ಎಡಪಂಥದ ಅಂತ್ಯಸಂಸ್ಕಾರ ಮತ್ತು ಚಕ್ರವರ್ತಿ ಸೂಲಿಬೆಲೆ ಯೋಜನೆಗಳು !!

Naveen Soorinje


ನವೀನ್ ಸೂರಿಂಜೆ


ಎಡಪಂಥದ ಅಂತ್ಯಸಂಸ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಇತ್ತೀಚೆಗೆ ಟೀಮ್ ಮೋದಿ ಸಂಸ್ಥಾಪಕರಲ್ಲಿ ಒರ್ವರಾದ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಸುದ್ಧಿಯಾಗಿವೆ. ಸೂಲಿಬೆಲೆಯವರು ನುಡಿದ ಇದೇ ಮಾತನ್ನು ಅರವತ್ತರ ದಶಕದಲ್ಲಿ ಆರ್ ಎಸ್ ಎಸ್ ಪ್ರಮುಖ ಪ್ರಭಾಕರ ಘಾಟೆ ಮಂಗಳೂರಿನಲ್ಲಿ ಹೇಳಿದ್ದರು. ಅವತ್ತು ಕಮ್ಯೂನಿಷ್ಟ್ ಮುಕ್ತ ಕರಾವಳಿಗೆ ಪ್ರಭಾಕರ್ ಘಾಟೆ ಕರೆ ಕೊಟ್ಟಿದ್ದರು. ಅದಕ್ಕಾಗಿ ಘಾಟೆ ಪ್ರಳಯಾಂತಕ ಯೋಜನೆಗಳನ್ನೂ ರೂಪಿಸಿದ್ದರು.

ಎಡಪಂಥವಿರಲಿ, ಬಲಪಂಥವಿರಲಿ ಸಿದ್ದಾಂತವನ್ನು ಹೋರಾಟದ ಮೂಲಕ ಜಾರಿಗೆ ತರಬೇಕು. ಕಳ್ಳದಾರಿಯ ಮೂಲಕವಲ್ಲ. ಅವತ್ತು ಪ್ರಭಾಕರ ಘಾಟೆಯವರು ತನ್ನ ಷಡ್ಯಂತ್ರಿ ಶಿಷ್ಯನೊಬ್ಬನ ಮೂಲಕ ಎಡಪಂಥೀಯರನ್ನು ನಂಬಿಸಿ ಪಿತೂರಿಯ ಮೂಲಕ ತನ್ನ ಧ್ಯೇಯ ಸಾಧನೆಗೆ ಹೊರಟಿದ್ದರು. ಘಾಟೆಯವರ ಶಿಷ್ಯ ನಾಮದೇವ ಶೆಣೈರ ಈ ಸಾಧನೆಯ ಪುಸ್ತಕ ಇವತ್ತಿಗೆ ಸೂಲಿಬೆಲೆ ತಂಡದ ಪಠ್ಯ ಪುಸ್ತಕ. ಸೂಲಿಬೆಲೆಯ ಜಾಗೋ ಭಾರತ್, ನಮೋ ಬ್ರಿಗೇಡ್, ಟೀಮ್ ಮೋದಿ ಸೇರುವ ಬಲಪಂಥೀಯ ಯುವಕರಿಗೆ ಸಂಘಟನೆಯ ಕಾರ್ಯತಂತ್ರದ ಭಾಗವಾಗಿ ಒಂದು ಪುಸ್ತಕವನ್ನು ನೀಡಲಾಗುತ್ತದೆ. ಆ ಪುಸ್ತಕದ ಹೆಸರು ನಾಮಧ್ಯೇಯ!

ನಾಮಧ್ಯೇಯ ಪುಸ್ತಕದಲ್ಲಿ “ನಾಮದೇವರಿನ್ನೂ ತರುಣ, ಕಮ್ಯೂನಿಷ್ಟ್ ಕೋಟೆಗೆ ಕನ್ನ” ಎಂಬ ಅಧ್ಯಾಯವಿದೆ.‌ ಅದರ ಆಯ್ದ ಭಾಗವನ್ನು ಸಂಕ್ಷಿಪ್ತಗೊಳಿಸಿ ಇಲ್ಲಿ ಉಲ್ಲೇಖಿಸಲಾಗಿದೆ.

ಗೌಡ ಸಾರಸ್ವತ ಬ್ರಾಹ್ಮಣ ( ಜಿಎಸ್ ಬಿ) ಸಮುದಾಯಕ್ಕೆ ಸೇರಿದ ನಾಮದೇವ ಶೆಣೈ ಕೇರಳದ ಕಾಂಞಗಾಡಿನಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಅವಧಿಯಲ್ಲೇ ಆರ್ ಎಸ್ ಎಸ್ ಶಾಖೆಗೆ ತೆರಳುತ್ತಿದ್ದ ನಾಮದೇವ ಶೆಣೈ ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾಗಲೇ ಆರ್ ಎಸ್ ಎಸ್ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಎಸ್ ಎಸ್ ಎಲ್ ಸಿ ಮುಗಿದ ನಂತರ ಸಮುದಾಯದ ಉಳಿದವರಂತೆ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ಸಂಘಪರಿವಾರಕ್ಕೆ ಸವಾಲಿನ ದಿನಗಳವು. ದುಡಿದ ಹಣದಲ್ಲಿ ಸಂಘಟನೆಗೊಂದು ಪಾಲು ನೀಡಬೇಕಿತ್ತು. ಇದೇ ಸಮಯದಲ್ಲಿ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಕೆಲಸಕ್ಕೆ ಅರ್ಜಿ ಕರೆದಿದ್ದಾರೆ ಎಂದು ಯಾರೋ ಹೇಳಿದರು. ಶೆಣೈ ಅರ್ಜಿ ಹಾಕಿದರು. ಎಲ್ಲರೂ ಪದವಿಧರರಾಗಿದ್ದರೆ ಶೆಣೈ ಮಾತ್ರ ಎಸ್ ಎಸ್ ಎಲ್ ಸಿ. ಸಂದರ್ಶನದಲ್ಲಿ ಶೆಣೈ ಪಾಸಾಗಿದ್ದರು. ಶೆಣೈ ಅವರನ್ನು ತಮಿಳುನಾಡಿನ ಮಧುರೈಗೆ ಕಳುಹಿಸಲಾಯ್ತು.

ಅದಾಗಲೇ ಮಂಗಳೂರಿನ ಆರ್ ಎಸ್ ಎಸ್ ಹೋರಾಟದಲ್ಲಿ ಸಕ್ರೀಯನಾಗಿದ್ದ 20 ರ ಹರೆಯದ ಯುವಕ, ಹಿಂದುತ್ವಕ್ಕಾಗಿ ಇನ್ನಷ್ಟೂ ಹೋರಾಡಬೇಕು ಎಂದುಕೊಳ್ಳುತ್ತಿರುವಾಗಲೇ ಮಧುರೈನತ್ತಾ ಬದುಕು ಹೊರಳಿತ್ತು. ಮಧುರೈನ ಕಾರ್ಪೋರೇಷನ್ ಬ್ಯಾಂಕಿನ ಕೆಲಸ ನಾಮದೇವ ಶೆಣೈಗೆ ಉಸಿರುಗಟ್ಟಿಸುವಂತಿತ್ತು. ಅದಕ್ಕೆ ಕಾರಣ ಬ್ಯಾಂಕ್ ಬ್ರಾಂಚಿನಲ್ಲಿದ್ದ ಕಮ್ಯೂನಿಷ್ಟ್ ಕಾರ್ಮಿಕ ಸಂಘಟನೆಯ ಪ್ರಾಬಲ್ಯ. ಬ್ಯಾಂಕಿನಲ್ಲಿ ಡ್ಯೂಟಿ ಜಾಯಿನ್ ಆಗುತ್ತಿದ್ದದ್ದಂತೆಯೇ ಬ್ಯಾಂಕಿನ ನಿಯಮವೇನೊ ಎಂಬಷ್ಟೇ ಸಹಜವಾಗಿ ಕಮ್ಯೂನಿಷ್ಟರ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ನ ಸದಸ್ಯತ್ವವನ್ನು ನೀಡಲಾಯ್ತು. ಆರ್ ಎಸ್ ಎಸ್ ಕಟ್ಟಾಳು ಅನಿವಾರ್ಯವಾಗಿ ಕಮ್ಯೂನಿಷ್ಟ್ ಕಾರ್ಮಿಕ ಸಂಘಟನೆಯ ಸದಸ್ಯತ್ವ ಪಡೆದರು. ಪ್ರಭಾತ್ ಕರ್ ಎಂಬ ಬಂಗಾಳಿ ಸಂಸದರು ಕಾರ್ಮಿಕ ಸಂಘಟನೆಯ ಅಧ್ಯಕ್ಷರಾಗಿದ್ದರು. ಆಗಿನ್ನೂ ಬ್ಯಾಂಕುಗಳಿಗೆ ಸಂಘಪರಿವಾರದ ಸಂಘಟನೆಗಳ ಪ್ರವೇಶವೇ ಸಾಧ್ಯವಾಗಿರಲಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಗಳೂ ಕೂಡಾ ಕಮ್ಯೂನಿಷ್ಟರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದವು. ಬ್ಯಾಂಕಿನ ಅಟೆಂಡರನೂ ಕೂಡಾ ಕಮ್ಯೂನಿಷ್ಟ್ ನಾಯಕರಾಗಿದ್ದರಿಂದ ಬ್ಯಾಂಕ್ ಮ್ಯಾನೇಜರ್ ಗಳೂ ಅಟೆಂಡರ್ ಗಳಿಗೂ ಹೆದರುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಬ್ಯಾಂಕುಗಳು ಕಮ್ಯೂನಿಷ್ಟರ ಅಣತಿಯಂತೆ ನಡೆಯುತ್ತಿತ್ತು.

ಕಮ್ಯೂನಿಷ್ಟರ ಕೋಟೆಯಾಗಿದ್ದ ಬ್ಯಾಂಕುಗಳು, ಬ್ಯಾಂಕ್ ನ ಪಕ್ಕದಲ್ಲೇ ಇದ್ದ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್, ಕಾರ್ಮಿಕ ಸಂಘಟನೆಯ ನಾಯಕರನ್ನು ಕಂಡು ಸಂಘಪರಿವಾರದ ಕಾರ್ಯಕರ್ತ ನಾಮದೇವ ಶೆಣೈ ಹೈರಾಣಾಗಿ ಹೋಗಿದ್ದರು. ಹೇಗೋ ಹೇಗೋ ಆರು ತಿಂಗಳು ಕಳೆಯಿತು.

ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಆರ್ ಎಸ್ ಎಸ್ ಪ್ರವೇಶ ಮಾಡಲು ನಿರ್ಧರಿಸಿತು. ಅದರ ಭಾಗವಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಅಲೆ ಎಬ್ಬಿಸಲಾಯ್ತು. ಹಿರಿಯ ಆರ್ ಎಸ್ ಎಸ್ ನಾಯಕ ದತ್ತೊಪಂಥ ಠೇಂಗಡಿಯವರು ತಮ್ಮ ಶಿಷ್ಯ ಪ್ರಭಾಕರ ಘಾಟೆಗೆ ಕರಾವಳಿ ಜವಾಬ್ದಾರಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ಕಮ್ಯೂನಿಷ್ಟ್ ಮುಕ್ತ ಮಾಡಬೇಕು ಎಂದು ಪ್ರಭಾಕರ ಘಾಟೆಗೆ ಸೂಚಿಸಲಾಗಿತ್ತು. ಈ ಸುದ್ದಿ ತಿಳಿದ ಮುಧುರೈನಲ್ಲಿ ನಾಮದೇವ ಶೆಣೈ ಮಂಗಳೂರಿಗೆ ಧಾವಿಸಿದರು. ಕಮ್ಯೂನಿಷ್ಟ್ ಮುಕ್ತ ಕರಾವಳಿಗಾಗಿ ಘಾಟೆಯವರ ಜೊತೆ ಕೈ ಜೋಡಿಸಬೇಕು ಎಂಬ ಉಮೇದಿನಲ್ಲಿ ಶೆಣೈ ಇದ್ದರು.

ಆದರೆ ಪ್ರಭಾಕರ್ ಘಾಟೆಯವರು ಮಾತ್ರ ನಾಮದೇವ ಶೆಣೈ ಪ್ರಸ್ತಾಪವನ್ನು ನಿರಾಕರಿಸಿದರು. ನೀನು ಬ್ಯಾಂಕಿನಲ್ಲೇ ಕೆಲಸ ಮಾಡಬೇಕು ಮತ್ತು ಮಧುರೈನಲ್ಲೇ ಕಮ್ಯೂನಿಷ್ಟರ ಜೊತೆಗಿರಬೇಕು ಎಂದರು. ನಾಮದೇವ ಶೆಣೈಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. “ನೀನು ಈಗಿಂದೀಗಲೇ ಆರ್ ಎಸ್ ಎಸ್ ನ ಭಾರತೀಯ ಮಜ್ದೂರ್ ಸಂಘವನ್ನು ಸ್ಥಾಪಿಸಬಹುದು. ಆದರೆ ಬಲಪಂಥೀಯ ಸಂಘಟನೆಯನ್ನು ಸ್ಥಾಪಿಸಿದರೆ ಈ ಪರಿಸ್ಥಿತಿಯಲ್ಲಿ ನಿನಗೆ ತೊಂದರೆಯಾಗಬಹುದು. ತಮಿಳುನಾಡಿನಲ್ಲಿ ನೀನು‌ ಕಮ್ಯೂನಿಷ್ಟನಾಗಿರಬೇಕು.‌ ಕಮ್ಯೂನಿಷ್ಟನಾಗಿ ನಿಧಾನಕ್ಕೆ ಕಮ್ಯೂನಿಸ್ಟ್ ಸಂಘಟನೆಯನ್ನು ಕೊರೆಯುತ್ತಾ ಇರಬೇಕು” ಎಂದು ಆದೇಶ ನೀಡಿದರು. ಅಲ್ಲಿಗೆ ನಾಮದೇವ ಶೆಣೈಗೆ ಆರ್ ಎಸ್ ಎಸ್ ಪ್ರಮುಖ ಪ್ರಭಾಕರ್ ಘಾಟೆಯವರು ನೀಡಿದ ಟಾಸ್ಕ್ ಅರ್ಥ ಅಯ್ತು.

ಪ್ರಭಾಕರ್ ಘಾಟೆಯವರ ಸಲಹೆ, ಮಾರ್ಗದರ್ಶನ, ಆದೇಶ ಪಡೆದ ನಾಮದೇವ ಶೆಣೈ ಮಧುರೈಗೆ ಹೊರಟು ನಿಂತಾಗ ಉತ್ಸಾಹದ ಚಿಲುಮೆಯಾಗಿದ್ದರು. ಕಮ್ಯೂನಿಷ್ಟರ ಜೊತೆಗಿದ್ದೇ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೊಡಬೇಕಾದ ಕೊಡುಗೆ ಬಹಳಷ್ಟಿದೆ ಎಂದು ಯೋಜನೆಗಳನ್ನು ಸಿದ್ದಪಡಿಸಿಕೊಂಡರು.

ಮಧುರೈ ತಲುಪಿದ ಮರುದಿನದಿಂದಲೇ ಕಮ್ಯೂನಿಷ್ಟರ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ನ ಎಲ್ಲಾ ಸಭೆಗಳಲ್ಲಿ ಶೆಣೈ ಹಾಜರಾದರು. ಬರಹ, ಭಾಷಣಗಳಲ್ಲಿ ಪ್ರಖರವಾಗಿದ್ದ ಶೆಣೈ ಕಮ್ಯೂನಿಷ್ಟರಿಗೆ ಹತ್ತಿರವಾಗಲು ಸಮಯ ಹಿಡಿಯಲಿಲ್ಲ. ಯೂನಿಯನ್ ಅಗತ್ಯತೆ, ಕಾರ್ಮಿಕರ ಒಂದಾಗುವಿಕೆ, ಆಡಳಿತ ಮಂಡಳಿ ದೌರ್ಜನ್ಯದ ಬಗ್ಗೆ ಭಾಷಣ ಮಾಡಲಾರಂಭಿಸಿದರು. ನಾಮದೇವ ಶೆಣೈರವರು ಕಮ್ಯೂನಿಷ್ಟರಂತೆ ಬೆಂಕಿ ಉಗುಳುವ ಭಾಷಣಕಾರ ಅಲ್ಲದಿದ್ದರೂ ತಮ್ಮ ಭಾಷಣದಲ್ಲಿ ಮಾರ್ಕ್ಸ್, ವಿವೇಕಾನಂದರನ್ನು ಕಡ್ಡಾಯವಾಗಿ ತರುತ್ತಿದ್ದರು. ನಡುನಡುವೆ ಹೆಗಡೆವಾರರನ್ನು ತುರುಕುತ್ತಿದ್ದರೂ ಬ್ಯಾಂಕಿನ ಕಾಂಮ್ರೇಡುಗಳಿಗೆ ಅದು ಅರ್ಥವಾಗುತ್ತಿರಲಿಲ್ಲ. ಏನೇ ಆದರೂ ನಾಮದೇವ ಶೆಣೈಯವರು ಕಮ್ಯೂನಿಷ್ಟರು ಹೇಳುವ ವಿಚಾರವನ್ನೇ ಹೇಳುತ್ತಿದ್ದರು. ಹಾಗೆ ನೋಡಿದರೆ ಕಮ್ಯುನಿಷ್ಟರಿಗಿಂತಲೂ ಚೆನ್ನಾಗಿ ಮಾರ್ಕ್, ಸಮಾನತೆಯ ಹೋರಾಟವನ್ನು ಅರ್ಥ ಮಾಡಿಸುತ್ತಿದ್ದರು.

ಒಂದೆರಡು ವರ್ಷದಲ್ಲೇ ನಾಮದೇವ ಶೆಣೈ ಬ್ಯಾಂಕ್ ಯೂನಿಯನ್ ನಲ್ಲಿ ಹಿಡಿತ ಸಾಧಿಸಿದ್ದರು. ಶೆಣೈ ಇಲ್ಲದೇ ಸಭೆಗಳೇ ಇಲ್ಲ, ಶೆಣೈ ಬರಹವಿಲ್ಲದ ಕಾರ್ಮಿಕ ಪತ್ರಿಕೆಯಿಲ್ಲ, ಶೆಣೈ ಭಾಷಣವಿಲ್ಲದ ಕಾರ್ಯಾಗಾರವೇ ಇಲ್ಲ ಎಂಬಂತಾಗಿತ್ತು. ಹೀಗೆ ಯಾರೂ ನುಗ್ಗಲಾಗದ ಕಮ್ಯೂನಿಷ್ಟ್ ಕೋಟೆಯಾಗಿದ್ದ ಬ್ಯಾಂಕ್ ಯೂನಿಯನ್ ರಹಸ್ಯಗಳು ಶೆಣೈಗೆ ಅರ್ಥವಾಯ್ತು. ಹೊರ ನೋಟಕ್ಕೆ ಮಾತ್ರ ಕಮ್ಯೂನಿಷ್ಟರ ಏಕತೆ. ಒಳಗೊಳಗೆ ಭಾರೀ ಗುಂಪುಗಾರಿಕೆ ಇದೆ ಎಂದು ಅರ್ಥವಾಯ್ತು. ಸಂಘಟನೆಯೊಳಗಿನ ಈ ಗುಂಪುಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಏನು ಮಾಡಬೇಕೋ ಎಲ್ಲವನ್ನೂ ಶೆಣೈ ವ್ಯವಸ್ಥಿತವಾಗಿ ಮಾಡಿದರು. ಅದರ ಫಲವಾಗಿಯೇ ನಾಮದೇವ ಶೆಣೈ ಕೇಂದ್ರ ಯೂನಿಯನ್ ಮಟ್ಟಕ್ಕೂ ಹೋದರು. ಕೇಂದ್ರದ ಕಮ್ಯೂನಿಷ್ಟ್ ನಾಯಕರೂ ನಾಮದೇವ ಶೆಣೈರನ್ನು ನಾಯಕರೆಂದು ಒಪ್ಪಿಕೊಂಡರು. ಕ್ರಮೇಣ ಮಧುರೈ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಗೆ ನಾಮದೇವ ಶೆಣೈ ಪ್ರಬಲ ನಾಯಕರಾದರು. ಸಂಘಟನೆಯನ್ನು ಟೊಳ್ಳು ಮಾಡಿ ತಾನು ಮಾತ್ರ ನಾಯಕನಾದ ನಾಮದೇವ ಶೆಣೈ ಆರ್ ಎಸ್ ಎಸ್ ಆದೇಶ ಜಾರಿಗಾಗಿ ತಕ್ಕ ಸಮಯವೊಂದಕ್ಕೆ ಕಾಯುತ್ತಿದ್ದರು.

ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ನಿನ ಉನ್ನತ ಮಟ್ಟದ ಪಧಾದಿಕಾರಿಗಳ ಸಮಾವೇಶ ಮುಂಬೈನಲ್ಲಿ ನಡೆಯುವುದಿತ್ತು. ಸಂಘಟನೆ ಪ್ರಬಲವಾಗಿದ್ದಂತೆ ಕಾಣುತ್ತಿದ್ದ ತಮಿಳುನಾಡಿನ ಜವಾಬ್ದಾರಿಯನ್ನು ಶೆಣೈರಿಗೆ ಕೇಂದ್ರ ಸಮಿತಿ ವಹಿಸಿತ್ತು. ಜೊತೆಗೆ ಮುಂಬೈ ಸಮಾವೇಶದ ಹಲವು ಪ್ರಮುಖ ಜವಾಬ್ದಾರಿಗಳನ್ನು ಅವರಿಗೇ ವಹಿಸಲಾಗಿತ್ತು. ಆದರೆ ಮುಂಬೈ ಸಮಾವೇಶದ ಮುನ್ನ ದಿನ ನಾಮದೇವ ಶೆಣೈ ಮುಂಬೈಯಲ್ಲಿ ಕಾಣಸಿಗಲಿಲ್ಲ. ಮದ್ಯಾಹ್ನವಾಯ್ತು, ಸಂಜೆಯಾಯ್ತು, ರಾತ್ರಿಯಾಯ್ತು. ನಾಮದೇವ ಶೆಣೈ ನಾಪತ್ತೆ. ಮಧುರೈ ನಿಂದ ಬರಬೇಕಿದ್ದ ಪದಾಧಿಕಾರಿಗಳೂ ಇಲ್ಲ, ಜವಾಬ್ದಾರಿ ವಹಿಸಿಕೊಂಡಿದ್ದ ನಾಮದೇವ ಶೆಣೈರೂ ಇಲ್ಲ. ನಾಮದೇವ ಶೆಣೈ ವಹಿಸಿಕೊಂಡಿದ್ದ ಪ್ರಮುಖ ಜವಾಬ್ದಾರಿಗಳು ಯಾವುದೂ ಆಗದೇ ಮುಂಬೈ ಸಮಾವೇಶ ವಿಫಲವಾಗುವ ಎಲ್ಲಾ ಲಕ್ಷಣಗಳು ಕಂಡವು. ನಾಮದೇವ ಶೆಣೈ ಎಲ್ಲಿ ನಾಪತ್ತೆಯಾದರು ? ಪ್ರಖರ ಕಮ್ಯೂನಿಸಂ ಅವರಿಗೆ ಅಪಾಯ ತಂದೊಡ್ಡಿತೇ? ಬ್ಯಾಂಕ್ ಆಡಳಿತ ಮಂಡಳಿಗಳೇನಾದರೂ ಜೀವಕ್ಕೆ ತೊಂದರೆ ಮಾಡಿದವೇ? ಎಂದು ಕೇಂದ್ರ ಸಮಿತಿ ಚರ್ಚಿಸುತ್ತಿದ್ದಾಗಲೆ ಮಧುರೈನಿಂದ ತುರ್ತು ಸಂದೇಶ ಬಂದಿತ್ತು‌.

ಮಧುರೈನಿಂದ ಬಂದ ತುರ್ತು ಸಂದೇಶದ ಸಾರಾಂಶ ಹೀಗಿತ್ತು. “ಮಧುರೈ ನಾಮದೇವ ಶೆಣೈ ಸಂಘಟನೆಗೆ ಮೋಸ ಮಾಡಿದ್ದಾರೆ. ಇಂದು ತಮಿಳುನಾಡಿನ ಮೊದಲ ಭಾರತೀಯ ಮಜ್ದೂರ್ ಸಂಘ ಮಧುರೈನಲ್ಲಿ ಉದ್ಘಾಟನೆಯಾಗುತ್ತಿದೆ. ಮುಂಬೈ ಸಮಾವೇಶಕ್ಕೆ ಬರಬೇಕಾದವರೆಲ್ಲರೂ ಅಲ್ಲಿ ಹಾಜರಾಗುತ್ತಿದ್ದಾರೆ” ಎಂದಿತ್ತು.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಆರ್ ಎಸ್ ಎಸ್ ಭಾರತೀಯ ಮಜ್ದೂರ್ ಸಂಘದ ಹೆಸರಿನಲ್ಲಿ ಬ್ಯಾಂಕ್ ಯೂನಿಯನ್ ಸ್ಥಾಪಿಸಿದ್ದು ಹೀಗೆ. ಅತ್ತ ಮುಂಬೈಯಲ್ಲಿ ಕಮ್ಯುನಿಷ್ಟರ ಸಮಾವೇಶ ಸಂಪೂರ್ಣ ವಿಫಲವಾಗಿತ್ತು. ಅದು ಭಾರತದಲ್ಲಿ ಕಮ್ಯೂನಿಷ್ಟರು ಎದುರಿಸಿದ ಮೊದಲ ಸೋಲು. ಕಮ್ಯೂನಿಷ್ಟ್ ಶವಪೆಟ್ಟಿಗೆಗೆ ಬಿದ್ದ ಮೊದಲ ಮೊಳೆಯಾಗಿತ್ತು. ಕಮ್ಯೂನಿಷ್ಟರು ತಾವು ಮೋಸ ಮೋಸ ಹೋದೇವೆಂದೂ, ಈ ನಾಮದೇವ ಶೆಣೈ ಒಬ್ಬ ಆರ್ ಎಸ್ ಎಸ್ ಏಜೆಂಟರೆಂದು ಸಾಕಷ್ಟು ಉರಿದುಕೊಂಡರು. ಆದರೆ ಅವರ ಕಾಲ ಮಿಂಚಿತ್ತು. ಬ್ಯಾಂಕ್ ಯೂನಿಯನ್ ನಲ್ಲಿ ಸಂಘಪರಿವಾರದ ಕಾಲ ಆರಂಭವಾಗಿತ್ತು.

ಹೀಗಂತ ನಾಮಧ್ಯೇಯ ಪುಸ್ತಕದ ಮೊದಲ ಅಧ್ಯಾಯವಾಗಿರುವ ಕಮ್ಯೂನಿಷ್ಟರ ಕೋಟೆಗೆ ಕನ್ನ ಅದ್ಯಾಯದಲ್ಲಿ ಬರೆಯಲಾಗಿದೆ.

ಈಗಲೂ ಸಂಪೂರ್ಣ ಸ್ವಾದೀನ ಮಾಡಿಕೊಳ್ಳಲು ಸಾಧ್ಯವಾಗದಂತಿರುವ ಕಮ್ಯೂನಿಷ್ಟರ ನಿಜದ ಕೋಟೆಯೇ ಆಗಿರುವ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಗೆ ಕನ್ನ ಕೊರೆದು ಸಂಘಪರಿವಾರದವನ್ನು ನುಗ್ಗಿಸಿದ ನಾಮದೇವ ಶೆಣೈ ಇನ್ಯಾರೂ ಅಲ್ಲ. ಈಗ ಜಾಗೋ ಭಾರತ್, ನಮೋ ಬ್ರಿಗೇಡ್, ಟೀಮ್ ಮೋದಿಯ ಚಕ್ರವರ್ತಿ ಸೂಲಿಬೆಲೆಗೆ ಸಾಥ್ ಕೊಟ್ಟಿರುವ ನರೇಶ್ ಶೆಣೈಯ ತಂದೆಯೇ ನಾಮದೇವ ಶೆಣೈ.

ಸೂಲಿಬೆಲೆ ಒಬ್ಬ ಭಾಷಣಕಾರ ಮಾತ್ರ. ಜಾಗೋ, ಬ್ರಿಗೇಡ್, ಟೀಮ್ ಗಳ ನೇತೃತ್ವ ಇದೇ ನಾಮದೇವ ಶೆಣೈರ ಪುತ್ರ ನರೇಶ್ ಶೆಣೈಯವರದ್ದು. ಅವತ್ತು ನಾಮದೇವ ಶೆಣೈಯವರು ಕಮ್ಯೂನಿಷ್ಟ್ ಮುಕ್ತ ಕರಾವಳಿಗಾಗಿ ಎಡಪಂಥೀಯರೊಳಗೆ ಕೆಲಸ ಮಾಡಿದರೆ ಇವತ್ತು ನಾಮದೇವ ಶೆಣೈರ ಈಗಿನ ಪೀಳಿಗೆ ಎಡಪಂಥದ ಅಂತ್ಯ ಸಂಸ್ಕಾರಕ್ಕೆ ದಿನಗಣನೆ ಆರಂಭವಾಗಿದೆ ಎಂದಿದೆ.

ಎಡಪಂಥವೆಂದರೆ ಸಮಾನತೆಯ ಜಾರಿಗಾಗಿ ಕೆಲಸ ಮಾಡುವ ಸಿದ್ದಾಂತ. ಈ ಭೂಮಂಡಲವು ಸರ್ವರಿಗೂ ಸಮನಾಗಿ ಸೇರಿದ್ದು ಎನ್ನುತ್ತದೆ ಎಡಪಂಥೀಯ ಸಿದ್ದಾಂತ. ಅಂತಹ ಸಿದ್ದಾಂತದ ಅಂತ್ಯಸಂಸ್ಕಾರಕ್ಕೆ ದಿನ ನಿಗದಿ ಮಾಡುವವರು ಮಾಡುವವರು ಎಡಪಂಥ ಪ್ರತಿಪಾದಿಸುವ ಸಂಪತ್ತಿನ/ ಅಧಿಕಾರದ ಸಮಾನ ಹಂಚಿಕೆಗೆ ಪರ್ಯಾಯಗಳು ಯಾವುವು, ಅಸಮಾನತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಬಲಪಂಥೀಯ ಪರ್ಯಾಯಗಳು ಯಾವುದು ಎಂದು ಎಂದು ಹೇಳಬೇಕಾಗುತ್ತದೆ. ಜಾಗೋ ಭಾರತ್, ನಮೊ ಬ್ರಿಗೇಡ್, ಟೀಮ್ ಮೋದಿಯು ಜನರ ದಿನನಿತ್ಯದ ಸಮಸ್ಯೆಗಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಉದಾಹರಣೆ ಇದೆಯೇ? ಎಡಪಂಥ ಪ್ರತಿಪಾದಿಸುವ ವಿಕಾರಗಳಿಗೆ ಪರ್ಯಾಯವನ್ನು ಪ್ರತಿಪಾದಿಸಿದೆಯೇ? ಅಷ್ಟಕ್ಕೂ ಬಲಪಂಥ ಸಮಾನತೆಯನ್ನು/ ಸಂಪತ್ತಿನ ಸಮಾನ ಹಂಚಿಕೆಯನ್ನೂ ಒಪ್ಪುವುದಿಲ್ಲ, ವರ್ಣ ವರ್ಗ ರಹಿತ ಸಮ ಸಮಾಜವನ್ನೂ ಅಪೇಕ್ಷಿಸುವುದ್ದಿಲ್ಲ. ಈ ರೀತಿಯ ಪರ್ಯಾಯ ಕೆಲಸಗಳನ್ನು ಮಾಡದೆಯೇ, ಜನರ ಸ್ಪಂದಿಸದೆಯೇ ಎಡಪಂಥವೆಂಬ ಜನಪರ ಸಿದ್ದಾಂತವನ್ನು ಮುಗಿಸಲು ಸಾಧ್ಯವಿಲ್ಲ. ಹಾಗೇನಾದರೂ ಎಡಪಂಥಕ್ಕೆ ಅಂತ್ಯಸಂಸ್ಕಾರ ಮಾಡಿದರೆ ಅಂದು ಘಾಟೆ ಮತ್ತು ನಾಮದೇವ ಶೆಣೈರ ಕಳ್ಳ ಮಾರ್ಗದ ಮೂಲಕವಷ್ಟೇ ಸಾಧ್ಯ.

Leave a Reply

Your email address will not be published.