ದಲಿತ-ಮುಸ್ಲಿಂ ಯುವತಿಯರ ಪ್ರೇಮ ವಿವಾಹಗಳು ಮತ್ತು ಬಿಜೆಪಿ ಕಾಂಗ್ರೆಸ್ ರಾಜಕಾರಣ

Naveen Soorinje


ನವೀನ್ ಸೂರಿಂಜೆ


 

ದಲಿತ ಹುಡುಗಿಯನ್ನು ಮದುವೆಯಾಗುವ ಪಂಥಾಹ್ವಾನಗಳು ಕಾಂಗ್ರೆಸ್ ಬಿಜೆಪಿ ಮದ್ಯೆ ನಡೆಯುತ್ತಿವೆ. ಇಷ್ಟಕ್ಕೂ ದಲಿತ ಹುಡುಗಿಯನ್ನು ಮನೆಗೆ ತಂದುಕೊಳ್ಳೋದು(!?) ದೊಡ್ಡ ಸಂಗತಿಯಾಗಿ ಏನೂ ಉಳಿದುಕೊಂಡಿಲ್ಲ. ಮೇಲ್ಜಾತಿಯ ಹುಡುಗಿಯನ್ನು ದಲಿತ ಹುಡುಗ ಮದುವೆಯಾಗುವ ಸವಾಲಿಗಿಂತ ಇದು ಕಠಿಣವಾದುದಲ್ಲ.

ರಾಹುಲ್ ಗಾಂಧಿಗೆ ದಲಿತ ಹೆಣ್ಣು ಮಗಳನ್ನು ಮದುವೆ ಮಾಡಿಸಲು ಮುಂದೆ ಬಂದಿರೋ ಬಿಜೆಪಿ ಮಾಜಿ ಸಚಿವ ಗೋವಿಂದ ಕಾರಜೋಳ್, ಬಿಎಸ್ ಯಡಿಯೂರಪ್ಪನವರ ಪರಮಾಪ್ತರು. ದಲಿತರಾಗಿರುವ ಗೋವಿಂದ ಕಾರಜೋಳ್ ಗೆ ಯಡಿಯೂರಪ್ಪರ ಕುಟುಂಬದ ಹುಡುಗನಿಗೆ ದಲಿತ ಹುಡುಗಿಯನ್ನು ಮದುವೆ ಮಾಡಿಸೋದು ದೊಡ್ಡ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ಯಡಿಯೂರಪ್ಪರ ಕಡೆಯ  ಹುಡುಗಿಯನ್ನು ದಲಿತ ಹುಡುಗನೊಬ್ಬನ ಜೊತೆಗಿನ ವಿವಾಹವನ್ನು ಕಾರಜೋಳರು ಒಮ್ಮೆ ಕಲ್ಪಿಸಿಕೊಳ್ಳಲಿ. ಕನಸಲ್ಲೂ ನಡುಗಬೇಕಾಗುತ್ತದೆ.

ದಲಿತ ಯುವತಿಯನ್ನು ಮದುವೆಯಾಗಲಿ ಎಂದು ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ಹಾಕಿದ ಸವಾಲೇ ಸರಿಯಿಲ್ಲ. ಯಾವುದೇ ಮೇಲ್ವರ್ಗದ ಕುಟುಂಬದ ಯುವಕ ಕೆಳವರ್ಗದ ಯುವತಿಯನ್ನು ಮದುವೆಯಾಗುವುದಕ್ಕೆ ಯಾವುದೇ ಸಮಾಜವು ವಾದ ವಿವಾದದ ಬಳಿಕ ಕೊನೆಗಾದರೂ ಒಪ್ಪಿಕೊಳ್ಳುತ್ತದೆ. ಕಾರಣ, ಯುವತಿಯನ್ನು ಗಂಡನ ಮನೆಯ ಆಚಾರ ವಿಚಾರ, ಸಂಪ್ರದಾಯಕ್ಕೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಮತ್ತು ಅಗತ್ಯ ಬಿದ್ದರೆ ಮತಾಂತರ ಮಾಡಬಹುದು ಎಂಬ ಕಾರಣಕ್ಕೆ. ಜಾತಿ ಎನ್ನೋದು ತಂದೆಯ ಜಾತಿಯ ಮೂಲಕ ಮುಂದುವರೆಯೋದ್ರಿಂದ ಯುವತಿ ಯಾವ ಜಾತಿಯಾದರೂ ಹುಟ್ಟೋ ಮಗು ತಂದೆಯ ಜಾತಿಯಾಗೋದ್ರಿಂದ ಭವಿಷ್ಯದಲ್ಲಿ ಜಾತಿ ಮರ್ಯಾದೆಗೆ ದಕ್ಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಯುವತಿ ಕೆಳ ವರ್ಗಕ್ಕೆ ಸೇರಿದರೂ ದುರಂತಗಳು ಶೇಕಡಾವಾರು ಕಡಿಮೆ. ಅದೇ ಯುವತಿ ಬ್ರಾಹ್ಮಣ ಸಮುದಾಯಕ್ಕೋ, ಒಕ್ಕಲಿಗ, ಬಂಟ, ರೆಡ್ಡಿ ಸಮುದಾಯಕ್ಕೋ ಸೇರಿದವಳಗಾಗಿದ್ದು ಯುವಕ ದಲಿತನಾಗಿದ್ದರೆ ಅದರ ಕತೆ ಕೇಳೋದೆ ಬೇಡ!

2017 ಎಪ್ರಿಲ್ ನಲ್ಲಿ ಬೆಳಗಾವಿ ಗಡಿ ಭಾಗದಲ್ಲಿ ತಂದೆಯೇ ಮಗಳನ್ನು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ಬಾಬು ಶಿವಾರೆ ಎಂಬಾತ ತನ್ನ ಮಗಳಾಗಿರುವ ಮಣೀಷಾಳನ್ನು ಈ ರೀತಿ ಕೊಲ್ಲುವ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು ಮಗಳ ಪ್ರೇಮ. ಮೇಲ್ವರ್ಗಕ್ಕೆ ಸೇರಿರೋ ನನ್ನ ಮಗಳು ದಲಿತರ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ದಲಿತ ಹುಡುಗ ಮತ್ತಾತನ ಕುಟುಂಬಕ್ಕೆ ಇನ್ನಿಲ್ಲದ ಹಿಂಸೆ ನೀಡಲಾಗುತ್ತದೆ.

ಇದೇ ಗೋವಿಂದ ಕಾರಜೋಳ ಪ್ರತಿನಿಧಿಸುವ ಬಿಜೆಪಿ ಪ್ರಭಾವಿ ಸಂಸದನೊಬ್ಬನ ಮಗಳು ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ದಲಿತ ಹುಡುಗನಿಗೆ ಚಿತ್ರ ಹಿಂಸೆ ನೀಡುತ್ತಾರೆ. ಆ ಪ್ರಭಾವಿ ಬಿಜೆಪಿ ಸಂಸದರ ಹೆಸರಿನ ಸಹಿತ ಸ್ಥಳೀಯ ಪತ್ರಿಕೆಯಲ್ಲಿ/ವೆಬ್ ಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೊನೆಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಸಂಸದರು ತನ್ನ ಮಗಳನ್ನು ಪ್ರೇಮಿಸುತ್ತಿದ್ದ ದಲಿತ ಯುವಕನನ್ನು ದೂರ ಮಾಡುತ್ತಾರೆ.

ಮೇಲ್ವರ್ಗಗಳು ತನ್ನ ಮನೆ ಹುಡುಗಿ ಕೆಳವರ್ಗದ ಯುವಕರ ಜೊತೆ ಸಂಬಂಧ ಬೆಳೆಸುವುದನ್ನು ಸಹಿಸೋದೆ ಇಲ್ಲ. ಇತಿಚ್ಚೆಗೆ ಹಳ್ಳಿಯಲ್ಲಿ ಪೌರೋಹಿತ್ಯ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಹುಡುಗರು, ತಮಗೆ ಬ್ರಾಹ್ಮಣ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಕಾಶ್ಮೀರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕೆಳಜಾತಿಯ ಬಡ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ. ಅದಕ್ಕಾಗಿ ವಧುವರರ ಕೂಟಗಳನ್ನೇ ನಡೆಸುತ್ತಿದ್ದಾರೆ. ಅಂದರೆ ಆಕೆ ಕೆಳವರ್ಗಕ್ಕೆ ಸೇರಿದವಳಾದರೂ ಆಕೆಯನ್ನು ಮತಾಂತರ ಮಾಡಬಹುದು ಮತ್ತು ತಮ್ಮ ಸಂಪ್ರದಾಯಕ್ಕೆ ಹೊಂದಿಸಿಕೊಳ್ಳಬಹುದು ಎಂಬ ಭರವಸೆಯಿಂದ ಮದುವೆಯಾಗುತ್ತಿದ್ದಾರೆ. ಅದೇ ಬ್ರಾಹ್ಮಣ ಹುಡುಗಿಯೊಬ್ಬಳು ಹಳ್ಳಿಯ ದಲಿತ ಅಥವಾ ಹಿಂದುಳಿದ ಹುಡುಗನನ್ನು ಮದುವೆಯಾಗುವುದು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೇನಾದರೂ ಆದರೆ ಆ ಬ್ರಾಹ್ಮಣ ಯುವತಿಯ ಮನೆಯವರು ಯುವತಿಯ ಶ್ರಾಧ್ದವನ್ನೂ ಮಾಡಿ ಮುಗಿಸಿ ಸಂಬಂಧ ಕಳೆದುಕೊಂಡ ಉದಾಹರಣೆಯೂ ಹಲವಿದೆ.

ಅಂತರ್ಜಾತಿ ವಿವಾಹಗಳು ಹೆಚ್ಚಬೇಕು ಎಂದು ಸಿಎಂ ಸಿದ್ದರಾಮಯ್ಯ ಸರಕಾರ ಯೋಜನೆಯೊಂದನ್ನು ರೂಪಿಸಿದೆ.  ದಲಿತ ಯುವತಿಯನ್ನು ದಲಿತೇತರ ಯುವಕ ವಿವಾಹವಾದರೆ 3 ಲಕ್ಷ ರೂಪಾಯಿ ಹಾಗೂ ದಲಿತ ಪುರುಷ ಇತರೆ ಜಾತಿಯ ಮಹಿಳೆಯನ್ನು ವಿವಾಹವಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸರಕಾರದ ಈ ಯೋಜನೆ ಅತ್ಯುತ್ತಮವಾಗಿದ್ದರೂ ಸಣ್ಣ ತಪ್ಪಿದೆ. ಯುವಕ ಕುಟುಂಬದ ಆರ್ಥಿಕ ಆಧಾರ ಸ್ಥಂಭ ಆಗಿರೋದ್ರಿಂದಲೋ, ತಂದೆಯ ಜಾತಿಯೇ ಕುಟುಂಬದ ಜಾತಿಯಾಗುತ್ತದೆ ಎಂಬ ಕಾರಣಕ್ಕೋ ಮೇಲ್ವರ್ಗದ ಯುವಕ ದಲಿತ ಯುವತಿಯನ್ನು ಮದುವೆಯಾದರೆ ಅಂತಹ ದುರಂತಗಳು ಸಂಭವಿಸೋದಿಲ್ಲ. ನಮ್ಮ ಜಾತಿಯ ಯುವತಿ ಮೇಲ್ವರ್ಗದ ಯುವಕನನ್ನು ಮದುವೆಯಾದಳೆಂದು ದ್ವೇಷದಿಂದ ದಲಿತರು ಮೇಲ್ವರ್ಗದ ಯುವಕನ ಮನೆ ಮಠ ಸುಟ್ಟ ಉದಾಹರಣೆ ಇಲ್ಲ. ದಲಿತರು ಮೇಲ್ವರ್ಗದ ಯುವಕನನ್ನು ಊರು ಬಿಟ್ಟು ಓಡಿಸಿದ ಉದಾಹರಣೆಯೂ ಇಲ್ಲ. ಮೇಲ್ವರ್ಗದ ಯುವಕನ ಜೊತೆ ಮದುವೆಯಾದಳೆಂದು ದಲಿತರು ಯುವತಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಉದಾಹರಣೆಯೂ ಇಲ್ಲ.  ಆದರೆ ದಲಿತ ಯುವಕನೊಬ್ಬ ಇತರೆ ಜಾತಿಯ ಯುವತಿಯನ್ನು ಪ್ರೀತಿಸಿದಾಗ ಇಬ್ಬರೂ ಊರು ಬಿಟ್ಟು ಓಡಿ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಇಬ್ಬರಿಗೂ ಸಾಮಾಜಿಕ ಬಹಿಷ್ಕಾರಗಳು ಹಾಕಲ್ಪಡುತ್ತದೆ.  ಊರು ಬಿಟ್ಟು ಬಂದು ಹೊಸ ಸಮಾಜದಲ್ಲಿ ಹೊಸದಾಗಿ ಆರ್ಥಿಕ, ಸಾಮಾಜಿಕ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಆದ್ದರಿಂದ ದಲಿತ ಯುವಕನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ರಾಜ್ಯ ಸರಕಾರವು ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಬೇಕು.

ಇದರ ಹೊರತುಪಡಿಸಿ, ಹಿಂದೂ ಮುಸ್ಲಿಂ ಮದುವೆಗಳನ್ನೇ ನೋಡಿ. ಯುವತಿ ಹಿಂದೂವಾಗಿದ್ದುಕೊಂಡು ಯುವಕ ಮುಸ್ಲೀಮನಾಗಿದ್ದರೆ ಕೋಮುಗಲಭೆಯೇ ನಡೆದುಹೋಗುತ್ತದೆ. ಇಷ್ಟೊಂದು ಭೀಕರವಾಗಿ ಮುಸ್ಲೀಮರನ್ನು ವಿರೋಧಿಸುವ ಕೋಮು/ಜಾತಿವಾದಿಗಳು ಹುಡುಗಿ ಮುಸ್ಲೀಮಳಾಗಿದ್ದು ಹುಡುಗ ಹಿಂದುವಾಗಿದ್ದರೆ ಮದುವೆ ಮಾಡಿಕೊಡ್ತಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಗೋವಿಂದ ಕಾರಜೋಳರ ದಲಿತ ವಿವಾಹದ ಸವಾಲುಗಳು ನಿಜಕ್ಕೂ ಪರಿವರ್ತನೆಗಾಗಿ ಪ್ರಾಮಾಣಿಕ ಸವಾಲುಗಳಾಗಿದ್ದರೆ, ನಿಮ್ಮ ಸವಾಲನ್ನು ಹೀಗೆ ಬದಲಿಸಿ : “ನಿಮಗೆ ನಿಜವಾಗಿಯೂ ಸಮಾನತೆಯನ್ನು ಸಾಧಿಸಬೇಕಿದ್ದರೆ ದಲಿತ ಯುವಕರ ಜೊತೆ ಮೇಲ್ವರ್ಗದ ಯುವತಿ ಮದುವೆಯಾಗುವುದನ್ನು ಪ್ರೋತ್ಸಾಹಿಸಿ. ಅವರ ಪ್ರೀತಿಯನ್ನು ಬೆಂಬಲಿಸಿ”

ಇದೇ ರೀತಿಯ ಸವಾಲನ್ನು ಮುಸ್ಲೀಮರ ವಿಷಯದಲ್ಲೂ ಹಾಕಿಕೊಂಡರೆ ಅದೊಂದು ಒಳ್ಳೆ ರಾಜಕಾರಣವಾಗುತ್ತದೆ.

 

Leave a Reply

Your email address will not be published. Required fields are marked *