Daily Archives: July 11, 2017

ಸಂಘಪರಿವಾರದಲ್ಲಿ ಬ್ರಾಹ್ಮಣ ಮತ್ತು ಶೂದ್ರ ನಾಯಕತ್ವ

Naveen Soorinje


ನವೀನ್ ಸೂರಿಂಜೆ


 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಆರ್.ಎಸ್.ಎಸ್ ಮುಖಂಡರ ಮೇಲೆ ಕೇಸು ದಾಖಲಿಸಿದ್ದಾರೆ. ಶವ ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಾಟ ನಡೆಸಲು ಪ್ರೇರೇಪಿಸಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯದ ಮಾಜಿ ಸಂಚಾಲಕ ಸತ್ಯಜಿತ್ ಸುರತ್ಕಲ್ ಹಾಗೂ ಭಜರಂಗದಳದ ಅಧ್ಯಕ್ಷ ಶರಣ್ ಪಂಪ್ ವೆಲ್ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇವರೀರ್ವರ ಮನೆ ಶೋಧ ನಡೆಸಿರುವ ಪೊಲೀಸರು ಅವರಿಬ್ಬರೂ ಪರಾರಿಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ಸದಾ ಪೊಲೀಸ್ ಗನ್ ಮ್ಯಾನ್ ಹೊಂದಿರುವ ಸತ್ಯಜಿತ್ ಸುರತ್ಕಲ್ ಅಥವಾ ಶರಣ್ ಪಂಪ್‍ವೆಲ್‌ ಒಮ್ಮಿಂದೊಮ್ಮೆಲೆ ಪರಾರಿಯಾಗುವುದಾದರೂ ಹೇಗೆ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಉದ್ಬವಿಸುತ್ತದೆ. ಇದರ ಜೊತೆಗೆಯೇ ಕೋಮುಗಲಭೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಪೋಲೀಸರು ಸತ್ಯಜಿತ್ ಸುರತ್ಕಲ್ ಹಾಗೂ ಶರಣ್ ಪಂಪ್‍ವೆಲ್‌- ಇವರಿಬ್ಬರನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದು ಯಾಕೆ; ಕೋಮುಗಲಭೆ ಪ್ರಚೋದನೆಗೆ ಅವರಿಬ್ಬರಷ್ಟೇ ಕಾರಣರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅಥವಾ ಎಂ.ಬಿ. ಪುರಾಣಿಕ್ ಅವರನ್ನು ಯಾಕೆ ಪೋಲಿಸರು ತನಿಖೆಯ ಕೇಂದ್ರ ಬಿಂದುವನ್ನಾಗಿ ಪರಿಗಣಿಸಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಕರಾವಳಿಯಲ್ಲಿ ಸಂಘಪರಿವಾರದ ಪ್ರಚೋದನೆಯ ಹಿನ್ನಲೆಯಲ್ಲಿ ನಡೆದ ಕೋಮುಗಲಭೆಗಳು, ಮತೀಯ ದ್ವೇಷದ ಪ್ರಕರಣಗಳು ಮತ್ತು ನೈತಿಕ ಪೋಲಿಸುಗಿರಿಯಂತಹ ಪ್ರಕರಣಗಳು ಮತ್ತು ಅವುಗಳ ತನಿಖೆಗಳ ಜಾತಿ ಸಮೀಕರಣದ ಹಿನ್ನಲೆಯನ್ನು ನೋಡಿದಾಗ ಈ ಪ್ರಶ್ನೆ ಇನ್ನೂ ಸ್ಪಷ್ಟವಾಗುತ್ತದೆ.    

ಸೆಪ್ಟೆಂಬರ್ 14, 2008 ರಂದು ಭಜರಂಗದಳದ ಕಾರ್ಯಕರ್ತರು ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಿದರು. ಈ ಕುಕೃತ್ಯದ ಬಗ್ಗೆ ಸೆಪ್ಟೆಂಬರ್ 15 ರಂದು ಭಜರಂಗದಳದ ಅಂದಿನ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿ ಅವರಿಬ್ಬರೂ ‘’ಚರ್ಚ್ ದಾಳಿಯನ್ನು ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದು ನಾವೇ. ಚರ್ಚ್ ಗಳಲ್ಲಿ ಮತಾಂತರ ನಡೆಯುತ್ತಿದ್ದರಿಂದ ದಾಳಿ ಮಾಡಬೇಕಾಯಿತು’’ ಎಂದಿದ್ದರು. ಮರುದಿನ ಪೊಲೀಸರು ಭಜರಂಗದಳದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದರು. ಆದರೆ ಪತ್ರಿಕಾಗೋಷ್ಟಿಯಲ್ಲಿ ಮಹೇಂದ್ರ ಕುಮಾರ್ ಅವರ ಪಕ್ಕದಲ್ಲೇ ಇದ್ದ, ಭಜರಂಗದಳದ ಮಾತೃ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಎಂ.ಬಿ. ಪುರಾಣಿಕ್ ವಿರುದ್ಧ ಕೇಸೂ ದಾಖಲಾಗಲಿಲ್ಲಬಂಧನವೂ ಆಗಲಿಲ್ಲ. ಇಬ್ಬರೂ ಒಂದೇ ವೇದಿಕೆಯಲ್ಲಿ, ಒಂದೇ ಕೃತ್ಯಕ್ಕೆ ಸಂಬಂಧಿಸಿ ಒಂದೇ ರೀತಿಯ ಹೇಳಿಕೆ ನೀಡಿದ್ದರು. ದಾಳಿಯಲ್ಲಿ ಇಬ್ಬರ ಪಾತ್ರವೂ ಒಂದೇ ಆಗಿತ್ತು. ಆದರೆ ಪ್ರಕರಣದಲ್ಲಿ ಬಂಧನವಾಗಿದ್ದು, ಫಿಕ್ಸ್ ಆಗಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ಮಹೇಂದ್ರ ಕುಮಾರ್ ಮಾತ್ರ. ಎಂ.ಬಿ. ಪುರಾಣಿಕ್ ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್.ಎಸ್.ಎಸ್ ಮುಖಂಡನ ಮೇಲೆ ಕೇಸು ದಾಖಲಾಗಲೇ ಇಲ್ಲ.

ಕೋಮುಗಲಭೆ ಹಾಗೂ ನೈತಿಕ ಪೋಲೀಸುಗಿರಿಯಂತ ಪ್ರಕರಣಗಳಲ್ಲಿ ಮತ್ತು ಅವುಗಳ ವಿಚಾರಣೆಗಳಲ್ಲಿ ಗೋಚರಿಸುವ ಜಾತಿ ಸಮೀಕರಣದ ನೆರಳು ಪಬ್ ದಾಳಿ (2009) ಮತ್ತು ಹೋಂ ಸ್ಟೇ ದಾಳಿ (2012) ಪ್ರಕರಣಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಜನವರಿ 24, 2009 ರಂದು ಮಂಗಳೂರಿನಲ್ಲಿ ಪಬ್ ದಾಳಿ ನಡೆಯಿತು. ಅಂಬೇಡ್ಕರ್ ಸರ್ಕಲ್ ನಿಂದ ಹಂಪನಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್ ನಲ್ಲಿ ಹುಡುಗ ಹುಡುಗಿಯರು ಕುಣಿತ-ಕುಡಿತದಲ್ಲಿ ತೊಡಗಿಕೊಂಡು ಭಾರತೀಯ ಸಂಸ್ಕೃತಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ದಾಳಿ ನಡೆಸಿತು. ಅಂದು ಪಬ್ ಒಳಗೆ ನುಗ್ಗಿ ದಾಳಿ ನಡೆಸಿದ್ದು ಶ್ರೀರಾಮ ಸೇನೆಯ ಕಾರ್ಯಕರ್ತರು. ಆದರೆ ಘಟನೆಯ ನಂತರದಲ್ಲಿ ಪೋಲೀಸರು ದಾಳಿ ನಡೆಸಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಮಾತ್ರವಲ್ಲದೇ ದಾಳಿಯಲ್ಲಿ ನೇರವಾಗಿ ಭಾಗಿಯಾಗದೆ, ಆದರೆ ದಾಳಿ ನಡೆಸುವಂತೆ ಸೂಚಿಸಿದ್ದ, ಪ್ರಚೋದಿಸಿದ್ದ ಶ್ರೀರಾಮ ಸೇನೆಯ ಅಂದಿನ ಅಧ್ಯಕ್ಷನಾಗಿದ್ದ, ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರನನ್ನು ಕೂಡಾ ಬಂಧಿಸಿದ್ದರು.

ಇದಾದ ನಂತರ ಜುಲೈ 28, 2012 ರಂದು ಪಬ್ ಅಟ್ಯಾಕ್ ಮಾಧರಿಯಲ್ಲೇ ಹಿಂದೂ ಜಾಗರಣಾ ವೇದಿಕೆಯು ಹೋಂ ಸ್ಟೇ ದಾಳಿ ನಡೆಸಿತು. ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅಮಾನವೀಯ ದಾಳಿ ಅದಾಗಿತ್ತು. ಪಬ್ ಅಟ್ಯಾಕ್ ಮಾಡಿದಾಗ ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೇ ಅಲ್ಲಿಂದ ಸಿಡಿದು ಬಂದು ಹಿಂದೂ ಜಾಗರಣಾ ವೇದಿಕೆ ಸೇರಿದ್ದರು. ಬಹುಪಾಲು ಪಬ್ ಅಟ್ಯಾಕ್ ಆರೋಪಿಗಳೇ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲೂ ಭಾಗಿಯಾಗಿದ್ದರು. ದಾಳಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಮಾಧ್ಯಮಗಳ ದೃಶ್ಯಾವಳಿಯನ್ನು ಆಧರಿಸಿ ದಾಳಿಕೋರ ಹಿಂದೂ ಜಾಗರಣಾ ವೇದಿಕೆಯ ಸದಸ್ಯರನ್ನು ಬಂಧಿಸಿದರು. ಈ ಸಂಧರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಜಗದೀಶ ಕಾರಂತ ಪತ್ರಿಕಾಗೋಷ್ಠಿಯನ್ನು ಮಾಡಿ, ದಾಳಿಯನ್ನು ಸಮರ್ಥಿಸಿದ್ದಲ್ಲದೇ ಹಿಂದೂ ಜಾಗರಣಾ ವೇದಿಕೆಯೇ ದಾಳಿಯನ್ನು ಸಂಘಟಿಸಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಪಬ್ ದಾಳಿ ಸಂದರ್ಭದಲ್ಲಿ ಆ ದಾಳಿಗೆ ಪ್ರಚೋದನೆ ನೀಡಿದ್ದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರ ಬಂಧಿಸಲ್ಪಟ್ಟಂತೆ ಹೋಂ ಸ್ಟೇ ದಾಳಿಯ ಹಿನ್ನಲೆಯಲ್ಲಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಗದೀಶ ಕಾರಂತ್ ಪೋಲೀಸ್ ಬಂಧನಕ್ಕೆ ಒಳಗಾಗಲೇ ಇಲ್ಲ; ಅವರ ಮೇಲೆ ಕನಿಷ್ಠ ಕೇಸು ಕೂಡಾ ದಾಖಲಾಗಿಲ್ಲ.  

ಮೊನ್ನೆ ನಡೆದ ಶರತ್ ಮಡಿವಾಳ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲೂ ಇದು ಪುನರಾವರ್ತನೆ ಆಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೋಲೀಸ ತನಿಖೆಯ ಕೇಂದ್ರವಾಗಿರುವ, ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕರಾಗಿ ಕೆಲಸ ಮಾಡಿದವರು. ಹಾಗೆಯೇ ಕೊಟ್ಟಾರಿ ಎಂಬ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್ ಪಂಪ್‍ವೆಲ್‌ ಭಜರಂಗದಳದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವವರು. ಇವರಿಬ್ಬರೂ ಶವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಲು ಪ್ರಚೋದಿಸಿದ್ದರು ಎಂದು ಕೇಸು ದಾಖಲಾಗಿದೆ. ಅವರ ಶೋಧ ಕಾರ್ಯವೂ ನಡೆಯುತ್ತಿದೆ. ಇದೇ ಪ್ರಕರಣದಡಿಯಲ್ಲಿ ಶವಮೆರವಣಿಗೆ ಆಯೋಜಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ. ಇಡೀ ಕೋಮುಗಲಭೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‍ವೆಲ್‌ ಹಾಗೂ ಸತ್ಯಜಿತ್ ಸುರತ್ಕಲ್- ಮೂವರೂ ಸಮಾನ ಜವಾಬ್ದಾರರಾಗಿದ್ದಾರೆ. ಮೂವರೂ ಒಂದೇ ರೀತಿಯ ಕೃತ್ಯಗಳನ್ನು ನಡೆಸಿದ್ದಾರೆ. ಆದರೆ ಪ್ರಕರಣ ದಾಖಲಾಗಿರುವುದು ಹಿಂದುಳಿದ ಸಮುದಾಯದಿಂದ ಬಂದ ಆರ್.ಎಸ್.ಎಸ್ ಮುಖಂಡರ ಮೇಲೆ ಮಾತ್ರವೇ.

ಕೋಮು ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರುತ್ತಿರುವುದು ಮಾತ್ರವಲ್ಲದೆ ಕೋಮು ಗಲಭೆಯಲ್ಲಿ ಕೊಲೆಯಾದವರೂ ಕೂಡಾ ಬಹುತೇಕರು ಬಿಲ್ಲವ/ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಮೊನ್ನೆ ಮೃತನಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂಧರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರನ್ನು ಬಂಧಿಸಿದ್ದಾರೆ. ಈ ಮೂವರು ಯುವಕರೂ ಕೂಡಾ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

ಇಡೀ ದಕ್ಷಿಣ ಕನ್ನಡದ ಮತೀಯವಾದಿ ರಕ್ತ ಚರಿತೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕಾಗಿ ಜೀವ ನೀಡಿಲ್ಲ (?) ಎಂಬುದು ಗಮನಾರ್ಹ. ಅತ್ತ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‍ವೆಲ್‌ ರಂತಹ ಹಿಂದುತ್ವವಾದಿ ಮುಖಂಡರು ಮೈಮೆಲೆಲ್ಲಾ ಪೋಲಿಸ್ ಕೇಸು ಜಡಿಸಿಕೊಡು ಜೀವ ಭಯದಿಂದ ಹೆಣಗಾಡುತ್ತಿದ್ದರೆ ಇತ್ತ ಪ್ರಭಾಕರ ಭಟ್ಟರು ಮಾತ್ರ ಕಲ್ಲಡ್ಕದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸುತ್ತಿದ್ದಾರೆ; ಅಧಿಕಾರ ಗ್ರಹಣದ ಚರ್ಚೆ ನಡೆಸುತ್ತಿದ್ದಾರೆ. ಅದೇ ಹೊತ್ತಿಗೆ ಹಿಂದುಳಿದ ವರ್ಗದಿಂದ ಬಂದ ಆರ್.ಎಸ್.ಎಸ್ ಮುಖಂಡರು ಕ್ರಿಮಿನಲ್ ಗಳಂತೆ ಪೋಲೀಸ್ ಕೇಸುಗಳ, ಬಂಧನದ ಭೀತಿಯಿಂದ ಭೂಗತರಾಗುತ್ತಿದ್ದಾರೆ.