Category Archives: ಜಗದೀಶ್ ಕೊಪ್ಪ

ಅಲ್ಲಾ ನೆನಪಿನಲ್ಲಿ ಅಂಬಾರಿ

ಇಂದು ನಾಡಿನೆಲ್ಲೆಡೆ ವಿಜಯ ದಶಮಿ. ನನ್ನ ಸೀಮೆಯಾದ ಮೈಸೂರು ಹಾಗೂ ಬಳ್ಳಾರಿಯ ಹೊಸಪೇಟೆಯ ಸುತ್ತಮುತ್ತ ಈ ಹಬ್ಬಕ್ಕೆ ವಿಶೇಷವಿದೆ. ದಸರಾ ಮೂಲತಃ ವಿಜಯನಗರ ಅರಸರು ಹುಟ್ಟಿ ಹಾಕಿದ ಹಬ್ಬ. ಹಂಪಿಯಲ್ಲಿ ದಸರಾ ನಡೆಯುತಿದ್ದ ಸಮಯದಲ್ಲೇ ಶ್ರಿರಂಗಪಟ್ಟಣದಲ್ಲಿ ವಿಜಯನಗರ ದೊರೆಗಳ ದಂಡನಾಯಕರು ಪ್ರಾರಂಭಿಸಿದ ಈ ನಾಡ ಹಬ್ಬವನ್ನು ಮುಂದೆ ಯದುವಂಶದ ದೊರೆಗಳು ಮೈಸೂರಿನಲ್ಲಿ ಮುಂದುವರಿಸಿದರು.

ಇವತ್ತಿಗೂ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂದು ವಿಜಯನಗರದ ದೊರೆಗಳಿಗೆ ಸೈನಿಕರಾಗಿದ್ದ ವಾಲ್ಮೀಕಿ ಜನಾಂಗದ ಮನೆಗಳಲ್ಲಿ ಇರುವ ಕತ್ತಿ ಗುರಾಣಿ, ಭರ್ಜಿ ಮುಂತಾದವುಗಳಿಗೆ ಆಯುಧ ಪೂಜೆಯ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ಇತ್ತೀಚಿಗಿನ ದಿನಗಳಲ್ಲಿ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಪ್ರಾಯೋಜಕತ್ವ ಪಡೆದು ವಿಜೃಂಭಣೆಯಿಂದ ನಡೆದರೂ ಸಹ ಸ್ಥಳೀಯರ ಪಾಲಿಗೆ ಇದೊಂದು ಮದುವಣಗಿತ್ತಿ ಇಲ್ಲದ ಮದುವೆಯಂತೆ. 60 ರ ದಶಕದಲ್ಲಿ ಅಂಬಾರಿಯಲ್ಲಿ ಕುಳಿತು ಸಾಗುತಿದ್ದ ನನ್ನ ನಾಡಿನ ಅಂದಿನ ದೊರೆಯನ್ನು ನೋಡುವುದೇ ಪುಣ್ಯವೆಂದು ನನ್ನ ಹಿರೀಕರು ನಂಬಿದ್ದರು. ದೊರೆಯಿಲ್ಲದ ಅಂಬಾರಿ ಬಗ್ಗೆ ನನ್ನ ಜನಕ್ಕೆ ಈಗ ಆಸಕ್ತಿ ಕಡಿಮೆ.

ಮಂಡ್ಯ ಜಿಲ್ಲೆಯ ನನ್ನೂರಿಂದ ಎತ್ತಿನ ಬಂಡಿಯಲ್ಲಿ ಹೋಗಿ ಮೈಸೂರು ಬೀದಿಯಲ್ಲಿ ನನ್ನಪ್ಪನ ಹೆಗಲ ಮೇಲೆ ಕುಳಿತು ಅಂಬಾರಿಯಲ್ಲಿ ಸಾಗುತಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ಹಿಂಬದಿಯಲ್ಲಿ ಕೂರುತಿದ್ದ ಬಾಲಕ ಶ್ರಿಕಂಠದತ್ತ ಒಡೆಯರ್ ಇವರ ದೃಶ್ಯಗಳ ನೆನಪು ಇಂದಿಗೂ ನನ್ನಲ್ಲಿ ಹಸಿರಾಗಿವೆ.

ಹಳೆಯ ಸಂಗತಿಗಳು ಏನೇ ಇರಲಿ, ಒಂಬತ್ತು ದಿನಗಳ ನವರಾತ್ರಿಯ ಸಡಗರ ಮುಕ್ತಯಗೊಳ್ಳುವುದು ದಸರಾ ಅಂಬಾರಿಯ ಮೆರವಣಿಗೆಯೊಂದಿಗೆ. ಈಗ ನಡೆಯುತ್ತಿರುವ ಅಂಬಾರಿ ಮೆರವಣಿಗೆಯಲ್ಲಿ ನಾವು ಗಮನಿಸಬೇಕಾದ ಒಂದು ವಿಶೆಷವಿದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಪ್ರತಿಮೆ ಹೊತ್ತು ಸಾಗುವ ಬಲರಾಮ ಎಂಬ ಆನೆಯ ಮಾವುತ ಹಾಗೂ ಅದರ ಕಾವಡಿಗಳು ಮುಸಲ್ಮಾನರು ಎಂಬುದು ವಿಶೇಷ. ನಮ್ಮ ಗಮನವೆಲ್ಲಾ ಅಂಬಾರಿ ಮತ್ತು ಅದನ್ನು ಹೊತ್ತ ಆನೆ ಬಗ್ಗೆ ಕೇಂದ್ರೀಕೃತವಾಗುವುದರಿಂದ ನಾವು ಅವರನ್ನು ಗಮನಿಸುವುದಿಲ್ಲ. ಅದು ತಪ್ಪಲ್ಲ. ಏಕೆಂದರೆ, ನಮ್ಮ ಸಂಸ್ಕೃತಿಯ ಗ್ರಹಿಕೆಯ ನೆಲೆಗಟ್ಟೆ ಅಂತಹದು. ಮೆರವಣಿಗೆಯಲ್ಲಿ ಸಾಗುವ ಮದುಮಗ ಮಾತ್ರ ನಮಗೆ ಮುಖ್ಯವಾಗುತ್ತಾನೆ. ಅವನ ಮುಖ ನಮಗೆ ಕಾಣಲಿ ಎಂದು ತಲೆಮೇಲೆ ದೀಪ ಹೊತ್ತು ಕತ್ತಲೆಯಲಿ ಉಳಿದು ಹೋದವರು ಎಂದೂ ನಮಗೆ ಮುಖ್ಯರಾಗುವುದಿಲ್ಲ. ಅಂತಹದೇ ಕಥೆ ಈ ಅನಾಮಿಕರದು.

ಬಲರಾಮನ ಮಾವುತ ಝಕಾವುಲ್ಲಾ ಸರ್ಕಾರಿ ಸೇವೆಯಿಂದ ನಿವೃತ್ತನಾಗಿ ಎಷ್ಟೋ ವರ್ಷಗಳು ಸಂದಿವೆ, ಆದರೂ ಅಂಬಾರಿ ಮೆರವಣಿಗೆಗಾಗಿ ತಾನು ಪಳಗಿಸಿದ ಆನೆ ಬಲರಾಮನ ಸಂಗಾತಿಯಾಗಿ ತಿಂಗಳು ಕಾಲ ಮೈಸೂರಿನಲ್ಲಿದ್ದು ತನ್ನ ಸೇವೆ ಮುಗಿಸಿ ಎಲೆ ಮರೆ ಕಾಯಿಯಂತೆ ತನ್ನೂರಿಗೆ ಹೊರಟುಬಿಡುತ್ತಾನೆ. ಕಾವಡಿಗಳಾಗಿ ಕೆಲಸ ಮಾಡುವ ಪಾಷ ಮತ್ತು ಅಕ್ರಂ ಆನೆಯೊಂದಿಗೆ ಅರಣ್ಯದ ಬಿಡಾರ ಸೇರುತ್ತಾರೆ.

ಆನೆಗಳನ್ನು ಸದ್ದು ಗದ್ದಲ ಹಾಗೂ ಅಪಾರ ಜನಸ್ತೋಮದ ನಡುವೆ ಶಾಂತ ಸ್ಥಿತಿಯಲ್ಲಿ ಇರುವಂತೆ ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ಅವುಗಳ ಮನಸ್ಸನ್ನು ಅರಿತು, ಆ ಮೂಕ ಪ್ರಾಣಿಗಳ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಮಾವುತನಿಗೆ ಇರಬೇಕು. ಇದಕ್ಕಾಗಿ ದಸರಾ ಮುನ್ನಾ ತಿಂಗಳುಗಟ್ಟಳೆ ಅವುಗಳ ಜೊತೆ ಒಡನಾಡಿ ಅವುಗಳು ಶಾಂತರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.

ದಸರ ಹಿಂದಿನ ದಿನದ ಬೆಳಿಗ್ಗೆಯಿಂದಲೇ ಆನೆಗಳ ಶೃಂಗಾರ ಕಾರ್ಯ ಆರಂಭವಾಗುತ್ತದೆ.ಆ ಕ್ಷಣದಿಂದ ಇವರಿಗೆ ಊಟ ನಿದ್ರೆ ಸೇರುವುದಿಲ್ಲ. ಅಂಬಾರಿಯ ಮೆರವಣಿಗೆ ದಿನದಂದು ಉಪವಾಸವಿದ್ದು , ಮೆರವಣಿಗೆ ಆರಂಭವಾಗುವ ಹೊತ್ತಿನಲ್ಲಿ ಇವರು ಅಲ್ಲಾನನ್ನು ನೆನೆದು ಪ್ರಾರ್ಥಿಸುತ್ತಾರೆ. ತಾಯಿ ಚಾಮುಂಡೇಶ್ವರಿಗೆ, ಚಿನ್ನದ ಅಂಬಾರಿಗೆ ಏನೂ ಧಕ್ಕೆಯಾಗಂತೆ ಅಲ್ಲಾನನ್ನು ಬೇಡಿಕೊಂಡು ಇವರು ಹೊರಟರೆ, ಊಟ ಮಾಡುವುದು ಸಂಜೆ ಅಂಬಾರಿ ಸುಸೂತ್ರವಾಗಿ ಬನ್ನಿ ಮಂಟಪ ತಲುಪಿ ವಾಪಸ್ ಅರಮನೆ ಆವರಣಕ್ಕೆ ಬಂದ ನಂತರವೇ..

ತಮ್ಮ ಧರ್ಮ ಅಥವಾ ಸಂಸ್ಕೃತಿಯಲ್ಲದ ಒಂದು ನಾಡ ಹಬ್ಬಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಈ ಅನಾಮಿಕ ಜೀವಗಳೆಲ್ಲಿ? ಹಿಂದು ಧರ್ಮದ ರಕ್ಷಣೆಯ ಹೆಸರಿನಲ್ಲಿ ಮೂರು ಕಾಸಿನ ಚಿಂತನೆಗಳ ತಲೆ ತುಂಬಾ ಹೊತ್ತು ವಿಷ ಬಿತ್ತುವ ಮೂಲಭೂತವಾದಿಗಳೆಲ್ಲಿ? ಸುಮ್ಮನೆ ಒದು ಕ್ಷಣ ಯೋಚಿಸಿ.

ಇವತ್ತಿಗೂ ಮಾವುತ ಕಾಯಕದಲ್ಲಿ ಹೆಚ್ಚಿನ ಮಂದಿ ಮುಸ್ಲಿಮರು ತೊಡಗಿಕೊಂಡಿದ್ದು, ಜೊತೆಗೆ ಅನಕ್ಷರಸ್ತರಾಗಿದ್ದಾರೆ. ಇಂತಹ ಮಾವುತರು, ಕಾವಡಿಗಳು ಮತ್ತು ಶಿವಮೊಗ್ಗದ ಆಂಜನೇಯ ದೇವಸ್ಥಾನಕ್ಕೆ ಬೆಳಗಿನ ಪೂಜೆಗೆ ಕಳೆದ 60-70 ವರ್ಷಗಳಿಂದ ಹೂವು ಪೂರೈಸುವ ಮುಸ್ಮಿಂ ಕುಟುಂಬ ಹಾಗೂ ಗುಜರಾತಿನ ರಿಪ್ಲಿಕಾ ರಸ್ತೆಯಲ್ಲಿರುವ ಶ್ರೀ ರಾಮ ದೇಗುಲಕ್ಕೆ ಎಣ್ಣೆ ಬತ್ತಿ ಪೂರೈಸುವ ಬಡ ಮುಸಲ್ಮಾನ ಇವರನ್ನು ನೆನದಾಗ ಜಾತಿಯ ಬಗ್ಗೆ, ಧರ್ಮದ ಬಗ್ಗೆ ಮಾತನಾಡುವುದು ಕೂಡ ಅಪಮಾನ ಮತ್ತು ಅಮಾನುಷ ಎಂದು ಒಮ್ಮೇಲೆ ಅನಿಸಿಬಿಡುತ್ತದೆ.

-ಡಾ.ಎನ್. ಜಗದೀಶ್ ಕೊಪ್ಪ
(ಮಾವುತರ ಬಗ್ಗೆ ಗಮನ ಸೆಳೆದ ಪ್ರಜಾವಾಣಿಯ ರಾಜೇಶ್ ಶ್ರೀವನ ಇವರಿಗೆ ನನ್ನ ಕೃತಜ್ಙತೆಗಳು.)

pic courtesy: gulfkannada.com, mahensimmha.blogspot.com

ಜೀವನದಿಗಳ ಸಾವಿನ ಕಥನ – 5

-ಡಾ.ಎನ್.ಜಗದೀಶ್ ಕೊಪ್ಪ

ಆಧುನಿಕ ಜಗತ್ತನ್ನು ಅಭಿವೃದ್ಧಿಯ ಯುಗ ಎಂದು ಕರೆಯುತ್ತಿರುವ ಈ ಸಂದರ್ಭದಲ್ಲಿ “ಅಭಿವೃದ್ಧಿ” ಕುರಿತಂತೆ ನಿರ್ವಚಿಸುತ್ತಿರುವ ಕ್ರಮ ಕೂಡ ವಿವಾದಕ್ಕೆ ಒಳಗಾಗಿದ್ದು ಈ ಕುರಿತ ನಮ್ಮ ಗ್ರಹಿಕೆ ಬದಲಾಗಬೇಕಾಗಿದೆ. ಎಲ್ಲವನ್ನೂ ವಿಶಾಲ ದೃಷ್ಟಿಕೋನದಿಂದ ನೋಡುವ ಬದಲು, ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ, ಗ್ರಹಿಸುವ ನೆಲೆಗಟ್ಟು ಇದೀಗ ಅತ್ಯಗತ್ಯವಾಗಿದೆ. ವರ್ತಮಾನದ ಅರ್ಥಶಾಸ್ತ್ರ ಪರಿಭಾಷೆಯಲ್ಲಿ ವ್ಯವಹರಿಸುತ್ತಿರುವ ಜಗತ್ತು, ಸಾಮಾಜಿಕ ಹಾಗೂ ಚಾರಿತ್ರಿಕ ದೃಷ್ಟಿಕೋನದಿಂದಲೂ ತನ್ನನ್ನು ತಾನು ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.

ಜಗತ್ತಿನ ಯಾವುದೇ ರಾಷ್ಟ್ರವಿರಲಿ, ನದಿಗಳ ಇಂದಿನ ನೈಜಸ್ಥಿತಿಯನ್ನು ಅರಿತಾಗ ನಮ್ಮ ಅಭಿವೃದ್ಧಿ ಕುರಿತಂತೆ ಗ್ರಹಿಕೆಯ ನೆಲೆಗಟ್ಟು ಖಂಡಿತಾ ಬದಲಾಗಬೇಕೆನಿಸುತ್ತದೆ. ಯಾಕೆಂದರೆ, ಯಾವ ಅಡೆ-ತಡೆ ಇಲ್ಲದೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳೆಂಬ ತಡೆಗೋಡೆ ನಿರ್ಮಾಣವಾಗುತ್ತಿದ್ದಂತೆ ನದಿಪಾತ್ರದ ಪರಿಸರವಷ್ಟೇ ಅಲ್ಲ, ನದಿಗಳ ಮೂಲ ಸ್ವರೂಪ ಹೇಳ ಹೆಸರಿಲ್ಲದಂತೆ ನಾಶವಾಯಿತು. ಅಣೆಕಟ್ಟುಗಳ ನಿರ್ಮಾಣದಿಂದಾಗಿ ಜಗತ್ತಿನಾದ್ಯಂತ ಬಹುತೇಕ ನದಿಗಳಿಗೆ ಸಮುದ್ರ ಸೇರುವ ಸಾಧ್ಯತೆ ಇಲ್ಲವಾಯಿತು. ಅಮೆರಿಕದಲ್ಲಿ ಹರಿಯುವ ಕೊಲರಾಡೊ ನದಿ 1960ರಿಂದೀಚೆಗೆ ತನ್ನ ಸುದೀರ್ಘ 50 ವರ್ಷಗಳಲ್ಲಿ ಪ್ರವಾಹ ಬಂದಾಗ ಎರಡು ಬಾರಿ ಸಮುದ್ರ ಸೇರಿದ್ದು ಬಿಟ್ಟರೆ, ಉಳಿದಂತೆ ಅಣೆಕಟ್ಟುಗಳ ಕೆಳಭಾಗದಲ್ಲೇ ಬತ್ತಿ ಹೋಗುತ್ತಿದೆ. ಇದು ಅಮೆರಿಕಾದ ನದಿಯೊಂದರ ವಸ್ತು ಸ್ಥಿತಿ ಮಾತ್ರವಲ್ಲ, ಜಗತ್ತಿನ ಎಲ್ಲಾ ನದಿಗಳ ಶೋಚನೀಯ ಸ್ಥಿತಿಯೂ ಇದೇ ಆಗಿದೆ.

ಅಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು, ಅವುಗಳ ಇಕ್ಕೆಲಗಳ ಮುಖಜಭೂಮಿಯಲ್ಲಿ ಮಣ್ಣಿನ ಫಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೆ ನದಿಗಳಲ್ಲಿ ಮೀನುಗಾರಿಕೆಯನ್ನೇ ಕುಲ ಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೆರಿಕಾದಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ, ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕಿಕಾಪೂ ಜನಾಂಗ, ಈಗ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ಡೆ-ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ.

ಜಗತ್ತಿನ ಯಾವುದೇ ನದಿಯಿರಲಿ, ಪ್ರತಿ ನದಿಗೂ ಹರಿಯುವಿಕೆಯಲ್ಲಿ, ನೀರಿನ ಗುಣದಲ್ಲಿ, ಉದ್ದ-ವಿಸ್ತಾರದಲ್ಲಿ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಕೆಲವು ನದಿಗಳು ಕೆಂಪಾಗಿ ರಭಸದಿಂದ ಹರಿಯುವ ಗುಣ ಹೊಂದಿದ್ದರೆ, ಇನ್ನು ಕೆಲವು ನದಿಗಳು ಅತ್ಯಂತ ವಿಶಾಲವಾಗಿ (ಇವುಗಳ ಅಗಲ 2 ರಿಂದ 4 ಕಿ.ಮೀ.) ನಿಧಾನವಾಗಿ ಹರಿಯುವ ಗುಣ ಹೊಂದಿವೆ. ಭಾರತದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಗೆ ಇರುವ ವೇಗ, ಗಂಗೆ ಅಥವಾ ಕಾವೇರಿಗೆ ಇಲ್ಲ. ಇಂತಹ ವಿಶಿಷ್ಠ ಗುಣಗಳಿಗೆ ಅನುಗುಣವಾಗಿ ನದಿಪಾತ್ರದಲ್ಲಿ ಜೈವಿಕ ವೈವಿಧ್ಯತೆ, ಪರಿಸರ, ಕೃಷಿ ಚಟುವಟಿಕೆ ರೂಪುಗೊಂಡಿರುತ್ತದೆ.

ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣದಿಂದ ಆದ ಅತ್ಯಂತ ದೊಡ್ಡ ಅನಾಹುತವೆಂದರೆ, ಹಲವಾರು ಜಾತಿಯ ಮೀನುಗಳ ವಿನಾಶ. ವಂಶಾಭಿವೃದ್ಧಿಗಾಗಿ ನದಿಗಳಲ್ಲಿ ಸಾವಿರಾರು ಕಿ.ಮೀ. ಈಜಿ, ಮೊಟ್ಟೆ ಇಟ್ಟು ಮರಿ ಮಾಡುತ್ತಿದ್ದ ಮೀನುಗಳ ಸಂತತಿ ಹಾಗೂ ಸಮುದ್ರದ ಉಪ್ಪು ನೀರಿನಿಂದ ನದಿಗಳ ಸಿಹಿ ನೀರಿಗೆ ಆಗಮಿಸಿ, ವಂಶವನ್ನು ವೃದ್ಧಿಸುತ್ತಿದ್ದ ಅನೇಕ ಮೀನುಗಳ ಸಂತತಿ ಈಗ ಕೇವಲ ನೆನಪು ಮಾತ್ರ.

ಇತ್ತೀಚೆಗೆ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಕುರಿತಂತೆ ಗಂಭೀರ ಅಧ್ಯಯನ ನಡೆಯುತ್ತಿದ್ದು, ಸಂಗ್ರಹವಾದ ನೀರಿನ ಗುಣ, ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದು ದೃಢಪಟ್ಟಿದೆ. ಅಲ್ಲದೆ ಜಲಾಶಯದ ನೀರು ಹಲವಾರು ತಿಂಗಳ ಕಾಲ ಶೇಖರವಾಗುವುದರಿಂದ, ನೀರಿನ ಕೊಳೆಯುವಿಕೆಯ ಪ್ರಕ್ರಿಯೆಯಿಂದಾಗಿ ಅನೇಕ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.

ಸ್ಪೀಡನ್ ಮೂಲದ ಪರಿಸರ ತಜ್ಞರು, ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡಗಳು ಸೇರಿದಂತೆ ಜಗತ್ತಿನಾದ್ಯಂತ ನೂರಾರು ನದಿಗಳಲ್ಲಿ ಈ ಕುರಿತು ಅಧ್ಯಯನ ಕೈಗೊಂಡು, ನೀರಿನ ಮೂಲ ಗುಣದ ಬದಲಾವಣೆಯ ಬಗ್ಗೆ ಖಚಿತಪಡಿಸಿದ್ದಾರೆ. ಇದರಿಂದಾಗಿ ನಿಖರವಾದ ಪರಿಣಾಮ ಅರಿಯಬೇಕಾದರೆ ನಾವು ಕನಿಷ್ಠ 75 ರಿಂದ 90 ವರ್ಷ ಕಾಯಬೇಕು ಎಂದಿದ್ದಾರೆ. ಈಗಾಗಲೇ ಸಂಗ್ರಹವಾದ ನದಿನೀರಿನಲ್ಲಿರುವ ಖನಿಜಾಂಶಗಳು ಜಲಾಶಯದಲ್ಲಿ ಕರಗುವುದರಿಂದ ಲವಣಾಂಶ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಅಣೆಕಟ್ಟು ಮತ್ತು ಜಲಾಶಯಗಳಿಂದ ಆದ ಮತ್ತೊಂದು ನೈಸರ್ಗಿಕ ದುರಂತವೆಂದರೆ, ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋದ ಅರಣ್ಯ ಹಾಗೂ ಅಪರೂಪದ ಗಿಡ ಮೂಲಿಕೆಯ ಸಸ್ಯ ಸಂತತಿ. ಈಗಾಗಲೇ ವಿಶ್ವದಾದ್ಯಂತ 45 ಸಾವಿರ ಚ.ಕಿ.ಮೀ. ಅರಣ್ಯ ಪ್ರದೇಶ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಗಿದೆ.

ಶ್ರೀಲಂಕಾದಲ್ಲಿ ನಿರ್ಮಿಸಿದ 5 ಜಲಾಶಯಗಳಿಂದಾಗಿ 8 ಅಪರೂಪದ ಜೀವಿಗಳ ಸಂತತಿ ವಿನಾಶದ ಅಂಚಿಗೆ ತಲುಪಿವೆ. ಇವುಗಳಲ್ಲಿ ಕೆಂಪುಮೂತಿಯ ಲಂಗೂರ್(ಮಂಗ ಪ್ರಭೇದ) ಸಹ ಸೇರಿದೆ. ಜೊತೆಗೆ 800 ಆನೆಗಳಿಗೆ ವಲಸೆ ಹೋಗುವ ದಾರಿ ಬಂದ್‌ ಆಗಿ ಅವುಗಳು ಅತಂತ್ರವಾಗಿವೆ. ಇವು ಪರಿಸರ ಮತ್ತು ಪ್ರಾಣಿಗಳ ಕುರಿತ ಕತೆಯಾದರೆ, ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದ ಜನತೆಯ ನೋವು ಜಗತ್ತಿನಾದ್ಯಂತ ಅರಣ್ಯರೋದನವಾಗಿದೆ. ಇಂತಹ ಯೋಜನೆಗಳ ಫಲವಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಿ, ಬೇರೆಡೆ ನಿವೇಶನ, ಭೂಮಿ ನೀಡಿದ್ದರೂ ಸಹ ಅವೆಲ್ಲಾ ಅರಣ್ಯ ಪ್ರದೇಶವೇ ಆಗಿವೆ. ಒಂದೆಡೆ ಹಿನ್ನೀರಿನಲ್ಲಿ, ಮತ್ತೊಂದೆಡೆ ಜನವಸತಿ ಪ್ರದೇಶದ ನೆಪದಲ್ಲಿ ಅರಣ್ಯ ಭೂಮಿಯ ವಿಸ್ತಾರ ಕುಗ್ಗುತ್ತಿದ್ದು, ಅರಣ್ಯಜೀವಿಗಳೆಲ್ಲಾ ನಾಡಿನತ್ತ ಮುಖಮಾಡತೊಡಗಿವೆ. ಇವುಗಳ ಜೊತೆ ನಿಸರ್ಗದ ಮಡಿಲಲ್ಲಿ, ಸ್ವಚ್ಛಂದವಾಗಿ ಧುಮ್ಮಿಕ್ಕಿ ಹರಿವ ನದಿಗಳ ಜಲಧಾರೆಯಿಂದ ಕಂಗೊಳಿಸುತ್ತಿದ್ದ ಜಲಪಾತಗಳೆಲ್ಲಾ ಈಗ ಕಣ್ಮರೆಯಾಗುತ್ತಿವೆ. ಮಳೆಗಾಲದಲ್ಲಿ ನದಿಯ ಪ್ರವಾಹದ ಪರಿಣಾಮ, ಜಲಾಶಯದಿಂದ ಬಿಡುಗಡೆಗೊಂಡ ನೀರಿನಿಂದಾಗಿ ಕೆಲವು ಕಾಲ ಜೀವಂತವಾಗಿರುವ ಇವು ಉಳಿದ ಋತುಮಾನಗಳಲ್ಲಿ ಅವಶೇಷಗಳಂತೆ ಕಾಣುತ್ತವೆ. ಇಂದು ಬಹುತೇಕ ಜಲಪಾತಗಳು ತಮ್ಮ ಹಿಂದಿನ ವೈಭವವನ್ನು ಕಳೆದುಕೊಂಡಿವೆ.

ಜಲಾಶಯಗಳ ನಿರ್ಮಾಣದಿಂದಾಗಿ ನದಿ ನೀರಿನಲ್ಲಿದ್ದ ಖನಿಜ ಮತ್ತು ಲವಣಾಂಶಗಳ ನಷ್ಟ ಮತ್ತೊಂದು ಬಗೆಯ ದುರಂತ. ಪರ್ವತ ಗಿರಿ ಶ್ರೇಣಿಗಳಿಂದ ಹರಿಯುತ್ತಿದ್ದ ನೀರಿನಲ್ಲಿದ್ದ ಖನಿಜ, ಲವಣಾಂಶಗಳು ಜಲಚರಗಳಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ನದಿ ತೀರಗಳಿಗೆ ಗಟ್ಟಿತನವನ್ನು ಒದಗಿಸಿ, ಭೂ ಸವೆತವನ್ನು ತಡೆಗಟ್ಟುತ್ತಿತ್ತು. ಯಾವಾಗ ಜಲಾಶಯಗಳು ನಿರ್ಮಾಣವಾದವೋ, ನದಿ ನೀರಿನ ಖನಿಜ, ಲವಣಾಂಶಗಳೆಲ್ಲಾ ಜಲಾಶಯದ ತಳಭಾಗ ಸೇರಿ, ಶೇಖರವಾಗುತ್ತಿರುವ ಹೂಳಿನಲ್ಲಿ ಮಿಶ್ರವಾಗಿ, ಸಿಹಿ ನೀರನ್ನು ಉಪ್ಪು ನೀರನ್ನಾಗಿ ಪರಿವರ್ತಿಸಿದವು. ಇದಲ್ಲದೆ ಅಣೆಕಟ್ಟು ನಿರ್ಮಾಣದಿಂದ ನದಿಯ ತೀರಗಳು ಶಿಥಿಲಗೊಂಡವಲ್ಲದೆ, ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಹೊರಬಿಟ್ಟ ನೀರಿನ ಜೊತೆ ಹೂಳೂ ಸೇರಿ ನದಿಯ ಇಕ್ಕೆಲಗಳ ಫಲವತ್ತಾದ ಭೂಮಿಯನ್ನು ಚೌಳುಭೂಮಿಯನ್ನಾಗಿ ಮಾಡಿದವು. ಅಣೆಕಟ್ಟು ನಿರ್ಮಾಣಕ್ಕೆ ಮೊದಲು ನದಿಗಳು ನೀರಿನ ಜೊತೆ ತಂದು ಹಾಕುತ್ತಿದ್ದ ಮೆಕ್ಕಲು ಮಣ್ಣಿನಿಂದ ಈ ಭೂಮಿಗಳು ವಂಚಿತವಾದವು.

ಅಮೆರಿಕಾದ ಕೊಲರಾಡೊ ನದಿಗೆ ಕಟ್ಟಿದ ಹೂವರ್ ಅಣೆಕಟ್ಟಿನ ಜಲಾಶಯದ ಕೆಳಭಾಗದ 145 ಕಿ.ಮೀ. ಉದ್ದಕ್ಕೂ 110 ದಶಲಕ್ಷ ಕ್ಯೂಬಿಕ್ ಮೀಟರ್ ಸವಕಲು ಮಣ್ಣು ಸಮುದ್ರ ಸೇರಿದೆ. ಅಲ್ಲದೆ ನದಿಯ ಆಳ ಕೇವಲ 12 ಅಡಿಗೆ ಸೀಮಿತಗೊಂಡಿದೆ. ಈಜಿಪ್ಟ್‌ನ ನೈಲ್ ನದಿ ಅಲ್ಲಿನ ಕೃಷಿಕರ ಪಾಲಿಗೆ ವರದಾನವಾಗಿತ್ತು. ಪ್ರತಿ ವರ್ಷ ಪ್ರವಾಹದ ವೇಳೆ ಅದು ಹೊತ್ತು ತರುತ್ತಿದ್ದ ಫಲವತ್ತಾದ ಮೆಕ್ಕಲು ಮಣ್ಣು ಕೃಷಿ ಚಟುವಟಿಕೆಗೆ ಯೋಗ್ಯ ಗೊಬ್ಬರದಂತೆ ಬಳಕೆಯಾಗುತ್ತಿತ್ತು. ಆದರೆ ಈ ನದಿಗೆ ನಾಸರ್ ಅಣೆಕಟ್ಟು ನಿರ್ಮಾಣವಾದ ನಂತರ, ನದಿ ನೀರಿನಲ್ಲಿ ಹರಿಯುವ ಖನಿಜ, ಲವಣಾಂಶದ ಬದಲು, ಜಲಾಶಯದ ನೀರಿನಲ್ಲಿರುವ ಅಲ್ಯುಮಿನಿಯಂ ಮತ್ತು ಕಬ್ಬಿಣಾಂಶ ರೈತರ ಕೃಷಿಭೂಮಿಗೆ ಜಮೆಯಾಗತೊಡಗಿವೆ. ಕೃಷಿ ಭೂಮಿಯಲ್ಲಿನ ಈ ಅಂಶಗಳನ್ನು ತಗ್ಗಿಸಲು ರೈತರು ವಿವಿಧ ರಾಸಾಯನಿಕಗಳನ್ನು ಬಳಸುತ್ತಾ ಬಸವಳಿದಿದ್ದಾರೆ. ಭೂಮಿ ಕೂಡ ಬಂಜರಾಗಿ ಪರಿವರ್ತನೆಯಾಗುತ್ತಿದೆ.

ಅಮೆರಿಕಾದಲ್ಲಿ ಹರಿಯುವ ಮಿಸಿಸಿಪ್ಪಿ ನದಿಗೆ ಮಿಸ್ಸಾರಿ ಎಂಬಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ, 1953ರಿಂದ ಇಲ್ಲಿಯವರೆಗೆ ಈ ಅಣೆಕಟ್ಟಿನ ಪ್ರಭಾವದಿಂದಾಗಿ ಲೂಸಿಯಾನ, ಅಂದರೆ ಜಲಾಶಯದ ಕೆಳಗಿನ ಪ್ರಾಂತ್ಯದಲ್ಲಿ, ಜಲಾಶಯದಿಂದ ಬಿಡುಗಡೆ ಮಾಡಿದ ನೀರಿನ ರಭಸಕ್ಕೆ 10 ಸಾವಿರ ಹೆಕ್ಟೇರ್ ಭೂಮಿ ನದಿ ನೀರಿನಲ್ಲಿ ಕೊಚ್ಚಿಹೋಗುವುದರ ಜೊತೆಗೆ ಇದರಲ್ಲಿ ಅರ್ಧದಷ್ಟು ಭೂಮಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದಿದೆ.

ಸಹಜವಾಗಿ ಸಮುದ್ರ ಸೇರುತ್ತಿದ್ದ ನದಿಗಳ ಸಹಜ ಪ್ರಕ್ರಿಯೆ ಸ್ಥಗಿತಗೊಂಡ ನಂತರ, ಅನೇಕ ಕಡಲ ತೀರಗಳು ತಮ್ಮ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ವಿಕೃತ ರೂಪ ತಾಳಿವೆ. ಇವುಗಳ ಸೌಂದರ್ಯೀಕರಣಕ್ಕಾಗಿ ಸರಕಾರಗಳು ಕೋಟ್ಯಾಂತರ ಡಾಲರ್ ವ್ಯಯ ಮಾಡುತ್ತಿವೆ.

(ಮುಂದುವರಿಯುವುದು)

ರಾಜಕೀಯ ಸಂತ ಕಾಮರಾಜರ ನೆನಪು

[36 ವರ್ಷಗಳ ಹಿಂದೆ ಗಾಂಧಿ ಜಯಂತಿಯ ದಿನದಂದು ನಿಧನರಾದ ಕಾಮರಾಜ ನಾಡಾರ್, ಕೇವಲ ತಮಿಳುನಾಡಿನ ಆದರ್ಶವಾಗಿರಲಿಲ್ಲ. ಹಿಂದುಳಿದ ವರ್ಗದ, ಬಡತನದ ಹಿನ್ನೆಲೆಯ, ಹೆಚ್ಚು ವಿದ್ಯಾಭ್ಯಾಸವೂ ಇಲ್ಲದಿದ್ದ ಕಾಮರಾಜರು ಕೇವಲ ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯ ರಾಜಕಾರಣ ಮತ್ತು ಆಡಳಿತದಿಂದ ಭಾರತದ ಜನಮನವನ್ನು ಗೆದ್ದಿದ್ದು ಮತ್ತು ಪ್ರಭಾವಿಸಿದ್ದು ಇತಿಹಾಸ. ಆದರ್ಶವಾದಿ ರಾಜಕೀಯ ನಾಯಕರೇ ಇಲ್ಲವಾಗುತ್ತಿರುವ ಬರ್ಭರ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಈ ಗಾಂಧಿ ಜಯಂತಿಯ ಸಮಯದಲ್ಲಾದರೂ ಗಾಂಧಿ, ಕಾಮರಾಜರಂತಹವರು ನೆನಪಾಗಲಿ, ಆ ಆದರ್ಶ ಮತ್ತು ಸಾರ್ವಜನಿಕ ಸೇವೆಯಲ್ಲಿನ ಬದ್ಧತೆ ಮತ್ತು ಪ್ರಾಮಾಣಿಕತೆಗಳು ಮತ್ತೊಮ್ಮೆ ಜ್ವಲಿಸಲಿ ಎಂದು ಆಶಿಸುತ್ತಾ, ಗಾಂಧಿ ಜಯಂತಿ ಪ್ರಯುಕ್ತವಾಗಿಯೇ ಕಾಮರಾಜರ ಕುರಿತ ಈ ಲೇಖನ ಬರೆದ ಜಗದೀಶ್ ಕೊಪ್ಪರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ತಿಳಿಸುತ್ತೇನೆ. -ರವಿ ಕೃಷ್ಣಾ ರೆಡ್ಡಿ.]

– ಡಾ. ಎನ್.ಜಗದೀಶ್ ಕೊಪ್ಪ

ಕಳೆದ ಒಂದು ವರ್ಷದಿಂದ ಪ್ರಾಚೀನ ತಮಿಳು ಕಾವ್ಯದ ಅಧ್ಯಯನದಲ್ಲಿ ತೊಡಗಿಕೊಂಡಿರುವ ನನಗೆ ತಮಿಳು ಕಾವ್ಯದ ಉಗಮದ ಬಗ್ಗೆ ಅಪಾರ ಆಸಕ್ತಿ . ಸಂಸ್ಕೃತ ಮತ್ತು ಭಾರತೀಯ ಕಾವ್ಯ ಮೀಮಾಂಸೆಯ ನೆರಳು ಸಹ ಸೋಂಕದೆ ಹುಟ್ಟಿದ ಭಾರತೀಯ ಭಾಷೆಯ ಕಾವ್ಯಗಳೆಂದರೆ, ಒಂದರಿಂದ ಮೂರನೇ ಶತಮಾನದಲ್ಲಿ ಸೃಷ್ಟಿಯಾದ ತಮಿಳು ಸಂಗಂ ಕಾವ್ಯ ಮತ್ತು ಹನ್ನೊಂದನೇ ಶತಮಾನದಲ್ಲಿ ಕನ್ನಡ ಬಾಷೆಯಲ್ಲಿ ಮೂಡಿಬಂದ ವಚನ ಸಾಹಿತ್ಯ.

ರೂಪ, ರಸ, ಸ್ಪರ್ಶ, ಗಂಧ ಇವುಗಳ ಹಂಗಿಲ್ಲದೆ ಕಾವ್ಯ ಕಟ್ಟಿದ ತಮಿಳರು ಕಣ್ಣೆದುರುಗಿನ ಬೆಟ್ಟ, ಕಾಡು, ಮಳೆ, ಕಡಲು, ಗಿಡ ಮರ, ಬಳ್ಳಿ ಇವುಗಳನ್ನ ರೂಪಕ, ಪ್ರತಿಮೆಗಳನ್ನಾಗಿ ಬಳಸಿಕೊಂಡು ಕಾವ್ಯ ಕಟ್ಟಿದ ರೀತಿ ಆಶ್ಚರ್ಯ ಮೂಡಿಸುತ್ತದೆ. ಈ ಕಾವ್ಯ ಪರಂಪರೆ ಇಂದಿಗೂ ಕೂಡ ತಮಿಳು ಜನಪದರಲ್ಲಿ ಗುಪ್ತಗಾಮಿನಿಯಾಗಿ  ಜೀವನದಿಯಂತೆ ಅವರ ಹಬ್ಬ, ಹುಟ್ಟು, ಸಾವು, ಮತ್ತು ಆ ಕ್ಷಣಕ್ಕೆ ಕಟ್ಟಿ ಹಾಡುವ ಹಾಡುಗಬ್ಬಳಲ್ಲಿ ಹರಿದುಬಂದಿದೆ.

ಇಂತಹ ಹಾಡುಗಳನ್ನು ಹುಡುಕಿಕೊಂಡು ಫಕೀರನಂತೆ ಪ್ರತಿ ಮೂರು ತಿಂಗಳಿಗೆ ತಮಿಳುನಾಡು ಅಲೆಯುವ ನನಗೆ ಅಲ್ಲಿನ ಹಿರಿಯ ಜೀವಗಳನ್ನು ಮಾತಿಗೆ ಎಳೆದಾಗ ಅವರು ಸದಾ ನೆನಪಿಗೆ ತಂದುಕೊಳ್ಳುವುದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ ನಾಡಾರ್‌ರವರನ್ನು. ವಿಶೇಷವಾಗಿ ಮಧುರೈ, ನಾಗರಕೊಯಿಲ್, ಕನ್ಯಾಕುಮಾರಿ, ತಿರುನಲ್ವೇಲಿ, ರಾಮನಾಥಪುರ ಜಿಲ್ಲೆಗಳ ಜನರ ಎದೆಯಲ್ಲಿ ಕಾಮರಾಜರು ಇಂದಿಗೂ ಜೀವಂತವಾಗಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಮಧುರೈ ನಗರದಲ್ಲಿದ್ದಾಗ ಅರ್ಧ ದಿನ ಅವರ ಹುಟ್ಟೂರಾದ ವಿರುದನಗರಕ್ಕೆ ಬೇಟಿ ನೀಡುವ ಕಾರ್ಯಕ್ರಮ ರೂಪಿಸಿಕೊಂಡಿದ್ದೆ. ಮಧುರೈ ನಗರದಿಂದ ಕೇವಲ 42 ಕಿ.ಮಿ. ದೂರದ ವಿರುಧನಗರ ಹಲವಾರು ದೇಗುಲಗಳಿಂದ ಆವೃತ್ತವಾಗಿರುವ ಪುಟ್ಟ ಪಟ್ಟಣ. ಕನ್ಯಾಕುಮಾರಿಗೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಸಿಗುವ ಈ ಊರು ನಮ್ಮ ಉತ್ತರ ಕರ್ನಾಟಕದ ಪ್ರದೇಶವನ್ನು ನೆನಪಿಗೆ ತರುತ್ತದೆ. ಕಪ್ಪುನೆಲ, ಬಳ್ಳಾರಿ ಜಾಲಿಯ ಮುಳ್ಳುಗಿಡ, ಉರಿವ ಬಿಸಿಲು, ಕಾಡುವ ಬಡತನ, ಎಲ್ಲವೂ ಇಲ್ಲಿನ ಜನರ ಬದುಕಿನಲ್ಲಿ ತಳಕು ಹಾಕಿಕೊಂಡಿವೆ. ಆದರೆ ಈ ಸ್ಥಿತಿ ಉತ್ತರ ಭಾಗದ ಮಧುರೈ ಜಿಲ್ಲೆಯಲ್ಲಿ ಇಲ್ಲ. ನೀರಾವರಿ, ಮಳೆಯಾಶ್ರಿತ ಭೂಮಿ, ಪಳನಿ ಹಾಗು ಕೊಡೈಕೆನಲ್ ಬೆಟ್ಟಗಳ ಸಾಲಿನಿಂದ ಆವೃತ್ತವಾಗಿರುವ ಈ ಪ್ರದೇಶ ಕೆಂಪು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ.

ಈ ನೆಲದಲ್ಲಿ ಬಡತನ, ಹಸಿವು ಹೇಗೆ ಒಬ್ಬ ಶ್ರೇಷ್ಠ ಮನುಷ್ಯನನ್ನು ರೂಪಿಸಬಲ್ಲದು ಎಂಬುದಕ್ಕೆ ಕಾಮರಾಜ ನಾಡರ್ ನಮ್ಮೆದುರು ಸಾಕ್ಷಿಯಾದ್ದಾರೆ. ಇವರು ಬದುಕಿದ್ದ ರೀತಿ, ಮೈಗೂಡಿಸಿಕೊಂಡಿದ್ದ ಸರಳ ಜೀವನ, ನಾಡಿನ ಜನತೆಯ ಶ್ರೇಯಸ್ಸಿಗಾಗಿ ತಮ್ಮ ತನು ಮನವನ್ನು ಅರ್ಪಿಸಿಕೊಂಡ ಬಗೆ ಇವತ್ತಿಗೂ ಭಾರತದ ರಾಜಕಾರಣಿಗಳಿಗೆ ದಾರಿ ದೀಪವಾಗಬಲ್ಲದು.

ಮಧುರೈ ನಗರದಲ್ಲಿ ಕಾಮರಾಜರ ಮನೆಗೆ ಹೋಗುವ ದಾರಿ ಕುರಿತಂತೆ ಮಾಹಿತಿ ಕಲೆಹಾಕಿಕೊಂಡಿದ್ದರಿದ ವಿರುಧನಗರದ ಬಸ್ ನಿಲ್ದಾಣದಲ್ಲಿ ಇಳಿದು ಬಜಾರ್ ರಸ್ತೆಯ ಮೂಲಕ ಸಾಗಿ, ರಸ್ತೆ ಕೊನೆಗೊಳ್ಳುವ ಜಾಗದಲ್ಲಿದ್ದ  ಪುಷ್ಕರಣಿ ಬಳಿ ನಿಂತುಬಿಟ್ಟೆ. ಕಾಮರಾಜರ ಮನೆಯೆಂದರೇ ಅದೊಂದು ಬೃಹತ್ ವಿಸ್ತಾರವಾದ ಬಂಗಲೆ ಎಂಬುದು ನನ್ನ ಕಲ್ಪನೆಯಾಗಿತ್ತು. ಮಹಿಳಾ ಪೊಲಿಸ್ ಪೇದೆಯೊಬ್ಬಳು ರಸ್ತೆಯೆದುರುಗಿನ ಗಲ್ಲಿಯೊಂದನ್ನು ತೋರಿಸಿ ಅಲ್ಲಿ ಕಾಮರಾಜರ ಪುಟ್ಟ ಮನೆಯಿದೆ ಎಂದು ಮಾರ್ಗದರ್ಶನ ಮಾಡಿದಳು. ಕೇವಲ ಎಂಟು ಅಡಿ ಅಗಲದ ಆ ಒಣಿಯಲ್ಲಿ ನಡೆದು ಅವರ ಮನೆ ಎದುರು ನಿಂತಾಗ ನನಗೆ  ಅಚ್ಚರಿ ಕಾದಿತ್ತು.

ಎರಡು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ, ಎರಡು ಬಾರಿ ಸಂಸತ್ ಸದಸ್ಯರಾಗಿ, ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾಮರಾಜರು ವಾಸವಾಗಿದ್ದ ಆ ಪುಟ್ಟ ಮನೆ ಅಳತೆ ಇದ್ದದ್ದು  ಕೇವಲ 12 ಅಡಿ ಅಗಲ ಮತ್ತು 30 ಅಡಿ ಉದ್ದ ಮಾತ್ರ. ಈ ಮನೆ ಅವರು ಕಟ್ಟಿಸಿದ್ದಲ್ಲ. ಅದೂ ಕೂಡ ತಂದೆಯಿಂದ ಬಳುವಳಿಯಾಗಿ ಬಂದದ್ದು. ಮನೆಯೊಳಗಿನ ದಾಖಲೆಗಳು, ಭಾವಚಿತ್ರಗಳು ಅವರ ಬದುಕಿನ ಬದ್ಧತೆ ಹಾಗೂ ಸರಳತೆಗಳನ್ನು ತೆರದಿಡುತ್ತಿದ್ದವು.

1903ರ ಜುಲೈ15ರಂದು ವಿರುಧನಗರದ ಕುಮಾರಸ್ವಾಮಿ ನಾಡರ್ ಹಾಗು ಶಿವಕಾಮಿ ಅಮ್ಮಾಳ್ ದಂಪತಿಗಳಿಗೆ ಜನಿಸಿದ ಕಾಮರಾಜ್ ಬಾಲ್ಯದಲ್ಲೇ, ಅಂದರೆ ಮಾಧ್ಯಮಿಕ ಶಿಕ್ಷಣದ ಅವಧಿಯಲ್ಲೇ ವಿದ್ಯಾಭ್ಯಾಸ ತ್ಯಜಿಸಿದರು. ತೆಂಗಿನಕಾಯಿ ವ್ಯಾಪಾರಿಯಾಗಿದ್ದ ತಂದೆ ಮಗನನ್ನು ಸಂಬಧಿಕರಾದ ಕರ್ಲುಪ್ಪಯ್ಯ ಎಂಬುವರ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿಸಿದರೆ, ಕಾಮರಾಜ್ ವ್ಯಾಪಾರ ಮಾಡುವುದನ್ನು ಬಿಟ್ಟು ಬಜಾರ್ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ಸ್ವಾತಂತ್ರ ಹೋರಾಟಗಾರರನ್ನು ಸೇರಿಕೊಳ್ಳುತ್ತಿದ್ದರು. ಇದರಿಂದ ಚಿಂತಾಕ್ರಾಂತರಾದ ತಂದೆ-ತಾಯಿ ದೂರದ ತಿರುವನಂತಪುರದಲ್ಲಿ ಕೆಲಸಕ್ಕೆ ಸೇರಿಸಿದರು. ಸ್ವಾತಂತ್ರ ಸಂಗ್ರಾಮದತ್ತ ತುಡಿಯುತಿದ್ದ ಕಾಮರಾಜರನ್ನು ಯಾವ ಶಕ್ತಿಗಳೂ ತಡೆಯಲು ಸಾಧ್ಯವಾಗಲಿಲ್ಲ. 15್ನೇ ವಯಸ್ಸಿಗೆ ಕಾಂಗ್ರೇಸ್ ಕಾರ್ಯಕರ್ತನಾಗಿ ಸೇರ್ಪಡೆಯಾದ ಅವರು, 1930 ರಲ್ಲಿ ಗಾಂಧೀಜಿ ದಂಡಿಯಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಸಮಯದಲ್ಲಿ ತಮಿಳುನಾಡಿನ ವೇದಾರಣ್ಯಂನಲ್ಲಿ ಸತ್ಯಮೂರ್ತಿ ನೇತ್ರತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದರು. ವರದರಾಜನಾಯ್ಡುರವರ ಭಾಷಣ ಮತ್ತು ರಾಜಾಜಿಯವರ ಸ್ವಾತಂತ್ರ ಹೋರಾಟ ಇವುಗಳಿಂದ ಸ್ಪೂರ್ತಿ ಪಡೆದಿದ್ದ ಕಾಮರಾಜರು ವಿರುಧನಗರದ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದರೂ ಸಹ, ಊರಿನ ಸೇವೆಗಿಂತ ದೇಶದ ಸೇವೆ ಮುಖ್ಯ ಎಂದು ಭಾವಿಸಿ, ನಂತರದ ದಿನಗಳಲ್ಲಿ ಅಂದರೆ, 1942ರಲ್ಲಿ ನಡೆದ ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡು ಮಹರಾಷ್ಟದ ಅಮರಾವತಿಯ ಜೈಲಿನಲ್ಲಿ ಹಲವು ವರ್ಷಗಳ ಕಾಲ ಸರೆಮನೆ ವಾಸ ಅನುಭವಿಸಿದರು.

ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಅನುಯಾಯಿಯಾಗಿದ್ದ ಕಾಮರಾಜರು ಹಂತ ಹಂತವಾಗಿ ಮೇಲಕ್ಕೇರಿ ಎರಡು ಬಾರಿ ವಿಧಾನಸಭೆ ಸದಸ್ಯರಾಗಿ ನಂತರ 52ರಿಂದ 54ರವರೆಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾಗಲೇ ಅದೇ ವರ್ಷ 1954ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 1954ರಿಂದ 1963ರವರೆಗೆ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿಯನ್ನು ತಮಿಳುನಾಡಿನ ಇತಿಹಾಸದಲ್ಲಿ ಸುವರ್ಣಯುಗವೆಂದು ರಾಜಕೀಯ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದ ಅವರಿಗೆ ವ್ಯಕ್ತಿಗತ ಬದುಕಿನ ಬಗ್ಗೆ ಯಾವ ಮಹತ್ವಾಕಾಂಕ್ಷೆ ಇರಲಿಲ್ಲ. ಅವರ ಬಳಿ ಇದ್ದದ್ದು ಎರಡು ಅರ್ಧತೋಳಿನ ಅಂಗಿ, ಎರಡು ಪಂಚೆ, ಹಾಗೂ ಜೇಬಿನಲ್ಲಿರುತಿದ್ದ  ಒಂದು ಹೀರೊ ಪೆನ್ ಮಾತ್ರ. ಇವಿಷ್ಟೇ ಅವರ ಬದುಕಿನ ಕೊನೆಯವರೆಗೂ ಆಸ್ತಿಯಾಗಿದ್ದವು.

ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಅಂದಿನ ಮದ್ರಾಸ್ ನಗರದ ಸಾಮಾನ್ಯ ಮನೆಯಲ್ಲಿ ವಾಸವಾಗಿದ್ದುಕೊಂಡು ತಮ್ಮ ಅಡುಗೆಯನ್ನು ತಾವೇ ತಯಾರಿಸಿಕೊಳ್ಳುತಿದ್ದರು. ಅವರ ಕಾರಿನ ಚಾಲಕನೇ ಅವರ ಮನೆಯ ಸೇವಕ ಮತ್ತು ಆಪ್ತ ಸಹಾಯಕ ಎಲ್ಲವೂ ಆಗಿದ್ದನು.

ಅವರು ಮುಖ್ಯಮಂತ್ರಿಯಾಗಿದ್ದಾಗ ಜರುಗಿದ ಒಂದು ಘಟನೆ ತಮಿಳುನಾಡು ರಾಜ್ಯದ ಇತಿಹಾಸವನ್ನೇ ಬದಲಾಯಿಸಿಬಿಟ್ಟಿತು. ಸ್ವತಃ ಬಡತನದ ಕುಟುಂಬದಿಂದ ಬಂದಿದ್ದ ಕಾಮರಾಜರ ಮನೆಯೆದುರು ಒಂದು ದಿನ  ಬೆಳಿಗ್ಗೆ ಮಧ್ಯ ವಯಸ್ಸಿನ ವಿದವೆಯೊಬ್ಬಳು ತನ್ನ ಏಳು ವರ್ಷ ಮಗ ಹಾಗೂ ಎರಡು ವರ್ಷದ ಹೆಣ್ಣುಮಗುವಿನೊಂದಿಗೆ ಬಂದು, “ಸ್ವಾಮೀ, ನಾನು ಅನಾಥೆ, ಈ ನನ್ನ ಮಗ ಶಾಲೆಗೆ ಹೋಗಬೇಕೆಂದು ಹಠ ಹಿಡಿದಿದ್ದಾನೆ. ಹೊಟ್ಟೆಗೆ ಅನ್ನವಿಲ್ಲ, ಮಲಗಲು ಸೂರಿಲ್ಲ. ಏನಮಾಡಲಿ?”  ಎಂದು ಕಣ್ಣೀರಿಡುತ್ತಾ, ಕೈ ಜೋಡಿಸಿ ಅವರೆದುರು ನಿಂತುಬಿಟ್ಟಳು. ವಿಧಾನಸಭೆಗೆ ಹೊರಟು ನಿಂತಿದ್ದ ಕಾಮರಾಜರು ಆ ಬಾಲಕನ ಕೈ ಹಿಡಿದು ಕರೆದುಕೊಂಡು ಹೋಗಿ ಸ್ಥಳೀಯ ಶಾಲೆಗೆ ಸೇರಿಸಿ ಅವನ ವಿದ್ಯಾಭ್ಯಾಸದ ಹೊಣೆ ಹೊತ್ತರು. ಆ ಬಾಲಕನ ಶಿಕ್ಷಣದ ಖರ್ಚು ಸರಿದೂಗಿಸಲು ಅವರು ಊಟದ ಜೊತೆ ಸೇವಿಸುತಿದ್ದ ಅರ್ಧ ಆಣೆ ಬೆಲೆಯ ಮೊಟ್ಟೆಯನ್ನು ತ್ಯಜಿಸಿದರು. ಏಕೆಂದರೆ, ಅವರು ಪಡೆಯುತಿದ್ದ ಸಂಬಳದಲ್ಲಿ ತನ್ನ ವಿಧವೆ ತಾಯಿಯ ಜೀವನ ನಿರ್ವಹಣೆಗೆ  ಹಣ ಕಳಿಸಿ, ಸೇವಕನ ಸಂಬಳವನ್ನು ತಾವೇ ನೀಡಬೇಕಾಗಿತ್ತು.

ಈ ಘಟನೆ ಜರುಗಿದ ಒಂದು ತಿಂಗಳಿನಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಉಚಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು, ಅಲ್ಲದೆ, ಮಧ್ಯಾಹ್ನದ ವೇಳೆ ಉಪಹಾರ ವ್ಯವಸ್ಥೆ ಮಾಡಿದರು. ಇದೂ ಕೂಡ ದೇಶದಲ್ಲೇ ಪ್ರಥಮ ಬಾರಿ ಜಾರಿಯಾದದ್ದು. ಇದಲ್ಲದೆ, ತಮಿಳುನಾಡಿನಲ್ಲಿ ರಾಜಾಜಿ ಕಾಲದಲ್ಲಿ ಇದ್ದ  6 ಸಾವಿರ ಶಾಲೆಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿ, 22 ಸಾವಿರ ಶಾಲೆಗಳಿರುವಂತೆ ನೋಡಿಕೊಂಡರು. ಇದರ ಪರಿಣಾಮ ತಮಿಳುನಾಡಿನಲ್ಲಿ ಶೇ.7 ರಷ್ಟು ಇದ್ದ ಸಾಕ್ಷರತೆಯ ಪ್ರಮಾಣ ಅವರ ಕಾಲದಲ್ಲಿ  ಶೇ.37ಕ್ಕೆ ಏರಿತು. ಶಿಕ್ಷಣದ ಜೊತೆಗೆ  ಕೃಷಿ ಹಾಗೂ ಕೈಗಾರಿಕೆಗೂ ಒತ್ತು ನೀಡಿದ್ದ ಕಾಮರಾಜರು ಮೆಟ್ಟೂರು ಜಲಾಶಯ ಸೇರಿದಂತೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿ ಒಣ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿದರು. ಕೊಯಮತ್ತೂರು ಇಂದು ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯಲು ಇವರೇ ಕಾರಣಕರ್ತರಾದರು.

ಅಧಿಕಾರದ ಜೊತೆಗೆ ಪಕ್ಷದ ಹಿತಾಸಕ್ತಿ ಕೂಡ ಮುಖ್ಯ ಎಂದು ನಂಬಿದ್ದ ಕಾಮರಾಜರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ಪಕ್ಷದ ಬೆಳವಣಿಗೆಗೆ ಮುಂದಾದರು. ಇದೇ ರೀತಿ ಎಲ್ಲ ಸಚಿವರೂ ರಾಜಿನಾಮೆ ನೀಡಬೇಕೆಂದು ಕರೆ ಇತ್ತರು. ಇವರ ಈ ನಡೆಯೇ ಇಂದು ಭಾರತದ ರಾಜಕೀಯದಲ್ಲಿ “ಕಾಮರಾಜ್ ಸೂತ್ರ” ಎಂದು ಪ್ರಸಿದ್ಧಿಯಾಗಿದೆ.

ಕಾಮರಾಜರ ಬದ್ಧತೆಯನ್ನು ಮನಗಂಡ ಅಂದಿನ ಪ್ರಧಾನಿ ನೆಹರೂರವರು ಅವರನ್ನು ದೆಹಲಿಗೆ ಕರೆಸಿಕೊಂಡು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. 1964ರಲ್ಲಿ ನೆಹರು ನಿಧನಾನಂತರ ಪ್ರಧಾನಿ ಪಟ್ಟಕ್ಕೆ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ 1965ರಲ್ಲಿ ಆಕಸ್ಮಿಕವಾಗಿ ತೀರಿಕೊಂಡಾಗ, ವಯಸ್ಸು ಮತ್ತು ಹಿರಿತನದ ಆಧಾರದ ಮೇಲೆ ಪ್ರಧಾನಿ ಪದವಿ ಕಾಮರಾಜರವರಿಗೆ ಒಲಿಯಿತು. ಆದರೆ ಅದನ್ನವರು ನಯವಾಗಿ ತಿರಸ್ಕರಿಸಿದರು. ಇದಕ್ಕೆ ಕಾಮರಾಜ್ ಕೊಟ್ಟ ಕಾರಣ ಮಾತ್ರ ಇಂದಿಗೂ ಭಾರತದ ರಾಜಕಾರಣದಲ್ಲಿ ಮಾದರಿಯಾಗುವಂತಹದ್ದು. “ನಾನೋರ್ವ ಅವಿದ್ಯಾವಂತ. ರಾಷ್ಟ್ರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಹಲವು ಭಾಷೆ ಹಾಗೂ ಸಂಸ್ಕೃತಿಗಳ ನಾಡಾದ ಭಾರತದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಕಲಿತಿರಬೇಕು. ಅಂತರಾಷ್ಟ್ರೀಯ ವಿದ್ಯಾಮಾನಗಳಿಗೆ, ರಾಷ್ಟ್ರೀಯ ಅಭಿವೃದ್ದಿಗೆ ಶ್ರಮಿಸುವ ಪರಿಜ್ಞಾನವಿರಬೇಕು. ನಾನೊಬ್ಬ ದಕ್ಷಿಣ ಭಾರತದ ಅಪ್ಪಟ ಹಳ್ಳಿಗ. ಪ್ರಧಾನಿಯಾಗುವ ಯಾವ ಯೋಗ್ಯತೆಯೂ ನನ್ನಲ್ಲಿಲ್ಲ,” ಎಂದು ಹೇಳುವ ಮೂಲಕ ಭಾರತದ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಕಾಮರಾಜರು ಇಂದಿರಾಗಾಂಧಿಯನ್ನು ಪ್ರಧಾನಮಂತ್ರಿಯನ್ನಾಗಿಸಿದರು.

1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಇಂದಿರಾಗಾಂಧಿ ಪರ ನಿಂತ ಕಾಮರಾಜರಿಗೆ ನಂತರದ ದಿನಗಳಲ್ಲಿ ಇಂದಿರಾಗಾಂಧಿಯ ಏಕಪಕ್ಷೀಯ ಧೋರಣೆಗಳಿಂದ ಭ್ರಮನಿರಸನವಾಯಿತು. ಅಷ್ಟರ ವೇಳೆಗಾಗಲೇ, ಅಂದರೆ 1967ರಲ್ಲಿ ಅಣ್ಣಾದೊರೆ ನೇತೃತ್ವದ ಡಿ.ಎಂ.ಕೆ. ಪಕ್ಷ ತಮಿಳುನಾಡಿನಲ್ಲಿ ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಂಡಿತ್ತು. 1973ರಲ್ಲಿ ರಾಜಕೀಯ ಬದುಕಿನಿಂದ ನಿವೃತ್ತಿಯಾದ ಕಾಮರಾಜರು ಹುಟ್ಟೂರಾದ ವಿರುಧನಗರಕ್ಕೆ ಬಂದು ತಮ್ಮ ಪುಟ್ಟ ಮನೆಯಲ್ಲಿ ವಿರಾಗಿಯಂತೆ, ರಾಜಕೀಯ ಸಂತನಂತೆ ಸರಳವಾಗಿ ವಾಸಿಸತೊಡಗಿದರು.

1975ರ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಇಹಲೋಕ ತ್ಯಜಿಸಿದ ಕಾಮರಾಜರಿಗೆ ಭಾರತ ಸರಕಾರ 1976ರಲ್ಲಿ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು, ತಮಿಳುನಾಡು ಸರಕಾರ ಚೆನ್ನೈ ನಗರದ ಮೌಂಟ್ ರೋಡಿನಲ್ಲಿ ಬೃಹತ್ತಾದ ಕಾಮರಾಜ ಸ್ಮಾರಕ ಭವನ ನಿರ್ಮಿಸಿತಲ್ಲದೆ, ಸಮುದ್ರ ತೀರದ ಮೆರಿನಾ ಬೀಚ್ ಬಳಿ ಶಾಲಾ ಮಕ್ಕಳ ಹೆಗಲ ಮೇಲೆ ಕೈಯಿಟ್ಟು ನಿಂತ ಕಾಮರಾಜರ ಸುಂದರ ಪ್ರತಿಮೆಯೊಂದನ್ನು ಸ್ಥಾಪಿಸಿ ಗೌರವ ಸೂಚಿಸಿತು. ಇಂದು ತಮಿಳುನಾಡಿನ ಯಾವುದೇ ಊರಿಗೆ ಹೋದರೂ ಕಾಣುವ ಪ್ರತಿಮೆಗಳೆಂದರೆ, ಒಂದು ಕಾಮರಾಜರದು, ಇನ್ನೊಂದು ಅಣ್ಣಾದೊರೈರವರದು. ನಂತರ ಎಂ.ಜಿ.ಆರ್. ಇತ್ಯಾದಿ.

ನಾನು ತಮಿಳುನಾಡಿನಲ್ಲಿ ಸಂಚರಿಸುವಾಗಲೆಲ್ಲಾ, ಕಾಮರಾಜರ ಪ್ರತಿಮೆ ಕಂಡ ತಕ್ಷಣ ಇಂದಿನ ಹಗಲು ದರೋಡೆಯ ನಾಯಕರು ಬೇಡವೆಂದರೂ ನೆನಪಿಗೆ ಬರುತ್ತಾರ ಜೊತೆಗೆ ಜಿಗುಪ್ಸೆ ಮೂಡಿಸುತ್ತಾರೆ.

(ಚಿತ್ರಕೃಪೆ: ಲೇಖಕರದು ಮತ್ತು ವಿಕಿಪೀಡಿಯ)

ಪಾಪು-ಕಂಬಾರ ಮತ್ತು ಕುವೆಂಪು-ಬೇಂದ್ರೆ

– ಡಾ.ಎನ್.ಜಗದೀಶ್ ಕೊಪ್ಪ

ಡಾ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಪಾಟೀಲ ಪುಟ್ಟಪ್ಪನವರನ್ನು 22ರ ಬುಧವಾರ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಗೆಳೆಯರ ಜೊತೆ ಬೇಟಿ ಮಾಡಿದೆ. ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಬಗ್ಗೆ ನನಗೆ ವಿಸ್ಮಯ ಉಂಟುಮಾಡಿತು.

ಪುಟ್ಟಪ್ಪನವರ ವಾದವೆಂದರೆ, ಕಂಬಾರರು ಹಲವರ ಜಾನಪದ ಕೃತಿಯ ವಸ್ತುವನ್ನು ಕದ್ದಿದ್ದಾರೆ, ಕಂಬಾರರ ಲಕ್ಷಾಧಿಪತಿ ರಾಜನ ಕಥೆ ಮುದೆನೂರು ಸಂಗಣ್ಣ ಸಂಗ್ರಹಿದ ಜಾನಪದ ಕಥೆ. ಇದಕ್ಕೆ ಸಂಗಣ್ಣ ಬರೆದ ಪತ್ರ ಅವರಲ್ಲಿದೆಯಂತೆ. ಹಾಗಾಗಿ ಕಂಬಾರರು ಪ್ರಶಸ್ತಿಗೆ ಯೋಗ್ಯರಲ್ಲ. ಪುಟ್ಟಪ್ಪನವರ ವಾದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ, ಸಮಯ ಅದಾಗಿರಲಿಲ್ಲ. ಏಕೆಂದರೆ, ವೈದ್ಯರು ಪಿಸಿಯೋಥೆರೆಪಿ ಚಿಕಿತ್ಸೆ ನೀಡಲು ನಾವು ಹೊರಹೋಗವುದನ್ನೇ ಕಾಯುತಿದ್ದರು.

ಪುಟ್ಟಪ್ಪನವರು ಕನ್ನಡ ನಾಡು ನುಡಿ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಾರೆ, ಅದರೆ ನಮ್ಮ ಜಾನಪದ ಕಥಾ ಪರಂಪರೆ, ಮೌಖಿಕ ಕಾವ್ಯ ಪರಂಪರೆಯ ಬಗ್ಗೆ ಏಕೆ ತಿಳಿದುಕೊಂಡಿಲ್ಲ?

ಜಾನಪದ ಕಥೆಯಾಗಲಿ, ಹಾಡಾಗಲಿ ಅವು ಯಾರೊಬ್ಬರ ಸ್ವತ್ತಲ್ಲ. ಅವುಗಳ ನಿಜ ವಾರಸುದಾರರು ನಮ್ಮ ಜನಪದರು. ಬಾಯಿಂದ ಬಾಯಿಗೆ, ಎದೆಯಿಂದ ಎದಗೆ ಹರಿದು ಬಂದ ಜಾನಪದ ಸಾಹಿತ್ಯ ಸೃಜನಶೀಲರ ಮನಸ್ಸು ಮತ್ತು  ಬಾಯಲ್ಲಿ ಹಲವು ರೂಪಗಳಲ್ಲಿ ಮೈದಾಳಿ ಇಂದು ನಮ್ಮೆದುರು ಹರಡಿಕೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಜನರ ಸಂಪತ್ತು. ಇಂದು ನಮ್ಮೆದೆರು ಇರುವ ಮಂಟೆಸ್ವಾಮಿ ಕಾವ್ಯವಾಗಲಿ, ಮಲೆ ಮಹದೇಶ್ವೇರ ಕಾವ್ಯವಾಗಲಿ, ಜನಪದ ಮಹಾಭಾರತವಾಗಲಿ ಇವೆಲ್ಲವು ಹಲವು ರೂಪಗಳನ್ನು ದಾಟಿ ಬಂದ ಜನಪದ ಕಾವ್ಯಗಳಾಗಿವೆ.

ಕಂಬಾರರು ಸೃಷ್ಟಿಸಿದ ಸಂಗ್ಯಾ-ಬಾಳ್ಯ, ಜೋಕುಮಾರಸ್ವಾಮಿ, ಕರಿಮಾಯಿ, ಋಷ್ಯಶೃಂಗ, ಲಕ್ಷಾಧಿಪತಿರಾಜನ ಕಥೆ, ಇವೆಲ್ಲವೂ ನಮ್ಮ ಜನಪದರ ನಡುವಿನಿಂದ ಎತ್ತಿಕೊಂಡ ಕಥೆಗಳ ಹಂದರದಿಂದ ಕೂಡಿದ ನಾಟಕಗಳು. ಇದನ್ನು ಕಂಬಾರು ಎಂದೂ ಅಲ್ಲಗೆಳದಿಲ್ಲ. ನಿಜ, ಆದರೆ, ಈ ನಾಟಕಗಳ ಸೃಷ್ಟಿಯಲ್ಲಿ ಕಾರ್ಯನಿರ್ವಹಿಸಸಿರುವ ಕಂಬಾರರ ಸೃಜನ ಶೀಲತೆಯನ್ನು ನಾವು ಅಲ್ಲಗೆಳೆಯಲು ಸಾಧ್ಯವೆ?

ಇನ್ನೊಂದು ಗಮನಿಸಬೆಕಾದ ಮುಖ್ಯ ಸಂಗತಿಯಂದರೆ, ಎ.ಕೆ. ರಾಮಾನುಜನ್ ರವರು ಸಂಪಾದಿಸಿದ ದಕ್ಷಿಣ ಭಾರತದ ಜಾನಪದ ಕಥೆಗಳು ಸಂಗ್ರಹದ ಕಥೆಯೊಂದರ ತಿರುಳನ್ನು ಇಟ್ಟುಕೊಂಡು ಗಿರೀಶ್ ಕಾರ್ನಾಡ್ ನಾಗಮಂಡಲ ನಾಟಕ ರಚಿಸಿದರೆ, ಕಂಬಾರರು ಇದೇ ಕಥೆಯನ್ನಾಧರಿಸಿ ಸಿರಿಸಂಪಿಗೆ ನಾಟಕ ರಚಿಸಿದರು. ಇವುಗಳನ್ನು ರಾಮಾನುಜನ್ ಕಥೆಗಳ ಕೃತಿಚೌರ್ಯ ಎಂದು ಕರೆಯಲು ಸಾಧ್ಯವೆ? ಒಂದೇ ಕಥೆಯನ್ನ ಕನ್ನಡದ ಎರಡು ಅನನ್ಯ ಪ್ರತಿಭೆಗಳು ವಿಭಿನ್ನ ರೀತಿ ಗ್ರಹಿಸಿ ನಿರ್ವಹಿಸಿರುವುದು ಕನ್ನಡದ ರಂಗಭೂಮಿಯಲ್ಲೊಂದು ದಾಖಲೆ ಜೊತೆಗೆ  ಹೆಮ್ಮೆಯ ಸಂಗತಿ.

ಮೂಲತಃ ರಾಮಾನುಜನ್ ಕಥೆಯ ವಾರಸುದಾರರಲ್ಲದಿದ್ದರೂ ಕೂಡ, ಅವರ ಸೃಜನಶೀಲ ಮನಸ್ಸು ಇಂತಹ ಕಥೆಗಳ ಆಯ್ಕೆಯ ಹಿಂದೆ ಕೆಲಸ ಮಾಡಿದೆ

ಕಂಬಾರರ ಜನಪ್ರಿಯ ನಾಟಕ ಸಂಗ್ಯಾ ಬಾಳ್ಯ ಬಂದ ನಂತರವೂ ಅವರ ಸಹಪಾಠಿಯಾಗಿದ್ದ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲ್ಬುಗರ್ಿ ನಾಟಕದ ಮೂಲ ರೂಪವನ್ನು ಸಂಗ್ರಹಿಸಿ ಖರೇ ಸಂಗ್ಯಾ-ಬಾಳ್ಯ ಎಂದು ಪ್ರಕಟಿಸಿದ್ದಾರೆ. ಇಂದು ಉತ್ತರ ಕನರ್ಾಟಕದಲ್ಲಿ ಶ್ರೀ ಕೃಷ್ಣ ಪಾರಿಜಾತ ಹಾಗು ಸಂಗ್ಯಾ ಬಾಳ್ಯ ಹಲವು ರೂಪದಲ್ಲಿ ಪ್ರದಶರ್ೀತವಾಗುತ್ತಿವುದು ಪುಟ್ಟಪ್ಪನವರಿಗೆ ತಿಳಿಯದ ಸಂಗತಿಯೆನಲ್ಲ.

ಕಂಬಾರರ ಪ್ರತಿಭೆಯನ್ನು ಅವರ ನಾಟಕಗಳ ಮೂಲಕ ಅಳೆಯಲು ಹೊರಟ ಪುಟ್ಟಪ್ಪನವರಿಗೆ ಅವರ ಹೇಳತೇನ ಕೇಳ ಮುಂತಾದ ಕಾವ್ಯಗಳಾಗಲಿ, ಸಿಂಗಾರವ್ವ ಮತ್ತು ಅರಮನೆ, ಶಿಖರ ಸೂರ್ಯದಂತಹ  ಕಾದಂಬರಿಗಳೇಕೆ ಗೋಚರಿಸಲಿಲ್ಲ?

ಜ್ಙಾನಪೀಠ ಪ್ರಶಸಿ ಎಂಬುದು ಯಾವುದೇ ಸಕರ್ಾರ ಕೊಡುವಂತಹದ್ದಲ್ಲ. ಅದಕ್ಕೆ ಅದರದೇ ಆದ ಆಯ್ಕೆ ಪ್ರಕ್ರಿಯೆಗಳಿವೆ. ಜಾತಿಯ ಬೆಂಬಲ. ಮಠಾಧೀಶರ, ರಾಜಕಾರಣಿಗಳ ಕುಮ್ಮಕ್ಕಿನಿಂದ ಪಡೆಯುವ ರಾಜ್ಯೋತ್ಸವ ಪ್ರಶಸ್ತಿ ಅದಲ್ಲ. ಲಾಬಿಯ ಬಗ್ಗೆ ಮಾತನಾಡುವ ಪುಟ್ಟಪ್ಪನವರಿಗೆ ಈ ವಾಸ್ತವಗಳು ಏಕೆ ಅರ್ಥವಾಗುತ್ತಿಲ್ಲ?

ಕನ್ನಡದಲ್ಲಿ ಬೈರಪ್ಪ ಮಾತ್ರವಲ್ಲ ಜಿ.ಎಸ್. ಶಿವರುದ್ರಪ್ಪ, ಯಶವಂತಚಿತ್ತಾಲ, ಕುಂ.ವೀರಭದ್ರಪ್ಪ ಮುಂತಾದ ಶಕ್ತಿವಂತ ಲೇಖಕರು ಜ್ಙಾನಪೀಠ ಪ್ರಶಸ್ತಿಗೆ ಯೋಗ್ಯರಿದ್ದಾರೆ. ಇಂತಹ ಸಂದರ್ಭದಲ್ಲಿ ಭೈರಪ್ಪನವರ ಪರ ವಕಾಲತ್ತು ವಹಿಸಿ ಕಂಬಾರರನ್ನು ಯೋಗ್ಯರಲ್ಲ ಎಂದು ನಿಂದಿಸುವ ಅಗತ್ಯವಿರಲಿಲ್ಲ. ಕಂಬಾರರು ಈಗಾಗಲೇ ಪದ್ಮಶ್ರಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಪಡೆದು ನಾಟಕಕಾರರಾಗಿ, ಕವಿಯಾಗಿ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡವರು.

ಯಾವುದೇ ಲೇಖಕ ಎಷ್ಟೇ ದೊಡ್ಡವನಿರಲಿ ಆತನಿಗೆ ತನ್ನ ಸಮಕಾಲಿನ ಬರಹಗಾರನ ಬಗ್ಗೆ ಗೌರವ ಸೌಜನ್ಯತೆ ಇರಬೇಕು. ಇದಕ್ಕೆ ಕುವೆಂಪು ನಮ್ಮ ಮುಂದೆ ಉದಾಹರಣೆಯಾಗಿದ್ದಾರೆ.
ಅದು 1960 ದಶಕ ಡಾ. ಪ್ರಭುಶಂಕರರವರು ಕುವೆಂಪು ಮಾರ್ಗದರ್ಶನದಲ್ಲಿ ಭಾವಗೀತೆ ಕುರಿತು ಪಿ.ಹೆಚ್.ಡಿ. ಪದವಿಗಾಗಿ ಅಧ್ಯಯನ ಮಾಡುತಿದ್ದಾಗ ಬೇಂದ್ರೆಯವರ ಕವಿತೆಯೋಂದರ ಸಾಲು “ಮಲ್ಲಿಗಿ ಪಟಪಟನೆ ಬಿರಿದಾವು” ಎಂಬುದರ  ಬಗ್ಗೆ ತಮ್ಮ ಪ್ರಬಂಧದಲ್ಲಿ ಕಟುವಾಗಿ ವಿಮರ್ಶ ಮಾಡಿದ್ದರು. ಹೂವು ಅರಳುವಾಗ ಶಬ್ಧ ಮಾಡುವುದಿಲ್ಲ ಎಂಬುದು ಪ್ರಭುಶಂಕರರ ನಿಲುವಾಗಿತ್ತು. ಪ್ರಬಂಧವನ್ನು ಗಮನಿಸಿದ ಕುವೆಂಪು ಶಿಷ್ಯನನ್ನು ಕರೆದು “ಜಗತ್ತು ಕಾಣದ್ದನ್ನು, ಕೇಳದ್ದನ್ನು ಕವಿ ಕಾಣಬಲ್ಲ, ಕೇಳಬಲ್ಲ ಅದಕ್ಕಾಗಿ ಅವನನ್ನು ಕವಿ ಎಂದು ಕರೆಯುವುದು,” ಎಂದು ಬುದ್ಧಿವಾದ ಹೇಳಿ ವಿಮರ್ಶೆಯನ್ನು ತಿದ್ದುಪಡಿ ಮಾಡಿದರು.

ಇಲ್ಲಿ ಗಮನಿಸಬೇಕಾದ ವಿಶಿಷ್ಟ ಸಂಗತಿಯೆಂದರೆ, ಆ ವೇಳೆಗಾಗಲೆ ಧಾರವಾಡದಲ್ಲಿ ಗೆಳೆಯರ ಬಳಗ ಹೆಸರಿನಲ್ಲಿ ಕೆಲವರು ಬೇಂದ್ರೆ ಪರ ನಿಂತು ಕುವೆಂಪುರವರ ರಾಮಾಯಣ ದರ್ಶನಂ ನಿಂದ ಹಿಡಿದು ಅವರ ಕವಿತೆಗಳ ಮೇಲೆ ಟೀಕೆ ಮಾಡುತ್ತಾ ನಿರಂತರ ವಾಗ್ಧಾಳಿ ನಡೆಸುತಿದ್ದರು. ಈ ಕುರಿತು ಕುವೆಂಪುಗೆ ಬೇಂದ್ರೆ ಬಗ್ಗೆಯಾಗಲಿ, ಅವರ ಗೆಳೆಯರ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ. ಕುವೆಂಪು ಬೇಂದ್ರೆಯವನ್ನು ಕನ್ನಡದ ದೊಡ್ಡ ಕವಿ ಎಂದೇ ಭಾವಿಸಿದ್ದರು. ಬೇಂದ್ರೆಗೂ ಕೂಡ ಕುವೆಂಪು ಬಗ್ಗೆ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿಯೆಂದರೆ, ಕುವೆಂಪು ಕುರಿತು ಬೇಂದ್ರೆ ಬರೆದ ಕವಿತೆಯ ಸಾಲುಗಳೇ ಸಾಕು.

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣದರ್ಶನದಿಂದಲೇ ಕೈ
ಮುಗಿದ ಕವಿಗೆ-ಮಣಿಯದವರು ಆರು?

ಇದು ಕನ್ನಡದ ಇಬ್ಬರು ಮಹಾನ್ ಕವಿಗಳು ಪರಸ್ಪರ ಹೊಂದಿದ್ದ ಗೌರವ ಮತ್ತು ಸಹೃದಯತೆಯ ಭಾವನೆಗಳಿಗೆ ಸಾಕ್ಷಿ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಮೂಲಕ ಕೀರ್ತಿಯ ಕಿರೀಟಕ್ಕೆ ಮತ್ತೋಂದು ಗರಿ ಮುಡಿಸಿದ ಕಂಬಾರರ ಬಗ್ಗೆ ಕನ್ನಡಿಗರು ಸಂಭ್ರಮಿಸುತ್ತಿರುವಾಗ, ಯಜಮಾನನ ಸ್ಥಾನದಲ್ಲಿರುವ ಪಾಟೀಲ ಪುಟ್ಟಪ್ಪ ಈ ರೀತಿ ಪ್ರತಿಕ್ರಿಯಸಬಹುದೆ?

ಇದು ಸಂಕಟದಿಂದ ಕೇಳಲೇಬೇಕಾದ ಪ್ರಶ್ನೆ.

Three Gorges Dam

ಜೀವನದಿಗಳ ಸಾವಿನ ಕಥನ – 4

– ಡಾ.ಎನ್.ಜಗದೀಶ್ ಕೊಪ್ಪ

ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಜಲವಿದ್ಯುತ್ಗಾಗಿ ಅಸಂಖ್ಯಾತ ಅಣೆಕಟ್ಟುಗಳು ನಿರ್ಮಾಣಗೊಂಡವು. ರಷ್ಯಾದ ಮಹಾನದಿಯಾದ ವೋಲ್ಗಾ ನದಿಯೊಂದಕ್ಕೇ ಆರು ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು.

ಯೂರೋಪ್, ಅಮೆರಿಕಾ, ರಷ್ಯಾವನ್ನು ಹೊರತುಪಡಿಸಿದರೆ, ಏಷ್ಯಾದ ಬಹುತೇಕ ರಾಷ್ಟ್ರಗಳು 19 ಮತ್ತು 21ನೇ ಶತಮಾನದಲ್ಲಿ ಬ್ರಿಟೀಷ್ ವಸಾಹತು ಪ್ರದೇಶಗಳಾಗಿದ್ದ ಕಾರಣ, ಇಲ್ಲಿ ಬ್ರಿಟೀಷರ ಅವಶ್ಯಕತೆಗೆ ತಕ್ಕಂತೆ (ಭಾರತವೂ ಸೇರಿ) ಹಲವು ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಬ್ರಿಟೀಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಕಬ್ಬು ಮತ್ತು ಹತ್ತಿ ಬೆಳೆಯಲು ಪ್ರೋತ್ಸಾಹಿಸಿದರು. ಇದರಲ್ಲಿ ಅವರ ಸ್ವ-ಹಿತಾಸಕ್ತಿಯೂ ಅಡಗಿತ್ತು. ಇಂಗ್ಲೆಂಡ್‌ನ ಕೈಗಾರಿಕೆಗಳಿಗೆ ತಮ್ಮ ವಸಾಹತು ಪ್ರದೇಶಗಳಿಂದ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವುದು ಅವರ ಗುರಿಯಾಗಿತ್ತು.

1902ರಲ್ಲಿ ಇದೇ ಬ್ರಿಟೀಷರು ಈಜಿಪ್ಟ್‌ನ ನೈಲ್ ನದಿಗೆ ಐಸ್ವಾನ್ ಅಣೆಕಟ್ಟು ನಿರ್ಮಿಸಿ, ಅಲ್ಲಿ ಹತ್ತಿ ಬೆಳೆಯುವಂತೆ ಪ್ರೋತ್ಸಾಹಿಸಿ, ಲಂಕಾಷ್ವರ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಾಗುವಂತೆ ನೋಡಿಕೊಂಡರು.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ರಾಜಕೀಯ ವಿದ್ಯಾಮಾನಗಳಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಬ್ರಿಟೀಷರಿಂದ ಮುಕ್ತಿ ಪಡೆದವು. ಅಷ್ಟರ ವೇಳೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಅಣೆಕಟ್ಟುಗಳ ನಿರ್ಮಾಣವೊಂದೇ ಮಾರ್ಗ ಮತ್ತು ಮುಕ್ತಿ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿದ್ದ ಕಾರಣ, ಇದು ಸ್ವಾತಂತ್ರ್ಯಾ ನಂತರ ಭಾರತದ ನಾಯಕರ ಮೇಲೂ ಪ್ರಭಾವ ಬೀರಿತು. ಈ ಕಾರಣಕ್ಕಾಗಿಯೇ 1947 ರಿಂದ 1980 ರವರೆಗೆ ರಾಷ್ಟ್ರದ ಒಟ್ಟು ಖರ್ಚಿನಲ್ಲಿ ಶೇ.15 ರಷ್ಟನ್ನು ಭಾರತ ಸರಕಾರ ಅಣೆಕಟ್ಟುಗಳ ನಿರ್ಮಾಣಕ್ಕೇ ಮೀಸಲಾಗಿಟ್ಟಿತು. 1980 ರ ವೇಳೆಗೆ ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಬೃಹತ್ ಗಾತ್ರದ ಅಣೆಕಟ್ಟುಗಳು ನಿರ್ಮಾಣಗೊಂಡವು.

ಇದರ ಪರಿಣಾಮವೆಂದರೆ, ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞರಿಗೆ ಅಣೆಕಟ್ಟುಗಳ ನಿರ್ಮಾಣ ಕುರಿತಂತೆ ಸಲಹೆ, ತಂತ್ರಜ್ಞಾನ ನೀಡುವ ವೃತ್ತಿ ಒಂದು ಬೃಹತ್ ದಂಧೆಯಾಗಿ ಬೆಳೆಯಿತು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿರುವ ಚೀನಾ ದೇಶಕ್ಕೆ 1949 ರವರೆಗೆ ರಷ್ಯಾ, ಹಾಗೂ 1960 ರವರೆಗೆ ಅಮೆರಿಕಾದ ಇಂಜಿನಿಯರ್ಗಳು ಸಲಹೆ ನೀಡಿದ್ದಾರೆ.

ಚೀನಾದಲ್ಲಿ 1960 ರಿಂದ 1990 ರವರೆಗೆ ವರ್ಷವೊಂದಕ್ಕೆ 600 ಅಣೆಕಟ್ಟುಗಳು ನಿರ್ಮಾಣಗೊಂಡವು. ಅಲ್ಲಿನ ಹಳದಿ ನದಿಗೆ ನಿರ್ಮಿಸಲಾದ ಜಗತ್ತಿನ ಬೃಹತ್ ಅಣೆಕಟ್ಟು 2005 ರಲ್ಲಿ ಪೂರ್ಣಗೊಂಡಿತು.

ಜಗತ್ತಿನಾದ್ಯಂತ ಅಣೆಕಟ್ಟುಗಳ ನಿರ್ಮಾಣಕ್ಕೆ ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಣೆಕಟ್ಟುಗಳ ನಿರ್ಮಾಣಕ್ಕಾಗಿ 75 ಶತಕೋಟಿ ಡಾಲರ್ ಹಣವನ್ನು ವಿಶ್ವಬ್ಯಾಂಕ್ ಸಾಲವಾಗಿ ನೀಡಿದೆ. ಇದಲ್ಲದೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಆಹಾರ ಮತ್ತು ಕೃಷಿ ಸಂಘಟನೆ(ಎಫ್.ಎ.ಒ.), ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆಯಡಿ(ಯು.ಎನ್.ಡಿ.ಪಿ.), ಅಮೆರಿಕಾದ ವಿಎಸ್.ಎ.ಐ.ಡಿ. ಸಂಸ್ಥೆ, ಇಂಗ್ಲೆಡ್ನ ಓವರ್ ಸೇಸ್ ಡೆವಲಪ್ಮೆಂಟ್ ಏಡ್ ಸಂಸ್ಥೆಗಳು ಸಹ ಸಾಲದ ನೆರವು ನೀಡುತ್ತಿವೆ.

ಈ ರೀತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಾಯ ನೀಡುತ್ತಿರುವ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು, ಅಣೆಕಟ್ಟುಗಳ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣ ವೆಚ್ಚ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಆಗುತ್ತಿರುವುದು  ಸಹ ಟೀಕೆಗೆ ಗುರಿಯಾಗಿದೆ.

ಬ್ರೆಜಿಲ್, ಪೆರುಗ್ವೆ ರಾಷ್ಟ್ರಗಳ ಗಡಿಭಾಗದಲ್ಲಿ ನದಿಯೊಂದಕ್ಕೆ 12,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಒಂದು ಅಣೆಕಟ್ಟು (ಇದರ ವೆಚ್ಚ 20 ಶತಕೋಟಿ ಡಾಲರ್) ಹಾಗೂ ಚೀನಾದಲ್ಲಿ 18,200 ಮೆಗಾವ್ಯಾಟ್ ವಿದ್ಯುತ್ ಉತ್ಫಾದನೆಗೆ ನಿರ್ಮಿಸಿದ ಮೂರು ಅಣೆಕಟ್ಟುಗಳು (ಇವುಗಳ ವೆಚ್ಚ 50 ಶತಕೋಟಿ ಡಾಲರ್), ಇವುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಯಾ ರಾಷ್ಟ್ರಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವದಿಂದಾಗಿ ಯಾವುದೇ ಅಣೆಕಟ್ಟು ನಿಗದಿತ ವೇಳೆಗೆ ಪೂರ್ಣಗೊಂಡ ಇತಿಹಾಸವೇ ಇಲ್ಲ. ಈಗಾಗಿ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕೂಡ ಮಿತಿ ಮೀರುತ್ತಿದೆ.

ಹಿಂದೊಮ್ಮೆ ಅಣೆಕಟ್ಟುಗಳು ಭಾರತದ ಪಾಲಿನ ಗುಡಿ-ಗೋಪುರಗಳು ಎಂದು ಹಾಡಿ ಹೊಗಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ “ಬೃಹತ್ ಅಣೆಕಟ್ಟುಗಳ ಬಗ್ಗೆ ನಾನು ಮರುಚಿಂತನೆ ನಡೆಸುತ್ತಿದ್ದೇನೆ ಎಂದಿದ್ದರಲ್ಲದೇ, ನಾವು ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ಮಿಸಬಲ್ಲೆವು ಅಷ್ಟೆ. ಆದರೆ ಇವುಗಳಿಂದ ಅರ್ಧದಷ್ಟು ಪ್ರಮಾಣದ ಪ್ರತಿಫಲವಿಲ್ಲ ಎಂಬುದು ಮನದಟ್ಟಾಗಿದೆ” ಎಂದು ಸಂಸತ್ತಿನಲ್ಲಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು (1958).

ಇಂತಹದ್ದೇ ಭಾವನೆಯನ್ನು ರಷ್ಯಾದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಕಿತಾ ಕೃಶ್ನೇವ್ ವೋಲ್ಗಾ ನದಿಗೆ ಕಟ್ಟಲಾದ ಅಣೆಕಟ್ಟನ್ನು ನಾಡಿಗೆ ಅರ್ಪಿಸುವ ಸಂದರ್ಭದಲ್ಲಿ “ಇಂತಹ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳಿಗಿಂತ, ನದಿಗಳ ನೈಜ ಸ್ಥಿತಿಯನ್ನು ನಾಶ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕ ವಿನಾಶಕ್ಕೆ ಬೆಲೆಕಟ್ಟಲಾಗದು” ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರವಾದಿಗಳಿಂದ ಹುಟ್ಟಿಕೊಂಡ ಪ್ರತಿಭಟನೆಯಿಂದಾಗಿ  ಬೃಹತ್ ಅಣೆಕಟ್ಟುಗಳ ಭ್ರಮೆ ನಿಧಾನವಾಗಿ ಕಳಚತೊಡಗಿದೆ. ಪರಿಸರವಾದಿಗಳ ಉಗ್ರ ಹೋರಾಟದ ಫಲವಾಗಿ ಆಸ್ಟ್ರೇಲಿಯಾದ ಪ್ರಾಂಕ್ಲಿನ್ ಅಣೆಕಟ್ಟು, ಥೈಲಾಂಡ್ನ ನಾಮ್ ಚೊಹಾನ್, ಹಂಗೇರಿಯ ನ್ಯಾಗಿ ಮರೇಗ್, ಭಾರತದ ಕೇರಳ ರಾಜ್ಯದ ಮೌನ ಕಣಿವೆಯ ಅಣೆಕಟ್ಟು, ಬ್ರೆಜಿಲ್ನ ಬಾಬಾಕ್ಸರ್, ರಷ್ಯಾದ ಕಟೂನ್, ಪ್ರಾನ್ಸ್ನ ಸರ್ರೆಡಿ-ಲ-ಪೆರ್ರೆ ಹೀಗೆ ಅನೇಕ ಅಣೆಕಟ್ಟುಗಳ ನಿರ್ಮಾಣ ಯೋಜನೆ ರದ್ದಾಗಿ, ಅಲ್ಲಿನ ಜೀವನದಿಗಳ ಸಹಜ ಹರಿಯುವಿಕೆಗೆ ವರದಾನವಾಗಿದೆ.

ನಮ್ಮ ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಬಗೆಗಿನ ವಿರೋಧ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಿ (ನರ್ಮದಾ ಬಚಾವ್ ಆಂಧೋಲನ-ಮೇಧಪಾಟ್ಕರ್ ನೇತೃತ್ವದಲ್ಲಿ), ಈ ಯೋಜನೆಗೆ ಹಣಕಾಸಿನ ನೆರವು ನೀಡಿದ್ದ ವಿಶ್ವಬ್ಯಾಂಕ್ ಯೋಜನೆ ಕುರಿತಂತೆ ಮರುಚಿಂತನೆ ನಡೆಸಿದೆ. ಇದೇ ರೀತಿ ನೇಪಾಳದಲ್ಲಿ ಕೂಡ ಅರುಣ್ ಎಂಬ ಅಣೆಕಟ್ಟು ಯೋಜನೆ ರದ್ದಾಯಿತು.

ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರದ ಏರು-ಪೇರು, ಅರಣ್ಯನಾಶ, ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶ, ಅಲ್ಲಿನ ಜೈವಿಕ ವೈವಿಧ್ಯತೆ, ಸಸ್ಯ ಪ್ರಭೇದಗಳು, ಯೋಜನೆಯಿಂದ ನಿರ್ವಸತಿಗರಾಗುವ ಲಕ್ಷಾಂತರ ಕುಟುಂಬಗಳ ಬದುಕು, ಅವರ ಪುನರ್ವಸತಿಯ ಸವಾಲುಗಳು ಇವೆಲ್ಲವೂ ಬೃಹತ್ ಅಣೆಕಟ್ಟಿನ ವಿರೋಧಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು.

1950 ರಿಂದ 70 ರ ದಶಕದವರೆಗೆ ವಿಶ್ವಬ್ಯಾಂಕ್ ನೆರವಿನಿಂದ ಜಾಗತಿಕವಾಗಿ ವರ್ಷವೊಂದಕ್ಕೆ ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ಈಗ ಇದರ ಪ್ರಮಾಣ 200 ಕ್ಕೆ ಕುಸಿದಿದೆ. ಅಂದರೆ ಬೃಹತ್ ಅಣೆಕಟ್ಟುಗಳ ಬಗೆಗಿನ ಭ್ರಮೆ ಕಳಚುತ್ತಿದ್ದು, ವಾಸ್ತವಿಕ ಕಟು ಸತ್ಯಗಳು ಮನದಟ್ಟಾಗುತ್ತಿವೆ.

ಅಣೆಕಟ್ಟಿನಿಂದಾಗಿ ಜಲಾಶಯದಲ್ಲಿ ಶೇಖರವಾಗುವ ನೀರಿನ ಪ್ರಮಾಣ, ಅದರಲ್ಲಿನ ಬದಲಾವಣೆ, ಉಷ್ಣಾಂಶದ ಏರಿಳಿತ, ಅಲ್ಲಿನ ಜಲಚರಗಳ ಸ್ಥಿತಿ-ಗತಿ ಮತ್ತು ಅಣೆಕಟ್ಟು ನಿರ್ಮಾಣದಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಬಹುದಾದ ನೈಸರ್ಗಿಕ ಬದಲಾವಣೆ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಧ್ಯಯನಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇಂತಹ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾಗೂ ನದಿ ನೀರಿನ ಸಹಜ ಹರಿಯುವಿಕೆಗೆ ಅಡ್ಡಿಯಾಗದ ಸಣ್ಣ-ಸಣ್ಣ ಅಣೆಕಟ್ಟು ಮತ್ತು ಜಲಾಶಯಗಳ ಬಗ್ಗೆ ಚಿಂತನೆ ಆರಂಭವಾಗಿದೆ. ಅಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಜೀವ ವೈವಿಧ್ಯತೆ ಹಾಗೂ ನದಿಗಳ ನೈಜ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಹಲವಾರು ನದಿಗಳನ್ನು ಅಣೆಕಟ್ಟು ಮುಕ್ತ ನದಿಗಳೆಂದು ಘೋಷಿಸಲಾಗಿದೆ.

ಸ್ಪೀಡನ್ ಮತ್ತು ನಾರ್ವೆ ರಾಷ್ಟ್ರಗಳು ಈ ದಿಶೆಯಲ್ಲಿ ದೃಢ ಹೆಜ್ಜೆ ಇಟ್ಟ ಪ್ರಥಮ ರಾಷ್ಟ್ರಗಳಾಗಿವೆ. ಈಗ ಅಮೆರಿಕಾ ಕೂಡ ಕೆಲವು ನದಿಗಳ 16 ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿಷೇಧ ಹೇರಿದೆ. ಬೃಹತ್ ಅಣೆಕಟ್ಟು ಎಂಬ ಪರಿಕಲ್ಪನೆ ಹುಟ್ಟುಹಾಕಿ, ಅಂತಹ ಸಾಹಸಕ್ಕೆ ಚಾಲನೆ ನೀಡಿದ್ದ ಅಮೆರಿಕಾ ದೇಶವೇ ಈಗ, ನದಿಗಳು ಮತ್ತು ಅಣೆಕಟ್ಟು ನಿರ್ಮಾಣ ಕುರಿತಂತೆ ತನ್ನ ಆಲೋಚನಾ ದಿಕ್ಕನ್ನೇ ಬದಲಿಸತೊಡಗಿರುವುದು ಸಧ್ಯದ ಸ್ಥಿತಿಯಲ್ಲಿ ಒಂದು ರೀತಿಯ ಸಮಾಧಾನಕರ ಸಂಗತಿ.

(ಚಿತ್ರಕೃಪೆ: ವಿಕಿಪೀಡಿಯ)