Category Archives: ಆನಂದ ಪ್ರಸಾದ್

ನಿತ್ಯಾನಂದನಿಗೆ ಒಂದು ನೀತಿ, ಭ್ರಷ್ಟ ರಾಜಕಾರಣಿಗಳಿಗೆ ಇನ್ನೊಂದು ನೀತಿ. ಏಕಿಂಥ ತಾರತಮ್ಯ?

-ಆನಂದ ಪ್ರಸಾದ್

ಸುವರ್ಣ ಸುದ್ದಿ ವಾಹಿನಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಿತ್ಯಾನಂದ ಸ್ವಾಮಿಯ ವಿರುದ್ಧ ಆಕ್ರಮಣಕಾರಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತ ಬಂದಿರುವುದರ ಪರಿಣಾಮವಾಗಿ ಇಂದು ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಕ್ರೋಶ ರೂಪುಗೊಂಡಿರುವುದು ಕಂಡುಬರುತ್ತದೆ. ಇದೇ ರೀತಿಯ ಆಕ್ರೋಶ ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಕರ್ನಾಟಕದಲ್ಲಿ ರೂಪುಗೊಳ್ಳುವುದಿಲ್ಲ ಏಕೆ? ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದು ಹಲವಾರು ತಿಂಗಳುಗಳೇ ಕಳೆದಿವೆ, ಆದರೂ ಲೋಕಾಯುಕ್ತರ ನೇಮಕ ಏಕೆ ಮಾಡಿಲ್ಲ ಎಂದು ಯಾವುದೇ ವಾಹಿನಿಯವರು ಸರ್ಕಾರಕ್ಕೆ ನಿತ್ಯಾನಂದನ ವಿಷಯದಲ್ಲಿ ಸವಾಲು ಹಾಕಿರುವಂತೆ ಸವಾಲು ಹಾಕಿರುವುದು ಕಂಡುಬರುವುದಿಲ್ಲ. ಕರ್ನಾಟಕದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಷ್ಪಕ್ಷಪಾತಿ ಲೋಕಾಯುಕ್ತರ ನೇಮಕ ಮಾಡಲೇಬೇಕು ಎಂದು ಗಡುವು ವಿಧಿಸಿ ಹೋರಾಟ ಮಾಡಲು, ಜನಜಾಗೃತಿ ಮೂಡಿಸಲು ಯಾವುದೇ ಟಿವಿ ವಾಹಿನಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಏಕೆ ಈ ರೀತಿ ಯಾವುದೇ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಮುಂದಾಗುತ್ತಿಲ್ಲ?

ಟಿವಿ ವಾಹಿನಿಗಳಿಗೆ ಜನಜಾಗೃತಿ ಮೂಡಿಸುವ ಅಪಾರ ಸಾಮರ್ಥ್ಯ ಇದೆ ಎಂಬುದು ನಿತ್ಯಾನಂದನ ವಿಷಯದಲ್ಲಿ ಸುವರ್ಣ ಸುದ್ದಿವಾಹಿನಿ ನಡೆಸಿದ ನಿರಂತರ ಅಭಿಯಾನದಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ಈ ರೀತಿ ಆಕ್ರಮಣಕಾರಿಯಾಗಿ ನಡೆದುಕೊಳ್ಳಲು ಸುವರ್ಣ ಸುದ್ದಿ ವಾಹಿನಿಗೆ ಏನು ಹಿತಾಸಕ್ತಿಗಳು ಇವೆಯೋ ಗೊತ್ತಿಲ್ಲ. ಆದರೆ ಒಂದು ವಿಷಯವನ್ನು ತೆಗೆದುಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸಿದರೆ ವ್ಯಾಪಕ ಜನಜಾಗೃತಿ ಎಲ್ಲೆಡೆ ಆಗುವುದು ಖಚಿತ ಎಂದು ಇದರಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ನಿರಂತರ ಕಾರ್ಯಕ್ರಮ ಪ್ರಸಾರ ಮಾಡಿದ್ದರಿಂದ ವಿಶ್ವಾದ್ಯಂತ ಕನ್ನಡಿಗರಿಂದ ಆಕ್ರೋಶ ಭುಗಿಲೇಳಲು ಆರಂಭವಾಯಿತು. ಆರಂಭದಲ್ಲಿ ಸುವರ್ಣ ಸುದ್ದಿವಾಹಿನಿ ಮಾತ್ರ ಈ ವಿಷಯದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಇದರಿಂದ ಉಂಟಾದ ಪ್ರಭಾವದಿಂದ ಇತರ ಟಿವಿ ವಾಹಿನಿಗಳೂ ಇದೇ ವಿಚಾರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದವು.

ಇದೇ ರೀತಿ ಭ್ರಷ್ಟ ರಾಜಕಾರಣಿಗಳ ವಿರುದ್ಧವೂ ಯಾಕೆ ಸುವರ್ಣ ಸುದ್ದಿ ವಾಹಿನಿಯವರು ಅಥವಾ ಇತರ ವಾಹಿನಿಗಳು ನಿರಂತರ ಅಭಿಯಾನ ನಡೆಸುವುದಿಲ್ಲ? ಜನತೆಗೆ ನಿತ್ಯಾನಂದನ ವಿಷಯದಲ್ಲಿ ಉಕ್ಕುತ್ತಿರುವ ಆಕ್ರೋಶ ಭ್ರಷ್ಟ ರಾಜಕಾರಣಿಗಳ ವಿಷಯದಲ್ಲಿಯೂ ಉಕ್ಕಿದರೆ ಒಳ್ಳೆಯದು. ನಿತ್ಯಾನಂದನನ್ನು ಗಡೀಪಾರು ಮಾಡಿರುವಂತೆ ಹಾಗೂ ಬಂಧಿಸಿರುವಂತೆ ಭ್ರಷ್ಟ ರಾಜಕಾರಣಿಗಳನ್ನು ಯಾಕೆ ಬಂಧಿಸುವುದಿಲ್ಲ ಹಾಗೂ ಗಡೀಪಾರು ಮಾಡುವುದಿಲ್ಲ? ಭ್ರಷ್ಟ ರಾಜಕಾರಣಿಗಳಿಗೆ ಜೈಲಿನಿಂದ ಹೊರಬಂದಾಗ ಅದ್ಧೂರಿ ಸ್ವಾಗತ ಕೋರುವ ಜನರು ಹಾಗೂ ಸ್ವಾಮೀಜಿಗಳ ದ್ವಿಮುಖ ನೀತಿಯಿಂದಾಗಿ ಕರ್ನಾಟಕವು ಇಂದು ಭ್ರಷ್ಟಾಚಾರದಲ್ಲಿ ನಂಬರ್ ಒಂದು ರಾಜ್ಯ ಎಂಬ ಹೆಸರುಗಳಿಸಿದೆ. ನಿತ್ಯಾನಂದನು ಈಗ ಆರೋಪಿಯಷ್ಟೆ, ಆತನು ಅಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೂ ಆತನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಇದೇ ರೀತಿಯ ಆಕ್ರೋಶ ಭ್ರಷ್ಟ ರಾಜಕಾರಣಿಗಳು ಮೇಲೆಯೂ ಏಕೆ ಭುಗಿಲೆಳುವುದಿಲ್ಲ? ಭ್ರಷ್ಟ ರಾಜಕಾರಣಿಗಳ ವಿಷಯ ಬಂದಾಗ ಅವರ ಮೇಲೆ ಆರೋಪವಷ್ಟೇ ಇದೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗಿಲ್ಲ ಎಂದು ಏಕೆ ರಿಯಾಯತಿಯನ್ನು ಕೊಡಬೇಕು? ನಿತ್ಯಾನಂದ ಮಾಡಿರುವುದು ಮಾತ್ರ ಅನೈತಿಕವೇ? ನಂಬಿಕೆದ್ರೋಹವೇ? ಜನರ ಸೇವೆ ಮಾಡಲೋಸುಗ ಜನರಿಂದ ಆಯ್ಕೆಯಾಗಿ ಅಪರೇಷನ್ ಕಮಲ ಎಂಬ ಹೆಸರಿನಲ್ಲಿ ಶಾಸಕರನ್ನು ಪಶುಗಳಂತೆ ಕೊಳ್ಳುವುದು ನಂಬಿಕೆದ್ರೋಹವಲ್ಲವೇ? ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿ ಅಕ್ರಮ ಆಸ್ತಿ-ಪಾಸ್ತಿ ಮಾಡಿಕೊಳ್ಳುವುದು ಅನೈತಿಕವಲ್ಲವೇ? ಹೀಗಿದ್ದರೂ ನಮ್ಮ ಜನ ಲೈಂಗಿಕತೆ ವಿಚಾರದಲ್ಲಿ ಮಾತ್ರ ಏಕೆ ಅನೈತಿಕತೆ ಎಂದು ಆಕ್ರೋಶಗೊಳ್ಳುತ್ತಾರೆ? ಇದೇ ರೀತಿ ಭ್ರಷ್ಟರ ವಿರುದ್ಧ ಆಕ್ರೋಶಗೊಂಡು ರಾಜೀನಾಮೆಗೆ ಏಕೆ ಜನ ಪಟ್ಟು ಹಿಡಿದು ಬೀದಿಗೆ ಇಳಿಯುವುದಿಲ್ಲ ಅಥವಾ ಭ್ರಷ್ಟರ ಗಡೀಪಾರಿಗೆ ಅಗ್ರಹಿಸುವುದಿಲ್ಲ? ಜನತೆ ನಿತ್ಯಾನಂದನ ವಿರುದ್ಧ ತೋರಿದ ರೀತಿಯಲ್ಲೇ ಆಕ್ರೋಶವನ್ನು ಭ್ರಷ್ಟರ ವಿಷಯದಲ್ಲಿಯೂ ತೋರಿಸಿದರೆ ಕರ್ನಾಟಕ ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಹೆಚ್ಚು ಸಮಯ ಬೇಕಾಗಿಲ್ಲ.

ಜನಜಾಗೃತಿಯ ವಿಷಯದಲ್ಲಿ ಟಿವಿ ಮಾಧ್ಯಮ ತನಗಿರುವ ನೈಜ ಸಾಮರ್ಥ್ಯದ ಶೇಕಡಾ ಒಂದರಷ್ಟನ್ನೂ ಬಳಸುತ್ತಿಲ್ಲ ಎಂದು ಖಚಿತವಾಗಿ ಹೇಳಬಹುದು. ಟಿವಿ ಮಾಧ್ಯಮ ಭ್ರಷ್ಟಾಚಾರದ ವಿರುದ್ಧ, ಭ್ರಷ್ಟ ರಾಜಕಾರಣಿಗಳ ವಿರುದ್ಧ ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜನರನ್ನು ಎಚ್ಚರಗೊಳಿಸಿದರೆ ರಾಜಕಾರಣಿಗಳು ಭ್ರಷ್ಟಾಚಾರ ಮಾಡಲು ಹೆದರಬಹುದು. ಲೈಂಗಿಕ ಅನೈತಿಕತೆಯ ವಿಷಯದಲ್ಲಿ ಜನತೆ ತೋರುವ ಬಹಿಷ್ಕಾರ, ಆಕ್ರೋಶ ಭ್ರಷ್ಟಾಚಾರದ ವಿಷಯದಲ್ಲಿಯೂ ಕಂಡುಬಂದರೆ ರಾಜಕಾರಣಿಗಳು ಎಚ್ಚರಿಕೆಯಿಂದ ವರ್ತಿಸಬಹುದು. ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲೇಬೇಕೆಂದು ಒಂದು ಗಡುವನ್ನು ನೀಡಿ ನಿರಂತರ ಜನಜಾಗೃತಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ ಲೋಕಾಯುಕ್ತರ ನೇಮಕ ಶೀಘ್ರವೇ ಆಗುವುದರಲ್ಲಿ ಸಂದೇಹವಿಲ್ಲ. ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನೆಮಾ ನಟರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಟುಡಿಯೋಗೆ ಕರೆಸಿ ನಿಷ್ಪಕ್ಷಪಾತ ನಿಲುವಿನ ಲೋಕಾಯುಕ್ತರ ನೇಮಕ ಏಕೆ ಅಗತ್ಯ ಎಂದು ಒತ್ತಡ ಹೇರಲು ಶುರುಮಾಡಿದರೆ ಸರ್ಕಾರದ ಮೇಲೆ ಒತ್ತಡ ಬಿದ್ದೇ ಬೀಳುತ್ತದೆ. ನಿತ್ಯಾನಂದನ ವಿಷಯದಲ್ಲಿ ಸರ್ಕಾರಕ್ಕೆ ಸವಾಲು ಹಾಕಿದಂತೆ ಟಿವಿ ವಾಹಿನಿಗಳು ಲೋಕಾಯುಕ್ತರ ನೇಮಕದ ವಿಷಯದಲ್ಲಿಯೂ ಸವಾಲು ಹಾಕಬೇಕಾದ ಅಗತ್ಯ ಇದೆ. ಜನರಿಂದ ಈ ವಿಷಯದಲ್ಲಿ ಅಭಿಪ್ರಾಯಗಳನ್ನು ಪಡೆದು ಕೆಲವು ದಿನ ನಿರಂತರ ಪ್ರಸಾರ ಮಾಡುತ್ತಿದ್ದರೆ ಜನತೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕುದಿಯಲು ಆರಂಭವಾಗುತ್ತದೆ. ಆಗ ಸರ್ಕಾರಗಳು ಬಗ್ಗಲೇಬೇಕಾಗುತ್ತದೆ. ಏಕೆಂದರೆ ಟಿವಿ ಮಾಧ್ಯಮದ ಶಕ್ತಿ ಅಷ್ಟು ಬಲವಾಗಿದೆ. ಈ ಕೆಲಸವನ್ನು ಟಿವಿ ವಾಹಿನಿಗಳು ಏಕೆ ಮಾಡಬಾರದು?

ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಾದ ಕಬ್ಬಿಣದ ಅದಿರು ಮೊದಲಾದವುಗಳನ್ನು ಅಕ್ರಮವಾಗಿ ವಿದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿ ಆ ಹಣದ ಬಲದಿಂದ ರಾಜಕೀಯ ಮಾಡುವುದು ಅನೈತಿಕವಲ್ಲವೇ? ಅಂಥ ಅನೈತಿಕ ಹಣದ ಬಲದಿಂದ ಪಕ್ಷ ಕಟ್ಟಿ ಪಾದಯಾತ್ರೆ ಮಾಡುವವರ ವಿರುದ್ಧ ಏಕೆ ರಾಜ್ಯದಲ್ಲಿ ಜನತೆಯ ಆಕ್ರೋಶ ಸ್ಪೋಟಗೊಳ್ಳುವುದಿಲ್ಲ? ಇಂಥ ಅಕ್ರಮ ಹಾಗೂ ಅನೈತಿಕತೆ ಬಗ್ಗೆ ಟಿವಿ ವಾಹಿನಿಗಳ ಕಣ್ಣು ಏಕೆ ಕುರುಡಾಗಿದೆ? ಗಣಿ ಅಕ್ರಮದ ಹಣದ ಬಲದಿಂದ ಕಟ್ಟುತ್ತಿರುವ ಪಕ್ಷದ ಹಿಂದೆ ಜನ ಏಕೆ ಕುರಿಗಳಂತೆ ಹೋಗುತ್ತಿದ್ದಾರೆ? ಇಂಥ ಜನರನ್ನು ಎಚ್ಚರಿಸಿ ಗಣಿ ಅಕ್ರಮದ ಅನೈತಿಕ ಹಣದಿಂದ ರಾಜ್ಯವನ್ನು ಹಾಳುಗೆಡವುದರ ವಿರುದ್ಧ ಟಿವಿ ವಾಹಿನಿಗಳು ಏಕೆ ಆಂದೋಲನ ನಡೆಸುವುದಿಲ್ಲ? ಬದಲಾಗಿ ಅಂಥ ಪಾದಯಾತ್ರೆಯ ನಾಟಕವನ್ನು ಜನರ ಮುಂದೆ ಹಾಡಿ ಹೊಗಳಿ ಕಾರ್ಯಕ್ರಮ ಪ್ರಸಾರ ಮಾಡುವುದರ ಗುಟ್ಟೇನು?

ಪರ್ಯಾಯ ರಾಜಕೀಯ ರೂಪಿಸಲು ಇದು ಸಕಾಲ

– ಆನಂದ ಪ್ರಸಾದ್

ಕರ್ನಾಟಕದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟವಾಗಿದ್ದು ಮತದಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಭಿನ್ನಮತದಿಂದ ಬೇಸತ್ತ ಹಾಗೂ ರೋಸಿ ಹೋದ ಜನ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುವ ಸಂಭವ ಮುಂದಿನ ಚುನಾವಣೆಯಲ್ಲಿ ಇದೆ ಎಂಬ ವಾತಾವರಣ ಇರುವಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲೂ ಹಲವು ಗುಂಪುಗಳು ಪರಸ್ಪರ ಕಾಲೆಳೆಯುವ ಹುಂಬತನದಲ್ಲಿ ತೊಡಗಿದ್ದು ಮತ್ತೆ ರಾಜ್ಯ ಅತಂತ್ರ ವಿಧಾನ ಸಭೆಗೆ ಹಾಗೂ ತನ್ಮೂಲಕ ರಾಜಕೀಯ ಅಸ್ಥಿರತೆ, ಕುದುರೆ ವ್ಯಾಪಾರದ ವಿಕಾರ ಸ್ಥಿತಿಗೆ ಹೋಗುವ ಸಂಭವ ಕಾಣಿಸುತ್ತಿದೆ.  ಜೆಡಿಎಸ್ ಪಕ್ಷವೂ ಚುನಾವಣೆಗಳಲ್ಲಿ ಬಹುಮತ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಅದು ಹೆಚ್ಚೆಂದರೆ ಚೌಕಾಸಿ ರಾಜಕೀಯ ಮಾಡುವಷ್ಟು ಸ್ಥಾನ ಪಡೆಯಬಹುದು.  ಇಂಥ ಅತಂತ್ರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಇದು ಹದಗೊಂಡ ಕಾಲವಾಗಿದೆ.  ಆದರೆ ಆ ನಿಟ್ಟಿನಲ್ಲಿ ಮಹತ್ತರ ಕಾರ್ಯಕ್ರಮಗಳು ನಡೆಯುವುದು ಕಂಡುಬರುತ್ತಿಲ್ಲ.

ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಕೂಡಿಕೊಂಡು ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಕ್ರಿಯೆಗೆ ಚಾಲನೆ ನೀಡಿವೆಯಾದರೂ ಅವು ಮಾತ್ರವೇ ಪರ್ಯಾಯ ರಾಜಕೀಯ ಶಕ್ತಿಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ.  ಒಬ್ಬ ಜನಪ್ರಿಯ ಹಾಗೂ ಅನುಭವೀ ರಾಜಕೀಯ ಮುಖದ ಅವಶ್ಯಕತೆ ಈ ಒಕ್ಕೂಟಕ್ಕೆ ಇದೆ.  ಎಲ್ಲರೂ ಒಪ್ಪಬಲ್ಲ, ಸಮೃದ್ಧ ಕರ್ನಾಟಕವನ್ನು ಕಟ್ಟಬಲ್ಲ ಅಂಶಗಳನ್ನು ಉಳ್ಳ ಒಂದು ಪ್ರಣಾಳಿಕೆ ರೂಪಿಸಬೇಕಾದ ಅಗತ್ಯವಿದೆ.  ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಇರುವಂತೆ ಕಾಣುವುದಿಲ್ಲ.  ಅವರ ಗುರಿ ಮುಖ್ಯಮಂತ್ರಿ ಆಗುವುದು.  ಕರ್ನಾಟಕದ ಕಾಂಗ್ರೆಸ್ಸಿನ ಗುಂಪುಗಾರಿಕೆ, ಆ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿರುವ ನಾಯಕರ ಸಂಖ್ಯೆ ನೋಡಿದರೆ ಸಿದ್ಧರಾಮಯ್ಯನವರ ಕನಸು ನನಸಾಗುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.  ಹೆಚ್ಚೆಂದರೆ ಒಬ್ಬ ಪ್ರಭಾವಿ ಮಂತ್ರಿ ಸ್ಥಾನವಷ್ಟೇ ಅಲ್ಲಿ ಸಿದ್ಧರಾಮಯ್ಯನವರಿಗೆ ಸಿಗಬಹುದು.  ಈ ಭಾಗ್ಯಕ್ಕೆ ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರಬೇಕಾದ ಅಗತ್ಯ ಇರಲಿಲ್ಲ. ಶಾಮನೂರು ಶಿವಶಂಕರಪ್ಪನವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ನೀಡಬೇಕು ಮತ್ತು ತಾನೇ ಅದಕ್ಕೆ ಸೂಕ್ತ ವ್ಯಕ್ತಿ ಎಂದು ಗರ್ಜಿಸುವುದನ್ನು ನೋಡಿದರೆ ಅವರೂ ಮುಖ್ಯಮಂತ್ರಿ ಸ್ಥಾನದ ಪ್ರಧಾನ ಆಕಾಂಕ್ಷಿ ಎಂದು ತಿಳಿಯಬಹುದು. ಏಕೆಂದರೆ ಚುನಾವಣಾಪೂರ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದವರೇ ಚುನಾವಣೆಗಳಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಸಂಭಾವ್ಯತೆ ಕಾಂಗ್ರೆಸ್ ಪಕ್ಷದಲ್ಲಿದೆ.  ಹೀಗಾದರೆ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕೇಳುವವರೂ ಇರುವುದಿಲ್ಲ.  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆದ ಸಿದ್ಧರಾಮಯ್ಯನವರು ಸಾಮಾನ್ಯ ಮಂತ್ರಿ ಸ್ಥಾನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ.  ಒಂದು ವೇಳೆ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿನಲ್ಲಿ ಲಭಿಸಿದರೂ ಅದರ ಜೊತೆಗೆ ಭೀಕರ ಭಿನ್ನಮತವೂ ಭುಗಿಲೇಳುವ ಸಂಭವ ಹೆಚ್ಚಾಗಿರುವುದರಿಂದ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗಲಿಕ್ಕಿಲ್ಲ.   ಹೀಗಾಗಿ ಸಿದ್ಧರಾಮಯ್ಯನವರ ರಾಜಕೀಯ ಜೀವನ ಅಲ್ಲಿಗೆ ಕೊನೆಗೊಳ್ಳುವ ಸಂಭವ ಇದೆ.  ಇಂಥ ಅತಂತ್ರ ಸನ್ನಿವೇಶದಲ್ಲಿ ಸಿದ್ಧರಾಮಯ್ಯನವರು ಪರ್ಯಾಯ ರಾಜಕೀಯ ರೂಪಿಸುವ ಒಂದು ಪ್ರಯೋಗ ಮಾಡಿ ನೋಡಲು ಸಾಧ್ಯವಿದೆ.  ಇಂದಿನ ರಾಜ್ಯದ ಅತಂತ್ರ ಸ್ಥಿತಿಯಲ್ಲಿ ಇದು ಒಂದೇ ಚುನಾವಣೆ ಎದುರಿಸಿ ಸಾಧ್ಯವಾಗಲೂಬಹುದು ಅಥವಾ ವಿಫಲವಾಗಲೂಬಹುದು.  ಹೇಗಿದ್ದರೂ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಕಾಣಿಸುತ್ತಿಲ್ಲ.  ಜೆಡಿಎಸ್ ಪಕ್ಷಕ್ಕೆ ಅವರು ಮರಳಿ ಹೋಗುವ ಸಾಧ್ಯತೆ ಇಲ್ಲ, ಹೋದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಂಭವ ಇಲ್ಲ.   ಆ ಸ್ಥಾನ ಹೇಗಿದ್ದರೂ ದೇವೇಗೌಡರ ಕುಟುಂಬದ ಸದಸ್ಯರಿಗೆ ಮೀಸಲಾಗಿದೆ.   ಹೀಗಾಗಿ ಪರ್ಯಾಯ ರಾಜಕೀಯದ ನಾಯಕತ್ವವನ್ನು ಸಿದ್ಧರಾಮಯ್ಯ ವಹಿಸಿಕೊಳ್ಳುವುದರಿಂದ ನಷ್ಟವೇನೂ ಇಲ್ಲ ಎನಿಸುತ್ತದೆ.

ಪ್ರಸಕ್ತ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಇರುವ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ, ವಂಶವಾಹಿ ರಾಜಕೀಯವನ್ನು ವಿರೋಧಿಸುವ, ಪ್ರಗತಿಶೀಲ ನಿಲುವಿನ ಚಿಂತನಶೀಲ ರಾಜಕಾರಣಿಗಳು ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪರ್ಯಾಯ ರಾಜಕೀಯ ರೂಪಿಸುವ ಕಾರ್ಯದಲ್ಲಿ ತೊಡಗಬೇಕಾದ ಅಗತ್ಯ ಇದೆ.  ಉದಾಹರಣೆಗೆ ಉಗ್ರಪ್ಪ, ಬಿ.ಎಲ್. ಶಂಕರ್, ಕೃಷ್ಣ ಭೈರೇಗೌಡ, ವಿ.ಆರ್. ಸುದರ್ಶನ್, ಪಿ.ಜಿ. ಆರ್. ಸಿಂಧ್ಯಾ ಇತ್ಯಾದಿ ತಮ್ಮ ಪಕ್ಷವನ್ನು ಬಿಟ್ಟು ಹೊರಬಂದು ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಬೇಕಾದ ಅಗತ್ಯ ಇದೆ.  ಎಲ್ಲರೂ ಒಗ್ಗೂಡಿ ಪರ್ಯಾಯ ರಾಜಕೀಯ ಶಕ್ತಿಗೆ ಬಲ ತುಂಬಬೇಕಾದ ಅಗತ್ಯ ಇದೆ.  ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟತೆಯ ವಿರುದ್ಧ ದಿಟ್ಟ ನಿಲುವಾಗಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಾಗಲಿ ಕಂಡುಬರುತ್ತಿಲ್ಲ.  ಕಾಂಗ್ರೆಸ್ಸಿನ ಯಾವ ನಾಯಕರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿಯನ್ನು ತೋರಿಸುವ ಸಂಭವ ಕಾಣಿಸುತ್ತಿಲ್ಲ.  ಹೀಗಿರುವಾಗ ಆ ಪಕ್ಷದಲ್ಲಿ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವ ಇರುವ ರಾಜಕಾರಣಿಗಳು ಇದ್ದು ಮಾಡುವುದೇನೂ ಉಳಿದಿಲ್ಲ.  ಅಲ್ಲಿ ಜೀ ಹುಜೂರ್ ಎಂದು ಬೆನ್ನು ಬಗ್ಗಿಸಿ ಗುಲಾಮಗಿರಿ ಮಾಡುವ ಬದಲು ಆತ್ಮಾಭಿಮಾನ ಇರುವ ರಾಜಕಾರಣಿಗಳು ಆ ಪಕ್ಷವನ್ನು ಧಿಕ್ಕರಿಸಿ ಹೊರಬರಬೇಕು.  ಎಡ ಪಕ್ಷಗಳು, ಪ್ರಗತಿಶೀಲ ಸಂಘಟನೆಗಳು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳು ಪ್ರಣಾಳಿಕೆಯೊಂದನ್ನು ರೂಪಿಸಿ ಒಗ್ಗೂಡಿ ಪರ್ಯಾಯ ಚುನಾವಣಾಪೂರ್ವ ಮೈತ್ರಿಕೂಟವೊಂದನ್ನು ಸ್ಥಾಪಿಸಿ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಚುನಾವಣೆಗೆ ಹೋದರೆ ಅನುಕೂಲ ಆಗಬಹುದು.  ಇಂದಿನ ಕರ್ನಾಟಕದ ಅತಂತ್ರ ಸ್ಥಿತಿಯನ್ನು ನೋಡಿದರೆ ಯಾವುದೇ ರಾಜಕೀಯ ಪಕ್ಷ ಬಹುಮತ ಪಡೆಯುವ ಸಂಭವ ಕಾಣಿಸುತ್ತಿಲ್ಲ.  ಹೀಗಾಗಿ ಕೇರಳದಲ್ಲಿ ಇರುವಂತೆ ಹಲವು ರಾಜಕೀಯ ಪಕ್ಷಗಳ  ಮೈತ್ರಿಕೂಟವೊಂದನ್ನು ಸ್ಥಾಪಿಸಿ ದೃಢವಾದ ಪ್ರಗತಿಶೀಲ ಸರಕಾರವೊಂದನ್ನು ನೀಡಲು ಸಾಧ್ಯವಿದೆ.

ಸಿದ್ಧರಾಮಯ್ಯನವರಂಥ ರಾಜಕಾರಣಿಗಳು ಕಾಂಗ್ರೆಸ್ಸಿನಂಥ ಯಜಮಾನ ಸಂಸ್ಕೃತಿಯ ಪಕ್ಷವನ್ನು ಸೇರಿದ್ದೇ ದೊಡ್ಡ ತಪ್ಪು.  ಆ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ಶಕ್ತ ನಾಯಕತ್ವ ಗುಣ ಉಳ್ಳ ರಾಜಕಾರಣಿಗಳಿಗೆ ಬೆಲೆ ಇಲ್ಲ.  ನಾಯಕತ್ವ ಗುಣ ಉಳ್ಳ ರಾಜಕಾರಣಿಗಳನ್ನು ಗುರುತಿಸುವ ವ್ಯವಸ್ಥೆಯೂ ಆ ಪಕ್ಷದಲ್ಲಿ ಇಲ್ಲ.  ಅಲ್ಲಿ ಏನಿದ್ದರೂ ಪಕ್ಷದ ಅಧ್ಯಕ್ಷರಿಗೆ, ಒಂದು ಕುಟುಂಬಕ್ಕೆ ನಿಷ್ಠೆ ತೋರುವವರಿಗೆ ಮಾತ್ರ ಬೆಲೆ.  ಆ ಕುಟುಂಬಕ್ಕೆ ರಾಜಕೀಯದ ಸಮರ್ಪಕ ಜ್ಞಾನವಾಗಲೀ, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳೂ ತಿಳಿದಿರುವಂತೆ ಕಾಣುವುದಿಲ್ಲ.  ಭ್ರಷ್ಟಾಚಾರದ ವಿರುದ್ಧ ಹೋರಾಡುವ, ದೇಶದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರವಿದ್ದರೂ ಇಚ್ಚಾಶಕ್ತಿಯನ್ನು ಪ್ರದರ್ಶಿಸದ, ಅದನ್ನು ಬಳಸದ ನಿಷ್ಕ್ರಿಯ ನಾಯಕತ್ವ ದೇಶಕ್ಕೆ ಶಾಪವಾಗಿದೆ.  ಇದರಿಂದ ಹೊರಬರುವ, ಪರ್ಯಾಯವನ್ನು ರೂಪಿಸುವ ಅಗತ್ಯ ಇಂದು ಇದೆ.

“ಕರ್ನಾಟಕ ರತ್ನ” ಹಾಗೂ “ಬಸವಶ್ರೀ” ಪ್ರಶಸ್ತಿ ಎಸ್.ಆರ್. ಹಿರೇಮಠರಿಗೆ ಸಲ್ಲಬೇಕು

– ಆನಂದ ಪ್ರಸಾದ್

ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಅದಿರಿನ ರಕ್ಷಣೆ ಹಾಗೂ ಗಣಿಗಾರಿಕೆಯ ಹಿಂದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಕಾನೂನು ಹೋರಾಟದಲ್ಲಿ ತೊಡಗಿ ಕರ್ನಾಟಕಕ್ಕೆ ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಘನತೆ ಹೆಚ್ಚಲಿದೆ. ಅಮೇರಿಕಾದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ಹುದ್ದೆಯನ್ನು ತೊರೆದು ರಾಜ್ಯಕ್ಕೆ ವಾಪಾಸಾಗಿ ಓರ್ವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತ ನಾಡಿನ ಗಣಿ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲದ ಉಳಿವಿಗಾಗಿ ಕಾನೂನು ಹೋರಾಟದಲ್ಲಿ ತೊಡಗಿರುವ ಹಿರೇಮಠರು ನಮಗೆ ಒಂದು ಆದರ್ಶವಾಗಬೇಕಾಗಿದೆ. ಬಸವಣ್ಣನವರ ಆದರ್ಶಗಳ ಸಾಕಾರ ರೂಪದಂತಿರುವ ಹಿರೇಮಠರು ಬಸವಶ್ರೀ ಪ್ರಶಸ್ತಿಗೆ ಕೂಡ ಅರ್ಹ ಸೂಕ್ತ ವ್ಯಕ್ತಿಯೆನ್ನಲು ಅಡ್ಡಿಯಿಲ್ಲ.

ಇಂದು ಭಾರತದಲ್ಲಿ ಭ್ರಷ್ಟಾಚಾರ, ಅನಾಚಾರ, ಅದಕ್ಷತೆ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳು, ನ್ಯಾಯ ನಿರ್ಣಯದಲ್ಲಿ ನಡೆಯುತ್ತಿರುವ ವಿಳಂಬ, ಚುನಾವಣಾ ವ್ಯವಸ್ಥೆಯಲ್ಲಿರುವ  ಲೋಪಗಳು ಮೊದಲಾದವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರಲು ಪ್ರಧಾನ ಕಾರಣ ದೇಶದಲ್ಲಿ ನಾಯಕರ ಕೊರತೆಯಿರುವುದೇ ಆಗಿದೆ. ದೇಶದಲ್ಲಿ ಸಾರ್ವಜನಿಕ ವಿಚಾರಗಳ ಬಗ್ಗೆ ನಿಸ್ವಾರ್ಥವಾಗಿ ಕೆಲಸ ಮಾಡುವವರ ಕೊರತೆ ಇದೆ.  ಸಾರ್ವಜನಿಕ ಆಸಕ್ತಿಯ ವಿಚಾರಗಳನ್ನು ಎತ್ತಿಕೊಂಡು ಜನಜಾಗೃತಿ ಮಾಡುವುದು ಇಂದು ಬಹಳ ಕಠಿಣವಾದ ಕೆಲಸವಾಗಿದೆ. ಏಕೆಂದರೆ ಇಂದು  ಬಹುತೇಕ ಜನರಿಗೆ ರಾಷ್ಟ್ರದ ಅಥವಾ ರಾಜ್ಯದ ಆಗುಹೋಗುಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವೇ  ಇದೆ. ಅದೂ ಅಲ್ಲದೆ ಜನಸಾಮಾನ್ಯರಿಗೆ ತಮ್ಮ ಕುಟುಂಬ ಪಾಲನೆ, ಉದ್ಯೋಗ ಮೊದಲಾದ ಜವಾಬ್ದಾರಿಗಳೂ ಇರುವ ಕಾರಣ ಸಾರ್ವಜನಿಕ ಸಮಸ್ಯೆಗಳ ಬಗೆಗಾಗಲಿ, ದೇಶದ, ರಾಜ್ಯದ  ಸಮಸ್ಯೆಗಳ ಬಗೆಗಾಗಲಿ ಹೋರಾಟ ರೂಪಿಸುವುದಾಗಲಿ ಅಥವಾ ಅದರಲ್ಲಿ ಭಾಗವಹಿಸುವುದಾಗಲಿ ಅಸಾಧ್ಯ. ಹೀಗಾಗಿ ಒಂದು ಹಂತದವರೆಗೆ ತಮ್ಮ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಯನ್ನು  ನಿಭಾಯಿಸಿ ನಿವೃತ್ತಿ ಆಗಿರುವವರು, ಅಂದರೆ ತಮ್ಮ ಮಕ್ಕಳ ಕಲಿಕೆಯನ್ನು ಪೂರೈಸಿ ಅವರು ಉದ್ಯೋಗ ಪಡೆದ ನಂತರ ದೇಶದ, ರಾಜ್ಯದ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ  ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಸುಮಾರು ಅರುವತ್ತರ ವಯಸ್ಸಿನ ಆಸುಪಾಸಿನಲ್ಲಿ ವ್ಯಕ್ತಿಯೊಬ್ಬನ ಮಕ್ಕಳ ಕಲಿಕೆ ಮುಗಿದು ಅವರು ಉದ್ಯೋಗ ಪಡೆದು, ಅವರ ಮದುವೆ ಇತ್ಯಾದಿಗಳು ಮುಗಿದು ವ್ಯಕ್ತಿಯೊಬ್ಬನ ಪ್ರಮುಖ ಕೌಟುಂಬಿಕ ಜವಾಬ್ದಾರಿ ಮುಗಿದಿರುತ್ತದೆ. ಹೀಗಾಗಿ ದೇಶದಲ್ಲಿ ನಿವೃತ್ತರು ಅಥವಾ ಅರುವತ್ತರ ನಂತರದ ವಯಸ್ಸಿನವರು ಸಾರ್ವಜನಿಕ ಹಿತಾಸಕ್ತಿಯ ಹೋರಾಟದಲ್ಲಿ ತೊಡಗಲು ಮುಂದೆ ಬಂದರೆ ದೇಶದಲ್ಲಿ  ಬದಲಾವಣೆಯನ್ನು, ಸುಧಾರಣೆಗಳನ್ನು ತರಲು ಸಾಧ್ಯ.

ಸಾರ್ವಜನಿಕ ಜೀವನದ ಸಮಸ್ಯೆಗಳು ಅಥವಾ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಸ್ವಜನ  ಪಕ್ಷಪಾತ, ಜಾತೀಯತೆ, ನ್ಯಾಯಾಂಗದ ನಿಧಾನ ಗತಿ, ಚುನಾವಣಾ ಸುಧಾರಣೆಗಳ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಹೋರಾಡುವವರು ಪಕ್ಷಾತೀತ ನಿಲುವನ್ನು ಹೊಂದಿರಬೇಕಾಗುತ್ತದೆ. ಒಂದು ಪಕ್ಷದ ಭ್ರಷ್ಟಾಚಾರವನ್ನು ಟೀಕಿಸಿ ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸುವುದು ಜನಬೆಂಬಲ ಕಳೆದುಕೊಳ್ಳಲು ಕಾರಣವಾಗುತ್ತದೆ.  ಇದಕ್ಕೆ ಸ್ಪಷ್ಟ ಉದಾಹರಣೆ ಅಣ್ಣಾ ಹಜಾರೆ ಹಾಗೂ ಯೋಗ ಗುರು ರಾಮದೇವ್ ಅವರ ಹೋರಾಟಗಳು. ಇಂಥ ಸ್ಥಗಿತ ಸ್ಥಿತಿಯಲ್ಲಿ ಎಸ್.ಆರ್. ಹಿರೇಮಠರಂಥ ನಿಷ್ಪಕ್ಷಪಾತ ಹಾಗೂ ಪ್ರಗತಿಶೀಲ ಮನಸಿನ ವ್ಯಕ್ತಿಗಳು ದೇಶದಲ್ಲಿ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂಥ ವ್ಯಕ್ತಿಗಳನ್ನು ಮಾಧ್ಯಮಗಳು ಮುಂಚೂಣಿಗೆ ತಂದು ಹೆಚ್ಚಿನ ಪ್ರಚಾರ ನೀಡಬೇಕಾದ ಅಗತ್ಯ ಇದೆ. ಅನಿವಾಸಿ ಭಾರತೀಯರು ಕೂಡ ಇಂಥ ಹೋರಾಟಗಳಿಗೆ ನೈತಿಕ ಹಾಗೂ ಹಣಕಾಸಿನ ಬೆಂಬಲವನ್ನು ನೀಡಲು ಮುಂದೆ ಬರಬೇಕಾದ ಅಗತ್ಯ ಇದೆ. ದೇಶದ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಮಾನಮನಸ್ಕ, ಹೆಚ್ಚಿನ ಕೌಟುಂಬಿಕ ಜವಾಬ್ದಾರಿ ಇಲ್ಲದ ಮತ್ತು ಆರ್ಥಿಕವಾಗಿ ದೃಢ  ಸ್ಥಿತಿಯಲ್ಲಿ ಇರುವ ನಿವೃತ್ತರು ಹಾಗೂ ಇನ್ನಿತರರು ಹೋರಾಟ ಸಮಿತಿ ಹಾಗೂ ಸಂಘಟನೆಗಳನ್ನು ಮಾಡಿಕೊಂಡು ದೇಶವ್ಯಾಪಿ ಹೋರಾಟವನ್ನು ಕಟ್ಟಬೇಕಾದ ಅವಶ್ಯಕತೆ ಇದೆ.  ಬಾಲ್ಯ, ಯೌವನ, ಗೃಹಸ್ಥ ಅವಸ್ಥೆಗಳನ್ನು ಪೂರೈಸಿರುವ ನಿವೃತ್ತರು ಹಾಗೂ ಅರುವತ್ತರ ವಯಸ್ಸನ್ನು ಮೀರಿದವರು ವಾನಪ್ರಸ್ಥ  ಜೀವನಕ್ಕೆ ಅಂದರೆ ದೇಶದ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಜೀವನಕ್ಕೆ  ತಮ್ಮನ್ನು ತೊಡಗಿಸಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಿದೆ. ದೇಶದಲ್ಲಿ ಉದ್ಭವಿಸಿರುವ ನಾಯಕತ್ವದ ಕೊರತೆಯನ್ನು ನೀಗಿಸಲು ಇಂಥ ವಾನಪ್ರಸ್ಥ ಅವಸ್ಥೆಯ ಹಿರಿಯ ಜನಾಂಗದ ಅವಶ್ಯಕತೆ ಇದೆ.

ಯುವಕರು ಕಲಿಕೆಯ ಹಂತಗಳಲ್ಲಿ ಅಥವಾ ಉದ್ಯೋಗದ ಪ್ರಾರಂಭಾವಸ್ಥೆಯಲ್ಲಿ  ಇರುವುದರಿಂದ ಅವರು ಇಂಥ ಹೋರಾಟಗಳಲ್ಲಿ ತೊಡಗುವುದು ಅವರ ಕಲಿಕೆಯ ಮೇಲೆ ಅಥವಾ ಉದ್ಯೋಗದ ಮೇಲೆ ಪರಿಣಾಮ  ಬೀರುತ್ತದೆ.  ಹೀಗಾಗಿ ಅವರು ಇಂಥ ಹೋರಾಟಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಲಾರದು. ಆದರೆ ಅವರು ಇಂಥ ಹೋರಾಟಗಳಿಗೆ ನೈತಿಕ ಬೆಂಬಲ ನೀಡಬಹುದು. ಭ್ರಷ್ಟಾಚಾರವು ನಮ್ಮ ದೇಶದಲ್ಲಿ ಮಿತಿಮೀರಿ ಬೆಳೆಯಲು ಕಾರಣ ಭ್ರಷ್ಟರಿಗೆ ಯಾವುದೇ ಶಿಕ್ಷೆ ಆಗದಿರುವುದು ಮತ್ತು ಅವರು ಅಕ್ರಮವಾಗಿ ಕೂಡಿಹಾಕಿದ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗದಿರುವುದೇ ಆಗಿದೆ. ಭ್ರಷ್ಟರಿಗೆ ಶೀಘ್ರವಾಗಿ ಶಿಕ್ಷೆಯಾಗಿ ಅವರು ಕಠಿಣ ಜೈಲು ಶಿಕ್ಷೆ ಅನುಭವಿಸುವಂತಾಗಿ ಅವರು ಕೂಡಿಹಾಕಿದ ಎಲ್ಲ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡು ದೇಶದ ಅಭಿವೃದ್ಧಿಗೆ ಬಳಸುವಂತಾದರೆ ಮುಂದೆ ಭ್ರಷ್ಟಾಚಾರ ಮಾಡಲು ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಿಂಜರಿಯುವ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತದೆ. ಅದರಲ್ಲಿ ಸಂದೇಹವಿಲ್ಲ.

ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ

– ಆನಂದ ಪ್ರಸಾದ್

ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.

ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.

ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.

ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.

ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

ಇರಾನ್ ಅಣ್ವಸ್ತ್ರ ಕಾರ್ಯಕ್ರಮ ವಿಶ್ವಕ್ಕೆ ಮಾರಕವೇ?

– ಆನಂದ ಪ್ರಸಾದ್

ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ಅದರ ಮೇಲೆ ನಿರ್ಬಂಧ ಹೇರಲು ಅಮೆರಿಕ, ಇಸ್ರೇಲ್, ಬ್ರಿಟನ್, ರಷ್ಯಾ ಮೊದಲಾದ ದೇಶಗಳು ಹವಣಿಸುತ್ತಿವೆ. ಇದರಿಂದಾಗಿ ಇರಾನಿನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳು ತೊಂದರೆಗೊಳಗಾಗಿದ್ದು ತೈಲ ಬೆಲೆ ಹೆಚ್ಚಳ ಆಗುವ ಆತಂಕವೂ ಇದೆ. ವಾಸ್ತವವಾಗಿ ಇಂಥ ನಿರ್ಬಂಧ ಹಾಕುವ ನೈತಿಕ ಅಧಿಕಾರ ಈ ದೇಶಗಳಿಗೆ ಇದೆಯೇ ಎಂದರೆ ಇಲ್ಲ ಎಂದೇ ಕಂಡು ಬರುತ್ತದೆ. ಈ ಎಲ್ಲ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿದ್ದು ಇತರ ದೇಶಗಳು ಅಣ್ವಸ್ತ್ರ ಹೊಂದಬಾರದು ಎಂದು ಹೇಳುವುದು ಪಾಳೆಗಾರಿಕೆ ನೀತಿಯಾಗುತ್ತದೆಯೇ ಹೊರತು ಸಮಂಜಸ ಎಂದು ಕಂಡು ಬರುವುದಿಲ್ಲ.

ಜಗತ್ತು ಇರಾನಿನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ಆತಂಕ ಪಡಬೇಕಾದ ಅಗತ್ಯ ಇದೆಯೇ ಎಂದರೆ ಅಂಥ ಆತಂಕಕ್ಕೆ ಕಾರಣವಿಲ್ಲ ಎಂಬುದು ಚಿಂತನೆ ನಡೆಸಿದರೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ಇಂದು ಅಣ್ವಸ್ತ್ರ ಅಭಿವೃದ್ಧಿಪಡಿಸಿದ ಯಾವ ದೇಶವೂ ಅದನ್ನು ಯುದ್ಧದಲ್ಲಿ ಬಳಸಲಾರದ ಸನ್ನಿವೇಶ ವಿಶ್ವದಲ್ಲಿ ಸೃಷ್ಟಿಯಾಗಿದೆ. ಯಾವುದಾದರೂ ಒಂದು ದೇಶದ ಬಳಿ ಮಾತ್ರ ಅಣ್ವಸ್ತ್ರ ತಂತ್ರಜ್ಞಾನ ಇದ್ದಿದ್ದರೆ ಖಂಡಿತ ಅದರ ಬಳಕೆ ಯುದ್ಧದಲ್ಲಿ ಆಗಿಯೇ ಆಗುತ್ತಿತ್ತು. ಆದರೆ ಇಂದು ಹಲವು ದೇಶಗಳ ಬಳಿ ಅಣ್ವಸ್ತ್ರ ತಂತ್ರಜ್ಞಾನ ಇರುವ ಕಾರಣ ಯಾವ ದೇಶವೂ ಅಣ್ವಸ್ತ್ರಗಳನ್ನು ಯುದ್ಧದಲ್ಲಿ ಬಳಸುವ ಸಾಹಸ ಮಾಡಲಾರದು. ಹಾಗೆ ಮಾಡಿದರೆ ಅದು ಆತ್ಮಹತ್ಯೆಗೆ ಸಮಾನ ಎಂಬುದು ಎಲ್ಲ ದೇಶಗಳ ಅರಿವಿಗೂ ಬಂದಿದೆ. ಹೀಗಾಗಿಯೇ ಎರಡನೇ ಮಹಾಯುದ್ಧದ ನಂತರ ಯುದ್ಧಗಳು ನಡೆದಿದ್ದರೂ ಅಣ್ವಸ್ತ್ರಗಳ ಬಳಕೆ ಯುದ್ಧದಲ್ಲಿ ಆಗಿಲ್ಲ.

ಪ್ರಪಂಚದಲ್ಲಿ ಇರುವ 249 ದೇಶಗಳ ಪೈಕಿ 5 ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಾಗಿವೆ. ಅವುಗಳು ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ. ಮೂರು ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಅವು ಭಾರತ, ಪಾಕಿಸ್ತಾನ, ಹಾಗೂ ಉತ್ತರ ಕೊರಿಯಾ ದೇಶಗಳು. ಇಸ್ರೇಲ್ ಅಣ್ವಸ್ತ್ರಗಳನ್ನು ಹೊಂದಿದ ದೇಶವಾದರೂ ತಾನು ಅಣ್ವಸ್ತ್ರ ಹೊಂದಿರುವ ದೇಶ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗೆ ಪ್ರಪಂಚದ ಒಟ್ಟು 249 ದೇಶಗಳಲ್ಲಿ ಕೇವಲ 9 ದೇಶಗಳು ಮಾತ್ರ ಅಣ್ವಸ್ತ್ರ ಹೊಂದಿವೆ. ಬೆಲ್ಗಿಯಂ, ಜರ್ಮನಿ, ಇಟಲಿ, ನೆದರ್ ಲ್ಯಾಂಡ್, ಟರ್ಕಿ ದೇಶಗಳು ನ್ಯಾಟೋ ಒಕ್ಕೂಟದ ಅಣ್ವಸ್ತ್ರ ಹಂಚುವಿಕೆಯ ಅನುಸಾರ ಅಮೆರಿಕಾದ ಅಣ್ವಸ್ತ್ರಗಳನ್ನು ಹಂಚಿಕೊಂಡಿವೆ. ಮೊದಲಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬೆಲಾರೂಸ್, ಉಕ್ರೈನ್, ಕಜ್ಹಕಿಸ್ತಾನ್ ದೇಶಗಳು ತಮ್ಮಲ್ಲಿದ್ದ ಅಣ್ವಸ್ತ್ರಗಳನ್ನು ರಷ್ಯಾಕ್ಕೆ ಒಪ್ಪಿಸಿವೆ ಹಾಗೂ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿವೆ. ದಕ್ಷಿಣ ಆಫ್ರಿಕಾ ದೇಶವು ಒಮ್ಮೆ ಅಣ್ವಸ್ತ್ರಗಳನ್ನು ಉತ್ಪಾದಿಸಿ ಜೋಡಿಸಿತ್ತಾದರೂ ನಂತರ ಅದನ್ನು ಕಳಚಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದೆ. ರಕ್ಷಣೆಗೆ ಅಣ್ವಸ್ತ್ರಗಳು ಬೇಕೇ ಬೇಕು ನಿಜವಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಅಣ್ವಸ್ತ್ರ ಇಲ್ಲದ ದೇಶಗಳನ್ನು ಅಣ್ವಸ್ತ್ರ ಇರುವ ದೇಶಗಳು ಆಕ್ರಮಣ ಮಾಡಿ ದಕ್ಕಿಸಿಕೊಳ್ಳುವುದಾಗಿದ್ದರೆ 249 ದೇಶಗಳ ಪೈಕಿ ಕೆಲವು ದೇಶಗಳ ಮೇಲಾದರೂ ಆಕ್ರಮಿಸಿ ವಶಪಡಿಸಿಕೊಳ್ಳಬೇಕಾಗಿತ್ತು. ಆದರೆ ಅಂಥ ಪ್ರಯತ್ನವನ್ನು ಮಾಡಲಾರದ ಸಮತೋಲನದ ಸ್ಥಿತಿ ಇಂದು ವಿಶ್ವದಲ್ಲಿ ರೂಪುಗೊಂಡಿದೆ. ಹೀಗೆ ಅಣ್ವಸ್ತ್ರ ಇಲ್ಲದೆಯೂ ಹಲವು ದೇಶಗಳು ಭದ್ರತೆ ಪಡೆದಿವೆ.

ಇರಾನಿನ ವಿಷಯಕ್ಕೆ ಬರುವುದಾದರೆ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೂ ಅದಕ್ಕೆ ಯಾರೂ ಅಂಜಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರಗಳನ್ನು ಇರಾನ್ ಬಳಸಿ ಇಸ್ರೇಲ್‌ಅನ್ನು ನಾಶ ಮಾಡಬಹುದೆಂಬುದು ಇಸ್ರೇಲ್ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಭೀತಿ. ಆದರೆ ಅಂಥ ಪರಿಸ್ಥಿತಿ ಉಂಟಾಗುವ ಪ್ರಮೇಯ ಇಲ್ಲ. ಇಸ್ರೇಲ್ ಬಳಿಯೂ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಬಳಿ ಯಥೇಚ್ಛ ಅಣ್ವಸ್ತ್ರ ಇರುವಾಗ ಇರಾನ್ ಅದರ ಮೇಲೆ ಅಣ್ವಸ್ತ್ರ ಬಳಸಿದರೆ ಅದೂ ತನ್ನ ಮೇಲೆ ಅಣ್ವಸ್ತ್ರ ಬಳಸುತ್ತದೆ ಎಂದು ತಿಳಿಯಲಾರದ ಮೂರ್ಖ ದೇಶ ಇರಾನ್ ಎಂದು ತಿಳಿಯಲು ಕಾರಣಗಳಿಲ್ಲ. ಹೀಗಾಗಿ ಇರಾನ್ ಅಣ್ವಸ್ತ್ರ ಅಭಿವೃದ್ಧಿಪಡಿಸಿದರೆ ಅದರಿಂದ ದೊಡ್ಡ ಅನಾಹುತ ಆದೀತು ಎಂಬುದಕ್ಕೆ ಕಾರಣಗಳಿಲ್ಲ. ಇದಕ್ಕಾಗಿ ಎಲ್ಲ ದೇಶಗಳ ಮೇಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಮೂಲಕ ಪರಿಣಾಮ ಬೀರುವ ಅರ್ಥಿಕ ದಿಗ್ಬಂಧನ ಹೇರುವ ಅಗತ್ಯ ಇಲ್ಲ. ಇನ್ನು ಇರಾನಿನಿಂದ ಅಣ್ವಸ್ತ್ರಗಳು ಉಗ್ರಗಾಮಿಗಳ ಕೈಗೆ ಸಿಕ್ಕಿ ತೊಂದರೆಯಾಗಬಹುದು ಎಂಬ ಭೀತಿಗೆ ಕಾರಣವಿಲ್ಲ. ಒಂದು ವೇಳೆ ಉಗ್ರಗಾಮಿಗಳಿಗೆ ಸಿಕ್ಕಿ ಅವರು ಅದನ್ನು ಪ್ರಯೋಗಿಸಿದರೂ ಅದನ್ನು ಉಗ್ರಗಾಮಿಗಳಿಗೆ ನೀಡಿದ ದೇಶದ ಮೇಲೆ ಅಣ್ವಸ್ತ್ರ ಧಾಳಿಯ ಭೀತಿ ಇದ್ದೇ ಇರುವುದರಿಂದ ಅಂಥ ಪ್ರಮಾದ ಮಾಡಲು ಇರಾನಿನಂಥ ದೇಶ ಮುಂದಾಗುವ ಸಂಭವ ಇದೆ ಎನಿಸುವುದಿಲ್ಲ.

ಇಂಥ ಭೀತಿ ಪಾಕಿಸ್ತಾನದ ವಿಷಯದಲ್ಲೂ ಇತ್ತು, ಆದರೆ ಅದು ನಿಜವಾಗಿಲ್ಲ. ಹೀಗಾಗಿ ಇರಾನಿನ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಯಾರೂ ಹೆದರಬೇಕಾದ ಅಗತ್ಯ ಇಲ್ಲ. ಇರಾನಿಗೆ ಅಣ್ವಸ್ತ್ರಗಳ ಅವಶ್ಯಕತೆ ಇದೆಯೇ ಎಂದರೆ ಇಲ್ಲ ಎಂಬುದು ನಿಜವಾದರೂ ಬುದ್ಧಿಗೇಡಿಯಾಗಿ ಅದು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೆ ಅದಕ್ಕೆ ಹೆಚ್ಚಿನ ಹಾಹಾಕಾರ ಮಾಡಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರವನ್ನು ಅದು ಅಭಿವೃದ್ಧಿಪಡಿಸಿದರೂ ಅದನ್ನು ಬಳಸಲು ಸಾಧ್ಯವಿಲ್ಲ, ಹಾಗೆ ಬಳಸಬೇಕಾದರೆ ಅದು ತನ್ನನ್ನು ತಾನೆ ಸರ್ವನಾಶಕ್ಕೆ ಒಡ್ಡಿಕೊಳ್ಳುವ ಮೂರ್ಖ ದೇಶವಾಗಿರಬೇಕು. ಸರ್ವನಾಶಕ್ಕೆ ಇಂದು ಯಾವ ದೇಶವೂ ಸಿದ್ಧವಾದ ಮನಸ್ಥಿತಿಯನ್ನು ಹೊಂದಿಲ್ಲದ ಕಾರಣ ಇರಾನಿನ ಅಣ್ವಸ್ತ್ರ ಕಾರ್ಯಕ್ರಮಗಳಿಂದ ಪ್ರಪಂಚದಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಲಾರದು. ಇಂದು ಎಷ್ಟೇ ದೊಡ್ಡ ಮಿಲಿಟರಿ ಬಲ ಹೊಂದಿರುವ ದೇಶವಾದರೂ ಸಣ್ಣ ದೇಶಗಳ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವ ವಸಾಹತುಶಾಹೀ ಕಾಲ ಮುಗಿದು ಮಾನವ ಜನಾಂಗ ಮುಂದಿನ ಘಟ್ಟಕ್ಕೆ ಮುಟ್ಟಿದೆ. ಹೀಗಾಗಿಯೇ ಇಂದು ಸಣ್ಣ ಸಣ್ಣ ದೇಶಗಳನ್ನು ಅಪಾರ ಮಿಲಿಟರಿ ಬಲದ ದೇಶಗಳು ಆಕ್ರಮಿಸುವ ಪರಿಪಾಟ ಕಂಡುಬರುತ್ತಿಲ್ಲ.

ಇನ್ನು ಮುಂಬರುವ ದಿನಗಳಲ್ಲಿ ಪರಸ್ಪರ ಸಹಕಾರ, ತಿಳಿವು, ಒಪ್ಪಂದ, ವೈಜ್ಞಾನಿಕ ಮುನ್ನಡೆ ಹಾಗೂ ಸಂಶೋಧನೆಗಳಿಂದ ಪ್ರಪಂಚದ ದೇಶಗಳು ಅಭಿವೃದ್ಧಿಯೆಡೆಗೆ ಹಾಗೂ ಶಾಂತಿ ಸಹಕಾರಗಳೆಡೆಗೆ ಮುನ್ನಡೆಯುವ ದಿನಗಳು ಬರುವ ಸಂಭವ ಇದೆ. ಇದು ಮಾನವ ವಿಕಾಸದ ಮುಂದಿನ ಘಟ್ಟ. ಅದನ್ನು ತಲುಪಲು ಎಲ್ಲ ದೇಶಗಳಲ್ಲೂ ಅರಿವು ಹಾಗೂ ಚಿಂತನೆ ಮೂಡಬೇಕಾದ ಅಗತ್ಯ ಇದೆ. ಅಂಥ ಚಿಂತನೆಯನ್ನು ರೂಪಿಸಲು ಪ್ರಪಂಚದ ಎಲ್ಲ ದೇಶಗಳ ಚಿಂತಕರು, ವಿಜ್ಞಾನಿಗಳು, ಮೇಧಾವಿಗಳು ಪ್ರಯತ್ನಿಸಬೇಕಾದ ಅಗತ್ಯ ಇದೆ.