Author Archives: editor

ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಬಿ.ಶ್ರೀಪಾದ ಭಟ್

ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ

ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ

ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು

ಸಮುದ್ರವನ್ನು ಸೀಳಿಕೊಂಡ ರಸ್ತೆಗಳು

ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ

ಮತ್ತೇನಿಲ್ಲ

ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ

ನಡೆದರಷ್ಟೇ ಮೂಡುವುದು ಹೊಸ ದಾರಿ

ನಮ್ಮ ನಡೆಯೇ ರಸ್ತೆ

  • ಅಂಟೋನಿಯೋ ಮಕಾಡೋ

ನಮ್ಮ ವರ್ತಮಾನದ ಪರಿಸ್ಥಿತಿ ಎಷ್ಟು ಕ್ರೌರ್ಯದಿಂದ ತುಂಬಿಕೊಂಡಿದೆಯೆಂದರೆ ಪ್ರಸ್ತುತ ಸಂದರ್ಭದಲ್ಲಿ ಇಲ್ಲಿನ ಸಮಾಜ, ಸಂಸ್ಕೃತಿ ಕಂಡರಿಯದಷ್ಟು ಸಂಕೀರ್ಣವಾಗಿದೆ, ಜಟಿಲವಾಗಿದೆ, ವಿಕೃತಗೊಂಡಿದೆ. ಮುಂದಿನ ಹೆಜ್ಜೆ ಇಲ್ಲವೇನೋ ಎನ್ನುವ ಆತಂಕ ಕಾಡುತ್ತಿದೆ. ಇಲ್ಲಿ ಪರಸ್ಪರ ಮಾತುಕತೆ, ಸೌಹಾರ್ದ ಬದುಕು ಸಾಧ್ಯವಿಲ್ಲ ಎನ್ನುವ ವಿಷಮ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಸಂಘ ಪರಿವಾರ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆರೆಸ್ಸಸ್ನ ಹಿಡನ್ ಅಜೆಂಡಾಗಳೆಲ್ಲಾ ಇಂದು ಓಪನ್ ಅಜೆಂಡಗಳಾಗಿ ಕ್ರಮೇಣ ಆಡಳಿತದ ಎಲ್ಲಾ ಹಂತಗಳಲ್ಲಿ samavesha-4ವ್ಯಾಪಿಸಿಕೊಳ್ಳುತ್ತಿದೆ. ಸಂಘ ಪರಿವಾರದ ದ್ವೇಷದ ಮತೀಯವಾದದ ರಾಜಕಾರಣಕ್ಕೆ ಮೊದಲ ಬಲಿ ಮುಸ್ಲಿಂ ಸಮುದಾಯ. ಸಂಘಿಗಳ ಬಹುಸಂಖ್ಯಾತವಾದದ ಫ್ಯಾಸಿಸಂನ ಫಲವಾಗಿ ಇಂದು ದಲಿತರು, ಆದಿವಾಸಿಗಳು ಮತ್ತು ಮುಸ್ಲಿಂ ಸಮುದಾಯದ ಮೇಲೆ ಸದಾ ಹಿಂಸಾತ್ಮಕ ಹಲ್ಲೆ, ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಪುರಾವೆಯಾಗಿ ನೂರಾರು ಉದಾಹರಣೆಗಳನ್ನು ಕೊಡಬಹುದು.

 
ಪ್ರತಿಯೊಂದು ಧರ್ಮದ ಜನರು ಬಹುಬೇಗ ಪರಸ್ಪರ ವಿಶ್ವಾಸ, ಸಹನೆ, ಸಂಯಮ, ವಿವೇಚನೆಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಿಂದುತ್ವದ ಅಸಹನೆಗೆ, ಹಿಂಸೆಗೆ, ಪಶು ಪ್ರವೃತ್ತಿಗೆ ಮೊದಲ ಬಲಿಯಾಗುತ್ತಿರುವುದು ದಲಿತ-ಮುಸ್ಲಿಂ ಸಮುದಾಯ. ಆದರೆ ಸಂವಿಧಾನ ಸಮರ್ಪಣೆಯ ಸಂದರ್ಭದಲ್ಲಿಯೇ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ ಎಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ, ಅದು ಮೌಲ್ಯಯುತವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ತುಂಬಾ ವಾಸ್ತವ. ಏಕೆಂದರೆ ದಲಿತರ, ತಳ ಸಮುದಾಯಗಳ ಸಹಕಾರವಿಲ್ಲದೆ ಇಂದು ಯಾವುದೇ ರಾಜಕೀಯ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ದಲಿತ ಸಮುದಾಯಕ್ಕೆ ಉಳಿದುಕೊಂಡಿರುವ ವೋಟಿನ ಮೌಲ್ಯವು ಅವರ ಪರವಾಗಿ ಕಟ್ಟ ಕಡೆಯ ಗುರಾಣಿಯಂತೆ ಬಳಕೆಯಾಗುತ್ತಿದೆ.

 

ಆದರೆ ಮುಸ್ಲಿಂ ಸಮುದಾಯಕ್ಕೆ ಈ ಅದೃಷ್ಟವಿಲ್ಲ. ಮುಸ್ಲಿಂರ ಮತಗಳ ಅವಶ್ಯಕತೆಯೇ ಇಲ್ಲದೆ ಬಿಜೆಪಿ ಸರ್ಕಾರವು 2014ರ ಕೇಂದ್ರ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿತು ಮತ್ತು ಮುಸ್ಲಿಂ ಮತಗಳ ಬೆಂಬಲವಿಲ್ಲದೆಯೇ 2017ರ ಉ.ಪ್ರ. ಚುನಾವಣೆಯಲ್ಲಿ ದೈತ್ಯ ಬಹುಮತ ಪಡೆಯಿತು. ಸಂಘ ಪರಿವಾರದ 72 ಸಂಸದರಲ್ಲಿ ಒಬ್ಬ ಮುಸ್ಲಿಂ ಸಂಸದನಿಲ್ಲ (ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೇ ಇಳಿಸಿರಲಿಲ್ಲ), ಉ.ಪ್ರ. ವಿಧಾನಸಭೆಯ 315 ಬಿಜೆಪಿ ಶಾಸಕರರಲ್ಲಿ ಒಬ್ಬ ಮುಸ್ಲಿಂ ಶಾಸಕನಿಲ್ಲ (ಒಬ್ಬ ಮುಸ್ಲಿಂ ಅಭ್ಯಥರ್ಿಗೂ ಟಿಕೆಟ್ ಕೊಟ್ಟಿರಲಿಲ್ಲ). ಇಂದು ಪ್ರಜಾಪ್ರಭುತ್ವದ ಜೀವಂತಿಕೆಯನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಚುನಾವಣ ಫಲಿತಾಂಶದ ಆಧಾರದಲ್ಲಿ ಆ ಮೂಲಕ ಸಂಸದರ, ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಬಹುಮತದ ಮೇಲೆ ನಿರ್ಧರಿಸಲಾಗುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ ನ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿಯೇ ಗೆಟ್ಟೋಗಳಲ್ಲಿ ನರಳಬೇಕಾದ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯವು ಆಗ ಕನಿಷ್ಠ ತನ್ನ ಆಸ್ತಿತ್ವವನ್ನು ಉಳಿಕೊಂಡಿತ್ತು. ಇಂದು ಸಂಘ ಪರಿವಾರದ ಹಿಂಸಾತ್ಮಕ ಹಿಂದುತ್ವದ ಹೆಸರಿನ ಆಕ್ರಮಣದಲ್ಲಿ ಆ ಓಲೈಕೆಯ ರಾಜಕಾರಣವೂ ಮುಗಿದ ಅಧ್ಯಾಯವಾಗಿದೆ ಮತ್ತು ಮುಸ್ಲಿಂರ ಆಸ್ತಿತ್ವವೇ ಇಂದು ಪ್ರಶ್ನಾರ್ಹವಾಗುತ್ತಿದೆ.

samavesha-1

2006ರ ಸಾಚಾರ್ ಕಮಿಟಿಯ ಅಧ್ಯಯನದ ಅನುಸಾರ 6-14 ವಯಸ್ಸಿನ ಶೇಕಡಾ 25% ಮುಸ್ಲಿಂ ಮಕ್ಕಳು ಶಾಲೆಗೆ ದಾಖಲು ಆಗುತ್ತಿಲ್ಲ ಅಥವಾ ಮಧ್ಯದಲ್ಲಿಯೇ ಶಾಲೆ ತೊರೆಯುತ್ತಿದ್ದಾರೆ. ಪದವಿ ಕಾಲೇಜುಗಳಲ್ಲಿ 30 ವಿದ್ಯಾರ್ಥಿಗಳ ಪೈಕಿ ಒಬ್ಬ ಮಾತ್ರ ಮುಸ್ಲಿಂ ಇರುತ್ತಾನೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 50 ವಿದ್ಯಾಥರ್ಿಗಳ ಪೈಕಿ ಒಬ್ಬ ಮುಸ್ಲಿಂ ಇರುತ್ತಾನೆ. ಇತರೇ ಅಲ್ಪಸಂಖ್ಯಾತರಿಗೆ ನೀಡುವ ಸಾಲದಲಿ ಕಾಲು ಭಾಗಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊರಕುತ್ತಿದೆ. ಐಎಸ್ ಶ್ರೇಣಿಯಲ್ಲಿ ಶೇಕಡಾ 3, ಐಪಿಎಸ್ ಶ್ರೇಣಿಯಲ್ಲಿ ಶೇಕಡಾ 4, ಐಎಫ್ಎಸ್ ಶ್ರೇಣಿಯಲ್ಲಿ ಶೇಕಡಾ 1.8 ಪ್ರಮಾಣದಲ್ಲಿ ಮುಸ್ಲಿಂರಿದ್ದಾರೆ. ಭಾರತೀಯ ರೇಲ್ವೆಯಲ್ಲಿ 4.5, ಪೋಲೀಸ ಕಾನಸ್ಟೇಬಲ್ಗಳಲ್ಲಿ ಶೇಕಡಾ 6, ಆರೋಗ್ಯ ವಲಯದಲ್ಲಿ ಶೇಕಡಾ 4 ಪ್ರಮಾಣದಲ್ಲಿದ್ದಾರೆ. ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಮುಗಿಯದ ವ್ಯಥೆ.

 
ಒಂದು ದೇಶವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು ಎಂದು ವಿವರಿಸಿದ ಗಾಂಧಿಯವರ ಆಶಯವನ್ನು ಸಂಪೂರ್ಣ ಧ್ವಂಸಗೊಳಿಸಿರುವ ಸಂಘ ಪರಿವಾರ ಮತ್ತು ಇಲ್ಲಿನ ಹಿಂದುತ್ವದ ರಾಜಕಾರಣದ ಫಲವಾಗಿ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯವು ಇಂದು ಅನುಮಾನಿತರು ಮತ್ತು ಅವಮಾನಿತರಾಗಿ ಬದುಕುತ್ತಿದ್ದಾರೆ. ಈ ಆರೆಸ್ಸಸ್ನ ಸಾಂಸ್ಕೃತಿಕ ಹೆಜಮಿನಿಯ ಹಿಂಸಾತ್ಮಕ ರಾಜಕಾರಣದಲ್ಲಿ ಮತ್ತು ಬಹುಸಂಖ್ಯಾತವಾದದ ಬೆಂಬಲಿತ ನಾಗರಿಕರ ಅಸಹನೆ ಮತ್ತು ಕ್ರೌರ್ಯದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಘನತೆಯನ್ನೆ ಕಳೆದುಕೊಂಡು ಅನುಮಾನಿತರು ಮತ್ತು ಅವಮಾನಿತರಾಗಿ ಜೀವಿಸಬೇಕಾದಂತಹ ದುರಂತ ಪರಿಸ್ಥಿತಿಯಲ್ಲಿ ಇಂದು ಮುಸ್ಲಿಂ ಸಮುದಾಯ ಬದುಕುತ್ತಿದೆ.samavesha-2

 
ಈ ಪ್ರಭುತ್ವ-ವ್ಯವಸ್ಥೆಯ ಹಿಂಸಾತ್ಮಕ ದೌರ್ಜನ್ಯ ಮತ್ತು ಕ್ರೌರ್ಯಕ್ಕೆ ನಾವು ಹೇಗೆ ಪ್ರತಿಕ್ರಯಿಸಬೇಕು? ಹೇಗೆ ಮುಖಾಮುಖಿಯಾಗಬೇಕು? ಮೌನವಾಗಿ ಈ ವಿಷಬೆಂಕಿಯಲ್ಲಿ ಉರಿದು ಬೂದಿಯಾಗುವುದರ ಮೂಲಕವೇ? ಅಥವಾ ಕೇವಲ ಘೋಷಣೆ, ಆತ್ಮಸಾಕ್ಷಿಯಿಲ್ಲದ ಸೆಮಿನಾರಿನ ಬೌದ್ಧಿಕ ಕಸರತ್ತಿನ ಭಾಷಣಗಳ, ಸೈದ್ಧಾಂತಿಕ ತಿಕ್ಕಾಟಗಳ ಸ್ವರತಿಯಲ್ಲಿ ಕಳೆದುಹೋಗುವುದರ ಮೂಲಕವೇ? ಆದರೆ ಈ ಮಾದರಿಗಳು ನಮ್ಮನ್ನು ನಾವು ನಿಂತ ಸ್ಥಳದಲ್ಲಿಯೇ ಬಂದಿಸುತ್ತವೆ, ಸಿದ್ಧ ಮಾದರಿಗಳಿಗೆ ಸಾಂಸ್ಥೀಕರಣಗೊಳಿಸಿ ನಮ್ಮನ್ನು ಸುತ್ತಿದಲ್ಲೇ ಹೂತು ಹಾಕುತ್ತವೆ. ನಮ್ಮನ್ನು ಎಲ್ಲಿಯೂ ಮುಟ್ಟಿಸದ ಈ ಸವಕಲು ಮಾದರಿಗಳನ್ನು ಬಿಟ್ಟು ಇನ್ನೂ ಹಲವಾರು ದಾರಿಗಳಿರಬಹುದೇ ಎನ್ನುವ ಪ್ರಶ್ನೆ ಹಾಕಿಕೊಳ್ಳುತ್ತಾ ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಗಿದಾಗ ಕಡೆಗೂ ಸ್ವತಃ ಮುಸ್ಲಿಂ ಸಮುದಾಯವು ತನಗೆ ತಾನೇ ಈ ಕತ್ತಲ ದಾರಿಯಿಂದ ಬಿಡುಗಡೆ ಕಂಡುಕೊಳ್ಳಬೇಕು ಎನ್ನುವ ಅಸೀಮ ನಂಬಿಕೆ ಮಾತ್ರ ಇಂದು ಹುಲ್ಲುಕಡ್ಡಿಯ ಆಸರೆಯಾಗಿ ಉಳಿದುಕೊಂಡಿದ್ದು ವಿಪರ್ಯಾಸ. ಅಂತರಂಗದ ಮೂಲಭೂತವಾದ ಮತ್ತು ಬಹಿರಂಗ ಮತೀಯವಾದದ ಹಿಂಸೆಯಿಂದ ಮುಕ್ತಿ ಹೊಂದಲು ಒಂದು ಕ್ರಾಂತಿಯನ್ನು ನಿರೀಕ್ಷಿಸುವುದರ ಬದಲಾಗಿ, ನಾಯಕನ ಬರುವಿಕೆಗೆ ಕಾಯುವುದರ ಬದಲಾಗಿ ನಮಗೆ ನಾವೇ ಮೊದಲ ನಡಿಗೆಯನ್ನು ಆರಂಬಿಸಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ ಭಾರತದ ಮುಸ್ಲಿಂ ಸಮುದಾಯ.

 

samavesha-3
ಈ ತಾರ್ಕಿಕ ಜಿಜ್ಞಾಸೆಯ ಫಲವೇನೋ ಎಂಬಂತೆ ಸಿಪಿ(ಐ)ಎಂ ಪಕ್ಷದ ಅಂಗಪಕ್ಷವಾದ ಡಿವೈಎಸ್ಎಫ್(ಡಿಫಿ) ಸಂಘಟನೆ ತನ್ನ ಅನೇಕ ದ್ವಂದಗಳ, ತಾಕಲಾಟಗಳ ಮಂಥನದ ನಂತರ, ತನ್ನ ಮಡಿವಂತಿಕೆಯನ್ನು ಕಳಚಿಕೊಳ್ಳುತ್ತಿದೆಯನೋ ಎಂದು ಭರವಸೆ ಮೂಡಿಸುವಂತೆ ಮುಸ್ಲಿಂ ಯುವ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಿತು. ಕಮ್ಯುನಿಷ್ಟ್ ಪಕ್ಷವು ಧರ್ಮದ ಹೆಸರಿನಲ್ಲಿ ಸಮಾವೇಶ ನಡೆಸುವುದೇ ಒಂದು ಹಾಸ್ಯಾಸ್ಪದವಲ್ಲವೇ ಎನ್ನುವ ಪ್ರಶ್ನೆಗಳ ಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಬಂದು ತೀಕ್ಷಣವಾಗಿ ಎದೆಗೆ ಬೀಳತೊಡಗಿದಾಗ ಡಿಫಿ ಸಂಘಟನೆ ಮುಸ್ಲಿಂ ಯುವ ಸಮಾವೇಶ ವು ಧಾರ್ಮಿಕ ಸಮ್ಮೇಳನ ಅಲ್ಲ ಅದು ಅನುಮಾನಿತರ ಮತ್ತು ಅವಮಾನಿತರ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಒಂದು ವೇದಿಕೆ ಮಾತ್ರ ಎಂದು ಸ್ಪಷ್ಟೀಕರಣವನ್ನು ನೀಡಿತು.

 

ಇಂದು ಅತಂತ್ರರಾಗಿರುವ ಮುಸ್ಲಿಂ ಸಮುದಾಯ ಮುರುಟಿಹೋದ ತನ್ನ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ತಮಗೆ ತಾವೇ ನಡೆಸುತ್ತಿರುವ ಒಂದು ಹುಡುಕಾಟ ಮತ್ತು ಈ ಹುಡುಕಾಟಕ್ಕೆ ಒಂದು ತೋಳಿನ ಆಸರೆಯಾಗಿ ಈ ಮುಸ್ಲಿಂ ಯುವ ಸಮಾವೇಶ ಎಂದು ಡಿಫಿ ಸಂಘಟನೆ ವಿವರಿಸಿತು. ಆದರೆ ತಮ್ಮ ಆಸ್ತಿತ್ವಕ್ಕೆ ಸಂಚಕಾರ ಬಂದಂತಿದೆ ಎಂಬಂತೆ ವತರ್ಿಸಿದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಮ್ಯುನಿಷ್ಟ್ ಪಕ್ಷದ ಈ ಹೊಸದಾದ, ರಿಸ್ಕ್ ಎನ್ನಬಹುದಾದ ಆದರೆ ಅಷ್ಟೇ ಬಿಕ್ಕಟ್ಟಾದ ಪ್ರಯೋಗವನ್ನು ಹಿಗ್ಗಾಮುಗ್ಗ ಟೀಕಿಸಲಾರಂಬಿಸಿದ್ದು ಸಹಜವೇ ಆಗಿತ್ತು, ಏಕೆಂದರೆ ಧಾರ್ಮಿಕ ಮೂಲಭೂತವಾದಿಗಳಿಗೆ ತನ್ನ ಧರ್ಮದ ಪ್ರತಿಯೊಬ್ಬನೂ ತನ್ನ ಆಸ್ತಿ ಎನ್ನುವ ಯಜಮಾನಿಕೆ ಇರುತ್ತದೆ. ಇದನ್ನು ಕಳೆದುಕೊಳ್ಳಲು ಧಾರ್ಮಿಕ ಮೂಲಭೂತವಾದಿಗಳು ಬಯಸಲಾರರು. ಆದರೆ ಈ ಬಾರಿಯ ಯುವ ಮುಸ್ಲಿಂ ಸಮಾವೇಶದ ಕುರಿತಾದ ಇವರ ತಕರಾರು ಮತ್ತು ಟೀಕೆಗಳು ಸ್ವತಃ ದುರ್ಬಲಗೊಂಡಿದ್ದು ಮಾತ್ರ ವಿಶೇಷ.

 
ಆದರೆ ಈ ವೈರುಧ್ಯಗಳಿಗೆ ಸ್ವತಃ ಕಮ್ಯುನಿಷ್ಟ್ ಪಕ್ಷವೂ ಹೊಣೆ ಹೊರಬೇಕಾಗುತ್ತದೆ ಎನ್ನುವುದನ್ನು ಯಾವ ಪ್ರಜ್ಞಾವಂತನೂ ಅಲ್ಲಗೆಳೆಯಲಾರ. ದಶಕಗಳ ಕಾಲ ಜಾತಿ, ಧರ್ಮ ಆಧಾರಿತ ಚರ್ಚೆಯನ್ನು, ಸಂಘಟನೆಯನ್ನು ನಿರಂತರವಾಗಿ ಅಲ್ಲಗೆಳೆಯುತ್ತ, ತಿರಸ್ಕರಿಸುತ್ತ ಬಂದ ಕಮ್ಯನಿಷ್ಟ್ ಪಕ್ಷಗಳು ಜಾತಿ ಪದ್ಧತಿಯ ಸಂಕೀರ್ಣತೆಯನ್ನು ಕರಾರುವಕ್ಕಾಗಿ ಅರಿಯದಿರುವುದು ಅವರ ಸಂಘಟನೆಗೆ ದೊಡ್ಡ ಮಿತಿಯಾಗಿದ್ದು ಕಟು ವಾಸ್ತವ. ಇಂಡಿಯಾದ ಸಂದರ್ಭದಲ್ಲಿ ಅಸಮಾನತೆ ಎಂದರೆ ಅದು ಕೇವಲ ವರ್ಗ ಸಮಸ್ಯೆ ಮಾತ್ರವಲ್ಲ ಅದು ಜಾತಿ ಪದ್ಧತಿಯ ಕರಾಳ ಆಚರಣೆಯೂ ಸಹ ಎಂದು ಎಡ ಪಕ್ಷಗಳಿಗೆ ಆರಿವಾಗಲು 21ನೇ ಶತಮಾನದ ಅಂಬೇಡ್ಕರ್ವಾದದ ತೀಕ್ಷ್ಣ ವಿಮರ್ಶೆಗಳು ಕಾರಣವಾಗಬೇಕಾಯಿತು. ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯಕ್ಕೆ ಕಳೆದ ದಶಕಗಳಲ್ಲಿ ತಾನು ತೋರಿದ ನಿರ್ಲಕ್ಷ್ಯಕ್ಕೆ ಪ್ರಾಯಶ್ಚಿತವೇನೋ ಎಂಬಂತೆ ಒಂದು ಆತ್ಮಾವಲೋಕನದ ಉದಾರಹಣೆಯಂತಿತ್ತು ಈ ಡಿವೈಎಫ್ಐ ಸಂಘಟಿಸಿದ್ದ ಮುಸ್ಲಿಂ ಯುವ ಸಮಾವೇಶ.

 

pic-logo
ಕನವರಿಕೆ, ವ್ಯಸನಗಳನ್ನು ಹಿಂದಕ್ಕೆ ದೂಡಿ ಹೊಸ ದಾರಿಯ ಹುಡುಕಾಟಕ್ಕಾಗಿ ನಡೆಸಿದ ಈ ಆತ್ಮಾವಲೋಕನದ ಯುವ ಮುಸ್ಲಿಂ ಸಮಾವೇಶ ಎರಡು ದಿನಗಳ ಚರ್ಚೆ, ಸಂವಾದ, ಭಾಷಣಗಳ ಮೂಲಕ ಉತ್ತರ ಕಂಡುಕೊಂಡಿತೇ ಎನ್ನುವ ಪ್ರಶ್ನೆಗೆ ಪ್ರತ್ಯುತ್ತರವೂ ಸಹ ಕ್ಲೀಷೆಯಾಗಿರುತ್ತದೆ. ಏಕೆಂದರೆ ಯಾವುದೂ ಇಲ್ಲಿ ಸುಲಭವಲ್ಲ. ಆದರೆ ಉದಾತ್ತವಾದ ಮತ್ತು ಮಾನವೀಯ ಆಶಯಗಳನ್ನೊಳಗೊಂಡಿದ್ದ ಈ ಯುವ ಮುಸ್ಲಿಂ ಸಮಾವೇಶ ಎರಡು ದಿನದ ಕ್ರಮವಿಧಿಯನ್ನು ರೂಪಿಸುವಲ್ಲಿ ಕೊಂಚ ಜಡತ್ವವನ್ನು ಒಳಗೊಂಡಿತೇನೋ ಅನಿಸುತ್ತಿತ್ತು. ಅಲ್ಲಿ ಮುಸ್ಲಿಂ ಸಮುದಾಯದ ದು:ಖ ದುಮ್ಮಾನಗಳ ಅಭಿವ್ಯಕ್ತಿಗಿಂತಲೂ ವಿಚಾರ ಮಂಡನೆಗೆ ಹೆಚ್ಚಿನ ಒತ್ತು ನೀಡಿದಂತಿತ್ತು. ಆದರೆ ಈ ಮಿತಿಯನ್ನು ಮೀರಿ ಕೆಲವು ವಿಚಾರಪ್ರಚೋದಕ ಮತ್ತು ಆತ್ಮವಿಮರ್ಶೆಯ ಚರ್ಚೆಗಳು ನಡೆದಿದ್ದು ಮುದಗೊಳಿಸುವಂತಿತ್ತು. ಅದರಲ್ಲೂ ಇಸ್ಲಾಂ ಧರ್ಮ, ಕಟ್ಟಳೆಗಳು, ಸಾಂಸ್ಕೃತಿಕ ಅಸ್ಮಿತೆ, ಸಾಹಿತ್ಯ ಮತ್ತು ಅದರ ಎಲ್ಲಾ ಸಾಧಕಬಾಧಕ  ಗಳ ಕುರಿತಾಗಿ ಎರಡು ಗೋಷ್ಠಿಗಳಲ್ಲಿ ನಡೆದ ದೀರ್ಘ ಚರ್ಚೆ ಇಡೀ ಸಮ್ಮೇಳನದ ಹೈಲೈಟ್. ಇದು ಯುವ ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಒಂದು ಉತ್ತಮ ಪಾಠದಂತಿತ್ತು. ಆದರೆ ಇಡೀ ಎರಡು ದಿನಗಳ ಸಮಾವೇಶದಲ್ಲಿ ವೇದಿಕೆ ಮೇಲೆ, ಚರ್ಚೆಗಳಲ್ಲಿ ಮಹಿಳೆಯ ಅನುಪಸ್ತಿತಿ ಬಹುವಾಗಿ ಕಾಡುತ್ತಿತ್ತು ಮತ್ತು ಇಂದು ದೇಶಾದ್ಯಾಂತ ಅತಿಯಾಗಿ ಚರ್ಚಿತವಾಗುತ್ತಿರುವ ಮತ್ತು ಶೋಷಣೆಗೊಳಗಾಗಿರುವ ಮುಸ್ಲಿಂ ಮಹಿಳೆಯ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಅವಶ್ಯಕವಾದ ಮಹಿಳಾ ದನಿಯ ಕೊರತೆ ಒಂದು ಮಿತಿಯಾಗಿದ್ದಂತೂ ನಿಜ.

 
ರಾಗದ್ವೇಷಗಳಿಂದ ಕಲುಷಿತಗೊಳ್ಳದೆ ಮುಂದೆ ಹೇಗೆ ಮತ್ತು ಮುಂದೆ ಯಾರಿಗಾಗಿ ಎನ್ನುವ ಅನಿವಾರ್ಯ ಪ್ರಶ್ನೆಗಳನ್ನು ಕೇಳಿಕೊಳ್ಳುವಲ್ಲಿ ಸಧ್ಯಕ್ಕೆ ತಾತ್ಕಾಲಿಕವಾಗಿ ಈ ಯುವ ಮುಸ್ಲಿಂ ಸಮಾವೇಶ ಯಶಸ್ವಿಯಾಗಿದೆ. ಈ ಪ್ರಶ್ನೆಗಳನ್ನು ತನ್ನ ಮುಂದಿನ ಕ್ರಿಯೆಗಳ ಭಾಗವಾಗಿಸಿಕೊಂಡು ಉತ್ತರಕ್ಕೆ ತಡಕಾಡತೊಡಗಿದಾಗ ಮಾತ್ರ ಅದರ ಸಾರ್ಥಕತೆ ಗೋಚರವಾಗಲಾರಂಬಿಸುತ್ತದೆ. ಜನಪ್ರಿಯ ರಾಜಕೀಯ, ಧಾರ್ಮಿಕ ಸಿದ್ಧಾಂತಗಳಿಗೆ ಬಲಿಯಾಗದಂತೆ ತನ್ನ ಮುಸ್ಲಿಂ ಯುವಕರನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಮೇಲೆ ಈ ಯುವ ಮುಸ್ಲಿಂ ಸಮಾವೇಶದ ಅರ್ಥಪೂರ್ಣತೆ ಅಡಗಿದೆ. ಸಾಮುದಾಯಿಕ ಫಲಶ್ರುತಿಗಳನ್ನು ನೀಡಬಲ್ಲಂತಹ ಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಕಟ್ಟುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

 

ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

-ಶ್ರೀಧರ ಪ್ರಭು

ಈಗಿನ ದಿನಮಾನದಲ್ಲಿ ಒಂದೊಳ್ಳೆ ಮೌಲಿಕ ಕಾರ್ಯಕ್ರಮ ಸಂಘಟಿಸುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಇನ್ನೊಂದಿಲ್ಲ. ನೂರು ಜನ ಬರಬಹುದು ಎಂದುಕೊಂಡ ಕಡೆ ಇಪ್ಪತ್ತು ಜನ ಬಂದಿರುತ್ತಾರೆ. ಸರಕಾರದ ಕಾರ್ಯಕ್ರಮವಾಗಿದ್ದರಂತೂ ಹೆಚ್ಚಿನ ಜನ ಬರುವುದು ಪ್ರಯಾಣ ಭತ್ಯೆಗಾಗಿ. ಒಂದು ಬಾರಿ ಹೆಸರು ನೋಂದಾಯಿಸಿ ಹೋದವರು ಗೋಷ್ಠಿಗಳ ಕಡೆಗೆ ತಲೆಯಿಟ್ಟೂ ಮಲಗುವುದಿಲ್ಲ. ಇನ್ನು ಈ ಗೋಷ್ಠಿಗಳು ಬಿಸಿಲು ನಾಡಿನಲ್ಲಿದ್ದರಂತೂ ಯಾವ ನರಪಿಳ್ಳೆಯೂ ಇತ್ತ ಸುಳಿಯುವುದಿಲ್ಲ.

ಇದೆಲ್ಲ ನನಗೆನಿಸಿದ್ದು ಮೊನ್ನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೮ ಮತ್ತು ೯ ನೇ ತಾರೀಕು ಬಾಬಾ ಸಾಹೇಬರ ವಿಚಾರಗಳ ಕುರಿತು ಎರಡು ದಿನಗಳ ವಿಚಾರ ಗೋಷ್ಠಿಗೆ ನನ್ನನ್ನು ಆಹ್ವಾನಿಸಿದಾಗ.

ಹೆಚ್ಚೆಂದರೆ ಹತ್ತಿಪ್ಪತ್ತು ಜನ ಕಾಟಾಚಾರಕ್ಕೆಂದು ಸೇರಿರುತ್ತಾರೆ. ಆದರೂ ಅವರ ಉತ್ಸಾಹಕ್ಕೆ ಭಂಗ ಬರಬಾರದು ಎಂದುಕೊಂಡು ಸ್ವಲ್ಪ ಮಟ್ಟಿನ ಅನಾರೋಗ್ಯವನ್ನೂ ಕಡೆಗಣಿಸಿ ರಣ ಬಿಸಿಲಿನ ಹೆದರಿಕೆಯನ್ನೂ ಮೆಟ್ಟಿನಿಂತು ಜೇವರ್ಗಿಗೆ ಬಂದಿಳಿದಿದ್ದೆ.

ಜೇವರ್ಗಿಯ ಯುವ ಪ್ರಾಧ್ಯಾಪಕರಾದ ಡಾ. ಕರಿಗುಳೇಶ್ವರ ಮತ್ತು ಅಲ್ಲಿನ ಗ್ರಂಥಾಲಯದ ವಿಜ್ಞಾನದ ಮುಖ್ಯಸ್ಥರಾದ ವಿನೋದ್ ಕುಮಾರ್ ಮತ್ತಿತರರ ಯುವಜನರ ತಂಡ ಜೇವರ್ಗಿಯಲ್ಲಿ ವಿಚಾರ ಸಂಕಿರಣವನ್ನು ನಿಜವಾಗಲೂ ರಾಷ್ಟ್ರ ಮಟ್ಟಕ್ಕೇರಿಸಿದ್ದರು. ಪ್ರತಿನಿಧಿಗಳ ಪ್ರಯಾಣ ವ್ಯವಸ್ಥೆ, ಊಟ, ಉಪಚಾರ, ವಸತಿsridhar prabhuಯಿಂದ ಮೊದಲ್ಗೊಂಡು ವಿಷಯ ಮಂಡನೆಯವರೆಗೆ ಯಾವ ವಿಚಾರದಲ್ಲಿ ಪರಿಗಣಿಸಿದರೂ ಇದನ್ನೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವೆಂದು ಖಚಿತವಾಗಿ ಹೇಳಬಹುದಿತ್ತು.

ಎರಡು ದಿನ ಮುಂಚಿತವಾಗಿ ಸ್ವಯಂ ಚಾಲಿತ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿ ಎಲ್ಲರಿಗೂ ಏಕ ಕಾಲಕ್ಕೆ ಸಂಕಿರಣದ ವೇಳಾಪಟ್ಟಿ ಲಭ್ಯವಿತ್ತು. ಹಾಗೆಯೆ, ಒಂದು ವೆಬ್ಸೈಟಿಗೆ ಸಹ ಚಾಲನೆ ನೀಡಿ ಆನ್ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಪ್ರಿಂಟರ್, ಪ್ರೊಜೆಕ್ಟರ್ ಮತ್ತು ಧ್ವನಿಮುದ್ರಕ ವ್ಯವಸ್ಥೆ ಜೊತೆಗೆ ವಾತಾನುಕೂಲ ಪಂಖೆಗಳು ನಮ್ಮ ಸ್ವಾಗತಕ್ಕೆ ಕಾದಿದ್ದವು. ಪ್ರಮುಖವಾಗಿ, ಯಾವ ಗೋಷ್ಠಿಯೂ ಸಮಯವನ್ನು ಮೀರಲಿಲ್ಲ. ಎಲ್ಲಾ ಗೋಷ್ಠಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಪ್ರಬಂಧಮಂಡನೆಯಿಂದ ಮೊದಲ್ಗೊಂಡು ಇಡೀ ವಿಚಾರಗೋಷ್ಠಿಯನ್ನು ಆಂಗ್ಲಭಾಷೆಯಲ್ಲೇ ನಡೆಸಿಕೊಡಲಾಗಿತ್ತು. ನನ್ನಂಥವರು ಕೆಲವರು ಕನ್ನಡದಲ್ಲಿ ಮಾತಾಡಿದ್ದು ಬಿಟ್ಟರೆ ಹೈದರಾಬಾದ್ ಕರ್ನಾಟಕ ಹಳ್ಳಿಗಾಡಿನಿಂದ ಬಂದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಲಲಿತ ಇಂಗ್ಲಿಷ್ ಭಾಷೆಯಲ್ಲೇ ಪ್ರಬಂಧ ಮಂಡಿಸಿದರು. ನಾನಿಲ್ಲಿ ಹೇಳಿದ್ದು ಕೇವಲ ೩೦-೪೦% ವಿಚಾರಗಳನ್ನು ಮಾತ್ರ. ಹೆಚ್ಚಿನದನ್ನೂ ನಾನೇ ಕಣ್ಣಾರೆ ನೋಡಿದ್ದೆನಾದರೂ ನಂಬಿಸಿಕೊಳ್ಳಲು ನನಗೇ ಸಾಧ್ಯವಾಗುತ್ತಿಲ್ಲ! ಹೆಚ್ಚು ಹೇಳಲು ಹೋದರೆ ನೀವು ಉತ್ಪ್ರೇಕ್ಷೆಯೆಂದುಕೊಂಡು ಬಿಡುವ ಸಂಭವವಿದೆ!

ಜೇವರ್ಗಿಯ ಜನಸಂಖ್ಯೆ ಹೆಚ್ಚೆಂದರೆ ಇಪ್ಪತ್ತೈದು ಸಾವಿರವಿರಬಹುದು. ಇಲ್ಲಿನ ಈ ಸರಕಾರಿ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಅತ್ಯುನ್ನತ ಗುಣಮಟ್ಟದಿಂದಾಗಿ ಇಲ್ಲಿ ಯಾವುದೇ ಖಾಸಗಿ ಕಾಲೇಜು ಸಹ ನಡೆಯುತ್ತಿಲ್ಲ. ಯಾರೂ ಖಾಸಗಿ ಕಾಲೇಜುಗಳತ್ತ ಮೂಸಿಯೂ ನೋಡುತ್ತಿಲ್ಲ. ಅತ್ಯಂತ ಕಡಿಮೆ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನಿಟ್ಟುಕೊಂಡು ಕಾಲೇಜು ನಡೆಸುತ್ತಿರುವ ಪ್ರಾಚಾರ್ಯರು ಸಿಬ್ಬಂದಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಸಿಬ್ಬಂದಿಯಲ್ಲಿ ಈರ್ಷೆ ಮತ್ತು ಕೀಳು ಭಾವನೆಗಳಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸಮಾಡುತ್ತಿದ್ದಾರೆ. ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳವರು ಆಸಕ್ತಿಯಿಂದ ಪಾಲ್ಗೊಂಡು ದುಡಿಯುತ್ತಿದ್ದಾರೆ

ಹೈದರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಮಿಯನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ ಮತ್ತು ಸ್ಥಳೀಯ ಮುಖಂಡರು ಊಟದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವಕ್ಕೂ ಹೆಚ್ಚಾಗಿ ಅಲ್ಲಿನ ವಿದ್ಯಾರ್ಥಿಗಳು ಹಗಲಿರುಳೂ ದುಡಿದು ವಿಚಾರ ಸಂಕಿರಣಕ್ಕೆ ಅದ್ಭುತ ಯಶಸ್ಸು ದೊರಕಿಸಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಕಲ್ಯಾಣ ಕರ್ನಾಟದ ಕನಸು ಇಲ್ಲಿಂದಲೇ ನಿಜವಾಗುವಂತೆ ಭಾಸವಾಗುತ್ತದೆ!

ಅಂದ ಹಾಗೆ ನಿಮಗೊಂದು ವಿಶೇಷ ಗೊತ್ತಿರಲಿ. ಕಲಬುರಗಿ ಮತ್ತು ಜೇವರ್ಗಿಯ ದಾರಿಯಲ್ಲಿರುವ ಕಿರಣಗಿ ಎಂಬ ಪುಟ್ಟ ಗ್ರಾಮದ ಬಗ್ಗೆ ೧೯೬೨ ರಲ್ಲಿ ನಮ್ಮ ದೇಶದ ಮೇಲೆ ಚೀನಾ ಅಕ್ರಮಣವಾದಾಗ ನಿಜಲಿಂಗಪ್ಪನವರ ಸರಕಾರದಲ್ಲಿದ್ದ ಯುವ ಸಚಿವ ವೀರೇಂದ್ರ ಪಾಟೀಲರು ಈ ಗ್ರಾಮಕ್ಕೆ ಭೇಟಿಯಿತ್ತು ದೇಶಕ್ಕೆ ಸಹಾಯ ಮಾಡುವಂತೆ ಗ್ರಾಮಸ್ಥರನ್ನು ಕೋರಿದಾಗ, ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿದ್ದ ಚಿನ್ನವೆಲ್ಲವನ್ನೂ ದೇಶಕ್ಕೆ ಧಾರೆಯೆರೆದು ಕೊಟ್ಟಿದ್ದರು!! ಹೀಗೆ ಈ ಒಂದೇ ಗ್ರಾಮದಿಂದ ನೂರು ತೊಲ ಬಂಗಾರವನ್ನು ದೇಶಕ್ಕಾಗಿ ನೀಡಿದ ಕೀರ್ತಿಗಾಗಿ ಕಿರಣಗಿಯನ್ನು ಅಂದಿನಿಂದ ಹೊನ್ನ ಕಿರಣಗಿ ಎಂದು ಕರೆಯಲಾಗುತ್ತದೆ!

ಅಣ್ಣ ಬಸವಣ್ಣನ ಅನುಭವ ಮಂಟಪದ ಖನಿ, ಬಂದೇನವಾಜರ ಕಾರುಣ್ಯದ ಬೀಡು, ವಿಜ್ಞಾನೇಶ್ವರನ ಜ್ಞಾನಸ್ಥಾನ, ಅಮೋಘವರ್ಷರ ವೈಭವದ ನಾಡು ಇನ್ನೆಷ್ಟು ಅದ್ಭುತಗಳನ್ನು ತನ್ನ ಗರ್ಭದಲ್ಲಿಟ್ಟು ಸಲಹುತ್ತಿದೆಯೋ ಬಲ್ಲವರ್ಯಾರು!!

“ನಾವು ಇದುವರೆಗೆ 29 ಚುನಾವಣೆ ಗೆದ್ದಿದ್ದೇವೆ”

ಆಕ್ಟಿವಿಸಂ ಮತ್ತು ಚುನಾವಣಾ ರಾಜಕಾರಣ

-ಪ್ರಸಾದ್ ರಕ್ಷಿದಿ

ಚುನಾವಣೆಗಳಲ್ಲಿ ಆಕ್ಟಿವಿಸ್ಟರುಗಳ ಸೋಲಿನ ಬಗ್ಗೆ ಎಲ್ಲ ಪತ್ರಿಕೆಗಳಲ್ಲೂ ನಿರಾಶೆ ಹಾಗು ಮತದಾರರ ಸಿನಿಕತನದ ಬಗ್ಗೆ ಲೇಖನಗಳು ಹೇಳಿಕೆಗಳು ಬರುತ್ತಿವೆ. ‘ಚುನಾವಣಾ ರಾಜಕೀಯವೇ ಬೇರೆ’ ಎಂಬ ಮಾತನ್ನು ಉದಾಹರಿಸಿ, ಆ raxidiಧೋರಣೆಯೇ ತಪ್ಪು ಅವಕಾಶವಾದಿಗಳದ್ದು ಎಂಬ ಟೀಕೆಯೂ ನಡೆಯುತ್ತಿದೆ. ಇದೆಲ್ಲದರ ಹಿಂದೆ ಆಕ್ಟಿವಿಸ್ಟರು ಜನರಿಗಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಜನ ಅರಿತು ಅವರಿಗೆ ಮತನೀಡಬೇಕೆಂಬ ಆಗ್ರಹವಿದೆ.

 
ಆದರೆ ಈ ರೀತಿ ಬರೆಯುವ ಹೆಚ್ಚಿನ ಬರಹಗಾರರರು ಅಕಡೆಮಿಕ್ ವಲಯದವರು. ಮತ್ತು ಇವರು ಹೆಚ್ಚೆಂದರೆ ಭಾಷಣದ ಮೂಲಕ ಮತಯಾಚನೆ ಮಾಡುವವವರು. ಅದಕ್ಕಿಂತ ಮುಂದೆಹೋಗಿ ಮತದಾರನ ನೇರ ಸಂಪರ್ಕಕ್ಕೆ ಬರುವುದೇ ಕಡಿಮೆ. ಬಂದರೂ ನಗರ ಪ್ರದೇಶಗಳಲ್ಲಿ ಬಂದಾರೇ ಹೊರತು ಹಳ್ಳಿಗಳತ್ತ ಅವರು ಮುಖಮಾಡಿದ್ದು ಇಲ್ಲ. ಹಾಗಾಗಿ ಇವರು ಒಂದು ರೀತಿಯ ದೂರ ವಿಶ್ಲೇಷಕರು. ಈಗ ಇರೋಮ್ ಶರ್ಮಿಲಾ ವಿಚಾರದಲ್ಲೂ ಇಂಥದ್ದೇ ಲೇಖನಗಳು ಹಲವು ಬಂದಿವೆ. (ಮಣಿಪುರ ಪರಿಸ್ಥಿತಿ ನನಗೆ ಗೊತ್ತಿಲ್ಲ ಆದರೆ ಪತ್ರಿಕೆ ನೋಡಿ ಬರೆಯುವವರಿಗಿಂತ ಅಲ್ಲಿನವರ ಅಭಿಪ್ರಾಯ ಮುಖ್ಯ)

 
ನಮ್ಮಲ್ಲಿ ಸಾಮಾನ್ಯವಾದ ನಿಲುವಿದೆ. ಅದು ಆಕ್ಟಿವಿಸಂ ಎಂದರೆ “ಸರ್ಕಾರದ ವಿರುದ್ಧ” ಎಂದು. ಇದು ಒಂದು ರೀತಿ ‘ಖಾಯಂ ವಿರೋಧ ಪಕ್ಷದಲ್ಲಿರು’ ಎಂದ ಹಾಗೆ. ಆದರೆ ಆಕ್ಟಿವಿಸಂ ಹಾಗೆಯೇ ಇರಬೇಕಾಗಿಲ್ಲ ಮತ್ತು ಇರಬಾರದು ಕೂಡಾ. ಈ ವಿಚಾರಕ್ಕೆ ಮುಂದೆ ಬರುತ್ತೇನೆ.
ನಾವೊಂದಷ್ಟು ಜನ (ಆಗ ಬೆರಳೆಣಿಕೆಯಷ್ಟು) ಗೆಳೆಯರು 1976-77 ಒಂದು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕರ್ತರಾಗಿ ಕೆಲಸ ಪ್ರಾರಂಭಿಸಿದೆವು. ನಾವು ಕೆಲಸ ಆರಂಭಿಸಿದ್ದು ಜೆ.ಪಿ.ಯವರ ಸಂಪೂರ್ಣ ಕ್ರಾಂತಿಯ ಕರೆಯನ್ನು ನಂಬಿ. ಆಗ ನಮ್ಮಲ್ಲಿ ಓಟಿನ ಹಕ್ಕೂ ಬಂದಿರಲಿಲ್ಲ. ನಮ್ಮ ಗುಂಪು ನಮ್ಮ ಸುತ್ತಲಿನ ಗ್ರಾಮಗಳ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದವು. ಅದು ರೈತ-ಕಾರ್ಮಿಕ-ದಲಿತ ಹೋರಾಟಗಳು, ಇನ್ನಿತರ ಜಮೀನು- ಕುಟುಂಬ ವಿವಾದಗಳು, ಊರಜಗಳ ಹೊಡೆದಾಟಗಳು, ಗಣಪತಿ,ಚೌಡಿ ಉತ್ಸವ, ಉರುಸ್ ಎಲ್ಲದರಲ್ಲೂ ನಮ್ಮ ಬಳಗವರಿರುತ್ತಿದ್ದರು. ಹಾಗೇ ನಾಟಕ, ಕಲೆ. ಯಕ್ಷಗಾನ, ಕ್ರೀಡೆ. ಸಾಕ್ಷರತಾ ಆಂದೋಲನ, ಊರಿನ, ಶಾಲೆ ಆಸ್ಪತ್ರೆಗಾಗಿ ಪ್ರಯತ್ನಗಳು, ಕುಡಿಯುವ ನೀರಿಗಾಗಿ ಹೋರಾಟ, ವಸತಿ ಯೋಜನೆಗಳು, ಜನರ ದಿನ ನಿತ್ಯದ ಸಮಸ್ಯೆಗಳು, ಎಲ್ಲದರಲ್ಲೂ ನಾವಿದ್ದೆವು. ಆದರೆ ನಮ್ಮ ಹೋರಾಟ ಕೆಲವುಬಾರಿ ಸರ್ಕಾರದ ವಿರುದ್ಧವೂ ಕೆಲವು ಬಾರಿ ಸರ್ಕಾರದ್ದೇ ಯೋಜನೆಗಳ ಅನುಷ್ಟಾನಕ್ಕಾಗಿಯೂ ಇರುತ್ತಿತ್ತು. (ಉದಾ: ಅರಣ್ಯೀಕರಣದ ವಿಷಯಬಂದಾಗ ರೈತ ಚಳುವಳಿಯಲ್ಲಿದ್ದ ನಾವು ರೈತ ಸಂಘದ ನಿಲುವಿಗೆ ವಿರುದ್ಧವಾಗಿ ಅರಣ್ಯ ಇಲಾಖೆಗೆ ನಮ್ಮೂರಿನಲ್ಲಿ ನೂರಾರು ಎಕರೆ ಅರಣ್ಯೀಕರಣಕ್ಕೆ ಬೆಂಬಲವಾಗಿ ನಿಂತಿದ್ದೆವು, ನಮ್ಮ ಪಂಚಾಯತಿ ವ್ಯಾಪ್ತಿಯಲ್ಲೇ ಏಳುನೂರು ಎಕರೆಗೂ ಹೆಚ್ಚು ಈ ರೀತಿಯ ಅರಣ್ಯವಿದೆ)

 
ನಮ್ಮ ಬಳಗ 77ರಲ್ಲೇ ಚುನಾವಣಾ ರಾಜಕೀಯಕ್ಕೆ ಇಳಿದಿತ್ತು. ಇಂದಿರಾಗಾಂಧಿ ವಿರುಧ್ಧ. ಆದರೆ ಪ್ರಥಮ ಗೆಲುವನ್ನು ಕಂಡದ್ದು ಸುಮಾರು ಆರು ವರ್ಷಗಳನಂತರ ಪಂಚಾಯತ್ ಚುನಾವಣೆಯಲ್ಲಿ. ಅಲ್ಲಿಂದೀಚೆ ಇಂದಿನವರೆಗೆ ನಾವು ಪಂಚಾಯತಿಯಿಂದ ಪಾರ್ಲಿಮೆಂಟಿನವರೆಗೆ ಅಂದರೆ ಎಲ್ಲ ಮಂಡಲ, ತಾಲ್ಲೂಕು, ಜಿಲ್ಲೆ, ಎ.ಪಿ.ಎಂ.ಸಿಗಳೂ ಸೇರಿ 37 ಚುನಾವಣೆಗಳನ್ನು ಎದುರಿಸಿದ್ದೇವೆ. ಇಂದಿನವರೆಗೆ 29 ಚುನಾವಣೆಗಳನ್ನು ಗೆದ್ದಿದ್ದೇವೆ! ಅಂದರೆ ಸಣ್ಣ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳೇ ನೇರವಾಗಿ ಗೆದ್ದಿದ್ದಾರೆ. ವಿಧಾನ ಸಭೆ, ಅಥವಾ ಲೋಕ ಸಭಾ ಚುನಾವಣೆಯಲ್ಲಿ ಸೋತಾಗಲೂ ನಮ್ಮೂರಿನಲ್ಲಿ ಮುನ್ನಡೆ ಉಳಿಸಿಕೊಂಡಿದ್ದೇವೆ. ಆದರೆ ಇದರಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ನಮ್ಮ ಬಳಗದ ಸದಸ್ಯರಲ್ಲಿ ಆಕ್ಟಿವಿಸಂನ ಮುಂಚೂಣಿಯಲ್ಲಿದ್ದವರು ಯಾರೂ ಯಾವುದೇ ಚುನಾವಣೆ ಎದುರಿಸಲೇ ಇಲ್ಲ. ನಾವು ನಮ್ಮ ಗೆಳೆಯರಲ್ಲೇ ಆದಷ್ಟು ಉತ್ತಮರನ್ನು ಅಭ್ಯರ್ಥಿಯನ್ನಾಗಿಸುತ್ತಿದ್ದೆವು. (ಅವರಲ್ಲೂ ಕೆಲವರು ಗೆದ್ದನಂತರ ಏನೇನೋ ಮಾಡಿದ ಉದಾಹರಣೆ ಇದೆ!) ಇದರಿಂದ ಮತಯಾಚನೆಯೂ ಸುಲಭವಾಗುತ್ತಿತ್ತು. “ಇವರನ್ನು ಗೆಲ್ಲಿಸಿ ಕೊಡಿ ಇವರಲ್ಲಿ ನಾವು ಕೆಲಸಮಾಡಿಸಿಕೊಡುತ್ತೇವೆ ಒಂದುವೇಳೆ ಇವರು ಮಾಡಲೇ ಇಲ್ಲ ಅಂದ್ಕೊಳಿ ನಾವು ನಿಮ್ ಜೊತೆ ಇದ್ದೇ ಇರ್ತೀವಲ್ಲ” ಎನ್ನುತ್ತಿದ್ದೆವು. ಜನ ನಮ್ಮನ್ನು ಬಿಟ್ಟುಕೊಡಲಿಲ್ಲ. ನಮ್ಮ ಗ್ರಾಮಪಂಚಾಯತಿ ನಿರಂತರ ಇಪ್ಪತೈದು ವರ್ಷಗಳ ಕಾಲ ನಮ್ಮ ಬಳಗದ ಕೈಯಲ್ಲಿತ್ತು. ಈಗ ಎರಡು ಚುನಾವಣೆಗಳಲ್ಲಿ ನಾವು (ಹಿರಿಯರು)ನೇರವಾಗಿ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದೇವೆ.

 
ಇಷ್ಟು ವರ್ಷಗಳಲ್ಲಿ ನಾವು ಗಮನಿಸಿದ ಸಂಗತಿಯೆಂದರೆ, ಚುನಾವಣೆಗೆ ನಿಲ್ಲುವ ಇತರರು ಮಾಡುವ ಭ್ರಷ್ಟಾಚಾರವನ್ನು (ತೀರಾ ತೊಂದರೆ ಮಾಡುವಂತವರನ್ನು ಬಿಟ್ಟು) ಮನ್ನಿಸುತ್ತಾರೆ ಆದರೆ ಒಬ್ಬ ಆಕ್ಟಿವಿಸ್ಟ್ ಭ್ರಷ್ಟನಾಗುವುದನ್ನು ಒಪ್ಪುವುದಿಲ್ಲ. ಇನ್ನೊಂದು ವಿಷಯವೆಂದರೆ ಸ್ಥಳೀಯ ಚುನಾವಣೆಗಳಲ್ಲಿ ಒಂದು ಸ್ಥಾನಕ್ಕೆ ನಿಂತಿರುವ ಅಭ್ಯರ್ಥಿಯ ಜಾತಿಪ್ರಶ್ನೆ ಬಂದಾಗ, ನಿಂತಿರುವ ಎಲ್ಲರೂ ಒಳ್ಳೆಯವರೇ ಅದರೆ, ಜನ ಹೆಚ್ಚಾಗಿ ಅವರವರ ಜಾತಿಯವನಿಗೆ ಮತನೀಡುತ್ತಾರೆ. ಒಂದು ವೇಳೆ ಎಲ್ಲರೂ ಕೆಟ್ಟವರಾದರೂ ಹಾಗೇ ಮಾಡುತ್ತಾರೆ. ಆದರೆ ಒಬ್ಬ ಯೋಗ್ಯನಿದ್ದು ಉಳಿದವರು ಅಯೋಗ್ಯರಾದರೆ ಜಾತಿಯನ್ನು ಮೀರಿಯೇ ಯೋಗ್ಯನಿಗೆ ಮತದಾನ ಮಾಡುತ್ತಾರೆ.

ಹಾಗೆಯೇ ಹಣ ಹಂಚುವುದರಿಂದ ಆಗುವ ಪರಿಣಾಮವೂ ಅಷ್ಟೆ ಹಣ ಪಡೆದವರಲ್ಲಿ ಹೆಚ್ಚಿನವರು ಅವರಿಗೆ ಬೇಕಾದವರಿಗೇ ಮತ ನೀಡುತ್ತಾರೆ. ಕೆಲವೇ ಕೆಲವರು ಮಾತ್ರ ಹಣಕ್ಕೆ ಮತ ನೀಡುತ್ತಾರೆ. ಆದೆ ನೆಕ್ ಟು ನೆಕ್ ಅನ್ನುವ ಸ್ಪರ್ಧೆಯಿದ್ದಲ್ಲಿ ಇದು ಫಲಿತಾಂಶವನ್ನು ಉಲ್ಟಾ ಮಾಡಬಲ್ಲುದು. ಸೋಲುವ ಭಯವೇ ಅಭ್ಯರ್ಥಿಯನ್ನು ಹಣ ಹಂಚುವ ಯೋಚನೆಗೆ ತಳ್ಳುತ್ತದೆ. ಕಳೆದ ಪಂಚಾಯತ ಚುನಾವಣೆಯಲ್ಲಿ ನಮ್ಮ ಬಳಗದ ಸದಸ್ಯರೊಬ್ಬರು ನಾನು ಯಾವಕಾರಣಕ್ಕೂ ಹಣ ಹಂಚುವುದಿಲ್ಲ ಎಂದು ಹೇಳಿಯೇ ಕೆಲವರು ಯುವಕರನ್ನು ಕರೆದುಕೊಂಡು ಮನೆಮನೆಗೆ ತಿರುಗಿ ಮತಯಾಚನೆ ಮಾಡಿದರು. ಅವರು ಗೆದ್ದರು. ಅವರುಗಳಿಸಿದ ಒಟ್ಟು ಮತಗಳು ಅವರೆದುರಿಗಿದ್ದ ಉಳಿದ ಎಲ್ಲಾ ಅಭ್ಯರ್ಥಿಗಳ ಮತಗಳ ಮೊತ್ತವನ್ನು ಮೀರಿತ್ತು! ಆದರೆ ಇತ್ತೀಚಿನ ಪಂಚಾಯತ ಚುನಾವಣೆಗಳಲ್ಲಿ ಒಂದೇ ಕ್ಷೇತ್ರದಲ್ಲಿ ಬೇರೆಬೇರೆ ಮೀಸಲಾತಿಯ ಒಂದಕ್ಕಿಂತ ಹೆಚ್ಚು ಸ್ಥಾನಗಳಿದ್ದಾಗ ಜನ ಎಲ್ಲಾ ಮತಗಳನ್ನು ಅವರವರ ಜಾತಿಯವರಿಗೇ ಹಾಕುತ್ತಾರೆ. ಅಂತಹ ಅವಕಾಶ ಇಲ್ಲದಲ್ಲಿ ಮಾತ್ರ ಇನ್ನಿತರ ಆದ್ಯತೆಯ ಮೇಲೆ ಚಲಾಯಿಸ ತೊಡಗಿದ್ದಾರೆ.

ಆದರೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇದು ಅನ್ವಯಿಸುವುದಿಲ್ಲ. ಆದರೆ ಚುನಾವಣೆಗಳಲ್ಲಿ ಯಾವುದೇ ಒಂದು ಅಲೆ ಇದ್ದಾಗ ಸ್ಥಳೀಯ ಆಕ್ಟಿವಿಸಂ ಕೆಲಸ ಮಾಡುವುದಿಲ್ಲ. ಜನ ಅಲೆಯಲ್ಲಿ ಕೊಚ್ಚಿಹೋಗುವುದೇ ಹೆಚ್ಚು. ಹಣವಿದ್ದರೆ ಏನು ಬೇಕಾದರೂ ಮಾಡಬಹುದು, ಏನ್ನನ್ನಾದರೂ ಗಳಿಸಬಹುದು ಎನ್ನುವ ಈ ಸಂದರ್ಭದಲ್ಲಿಯೂ, ಸ್ಥಳೀಯ ಚುನಾವಣೆಗಳನ್ನುಯಾವುದೇ ಹಣ ಆಮಿಷಗಳ ನೆರವಿಲ್ಲದೆ ಗೆಲ್ಲಲು, ನಿಜವಾದ ಆಕ್ಟಿವಿಸ್ಟ್ ಗುಂಪುಗಳಿಗೆ, ತುಂಬ ಅವಕಾಶ ಇದೆ. ಅಲ್ಲದೆ ಅವರು ಅದಕ್ಕೆ ಬೇಕಾದ ಸ್ಥಳೀಯ ರಾಜಕಾರಣದ ಚಾಕಚಕ್ಯತೆಯನ್ನು ಕೂಡಾ ಗಳಿಸಿಕೊಂಡಿರುತ್ತಾರೆ.
ಯಾವುದಾದರೂ ಭಾವನಾತ್ಮಕ ವಿಷಯಗಳಿದ್ದರೆ, ಅದರ ಮೇಲೆ ಸವಾರಿ ಮಾಡುವುದು, ಇನ್ನೂ ಹೆಚ್ಚು ತತ್ಕಾಲದ ಲಾಭವನ್ನು ತಂದುಕೊಡುತ್ತದೆ ಎನ್ನುವುದನ್ನು ಇಂದು ಎಲ್ಲ ಪಕ್ಷಗಳೂ ಕಂಡುಕೊಂಡಿವೆ. ಹಾಗಾದಾಗ ಚುನಾವಣೆಗಳಲ್ಲಿ ಬೇರೆಲ್ಲ ನಿಜ ಸಮಸ್ಯೆಗಳು ಪಕ್ಕಕ್ಕೆ ಸರಿದು ಹೋಗುತ್ತವೆ. “ಜಲ್ಲಿ ಕಟ್ಟು” ವಿಚಾರದಲ್ಲಿ ತಮಿಳಿನಾಡಿನಲ್ಲಿ ಎಲ್ಲರೂ ಪಕ್ಷಬೇಧ ಮರೆತು ಹೋರಾಡಲು ಕಾರಣ “ಜಲ್ಲಿಕಟ್ಟು” ಬೇಕು ಎನ್ನುವುದಕ್ಕಿಂತ, ಹೆಚ್ಚಾಗಿ ನಾವು ದೂರ ನಿಂತರೆ ವಿರೋಧಿಗಳು ಅದರ ರಾಜಕೀಯ ಲಾಭ ಪಡೆಯುತ್ತಾರೆ ಎನ್ನುವುದೇ ಆಗಿದೆ.

ಇನ್ನೂ ಒಂದು ಕಾರಣವಿದೆ ನಮ್ಮ ಆಕ್ಟಿವಿಸಂ ಕೆಲವೇ ಅಥವಾ ಒಂದರೆಡು ವಿಷಯಗಳಿಗೆ ಸೀಮಿತವಾಗಿದ್ದರೆ ಅದು ಚುನಾವಣೆಯಲ್ಲಿ ನಮಗೆ ಯಾವುದೇ ಪ್ರತಿಫಲವನ್ನು ನೀಡಲಾರದು. ಉದಾ: ನಮ್ಮ ತಾಲ್ಲೂಕಿನಲ್ಲಿ ಪ್ರಮುಖ ವಿಷಯವಾದ ಪರಿಸರನಾಶದ ಬಗ್ಗೆ ನಿರಂತರವಾಗಿ ಹೋರಾಡುವ ಯಾವ ವ್ಯಕ್ತಿಯೂ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಈ ಸಮಸ್ಯೆ ನಿಜವಾದದ್ದೇ ಆದರೂ ಜನರ ಬದುಕಿನಲ್ಲಿ ಬೇರೆ ಬೇರೆ ರೀತಿ ತಳುಕುಹಾಕಿಕೊಂಡಿದೆ. ಆದ್ದರಿಂದ ಒಬ್ಬ ಪರಿಸರ ಹೋರಾಟಗಾರ ಇಲ್ಲಿ ಏಕಕಾಲಕ್ಕೆ ಕೆಲವರ ಮೆಚ್ಚಿನ ವ್ಯಕ್ತಿಯೂ. ಇನ್ನುಕೆಲವರ ವಿರೋಧಿಯೂ ಹಲವರಿಗೆ ಅನುಪಯುಕ್ತನೂ, ಮತ್ತೂ ಕೆಲವರಿಗೆ ಅನುಮಾನಾಸ್ಪದನೂ ಆಗಿರುತ್ತಾನೆ. ಇದು ಸುಮಾimagesರಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೂ ಅನ್ವಯಿಸುತ್ತದೆ. ಹಿಂದೆ ರೈತಸಂಘ ಚುನಾವಣೆಗಳಲ್ಲಿ ಹೆಚ್ಚು ಯಶಸ್ಸು ಗಳಿಸಲಾಗದಿರಲು ಇದೂ ಒಂದು ಕಾರಣ.

ಹಾಗಾಗಿ ಅಕ್ಟಿವಿಸಂ ನಮೂಲಕ ಚುನಾವಣೆಯನ್ನೆದುರಿಸುವ ಉದ್ದೇಶವಿದ್ದರೆ, ಜನರ ನಿತ್ಯದ ಹಲವು ಸಮಸ್ಯೆಗಳನ್ನೊಳಗೊಂಡ ಬಹುಮುಖಿ ಕಾರ್ಯಕ್ರಮಗಳ, ಕಾರ್ಯಕರ್ತರ ಪಡೆ ಅಗತ್ಯವಾಗುತ್ತದೆ. ರಾಜಕೀಯ ಪಕ್ಷಗಳಿಗೆ ಈ ಸಮಸ್ಯೆ ಇಲ್ಲ. ಮತದಾರ ಯಾವಾಗಲೂ ಯಾವುದಾದರೊಂದು ಪಕ್ಷವನ್ನು ಆರಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇರುತ್ತಾನೆ. ಆದರೆ ಆಕ್ಟಿವಿಸಂ ಮೂಲಕ ರಾಜಕೀಯ ಅಧಿಕಾರ ಪಡೆಯಬಯಸುವವರು ಎಲ್ಲವನ್ನೂ ಶೂನ್ಯದಿಂದ ಪ್ರಾರಂಬಿಸಬೇಕಾದ್ದರಿಂದ, ಅದಕ್ಕೆ ಬೇಕಾಗುವ ದೊಡ್ಡ ಪಡೆಯನ್ನು ಕಟ್ಟುವುದು ಕಷ್ಟದ ಕೆಲಸ.
ನಮ್ಮ ತಾಲ್ಲೂಕಿನಲ್ಲಿ ಒಬ್ಬರು ಹಿರಿಯ ಗಾಂಧಿವಾದಿಯಿದ್ದರು. ಅವರು ಕಂದಾಯ ಇಲಾಖೆಯಲ್ಲಿ ದುಡಿದು ನಿವೃತ್ತರಾದವರು. ನಂತರ ಸಕಲೇಶಪುರ ಮತ್ತು ಆಲೂರು ವಿಧಾನಸಭಾಕ್ಷೇತ್ರದ ಎರಡೂ ತಾಲ್ಲೂಕುಗಳಲ್ಲಿ ತಾಲ್ಲೂಕು ಕಛೇರಿಯ ಮುಂದೆ ನಿಂತು ಅಲ್ಲಿಗೆ ಬರುವ ಬಡವರ, ಮತ್ತು ರೈತರ ಕೆಲಸಗಳನ್ನು ಲಂಚವಿಲ್ಲದೆ ಮಾಡಿಸಿಕೊಡುತ್ತಿದ್ದರು. ಮಧ್ಯಾಹ್ನ ಯಾರಾದರೊಬ್ಬರು ಅವರಿಗೆ ಊಟ ಹಾಕಿಸುತ್ತಿದ್ದರು, ಸಂಜೆಯ ವೇಳೆಗೆ ಇನ್ನೊಬ್ಬರಿಂದ ಬಸ್ ಚಾರ್ಜು ಮಾತ್ರ ಕೇಳಿಪಡೆದು ಊರಿಗೆ ಮರಳುವುದು ಅವರ ಪದ್ಧತಿ. ಇದು ಅನೇಕ ವರ್ಷಗಳ ಕಾಲ ನಡೆಯಿತು. ತಾಲ್ಲೂಕು ಕಚೇರಿಯ ದಲ್ಲಾಳಿಗಳಿಂದ ಒಂದೆರಡು ಬಾರಿ ಅವರ ಮೇಲೆ ಹಲ್ಲೆಯೂ ನಡೆಯಿತು.

ಅವರು ಅನೇಕ ಬಾರಿ ವಿಧಾನಸಭೆಗೆ ಸ್ಪರ್ಧಿಸಿದರು. ಪ್ರತಿ ಚುನಾವಣೆಯಲ್ಲಿ, ಮತದಾರನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಕರಪತ್ರವೊಂದು ಮುದ್ರಿಸಿಕೊಂಡು ಮನೆಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದರು. ಮೊದಲಬಾರಿ ಅವರು ಸ್ಪರ್ಧಿಸಿದ್ದಾಗ ಒಂದರೆಡು ಸಾವಿರ ಮತ ಗಳಿಸಿದ್ದರು. ಅವರ ಕೊನೆಯ ಚುನಾವಣೆಯಲ್ಲಿ ಅವರು ಗಳಿಸಿದ ಮತ ನೂರಕ್ಕೂ ಕಡಿಮೆ. ಹಾಗೆಂದು ಈಗಲೂ ಅವರನ್ನು ಕೊಂಡಾಡುವ, ಅಂತವರು ಗೆಲ್ಲಬೇಕೆಂದು ಹೇಳುವವವರ ಸಂಖ್ಯೆ ಬಹಳ ದೊಡ್ಡದೇ. ಆದರೆ ಚುನಾವಣೆ ಬಂದಾಗ ತಾವು ಅವರಿಗೆ ನೀಡುವ ಮತ ಮತ್ತೊಬ್ಬನ ಗೆಲುವಿಗೆ ಕಾರಣವಾದೀತೆಂಬ, ಜನರ ಲೆಕ್ಕಾಚಾರವೇ ಅಂತವರಿಗೆ ಮುಳುವಾಗುತ್ತದೆ.

 

ಇಂದು ನೂರಾರು ಸಂಘ ಸಂಸ್ಥೆಗಳಿವೆ. ಹೋರಾಟದ ಗುಂಪುಗಳಿವೆ. ನಾನಾರೀತಿಯ ಹೋರಾಟಗಳೂ ಇವೆ. ನಾನಾ ತರದ ಜನ ಅದರಲ್ಲಿ ತೊಡಗಿಕೊಂಡಿರುತ್ತಾರೆ. ಎಲ್ಲ ಹೋರಾಟಗಳೂ ಒಂದೇ ಬಗೆಯವಾಗಿರುವುದಿಲ್ಲ. ಒಂದು ಹೋರಾಟಕ್ಕೆ ಸ್ಥಳೀಯವಾಗಿ ಒಂದು ಅಭಿಪ್ರಾಯವಿದ್ದರೆ ಹೊರಗೆ ಇನ್ನೊಂದು ಅಭಿಪ್ರಾಯವಿರುತ್ತದೆ. ನಿಜವಾದ ಹೋರಾಟಗಾರರು, ಸ್ವಹಿತಾಸಕ್ತಿಯಿಂದ ಬಂದವರು, ರಾಜಕೀಯ ಲಾಭಕ್ಕಾಗಿ ಬಂದವರು. ದೂರದಲ್ಲಿ ಕುಳಿತು ಹೋರಾಟ ರೂಪಿಸುವವರು, ಇತ್ಯಾದಿಗಳೂ ಇರುತ್ತಾರೆ.

ರೈತರ ಪರ ಹೋರಾಟದಲ್ಲಿ ಸಂತ್ರಸ್ತನಾಗಿ ಭಾಗಿಯಾಗಿರುವಾತ ಹಳ್ಳಿಯಲ್ಲಿ ಮೀಟರ್ ಬಡ್ಡಿ ಸಂಗ್ರಾಹಕನೂ ಆಗಿರುತ್ತಾನೆ! ಇದು ಪತ್ರಿಕೆಗಳಲ್ಲಿ ಬರೆಯುವ ಸೆಮಿನಾರುಗಳಲ್ಲಿ ಮಾತನಾಡುವವರಿಗೆ ತಿಳಿದೇ ಇರುವುದಿಲ್ಲ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಜನರಿಗೆ ಈ ಹೋರಾಟಗಾರರಿಗಿಂತ ಕಷ್ಟಕ್ಕೆ ಆಗುವ ಅಥವಾ ಕಾಸು ಕೊಡುವ ರಾಜಕಾರಣಿಯೇ ಯೋಗ್ಯನಾಗಿ ಕಾಣುತ್ತಾನೆ. ಸಿದ್ಧಾಂತಗಳು ತಲೆಕೆಳಗಾಗುತ್ತವೆ. ಹೋರಾಟಗಾರರು ಗೆಲ್ಲಲಿಲ್ಲ ಎಂದು ವಿಷಾದಿಸುವಾಗ ಅವರ ಗೆಲುವಿಗೆ ಸಾಧ್ಯತೆಯೇ ಇರಲಿಲ್ಲ ಎಂಬುದನ್ನು ಮರೆಯುತ್ತಾರೆ. ಇರೋಮ್ ಶರ್ಮಿಳಾರನ್ನು ಗೆಲ್ಲಿಸಲು ಬೇಕಾದ ಕಾರ್ಯಕ್ರಮವಾಗಲೀ.. ಕಾರ್ಯಪಡೆಯಾಗಲೀ ಇತ್ತೇ?

ಅಚ್ಚೇದಿನ್: ಎಚ್ಚರ, ನಿಮ್ಮ ಖಾತೆಗಳೇ ಕ್ಯಾಶಲೆಸ್!

ಅಚ್ಚೇದಿನಗಳ ಕನಸು ಕಂಡು ನೋಟು ರದ್ದತಿ ಬೆಂಬಲಿಸಿದವರಲ್ಲಿ ವಿಷಾದದ ಮೌನ

– ಪ್ರದೀಪ್ ಮಾಲ್ಗುಡಿ

ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಗಿದೆ. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿದೆ.

 

patna-atmಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ವಿಧಿಸೋಕೆ ಬ್ಯಾಂಕ್ಗಳು ಮುಂದಾಗಿವೆ. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸೋಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.
ಎಸ್ಬಿಐ ಇತ್ತೀಚೆಗೆ ಮಾಡಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಅಂತ ಎಸ್ಬಿಐ ಹೇಳಿದೆ. ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಗುತ್ತೆ.

 
ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡೋ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದ್ರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದ್ರೆ 30 ರೂ., ಶೇ. 75ರ ಮೇಲೆ ಕಡಿಮೆಯಾದ್ರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.
ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸೋದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿದೆ. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸ್ತಿದೆ. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿದೆ.

 

demonetisationಇನ್ನು ಕೇಂದ್ರ ಸರ್ಕಾರದ ಕ್ಯಾಶ್ಲೆಸ್ ಎಕಾನಮಿ ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಯನ್ನೇ ಕ್ಯಾಶ್ಲೆಸ್ ಮಾಡೋ ಹುನ್ನಾರ ನಡೆಸಿವೆ.

 
ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1000ಕ್ಕೆ 5 ರೂ. ಶುಲ್ಕ ವಸೂಲಿ ಮಾಡ್ತಿವೆ. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡ್ತಿವೆ. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತಿದೆ.

 
ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸುತ್ತೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿಯುತ್ತಿವೆ.

 
ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾದರೆ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಯುತ್ತೆ. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದರೆ, ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ದುಡ್ಡಿಗೆ ಕತ್ತರಿ ಬೀಳೋದಂತೂ ನಿಶ್ಚಿತವಾದಂತಾಗಿದೆ.

 
ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತಿವೆ. ಈ ಸುಲಿಗೆಯ ಯಾಗಕ್ಕೆ ಮುಂಬರುವ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಗೊಳಿಸಲಾಗಿದೆ. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿದೆ. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿದೆ. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತೆ.

ಚಿತ್ರಕೃಪೆ;  Indian Express, Business Standard

ಒಡೆದ ಚೂರುಗಳನ್ನು ಆಯ್ದು ಕಟ್ಟುವ ಪ್ರಯತ್ನ

(ಇರ್ಷಾದ್  ಉಪ್ಪಿನಂಗಡಿಯವರ ಅನೇಕ ಲೇಖನಗಳು ಮೊದಲು ಪ್ರಕಟಗೊಂಡಿದ್ದು ವರ್ತಮಾನದಲ್ಲಿಯೇ. ಈಗ ಅಹರ್ನಿಶಿ ಪ್ರಕಾಶನ ಈ ಯುವ ಪತ್ರಕರ್ತನ ಬರಹಗಳನ್ನು ಒಟ್ಟು ಮಾಡಿ ಪ್ರಕಟಿಸಿದೆ. ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಈ ಲೇಖನಗಳ ಗುಚ್ಚಕ್ಕೆ ಅರ್ಥಪೂರ್ಣ ಮುನ್ನುಡಿಯ ಮಾತುಳನ್ನಾಡಿದ್ದಾರೆ. ಅವರ ಮುನ್ನುಡಿ ಇಲ್ಲಿದೆ.)

 

ಬರೆಯುವುದೇ ಅಪರಾಧವೆಂಬಂತೆ ಬರಹಗಾರರನ್ನು, ನಿಂದಿಸಿ, ಹಂಗಿಸಿ, ಗೇಲಿಮಾಡಿ ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡುವ ಹುನ್ನಾರಗಳ ಈ ದಿನಗಳಲ್ಲಿ ಬರವಣಿಗೆ ಕಷ್ಟದ ಕೆಲಸ. ಅದರಲ್ಲೂ ಒಬ್ಬ ಮುಸ್ಲಿಮ್ ಲೇಖಕ ಬರೆಯುವುದು ಹೆಚ್ಚು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ‘ಕೋಮುವಾದಿಗಳ ಪ್ರಯೋಗ ಶಾಲೆ’ ಎಂಬ ಕುಖ್ಯಾತಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಾಗಿ ಬರೆಯುವುದು ಇನ್ನೂ ಕಷ್ಟದ ಕೆಲಸ.
ಗೆಳೆಯ ಇರ್ಷಾದ್ ಉಪ್ಪಿನಂಗಡಿಯವರಂತಹ ಲೇಖಕರ ಕಷ್ಟಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಇವರೊಬ್ಬ ಟಿವಿ ಮಾಧ್ಯಮದ ಪತ್ರಕರ್ತ. ಮಾತನ್ನೇ ಬಂಡವಾಳ ಮಾSwargadahadi-3ಡಿಕೊಳ್ಳಬೇಕಾದ ಅನಿವಾರ್ಯತೆಯ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಕ್ಷರರೂಪದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಒಂದು ಸವಾಲು. ಇಷ್ಟು ಮಾತ್ರವಲ್ಲ ಸೃಜನಶೀಲ ಬರವಣಿಗೆಗಳೆಂದು ಹೇಳುವ ಕತೆ-ಕವನ-ಕಾದಂಬರಿಗಳನ್ನು ಬರೆಯುವವರಿಗೆ ಇರುವ ಸೂಕ್ಷ್ಮ ವಿಷಯಗಳನ್ನು ರೂಪಕ-ಪ್ರತಿಮೆಗಳ ಮೂಲಕ ಹೇಳುವ ಸುರಕ್ಷತೆಯ ಕವಚ ಕೂಡಾ ಒಬ್ಬ ಪತ್ರಕರ್ತನಿಗೆ ಇಲ್ಲವೇ ಸೃಜನೇತರ ಲೇಖಕನಿಗೆ ಇರುವುದಿಲ್ಲ. ಈತ ಹೇಳುವುದನ್ನುನೇರವಾಗಿ, ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

 

ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳು ಈ ಕಷ್ಟಗಳ ಸರಮಾಲೆಯ ವಿರುದ್ದದ ಹೋರಾಟದಂತೆ ಕಾಣಿಸುತ್ತದೆ. ಲೇಖನಗಳನ್ನು ಓದುತ್ತಾ ಹೋದಂತೆ ಇರ್ಷಾದ್ ಮೈಗೂಡಿಸಿಕೊಂಡಿರುವ ಸತ್ಯ ಹೇಳಲೇಬೇಕೆಂಬ ಛಲ, ನ್ಯಾಯದ ಪರವಾಗಿ ಇರಬೇಕೆಂಬ ಬದ್ಧತೆ ಮತ್ತು ಸಾಮಾಜಿಕವಾದ ಕಳಕಳಿ ನಮ್ಮನ್ನು ತಟ್ಟುತ್ತದೆ. ಮುಜುಗರ ಸ್ವಭಾವದ, ನೋಡಲು ಚಾಕಲೇಟ್ ಹೀರೋನಂತಿರುವ, ಇನ್ನೂ ಕಿರಿ ವಯಸ್ಸಿನ ಇರ್ಷಾದ್ ಗೆ ಇಂತಹ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಈ ಲೇಖನಗಳನ್ನು ಓದುವವರನ್ನು ಕಾಡದೆ ಇರದು.

 

ಮನುಷ್ಯನನ್ನು ಇಂತಹ ಧೈರ್ಯದ ಕೆಲಸ ಮಾಡಿಸುವುದು ಅವನೊಳಗಿರುವ ಆತ್ಮಬಲ. ಅದು ತಾನು ಬಡಿದುಕೊಳ್ಳುವ 56 ಇಂಚಿನ ಎದೆಯಿಂದ ಬರುವುದಿಲ್ಲ. ಅದು ಆತನ ಸತ್ಯಸಂಧತೆ, ಬದ್ದತೆ, ಪ್ರಾಮಾಣಿಕತೆ ಮತ್ತು ತನ್ನವರಿಗಾಗಿ ಮಿಡಿಯುವ ಕಳಕಳಿಗಳಿಂದ ಹರಿದುಬರುವಂತಹದ್ದು. ಇದನ್ನು ಇರ್ಷಾದ್ ನಂತಹ ಲೇಖಕರು ಮತ್ತು ನಿಜವಾದ ಮನುಷ್ಯರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ..

 

ಈ ಪುಸ್ತಕದಲ್ಲಿ ಹತ್ತು ಲೇಖನಗಳಿದ್ದು ಅದರಲ್ಲಿ ಎಂಆರ್ ಪಿಎಲ್ ನ ಸಂತ್ರಸ್ತರ ಸಮಸ್ಯೆಯ ಲೇಖನವೊಂದನ್ನು ಹೊರತುಪಡಿಸಿ ಉಳಿದೆಲ್ಲವು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. ಈ ರೀತಿ ಬರೆಯುವವರನ್ನು ಸಹಜವಾಗಿಯೇ ನಾವು ಮುಸ್ಲಿಮ್ ಲೇಖಕರೆಂಬ ಆವರಣದೊಳಗೆ ಸೇರಿಸಿಬಿಡುತ್ತೇವೆ. ಹೆಸರುಗಳ ಉಲ್ಲೇಖ ಇಲ್ಲಿ ಅಪ್ರಸ್ತುತ, ಆದರೆ ಹಿಂದೂ ಸಮುದಾಯದ ಬಗ್ಗೆ ಬರೆಯುವವರನ್ನು ಮಾತ್ರ ಹಿಂದೂ ಲೇಖಕರು ಎಂದು ಯಾರೂ ಬ್ರಾಂಡ್ ಮಾಡುವುದಿಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರನ್ನು ಅವರ ಕೃತಿಗಳ ಮೂಲಕ ನೋಡಬೇಕೇ ಹೊರತು ಅವರು ಹುಟ್ಟಿದ ಜಾತಿ- ಧರ್ಮದ ಮೂಲಕ ಅಲ್ಲ ಎನ್ನುವುದನ್ನು ಹೇಳುತ್ತಲೇ ಇಂತಹ ಆತ್ಮವಂಚನೆಗಳನ್ನು ಮಾಡುತ್ತಿರುತ್ತೇವೆ.

 

ಮುಸ್ಲಿಮ್ ಲೇಖಕನೊಬ್ಬ ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಬರೆದರೆ; ಬೇರೆ ಧರ್ಮಗಳ ಉಸಾಬರಿ ಯಾಕೆ? ನಿಮ್ಮ ಧರ್ಮದ ಬಗ್ಗೆಯೇ ಬರೆಯಿರಿ ಎಂದು ಅಪ್ಪಣೆ ಕೊಡಿಸುವುದೂ ಉಂಟು. ಇದನ್ನು ಹಿಂದೂ ಧರ್ಮದಲ್ಲಿ ಹುಟ್ಟಿರುವ ಲೇಖಕರ ಬಗ್ಗೆ ಮುಸ್ಲಿಮರೂ ಹೇಳುವುದನ್ನು ನಮ್ಮಂತಹವರು ಕೇಳಿದ್ದೇವೆ. ನಾನೊಮ್ಮೆ ಬುರ್ಖಾದ  ಬಗ್ಗೆ ಮಾತನಾಡಿ ವಿವಾದ ಹುಟ್ಟಿಕೊಂಡಾಗ, ನಾನು ಬಹಳ ಮೆಚ್ಚಿಕೊಂಡ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಯುವಪತ್ರಕರ್ತರೊಬ್ಬರು ನಮ್ಮ ಹೆಂಗಸರ ಬಟ್ಟೆಗೆ ಯಾಕೆ ಕೈ ಹಾಕುತ್ತೀರಿ? ಎಂದು ಕೇಳಿದಾಗ ಒಂದು ಕ್ಷಣ ಬೆಚ್ಚಿಬಿದ್ದಿದ್ದೆ. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳ ವಾಸ್ತವದ ಬಗ್ಗೆ ಕುರುಡಾಗಿ ವ್ಯಕ್ತಿ-ವಿಷಯಗಳನ್ನು ಚರ್ಚಿಸುವುದು ಅಸಾಧ್ಯವೆನಿಸುವಂತಹ ವಾತಾವರಣವನ್ನು ನಾವೇ ನಿರ್ಮಿಸಿಬಿಟ್ಟಿದ್ದೇವೆ.

 

ಪತ್ರಕರ್ತನಾಗಿ, ಲೇಖಕನಾಗಿ ಇರ್ಷಾದ್ ಎದುರಿಸಬೇಕಾಗಿ ಬಂದಿರುವ ಬಹಿರಂಗ ವಿರೋಧ ಮತ್ತು ಆಂತರಿಕ ಒತ್ತಡದ ಅರಿವಾಗಬೇಕಾದರೆ ಅವರು ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಕಣ್ಣುಹಾಯಿಸಬೇಕು. ಬಹುಸಂಸ್ಕೃತಿಯ ತೊಟ್ಟಿಲಾಗಿದ್ದ, ಕೋಮುಸೌಹಾರ್ದdineshತೆಯನ್ನೇ ಜೀವನಕ್ರಮವಾಗಿ ಪಾಲಿಸುತ್ತಾ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೋಮುಕಾಳಗದ ರಣರಂಗವಾಗಿದೆ. ಹಿಂದಿನ ತಲೆಮಾರು ಕೂಡಿ ಕಟ್ಟಿದ್ದನ್ನು ಇಂದಿನ ತಲೆಮಾರಿನ ಒಂದು ಗುಂಪು ಒಡೆದು ಮುರಿದುಹಾಕಿದ್ದಾರೆ. ಜಗವೆಲ್ಲ ಹೆಮ್ಮೆ ಪಡುತ್ತಿದ್ದ, (ಸ್ವಲ್ಪ ಅಸೂಯೆಯಿಂದಲೂ ನೋಡುತ್ತಿದ್ದ) ದಕ್ಷಿಣ ಕನ್ನಡ ಜಿಲ್ಲೆಯ ಅಂತರಂಗಕ್ಕೆ ಈಗ ಇಣುಕಿನೋಡಿದರೆ ಒಡಕಲು ಬಿಂಬಗಳು ಕಾಣಿಸತೊಡಗಿವೆ. ಈ ರೀತಿ ಒಡೆದು ಹಾಕಿರುವವರನ್ನು ಗುರುತಿಸುವುದಷ್ಟೇ ಅಲ್ಲ, ಒಡೆದ ಚೂರುಗಳನ್ನು ಆಯ್ದು, ಜೋಡಿಸಿ ಮತ್ತೆ ಕಟ್ಟುವ ಪ್ರಯತ್ನ ಇರ್ಷಾದ್ ಅವರ ಲೇಖನಗಳಲ್ಲಿ ಕಾಣಬಹುದು.

 

ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳಿಗೆ ಸೇರಿದ ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೊಳಗಾಗಿರುವ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಪ್ರಗತಿಪರ ಲೇಖಕರ ಪರಂಪರೆ ಬೆಳೆದುಬಂದಿರುವುದನ್ನು ಈಗ ನೆನಪುಮಾಡಿಕೊಂಡರೆ ಇತಿಹಾಸದ ವ್ಯಂಗ್ಯದಂತೆ ಕಾಣಬಹುದು. ಈ ಲೇಖಕರೆಲ್ಲ ಧರ್ಮ ಸೂಕ್ಷ್ಮಗಳನ್ನು ಬಿಡಿಸಿಹೇಳುತ್ತಲೇ ಒಳಗಿರುವ ಪುರೋಹಿತಶಾಹಿಯ ಆತ್ಮವಂಚನೆ, ಸ್ವಾರ್ಥ ಮತ್ತು ಅಜ್ಞಾನಗಳನ್ನು ಬಯಲುಗೊಳಿಸಿದವರು. ಇದರಿಂದಾಗಿ ನಾನಾ ಬಗೆಯ ಕಷ್ಟನಷ್ಟಗಳನ್ನು ವೈಯಕ್ತಿಕ ಜೀವನದಲ್ಲಿಯೂ ಎದುರಿಸಿದವರು. ಇವರಲ್ಲಿ ಕೆಲವರು ಮೌನವಾಗಿ ಹೋಗಿದ್ದಾರೆ, ಇನ್ನು ಕೆಲವರು ಸಮನ್ವಯತೆಯ ಹರಿಕಾರರಾಗಿದ್ದಾರೆ.
ಈ ಲೇಖಕರ ಮೌನವನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಅವಧಿಯಲ್ಲಿ ನಡೆದ ಗದ್ದಲವನ್ನು ಕೂಡಾ ತಿಳಿದುಕೊಳ್ಳಬೇಕಾಗುತ್ತದೆ. ಕಾರಣಗಳೂ ನಮ್ಮ ವರ್ತಮಾನದ ರಾಜಕೀಯ ಬೆಳವಣಿಗೆಗಳಲ್ಲಿದೆ ಎನ್ನುವುದನ್ನು ಕೂಡಾ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಾಬರಿಮಸೀದಿಯ ನಂತರ ಬದಲಾಗಿರುವುದು ದೇಶದ ರಾಜಕೀಯ ಕ್ಷೇತ್ರ ಮಾತ್ರವಲ್ಲ, ಅದರ ಅಡ್ಡಪರಿಣಾಮಗಳಿಂದಾಗಿ ನಮ್ಮ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಒಟ್ಟು ಸಾಂಸ್ಕೃತಿಕ ಲೋಕ ಕೂಡಾ ಕೋಮುಬಣ್ಣ ಬಳಿದುಕೊಂಡದ್ದನ್ನು ಕಾಣಬಹುದು. ಈ ಬದಲಾವಣೆಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊರತಾಗಿರಲಿಲ್ಲ. ತುರ್ತು   ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮುಸ್ಲಿಮ್ ಸಮುದಾಯದ ಲೇಖಕರ ಬೆನ್ನು ತಟ್ಟಿದವರು, ಅದೇ ಲೇಖಕರು ಕೋಮುವಾದದ ವಿರುದ್ಧ ಬರೆದಾಗ ಧರ್ಮದ ಕನ್ನಡಕ ಹಾಕಿಕೊಂಡು ತೀರ್ಪು ನೀಡಲು ಶುರುಮಾಡಿದರು.

 

ಇದರಿಂದಾಗಿ ಎಂಬತ್ತರ ದಶಕದಲ್ಲಿ ಮುಸ್ಲಿಮ್ ಮೂಲಭೂತವಾದದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಬರೆಯುತ್ತಿದ್ದ ಮುಸ್ಲಿಮ್ ಸಮುದಾಯದ ಲೇಖಕ-ಲೇಖಕಿಯರ ದನಿ ಕ್ಷೀಣವಾಗುತ್ತಾ ಹೋಯಿತು. ಹಿಂದುಕೋಮುವಾದದ ಅಬ್ಬರ ಮತ್ತು ಅದನ್ನು ಎದುರಿಸಲು ಮುಸ್ಲಿಮ್ ಮೂಲಭೂತವಾದ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣದ ನಡುವೆ ಸಿಕ್ಕ ಪ್ರಗತಿಪರ ಲೇಖಕರು ಈ ಗೊಂದಲದಲ್ಲಿಯೇ ತುಸು ಅಂಚಿಗೆ ಸರಿದು ನಿಲ್ಲುವಂತಾಯಿತು. ಇಸ್ಲಾಂ ಧರ್ಮದೊಳಗಿನ ಸಂಪ್ರದಾಯವಾದದ ಬಗ್ಗೆ ಪ್ರಗತಿಪರ ಮುಸ್ಲಿಮರು ಎತ್ತಿದ ಪ್ರಶ್ನೆಗಳನ್ನು ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ವಿರುದ್ದ ಜನಾಭಿಪ್ರಾಯ ರೂಪಿಸಲು ಮತ್ತು ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರಕ್ಕೆ ದುರ್ಬಳಕೆ ಮಾಡುವಂತಹ ಪ್ರಸಂಗಗಳು ಕೂಡಾ ನಡೆಯುತ್ತಿವೆ.

 

ನಾವಿಂದು ಉತ್ತರ ಹುಡುಕಬೇಕಾಗಿರುವುದು ಹಿಂದೆ ಬರೆಯುತ್ತಿದ್ದವರು ಈಗಲೂ ಹಿಂದಿನಂತೆಯೇ ಯಾಕೆ ಬರೆಯುವುದಿಲ್ಲ ಎನ್ನುವ ಪ್ರಶ್ನೆಗೆ ಅಲ್ಲ. ಈ ರೀತಿಯ ದಣಿವು, ವಿಶ್ರಾಂತಿ, ಆರೋಪಿತ ಹೊಂದಾಣಿಕೆಯ ಬಗ್ಗೆಯೂ ಅಲ್ಲ. ಇಂತಹ ಬೆಳವಣಿಗೆ ಕೇವಲ ಮುಸ್ಲಿಮ್ ಸಮುದಾಯದಿಂದ ಬಂದಿರುವ ಲೇಖಕರಿಗೆ ಮಾತ್ರ ಸೀಮಿತವಾಗಿಲ್ಲ, ಎಂಬತ್ತರ ದಶಕದಲ್ಲಿ ಪ್ರಜ್ವಲಿಸಿದ ದಲಿತ, ರೈತ ಮತ್ತು ಭಾಷಾ ಚಳುವಳಿಯನ್ನು ಮುನ್ನಡೆಸಿದ್ದ ಎಲ್ಲ ಗುಂಪುಗಳಲ್ಲಿಯೂ ನಾಯಕತ್ವದ ಇಂತಹ ಬಿಕ್ಕಟ್ಟುಗಳನ್ನು ಕಾಣಬಹುದು. ನಾವಿಂದು ಉತ್ತರ ಹುಡುಕಬೇಕಾಗಿರುವುದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರಗತಿಪರ ಲೇಖಕರ ಪರಂಪರೆಯ ವಾರಸುದಾರರು ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ.
ಪ್ರಗತಿಪರ ಮುಸ್ಲಿಮ್ ಲೇಖಕರ ಪರಂಪರೆಯ ಸರಪಳಿ ಇದ್ದಕ್ಕಿದ್ದ ಹಾಗೆ ಮುರಿದುಬಿತ್ತೇ ಎಂಬ ಆತಂಕದ ಪ್ರಶ್ನೆ ಈಗಲೂ ನಮ್ಮ ಮುಂದಿದ್ದರೂ ಹೊಸ ತಲೆಮಾರಿನ ಅನೇಕ ಮುಸ್ಲಿಮ್ ಯುವಕ-ಯುವತಿಯರು. ಧರ್ಮದ ಬಗೆಗಿನ ಕುರುಡುತನವನ್ನು ಮೀರಿ ಒಂದಿಷ್ಟು ಅಧ್ಯಯನ, ಆತ್ಮಾವಲೋಕನದ ಮೂಲಕ ದಿಟ್ಟತನದಿಂದ ಬರೆಯುತ್ತಿದ್ದಾರೆ, ಹೋರಾಟ ನಡೆಸುತ್ತಿದ್ದಾರೆ. ಇಷರ್ಾದ್ ಉಪ್ಪಿನಂಗಡಿ ಈ ಸಾಲಿನಲ್ಲಿರುವ ಯುವ ಬರಹಗಾರ.

 

ಈ ಸಂಕಲನದಲ್ಲಿರುವ ಲೇಖನಗಳು ಆಯಾ ಸಂದರ್ಭದ ವಿದ್ಯಮಾನಗಳಿಗೆ ಥಟ್ಟನೆ ಪ್ರತಿಕ್ರಿಯೆ ರೂಪದಲ್ಲಿ ಬರೆದಿರುವಂತಹದ್ದು. ಈ ದೃಷ್ಟಿಯಿಂದ ಇದನ್ನು ಪತ್ರಿಕಾ ಲೇಖನಗಳೆಂದು ಹೇಳಬಹುದಾದರೂ ಇರ್ಷಾದ್ ಅಧ್ಯಯನ-ಸಂಶೋಧನೆಯ ಮೂಲಕ ಲೇಖನಗಳನ್ನು ಅವಸರದ ಬರವಣಿಗೆಯ ಆಚೆಗೆ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಇಷರ್ಾದ್ ಭಿನ್ನಾಭಿಪ್ರಾಯವನ್ನು ದಾಖಲಿಸಿ ಓಡಿಹೋಗುವುದಿಲ್ಲ, ತಾನು ಹೇಳುವುದನ್ನು ದಾಖಲೆಗಳ ಸಮೇತ ಮಂಡಿಸುತ್ತಾರೆ. ತಲಾಖ್, ಬುರ್ಖಾ, ಸಹಶಿಕ್ಷಣಕ್ಕೆ ಸಂಬಂಧಿಸಿದಂತೆ ಧರ್ಮಗ್ರಂಥ ಕುರಾನ್ ಏIrshadನು ಹೇಳಿದೆ ಎನ್ನುವುದನ್ನು ಎದುರಾಳಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ತಾಳ್ಮೆಯಿಂದ ಮಾಡುತ್ತಾರೆ.

 

ಇರ್ಷಾದ್ ಅವರನ್ನು ಮತ್ತೆಮತ್ತೆ ಕಾಡುವುದು ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಮ್ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎನ್ನುವುದು ಗಮನ ಸೆಳೆಯುತ್ತದೆ. ಹೀಗಾಗಿಯೇ ಈ ಪುಸ್ತಕದ ಹತ್ತರಲ್ಲಿ ಐದು ಲೇಖನಗಳು ತಲಾಖ್, ಬುರ್ಖಾ, ಹುಡುಗಿಯರ ಪ್ರತಿಭೆಯ ದಮನ ಮೊದಲಾದ ವಿಷಯಗಳ ಬಗ್ಗೆ ಇದೆ. ಹಿಂದೊಮ್ಮೆ ನನ್ನ ಮಾತುಗಳಿಂದಾಗಿ ಹುಟ್ಟಿಕೊಂಡ ವಿವಾದಕ್ಕೆ ಪ್ರತಿಕ್ರಿಯಿಸಿ ಬರೆದಿರುವ ಬುರ್ಖಾದೊಳಗೆ ಆಕೆಯ ಮೌನಕ್ಕೆ ದನಿಯಾದಾಗ ಎನ್ನುವ ಲೇಖನವನ್ನು ಮುಸ್ಲಿಮ್ ಸೋದರಿಯ ಪರಕಾಯ ಪ್ರವೇಶ ಮಾಡಿಬರೆದಿರುವುದು ಮನಮಿಡಿಯುವಂತಿದೆ.
ಇರ್ಷಾದ್ ಅವರು ಬಹುತೇಕ ಬರವಣಿಗೆಗಳಿಗೆ ಆಯ್ದುಕೊಂಡಿರುವುದು ಧರ್ಮ ಎನ್ನುವ ಸೂಕ್ಷ್ಮವಾದ ಮತ್ತು ಬಹುಬೇಗ ಭಾವನೆಗಳನ್ನು ಕೆರಳಿಸಬಲ್ಲ ವಿಷಯವನ್ನು. ಈ ಬಗ್ಗೆ ಬರೆಯುವವರು ಸಹಜವಾಗಿಯೇ ಭಾವುಕರಾಗಿಬಿಡುತ್ತಾರೆ, ತಮಗರಿವಿಲ್ಲದೆಯೇ ಆವೇಶ, ಆಕ್ರೋಶಗಳು ಹೊರಹೊಮ್ಮುತ್ತವೆ. ಆದರೆ ಇರ್ಷಾದ್ ಬರೆದಿರುವ ಲೇಖನಗಳನ್ನು ಓದುವಾಗ ಮನೆ ಹಿರಿಯನೊಬ್ಬನ ಕೈಹಿಡಿದು ಜಗ್ಗುತ್ತಿರುವ ಪುಟ್ಟಬಾಲಕ ಹೀಗ್ಯಾಕೆ ಮಾಡುತ್ತಿದ್ದೀರಿ? ಇದು ತಪ್ಪಲ್ಲವೇ? ಎಂದು ಮುಗ್ಧತೆಯಿಂದ ಕೇಳುತ್ತಿರುವಂತಿದೆ. ಇದು ಪ್ರೀತಿಸುವವರನ್ನು ಉದ್ದೇಶಿಸಿ ಪ್ರೀತಿಯಿಂದ ಬರೆದ ಲೇಖನಗಳು. ಹೀಗೆಯೇ ಎಲ್ಲರೂ ಓದಿಕೊಂಡರೆ ಲೇಖಕರ ಆಶಯ ಸಾರ್ಥಕ.

 

ಗಂಭೀರ ವಿಷಯಗಳಿಗೆ ಒಗ್ಗದ ಟಿವಿ ಮಾಧ್ಯಮದ ವರದಿಗಾರರಾಗಿ ತನ್ನೊಳಗಿನ ಲೇಖಕನನ್ನು ಕಳೆದುಕೊಳ್ಳುತ್ತಾರೋ ಏನೋ ಎನ್ನುವುದಷ್ಟೇ ಇರ್ಷಾದ್ ಬಗ್ಗೆ ಇರುವ ನನ್ನ ಏಕೈಕ ದೂರು. ನಾನು ಮುದ್ರಣ ಮಾಧ್ಯಮದ ಪಕ್ಷಪಾತಿ ಎನ್ನುವದಷ್ಟೇ ಇದಕ್ಕೆ ಕಾರಣ ಅಲ್ಲ, ಇಷರ್ಾದ್ ಅವರ ಗ್ರಹಿಕೆಯ ಸಾಮರ್ಥ್ಯ, ಬರವಣಿಗೆಯ ಶಕ್ತಿಯನ್ನು ನೋಡಿದರೆ ಅವರು ಕನ್ನಡದ ಒಬ್ಬ ಉತ್ತಮ ಪತ್ರಕರ್ತ-ಲೇಖಕರಾಗಬಹುದೆಂಬ ಭರವಸೆ ಮೂಡುತ್ತದೆ. ಇದು ನಿಜವಾಗಲಿ ಎಂದು ಹಾರೈಸುತ್ತೇನೆ.
ಅಲ್ಲೆಲ್ಲೋ ಇರುವ ಉಪ್ಪಿನಂಗಡಿಯ ಇಷರ್ಾದ್ ಅವರನ್ನು ಗುರುತಿಸಿ, ಕಳೆದುಹೋಗಬಹುದಾದ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವ ಮತ್ತು ಭಾಷಣಗಳಲ್ಲಿ ಕಳೆದುಹೋಗುತ್ತಿರುವ ನನ್ನ ಮೇಲೆ ಒತ್ತಡ ಹೇರಿ ನಾಲ್ಕು ಸಾಲು ಬರೆಯುವಂತೆ ಮಾಡಿದ ಅಹರ್ನಿಶಿಯ ಕೆ.ಅಕ್ಷತಾ ಅವರಿಗೂ ಥ್ಯಾಂಕ್ಸ್.

– ದಿನೇಶ್ ಅಮೀನ್ ಮಟ್ಟು

ಲೇಖನಗಳ ಸಂಗ್ರಹ: ಸ್ವರ್ಗದ ಹಾದಿಯಲ್ಲಿ…

ಲೇಖಕ:  ಇರ್ಷಾದ್ ಉಪ್ಪಿನಂಗಡಿ

ಪ್ರಕಾಶನ: ಅಹರ್ನಿಶಿ

ಬೆಲೆ: 70/-

ಪ್ರತಿಗಳಿಗಾಗಿ: 94491-74662