Daily Archives: July 7, 2017

‘ನಾವು ನಮ್ಮಲ್ಲಿ’ ಹೊತ್ತಿಗೆ ‘ವರ್ತಮಾನ’ಕ್ಕೆ ಮರುಹುಟ್ಟು

ಕೆಲ ವಾರಗಳ ಕಾಲ ತಾಂತ್ರಿಕ ತೊಂದರೆಗಳಿಂದ ವರ್ತಮಾನ ಚಾಲ್ತಿಯಲ್ಲಿರಲಿಲ್ಲ. ಈಗ ಮತ್ತೆ ತೆರೆ ಮೇಲೆ. ಆದರೆ ಮೊದಲಿನ ವಿನ್ಯಾಸ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುರುಪಿನಿಂದ ಹೊಸ ರೂಪ ಪಡೆಯಲಿದೆ. ಇದೇ ಭಾನುವಾರ ಚಿತ್ರದುರ್ಗದಲ್ಲಿ ‘ನಾವು ನಮ್ಮಲ್ಲಿ’ ಕಾರ್ಯಕ್ರಮ. ‘ವರ್ತಮಾನ’ ತಾಣಕ್ಕೂ ‘ನಾವು ನಮ್ಮಲ್ಲಿ’ ಕಾರ್ಯಕ್ರಮಕ್ಕೂ ವಿಶೇಷ ನಂಟು. 2011 ರಲ್ಲಿ ಇದೇ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದಿತ್ತು. ಆಗ ಮಾಧ್ಯಮ ಕುರಿತ ವಿಚಾರಗಳು ಚರ್ಚೆಯಾಗಿದ್ದವು. ‘ವರ್ತಮಾನ’ ಆರಂಭವಾಗಲು ಅಲ್ಲಿ ನಡೆದ ಚರ್ಚೆಗಳೂ ಕಾರಣ. ಆರು ವರ್ಷಗಳ ನಂತರ ಅದೇ ಕಾರ್ಯಕ್ರಮ ಮತ್ತೆ ಚಿತ್ರದುರ್ಗದಲ್ಲಿ ನಡೆಯುತ್ತಿದೆ.

ಈಗ ಇದೇ ಕಾರ್ಯಕ್ರಮದ ಹೊತ್ತಿಗೆ ತಾಂತ್ರಿಕ ಜಂಜಡಗಳಿಂದ ಹೊರಬಂದು ‘ವರ್ತಮಾನ’ವೂ ಮರುಹುಟ್ಟು ಪಡೆದಿದೆ.

ಒಂದು ದಿನದ ಕಾರ್ಯಕ್ರಮದಲ್ಲಿ ನಾಡಿನ ಹಿರಿಯರು, ಚಿಂತಕರು, ಬರಹಗಾರರು ಭಾಗವಹಿಸುತ್ತಿದ್ದಾರೆ. ‘ನಿರಂಕುಶಮತಿತ್ವದೆಡೆಗೆ’ – ಈ ಬಾರಿಯ ಥೀಮ್. ವಿವರಗಳಿಗೆ ಆಹ್ವಾನ ಪತ್ರಿಕೆಯನ್ನು ಗಮನಿಸಬಹುದು. ಕಾರ್ಯಕ್ರಮದ ಭಾಗವಾಗಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಅಜಿತ್ ಪಿಳ್ಳೈ ಅವರ ಬರಹಗಳ ಸಂಕಲನವೂ ಬಿಡುಗಡೆಯಾಗುತ್ತಿದೆ. ಪತ್ರಕರ್ತ ಸತೀಶ್ ಜಿ.ಟಿ. ಪಿಳ್ಳೈ ಅವರ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ವರ್ತಮಾನ ಬಳಗದ ಭಾಗವಾಗಿರುವ ಅಹರ್ನಿಶಿ ಪ್ರಕಾಶನ ಮತ್ತು ನಾವು ನಮ್ಮಲ್ಲಿ ಬಳಗ ಈ ಕೃತಿಯನ್ನು ಹೊರತರುತ್ತಿದ್ದಾರೆ. ವರ್ತಮಾನದ ಓದುಗರೆಲ್ಲಾ ಅಲ್ಲಿ ಸೇರೋಣ.

ನಾವು ನಮ್ಮಲ್ಲಿಯ ಬಗ್ಗೆ ಬಳಗದವರೇ ಹೇಳಿಕೊಂಡ ಮಾತುಗಳು ಇಲ್ಲಿವೆ:

ಕಳೆದ ಹದಿಮೂರು ವರ್ಷದಿಂದ ರಾಜ್ಯದ ವಿವಿಧ ಭಾಗಗಳ ಸಮಾನಾಸಕ್ತ ಸಂಗಾತಿಗಳು ಜೊತೆಗೂಡಿ `ನಾವುನಮ್ಮಲ್ಲಿ’ ಎನ್ನುವ ಮುಕ್ತ ಮಾತುಕತೆಯ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದೇವೆ. ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈ ತನಕ ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಂತಿರುವ ಹಿರಿಯರು ಮತ್ತು ಒಡನಾಡಿಗಳು *ನಾವು ನಮ್ಮಲ್ಲಿ* ವೇದಿಕೆಯಲ್ಲಿ ತಮ್ಮ ತಿಳಿವನ್ನು ಹಂಚಿಕೊಂಡಿದ್ದಾರೆ. ಹೊಸತಲೆಮಾರಿನ ಜತೆ ಸಂವಾದ ನಡೆಸಿದ್ದಾರೆ.

ನಾವು ನಮ್ಮಲ್ಲಿ ಎನ್ನುವುದೇ `ಇಲ್ಲಿ ಯಾರೂ ಮುಖ್ಯರಲ್ಲ ಮತ್ತು ಯಾರು ಅಮುಖ್ಯರೂ ಅಲ್ಲ’ ಎನ್ನುವ ನೆಲೆಯಿಂದ ಹುಟ್ಟಿರುವುದು. ಈ ನೆಲೆಯಲ್ಲಿ ಆರೋಗ್ಯಕರ ಸಮಾಜಕ್ಕಾಗಿ ತುಡಿಯುವ ಜೀವಪರ ಮನಸ್ಸುಗಳನ್ನು ಒಂದೆಡೆ ಸೇರಿಸುವುದು, ಚರ್ಚಿಸುವುದು, ಆ ಮೂಲಕ ಪರ್ಯಾಯಗಳಿಗೆ ಬೇಕಾದ ಹೊಳಹುಗಳನ್ನು ಪಡೆದು ನಮ್ಮ ಬರಹ ,ಚಳವಳಿ ತಿಳಿವುಗಳ ಸ್ಪಷ್ಟತೆ ಪಡೆಯುತ್ತಲೇ ಬದುಕನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯುವುದು ನಮ್ಮ ಮುಖ್ಯ ಆಶಯವಾಗಿದೆ.

ಕುವೆಂಪು ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ಕನ್ನಡದ ಚೈತನ್ಯ. ಅವರ ಬರಹ ಚಿಂತನೆಗಳನ್ನು ವರ್ತಮಾನದ ಕಣ್ಣೋಟದ ಮೂಲಕ ನೋಡುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಕೆಲಸ ನಿರಂತರವಾಗಿ ನಡೆದಿದೆ. ಇಂದು ಸೃಜನಶೀಲ ಅಭಿವ್ಯಕ್ತಿಯನ್ನು ನಿಯಂತ್ರಿಸುವ ಅಂಕುಶಗಳು ಬಲಗೊಳ್ಳುತ್ತಿವೆ. ಅಭಿವ್ಯಕ್ತಿಯನ್ನು ಉಸಿರುಕಟ್ಟಿಸುವ ಕಾಣುವ ಮತ್ತು ಕಾಣದ ಕೈಗಳು ಇನ್ನಷ್ಟು ಉದ್ದ ಚಾಚುತ್ತಿವೆ.

ಈ ಹಿನ್ನೆಲೆಯಲ್ಲಿ 2017 ರ ನಾವುನಮ್ಮಲ್ಲಿ ಕಾರ್ಯಕ್ರಮವನ್ನು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕುವೆಂಪು ಅವರು ಹೊಸ ತಲೆಮಾರಿಗೆ ಕೊಟ್ಟ ಕರೆಯನ್ನು ವರ್ತಮಾನದ ಕಣ್ಣೋಟದಲ್ಲಿ ನೋಡುವ ಪ್ರಯತ್ನವಾಗಿಸಬೇಕೆಂದು ಯೋಚಿಸಿದ್ದೇವೆ. ಹಾಗಾಗಿ 2017 ‘ನಾವು ನಮ್ಮಲ್ಲಿ’ಯ ಮುಖ್ಯ ನೆಲೆ `ನಿರಂಕುಶಮತಿತ್ವದೆಡೆಗೆ’ಎನ್ನುವುದಾಗಿದೆ.

ಈ ಬಾರಿ ಜುಲೈ 9, 2017 ರ ಭಾನುವಾರ ಚಿತ್ರದುರ್ಗದ ಕ್ರೀಡಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದೇವೆ.

‘ನಿರಂಕುಶಮತಿತ್ವದೆಡೆಗೆ’ ಸಂವಾದದಲ್ಲಿ ಕನ್ನಡ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕ ಕಾಲಾನುಕಾಲಕ್ಕೂ ತನ್ನ ಜೀವದ್ರವ್ಯವಾಗಿ ಪೊರೆಯುತ್ತಾ ಬಂದಿರುವ ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯದ ನೆಲೆಗಳು ಮತ್ತು ವಿವಿಧ ಆಯಾಮಗಳ ಕುರಿತು ಹಿರಿಯರೊಡನೆ ಮಾತುಕತೆ ಮತ್ತು ಚರ್ಚೆ ನಡೆಸುವುದರ ಜೊತೆಗೆ ಕಿರಿಯರು ತಮ್ಮ ಬರಹ ಬದುಕಿನ ಹಿನ್ನೆಲೆಯಲ್ಲಿ ಅಂಕುಶಗಳ ಮೀರುವ ಬಿಕ್ಕಟ್ಟಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಹೀಗೆ ಈ ಕಾರ್ಯಕ್ರಮವು ಎರಡು ತಲೆಮಾರುಗಳ ಮುಖಾಮುಖಿ ನೆಲೆಯಲ್ಲಿ ರೂಪಗೊಂಡಿದೆ.

ಸಂಗಾತಿಗಳೇ, ಆ ದಿನ ನೀವು ನಿಮ್ಮ ಪಾಲಿನ ಅಮೂಲ್ಯವಾದ ಒಂದು ದಿನವನ್ನು ನಮ್ಮ ಜತೆ ಕಳೆಯಬೇಕೆನ್ನುವುದು ನಮ್ಮ ಹಂಬಲ. ನೀವು ನಮ್ಮ ಜತೆಗಿದ್ದು ನಾವುನಮ್ಮಲ್ಲಿ ಬಳಗದ ಒಡನಾಡಿಗಳಾಗಿ ಬರುವ ನಾಳೆಗಳ ಕನಸು ಕಾಣ್ಕೆಗಳ ಜೊತೆಗಾರರಾಗುತ್ತೀರಿ ಎನ್ನುವ ನಂಬಿಕೆಯಿದೆ.

ನಿಮ್ಮ ಬರುವಿಕೆಯ ವಿಶ್ವಾಸದಲ್ಲಿ
ನಾವು ನಮ್ಮಲ್ಲಿ ಬಳಗ