Category Archives: ಜಗದೀಶ್ ಕೊಪ್ಪ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 4)


– ಡಾ.ಎನ್.ಜಗದೀಶ್ ಕೊಪ್ಪ


 

ನಕ್ಸಲ್‌ಬಾರಿ ಪ್ರತಿಭಟನೆಯ ಯಶಸ್ವಿನ ಬಗ್ಗೆ ಚಳವಳಿಗಾರರಾಗಲಿ ಅಥವಾ ಈ ಹಿಂಸಾಚಾರ ಮತ್ತು ಚಳವಳಿಯನ್ನು ಹತ್ತಿಕ್ಕಿದ ಬಗ್ಗೆ ಪಶ್ಚಿಮ ಬಂಗಾಳದ ಸರ್ಕಾರವಾಗಲಿ ಉಭಯ ಬಣಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಈ ಘಟನೆ ಸರ್ಕಾರ ಮತ್ತು ಪ್ರತಿಭಟನಾಗಾರರಿಗೆ ಪರೋಕ್ಷವಾಗಿ ಹಲವಾರು ಎಚ್ಚರಿಕೆಯ ಪಾಠಗಳನ್ನು ಕಲಿಸಿಕೊಟ್ಟಿತು.

ಯಾವುದೇ ಒಂದು ಚಳವಳಿಯನ್ನು ಪ್ರಲೋಭನೆ ಮತ್ತು ಆಮಿಷದ ಮೂಲಕ ಹುಟ್ಟು ಹಾಕುವುದು ಅತಿಸುಲಭ ಆದರೆ, ಅದನ್ನು ನಿಯಂತ್ರಿಸುವ ನೈತಿಕತೆ ಮತ್ತು ತಾಕತ್ತು ಈ ಎರಡುಗುಣಗಳು ನಾಯಕನಿಗಿರಬೇಕು. ಭಾರತದ ಸಂದರ್ಭದಲ್ಲಿ ಅಂತಹ ತಾಕತ್ತು ಮಹಾತ್ಮಗಾಂಧಿಗೆ ಇತ್ತು. ಅವರು ಎಷ್ಟೋಬಾರಿ ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ತಪ್ಪಿದಾಗಲೆಲ್ಲಾ ಇಡೀ ಚಳವಳಿಯನ್ನು ಸ್ಥಗಿತಗೊಳಿಸಿದ್ದರು. ಇದಕ್ಕೆ ಚೌರಿಚೌರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಮತ್ತು ಪೊಲೀಸರ ಹತ್ಯಾಕಾಂಡದ ಘಟನೆ ನಮ್ಮೆದುರು ಸಾಕ್ಷಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವ, ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂಬಂತೆ ಪರಿಭಾವಿಸುವ ವ್ಯಕ್ತಿಗಳು ಮಾತ್ರ ನಾಯಕತ್ವದ ಗುಣ ಹೊಂದಿರುತ್ತಾರೆ. ಅಂತಹ ಗುಣ ಈ ನೆಲದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರವರಿಗೆ ಇತ್ತು.

ಇಂತಹ ಯಾವುದೇ ಗುಣಗಳು ಕಿಸಾನ್‌ಸಭಾ ಮೂಲಕ ರೈತರು ಮತ್ತು ಗೇಣಿದಾರರು, ಹಾಗೂ ಕೃಷಿ ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿದ ಚಾರು ಮುಜುಂದಾರ್ ಅಥವಾ ಕನು ಸನ್ಯಾಲ್‌ಗೆ ಇರಲಿಲ್ಲ. ಇಂತಹ ದೂರದೃಷ್ಟಿಕೋನದ ಕೊರತೆ ಒಂದು ಜನಪರ ಚಳವಳಿಯಾಗಬೇಕಿದ್ದ ಮಹತ್ವದ ಘಟನೆಯನ್ನು ಹಿಂಸೆಯ ಹಾದಿಗೆ ನೂಕಿಬಿಟ್ಟಿತು. ಗಾಂಧಿಯ ವಿಚಾರ ಧಾರೆಯ ಬಗ್ಗೆ ಅಪನಂಬಿಕೆ ಹೊಂದಿದ್ದ ಈ ಎಡಪಂಥೀಯ ನಾಯಕರಿಗೆ ತಮ್ಮದೇ ಪಶ್ಚಿಮ ಬಂಗಾಳದಲ್ಲಿ 1860 ರ ದಶಕದಲ್ಲಿ ರೈತರು ನಡೆಸಿದ ನೀಲಿ ಕ್ರಾಂತಿಯಾದರೂ ಮಾದರಿಯಾಗಬೇಕಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಮತ್ತು ಪ್ಲಾಂಟರ್‌ಗಳ ವಿರುದ್ಧ ಸ್ಥಳೀಯ ಗೇಣಿದಾರ ರೈತರು ನಡೆಸಿದ ಕಾನೂನು ಬದ್ಧ, ಹಾಗೂ ಅಹಿಂಸಾತ್ಮಕ ಹೋರಾಟವನ್ನು ಮಾವೋವಾದಿ ಬೆಂಬಲಿಗರು ಅವಲೋಕಿಸಬೇಕಿತ್ತು. ಏಕೆಂದರೆ, ಅಣುಬಾಂಬ್‌ಗಿಂತ ಅಹಿಂಸೆ ಎಂಬ ಅಸ್ತ್ರ ಹೆಚ್ಚು ಪರಿಣಾಮಕಾರಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟ ಈ ನೆಲದಲ್ಲಿ ಯಾರೂ ಹಿಂಸೆಯನ್ನು ಪ್ರತಿಪಾದಿಸಲಾರರು, ಅಥವಾ ಬೆಂಬಲಿಸಲಾರರು.

ಭಾರತೀಯ ಮುಗ್ದ ರೈತರನ್ನು ನಿರಂತರವಾಗಿ ಶೋಷಿಸಿಕೊಂಡ ಬಂದ ಇತಿಹಾಸ ಇಂದು ನಿನ್ನೆಯದಲ್ಲ, ಅದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ವಸಾಹತು ಶಾಹಿಯ ಆಡಳಿತ, ಅವರ ಭೂಕಂದಾಯ ಪದ್ಧತಿ, ಆರ್ಥಿಕ ನೀತಿಗಳು ಇವೆಲ್ಲವೂ ರೈತರ ರಕ್ತವನ್ನು ಹೀರಿವೆ. ಅನಕ್ಷರತೆ, ಸಂಘಟನೆಯ ಕೊರತೆ ಇಂತಹ ಶೋಷಣೆಗೆ ಪರೋಕ್ಷವಾಗಿ ಕಾರಣವಾದವು. 1859-60 ರಲ್ಲಿ ಪಶ್ಚಿಮ ಬಂಗಾಳದ ರೈತರು ನೀಲಿ ಬೆಳೆಯ ವಿರುದ್ಧ ಬಂಡಾಯವೆದ್ದ ಘಟನೆ ಭಾರತದ ಇತಿಹಾಸದಲ್ಲಿ ಪ್ರಥಮ ರೈತರ ಬಂಡಾಯವೆಂದು ಕರೆಯಬಹುದು. ಈಸ್ಷ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಬಹುತೇಕ ಪ್ಲಾಂಟರ್‌ಗಳು ಯರೋಪಿಯನ್ನರೇ ಆಗಿದ್ದರು. ತಮ್ಮ ತಾಯ್ನಾಡಿನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಗೇಣಿದಾರರನ್ನು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸುತ್ತಿದ್ದರು. ರೈತರು, ತಮ್ಮ ಕುಟುಂಬದ ಆಹಾರಕ್ಕಾಗಿ ಭತ್ತ ಬೆಳೆಯಲು ಆಸ್ಪದ ನೀಡದೆ ಕಿರುಕುಳ ನೀಡುತ್ತಿದ್ದರು. ರೈತರು ಕಷ್ಟ ಪಟ್ಟು ಬೆಳೆದ ನೀಲಿ ಬೆಳೆಗೆ ಅತ್ಯಂತ ಕಡಿಮೆ ಬೆಲೆಯನ್ನ ನೀಡಲಾಗುತಿತ್ತು. ಪ್ಲಾಂಟರ್‌ಗಳ ಆದೇಶವನ್ನು ಧಿಕ್ಕರಿಸಿದ ರೈತರನ್ನು ತಮ್ಮ ಮನೆಗಳಲ್ಲಿ ಕೂಡಿ ಕಾಕಿ ಚಾಟಿ ಏಟಿನ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದವು ಇವುಗಳನ್ನು ವಿಪ್ಟಿಂಗ್‌ಹೌಸ್ ಎಂದು ಕರೆಯಲಾಗುತ್ತಿತ್ತು. ಚಾಟಿ ಏಟು ಹೊಡೆಯಲು ಭಾರತೀಯ ಗುಲಾಮರನ್ನು ನೇಮಕ ಮಾಡಲಾಗಿತ್ತು ಪ್ರತಿ ಒಂದು ಏಟಿಗೆ ಒಂದಾಣೆಯನ್ನು (ಒಂದು ರೂಪಾಯಿಗೆ ಹದಿನಾರು ಆಣೆ) ಏಟು ತಿನ್ನುವ ರೈತನೇ ಭರಿಸಬೇಕಾಗಿತ್ತು.

ಇಂತಹ ಕ್ರೂರ ಅಮಾನವೀಯ ಶೋಷಣೆಯನ್ನು ಸಹಿಸಲಾರದೆ, ರೈತರು ಸಣ್ಣ ಪ್ರಮಾಣದ ಗುಂಪುಗಳ ಮೂಲಕ ಪ್ರತಿಭಟಿಸಲು ಮುಂದಾದರು. ಇದೇ ಸಮಯಕ್ಕೆ ಸರಿಯಾಗಿ ಕಲರೋವ ಜಿಲ್ಲೆಯ ಜಿಲ್ಲಾಧಿಕಾರಿ ರೈತರ ಪರವಾಗಿ ಆದೇಶವನ್ನು ಹೊರಡಿಸಿ, ಗೇಣಿ ಪಡೆದ ಭೂಮಿಯನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ರೈತರು ಸ್ವತಂತ್ರರು ಹಾಗೂ ತಮಗಿಷ್ಟ ಬಂದ ಬೆಳೆ ತೆಗೆಯುವುದು ಅವರ ವ್ಯಯಕ್ತಿಕ ಹಕ್ಕು ಎಂದು ಘೋಷಿಸಿದನು. ಇದು ರೈತರಿಗೆ ನೂರು ಆನೆಯ ಬಲ ತಂದುಕೊಟ್ಟಿತು. ದಿಗಂಬರ ವಿಶ್ವಾಸ್ ಮತ್ತು ವಿಷ್ಣು ವಿಶ್ವಾಸ್ ಎಂಬ ವಿದ್ಯಾವಂತ ರೈತರ ನೇತೃತ್ವದಲ್ಲಿ ದೊಡ್ಡ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಆತಂಕಗೊಂಡ ಪ್ಲಾಂಟರ್‌ಗಳು ತಮ್ಮ ಭೂಮಿಯ ಗೇಣಿ ದರ ಹೆಚ್ಚಿಸುವುದರ ಮೂಲಕ ರೈತರನ್ನು ಮಣಿಸಲು ಯತ್ನಿಸದರು. ಒಗ್ಗೂಡಿದ ರೈತರು ಗೇಣಿ ಕೊಡುವುದಿರಲಿ, ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಸಂಪೂರ್ಣವಾಗಿ ನೀಲಿ ಬೆಳೆ ತೆಗೆಯುವುದನ್ನು ನಿಲ್ಲಿಸಿ ತಮಗೆ ಬೇಕಾದ ಆಹಾರ ಬೆಳೆಗಳ ಕೃಷಿಯಲ್ಲಿ ತೊಡಗಿಕೊಂಡರು. ಅನಿವಾರ್ಯವಾಗಿ ಕಚ್ಚಾ ವಸ್ತುಗಳಿಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಕಂಪನಿಗಳು ಮುಚ್ಚತೊಡಗಿದವು. ಈ ಆಂದೋಲನದ ಮತ್ತೊಂದು ವೈಶಿಷ್ಟತೆಯೆಂದರೆ, ಮುಗ್ಧ ರೈತರ ಬಂಡಾಯಕ್ಕೆ ಬಂಗಾಲದ ಎಲ್ಲಾ ವಿದ್ಯಾವಂತರು, ಬುದ್ಧಿಜೀವಿಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಇವರೆಲ್ಲರೂ ಬಂಗಾಳದಾದ್ಯಂತ ಸಭೆ ನಡೆಸಿ ರೈತರ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸಮಾಜ ಮತ್ತು ಸರ್ಕಾರದ ಗಮನ ಸೆಳೆದರು. ಹರೀಶ್ಚಂದ್ರ ಮುಖರ್ಜಿಯವರ ‘ “ಹಿಂದೂ ದೇಶ ಭಕ್ತ” ಎಂಬ ಪತ್ರಿಕೆ ಹಾಗೂ “ಧೀನ ಬಂಧು ಮಿತ್ರ” ಅವರ “ನೀಲಿ ದರ್ಪಣ” ಎಂಬ ನಾಟಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಒಂದು ಆಯೋಗವನ್ನು ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಯಿತು.

ಇಂತಹ ಒಂದು ಅನನ್ಯವಾದ ಅಪೂರ್ವ ಇತಿಹಾಸವಿದ್ದ ಬಂಗಾಳದ ನೆಲದಲ್ಲಿ ರೈತರ, ಕೃಷಿ ಕೂಲಿಕಾರ್ಮಿಕರ ನೆಪದಲ್ಲಿ ರಕ್ತ ಸಿಕ್ತ ಇತಿಹಾಸದ ಅಧ್ಯಾಯ ಆರಂಭಗೊಂಡಿದ್ದು ನೋವಿನ ಹಾಗೂ ವಿಷಾದಕರ ಸಂಗತಿ. ನಕ್ಸಲ್‌ಬಾರಿಯ ಹಿಂಸಾತ್ಮಕ ಹೋರಾಟ ಪಶ್ಚಿಮ ಬಂಗಾಳ ಸೇರಿದಂತೆ ಆಂಧ್ರಪ್ರದೇಶದಲ್ಲಿ ಹಲವು ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವುಗಳಲ್ಲಿ ಕನು ಸನ್ಯಾಲ್ ಸಮರ್ಥಿಸಿಕೊಂಡ ಪ್ರಮುಖವಾದ ಅಂಶಗಳೆಂದರೆ.

  1. ವಂಶಪಾರಂಪರ್ಯವಾಗಿ ಬೀಡು ಬಿಟ್ಟಿದ್ದ ಪಾಳೇಗಾರತನದ ಅಡಿಪಾಯ ಬಿರುಕು ಬಿಟ್ಟಿತು.
  2. ಜಮೀನ್ದಾರರ ಮನೆಯಲ್ಲಿದ್ದ ರೈತರ ಒಪ್ಪಂದ ಪತ್ರಗಳೆಲ್ಲಾ ನಾಶವಾದವು.
  3.  ಅನೈತಿಕತೆಯ ಮಾರ್ಗದಲ್ಲಿ ಶ್ರೀಮಂತ ಜಮೀನ್ದಾರರು ಮತ್ತು ಬಡ ರೈತರ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಶೂನ್ಯ ಎಂದು ಘೋಷಿಸಲಾಯಿತು.
  4. ಹಳ್ಳಿಗಳಲ್ಲಿ ಜಮೀನ್ದಾರರು ಪೋಷಿಸಿಕೊಂಡು ಬಂದಿದ್ದ ಅಮಾನವೀಯ ಮುಖದ ಎಲ್ಲಾ ಕಾನೂನು, ಕಟ್ಟಳೆಗಳನ್ನು ರದ್ದು ಪಡಿಸಲಾಯಿತು.
  5. ಮುಕ್ತವಾಗಿ ನಡೆದ ವಿಚಾರಣೆಯಲ್ಲಿ ಶೋಷಣೆ ಮಾಡುತ್ತಿದ್ದ ಜಮೀನ್ದಾರರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಲಾಯಿತು.
  6. ಜಮೀನ್ದಾರರೊಂದಿಗೆ ಬೆಳೆದು ಬಂದಿದ್ದ ಗೂಂಡಾ ಪಡೆ ಸಂಪೂರ್ಣನಾಶವಾಯಿತು.
  7. ಕೇವಲ ಬಿಲ್ಲು ಬಾಣಗಳೋಂದಿಗೆ ಸೆಣಸಾಡುತ್ತಿದ್ದ ಪ್ರತಿಭಟನಾನಿರತ ರೈತರಿಗೆ ಜಮೀನ್ದಾರರ ಮನೆಯಲ್ಲಿ ಅಪಹರಿಸಿ ತಂದ ಬಂದೂಕಗಳು ಹೊಸ ಆಯುಧಗಳಾದವು.
  8. ಜಮೀನ್ದಾರರ ಬಗ್ಗೆ ರೈತರಿಗೆ ಇದ್ದ ಭಯ ಭೀತಿ ಕಾಣದಾದವು.
  9. ರಾತ್ರಿ ವೇಳೆ  ಹಳ್ಳಗಳನ್ನು ಕಾಯಲು ರೈತರು, ಕಾರ್ಮಿಕರು ಮತ್ತು ಆದಿವಾಸಿಗಳಿಂದ ಕೂಡಿದ ಗಸ್ತು ಪಡೆಯೊಂದು ಸೃಷ್ಟಿಸಲಾಯಿತು.
  10. ಕಿಸಾನ್‌ಸಭಾ ಸಂಘಟನೆಯೊಳಗೆ ಕ್ರಾಂತಿಕಾರಿ ತಂಡವೊಂದನ್ನು ಹುಟ್ಟು ಹಾಕಲಾಯಿತು.

ಈ ಹೊರಾಟ ಕುರಿತಂತೆ ನಕ್ಸಲ್ ಚರಿತ್ರೆಯ ಸಂಪುಟಗಳನ್ನೇ ಬರೆದಿರುವ ಬಂಗಾಳಿ ಲೇಖಕ ಸಮರ್‌ಸೇನ್ ಬಣ್ಣಿಸುವುದು ಹೀಗೆ: ನಕ್ಸಲ್‌ಬಾರಿಯ ಪ್ರತಿಭಟನೆ ಎಡಪಂಥೀಯ ತತ್ವ ಸಿದ್ಧಾಂತಗಳಲ್ಲಿ ಹುದುಗಿಹೋಗಿದ್ದ ಹಲವು ಕ್ರಾಂತಿಕಾರಿ ಅಂಶಗಳನ್ನು ರೈತರ ಬಂಡಾಯದ ಮೂಲಕ ಹೊರಹಾಕಿದೆ. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಇದ್ದ ಅಂತರವನ್ನು ಇದು ಕಡಿಮೆ ಮಾಡಿತು. ತೆಲಂಗಾಣ ರೈತರ ಹೋರಾಟ ಕೂಡ ಇದಕ್ಕೆ ಪೂರಕವಾಗಿ ಪರಿಣಮಿಸಿತು. ಹಿಂಸೆಯ ಮೂಲಕ ಶೋಷಣೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಎಲ್ಲಾ ಶೋಷಿತರು ತಮ್ಮ ತಮ್ಮ ನಿಜವಾದ ಸ್ಥಾನಮಾನಗಳನ್ನು ಗುರುತಿಸಿಕೊಂಡರು. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಹೋರಾಟದ ಮೂಲಕ ಅವರು ಮತ್ತಷ್ಟು ಸದೃಢರಾದರು.

ಸಮರ್ ಸೇನ್‌ರವರ ಅತಿ ರಂಜಿತವಾದ ಈ ಹೇಳಿಕೆ ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ, ಒಂದು ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿ ನಡೆಯಬೇಕಾದ ಹೋರಾಟದ ಲಕ್ಷಣಗಳನ್ನು ನಕ್ಸಲ್‌ಬಾರಿಯ ಹೋರಾಟ ಒಳಗೊಂಡಿರಲಿಲ್ಲ. ಜೊತೆಗೆ ಅದು ಸಿಲಿಗುರಿ ಪ್ರಾಂತ್ಯದ ಎಲ್ಲಾ ಸಮೂಹದ ಚಳವಳಿಯಾಗಿರಲಿಲ್ಲ. ಎಲ್ಲಾ ವರ್ಗದ ಭಾವನೆಗಳನ್ನು ಕ್ರೋಢೀಕರಿಸುವಲ್ಲಿ ಹೋರಾಟ ವಿಫಲವಾಯಿತು. ಜಮೀನ್ದಾರರ ಶೋಷಣೆಯ ಬಗ್ಗೆ ನ್ಯಾಯ ಪಡೆಯಲು ಪರ್ಯಾಯ ಮಾರ್ಗಗಳಿದ್ದರೂ ಕೂಡ ಕಾನೂನನ್ನು ಸ್ವತಃ ರೈತರು, ಆದಿವಾಸಿಗಳು ಕೈಗೆತ್ತಿಕೊಂಡಿದ್ದು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಒಪ್ಪುವಂತಹ ಸಂಗತಿಗಳಲ್ಲ. 1919 ರಿಂದ ಭಾರತದಲ್ಲಿ ಬೇರು ಬಿಟ್ಟು, ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳ ಅಡಿಯಲ್ಲಿ ಸಾಗಿದ್ದ ಕಮ್ಯೂನಿಷ್ಟ್ ಪಕ್ಷಕ್ಕೆ ಚೀನಾದ ಮಾವೋತ್ಸೆ ತುಂಗನ ಉಗ್ರವಾದಿ ನಿಲುವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ಇದನ್ನು ಮಾವೋನ ಮಾತುಗಳಲ್ಲಿ ಹೇಳಬಹುದಾದರೆ, ನಮ್ಮ ಕಾಲುಗಳಿಗೆ ತಕ್ಕಂತೆ ಪಾದರಕ್ಷೆಗಳು ಇರಬೇಕೆ ಹೊರತು, ಪಾದರಕ್ಷೆ ಅಳತೆಗೆ ನಮ್ಮ ಕಾಲಿನ ಪಾದಗಳನ್ನು ಕತ್ತರಿಸಿಕೊಳ್ಳಬಾರದು. ನಕ್ಸಲ್‌ಬಾರಿಯ ಘಟನೆಯಲ್ಲಿ ಆದದ್ದು ಕೂಡ ಇದೇ ಸಂಗತಿ.

(ಮುಂದುವರೆಯುವುದು)

ಬೆತ್ತಲಾದರು, ನಮ್ಮ ಕರ್ನಾಟಕದ ನಕಲಿ ಬಸವಣ್ಣ


– ಡಾ.ಎನ್. ಜಗದೀಶ್ ಕೊಪ್ಪ


 

ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್‌ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ  ಅಧ್ಯಾಯ ಆರಂಭಗೊಂಡಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ  ಎಂದು.

ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್‌ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.

ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.

ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು  ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.

ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.

ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.

ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?

ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ? 

ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.

ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.

ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.


ಕಳೆದ ಶುಕ್ರವಾರ Central Empowered Committee ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನಮ್ಮ ಓದುಗರಿಗೆ ಇಲ್ಲಿ ಲಭ್ಯವಿದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-17)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಾಹ್ನದವರೆಗೆ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಂಡ ಕಾರ್ಬೆಟ್‌, ಭೋಜನದ ನಂತರ ಬದ್ರಿಯನ್ನು ಕರೆದುಕೊಂಡು ಮತ್ತೇ ಹೋರಿಯ ಕಳೇಬರವಿದ್ದ ಸ್ಥಳಕ್ಕೆ ಧಾವಿಸಿದ. ಕಳೆದ ರಾತ್ರಿ ಮಳೆ ಬಿದ್ದ ಪರಿಣಾಮ ಹುಲಿಯ ಹೆಜ್ಜೆಗುರುತುಗಳು ಒದ್ದೆ ನೆಲದ ಮೇಲೆ ಮೂಡಿದ್ದವು. ಈ ನರಭಕ್ಷಕ ಕೂಡ ವಯಸ್ಸಾದ ಹುಲಿ ಎಂಬುದನ್ನ ಕಾರ್ಬೆಟ್‌ ಹೆಜ್ಜೆ ಗುರುತಿನ ಮೂಲಕ ಖಚಿತಪಡಿಸಿಕೊಂಡ. ಕಳೆದ ರಾತ್ರಿ ತನ್ನ ಮೇಲೆ ಎರಗಲು ಪ್ರಯತ್ನಿಸಿದ್ದ ಸ್ಥಳದಿಂದ ಅನತಿ ದೂರದ ಪೊದೆಯೊಂದಕ್ಕೆ ನಡೆದು ಹೋಗಿರುವ ಗುರುತು ಪತ್ತೆ ಹಚ್ಚಿದ ಕಾರ್ಬೆಟ್‌ಗೆ ನರಭಕ್ಷಕ ಹತ್ತಿರದಲ್ಲೇ ವಿಶ್ರಾಂತಿ ಪಡೆಯುತ್ತಿದೆ ಎಂಬುದು  ಖಾತರಿಯಾಯಿತು. ಇದನ್ನು ಕೂಡ ಚಂಪಾವತ್ ನರಭಕ್ಷಕನನ್ನು ಕೊಂದ ರೀತಿಯಲ್ಲೇ ಗ್ರಾಮಸ್ಥರ ಸಹಾಯದಿಂದ ಬೇಟೆಯಾಡಬೇಕು ಎಂದು ನಿರ್ಧರಿಸಿದ ಅವನು, ಬದ್ರಿಯ ಜೊತೆ ವಾಪಸ್ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದ

ಸಂಜೆ ಕತ್ತಲಾಗುವ ಮುನ್ನವೇ ನರಭಕ್ಷಕನನ್ನು ಬೇಟೆಯಾಡಬೇಕು ಎಂದು ನಿರ್ಧಾರವಾದ ಕೂಡಲೇ ಹುಲಿಯನ್ನು ಬೆದರಿಸಲು ಒಂದಷ್ಟು ಜನರನ್ನು ಕಲೆ ಹಾಕಲು ನಿರ್ಧರಿಸಿದ ಕಾರ್ಬೆಟ್‌ ಮುಕ್ತೇಶ್ವರದ ಅಂಚೆಕಛೇರಿ ಬಳಿ ಬಂದು ಜನರಿಗೆ ಪರಿಸ್ಥಿತಿಯನ್ನು ವಿವರಿಸಿದ. ನಂತರ  ಬದ್ರಿಯ ನೆರವಿನೊಂದಿಗೆ ಮುವತ್ತು ಜನರನ್ನು ಕರೆದುಕೊಂಡು ತನ್ನ ಸಹಾಯಕರೊಡನೆ ನರಭಕ್ಷಕ ಮಲಗಿದ್ದ ಪೊದೆಯತ್ತ ಹೆಜ್ಜೆ ಹಾಕತೊಡಗಿದ..ಕಳೆದ ರಾತ್ರಿಯ ಭೀಕರ ಅನುಭವ ಅವನಲ್ಲಿ ನರಭಕ್ಷಕ ಹುಲಿಯನ್ನು ಕೂಡಲೇ ಬೇಟೆಯಾಡಬೇಕೆಂಬ ಆಕ್ರೋಶವನ್ನು ಹೆಚ್ಚಿಸಿತ್ತು.

ಹೋರಿಯ ಕಳೇಬರವಿದ್ದ ಸುಮಾರು 100 ಅಡಿ ದೂರದಲ್ಲಿ ದಟ್ಟವಾದ ಪೊದೆಯೊಳಗೆ ನರಭಕ್ಷಕ ಆಶ್ರಯ ಪಡೆದಿತ್ತು. ಸಮತಟ್ಟಾದ ನೆಲದಿಂದ ದೂರದಲ್ಲಿ ಸ್ವಲ್ಪ ಇಳಿಜಾರಿನಿಂದ ಕೂಡಿದ್ದ ಆ ಸ್ಥಳದಿಂದ ಯಾವುದೇ ಕಾರಣಕ್ಕೂ ಹುಲಿ ನುಸುಳಿ ಮತ್ತೆ ಬಯಲು ಪ್ರದೇಶಕ್ಕೆ ಹೋಗಬಾರದೆಂದು ಗ್ರಾಮಸ್ಥರಿಗೆ ಎಚ್ಚರಿಸಿ ಎಲ್ಲರನ್ನೂ ಆ ತಗ್ಗು ಪ್ರದೇಶದ ಮೇಲ್ಭಾಗದಲ್ಲಿ ರಕ್ಷಣೆಗಾಗಿ ನಿಲ್ಲಿಸಿದ. ಅದೇ ವೇಳೆ ತನ್ನ ಸಹಾಯಕ ಗೋವಿಂದಸಿಂಗ್ ಎಂಬಾತನಿಗೆ ಕಾರ್ಬೆಟ್‌ ಸೂಚನೆ ನೀಡುತಿದ್ದಾಗ, ಕಾರ್ಬೆಟ್‌ ನಿಂತಿದ್ದ ಸ್ಥಳದ ಹಿಂಬದಿಯಲ್ಲಿ 400 ಅಡಿಯ ದೂರದಲ್ಲಿ ನರಭಕ್ಷಕ ಮೇಲಿನ ಸಮತಟ್ಟಾದ ಪ್ರದೇಶದಲ್ಲಿದ್ದ ಕುರುಚಲು ಗಿಡಗಳ ನಡುವೆಯಿಂದ ಮತ್ತೆ ತನ್ನ ಬೇಟೆಯ ಆಹಾರವಿದ್ದ ಸ್ಥಳದತ್ತ ತೆರಳುತ್ತಿರುವುದನ್ನು ಗಮನಿಸಿದ ಗೋವಿಂದಸಿಂಗ್,  ಈ ಬಗ್ಗೆ ಏನೂ  ಮಾತನಾಡದೆ ಬರೀ ಕಣ್ಣಿನಲ್ಲೇ ಕಾರ್ಬೆಟ್‌ಗೆ ಸೂಚನೆ ನೀಡಿದ. ಆಶ್ಚರ್ಯ ಮತ್ತು ಕುತೂಹಲದಿಂದ ಹಿಂತಿರುಗಿ ನೋಡಿದ ಕಾರ್ಬೆಟ್‌ಗೆ  ಗಿಡಗಳ ನಡುವೆ ನಿಧಾನವಾಗಿ ತೆವಳುತ್ತಾ , ಪೊದೆಯತ್ತ ಸಾಗುತಿದ್ದ ನರಭಕ್ಷಕನ ದರ್ಶನವಾಯಿತು.  ಕೂಡಲೇ ಯಾರೊಬ್ಬರೂ ಗದ್ದಲ ಮಾಡಬಾರದೆಂದು ಎಲ್ಲರಿಗೂ ತುಟಿಯ ಮೇಲೆ ಬೆರಳಿಟ್ಟು ಮೌನವಾಗಿ ಎಚ್ಚರಿಸಿ. ತನ್ನ ಜೋಡು ನಳಿಕೆಯ ಬಂದೂಕದೊಂದಿಗೆ ಕಾರ್ಬೆಟ್‌ ಪೊದೆಯತ್ತ ಮೆಲ್ಲ ಮೆಲ್ಲನೆ ಹೆಜ್ಜೆ ಇರಿಸುತ್ತಾ ನಡೆದ.
 
ನರಭಕ್ಷಕ ವಿಶ್ರಾಂತಿ ಪಡೆಯುತಿದ್ದ ಜಾಗದ ಸುತ್ತಮುತ್ತ ಲಂಟಾನದ ಗಿಡಗಳು ದಟ್ಟವಾಗಿ ಬೆಳೆದುನಿಂತ ಕಾರಣ ಕಾರ್ಬೆಟ್‌ ಗಿಡಗಳ ಕೆಳಗೆ ತೂರಿ ಸುರಂಗ ಮಾರ್ಗದಲ್ಲಿ ಚಲಿಸುವಂತೆ ತೆವುಳುತ್ತಾ ಸಾಗತೊಡಗಿದ. ಅತ್ಯಂತ ಕಡಿದಾಗಿದ್ದ ಆ ಜಾಗದಲ್ಲಿ ಒಮ್ಮೆ ಅವನ ಹಿಡಿತಕ್ಕೆ ಯಾವ ಗಿಡದ ಆಸರೆಯೂ ಸಿಗದೆ ಕೆಳಕ್ಕೆ ಜಾರಿದಾಗ ಅವನು ಧರಿಸಿದ್ದ ಹ್ಯಾಟ್ ಗಿಡಗಳ ನಡುವೆ ಸಿಕ್ಕಿ ಹಾಕಿಕೊಂಡಿತು. ಕೊನೆಗೆ ಒಂಡು ಗಿಡದ ಬೇರನ್ನು ಬಲವಾಗಿ ಹಿಡಿದುಕೊಂಡು ಕಾರ್ಬೆಟ್‌ ಸಾವರಿಸಿಕೊಳ್ಳತಿದ್ದಂತೆ, ಪಕ್ಕೆದ ಪೊದೆಯಲ್ಲಿ ಕೇವಲ 40 ಅಡಿ ದೂರದಲ್ಲಿ ನರಭಕ್ಷಕ ಮೂಳೆ ಜಗಿಯುತ್ತಿರುವ ಸದ್ದು ಕೇಳ ಬರತೊಡಗಿತು. ಶಬ್ದ ಬರುತಿದ್ದ ದಿಕ್ಕಿನತ್ತ ನೋಡುತ್ತಾ, ಬಂದೂಕವನ್ನು ಎದಗೇರಿಸಿದ ಕಾರ್ಬೆಟ್‌ ನರಭಕ್ಷಕ ಕುಳಿತಿರುವ ಸುಳಿವನ್ನು ಪತ್ತೆ ಹಚ್ಚುವ ಸಲುವಾಗಿ ಮೆಲ್ಲ ಮೆಲ್ಲನೆ ಕುಳಿತ ಸ್ಥಿತಿಯಲ್ಲಿ ಕದಲತೊಡಗಿದ. ಅದೇ ವೇಳೆಗೆ ಹಿಂಬದಿಯಲ್ಲಿ ಸಹಾಯಕ  ಗೋವಿಂದಸಿಂಗ್ ಗಿಡದಲ್ಲಿ ಸಿಲುಕಿದ್ದ  ಕಾರ್ಬೆಟ್‌ನ ಹ್ಯಾಟ್‌ನೊಂದಿಗೆ ಅಲ್ಲಿಗೆ ಹಾಜರಾದ. ಅವನನ್ನು ಹಿಂದಕ್ಕೆ ತಳ್ಳಿದ ಕಾರ್ಬೆಟ್‌ ಮಾತನಾಡುವುದಿರಲಿ, ಉಸಿರು ಕೂಡ ಬಿಡದಂತೆ ಸನ್ನೆ ಮೂಲಕ ಅವನಿಗೆ ಎಚ್ಚರಿಸಿದ.

ನರಭಕ್ಷಕ ಕುಳಿತಿದ್ದ ಜಾಗಕ್ಕೆ ಇಪ್ಪತ್ತು ಅಡಿ ಅಂತರವಿರುವಷ್ಟು ಸನಿಹಕ್ಕೆ ಬಂದ ಕಾರ್ಬೆಟ್‌ ಒಂದು ಅಂದಾಜಿನ ಮೇಲೆ ಮೂಳೆಯ ಜಗಿಯುವಿಕೆ ಶಬ್ದವನ್ನೇ ಗುರಿಯಾಗಿಸಿಕೊಂಡು ಬಂದೂಕದಿಂದ ಗುಂಡು ಹಾರಿಸಿದ. ದುರದೃಷ್ಟವಶಾತ್ ಅದು ನರಭಕ್ಷನಿಂದ ಕೇವಲ ಅರ್ಧ ಅಡಿ ದೂರದಲ್ಲಿ ಹಾಯ್ದು ಹೋಗಿ ಮರವೊಂದಕ್ಕೆ ಬಡಿಯಿತು. ಗುಂಡಿನ ಶಬ್ದಕ್ಕೆ ಬೆಚ್ಚುವ ಬದಲು ಕೆರಳಿ ನಿಂತ ನರಭಕ್ಷಕ ಘರ್ಜಿಸುತ್ತಾ ಸುತ್ತೆಲ್ಲಾ ನೋಡತೊಡಗಿತು.

ನರಭಕ್ಷಕ ಮನುಷ್ಯ ವಾಸನೆಯನ್ನು ಗ್ರಹಿಸಿ ತನ್ನತ್ತಾ ಬರುತ್ತಿರುವುದನ್ನು ಗಮನಿಸಿದ ಕಾರ್ಬೆಟ್‌ ನಿಧಾನವಾಗಿ ಹಿಂದಕ್ಕೆ ಚಲಿಸಿ ಕಲ್ಲು ಬಂಡೆಯೊಂದನ್ನು ತನ್ನ ಬೆನ್ನಿಗೆ ಆಸರೆಯಾಗ್ಟ್ಟುಕೊಂಡು ಕಾಯತೊಡಗಿದ. ಕೆಲವೇ ಕ್ಷಣಗಳಲ್ಲಿ ಅವನ ಎದರು ನರಭಕ್ಷಕ ಪ್ರತ್ಯಕ್ಷವಾಗಿಬಿಟ್ಟಿತು.  ಕೇವಲ ಆರು ಅಡಿಯಷ್ಟು ಹತ್ತಿರ ಬಂದು ಮುಖಾಮುಖಿಯಾದ ಇದನ್ನು ಹೊಡೆಯಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ಕಾರ್ಬೆಟ್‌ ಎದೆಗುಂದದೆ ತಕ್ಷಣವೇ ಗುಂಡು ಹಾರಿಸಿದ. ಗುಂಡು ನೇರವಾಗಿ ನರಭಕ್ಷಕ ಕುತ್ತಿಗೆಯ ಹಿಂಭಾಗಕ್ಕೆ ತಗುಲಿತು. ಅತಿ ಸನಿಹದಿಂದ ಗುಂಡು ಹಾರಿಸಿದ ಪರಿಣಾಮ ಒಂದೇ ಗುಂಡಿಗೆ ಅದು ನರಳಾಟ ಅಥವಾ ಯಾವುದೇ ಚೀತ್ಕಾರವಿಲ್ಲದೆ ದೊಪ್ಪನೆ ನೆಲಕ್ಕೆ ಉರುಳಿಬಿತ್ತು. ಗುಂಡು ನರಭಕ್ಷಕನ ದೇಹವನ್ನು ಸೀಳಿ ಹೊರಗೆ ಹಾರಿ ಹೋಗಿತ್ತು. ಕಾರ್ಬೆಟ್‌ ತನ್ನ ಸಹಾಯಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನರಭಕ್ಷನನ್ನು ಪರಿಶೀಲಿಸಿದಾಗ ಅದು ಒಂಟಿ ಕಣ್ಣಿನ ಮುದಿಯಾದ ಹೆಣ್ಣು ಹುಲಿಯಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಈ ಹೆಣ್ಣು ಹುಲಿ ಪೊದೆಯಲ್ಲಿ ಕುಳಿತು ಕಾಡುಕೋಳಿಗಳನ್ನು ಬೇಟೆಯಾಡುತಿತ್ತು ಇಂತಹದ್ದೇ ಒಂದು ಸಂದರ್ಭದಲ್ಲಿ ಪೊದೆಯ ಬಳಿ ಕಟ್ಟಿಗೆ ಅರಸಲು ಬಂದ ಮಹಿಳೆಯನ್ನು ಬಲಿ ತೆಗೆದುಕೊಂಡು.ನಂತರ ಇದು ತನ್ನ ಬೇಟೆಗಾಗಿ ಮನುಷ್ಯರನ್ನು ಬೆನ್ನಟ್ಟಿ ನಾಲ್ವರನ್ನು  ಬಲಿ ತೆಗೆದುಕೊಂಡಿತ್ತು.

ಈ ನರಭಕ್ಷಕನ ಶಿಕಾರಿಯ ನಂತರ ಪನಾರ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಚಿರತೆ ಕಾಣಿಸಿಕೊಂಡು ಮನುಷ್ಯರನ್ನು ಬೇಟೆಯಾಡುತ್ತಿರುವ ಸುದ್ಧಿ ಮತ್ತೆ ಕಾರ್ಬೆಟ್‌ಗೆ ತಲುಪಿತು . ಹಲವಾರು ವೈಯಕ್ತಿಕ ಕೆಲಸಗಳ ಒತ್ತಡದ ನಡುವಯೂ ಕೂಡೆ ಪನಾರ್ ಎಂಬ ಸಣ್ಣ ಹಳ್ಳಿಗೆ ಬೇಟಿ ನೀಡಿದ ಕಾರ್ಬೆಟ್‌ ಪಕ್ಕದ ಡೊಲ್ ಎಂಬ ಹಳ್ಳಿಯಲ್ಲಿದ್ದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡ.

ಪನಾರ್ ಹಳ್ಳಿಯ ಹತ್ತಿರದ ಗುಡ್ಡವೊಂದನ್ನು ತನ್ನ ನೆಲೆಯಾಗಿಸಿಕೊಂಡಿದ್ದ ಚಿರತೆ ರಾತ್ರಿಯ ವೇಳೆ ಮನುಷ್ಯರನ್ನು ಬೇಟೆಯಾಡುತಿತ್ತು. ಕಾರ್ಬೆಟ್‌ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ದಿನವೇ ಚಿರತೆ ಮಹಿಳೆಯೊಬ್ಬಳನ್ನು ಕೊಂದು ಗುಡ್ಡಕ್ಕೆ ಹೊತ್ತೊಯ್ದು ತಿಂದು ಹಾಕಿತ್ತು. ಪನಾರ್ ಹಳ್ಳಿಯ ಯುವ ರೈತನೊಬ್ಬ ರಾತ್ರಿ ತನ್ನ ಮನೆಯ ಬಾಗಿಲು ತೆರದು ಮಲಗಿದ್ದಾಗ ಆತನ ಹದಿನೆಂಟು ವರ್ಷದ ಹೆಂಡತಿಯನ್ನ ನರಭಕ್ಷಕ ಚಿರತೆ ಬಲಿತೆಗೆದುಕೊಂಡಿತ್ತು. ಮರುದಿನ ಮನೆಗೆ ಬೇಟಿ ನೀಡಿದ ಕಾರ್ಬೆಟ್‌ ರಾತ್ರಿ ಆ ಮನೆಯಲ್ಲಿ ಉಳಿದುಕೊಂಡು ಚಿರತೆಯ ಬೇಟೆಗಾಗಿ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಎರಡು ದಿನ ಹಳ್ಳಿಯಲ್ಲಿದ್ದು ಬೇಟೆಯಾಡದೇ ಬರಿಗೈಲಿ ವಾಪಸ್ ನೈನಿತಾಲ್‌ಗೆ ಬಂದ ಕಾರ್ಬೆಟ್‌ ಮರುದಿನ ಮೊಕಮೆಘಾಟ್‌ಗೆ ತೆರಳಿದ.

ಆದರೆ, ಡಿಸಂಬರ್ ತಿಂಗಳಿನ ಕ್ರಿಸ್‌ಮಸ್ ರಜೆಗೆ ನೈನಿತಾಲ್‌ನ ತನ್ನ ಮನೆಗೆ ಬಂದ ಸಂದರ್ಭದಲ್ಲಿ ಸೊನೌಲಿ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡ ನರಭಕ್ಷಕ ಚಿರತೆಯೊಂದನ್ನು ಬೇಟೆಯಾಡಿ ಹಳ್ಳಿಯ ಜನರನ್ನು ಪ್ರಾಣಾಪಾಯದಿಂದ ಕಾಪಾಡಿದ. ಚಿರತೆ ಹಳ್ಳಿಗೆ ಬರುತಿದ್ದ ದಾರಿಯಲ್ಲಿ ರಾತ್ರಿ ವೇಳೆ ಮೇಕೆಯೊಂದನ್ನು ಕಟ್ಟಿ ಅದರ ಮೂಲಕ ಚಿರತೆಯನ್ನ ಆಕರ್ಷಿಸಿ ಒಂದೇ ರಾತ್ರಿಯಲ್ಲಿ ನರಭಕ್ಷಕನನ್ನು ಕಾರ್ಬೆಟ್‌ ಬೇಟೆಯಾಡಿದ. ಈ ಎಲ್ಲಾ ಘಟನೆಗಳಿಂದ 1907 ರಿಂದ 1910ರವರೆಗೆ ಉತ್ತರ ಹಿಮಾಲಯದಲ್ಲಿ ಜನಸಾಮಾನ್ಯರ ಪಾಲಿಗೆ ದುಸ್ವಪ್ನವಾಗಿದ್ದ  ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಬೇಟೆಯಾಡಿದ ಕೀರ್ತಿ ಕಾರ್ಬೆಟ್‌ಗೆ ಸಲ್ಲಿತು. ಜಿಮ್ ಕಾರ್ಬೆಟ್‌ನ ಈ ಮಾನವೀಯ ಗುಣದ ಸೇವೆಯಿಂದಾಗಿ ಅಂದು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಅವನನ್ನು ವಿಶೇಷ ಗಣ್ಯ ವ್ಯಕ್ತಿ ಎಂದು ಪರಿಗಣಿಸಿ ಗೌರವಿಸತೊಡಗಿತು. ಈ ಕಾರಣಕ್ಕಾಗಿ ಬೇಸಿಗೆಯ ದಿನಗಳಲ್ಲಿ ಮಸ್ಸೂರಿ ಅಥವಾ ನೈನಿತಾಲ್‌ಗೆ ಭೇಟಿ ನೀಡುತಿದ್ದ ವೈಸ್ರಾಯ್ ಮತ್ತು ಅವರ ಕುಟುಂಬ ಕಾರ್ಬೆಟ್‌‌ನ ಅತಿಥಿಗಳಾಗಿ ಅವನ ಮನೆಯಲ್ಲಿ ಉಳಿದುಕೊಳ್ಳುತಿದ್ದರು.

ಸೋಜಿಗದ ಸಂಗತಿಯೆಂದರೆ, ಇವತ್ತಿಗೂ ನೈನಿತಾಲ್ ಗಿರಿಧಾಮದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ. ಅಲ್ಲಿ ಕಾಡುದಾರಿಯಲ್ಲಿ ಪುಟ್ಟದಾದ ಹನುಮಾನ್ ದೇವಾಲಯಗಳಿವೆ. ಜೊತೆಗೆ ಕೆಲವು ದೇವಸ್ಥಾನಗಳಲ್ಲಿ ಜಿಮ್ ಕಾರ್ಬೆಟ್‌ನ ಕಪ್ಪು ಬಿಳುಪಿನ ಫೋಟೊಗಳಿವೆ. ಕಾಡುಪ್ರಾಣಿಗಳಿಂದ ಹನುಮಾನ್  ಮತ್ತು ಕಾರ್ಪೆಟ್ (ಕಾರ್ಬೆಟ್‌) ಸಾಹೇಬ್ ನಮ್ಮನ್ನು ರಕ್ಷಿಸಿಸುತಿದ್ದಾರೆ ಎಂದು ಅಲ್ಲಿನ ಜನ ನಂಬಿಕೊಂಡಿರುವುದನ್ನು ಈಗಲೂ ನಾವು ಕಾಣಬಹುದು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-3)


– ಡಾ.ಎನ್.ಜಗದೀಶ್ ಕೊಪ್ಪ


 

ಬರ್ದಾನ್ ಜಿಲ್ಲೆಯ ಸಮಾವೇಶದಿಂದ ಸಿಲಿಗುರಿಗೆ ಹಿಂತಿರುಗಿದ ಚಾರು ಮುಜಂದಾರ್ ಮತ್ತು ಅವನ ಸಂಗಡಿಗರು, ತಾವು ಕಮ್ಯೂನಿಷ್ಟ್ ಪಕ್ಷದ ಮುಂದೆ ಇರಿಸಿದ್ದ ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರಲು ತಕ್ಷಣವೇ ಮುಂದಾದರು. ಇದೊಂದು ರೀತಿಯಲ್ಲಿ ಎಲ್ಲಾ ಅಸಮಾನತೆ, ದೌರ್ಜನ್ಯಗಳ ವಿರುದ್ಧ ಯುದ್ಧ ಘೋಷಿಸುವ ಮನಸ್ಥಿತಿಯಲ್ಲಿ ಇದ್ದಂತೆ ತೋರುತ್ತಿತ್ತು.

ಚಾರು ಯೋಜಿಸಿದ್ದ ಕನಸಿನ ರೂಪುರೇಷೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್, ಮುಂದಾಗಿ ಸಿಲಿಗುರಿ ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಸಂಘಟಿಸತೊಡಗಿದರು. ಜಂಗಲ್ ಸಂತಾಲ್ ಮೂಲತಃ ಸಂತಾಲ್ ಬುಡಕಟ್ಟು ಜನಾಂಗದಿಂದ ಬಂದವನಾದ್ದರಿಂದ ಸಂಘಟಿಸುವ ಕೆಲಸ ಅವನಿಗೆ ಕಷ್ಟವೆನಿಸಲಿಲ್ಲ. ಏಕೆಂದರೆ, ಜಮೀನ್ದಾರರ ಬಳಿ ಇರುವ ಹೆಚ್ಚುವರಿ ಭೂಮಿ ಹಾಗೂ ಸರ್ಕಾರ ಶ್ರೀಮಂತ ಜಮೀನ್ದಾರರಿಂದ ವಶಪಡಿಸಿಕೊಂಡಿರುವ ಭೂಮಿ ಈ ನೆಲದ ಭೂಹೀನರಿಗೆ ಸಲ್ಲಬೇಕು ಎಂಬ ಈ ಮೂವರ ಘೋಷಣೆ ಆದಿವಾಸಿಗಳನ್ನು ಸಮ್ಮೋಹನಗೊಳಿಸಿತು.

ಕಿಸಾನ್‌ಸಭಾ ಸಂಘಟನೆಗೆ ಸದಸ್ಯರಾಗ ಬಯಸುವವರು, ನಾಲ್ಕಾಣೆ (25ಪೈಸೆ) ನೀಡಿ ಸದಸ್ಯತ್ವ ಪಡೆಯಬೇಕಿತ್ತು. ಕಾಡಿನ ನಡುವೆ ಭೂಮಿಯ ಬಗ್ಗೆಯಾಗಲಿ, ಬೇಸಾಯದ ಬಗ್ಗೆಯಾಗಲಿ ಎಂದೂ ಕನಸು ಕಾಣದೆ ಬದುಕಿದ್ದ ಸಂತಾಲ್ ಮತ್ತು ರಾಜ್ಬನ್ಸಿ ಎಂಬ ಬುಡಕಟ್ಟು ಜನಾಂಗಕ್ಕೆ ಕಣ್ಣಮುಂದೆ ಬೃಹತ್ತಾದ ಆಶಾಗೋಪುರ ನಿರ್ಮಾಣವಾಗತೊಡಗಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಸದಸ್ಯರ ಸಂಖ್ಯೆ 40 ಸಾವಿರ ಮುಟ್ಟಿತು. ಈ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೇಸ್ ಮತ್ತು ಕಮ್ಯುನಿಷ್ಟ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ತನ್ನ ರಾಜ್ಯದ ಉತ್ತರ ಭಾಗದಲ್ಲಿ ಆದಿವಾಸಿಗಳು, ಜಮೀನ್ದಾರರ ವಿರುದ್ಧ ಸಂಘಟಿತರಾಗುತ್ತಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಇತ್ತಾದರೂ ಅನಿರೀಕ್ಷಿತ ಕ್ರಾಂತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.

1967 ರ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಂಘಟಿತರಾದ ಆದಿವಾಸಿ ರೈತರು, ಮತ್ತು ಕಾರ್ಮಿಕರು ತಮ್ಮ ಬಿಲ್ಲು ಬಾಣಗಳೊಂದಿಗೆ ಜಮೀನ್ದಾರರ ಮನೆಗೆ ದಾಳಿ ಇಟ್ಟು ಅವರ ಮನೆಯಲ್ಲಿದ್ದ ಭೂದಾಖಲೆಗಳು. ದವಸಧಾನ್ಯ ಮತ್ತು ಬಂದೂಕಗಳನ್ನು ವಶಪಡಿಸಿಕೊಂಡರು. ಶ್ರೀಮಂತರ ಮನೆಯಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಭತ್ತ ಹಾಗೂ ಇತರೆ ದವಸಧಾನ್ಯಗಳನ್ನು ಎಲ್ಲರೂ ಸಮನಾಗಿ ಹಂಚಿಕೊಂಡು ಉಳಿದುದ್ದನ್ನು ಕಿಸಾನ್ ಸಂಘಟನೆಯ ಸದಸ್ಯರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಿದರು. ಮೂರು ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ದಾಳಿಗಳು ನಡೆದವು. ಈ ಎಲ್ಲಾ ದಾಳಿಗಳು ಚಾರು ಮುಜಂದಾರ್ ರೂಪಿಸಿದ್ದ ಮಾದರಿಯಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ನೇತೃತ್ವದಲ್ಲಿ ನಡೆದವು. ಈ ಅನಿರೀಕ್ಷಿತ ಪ್ರತಿಭಟನೆ ಮತ್ತು ದಾಳಿಯಿಂದ ಕಂಗಾಲಾದ ಸಿಲಿಗುರಿ ಜಿಲ್ಲಾಡಳಿತ ಸರ್ಕಾರದ ಮಾರ್ಗದರ್ಶನಕ್ಕಾಗಿ ಕೊಲ್ಕತ್ತಾದತ್ತ ಮುಖ ಮಾಡಿಕುಳಿತುಬಿಟ್ಟಿತ್ತು.

ಹಿಂಸಾಚಾರ ಮತ್ತು ಪ್ರತಿಭಟನೆಗೆ ಕಾರಣರಾದವರನ್ನು ಬಂಧಿಸುವ ಸ್ಥೈರ್ಯ ಜಿಲ್ಲಾಡಳಿತಕ್ಕೆ ಇರಲಿಲ್ಲ. ಅಂತಿಮವಾಗಿ ಪಶ್ಚಿಮ ಬಂಗಾಳ ಸರ್ಕಾರ ಕಂದಾಯ ಇಲಾಖೆ ಸಚಿವ ಹರಿಕೃಷ್ಣಕೊನರ್‌ನನ್ನು ಸಿಲಿಗುರಿಗೆ ಕಳಿಸಿಕೊಟ್ಟಿತು. ಸರ್ಕಾರ ಮತ್ತು ಪ್ರತಿಭಟನಾಗಾರರ ನಡುವೆ ಹಲವು ಸುತ್ತಿನ ಸಂಧಾನದ ಮಾತುಕತೆಯ ನಂತರ ಮೇ 17 ರಂದು ಸುಕ್ನಾ ಅರಣ್ಯದ ಪ್ರದೇಶದ ಅತಿಥಿಗೃಹದಲ್ಲಿ ಸಚಿವನನ್ನು ಪ್ರತಿಭಟನಾಗಾರರ ಪರವಾಗಿ ಕನುಸನ್ಯಾಲ್ ಭೇಟಿಯಾಗುವುದು ಎಂಬ ಒಡಂಬಡಿಕೆಗೆ ಬರಲಾಯಿತು. ಇದಕ್ಕೂ ಮುನ್ನ ಎರಡು ಬಣಗಳ ನಡುವೆ ಹಲವು ಒಪ್ಪಂದಕ್ಕೆ ಬರಲಾಗಿತ್ತು. ಅವುಗಳಲ್ಲಿ ಸಂಧಾನದ ವೇಳೆ ಕಿಸಾನ್ ಸಭಾ ಘಟಕಗಳಿಂದ ಯಾವುದೇ ದಾಳಿ, ಲೂಟಿ, ಹಿಂಸಾಚಾರ ನಡೆಯಕೂಡದು, ಅದೇ ರೀತಿ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಕನುಸನ್ಯಾಲ್‌ನನ್ನು ಬಂಧಿಸಕೂಡದು. ಎಂಬ ಅಂಶಗಳು ಮುಖ್ಯವಾಗಿದ್ದವು.

ಕನುಸನ್ಯಾಲ್ ಬಂಗಾಳದ ಕಂದಾಯ ಸಚಿವನನ್ನು ಭೇಟಿಯಾದಾಗ, ಸರ್ಕಾರದ ಪರವಾಗಿ, ವಿಷಯಗಳನ್ನು ಪ್ರಸ್ತಾಪಿಸಿದ ಸಚಿವ ಹರೆಕೃಷ್ಣಕೊನರ್, ನಿಗದಿತ ದಿನದೊಳಗೆ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗಬೇಕು ಮತ್ತು ಪೊಲೀಸ್ ನೀಡುವ ಪಟ್ಟಿಯಲ್ಲಿ ಹೆಸರಿರುವ ಆದಿವಾಸಿ ಮುಖಂಡರನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟ. ತಕ್ಷಣಕ್ಕೆ ಇವುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕನುಸನ್ಯಾಲ್ ಸಂಗಡಿಗರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಸಂಧಾನದ ಸಭೆಯಿಂದ ಎದ್ದು ಬಂದ.

ನಂತರ ಚಾರು ಮುಜುಂದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಬೇಡಿಕೆಗಳಿಗೆ ಕಿಸಾನ್‌ಸಭಾ ನಾಯಕರಿಂದ ಮತ್ತು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರದ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಶರಣಾಗತಿಗೆ ಸರ್ಕಾರ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ , ಸಿಲಿಗುರಿಯ ಜಿಲ್ಲಾಡಳಿತ ಹೆಚ್ಚುವರಿ ಪೊಲೀಸ್ ಪಡೆಗಳ ನೆರವಿನಿಂದ ನಕ್ಸಲ್‌ಬಾರಿ ಹಳ್ಳಿಯ ಮೇಲೆ ದಾಳಿ ಮಾಡಿ ನಾಯಕರನ್ನು ಬಂಧಿಸಲು ಮುಂದಾಯಿತು.

ಮೇ 23 ರಂದು ಪೊಲೀಸ್ ಅಧಿಕಾರಿ ಸೊನಮ್‌ವಾಂಗಡಿ ನೇತೃತ್ವದ ತಂಡ ಹಳ್ಳಿಗೆ ಆಗಮಿಸುತ್ತಿದೆ ಎಂಬ ಸುಳಿವು ದೊರೆತ ಕೂಡಲೇ ಹಳ್ಳಿಯ ಗಂಡಸರು ತಮ್ಮ ಬಿಲ್ಲು ಬಾಣಗಳ ಸಹಿತ ಹಳ್ಳಿಯನ್ನು ತೊರೆದು ಪಕ್ಕದ ಗುಡ್ಡ ಗಾಡಿನ ಪೊದೆಗಳಲ್ಲಿ ಅವಿತು ಕುಳಿತರು. ಹಳ್ಳಿಯಲ್ಲಿ ಯಾವೊಬ್ಬ ಪುರುಷನೂ ಇಲ್ಲದ್ದನ್ನು ಮನಗಂಡ ಅಧಿಕಾರಿ ವಾಂಗಡಿ ನಕ್ಸಲ್‌ಬಾರಿಯ ಬೀದಿಯಲ್ಲಿ ನಿಂತು, ಮಹಿಳೆಯರಿಗೆ, ನಿಮ್ಮ ಗಂಡಂದಿರನ್ನು ಶರಣಾಗಲು ಮನವೊಲಿಸಿ, ಇಲ್ಲದಿದ್ದರೆ, ನಿಮ್ಮನ್ನು ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾಗಲೇ ದೂರದ ಪೊದೆಯ ಮರೆಯಿಂದ ತೂರಿ ಬಂದ ಮೂರು ವಿಷಪೂರಿತ ಬಾಣಗಳು ಅವನ ದೇಹವನ್ನು ಹೊಕ್ಕವು ಕ್ಷಣಾರ್ಧದಲ್ಲಿ ಆತ ಸ್ಥಳದಲ್ಲೇ ಕುಸಿದು ಮೃತಪಟ್ಟ. ತಮ್ಮ ಹೆಂಗಸರನ್ನು ಪೊಲೀಸರು ಎಳೆದೊಯ್ಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಮತ್ತು ತಿಳುವಳಿಕೆಯಿಂದ ಆದಿವಾಸಿಗಳು ಸೊನಮ್‌ವಾಂಗಡಿಯ ಮೇಲೆ ಬಾಣ ಪ್ರಯೋಗ ಮಾಡಿದ್ದರು.

ಸ್ಥಳೀಯರ ದಾಳಿಯಿಂದ ಬೆಚ್ಚಿಬಿದ್ದ ಪೊಲೀಸರು ಮತ್ತಷ್ಟು ಹೆಚ್ಚುವರಿ ಪಡೆಯನ್ನು ಕರೆಸಿಕೊಂಡು ಮಾರನೇದಿನ ಮತ್ತೇ ನಕ್ಸಲ್‌ಬಾರಿ ಹಳ್ಳಿ ಮೇಲೆ ಮುಗಿಬಿದ್ದರು. ಆ ದಿನ ನಕ್ಸಲ್‌ಬಾರಿ ಎಂಬ ಪುಟ್ಟ ಹಳ್ಳಿ ಅಕ್ಷರಶಃ ರಣರಂಗವಾಗಿ ಹೋಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 1500 ಪೊಲೀಸರು ಇಡೀ ಹಳ್ಳಿಯನ್ನು ನಾಲ್ಕು ದಿಕ್ಕಿನಿಂದ ಸುತ್ತುವರಿದು ಗ್ರಾಮದೊಳಕ್ಕೆ ಪ್ರವೇಶ ಮಾಡಿದಾಗ, ಸ್ಥಳೀಯ ಆದಿವಾಸಿ ಜನಗಳ ಬಿಲ್ಲಿನ ಬಾಣಗಳನ್ನು ಎದುರಿಸಲಾರದೆ. ಗುಂಡು ಹಾರಿಸಿದಾಗ ಹತ್ತು ಮಂದಿ ಬಲಿಯಾದರು ಇವರಲ್ಲಿ ಆರು ಮಂದಿ ಆದಿವಾಸಿ ಮಹಿಳೆಯರು ಸೇರಿದ್ದರು. ಈ ಘಟನೆಯಿಂದ ಆ ಕ್ಷಣಕ್ಕೆ ನಕ್ಸಲ್‌ಬಾರಿಯಲ್ಲಿ ಪ್ರತಿಭಟನೆ ತಣ್ಣಗಾದರೂ ಪ್ರತಿಭಟನೆಯ ಕಿಚ್ಚು ಇತರೆಡೆ ಆವರಿಸಿತು.

ನೂರೈವತ್ತು ಸಂತಾಲ್ ಆದಿವಾಸಿಗಳ ಗುಂಪು ಜೂನ್ 10 ರಂದು ನಕ್ಸಲ್‌ಬಾರಿ ಸಮೀಪದ ಖಾರಿಬಾರಿ ಎಂಬ ಹಳ್ಳಿಯಲ್ಲಿ ನಾಗೆನ್ ರಾಯ್‌ಚೌಧುರಿ ಎಂಬ ಜಮೀನ್ದಾರನ ಮನೆಗೆ ನುಗ್ಗಿ ಭತ್ತದ ಚೀಲಗಳು, ಜೋಡುನಳಿಕೆಯ ಬಂದೂಕ, ಮತ್ತು ಆಭರಣಗಳನ್ನು ದೋಚಿತು. ಈ ಗುಂಪಿನ ಎಲ್ಲಾ ಸದಸ್ಯರು ತಮ್ಮ ಕೈಯಲ್ಲಿ ಆಯುಧ ಮತ್ತು ಕೆಂಪು ಬಾವುಟ ಹಿಡಿದು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಜೊತೆಗೆ ನಾಗೆನ್ ರಾಯ್‌ಚೌಧುರಿಯನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದರು. ಅಲ್ಲಿ ಕನುಸನ್ಯಾಲ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಜಮೀನ್ದಾರ ಚೌಧುರಿ ಆವರೆಗೆ ನಡೆಸಿದ್ದ ಮಹಿಳೆಯರ ಮೇಲಿನ ಆತ್ಯಾಚಾರ, ಬಡವರ ಶೋಷಣೆ, ದಬ್ಬಾಳಿಕೆ ಈ ಕುರಿತಂತೆ ವಿಚಾರಣೆ ನಡೆಸಿ, ಆತನಿಗೆ ಮರಣದಂಡನೆ ವಿಧಿಸಲಾಯಿತು. ಅಲ್ಲದೆ, ಸಾರ್ವಜನಿಕವಾಗಿ ಆತನನ್ನು ನೇಣು ಹಾಕಲಾಯಿತು. ಇದೇ ದಿನ ಮತ್ತೊಂದು ಗುಂಪು ಬರಮನಿಜೋಟೆ ಎಂಬ ಹಳ್ಳಿಯ ಜೈನಂದನ್ ಸಿಂಗ್ ಎಂಬ ಜಮೀನ್ದಾರನ ಮನೆಯ ಮೇಲೆ ದಾಳಿ ನಡೆಸಿ, ದವಸ, ಧಾನ್ಯಗಳ ಜೊತೆಗೆ ಬಂದೂಕ ಹಾಗೂ 25 ಸುತ್ತುಗಳಿಗೆ ಬೇಕಾಗುವಷ್ಟು ಮದ್ದುಗುಂಡುಗಳನ್ನು ದೋಚಿತು.

ಸಿಡಿದೆದ್ದ ಆದಿವಾಸಿಗಳು, ಮತ್ತು ರೈತರು ಮತ್ತು ಕೂಲಿಕಾರ್ಮಿಕರ ದಾಳಿ, ಹತ್ಯೆ, ಹಿಂಸಾಚಾರ ಇವುಗಳಿಂದ  ಆಘಾತಕ್ಕೊಳಗಾದ ಬಂಗಾಳ ಸರ್ಕಾರ ತನ್ನ ಇತರೆ ಚಟುವಟಿಕೆಗಳನ್ನು ಬದಿಗೊತ್ತಿ ಹಲವು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಹತೋಟಿಗೆ ತರಲು ಶ್ರಮಿಸಿತು. ರಾಜ್ಯದ ನಾನಾ ಭಾಗಗಳಿಂದ ಪೋಲೀಸ್ ತುಕಡಿಗಳನ್ನು ಸಿಲಿಗುರಿ ಜಿಲ್ಲೆಗೆ ರವಾನಿಸಿ 700 ಕ್ಕೂ ಹೆಚ್ಚು ಮಂದಿ ಚಳವಳಿಗಾರರನ್ನು ಬಂಧಿಸುವುದರ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಆಗಸ್ಟ್ 10ರ ವೇಳೆಗೆ ಜಂಗಲ್‌ಸಂತಾಲ್ ಮತ್ತು ಕನುಸನ್ಯಾಲ್ ಇವರ ಬಂಧನದೊಂದಿಗೆ ಸಿಲಿಗುರಿಯ ರೈತರು ಮತ್ತು ಕೃಷಿಕೂಲಿ ಕಾರ್ಮಿಕರ ಪ್ರತಿಭಟನೆಯ ಮೊದಲ ಅಧ್ಯಾಯ ಪೂರ್ಣಗೊಂಡಿತು. ಚಳವಳಿಯನ್ನು ಮುಂದುವರಿಸುವ ದೃಷ್ಟಿಯಿಂದ ಆದಿವಾಸಿ ನಾಯಕ ಜಂಗಲ್‍ಸಂತಾಲ್ ಎರಡು ದಿನಗಳ ಅನ್ನ ನೀರು ಇಲ್ಲದೆ, ಪೊಲೀಸರ ಕಣ್ತಪ್ಪಿಸಿ ಕಾಡಿನೆಲ್ಲೆಡೆ ಅಲೆದಾಡಿ ಕೊನೆಗೆ ಶರಣಾಗತನಾಗಿದ್ದ. ನಕ್ಸಲ್‍ಬಾರಿಯ ಈ ಹೋರಾಟ ಅಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -16)


– ಡಾ.ಎನ್.ಜಗದೀಶ್ ಕೊಪ್ಪ


 

ನರಭಕ್ಷಕ ಹುಲಿ ಸತ್ತು ಬಿದ್ದಿದ್ದ ಸ್ಥಳದ ಸುತ್ತ ಆವರಿಸಿಕೊಂಡ ಹಳ್ಳಿಯ ಜನ ಕುಣಿದು ಕುಪ್ಪಳಿಸಿ ಕೇಕೆ ಹಾಕಿ, ಒಬ್ಬರಿಗೊಬ್ಬರು ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡರು. ಕಾರ್ಬೆಟ್ ತನ್ನ ಸೇವಕರಿಗೆ ಹುಲಿಯನ್ನು ಪ್ರವಾಸಿ ಮಂದಿರಕ್ಕೆ ಹೊತ್ತೊಯ್ದು ಚರ್ಮ ಸುಲಿಯುವಂತೆ ಆದೇಶಿದ. ಕೂಡಲೇ ಹಳ್ಳಿಯ ಜನರೆಲ್ಲಾ ತಾವು ಈ ನರಭಕ್ಷಕನನ್ನು ಸುತ್ತ ಮುತ್ತಲಿನ ಹಳ್ಳಿಯಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಬೇಕೆಂದು ಬೇಡಿಕೊಂಡಾಗ ಕಾರ್ಬೆಟ್‍ಗೆ ಬೇಡವೆನ್ನಲು ಮನಸ್ಸಾಗದೆ ಸಮ್ಮತಿಸಿದ.

ಚಂಪಾವತ್ ಹಳ್ಳಿಯ ಜನ ಬಿದಿರಿನ ಬೊಂಬುಗಳಲ್ಲಿ ನಿರ್ಮಿಸಿದ ತಡಿಕೆಯಲ್ಲಿ ನರಭಕ್ಷಕ ಹುಲಿಯ ಶವವನ್ನು ಹೊತ್ತು ತಮಟೆ, ನಗಾರಿಗಳ ಜೊತೆ ಹಳ್ಳಿಗಳಲ್ಲಿ ಮೆರವಣಿಗೆ ಮಾಡಿದರು. ನರಭಕ್ಷಕನಿಗೆ ಬಲಿಯಾದ ವ್ಯಕ್ತಿಗಳ ಮನೆ ಮುಂದೆ ನಿಲ್ಲಿಸಿ, ಕುಟುಂಬದ ಸದಸ್ಯರಿಗೆ ಅದನ್ನು ತೋರಿಸಿ ಮುಂದುವರಿಯುತ್ತಿದ್ದರು. ರಾತ್ರಿ ದೀಪದ ಬೆಳಕಿನಲ್ಲಿ ನರಭಕ್ಷಕ ಹುಲಿಯ ಚರ್ಮವನ್ನು ಸೀಳಿ, ಹೊಟ್ಟೆಯನ್ನು ಬಗೆದಾಗ, ಅದು ಕಡೆಯ ಬಾರಿ ಬಲಿ ತೆಗೆದುಕೊಂಡಿದ್ದ ಯುವತಿಯ ಬಳೆಗಳು ದೊರೆತವು. ಯುವತಿಯ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಅವುಗಳನ್ನು ಪಡೆದು, ಬೇಟೆಯ ಸಂದರ್ಭದಲ್ಲಿ ದೊರೆತ್ತಿದ್ದ ಆಕೆಯ ತಲೆ ಬುರುಡೆಯ ಜೊತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು.

ಈ ಘಟನೆ ನಡೆದ ಒಂದು ತಿಂಗಳಿನಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ತಹಸಿಲ್ದಾರ್ ತನ್ನ ಕಚೇರಿ ಸಿಬ್ಬಂದಿಯೊಂದಿಗೆ ನೈನಿತಾಲ್‍ಗೆ ಬಂದು ಪಟ್ಟಣದಲ್ಲಿ ಕಾರ್ಬೆಟ್‍ನನ್ನು ಸಾರ್ವಜನಿಕವಾಗಿ ಸನ್ಮಾನಿಸಿದ. ಕಾರ್ಬೆಟ್ ಸರ್ಕಾರದಿಂದ ಹಣ ತೆಗೆದುಕೊಳ್ಳಲು ಮೊದಲೇ ನಿರಾಕರಿಸಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರದ ಲೆಪ್ಟಿನೆಂಟ್ ಜನರಲ್ ಸರ್ ಜೆ.ಪಿ.ಹೆವಿಟ್ ಕೊಡುಗೆಯಾಗಿ ನೀಡಿದ ಆತ್ಯಾಧುನಿಕ ಹಾಗೂ ಇಂಗ್ಲೆಂಡ್‍ನಲ್ಲಿ ತಯಾರಾದ ಬಂದೂಕವನ್ನು ಕಾರ್ಬೆಟ್‍ಗೆ ಕಾಣಿಕೆಯಾಗಿ ಅರ್ಪಿಸಲಾಯಿತು.

ಈ ನರಭಕ್ಷಕನ ಬೇಟೆಯ ನಂತರ ಜಿಮ್ ಕಾರ್ಬೆಟ್ ತಾನು ಕೆಲಸ ಮಾಡುತ್ತಿದ್ದ ಮೊಕಮೆಘಾಟ್‍ಗೆ ಹೋಗಿ ಮತ್ತೇ ನೈನಿತಾಲ್‍ಗೆ ಹಿಂತಿರುಗಿ ಬರುವುದರೊಳಗೆ, ನೈನಿತಾಲ್ ಮತ್ತು ಅಲ್ಮೋರಾ ಪಟ್ಟಣಗಳ ನಡುವೆ ಇರುವ ಮುಕ್ತೇಶ್ವರ ಎಂಬ ಹಳ್ಳಿಯಲ್ಲಿ ಮತ್ತೊಂದು ನರಭಕ್ಷಕ ಹುಲಿ ಕಾಣಿಸಿಕೊಂಡು ಮೂವರನ್ನು ಬಲಿತೆಗೆದುಕೊಂಡಿತು. ಉತ್ತರ ಭಾರತದ ಹಿಮಾಲಯ ಪ್ರಾಂತ್ಯದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಬ್ರಿಟನ್ನಿನ ಪಾರ್ಲಿಮೆಂಟ್‍ನಲ್ಲೂ ಕೂಡ ಚರ್ಚೆಯಾಗಿ, ಭಾರತದಲ್ಲಿನ ಸರ್ಕಾರದ ವೈಫಲ್ಯವನ್ನು ಖಂಡಿಸಲಾಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಭಾರತದ ವೈಸ್‍ರಾಯ್, ಮತ್ತು ಬ್ರಿಟಿಷ್ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿ ಸರ್. ಬರ್ಥ್‍ಹುಡ್ ಮೂಲಕ ಕಾರ್ಬೆಟ್‍ಗೆ ನರಭಕ್ಷಕನನ್ನು ಕೊಲ್ಲಲು ಮನವಿ ಮಾಡಿಕೊಂಡಿತು. ಆದರೆ ನೈನಿತಾಲ್‍ನಲ್ಲಿದ್ದ ತನ್ನ ರಿಯಲ್‍ಎಸ್ಟೇಟ್ ವ್ಯವಹಾರ ಹಾಗೂ ಮೊಕಮೆಘಾಟ್‍ಗೆ ರೈಲ್ವೆ ಇಲಾಖೆಯ ಕೆಲಸದಿಂದಾಗಿ ತಕ್ಷಣ ಬೇಟೆಗೆ ಹೊರಡಲು ಕಾರ್ಬೆಟ್ ನಿರಾಕರಿಸಿದ.

15 ದಿನಗಳ ನಂತರ ಸರ್ಕಾರದ ಮನವಿಗೆ ಸ್ಪಂದಿಸಿ ಕಾರ್ಬೆಟ್ ಮತ್ತೆ ತನ್ನ ಬಂದೂಕಗಳನ್ನು ಹೆಗಲಿಗೇರಿಸಿ, ಸಹಾಯಕರೊಡನೆ ಮುಕ್ತೇಶ್ವರಕ್ಕೆ ಹೊರಟು ನಿಂತ. ಆದರೆ ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಭೇಟಿ ನೀಡುವುದರೊಳಗೆ ನರಭಕ್ಷಕ ಹುಲಿ 24 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಪ್ರಾರಂಭದಲ್ಲಿ ಕಾಡಿನಲ್ಲಿ ಸೌದೆ ಅರಸುತ್ತಿದ್ದ ಹೆಂಗಸಿನ ಮೇಲೆ ಎರಗಿ ಬಲಿತೆಗೆದು ಕೊಂಡಿದ್ದ ಈ ಹುಲಿ, ತನ್ನ ಎರಡನೇ ಬಲಿಯನ್ನು ಸಹ ಅದೇ ರೀತಿ, ತಾನು ವಿಶ್ರಮಿಸುತ್ತಿದ್ದ ಪೊದೆಯ ಬಳಿ ಅರಿಯದೇ ಬಂದ ಮತ್ತೊಬ್ಬ ಹೆಂಗಸನ್ನು ದಾಳಿ ನಡೆಸಿ ಕೊಂದುಹಾಕಿತ್ತು. ಈ ಎರಡು ದಾಳಿಗಳ ನಂತರ ಮನುಷ್ಯನ ರಕ್ತದ ರುಚಿ ಹುಲಿಯನ್ನು ನರಭಕ್ಷಕನನ್ನಾಗಿ ಪರಿವರ್ತಿಸಿತ್ತು. ಮೊದಲು ತನ್ನ ಬಳಿ ಸುಳಿದವರನ್ನು ಬೇಟೆಯಾಡುತ್ತಿದ್ದ ಈ ಹುಲಿ ನಂತರದ ದಿನಗಳಲ್ಲಿ ಮನುಷ್ಯರನ್ನೇ ಅರಸುತ್ತಾ ಅಲೆಯತೊಡಗಿತು.

ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಬರುವ ಹಿಂದಿನ ದಿನದ ಸಂಜೆ ಎರಡು ಹೋರಿಗಳನ್ನು ಮೇಯಿಸಲು ಹೋಗಿದ್ದ ಪುತ್ಲಿ ಎಂಬ ಬಾಲಕಿಯ ಮೇಲೆ ಎರಗಲು ಪ್ರಯತ್ನಿಸಿ ವಿಫಲವಾಗಿ ಅಂತಿಮವಾಗಿ ಹೋರಿಯೊಂದನ್ನು ಕೊಂದು ಹಾಕಿತ್ತು. ಕಾರ್ಬೆಟ್ ಆ ಬಾಲಕಿಯನ್ನು ಕರೆದುಕೊಂಡು ದಾಳಿ ನಡೆದ ಸ್ಥಳಕ್ಕೆ ಹೋದಾಗ ಬಿಳಿ ಬಣ್ಣದ ಹೋರಿಯ ಶವ ಅಲ್ಲೇ ಇತ್ತು. ನರಭಕ್ಷಕ ಹುಲಿ ಹೋರಿಯ ತೊಡೆಯ ಭಾಗವನ್ನು ಮಾತ್ರ ತಿಂದುಹೋಗಿತ್ತು ಈ ದಿನ ರಾತ್ರಿ ನರಭಕ್ಷಕ ಮತ್ತೇ ಬರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದ ಕಾರ್ಬೆಟ್ ಮರದ ಮೇಲೆ ಕುಳಿತು ಬೇಟೆಯಾಡಲು ನಿರ್ಧರಿಸಿದ. ಆದರೆ, ಹೋರಿಯ ಶವವಿದ್ದ ಜಾಗದಲ್ಲಿ ಮಚ್ಚಾನು ಕಟ್ಟಿ ಕುಳಿತುಕೊಳ್ಳಲು ಯಾವುದೇ ಮರವಿರಲಿಲ್ಲ. ಕೇವಲ ಎಂಟು ಅಡಿಯಿದ್ದ ಕಾಡು ಹೂಗಳ ಪುಟ್ಟ ಮರವೊಂದಿತ್ತು. ಮಚ್ಚಾನು ಕಟ್ಟುವ ಬದಲು ಅದರಮೇಲೆ ಕುಳಿತಿಕೊಳ್ಳಲು ನಿರ್ಧರಿಸಿ, ಅ ಹಳ್ಳಿಯಲ್ಲಿ ಪರಿಚಿತನಾಗಿದ್ದ ಬದ್ರಿ ಎಂಬಾತನ ನೆರವಿನಿಂದ ಟೊಂಗೆಯ ಮೇಲೆ ಹಸಿರು ಎಲೆಗಳನ್ನು ಹೊದಿಸಿ ಗೂಡನ್ನು ನಿರ್ಮಿಸಿಕೊಂಡ. ವಾಪಸ್ ಮುಕ್ತೇಶ್ವರ ಹಳ್ಳಿಗೆ ಬಂದ ಕಾರ್ಬೆಟ್, ಬೇಟೆಗೆ ಬೇಕಾದ ಜೋಡು ನಳಿಕೆಯ ಬಂದೂಕ, ಚಾಕು, ಟಾರ್ಚ್, ಬೆಂಕಿಪೊಟ್ಟಣ, ಸಿಗರೇಟ್, ಒಂದಿಷ್ಟು ಬ್ರೆಡ್ ಮತ್ತು ಬಿಸ್ಕೇಟ್ ಹಾಗೂ ನೀರಿನೊಂದಿಗೆ ಮರದ ಬಳಿ ಬಂದ ಕಾರ್ಬೆಟ್, ಅತ್ತ ಬಾನಿನಲ್ಲಿ  ಸೂರ್ಯ ಮುಳುಗುತ್ತಿದ್ದಂತೆ ಕತ್ತಲಾಗುವ ಮುನ್ನವೇ ಮರವೇರಿ ಕುಳಿತ.

ಅರಣ್ಯದ ಸುತ್ತೆಲ್ಲಾ ಕತ್ತಲು ಆವರಿಸಕೊಳ್ಳುತ್ತಿದ್ದಂತೆ, ಎಲ್ಲೆಡೆ ಮೌನ ಮನೆ ಮಾಡತೊಡಗಿತು. ಸುಮಾರು ಏಳುಗಂಟೆ ಸಮಯಕ್ಕೆ ಸರಿಯಾಗಿ ಕಾರ್ಬೆಟ್ ಕುಳಿತ್ತಿದ್ದ ಜಾಗದಿಂದ ಸುಮಾರು 200 ಅಡಿ ದೂರದಲ್ಲಿ ಜಿಂಕೆಗಳ ಓಟ, ಮರದ ಮೇಲಿದ್ದ ಮಂಗಗಳ ಕಿರುಚಾಟ ಕೇಳಿಬರತೊಡಗಿತು. ಇದು ನರಭಕ್ಷಕ ಬರುವ ಸೂಚನೆ ಎಂಬುದನ್ನು ಅರಿತ ಕಾರ್ಬೆಟ್ ಬಂದೂಕ ಸಿದ್ಧಪಡಿಸಿಕೊಂಡು ಜಾಗರೂಕನಾದ. ಆಕಾಶದಲ್ಲಿ ದಟ್ಟ ಮೋಡಗಳು ಕವಿದ ಪರಿಣಾಮ ಅವನ ಕಣ್ಣಿಗೆ ನರಭಕ್ಷಕ ಗೋಚರವಾಗುತ್ತಿರಲಿಲ್ಲ. ಓಣಗಿದ ತರಗೆಲೆಗಳ ಮೇಲೆ ಅದು ನಡೆದು ಬರುತ್ತಿರುವ ಸದ್ದನ್ನು ಆಲಿಸತೊಡಗಿದ.

ಕಾರ್ಬೆಟ್ ಕುಳಿತ್ತಿದ್ದ ಜಾಗದ ಸುಳಿವು ಸಿಗದ ಕಾರಣ ನರಭಕ್ಷಕ ನೇರವಾಗಿ ಮರದ ಬಳಿ ಬಂದು ಕಾರ್ಬೆಟ್ ಕುಳಿತ ಜಾಗದಿಂದ ಕೇವಲ ಹತ್ತು ಅಡಿ ದೂರದಲ್ಲಿ ಬಂದು ವಿಶ್ರಮಿಸಿತು. ಅಪರಿಮಿತ ಕತ್ತಲಿನಲ್ಲಿ ಬಿಳಿಯ ಬಣ್ಣದ ಹೋರಿಯ ಕಳೇಬರ ಕೂಡ ಅವನ ಕಣ್ಣಿಗೆ ಕಾಣದಾಗಿತ್ತು. ನರಭಕ್ಷಕ ತಾನು ಕುಳಿತ ಜಾಗದಿಂದ ಎದ್ದು ನಡೆದು ಹೋರಿಯ ಕಳೇಬರದತ್ತ ತೆರಳಿ ಅದನ್ನು ತಿನ್ನಲು ಶುರು ಮಾಡಿತು. ಇಡೀ ಅದರ ಚಲನವನ್ನು ತರಗೆಲೆಗಳ ಮೇಲಿನ ಶಬ್ಧದಿಂದ ಗ್ರಹಿಸಿದ ಕಾರ್ಬೆಟ್ ಇಪ್ಪತ್ತು ಅಡಿ ದೂರದಲ್ಲಿದ್ದ ನರಭಕ್ಷನಿಗೆ ಅಂದಾಜಿನ ಮೇಲೆ ಗುಂಡು ಹಾರಿಸಿದ. ಎರಡು ನಿಮಿಷಗಳ ಕಾಲ ಗುಂಡಿನ ಸದ್ದು ಪ್ರತಿಧ್ವನಿಸಿದ್ದರಿಂದ ಏನೂ ಕಾಣದಾಯಿತು ಹಾಗೂ ಕೇಳದಾಯ್ತು. ಆನಂತರ ನರಭಕ್ಷಕ ಹುಲಿ ಘರ್ಜನೆ ಮತ್ತು ಆರ್ಭಟ ಅವನು ಕುಳಿತ ಮರದ ಸುತ್ತಾ ಮುಂದುವರಿಯಿತು. ಇದರಿಂದ ತಾನು ಗುಂಡು ಗುರಿತಪ್ಪಿದ್ದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡ. ಅವನು ಕುಳಿತ ಮರಕೂಡ ಚಿಕ್ಕದಾಗಿದ್ದ ಕಾರಣ ಕಾರ್ಬೆಟ್ ಕುಳಿತ್ತಿದ್ದ ಮರದ ಟೊಂಗೆಗಳು ಅವನ ಭಾರಕ್ಕೆ ನೆಲದತ್ತ ಬಾಗತೊಡಗಿದವು. ಒಮ್ಮೆಯಂತು ನರಭಕ್ಷಕ ಮರದ ಕೆಳಕ್ಕೆ ಬಂದು ಅವನ್ನು ಹಿಡಿಯಲು ಪ್ರಯತ್ನಿಸಿತು. ಕೂಡಲೇ ಮತ್ತೊಂದು ಟೊಂಗೆಗೆ ನೆಗೆದ ಅವನು ಅದರ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ.

ಅತ್ಯಂತ ಒತ್ತಡಕ್ಕೆ ಸಿಲುಕಿದ ಕಾರ್ಬೆಟ್ ಜೇಬಿನಿಂದ ಸಿಗರೇಟು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀಚಿದಾಗ ತಕ್ಷಣ ಹೊತ್ತಿಕೊಂಡ ಬೆಂಕಿಯ ಬೆಳಕಿಗೆ ಹೆದರಿದ ನರಭಕ್ಷಕ ದೂರ ಸರಿಯಿತು. ರಾತ್ರಿ ಹತ್ತು ಗಂಟೆಯವರೆಗೆ ನಿರಂತರ ಐದು ಸಿಗರೇಟು ಸೇದಿದ ನಂತರ ಅವನ ಮನಸ್ಸು ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿತು . ಆದರೆ, ಬೆಳಗಿನ ಜಾವ ಆರು ಗಂಟೆಯವರೆಗೆ ಮರದ ಮೇಲೆ ಜೀವಭಯದಲ್ಲಿ ಒಂದೇ ಸ್ಥಿತಿಯಲ್ಲಿ ಕೂರಬೇಕಾದ ದುಸ್ಥಿತಿ ಕಾರ್ಬೆಟ್‍ಗೆ ಒದಗಿಬಂತು. ಅದೇ ವೇಳೆಗೆ ಸಣ್ಣಗೆ ಶುರವಾದ ಮಳೆ, ನಂತರ ಆಕಾಶವೇ ಹರಿದು ಹೋದಂತೆ ರಾತ್ರಿಯಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಎಡ ಬಿಡದೆ ಜೋರಾಗಿ ಸುರಿಯಿತು. ಕಾರ್ಬೆಟ್‍ನ ಬಲಿಗಾಗಿ ಕಾದು ಕುಳಿತ್ತಿದ್ದ ನರಭಕ್ಷಕ ಕೂಡ ಮಳೆಯ ಆರ್ಭಟಕ್ಕೆ ಹೆದರಿ ರಕ್ಷಣೆಗಾಗಿ ಪೊದೆಗಳ ಮೊರೆ ಹೋಯಿತು.

ಬೆಳಗಿನ ಜಾವ ಆರು ಗಂಟೆ ಸಮಯಕ್ಕೆ ಸಹಾಯಕ ಬದ್ರಿ ಕಾರ್ಬೆಟ್‍ಗೆ ಚಹಾ ತೆಗೆದುಕೊಂಡು ಬಂದಾಗ, ಮಳೆ ಮತ್ತು ಚಳಿ ಹಾಗೂ ಒಂದೇ ಸ್ಥಿತಿಯಲ್ಲಿ ಮರದ ಮೇಲೆ ಕುಳಿತ ಕಾರ್ಬೆಟ್ ಅಕ್ಷರಶಃ ಜೀವಂತ ಶವವಾಗಿ ಹೋಗಿದ್ದ. ಅವನ ಕೈ ಕಾಲುಗಳು ಮರಗಟ್ಟುಕೊಂಡು ಸೆಟೆದು ಬಿಗಿದುಕೊಂಡಿದ್ದವು, ಬದ್ರಿ ಕಾರ್ಬೆಟ್‍ನನ್ನು ಮರದಿಂದ ಜೋಪಾನವಾಗಿ ಕೆಳಕ್ಕೆ ಇಳಿಸಿ ಹೆಗಲ ಮೇಲೆ ಹೊತ್ತುಕೊಂಡು ಪ್ರವಾಸಿ ಮಂದಿರಕ್ಕೆ ತಂದು ಕೈಕಾಲುಗಳಿಗೆ ಎಣ್ಣೆಯಿಂದ ಮಸಾಜು ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿಸಿದ. ಕಾರ್ಬೆಟ್‍ನ ಶಿಕಾರಿ ಅನುಭವದಲ್ಲಿ ಆ ರಾತ್ರಿ ಮರೆಯಲಾಗದ ಕರಾಳ ಅನುಭವವಾಯಿತು.

(ಮುಂದುವರಿಯುವುದು)