ನಾರಾಯಣ ಗುರು ವಿಚಾರ ಕಮ್ಮಟ: ‘ವಿಚಾರ ಕ್ರಾಂತಿಗೆ ಆಹ್ವಾನ’

Naveen Soorinje


ನವೀನ್ ಸೂರಿಂಜೆ


 

ಕೊನೆಗೂ ಮಂಗಳೂರು ವಿಚಾರ ಕ್ರಾಂತಿಗೆ ಸಿದ್ಧವಾಗಿದೆ. ಕೋಮುವಾದದ ದಳ್ಳುರಿಯಲ್ಲಿ ಬೇಯುತ್ತಿದ್ದ ಮಂಗಳೂರಿನ ಬಿಲ್ಲವರು ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಎಂಬ ವೇದಿಕೆಯಡಿಯಲ್ಲಿ ವಿಚಾರ ಮಂಥನಕ್ಕೆ ಮುಂದಾಗಿದ್ದಾರೆ. ಜನಪರ ಹೋರಾಟಗಳಲ್ಲಿ ರಾಜಿರಹಿತವಾಗಿ ತೊಡಗಿಸಿಕೊಂಡಿರುವ ಸುನೀಲ್ ಕುಮಾರ್ ಬಜಾಲ್, ಹಿರಿಯ ವಕೀಲರಾದ ಯಶವಂತ ಮರೋಳಿ ಈ ಪ್ರಯತ್ನದ ನೇತೃತ್ವ ವಹಿಸಿದ್ದಾರೆ. ಈ ಹೊಸ ಚಳುವಳಿಯ ಹಿಂದೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರ ಆಲೋಚನೆಗಳಿವೆ. ಬಿಲ್ಲವ ಸಮುದಾಯ ಈ ರೀತಿ ಹೊಸ ಚಳುವಳಿಗೆ ತೆರೆದುಕೊಂಡಿರುವುದು ವೈದಿಕಶಾಹಿಗಳಿಗೆ, ಕೋಮುವಾದಿಗಳಿಗೆ ಮತ್ತು ಬಳಸಿ ಎಸೆಯುವ ಕ್ಷುದ್ರ ಶಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ.

ಕರಾವಳಿಯ ಸಮಕಾಲೀನ ಸಂಧರ್ಭದಲ್ಲಿ ಅತ್ಯಂತ ಸಂದಿಗ್ಧ ಮತ್ತು ಇಕ್ಕಟ್ಟಿನ ಸ್ಥಿತಿಯಲ್ಲಿರುವ ಸಮುದಾಯವೆಂದರೆ ಬಿಲ್ಲವರು. ಶ್ರಮಜೀವಿಗಳೂ ಸಾಂಸ್ಕೃತಿಕವಾಗಿ ಹಿರೀಕರೂ ಆಗಿರುವ ಬಿಲ್ಲವರು ಇಂದು ವೈದಿಕ ಶಕ್ತಿಗಳ ಪಿತೂರಿಗೆ ಸಿಲುಕಿ ಏಳಿಗೆಯ ದಿಕ್ಕನ್ನು ಕಳೆದುಕೊಂಡಿದ್ದಾರೆ. ಫ್ಯೂಡಲ್ ಶಕ್ತಿಗಳ ಆಟಕ್ಕೆ ದಾಳವಾಗಿ ಬಳಕೆಯಾಗುತ್ತಾ ಸ್ವತಂತ್ರ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ. ಕೋಮು ಹಾಗೂ ಧಾರ್ಮಿಕ ಮೂಲಭೂತವಾದ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಗುತ್ತಿನ ಗೌಜಿಗೆ ‘ಎಳನೀರು ಕೆತ್ತಿ ಕೊಡುವ’ ಕೆಲಸಕ್ಕೆ ಸೀಮಿತರಾಗುತ್ತಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಬಿಲ್ಲವರನ್ನು ದಳ್ಳುರಿಯಿಂದ ಪಾರುಮಾಡಬಲ್ಲ ವಿಚಾರಗಳೆಂದರೆ ನಾರಾಯಣ ಗುರುಗಳು ಚಿಂತನೆಗಳು ಮತ್ತು ಕೋಟಿಚೆನ್ನಯರ ಪ್ರತಿರೋಧದ ಚರಿತ್ರೆಯ ಪುಟಗಳ ಮರು ಓದು. ನಾರಾಯಣ ಗುರುಗಳು ಬಿಲ್ಲವರಿಗೆ ಆಧುನಿಕ ಜಗತ್ತಿನಲ್ಲಿ ಒಂದು ಆಸ್ಮಿತೆಯನ್ನು ಒದಗಿಸಿಕೊಟ್ಟವರು. ಶತಮಾನಗಳ ಶೋಷಣೆಗೆ ಒಳಗಾಗಿ ದೈನ್ಯರಾಗಿದ್ದ ಬಿಲ್ಲವರಿಗೆ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಾನತೆ ಮತ್ತು ಆಧುನಿಕತೆಯ ಹೋರಾಟದಲ್ಲಿ ನೆಲೆ ಹುಡುಕಿಕೊಟ್ಟವರು. ಬಿಲ್ಲವರು ಕಟ್ಟಿಕೊಂಡಿದ್ದ ದೈವ-ದೇವರ, ಸಿರಿ ಪಾಡ್ದನಗಳ ಜಗತ್ತಿನೊಳಗಡೆಯೇ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದವರು.

ನಾರಾಯಣ ಗುರುಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿಗಲಿದ್ದ ಸಮಾನತೆಯ ಮತ್ತು ಅಗಾಧ ಅವಕಾಶಗಳ ಬದುಕಿಗೆ ಬಿಲ್ಲವರನ್ನು ಸಿದ್ಧಗೊಳಿಸಿದ್ದರು. ಹೊಸಕಾಲದಲ್ಲಿ ತನ್ನ ನ್ಯಾಯದ ಬದುಕಿಗೆ ಹಕ್ಕೊತ್ತಾಯಿಸಲು ಅವರನ್ನು ಬಲಗೊಳಿಸಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ರಾಜಕೀಯ ಹಾಗೂ ಆರ್ಥಿಕ ಸನ್ನಿವೇಶದಲ್ಲಿ ಬಿಲ್ಲವರು ಯಾವ ಮಟ್ಟಿನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ ಎಂಬುವುದನ್ನು ಅವಲೋಕಿಸಿದ್ದಲ್ಲಿ ಬಿಲ್ಲವರು ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಎಷ್ಟರಮಟ್ಟಿಗೆ ಮುನ್ನಡೆದಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಭೂಸುಧಾರಣೆ ಕಾಯ್ದೆ ಜಾರಿ ಪೂರ್ವದಲ್ಲಿ ಬಿಲ್ಲವರನ್ನು ಜಮೀನ್ದಾರಿ ಬಂಟರು, ಬ್ರಾಹ್ಮಣರು ಹಾಗೂ ಜೈನರು ಯಾವ ರೀತಿ ನಡೆಸಿಕೊಂಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭೂಸುದಾರಣೆ ಕಾಯ್ದೆ ಜಾರಿ ಬಳಿಕ ಶ್ರಮಿಕ ಬಿಲ್ಲವರು ಕರಾವಳಿಯ ಸಾಂಸ್ಕೃತಿಕ ಬದುಕಿನಲ್ಲಿ ಸಮಾನತೆಯ ಅವಕಾಶಗಳಿಗೆ ಹಕ್ಕೊತ್ತಾಯಿಸಬಹುದು ಹಾಗೂ ಜಮೀನ್ದಾರಿ ಯಜಮಾನಿಕೆಯನ್ನು ಮೆಟ್ಟಿ ನಿಲ್ಲಬಹುದು ಎಂಬುವುದನ್ನು ಅರಿತ ಫ್ಯೂಡಲ್ ವ್ಯವಸ್ಥೆ ಹಿಂದುತ್ವವಾದಿ ಸಂಘಟನೆಗಳ ರೂಪದಲ್ಲಿ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿತು. ನಾರಾಯಣ ಗುರುಗಳ ಸಮಾನತೆ ಹಾಗೂ ಸಾಮರಸ್ಯದ ಚಿಂತನೆಗಳ ಜಾಗದಲ್ಲಿ ಮತಭ್ರಾಂತಿಯನ್ನು ಬಿಲ್ಲವರಲ್ಲಿ ಪ್ರಸರಿಸಿತು. ಮುಂದೆ ಬರಲಿರುವ ಅನಾಹುತಗಳ ಅರಿವೇ ಇಲ್ಲದೆ ಬಿಲ್ಲವರು ಗುತ್ತುಗಳ ಖೆಡ್ಡಾಕ್ಕೆ ಬಿದ್ದರು.

ಹಿಂದುತ್ವವಾದಿ ಸಂಘಟನೆಗಳ ಪ್ರಧಾನ ಕಾರ್ಯಸೂಚಿ ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಯಲ್ಲಿಡುವುದೇ ಆಗಿದೆ. ಈ ವರೆಗಿನ ಹಿಂದುತ್ವವಾದಿ ಸಂಘಟನೆಗಳ ಕಾರ್ಯವಿಧಾನ ಮತ್ತು ಪರಿಣಾಮವನ್ನು ಅವಲೋಕಿಸಿದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಭೂಮಿ ಕಳೆದುಕೊಂಡ ಬಂಟರು, ಬ್ರಾಹ್ಮಣರು ಮತ್ತು ಜೈನರು ವ್ಯಾಪಾರ, ಉದ್ಯೋಗದ ಮೂಲಕ ಮತ್ತಷ್ಟೂ ಬಲಿಷ್ಠರಾದರೆ, ಭೂಮಿ ಪಡೆದುಕೊಂಡು ಶ್ರೇಣಿಕೃತ ವ್ಯವಸ್ಥೆಯನ್ನು ದಾಟಿ ಬರಬೇಕಿದ್ದ ಬಿಲ್ಲವರು ಫ್ಯೂಡಲ್ ವ್ಯವಸ್ಥೆ ಅವರನ್ನು ಹದ್ದುಬಸ್ತಿನಲ್ಲಿಡಲು ಕೊಟ್ಟ ವೈದಿಕ ಧರ್ಮ ಸಂರಕ್ಷಣೆಯ ಕೈಂಕರ್ಯವನ್ನು ಪಡೆದು ಕಾಲದ ಓಟದಲ್ಲಿ ಹಿಂದಕ್ಕೆ ತಳ್ಳಲ್ಪಟ್ಟರು. ತತ್ಪರಿಣಾಮವಾಗಿ ಭೂಮಿ ಇಲ್ಲದೆ ಕೃಷಿ ಕಾರ್ಮಿಕರಾಗಿದ್ದ ಕಾಲಘಟ್ಟದ ಪಾಡಿಗಿಂತಲೂ ಭೀಕರವಾದ ಸಾಮಾಜಿಕ ರಾಜಕೀಯ ಬಿಕ್ಕಟ್ಟನ್ನು ಈಗ ಬಿಲ್ಲವ ಸಮುದಾಯ ಅನುಭವಿಸುತ್ತಿದೆ. ಧರ್ಮ ರಕ್ಷಣೆಗಾಗಿ ಬಿಲ್ಲವರು ಕೊಲೆಗೀಡಾಗುತ್ತಿದ್ದಾರೆ ಮತ್ತು ಕೊಲೆಗಾರರಾಗುತ್ತಿದ್ದಾರೆ. ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ನಿಧಾನವಾಗಿ ಹಿನ್ನಲೆಗೆ ಸರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾರಾಯಣ ಗುರು ವಿಚಾರ ಕಮ್ಮಟ ಕತ್ತಲ್ಲೆಯಲ್ಲಿ ಬೆಳಕಿನ ಕಿಂಡಿಯಂತೆ ಕಂಡುಬರುತ್ತಿದೆ.

ದಿನೇಶ್ ಅಮೀನ್ ಮಟ್ಟುರವರು ಹೇಳುವಂತೆ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ)ದ ಯೋಜನೆ ತರ್ಕ ನಡೆಸಲೂ ಅಲ್ಲ, ಗೆಲ್ಲುವುದಕ್ಕೂ ಅಲ್ಲ, ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು ಎಂಬ ನಾರಾಯಣ ಗುರುಗಳ ಆಶಯದಂತೆ ನಡೆಯುತ್ತದೆ. ಬಿಲ್ಲವರ ಕಿರು ಸಂಸ್ಕೃತಿ ವೈದಿಕ ಸಂಸ್ಕೃತಿಗಿಂತ ಉದಾತ್ತ ಚಿಂತನೆಯದ್ದು ಮತ್ತು ವಿಶಾಲ ಒಳಗೊಳ್ಳುವಿಕೆ ಇರುವಂತದ್ದು; ಸಾಮರಸ್ಯದ ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವ ಪರಂಪರೆಯನ್ನು ಹೊಂದಿರುವಂತದ್ದು. ಅದನ್ನು ಇಂದು ಮತ್ತೆ ಬಿಲ್ಲವರಿಗೆ ನೆನಪಿಸಿಕೊಡಬೇಕಾಗಿದೆ. ಸತ್ಯದ ಹಾದಿಯಲ್ಲಿ, ನ್ಯಾಯದ ಬದುಕಿಗೆ ಜೀವದ ಕೊನೆ ಉಸಿರಿನ ತನಕವೂ ಹೋರಾಡಿದ ಕೋಟಿ ಚೆನ್ನಯರ ಹಕ್ಕೊತ್ತಾಯದ ಕಥನವನ್ನು ಬಿಲ್ಲವರು ಮತ್ತೆ ಮತ್ತೆ ಓದಿಕೊಳ್ಳಬೇಕಾಗಿದೆ. ವೈದಿಕರ ಗುಡಿಗಳನ್ನು ಸ್ವಚ್ಚಗೊಳಿಸುವುದನ್ನು ಬಿಟ್ಟು ತಮ್ಮ ಅವರ ಸ್ವಾಭಿಮಾನಿ ಬದುಕಿನ ಸ್ಮಾರಕಗಳಂತಿರುವ ಗರಡಿಗಳಿಗೆ ಹಿಂದಿರುಗಬೇಕಿದೆ. ಅಂತಹ ಪ್ರಯತ್ನ ಇಂದು ಬಿಲ್ಲವ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಬಜಾಲ್ ಎಂಬ ಪ್ರಾಮಾಣಿಕ ಚಳುವಳಿಗಾರನ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ.

ಈಗಲೂ ಮಂಗಳೂರಿನಲ್ಲಿ ಕೋಮುವಾದದ ಪ್ರಸರಣಕ್ಕೆ ತಡೆಹಾಕಿ ಸಮಾನತೆಯತ್ತ, ಸಬಲೀಕರಣದತ್ತ ಸಮಾಜವನ್ನು ಕೊಂಡೊಯ್ಯುವ ಶಕ್ತಿ ಇರುವುದು ಬಿಲ್ಲವರಿಗೆ ಮಾತ್ರ. ಇಂದಿಗೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಾರಾಯಣ ಗುರು ಸೇವಾ ಸಂಘಗಳಿವೆ. ಎಲ್ಲಾ ತಾಲೂಕುಗಳಲ್ಲಿ ಬಿಲ್ಲವ ಯುವ ವಾಹಿನಿ ಇದೆ. ನಾರಾಯಣ ಗುರುಗಳನ್ನು ಆರಾಧಿಸುವ ಈ ದೊಡ್ಡ ಬಳಗವನ್ನು ಅವರ ಸಿದ್ದಾಂತದ ಕಾರ್ಯಪಡೆಯನ್ನಾಗಿಸಬೇಕಾಗಿದೆ.

ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಲ್ಲವರ ಸಾಂಸ್ಕೃತಿಕ ಆಂದೋಲನ ಯುವ ವಾಹಿನಿ ಪ್ರಾರಂಭಿಸಿದವರಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಒಬ್ಬರು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಆಶಯದಡಿಯಲ್ಲಿ ಪ್ರಾರಂಭವಾದ ಬಿಲ್ಲವ ಯುವವಾಹಿನಿ ಇಂದು ಆಟಿಡೊಂಜಿ ದಿನ, ಕೆಸರುಗದ್ದೆ ಕಾರ್ಯಕ್ರಮಗಳನ್ನು ಮಾಡುತ್ತಾ ಮೂಲ ಅಶಯವನ್ನು ಮರೆತಿದೆ. ಈ ನಿಟ್ಟಿನಲ್ಲಿ ಬಿಲ್ಲವ ಯುವ ವಾಹಿನಿ, ನಾರಾಯಣ ಗುರು ಸೇವಾ ಸಂಘಗಳನ್ನು ನಾರಾಯಣ ಗುರು ವಿಚಾರ ಕಮ್ಮಟ ಒಳಗೊಂಡರೆ ವಿಚಾರ ಕ್ರಾಂತಿಯ ದಿನಗಳು ದೂರವಿಲ್ಲ.

ಉತ್ತಮ ನಾಳೆಗಳಿಗಾಗಿ, ಆ ನಾಳೆಗಳಲ್ಲಿ ನಾವು ಇರಲಿಕ್ಕಾಗಿ, ಆ ನಾಳೆಗಳು ನಮ್ಮದೇ ಆಗಲಿಕ್ಕಾಗಿ, ನಾರಾಯಣ ಗುರುಗಳ ತತ್ವಾದಾರ್ಶಗಳನ್ನು ಪಾಲಿಸೋಣಾ, ಸುಂದರ ಸಮಾಜದ ನಿರ್ಮಾಣಕ್ಕೆ ಪಣತೊಡೋಣ ಎಂಬ ಆಶಯದಲ್ಲಿ ಪ್ರಾರಂಭವಾದ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಯಶಸ್ವಿಯಾದರೆ ಬಿಲ್ಲವರ ನಾಳೆಗಳು ಮತ್ತು ದಕ್ಷಿಣ ಕನ್ನಡದ ನಾಳೆಗಳು ಸುಂದರವಾಗಲಿದೆ.

 

3 thoughts on “ನಾರಾಯಣ ಗುರು ವಿಚಾರ ಕಮ್ಮಟ: ‘ವಿಚಾರ ಕ್ರಾಂತಿಗೆ ಆಹ್ವಾನ’

  1. ನೀಲಾ ಕೆ

    ನಾವಿಕ ವಿಚಾರವಾದಕ್ಕೆ ಬಲವಾದ ಭೂಮಿಕೆಯಾಗಲಿ. ಇಂತಹ ಚಾರಿತ್ರಿಕ ಕಮ್ಮಟವು ಬರುವ ದಿನಗಳಲ್ಲಿ ಎಲ್ಲೆಡೆ ಹಬ್ಬಲಿ. ಯುವಕರು ನಾರಾಯಣಗುರು ಚಿಂತನೆಗಳನ್ನು ಮುಂದಕ್ಕೊಯ್ಯುವ ಹೊಣೆ ಹೊರುವಂತಾಗಲಿ. ನಾವಿಕಕ್ಕೆ ಶುಭಾಷಯಗಳು

    Reply
  2. Dayananda kumar

    ಈ ವಿಚಾರ ಸಂಕಿರಣ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿಯಾಗಲಿ…ಜನಸಾಮಾನ್ಯರ ಪಾಲಿಗೆ ಸಾರ್ವಕಾಲಿಕ ತತ್ವ ಸಂದೇಶ ,ಸುಧಾರಣೆಯಿಂದ ಅಸಾಮಾನ್ಯರೆನಿಸಿದ ಗುರುವರ್ಯರ‌ ನೈಜ ನಿಷ್ಠೆಗಳು ಅನಾವರಣಗೊಳ್ಳಲಿ.

    Reply
  3. Rashmitha b Salian

    Enk mast kushiyand billava janagonu rajakkeeya durballake maltondu uller biiavereg sariyayina margadarshana bodu Anchina kelasogu yan biillava ponjuvu ade support malpuve namma jatin uddara malpuna yochane malpuga

    Reply

Leave a Reply to Dayananda kumar Cancel reply

Your email address will not be published. Required fields are marked *