Category Archives: ಚಿದಂಬರ ಬೈಕಂಪಾಡಿ

ಸದನದಿಂದ ಮಾಧ್ಯಮಗಳನ್ನು ಹೊರಗಿಡುವುದು ಬುದ್ಧಿವಂತಿಕೆಯಲ್ಲ, ಬಡತನ…

– ಚಿದಂಬರ ಬೈಕಂಪಾಡಿ

ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ ಎನ್ನುವ ಮಾತು ನಿಜ ಎನ್ನುವುದನ್ನು ರಾಜಕಾರಣಿಗಳು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದರೂ ಆಂತರಿಕವಾಗಿ ಅವರು ಹಾಗೆ ಯೋಚಿಸುತ್ತಾರೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ವಿಧಾನ ಸಭಾ ಕಲಾಪ ನಡೆಯುತ್ತಿದ್ದಾಗ `ಅಶ್ಲೀಲ ವೀಡಿಯೋ’ ನೋಡಿದರೆಂಬುದು ಜಗಜಾಹೀರಾಗುತ್ತಿದ್ದಾಂತೆಯೇ ಇಡೀ ರಾಜಕೀಯ ಕ್ಷೇತ್ರದಲ್ಲಿ ತಲ್ಲಣಗಳು ಕಾಣಿಸಿಕೊಂಡವು.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡ ದೃಶ್ಯಗಳು ಮತ್ತೆ ಮತ್ತೆ ಕಣ್ಣೊರೆಸಿಕೊಂಡು ನೋಡುವಷ್ಟರಮಟ್ಟಕ್ಕೆ ದಿಗಿಲುಂಟು ಮಾಡಿದವು. ವಿಧಾನ ಸಭೆಯ ಇತಿಹಾಸದಲ್ಲಿ ಗದ್ದಲಗಳು ನಡೆದಿವೆ, ಕುರ್ಚಿ, ಮೈಕ್ ಬಿಸಾಡಿದ ಘಟನೆಗಳು ನಡೆದಿವೆ, ಅನೇಕ ಕಾರಣಗಳಿಗಾಗಿ ಅನೇಕ ರೀತಿಯ ರಂಪಾಟಗಳು ಘಟಿಸಿವೆ, ಸದನದೊಳಗೇ ರಾತ್ರಿಯೆಲ್ಲ ಧರಣಿ ನಡೆಸಿರುವುದು, ಹೀಗೆ ಹತ್ತು ಹಲವು ಘಟನೆಗಳು ಈ ಪ್ರಜಾಮಂದಿರದೊಳಗೆ ನಡೆದಿವೆ. ಆದರೆ `ಅಶ್ಲೀಲ ವೀಡಿಯೋ’ ನೋಡಿ ಸಿಕ್ಕಿಬಿದ್ದ ಮೊಟ್ಟಮೊದಲ ಘಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಅಶ್ಲೀಲ ಮಾತುಗಳನ್ನು ಅಥವಾ `ಅನ್‌ಪಾರ್ಲಿಮೆಂಟರಿ’ ಪದಬಳಕೆ ಮಾಡುವುದೇ ತಪ್ಪು ಎನ್ನುವಷ್ಟರಮಟ್ಟಿಗೆ ಸದನಕ್ಕೆ ಘನತೆಯಿದೆ. ಈ ಕಾರಣಕ್ಕಾಗಿಯೇ ಅಂಥ ಪದಗಳನ್ನು ಆಡಿದವರು ಕ್ಷಮೆಯಾಚಿಸಿರುವುದು, ಅಂಥ ಪದಗಳನ್ನು ಕಡತದಿಂದ ಕಿತ್ತು ಹಾಕಿಸಿದಂಥ ನೂರಾರು ಉದಾಹರಣೆಗಳಿವೆ. ಆದರೆ `ಅಶ್ಲೀಲ ವೀಡಿಯೋ’ ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸನ್ನಡತೆಯನ್ನು ಸದನದೊಳಗಿರುವವರು ಪಾಲಿಸುವಂತೆ ಮಾಡುವುದು ಜವಾಬ್ದಾರಿಯುತವಾದ ಹಾಗೂ ಸುಧಾರಣೆಯ ಕ್ರಮ. `ಅಶ್ಲೀಲ ವೀಡಿಯೋ’ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿಲ್ಲ, ನಿಜಕ್ಕೂ ತಪ್ಪಾಗಿರುವುದು ಎಲ್ಲಿ? ಎನ್ನುವ ಶೋಧವೂ ಆಗಿಲ್ಲ. ಅತ್ಯಂತ ಆತುರವಾಗಿ ರಾಜಕಾರಣಿಗಳ ಮನಸ್ಸು (ಸಾಮೂಹಿಕವಾಗಿ ಅಲ್ಲ, ಕೆಲವೇ ಕೆಲವು) ಮಾಧ್ಯಮಗಳನ್ನು ಸದನದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಆಘಾತಕಾರಿ. `ಅಶ್ಲೀಲ ವೀಡಿಯೋ’ ನೋಡಿದ ಅಪರಾಧಕಿಂತಲೂ ಘೋರವಾದ ಅಪರಾಧವನ್ನು ಮಾಡಲು ಕರ್ನಾಟಕದಲ್ಲಿ ಸಂಚು ಹೆಣೆಯುತ್ತಿರುವುದು ನಿರೀಕ್ಷಿತವೂ ಹೌದು.

ಸದನದೊಳಗೆ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ತಮಗೆ ಅನುಕೂಲಕರವಾದ ಸೂತ್ರ ಹೆಣೆದು ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದು ಎನ್ನುವ ತೀರ್ಮಾನಕ್ಕೆ ಬರುವಂಥ ದಡ್ಡ ಕೆಲಸವನ್ನು ಬುದ್ಧಿವಂತರು ಮಾಡುತ್ತಿರುವುದು ಮೂರ್ಖತನ ಮತ್ತು ಅವಿವೇಕಿತನ ಕೂಡಾ. ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳಿಗೆ ಸದನದೊಳಗೆ ಮಣೆಹಾಕಿ ಹುಳುಕನ್ನು ಎತ್ತಿತೋರಿಸುವ ಮಾಧ್ಯಮಗಳ ಕತ್ತುಹಿಚುಕುವ ದಡ್ದತನ ಇದರ ಹಿಂದಿದೆ. ಬೆಳಕೇ ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಂತಾಗುತ್ತದೆ ಮಾಧ್ಯಮಗಳಿಲ್ಲದ ಸದನವನ್ನು ಊಹಿಸುವುದು ಎನ್ನುವ ಸಾಮಾನ್ಯ ಅರಿವೂ ಇಲ್ಲದಷ್ಟು ಬುದ್ಧಿ ಬಡತನವೇ ನಮ್ಮ ರಾಜಕಾರಣಿಗಳಿಗೇ?.

ಮಾಧ್ಯಮಗಳ ಕತ್ತು ಹಿಚುಕುವ, ತಮಗೆ ಬೇಕಾದಂತೆ ಕುಣಿಸುವ ತಂತ್ರಗಳನ್ನು ದಶಕಗಳ ಹಿಂದೆಯೂ ಅನೇಕರು ರೂಪಿಸಿದ್ದರು ಮತ್ತು ತಮ್ಮದೇ ಆದ ತಂತ್ರಗಾರಿಕೆಯಿಂದ ಕಾರ್ಯಗತ ಮಾಡುವ ದುಸ್ಸಾಹಸವನ್ನು ಮಾಡಿ ಇತಿಹಾಸದ ಪುಟ ಸೇರಿಕೊಂಡಿರುವ ದೊಡ್ಡ ರಾಜಕಾರಣಿಗಳನ್ನು ಈಗಿನವರು ನೆನಪು ಮಾಡಿಕೊಂಡರೆ ಅರ್ಥವಾಗಿ ಬಿಡುತ್ತದೆ ತಾವೇನು ಮಾಡಲು ಹೊರಟಿದ್ದೇವೆಂಬುದು. ನಿರ್ಮಲವಾಗಿದ್ದ ಮಾಧ್ಯಮ ಕ್ಷೇತ್ರವನ್ನು `ಪೇಯ್ಡ್ ನ್ಯೂಸ್’ ಮೂಲಕ ಕಲುಷಿತಗೊಳಿಸಿದವರು ಯಾರು?.

ಪತ್ರಕರ್ತನ ಹುದ್ದೆ ನಿರ್ವಹಿಸಿದರೆ ಹೊಟ್ಟೆಗೇನು ಗತಿ? ಎನ್ನುವ ಕಾಲ ಬದಲಾಗಿದೆ, ರಾಜಕಾರಣಿಯ ಮನಸ್ಸಿನ ಹಿಂದೆ ಮಾಧ್ಯಮಗಳು ಮತ್ತು ಮಾಧ್ಯಮ ಮಂದಿಯ ಬುದ್ಧಿ ಕೆಲಸ ಮಾಡುವಂತಾಗಿರುವ ಸ್ಥಿತಿಗೆ ಹೊಣೆ ಯಾರು? ವೃತ್ತಿಯ ಘನತೆ ಎತ್ತಿಹಿಡಿಯುವುದೇ ಪರಮಧರ್ಮವೆಂದು ಬದುಕಿದ ಮಾಧ್ಯಮ ಮಂದಿಯ ನಿಜವಾದ ಬದುಕು ಹಿಂದೆ ಹೇಗಿತ್ತು? ಈಗ ಹೇಗಿದೆ? ಇಂಥ ಬದಲಾವಣೆಯ ಬಿರುಗಾಳಿಯ ಸುಳಿಯನ್ನು ಅರ್ಥಮಾಡಿಕೊಳ್ಳಿ.

ಸದನದೊಳಗೆ ಪ್ರವೇಶಿಸುವುದೆಂದರೆ ದೇವಮಂದಿರಕ್ಕೆ ಪ್ರವೇಶಿಸಿದಂತೆ ಎನ್ನುವ ಕಲ್ಪನೆ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸದನದೊಳಗಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ಮೌಲ್ಯಗಳು ಇಳಿಮುಖವಾಗುತ್ತಿವೆ ಎನ್ನುವ ಸ್ವರವನ್ನು ಹಿರಿಯ ಪತ್ರಕರ್ತರು ಬಹಿರಂಗವಾಗಿ ಎತ್ತುತ್ತಿರುವುದು. ತಮ್ಮ ಅನೂಕೂಲಕ್ಕೆ ಮಾಧ್ಯಮಗಳನ್ನು ತೆಕ್ಕೆಯಲ್ಲಿಟ್ಟುಕೊಂಡು, ಮಾಧ್ಯಮ ಮಂದಿಯನ್ನು ಮಡಿಲಲ್ಲಿಟ್ಟುಕೊಂಡು ಮುದ್ದಾಡಿದವರು ಈಗ ಕೈಚೆಲ್ಲಿದರೆ ಹೇಗೆ? ಎನ್ನುವುದು ಇಲ್ಲಿ ಪ್ರಶ್ನೆಯಲ್ಲ.

ಒಬ್ಬ ಶಾಸಕನ ಸರಿಸಮಾನಕ್ಕೆ ಅಧಿಕಾರಿಗಳು ನಿಂತು ಮಾತನಾಡುವುದೇ ತಪ್ಪು ಎನ್ನುವ ದಿನಗಳಿದ್ದವು. ಮಂತ್ರಿಯ ಜೊತೆಯಲ್ಲಿ ವೇದಿಕೆ ಹತ್ತುವುದೇ ಸಲ್ಲದು ಎನ್ನುವ ನಿರ್ಬಂಧದ ದಿನಗಳಿದ್ದವು. ಈಗ ಅಧಿಕಾರಿಗಳೇ ರಾಜಕಾರಣಿಗಳ ಹೆಗಲಮೇಲೆ ಕೈ ಹಾಕಿಕೊಂಡು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾದರೆ ಕಳೆದುಹೋಗಿರುವ ಮೌಲ್ಯಗಳನ್ನು ಎಲ್ಲಿ ಹುಡುಕುವಿರಿ?. ಮಡೆಸ್ನಾನ, ಪಂಕ್ತಿಭೇದ ಭೋಜನ, ತಲೆಮೇಲೆ ಮಲಸುರಿದುಕೊಂಡು ಪ್ರತಿಭಟಿಸುವಂಥ ಘಟನೆಗಳು ನಿಮ್ಮ ಸುತ್ತಲೂ ನಡೆಯುತ್ತಿವೆಯಲ್ಲ ಅವುಗಳ ವಿರುದ್ಧ ತಾರ್ಕಿಕವಾದ ಹೋರಾಟ ಮಾಡಲು ಸಾಧ್ಯವಾಯಿತೇ? ಖಾಸಗೀಕರಣಕ್ಕೆ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಎಂಥ ಅನಾಹುತವಾಗುತ್ತಿದೆ ಎನ್ನುವ ಅರಿವಾದರೂ ಬೇಡವೇ?.

ದೇಹಕ್ಕೆ ಮುಪ್ಪು ಬಂದರೆ ಒಪ್ಪಿಕೊಳ್ಳಬಹುದು, ಬುದ್ಧಿಗೆ ಮುಪ್ಪು ಬರಬಾರದು. ಮಾಧ್ಯಮಗಳನ್ನು ಸದನದಿಂದ ದೂರವಿಡುವ ಪ್ರಯತ್ನವೆಂದರೆ ಬುದ್ಧಿಗೆ ಮುಪ್ಪು ಬಂದಿದೆ ಎಂದೇ ಅರ್ಥ. ಇಂಥ ತಪ್ಪು ಕೆಲಸವನ್ನು ಮಾಡಿದ ಅಪಕೀರ್ತಿಗೆ ಕರ್ನಾಟಕ ಒಳಗಾಗುವುದು ನಿಜಕ್ಕೂ ಆಘಾತಕಾರಿ. ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕೆಡಿಪಿ ಸಭೆಗಳನ್ನು ನೋಡಿದರೆ ಸಾಕು ನಿದ್ದೆ ಗೊರಕೆ, ಆಕಳಿಕೆ, ಮೊಬೈಲ್‌ನಲ್ಲಿ ಸರಸ-ಸಲ್ಲಾಪದ ಲೋಕವೇ ಅನಾವರಣಗೊಳ್ಳುತ್ತದೆ. ಅಲ್ಲೂ ಮಾಧ್ಯಮಗಳಿವೆ, ಆದರೆ ಎಚ್ಚೆತ್ತುಕೊಂಡಿಲ್ಲ, ಈಗ ವಿಧಾನ ಸಭೆಯ ಕಲಾಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಚುರುಕಾಗುವ ಕಾಲ ಸನ್ನೀಹಿತವಾಗಿದೆ.

ವಿಧಾನ ಸಭೆಯ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ ಸಫಲವಾದರೆ ಅದು ಕೆಳಹಂತಕ್ಕೂ ಅನ್ವಯವಾಗುವ ಅಪಾಯವಿದೆ. ಸದನದ ಕಲಾಪ ಗೌಪ್ಯ ಅಲ್ಲ, ಅದನ್ನು ಸಾರ್ವಜನಿಕರು ಅರ್ಥಾತ್ ಪ್ರಜೆಗಳು ತಿಳಿದುಕೊಳ್ಳುವ ಮೂಲಭೂತ ಹಕ್ಕೂ ಕೂಡಾ. ಅಂತೆಯೇ ಮಾಧ್ಯಮಗಳು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದರಲ್ಲಿ ತಪ್ಪಿಲ್ಲ. ರಾಜಕಾರಣಿಗಳು ಅದರಲ್ಲೂ ಮಾಧ್ಯಮಗಳ ಬೆಳಕಲ್ಲೇ ಹೊಳಪುಕಂಡುಕೊಂಡವರು ಬುದ್ಧಿಗೆ ಕವಿದಿರುವ ಮುಸುಕನ್ನು ಸರಿಸಿಕೊಳ್ಳುವುದು ಒಳ್ಳೆಯದು. ಅವಿವೇಕತನ ಎಂದೂ ಬುದ್ಧಿವಂತಿಕೆಯೆನಿಸಿಕೊಳ್ಳುವುದಿಲ್ಲ, ಇಲ್ಲೂ ಹಾಗೆಯೇ.

ಮಂಗಳೂರಲ್ಲಿ ಪುಣ್ಯವನಿತೆಯರ ಚಂಡಿಕಾಯಾಗ

– ಚಿದಂಬರ ಬೈಕಂಪಾಡಿ

ಸಾಮಾಜಿಕ ಅನಿಷ್ಠಗಳನ್ನು ಬುಡಸಹಿತ ಕಿತ್ತೊಗೆಯಬೇಕು ಎನ್ನುವ ಭಾಷಣ, ಘೋಷಣೆಗಳನ್ನು ಕೇಳುತ್ತೇವೆ, ಆದರೆ ಇಂಥವುಗಳ ಬುಡಕ್ಕೆ ಕೈ ಹಾಕಲು ಹೆದರುತ್ತೇವೆ. ಯಾಕೆಂದರೆ ಮತ್ತೆ ನಮ್ಮನ್ನು ಕಾಡುವುದು ಸಮಾಜ. ನಾವು ಇಂಥ ಸುಧಾರಣೆಗಳ ಜಾಡುಹಿಡಿದು ಹೋದರೆ ಸಮಾಜ ನಮ್ಮನ್ನು ಒಪ್ಪುತ್ತದೆಯೇ? ನಮ್ಮ ಹೆಂಡತಿ-ಮಕ್ಕಳು, ಬಂಧು-ಬಳಗ ಎಲ್ಲವೂ ನೆನಪಾಗುತ್ತದೆ. ಆದರೆ ಆಚರಣೆಗಳ ಹೆಸರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ನಮ್ಮನ್ನು ಕಾಡುವುದಿಲ್ಲ.

ಒಂದು ಕಾಲದಲ್ಲಿ ಅಸ್ತ್ವಿತ್ವಕ್ಕೆ ತಂದ ಆಚರಣೆಗಳನ್ನು ಕಾಲಾನುಕ್ರಮದಲ್ಲಿ ತಿದ್ದುಪಡಿಗಳೊಂದಿಗೆ ಆಚರಿಸಲು ನಮ್ಮ ಮನಸ್ಸುಗಳನ್ನು ಹದಗೊಳಿಸಿಕೊಳ್ಳುತ್ತೇವೆ. ಯಾಕೆಂದರೆ ಅವುಗಳಿಂದ ನಮಗೆ ಎಲ್ಲೋ ಒಂದುಕಡೆ ಸಮಸ್ಯೆ ಆಗುತ್ತಿದೆ ಎನ್ನುವ ಒಳಅರಿನಿನ ಕಾರಣಕ್ಕೆ. ಆದರೆ ನಾವು ಶತಮಾನಗಳ ಹಿಂದಿನ ಸಂದರ್ಭದಲ್ಲಿ ಹಿರಿಯರು ಮಾಡಿದಂಥ ಕೆಲವು ಸಂಪ್ರದಾಯ ಅಥವಾ ಆಚರಣೆಗಳನ್ನು ಪರಿಷ್ಕರಿಸದೆ ಅವುಗಳನ್ನು ಹಾಗೆಯೇ ಅಥವಾ ಹಿಂದಿಗಿಂತಲೂ ಹೆಚ್ಚು ಬದ್ಧತೆಯಿಂದ ಕಾಪಾಡಿಕೊಂಡು ಬರುತ್ತೇವೆ. ಯಾಕೆಂದರೆ ಅವುಗಳ ಬಗ್ಗೆ ಈಗಲೂ ಇರುವ ಬಲವಾದ ನಂಬಿಕೆಯಿಂದ.

ಪತಿಕಳೆದುಕೊಂಡ ವನಿತೆಯನ್ನು ನಾವು ಮನೆಯಲ್ಲಿ ಹೇಗೆ ನಡೆಸಿಕೊಳ್ಳುತ್ತೇವೆ? ಸಮಾಜ ಅಂಥವರ ಬಗೆ ಹೇಗೆ ಪ್ರತಿಕ್ರಿಯೆಸುತ್ತದೆ ಎನ್ನುವುದನ್ನು ಚೆನ್ನಾಗಿ ಬಲ್ಲೆವು. ಆದರೆ ಪತಿಕೊಂಡು ಆಕೆ ಅನುಭವಿಸುವ ಯಾತನೆಗಿಂತಲೂ ದಿನವೂ ಆಕೆ ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ಅನುಭವಿಸುವ ಯಾತನೆ ಅಮಾನವೀಯವಾದುದು. ಯಾಕೆಂದರೆ ಆಕೆ ಹೂ ಮುಡಿಯುವಂತಿಲ್ಲ, ಬಳೆ ತೊಡುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ ಇತ್ಯಾದಿ.. ಇತ್ಯಾದಿ ಹಲವು ಸಲ್ಲದುಗಳದ್ದೇ ಕಾರುಬಾರು.

ಅತ್ಯಂತ ಸೂಕ್ಷ್ಮವಾಗಿ ಸಮಾಜ ಇಂಥ ವನಿತೆಯರನ್ನು, ಅವರ ಯಾತನೆ, ಕಣ್ಣೀರನ್ನು ಗಮನಿಸಿದರೆ ಏನಾದೀತು?. ಆಕಾಶವೇ ಧರೆಗಿಳಿದು ಅನಾಹುತವಾದೀತೇ?, ಅಥವಾ ಬರಗಾಲ, ಅನಾವೃಷ್ಟಿ-ಅತಿವೃಷ್ಟಿ, ಪ್ರಳಯ ಉಂಟಾದೀತೇ?.

ಇರಬಹುದೇನೋ ಗೊತ್ತಿಲ್ಲ. ಆದರೆ ಮಂಗಳೂರಲ್ಲಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಶತಮಾನಗಳ ಹಿಂದ ಬ್ರಹ್ಮ ಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಗೋಕರ್ಣನಾಥನ ಸನ್ನಿಧಿಯಲ್ಲಿ ಪತಿಕಳೆದುಕೊಂಡ ವನಿತೆಯರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ನವರಾತ್ರಿಯ ಸಂದರ್ಭದಲ್ಲಿ ಪತಿಕಳೆದುಕೊಂಡ ವನಿತೆಯರು ಬಳೆ ತೊಟ್ಟು, ಹೂಮುಡಿದು, ಕುಂಕುಮ ಧರಿಸಿ ಗೋಕರ್ಣನಾಥನ ರಥ ಎಳೆದಿದ್ದರು.

ಈ ಕಾರ್ಯಕ್ರಮದ ಕುರಿತು ಅನೇಕ ಬುದ್ಧಿಜೀವಿಗಳು, ಸಾಂಸ್ಕೃತಿಕ ಜಗತ್ತಿನ ಪ್ರಮುಖರು, ಅಕ್ಷರ ಸಂಸ್ಕೃತಿಯನ್ನು ಆವಾಹಿಸಿಕೊಂಡವರು, ಸಾಮಾನ್ಯರು ಹೀಗೆ ವಿಭಿನ್ನ ನೆಲೆಯವರು ತಮ್ಮ ತಮ್ಮ ವಾದಸರಣಿಯನ್ನು ಮಂಡಿಸಿ ಜಗತ್ತಿನ ಕಣ್ಣು ತೆರೆಸಿದರು. ಅದರ ಮುಂದುವರಿದ ಭಾಗಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನಾಂದಿಯಾಗಿದೆ.

ಸಾಮಾನ್ಯವಾಗಿ ಯಾಗ, ಪೂಜೆ ನಡೆಯುವಾಗ ಮನೆಯ ಯಜಮಾನ, ಮುತ್ತೈದೆಯರು ಮಾತ್ರ ಭಾಗವಹಿಸಬೇಕು. ಪತಿಕಳೆದುಕೊಂಡವರು ಯಾಗಕ್ಕೆ ಕುಳಿತುಕೊಳ್ಳುವಂತಿಲ್ಲ. ಬಾಗಿಲ ಮರೆಯಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು, ಆದರೆ ಇದು ಯಾಗದಲ್ಲಿ ಭಾಗವಹಿಸಿದವರ ಕಣ್ಣಿಗೆ ಬೀಳಬಾರದು ಇತ್ಯಾದಿ…ಇತ್ಯಾದಿ ಕಟ್ಟುಪಾಡುಗಳು.

ಆದರೆ ಕುದ್ರೋಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಚಂಡಿಕಾ ಯಾಗ ಆಯೋಜಿಸಲಾಗಿತ್ತು. ಪತಿಕಳೆದುಕೊಂಡವರಿಗಷ್ಟೇ ಯಾಗಕ್ಕೆ ಕುಳಿತುಕೊಳ್ಳುವ ಅವಕಾಶವಿತ್ತು. ಮುಡಿಯಲು ಹೂವು, ಧರಿಸಲು ಸೀರೆ, ಹಣೆಗಿಡಲು ಕುಂಕುಮವನ್ನು ಕ್ಷೇತ್ರದ ವತಿಯಿಂದ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರು ಕೊಡಿಸಿದರು. ಪತಿ ಕಳೆದುಕೊಂಡ ಐನೂರಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು (ಲಾರಿ, ಕಾರು, ಜೀಪಿನಲ್ಲಿ ಕರೆದುತಂದವರಲ್ಲ ಖಂಡಿತಕ್ಕೂ)ಬಂದಿದ್ದರು.

ಯಾಗದ ಪೂಣರ್ಾಹುತಿ ಮುಗಿದಮೇಲೆ ಸುಮಂಗಲೆಯರಾದ ಮಾಲತಿ ಜನಾರ್ಧನ ಪೂಜಾರಿ, ಕಲ್ಪನಾ ಸಾಯಿರಾಂ,ಲಲಿತಾ ರಾಮಯ್ಯ, ಶಶಿಕಲಾ ಹರಿಕೃಷ್ಣ ಬಂಟ್ವಾಳ್ ಮತ್ತು ಪುಷ್ಪಲತಾ ಜಿ.ಸುವರ್ಣ ಅವರು ನೆರೆದ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಹೀಗೆ-`ನಾವು ನಮ್ಮ ಪತಿಯ ನಿಧನದ ನಂತರವೂ ಕರಿಮಣಿ ಸರ ಧರಿಸುತ್ತೇವೆ, ಹೂಮುಡಿಯುತ್ತೇವೆ, ಬಳೆತೊಡುತ್ತೇವೆ’.ಈ ಕ್ಷಣ ಪತಿಕಳೆದುಕೊಂಡ ವನಿತೆಯರ ಕಣ್ಣಾಲಿಗಳು ತುಂಬಿಬಂದದ್ದಂತೂ ನಿಜ. ಆನಂತರ ಈ ವನಿತೆಯರು ಕೈಮುಗಿದು ಬೆಳ್ಳಿ ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಸಂತಸಪಟ್ಟರು.

ಇದಿಷ್ಟು ಕುದ್ರೋಳಿ ಕ್ಷೇತ್ರದಲ್ಲಿ ಕಂಡುಬಂದ ಸಂಗತಿಗಳು. ಹೌದು ಜನಾರ್ಧನ ಪೂಜಾರಿಯವರು ಸಾಲಮೇಳದ ಮೂಲಕ ಲಕ್ಷಾಂತರ ಮಂದಿಗೆ ಸಾಲಕೊಡಿಸಿ ಸಾಲಮೇಳದ ಪೂಜಾರಿಯೆನಿಸಿಕೊಂಡರು. ಅವರ ನಂತರ ಯಾರೂ ಹೀಗೆ ಸಾಲ ಮೇಳ ಮಾಡಲಿಲ್ಲ. ಹಾಗೆಂದು ಈಗ ಕುದ್ರೋಳಿ ಕ್ಷೇತ್ರದಲ್ಲಿ ಮಾತ್ರವಲ್ಲಾ ನಾಡಿನ ಯಾವುದೇ ಮೂಲೆಯಲ್ಲಿ ಮಠಮಂದಿರಗಳು ಮಾಡಬೇಕಾದ ಕೆಲಸವನ್ನು ಪೂಜಾರಿ ಮಾಡಿಸುತ್ತಿದ್ದಾರೆ, ಅವರೇ ಹೇಳಿದ ಮಾತು ಸಂತೃಪ್ತಿ ಪಡುತ್ತಿದ್ದೇನೆ. ಇದು ಇತರ ಕಡೆಗಳಿಗೂ ವಿಸ್ತರಣೆಯಾಗಬೇಕು.

ಹಾಗಾದರೆ ಇಂಥ ಸಾಧ್ಯತೆಗಳನ್ನು ಸಮಾಜ ಒಪ್ಪುತ್ತದೆಯಲ್ಲವೇ?. ಸಾಮಾನ್ಯವಾಗಿ ಮೈಲಿಗೆಯಾದರೆ ದೇವರು ಮುನಿಸಿಕೊಳ್ಳುತ್ತಾರೆ, ಮುನಿಯುತ್ತಾರೆ ಎನ್ನುವ ಬಲವಾದ ನಂಬಿಕೆಯಿರುವ ಭೂಮಿಯಲ್ಲಿದ್ದೇವೆ. ಪತಿಕಳೆದುಕೊಂಡಾಕೆ ಅಮಂಗಳೆ ಎನ್ನುವುದಾದರೆ ಅದು ಮೈಲಿಗೆ ಎಂದೇ ಅರ್ಥವಲ್ಲವೇ?, ಹಾಗಾದರೆ ಬೆಳ್ಳಿಯ ರಥ ದೇವಸ್ಥಾನದ ಸುತ್ತಲೂ ಸರಾಗವಾಗಿ ಚಲಿಸಿದ್ದನ್ನು ನೋಡಿದರೆ ಗೋಕರ್ಣನಾಥನೂ ಇಂಥ ಸುಧಾರಣೆಯನ್ನು ಒಪ್ಪಿದ್ದಾನೆ ಅಂದುಕೊಳ್ಳಬಹುದೇ? ಯಾಕೆಂದರೆ ಈಗಲೂ ಇರುವ ನಂಬಿಕೆ ರಥದ ಹಗ್ಗವನ್ನು ಇಂಥವರೇ ಮೊದಲು ಮುಟ್ಟಬೇಕು, ಅಂಥವರೇ ಮೊದಲು ಪ್ರಸಾದ ಸ್ವೀಕರಿಸಬೇಕು, ಇಂಥ ಸಮುದಾಯದವರು ರಥದ ಹಗ್ಗ ಮುಟ್ಟಿದರೆ ಮಾತ್ರ ರಥ ಮುಂದಕ್ಕೆ ಚಲಿಸುತ್ತದೆ ಇತ್ಯಾದಿ…ಇತ್ಯಾದಿ ನಂಬಿಕೆಗಳಿಯಲ್ಲಾ?

ಮನಸ್ಸು ಮೈಲಿಗೆಯಾಗಬಾರದು ಬಹುಷ: ಕುದ್ರೋಳಿ ಗೋಕರ್ಣನಾಥನಿಗೆ. ಆದ್ದರಿಂದಲೇ ಸುಸೂತ್ರವಾಗಿ ಚಂಡಿಕಾ ಯಾಗ ನಡೆದಿದೆ, ಅದೂ ಪತಿಕಳೆದುಕೊಂಡ
ವನಿತೆಯರಿಂದ. ಬೆಳ್ಳಿ ರಥ ಯಾವ ಆತಂಕವೂ ಇಲ್ಲದೆ ಚಲಿಸಿದೆ. ಅಮಂಗಳೆ ಪತಿಕಳೆದುಕೊಂಡವಳು ಅಂತಾದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ ?.

ಏನೇ ಇರಲಿ ಪತಿಕಳೆದುಕೊಂಡ ವನಿತೆಯರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆಯ ಅಗತ್ಯವಿದೆ ಅನ್ನಿಸುತ್ತಿದೆ. ಪತಿಕಳೆದುಕೊಂಡ ವನಿತೆಯರು ಅನುಭವಿಸುವ ಯಾತನೆಯ ಮೇಲೆ ಬೆಳಕು ಹರಿಯಬೇಕಾಗಿದೆ. ಸಿನಿಮಾ, ಟಿವಿ ಸೀರಿಯಲ್ಗಳು ತಮ್ಮ ಹೊಸ ನೆಲೆ ಕಂಡುಕೊಳ್ಳಲು ಅನುವಾಗುತ್ತಿದೆ ಅನ್ನಿಸುತ್ತಿದೆ.

ಕೆಂಪು ದೀಪದ ಗೂಟದ ಕಾರಿನ ನೆಪದಲ್ಲಿ..

– ಚಿದಂಬರ ಬೈಕಂಪಾಡಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕೆಲವರಿಗೆ ಅದೇನೋ ಒಂಥಾರಾ… ಅನ್ನಿಸುತ್ತಿರಬೇಕಲ್ಲವೇ?. ನಗೆಯ ಮೂಲಕವೇ ಎಲ್ಲರನ್ನೂ ಗೆಲ್ಲುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುವ ಸದಾನಂದ ಗೌಡರು ಇಡುತ್ತಿರುವ ಒಂದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪಕ್ಷ ರಾಜಕಾರಣ ಅದೇನೇ ಇದ್ದರೂ ಮುಖ್ಯಮಂತ್ರಿಯಾಗಿ ಅವರು ಕರ್ನಾಟಕವನ್ನು ಹೇಗೆ ಮುನ್ನಡೆಸುತ್ತಾರೆನ್ನುವುದು ಬಹುಮುಖ್ಯವಾಗುತ್ತದೆ.

ನೆನೆಪಿರಬಹುದು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಿನ ಪಂಚಾಯತ್‌ರಾಜ್ ವ್ಯವಸ್ಥೆ ಅವರ ನಿಧನದ ನಂತರ ಹೇಗಾಗಿಹೋಯಿತು ಎನ್ನುವುದು.
ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸುಕಂಡ ದಿವಂಗತ ರಾಮಕೃಷ್ಣ ಹೆಗಡೆಯವರಿಗೆ ಸಾಥ್ ನೀಡಿದ ದಿವಂಗತ ಅಬ್ದುಲ್ ನಜೀರ್ ಸಾಬ್ ಯಾನೇ ನೀರು ಸಾಬ್ ನಂತರ ಪಂಚಾಯತ್‌ರಾಜ್ ವ್ಯವಸ್ಥೆ ಮೊನಚುಕಳೆದುಕೊಂಡು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾಗಿದೆ.

ಯಾಕಿಷ್ಟು ಪೀಠಿಕೆಯೆಂದರೆ ಮೊನ್ನೆ ತಾನೇ ಬೆಂಗಳೂರಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಸಭೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರಗಿದಾಗ ಗಮನ ಸೆಳೆದ ಒಂದು ಬೇಡಿಕೆ. ‘ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಕಾರಿಗೆ ಕೆಂಪು ದೀಪ ಅಳವಡಿಸಲು ಅನುಮತಿ ಕೊಡಬೇಕು’ ಎನ್ನುವುದು. ಸಭೆಯ ಕಲಾಪವನ್ನು
ಟಿವಿಯಲ್ಲಿ ಗಮನಿಸುತ್ತಿದ್ದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಾತನಾಡುತ್ತಾ (ನಗು ನಗುತ್ತಲೇ) ‘ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೆಂಪುದೀಪವಿರುವ ಗೂಟದ ಕಾರು ಬೇಕೆನ್ನುತ್ತಿದ್ದಾರೆ. ನಿಜ, ಗೂಟದ ಕಾರಲ್ಲಿ ತಿರುಗಾಡಬೇಕೆನ್ನುವ ಆಸೆ ಅವರಿಗಿದೆ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಕಾರುಗಳಿಗೆ ಕೆಂಪು
ದೀಪ ಅಳವಡಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು’. ಮುಂದೆ ಟಿವಿ ವಾರ್ತಾ ವಾಚಕಿಯ ಮುಖ-ಧ್ವನಿ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ೧೯೮೭ರಲ್ಲಿ ಜ್ಯಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಕೆಂಪು ದೀಪ ಅಳವಡಿಸಿದ, ಜಿಲ್ಲಾಪಂಚಾಯತ್ ಲೋಗೋ ಇರುವ ಬಾವುಟ ಸಿಕ್ಕಿಸಿಕೊಂಡ ಗೂಟದ ಕಾರಿತ್ತು. ರಾಜ್ಯ ಸಚಿವರಿಗಿರುವ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದರು. ಹಳ್ಳಿಯ ಕಿರಿದಾದ ರಸ್ತೆಗಳಲ್ಲಿ ಕೆಂಪುದೀಪದ ಗೂಟದ ಕಾರು ಕಂಡು ಮಕ್ಕಳು ರೋಮಾಂಚನಗೊಳ್ಳುತ್ತಿದ್ದರು. ಕಾರು ನಿಂತ ಕೂಡಲೇ ಕಾರಿನ ಬಾಗಿಲು ತೆರೆಯಲು ಹಳ್ಳಿಯ ಪುಢಾರಿಗಳು ಮುಗಿಬೀಳುತ್ತಿದ್ದರು. ಜಿಲ್ಲಾಪಂಚಾಯತ್ ಅಧ್ಯಕ್ಷರು ಕಾರಿನಿಂದ ಇಳಿಯುತ್ತಿದ್ದಂತೆಯೇ ಜಿಲ್ಲಾಮಂತ್ರಿಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿತ್ತು.

ಜಿಲ್ಲಾಪಂಚಾಯತ್ ಅಧ್ಯಕ್ಷರೆಂದರೆ ಜಿಲ್ಲೆಯ ಪ್ರಥಮಪ್ರಜೆ. ಪ್ರೊಟೋಕಾಲ್ ಪ್ರಕಾರ ಅವರಿಗೆ ಗಣ್ಯರನ್ನು ಬರಮಾಡಿಕೊಳ್ಳಲು ಅವಕಾಶವಿತ್ತು. ಹಿರಿಯ ಐಎಎಸ್  ಅಧಿಕಾರಿ ಮುಖ್ಯಕಾರ್ಯದರ್ಶಿಯಾಗಿದ್ದರು. ಜಿಲ್ಲಾಪಂಚಾಯತ್ ವ್ಯಾಪ್ತಿಗೆ ಬರುವ ಅಧಿಕಾರಿಗಳು, ಸಿಬ್ಬಂಧಿಗಳಿಗೆ ರಜೆ ಮಂಜೂರುಮಾಡುವ ಅಧಿಕಾರ ಜಿಲ್ಲಾಪಂಚಾಯತ್ ಅಧ್ಯಕ್ಷರಿಗಿತ್ತು. ಶಿಕ್ಷಕರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಡಿಎಲ್‌ಆರ್‌ಸಿ ಸಮಿತಿ ಅಸ್ತಿತ್ವದಲ್ಲಿತ್ತು. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ರಸ್ತೆ, ಚರಂಡಿ, ಡಾಮರೀಕರಣ, ಕಿಂಡಿ ಅಣೆಕಟ್ಟು, ಕೊಳವೇ ಬಾವಿ ಕೊರೆಯುವುದು, ನೀರು ಸರಬರಾಜು ಮಾಡುವುದು ಇತ್ಯಾದಿ..ಇತ್ಯಾದಿಗಳೆಲ್ಲವೂ ಜಿಲ್ಲಾಪಂಚಾಯತ್ ಸದಸ್ಯರ ಸಲಹೆ ಆಧರಿಸಿ ಅನುಷ್ಠಾನಕ್ಕೆ ತರುವ ಅವಕಾಶವಿತ್ತು, ಎಲ್ಲದಕ್ಕೂ ಜಿಲ್ಲಾಪಂಚಾಯತ್‌ಗೇ ಪರಮಾಧಿಕಾರ.

ಜಿಲ್ಲಾಪಂಚಾಯತ್ ಸಭೆ ತೆಗೆದುಕೊಂಡ ನಿರ್ಣಯವನ್ನು ಜ್ಯಾರಿಗೆ ತರಲು ಮುಖ್ಯಕಾರ್ಯದರ್ಶಿ (ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಬದ್ಧರಿದ್ದರು. ಸರ್ಕಾರದ ಗಮನಕ್ಕೆ ತರಬಹುದು. ಸರ್ಕಾರದ ಯಾವುದೇ ಸುತ್ತೋಲೆಗಳು, ಆದೇಶಗಳು ಜಿಲ್ಲಾಪಂಚಾಯತ್ ಮೇಲೆ ಸವಾರಿ ಮಾಡುವಂತಿರಲಿಲ್ಲ. ಶಾಸಕರು ಜಿಲ್ಲಾಪಂಚಾಯತ್ ಸಭೆಗೆ ಕಾಯಂ ಆಹ್ವಾನಿತರು. ಶಾಸಕರು ಸಲಹೆ ಕೊಡಬಹುದು ಹೊರತು ಜಿಲ್ಲಾಪಂಚಾಯತ್ ಸದಸ್ಯರ ಭಾವನೆಗಳಿಗೆ ವಿರೋಧ ಮಾಡುವಂತಿಲ್ಲ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ.

ಇದು ಗಾಂಧಿ ಕಂಡಿದ್ದ ರಾಮರಾಜ್ಯ, ಜನರ ಕೈಗೇ ಅಧಿಕಾರ ಎನ್ನುವ ನಿಜವಾದ ಅರ್ಥ. ಆರುತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಮ ಸಭೆ ನಡೆಯಬೇಕು, ಆ ಸಭೆಯಲ್ಲಿಯೇ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಈ ಕಾರಣಕ್ಕಾಗಿಯೇ ಅಂದು ಜಿಲ್ಲಾಪಂಚಾಯತ್ ಸದಸ್ಯರ ಮನೆ ಮುಂದೆ ಬೆಳಗಾಗುವ ಮುನ್ನವೇ ಜನಜಂಗುಳಿ ಇರುತ್ತಿತ್ತು. ಶಾಸಕರು ಹಳ್ಳಿಯ ಜನರಿಗೆ ಅನಿವಾರ್ಯವಾಗಿರಲಿಲ್ಲ. ಅವರಿಗೆ ಜಿಲ್ಲಾಪಂಚಾಯತ್ ಸದಸ್ಯನೇ ಶಾಸಕ, ಜಿಲ್ಲಾಪಂಚಾಯತ್ ಅಧ್ಯಕ್ಷರೇ ಜಿಲ್ಲೆಯ ಮುಖ್ಯಮಂತ್ರಿ.

ಓರ್ವ ಸಾಮಾನ್ಯ ವರದಿಗಾರನಾಗಿ ನಾನು ಜಿಲ್ಲಾಪಂಚಾಯತ್ ಕಾರ್ಯಕಲಾಪಗಳನ್ನು ಅಂದು ಹತ್ತಿರದಿಂದ ಕಂಡು ಅನುಭವಿಸಿದ ಸಂಗತಿಗಳು. ಜಿಲ್ಲಾಪಂಚಾಯತ್ ಸಭೆಗೆ ಬರುವವರು ಅಧ್ಯಕ್ಷರಿಗೆ ಕೈಜೋಡಿಸಿ ವಂದಿಸಿ ಸಭಾಂಗಣ ಪ್ರವೇಶಿಸಬೇಕು, ಹೋಗುವಾಗಲೂ ಹಾಗೆಯೇ ಕೈಮುಗಿದು ನಿರ್ಗಮಿಸಬೇಕು. ವಿಧಾನ ಸಭಾ ಕಲಾಪಗಳ ಪಡಿಯಚ್ಚು ಅಂದಿನ ಜಿಲ್ಲಾಪಂಚಾಯತ್ ಸಭೆಗಳು.

ಅಂದಿನ ದಿನಗಳಲ್ಲಿ ಜಿಲ್ಲಾಪಂಚಾಯತ್ ಸದಸ್ಯರ ವಾದವೈಖರಿ, ವಿಷಯ ಮಂಡನೆ ವಿಧಾಸಭೆಯೊಳಗಿನ ಕಲಾಪದಂತೆಯೇ (ಹಿಂದಿನ ವಿಧಾನ ಸಭೆಯ ಕಲಾಪ- ಇಂದಿನದ್ದಲ್ಲ) ಇರುತ್ತಿತ್ತು. ಪಕ್ಷ ರಾಜಕಾರಣಕ್ಕೆ ಅವಕಾಶವಿರಲಿಲ್ಲ, ಅಭಿವೃದ್ಧಿ ಹೇಗೆ ?, ಎಲ್ಲಿ ಆಗಬೇಕು ?, ಯಾವ ರೀತಿ ಮಾಡಬೇಕು ?, ಅದರಿಂದ ಹಳ್ಳಿಯ
ಜನರಿಗೆ ಆಗುವ ಪ್ರಯೋಜನ ಎಷ್ಟು ?- ಇವುಗಳ ಸುತ್ತಲೇ ಚರ್ಚೆ ಇರುತ್ತಿತ್ತು.

ಈಗ ಹಿಂದಿನ ಜಿಲ್ಲಾಪಂಚಾಯತ್ ಒಂದು ನೆನಪು ಮಾತ್ರ. ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಅವರ ಕಲ್ಪನೆಯ ಜಿಲ್ಲಾಪಂಚಾಯತ್ ಕಳೆದುಹೋಗಿದೆ. ಸರ್ಕಾರದ ಕಪಿಮುಷ್ಠಿಯಲ್ಲಿ ಜಿಲ್ಲಾಪಂಚಾಯತ್ ನಲುಗುತ್ತಿದೆ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಸರ್ಕಾರದ ಸುತ್ತೋಲೆ, ಆದೇಶಗಳೇ ಮುಖ್ಯ ಹೊರತು ಸದಸ್ಯರ ಭಾವನೆಗೆ ಈಗ ಕವಡೆ ಕಿಮ್ಮತ್ತು ಇಲ್ಲ.

ಆದ್ದರಿಂದ ಈಗ ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೇಳುತ್ತಿರುವ ಕೆಂಪು ದೀಪದ ಗೂಟದ ಕಾರು ಕೊಡುವುದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿ ಕಷ್ಟವಾಗುವುದಿಲ್ಲ. ಆದರೆ ಇಂಥ ಬೇಡಿಕೆಯಿಟ್ಟು, ಅದು ಈಡೇರಿದರೆ ಸಂತೃಪ್ತರಾಗಿ ಬಿಡುವ  ಅಧ್ಯಕ್ಷರುಗಳಿಗೆ ಒಂದೇ ಒಂದು ಪ್ರಶ್ನೆ ನೀವು ಕೆಂಪುದೀಪದ ಗೂಟದ ಕಾರಿನಲ್ಲಿ ಸುತ್ತಾಡಿದರೆ ಹಳ್ಳಿ ಉದ್ಧಾರವಾಗುವುದೇ?

ನಿಮಗೆ ಸ್ವತಂತ್ರ ಅಧಿಕಾರಬೇಡವೇ ? ಎಲ್ಲಿ ರಸ್ತೆಯಾಗಬೇಕು, ಎಲ್ಲಿ ಚರಂಡಿಯಾಗಬೇಕೆಂದು ನಿರ್ಧರಿಸುವ ಅಧಿಕಾರ ನಿಮಗಿದೆಯೇ? ಜಿಲ್ಲಾಪಂಚಾಯತ್ ಸಭೆಯಲ್ಲಿ ನೀವು ಮಾಡಿದ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೈತೊಳೆದುಕೊಳ್ಳುತ್ತಾರೆ, ಸರ್ಕಾರದ ಸುತ್ತೋಲೆ, ಆದೇಶಗಳನ್ನು ಭಗವದ್ಗೀತೆಯಂತೆ ಕಾಣುತ್ತಾರಲ್ಲಾ ನಿಮ್ಮ ಧ್ವನಿಗೇನು ಬೆಲೆ ಇದೆ ?

ರಾಜ್ಯ ಸರ್ಕಾರದ ಅನುದಾನವನ್ನು ಸದಸ್ಯರಾದವರು ತಮ್ಮ ಕ್ಷೇತ್ರಗಳಿಗೆ ನೇರವಾಗಿ ಹಂಚಿಕೆ ಮಾಡಿಸಿಕೊಳ್ಳಲು ಸಾಧ್ಯವೇ ? ಅಧ್ಯಕ್ಷರೇ ನಿಮ್ಮ ಜಿಲ್ಲಾಪಂಚಾಯತ್‌ನಲ್ಲಿ ಸಾಮಾನ್ಯ ಸಿಬ್ಬಂದಿಯ ಮೇಲೆ ಕ್ರಮ ಜರಗಿಸುವ ಅಧಿಕಾರವಿದೆಯೇ ನಿಮಗೆ ?
ಮುಖ್ಯಮಂತ್ರಿ ಸದಾನಂದ ಗೌಡರು ನಗುನಗುತ್ತಲೇ ಗೂಟದ ಕಾರು ಒದಗಿಸುವ ಸುಳಿವು ಕೊಟ್ಟರು, ಅಧ್ಯಕ್ಷರು ಖುಷಿಯಾದರು, ನನಗೂ ಖುಷಿ. ಆದರೆ ಕಳೆದುಹೋದ ಜಿಲ್ಲಾಪಂಚಾಯತ್ ವ್ಯವಸ್ಥೆಯ ಬಗ್ಗೆ ನೋವಿದೆ.

ಹೊಸದಿಕ್ಕಿನತ್ತ ನಾಡನ್ನು ಮುನ್ನಡೆಸುವ, ರಾಜ್ಯವನ್ನು ಕಟ್ಟಿಬೆಳೆಸುವ ಸಂಕಲ್ಪ ಮಾಡಿರುವ ಸದಾನಂದ ಗೌಡರಿಗೆ, ಕಳೆದುಹೋಗಿರುವ ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಹುಟ್ಟುಹಾಕಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹುಡುಕಿಕೊಡಲು ಸಾಧ್ಯವೇ ? ಹೆಗಡೆ, ನಜೀರ್ ಸಾಬ್ ಈಗಲೂ ಹಳ್ಳಿಯ ಜನರಿಗೆ ನೆನಪಾಗುತ್ತಾರೆ ಯಾಕೆಂದರೆ ಅವರು ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಮಂಡೆಕೋಲಿನಂಥ ಕುಗ್ರಾಮದಲ್ಲಿ ಜನಿಸಿ ವಿಧಾನ ಸೌಧದ ಸೂತ್ರಹಿಡಿದಿರುವ ಈ ಕಾಲಘಟ್ಟದಲ್ಲಿ ಹಳ್ಳಿಯ ಜನರ ಪರವಾಗಿ ಒಂದೇ ಒಂದು ಬೇಡಿಕೆ ಜನರ ಕೈಗೆ ನಿಜವಾದ ಅಧಿಕಾರ ಕೊಡಿ, ಸಾಧ್ಯವೇ ?

ಅರ್ಹತೆಯಿದ್ದ ನಾಯಕ – ಕೆ.ಎಚ್.ರಂಗನಾಥ್

-ಚಿದಂಬರ ಬೈಕಂಪಾಡಿ

ಯಾವ ಕಾಲಕ್ಕೂ ಮರೆಯಲಾಗದ ಸಜ್ಜನ ರಾಜಕಾರಣಿ ಕೆ.ಎಚ್.ರಂಗನಾಥ್ ಅನಿವಾರ್ಯವಾಗಿ ರಾಜಕೀಯ ರಂಗದಿಂದ ಮರೆಯಾಗಿದ್ದಾರೆ. ರಾಜಕೀಯ ವೇಗ ಹೆಚ್ಚಿಸಿಕೊಂಡು ಹೊಸರೀತಿಯ ರಾಜಕಾರಣ ಅದರಲ್ಲೂ ಯುವಪೀಳಿಗೆಯ ಆತುರದ ಮಹತ್ವಾಕಾಂಕ್ಷೇಯ ರಾಜಕೀಯದಿಂದ ಬೇಸರಗೊಂಡು ‘ನನಗೆ ಈ ರಾಜಕೀಯ ಒಗ್ಗುವುದಿಲ್ಲ’ ಅಂತ ತಾವೇ ನಿರ್ಧರಿಸಿಕೊಂಡು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಇತ್ತೀಚಿನ ಯಾವುದೇ ಬೆಳವಣಿಗೆಯ ಬಗೆಯೂ ಅವರು ಪ್ರತಿಕ್ರಿಯೆ ನೀಡದೆ ಇದ್ದುದೇ ಅವರ ನಿರ್ಲಿಪ್ತತೆಗೆ ಸಾಕ್ಷಿ.

ಕರ್ನಾಟಕದ ಮಟ್ಟಿಗೆ ದಲಿತ ನಾಯಕರಲ್ಲಿ ಗಟ್ಟಿ ಧ್ವನಿ ಕೆ.ಎಚ್.ರಂಗನಾಥ್ ಅವರದು. ಮುಚ್ಚುಮರೆಯಿಲ್ಲದ ಮುಕ್ತ ಮಾತುಗಳಿಗೆ ಹೆಸರಾಗಿದ್ದ ರಂಗನಾಥ್ ದಲಿತರು ತಪ್ಪು ಮಾಡಿದಾಗಲೂ ಸಹಿಸಿಕೊಂಡವರಲ್ಲ. ಈ ಕಾರಣಕ್ಕಾಗಿಯೇ ದಲಿತರ ಕೋಪಕ್ಕೂ ಗುರಿಯಾಗಿದ್ದರು ಎನ್ನುವುದು ವಿಪರ್ಯಾಸ. ಸಮಾಜವಾದಿ ಚಿಂತನೆ ಮೂಸೆಯಲ್ಲಿ ಬದುಕು ರೂಪಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬೆಳವಣಿಗೆ ಕಂಡುಕೊಂಡವರು. ಇಂದಿರಾ ಗಾಂಧಿ ಅವರಿಗೆ ನಿಷ್ಠರಾಗಿ ಸ್ವಚ್ಚರಾಜಕಾರಣ ಮಾಡಿದವರು.

ಸಾಮಾಜಿಕ ಸುಧಾರಣೆಯಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದ ರಾಜಕಾರಣದಲ್ಲಿ ಕರ್ನಾಟಕ ಮರೆಯಲಾಗದ ರಾಜಕಾರಣಿ ಡಿ.ದೇವರಾಜ ಅರಸು ಸಂಪುಟದಲ್ಲಿ ಮಂತ್ರಿಯಾಗುವ ಮೂಲಕ ಅಧಿಕಾರ ಹಗ್ಗ ಹಿಡಿದು ಮುನ್ನಡೆದ ಅಜಾತಶತ್ರು. ಬಿ.ರಾಚಯ್ಯ, ರಂಗನಾಥ್ ದಲಿತರ ಧ್ವನಿಯಾಗಿ ಅವರ ಏಳಿಗೆಯ ನಿಟ್ಟಿನಲ್ಲಿ ಗಟ್ಟಿಯಾದ ಬುನಾದಿ ಹಾಕಿಕೊಟಿದ್ದಾರೆ, ಆದರೆ ದಲಿತರ ನಿರೀಕ್ಷೆಯನ್ನು ಮೀರುವಷ್ಟು ಸಾಧ್ಯವಾಗಿರಲಿಕ್ಕಿಲ್ಲ, ಯಾಕೆಂದರೆ ಅವರೇ ಹಾಕಿಕೊಂಡಿದ್ದ ಮಿತಿಗಳೂ ಕಾರಣವಿರಬಹುದು.

ರಂಗನಾಥ್ ಅವರಿಗೆ ದಲಿತರು ಎನ್ನುವ ಅನುಕಂಪವಾಗಲೀ, ಅವರ ರಾಜಕೀಯ ಮುತ್ಸದ್ದಿತನಕ್ಕೆ ದಲಿತ ಎನ್ನುವ ಮೀಸಲಾತಿಯ ಅಗತ್ಯವಿರಲಿಲ್ಲ ಕೊನೆತನಕವೂ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅರಸು ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರತನಕದ ಮುಖ್ಯಮಂತ್ರಿಗಳ ಜೊತೆ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ್ದ ರಂಗನಾಥ್ ವಹಿಸಿಕೊಂಡ ಹುದ್ದೆಗಳಿಗೆ ನ್ಯಾಯ ಒದಗಿಸಿದ್ದರು. ಅರಣ್ಯ ಮತ್ತು ಶಿಕ್ಷಣ ಮಂತ್ರಿಗಳಾಗಿ ರಂಗನಾಥ್ ಹೆಚ್ಚು ಗಮನ ಸೆಳೆದಿದ್ದರು. ವಿಧಾನ ಸಭೆಯ ಸ್ಪೀಕರ್ ಆಗಿ ಕಲಾಪವನ್ನು ನಡೆಸಿದ ರೀತಿಯಂತೂ ಮಾದರಿ. ಸಂಸದರಾಗಿ ಒಂದು ಅವಧಿಗೆ ಅವರು ದುಡಿದ ಪರಿಯೂ ಸ್ಮರಣೀಯ.

ಯಾಕೆ ರಂಗನಾಥ್ ಕರ್ನಾಟಕದ ರಾಜಕೀಯದಲ್ಲಿ ಬಹುಮುಖ್ಯರಾಗುತ್ತಾರೆ ಅಂದರೆ ಅವರು ಅಧಿಕಾರವಿದ್ದಾಗ, ಅಧಿಕಾರವಿಲ್ಲದಿದ್ದಾಗ ನಡೆದುಕೊಂಡ ರೀತಿ-ನೀತಿಗಳು. ಕರ್ನಾಟಕದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಮೈದುಂಬಿಸಿಕೊಂಡಿದ್ದರೂ ಆ ಹುದ್ದೆಯನ್ನು ಅಲಂಕರಿಸಲಾಗದೆ ಹೋದ ದುರಂತ ನಾಯಕ. ಇದೇ ಮಾತು ಬಿ.ರಾಚಯ್ಯ ಅವರಿಗೂ ಅನ್ವಯಿಸುತ್ತದೆ.

ರಾಜಕೀಯದ ಏಳು-ಬೀಳು, ಸಮೀಕರಣಗಳಿಂದಾಗಿಯೇ ರಂಗನಾಥ್ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾದರು. ಈಗ ಹುದ್ದೆ ವಹಿಸಲು ಅರ್ಹರನ್ನು ಹುಡುಕಬೇಕು, ಆದರೆ ಅವರ ಕಾಲಘಟ್ಟದಲ್ಲಿ ಅರ್ಹರೇ ಹಲವು ಮಂದಿ. ಅವರೆಲ್ಲರನ್ನು ಗಾಳಿಸಿ, ರಾಜಕೀಯ ಲಾಭ-ನಷ್ಟಗಳನ್ನು ಅಳೆದು ತೂಗಿ, ಕಳೆದು ಕೂಡಿಸಿ ಫಲಿತಾಂಶ ಹೊರಹಾಕುವ ಪ್ರಕ್ರಿಯೆಯಲ್ಲಿ ರಂಗನಾಥ್ ಅವಕಾಶ ಕಳೆದುಕೊಳ್ಳುತ್ತಲೇ ಹೋದರು ಕೊನೆತನಕವೂ.

ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರ ಸಾರಥ್ಯದಲ್ಲಿ ಜನತಾ ಸರಕಾರ ಪಾರುಪತ್ಯೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ರಂಗನಾಥ್ ವಹಿಸಿದ್ದ ಪಾತ್ರ ಕಡೆಗಣಿಸುವಂಥದ್ದಲ್ಲ. ವಿಧಾನಸಭೆಯ ಒಳಗೆ-ಹೊರಗೆ ರಂಗನಾಥ್ ನಡೆದುಕೊಂಡ ರೀತಿ ಮಾದರಿ.

ಓರ್ವ ಶಿಕ್ಷಣ ಮಂತ್ರಿಯಾಗಿ ಕರ್ನಾಟಕವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವನ್ನಾಗಿ ರೂಪಿಸುವಲ್ಲಿ ರಂಗನಾಥ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಸಾಕ್ಷರತಾ ಆಂದೋಲನಕ್ಕೆ ಪೂರ್ವಭಾವಿಯಾಗಿ ಅನಕ್ಷರಸ್ಥರ ಜನಗಣತಿಗೆ ಚಾಲನೆಕೊಟ್ಟದಿನದಿಂದ ಅಧಿಕಾರ ಕಳೆದುಕೊಳ್ಳುವ ದಿನಗಳವರೆಗೆ ರಂಗನಾಥ್ ಈ ಆಂದೋಲನದ ಭಾಗವಾಗಿಯೇ ಇದ್ದವರು.

ನಾನು ಎಂಭತ್ತರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟು ವರದಿಗಾರನಾಗಿ ಕಾಯಕ ನಿರ್ವಹಿಸುವ ಕಾಲಕ್ಕೆ ರಂಗನಾಥ್ ಈ ನಾಡಿನ ಒಬ್ಬ ಹಿರಿಯ ನಾಯಕ. ಅವರನ್ನು ಹತ್ತಿರದಿಂದ ನೋಡಿ, ಅವರ ಮಾತುಗಳನ್ನು ನೇರವಾಗಿ ಓದುಗರಿಗೆ ತಿಳಿಸುವ ಸ್ವಾತಂತ್ರ್ಯಮಾತ್ರ ಇದ್ದ ಕಾಲವದು. ಆದಿನಗಳಿಂದಲೇ ರಂಗನಾಥ್ ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಅವರ ಮಾತುಗಳು ತೂಕದವು. ಈಗಿನ ಹಾಗೆ ಮಾಧ್ಯಮಗಳ ಬೆಳಕಲ್ಲಿ ಹೊಳೆಯಲು ಹಾತೊರೆಯುವಂಥ ಮಾತುಗಳಾಗಿರಲಿಲ್ಲ. ಅವರು ಪತ್ರಿಕಾಗೋಷ್ಟಿ ನಡೆಸುತ್ತಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರೆ ಅಂದಿನ ದಿನಗಳು ಮತ್ತೆ ಬರಲಾರವು ಅನ್ನಿಸುತ್ತದೆ. ಮಂತ್ರಿಯಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಮಾತಿನ ವರಸೆ, ಬದ್ಧತೆ, ಖಚಿತತೆ ಅನನ್ಯವಾದುದು. ಗಂಭೀರ ಮತ್ತು ಚಿಂತನೆಗೆ ಗ್ರಾಸವಾಗುವ ಹೇಳಿಕೆಗಳು ಅವರಿಂದ ಬರುತ್ತಿದ್ದವು. ರೋಚಕತೆ ಅಥವಾ ನಾಯಕರನ್ನು ಮೆಚ್ಚಿಸುವ ಗೋಜಿಗೆ ರಂಗನಾಥ್ ಹೋಗುತ್ತಿರಲಿಲ್ಲ. ಮನರಂಜನೆ ಕೊಡುವ ಪ್ರಶ್ನೆಗಳಿಗೆ ಅವರ ಗೋಷ್ಟಿಗಳಲ್ಲಿ ಅವಕಾಶವಿರಲಿಲ್ಲ.

ಹಾಗೆಯೇ ರಂಗನಾಥ್ ಅವರು ಮಂತ್ರಿಯಾಗಿ ಜಿಲ್ಲಾ ಪ್ರವಾಸ ಮಾಡುತ್ತಿದ್ದ ಸಂದರ್ಭ, ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ನೆನಪಿಸಿಕೊಂಡರೆ ಈಗ ಅದೆಷ್ಟು ಬದಲಾಗಿ ಹೋಗಿದೆ ಅನ್ನಿಸುತ್ತದೆ.ಅವರು ಪ್ರವಾಸ ಬರುತ್ತಿದ್ದಾರೆ ಅಂದರೆ ಸಾಕು ಜಿಲ್ಲಾಧಿಕಾರಿ ಸಹಿತ ಇಲಾಖೆ ಅಧಿಕಾರಿಗಳು ದಿಗಿಲುಗೊಳ್ಳುತ್ತಿದ್ದರು. ರಂಗನಾಥ್ ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ಅಧಿಕಾರಿ ವಲಯದಲ್ಲಿ ವಿದ್ಯುತ್ ಸಂಚಲನದ ಅನುಭವವಾಗುತ್ತಿತ್ತು. ಕೇಳುವ ಪ್ರಶ್ನೆಗಳಿಗೆ ತಟ್ಟನೆ ಉತ್ತರ ಹೇಳಬೇಕು, ಸುಳ್ಳು ಹೇಳಿದರಂತ ದೂರ್ವಾಸರಾಗಿಬಿಡುತ್ತಿದ್ದರು. ಈಗಿನಂತೆ ಮಂತ್ರಿಗಳ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ, ದೇಶಾವರಿ ನಗೆಬೀರುತ್ತಾ ಮಂತ್ರಿಗಳನ್ನು ಏಮಾರಿಸುವ ದಡ್ದತನವನ್ನು ಅಧಿಕಾರಿಗಳು ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ.

ಪತ್ರಿಕಾಗೋಷ್ಠಿಗಳಲ್ಲೂ ತೂಕದ ಪ್ರಶ್ನೆಗಳಿಗೆ ಮಾತ್ರ ಅವಕಾಶ, ಅವರಿಂದಲೂ ತೂಕದ ಮಾತುಗಳ ಉತ್ತರ ನಿರೀಕ್ಷಿಸಬಹುದಾಗಿತ್ತು. ಸ್ಪೀಕರ್ ಹುದ್ದೆ ನಿರ್ವಹಿಸಿದ ಸಂದರ್ಭದಲ್ಲೂ ರಂಗನಾಥ್ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುತ್ತಿದ್ದರು. ಸಚಿವರುಗಳು ಉಡಾಫೆ ಉತ್ತರ ಕೊಡುವ ಯತ್ನ ಮಾಡಿದರೆ ಸಿಟ್ಟಾಗುತ್ತಿದ್ದರು. ಅವರ ಕಾಲದಲ್ಲಿ ವಿಧಾ ಸಭೆಯ ಕಲಾಪಕ್ಕೂ ಕಳೆಯಿತ್ತು. ಸ್ಪೀಕರ್ ಹುದ್ದೆಯ ಘನತೆ ಮತ್ತು ಪಾವಿತ್ರ್ಯತೆಯನ್ನು  ಅವರು ಎತ್ತಿಹಿಡಿದಿದ್ದರು.

ಮುಗಿಸುವ ಮುನ್ನ ಹೇಳಲೇಬೇಕಾದ ಮಾತು: ಕೆ.ಎಚ್.ರಂಗನಾಥ್ ಅವರಲ್ಲಿ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಅವರದ್ದೇ ಆದ ಕನಸುಗಳಿದ್ದವು. ನಿಷ್ಠುರವಾದಿಯಾಗಿ ಕೊನೆತನಕವೂ ನಡೆದುಕೊಂಡು ಕನಸುಗಳೊಂದಿಗೆ ಕಣ್ಮರೆಯಾದರು.

(ಚಿತ್ರಕೃಪೆ: ದಿ ಹಿಂದು)

ಮಂಗಳೂರು ದಸರೆಯ ನೆಪದಲ್ಲಿ

-ಚಿದಂಬರ ಬೈಕಂಪಾಡಿ

‘ಮೈಸೂರು ದಸರಾ ಎಷ್ಟೊಂದು ಸುಂದರಾ…!’ ಹೀಗೆಂದು ಬಾಲ್ಯದಿಂದಲೂ ಕೇಳುತ್ತಲೇ ಬೆಳೆದವನು. ಬುದ್ಧಿ ಬಲಿತಹಾಗೆ ಊರುಕೇರಿಗಳನ್ನು ಸುತ್ತಾಡಿದ ಮೇಲೆ ಮೈಸೂರು ದಸರಾವನ್ನೇ ಹೋಲುವ ನಾಡಹಬ್ಬ ದಸರಾ ಮೆರವಣಿಗೆ, ಶಾರದಾ ಮಹೋತ್ಸವ, ನವದುರ್ಗೆಯರ ಆರಾಧನೆ ಹಲವುಕಡೆಗಳಲ್ಲಿ ಹಲವು ವಿಧಗಳಲ್ಲಿ ನಡೆಯುವುದನ್ನು ಕಂಡಿದ್ದೇನೆ.  ಮೈಸೂರು ದಸರಾಕ್ಕೆ ಮೈಸೂರು ದಸರೆಯೇ ಸಾಟಿ, ಇದರಲ್ಲಿ ಎರಡುಮಾತಿಲ್ಲ.

ಮೈಸೂರು ದಸರಾ ರಾಜರುಗಳ ಬಳುವಳಿಯಾಗಿ ಇದೀಗ ಸರ್ಕಾರದ ಸಂಪೂರ್ಣ ವೆಚ್ಚದಲ್ಲಿ ನಡೆಯುತ್ತಿದೆ. ಮೈಸೂರು ದಸರಾಕ್ಕೆ ಅದೆಷ್ಟುಕೋಟಿ ಸರ್ಕಾರದ ಬೊಕ್ಕಸದ ಹಣ ವಿನಿಯೋಗವಾಗಿದೆ ಎನ್ನುವುದನ್ನು ಹಣಬಿಡುಗಡೆ ಮಾಡಿದವರು, ಖರ್ಚುಮಾಡಿದವರು ಮಾತ್ರ ಬಲ್ಲರು. ನನಗೆ ಗೊತ್ತಿರುವ ಅಲ್ಪ ಮಾಹಿತಿಯೆಂದರೆ ಮೈಸೂರು ದಸರಾದಲ್ಲಿ ಹಣ ಮಾಡಿಕೊಳ್ಳದವನು ಹುಂಬನಿರಬೇಕು ಅಥವಾ ನಾಲಾಯಕ್ ಇರಬೇಕು. ಇಲ್ಲದಿದ್ದರೆ ವರುಷಕ್ಕೊಮ್ಮೆ ಮಾತ್ರ ಬರುವ ಮೈಸೂರು ದಸರಾ ಮೈಸೂರಿನ ಕೆಲವು ಸರ್ಕಾರಿ ಅಧಿಕಾರಿಗಳಿಂದ ಹಿಡಿದು (ದಸರಾಕ್ಕೆ ಸಂಬಂಧಿಸಿದ ಆಯಕಟ್ಟಿನ ಹುದ್ದೆಗಳಲ್ಲಿರುವವರು) ಟ್ಯಾಬ್ಲೋ ನಿರ್ಮಿಸುವ ಕಾರ್ಮಿಕರು, ಜಾನಪದ ಕಲಾತಂಡಗಳಲ್ಲಿ ಭಾಗವಹಿಸುವ ಕಲಾವಿದರತನಕ ಲಕ್ಷೀ ಬೇಡವೆಂದರೂ ಹುಡುಕಿಕೊಂಡು ಬರುತ್ತಾಳೆ. ಮೈಸೂರು ದಸರೆಯಲ್ಲಿ ವೋಚರ್ ಮಾಡುವ ಕಲಾನಿಪುಣರಿಗೇನು ಕೊರತೆಯಿಲ್ಲ. ಈ ಕಾರಣದಿಂದಲೇ ಬಡಪಾಯಿ ಮಾವುತರೂ ಕೂಡಾ ಮುಷ್ಕರ ಮಾಡುವ ಹಂತ ತಲಪುತ್ತಾರೆ.

ಸರ್ಕಾರಿ ಉತ್ಸವಗಳು ಅಧಿಕಾರಿಗಳ ಹಣ ಮಾಡುವ ದಂಧೆಗೆ ಹೇಗೆ ಸಹಕಾರಿಯಾಗುತ್ತವೆ ಎನ್ನುವುದನ್ನು ತಿಳಿಯಬೇಕಾದರೆ ಮಂಗಳೂರಲ್ಲಿ ಜರಗುವ ಕರಾವಳಿ ಉತ್ಸವ, ಬೀಚ್ ಉತ್ಸವ, ಹಂಪಿ ಉತ್ಸವಗಳ ಲೆಕ್ಕಾಚಾರಗಳನ್ನು ಲೋಕಾಯುಕ್ತರು ತನಿಖೆ ಮಾಡಬೇಕು. ‘ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವ ಮಾತು ಇಂಥ ಸರ್ಕಾರಿ ಉತ್ಸವಗಳಿಗೆ ಒಪ್ಪುತ್ತದೆ. ಶಾಮಿಯಾನದಿಂದ ಹಿಡಿದು ಕಲಾವಿದರನ್ನು ಗೊತ್ತುಪಡಿಸುವ ತನಕ ಪರ್ಸೆಂಟೇಜ್ ವ್ಯವಹಾರ ಗುಟ್ಟೇನೂ ಅಲ್ಲ. ಇದರ ರುಚಿ ಉಂಡಿರುವ ಮಂದಿ ಇಂಥ ಉತ್ಸವಗಳು ವರ್ಷದಲ್ಲಿ ಎರಡು ಸಲ ಬರಬಾರದೇ ಅಂದೊಕೊಂಡರೆ ಅಚ್ಚರಿಯೇನೂ ಇಲ್ಲ.

ಆದರೆ ಸರ್ಕಾರದ ಬಿಡಿಗಾಸೂ ಇಲ್ಲದೆ ನಡೆಯುವ ಉತ್ಸವಗಳು, ಮಂಗಳೂರು ದಸರಾದಂಥ ಜನರ ಸಹಭಾಗಿತ್ವದ ಉತ್ಸವಗಳು ನಿಜಕ್ಕೂ ಅನುಕರಣೀಯ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಮಂಗಳೂರು ದಸರಾ ವರುಷದಿಂದ ವರುಷಕ್ಕೆ ಕಳೆಕಟ್ಟಿಕೊಳ್ಳುತ್ತಿದೆ. ಹಾಗೆಂದು ಈ ದಸರೆಗೆ ಸರ್ಕಾರದ ಚಿಕ್ಕಾಸೂ ಸಿಗುವುದಿಲ್ಲ. ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರು ದಸರಾಕ್ಕೆ ಪ್ರತೀ ವರ್ಷ ನಿರ್ಧಿಷ್ಟ ಅನುದಾನ ಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಧರಂಸಿಂಗ್ ಸಾವರಿಸ್ಕೊಂಡು ಬೇಡಿಕೆ ಓದುವಷ್ಟರಲ್ಲಿ ಅಧಿಕಾರ ಕಳೆದುಕೊಂಡರು. ಬಹುಷ: ಕುದ್ರೋಳಿ ಗೋಕರ್ಣನಾಥನಿಗೂ ಸರ್ಕಾರದ ಅನುದಾನ ಇಷ್ಟವಿಲ್ಲವೇನೋ ಅಂದುಕೊಳ್ಳೋಣ ಬಿಡಿ.

ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರನ್ನು ರಾಜಕೀಯವಾಗಿ ಒಪ್ಪುವುದು ಬಿಡುವುದು ಪ್ರತಿಯೊಬ್ಬರಿಗಿರುವ ವೈಯಕ್ತಿಕ ಸ್ವಾತಂತ್ರ್ಯ. ಅವರನ್ನು ಟೀಕೆ ಮಾಡುವವರು ಮೌನಿಯಾಗುವಂತೆ ಮಾಡುವ ಅತ್ಯಂತ ಭಿನ್ನಕಾರ್ಯಕ್ರಮಗಳನ್ನು ಪೂಜಾರಿ ರೂಪಿಸಿಬಿಡುತ್ತಾರೆ. ಇಂಥ ಆಲೋಚನೆಗಳಿಗೆ ಯಾರುಹೊಣೆಯೋ ಗೊತ್ತಿಲ್ಲ, ಆದರ ಗುಟ್ಟು ಬಿಡುವುದಿಲ್ಲ, ಗುಟ್ಟುತಿಳಿಯುವ ಅಗತ್ಯವೂ ಇಲ್ಲ ಅನ್ನಿ. ಆದರೆ ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಂದ ಯಾರಿಗೆಷ್ಟು ಪ್ರಯೋಜನವೆಂದು ಪ್ರಶ್ನೆ ಮಾಡುವವರೂ ಇದ್ದಾರೆ. ಹೀಗೆ ಪ್ರಶ್ನೆ ಮಾಡುವುದೂ ಕೂಡಾ ಅವರವರ ಇಚ್ಛೆಗೆ ಬಿಡಬಹುದಾದ ಸಂಗತಿ.

ಮಂಗಳೂರು ಕುದ್ರೋಳಿ ಕ್ಷೇತ್ರವನ್ನು ನವೀಕರಣ ಮಾಡುವ ನೇತೃತ್ವವನ್ನು ವಹಿಸಿಕೊಂಡ ಜನಾರ್ಧನ ಪೂಜಾರಿಯವರು ಸಮರ್ಥವಾಗಿ ನಿಭಾಯಿಸಿದರು ಎನ್ನುವುದು ಜಗಜ್ಜಾಹೀರು. ಮಂಗಳೂರು ದಸರಾ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಿದ್ದೂ ಕೂಡಾ ಜನಾರ್ಧನ ಪೂಜಾರಿಯವರ ವೈಯಕ್ತಿಕ ಆಲೋಚನೆ. ಆಡಂಬರ, ದುಂದುವೆಚ್ಚವೆಂದೆಲ್ಲ ಟೀಕೆಗಳು ಕೇಳಿಬಂದಿದ್ದವು. ಆದರೆ ಮೈಸೂರಲ್ಲಿ ಸರ್ಕಾರದ ಬೊಕ್ಕಸದ ಕೋಟಿಕೋಟಿ ರೂಪಾಯಿ ಸೋರಿಕೆಯಾಗುವುದನ್ನು ಟೀಕಿಸಬೇಕು ಅಥವಾ ಪ್ರಶ್ನಿಸಬೇಕು ಎನ್ನುವ ಕಲ್ಪನೆಯೂ ಟೀಕೆಮಾಡುವವರಿಗೆ ಹೊಳೆಯದಿರುವುದು ನಿಜಕ್ಕೂ ಸೋಜಿಗವೇ ಸರಿ.

ಹಣವಂತರಿಂದ ದೇಣಿಗೆ ಸಂಗ್ರಹಿಸಿ ಪೂಜಾರಿಯವರು ನಡೆಸುವ ಮಂಗಳೂರು ದಸರಾದಿಂದ ಯಾರಿಗೆ ಲಾಭ ಅಥವಾ ದಸರಾ ನಡೆಸದಿದ್ದರೆ ಏನಾದೀತು ಎಂದೇನಾದರೂ ಪ್ರಶ್ನಿಸಿದರೆ ಉತ್ತರಕೊಡುವುದು ಮೂರ್ಖತನವಾಗುತ್ತದೆ. ಲಾಭ ಅಥವಾ ನಷ್ಟದ ಪ್ರಶ್ನೆಗಿಂತಲೂ ನಮ್ಮ ಭವಿಷ್ಯದ ಪೀಳಿಗೆಗೆ ನಾಡಹಬ್ಬದ ಕಲ್ಪನೆಯನ್ನು ಕಟ್ಟಿಕೊಡುವುದು ಬಹುಮುಖ್ಯ ಅಂದುಕೊಳ್ಳುತ್ತೇನೆ. ಮೈಸೂರಿನ ಅಂಬಾರಿ, ಜಂಬೂಸವಾರಿ, ಆಗಿನ ಮಹಾರಾಜರುಗಳ ದರ್ಬಾರ್ ವೈಭವವನ್ನು ಈಗಿನ ಪೀಳಿಗೆಗೆ ಚಿತ್ರಗಳಷ್ಟೇ ಹೇಳಬೇಕು. ಆದರೂ ದಸರಾದ ಮೂಲಕ ಆನೆ, ಅಂಬಾರಿ, ಜಂಬೂಸವಾರಿ ನೋಡುವ ಅವಕಾಶವಾಗುತ್ತಿದೆ ಎನ್ನುವುದೇ ಬಹುಮುಖ್ಯ ಲಾಭ. ಹಾಗೆಯೇ ಮಂಗಳೂರು ದಸರಾ ಕೂಡಾ.

ಅಸ್ಪ್ರಶ್ಯತೆ, ಮೇಲು-ಕೀಳು ತಾಂಡವಾಡುತ್ತಿದ್ದ ಮಂಗಳೂರಲ್ಲಿ ಅಂದು ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಕ್ಷೇತ್ರದಲ್ಲಿ ಈಗ ಮಂಗಳೂರು ದಸರಾ ನಡೆಯುತ್ತಿದೆ. ಬದಲಾವಣೆಗಳು ಸಾಕಷ್ಟು ಆಗಿವೆ, ಅಂತೆಯೇ ಜನರೂ ಕೂಡಾ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ. ಮಂಗಳೂರು ದಸರಾ ಮಂಗಳೂರಿಗರ ಮಾತ್ರವಲ್ಲ ಕರಾವಳಿಯ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಕರ್ನಾಟಕ, ಕೇರಳ ರಾಜ್ಯದ ಜನಪದ ತಂಡಗಳು, ಕರಾವಳಿಯ ಸಾಂಪ್ರದಾಯಿಕ ವೇಷ ಭೂಷಣಗಳು, ಹುಲಿವೇಶ ಹೀಗೆ ಕೆಲವೇ ವರ್ಷಗಳಲ್ಲಿ ಮರೆಯಾಗಿಬಿಡುವ ಜನಪದ ವೇಷಗಳು ನವರಾತ್ರಿಯ ಹೆಸರಲ್ಲಿ ಅದರಲ್ಲೂ ಮಂಗಳೂರ ದಸರಾದ ನೆಪದಲ್ಲಿ ಜೀವಂತವಾಗಿವೆ.

ಸಾಮಾಜಿಕ ಸುಧಾರಣೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಈ ಕ್ಷೇತ್ರದಲ್ಲಿ ಈ ವರ್ಷ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಗೌರವದಿಂದ ನಡೆಸಿಕೊಂಡು ಅವರು ಅಮಂಗಳೆಯರಲ್ಲವೆಂದು ಹೇಳಿ ಸೀರೆ, ಕುಂಕುಮ, ಬಳೆ, ಹೂವು ನೀಡಿರುವುದು, ಅವರಿಂದಲೇ ರಥ ಎಳೆಸಿರುವ ಜನಾರ್ಧನ ಪೂಜಾರಿಯವರ ನಡೆ ಚಿಂತನೆಗೆ ಕಾರಣವಾಗಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ಕಣ್ಣೀರು ಸುರಿಸುತ್ತಾ ರಥ ಎಳೆದಿರುವುದು ನಾಡಿನಲ್ಲಿ ಇಂಥವರ ಬಗ್ಗೆ ಹೊಸ ಚಿಂತನೆಗೆ ಮಂಗಳೂರು ದಸರಾ ನಾಂದಿಯಾಗಿದೆ.

ದಸರಾ ಉತ್ಸವದ ಆಚರಣೆಗಳು ನವದುರ್ಗೆಯರ ಆರಾಧನೆ ಮೂಲಕ ನಾಡಿನ ಹಳ್ಳಿಗಳಲ್ಲಿ ನಡೆಯುತ್ತದೆ. ಆದರೆ ಅವುಗಳಿಗೆ ಪ್ರಚಾರದ ಕೊರತೆ. ಮೈಸೂರು, ಮಡಿಕೇರಿ, ಮಂಗಳೂರು, ಧಾರವಾಡ ಮುಂತಾದ ಕಡೆಗಳಲ್ಲಿ ನಡೆಯುವ ಉತ್ಸವಗಳು ಹೆಚ್ಚು ಜನಾಕರ್ಷಣೆ ಪಡೆದುಕೊಂಡಿವೆ. ಸ್ಥಳೀಯವಾಗಿ ಇಂಥ ಉತ್ಸವಗಳು ನಡೆಯುವುದು ಸಾಂಪ್ರದಾಯಿಕ ವೇಷ ಭೂಷಣಗಳನ್ನು, ಮೂಲಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇವು ಪ್ರಯೋಜನಕಾರಿ.

ಸಂಪತ್ತನ್ನು ಸಂಪಾದಿಸಬಹುದು, ಆದರೆ ಸಂಸ್ಕೃತಿ ನಾಶವಾದರೆ ಅದಕ್ಕೆ ಮರುಹುಟ್ಟುಕೊಡುವುದು ಹೇಳುವಷ್ಟು ಸುಲಭವಲ್ಲ. ಈ ಕಾರಣಕ್ಕಾಗಿಯೇ ದಸರಾದಂಥ ಕಾರ್ಯಕ್ರಮಗಳು ಅನಿವಾರ್ಯ ಮತ್ತು ಔಚಿತ್ಯಪೂರ್ಣ ಭವಿಷ್ಯದ ದೃಷ್ಟಿಯಲ್ಲಿ.
(ಚಿತ್ರಕೃಪೆ: ವಿಕಿಪೀಡಿಯ)