Category Archives: ಕೆ.ಎಲ್.ಚಂದ್ರಶೇಖರ್ ಐಜೂರ್

ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು

– ರಾಬಿನ್ ಜೆಫ್ರಿ
ಕನ್ನಡಕ್ಕೆ: ಕೆ.ಎಲ್.ಚಂದ್ರಶೇಖರ್ ಐಜೂರ್

1992ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.

ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ.ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕರ್ಷಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆವಿಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.

ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಟ್ಯಾಗ್‌ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.

ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚರ್ಚೆಗಳು ೧೯೯೬ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಾಯ್‌ನೀರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.

ಒಬ್ಬ ದಲಿತನೂ ಸಿಗಲಿಲ್ಲ…

ನಾನು 2000ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ 2006ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.

ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್‌ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟುಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.

ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು 1920ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆರ್ಥಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚರ್ಚ್‌ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.

ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್‌ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.

ಎರಡು ಸಲಹೆಗಳು…

ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು. 1978ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30ರಷ್ಟಿದ್ದರೂ ಆ ವರ್ಷ ಶೇಕಡಾ 4ರಷ್ಟು ಕಪ್ಪು ವರ್ಣೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. 2000ದ ಹೊತ್ತಿಗೆ ಗುರಿ ಶೇಕಡಾ 20 ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. 2011ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವರ್ಣೀಯರು ಶೇಕಡಾ 13ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ 36ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾದವರು ಸೇರಿದ್ದಾರೆ. ಈಗ ನ್ಯೂಸ್ ಎಡಿಟರ್ಸ್ ಸಂಸ್ಥೆ  ತನ್ನ ಗುರಿಯನ್ನು 2020ಕ್ಕೆ ನಿಗದಿಪಡಿಸಿಕೊಂಡಿದೆ.

ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.

ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್‌ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್‌ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.

ನವಯಾನಗಳು ಬೇಕು…

ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆರ್ಥಿಕ ಬೆಂಬಲದಿಂದ ಟ್ರಸ್ಟ್‌ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸರ್ಕಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್‌ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.

ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? 1967ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. 1970ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ 38 ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.

ಇಂಡಿಯಾದ ಟಿ.ವಿ. ಚಾನಲ್‌ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.

ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪೂರ್‌ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು 31ನೇ ಮಾರ್ಚ್ 1012ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ.)

ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

ಕನ್ನಡ ಸಿನಿಮಾ: ಸಾಧ್ಯತೆ ಮತ್ತು ಸವಾಲುಗಳು

‘Cinema is the most beautiful
fraud in the world.’
 -Jean Luc Goddard

ನನ್ನ ಪ್ರಕಾರ ’ಓದುವಿಕೆ’ ಅಂದರೆ, ನಾಲ್ಕು ನೂರು ಪುಟಗಳ ಕಾದಂಬರಿಯೊಂದನ್ನು ಓದುಗನೊಬ್ಬ, ಲೇಖಕ ಆ ಕೃತಿ ಬರೆಯುವಾಗ ತೋರಿದ ನಿಷ್ಠೆ ಪ್ರಾಮಾಣಿಕತೆಗಳನ್ನು ಬದಿಗೊತ್ತಿ, ತನಗೆ ಸರಿಕಂಡ ಕ್ರಮಗಳಲ್ಲಿ ಗ್ರಹಿಸುತ್ತಾ ಹೋಗಿ, ಕಡೆಗೆ ಲೇಖಕನನ್ನು ಮೀರಿ ತನ್ನ ಓದಿನ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳುವ ರೀತಿ. ಇಲ್ಲಿ ಎಲ್ಲ ಲೇಖಕರಿಗೂ ಗಂಭೀರ ಕಾವ್ಯ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗದಿರಬಹುದು; ಆದರೆ ಯಾರೂ ಗಂಭೀರ ಓದುಗರಾಗಬಹುದು. ಸಿನಿಮಾದಲ್ಲಿ ಈ ಅವಕಾಶಗಳಿಲ್ಲ. ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯೊಂದನ್ನು ಓದುವಾಗ ಖರ್ಚು ಮಾಡಿದ ಒಂದು ಪಾಲಿನ ಶ್ರಮದಷ್ಟು ಸಿನಿಮಾ ಎಂಬ ಇನ್ಸ್‌ಟಂಟ್ ಫುಡ್ ಮೇಲೆ ಓದುಗನೊಬ್ಬ ಖರ್ಚು ಮಾಡಿದರೆ ಸಾಕು; ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯನ್ನು ಎರಡು, ಎರಡೂವರೆ ಗಂಟೆಗಳಲ್ಲಿ ತಿಂದು ಮುಗಿಸಬಹುದು! ಜೀರ್ಣಿಸಿಕೊಳ್ಳುವುದು ಆಮೇಲಿನ ಮಾತು.

ಕನ್ನಡ ಸಿನಿಮಾಗಳ ಐವತ್ತು, ನೂರು ದಿನಗಳ ವಾಲ್ಪೋಸ್ಟರ್ಗಳನ್ನು ರಸ್ತೆಬದಿ ಕಂಡಾಗ ಮಾತ್ರ ಸಿನಿಮಾ ನೋಡುವ ಸಾಹಸಕ್ಕೆ ಕೈಹಾಕುವ ನನ್ನಂಥವರಿಗೆ ಕನ್ನಡ ಸಿನಿಮಾಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಯಾವ ಮೂಲೆಯಲ್ಲೂ ತಯಾರಾಗದ, ಮತ್ತಿನ್ನ್ಯಾರೂ ತಯಾರು ಮಾಡಲಿಕ್ಕಾಗದ ಕಳಪೆ ದರ್ಜೆ ಸಿನಿಮಾಗಳು; ಮನುಷ್ಯರು ನೋಡಲಿಕ್ಕಾಗದ ಸಿನಿಮಾಗಳು; ಪ್ರೇಕ್ಷಕರನ್ನು ಲೆಕ್ಕಕ್ಕಿಡದೆ ಕೇವಲ ಪ್ರಶಸ್ತಿಗಾಗಿ ತಯಾರಾಗುವ ಸಿನಿಮಾಗಳು; ಸಿನಿಮಾದ ಅಸಲಿ ಗಂಧಗಾಳಿ ಗೊತ್ತಿಲ್ಲದವರು ನಿರ್ದೇಶಿಸುವ ಸಿನಿಮಾಗಳು; ತಯಾರಿಕೆಗೆ ಬೇಕಾದ ಕನಿಷ್ಠ ಪ್ರಾಥಮಿಕ ವ್ಯಾಕರಣ ಗೊತ್ತಿಲ್ಲದವರು ನಿರ್ಮಿಸುವ ಸಿನಿಮಾಗಳು; ಗಲ್ಲು ಶಿಕ್ಷೆಗೆ ಒಳಪಟ್ಟ ಕೈದಿಯೊಬ್ಬ ಈ ಸಿನಿಮಾಗಳಿಗಿಂತ ಗಲ್ಲು ಶಿಕ್ಷೆಯೇ ವಾಸಿ ಎನಿಸುವಂತೆ ಮಾಡಿದ ಸಿನಿಮಾಗಳು… ಇಲ್ಲಿ, ಅಂದರೆ ಅಖಂಡ ಕರ್ನಾಟಕ ರಾಜ್ಯದ ಕನ್ನಡ ಭಾಷೆಯಲ್ಲಿ ಮಾತ್ರ ರೂಪುಗೊಳ್ಳುತ್ತವೆ ಎಂಬುದು ನನ್ನ ಗ್ರಹಿಕೆ. ಈ ಬಗೆಯ ಸಿನಿಮಾಗಳನ್ನು ನೋಡಲು ಬರೀ ಕಣ್ಣಿದ್ದರೆ ಸಾಲದು; ನೋಡುವ ಎದೆಗಾರಿಕೆಯೂ ಬೇಕು!

ಕಮರ್ಷಿಯಲ್ / ಕಲಾತ್ಮಕ ಅನ್ನದೆ ಅತಿ ಕಡಿಮೆ ಒಳ್ಳೆಯ ಚಿತ್ರಗಳನ್ನು ಅತಿ ಕೆಟ್ಟ ಮತ್ತು ಭೀಕರ ಪರಿಣಾಮಗಳೊಂದಿಗೆ ತಯಾರಿಸುವ ಖ್ಯಾತಿ ಸದ್ಯಕ್ಕೀಗ ಕನ್ನಡ ಚಿತ್ರರಂಗಕ್ಕಿದೆ. ನೆರೆಯ ತಮಿಳು, ತೆಲುಗು, ಮಲಯಾಳಂ ಚಿತ್ರೋದ್ಯಮಗಳು ಕಾಲಕಾಲಕ್ಕೆ ಸಿನಿಮಾದ ಕಥೆ, ಚಿತ್ರಕಥೆ, ವಸ್ತು, ನಿರೂಪಣೆ, ತಂತ್ರಗಾರಿಕೆಯನ್ನು ಅಪ್‌ಡೇಟ್ ಮಾಡಿಕೊಂಡು ಹೋಗುತ್ತಿರುವಾಗ, ಇಲ್ಲಿನವರು -ಅಂದರೆ ಗಾಂಧಿನಗರದ ಇಂಗುಮರ್ರು ಬರ್ಗ್‌ಮನ್ನುಗಳು, ಅಕಿರೋ ಕುರ್ರಸೋವಾಗಳು- ತಮಿಳು ತೆಲುಗು ಮಲಯಾಳಂನವರ ಎಂಜಲನ್ನು ಪವಿತ್ರ ತೀರ್ಥ ಪ್ರಸಾದಗಳಂತೆ ಸ್ವೀಕರಿಸುತ್ತಿರುವ ದೃಶ್ಯಗಳನ್ನು ನೋಡಲು 70 ಎಂ.ಎಂ ಪರದೆಯೇ ಬೇಕಿಲ್ಲ.

ಕನ್ನಡ ಸಿನಿಮಾದ ಸದ್ಯದ ಸಾಧ್ಯತೆ ಸವಾಲುಗಳ ಕುರಿತು ಹೇಳುವಾಗ, ಮೇಲಿನ ಮಾತುಗಳನ್ನು ಕನ್ನಡ ಸಿನಿಮಾ ರಂಗ ವರ್ತಮಾನದಲ್ಲಿ ತಲುಪಿರುವ ಹೀನಾಯ ಸ್ಥಿತಿಗೆ ಪೀಠಿಕೆಯಾಗಿ ಹೇಳಬೇಕಾಯಿತು. ಜಾಗತಿಕ ಸಿನಿಮಾ ರಂಗದಲ್ಲಿ ದೊಡ್ಡ ಮಾರುಕಟ್ಟೆಯೇನೂ ಕನ್ನಡ ಚಿತ್ರಗಳಿಗಿಲ್ಲ. ಕೋಲಾರ, ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲಿ ಬಿಟ್ಟಿ ತೋರಿಸಿದರೂ ಜನ ಅತ್ತ ಕಡೆ ತಲೆ ಹಾಕುವುದಿಲ್ಲ. ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಗಾಂಧಿನಗರದ ಖಾಲಿ ತಲೆಗಳಿಗೆ ಪುರುಸೊತ್ತಿಲ್ಲ. ರೈತರಿಗೆ, ಶ್ರಮಿಕ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ ಸಿಗದ ಸಬ್ಸಿಡಿಗಳು, ಸವಲತ್ತುಗಳು ಈ ಸಿನಿಮಾದವರಿಗೆ ಸಿಗುತ್ತಿವೆ. ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಯನ್ನು ನಾವು ಸಿನಿಮಾಗಳ ಮೂಲಕ ಎತ್ತಿಹಿಡಿಯುತ್ತಿದ್ದೇವೆ ಎಂದು ಸರ್ಕಾರದ ಸಬ್ಸಿಡಿಗೆ ಅರ್ಜಿ ಹಾಕುವ ಇವರ ಸಿನಿಮಾಗಳನ್ನು ಒಮ್ಮೆ ನೋಡಿದರೆ ಸಾಕು; ಕನ್ನಡ ಭಾಷೆಯನ್ನು, ಪ್ರೇಕ್ಷಕರ ಅಭಿರುಚಿಯನ್ನು ಹೇಗೆಲ್ಲ ಕಲುಷಿತಗೊಳಿಸಬಹುದೆಂಬ ವಿಧಾನಗಳು ಹೊಳೆಯುತ್ತವೆ.

**
ಗಡಿ ಪ್ರದೇಶದಲ್ಲಿರುವ ಜನ ಏಕಕಾಲಕ್ಕೆ ಎರಡು ಭಾಷೆಗಳ ಮೇಲೆ ಹಿಡಿತ ಹೊಂದಿರುತ್ತಾರೆ ಎಂಬ ಕನಿಷ್ಠ ಅರಿವು ಗಾಂಧಿನಗರದ ಬಣ್ಣದ ಜನರಿಗೆ ಇದ್ದಂತಿಲ್ಲ. ಗಾಂಧಿನಗರವಿರಲಿ, ಸರ್ಕಾರವೇ ಎರಡು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಜನರನ್ನು ಪ್ರತಿಭೆಯ ಮಾನದಂಡಗಳಿಂದ ಗುರುತಿಸುವ ಬದಲು ಅದು ಆ ಜನರ ಅಸಹಾಯಕತೆ ಎನ್ನುವಂತೆ ನೋಡುತ್ತಿದೆ. ಈ ಭಾಗದ ಜನರ ನಿಜವಾದ ಸಂಕಟಗಳನ್ನು ಪ್ರತಿನಿಧಿಸುವಂತಹ ಸಿನಿಮಾಗಳಿಗೆ ಗಾಂಧಿನಗರದ ಜನ ಯಾವತ್ತೂ ಕೈಹಾಕಲಾರರು. ಇಂತಹ ಕಡೆಗಳಲ್ಲಿ ಕನ್ನಡ ಚಲನಚಿತ್ರಗಳ ಸಮಾಧಿಯ ಮೇಲೆ ತಮಿಳು, ತೆಲುಗು ಚಿತ್ರಗಳು ಪ್ರಚಂಡ ಜಯಭೇರಿ ಭಾರಿಸುತ್ತವೆ. ಇಲ್ಲಿ ಜಯಭೇರಿ ಅಂದ ಮಾತ್ರಕ್ಕೆ ತಮಿಳು, ತೆಲುಗು ಸಿನಿಮಾಗಳು ಇಲ್ಲಿನವರ ಕಷ್ಟಗಳಿಗೆ ಸ್ಪಂದಿಸುವಂತಹ ಸಿನಿಮಾಗಳನ್ನು ಕೊಡುತ್ತಿವೆ ಎಂದರ್ಥವಲ್ಲ. ಸಿನಿಮಾದಿಂದ ಪಕ್ಕಾ ಮನರಂಜನೆಯನ್ನು ಮಾತ್ರ ನಿರೀಕ್ಷಿಸುವ ಜನರಿಗೆ ನೀವು ಗೋಳನ್ನು ಪ್ರತಿನಿಧಿಸುವ, ಹಿಂಸೆಯನ್ನು ವೈಭವಿಕರಿಸುವ, ಸವಕಲು, ತೆಳು ಕಥೆಗಳನ್ನಿಟ್ಟು ಇದೇ ಸಿನಿಮಾ ಎಂದು ಹೇಳಹೋದರೆ ಅದನ್ನು ಸಿನಿಮಾದ ಕ್ರಮಗಳಲ್ಲಿ ಯಾರೂ ನೋಡುವುದಿಲ್ಲ. ಹೀಗಾಗಿಯೇ ಇಲ್ಲಿ ತರ್ಕಕ್ಕಿಂತ ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ ತಮಿಳು, ತೆಲುಗು ಚಿತ್ರಗಳು ಕನ್ನಡವನ್ನು ಹಿಂದಿಕ್ಕಿ ಸದಾ ಗೆಲುವನ್ನು ಕಾಣುತ್ತವೆ.

ಕನ್ನಡದಲ್ಲಿ ತಯಾರಾಗುವ ಕಮರ್ಷಿಯಲ್ ಮತ್ತು ಕಲಾತ್ಮಕ ಎಂಬ ಲೇಬಲ್‌ಗಳನ್ನು ಅಂಟಿಸಿಕೊಂಡ ಚಿತ್ರಗಳನ್ನು ಗಮನಿಸಿ. ಕಮರ್ಷಿಯಲ್ ಚಿತ್ರಗಳಲ್ಲಿ ವೇಗ ಇರುತ್ತದೆ ಅನ್ನುವುದನ್ನು ಬಿಟ್ಟರೆ ಸಿನಿಮಾದ ಉಳಿದ ಪ್ರಕಾರಗಳು ಆ ದೇವರಿಗೇ ಪ್ರೀತಿಯಾಗಬೇಕು. ಗಾಂಧಿನಗರದ ಸಿದ್ಧ ಮಾದರಿಯ ಚೌಕಟ್ಟಿನಲ್ಲಿಯೇ ರೂಪುಗೊಳ್ಳುವ ಈ ಕಮರ್ಷಿಯಲ್ ಚಿತ್ರಗಳನ್ನು ಎರಡೂವರೆ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಕೂತು ನೋಡುವುದು ಹಿಂಸೆ ಎನಿಸಿದರೆ, ಕಲಾತ್ಮಕ ಚಿತ್ರ ನೋಡುವವರು ಸಹನೆಯ ಮೂಟೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಕ್ಯಾಮೆರಾವನ್ನು ಬಸವನ ಹುಳುವಿನ ಹೆಗಲಮೇಲಿಟ್ಟು ಸಿನಿಮಾ ನಿರ್ಮಿಸುವ ಕಲಾತ್ಮಕ ಚಿತ್ರಗಳ ಭೂಪರು, “ನಾವು ಐದು ಕೋಟಿ ಕನ್ನಡಿಗರಿಗಿಂತ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ನೀಡುವ ಹತ್ತು ಜನ ಜ್ಯೂರಿಗಳ ಸಲುವಾಗಿ ಸಿನಿಮಾ ನಿರ್ಮಿಸುತ್ತಿದ್ದೇವೆ,” ಎಂದು ಮುಕ್ತವಾಗಿಯೇ ಹೇಳಿಕೊಳ್ಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಹೇಳಿ ಮುಗಿಸಬಹುದಾದ ಸಂಗತಿಯೊಂದನ್ನು ಕಲಾತ್ಮಕ ಚಿತ್ರದ ನಿರ್ದೇಶಕರು ಗಂಟೆಗಟ್ಟಲೆ ಹೇಳಬಯಸುತ್ತಾರೆ. ಹೇಗಿದ್ದರೂ ಈ ಸಿನಿಮಾಗಳನ್ನು ಜನ ನೋಡುವುದಿಲ್ಲವೆಂಬ ಧೈರ್ಯ ಈ ಬಗೆಯ ಸಿನಿಮಾ ನಿರ್ದೇಶಿಸುವವರಿಗಿದ್ದಂತಿದೆ.

ಎಪ್ಪತ್ತರ ದಶಕದಲ್ಲಿ ತೆರೆಕಂಡ “ಬಂಗಾರದ ಮನುಷ್ಯ” ಚಿತ್ರವನ್ನು ಅವಲೋಕಿಸೋಣ. ಆ ಚಿತ್ರದ ನಾಯಕನಟಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸತ್ತುಹೋಗುತ್ತಾಳೆ. ನಂತರದ ದೃಶ್ಯದಲ್ಲಿ ಚಟ್ಟಕಟ್ಟುವ ಮತ್ತು ಚಿತ್ರದ ನಾಯಕನು ದುಃಖಿತನಾಗಿರುವ ಸನ್ನಿವೇಶಗಳನ್ನು ತೋರಿಸಲಾಗುತ್ತದೆ. ತೀಕ್ಷ್ಣವಾಗಿ ಈ ಚಿತ್ರದ ಒಂದೊಂದು ದೃಶ್ಯವೂ ಒಂದಾದ ಮೇಲೊಂದರಂತೆ ವೇಗ ಪಡೆದುಕೊಳ್ಳುತ್ತದೆ. ಈಗಲೂ “ಬಂಗಾರದ ಮನುಷ್ಯ” ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ, ಕಲಾತ್ಮಕ ಆಶಯದಲ್ಲಿ ನೋಡಲು ಸಾಧ್ಯವಿದೆ. “ಬಂಗಾರದ ಮನುಷ್ಯ” ನಿರ್ದೇಶಿಸಿದ ಸಿದ್ಧಲಿಂಗಯ್ಯನವರು ಗ್ರಾಮ್ಯ ಬದುಕಿನ ಸಿಟ್ಟು, ಕ್ರೌರ್ಯ, ಸಂಕಟಗಳನ್ನು ಬಿಂಬಿಸುವ “ಭೂತಯ್ಯನ ಮಗ ಅಯ್ಯು”ವನ್ನು ನಿರ್ದೇಶಿಸಿದ್ದಾರೆ. ಕನ್ನಡದ ಮಟ್ಟಿಗೆ ಇವೆರಡು ಚಿತ್ರಗಳು ಇವತ್ತಿಗೂ ಕ್ಲಾಸಿಕ್ ಅನ್ನಿಸುತ್ತವೆ. ಕರ್ನಾಟಕದ ಒಟ್ಟು ಸಮಾಜದ ಮೇಲೆ ಈ ಎರಡು ಚಿತ್ರಗಳು ಉಂಟು ಮಾಡಿದಷ್ಟು ಪರಿಣಾಮವನ್ನು ಬೀರಲು ದುಡ್ಡಿನ ಮಳೆಯಲ್ಲಿ ಮಿಂದ ಇವತ್ತಿನ ’ಮುಂಗಾರು ಮಳೆ’, ’ದುನಿಯಾ’ ಚಿತ್ರಗಳಿಗೆ ಸಾಧ್ಯವಿಲ್ಲ.

ಎರಡು ವರ್ಷಗಳ ಹಿಂದೆ ತೆರೆಕಂಡ “ಮಾತಾಡ್ ಮಾತಾಡು ಮಲ್ಲಿಗೆ” ಚಿತ್ರವನ್ನು ತೆಗೆದುಕೊಳ್ಳಿ. ಬಿಡುಗಡೆಗೂ ಮುನ್ನ ಈ ಚಿತ್ರವನ್ನು ರೈತರ ಚಿತ್ರ, ರೈತರ ಪರ ಇರುವ ಚಿತ್ರವೆಂದು ಹೇಳಲಾಯ್ತು. ಹೆಂಗಸರಿಗೆ ಹೊಲಿಸಿಟ್ಟ ಬಟ್ಟೆಗಳನ್ನು ತೊಟ್ಟು ನಲಿದಾಡುವ ಈ ಚಿತ್ರದ ನಾಯಕನಟನನ್ನು “ಹೂವಯ್ಯ” ಎಂದು ಕರೆದು, ಆತನನ್ನು ರೈತ ಎಂದು ಬಿಂಬಿಸಲಾಯಿತು. ರೈತನನ್ನು ತೆರೆಯ ಮೇಲೆ ಹೇಗೆ ಕಾಣಿಸಬೇಕೆಂಬ ಸೂಕ್ಷ್ಮಗಳು ಈ ಚಿತ್ರದ ನಿರ್ದೇಶಕರಿಗಾಗಲಿ ಅಥವಾ ನಾಯಕನಟರಿಗಾಗಲಿ ಗೊತ್ತಿದ್ದಂತೆ ಕಾಣಲಿಲ್ಲ. ಈ ದೇಶದ ಅದ್ಯಾವ ರೈತ ಫ್ಯಾಷನ್ ಷೋಗೆ ಹೊರಟ ಕಮಂಗಿಯಂತೆ ಬಟ್ಟೆ ಧರಿಸಿಕೊಂಡಿರುತ್ತಾನೋ ಬಲ್ಲವರೇ ಹೇಳಬೇಕು! ಬದುಕು ಮತ್ತು ಸಿನಿಮಾದ ನಡುವಿನ ಅಂತರ ಗೊತ್ತಿಲ್ಲದವರು ಮಾತ್ರ ರೈತನ ಕತೆ ಹೇಳುತ್ತಾ, ರೈತನನ್ನು ಬಿಟ್ಟು ಮತ್ತೆಲ್ಲವನ್ನೂ ತೋರಿಸಬಲ್ಲರು. ಈ ಚಿತ್ರದ ನಾಯಕನಟ ರೈತನ ಯಾವ ಗುಣಗಳನ್ನೂ ತೆರೆಯ ಮೇಲೆ ತೆರೆದಿಡುವುದಿಲ್ಲ. ಇಂಥ ರೈತನನ್ನು ಮಹಾತ್ಮನನ್ನಾಗಿಸಲು ಹೊರಟ ನಿರ್ದೇಶಕರಿಗೆ ಈ ದೇಶದ ಸಾಮಾನ್ಯ ರೈತನ ಕಷ್ಟಸುಖ ಮನವರಿಕೆಯಾದ ನಿದರ್ಶನಗಳೇ ಚಿತ್ರದುದ್ದಕ್ಕೂ ದೊರೆಯದೆ, ಕನ್ನಡ ಸಿನಿಮಾಗಳ ಕತೆಯ ಗುಣಮಟ್ಟ ಎಷ್ಟು ಕಳಪೆ ದರ್ಜೆಯದು ಎಂಬುದಕ್ಕೆ ಈ ಚಿತ್ರ ದೊಡ್ಡ ಉದಾಹರಣೆಯಾಗಿ ನಿಂತಿದೆ.

**

ಡಾ.ರಾಜ್‌ಕುಮಾರ್, ಅಶ್ವಥ್, ಬಾಲಕೃಷ್ಣ, ನರಸಿಂಹರಾಜು ಮುಂತಾದವರ ಎದಿರು ಈಗಿನ ದರ್ಶನ್, ಸುದೀಪ್, ಉಪೇಂದ್ರ, ಮುರಳಿ, ದಿಗಂತ್, ಆದಿತ್ಯ ಮುಂತಾದ ನಟರನ್ನು ಯಾವ ಮಾನದಂಡದಿಂದ ನಟರೆಂದು ಕರೆಯಬೇಕೆಂಬುದೇ ದೊಡ್ಡ ಸಂಕಟವಾಗಿದೆ. ತಮಿಳಿನ ಗೌಂಡುಮಣಿ, ಸೆಂದಿಲ್, ವಡಿವೇಲ್, ವಿವೇಕ್; ತೆಲುಗಿನ ಬ್ರಹ್ಮಾನಂದಂ, ಅಲಿ, ಸುನೀಲ್, ವೇಣುಮಾಧವ್ ಮುಂತಾದ ಹಾಸ್ಯ ನಟರ ನೆರಳುಗಳಲ್ಲೇ ಕನ್ನಡದ ದೊಡ್ಡಣ್ಣ, ಟೆನ್ನಿಸ್‌ಕೃಷ್ಣ, ಸಾಧುಕೋಕಿಲ, ಕೋಮಲ್, ಶರಣ್ ಜೀವಿಸತೊಡಗಿರುವುದರಿಂದ, ಮೂಲ ಚಿತ್ರವನ್ನು ನೋಡಿದವರು ಅಕಸ್ಮಾತ್ ಕನ್ನಡ ಚಿತ್ರವನ್ನು ನೋಡಿದರೆ, ಮತ್ತಿನ್ನೆಂದೂ ಥೇಟರ್ ಕಡೆ ಕಾಲಿಡಲಾರರೇನೋ.

ಪಡೋಸನ್, ಬಾವರ್ಚಿ, ದೇವರ್‌ಮಗನ್, ಪೊರ್ಕಾಲಂ, ಆಟೋಗ್ರಾಫ್, ಕಾದಲ್‌ಕೊಂಡೇನ್, 7/ಜಿ ರೈನ್ಬೋ ಕಾಲೋನಿಯಂತಹ ಒಂದು ಕಾಲದ ಹಿಂದಿ, ತಮಿಳು, ತೆಲುಗಿನ ಯಶಸ್ವಿ ಚಿತ್ರಗಳು ಗಾಂಧಿನಗರದ ಪ್ರತಿಭೆಗಳ ಕೈಯಲ್ಲಿ ಹಠಾತ್ ತೀರಿಕೊಳ್ಳುತ್ತವೆ. ಮಣಿರತ್ನಂ ನಿರ್ದೇಶನದ ತಮಿಳಿನ “ದಳಪತಿ” ಚಿತ್ರವು ಕನ್ನಡಕ್ಕೆ “ಅಣ್ಣಾವ್ರು” ಎಂಬ ಹೆಸರಿನಲ್ಲಿ ರೀಮೇಕಾಯಿತು. ಆ ಚಿತ್ರ ನೋಡಿದ ನಟಿ ಸುಹಾಸಿನಿ, “ದಯವಿಟ್ಟು ಈ ಚಿತ್ರವನ್ನು ನನ್ನ ಗಂಡನಿಗೆ ತೋರಿಸಬೇಡಿ. ಆಗಾಗ ಎದೆನೋವಿನಿಂದ ನರಳುವ ಅವರು ಈ ಚಿತ್ರ ನೋಡಿದರೆ ಪ್ರಾಣ ಬಿಡುವುದು ಖಂಡಿತ,” ಎಂದು ಹೇಳಿದ್ದು ಕನ್ನಡದ ರೀಮೇಕ್ ಶೂರರ “ಪ್ರತಿಭಾನ್ವಿತ”ತನಕ್ಕೆ ಭಾಷ್ಯ ಬರೆದಂತಿದೆ. ತಮಿಳಿನ ಒಳ್ಳೆಯ ಸಿನಿಮಾಗಳೆಲ್ಲ ಕನ್ನಡಕ್ಕೆ ಬಂದು ತಿಥಿಯಾಗಿವೆ. ಇಲ್ಲಿನವರಿಗೆ ಕಾಪಿ ಹೊಡೆದರೂ ಪಾಸಾಗುವ ವಿದ್ಯೆ ಗೊತ್ತಿಲ್ಲ. ರೀಮೇಕ್ ಸಿನಿಮಾ ನಿರ್ಮಿಸುವಾಗಲೂ ಅದು ಮೂಲ ಚಿತ್ರದಷ್ಟೇ ಕಸುಬುದಾರಿಕೆಯನ್ನು ಬೇಡುತ್ತದೆ ಎಂಬ ಕಾಮನ್‌ಸೆನ್ಸ್ ಇಲ್ಲಿನವರಿಗೆ ಇಲ್ಲದಿರುವುದರಿಂದಲೇ, ರೀಮೇಕ್ ಸಿನಿಮಾಗಳು ಬಿಡುಗಡೆಯಾದ ಒಂದೇ ವಾರಕ್ಕೆ ಥೇಟರಿನಿಂದ ಖಾಲಿಯಾಗಿ ಒಂದೇ ತಿಂಗಳ ಅವಧಿಯಲ್ಲಿ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತವೆ.

ಸಿನಿಮಾದ ಕುರಿತು ಸ್ಪಷ್ಟ ತಿಳುವಳಿಕೆಯೇ ಇಲ್ಲದ ಜನ ಈಗ ಕನ್ನಡದಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ; ಬದುಕಿನಲ್ಲಿ ಅಡ್ಡದಾರಿ ಹಿಡಿದು ಗಳಿಸಿದ ದುಡ್ಡನ್ನೆಲ್ಲ ವ್ಯಯಿಸಲು ಇಲ್ಲಿ ಬಹಳ ಜನ ಕಾತರರಾಗಿ ನಿಂತಿದ್ದಾರೆ. ಇಂಥವರು ಕೂಡಿ ನಿರ್ಮಿಸಿದ ಒಂದೇ ಒಂದು ಕನ್ನಡ ಚಿತ್ರದತ್ತ ಕಣ್ಣು ಹಾಯಿಸಿದರೆ ಸಾಕು, ಈ ಜನ ತಮ್ಮ ಬದುಕಿನಲ್ಲಿ ಒಂದೊಳ್ಳೆ ಸಿನಿಮಾ ನೋಡಿರುವ ಸಾಧ್ಯತೆಯೇ ಇಲ್ಲ ಎಂಬುದು ತಿಳಿಯುತ್ತದೆ. ಈ ತರಹದ ಅಡ್ಡಕಸುಬಿ ಜನಕ್ಕೆ ಸಿನಿಮಾ ಅನ್ನುವುದು ತೆವಲಿನಂತೆ ಕಾಣುತ್ತಿದೆಯೇ ಹೊರತು ಅದು ಜನರ ನಾಡಿಯನ್ನು ಮಿಡಿಸಬಲ್ಲ ಮಾಧ್ಯಮ ಎಂದು ಅನ್ನಿಸಿಯೇ ಇರುವುದಿಲ್ಲ. ಗಾಂಧಿನಗರದ ಲೆಕ್ಕಾಚಾರಗಳು ಹೇಗಿರುತ್ತವೆಂದರೆ, ಪ್ರೇಕ್ಷಕನಿಂದ ನಲವತ್ತು ರೂಪಾಯಿ ಕಿತ್ತುಕೊಂಡು ಆತನಿಗೆ ಎಂಟಾಣೆಯ ಸಿನಿಮಾ ಮಾತ್ರ ತೋರಿಸಬೇಕು ಎನ್ನುವ ನಿಲುವು ಅನೇಕರಿಗೆ ಇರುವಂತಿದೆ. ಕೋಟಿ ವೆಚ್ಚದ ಬಜೆಟ್‌ನಲ್ಲಿ ತಯಾರಾಗುವ ಕನ್ನಡ ಚಿತ್ರಗಳು ತಂದುಕೊಡುವ ಲಾಭ ಆ ಚಿತ್ರದ ವಾಲ್‌ಪೋಸ್ಟರಿನ ಖರ್ಚನ್ನೂ ಹುಟ್ಟಿಸುವುದಿಲ್ಲ ಎಂಬ ಪರಿಸ್ಥಿತಿ ಈಗ ಉಂಟು.

ಕನ್ನಡ ಸಿನಿಮಾದ ನಿರ್ಮಾಪಕರನ್ನು ಆತ್ಮಹತ್ಯೆಯಿಂದ ಪಾರುಮಾಡುತ್ತಿರುವುದು ’ಬಿ’, ’ಸಿ’ ಸೆಂಟರಿನ ಪ್ರೇಕ್ಷಕರು ಮಾತ್ರ. ಅದರಲ್ಲೂ ಹೋಟೆಲ್ ಕಾರ್ಮಿಕರು, ದಿನಗೂಲಿ ನೌಕರರು, ಅವತ್ತು ದುಡಿದ ಹಣವನ್ನು ಅವತ್ತೇ ಖರ್ಚು ಮಾಡುವ ಶ್ರಮಿಕ ವರ್ಗದ ಜನ ಇವತ್ತು ಹೆಚ್ಚು ಕನ್ನಡ ಸಿನಿಮಾ ನೋಡಲು ಥೇಟರಿಗೆ ಬರುತ್ತಾರೆ. ನೆರೆಯ ತಮಿಳು, ತೆಲುಗು ಚಿತ್ರಗಳ ವೀಕ್ಷಕರಿಗಿಂತ ಕನ್ನಡ ಸಿನಿಮಾಗಳ ನೋಡುಗರು ಜಾಣರು. ಮನೆಮಂದಿಯಲ್ಲ ಕೂತು ನೋಡುವಂತಹ ಚಿತ್ರವನ್ನು ಸ್ವೀಕರಿಸಿದಷ್ಟೇ ಮನುಷ್ಯರು ನೋಡಲಿಕ್ಕಾಗದ ಚಿತ್ರಗಳನ್ನು ನಿರ್ದಯವಾಗಿ ತಿರಸ್ಕರಿಸಿದ್ದಾರೆ.

ನಮ್ಮ ಗಾಂಧಿನಗರದ ಜನರ ಕಣ್ಣಿಗೆ ಒರಿಜಿನಲ್ ಕನಸುಗಳು ಯಾವತ್ತೂ ಬೀಳುವುದಿಲ್ಲವೇನೋ!  ಕೊಂಡು ತರುವ ಬಾಡಿಗೆ ಕನಸುಗಳಿಗೆ ಹೇಗೆ ಬಣ್ಣ ಹಚ್ಚಬೇಕೆಂಬುದೂ ಇವರಿಗೆ ಮೊದಲೇ ಗೊತ್ತಿಲ್ಲ! ತಮ್ಮ ಮಿತಿಗಳು, ದೌರ್ಬಲ್ಯಗಳ ಅರಿವಿಲ್ಲದ ಈ ಗಾಂಧಿನಗರದ ಮಂದಿ, ಕತೆ ಕಟ್ಟುವ ಮುನ್ನವೇ ಚಿತ್ರದ ಹೀರೋ ಹೀರೋಯಿನ್‌ಗಳ ಕಾಲ್‌ಶೀಟ್‌ಗಾಗಿ ಚಪ್ಪಲಿ ಸವೆಸುತ್ತಾರೆ. ಇಂಥವರ ಚಿತ್ರಗಳ ಶೀರ್ಷಿಕೆ, ಮುಹೂರ್ತ, ಬಿಡುಗಡೆಯ ದಿನಾಂಕಗಳನ್ನು ನಿರ್ಧರಿಸುವವರು ದೈವಿಕ ತಲೆಹಿಡುಕರಾದ ಪೂಜಾರಿಗಳು ಹಾಗೂ ಶಾಸ್ತ್ರ ಬೊಗಳುವ ಶುನಕಗಳು.

ವೈದಿಕರು ಕಟ್ಟಪ್ಪಣೆ ಮಾಡಿದ ಘಳಿಗೆಯಲ್ಲಿ ಮುಹೂರ್ತ, ಎಡಿಟಿಂಗ್, ಬಿಡುಗಡೆ ಎಲ್ಲವನ್ನು ಮಾಡುವ ಗಾಂಧಿನಗರದ ಜನ, ಚಿತ್ರ ಮಕಾಡೆ ಮಲಗಿದಾಗ ಮಾತ್ರ ತಮ್ಮ ಚಿತ್ರಗಳ ಸೋಲಿಗೆ ಪತ್ರಿಕೆಗಳ ಕೆಟ್ಟ ವಿಮರ್ಶೆ, ಕ್ರಿಕೆಟ್, ಮಳೆ, ಕಾಲೇಜು ರಜೆ,  ಹಬ್ಬಹರಿದಿನಗಳು ಕಾರಣವೆಂದು ಬೊಬ್ಬಿಡುತ್ತಾರೆ. “ಗಂಡುಗಲಿ ಕುಮಾರರಾಮ” ಎಂಬ ದೊಡ್ಡ ಬಜೆಟ್‌ನ ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಥೇಟರ್‌ಗಳಿಂದ ಕಾಲುಕಿತ್ತಾಗ, ಗಾಂಧಿನಗರದ ಸಿನಿ ಪಂಡಿತರು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಕುಮಾರರಾಮನಿಗೆ ಪೂಜೆ ಮಾಡದೆ ಶೂಟಿಂಗ್ ಆರಂಭಿಸಿದ್ದೇ ಸೋಲಿಗೆ ಕಾರಣ ಎಂದು ಷರಾ ಬರೆದರು. ಕನ್ನಡದಲ್ಲಿ ದೇವರ ಮಹಾತ್ಮೆಗಳನ್ನು ಹೇಳುವ ಚಿತ್ರಗಳನ್ನೇ ಪ್ರೇಕ್ಷಕರು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ ಎಂಬುದನ್ನು ಹೇಳಲು ಶ್ರೀಮಂಜುನಾಥ, ಮಣಿಕಂಠನ ಮಹಿಮೆ, ದುರ್ಗಾಶಕ್ತಿ, ಕೊಲ್ಲೂರು ಮೂಕಾಂಬಿಕೆ, ರೇಣುಕಾದೇವಿ ಮಹಾತ್ಮೆ… ಮುಂತಾದ ಮೂರನೇ ದರ್ಜೆ ಚಿತ್ರಗಳ ಪ್ರತ್ಯೇಕ ಪಟ್ಟಿಯನ್ನೇನೂ ಕೊಡಬೇಕಿಲ್ಲ ಎನಿಸುತ್ತದೆ.

**

ಇವತ್ತು ಇಪ್ಪತ್ತೈದು ಮೂವತ್ತು ಲಕ್ಷ ರೂಪಾಯಿಗಳಲ್ಲಿ ಸಿದ್ಧಗೊಳ್ಳುವ ಇರಾನ್ ದೇಶದ ಚಿತ್ರಗಳು ಜಗತ್ತಿನ ಗಮನ ಸೆಳೆಯುವಂತೆ, ಕೋಟಿ ಕೋಟಿ ಸುರಿದು ನಿರ್ಮಿಸುವ ಕನ್ನಡ ಚಿತ್ರಗಳಿಗೇಕೇ ಸಾಧ್ಯವಾಗುವುದಿಲ್ಲ ಎಂಬುದು ಬಗೆಹರಿಸಲಾಗದ ಒಗಟು. ಇರಾನಿನ ಮಜೀದ್ ಮಜೀದೀ, ಮೊಹ್ಸಿನ್ ಮಖ್‌ಮಲ್ಬಫ್‌ರಂತಹ ನಿರ್ದೇಶಕರು ಇಡೀ ಇರಾನ್ ದೇಶ ಹೆಮ್ಮೆಪಟ್ಟುಕೊಳ್ಳುವಂತಹ ಚಿತ್ರಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ.

ಮಖ್‌ಮಲ್ಬಫ್‌ರ ಇಡೀ ಕುಟುಂಬ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಮೀರಾ ಮಖ್ಮಲ್ಬಫ್, ತನ್ನ ತಂಗಿ ಹನಾಳೊಂದಿಗೆ ಕೂಡಿಕೊಂಡು ಆಫ್ಘಾನಿಸ್ತಾನದ ಖೊಮೆನಿಯ ಮೂಲಭೂತ ಕ್ರೌರ್ಯದಲ್ಲಿ ನರಳುತ್ತಿರುವ ಹೆಣ್ಣುಮಕ್ಕಳ ಸಂಕಟಗಳನ್ನು “At five in the afternoon” ಚಿತ್ರದಲ್ಲಿ ಯಥಾವತ್ತಾಗಿ ತೋರಿಸಿದ್ದಾಳೆ. “ಆಫ್ಘಾನಿಸ್ತಾನದ ಹೆಣ್ಣುಮಕ್ಕಳ ನೋವಿನ ಮುಂದೆ ನನ್ನ ಇರಾನ್ ದೇಶದ ಹೆಣ್ಣುಮಕ್ಕಳ ನೋವು, ನೋವೇ ಅನ್ನಿಸುವುದಿಲ್ಲ. ನನಗೆ ನನ್ನ ತಾಯ್ನೆಲದ ನೋವಿಗಿಂತ ಆಫ್ಘಾನದ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವು ದೊಡ್ಡದಾಗಿ ಕಾಣುವುದು. ಜಗತ್ತಿಗೆ ಇದನ್ನು ನಾನು ಮೊದಲು ಹೇಳಬೇಕು,” ಎನ್ನುವ ಸಮೀರಾ, ಇರಾನ್-ಇರಾಕ್ ದೇಶಗಳ ಗಡಿ ಕದನಗಳಿಂದ ಅಲ್ಲಿನ ಎಳೆಯ ಮಕ್ಕಳಿಗೆ ಶಾಲೆಯ ಹಾದಿಗಳು ದೂರವಾಗಿ ಇಪ್ಪತ್ತು ವರ್ಷ ದಾಟುವುದಕ್ಕೂ ಮುನ್ನವೇ ಅವರೆಲ್ಲ ಸೈನಿಕರ ಗುಂಡೇಟಿಗೆ ಬಲಿಯಾಗುವುದನ್ನು ತನ್ನ “ಬ್ಲಾಕ್‌‌ಬೋರ್ಡ್” ಚಿತ್ರದಲ್ಲಿ ಬೆಚ್ಚುವಂತೆ ಚಿತ್ರಿಸಿದ್ದಾಳೆ.

ಇರಾನ್ ದೇಶದವರು ಮಾಡುವ ಪ್ರಯೋಗ ಸಾಧ್ಯತೆಗಳನ್ನು ಎಲ್ಲ ಬಗೆಯ ಸಂಪನ್ಮೂಲ ಹೊಂದಿರುವ ಕನ್ನಡ ಸಿನಿಮಾ ರಂಗದಿಂದ ನಾವು ಯಾಕೆ ನಿರೀಕ್ಷಿಸಬಾರದು? ಇಲ್ಲಿ ಇನ್ನೂ ಒಂದು ಚರ್ಚಾಸ್ಪದ ಅಂಶವಿದೆ. ಕನ್ನಡದ ದೊಡ್ಡನಟರು ತಮ್ಮ ಗಂಡು ಮಕ್ಕಳನ್ನು ಸಿನಿಮಾ ರಂಗಕ್ಕೆ ತಂದು ಪರಿಚಯಿಸುವಾಗ ತೋರುವ ಸಂಭ್ರಮ, ಉತ್ಸಾಹಗಳನ್ನು ಹೆಣ್ಣುಮಕ್ಕಳ ಬಗ್ಗೆ ತೋರಿಸಿಲ್ಲ. ಸಿನಿಮಾ ರಂಗದಲ್ಲಿ ಹೆಣ್ಣನ್ನು ಇವತ್ತಿಗೂ ಯಾವ ದೃಷ್ಟಿಯಿಂದ ನೋಡಲಾಗುತ್ತಿದೆ ಎಂಬುದನ್ನು ಇದರಿಂದಲೇ ಅಂದಾಜಿಸಬಹುದು.

**

ಗಾಂಧಿನಗರದ ಜನ ನಿಜಕ್ಕೂ ಭ್ರಮಾಧೀನರು. ಭ್ರಮೆಗಳೊಂದಿಗೆ ಮೂಢನಂಬಿಕೆ ಸೇರಿಕೊಂಡು ನರಳುವ ರೋಗಿಷ್ಠರನ್ನು ನಾವು ಗಾಂಧಿನಗರದಲ್ಲಿ ಯಥೇಚ್ಛವಾಗಿ ಕಾಣಬಹುದು. ಅತಿ ಕಡಿಮೆ ಅವಧಿಯಲ್ಲಿ ಹಣ ಹೂಡಿ ಲಾಭ ಮಾಡಬಹುದು ಎಂದುಕೊಂಡಿರುವುದರಿಂದಲೇ ಈ ಕ್ಷೇತ್ರದಲ್ಲಿ ಸಭ್ಯರಿಗಿಂತ ವಂಚಕರು ಮತ್ತು ತೋಳ್ಬಲ ಉಳ್ಳ ಗೂಂಡಾಗಳ ಪ್ರಾಬಲ್ಯ ಹೆಚ್ಚುತ್ತಿದೆ.

ಈಚೆಗೆ ಕನ್ನಡದ ದೊಡ್ಡ ನಟರೊಬ್ಬರು, “ನನಗೆ ಕನ್ನಡ ಚಿತ್ರರಂಗದ ನಿರ್ಮಾಪಕರಿಂದ ಆದ ಚೆಕ್ ಬೌನ್ಸ್ ವಂಚನೆ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬೇಕಾದರೆ, ಬೌನ್ಸ್ ಆಗಿರುವ ಚೆಕ್‌ಗಳನ್ನು ಒಂದು ಲಾರಿಯಲ್ಲಿ ಸಾಗಿಸಬೇಕಾಗುತ್ತದೆ,” ಎಂದು ಹೇಳಿಕೊಂಡಿದ್ದರು. ಸಿನಿಮಾ ರಂಗದಲ್ಲಿ ವಂಚನೆಗಳು ತೀರಾ ಸಾಮಾನ್ಯ ಅನ್ನಿಸುವಂತೆ ದಿನನಿತ್ಯ ಘಟಿಸುತ್ತವೆ. ದೊಡ್ಡ ನಟನಟಿಯರಿಗಾದ ವಂಚನೆಗಳನ್ನು ಮಾತ್ರ ನಾವು ಪತ್ರಿಕೆಗಳಲ್ಲಿ ಓದಿಕೊಂಡು ಸುಮ್ಮನಾಗುತ್ತೇವೆ. ಚಿತ್ರರಂಗವನ್ನೇ ದಿನಪೂರ್ತಿ ನಂಬಿಕೊಂಡು ಬದುಕುತ್ತಿರುವ ಸಿನಿಮಾ ಕಾರ್ಮಿಕರು, ಅಂದರೆ ಲೈಟ್‌ಬಾಯ್‌ಗಳಿಂದ ಹಿಡಿದು ಸಹನಿರ್ದೇಶಕರು ಎದುರಿಸುವ ವಂಚನೆಯ ಪ್ರಮಾಣ ಹೆದರಿಕೆ ಹುಟ್ಟಿಸುವಂತಿದೆ. ಕನ್ನಡದ ದೊಡ್ಡ ನಟನಟಿಯರು ತಮ್ಮ ಪ್ರಭಾವಗಳನ್ನು ಬಳಸಿಕೊಂಡು ಹತ್ತು ಬರುವ ಕಡೆ ಆರೋ ಏಳೋ ಪಡೆದು ಸುಮ್ಮನಾಗುತ್ತಾರೆ. ಆದರೆ ಸಿನಿಮಾರಂಗದ ಕೂಲಿಕಾರ್ಮಿಕರನ್ನು ವಂಚಿಸುವುದು ತುಂಬ ಸುಲಭ. ಸದಾ ಅನಿಶ್ಚಿತ ಬದುಕು ಸಾಗಿಸುವ ಈ ಕೂಲಿಕಾರ್ಮಿಕರು ಬಂಡೇಳುವ ಗುಣವನ್ನು ತೋರಿಸಿದರೆ ಒಂದೋ ಉಪವಾಸ ಬೀಳಬೇಕಾಗುತ್ತದೆ; ಇಲ್ಲವೆಂದರೆ ಸಂಪೂರ್ಣವಾಗಿ ಚಿತ್ರರಂಗದಿಂದಲೇ ದೂರಾಗಬೇಕಾಗುತ್ತದೆ.

ಕನ್ನಡ ಚಿತ್ರರಂಗವನ್ನೇ ಬಲವಾಗಿ ನಂಬಿಕೊಂಡಿರುವ ಸಿನಿಮಾ ಕಾರ್ಮಿಕರ ರಕ್ಷಣೆಗೆಂದೇ ಇಲ್ಲಿ ಪ್ರಬಲವಾದ ಕಾಯ್ದೆಯೊಂದು ಇದುವರೆವಿಗೂ ರಚನೆಯಾಗಿಲ್ಲ. ಈ ಜನರ ಉಳಿವಿನ ಪ್ರಶ್ನೆಯನ್ನು ಕನ್ನಡದ ಯಾವೊಬ್ಬ ನಟರೂ ಈ ಕ್ಷಣದವರೆಗೂ ಸರ್ಕಾರದ ಗಮನಕ್ಕೆ ತಂದಿಲ್ಲ. ತಮ್ಮ ಪುಡಿ ಚಿತ್ರಗಳು ಐವತ್ತು, ನೂರು ದಿನಗಳ ಗಡಿ ದಾಟಿದಾಗ ಸಾವಿರ ಯುದ್ಧ ಗೆದ್ದುಬಂದ ಸಂಭ್ರಮದಲ್ಲಿ ವರ್ತಿಸುವ ಗಾಂಧಿನಗರದ ನಿರ್ಮಾಪಕರು, ತಮ್ಮ ಸಿನಿಮಾ ಐವತ್ತು ನೂರು ದಿನಗಳನ್ನು ಮುಟ್ಟಲು ಲೈಟ್‌ಬಾಯ್ ಕ್ಲಾಪ್‌ಬಾಯ್‌ಗಳಿಂದ ಮೊದಲ್ಗೊಂಡು ಎಲ್ಲರೂ ಕೊಟ್ಟಿರುವ ಕಾಣಿಕೆ ಬೆಲೆಯುಳ್ಳದ್ದು ಎಂಬ ತಿಳುವಳಿಕೆ ದಕ್ಕಿಸಿಕೊಂಡಿದ್ದರೆ, ಈ ಬಡಪಾಯಿಗಳು ತಮಗೆ ಸಿಗುವ ಅವಕಾಶಗಳಲ್ಲಿ ಇನ್ನೂ ಹೆಚ್ಚು ಉತ್ಸಾಹದಿಂದ ದುಡಿಯುತ್ತಿದ್ದರೇನೋ.

**

ಇಷ್ಟೆಲ್ಲದರ ನಡುವೆಯೂ ಕನ್ನಡ ಸಿನಿಮಾರಂಗಕ್ಕಿರುವ ಸಾಧ್ಯತೆ, ಸವಾಲುಗಳನ್ನು ಹೀಗೆ ಪಟ್ಟಿಮಾಡಿ ನೋಡಬಹುದು:

ಸಾಧ್ಯತೆಗಳು:

 1. ಭ್ರಮೆ ಮತ್ತು ಮೂಢನಂಬಿಕೆಗಳಿಂದ ಹೊರಬರದಿದ್ದರೆ ಕನ್ನಡ ಸಿನಿಮಾರಂಗ ಪತನವಾಗುವುದು ಖಚಿತ. ತಮ್ಮ ಮಿತಿ ಮತ್ತು ದೌರ್ಬಲ್ಯಗಳನ್ನು ಗಾಂಧಿನಗರದ ಜನ ಮೊದಲು ಅರಿತುಕೊಳ್ಳಬೇಕು. ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸಿದರೆ ಮತ್ತು ಎಂಥ ಕಳಪೆ ಚಿತ್ರಕ್ಕೂ ಡಿ.ಟಿ.ಎಸ್ ತಂತ್ರಜ್ಞಾನ ಅಳವಡಿಸಿಬಿಟ್ಟರೆ ಸಾಕು, ಸಿನಿಮಾ ಗೆದ್ದುಬಿಡುತ್ತದೆ ಎಂಬ ಹುಂಬ ವಿಶ್ವಾಸದಿಂದ ಈ ಜನ ಮೊದಲು ಹೊರಬರಬೇಕು.
 2. ಹೊರರಾಜ್ಯ ಮತ್ತು ವಿದೇಶಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ದಕ್ಕುವುದು ಹೇಗೂ ಕನಸಿನ ಮಾತು. ಮೊದಲು ಕರ್ನಾಟಕದ ಜನ ಒಪ್ಪುವಂತಹ ಸಿನಿಮಾ ನಿರ್ಮಿಸಿ, ಕಡಿಮೆ ಪ್ರವೇಶ ದರಗಳನ್ನಿಟ್ಟು ಜನರನ್ನು ಸೆಳೆಯಬೇಕು.
 3. ರಿಯಲ್ ಎಸ್ಟೇಟ್ ರಾಕ್ಷಸರನ್ನು, ಮೀಟರ್ ಬಡ್ಡಿ ದುಡ್ಡಿನ ಅಡ್ಡಕಸುಬಿ ಜನರನ್ನು ಗಾಂಧಿನಗರದ ಜನ ಇನ್ನಾದರೂ ದೂರವಿಡಲಿ.
 4. ಇಡೀ ಸಿನಿಮಾದ ಕಾರ್ಮಿಕರಿಗೆಲ್ಲ ಸಂಬಂಧಿಸಿದಂತೆ ಏಕರೂಪ ನೀತಿ ಸಂಹಿತೆಯೊಂದು ರಚನೆಯಾಗುವಂತೆ ಗಾಂಧಿನಗರದ ಜನ ಸರ್ಕಾರದ ಮೇಲೆ ಒತ್ತಡ ತರಬೇಕು.
 5. ವರ್ಷಕ್ಕೆ ಐವತ್ತಕ್ಕಿಂತ ಹೆಚ್ಚು ಚಿತ್ರಗಳ ನಿರ್ಮಾಣವಾಗದಂತೆ ನೀತಿಯೊಂದನ್ನು ರೂಪಿಸಬೇಕು. ಐವತ್ತರ ನಂತರ ಬರುವ ಸಿನಿಮಾಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡದಂತೆ, ಸರ್ಕಾರದ ಸಬ್ಸಿಡಿಗೆ ಅರ್ಜಿ ಹಾಕಲು ಅವಕಾಶವಾಗದಂತೆ ನಿಯಮಾವಳಿಯನ್ನು ಗಾಂಧಿನಗರದ ಜನ ಸರ್ಕಾರದ ಜತೆಗೂಡಿ ರೂಪಿಸಿದರೆ ಇಡೀ ಕನ್ನಡ ಸಿನಿಮಾರಂಗಕ್ಕೆ ಒಳಿತಾದೀತು.
 6. ಮಹಿಳಾ ನಟಿಯರನ್ನು ಮತ್ತು ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಜನರಿಗೆ ಕಾನೂನಿನ ಮೂಲಕ ಕ್ರಿಮಿನಲ್ ಸ್ವರೂಪದ ಶಿಕ್ಷೆಯಾಗುವಂತಹ, ಜೊತೆಗೆ ಅಂಥವರನ್ನು ಕನ್ನಡ ಸಿನಿಮಾರಂಗದಿಂದ ದೂರವಿಡುವಂತೆ ಕ್ರಮ ಜರುಗಿಸಬೇಕು.

ಸವಾಲುಗಳು:

 1. ಒಬ್ಬ ಕ್ರಿಕೆಟ್ ಪಟುವನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವಾಗ ಆತ ರಣಜಿಯಂತಹ ದೇಶೀಯ ಕ್ರಿಕೆಟ್ನಲ್ಲಿ ತೋರಿದ ಸಾಮಥ್ರ್ಯವನ್ನು ಪರಿಗಣಿಸುವಂತೆ ನೀನಾಸಂ, ರಂಗಾಯಣ ಮತ್ತು ಕಿರುತೆರೆಯ ಕಲಾವಿದರನ್ನು ಅವರ ಪ್ರತಿಭೆಯ ಆಧಾರದ ಮೇಲೆ ದೊಡ್ಡ ತೆರೆಗೆ ದಾಟಿಸಲು ಇರುವ ಅಡ್ಡಿಗಳೇನು?
 2. ಗಾಂಧಿನಗರದ ಒಳಜಗಳಗಳು ಬೀದಿಗೆ ಬಂದು ಹರಾಜಾಗುತ್ತಿವೆ. ಗಾಂಧಿನಗರದ ಈ ಸಿನಿಮಾ ಜನರನ್ನು ನಿಯಂತ್ರಿಸುವ ಶಿಸ್ತುಸಮಿತಿ ದಲ್ಲಾಳಿಯಂತೆ ವರ್ತಿಸುತ್ತಿರುವುದೇ ಅಲ್ಲಿನ ಸಣ್ಣಪುಟ್ಟ ತಂಟೆ ತಕರಾರುಗಳು ದೊಡ್ಡ ವಿವಾದಗಳಂತೆ ಕಾಣಿಸಿಕೊಳ್ಳಲು ಕಾರಣ. ಇವನ್ನೆಲ್ಲ ನಿಯಂತ್ರಿಸಲು ಗಾಂಧಿನಗರಕ್ಕೆ ಮಿಲಿಟರಿ ಸೈನ್ಯ ಬರಬೇಕೇ?
 3. ಪರಭಾಷಾ ಚಿತ್ರಗಳನ್ನು ಹಂಚಿಕೆದಾರರು ಬಿಡುಗಡೆಯಾದ ಏಳು ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ಅಲಿಖಿತ ಶಾಸನವೊಂದು ಜಾರಿಗೆ ಬಂತು, ನಂತರ ಅದು ಮೂರು ವಾರಗಳಿಗೆ ಇಳಿಯಿತು. ಈಗ ಬಿಡುಗಡೆಯಾದ ದಿನವೇ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳು ರಾರಾಜಿಸುತ್ತಿವೆ. ಇಚ್ಛಾಶಕ್ತಿಯ ಕೊರತೆ ಇರುವ ಕನ್ನಡ ಚಿತ್ರರಂಗದವರಿಗೆ ಏನು ಹೇಳುವುದು?
 4. ರೀಮೇಕ್ ಚಿತ್ರಗಳಿಗೆ, ಅರ್ಧಂಬರ್ಧ ಕದ್ದು ಮಾಡಿದ ಚಿತ್ರಗಳಿಗೆ, ಶೇಕಡ 90ರಷ್ಟು ಕನ್ನಡದ ಕಲಾವಿದರನ್ನು ಬಳಸಿಕೊಳ್ಳದ ಚಿತ್ರಗಳಿಗೆ, ಕನ್ನಡ ಭಾಷೆಯನ್ನು ವಿಕೃತಗೊಳಿಸುವ ಚಿತ್ರಗಳಿಗೆ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಹೇಳಲು ಸರ್ಕಾರಕ್ಕೇಕೆ ಸಾಧ್ಯವಾಗುತ್ತಿಲ್ಲ?
 5. ಸೃಜನಶೀಲ ಮತ್ತು ಸದಭಿರುಚಿಯ ಚಿತ್ರಗಳಿಗೆ ಮಾತ್ರ ಸಂಪೂರ್ಣ ತರಿಗೆ ವಿನಾಯಿತಿ ನೀಡಿ, ಚಿತ್ರಮಂದಿರಗಳ ಮೇಲೆ ಖಾಸಗಿಯವರ ಹಿಡಿತ ತಪ್ಪಿಸಿ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲವೇ?
 6. ಎ, ಬಿ, ಮತ್ತು ಸಿ ಕೇಂದ್ರಗಳಲ್ಲಿ ಟಿಕೆಟ್ ಶುಲ್ಕವನ್ನು ರಾಜಧಾನಿ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಾಂತರ ವಿಭಾಗಗಳಾಗಿ ಪ್ರತ್ಯೇಕಿಸಿ ಭಿನ್ನ ದರಗಳಲ್ಲಿ ಜಾರಿಗೆ ತರಲು ಸಾಧ್ಯವಾದರೆ ಚಿತ್ರಮಂದಿರಗಳತ್ತ ಒಂದಷ್ಟು ಜನರನ್ನು ಸೆಳೆಯಬಹುದಲ್ಲವೆ?

**

ಕೊನೆಯದಾಗಿ, ಕ್ರಿಕೆಟ್ ಮತ್ತು ಸಿನಿಮಾ ಈ ದೇಶದ ಅಧಿಕೃತ ಧರ್ಮಗಳಾಗಬಲ್ಲವು ಎಂದು ಕವಿ ಜಾವೇದ್ ಅಖ್ತರ್ ಹೇಳಿದ ಮಾತು ನೆನಪಾಗುತ್ತಿದೆ. ಇಲ್ಲಿ ಬದುಕಿನ ವ್ಯಂಗ್ಯ ವಿಪರ್ಯಾಸಗಳು ಹೇಗಿರುತ್ತವೆಂದರೆ, “ಎಲ್ಲ ಮಾಯ ನಾಳೆ ನಾವೂ ಮಾಯ” ಎಂಬ ಪ್ರಾಸಬದ್ಧ ಹಾಡು ತುರುಕಿ ತೆರೆಯ ಮೇಲೆ ತೋರಿಸುವ ಮಂದಿಗೆ ಈ ಸರ್ಕಾರ “ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ” ಪ್ರಶಸ್ತಿ ಕೊಡಲು ಮುಂದಾಗುತ್ತದೆ. ಅದೇ ಹಾಡಿನ ನಾಲ್ಕು ಸಾಲನ್ನು ಬೀದಿ ಹೋರಾಟಗಳಲ್ಲಿ ಬಳಸಿಕೊಂಡವರ ಕುರಿತು, “ಅವರು ನಕ್ಸಲರು. ಅವರ ಮೇಲೆ ಕಣ್ಣಿರಲಿ” ಎಂಬುದಾಗಿ ಪೊಲೀಸರಿಗೆ ಆದೇಶಿಸುತ್ತದೆ.

ಈ ತಾತ್ವಿಕತೆಯೇನೇ ಇರಲಿ, ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಸಂಪೂರ್ಣ ನೋಡುವ ಬದಲು ಅರ್ಧದಲ್ಲಿಯೇ ಎದ್ದು ಬಂದ ಸಂದರ್ಭಗಳನ್ನು ಹೆಚ್ಚಾಗಿ ಎದುರುಗೊಂಡಿರುವ ನನಗೆ, “If you can’t believe a little in what you see on the screen, it’s not worth wasting your time on cinema” ಎಂಬ Serge Daney ಯ ಮಾತುಗಳು ವಿಷಾದದ ಜೊತೆಗೆ ಖುಷಿಯನ್ನೂ ಉಂಟುಮಾಡಿವೆ ಎಂಬುದು ನಿಜ.

**

ಕೆ.ಎಲ್.ಚಂದ್ರಶೇಖರ್ ಐಜೂರ್
ಸಂಶೋಧಕ,
“ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ”
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ,
ಅಂಚೆ ಪೆಟ್ಟಿಗೆ ಸಂ. 7201,
ನಾಗರಭಾವಿ, ಬೆಂಗಳೂರು – 560 072