Category Archives: ಆನಂದ ಪ್ರಸಾದ್

ಮುಸುಕಿನ ಗುದ್ದಾಟ ತಂದೀತು ಅತಂತ್ರ ವಿಧಾನಸಭೆ

– ಆನಂದ ಪ್ರಸಾದ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕಳೆದ ಒಂದು ದಶಕದಿಂದ ಕರ್ನಾಟಕವು ಅತಂತ್ರ ವಿಧಾನಸಭೆಯನ್ನು ಹೊಂದಿ ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಹೀಗಾಗಿ ಅತಂತ್ರ ವಿಧಾನಸಭೆಯನ್ನು ತಂದರೆ ಮತ್ತೆ ರಾಜಕೀಯ ಸಮಯಸಾಧಕತನ ಹಾಗೂ ಚೌಕಾಸಿ ರಾಜಕೀಯ ಮೇಲುಗೈ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವುದು ನಿಶ್ಚಿತ. ಹಾಗಾಗಿ ಇದನ್ನು ತಡೆಗಟ್ಟಬೇಕಾದರೆ ಸ್ಥಿರ ವಿಧಾನಸಭೆಯನ್ನು ರೂಪಿಸುವ ರೀತಿಯಲ್ಲಿ ಜನ ಮತದಾನ ಮಾಡಬೇಕಾದುದುದು ಅನಿವಾರ್ಯ. ಸದ್ಯದ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಬಹುದು ಎಂಬ ಸೂಚನೆಯನ್ನು ನೀಡಿವೆಯಾದರೂ ಇದರಿಂದ ಮೈಮರೆತು ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ಸಿಗರು ಇಳಿದರೆ ಫಲಿತಾಂಶ ಅತಂತ್ರವಾಗಬಹುದು. ಕಾಂಗ್ರೆಸ್ ಜಯಗಳಿಸಿದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬುದು ನಿರ್ಧರಿತವಾಗಿಲ್ಲ. ಕಾಂಗ್ರೆಸ್ಸಿನ ಒಮ್ಮತದ ಕೊರತೆಯಿಂದ ಹಾಗೂ ಕಚ್ಚಾಟ ಅತಿರೇಕಕ್ಕೆ ಹೋಗುವುದನ್ನು ತಡೆಯುವ ಉಪಾಯವಾಗಿ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗುವುದು ನಡೆದುಬಂದಿರುವ ಸಂಪ್ರದಾಯ. ಹೀಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಣಯಿಸುವುದು ಹೈಕಮಾಂಡ್.

ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಹುದ್ಧೆಗೆ ಪ್ರಧಾನ ಆಕಾಂಕ್ಷಿಗಳು siddaramaiah_dharam_khargeಸಿದ್ಧರಾಮಯ್ಯ, ಪರಮೇಶ್ವರ್ ಹಾಗೂ ಖರ್ಗೆ ಮೂವರು ಇದ್ದಾರೆ. ಇವರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳಿತಾಗಬಹುದು. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪಗಳಿಲ್ಲದ, ಸೋಗಲಾಡಿತನವಿಲ್ಲದ, ನೇರ, ನಿಷ್ಠುರ ನಡೆನುಡಿಯ, ಕುಟುಂಬ ಸದಸ್ಯರು ರಾಜಕೀಯ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿರದ ಸಮಾಜವಾದಿ ಹಿನ್ನೆಲೆಯೇ ಸಿದ್ಧರಾಮಯ್ಯನವರ ಧನಾತ್ಮಕ ಅಂಶ. ಆಡಳಿತಾತ್ಮಕವಾಗಿಯೂ ಅಧಿಕಾರಿಗಳ ಮೇಲೆ ಬಿಗಿಯಾದ ಹಿಡಿತ ಸಾಧಿಸುವ ಸಾಮರ್ಥ್ಯ ಇವರಿಗೆ ಇದೆ. ಹೀಗಾಗಿ ಇವರು ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಆದರೆ ಕಾಂಗ್ರೆಸ್ಸಿನ ಒಳಸುಳಿಗಳು ಇವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತವೆಯೋ ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ.

ಮಲ್ಲಿಕಾರ್ಜುನ ಖರ್ಗೆಯೂ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಇವರು ತಮ್ಮ ಪುತ್ರನನ್ನು ರಾಜಕೀಯದಲ್ಲಿ ತೊಡಗಿಸಿದ ಆರೋಪ ಹೊಂದಿದ್ದಾರೆ ಹಾಗೂ ಇವರ ಪುತ್ರ ಪಕ್ಷದಲ್ಲಿ ಹಸ್ತಕ್ಷೇಪ ನಡೆಸುವ ಹಾಗೂ ಇತರರನ್ನು ಮೂಲೆಗುಂಪು ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಖರ್ಗೆಯವರು ವಿಚಾರಶೀಲ, ಕಂದಾಚಾರಗಳಿಗೆ ಮಹತ್ವ ಕೊಡದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರಿಗೂ ಆಡಳಿತದಲ್ಲಿ ಹಿಡಿತ ಸಾಧಿಸುವ ಕಲೆ ಕರಗತವಾಗಿದೆ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸರಾಸರಿ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಇವರ ಮಾತುಗಾರಿಕೆ ಮಾತ್ರ ಆಕರ್ಷಕವಾಗಿಲ್ಲ ಮತ್ತು ಬಹಳ ನಿಧಾನವಾಗಿ ಬಾವಿಯ ಆಳದಿಂದ ಮಾತಾಡಿದಂತೆ ಇವರ ಮಾತುಗಳು ಕಂಡುಬರುತ್ತವೆ.

ಇನ್ನೊಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಜಿ. ಪರಮೇಶ್ವರ್. ಇವರು ಕೂಡ ಕಾಂಗ್ರೆಸ್ಸಿನಲ್ಲಿ ದೀರ್ಘ ರಾಜಕೀಯ ಅನುಭವ ಹೊಂದಿದವರೇ. ಭ್ರಷ್ಟಾಚಾರದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗೆಯೇ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸಾಮಾನ್ಯ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಮಾಜಿ ಮುಖ್ಯಮಂತ್ರಿ smkrsihwigಎಸ್ಸೆಂ ಕೃಷ್ಣ ಒಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಇವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಹುದ್ಧೆ, ರಾಜ್ಯಪಾಲ ಹುದ್ಧೆ ಹೀಗೆ ಉನ್ನತ ಸ್ಥಾನಗಳನ್ನು ಏರಿರುವುದರಿಂದ ಹಾಗೂ ವಯಸ್ಸೂ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಯೋಗ್ಯವಲ್ಲ ಹಾಗೂ ಜನರೂ ಅದನ್ನು ಮೆಚ್ಚುವುದಿಲ್ಲ. ಹೀಗಾಗಿ ಅವರು ರಾಜಕೀಯದಿಂದ ನಿವೃತ್ತಿಯಾಗುವುದು ಸೌಜನ್ಯದ ಹಾಗೂ ಸಜ್ಜನಿಕೆಯ ನಡವಳಿಕೆ ಆದೀತು.

ಕಾಂಗ್ರೆಸ್ಸಿನ ಪ್ರಧಾನ ಮುಖ್ಯಮಂತ್ರಿ ಆಕಾಂಕ್ಷಿಗಳು ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಎಳೆಯದೆ, ಭಿನ್ನಮತ ತೋರದೆ ಸಿಕ್ಕಿದ ಹುದ್ಧೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿರುವುದು ರಾಜ್ಯದ ಇಂದಿನ ಅತೀ ಅಗತ್ಯಗಳಲ್ಲೊಂದು. ಇಲ್ಲದೆ ಹೋದರೆ ರಾಜ್ಯದ ಜನ ಮತ್ತೆ ಅತಂತ್ರ ವಿಧಾನಸಭೆಯಂಥ ಪರಿಣಾಮಗಳನ್ನೇ ನೀಡಬಹುದು. ಕಾಂಗ್ರೆಸ್ಸಿಗರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಹಾಗೂ ಚುನಾವಣಾಪೂರ್ವ ಸಮೀಕ್ಷೆಗಳ ಅಭಿಪ್ರಾಯದಿಂದ ಮೈಮರೆತು ಕಚ್ಚಾಟದಲ್ಲಿ ತೊಡಗಿದರೆ ರಾಜ್ಯದ ಜನ ಮತ್ತೆ ಅತಂತ್ರ ಫಲಿತಾಂಶ ನೀಡುವ ಸಾಧ್ಯತೆ ದಟ್ಟವಾಗಿದೆ. ಜನರ ಅಭಿಪ್ರಾಯವನ್ನು ಕಡೆಗಣಿಸಿದರೆ, ತಮ್ಮನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂಬ ಅಹಂಕಾರದಿಂದ ನಡೆದುಕೊಂಡರೆ ಅತಂತ್ರ ವಿಧಾನಸಭೆಯ ಫಲಿತಾಂಶವೇ ಬಂದೀತು. ಸ್ಥಳೀಯ ಸಂಸ್ಥೆ ಚುನಾವಣಾ ವಿಜಯವನ್ನು ಕಾಂಗ್ರೆಸ್ಸಿಗರು ಅಲ್ಲಲ್ಲಿ ಅದ್ಧೂರಿಯಾಗಿ ಆಚರಿಸಿದುದು ಕಂಡುಬಂದಿದೆ. ಇಂಥ ಆಚರಣೆಗಳ ಅಗತ್ಯವಿಲ್ಲ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ದೊಡ್ಡ ದೊಡ್ಡ ಬ್ಯಾನರುಗಳನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಕಿರುವುದು ಕೂಡ ಕಂಡುಬರುತ್ತದೆ. ಇಂಥ ತೋರಿಕೆ ಹಾಗೂ ಆಡಂಬರದ ಅಗತ್ಯ ಇಲ್ಲ. ಇಂಥವುಗಳನ್ನು ತಡೆದು ಜನರಿಗಾಗಿ ಕೆಲಸ ಮಾಡುವುದನ್ನು ಪ್ರವೃತ್ತಿಯನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಳ್ಳುವುದು ಅಗತ್ಯ.

ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕ

– ಆನಂದ ಪ್ರಸಾದ್

ಬಿಜೆಪಿ ಅಂತರಿಕ ಪ್ರಜಾಪ್ರಭುತ್ವವಿರುವ ಪಕ್ಷ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ. ಅದು ತಾನು ಬೇರೆ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಉಳಿದ ಪಕ್ಷಗಳಿಗಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕವಾಗಿದೆ. BJP-RSS-Gadkariಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದವರು ಆಡಳಿತ ನಡೆಸಬೇಕಾದುದು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಿಜೆಪಿಯಲ್ಲಿ ಜನರಿಂದ ಚುನಾಯಿತರಾದವರ ಮೇಲೆ ಅಧಿಕಾರ ಚಲಾಯಿಸುವ ಜನರಿಂದ ಚುನಾಯಿತವಾಗಿರದ ಸಂಘದ ಮುಖಂಡರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಸಂವಿಧಾನಬಾಹಿರ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಪಕ್ಷದ ಸದಸ್ಯರು ಚುನಾವಣೆಯ ಮೂಲಕ ಆರಿಸಬೇಕಾದುದು ಸರಿಯಾದ ಕ್ರಮ. ಆದರೆ ಬಿಜೆಪಿಯಲ್ಲಿ ಸಂಘದ ಮುಖಂಡರು ಅಧ್ಯಕ್ಷರನ್ನು ಹೇರುವುದನ್ನು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ತಮಗೆ ನಿಷ್ಠರಾಗಿರುವವರನ್ನು, ತಮ್ಮ ಆಜ್ಞೆ ಪಾಲಿಸುವವರನ್ನು ಸಂಘದ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬರುವಂತೆ ಮಾಡಿ ರಾಜ್ಯದ ಆಡಳಿತದ ಮೇಲೆ ತಮ್ಮ ಪ್ರಭಾವ ಬೀರುವುದನ್ನು ನಮ್ಮ ರಾಜ್ಯದಲ್ಲಿ ಕಾಣುತ್ತಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪಾಳೇಗಾರಿಕೆ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇದನ್ನು ಪ್ರಜೆಗಳು ಮತದಾನ ಮಾಡುವಾಗ ಗಂಭೀರವಾಗಿ ಯೋಚಿಸಬೇಕಾಗಿದೆ. ಬಿಜೆಪಿಯ ಈ ನಡವಳಿಕೆಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರವಾದ ಅಪಾಯ ಉಂಟಾಗುವ ಸಂಭವ ಇದೆ. ಎಲ್ಲಿ ಸಂಘ ಪರಿವಾರದ ಪ್ರಭಾವ ಹೆಚ್ಚಾಗಿದೆಯೋ ಅಲ್ಲೆಲ್ಲ ಸರಕಾರಿ ಯಂತ್ರ ಸಂಘದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡುಬರುತ್ತದೆ. ಯಾರು ಸಂಘದ ನಿಲುವುಗಳನ್ನು ವಿರೋಧಿಸುತ್ತಾರೆಯೋ ಅವರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುವ ಪ್ರವೃತ್ತಿ ಕಂಡುಬರುತ್ತಾ ಇದೆ. ಇದು ಬಿಜೆಪಿ ಹಾಗೂ ಸಂಘ ಪರಿವಾರ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದೇಶ ಯಾವ ರೀತಿ ಸರ್ವಾಧಿಕಾರಕ್ಕೆ ಒಳಗಾಗಬೇಕಾಗಿ ಬರಬಹುದು ಎಂಬುದರ ಸ್ಪಷ್ಟ ಮುನ್ಸೂಚನೆಯಾಗಿದೆ.

ನಿಜ, ದೇಶದಲ್ಲಿರುವ ಪ್ರಧಾನ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಾಗಲೀ, ಇತರ ಇತರ ಪ್ರಾದೇಶಿಕ ಪಕ್ಷಗಳಲ್ಲಾಗಲೀ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಅವುಗಳು ಬಿಜೆಪಿಯಷ್ಟು ದಬ್ಬಾಳಿಕೆಯ ವಾತಾವರಣವನ್ನು ದೇಶದಲ್ಲಿ ಇದುವರೆಗೆ ಉಂಟುಮಾಡಿಲ್ಲ. ಬಿಜೆಪಿಯ ಹಲವು ನಾಯಕರಿಗೆ ಸೌಮ್ಯವಾಗಿ ಮಾತಾಡುವುದೇ ಗೊತ್ತಿಲ್ಲ. ಇತರರ ಮೇಲೆ ಹಾರಿ ಆಕ್ರಮಣ ಮಾಡುವ ರೀತಿಯಲ್ಲಿ ಉಗ್ರ ಸ್ವರದಲ್ಲಿ ಮಾತಾಡುವುದನ್ನು ನಾವು ಕಾಣಬಹುದು. ಇದು ಪ್ರಜಾಪ್ರಭುತ್ವಕ್ಕೆ ಯೋಗ್ಯವಾದ ನಡವಳಿಕೆಯಲ್ಲ. ಬಿಜೆಪಿಯ ಒಂದು ರಾಜ್ಯದ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಆ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಒಡ್ಡೋಲಗದ ರೀತಿಯಲ್ಲಿ ನೆರೆಯುವುದನ್ನು ನೋಡಿದರೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪಕ್ವವಾದ ನಡವಳಿಕೆಯನ್ನು ರೂಢಿಸಿಕೊಂಡಿಲ್ಲ ಎಂಬುದು ಕಂಡುಬರುತ್ತದೆ. ಕಾಂಗ್ರೆಸ್ ಪಕ್ಷವಾಗಲಿ ಬೇರಾವುದೇ ಪಕ್ಷವಾಗಲೀ ಈ ರೀತಿ ರಾಜಪ್ರಭುತ್ವದ ಶೈಲಿಯನ್ನು ಅಳವಡಿಸಿಕೊಂಡಿಲ್ಲ.

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪುರೋಹಿತಶಾಹಿ ಕಂದಾಚಾರಗಳನ್ನು ಸರ್ಕಾರೀ ಮಟ್ಟದಲ್ಲಿ ಹೆಚ್ಚು ಹೆಚ್ಚು ಜಾರಿಗೆ ತರಲಾಗುತ್ತಿರುವುದು ಕೂಡ ಉತ್ತಮ ಬೆಳವಣಿಗೆಯಲ್ಲ. ಮಂತ್ರಿಗಳು, ಮುಖ್ಯಮಂತ್ರಿಗಳು ತಮ್ಮ ಅಧಿಕಾರ ವಹಿಸಿಕೊಳ್ಳುವಾಗ ಪೂಜೆ, ಹೋಮ ಹವನಗಳನ್ನು ಮಾಡಿಸುವುದು, ವಾಸ್ತುವಿನ ಹೆಸರಿನಲ್ಲಿ ಸರ್ಕಾರಿ ನಿವಾಸಗಳನ್ನು, ಕಟ್ಟಡಗಳನ್ನು ಬೇಕಾಬಿಟ್ಟಿಯಾಗಿ ಜನತೆಯ ತೆರಿಗೆಯ ಹಣದಲ್ಲಿ ನಿರ್ಲಜ್ಜವಾಗಿ ಬದಲಾಯಿಸುವುದು ಇವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯೋಗ್ಯರಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಂದು ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಪ್ರಬಲವಾದ ರಾಷ್ಟ್ರೀಯ ಪಕ್ಷವೊಂದರ ಅವಶ್ಯಕತೆ ಇರುವುದು 750px-BJP-flag.svg[1]ನಿಜವಾದರೂ ಆ ಸ್ಥಾನವನ್ನು ತುಂಬಲು ಬಿಜೆಪಿ ಯೋಗ್ಯವಾದ ಪಕ್ಷವಾಗಿ ಕಂಡುಬರುತ್ತಿಲ್ಲ. ಏಕೆಂದರೆ ಬಿಜೆಪಿ ಜನಪರ ಹೋರಾಟಗಳ ಮೂಲಕ ದೇಶವ್ಯಾಪಿ ಬೆಳೆದ ಪಕ್ಷವಲ್ಲ. ಬಿಜೆಪಿ ಜನತೆಯ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸುಲಭವಾಗಿ ಬೆಳೆದಿರುವ ಕಾರಣ ಆ ಪಕ್ಷದವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಶ್ಯಕತೆಗಳು ಏನು ಎಂಬುದೇ ತಿಳಿದಿಲ್ಲ. ಬಿಜೆಪಿ ಈ ರೀತಿ ಅಸಹಜವಾಗಿ ಬೆಳೆದ ಕಾರಣ ಬೇರೆ ರಾಷ್ಟ್ರೀಯ ಪಕ್ಷವೊಂದರ ಬೆಳವಣಿಗೆ ಆಗುವುದು ಕಷ್ಟ. ಏಕೆಂದರೆ ಈಗಾಗಲೇ ಎರಡು ಬಲಿಷ್ಠ ಪಕ್ಷಗಳು ಇರುವಲ್ಲಿ ಮೂರನೆಯ ಪಕ್ಷವೊಂದನ್ನು ಬೆಳೆಸುವುದು ನಮ್ಮ ದೇಶದಲ್ಲಿ ಬಹಳ ಕಷ್ಟವಿದೆ. ಜನರಲ್ಲಿ ಹೊಸ ಚಿಂತನೆಗಳಾಗಲೀ, ಯೋಚಿಸಿ ಮತ ನೀಡುವ ಪ್ರಭುದ್ಧತೆಯಾಗಲೀ ಬೆಳೆದಿರದ ಕಾರಣ ಹೀಗಾಗುತ್ತದೆ. ಜನರಲ್ಲಿ ಹೊಸ ಚಿಂತನೆಗಳಿಗೆ ಸ್ಪಂದಿಸುವ ವಿಚಾರಶೀಲತೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಸ್ತಿತ್ವದಲ್ಲಿ ಇರುವ ಪಕ್ಷಗಳು ಯೋಗ್ಯವಾಗಿಲ್ಲ ಎಂದು ಕಂಡುಬಂದರೆ ಹೊಸ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅದನ್ನು ನಮ್ಮ ಜನ ಉಪಯೋಗಿಸಿಕೊಂಡು ಪ್ರಭುದ್ಧರಾಗಿ ಒಗ್ಗಟ್ಟಿನಿಂದ ಮತದಾನವನ್ನು ಹೊಸ ವ್ಯವಸ್ಥೆಯ ಪರವಾಗಿ ಮಾಡಿದರೆ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಬಹುದು. ಹೊಸ ಪ್ರಯೋಗಗಳಿಗೆ ನಾವು ಸ್ಪಂದಿಸುತ್ತಾ ಬಂದರೆ ಕಾಲಾನುಕ್ರಮದಲ್ಲಿ ವ್ಯವಸ್ಥೆ ಬದಲಾಗಿಯೇ ಆಗುತ್ತದೆ ಅದಕ್ಕಾಗಿ ನಾವು ಎಚ್ಚತ್ತುಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಪಕ್ಷಗಳನ್ನು ತಿರಸ್ಕರಿಸಿ ಹೊಸ ಪಕ್ಷಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಬೇಕಾದ ಅಗತ್ಯ ಇದೆ.

ಶಾಪವಿಮೋಚನೆಯತ್ತ ಕರ್ನಾಟಕ

– ಆನಂದ ಪ್ರಸಾದ್

ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಧಾರ್ಮಿಕ ಮೂಲಭೂತವಾದಿ ಬಿಜೆಪಿ ಹಾಗೂ ಸಂಘ ಪರಿವಾರದ ರೂಪದಲ್ಲಿ ವಕ್ಕರಿಸಿದ್ದ ಶಾಪ ವಿಮೋಚನೆಯಾಗುವ ದಿನಗಳು ಹತ್ತಿರುವಾಗುತ್ತಿವೆಯೇ ಎಂದು ಇತ್ತೀಚೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನೋಡಿದಾಗ ಅನಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಇಂಥ ದಿನಗಳಿಗಾಗಿ ಕರ್ನಾಟಕದ ಪ್ರಜ್ಞಾವಂತರು ಹಾಗೂ ಪ್ರಗತಿಪರ ನಿಲುವಿನ ಜನ ಕಾಯುತ್ತಿದ್ದಾರೆ. ಏನೆಲ್ಲಾ ಕಸರತ್ತು, ಅಧಿಕಾರದ ದುರುಪಯೋಗ, election_countingಧಾರ್ಮಿಕ ವೇಷ ತೊಟ್ಟು ಕುಣಿದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಎರಡನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದೆ. ಇದು ಸಂಘ ಪರಿವಾರದ ಕಪಿಮುಷ್ಟಿಯಿಂದ ರಾಜ್ಯ ಮುಕ್ತಿಪಡೆಯುವ ಆಶಾಭಾವನೆಯನ್ನು ಮೂಡಿಸಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ಆಡಳಿತದ ಎಲ್ಲಾ ಹಂತಗಳಲ್ಲೂ ಆವರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಮಂಕಾಗಿತ್ತು. ಇದರಿಂದ ಈ ಭಾಗ ಬಿಡುಗಡೆಯಾಗುವ ಲಕ್ಷಣಗಳು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಕಂಡುಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಧಾರ್ಮಿಕ ಮೂಲಭೂತವಾದದ ಪ್ರಯೋಗಶಾಲೆಯಾಗಿ ಈ ಎರಡು ಜಿಲ್ಲೆಗಳಲ್ಲಿ ಪ್ರಜ್ಞಾವಂತರಿಗೆ ಸಂಘ ಪರಿವಾರ ಹಾಗೂ ಬಿಜೆಪಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುತ್ತಿದ್ದದ್ದು ಇಲ್ಲಿ ಮುಕ್ತ ಚಿಂತನೆಗೆ ಅವಕಾಶವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಆಡಳಿತದಲ್ಲೂ ಹಸ್ತಕ್ಷೇಪ ನಡೆಸಲಾರಂಭಿಸಿದ ಸಂಘದ ಮುಖಂಡರು ಚುನಾವಣೆಗೆ ನಿಂತು ಗೆಲ್ಲದೆಯೇ ತಮ್ಮ ಸರ್ವಾಧಿಕಾರ ಮನೋಭಾವನೆಯನ್ನು ಆಡಳಿತದಲ್ಲಿ ತೋರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಸಮರ್ಪಕ ಪರ್ಯಾಯ ರಾಜಕೀಯ ಇಲ್ಲದೆ ಹೋದುದೇ ಇಂಥ ಒಂದು ಅಪಾಯಕಾರೀ ಬೆಳವಣಿಗೆಗೆ ಕಾರಣವಾಗಿದೆ. ಧಾರ್ಮಿಕವಾಗಿ ಹೆಚ್ಚು ನಂಬಿಕೆ ಉಳ್ಳ ಕರ್ನಾಟಕದ ಜನ ಧಾರ್ಮಿಕತೆಯ ವೇಷ ತೊಟ್ಟ ಬಿಜೆಪಿ ಹಾಗೂ ಸಂಘ ಪರಿವಾರದ ಆಡಳಿತ ಬಂದರೆ ಹೆಚ್ಚು ಉತ್ತಮ ಆಡಳಿತ ನೀಡಬಹುದೇನೋ ಎಂಬ ಭ್ರಮೆಗೆ ಸಿಲುಕಿ ಇಡೀ ರಾಜ್ಯವೇ ಐದು ವರ್ಷಗಳ ಕಾಲ ಮೇರೆ ಇಲ್ಲದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯ ಹಗಲುದರೋಡೆಗೆ ಒಳಗಾಗಿ ನರಳುವಂತೆ ಆಯಿತು.srhiremath ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರ ಪ್ರಯತ್ನ ಇಲ್ಲದೆ ಇದ್ದಿದ್ದರೆ ಗಣಿಧಣಿಗಳು ಜೈಲಿಗೆ ಹೋಗದೆ ಈಗಲೂ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಸದ್ಯ ಅವರು ಜೈಲಿನಲ್ಲಿರುವ ಕಾರಣ ರಾಜ್ಯದ ರಾಜಕೀಯ ಸ್ವಲ್ಪವಾದರೂ ಸುಧಾರಿಸಿದೆ. ರೆಡ್ಡಿಯ ಅಕ್ರಮ ಗಣಿಗಾರಿಕೆಯ ಹಣದ ಬಲದಲ್ಲಿ ಕಟ್ಟಿದ ಬಿ.ಎಸ್. ಆರ್. ಕಾಂಗ್ರೆಸ್ ಪಕ್ಷದ ಗೋಮುಖವ್ಯಾಘ್ರತನವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿಯ ಜನ ಹಿಮ್ಮೆಟ್ಟಿಸಿರುವುದು ಇಡೀ ರಾಜ್ಯವೇ ನಿಟ್ಟುಸಿರುಬಿಡುವ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಪಕ್ಷವು ಚುನಾವಣೆಗಳಲ್ಲಿ ಬಿಜೆಪಿಯ ಸಮಬಲಕ್ಕೆ ಬರುವಷ್ಟು ಸ್ಥಾನಗಳನ್ನು ಗಳಿಸಿರುವುದು ರಾಜ್ಯದ ಮಟ್ಟಿಗೆ ಇನ್ನೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಮುಂಬರುವ ದಿನಗಳಲ್ಲಿ ಬಿಜೆಪಿಯಂಥ ಧಾರ್ಮಿಕ ಮೂಲಭೂತವಾದಿ ಪಕ್ಷದ ಜೊತೆ ಕೈ ಜೋಡಿಸದೆ ಅವಕಾಶವಾದಿ ರಾಜಕಾರಣದಿಂದ ದೂರ ಉಳಿದರೆ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯುವ ಸಂಭವ ಇದೆ. ಒಂದು ವೇಳೆ ಅಧಿಕಾರದ ಆಸೆಗೆ ಧಾರ್ಮಿಕ ಮೂಲಭೂತವಾದಿ ಪಕ್ಷವಾದ ಬಿಜೆಪಿ ಜೊತೆ ಕೈ ಜೋಡಿಸಿದರೆ ಅದರ ಬೆಳವಣಿಗೆ ಸ್ಥಗಿತವಾಗಲಿದೆ.

ಯಡಿಯೂರಪ್ಪ ಯಡಿಯೂರಪ್ಪ ನೇತೃತ್ವದ ಕೆಜೆಪಿಯೂ ಮಹತ್ವದ ಸಾಧನೆ ತೋರಿಸುವಲ್ಲಿ ವಿಫಲವಾಗಿದೆ. ಯಾವುದೇ ತತ್ವ, ಸಿದ್ಧಾಂತ ಇಲ್ಲದ ಭ್ರಷ್ಟತೆಯ ಗರ್ಭದಿಂದ ಮೂಡಿಬಂದ ಕೆಜೆಪಿಯೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ತೋರಿಸುವ ಸಂಭವ ಇಲ್ಲ. ಇದು ಕೊನೆಗೆ ಬಿಜೆಪಿಯಲ್ಲಿ ವಿಲೀನವಾಗುವ ಸಂಭವವೇ ಹೆಚ್ಚು. ಪಕ್ಷೇತರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಿ ಬಂದಿರುವುದು ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದರ ದ್ಯೋತಕವಾಗಿ ಕಾಣುತ್ತದೆ. ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಭವ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತೋರಿಸುತ್ತಿವೆ. ಇದು ನಿಜವಾಗುವ ಸಂಭವವೇ ಹೆಚ್ಚು ಏಕೆಂದರೆ ಸದ್ಯಕ್ಕೆ ಬೇರೆ ಪರ್ಯಾಯ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗುವಷ್ಟು ಬೆಳೆದಿಲ್ಲ. ಸಮೀಕ್ಷೆಗಳು ಜೆಡಿಎಸ್ ವಿಧಾನಸಭಾ ಚುನಾವಣೆಗಳಲ್ಲಿ ಮೊದಲು ಇದ್ದಷ್ಟೇ ಸ್ಥಾನಗಳನ್ನು ಗಳಿಸಬಹುದು ಎಂದು ಹೇಳುತ್ತವೆಯಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಗೆ ಸಮನಾಗಿ ಸಾಧನೆ ಮಾಡಿರುವುದು ನೋಡಿದರೆ ಅದು ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಮೂಲಭೂತವಾದಿ ಬಿಜೆಪಿ ಜೊತೆಗೂಡದೆ ಸಮರ್ಥ voteಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಐದು ವರ್ಷಗಳ ನಂತರ ಜೆಡಿಎಸ್ ಅಧಿಕಾರಕ್ಕೆ ಬರುವಷ್ಟು ಬೆಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡಿರುವ ಜನ ಅದರ ಭ್ರಷ್ಟತೆ, ಅಧಿಕಾರದಾಹ, ಸರ್ವಾಧಿಕಾರಿ ಮನೋಭಾವ, ಅದರ ಸಂಘ ಪರಿವಾರಕ್ಕೆ ಸಂವಿಧಾನಬಾಹಿರವಾಗಿ ಗುಲಾಮನಂತೆ ನಡೆದುಕೊಳ್ಳುವ ರೀತಿಯಿಂದ ರೋಸಿಹೊಗಿರುವುದು ಸ್ಪಷ್ಟ. ಹೀಗಾಗಿ ಇದು ಮೊದಲಿನಂತೆ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಂಭವ ಅಧಿಕವಾಗಿದೆ ಮತ್ತು ಹಾಗಾದರೆ ಕನ್ನಡನಾಡಿಗೆ ಒಳಿತಾಗಲಿದೆ. ಕನ್ನಡನಾಡು ಮೊದಲಿನಿಂದಲೂ ಮೂಲಭೂತವಾದಿಗಳ ತವರು ಆಗಿರಲಿಲ್ಲ. ಇಲ್ಲಿ ಸಾಕಷ್ಟು ಪ್ರಗತಿಪರ ನಿಲುವಿನ ಶಕ್ತಿಗಳು ಹಾಗೂ ಮಾಧ್ಯಮಗಳು ಇವೆ. ಜನ ಧಾರ್ಮಿಕತೆಯ ವೇಷ ಹಾಕಿದ ಕಪಟಿಗಳ ಬಗ್ಗೆ ಎಚ್ಚತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ಅಗತ್ಯವಾಗಿ ಆಗಬೇಕಾಗಿರುವ ಬೆಳವಣಿಗೆಯೂ ಹೌದು.

ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

– ಆನಂದ ಪ್ರಸಾದ್

ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಧ್ಯಾತ್ಮಿಕ ಪರಂಪರೆ ಹೊಂದಿದೆ ಹಾಗೂ ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಕೃತಿ ಉಳ್ಳ ದೇಶವೆಂದು ಹಿಂದುತ್ವವಾದಿಗಳು ಅವಕಾಶ ಸಿಕ್ಕಿದಾಗಲೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಮ್ಮ ದೇಶದ ಎಲ್ಲಾ ರಂಗಗಳಲ್ಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಜನತೆಗೆ ಆಗುತ್ತಾ ಇರುತ್ತದೆ. ನಮ್ಮ ದೇಶದ ಜನ ದೇವರಲ್ಲಿ ಅಪಾರವಾದ ಭಕ್ತಿ ಹಾಗೂ ಶ್ರದ್ಧೆ ತೋರಿಸುತ್ತಾರೆಯೇ ವಿನಃ ಅದೇ ಶ್ರದ್ಧೆ ಹಾಗೂ ಕಾಳಜಿಯನ್ನು ತಮ್ಮ ಸಹಮಾನವರ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ ಆಧ್ಯಾತ್ಮಿಕ ಶ್ರದ್ಧೆ ಹಾಗೂ ದೇವರ ಭಕ್ತಿಗೂ ಹಾಗೂ ನಾಗರಿಕತೆಯ ವಿಕಾಸಕ್ಕೂ ಸಂಬಂಧ ಇರುವಂತೆ ಕಾಣುವುದಿಲ್ಲ. tirupati-brahmotsavತೀರಾ ಇತ್ತೀಚೆಗಿನ ಕೆಲವು ಶತಮಾನಗಳ ಇತಿಹಾಸವುಳ್ಳ ಅಮೇರಿಕಾ ಹಾಗೂ ಯೂರೋಪಿನ ದೇಶಗಳು ನಾಗರಿಕತೆಯಲ್ಲಿ ನಮಗಿಂತ ಮುನ್ನಡೆ ಸಾಧಿಸಿರುವುದು ಕಂಡುಬರುತ್ತದೆ. ಅಲ್ಲಿನ ದೇಶಗಳು ತಮ್ಮ ನಾಗರಿಕರ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿವೆ. ಅಲ್ಲಿನ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ನಮ್ಮ ದೇಶಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಕಾಳಜಿಯನ್ನು ತಮ್ಮ ದೇಶದ ಪ್ರಜೆಗಳ ಬಗ್ಗೆ ತೋರಿಸುತ್ತಾರೆ. ತೀರಾ ಇತ್ತೀಚೆಗಿನ ಇತಿಹಾಸ ಉಳ್ಳ ಅಲ್ಲಿನ ದೇಶಗಳು ಇದನ್ನು ಸಾಧಿಸಿರುವುದು ಅಲ್ಲಿನ ನಾಗರಿಕತೆ ನಮ್ಮ ದೇಶಕ್ಕಿಂತ ಮುಂದುವರಿದಿರುವುದನ್ನು ತೋರಿಸುತ್ತದೆ.

ನಮ್ಮ ದೇಶದಲ್ಲಿ ರಾಜಕಾರಣಿಗಳಾಗಲಿ, ಸರ್ಕಾರೀ ಅಧಿಕಾರಿಗಳಾಗಲೀ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ದೈವಭಕ್ತಿ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ನಮ್ಮ ಜನರಲ್ಲಿ ಇರುವಂತೆ ಕಂಡುಬರುತ್ತದೆ. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಭ್ರಷ್ಟಾಚಾರದಲ್ಲಿ ಇಡೀ ಪ್ರಪಂಚದಲ್ಲೇ ಮೊದಲ ಕೆಲ ಸ್ಥಾನಗಳಲ್ಲೇ ಇರುತ್ತಾರೆ. ದೈವಭಕ್ತರಲ್ಲಿ ತಮ್ಮ ಸಹಮಾನವರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದೆ ಹೋದರೆ ದೈವಭಕ್ತಿ ಇದ್ದು ಏನು ಪ್ರಯೋಜನ? ಯುರೋಪ್ ಹಾಗೂ ಅಮೇರಿಕಾ ದೇಶಗಳ ಉದ್ಯಮಿಗಳು ನಮ್ಮ ದೇಶದ ಉದ್ಯಮಿಗಳಷ್ಟು ಪರಮ ದೈವಭಕ್ತರಲ್ಲದಿದ್ದರೂ tirupati-brahmotsavತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜದ ಒಳಿತಿಗೆ ದಾನ ಮಾಡುವ ಕಾಳಜಿ ತೋರಿಸುತ್ತಾರೆ. ಆದರೆ ಪರಮ ದೈವಭಕ್ತರಾಗಿರುವ ನಮ್ಮ ಕೋಟ್ಯಾಧಿಪತಿ ಉದ್ಯಮಿಗಳು ಸಮಾಜದ ಒಳಿತಿಗೆ ದಾನ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ನಿಜವಾಗಿ ಪರಮ ದೈವಭಕ್ತರಲ್ಲಿ ಈ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಉದ್ಯೋಗದ ಹಿನ್ನೆಲೆಯಲ್ಲಿ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ವಿದ್ಯಾವಂತ ವರ್ಗ ಕೂಡ ವ್ಯಕ್ತಿಯ ಉದ್ಯೋಗ ನೋಡಿಕೊಂಡು ಮೇಲುಕೀಳು ತಾರತಮ್ಯ ತೋರಿಸುವ ಪ್ರವೃತ್ತಿ ಎದ್ದು ಕಾಣುತ್ತದೆ. ಜಾತಿ ತಾರತಮ್ಯ ಇದ್ದದ್ದೇ. ಇದು ನಾವು ಪಾಶ್ಚಾತ್ಯರಿಗಿಂತ ನಾಗರಿಕತೆಯಲ್ಲಿ ಹಿಂದುಳಿದಿರುವುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗುವ ನಮಗಿಂತ ಕೆಲವು ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯರು ತಮ್ಮ ನಾಗರಿಕರ ನಡುವೆ ಪರಸ್ಪರ ಸಾಧಿಸಿರುವ ಈ ಸಮಾನತೆ ಅವರನ್ನು ನಾಗರಿಕತೆಯಲ್ಲಿ ದೈವಭಕ್ತ ನಮ್ಮ ಸಮಾಜಕ್ಕಿಂತ ಎಷ್ಟೋ ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಾಮಾಣಿಕತೆ, ಸಹಮಾನವರಿಗೆ ತೋರಿಸುವ ಕಾಳಜಿಯಲ್ಲೂ ಪಾಶ್ಚಾತ್ಯ ದೇಶಗಳ ನಾಗರಿಕರು ನಮಗಿಂತ ಎಷ್ಟೋ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ನಮ್ಮ ದೇಶದಲ್ಲಿ ನಾವು ಯಾವುದಾದರೂ ವ್ಯಕ್ತಿಗಳಿಗೆ ಅಥವಾ ಏನಾದರೂ ಮಾಹಿತಿ ಕೇಳಿ ಪತ್ರ ಬರೆದರೆ ಬಹಳಷ್ಟು ಸಂದರ್ಭಗಳಲ್ಲಿ ಉತ್ತರ ಬರುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಜನರಿಗೆ ಯಾವುದೇ ಮಾಹಿತಿ ಕೇಳಿ ಪತ್ರ ಬರೆದರೂ ಹೆಚ್ಚಿನ ಸಂದರ್ಭಗಳಲ್ಲೂ, ನಮಗೆ ಅವರು ಪರಿಚಿತರಲ್ಲದಿದ್ದರೂ ಉತ್ತರ ಬರುತ್ತದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆ ಕೈಗೊಂಡರೂ ನಿರಾಶ್ರಿತಗೊಂಡವರಿಗೆ, ಸಂತ್ರಸ್ತರಿಗೆ ದಶಕಗಳೇ ಕಳೆದರೂ ಸಮರ್ಪಕ ಪರಿಹಾರ ದೊರೆಯುವುದಿಲ್ಲ. ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಎಂದೂ ಸ್ಪಂದಿಸುವುದಿಲ್ಲ. maha-kumbhಆದರೆ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರಿಗೆ, ಯೋಜನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಶೀಘ್ರ ಸ್ಪಂದಿಸುತ್ತಾರೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯುನ್ನತ ನಾಗರಿಕತೆ, ಸಂಸ್ಕೃತಿ ಎಂದು ನಮ್ಮ ಹಿಂದುತ್ವವಾದಿಗಳು ಹಾಗೂ ಆಧ್ಯಾತ್ಮವಾದಿಗಳು ಇಲ್ಲಿ ಜಂಭ ಕೊಚ್ಚುತ್ತಾರಾದರೂ ಇಲ್ಲಿನ ಅಧಿಕಾರಿಗಳ ಜನಪರ ಕಾಳಜಿ ಶೂನ್ಯದ ಸಮೀಪ ಇರುತ್ತದೆ. ಅಧ್ಯಾತ್ಮ ಹಾಗೂ ದೈವಭಕ್ತಿಗೂ ಜನರ ನಾಗರಿಕತೆಯ ಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇದರಿಂದ ಕಂಡುಬರುತ್ತದೆ. ನಮ್ಮ ದೈವಭಕ್ತಿ ಹಾಗೂ ಆಧ್ಯಾತ್ಮದ ಅತಿ ಗೀಳು ನಮ್ಮಲ್ಲಿ ಉನ್ನತ ನಾಗರಿಕತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿಲ್ಲ. ರಾಜಕೀಯ ನಾಯಕರಲ್ಲಿ ಧರ್ಮ, ದೈವಭಕ್ತಿ ಬಗ್ಗೆ ಬಹಳ ಮಾತಾಡುವವರಲ್ಲಿಯೇ ಸಹಮಾನವರ ಬಗ್ಗೆ ಕಾಳಜಿ ಕಡಿಮೆ ಇರುವುದು ಕಂಡುಬರುತ್ತದೆ. ಧರ್ಮ, ದೇವರ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಪಕ್ಷಗಳಲ್ಲೇ ಹೆಚ್ಚಿನ ಭ್ರಷ್ಟಾಚಾರ, ಸಂವೇದನಾಹೀನತೆ ಇರುವ ರಾಜಕಾರಣಿಗಳು ಕಂಡುಬರುತ್ತಾರೆ. ಇಂಥ ರಾಜಕೀಯ ಪಕ್ಷಗಳು ಬೆಳವಣಿಗೆಯಾದ ನಂತರ ನಮ್ಮ ದೇಶದ ರಾಜಕೀಯ ಮತ್ತಷ್ಟು ಕಲುಷಿತವಾಗಿದೆ. ಹೀಗಾಗಿ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಜನರ ಬಗ್ಗೆ ನಾವು ಜಾಗೃತರಾಗದೆ ದೇಶದ ನಾಗರಿಕತೆಯ ವಿಕಾಸ ಸಾಧ್ಯವಿರುವಂತೆ ಕಾಣುವುದಿಲ್ಲ.

ಟಿ.ಆರ್.ಪಿ. ಎಂಬ ಭೂತ ರಾಷ್ಟ್ರಹಿತಕ್ಕೆ ಮಾರಕ

-ಆನಂದ ಪ್ರಸಾದ್

ಟಿವಿ ವಾಹಿನಿಗಳ ವೀಕ್ಷಕರು ಯಾವ ವಾಹಿನಿಗಳನ್ನು ಹಾಗೂ ಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂದು ಸಮೀಕ್ಷೆ ನಡೆಸಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿ.ಆರ್.ಪಿ.) ನಿರ್ಣಯಿಸುವ ಈಗಿನ ವಿಧಾನ ಜನಹಿತಕ್ಕೆ ಹಾಗೂ ರಾಷ್ಟ್ರಹಿತಕ್ಕೆ ಮಾರಕವಾಗಿದೆ. ಈಗಿನ ವಿಧಾನದಲ್ಲಿ ಆಯ್ದ ಕೆಲವು ನಗರಗಳ ಕೆಲವು ಮನೆಗಳಲ್ಲಿ ಪೀಪಲ್ ಮೀಟರ್ ಎಂಬ ಉಪಕರಣವನ್ನು ಅಳವಡಿಸಿ ಅದು ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ನಿರ್ಣಯಿಸಿ ವಾರಕ್ಕೊಮ್ಮೆ ಟಿ.ಆರ್.ಪಿ. ಪ್ರಕಟಿಸುತ್ತದೆ. ಇದು ಅತ್ಯಂತ ಅವೈಜ್ಞಾನಿಕ ವಿಧಾನವಾಗಿದ್ದು ಶೇಕಡಾ 60ರಷ್ಟಿರುವ ಗ್ರಾಮೀಣ ಜನರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿಯೇ ಅತ್ಯಂತ ಬೇಜವಾಬ್ದಾರಿಯುತ, ಕ್ಷುಲ್ಲಕ ಕಾರ್ಯಕ್ರಮಗಳು ಜಾಹೀರಾತುಗಳಿಗೋಸ್ಕರವಾಗಿಯೇ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುತ್ತವೆ. ಜನಹಿತ, ಮಾಧ್ಯಮ ಧರ್ಮ, ಪತ್ರಿಕಾಧರ್ಮವೆಂಬುದು ಟಿವಿ ವಾಹಿನಿಗಳ ಮಟ್ಟಿಗೆ ಗತಕಾಲದ ಅಪ್ರಸ್ತುತ ವಿಷಯವಾಗಿದೆ. ಜಾಹೀರಾತುಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುವ ಟಿವಿ ವಾಹಿನಿಗಳ ಈ ರೋಗಕ್ಕೆ ಮದ್ದೇ ಇಲ್ಲವೇ? ಪ್ರಸ್ತುತ ಇರುವ ಟಿ.ಆರ್.ಪಿ. ವಿಧಾನದಲ್ಲಿ ಈ ರೋಗಕ್ಕೆ ಮದ್ದು ಇಲ್ಲ.

ಟಿವಿ ವಾಹಿನಿಗಳನ್ನು ಜನಪರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಬದಲಾಯಿಸಬೇಕಾದರೆ ಟಿ.ಆರ್.ಪಿ. ನಿರ್ಣಯಿಸುವ ಈಗಿನ ವಿಧಾನವನ್ನು ಸಂಪೂರ್ಣ ಬದಲಾಯಿಸಬೇಕಾದ ಅಗತ್ಯ ಇದೆ. ಇಂದು ಹಲವಾರು ವಾಹಿನಿಗಳು ಲಭ್ಯವಾಗುವ ಕೇಬಲ್ ಹಾಗೂ ಡಿಟಿಎಚ್ ಪ್ರಸಾರ ವ್ಯವಸ್ಥೆ tv-mediaಬಂದಿರುವ ಕಾರಣ ಜಾಹೀರಾತುಗಳನ್ನು ನೋಡಬೇಕಾದ ಅನಿವಾರ್ಯತೆ ವೀಕ್ಷಕರಿಗೆ ಇಲ್ಲ. ಜಾಹೀರಾತು ಬಂದ ಕೂಡಲೇ ಜಾಹೀರಾತು ಪ್ರಸಾರ ಆಗುತ್ತಿರದ ಬೇರೆ ವಾಹಿನಿಗಳಿಗೆ ವೀಕ್ಷಕರು ಬದಲಾಯಿಸುವುದು ಸಾಮಾನ್ಯ. ಇದನ್ನು ಮನಗಂಡ ಟಿವಿ ವಾಹಿನಿಗಳು ಒಂದೇ ಸಮಯದಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ತಂತ್ರ ಅನುಸರಿಸಿದರೂ ಬೇರೆ ಭಾಷೆಗಳ ವಾಹಿನಿಗಳಿಗೆ ಬದಲಾಯಿಸುವ ಪ್ರವೃತ್ತಿಯನ್ನೂ ವೀಕ್ಷಕರು ಬೆಳೆಸಿಕೊಂಡಿದ್ದಾರೆ. ಕೆಲವು ವೀಕ್ಷಕರು ಜಾಹೀರಾತು ಪ್ರಸಾರವಾಗುವ ಸಮಯದಲ್ಲಿ ಟಿವಿಯ ಬುಡದಲ್ಲಿ ಕೂರುವ ಬದಲು ಬೇರೆ ಕೆಲಸ ಇದ್ದರೆ ಅದನ್ನು ಮಾಡಲು ತೆರಳುತ್ತಾರೆ. ಜಾಹೀರಾತು ಮುಗಿದ ನಂತರ ಮತ್ತೆ ಟಿವಿ ನೋಡಲು ಬರುತ್ತಾರೆ. ವಾಹಿನಿ ಬದಲಾಯಿಸದವರು ಅಥವಾ ಬೇರೆ ಕೆಲಸಗಳಿಗೆ ಹೋಗದವರು ಜಾಹೀರಾತು ಬಂದ ಕೂಡಲೇ ಪರಸ್ಪರ ಹರಟೆ ಹೊಡೆಯಲು ತೊಡಗುತ್ತಾರೆ. ಹೀಗಾಗಿ ಜಾಹೀರಾತುಗಳನ್ನು ನೋಡುವವರು ಬಹಳ ಕಡಿಮೆ ಇರಬಹುದು. ಈ ಕಾರಣದಿಂದ ಟಿ.ಆರ್.ಪಿ. ಎಂಬ ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯ ಮಾನದಂಡವನ್ನು ನಿರ್ಣಯಿಸುವ ವಿಧಾನ ಅಪ್ರಸ್ತುತ ಹಾಗೂ ಅನವಶ್ಯಕ. ಈ ವಿಧಾನವನ್ನೇ ತೊಡೆದುಹಾಕಬೇಕಾದ ಅಗತ್ಯ ಇದೆ.

ಯಾವ ರೀತಿ ಪತ್ರಿಕೆಗಳ ಪ್ರಸರಣ ಸಂಖ್ಯೆಯನ್ನು ಆರು ತಿಂಗಳಿಗೊಮ್ಮೆ ಲೆಕ್ಕ ಹಾಕಿ ಅಂಕೆ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆಯೋ ಅದೇ ರೀತಿ ಟಿವಿ ವಾಹಿನಿಗಳ ವೀಕ್ಷಕರ ಅಂಕೆ ಸಂಖ್ಯೆಗಳನ್ನು ಮೂರು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವುದರಿಂದ ಟಿ.ಆರ್.ಪಿ.ಗಾಗಿ ಟಿವಿ ವಾಹಿನಿಗಳ ನಡುವೆ ನಡೆಯುವ ಅನಾರೋಗ್ಯಕರ ಪೈಪೋಟಿಯನ್ನು ಕಡಿಮೆ ಮಾಡಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶ ಹೀಗೆ ಎರಡೂ ಪ್ರದೇಶಗಳ ಜನತೆಯ ಟಿವಿ ವೀಕ್ಷಣೆಯ ಪ್ರವೃತ್ತಿಯ ಸಮೀಕ್ಷೆ ನಡೆಸಿ ಯಾವ ವಾಹಿನಿಯನ್ನು ಜನ ಸಾಮಾನ್ಯವಾಗಿ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಹೆಚ್ಚು ಜನ ಯಾವ ರೀತಿಯ ಕಾರ್ಯಕ್ರಮಗಳನ್ನು ನೋಡುತ್ತಾರೆ ನಿರ್ಧರಿಸಿ ಅದಕ್ಕನುಗುಣವಾಗಿ ಜಾಹೀರಾತುಗಳ ದರವನ್ನು ಹಾಗೂ ಅವುಗಳ ಹಂಚಿಕೆಯನ್ನು ಮಾಡುವುದರಿಂದ ತೀರಾ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಿ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರ ಸೂಕ್ತ ಸಂಸ್ಥೆಗಳನ್ನು ಗುರುತಿಸಿ ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕಾದ ಅಗತ್ಯ ಇದೆ.

ಇಂದು ನೂರಾರು ಖಾಸಗಿ ಟಿವಿ ವಾಹಿನಿಗಳು ಪ್ರಸಾರವಾಗುತ್ತಿದ್ದರೂ ಇವುಗಳು ಶೇಕಡಾ  60 ರಷ್ಟಿರುವ ಗ್ರಾಮೀಣ ಜನರ ಬದುಕಿನ ಬಗ್ಗೆಯಾಗಲೀ, ಕೃಷಿಯ ಬಗ್ಗೆಯಾಗಲೀ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಂಡುಬರುವುದಿಲ್ಲ. ಖಾಸಗಿ ಟಿವಿ ವಾಹಿನಿಗಳಲ್ಲಿ ಈ ಟಿವಿ ಕನ್ನಡ ಮಾತ್ರ ಬೆಳಗಿನ 6:30 ರಿಂದ 7 ರವರೆಗೆ ಕೃಷಿ ಸಂಬಂಧಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆಯಾದರೂ ಅದನ್ನು ನೋಡುವ ಕೃಷಿಕರು ಬಹಳ ಕಡಿಮೆ ಏಕೆಂದರೆ ಪ್ರಸಾರದ ಸಮಯ ಕೃಷಿಕರಿಗೆ ಅನುಕೂಲಕರವಾಗಿಲ್ಲ. ಆ ಹೊತ್ತಿಗೆ ಒಂದೋ ಅವರು ಎದ್ದಿರುವುದಿಲ್ಲ ಅಥವಾ ಎದ್ದಿರುವವರು ಕೃಷಿ/ಹೈನುಗಾರಿಕೆ ಸಂಬಂಧಿ ಕೆಲಸಗಳಲ್ಲಿ ತೊಡಗಿರುತ್ತಾರೆ.

ಟಿವಿ ವಾಹಿನಿಗಳು ದೇಶದಲ್ಲಿ ಜನಜಾಗೃತಿಯನ್ನು ರೂಪಿಸುವ ಅಗಾಧ ಸಾಮರ್ಥ್ಯ ಹೊಂದಿದ್ದರೂ ಟಿ.ಆರ್.ಪಿ. ಎಂಬ ಭೂತ ಅವುಗಳ ಕಾರ್ಯಕ್ರಮಗಳನ್ನು ನಿರ್ಧರಿಸುತ್ತಿರುವುದರಿಂದ ಅವುಗಳ ನೈಜ ಸಾಮರ್ಥ್ಯದ ಶೇಕಡಾ 5 ರಷ್ಟೂ ಜನಹಿತ ಸಾಧನೆ ಹಾಗೂ ದೇಶಹಿತ ಸಾಧನೆಗಾಗಿ ಬಳಕೆಯಾಗುತ್ತಿಲ್ಲ. ಇದನ್ನು ಬದಲಿಸಬೇಕಾದರೆ ಟಿ.ಆರ್.ಪಿ. ಎಂಬ ಭೂತವನ್ನು ನಿವಾರಿಸಬೇಕಾದ ಅಗತ್ಯ ಇದೆ.