Daily Archives: July 23, 2021

ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಇಲ್ಲಿ ನಂಬಿಕೆಗಳೇ ಕಾನೂನು.

-ಡಾ. ಸಿದ್ದಲಿಂಗಯ್ಯ.

ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು ಮೇಲ್ವರ್ಗದವರ ಎದುರು ಹೆಚ್ಚೆಂದರೆ ಒಂದು ಅಡಿ ಸಮೀಪ ಬಂದಿರಬೇಕು, ಅಷ್ಟೇ. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ದೈಹಿಕ ಅಂತರ ಕಡಿಮೆಯಾಗಿ ಮಾನಸಿಕ ಅಂತರ ಹೆಚ್ಚಾಗಿದೆ. ನಮ್ಮ ಪುರಾತನ ಸಾಮಾಜಿಕ ವ್ಯವಸ್ಥೆ ನ್ಯಾಯ ತೀರ್ಮಾನಗಳನ್ನು ಮಾಡುವಾಗ ಯಾರನ್ನು ದೂರ ಇಟ್ಟಿತ್ತೋ, ಈಗ ಅದೇ ವರ್ಗದ ಜನರು ದೇಶದ  ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತದ್ದು ಚರಿತ್ರೆಯ ಸೋಜಿಗ. ಈ ನೆಲದ  ಪೂರ್ವಿಕರು ಸಂಬಂಧದಿಂದ ಸಮಾಜದ ಕಟ್ಟಕಡೆಯ ಮನುಷ್ಯರಾಗಿ ನಿಲ್ಲಬೇಕಾಗಿತ್ತು. ಹಾಗೆ ದೂರ ನಿಂತ ವ್ಯಕ್ತಿಯೇ ಭಾರತದ ಮೊದಲ ಪ್ರಜೆಯಾಗಿದ್ದು ಕೂಡ ಚರಿತ್ರೆಯ ಸೋಜಿಗ.

1856ರ ಜೂನ್ ತಿಂಗಳಿನಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಧಾರವಾಡದ ಒಬ್ಬ ದಲಿತ ವಿದ್ಯಾರ್ಥಿ ಸರ್ಕಾರಿ ಶಾಲೆಯೊಂದರಲ್ಲಿ ಸೀಟು ಬೇಕೆಂದು ಅರ್ಜಿ ಸಲ್ಲಿಸಿದ. ಇದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಸಮಾಜ ನಮ್ಮನ್ನು ಗುರುತಿಸಬೇಕು, ಗೌರವಿಸಬೇಕು, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಂತರಂಗದ ಹಂಬಲಕ್ಕೆ ಈ ಅರ್ಜಿ ಸಾಕ್ಷಿಯಾಯಿತು. ಇದಾದ 80 ವರ್ಷಗಳ ನಂತರ 1936 ರ ಅಕ್ಟೋಬರ್‌‌‌‌‌‌‌ನಲ್ಲಿ, ಮೈಸೂರು ದಾರ್ಬಾರ್‌‌‌‌‌‌‌ನಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಲಾಯಿತು. ಮೈಸೂರು ಅರಮನೆ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಿದ್ದನ್ನು ಕಂಡು ಬ್ರಿಟಾನಿಯಾ ವಿಶ್ವಕೋಶ ಇದೊಂದು ಕ್ರಾಂತಿಕಾರಕ ಕ್ರಮ ಎಂದು ಶ್ಲಾಘಿಸಿ ಬರೆದಿತ್ತು.

ಊರಿನ ಅಂಚಿನಲ್ಲಿದ್ದ ಶೋಷಿತ ವರ್ಗದವರು ಅನೇಕ ಸಂದರ್ಭಗಳಲ್ಲಿ ಊರಿನ ನಡುವೆ ಬಂದಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯ ಉದಾರವಾದಿ ಧೋರಣೆ. ಬುದ್ಧ, ಬಸವಣ್ಣ, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಕಾನಿಸ್, ಕುದ್ಮುಲ್ ರಂಗರಾಯರಂತಹ ವ್ಯಕ್ತಿಗಳಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಹೋರಾಟಗಳು ಕೂಡ ದಲಿತರ ವಿಮೋಚನೆಗೆ ಕಾರಣವಾಗಿವೆ. ಅಸ್ಪೃಷ್ಯತೆ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಪಾಸಾದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರ್ತೃಗಳಾಗಿ ಅಲ್ಲಿ ಇದ್ದರೂ ಕೂಡ, ನೆರದಿದ್ದ ಜನ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂಘರ್ಷ, ಗಾಂಧೀಜಿಯವರ ದಲಿತಪರ ಧೋರಣೆ ಇಂಥದ್ದೊಂದು ಕಾಯ್ದೆ ಜಾರಿಯಾಗಲು ಸಾಧ್ಯವಾಗಿಸಿತೆಂಬುದನ್ನು ನಾವು ಗಮನಿಸಬೇಕು.

ನಾಲ್ಕೈದು ವರ್ಷಗಳ ಹಿಂದೆ ಚಿತ್ರದುರ್ಗದ ಗ್ರಾಮವೊಂದರ ಊರ ಹಬ್ಬದ ರಥೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾತುರ್ಯದಿಂದ ರಥದ ಮೇಲಿನಿಂದ ಕೆಲ ಜನರು ಕೆಳಗೆ ಬಿದ್ದರು. ಅವರನ್ನು ತಕ್ಷಣವೇ ಕೆಳಗಿದ್ದ ಜನ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದರು. ಕೆಳಗೆ ಬಿದ್ದ ತಮ್ಮನ್ನು ಮುಟ್ಟಿ ಆಸ್ಪತ್ರೆಗೆ ಸೇರಿಸಿದ್ದು ದಲಿತರು ಎಂದು ತಿಳಿದ ಗಾಯಗೊಂಡ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಲು ಮುಂದಾದರು. ಹಾಗೆ ದಲಿತರನ್ನು ಮುಟ್ಟಿಸಿಕೊಳ್ಳುವುದಕ್ಕಿಂತ ಪರಲೋಕವೇ ವಾಸಿ ಎಂದು ಅವರು ಏಕೆ ಭಾವಿಸಿಕೊಂಡರೋ?. ಇದು ನನ್ನನ್ನು ಬಹುಕಾಲ ಕಾಡಿತು. ಇಂತಹ ಮೇಲ್ವರ್ಗದ ಜನರಿಗೆ ತಗುಲಿರುವ ಮೌಢ್ಯದಿಂದ ಹೊರತರಲು ಮಾನವೀಯ ಶಿಕ್ಷಣದ ಹೊರತು ಬೇರಾವ ಶಿಕ್ಷಣದಿಂದಲೂ ಸಾಧ್ಯವಿಲ್ಲವೆನಿಸಿತು.

26.06.2004 ರಂದು ಪಿ.ಟಿ.ಐ. ಒಂದು ಘಟನೆಯನ್ನು ವರದಿ ಮಾಡಿತು. ತಮಿಳುನಾಡಿನ ಕುಂಭಕೋಣಂನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದಲಿತರು ಗಂಡುನಾಯಿಗಳನ್ನು ಸಾಕಬಾರದು ಎಂಬ ನಿಯಮವನ್ನು ಮೇಲ್ಜಾತಿಯ ಜನ ಮಾಡಿದರಂತೆ. ದಲಿತರ ಗಂಡುನಾಯಿ ಆಕಸ್ಮಾತ್ ಮೇಲ್ವರ್ಗದವರ ಹೆಣ್ಣು ನಾಯಿಯ ಸಂಪರ್ಕಕ್ಕೆ ಬಂದು ವರ್ಣಸಂಕರವಾಗಿ ಏನಾದರೂ ಅಪಾಯವಾಗಬಹುದು ಎಂದು ಆ ನಿಯಮ ಮಾಡಿದರಂತೆ. ಇದರ ಫಲವಾಗಿ ದಲಿತರು ಗಂಡುನಾಯಿ ಸಾಕಬಾರದು ಎಂಬ ನಿಯಮ ಅಲ್ಲಿ ಜಾರಿಗೆ ಬಂತು. ಈ ಬಗೆಯ ಮೌಢ್ಯದ ಪರಮಾವಧಿಯನ್ನು ಎದುರಿಸುವುದಾದರೂ ಹೇಗೆ? ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ತರಹದ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನೆ ಮಾಡಿದರೆ ಸಂಘರ್ಷಕ್ಕೆ ದಾರಿಯಾಗುತ್ತದೆ, ಸಾವುನೋವುಗಳಿಗೂ ಕಾರಣವಾಗುತ್ತದೆ.

ಮತ್ತೊಂದು ಘಟನೆ ಕುರಿತು ಹೇಳುವೆ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಾಳು ಎನ್ನುವ ಗ್ರಾಮದ 30 ಜನ ದಲಿತರನ್ನು ಒಂದು ತಿಂಗಳ ಮಟ್ಟಿಗೆ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆ ಮೂವತ್ತು ಮಂದಿಯಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ದಲಿತರನ್ನು ಜೈಲಿನಲ್ಲಿ ಇಟ್ಟಿರುವುದರ ಕುರಿತು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: ‘ಈ ಗ್ರಾಮದ ದಲಿತರ ಮೇಲೆ ಇಲ್ಲಿನ ಬಲಾಢ್ಯರಿಂದ ಹಲ್ಲೆಯಾಗುವ ಸಂಭವವಿದೆ. ಇವರಿಗೆ ರಕ್ಷಣೆ ಕೊಡಬೇಕಾದರೆ ಸೆಂಟ್ರಲ್ ಜೈಲೇ ಸೂಕ್ತವಾದ ಸ್ಥಳ, ಹೀಗಾಗಿ ಅವರನ್ನೆಲ್ಲಾ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದೇವೆ.’ ಆ ಅಧಿಕಾರಿಗೆ ಏಕೆ ಈ ಭಾವನೆ ಬಂತೋ ಗೊತ್ತಿಲ್ಲ. ಬಹುಶಃ  ಅಧಿಕಾರಿಯಲ್ಲಿದ್ದ ಅತ್ಯುತ್ಸಾಹ, ಜೊತೆಗೆ ದಲಿತರನ್ನು ಸವರ್ಣೇಯರ ಹಲ್ಲೆಗಳಿಂದ ರಕ್ಷಿಸಲು ಬೇರಾವ ದಾರಿಗಳಿಲ್ಲವೆಂಬ ನಂಬಿಕೆ ಸೆಂಟ್ರಲ್ ಜೈಲೇ ವಾಸಿಯೆಂದು ಆಯ್ಕೆ ಮಾಡಿಕೊಂಡಿರಲು ಕಾರಣವಾಗಿರಬಹುದೇನೋ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ. ಕೊರಗ ಜನಾಂಗದವರು ಮೇಲ್ವರ್ಗದ ರೋಗಪೀಡಿತ ವ್ಯಕ್ತಿಗಳ  ಉಗುರು ಮತ್ತು ಕೂದಲುಗಳನ್ನು ಅನ್ನದಲ್ಲಿ ಕಲಸಿ ತಿಂದರೆ ಅವರ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಈ ಪದ್ಧತಿಯ ಹಿಂದಿದೆ. ಜಗತ್ತಿನಲ್ಲಿ ಇದಕ್ಕಿಂತಲೂ ಅಮಾನವೀಯವಾದ ಪದ್ಧತಿ ಇನ್ನೊಂದು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಜೀವದ ಹಂಗುತೊರೆದು ಅಪಾಯಕಾರಿ ಸಿಡಿಮದ್ದನ್ನು ಸಿಡಿಸುವುದು ಈ ಜನಾಂಗದವರ ಕೆಲಸವೇ. ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದಾಗ ಈ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟೆ. ಸರ್ಕಾರಕ್ಕೂ ಅಜಲು ಪದ್ಧತಿಯ ಕ್ರೌರ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ರೂಪದಲ್ಲಿ ಉತ್ತರ ಕೊಟ್ಟರು: ‘ಕೊರಗ ಜನಾಂಗದವರಿಗೆ ಈ ಪದ್ಧತಿ ಇಷ್ಟವಿಲ್ಲದಿದ್ದರೆ ನಿಲ್ಲಿಸಬಹುದು.’ ಸರ್ಕಾರ ನೀಡಿದ ಉತ್ತರ ಹೇಗಿದೆಯೆಂದರೆ ಪ್ರಾಣ ರಕ್ಷಣೆಯನ್ನು ಕೇಳಿದ ಒಬ್ಬನಿಗೆ  ‘ನಿನಗೆ ಸಾಯಲು ಇಷ್ಟವಿಲ್ಲದೇ ಇದ್ದರೆ ರಕ್ಷಣೆಯನ್ನು ಕೊಡುತ್ತೇವೆ’ ಎಂದು ಹೇಳಿದಂತಾಯಿತು. ಆದರೆ ಜನಪರ ಚಳವಳಿಗಳ ಹೋರಾಟದಿಂದ ಕೆಲದಿನಗಳಲ್ಲಿಯೇ ಸರ್ಕಾರ ಅಜಲು ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು.

ಅಮೆರಿಕಾದ ಕಪ್ಪುಜನ ಅನುಭವಿಸಿರುವ ಶೋಷಣೆಗೆ ಹೋಲಿಸಿದರೆ, ಭಾರತದಲ್ಲಿ ಅಸ್ಪೃಶ್ಯರ ಮೇಲೆ ಎಸಗಿರುವ ಶೋಷಣೆ ಹೆಚ್ಚು ಭೀಕರ ಅನ್ನಿಸುತ್ತದೆ. ಕಪ್ಪು ಜನರನ್ನು ತಮ್ಮ ಅಡಿಗೆಯವರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಅಡಿಗೆ ಮನೆಗಳಿಗೆ ಬಿಟ್ಟುಕೊಂಡ ಅಮೆರಿಕಾದ ಸವರ್ಣೇಯರು ಅಷ್ಟಿಷ್ಟಾದರೂ ಮಾನವೀಯತೆಯನ್ನು ಅಲ್ಲಿನ ಶೋಷಿತರ ಮೇಲೆ ತೋರಿದರು. ಇಲ್ಲಿ ಅಸ್ಪೃಶ್ಯರನ್ನು ಮನೆ, ಮನಸ್ಸು ಎರಡರಿಂದಲೂ ದೂರವಿಡಲಾಗುತ್ತಿದೆ. ಹಳ್ಳಿಯ ಹೋಟೆಲ್‍ಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶ ಕನಸಿನಂತೆ ಕಾಣುತ್ತಿದೆ. ಜನಿವಾರ, ಶಿವದಾರಗಳೇ ಈಗ  ದೇವಸ್ಥಾನ ಪ್ರವೇಶದ ಮಾನದಂಡಗಳು. ಬಹಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಸಿದ್ದಪ್ಪ ಎನ್ನುವ ದಲಿತ ವ್ಯಕ್ತಿಯೊಬ್ಬರು ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆಂದು ಹೋದರು. ಆ ದೇವಸ್ಥಾನದಲ್ಲಿ ಅವರಿಗೆ ಪ್ರವೇಶವನ್ನು ನೀಡಲಿಲ್ಲ. ಅವರು ದೇವಸ್ಥಾನದ ಹೊರಗಡೆ ನಿಂತು ಹೇಳಿದರು: “ನನಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿಲ್ಲ, ನಂಜುಂಡೇಶ್ವರನಿಗೂ ನನ್ನ ದರ್ಶನ ಭಾಗ್ಯವಿಲ್ಲ.”  ಆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಯಾವ ಎತ್ತರದಲ್ಲಿ ಕಂಡುಕೊಂಡರು ಎಂಬುದು ಇಲ್ಲಿ ಮುಖ್ಯ. ಈ ತರಹ ಆತ್ಮ ಗೌರವದ ಪರಿಜ್ಞಾನ ದಲಿತರಲ್ಲಿ ಮೂಡಬೇಕಾಗಿದೆ.

ನಾನು ಬಾಲ್ಯದಲ್ಲಿರಬೇಕಾದರೆ ನನ್ನ ತಂದೆ ತಾಯಿ ಬೆಂಗಳೂರಿನ ನಗರ ಭಾಗದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶಾಲೆ ಮುಗಿಸಿಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ತಾಯಿ ಹಿಂಬಾಗಿಲ ಮೂಲಕ ಅಲ್ಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು. ಮನೆಯ ಹಿಂದೆ ಹಿಂಬಾಗಿಲ ಮೂಲೆಯೊಂದರಲ್ಲಿ ನಾವೆಲ್ಲ ಕೂತು ಊಟ ಮಾಡುತ್ತಿದ್ದಾಗ ಆ ಮನೆಯ ಮಾಲೀಕರು ನಮ್ಮತ್ತ ಬಂದರು. ಅವರು ನಮ್ಮತ್ತ ಬರುವುದನ್ನು ಕಂಡು ನಮ್ಮ ತಾಯಿ ಸ್ವಲ್ಪ ಆತಂಕಗೊಂಡರು, ನಾನು ಕೂಡ ಗೊಂದಲಗೊಂಡೆ. ಅವರು ಬಂದವರೇ ‘ನಿಮ್ಮನ್ನು ಒಳಮನೆಗೆ ಕರೆದು ಊಟ ಮಾಡಿಸಬಹುದಿತ್ತು, ಆದರೆ ಈ ಸಂಪ್ರದಾಯ, ಜಾತಿ ಪದ್ಧತಿ ನನ್ನ ಕೈಗಳನ್ನು ಕಟ್ಟಿಹಾಕಿದೆ. ನಿಮ್ಮನ್ನು ಇಲ್ಲಿ ಕೂರಿಸಿ ಊಟ ಕೊಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ’ ಎಂದು ತುಂಬಾ ದುಃಖಪಟ್ಟರು. ಆ ಅಸಹಾಯಕತೆಯಲ್ಲೂ ಅವರು ನನಗೆ ಮಹಾಮಾನವರಂತೆ ಕಂಡರು. ಆ ವ್ಯಕ್ತಿಯ ಮೇಲೆ ಅಪಾರ ಗೌರವ ಮೂಡಿ ನನಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗಿದ್ದವು. ಒಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ಅವರ ಬಂಧುಗಳ ಮನೆಗೆ ಊಟಕ್ಕೆಂದು ನನ್ನನ್ನು ಕರೆದರು. ನಾನು ಜಾತಿಯಲ್ಲಿ ದಲಿತ ಎಂದು ಅಗ್ರಹಾರ ಅವರ ಬಂಧುಗಳಿಗೆ ಮೊದಲೇ ಹೇಳಿ ನಾವಿಬ್ಬರು ಸಂಜೆ ಊಟಕ್ಕೆ ಬರುತ್ತಿದ್ದೇವೆ ಎಂದು ಹೇಳಿದರಂತೆ. ಅವರು ಬಂಧುಗಳು ನೀವೊಬ್ಬರೆ ಬನ್ನಿ, ನಿಮ್ಮ ಸ್ನೇಹಿತರು ಬರುವುದು ಬೇಡ ಎಂದರಂತೆ. ಅಗ್ರಹಾರ ಅವತ್ತಷ್ಟೆ ಅಲ್ಲ ಮತ್ತೆಂದೂ ಅವರ ಬಂಧುಗಳ ಮನೆಗೆ ಕಾಲಿಡಲಿಲ್ಲ ಎಂಬುದು ಗೊತ್ತಾಯಿತು.

ಈ ಮಣ್ಣಿನ ಅಸ್ಪೃಶ್ಯರನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡಿರುವುದನ್ನು ನಾವು ಇತಿಹಾಸದ ಪಾಠಗಳಲ್ಲಿ ಓದಿದ್ದೇವೆ. ಮನುಸ್ಮೃತಿಯ ಎಲ್ಲ ನಿಯಮಗಳನ್ನು ಜಾರಿಮಾಡಿದ್ದ ಕಾಲದಲ್ಲಿ ಈ ಅಸ್ಪೃಶ್ಯರ ಬದುಕು ಹೇಗಿತ್ತೆಂಬುದನ್ನು ಈ ಕಾಲದಲ್ಲಿ ನಿಂತು ಸುಲಭವಾಗಿ ಊಹಿಸಿಬಹುದು. ತಮ್ಮ ಮುಖ ನೋಡಿದರೆ ಅಶುಭವೆಂದು ತಿಳಿದಿದ್ದ ಸವರ್ಣೇಯರ ಬೀದಿಗಳಿಗೆ ದಲಿತರು ಕಾಲಿಡುವಾಗ ಸೊಂಟಕ್ಕೆ ಪರಕೆ ಕಟ್ಟಿಕೊಂಡು, ಎಂಜಲು ನೆಲಕ್ಕೆ ಬೀಳದಂತೆ ತಡೆಯಲು ಕತ್ತಿಗೆ ಮಡಕೆ ಕಟ್ಟಿಕೊಂಡು ಬರಬೇಕಾಗಿತ್ತು. ಸವರ್ಣೇಯರ ಎಲ್ಲ ಕ್ರೌರ್ಯಗಳಿಗೆ ಸಿಕ್ಕಿ ದಲಿತರು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು ಇಲ್ಲವೇ ಸಿಡಿದು ತಿರುಗಿ ಬೀಳಬಹುದಿತ್ತು. ಆದರೆ ಅವಮಾನದಲ್ಲಿ ಬೆಂದ ದಲಿತರು ಪ್ರತಿಪುರಾಣ, ಪ್ರತಿಸಂಸ್ಕೃತಿ ಕಟ್ಟುವ ಹೊಸ ಮಾರ್ಗಗಳನ್ನು ಆರಿಸಿಕೊಂಡರು. ಸವರ್ಣೇಯರ ಕ್ರೌರ್ಯಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಹೊಸ ಸಾಹಿತ್ಯ ಪರಂಪರೆಗಳನ್ನು ಸೃಷ್ಟಿಸಿದ ದಲಿತರ ಜಾನಪದ ಮಹಾಕಾವ್ಯಗಳನ್ನು ಇವತ್ತಿಗೂ ಮರಾಠಿಯಲ್ಲಿ ಹೇರಳವಾಗಿ ಕಾಣಬಹುದು. ಅವಮಾನವನ್ನು ಮೀರುವ ದಲಿತರ ಪ್ರಯತ್ನಗಳೆಲ್ಲ ಹೊಸ ಸಾಹಿತ್ಯ ಮಾರ್ಗ ಸೃಷ್ಟಿಸಲು ಕಾರಣವಾಗಿದೆ. ಆದರೂ ಅಮೆರಿಕಾ, ಆಫ್ರಿಕಾದಂತಹ ದೇಶಗಳಲ್ಲಿ ಘಟಿಸಿದ ಕಪ್ಪುಜನರ ದಂಗೆಯಂತೆ ದಲಿತರ ವಿಮೋಚನೆಗೆ ಯಾವ ದಂಗೆಯೂ ಇಲ್ಲಿ ಜರುಗಲಿಲ್ಲ. ಅವಮಾನ, ಶೋಷಣೆಯ ನೆರಳಿನಲ್ಲಿ ಬದುಕುವುದನ್ನು ರೂಢಿಮಾಡಿಕೊಂಡಿದ್ದ ನಮ್ಮ ಪೂರ್ವಿಕರು ಪ್ರತಿಸಂಸ್ಕೃತಿ  ಕಟ್ಟುವುದರಲ್ಲಿ ತಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಂಡರು. ದಲಿತರ ದೈವವನ್ನು ಅವಮಾನಿಸಿದರೆ ದಲಿತರನ್ನು ಸುಲಭವಾಗಿ ಹಣಿಯಬಹುದೆಂಬುದನ್ನು ಸವರ್ಣೇಯರು ಕಂಡುಕೊಂಡಿದ್ದರು. ಹೀಗಾಗಿ ದಲಿತರ ದೈವಗಳು ವರ-ಶಾಪಕೊಡದೆ, ಮೇಲ್ವರ್ಗದ ದೇವತೆಗಳ ಕಾವಲಿಗೆ ನಿಂತಂತೆ ಕಾಣುತ್ತವೆ. ವರ್ತಮಾನದಲ್ಲೂ ಕೂಡ ದಲಿತರ ದೈವಗಳು ತೀರಾ ದುರ್ಬಲವಾಗಿ ಕಾಣುತ್ತವೆ.

ಸಮಾಜದ ವ್ಯಂಗ್ಯ ಹೇಗಿದೆ ನೋಡಿ: ಯಾವ ಮೇಲ್ವರ್ಗದಿಂದ ದಲಿತರ ಮೇಲೆ ಅಮಾನವೀಯ ಶೋಷಣೆ, ಕ್ರೌರ್ಯಗಳು ನಡೆದವೋ ಅದೇ ಮೇಲ್ವರ್ಗದಿಂದ ದಲಿತರ ಉದ್ಧಾರಕ್ಕೆಂದು ದೊಡ್ಡ ನಾಯಕರು ಬಂದರು. ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾಯರು, ಕಾಕಾ ಕಾರ್ಕಾನಿಸ್, ತಗಡೂರು ರಾಮಚಂದ್ರರಾಯರು ಇವರೆಲ್ಲ ದಲಿತರ ಆತ್ಮಗೌರವಕ್ಕಾಗಿ ಬೀದಿಗೆ ಬಂದು ತಮ್ಮ ಸಮುದಾಯಗಳಿಂದಲೇ ಬಹಿಷ್ಕಾರಕ್ಕೆ ಒಳಗಾದರು. ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆಂದೇ ‘ಪಂಚಮ ಬೊರ್ಡಿಂಗ್ ಸ್ಕೂಲ್’ ತೆರೆದಾಗ, ದಲಿತರಿಗೆ ಪಾಠಮಾಡಲು ಕರ್ನಾಟಕದಿಂದ ಒಬ್ಬೇ ಒಬ್ಬ ಶಿಕ್ಷಕ ಮುಂದೆ ಬರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಎದೆಗುಂದದೆ ಕೇರಳದಿಂದ ಶಿಕ್ಷಕರನ್ನು ಕರೆಸಿದರು. ತಮ್ಮ ಜನಾಂಗದಿಂದ ಎದುರಾದ ಎಲ್ಲ ವಿರೋಧವನ್ನು ಮೆಟ್ಟಿ ಮಳವಳ್ಳಿಯಿಂದ ತಲಕಾಡು ಚಿಕ್ಕರಂಗೇಗೌಡರು ದಲಿತರಿಗೆ ಪಾಠಮಾಡಲು ಮುಂದೆ ಬಂದರು. ಇವತ್ತಿಗೂ ಮಳವಳ್ಳಿ ತಾಲ್ಲೂಕಿನಲ್ಲಿ ಮನೆಗೊಬ್ಬೊಬ್ಬ ದಲಿತ ಸರ್ಕಾರಿ ನೌಕರ ಸಿಗಲು ತಲಕಾಡು ಚಿಕ್ಕರಂಗೇಗೌಡರಂತಹ ದೊಡ್ಡ ಅಂತಃಕರಣದ ಶಿಕ್ಷಕರು ಕಾರಣ. ಇವತ್ತು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಸಾಮಾಜಿಕ ಹೋರಾಟಗಳು ಕಣಿಯನ್ ಜನಾಂಗದ ಶೋಷಣೆಯ ವಿಮೋಚನೆಗೆ ತಗಡೂರು ರಾಮಚಂದ್ರರಾಯರು ನಡೆಸಿದ ಹೋರಾಟದ ಮುಂದುವರೆದ ಭಾಗದಂತೆಯೇ ಕಾಣುತ್ತಿವೆ.

ನಮ್ಮ ನೆಲದ ಕಾನೂನುಗಳು ಅತ್ಯಂತ ಜನಪರವಾಗಿ, ಮಾನವೀಯವಾಗಿ ಮತ್ತು ಕ್ರಾಂತಿಕಾರಕವಾಗಿ ಇವೆ. ಇಂತಹ ಕಾನೂನುಗಳನ್ನು ಅನೇಕ ಸಂದರ್ಭದಲ್ಲಿ ಈ ಸಮಾಜ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಾಗ ಸಂಘರ್ಷಗಳು ಹುಟ್ಟಿಕೊಂಡಿವೆ. ಇನ್ನು ನೂರು ವರ್ಷಗಳ ನಂತರ ಬರಬೇಕಾದ ಕಾನೂನು ಈಗಲೇ ಬಂದಿದೆ ಎನ್ನುವವರನ್ನು ನಾವು ಕಾಣುತ್ತಿದ್ದೇವೆ. ಈಗ ನಂಬಿಕೆಗಳೂ ಕಾನೂನುಗಳಾಗುತ್ತಿವೆ. ಸಾಮಾಜಿಕ ಸಂಘರ್ಷ ಉಂಟಾದಾಗ ನಂಬಿಕೆಯೇ ಗೆಲ್ಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದುರಂತವೆಂದರೆ  ನಮ್ಮ ಸಾಮಾಜಿಕ ವ್ಯವಸ್ಥೆ ಶೋಷಣೆಯ ಪರವಾದ ಜನವಿರೋಧಿ ನಂಬಿಕೆಯನ್ನು ಬಲಪಡಿಸುತ್ತ ಉದಾರವಾದಿ ಚಿಂತನೆಯ ಬೆಳವಣಿಗೆಗೆ ಪೆಟ್ಟು ನೀಡುತ್ತಿದೆ. ನಂಬಿಕೆ ಮತ್ತು ಕಾನೂನುಗಳ ನಡುವಿನ ಸಂಘರ್ಷದಲ್ಲಿ ನಂಬಿಕೆಗೆ ಜಯ ಸಿಗುತ್ತಿರುವುದು, ಅದರಲ್ಲೂ ಜನವಿರೋಧಿ ಸಾಂಪ್ರದಾಯಿಕ ನಂಬಿಕೆಗಳಿಗೆ ಜಯ ಸಿಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಕಾನೂನುಗಳು ಹೇಗೆ ರಾಷ್ಟ್ರದ ಹಿತಕ್ಕೆ ಪೂರಕವಾಗಿವೆ ಹಾಗೂ ಕಾನೂನಿನ ಹಿಂದಿನ ಸದುದ್ದೇಶ ಏನೆಂಬುದನ್ನು ನಾವು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.