ ಸಾಧ್ಯವಾಗಿರಲಿಲ್ಲ. ನಮ್ಮ ಹಿರಿಯರನ್ನೇ ದೈವಗಳು ಎಂದುಕೊಳ್ಳುವ ಭೂತಾರಾಧನೆ ಗಟ್ಟಿಯಾಗಿದ್ದ ದಿನಗಳವು. ಕೃಷ್ಣ, ರಾಮ, ದೇವಿ ಕರಾವಳಿಗರ ದೇವರಾಗಿರಲಿಲ್ಲ. ಮದ್ವಾಚಾರ್ಯರು ಸ್ಥಾಪಿಸಿದ ಮಠಗಳು, ದೇವಸ್ಥಾನಗಳಿಗೆ ಮಾರ್ಕೆಟಿಂಗ್ ಮಾಡಬೇಕಾದರೆ ಈ ಯಕ್ಷಗಾನ ಪ್ರಸಂಗಗಳನ್ನು ಬರೆಯುವುದು ಅನಿವಾರ್ಯವಾಯ್ತು. ಸೇವೆಯಾಟ, ಹರಕೆಯಾಟ, ಬಯಲಾಟ ಎಂಬ ವಿಧದ ಯಕ್ಷಗಾನದ ಮೂಲಕ ಈ ಪುರಾಣಗಳನ್ನು ಜನರ ಮನೆಮನಗಳಿಗೆ ತಲುಪಿಸಲಾಯ್ತು.

ಆಗಿನ ಪ್ರಭುತ್ವ ಮತ್ತು ವೈದಿಕರು ಅಂದು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಆಚಾರ್ಯ ವಿದ್ಯಾರಣ್ಯರು ಕುಲಗುರುವಾಗಿ ಹರಿಹರ ಮತ್ತು ಬುಕ್ಕರಾಯರ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು. ಆಗ ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದರು. ವಿದ್ಯಾರಣ್ಯರ ಕಾಲದಲ್ಲೇ ಭಾಗವತಿಕೆಯ ಸಾಹಿತ್ಯವನ್ನು ರಚಿಸಲಾಯ್ತು ಎಂದು ಸಂಶೋಧಕರನೇಕರು ಕಂಡುಕೊಂಡಿದ್ದಾರೆ.

ಇದಾದ ನಂತರ ಕರ್ನಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಯಕ್ಷಗಾನ ಕಲೆಯನ್ನು ಪೋಷಿಸಿದರು. ಕೆಳದಿ ಸಂಸ್ಥಾನದ ಅರಸರುpic 1 ಈಗಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅವಿಭಜಿತ ದಕ್ಷಿಣ ಕನ್ನಡ, ದಾರವಾಡ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ್ದರು. ಹಾಗಿದ್ದರೆ ದಾರವಾಡ, ಚಿತ್ರದುರ್ಗ, ಉತ್ತರ ಕರ್ನಾಟಕದ ಭಾಗಗಳಲ್ಲಿ ಯಕ್ಷಗಾನ ಯಾಕೆ ವೈದಿಕ ಧರ್ಮವನ್ನು ಹರಡಲಿಲ್ಲ ಎಂಬ ಪ್ರಶ್ನೆ ಉದ್ಬವವಾಗುತ್ತದೆ. 1336 ರಿಂದ 1646 ರವರೆಗೆ ವಿಜಯನಗರ ಸಾಮ್ರಾಜ್ಯವೂ 1500 ನೇ ಇಸವಿಯಿಂದ ಕೆಳದಿ ಸಂಸ್ಥಾನದ ಪ್ರಭುತ್ವ ಪ್ರಾರಂಭವಾದರೆ, ಅದಕ್ಕಿಂತಲೂ ಮೊದಲೇ ಅಂದರೆ 1317 ರಿಂದ ಮದ್ವಾಚಾರ್ಯರು ವೈದಿಕ ಧರ್ಮದ ಪ್ರಚಾರವನ್ನು ಕರಾವಳಿಯನ್ನು ಗುರಿಯಿಟ್ಟು ಮಾಡಲಾರಂಭಿಸಿದ್ದರು. ಮದ್ವಾಚಾರ್ಯ, ವಿದ್ಯಾರಣ್ಯರ ಪ್ರಭಾವವು ಆ ನಂತರ ಕರಾವಳಿಯನ್ನು ಆಳಿದ ಅರಸರ ಮೇಲೆ ಗಾಢವಾಗಿ ಬೀರಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1308 ರಲ್ಲಿ ಮದ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸುವುದರ ಜೊತೆಗೆ ಮಲೆಕುಡಿಯರ ನಾಗಾರಾಧನೆಯ ಸ್ಥಳವಾದ ಸುಬ್ರಹ್ಮಣ್ಯಕ್ಕೂ ಪೀಠಾಧಿಪತಿಯನ್ನು ನೇಮಿಸಿದ್ರು. ಈ ಮಠಗಳು ಅಂದಿನ ಅರಸರ ಸಂಪೂರ್ಣ ಸಹಕಾರದಲ್ಲಿ ವೈದಿಕ ಧರ್ಮವನ್ನು ಹರಡಲು ಪ್ರಾರಂಭಿಸಿದರು. ಅದಕ್ಕೆ ಅವರು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನವನ್ನು.

ಉತ್ತರ ಕರ್ನಾಟಕದ ದೊಡ್ಡಾಟ, ಕೇರಳದ ಕಥಕ್ಕಳಿ, ಕೃಷ್ಣ ನಾಟ್ಯಂ, ರಾಮನಾಟ್ಯಂ ನಂತೆ ಯಕ್ಷಗಾನವನ್ನು ವೈದಿಕರು ಕೇವಲ ಕಲೆಯನ್ನಾಗಿ ಉಳಿಸಲಿಲ್ಲ. ಅದಕ್ಕೊಂದು ಧಾರ್ಮಿಕ ರೂಪ ನೀಡಲಾಯ್ತು. ಯಕ್ಷಗಾನವನ್ನು ಆಡುವ ಮೊದಲು ಅದಕ್ಕೊಂದು ಚೌಕಿ ಪೂಜೆಯನ್ನು ನಡೆಸಲಾಯ್ತು. ಅಂದರೆ ಒಂದು ಯಕ್ಷಗಾನ ಮೇಳ ತನ್ನದೇ ಆದ ದೇವರನ್ನು ಪ್ರತಿನಿಧಿಸುತ್ತದೆ. ಯಕ್ಷಗಾನದ ಪ್ರಾರಂಭದಲ್ಲಿ ಗಣಪತಿಯನ್ನು ಭಜಿಸಲಾಗುತ್ತದೆ. ನಂತರ ಪುರಾಣದ ಕತೆಯನ್ನು ನಾಟ್ಯ ಮತ್ತು ವಾಚ್ಯದ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಜನರಿಗೆ ಅರ್ಥವಾಗುವ ಕರಾವಳಿ ಕನ್ನಡದಲ್ಲಿ ನಡೆಯುವ ಯಕ್ಷಗಾನದ ಪುರಾಣವು ಅನಕ್ಷರಸ್ಥರಿಗೂ ಅರ್ಥವಾಗುವಂತಿರುತ್ತದೆ. ಕೋಡ್ದಬ್ಬು, ತನ್ನಿಮಾನಿಗ, ಪಂಜುರ್ಲಿಯಂತಹ ದೈವಗಳನ್ನಷ್ಠೆ ನಂಬುತ್ತಿದ್ದ ಕರಾವಳಿಯ ಶೂದ್ರರು ನಿಧಾನಕ್ಕೆ ರಾಮ ಕೃಷ್ಣರನ್ನು ದೇವರೆಂದುಕೊಳ್ಳಲು ಪ್ರಾರಂಬಿಸಿದ್ರು. ಅಯೋದ್ಯೆಯ ಬಾಬರಿ ಮಸೀದಿ, ರಾಮಜನ್ಮ ಭೂಮಿ ವಿವಾದ ಸಂಧರ್ಭದಲ್ಲೇ ದೂರದರ್ಶನದಲ್ಲಿ ರಾಮಾಯಣ ದಾರವಾಹಿಯ ಮೂಲಕ ರಾಮ ಹೇಗೆ ಇಡೀ ದೇಶಕ್ಕೆ ದೇವರಾದನೋ ಹಾಗೇ. ಆದರೆ ಎಷ್ಟೇ ಕಸರತ್ತು ಮಾಡಿದರೂ ಕರಾವಳಿಯ ಶೂದ್ರರು, ದಲಿತರು ದೈವ/ಭೂತಗಳನ್ನು ಬಿಡುವುದಿಲ್ಲ ಎಂದು ಗೊತ್ತಾದಾಗ ಕೊಡ್ದಬ್ಬು, ಪಂಜುರ್ಲಿ ಮುಂತಾದ ದೈವಗಳು ಶಿವನ ಗಣಗಳು ಎಂದು ಸಾರುವ ಯಕ್ಷಗಾನ ಪ್ರಸಂಗ ಬರೆದರು! ಆ ಮೂಲಕ ಭೂತಾರಾಧನೆಯ ದೈವಸಾನಗಳಿಗೆ ವೈದಿಕರ ಪ್ರವೇಶವಾಯ್ತು.

ಈ ರೀತಿ ಮೂರ್ನಾಲ್ಕು ವಿಧವಾಗಿ ಯಕ್ಷಗಾನ ಕರಾವಳಿಯಲ್ಲಿ ಖ್ಯಾತಿ ಪಡೆಯಲಾರಂಭಿಸಿತು. ಉಳ್ಳವರು ಹರಕೆಯಾಟ ಮಾಡಿದ್ರೆ, ಬಡವರು ಬಯಲಾಟ ನೋಡಿದ್ರು. ಯಕ್ಷಗಾನ ನೋಡುವುದು ಮತ್ತು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ತೇಲಿಬಿಡಲಾರಂಬಿಸಿದರು. ಈ ಕಾರಣಕ್ಕಾಗಿ ಇದೀಗ ದಕ್ಷಿಣ ಕನ್ನಡದ ದೇವಸ್ಥಾನವೊಂದರಲ್ಲಿ ಆರು ಯಕ್ಷಗಾನ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಯಾರಾದರೂ ಇವತ್ತು ಯಕ್ಷಗಾನವನ್ನು ಬುಕ್ ಮಾಡಿದರೆ ಅವರ ಸರದಿ ಬರುವುದು ಎರಡು ವರ್ಷದ ನಂತರ ! ಅಂದರೆ ಅಷ್ಟೊಂದು ಪ್ರಮಾಣದಲ್ಲಿ ಈ ದೇವಸ್ಥಾನವೊಂದರ ಯಕ್ಷಗಾನ ಕರಾವಳಿಯಲ್ಲಿ ಕಾರ್ಯತತ್ಪರವಾಗಿದೆ. ಹರಕೆಯ ಆಟ ಆಡಿಸಬೇಕೆಂದಿದ್ದರೆ ಈ ದೇವಸ್ಥಾನಗಳ ಯಕ್ಷಗಾನ ಮೇಳವನ್ನೇ ಆಶ್ರಯಿಸಬೇಕಾಗುತ್ತದೆ. ದೇವಸ್ಥಾನಗಳ ಮೇಳಗಳ ಜೊತೆ ದೇವಸ್ಥಾನದಿಂದಲೇ ದೇವರು ಬರುವ ಪ್ರಕ್ರೀಯೆ ಇದೆ. ಅಂದರೆ ಸರ್ವಾಭರಣ ಭೂಷಿತರಾಗಿರುವ ದೇವರ ಮೂರ್ತಿಯನ್ನು ಪುರೋಹಿತರು ಯಕ್ಷಗಾನ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಬಂದು ಮಹಾಪೂಜೆ ಮಾಡುತ್ತಾರೆ. ಹರಕೆಯಾಟ ಮಾಡಿದಾಗ ಬರುವ ದೇವರು ಬ್ರಾಹ್ಮಣೇತರರ ಮನೆಯೊಳಗೆ ಈಗಲೂ ಬರುವುದಿಲ್ಲ. ಉದಾಹರಣೆಗೆ ಬಂಟ ಬಿಲ್ಲವ ಜಾತಿಯವನೊಬ್ಬ ದೇವಸ್ಥಾನದ ಮೇಳವನ್ನು ಸಾವಿರಾರು ರೂಪಾಯಿ ಕೊಟ್ಟು ಬುಕ್ ಮಾಡಿ, ಲಕ್ಷಾಂತರ ರೂಪಾಯಿ ವ್ಯಹಿಸಿ ಅದ್ದೂರಿ ಯಕ್ಷಗಾನ ಮಾಡಿದರೂ ದೇವರನ್ನಿಡಲು ಬ್ರಾಹ್ಮಣರ ಮನೆ ಹುಡುಕಬೇಕು ಅಥವಾ ಊರ ದೇವಸ್ಥಾನವನ್ನು ಆಶ್ರಯಿಸಬೇಕು. ಈ ರೀತಿ ಯಕ್ಷಗಾನ ಈಗಲೂ ಮಡಿಮೈಲಿಗೆಯನ್ನು ಸಂಪ್ರದಾಯಬದ್ದವಾಗಿ ನಡೆಸುತ್ತಿದೆ.

ಕೆಲ ವರ್ಷಗಳ ಹಿಂದೆ ಯಕ್ಷಗಾನದಲ್ಲಿ ಜಾತಿಪದ್ದತಿ ವಿವಾದಗಳನ್ನು ಹುಟ್ಟು ಹಾಕಿತ್ತು.‌ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಕಲಾವಿದ ಐರೋಡಿpic 2 ಗೋವಿಂದಪ್ಪಗೆ ಪಾತ್ರ ನಿರಾಕರಿಸಲಾಯ್ತು. ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಅಸ್ಪೃಶ್ಯರೇ ಆಗಿದ್ದ ಬಿಲ್ಲವ ಸಮುದಾಯಕ್ಕೆ ಸೇರಿದ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದರೆ ದುರ್ಗಾಪರಮೇಶ್ವರಿ ಮುನಿಸಿಕೊಳ್ಳುತ್ತಾರೆ ಎಂಬುದು ವಾದವಾಗಿತ್ತು. ಕೊನೆಗೆ ಭಾರೀ ಪ್ರತಿಭಟನೆಯ ನಂತರ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದ್ರು. ದೇವಸ್ಥಾನದ ಅಧೀನದಲ್ಲಿರುವ ಮೇಳಗಳ ಉಸ್ತುವಾರಿ ಅಥವಾ ಮಾಲೀಕರು ಹೆಚ್ಚಾಗಿ ಬಂಟರೇ ಆಗಿರುತ್ತಾರೆ. ಒಂದು ಕಾಲದ ಗುತ್ತಿನ ಅರಸರಾಗಿದ್ದ ಬಂಟರು ಪುರೋಹಿತಶಾಹಿಗಳ ಸೂಚನೆಗಳನ್ನು ಚಾಚೂತಪ್ಪದೆ ಜಾರಿಗೆ ತರುತ್ತಾರೆ. ಭರತನಾಟ್ಯ ಸೇರಿದಂತೆ ಹಲವು ಪ್ರಕಾರಗಳು ಬ್ರಾಹ್ಮಣರ ಹಿಡಿತದಲ್ಲಿದ್ದರೂ ಕ್ರಮೇಣ ಅವು ಸಾಮಾಜಿಕ ಆಶಯಗಳನ್ನು ಮೈಗೂಡಿಸಿಕೊಂಡವು. ಭರತನಾಟ್ಯವನ್ನು ಎಲ್ಲಾ ಸಮುದಾಯದವರೂ ಪ್ರಸ್ತುತಪಡಿಸಬಹುದು ಮತ್ತು ಧಾರ್ಮಿಕವಲ್ಲದ ಸಂಗೀತಕ್ಕೂ ಅಳವಡಿಸಿಕೊಳ್ಳಬಹುದು ಎಂಬಲ್ಲಿಯವರೆಗೆ ಬದಲಾವಣೆ ಕಂಡಿತು. ಆದರೆ ಯಕ್ಷಗಾನ ಮಾತ್ರ ಇನ್ನೂ ಕೂಡಾ ಸಾಮಾಜಿಕ ಬದಲಾವಣೆಗೆ ತೆರೆದುಕೊಳ್ಳಲೇ ಇಲ್ಲ. ಪೆರ್ಡೂರು ಮೊದಲಾದ ಮೇಳಗಳು ಲೌಕಿಕ ಥೀಮ್ ಇರತಕ್ಕಂತಹ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದವು. ಧಾರ್ಮಿಕವಲ್ಲದ ಕಥಾ ಪ್ರಸಂಗವನ್ನು ಇಟ್ಟುಕೊಂಡು ಯಕ್ಷಗಾನ ಆಡಿದರು. ಆದರೆ ಅವ್ಯಾವುದೂ ಹೆಚ್ಚಿನ ಕಾಲ ಬಾಳಿಕೆ ಬರಲಿಲ್ಲ. ಅದಕ್ಕೆ ಕಾರಣವಾಗಿರುವುದು ಯಕ್ಷಗಾನಕ್ಕೆ ಬ್ರಾಹ್ಮಣರು ಹಾಕಿರುವ ಭದ್ರ ಬುನಾಧಿ. ಯಕ್ಷಗಾನವನ್ನು ಪ್ರಗತಿಪರವಾಗಿ ಬದಲಾವಣೆ ಮಾಡಲು ಸಾಧ್ಯವೇ ಆಗದ ರೀತಿಯಲ್ಲಿ ದೇವಸ್ಥಾನ, ದೇವರು, ಧರ್ಮ, ಹರಕೆ, ಪೂಜೆಗೆ ವ್ಯವಸ್ಥಿತವಾಗಿ ಲಿಂಕ್ ಮಾಡಲಾಗಿದೆ.

ಇವತ್ತಿಗೂ ಯಕ್ಷಗಾನದ ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿ ಪಾತ್ರವನ್ನು ಬ್ರಾಹ್ಮಣರೇ ಮಾಡಬೇಕು ಎಂಬ ಅಲಿಖಿತ ನಿಯಮವಿದೆ. ಯಕ್ಷಗಾನ ಕೇವಲ ಕಲೆಯಾಗಿದ್ದರೆ ಅದಕ್ಕೆ ದೈವತ್ವವನ್ನು ನೀಡುವ, ಮಡಿ ಮೈಲಿಗೆಯನ್ನು ಹೇರುವ ಅಗತ್ಯ ಇರಲಿಲ್ಲ. ದೇವಿ ಪಾತ್ರ ಮಾಡುವವನು ಮಡಿಯಲ್ಲಿ ಇರಬೇಕು, ವೃತಗಳನ್ನು ಅನುಸರಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದು ಅದನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿತಗೊಳಿಸಲಾಯ್ತು. ಪಾತ್ರಗಳನ್ನು ಕೆಳವರ್ಗಗಳಿಗೆ ನೀಡಿದರೂ, ಅಲ್ಲಿ ಪಾತ್ರವನ್ನು ಶ್ರೇಣಿಕೃತವಾಗಿ ವಿಂಘಡಿಸಲಾಗುತ್ತದೆ. ಈಗೀಗ ಕೆಳವರ್ಗಗಳು ಯಕ್ಷಗಾನದಲ್ಲಿ ಹೆಸರು ಮಾಡಿದರೂ ಯಕ್ಷಗಾನದ ಮೂಲ ವೈದಿಕರ ಆಶಯವನ್ನು ಬದಲು ಮಾಡಲು ಸಾಧ್ಯವಾಗಿಲ್ಲ‌.

ತೆಂಕುತಿಟ್ಟು, ಬಡಗುತಿಟ್ಟು ಎಂದು ಇಪ್ಪತ್ತಕ್ಕೂ ಹೆಚ್ಚು ಮೇಳಗಳು ಕರಾವಳಿಯಲ್ಲಿ ವೈದಿಕ ಧರ್ಮ ಹರಡುವಲ್ಲಿ ಕಾರ್ಯತತ್ಪರವಾಗಿದೆ. ಬೀದಿ ಬೀದಿಯಲ್ಲಿ, ಮನೆ ಮನೆಗಳಲ್ಲಿ ಯಕ್ಷಗಾನ ನಡೆಯಲಾರಂಭಿಸಿತು. ನಡೆಯುತ್ತಿದೆ. ಇತ್ತಿಚೆಗೆ ತುಳು ಯಕ್ಷಗಾನಗಳು ಪ್ರಾರಂಭವಾದಾಗ ಶೋಷಣೆ ಮುಕ್ತ ಸಮಾಜಕ್ಕಾಗಿ ಹೋರಾಡಿ ದೈವಗಳಾದ ಕೋಟಿ ಚೆನ್ನಯ್ಯ, ಕೊಡ್ದಬ್ಬು, ತನ್ನಿಮಾನಿ ಮತ್ತಿತರ ಶೂದ್ರ ದೈವಗಳ ಕತೆಗಳು ಯಕ್ಷಗಾನ ಪ್ರಸಂಗವಾದುದು ಹೊಸ ನಿರೀಕ್ಷೆ ಮೂಡಿಸಿತ್ತು. ಆದರೆ ಈ ಪ್ರಸಂಗಗಳೂ ವೈದಿಕರ ಯೋಜನೆಯಂತೆಯೇ ನಡೆದವು. ವೈದಿಕರ ದೇವರಿಲ್ಲದ ಯಕ್ಷಗಾನವನ್ನು ಒಪ್ಪಿಕೊಳ್ಳಲಾಗದ ಸ್ಥಿತಿಗೆ ಕರಾವಳಿಗರು ತಲುಪಿ ಆಗಿತ್ತು.

ಈಗ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ವಿವಾದ ಎಬ್ಬಿಸಿದೆ. 40 ವರ್ಷಗಳ ಹಿಂದೆ ಕೇಶವ ಮುಳಿಯರು ಬರೆದ ಯಕ್ಷಗಾನ ಪ್ರಸಂಗವನ್ನು ಪರಿಷ್ಕರಿಸಿ ತಾಳಮದ್ದಲೆಯಾಗಿ ಪ್ರಸ್ತುತಪಡಿಸಲಿದ್ದಾರೆ. ಯಕ್ಷಗಾನ ಎಂಬುದು ಈಗ ಕೇವಲ ಧಾರ್ಮಿಕ ಕಲೆಯಾಗಿಲ್ಲ. ಯಕ್ಷಗಾನ ಎಂಬುದು ಸಾಂಸ್ಕೃತಿಕ ಕಲೆಯಾಗಿ ಹಲವು ಲಾಭಗಳನ್ನು ತನ್ನದಾಗಿಸಿಕೊಂಡಿದೆ. ಸರಕಾರದಿಂದಲೂ ಅಧಿಕೃತವಾಗಿ ಕರಾವಳಿಯ ಸಾಂಸ್ಕೃತಿಕ ಕಲೆಯಾಗಿ ಗುರುತಿಸಿಕೊಂಡಿದೆ. ಸರಕಾರದ ಅಧೀನದಲ್ಲಿ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿ, ಕೋಟ್ಯಾಂತರ ರೂಪಾಯಿ ಅನುದಾನವನ್ನೂ ನೀಡುತ್ತಿದೆ. ಆದುದರಿಂದ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನಕ್ಕೆ ಹಿಂದುತ್ವವಾದಿಗಳು ತಡೆಯೊಡ್ಡುವುದು ಸಮಂಜಸವಲ್ಲ.

ಯಕ್ಷಗಾನದಲ್ಲಿ ಹಿಂದೂಗಳ ಕೆಳವರ್ಗಗಳ ದೈವಗಳ ಕತೆಯನ್ನು ಅಳವಡಿಸಿಕೊಂಡಾಗಲೇ ಜನ ಅಂತ ಯಕ್ಷಗಾನವನ್ನು ಒಪ್ಪದ ಸ್ಥಿತಿಯನ್ನು ವೈದಿಕಶಾಹಿಗಳು ನಿರ್ಮಾಣ ಮಾಡಿದ್ದಾರೆ. ಕೋಟಿಚೆನ್ನಯ್ಯ ಬಿಲ್ಲವರ ಆರಾಧ್ಯ ದೈವ. ಆದರೆ ದೇವಿ ಮಹಾತ್ಮೆಗೆ ಸಿಗುವ ಪ್ರಾಮುಖ್ಯತೆಯಲ್ಲಿ ಒಂದಂಶವೂ ಕೋಟಿಚೆನ್ನಯ ಪ್ರಸಂಗಕ್ಕೆ ಬಿಲ್ಲವರೇ ನೀಡುವುದಿಲ್ಲ . ಇನ್ನು ಏಸುಕ್ರಿಸ್ತ ಮಹಾತ್ಮೆಯ ವೀಕ್ಷಕರು ಯಾರು ? ಹಿಂದೂ ದೇವಿ, ದೇವರು ಇಲ್ಲದ ಯಕ್ಷಗಾನವನ್ನು ಕರಾವಳಿ ಜನ ಕಲ್ಪಿಸಲೂ ಸಾಧ್ಯವಿಲ್ಲದ ಸ್ಥಿತಿಗೆ ಕೊಂಡೊಯ್ಯುವಲ್ಲಿ ವೈದಿಕ ಧರ್ಮ ಪ್ರಸಾರಕರು ಯಶಸ್ವಿಯಾಗಿದ್ದಾರೆ. ಯಕ್ಷಗಾನದ ಭಾಗವಾಗಿಯೇ ಕರಾವಳಿಯಲ್ಲಿ ಕೋಮುವಾದವೂ ಬಲಿಷ್ಠವಾಗಿದೆ. ಅದೇ ಯಕ್ಷಗಾನ ಹುಟ್ಟುಹಾಕಿದ ಕೋಮುವಾದ ಇದೀಗ ಏಸುಕ್ರಿಸ್ತ ಯಕ್ಷಗಾನಕ್ಕೆ ತಡೆಯೊಡ್ಡಲು ಯತ್ನಿಸುತ್ತಿದೆ.

2 thoughts on “ಏಸುಕ್ರಿಸ್ತ ಮಹಾತ್ಮೆ ಮತ್ತು ಕರಾವಳಿ ಯಕ್ಷಗಾನ ವಿರಚಿತ ಕೋಮುವಾದ

Leave a Reply

Your email address will not be published.