Category Archives: ಆನಂದ ಪ್ರಸಾದ್

ಡೀಸೆಲ್ ಮರ : ಇಲ್ಲೂ ಪರೀಕ್ಷಿಸಬಾರದೇಕೆ?

-ಆನಂದ ಪ್ರಸಾದ್

ಮರದಲ್ಲಿ ಡೀಸೆಲ್ ಅಥವಾ ಇಂಧನ ಸಿಗುವಂತಿದ್ದರೆ ರೈತರು ಇಂಥ ಮರಗಳನ್ನು ಬೆಳೆದು ತಮ್ಮ ವಾಹನಗಳಿಗೆ ಇಂಧನ ಸ್ವಾವಲಂಬನೆಯನ್ನು ಸಾಧಿಸಬಹುದು. ಇಂಥ ಒಂದು ಮರ ಪ್ರಕೃತಿಯಲ್ಲಿ ಲಭ್ಯ ಇದೆ ಎಂದು ಅಂತರ್ಜಾಲದಿಂದ ತಿಳಿದು ಬರುತ್ತದೆ. ಇದಕ್ಕೆ ಡೀಸೆಲ್ ಮರ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಕೊಪೈಫೆರಾ ಲಾಂಗ್ಸ್‌ಡಾರ್ಫಿ (Copaifera langsdorfii). ಇದು ದಕ್ಷಿಣ ಅಮೆರಿಕಾದ ಅರ್ಜೆಂಟಿನ, ಬ್ರೆಜಿಲ್, ಪರಾಗ್ವೆ, ವೆನೆಜುಯೆಲ ದೇಶಗಳ ಉಷ್ಣವಲಯದ ಕಾಡುಗಳಲ್ಲಿ ಕಂಡುಬರುತ್ತದೆ.

ಆದಿವಾಸಿಗಳು ಇದರ ಕಾಂಡಕ್ಕೆ ತೂತು ಕೊರೆದು ದ್ರವವನ್ನು ತೆಗೆಯುತ್ತಾರೆ ಮತ್ತು ಇದನ್ನು ಔಷಧವಾಗಿ ಬಳಸುತ್ತಾರೆ. ಈ ಮರದಿಂದ ಈ ರೀತಿ ದ್ರವವನ್ನು ತೆಗೆಯಲು 15 ರಿಂದ 20 ವರ್ಷಗಳವರೆಗೆ ಬೆಳವಣಿಗೆ ಹೊಂದಿರಬೇಕು. ಒಂದು ಮರದಿಂದ ವರ್ಷಕ್ಕೆ 30 ರಿಂದ 56 ಲೀಟರ್ ಇಂಧನ ಲಭ್ಯ. ಮರದ ಕಾಂಡಕ್ಕೆ ತೂತು ಕೊರೆದು ಇಂಧನ ದ್ರವವನ್ನು ತೆಗೆಯಲಾಗುತ್ತದೆ. ಕಾಂಡದಲ್ಲಿ ಕೊರೆದ ತೂತಿಗೆ ಸಣ್ಣ ಪೈಪ್ ಅನ್ನು ಸಿಕ್ಕಿಸಿ ಅದರ ತುದಿಗೆ ಮುಚ್ಚಳ ಹಾಕಿ ಆರು ತಿಂಗಳಿಗೊಮ್ಮೆ ಮುಚ್ಚಳ ತೆಗೆದು ಇಂಧನ ಸಂಗ್ರಹಿಸಲಾಗುತ್ತದೆ. ಈ ರೀತಿ ವರ್ಷಕ್ಕೆ ಎರಡು ಸಲ ಇಂಧನ ಪಡೆಯಬಹುದು. ಈ ರೀತಿ ಪಡೆದ ಇಂಧನ ದ್ರವವನ್ನು ಸೋಸಿ ನೇರವಾಗಿ ಡೀಸೆಲ್ ಇಂಜಿನುಗಳಲ್ಲಿ ಬಳಕೆ ಮಾಡಬಹುದು. ಈ ದ್ರವ ಇಂಧನವು ಟರ್ಪೆoಟೈನ್ ಹೈಡ್ರೋಕಾರ್ಬನ್ ಗುಂಪಿಗೆ ಸೇರಿದ ರಾಸಾಯನಿಕವನ್ನು ಹೊಂದಿರುತ್ತದೆ. ಈ ದ್ರವವನ್ನು ಮರದಿಂದ ತೆಗೆದ ಮೂರು ತಿಂಗಳ ಒಳಗೆ ಡೀಸೆಲ್ ಇಂಜಿನಿಗೆ ಇಂಧನವಾಗಿ ಬಳಸಬಹುದು. ನಂತರ ಬಳಸಲು ಸಾಧ್ಯವಿಲ್ಲ.

ಡೀಸೆಲ್ ಮರದ ಕಾಂಡದ ಒಳಗೆ ಸೂಕ್ಸ್ಮ ತಂತುಗಳಲ್ಲಿ (capillaries) ಇಂಧನ ದ್ರವ ಶೇಖರಣೆಯಾಗುತ್ತದೆ ಮತ್ತು ಕಾಂಡಕ್ಕೆ ತೂತು ಕೊರೆದು ಇದನ್ನು ತೆಗೆಯಬಹುದು. ಬ್ರೆಜಿಲ್ ದೇಶದಲ್ಲಿ ಇಂಥ ಮರಗಳ ಪ್ಲಾoಟೇಶನ್‌ಅನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಆಸ್ಟ್ರೇಲಿಯದ ಉಷ್ಣವಲಯ ಪ್ರದೇಶದಲ್ಲಿ ಈ ಮರಗಳ 20,000 ಸಾವಿರ ಸಸಿಗಳನ್ನು ರೈತರಿಗೆ ಮಾರಲಾಗಿದೆಯಂತೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿದ ಡೀಸೆಲ್ ಮರ 15 ರಿಂದ 20 ವರ್ಷಗಳ ಬೆಳವಣಿಗೆಯ ನಂತರ ವರ್ಷಕ್ಕೆ 10,000 ದಿಂದ 12,000 ಲೀಟರ್ ಇಂಧನ ನೀಡಬಹುದೆಂದು ಅಂದಾಜಿಸಲಾಗಿದೆ. ಅದರೂ ಇದು ಪ್ರಾಯೋಗಿಕ ಹಂತದಲ್ಲಿರುವುದರಿಂದ ಈ ಬಗ್ಗೆ ಏನನ್ನೂ ಹೇಳಲಾಗದು ಮತ್ತು ಎಲ್ಲ ಪ್ರದೇಶಗಳಲ್ಲೂ ಇದರ ಬೆಳವಣಿಗೆ, ಇಂಧನ ಇಳುವರಿ ಹೇಗಿರುತ್ತದೆ ಎಂದು ಪ್ರಯೋಗ ಮಾಡಿಯೇ ಕಂಡುಕೊಳ್ಳಬೇಕಷ್ಟೆ.

ಈ ಮರವು 15 ರಿಂದ 30 ಮೀಟರ್ ಎತ್ತರಬೆಳೆಯುತ್ತದೆ. ನಮ್ಮ ದೇಶಕ್ಕೂ ಈ ಡೀಸೆಲ್ ಮರದ ಬೀಜಗಳನ್ನು ತರಿಸಿ ಸಸಿ ಮಾಡಿ ನೆಟ್ಟು ಅರಣ್ಯ ಇಲಾಖೆಯವರು ಪ್ರಯೋಗ ಮಾಡಿ ನೋಡಿದರೆ ಒಳ್ಳೆಯದು. ಇದು ಯಶಸ್ವಿಯಾದರೆ ರೈತರಿಗೆ ಕನಿಷ್ಠ ತಮ್ಮ ಡೀಸೆಲ್ ವಾಹನಗಳಿಗೆ ತಮ್ಮ ನೆಲದಲ್ಲೇ ಇಂಧನ ಉತ್ಪಾದಿಸಿಕೊಳ್ಳಲು ಸಾಧ್ಯವಿದೆ. ಒಮ್ಮೆ ಉತ್ಪಾದನೆ ಆರಂಭವಾದರೆ ಈ ಮರವು 70 ವರ್ಷಗಳವರೆಗೆ ಇಂಧನ ನೀಡಬಲ್ಲದು. ಆದರೆ ಒಮ್ಮೆ ಇಳುವರಿ ಆರಂಭವಾಗಬೇಕಾದರೆ ದೀರ್ಘಕಾಲ ಕಾಯಬೇಕು. ಇದರ ಬೆಳವಣಿಗೆಗೆ ನೀರಿನ ಅವಶ್ಯಕತೆಯೂ ಇದೆಯೆಂದು ಅಂತರ್ಜಾಲದಲ್ಲಿ ಕಂಡುಬರುತ್ತದೆ. ಇದು 100 ರಿಂದ 400 ಸೆಂಟಿಮೀಟರ್ ವಾರ್ಷಿಕ ಮಳೆ ಬೀಳುವ ಹಾಗೂ 20 ರಿಂದ 27 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಇರುವ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಈ ಮರದ ಕಾಂಡವು ಉತ್ತಮ ದರ್ಜೆಯ ಮರವಾಗಿ ಪೀಠೋಪಕರಣ ತಯಾರಿಗೂ ಬಳಸಬಹುದು.

ನಮ್ಮ ದೇಶದ ದಕ್ಷಿಣ ಭಾಗದಲ್ಲಿ ಈ ಮರವು ಬೆಳೆಯುವ ಸಂಭವವಿದೆ. ಇದನ್ನು ಪ್ರಾಯೋಗಿಕವಾಗಿ ಬೆಳೆಸಿ ನೋಡಲು ನಮ್ಮ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ಇಂಥ ಕೆಲವು ಮರಗಳನ್ನು ಕೃಷಿಕರು ಬೆಳೆಸಿ ಕನಿಷ್ಠ ಕೃಷಿಕರು ತಮ್ಮ ಡೀಸೆಲ್ ವಾಹನಗಳಿಗೆ, ಟ್ರಾಕ್ಟರ್ ಇತ್ಯಾದಿಗಳಿಗೆ ಇಂಧನ ಪಡೆಯುವಂತಾದರೆ ಡೀಸೆಲ್ ಬೆಲೆ ಏರಿಕೆಯಿಂದ ತಮ್ಮ ಮೇಲೆ ಹೆಚ್ಚಿನ ಭಾರವಾಗದಂತೆ ತಡೆಯಬಹುದು ಹಾಗೂ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಉಂಟಾಗುವ ಹವಾಮಾನ ವೈಪರೀತ್ಯವನ್ನು ಸ್ವಲ್ಪ ಕಡಿಮೆ ಮಾಡಬಹುದು.

ಪೊಲೀಸ್ ವ್ಯವಸ್ಥೆ ಸಂಪೂರ್ಣ ಸ್ವಾಯತ್ತ ಘಟಕ ಆಗಬೇಕು

– ಆನಂದ ಪ್ರಸಾದ್

ಪೊಲೀಸರು ಸ್ವತಂತ್ರವಾಗಿ ಆಡಳಿತ ಪಕ್ಷದ ರಾಜಕಾರಣಿಗಳ ಒತ್ತಡಗಳಿಲ್ಲದೆ ಕೆಲಸ ನಿರ್ವಹಿಸುವ ವಾತಾವರಣ ಇದ್ದಿದ್ದರೆ ಗುಜರಾತಿನ ಗೋಧ್ರೋತ್ತರ ಹಿಂಸಾಚಾರ ಅಥವಾ 1984ರ ದೆಹಲಿಯ ಸಿಖ್ಖರ ಹತ್ಯಾಕಾಂಡವನ್ನು ಹೆಚ್ಚು ಹಾನಿಯಾಗದಂತೆ ಮತ್ತು ಹಬ್ಬದಂತೆ ತಡೆಯಲು ಸಾಧ್ಯವಿತ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸುವ ಮೂಲಭೂತವಾದಿ ಸಂಘಟನೆಗಳ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳನ್ನೂ ಪೊಲೀಸರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವಾತಾವರಣ ಇದ್ದರೆ ತಡೆಯಬಹುದು. ಹಲವು ಅಪರಾಧ ಪ್ರಕರಣಗಳಲ್ಲೂ ಪೊಲೀಸರು ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಪರಾಧಿಗಳ ರಕ್ಷಣೆ ಮಾಡುವ ಪರಿಸ್ಥಿತಿಯನ್ನೂ ಪೊಲೀಸರು ಸ್ವತಂತ್ರವಾಗಿ ಅಳುವ ಪಕ್ಷದ ರಾಜಕಾರಣಿಗಳ ಒತ್ತಡವಿಲ್ಲದೆ ಕೆಲಸ ಮಾಡುವಂತಾದರೆ ತಡೆಯಲು ಸಾಧ್ಯ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಅತೀ ಅಗತ್ಯ. ಇದಕ್ಕಾಗಿ ಪೋಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ರೂಪಿಸಬೇಕಾದ ಅಗತ್ಯ ಇದೆ.

ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಪಕ್ಷದ ಪುಢಾರಿ ಅಥವಾ ಮಂತ್ರಿ ಹಸ್ತಕ್ಷೇಪ ಮಾಡಲು ಅವಕಾಶ ಇರಬಾರದು. ನಮ್ಮ ಇಂದಿನ ಪೊಲೀಸ್ ವ್ಯವಸ್ಥೆಯಲ್ಲಿ ಅಂಥ ವಾತಾವರಣ ಇಲ್ಲ. ಪೊಲೀಸರು ಸಂವಿಧಾನಕ್ಕೆ ಅನುಸಾರವಾಗಿ ಹಾಗೂ ಪೊಲೀಸ್ ಕಾನೂನುಗಳ ಅನುಸಾರವಾಗಿ ಪ್ರತಿಯೊಂದು ಪ್ರಕರಣದಲ್ಲೂ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಇಲ್ಲದೆ ಹೋದರೆ ಉತ್ತಮ ನಾಗರಿಕ ವ್ಯವಸ್ಥೆಯನ್ನು ಕಟ್ಟುವುದು ಅಸಾಧ್ಯ. ಹೀಗಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು. ಪೋಲೀಸರ ವರ್ಗಾವಣೆ, ಭಡ್ತಿ ಇತ್ಯಾದಿಗಳು ಸಂಪೂರ್ಣವಾಗಿ ನಿಯಮಗಳ ಅನುಸಾರ ನಡೆಯುವಂತೆ ನೋಡಿಕೊಳ್ಳಬೇಕು. ಇದನ್ನು ನೋಡಿಕೊಳ್ಳಲು ಪೊಲೀಸ್ ನಿಯಂತ್ರಣ ಆಯೋಗವೊಂದನ್ನು ರಚಿಸಿ ಅದರ ಅಧ್ಯಕ್ಷರನ್ನು ಆಡಳಿತ ಪಕ್ಷ, ಪ್ರಮುಖ ವಿರೋಧ ಪಕ್ಷಗಳ ನಾಯಕರು, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವ ನಿಷ್ಪಕ್ಷಪಾತ, ಪ್ರಾಮಾಣಿಕ ಚರಿತ್ರೆ ಹೊಂದಿರುವ ಪೊಲೀಸ್ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ನೇಮಿಸುವಂತೆ ಆಗಬೇಕು. ಪೋಲೀಸರ ಅತಿರೇಕ ಹಾಗೂ ದೌರ್ಜನ್ಯ ಇತ್ಯಾದಿ ವಿಷಯಗಳ ಬಗ್ಗೆ ನಾಗರಿಕರ ದೂರುಗಳನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವೂ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಯಾವುದೇ ಸಂದರ್ಭದಲ್ಲೂ ಆಡಳಿತ ಪಕ್ಷದ ರಾಜಕಾರಣಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸಲು ಅವಕಾಶ ನೀಡಬಾರದು. ಯಾವುದೇ ಪೊಲೀಸ್ ಅಧಿಕಾರಿಯನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡುವ ಅವಕಾಶ ಇರಬಾರದು. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಯಾವುದೇ ಕಿರುಕುಳ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಅದೇ ರೀತಿ ಯಾವುದೇ ಸಂದರ್ಭದಲ್ಲೂ ಧಾರ್ಮಿಕ ಮೂಲಭೂತವಾದಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಪ್ರಭಾವ ಬೀರದಂತೆ ಪೊಲೀಸ್ ನಿಯಂತ್ರಣ ಆಯೋಗ ತಡೆಯುವ ಅಧಿಕಾರ ಇರಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಮೂಲಭೂತವಾದಿಗಳು ನುಸುಳದಂತೆ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೂಡ ಕೈಗೊಳ್ಳಬೇಕಾದ ಅಗತ್ಯ ಇದೆ. ದೇಶದ ಜಾತ್ಯತೀತ ಸ್ವರೂಪವನ್ನು ಕಾಯ್ದುಕೊಂಡು ಹೋಗಲು ಇದು ಅಗತ್ಯ. ಜಾತ್ಯತೀತ ಮನೋಭಾವವನ್ನು ಬೆಳೆಸುವ ತರಬೇತಿಯನ್ನು ಪೋಲೀಸರ ನೇಮಕಾತಿಯ ವೇಳೆಯೇ ನೀಡಬೇಕು.

ದಲಿತರು, ಹಿಂದುಳಿದವರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ದೌರ್ಜನ್ಯ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಪೊಲೀಸರಿಗೆ ಇರಬೇಕು. ಇಂಥ ಸ್ವಾತಂತ್ರ್ಯ ಇರಬೇಕಾದರೆ ಅದು ಪ್ರಬಲ ಮೇಲ್ವರ್ಗದ ಜಾತಿಗಳ ರಾಜಕಾರಣಿಗಳ ಹಿಡಿತಕ್ಕೆ ಸಿಗದಂತೆ ರೂಪಿಸಲ್ಪಟ್ಟಿರಬೇಕು. ದಲಿತರ ಮೇಲಿನ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೇಸು ದಾಖಲಿಸಿಕೊಳ್ಳುವುದಿಲ್ಲ. ರಾಜಕಾರಣಿಗಳ ಹಿಡಿತದಿಂದ ಪೋಲೀಸ್ ವ್ಯವಸ್ಥೆಯನ್ನು ಮುಕ್ತಗೊಳಿಸಿದರೆ ಪೊಲೀಸರು ದಿಟ್ಟತನದಿಂದ ಕ್ರಮ ಕೈಗೊಳ್ಳಲು ಸಾಧ್ಯ. ಸ್ವಾತಂತ್ರ್ಯ ದೊರಕಿದಾಗಲೇ ಪೋಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಿದ್ದರೆ ಮತ್ತು ಸಂವಿಧಾನದಲ್ಲೇ ಈ ಕುರಿತು ದಾಖಲಿಸಿದ್ದರೆ ಆಗ ಇದಕ್ಕೆ ಒಪ್ಪಿಗೆ ಸಿಗುತ್ತಿತ್ತು. ಅಂದು ಸಂವಿಧಾನ ನಿರ್ಮಾತೃಗಳಿಗೆ ಪೋಲೀಸ್ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಗೋಚರಿಸಿರಲಿಲ್ಲವೆನಿಸುತ್ತದೆ. ಸ್ವತಂತ್ರ ಭಾರತದ ಆರು ದಶಕಗಳ ಪೋಲೀಸ್ ಕಾರ್ಯ ವೈಖರಿಯನ್ನು ನೋಡಿದಾಗ ಇಂದು ಇದರ ಅವಶ್ಯಕತೆ ಎದ್ದು ಕಾಣುತ್ತದೆ. ದುರದೃಷ್ಟವಶಾತ್ ಸಮಾಜದಲ್ಲಿ ಈ ಬಗ್ಗೆ ಸಮರ್ಪಕ ಜಾಗೃತಿ ಕೂಡ ಕಂಡುಬರುತ್ತಿಲ್ಲ. ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ಮಾಡುವ ಬಗ್ಗೆ ಸಮಾಜದ ಗಣ್ಯರು, ಹೋರಾಟಗಾರರು, ವಿವಿಧ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ. ಈ ಬಗ್ಗೆ ಪ್ರಮುಖ ಮಾಧ್ಯಮಗಳೂ ಧ್ವನಿ ಎತ್ತಬೇಕಾಗಿದೆ.

ವೈಚಾರಿಕ ಪೀಳಿಗೆ ರೂಪಿಸುವುದರಲ್ಲಿ ಮಹಿಳೆಯರ ಪಾತ್ರ

– ಆನಂದ ಪ್ರಸಾದ್

ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ನಮ್ಮ ಸಮಾಜದ ಅರ್ಧ ಭಾಗದಷ್ಟಿರುವ ಹೆಂಗಸರು ಹಿಂದಿರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ, ವಾಸ್ತು, ನಿಸರ್ಗಾತೀತ ಶಕ್ತಿಗಳ ಅತಿರಂಜಿತ ಪ್ರಚಾರಕ್ಕೆ ಹೆಂಗಸರೇ ಹೆಚ್ಚಿನ ವೀಕ್ಷಕರಾಗಿರುವುದನ್ನು ನಾವು ಗುರುತಿಸಬಹುದು. ಅದೇ ರೀತಿ ಸಮಕಾಲೀನ ಜಗತ್ತಿನ, ದೇಶದ, ರಾಜ್ಯದ ಆಗುಹೋಗುಗಳ ಬಗ್ಗೆ ಹೆಂಗಸರಲ್ಲಿ ಬಹಳ ಕಡಿಮೆ ಆಸಕ್ತಿ ಇರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಹೆಂಗಸರು ಹೆಚ್ಚಾಗಿ ವೀಕ್ಷಿಸುವುದು ಧಾರಾವಾಹಿಗಳು ಅಥವಾ ಸಿನೆಮಾಗಳನ್ನು ಮಾತ್ರ.  ಹೀಗಾಗಿ ಹೆಂಗಸರಲ್ಲಿ ಸಮಕಾಲೀನ ದೇಶದ ರಾಜಕೀಯ ಆಗುಹೋಗುಗಳ ಬಗ್ಗೆ ತಿಳುವಳಿಕೆ ಕಡಿಮೆ. ಇಂಥ ಪ್ರವೃತ್ತಿ ಕೂಡ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಬೆಳೆಯದಿರಲು ಕಾರಣವಾಗಿದೆ. ಹೆಂಗಸರು ಸಮಾರಂಭಗಳಲ್ಲೋ ಅಥವಾ ಇನ್ನೆಲ್ಲೋ ಸೇರಿದರೆ ಚರ್ಚಿಸುವುದು ಉಡುಪು, ಚಿನ್ನ, ಒಡವೆ, ಕಾರು, ಬಂಗಲೆ ಇತ್ಯಾದಿ ವಿಷಯಗಳ ಬಗ್ಗೆಯೇ ಹೊರತು ದೇಶದ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸುವುದು ಕಡಿಮೆ ಅಥವಾ ಇಲ್ಲವೆಂದರೂ ಸರಿಯೇ. ದೇವರು, ಸಂಪ್ರದಾಯ, ಕಂದಾಚಾರಗಳ ಬಗ್ಗೆಯೂ ಹೆಂಗಸರಿಗೆ ಹೆಚ್ಚಿನ ಒಲವು ಇರುವುದು ಕಂಡು ಬರುತ್ತದೆ.

ಹೆಂಗಸರು ಮುಂದಿನ ಪೀಳಿಗೆಯನ್ನು ರೂಪಿಸುವುದರಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಕಾರಣ ಹೆಂಗಸರು ವೈಚಾರಿಕವಾಗಿ ಬೆಳೆಯಬೇಕಾದ ಅಗತ್ಯ ಇದೆ. ಮಕ್ಕಳನ್ನು ಬೆಳೆಸುವುದರಲ್ಲಿ ತಾಯಿಯಾಗಿ ಹೆಂಗಸರ ಪಾತ್ರ ಹಾಗೂ ಪ್ರಭಾವ ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ತಾಯಂದಿರು ವೈಚಾರಿಕವಾಗಿ ಬೆಳೆದರೆ, ವೈಚಾರಿಕ ಮನೋಭಾವ ಹೊಂದಿದ್ದರೆ ಮಕ್ಕಳೂ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಸಂಭವ ಅಧಿಕ. ದುರದೃಷ್ಟವಶಾತ್ ನಮ್ಮ ದೇಶದ ಹೆಂಗಸರು ವೈಚಾರಿಕವಾಗಿ ಹಿಂದೆ ಇರುವ ಕಾರಣ ಗಂಡಸರು ವೈಚಾರಿಕತೆಯಲ್ಲಿ ಮುಂದೆ ಇದ್ದರೂ ತಂದೆಯಾಗಿ ಅವರು ಮಕ್ಕಳ ಮೇಲೆ ವೈಚಾರಿಕ ಪ್ರಭಾವ ಬೀರಲು ಸಾಧ್ಯವಾಗದಿರುವುದು ಕಂಡುಬರುತ್ತದೆ. ಮಕ್ಕಳ ಜೊತೆ ತಾಯಿಯ ಸಂಬಂಧ ಹೆಚ್ಚು ಗಾಢವಾಗಿರುವ ಕಾರಣ ಮಕ್ಕಳು ತಾಯಿಯ ಒಲವು ನಿಲುವುಗಳನ್ನು ದೇವರು, ಸಂಪ್ರದಾಯ, ಕಂದಾಚಾರಗಳ ವಿಚಾರದಲ್ಲಿ ಬೆಳೆಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ವೈಚಾರಿಕತೆ ಬಹಳ ಕೆಳಮಟ್ಟದಲ್ಲಿದೆ. ಶಾಲಾ ಶಿಕ್ಷಣದಲ್ಲೂ ವೈಚಾರಿಕತೆ ಬೆಳೆಸಿಕೊಳ್ಳಲು ನೆರವಾಗಬಲ್ಲ ಪಠೄ ಕಂಡುಬರುವುದಿಲ್ಲ.  ಜನತೆಯಲ್ಲಿ ವೈಚಾರಿಕತೆ ಬೆಳೆಯದೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಬೆಳೆಯಲಾರದು. ವೈಚಾರಿಕತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಡುವೆ ಸಂಬಂಧವಿದೆ. ವೈಚಾರಿಕ ಪ್ರಜ್ಞೆ ಉಳ್ಳ ಜನ ಇದ್ದರೆ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಮತದಾನದ ಮೂಲಕವೇ ರೂಪಿಸಲು ಸಾಧ್ಯ. ವೈಚಾರಿಕ ಪ್ರಜ್ಞೆ ಇಲ್ಲದ ಕಾರಣವೇ ನಮ್ಮ ದೇಶದಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಆಗುವುದಿಲ್ಲ, ಬದಲಿಗೆ ಅಧಃಪತನವೇ ಕಂಡುಬರುತ್ತಿದೆ. ವೈಚಾರಿಕತೆಯನ್ನು ದೇಶದಲ್ಲಿ ಬೆಳೆಸಲು ಹೆಚ್ಚಿನ ಗಮನ ಕೊಡದಿರುವುದರ ಕಾರಣ ನಾವು ಕಳೆದುಕೊಂಡಿರುವುದು ಪ್ರಜಾಪ್ರಭುತ್ವದ ಅಗಾಧ ಸಾಧ್ಯತೆಗಳನ್ನು. ಎಲ್ಲವನ್ನೂ ಕುರಿಗಳಂತೆ ಒಪ್ಪಿಕೊಳ್ಳುವ, ಪ್ರಶ್ನಿಸುವ ಮನೋಭಾವವಿಲ್ಲದ ಜನಸಮೂಹ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇನ್ನೂ ಶತಮಾನಗಳೇ ಉರುಳಿದರೂ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಾರದು.

ಹೀಗಾಗಿ ಒಂದು ಪ್ರಜ್ಞಾವಂತ ಹಾಗೂ ವೈಚಾರಿಕ ಜನಸಮುದಾಯವನ್ನು ರೂಪಿಸಬೇಕಾದರೆ ಹೆಂಗಸರ ಪಾತ್ರ ಮಹತ್ವಪೂರ್ಣವಾದುದು. ಮಹಿಳಾ ಸಂಘಟನೆಗಳು ಮಹಿಳಾ ಸಮೂಹದಲ್ಲಿ ವೈಚಾರಿಕತೆಯನ್ನು ಬೆಳೆಸಲು ಆದ್ಯ ಗಮನ ನೀಡಬೇಕಾದ ಅಗತ್ಯ ಇದೆ. ಹೆಣ್ಣೊಬ್ಬಳು ವೈಚಾರಿಕತೆಯನ್ನು ಬೆಳೆಸಿಕೊಂಡರೆ ಒಂದು ಪೀಳಿಗೆಯೂ ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲದು. ಹೆಂಗಸರು ಧಾರಾವಾಹಿಗಳು ಮತ್ತು ಸಿನೆಮಾಗಳಲ್ಲಿ ಮಾತ್ರವೇ ಕಳೆದು ಹೋಗದೆ ಸಮಕಾಲೀನ ವೈಚಾರಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಬಗ್ಗೆಯೂ ಆಸಕ್ತಿ  ಬೆಳೆಸಿಕೊಳ್ಳುತ್ತ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಹೊಂದಲು ಸಹಾಯಕ. ಮಹಿಳೆಯರು ವೈಚಾರಿಕವಾಗಿ ಮುಂದುವರಿದರೆ ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮ ಪ್ರಸಾರದಲ್ಲೂ ಸುಧಾರಣೆಯನ್ನು ನಿರೀಕ್ಷಿಸಬಹುದು. ಮೌಢೄ, ಕಂದಾಚಾರ ಬಿತ್ತುವ ಕಾರ್ಯಕ್ರಮಗಳನ್ನು, ಜ್ಯೋತಿಷ್ಯ, ವಾಸ್ತು, ಪ್ರಳಯದಂಥ ಕಾರ್ಯಕ್ರಮಗಳನ್ನು ಮಹಿಳೆಯರು ವಿರೋಧಿಸಿದರೆ ಹಾಗೂ ನೋಡುವುದನ್ನು ಕಡಿಮೆ ಮಾಡಿದರೆ ಇವುಗಳ ಟಿ.ಆರ್.ಪಿ. ರೇಟಿಂಗ್ ಕುಸಿದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ಟಿವಿ ವಾಹಿನಿಗಳು ಕಡಿಮೆ ಮಾಡಬಹುದು. ಮಕ್ಕಳಲ್ಲಿ ವೈಚಾರಿಕತೆಯನ್ನು ಬಿತ್ತಿ ಬೆಳೆಯುವುದರಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಸದೃಢ ಕರ್ನಾಟಕದ ನಿರ್ಮಾಣವಾಗಬೇಕಾದರೆ ಮುಂದಿನ ಪೀಳಿಗೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಬೇಕು. ಇದನ್ನು ಎಳೆಯ ವಯಸ್ಸಿನಿಂದಲೇ ರೂಪಿಸಿ ಬೆಳೆಸುವ ಹಾಗೂ ಮಕ್ಕಳ ಬೆಳೆವಣಿಗೆಯ ಹಂತದಲ್ಲಿ ವೈಚಾರಿಕತೆಯನ್ನು ಜಾಗೃತಗೊಳಿಸಿ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುವ ಹಾಗೂ ಪ್ರಭಾವಿಸುವ ಸಾಮರ್ಥ್ಯ ತಾಯಿಯಾಗಿ ಮಹಿಳೆಯರಲ್ಲಿ ನೈಸರ್ಗಿಕವಾಗಿ ಹೆಚ್ಚಾಗಿರುವುದರಿಂದ ವೈಚಾರಿಕ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿಯನ್ನು ಮಹಿಳೆಯರು ವಹಿಸಬೇಕಾಗಿದೆ.

ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

-ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಬಹುತೇಕ ವಂಶವಾಹಿಪ್ರಭುತ್ವ ವ್ಯವಸ್ಥೆಯಾಗಿ ಮಾರ್ಪಾಡಾಗಿದ್ದು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಉಳಿಸಿಕೊಳ್ಳಬೇಕಾದರೆ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಈಗ ಭಾರತದ ಬಹುತೇಕ ಪಕ್ಷಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿವೆ. ಹೀಗಾಗಿ ಎಷ್ಟೇ ಚುನಾವಣೆಗಳು ನಡೆದರೂ ಸರ್ಕಾರದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಒಂದು ಕುಟುಂಬದ ವ್ಯಕ್ತಿಯೇ, ಆತ ಸರ್ಕಾರದ ಮುಖ್ಯಸ್ಥನಾಗಿರಲಿ ಇಲ್ಲದಿರಲಿ, ಆಗಿರುವುದು ಕಂಡು ಬರುತ್ತದೆ. ಇದನ್ನು ತಪ್ಪಿಸಬೇಕಾದರೆ ಒಂದು ರಾಜಕೀಯ ಪಕ್ಷದ ಅಧ್ಯಕ್ಷ ಹುದ್ಧೆಯನ್ನು ಒಂದು ಅವಧಿಗಿಂತ ಹೆಚ್ಚಾಗಿ ಒಬ್ಬನೇ ವಹಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಬೇಕು. ಒಮ್ಮೆ ಅಧ್ಯಕ್ಷ ಸ್ಥಾನ ಪಡೆದವರು ಮತ್ತೆ ಎರಡನೇ ಬಾರಿ ಪಕ್ಷದ ಅಧ್ಯಕ್ಷ ಹುದ್ಧೆಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡಿದರೆ ವಂಶವಾಹೀ ಒಂದೇ ಕುಟುಂಬದವರು ಅಥವಾ ಒಬ್ಬನೇ ವ್ಯಕ್ತಿ ಆಜೀವನಪರ್ಯಂತ ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವುದನ್ನು ತಡೆಯಲು ಸಾಧ್ಯವಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಈ ನಿಯಮವನ್ನು ಚುನಾವಣಾ ಆಯೋಗ ಕಡ್ಡಾಯ ಮಾಡಬೇಕು ಮತ್ತು ಇದರಂತೆ ನಡೆದುಕೊಳ್ಳದ ರಾಜಕೀಯ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಬೇಕು. ಇಂಥ ಒಂದು ನಿಯಮವನ್ನು ತರುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕಾದ ಅಗತ್ಯ ಇದೆ. ಎಲ್ಲ ರಾಜಕೀಯ ಪಕ್ಷಗಳೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸುವುದು ಕಡ್ಡಾಯ ಆಗಬೇಕು. ಐದು ವರ್ಷಗಳಿಗೊಮ್ಮೆ ರಾಜಕೀಯ ಪಕ್ಷಗಳು ಚುನಾವಣೆಯ ಮೂಲಕ ತಮ್ಮ ಪಕ್ಷದ ಅಧ್ಯಕ್ಷರನ್ನು ಆರಿಸುವುದು ಕಡ್ಡಾಯವಾಗಬೇಕು. ಪಕ್ಷದ ಅಧ್ಯಕ್ಷರು ತಮ್ಮ ಸರ್ಕಾರದ ಪ್ರಧಾನ ಮಂತ್ರಿಯನ್ನು ಅಥವಾ ಮುಖ್ಯಮಂತ್ರಿಯನ್ನು ಪರೋಕ್ಷವಾಗಿ ನಿಯಂತ್ರಿಸಲು ಅವಕಾಶವನ್ನು ರಾಜಕೀಯ ಪಕ್ಷ ನೀಡದಂತೆ ಅದರ ಸಂವಿಧಾನ ಇರಬೇಕು. ಇಂಥ ನಿಯಂತ್ರಣ ಸಂವಿಧಾನಬಾಹಿರ ಶಕ್ತಿಗಳಿಗೆ ಅವಕಾಶ ಮಾಡಿಕೊಡುವುದರಿಂದ ಇಂಥ ನಿಯಂತ್ರಣ ಸಾಧ್ಯವಾಗದಂತೆ ಮಾಡಬೇಕು.

ಸಂಸತ್ತಿಗೆ ಹಾಗೂ ರಾಜ್ಯಗಳ ಶಾಸನಸಭೆಗಳ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ ನೋಡಿ ಹಾಗೂ ಹಣ ಒದಗಿಸಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಚುನಾವಣೆ ಜಾತ್ಯಾಧಾರಿತವಾಗಿ ನಡೆಯುವಂತೆ ಮಾಡಿ ಭ್ರಷ್ಟರು ಜಾತಿಯ ಬಲದಿಂದ ಮತ್ತೆ ಮತ್ತೆ ಚುನಾಯಿತರಾಗುವಂತೆ ಮಾಡುತ್ತದೆ ಹಾಗೂ ಜಾತೀಯತೆ ಇಡೀ ಸರ್ಕಾರವನ್ನು ನಿಯಂತ್ರಿಸುವಂತೆ ಆಗುತ್ತದೆ. ಇದನ್ನು ತಪ್ಪಿಸಲು ಹಾಗೂ ಯೋಗ್ಯ ವ್ಯಕ್ತಿ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಲು ಕೆಲವೊಂದು ಅರ್ಹತೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಬೇಕಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಿ ಅವರ ಜ್ಞಾನವನ್ನು ಅಳೆಯುವ ಕೆಲಸ ಮಾಡಿದರೆ ಹಾಗೂ ನಿರ್ದಿಷ್ಟ ಅಂಕಗಳನ್ನು ಗಳಿಸುವ ಅಭ್ಯರ್ಥಿಗಳು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ನಿಯಮ ತಂದರೆ ಅಯೋಗ್ಯರು ಚುನಾವಣೆಗಳಿಗೆ ಸ್ಪರ್ಧಿಸುವುದನ್ನು ತಪ್ಪಿಸಬಹುದು.

ಪ್ರವೇಶ ಪರೀಕ್ಷೆಯಲ್ಲಿ 80% ಅಂಕಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ಜಾರಿಗೆ ತರಬೇಕು. ಮೀಸಲು ಸ್ಥಾನಗಳಲ್ಲಿ ಈ ಮಿತಿಯನ್ನು 70% ನಿಗದಿ ಪಡಿಸಬಹುದು. ಪ್ರವೇಶ ಪರೀಕ್ಷೆಯನ್ನು ಚುನಾವಣೆ ನಡೆಯುವ ಮೊದಲು ಚುನಾವಣಾ ಆಯೋಗವೇ ನಡೆಸುವಂತೆ ಆಗಬೇಕು. ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಸಂವಿಧಾನದ ಬಗೆಗಿನ ಜ್ಞಾನ, ರಾಜನೀತಿಯ ಬಗೆಗಿನ ಜ್ಞಾನ, ಭೌಗೋಳಿಕ ಜ್ಞಾನ, ಪರಿಸರ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಆಡಳಿತದ ಬಗೆಗಿನ ಜ್ಞಾನ ಇತ್ಯಾದಿಗಳ ಬಗ್ಗೆ ಬಹು ಆಯ್ಕೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು (ಸಾಮಾನ್ಯ ವರ್ಗ), 70% ಕ್ಕಿಂತ ಹೆಚ್ಚು (ಮೀಸಲು ಕ್ಷೇತ್ರ) ಅಂಕ ಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪಡೆಯುವಂತೆ ಆಗಬೇಕು. ವೈದ್ಯಕೀಯ, ಇಂಜಿನಿಯರಿಂಗ್, ಐ.ಐ.ಟಿ., ಐ.ಎ.ಎಸ್., ಕೆ.ಎ.ಎಸ್. ಇತ್ಯಾದಿ ಪರೀಕ್ಷೆ ನಡೆಸಿ ಯೋಗ್ಯ ಹಾಗೂ ಪ್ರತಿಭಾವಂತರನ್ನು ಆರಿಸುವಂತೆ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಆರಿಸಲು ಇಂಥ ಒಂದು ಮಾನದಂಡವನ್ನು ಚುನಾವಣಾ ಆಯೋಗ ಜಾರಿಗೆ ತಂದರೆ ನಮ್ಮ ಸಂಸತ್ತಿಗೆ, ಶಾಸನಸಭೆಗಳಿಗೆ ಹೆಚ್ಚು ಪ್ರಜ್ಞಾವಂತರನ್ನು, ಚಿಂತನಶೀಲರನ್ನು, ನಿಸ್ವಾರ್ಥಿಗಳನ್ನು ಕಳುಹಿಸಲು ಸಾಧ್ಯವಾಗಬಹುದು. ರಾಜಕೀಯ ಪಕ್ಷಗಳಿಂದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇಂಥ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬರುವಂತಾದರೆ ಅವರು ಹೆಚ್ಚು ಯೋಗ್ಯರಾಗಿರುವ ಸಾಧ್ಯತೆ ಇದೆ. ಇಂಥ ಯೋಗ್ಯರ ನಡುವೆ ಚುನಾವಣೆಯಲ್ಲಿ ಸ್ಪರ್ಧೆ ಏರ್ಪಟ್ಟು ಅವರಲ್ಲಿ ಜನ ಯಾರನ್ನು ಆರಿಸುತ್ತಾರೋ ಆಗ ಶಾಸನಸಭೆಗಳು ಹೆಚ್ಚು ಜವಾಬ್ದಾರಿಯುತ ಹಾಗೂ ಸಂವೇದನಾಶೀಲರಿಂದ ತುಂಬಿ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇಂಥ ಪರೀಕ್ಷೆಗಳಲ್ಲಿ ಅರ್ಹತೆ ಪಡೆದು ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದ ಶಾಸಕರು ಹಾಗೂ ಸಂಸದರು ಸಮರ್ಪಕವಾಗಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೆ ಇದ್ದರೆ ಇದಕ್ಕಾಗಿ ನಡೆಸುವ ಅರ್ಹತಾ ಪರೀಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಿ ಹೆಚ್ಚು ಮೇಧಾವಿಗಳು, ಚಿಂತಕರು, ಸಂವೇದನಾಶೀಲರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ಆಗಬೇಕು.

ಕಾರ್ಯಾಂಗದಲ್ಲಿ ಪ್ರಮುಖ ಹುದ್ಧೆಗಳನ್ನು ನಿರ್ವಹಿಸಲು ಅತ್ಯಂತ ಪ್ರತಿಭಾವಂತರನ್ನು ಪ್ರವೇಶಪರೀಕ್ಷೆಗಳ ಮೂಲಕ (ಐ.ಎ. ಎಸ್., ಐ.ಪಿ.ಎಸ್., ಐ.ಎಫ್.ಎಸ್., ಕೆ.ಎ.ಎಸ್. ಇತ್ಯಾದಿ) ಆಯ್ಕೆ ಮಾಡಿ ಅವರಿಗೆ ನಿರ್ದೇಶನ ನೀಡಲು ಕಡಿಮೆ ಯೋಗ್ಯತೆಯುಳ್ಳ, ಸಂವೇದನಾರಹಿತ, ಭ್ರಷ್ಟ, ವ್ಯಕ್ತಿಗಳನ್ನು ಚುನಾಯಿಸುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಗಂಭೀರ ದೋಷ ಅಡಗಿದೆ. ಇದು ಹೇಗಿದೆ ಎಂದರೆ ಕಡಿಮೆ ಜ್ಞಾನ ಹೊಂದಿರುವ ಒಬ್ಬ ಗುಮಾಸ್ತನನ್ನು ಒಂದು ಸಂಸ್ಥೆಯ ಮುಖ್ಯಸ್ಥನನ್ನು ನಿಯಂತ್ರಿಸಲು ಹಾಗೂ ನಿರ್ದೇಶಿಸಲು ಬಿಟ್ಟರೆ ಹೇಗಿರುತ್ತದೋ ಹಾಗೆ ಆಗಿದೆ. ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸುವ ಯೋಗ್ಯ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆರಿಸುವ ತಿದ್ದುಪಡಿ ತರಲು ಹಾಗೂ ರಾಜಕೀಯ ಪಕ್ಷಗಳಲ್ಲಿ ವಂಶವಾಹೀ ವ್ಯವಸ್ಥೆಯನ್ನು ಹೋಗಲಾಡಿಸುವ ನಿಯಮ ತರಲು ಈಗಿರುವ ಕಾನೂನುಗಳಲ್ಲಿ ಅವಕಾಶ ಇಲ್ಲವೆಂದಾದರೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಒತ್ತಾಯ ಪ್ರಜೆಗಳಿಂದ ರೂಪುಗೊಳ್ಳಬೇಕಾದ ಅಗತ್ಯ ಇದೆ.

ಕಾರ್ಯಾಂಗದ ವಿವಿಧ ಹುದ್ಧೆಗಳಿಗೆ ಆಯ್ಕೆ ಮಾಡುವ ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್. ಇತ್ಯಾದಿ ಪರೀಕ್ಷೆಗಳಲ್ಲಿ ಜಾತಿ ನೋಡಿ ಆರಿಸುವ ಪದ್ಧತಿ ಇಲ್ಲದಿರುವಾಗ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಾಗ ಜಾತ್ಯಾಧಾರಿತವಾಗಿ ನಿರ್ಧರಿಸುವುದು ತಪ್ಪಬೇಕು. ಇದಕ್ಕಾಗಿ ಒಂದು ಸಂಸದ ಅಥವಾ ಶಾಸಕ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಜನರಿರುವ ಜಾತಿಯ ಅಭ್ಯರ್ಥಿಯನ್ನು ಯಾವ ರಾಜಕೀಯ ಪಕ್ಷಗಳೂ ನಿಲ್ಲಿಸಬಾರದು ಎಂಬ ಒಂದು ನಿಯಮವನ್ನು ಚುನಾವಣಾ ಆಯೋಗ ತರಬೇಕು. ಉದಾಹರಣೆಗೆ ಕೆಲವು ಮತಕ್ಷೇತ್ರಗಳಲ್ಲಿ ಲಿಂಗಾಯತರು, ಇನ್ನು ಕೆಲವು ಕ್ಷೇತ್ರಗಳಲ್ಲಿ ಒಕ್ಕಲಿಗರು ಹೀಗೆ ಒಂದೊಂದು ಜಾತಿಯ ಜನ ಅಧಿಕ ಸಂಖ್ಯೆಯಲ್ಲಿರುವಾಗ ಇದನ್ನು ಲೆಕ್ಕ ಹಾಕಿಯೇ ಅಂಥ  ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಅಭ್ಯರ್ಥಿಗಳನ್ನು ಅಭ್ಯರ್ಥಿಯಾಗಿ ನಿಲ್ಲಿಸುವ ಪದ್ಧತಿಯನ್ನು ಚುನಾವಣಾ ಆಯೋಗ ನಿಯಮದ ಮೂಲಕ ನಿಲ್ಲಿಸುವಂತೆ ಮಾಡಬೇಕು. ಹೀಗೆ ಮಾಡಿದರೆ ಜಾತಿ ನೋಡಿ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ರಾಜಕೀಯ ಪಕ್ಷಗಳ ಕುಟಿಲ ನೀತಿಯನ್ನು ತಡೆಯಬಹುದು. ಇಂಥ ಒಂದು ನಿಯಮ ಬಂದರೆ ಜಾತಿಯ ಆಧಾರದಲ್ಲಿ ಶಾಸಕರ ಗುಂಪನ್ನು ಕಟ್ಟಿ ರಾಜಕೀಯ ಪಕ್ಷದೊಳಗೆ ಗುಂಪುಗಾರಿಕೆ ಮಾಡುವ ಹುಂಬರನ್ನು ನಿಯಂತ್ರಿಸಲು ಸಾಧ್ಯವಿದೆ ಹಾಗೂ ಪರಮ ಭ್ರಷ್ಟರು, ಊಳಿಗಮಾನ್ಯ ಮನೋಸ್ಥಿತಿಯ ಹಾಗೂ ಹುಂಬ ರಾಜಕಾರಣಿಗಳು ಜಾತಿ ಆಧಾರದಲ್ಲಿ ಮತ್ತೆ ಮತ್ತೆ ರಾಜಕೀಯದಲ್ಲಿ ಮೇಲುಗೈ ಸಾಧಿಸುವುದನ್ನು ತಡೆಯಲು ಸಾಧ್ಯ.

ಚುನಾವಣಾ ಆಯೋಗ ಸುಧಾರಣೆಗಳನ್ನು ತರಲು ಸಾಧ್ಯವಾಗದೆ ಹೋದರೆ ರಾಜಕೀಯ ಕ್ಷೇತ್ರಕ್ಕೆ ಬದಲಾವಣೆ ತರಲು ಹೊಸ ಪಕ್ಷಗಳನ್ನು ಸ್ಥಾಪಿಸುವವರು ಕೆಲವೊಂದು ನಿಯಮಗಳನ್ನು ಹೊಂದುವುದರಿಂದ ತಾವು ಇತರ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಲು ಸಾಧ್ಯ. ವಂಶವಾಹೀ ಪ್ರಭುತ್ವ ಬರದಂತೆ ತಡೆಯಲು ಪಕ್ಷದ ಸಂವಿಧಾನ ರೂಪಿಸುವಾಗಲೇ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ವ್ಯಕ್ತಿ ಪಕ್ಷದ ಅಧ್ಯಕ್ಷನಾಗಿ ಒಂದು ಬಾರಿ ಕಾರ್ಯ ನಿರ್ವಹಿಸಿದ್ದರೆ ಪುನಃ ಅವರು ಚುನಾವಣೆಗೆ ಸ್ಪರ್ಧಿಸಲಾಗದಂತೆ ನಿಯಮ ರೂಪಿಸಬಹುದು. ಇಂಥ ಒಂದು ನಿಯಮವನ್ನು ಸ್ವಾತಂತ್ರ್ಯ ದೊರಕಿದಾಗಲೇ ರಾಜಕೀಯ ಪಕ್ಷಗಳು ಸ್ವಯಂ ತಾವಾಗಿಯೇ ರೂಪಿಸಿಕೊಂಡಿದ್ದರೆ ಅಥವಾ ಸಂವಿಧಾನದಲ್ಲೇ ರಾಜಕೀಯ ಪಕ್ಷಗಳ ಸ್ಥಾಪನೆ ಹಾಗೂ ನಿರ್ವಹಣೆ ವಿಷಯದಲ್ಲಿ ಇಂಥ ಸೂತ್ರಗಳನ್ನು ಕಡ್ಡಾಯವಾಗಿ ವಿಧಿಸಿದ್ದರೆ ಇಂದು ಭಾರತ ವಂಶವಾಹೀ ಪ್ರಭುತ್ವಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು. ಹೊಸದಾಗಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆನ್ನುವವರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆರಿಸುವಾಗ ಕೆಲವೊಂದು ಮಾನದಂಡಗಳನ್ನು ಇಟ್ಟುಕೊಂಡರೆ ಹೆಚ್ಚು ಸಂವೇದನಾಶೀಲ, ಚಿಂತನಶೀಲ, ಪ್ರಜ್ಞಾವಂತ ವ್ಯಕ್ತಿಗಳು ಶಾಸನಸಭೆಗಳಿಗೆ ಅರಿಸಿಬರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ಹೆಚ್ಚು ತಿಳುವಳಿಕೆ ಉಳ್ಳ ಪ್ರಾಧ್ಯಾಪಕರು, ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಸಾಹಿತಿಗಳು, ವಿಜ್ಞಾನ ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ವಿಜ್ಞಾನಿಗಳು ಮೊದಲಾದವರನ್ನು ಅವರ ನಿವೃತ್ತಿಯ ನಂತರ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಮಾಡಿ ಗೆಲ್ಲಿಸಿ ಕಳುಹಿಸುವಂತಾದರೆ ಇವರೆಲ್ಲ ಚಿಂತನಶೀಲರಾಗಿರುವುದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಬಲಿಯಾಗುವ ಸಾಧ್ಯತೆ ಕಡಿಮೆ. ಇದರಿಂದ ಉತ್ತಮ ಸರ್ಕಾರ ರೂಪುಗೊಳ್ಳಲು ಸಾಧ್ಯ. ಕುವೆಂಪು, ಶಿವರಾಮ ಕಾರಂತರಂಥ ಮೇರು ಸಾಹಿತಿಗಳು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದರೆ ಮಹತ್ವದ ಜನಪರವಾದ ಬದಲಾವಣೆಗಳನ್ನು ತರಲು ಸಾಧ್ಯ ಹಾಗೂ ಇಂಥವರು ಎಷ್ಟೇ ಉನ್ನತ ಅಧಿಕಾರ, ಪ್ರಸಿದ್ಧಿ ದೊರಕಿದರೂ ಭ್ರಷ್ಟರಾಗುವ ಸಾಧ್ಯತೆ ಇಲ್ಲ. ಕುವೆಂಪು, ಎಚ್. ನರಸಿಂಹಯ್ಯ ಮೊದಲಾದ ಚಿಂತನಶೀಲರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕೆಲಸ ಮಾಡಿ ತಮ್ಮ ಅವಧಿಯಲ್ಲಿ ವಿಶ್ವವಿದ್ಯಾನಿಲಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಅವರಲ್ಲಿ ಇದ್ದ ಚಿಂತನಶೀಲತೆ, ಅಂತರ್ಮುಖಿ ವ್ಯಕ್ತಿತ್ವ, ಕನಸುಗಾರಿಕೆ, ದೂರದೃಷ್ಟಿ ಕಾರಣ. ಇಂಥ ವ್ಯಕ್ತಿತ್ವ ಇರುವವರು ಎಷ್ಟೇ ದೊಡ್ಡ ಅಧಿಕಾರ ದೊರಕಿದರೂ ಭ್ರಷ್ಟರೂ, ಅಹಂಕಾರಿಗಳೂ, ಸ್ವಜನ ಪಕ್ಷಪಾತಿಗಳೂ ಆಗುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಇಂಥವರಿಗೆ ಮಹತ್ವದ ಹುದ್ಧೆಯನ್ನು ಕೊಡುವ ಚಿಂತನೆ ಆಗಬೇಕು ಅಥವಾ ಹೊಸ ರಾಜಕೀಯ ವ್ಯವಸ್ಥೆಗಾಗಿ ಶ್ರಮಿಸುವವರು ಈ ಕುರಿತು ಯೋಚಿಸಬೇಕಾಗಿದೆ.

ಬಹಿರ್ಮುಖಿಗಳು, ಮುನ್ನುಗ್ಗಿ ಹೋಗುವ ಸ್ವಭಾವ, ಭಾರೀ ವಾಕ್ಚಾತುರ್ಯವುಳ್ಳವರು ಇಂಥ ವ್ಯಕ್ತಿತ್ವದ ಜನ ಸಂಘಟನೆಯಲ್ಲಿ ಮುಂದು, ಆದರೆ ಇಂಥವರು ಉನ್ನತ ಅಧಿಕಾರ ಸಿಕ್ಕಾಗ ಭ್ರಷ್ಟರಾಗುವ, ಅಹಂಕಾರಿಗಳಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಇಂಥ ವ್ಯಕ್ತಿತ್ವವುಳ್ಳವರಿಗೆ ಉನ್ನತ ಅಧಿಕಾರ ಸ್ಥಾನವನ್ನು ರಾಜಕೀಯ ಪಕ್ಷದಲ್ಲಿ ನೀಡಲು ಸಾಧ್ಯವಾಗದಂತೆ ನಿಯಮ ರೂಪಿಸಬೇಕು. ಇಂಥವರಿಗೆ ಸಂಘಟನೆಯ ಜವಾಬ್ದಾರಿ ಮಾತ್ರ ನೀಡುವಂತೆ ಆಗಬೇಕು. ಉನ್ನತ ಸಾಧನೆ ಮಾಡಿದ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು ಇಂಥ ವ್ಯಕ್ತಿಗಳನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಒಂದು ನಿಯಮವನ್ನು ಹೊಸ ರಾಜಕೀಯ ಪಕ್ಷಗಳು ರೂಪಿಸಬಹುದು. ಹೀಗೆ ಮಾಡಿದರೆ ಉನ್ನತ ಅಧಿಕಾರ ಸ್ಥಾನವಾದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ, ಪೈಪೋಟಿ ಉಂಟಾಗುವುದನ್ನು ತಡೆಯಬಹುದು. ಭಾರತದಲ್ಲಿ ಸ್ವಾತಂತ್ರ್ಯಾನಂತರ ನಾಯಕತ್ವದ ಪೈಪೋಟಿ, ಕಚ್ಚಾಟದಿಂದಾಗಿಯೇ ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನಗಳು ವಿಫಲವಾಗುತ್ತ ಬಂದಿವೆ. ಒಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ಪಕ್ಷದಲ್ಲಿರುವ ನಾಯಕರ ನಡುವೆ ಅಥವಾ ಮೈತ್ರಿಕೂಟ ಸರ್ಕಾರವಾದರೆ ವಿವಿಧ ಘಟಕ ಪಕ್ಷಗಳ ನಡುವೆ ನಾಯಕತ್ವ ಸ್ಥಾನಕ್ಕಾಗಿ ಕಚ್ಚಾಟ ನಡೆಯುವುದು ಇಡೀ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸುವ ಪ್ರಯತ್ನಗಳಿಗೆ ಹಿನ್ನಡೆ ಆಗಿ ಅದು ವಿಫಲವಾಗಲು ಕಾರಣ. ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಪ್ರಯತ್ನಿಸುವವರು ಇದನ್ನು ತಪ್ಪಿಸಲು ಸ್ಪಷ್ಟ ನಿಯಮಗಳನ್ನು ರೂಪಿಸಿದರೆ ಮತ್ತು ರಾಜಕೀಯೇತರ ಉನ್ನತ ಸಾಧನೆ ಮಾಡಿದ ವ್ಯಕ್ತಿಯನ್ನು ನಾಯಕ ಸ್ಥಾನಕ್ಕೆ ತರುವ ನಿಯಮ ಮಾಡಿಕೊಂಡರೆ ಇಂಥ ಆಂತರಿಕ ಕಚ್ಚಾಟಗಳನ್ನು ನಿಯಂತ್ರಿಸಬಹುದು ಅಥವಾ ನಿವಾರಿಸಿಕೊಳ್ಳಬಹುದು.

ಪ್ರಜಾಪ್ರಭುತ್ವಕ್ಕೆ ಅಪಾಯ ತರಬಲ್ಲ ಮೂಲಭೂತವಾದ

– ಆನಂದ ಪ್ರಸಾದ್

ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಮೂಲಭೂತವಾದ ಹೆಚ್ಚುತ್ತಿದೆ.  ಭಾರತದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಹಾಗೂ ಅಂಥ ಸಂಘಟನೆಗಳ ಗರ್ಭದಿಂದ ಜನ್ಮ ತಳೆದ ರಾಜಕೀಯ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಇಂಥ ಮೂಲಭೂತವಾದ ಬೆಳೆಯಲು ಹೆಚ್ಚು ಪ್ರೋತ್ಸಾಹ ಸಿಕ್ಕಿದಂತೆ ಆಯಿತು. ಮೂಲಭೂತವಾದವನ್ನು ಬೆಳೆಸುವುದು ಸುಲಭವಾದುದರಿಂದ ಇದು ವೇಗವಾಗಿ ಬೆಳೆಯುತ್ತದೆ. ವೈಚಾರಿಕ ಹಾಗೂ ರಾಜಕೀಯ ಪ್ರಜ್ಞೆ ಇಲ್ಲದ ಜನಸಮೂಹವನ್ನು ಧರ್ಮದ ಹೆಸರಿನಲ್ಲಿ ಸುಲಭವಾಗಿ ಪ್ರಚೋದಿಸಬಹುದು ಹಾಗೂ ಅಂಥ ಪ್ರಚೋದನೆಯನ್ನೇ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಅಧಿಕಾರ ಹಿಡಿಯುವ ಹವಣಿಕೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಗುರಿಯೂ ಹೌದು. ಆದರೂ ಭಾರತದ ಸಹಿಷ್ಣು ಜನಸಮುದಾಯ ಇಂಥ ತಂತ್ರವನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದಾರೆ ಎಂಬುದು 2004 ಹಾಗೂ 2009ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಕಂಡುಬರುತ್ತದೆ.

ಅಯೋಧ್ಯೆಯ ರಾಮಮಂದಿರದ ಬೇಡಿಕೆ ಇಟ್ಟುಕೊಂಡು ಆರಂಭವಾದ ರಥಯಾತ್ರೆಯ ಮೂಲಕ ದೇಶದಲ್ಲಿ ಧಾರ್ಮಿಕ ಮೂಲಭೂತವಾದಿ ಮನೋಭಾವವನ್ನು ಬದಿದೆಬ್ಬಿಸುವಲ್ಲಿ ಯಶಸ್ವಿಯಾದ ಬಿಜೆಪಿ ಹಾಗೂ ಅದರ ಜನ್ಮದಾತ ಸಂಘ ಪರಿವಾರ ನಂತರ ಬಾಬ್ರಿ ಮಸೀದಿಯನ್ನು ನೆಲಸಮ ಮಾಡುವಲ್ಲಿಯೂ ಯಶಸ್ವಿಯಾಯಿತು. ಇದರ ಫಲವಾಗಿ ದೇಶದಲ್ಲಿ ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ನಂತರ ಮೈತ್ರಿಕೂಟ ರಚಿಸಿಕೊಂಡು ಕೇಂದ್ರದಲ್ಲಿಯೂ ಅಧಿಕಾರ ಹಿಡಿಯಿತು. ಇದು ಸಂಘ ಪರಿವಾರದ ಸಂಘಟನೆಗಳಿಗೆ ಆನೆಬಲ ತಂದುಕೊಟ್ಟಿತು. ದೇಶಾದ್ಯಂತ ಪರಿವಾರದ ಸಂಘಟನೆಗಳು ಬಲವಾಗಿ ಬೆಳೆದವು. ಆದರೆ ಇದರ ಸಮಾನಾಂತರವಾಗಿ ದೇಶದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೂ ಬೆಳೆದಿವೆ. ಇದಕ್ಕೆ ಕಾರಣ ಹಿಂದೂ ಮೂಲಭೂತವಾದಿ ಸಂಘಟನೆಗಳು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಹುಟ್ಟು ಹಾಕಿದ ಅಭದ್ರತೆಯ ಭಾವನೆ. ಇದರಿಂದಾಗಿ ಸೌಹಾರ್ದವಾಗಿ ಬದುಕುತ್ತಿದ್ದ ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸಂಶಯದ ವಾತಾವರಣ ರೂಪುಗೊಂಡಿತು.  ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಲವಾರು ತಾಣಗಳು ಹಿಂದೂ ಮೂಲಭೂತವಾದಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು, ತನ್ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಹಾಯಕವಾಯಿತು. ಹಿಂದೂ ಮೂಲಭೂತವಾದಿಗಳು ತಮ್ಮ ಪ್ರಭಾವ ಬೆಳೆಸಿ ಉಳಿಸಿಕೊಳ್ಳಲು ಸತತವಾಗಿ ಹಿಂದೂ ಸಮಾಜೋತ್ಸವ, ಹಿಂದೂ ಜಾಗರಣ ದಿನ, ಅಖಂಡ ಭಾರತ ಸಂಕಲ್ಪ ದಿನ ಇತ್ಯಾದಿಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.  ಅಖಂಡ ಭಾರತ ಅಂದರೆ ಸ್ವಾತಂತ್ರ್ಯಪೂರ್ವದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನೊಳಗೊಂಡ ಭಾರತ ನಿರ್ಮಾಣ ಹೆಸರಿನಲ್ಲಿ ಜನತೆಯಲ್ಲಿ ಮೂಲಭೂತವಾದಿ ಭಾವನೆಗಳನ್ನು ಬಿತ್ತುವುದು ಹಾಗೂ ಅವರನ್ನು ಇನ್ನೊಂದು ಧರ್ಮದ ಜನರನ್ನು ದ್ವೇಷದಿಂದ ಕಾಣುವಂತೆ ಪ್ರಚೋದಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಗಳೇನೂ ಅಲ್ಲ. ಧರ್ಮದ ಆಧಾರದ ಮೇಲೆ ವಿಭಜನೆ ಆಗಿ ಆರು ದಶಕಗಳೇ ಕಳೆದಿರುವಾಗ ಅಖಂಡ ಭಾರತ ನಿರ್ಮಾಣ ಸಾಧ್ಯವೂ ಇಲ್ಲ, ಅಂಥ ಹೋರಾಟದ ಅಗತ್ಯವೂ ಇಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ತಮ್ಮ ಆರಂಭದಲ್ಲಿ ಜಾತ್ಯತೀತ ಧೋರಣೆಗಳನ್ನು  ಹೊಂದಿದ್ದರೂ ನಂತರದಲ್ಲಿ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ರಿಪೇರಿಯಾಗದಷ್ಟು ಕೆಟ್ಟು ಹೋಗಿವೆ.  ಹೀಗಾಗಿ ಅಂಥ ದೇಶಗಳನ್ನು ಮತ್ತೆ ಒಂದುಗೂಡಿಸುವುದು ಸಾಧ್ಯವಾಗದು. ಯುದ್ಧದ ಮೂಲಕ ಅವುಗಳನ್ನು ಸೋಲಿಸಿ ಗೆದ್ದುಕೊಳ್ಳುತ್ತೇವೆ ಎಂದು ಹೋದರೂ ಅದು ಕೂಡ ಸಾಧ್ಯವಾಗದ ಮಾತು. ಏಕೆಂದರೆ ಪಾಕಿಸ್ತಾನದ ಬಳಿ ನಮ್ಮ ಬಳಿ ಇರುವಂತೆಯೇ ಪರಮಾಣು ಅಸ್ತ್ರಗಳಿವೆ ಹಾಗೂ ಅದರ ಬೆಂಬಲಕ್ಕೆ ಚೀನಾ ಹಾಗೂ ಅಮೇರಿಕ ದೇಶಗಳು ಇವೆ.  ಹೀಗಾಗಿ ಅಂಥ ದುಸ್ಸಾಹಸವೂ ಕೂಡ ಸಾಧ್ಯವಿಲ್ಲ.

ಪಾಕಿಸ್ತಾನದಲ್ಲಿ ಸ್ವಾತಂತ್ರ್ಯಾನಂತರ 22% ಹಿಂದೂಗಳ ಜನಸಂಖ್ಯೆ ಇದ್ದದ್ದು ಈಗ 5% ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಹಿಡಿತ ಸಾಧಿಸಿರುವ ಕಾರಣ ಅಲ್ಲಿನ ಹಿಂದೂಗಳ ಮೇಲೆ ತೀವ್ರ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದನ್ನು ನಮ್ಮ ದೇಶವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿ ನೋಡಬಹುದು.  ಆದರೂ ಇದರಿಂದ ಪ್ರಯೋಜನ ಆದೀತು ಎಂದು ಹೇಳಲಾಗದು, ಏಕೆಂದರೆ ಪಾಕಿಸ್ತಾನವು ರಿಪೇರಿಯಾಗದಷ್ಟು ಕೆಟ್ಟು ಹೋಗಿದೆ. ಇದೇ ಪರಿಸ್ಥಿತಿ ಬಾಂಗ್ಲಾ ದೇಶದಲ್ಲಿಯೂ ಇದೆ.  ಬಾಂಗ್ಲಾದಲ್ಲಿ ಸ್ವಾತಂತ್ರ್ಯಾನಂತರ 22% ಇದ್ದ ಹಿಂದೂಗಳ ಸಂಖ್ಯೆ ಈಗ 9% ಕ್ಕೆ ಇಳಿದಿದೆ. ಅಲ್ಲಿಯೂ ಹಿಂದೂಗಳ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದು ಮೂಲಭೂತವಾದದ ದುಷ್ಪರಿಣಾಮ ಹಾಗೂ ಆಧುನಿಕ ಪ್ರಜಾಪ್ರಭುತ್ವ ಮೌಲ್ಯಗಳನ್ನು, ರಾಜಕೀಯ ಪರಿಕಲ್ಪನೆಗಳನ್ನು ಬೆಳೆಸದೆ ಹೋದುದರಿಂದ ಉಂಟಾಗಿರುವ ಪರಿಸ್ಥಿತಿ. ಇದನ್ನು ಆ ದೇಶಗಳ ಜನರೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲು ಸಾಧ್ಯವಿಲ್ಲ.  ಪಾಕಿಸ್ತಾನದಲ್ಲಿ ಬೇರೆ ಅಲ್ಪಸಂಖ್ಯಾತ ಮುಸ್ಲಿಂ ಪಂಗಡಗಳ ಜನರಿಗೂ ಮೂಲಭೂತವಾದಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ವರದಿಗಳಿವೆ.  ಪಾಕಿಸ್ತಾನದ ಇಂಥ ಬೆಳವಣಿಗೆಗಳಿಂದ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ರೀತಿ ಆಗಿದೆ ಮತ್ತು ಇದು ಇಸ್ಲಾಂ ಧರ್ಮಕ್ಕೂ ಕೆಟ್ಟ ಹೆಸರು ತರಲು ಕಾರಣವಾಗಿದೆ. ಇದನ್ನು ಇಸ್ಲಾಂ ಧರ್ಮಗುರುಗಳೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲಾಗದು. ಇದು ಮೂಲತಹ: ಆಧುನಿಕ ಶಿಕ್ಷಣ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವದ ರಾಜಕೀಯ ಪ್ರಜ್ಞೆಯನ್ನು ಬೆಳೆಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ.  ಇಂದಿನ ಜಾಗತೀಕರಣಗೊಂಡ ಜಗತ್ತಿನಲ್ಲಿ ಇದು ಇಸ್ಲಾಂ ಧರ್ಮ ತಲೆ ತಗ್ಗಿಸುವಂತೆ ಮಾಡಬಹುದು.  ಹಾಗಾಗಿ ಈ ಕುರಿತು ಜಗತ್ತಿನ ಇಸ್ಲಾಂ ಧರ್ಮಗುರುಗಳು ಚಿಂತಿಸಬೇಕಾಗಿದೆ.

ಬಾಂಗ್ಲಾ ದೇಶೀಯರು ಅಕ್ರಮವಾಗಿ ಭಾರತಕ್ಕೆ ನುಸುಳಿ ದೇಶಾದ್ಯಂತ ಹರಡಿಹೋಗಿ ಸಮಸ್ಯೆಯಾಗುತ್ತಿದ್ದಾರೆ ಎಂದು ಹಿಂದೂ ಮೂಲಭೂತವಾದಿಗಳು ಹಾಗೂ ಅವರ ರಾಜಕೀಯ ಪಕ್ಷವು ಪದೇ ಪದೇ ಹೇಳುತ್ತಿದೆ. ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ಚಿಂತಿಸಬೇಕಾದ ಅಗತ್ಯ ಇದೆ.  ಅಕ್ರಮ ಬಾಂಗ್ಲಾದೇಶೀಯರ ಸಂಖ್ಯೆ ದೇಶದಲ್ಲಿ ಮೂರು ಕೋಟಿ ಇದೆ ಎಂದು ಹೇಳಲಾಗುತ್ತಿದೆ.  ಇಲ್ಲಿ ಅಂಥ ಅಕ್ರಮ ವಲಸಿಗರಿಗೆ ರೇಶನ್ ಕಾರ್ಡ್, ವೋಟರ್ ಕಾರ್ಡ್ ಇತ್ಯಾದಿಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ನಮ್ಮ ದೇಶದ ಇಂಥ ಕಾರ್ಡುಗಳನ್ನು ನೀಡುವುದು ಸಮಂಜಸವಲ್ಲ.  ಇದನ್ನು ವೋಟು ಬ್ಯಾಂಕಿನ ದೃಷ್ಟಿಯಿಂದ ನೀಡಲಾಗಿದ್ದರೆ ಅದು ಸಮಂಜಸವಾದ ಕ್ರಮವೂ ಅಲ್ಲ. ಇದರಿಂದ ಹಿಂದೂ ಮೂಲಭೂತವಾದಿಗಳ ವಾದಕ್ಕೆ ಮತ್ತಷ್ಟು ಬಲ ಬಂದು ನಮ್ಮ ದೇಶದಲ್ಲಿಯೂ ಮೂಲಭೂತವಾದಿಗಳು ಬೆಳೆಯಲು ಕಾರಣವಾದೀತು. ಹೀಗಾಗಿ ಎಲ್ಲ ಪಕ್ಷಗಳೂ ಇದನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯ ಇದೆ.