ಇಲ್ಲಿ ನಂಬಿಕೆಗಳೇ ಕಾನೂನು.

-ಡಾ. ಸಿದ್ದಲಿಂಗಯ್ಯ.

ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು ಮೇಲ್ವರ್ಗದವರ ಎದುರು ಹೆಚ್ಚೆಂದರೆ ಒಂದು ಅಡಿ ಸಮೀಪ ಬಂದಿರಬೇಕು, ಅಷ್ಟೇ. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ದೈಹಿಕ ಅಂತರ ಕಡಿಮೆಯಾಗಿ ಮಾನಸಿಕ ಅಂತರ ಹೆಚ್ಚಾಗಿದೆ. ನಮ್ಮ ಪುರಾತನ ಸಾಮಾಜಿಕ ವ್ಯವಸ್ಥೆ ನ್ಯಾಯ ತೀರ್ಮಾನಗಳನ್ನು ಮಾಡುವಾಗ ಯಾರನ್ನು ದೂರ ಇಟ್ಟಿತ್ತೋ, ಈಗ ಅದೇ ವರ್ಗದ ಜನರು ದೇಶದ  ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತದ್ದು ಚರಿತ್ರೆಯ ಸೋಜಿಗ. ಈ ನೆಲದ  ಪೂರ್ವಿಕರು ಸಂಬಂಧದಿಂದ ಸಮಾಜದ ಕಟ್ಟಕಡೆಯ ಮನುಷ್ಯರಾಗಿ ನಿಲ್ಲಬೇಕಾಗಿತ್ತು. ಹಾಗೆ ದೂರ ನಿಂತ ವ್ಯಕ್ತಿಯೇ ಭಾರತದ ಮೊದಲ ಪ್ರಜೆಯಾಗಿದ್ದು ಕೂಡ ಚರಿತ್ರೆಯ ಸೋಜಿಗ.

1856ರ ಜೂನ್ ತಿಂಗಳಿನಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಧಾರವಾಡದ ಒಬ್ಬ ದಲಿತ ವಿದ್ಯಾರ್ಥಿ ಸರ್ಕಾರಿ ಶಾಲೆಯೊಂದರಲ್ಲಿ ಸೀಟು ಬೇಕೆಂದು ಅರ್ಜಿ ಸಲ್ಲಿಸಿದ. ಇದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಸಮಾಜ ನಮ್ಮನ್ನು ಗುರುತಿಸಬೇಕು, ಗೌರವಿಸಬೇಕು, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಂತರಂಗದ ಹಂಬಲಕ್ಕೆ ಈ ಅರ್ಜಿ ಸಾಕ್ಷಿಯಾಯಿತು. ಇದಾದ 80 ವರ್ಷಗಳ ನಂತರ 1936 ರ ಅಕ್ಟೋಬರ್‌‌‌‌‌‌‌ನಲ್ಲಿ, ಮೈಸೂರು ದಾರ್ಬಾರ್‌‌‌‌‌‌‌ನಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಲಾಯಿತು. ಮೈಸೂರು ಅರಮನೆ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಿದ್ದನ್ನು ಕಂಡು ಬ್ರಿಟಾನಿಯಾ ವಿಶ್ವಕೋಶ ಇದೊಂದು ಕ್ರಾಂತಿಕಾರಕ ಕ್ರಮ ಎಂದು ಶ್ಲಾಘಿಸಿ ಬರೆದಿತ್ತು.

ಊರಿನ ಅಂಚಿನಲ್ಲಿದ್ದ ಶೋಷಿತ ವರ್ಗದವರು ಅನೇಕ ಸಂದರ್ಭಗಳಲ್ಲಿ ಊರಿನ ನಡುವೆ ಬಂದಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯ ಉದಾರವಾದಿ ಧೋರಣೆ. ಬುದ್ಧ, ಬಸವಣ್ಣ, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಕಾನಿಸ್, ಕುದ್ಮುಲ್ ರಂಗರಾಯರಂತಹ ವ್ಯಕ್ತಿಗಳಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಹೋರಾಟಗಳು ಕೂಡ ದಲಿತರ ವಿಮೋಚನೆಗೆ ಕಾರಣವಾಗಿವೆ. ಅಸ್ಪೃಷ್ಯತೆ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಪಾಸಾದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರ್ತೃಗಳಾಗಿ ಅಲ್ಲಿ ಇದ್ದರೂ ಕೂಡ, ನೆರದಿದ್ದ ಜನ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂಘರ್ಷ, ಗಾಂಧೀಜಿಯವರ ದಲಿತಪರ ಧೋರಣೆ ಇಂಥದ್ದೊಂದು ಕಾಯ್ದೆ ಜಾರಿಯಾಗಲು ಸಾಧ್ಯವಾಗಿಸಿತೆಂಬುದನ್ನು ನಾವು ಗಮನಿಸಬೇಕು.

ನಾಲ್ಕೈದು ವರ್ಷಗಳ ಹಿಂದೆ ಚಿತ್ರದುರ್ಗದ ಗ್ರಾಮವೊಂದರ ಊರ ಹಬ್ಬದ ರಥೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾತುರ್ಯದಿಂದ ರಥದ ಮೇಲಿನಿಂದ ಕೆಲ ಜನರು ಕೆಳಗೆ ಬಿದ್ದರು. ಅವರನ್ನು ತಕ್ಷಣವೇ ಕೆಳಗಿದ್ದ ಜನ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದರು. ಕೆಳಗೆ ಬಿದ್ದ ತಮ್ಮನ್ನು ಮುಟ್ಟಿ ಆಸ್ಪತ್ರೆಗೆ ಸೇರಿಸಿದ್ದು ದಲಿತರು ಎಂದು ತಿಳಿದ ಗಾಯಗೊಂಡ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಲು ಮುಂದಾದರು. ಹಾಗೆ ದಲಿತರನ್ನು ಮುಟ್ಟಿಸಿಕೊಳ್ಳುವುದಕ್ಕಿಂತ ಪರಲೋಕವೇ ವಾಸಿ ಎಂದು ಅವರು ಏಕೆ ಭಾವಿಸಿಕೊಂಡರೋ?. ಇದು ನನ್ನನ್ನು ಬಹುಕಾಲ ಕಾಡಿತು. ಇಂತಹ ಮೇಲ್ವರ್ಗದ ಜನರಿಗೆ ತಗುಲಿರುವ ಮೌಢ್ಯದಿಂದ ಹೊರತರಲು ಮಾನವೀಯ ಶಿಕ್ಷಣದ ಹೊರತು ಬೇರಾವ ಶಿಕ್ಷಣದಿಂದಲೂ ಸಾಧ್ಯವಿಲ್ಲವೆನಿಸಿತು.

26.06.2004 ರಂದು ಪಿ.ಟಿ.ಐ. ಒಂದು ಘಟನೆಯನ್ನು ವರದಿ ಮಾಡಿತು. ತಮಿಳುನಾಡಿನ ಕುಂಭಕೋಣಂನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದಲಿತರು ಗಂಡುನಾಯಿಗಳನ್ನು ಸಾಕಬಾರದು ಎಂಬ ನಿಯಮವನ್ನು ಮೇಲ್ಜಾತಿಯ ಜನ ಮಾಡಿದರಂತೆ. ದಲಿತರ ಗಂಡುನಾಯಿ ಆಕಸ್ಮಾತ್ ಮೇಲ್ವರ್ಗದವರ ಹೆಣ್ಣು ನಾಯಿಯ ಸಂಪರ್ಕಕ್ಕೆ ಬಂದು ವರ್ಣಸಂಕರವಾಗಿ ಏನಾದರೂ ಅಪಾಯವಾಗಬಹುದು ಎಂದು ಆ ನಿಯಮ ಮಾಡಿದರಂತೆ. ಇದರ ಫಲವಾಗಿ ದಲಿತರು ಗಂಡುನಾಯಿ ಸಾಕಬಾರದು ಎಂಬ ನಿಯಮ ಅಲ್ಲಿ ಜಾರಿಗೆ ಬಂತು. ಈ ಬಗೆಯ ಮೌಢ್ಯದ ಪರಮಾವಧಿಯನ್ನು ಎದುರಿಸುವುದಾದರೂ ಹೇಗೆ? ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ತರಹದ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನೆ ಮಾಡಿದರೆ ಸಂಘರ್ಷಕ್ಕೆ ದಾರಿಯಾಗುತ್ತದೆ, ಸಾವುನೋವುಗಳಿಗೂ ಕಾರಣವಾಗುತ್ತದೆ.

ಮತ್ತೊಂದು ಘಟನೆ ಕುರಿತು ಹೇಳುವೆ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಾಳು ಎನ್ನುವ ಗ್ರಾಮದ 30 ಜನ ದಲಿತರನ್ನು ಒಂದು ತಿಂಗಳ ಮಟ್ಟಿಗೆ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆ ಮೂವತ್ತು ಮಂದಿಯಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ದಲಿತರನ್ನು ಜೈಲಿನಲ್ಲಿ ಇಟ್ಟಿರುವುದರ ಕುರಿತು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: ‘ಈ ಗ್ರಾಮದ ದಲಿತರ ಮೇಲೆ ಇಲ್ಲಿನ ಬಲಾಢ್ಯರಿಂದ ಹಲ್ಲೆಯಾಗುವ ಸಂಭವವಿದೆ. ಇವರಿಗೆ ರಕ್ಷಣೆ ಕೊಡಬೇಕಾದರೆ ಸೆಂಟ್ರಲ್ ಜೈಲೇ ಸೂಕ್ತವಾದ ಸ್ಥಳ, ಹೀಗಾಗಿ ಅವರನ್ನೆಲ್ಲಾ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದೇವೆ.’ ಆ ಅಧಿಕಾರಿಗೆ ಏಕೆ ಈ ಭಾವನೆ ಬಂತೋ ಗೊತ್ತಿಲ್ಲ. ಬಹುಶಃ  ಅಧಿಕಾರಿಯಲ್ಲಿದ್ದ ಅತ್ಯುತ್ಸಾಹ, ಜೊತೆಗೆ ದಲಿತರನ್ನು ಸವರ್ಣೇಯರ ಹಲ್ಲೆಗಳಿಂದ ರಕ್ಷಿಸಲು ಬೇರಾವ ದಾರಿಗಳಿಲ್ಲವೆಂಬ ನಂಬಿಕೆ ಸೆಂಟ್ರಲ್ ಜೈಲೇ ವಾಸಿಯೆಂದು ಆಯ್ಕೆ ಮಾಡಿಕೊಂಡಿರಲು ಕಾರಣವಾಗಿರಬಹುದೇನೋ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ. ಕೊರಗ ಜನಾಂಗದವರು ಮೇಲ್ವರ್ಗದ ರೋಗಪೀಡಿತ ವ್ಯಕ್ತಿಗಳ  ಉಗುರು ಮತ್ತು ಕೂದಲುಗಳನ್ನು ಅನ್ನದಲ್ಲಿ ಕಲಸಿ ತಿಂದರೆ ಅವರ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಈ ಪದ್ಧತಿಯ ಹಿಂದಿದೆ. ಜಗತ್ತಿನಲ್ಲಿ ಇದಕ್ಕಿಂತಲೂ ಅಮಾನವೀಯವಾದ ಪದ್ಧತಿ ಇನ್ನೊಂದು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಜೀವದ ಹಂಗುತೊರೆದು ಅಪಾಯಕಾರಿ ಸಿಡಿಮದ್ದನ್ನು ಸಿಡಿಸುವುದು ಈ ಜನಾಂಗದವರ ಕೆಲಸವೇ. ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದಾಗ ಈ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟೆ. ಸರ್ಕಾರಕ್ಕೂ ಅಜಲು ಪದ್ಧತಿಯ ಕ್ರೌರ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ರೂಪದಲ್ಲಿ ಉತ್ತರ ಕೊಟ್ಟರು: ‘ಕೊರಗ ಜನಾಂಗದವರಿಗೆ ಈ ಪದ್ಧತಿ ಇಷ್ಟವಿಲ್ಲದಿದ್ದರೆ ನಿಲ್ಲಿಸಬಹುದು.’ ಸರ್ಕಾರ ನೀಡಿದ ಉತ್ತರ ಹೇಗಿದೆಯೆಂದರೆ ಪ್ರಾಣ ರಕ್ಷಣೆಯನ್ನು ಕೇಳಿದ ಒಬ್ಬನಿಗೆ  ‘ನಿನಗೆ ಸಾಯಲು ಇಷ್ಟವಿಲ್ಲದೇ ಇದ್ದರೆ ರಕ್ಷಣೆಯನ್ನು ಕೊಡುತ್ತೇವೆ’ ಎಂದು ಹೇಳಿದಂತಾಯಿತು. ಆದರೆ ಜನಪರ ಚಳವಳಿಗಳ ಹೋರಾಟದಿಂದ ಕೆಲದಿನಗಳಲ್ಲಿಯೇ ಸರ್ಕಾರ ಅಜಲು ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು.

ಅಮೆರಿಕಾದ ಕಪ್ಪುಜನ ಅನುಭವಿಸಿರುವ ಶೋಷಣೆಗೆ ಹೋಲಿಸಿದರೆ, ಭಾರತದಲ್ಲಿ ಅಸ್ಪೃಶ್ಯರ ಮೇಲೆ ಎಸಗಿರುವ ಶೋಷಣೆ ಹೆಚ್ಚು ಭೀಕರ ಅನ್ನಿಸುತ್ತದೆ. ಕಪ್ಪು ಜನರನ್ನು ತಮ್ಮ ಅಡಿಗೆಯವರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಅಡಿಗೆ ಮನೆಗಳಿಗೆ ಬಿಟ್ಟುಕೊಂಡ ಅಮೆರಿಕಾದ ಸವರ್ಣೇಯರು ಅಷ್ಟಿಷ್ಟಾದರೂ ಮಾನವೀಯತೆಯನ್ನು ಅಲ್ಲಿನ ಶೋಷಿತರ ಮೇಲೆ ತೋರಿದರು. ಇಲ್ಲಿ ಅಸ್ಪೃಶ್ಯರನ್ನು ಮನೆ, ಮನಸ್ಸು ಎರಡರಿಂದಲೂ ದೂರವಿಡಲಾಗುತ್ತಿದೆ. ಹಳ್ಳಿಯ ಹೋಟೆಲ್‍ಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶ ಕನಸಿನಂತೆ ಕಾಣುತ್ತಿದೆ. ಜನಿವಾರ, ಶಿವದಾರಗಳೇ ಈಗ  ದೇವಸ್ಥಾನ ಪ್ರವೇಶದ ಮಾನದಂಡಗಳು. ಬಹಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಸಿದ್ದಪ್ಪ ಎನ್ನುವ ದಲಿತ ವ್ಯಕ್ತಿಯೊಬ್ಬರು ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆಂದು ಹೋದರು. ಆ ದೇವಸ್ಥಾನದಲ್ಲಿ ಅವರಿಗೆ ಪ್ರವೇಶವನ್ನು ನೀಡಲಿಲ್ಲ. ಅವರು ದೇವಸ್ಥಾನದ ಹೊರಗಡೆ ನಿಂತು ಹೇಳಿದರು: “ನನಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿಲ್ಲ, ನಂಜುಂಡೇಶ್ವರನಿಗೂ ನನ್ನ ದರ್ಶನ ಭಾಗ್ಯವಿಲ್ಲ.”  ಆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಯಾವ ಎತ್ತರದಲ್ಲಿ ಕಂಡುಕೊಂಡರು ಎಂಬುದು ಇಲ್ಲಿ ಮುಖ್ಯ. ಈ ತರಹ ಆತ್ಮ ಗೌರವದ ಪರಿಜ್ಞಾನ ದಲಿತರಲ್ಲಿ ಮೂಡಬೇಕಾಗಿದೆ.

ನಾನು ಬಾಲ್ಯದಲ್ಲಿರಬೇಕಾದರೆ ನನ್ನ ತಂದೆ ತಾಯಿ ಬೆಂಗಳೂರಿನ ನಗರ ಭಾಗದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶಾಲೆ ಮುಗಿಸಿಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ತಾಯಿ ಹಿಂಬಾಗಿಲ ಮೂಲಕ ಅಲ್ಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು. ಮನೆಯ ಹಿಂದೆ ಹಿಂಬಾಗಿಲ ಮೂಲೆಯೊಂದರಲ್ಲಿ ನಾವೆಲ್ಲ ಕೂತು ಊಟ ಮಾಡುತ್ತಿದ್ದಾಗ ಆ ಮನೆಯ ಮಾಲೀಕರು ನಮ್ಮತ್ತ ಬಂದರು. ಅವರು ನಮ್ಮತ್ತ ಬರುವುದನ್ನು ಕಂಡು ನಮ್ಮ ತಾಯಿ ಸ್ವಲ್ಪ ಆತಂಕಗೊಂಡರು, ನಾನು ಕೂಡ ಗೊಂದಲಗೊಂಡೆ. ಅವರು ಬಂದವರೇ ‘ನಿಮ್ಮನ್ನು ಒಳಮನೆಗೆ ಕರೆದು ಊಟ ಮಾಡಿಸಬಹುದಿತ್ತು, ಆದರೆ ಈ ಸಂಪ್ರದಾಯ, ಜಾತಿ ಪದ್ಧತಿ ನನ್ನ ಕೈಗಳನ್ನು ಕಟ್ಟಿಹಾಕಿದೆ. ನಿಮ್ಮನ್ನು ಇಲ್ಲಿ ಕೂರಿಸಿ ಊಟ ಕೊಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ’ ಎಂದು ತುಂಬಾ ದುಃಖಪಟ್ಟರು. ಆ ಅಸಹಾಯಕತೆಯಲ್ಲೂ ಅವರು ನನಗೆ ಮಹಾಮಾನವರಂತೆ ಕಂಡರು. ಆ ವ್ಯಕ್ತಿಯ ಮೇಲೆ ಅಪಾರ ಗೌರವ ಮೂಡಿ ನನಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗಿದ್ದವು. ಒಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ಅವರ ಬಂಧುಗಳ ಮನೆಗೆ ಊಟಕ್ಕೆಂದು ನನ್ನನ್ನು ಕರೆದರು. ನಾನು ಜಾತಿಯಲ್ಲಿ ದಲಿತ ಎಂದು ಅಗ್ರಹಾರ ಅವರ ಬಂಧುಗಳಿಗೆ ಮೊದಲೇ ಹೇಳಿ ನಾವಿಬ್ಬರು ಸಂಜೆ ಊಟಕ್ಕೆ ಬರುತ್ತಿದ್ದೇವೆ ಎಂದು ಹೇಳಿದರಂತೆ. ಅವರು ಬಂಧುಗಳು ನೀವೊಬ್ಬರೆ ಬನ್ನಿ, ನಿಮ್ಮ ಸ್ನೇಹಿತರು ಬರುವುದು ಬೇಡ ಎಂದರಂತೆ. ಅಗ್ರಹಾರ ಅವತ್ತಷ್ಟೆ ಅಲ್ಲ ಮತ್ತೆಂದೂ ಅವರ ಬಂಧುಗಳ ಮನೆಗೆ ಕಾಲಿಡಲಿಲ್ಲ ಎಂಬುದು ಗೊತ್ತಾಯಿತು.

ಈ ಮಣ್ಣಿನ ಅಸ್ಪೃಶ್ಯರನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡಿರುವುದನ್ನು ನಾವು ಇತಿಹಾಸದ ಪಾಠಗಳಲ್ಲಿ ಓದಿದ್ದೇವೆ. ಮನುಸ್ಮೃತಿಯ ಎಲ್ಲ ನಿಯಮಗಳನ್ನು ಜಾರಿಮಾಡಿದ್ದ ಕಾಲದಲ್ಲಿ ಈ ಅಸ್ಪೃಶ್ಯರ ಬದುಕು ಹೇಗಿತ್ತೆಂಬುದನ್ನು ಈ ಕಾಲದಲ್ಲಿ ನಿಂತು ಸುಲಭವಾಗಿ ಊಹಿಸಿಬಹುದು. ತಮ್ಮ ಮುಖ ನೋಡಿದರೆ ಅಶುಭವೆಂದು ತಿಳಿದಿದ್ದ ಸವರ್ಣೇಯರ ಬೀದಿಗಳಿಗೆ ದಲಿತರು ಕಾಲಿಡುವಾಗ ಸೊಂಟಕ್ಕೆ ಪರಕೆ ಕಟ್ಟಿಕೊಂಡು, ಎಂಜಲು ನೆಲಕ್ಕೆ ಬೀಳದಂತೆ ತಡೆಯಲು ಕತ್ತಿಗೆ ಮಡಕೆ ಕಟ್ಟಿಕೊಂಡು ಬರಬೇಕಾಗಿತ್ತು. ಸವರ್ಣೇಯರ ಎಲ್ಲ ಕ್ರೌರ್ಯಗಳಿಗೆ ಸಿಕ್ಕಿ ದಲಿತರು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು ಇಲ್ಲವೇ ಸಿಡಿದು ತಿರುಗಿ ಬೀಳಬಹುದಿತ್ತು. ಆದರೆ ಅವಮಾನದಲ್ಲಿ ಬೆಂದ ದಲಿತರು ಪ್ರತಿಪುರಾಣ, ಪ್ರತಿಸಂಸ್ಕೃತಿ ಕಟ್ಟುವ ಹೊಸ ಮಾರ್ಗಗಳನ್ನು ಆರಿಸಿಕೊಂಡರು. ಸವರ್ಣೇಯರ ಕ್ರೌರ್ಯಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಹೊಸ ಸಾಹಿತ್ಯ ಪರಂಪರೆಗಳನ್ನು ಸೃಷ್ಟಿಸಿದ ದಲಿತರ ಜಾನಪದ ಮಹಾಕಾವ್ಯಗಳನ್ನು ಇವತ್ತಿಗೂ ಮರಾಠಿಯಲ್ಲಿ ಹೇರಳವಾಗಿ ಕಾಣಬಹುದು. ಅವಮಾನವನ್ನು ಮೀರುವ ದಲಿತರ ಪ್ರಯತ್ನಗಳೆಲ್ಲ ಹೊಸ ಸಾಹಿತ್ಯ ಮಾರ್ಗ ಸೃಷ್ಟಿಸಲು ಕಾರಣವಾಗಿದೆ. ಆದರೂ ಅಮೆರಿಕಾ, ಆಫ್ರಿಕಾದಂತಹ ದೇಶಗಳಲ್ಲಿ ಘಟಿಸಿದ ಕಪ್ಪುಜನರ ದಂಗೆಯಂತೆ ದಲಿತರ ವಿಮೋಚನೆಗೆ ಯಾವ ದಂಗೆಯೂ ಇಲ್ಲಿ ಜರುಗಲಿಲ್ಲ. ಅವಮಾನ, ಶೋಷಣೆಯ ನೆರಳಿನಲ್ಲಿ ಬದುಕುವುದನ್ನು ರೂಢಿಮಾಡಿಕೊಂಡಿದ್ದ ನಮ್ಮ ಪೂರ್ವಿಕರು ಪ್ರತಿಸಂಸ್ಕೃತಿ  ಕಟ್ಟುವುದರಲ್ಲಿ ತಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಂಡರು. ದಲಿತರ ದೈವವನ್ನು ಅವಮಾನಿಸಿದರೆ ದಲಿತರನ್ನು ಸುಲಭವಾಗಿ ಹಣಿಯಬಹುದೆಂಬುದನ್ನು ಸವರ್ಣೇಯರು ಕಂಡುಕೊಂಡಿದ್ದರು. ಹೀಗಾಗಿ ದಲಿತರ ದೈವಗಳು ವರ-ಶಾಪಕೊಡದೆ, ಮೇಲ್ವರ್ಗದ ದೇವತೆಗಳ ಕಾವಲಿಗೆ ನಿಂತಂತೆ ಕಾಣುತ್ತವೆ. ವರ್ತಮಾನದಲ್ಲೂ ಕೂಡ ದಲಿತರ ದೈವಗಳು ತೀರಾ ದುರ್ಬಲವಾಗಿ ಕಾಣುತ್ತವೆ.

ಸಮಾಜದ ವ್ಯಂಗ್ಯ ಹೇಗಿದೆ ನೋಡಿ: ಯಾವ ಮೇಲ್ವರ್ಗದಿಂದ ದಲಿತರ ಮೇಲೆ ಅಮಾನವೀಯ ಶೋಷಣೆ, ಕ್ರೌರ್ಯಗಳು ನಡೆದವೋ ಅದೇ ಮೇಲ್ವರ್ಗದಿಂದ ದಲಿತರ ಉದ್ಧಾರಕ್ಕೆಂದು ದೊಡ್ಡ ನಾಯಕರು ಬಂದರು. ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾಯರು, ಕಾಕಾ ಕಾರ್ಕಾನಿಸ್, ತಗಡೂರು ರಾಮಚಂದ್ರರಾಯರು ಇವರೆಲ್ಲ ದಲಿತರ ಆತ್ಮಗೌರವಕ್ಕಾಗಿ ಬೀದಿಗೆ ಬಂದು ತಮ್ಮ ಸಮುದಾಯಗಳಿಂದಲೇ ಬಹಿಷ್ಕಾರಕ್ಕೆ ಒಳಗಾದರು. ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆಂದೇ ‘ಪಂಚಮ ಬೊರ್ಡಿಂಗ್ ಸ್ಕೂಲ್’ ತೆರೆದಾಗ, ದಲಿತರಿಗೆ ಪಾಠಮಾಡಲು ಕರ್ನಾಟಕದಿಂದ ಒಬ್ಬೇ ಒಬ್ಬ ಶಿಕ್ಷಕ ಮುಂದೆ ಬರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಎದೆಗುಂದದೆ ಕೇರಳದಿಂದ ಶಿಕ್ಷಕರನ್ನು ಕರೆಸಿದರು. ತಮ್ಮ ಜನಾಂಗದಿಂದ ಎದುರಾದ ಎಲ್ಲ ವಿರೋಧವನ್ನು ಮೆಟ್ಟಿ ಮಳವಳ್ಳಿಯಿಂದ ತಲಕಾಡು ಚಿಕ್ಕರಂಗೇಗೌಡರು ದಲಿತರಿಗೆ ಪಾಠಮಾಡಲು ಮುಂದೆ ಬಂದರು. ಇವತ್ತಿಗೂ ಮಳವಳ್ಳಿ ತಾಲ್ಲೂಕಿನಲ್ಲಿ ಮನೆಗೊಬ್ಬೊಬ್ಬ ದಲಿತ ಸರ್ಕಾರಿ ನೌಕರ ಸಿಗಲು ತಲಕಾಡು ಚಿಕ್ಕರಂಗೇಗೌಡರಂತಹ ದೊಡ್ಡ ಅಂತಃಕರಣದ ಶಿಕ್ಷಕರು ಕಾರಣ. ಇವತ್ತು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಸಾಮಾಜಿಕ ಹೋರಾಟಗಳು ಕಣಿಯನ್ ಜನಾಂಗದ ಶೋಷಣೆಯ ವಿಮೋಚನೆಗೆ ತಗಡೂರು ರಾಮಚಂದ್ರರಾಯರು ನಡೆಸಿದ ಹೋರಾಟದ ಮುಂದುವರೆದ ಭಾಗದಂತೆಯೇ ಕಾಣುತ್ತಿವೆ.

ನಮ್ಮ ನೆಲದ ಕಾನೂನುಗಳು ಅತ್ಯಂತ ಜನಪರವಾಗಿ, ಮಾನವೀಯವಾಗಿ ಮತ್ತು ಕ್ರಾಂತಿಕಾರಕವಾಗಿ ಇವೆ. ಇಂತಹ ಕಾನೂನುಗಳನ್ನು ಅನೇಕ ಸಂದರ್ಭದಲ್ಲಿ ಈ ಸಮಾಜ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಾಗ ಸಂಘರ್ಷಗಳು ಹುಟ್ಟಿಕೊಂಡಿವೆ. ಇನ್ನು ನೂರು ವರ್ಷಗಳ ನಂತರ ಬರಬೇಕಾದ ಕಾನೂನು ಈಗಲೇ ಬಂದಿದೆ ಎನ್ನುವವರನ್ನು ನಾವು ಕಾಣುತ್ತಿದ್ದೇವೆ. ಈಗ ನಂಬಿಕೆಗಳೂ ಕಾನೂನುಗಳಾಗುತ್ತಿವೆ. ಸಾಮಾಜಿಕ ಸಂಘರ್ಷ ಉಂಟಾದಾಗ ನಂಬಿಕೆಯೇ ಗೆಲ್ಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದುರಂತವೆಂದರೆ  ನಮ್ಮ ಸಾಮಾಜಿಕ ವ್ಯವಸ್ಥೆ ಶೋಷಣೆಯ ಪರವಾದ ಜನವಿರೋಧಿ ನಂಬಿಕೆಯನ್ನು ಬಲಪಡಿಸುತ್ತ ಉದಾರವಾದಿ ಚಿಂತನೆಯ ಬೆಳವಣಿಗೆಗೆ ಪೆಟ್ಟು ನೀಡುತ್ತಿದೆ. ನಂಬಿಕೆ ಮತ್ತು ಕಾನೂನುಗಳ ನಡುವಿನ ಸಂಘರ್ಷದಲ್ಲಿ ನಂಬಿಕೆಗೆ ಜಯ ಸಿಗುತ್ತಿರುವುದು, ಅದರಲ್ಲೂ ಜನವಿರೋಧಿ ಸಾಂಪ್ರದಾಯಿಕ ನಂಬಿಕೆಗಳಿಗೆ ಜಯ ಸಿಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಕಾನೂನುಗಳು ಹೇಗೆ ರಾಷ್ಟ್ರದ ಹಿತಕ್ಕೆ ಪೂರಕವಾಗಿವೆ ಹಾಗೂ ಕಾನೂನಿನ ಹಿಂದಿನ ಸದುದ್ದೇಶ ಏನೆಂಬುದನ್ನು ನಾವು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.

Leave a Reply

Your email address will not be published.