Category Archives: ಜಗದೀಶ್ ಕೊಪ್ಪ

ಬಿ.ಜೆ.ಪಿ. ಮತ್ತು ಕೆ.ಜೆ.ಪಿ. : ಆಪರೇಶನ್ ಪತನ ಆರಂಭ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಜನತೆ ಆಸೆಯಿಂದ ನಿರೀಕ್ಷಿಸುತಿದ್ದ ಬಿ.ಜೆ.ಪಿ. ಸರ್ಕಾರದ ಪತನಕ್ಕೆ ಹಾವೇರಿಯಲ್ಲಿ ನಡೆದ ಕೆ.ಜೆ.ಪಿ. ಸಮಾವೇಶದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ ಹಾಡಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈ ಬಿ.ಜೆ.ಪಿ. ಸರ್ಕಾರ ಮತ್ತು ಅದರ ನಾಯಕರು, ಸಚಿವರು, ಶಾಸಕರು ಕಟ್ಟಿದ ವೇಷ, ಆಡಿದ ನಾಟಕ ಇವುಗಳನ್ನು ನೋಡಿದ ಕರ್ನಾಟಕದ ಜನತೆ ಕೇವಲ ರೋಸಿಹೋಗಿರಲಿಲ್ಲ, ದಂಗುಬಡಿದುಹೋಗಿದ್ದರು.

ಎರಡು ದಶಕದ ಹಿಂದಿನ ಕಥೆ ನಿಮಗೆ ಬೇಡ, ಇದು ಕೇವಲ ಆರು ವರ್ಷದ ಹಿಂದಿನ ಮಾತು. ಮಲ್ಲೇಶ್ವರಂನಲ್ಲಿದ್ದ ಬಿ.ಜೆ.ಪಿ. ಕಚೇರಿಯಲ್ಲಿ ಖಾಲಿದೋಸೆ ತಿಂದು, ಬೈಟು ಕಾಫಿ ಕುಡಿದು, ಚರ್ಚೆಯ ಮೂಲಕ ಪಕ್ಷವನ್ನು ಮುನ್ನೆಡೆಸುತಿದ್ದ ಬಿ.ಜೆ.ಪಿ. ನಾಯಕರು ಮತ್ತು ಬೆಂಗಳೂರು, ಮೈಸೂರು, ಮಂಗಳೂರು ನಗರಗಳ ಬ್ರಾಹ್ಮಣರ ಮನೆಗಳಲ್ಲಿ ವಾರಾನ್ನ ತಿಂದು ಬದುಕುತಿದ್ದ ಆರ್.ಎಸ್.ಎಸ್. ಸಂಸ್ಥೆಯ ಬೃಹಸ್ಪತಿಗಳು ಕೇವಲ ನಾಲ್ಕೂವರೆ ವರ್ಷಗಳ ಬಿ.ಜೆ.ಪಿ. ಸರ್ಕಾರದ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಆರ್ಥಿಕವಾಗಿ ಕೊಬ್ಬಿಹೋಗಿದ್ದಾರೆಂದರೇ, ಇವರ ಒಂದು ಗಂಟೆಯ ಚರ್ಚೆಗೆ ಐಷಾರಾಮಿ ಹೋಟೇಲುಗಳು ಮತ್ತು ರಿಸಾರ್ಟ್‌ಗಳು ಈಗ ಬಳಕೆಯಾಗುತ್ತಿವೆ.

ಹನ್ನೆರೆಡು ವರ್ಷ ಅನ್ನ ಕಾಣದೆ ಹಸಿವಿನಿಂದ ಬರಗೆಟ್ಟಿದ್ದ ವ್ಯಕ್ತಿಯೊಬ್ಬ ಅನ್ನವನ್ನು ತಿನ್ನುವ ಹಾಗೇ ಈ ನಾಡಿನ ಯಾವುದೇ ಸಂಪತ್ತನ್ನೂ ಬಿಡದೇ ಲೂಟಿಮಾಡಿದ ಪಕ್ಷ ಎಂಬುದು ಕರ್ನಾಟಕದಲ್ಲಿ ಇರುವುದಾದರೇ ಅದು ಬಿ.ಜೆ.ಪಿ. ಪಕ್ಷ ಮಾತ್ರ. ಇವರ ಭೂದಾಹಕ್ಕೆ ಬಲಿಯಾದ ಸರ್ಕಾರದ ಭೂಮಿಗಳು, ಸೈಟುಗಳು ಇವುಗಳ ಸಂಖ್ಯೆಗೆ ಲೆಕ್ಕವಿಲ್ಲ.

ಯಡಿಯೂರಪ್ಪನವರ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ ಅವರನ್ನು ನಾವು ಒಂದು ವಿಷಯದಲ್ಲಿ ಅಭಿನಂದಿಸಲೇಬೇಕು. ತಾವು ಒಬ್ಬರೇ ಕರ್ನಾಟಕವನ್ನು ಲೂಟಿಮಾಡಿ ತಿನ್ನಲಿಲ್ಲ, ಬದಲಾಗಿ ತಮ್ಮ ಎಂಜಲನ್ನು ಯಾವುದೇ ಭೇಧ ಭಾವ ಮಾಡದೇ ಮಠಾಧೀಶರ ಬಾಯಿಗೆ ಮತ್ತು ಆರ್.ಎಸ್.ಎಸ್. ಗರ್ಭಗುಡಿಯ ಪೂಜಾರಿಗಳ ಬಾಯಿಗೆ ಒರೆಸಿ ತಮ್ಮ ಜೊತೆ ಅವರನ್ನೂ ಕುಲಗೆಡಿಸಿದರು. ಅದಕ್ಕಾಗಿ ಅವರು ಸದಾ ವೇದಿಕೆಗಳಲ್ಲಿ “ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು” ಎಂದು ಹೇಳುತ್ತಾ ಇರುವುದನ್ನು ನೀವು ಗಮನಿಸಿರಬಹುದು.

ಶಿಸ್ತು ಮತ್ತು ನೈತಿಕತೆಗೆ ಹೆಸರಾಗಿದ್ದ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಪಕ್ಷ ಇಂತಹ ದಯನೀಯವಾದ ಪತನದ ಅಂಚಿಗೆ ತಲುಪಿರುವ ಈ ದಿನಗಳಲ್ಲಿ ಅದರ ನಾಯಕರು ಮತ್ತು ಕಾರ್ಯಕರ್ತರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಆದರೇ, ಪಕ್ಷವಾಗಲಿ, ಅದರ ನಾಯಕರಾಗಲಿ ಈಗ ಆ ಸ್ಥಿತಿಯಲ್ಲಿ ಇಲ್ಲ. ಏಕೆಂದರೇ, ಆಪರೇಶನ್ ಕಮಲ ಎಂಬ ಹೆಸರಿನ ಅನೈತಿಕತೆಯ ಮಾರ್ಗದಲ್ಲಿ ನಡೆದು ಬಂದಿರುವ ಪಕ್ಷ ನೈತಿಕವಾಗಿ ದಿವಾಳಿಯೆದ್ದು ಹೋಗಿದೆ. ಪಕ್ಷದ ನಾಯಕರು ಎಂತಹ ಭಂಡತನವನ್ನು ಮೈಗೂಡಿಸಿಕೊಂಡಿದ್ದಾರೆ ಎಂದರೇ, ರಸ್ತೆಯ ಬದಿಯಲ್ಲಿ ಮಗು ಮಾಡಿದ ಹೇಸಿಗೆಯನ್ನು ಸಹ ಇವರು “ಆಪರೇಷನ್ ಐಸ್‌ಕ್ರೀಮ್” ಎಂದು ಹೆಸರಿಸಿ ಅದನ್ನು ತಾವೂ ತಿಂದು; ಜನತೆಗೂ ತಿನ್ನಿಸಬಲ್ಲರು.

ಕರ್ನಾಟಕ ಕಂಡ ಒಬ್ಬ ಹುಂಬ ಮತ್ತು ಭಂಡ ರಾಜಕಾರಣಿ ಯಡಿಯೂರಪ್ಪ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಕರ್ನಾಟಕ ಜನತಾ ಪಕ್ಷ ಹುಟ್ಟು ಹಾಕಿ, ಬಿ.ಜೆ.ಪಿ. ಪಕ್ಷದ ಪತನಕ್ಕೆ ಕೈ ಹಾಕುವುದರ ಜೊತೆ ಜೊತೆಯಲ್ಲಿ ತಮ್ಮ ನಾಶಕ್ಕೆ ತಾವೇ ಮುಂದಾಗಿದ್ದಾರೆ.

ಒಂದೂವರೆ ಸಾವಿರ ಬಸ್‌ಗಳು, ಎಂಟು ಸಾವಿರ ಮಿನಿ ಬಸ್ ಮತ್ತು ಟೆಂಪೊ ಇವುಗಳ ಮೂಲಕ ಸಾವಿರ ಸಾವಿರ ಹಣ ನೀಡಿ ಕರೆಸಿಕೊಂಡ ಬಾಡಿಗೆ ಜನರ ಮುಂದೆ ವೀರಾವೇಶದಿಂದ ಮಾತನಾಡುವ, ಕಣ್ಣೀರು ಸುರಿಸುವ ಯಡಿಯೂರಪ್ಪ ಅರಿಯಬೇಕಾದ ವಾಸ್ತವ ಸತ್ಯ ಒಂದಿದೆ. ಸಮಾವೇಶಕ್ಕೆ ಬಂದ ಅಥವಾ ಬರುವ ಜನಗಳೆಲ್ಲಾ ಪಕ್ಷದ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಹೊಲ ಗದ್ದೆಗಳಲ್ಲಿ ಬಿಸಿಲಿನಲ್ಲಿ ಕೂಲಿ ಮಾಡುವ ಬದಲು, ಐನೂರು ರೂಪಾಯಿಗಾಗಿ ಸಮಾವೇಶಕ್ಕೆ ಬಂದು ಭಾಷಣ ಕೇಳುವ ಜನತೆಯ ಒಂದು ವರ್ಗ ಕರ್ನಾಟಕದಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದೆ.

ಸತ್ಯ ಹರಿಶ್ಚಂದ್ರನಂತೆ, ಹುತಾತ್ಮನಂತೆ ಮಾತನಾಡುವ ಯಡಿಯೂರಪ್ಪ ಹಾವೇರಿಯ ಸಮಾವೇಶಕ್ಕೆ ಖರ್ಚು ಮಾಡಿದ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಕರ್ನಾಟಕದ ಜನತೆಗೆ ಮಾಹಿತಿ ನೀಡಬೇಕಿದೆ. ಕನ್ನಡದ ಎಲ್ಲಾ ಪತ್ರಿಕೆಗಳಿಗೆ ನಾಲ್ಕು ಪುಟಗಳ ವಿಶೇಷ ಪುರವಣಿಗೆಗೆ ಜಾಹಿರಾತು ಮೂಲಕ ತಲಾ 20 ಲಕ್ಷದಿಂದ 40 ಲಕ್ಷದ ವರೆಗೆ ಹಣ ನೀಡಿದವರು ಯಾರು? ಕೇವಲ ಒಂದು ದಿನದ ಹಾವೇರಿಯ ಸಮಾವೇಶಕ್ಕೆ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಯಡಿಯೂರಪ್ಪ ಒಮ್ಮೆ ತಣ್ಣಗೆ ಕುಳಿತು ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದುವುದು ಒಳಿತು. ಜೊತೆಗೆ ತಾನು ಸಾಗಿ ಬಂದ ಬದುಕಿನ ಹಾದಿಯನ್ನೂ ತಿರುಗಿ ನೋಡಬೇಕಿದೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೋಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಯಡಿಯೂರಪ್ಪ ನಿಂಬೆ ಹಣ್ಣು ಮಾರುತ್ತಾ, ಕಷ್ಟದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದವರು. ನಂತರ ಪಿ.ಯು.ಸಿ. ಓದುವ ಸಂದರ್ಭದಲ್ಲಿ ಕಡು ಬಡತನದ ಕಾರಣಕ್ಕಾಗಿ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಾಸ್ತ್ರಿ ಎಂಬುವರ ಅಕ್ಕಿ ಗಿರಣಿಯಲ್ಲಿ ಗುಮಾಸ್ತನಾಗಿ ಬದುಕು ಕಂಡುಕೊಂಡವರು. ಶಾಸ್ರಿಯವರ ಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾಗುವುದರ ಮೂಲಕ ಪುರಸಭೆಯ ಸದಸ್ಯನಾಗಿ ರಾಜಕೀಯ ಪ್ರವೇಶ ಮಾಡಿದ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗುವವರೆಗೂ ಹುಟ್ಟು ಹೋರಾಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆದರೆ, ಅವರು ಮುಖ್ಯಮಂತ್ರಿ ಸ್ಥಾನದ ಹುದ್ದೆಗೆ ಏರಿದ ಕೂಡಲೇ ತಾನೊಬ್ಬ ಜಾತಿವಾದಿ, ಧನದಾಹಿ, ಕಡು ಭ್ರಷ್ಟ ಎಂಬುದನ್ನು ಯಾವ ಮುಚ್ಚು ಮರೆಯಿಲ್ಲದೆ ಹೊರಜಗತ್ತಿಗೆ ತಮ್ಮನ್ನು ತಾವೇ ಅನಾವರಣಗೊಳಿಸಿಕೊಂಡರು.

ಮೋಹಿನಿ ಭಸ್ಮಾಸುರನಂತೆ ತಮ್ಮ ತಲೆಯ ಮೇಲೆ ತಾವೇ ಕೈಇಟ್ಟು ಕೊಂಡು ನಾಶವಾಗಲು ಹೊರಟಿರುವ ಯಡಿಯೂರಪ್ಪ ಕೆ.ಜೆ.ಪಿ. ಪಕ್ಷ ಕಟ್ಟುವುದರ ಮೂಲಕ ಆಟವಾಡಲು ಹೊರಟಂತಿಲ್ಲ. ಬದಲಾಗಿ ಅವರು ಆಟ ಕೆಡಿಸಲು ಹೊರಟಂತಿದೆ. 1980ರ ದಶಕದಲ್ಲಿ ಇಂತಹದ್ದೇ ಆಟವಾಡಲು ಹೊರಟ ದೇವರಾಜು ಅರಸು ರಾಜಕೀಯದಲ್ಲಿ ಇನ್ನಿಲ್ಲದಂತೆ ಮಣ್ಣು ಮುಕ್ಕಿದ್ದರು.

1975 ರ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಜಾರಿಗೆ ತಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ವಾಧಿಕಾರಿಣಿಯಂತೆ ಮೆರೆದ ಇಂದಿರಾಗಾಂಧಿ 1978 ರ ಚುನಾವಣೆಯಲ್ಲಿ ಸೋತು ದೆಹಲಿಯ ತಿಹಾರ್ ಜೈಲುಪಾಲಾಗಿದ್ದರು. ಆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರ ಮುರಾರ್ಜಿ ದೇಸಾಯಿ ಎಂಬ ಜಿಗುಟು ಸ್ವಭಾವದ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಿತ್ತು. ಗೃಹ ಮಂತ್ರಿಯಾಗಿದ್ದ ಚರಣ ಸಿಂಗ್‌ರ ಅಧಿಕಾರದ ದಾಹ ಮತ್ತು ಇಂದಿರಾಗಾಂಧಿಯನ್ನು ರಾಯ್ ಬರೇಲಿ ಕ್ರೇತ್ರದಿಂದ ಸೋಲಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಿದ್ದ ರಾಜ್ ನಾರಾಯಣ್ ಎಂಬ ಹಗಲು ಹನುಮಂತರಾಯ ಉರುಪ್ ರಾಜಕೀಯ ಬಫೂನ್ ಇವರ ಚಿತಾವಣೆಯಿಂದಾಗಿ ಕೇವಲ ಒಂದೂವರೆ ವರ್ಷದಲ್ಲಿ ಜನತಾ ಸರ್ಕಾರ ಪತನಗೊಡು ಜಯಪ್ರಕಾಶ್ ನಾರಾಯಣರ ಕನಸು ನುಚ್ಚು ನೂರಾಯಿತು. ಜೊತೆಗೆ ದೇಶದಲ್ಲಿ ಮತ್ತೇ ಚುನಾವಣೆ ಎದುರಾಯಿತು.‍

ಕೇಂದ್ರದಲ್ಲಿ ಜನತಾ ಸರ್ಕಾರವಿದ್ದಾಗ, ಇಡೀ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಅಧಿಕಾರ ಕಳೆದುಕೊಂಡಿತ್ತು. ಆದರೇ ಕರ್ನಾಟಕದಲ್ಲಿ ಅರಸು ನೇತೃತ್ವದ ಕಾಂಗ್ರೇಸ್ ಪಕ್ಷ ಮಾತ್ರ ಅಧಿಕಾರದಲ್ಲಿತ್ತು. ಪಕ್ಷದ ಪ್ರಭಾವವಿಲ್ಲದೇ ಹಿಂದುಳಿದ ವರ್ಗದ ಏಳಿಗೆ ಮತ್ತು ಅಭಿವೃದ್ಧಿಯ ಮೂಲಕ ಹೆಸರಾಗಿದ್ದ ಅರಸು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಸಂಸತ್ತಿನ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೇಸ್ ಪಕ್ಷಕ್ಕೆ ಮತ್ತೇ ಚುನಾವಣೆ ಎದುರಾದಾಗ ಇಡೀ ರಾಷ್ಟ್ರದ ಅಷ್ಟು ಕ್ರೇತ್ರಗಳ ಅಭ್ಯರ್ಥಿಗಳಿಗೆ ಹಣ ಪೂರೈಸುವ ಹೊಣೆ ಅರಸು ಹೆಗಲಿಗೆ ಬಿತ್ತು. ಹಿಂದುಳಿದವರ ಆಶಾಕಿರಣವಾಗಿ, ಹೊರ ಹೊಮ್ಮಿದ್ದ ಅರಸು ಮೊಯ್ಲಿ, ಖರ್ಗೆ, ಧರ್ಮಸಿಂಗ್, ಬಂಗಾರಪ್ಪ, ಬಸವಲಿಂಗಪ್ಪ, ಮುಂತಾದ ನಾಯಕರನ್ನು ಹುಟ್ಟುಹಾಕಿದ್ದರು. ಜನ ಸಾಮಾನ್ಯರ ಬಾಯಲ್ಲಿ ದೊರೆ ಎಂದು ಪ್ರೀತಿಯಿಂದ ಕರೆಸಿಕೊಳ್ಳುತಿದ್ದ ಅರಸು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶದ ಬಾಗಿಲನ್ನು ಮುಕ್ತವಾಗಿ ತೆರೆದಿಟ್ಟರು.

ಒಂದು ಅಘಾತಕಾರಿ ಸೋಲಿನ ನಂತರ ಮತ್ತೇ ಕೇಂದ್ರದಲ್ಲಿ ಇಂದಿರಾಗಾಂಧಿಯ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಹಜವಾಗಿ ತನ್ನಿಂದಾಗಿ ಪಕ್ಷ ಅಧಿಕಾರಕ್ಕೆ ಬಂತು ಎಂಬ ಅಹಂ ಮತ್ತು ಹೆಮ್ಮೆ ಅರಸುರವರಲ್ಲಿ ಬೆಳೆಯತೊಡಗಿದವು. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೇಸ್ ಪಕ್ಷದಲ್ಲಿ ತಾನೊಬ್ಬಳು ಮಾತ್ರ ಪ್ರಶ್ನಾತೀತ ನಾಯಕಿ ಎಂಬಂತಿದ್ದ ಇಂದಿರಾ ಗಾಂಧಿಗೆ ದೇವರಾಜು ಅರಸುರವರ ನಡುವಳಿಕೆ ಹಿಡಿಸಲಿಲ್ಲ. ಅಷ್ಟರ ವೇಳೆಗೆ ಅರಸು ಸಂಪುಟದಲ್ಲಿ ಇದ್ದುಕೊಂಡು ಇಂದಿರಾ ಪುತ್ರ ಸಂಜಯಗಾಂಧಿ ಮೂಲಕ ಕೇಂದ್ರಕ್ಕೆ ಹತ್ತಿರವಾಗಿದ್ದ ಗುಂಡೂರಾವ್ ಮತ್ತು ಎಪ್.ಎಂ.ಖಾನ್ ನಡೆಸಿದ ಗುಪ್ತ ರಾಜಕೀಯ ಚಟುವಟಿಕೆಯ ಫಲವಾಗಿ ಅರಸು ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಸ್ವಾಭಿಮಾನಿಯಾದ ಅರಸು ಇದೇ ಯಡಿಯೂರಪ್ಪನವರ ಮಾದರಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಹಸು ಮತ್ತು ಕರು ಚಿಹ್ನೆಯ ಪ್ರತ್ಯೇಕ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದರು. ಅಧಿಕಾರದ ಕನಸು ಕಂಡು ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವುದರ ಮೂಲಕ ತಾವು ರಾಜಕೀಯದಲ್ಲಿ ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನು ಕಳೆದುಕೊಂಡರು. ಅವರ ಕೊನೆಯ ದಿನಗಳಲ್ಲಿ ಅರಸು ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಎನ್.ಹುಚ್ಚಮಾಸ್ತಿಗೌಡ ಮಾತ್ರ ಸದಾ ಜೊತೆಗಿರುತಿದ್ದರು.

ಅರಸು ಬಾಲಬ್ರೂಯಿ ಭವನದ ನಿವಾಸದಲ್ಲಿ ಬೆನ್ನು ಪಣಿ ಎಂಬ ಕಾಯಿಲೆ ಮತ್ತು ಮಧುಮೇಹ ರೋಗಕ್ಕೆ ತುತ್ತಾಗಿ, ಉಪ್ಪು ಬೆರಸಿದ ರಾಗಿ ಗಂಜಿ ಕುಡಿಯುತ್ತಾ ಮಲಗಿದ್ದಾಗ ಅವರಿಂದ ರಾಜಕೀಯವಾಗಿ ಬೆಳದ ಒಬ್ಬ ನಾಯಕನೂ ಅವರತ್ತ ತಿರುಗಿ ನೋಡಲಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೇ, ಅವರು ಸೇದುತಿದ್ದ ಪೈಪಿಗೆ ವಿದೇಶಿ ಮೂಲದ ವರ್ಜಿನಿಯಾ ತಂಬಾಕು ತುಂಬಿಸಿಕೊಳ್ಳಲು ಅವರ ಬಳಿ ಹಣವಿರಲಿಲ್ಲ. ಇದು ನಮ್ಮ ಕಣ್ಣೆದುರು ಬೆಳೆದು, ಬಾಗಿ, ಮಣ್ಣಲ್ಲಿ ಮಣ್ಣಾಗಿ ಹೋದ ರಾಜಕೀಯ ಧೀಮಂತ ನಾಯಕನೊಬ್ಬನ ದುರಂತ ಕಥನ.

ಮನುಷ್ಯನ ಮಾಂಸದ ರುಚಿ ನೋಡಿದ ಹುಲಿಯಂತೆ ಮುಖ್ಯಮಂತ್ರಿ ಗಾದಿಯ ರುಚಿ ನೋಡಿರುವ ಯಡಿಯೂರಪ್ಪ ಅಧಿಕಾರಕ್ಕಾಗಿ ಮತ್ತು ಸಂಪತ್ತಿನ ಲೂಟಿಗಾಗಿ ಹಗಲಿರುಳು ಹಂಬಲಿಸುತಿದ್ದಾರೆ. ಮುಖ್ಯಮಂತ್ರಿಯ ಕುರ್ಚಿಗಾಗಿ ಯಡಿಯೂರಪ್ಪ ಆಡುತ್ತಿರುವ ರಾಜಕೀಯ ನಾಟಕದ ಹಿಂದೆ ಹಲವಾರು ಹುನ್ನಾರಗಳಿವೆ. ತನ್ನ ಅವಧಿಯ ಭ್ರಷ್ಟಾಚಾರದಿಂದಾಗಿ ಸಿ.ಬಿ.ಐ. ಕುಣಿಕೆಗೆ ಕೊರಳೊಡ್ಡಿರುವ ಯಡಿಯೂರಪ್ಪ ಅದರಿಂದ ಪಾರಾಗಲು ತಾನೂ ಒಂದಿಷ್ಟು ಶಾಸಕರನ್ನು ಜೊತೆಗಿಟ್ಟುಕೊಂಡು ಕಾಂಗ್ರೇಸ್ ಪಕ್ಷದ ಜೊತೆ ಚೌಕಾಸಿ ಕುದುರಿಸಬೇಕಿದೆ. ಏಕೆಂದರೇ, ಸೋಮಾರಿತನ ಮತ್ತು ಗುಲಾಮಗಿರಿತನ ಎರಡನ್ನೂ ಪಕ್ಷದ ಪ್ರಣಾಳಿಕೆಯಂತೆ ಮಾಡಿಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಆಸಕ್ತಿ ಇದ್ದಂತಿಲ್ಲ. ಈ ಅವಕಾಶ ಉಪಯೋಗಿಸಿಕೊಳ್ಳಲು ಸಿದ್ಧರಾಗಿರುವ ಯಡಿಯೂರಪ್ಪ ಹೊಸ ಪಕ್ಷವನ್ನು ಹುಟ್ಟು ಹಾಕುವುದರ ಮೂಲಕ ತನಗೆ ರಾಜಕೀಯವಾಗಿ ಜನ್ಮ ನೀಡಿದ ಬಿ.ಜೆ.ಪಿ. ಪಕ್ಷದ ಕುತ್ತಿಗೆ ಹಿಸುಕಲು ಮುಂದಾಗಿದ್ದಾರೆ. ಇಂತಹ ಒಂದು ಸಾವನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಸಹ ಆಸೆಯಿಂದ ಎದುರು ನೋಡುತ್ತಿದ್ದಾರೆ.

ಜೀವನದಿಗಳ ಸಾವಿನ ಕಥನ : ಹೊತ್ತಿಗೊದಗಿದ ಮಾತಾಗಿ ಮೂಡಿ ಬಂದ ಕೃತಿ

– ಡಾ. ಎಸ್.ಬಿ.ಜೋಗುರ

ಡಾ. ಎನ್. ಜಗದೀಶ್ ಕೊಪ್ಪ ಅವರ ಕೃತಿ “ಜೀವನದಿಗಳ ಸಾವಿನ ಕಥನ” ಒಂದು ಅಪರೂಪದ ಕೃತಿ. ಅಭಿವೃದ್ಧಿಯ ಜೊತೆಗೆ ಥಳುಕು ಹಾಕಿಕೊಂಡು ಮಾತನಾಡುವ ಅನೇಕ ಸ್ಥಾಪಿತ ಸಂಗತಿಗಳ ಚೌಕಟ್ಟಿನಾಚೆ ಬಂದು ಅವರು ಮೂರ್ತ ಭಂಜನೆ [ಮೂರ್ತಿ ಭಂಜನೆಯಲ್ಲ] ಯನ್ನು ಅತ್ಯಂತ ಸಮರ್ಪಕವಾಗಿ ಸಾಕ್ಷಿ ಸಮೇತ ಮಾಡಿರುವದಿದೆ. ಮೂಲತ: ಅರ್ಥಶಾಸ್ತ್ರದ ಅಧ್ಯಯನ ಶಿಸ್ತಿನಿಂದ ಬಂದಿರುವ ಕೊಪ್ಪ ಅವರು ಈ ಕೃತಿಯನ್ನು ಮಾನವಶಾಸ್ತ್ರ ಮತ್ತು ಭೂಗೋಳಶಾಸ್ತ್ರದ ಅಧ್ಯಯನ ಮಾಡುವವರಿಗೆ ಒಂದು ಉಲ್ಲೇಖ ಗ್ರಂಥವಾಗುವ ಹಾಗೆ ರಚಿಸಿದ್ದಾರೆ. ಈ ಜೀವನದಿಗಳ ಸಾವಿನ ಕಥನ ಒಂದು ಅಪೂರ್ವವಾದ ಮಾಹಿತಿ ಸಾಗರ. ಜಗತ್ತಿನಲ್ಲಿ ಮೊಟ್ಟ ಮೊದಲನೆಯ ಆಣೆಕಟ್ಟು ಸ್ಥಾಪನೆಯಾದ ಮಾಹಿತಿಯ ಜೊತೆಗೆ ಆದಿವಾಸಿ ಸಮುದಾಯದ ಅಪರೂಪದ ನೆಲೆಗಳನ್ನು ಈ ಬಗೆಯ ಅಭಿವೃದ್ಧಿಯ ಮೂಲಗಳು ಹೇಗೆ ಕರಗಿಸುತ್ತ ಬಂದಿವೆ ಎನ್ನುವದರ ಬಗ್ಗೆ ಅವರು ವಸ್ತುನಿಷ್ಟವಾಗಿ ವಿವರಿಸಿದ್ದಾರೆ.

’ಅಭಿವೃದ್ಧಿಯ ಅಂಧಯುಗ’ ಎನ್ನುವ ಲೇಖನದಲ್ಲಿ ಕೊಪ್ಪ ಬರೆಯುವ ಹಾಗೆ ಆಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು ಅವುಗಳ ಇಕ್ಕೆಲಗಳ ಮುಖಜ ಭೂಮಿಯಲ್ಲಿ ಮಣ್ಣಿನ ಫ಼ಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೇ ನದಿಗಳ ಮೀನುಗಾರಿಕೆಯನ್ನೇ ಕುಲಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೇರಿಕೆಯಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ , ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕುಕುಪಾ ಜನಾಂಗ, ಈಗ ಬರೀ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಈಗ ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ದೆ ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ. [ಪುಟ-17] ಇದು ಕೇವಲ ಯಾವುದೋ ಒಂದು ರಾಷ್ಟ್ರ ಅಭಿವೃದ್ಧಿಯ ಹೆಸರಲ್ಲಿ ಅನುಭವಿಸಿದ ಧಾರುಣ ಪರಿಣಾಮವೆಂದು ಭಾವಿಸುವ ಅವಶ್ಯಕತೆಯಿಲ್ಲ. ನಮ್ಮ ನರ್ಮದಾ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿಯೂ ಉಂಟಾಗಿರಬಹುದಾದ ತೊಡಕುಗಳನ್ನು, ಈ ತೊಡಕಿಗೆ ಬಹುತೇಕವಾಗಿ ಆದಿವಾಸಿ ಜನಸಮುದಾಯಗಳು ಇಲ್ಲವೇ ಕೃಷಿ ಕುಟುಂಬಗಳು ಬಲಿಪಶುಗಳಾಗುವ ಚಿತ್ರಣವನ್ನು ಕೊಪ್ಪ ಅವರು ಜೀವನದಿಗಳ ಕಥನದಲ್ಲಿ ವಿವರಿಸಿದ್ದಾರೆ.

ವಿದ್ಯುತ್ ಉತ್ಪಾದನೆಯಲ್ಲಿ ಜಲವಿದ್ಯುತ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಜನಸಾಮಾನ್ಯನ ಅರಿವಿಗೆ ಬಾರದ ರೀತಿಯಲಿ ಅವು ಹೇಗೆ ಜಾಗತಿಕ ಪರಿಸರಕ್ಕೆ ಅಡ್ದಿಯಾಗುತ್ತಿವೆ ಎನ್ನುವದನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಈಗಾಗಲೇ ಇಡೀ ವಿಶ್ವದಲ್ಲಿ ಜಾಗತಿಕ ತಾಪಮಾನದ ಕೂಗು ಎದ್ದಿದೆ. ಅದಕ್ಕೆ ಪೂರಕವಾಗಿ ಜಲವಿದ್ಯುತ್ ಆಗರಗಳು ಕೆಲಸ ಮಾಡುತ್ತವೆ. ಅದೇ ವೇಳೆಗೆ ಆಣೆಕಟ್ಟುಗಳನ್ನು ಪ್ರವಾಹ ನಿಯಂತ್ರಣದಲ್ಲಿ ನೆರವಾಗುವ ಹಾಗೆ ಕಟ್ಟದಿರುವ ಬಗ್ಗೆಯೂ ಅವರು ಬರೆಯುತ್ತಾರೆ. ಅವರು ಆ ದಿಶೆಯಲಿ ನಮ್ಮ ದೇಶದ ಓರಿಸ್ಸಾದ ಹಿರಾಕುಡ್ ಹಾಗೂ ಪಂಜಾಬನ ಬಾಕ್ರಾ ನಂಗಲ್ ಆಣೆಕಟ್ಟನ್ನು ಉದಾಹರಿಸಿದ್ದಾರೆ. [ಪುಟ-65]

ಸಾಮಾನ್ಯ ಜನರ ಮೂಗಿಗೆ ತುಪ್ಪ ಹಚ್ಚುವ ಕ್ರಿಯೆ ಆಣೆಕಟ್ಟುಗಳ ನಿರ್ಮಾಣದ ಸಂದರ್ಭದಲ್ಲಿ ನಡೆಯುತ್ತದೆ. ಸರ್ದಾರ್ ಸರೋವರ್ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಮಧ್ಯಪ್ರದೇಶ, ಗುಜರಾತ, ರಾಜಸ್ಥಾನದ ಜನರಿಗೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ನೀರು ಕುಡಿಸುವ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಬಿತ್ತಿರುವ ಬಗ್ಗೆಯೂ ಅವರು ಸುಳ್ಳುಗಳ ಸರಮಾಲೆ ಎನ್ನುವ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಪೂರ್ಣಪ್ರಮಾಣದಲ್ಲಿ ಖಾಲಿಯಾಗಿರುವ 236 ಹಳ್ಳಿಗಳಿಗೂ ಕುಡಿಯುವ ನೀರನ್ನು ಪೂರೈಸಿರುವ ಬಗ್ಗೆ ಮಾಹಿತಿಗಳು ಅಲ್ಲಿದ್ದವು ಎನ್ನುವ ವ್ಯಂಗ್ಯವನ್ನು ಅವರು ಚರ್ಚಿಸಿದ್ದಾರೆ.

ಒಟ್ಟಾರೆ “ಜೀವನದಿಗಳ ಸಾವಿನ ಕಥನ” ಮನುಷ್ಯನ ಹಪಾಪಿತನಕ್ಕೆ ಹಿಡಿದ ಕನ್ನಡಿ. ಸತ್ಯವನ್ನು ಒಪ್ಪಿಕೊಳ್ಳುವ ಮನಸು ಮಾಡದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಮುಖ ಇನ್ನಷ್ಟು ಅಸಹ್ಯ, ವಿಕಾರವಾಗಿರುತ್ತದೆ. ಆಗ ನಮಗೆ ಕನ್ನಡಿಯ ಮುಂದೆ ನಿಲ್ಲುವ ಎದೆಗಾರಿಕೆ ಉಳಿದಿರುವದಿಲ್ಲ. ಪ್ರತಿಯೊಂದು ತಲೆಮಾರು ತಾನೇ ಕೊನೆ, ಮುಂದೆ ಮತ್ತೆ ಪೀಳಿಗೆಯಿಲ್ಲ ಎನ್ನುವಂತೆ ಬದುಕುವ ಕ್ರಮ ಸರಿಯಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಾಲನ ಕ್ಷಮೆಯೇ ಇಲ್ಲ. ಬಂದದ್ದೆಲ್ಲಾ ಅನುಭವಿಸಬೇಕು ಎನ್ನುವ ಎಚ್ಚರವೂ ಈ ಕೃತಿಯ ಹಿಂದೆ ಅಡಕವಾಗಿದೆ. ಇಲ್ಲಿರುವ ಮಾಹಿತಿ ಅಪಾರ ಮತ್ತು ವಿರಳ. ಭೂಗೊಳಶಾಸ್ತ್ರ, ಮಾನವಶಾಸ್ತ್ರ, ಜೀವಪರಿಸರಶಾಸ್ತ್ರ ಮುಂತಾದ ಅಧ್ಯಯನ ಶಿಸ್ತುಗಳಿಗೆ ಜಗದೀಶ ಕೊಪ್ಪ ಅವರ ಈ “ಜೀವನದಿಗಳ ಸಾವಿನ ಕಥನ” ಒಂದು ಹೊತ್ತಿಗೊದಗಿದ ಮಾತಿನಂತೆ ಮೂಡಿಬಂದಿದೆ.


ಜೀವನದಿಗಳ ಸಾವಿನ ಕಥನ
ಲೇಖಕ : ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ: ಎಮ್ಮಿಗನೂರು, ಬಳ್ಳಾರಿ – 583113
ಬೆಲೆ : 100 ರುಪಾಯಿ.

ಪ್ರಜಾ ಸಮರ – 12 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಮಾವೋವಾದಿ ನಕ್ಸಲರ ಸಂಘಟನೆಯಲ್ಲ, ಇದೇ ನಕ್ಸಲ್ ವಿಚಾರಧಾರೆ ಕುಡಿಯೊಡೆದ ನೆಲವಾದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920 ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮರಾಜು.

ಭಾರತದ ಆದಿವಾಸಿಗಳು ತಮ್ಮ ಸಂಸ್ಕೃತಿ ಮತ್ತು ಬದುಕಿಗೆ ಧಕ್ಕೆ ಬಂದಾಗ ಬ್ರಿಟಿಷರು ಮಾತ್ರವಲ್ಲ, ಮರಾಠ ಸಾಮಂತರು, ನಿಜಾಮರು, ಮೊಗಲರು, ಹೀಗೆ ಎಲ್ಲರ ವಿರುದ್ದ ಯುದ್ದ ಸಾರಿದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಧ್ಯಪ್ರದೇಶದ ಗೊಂಡ ಆದಿವಾಸಿಗಳಿಗೆ ಅವರದೇ ಜನಾಂಗದ ಒಬ್ಬ ಸಾಮಂತನಿದ್ದ ಎಂಬುದಕ್ಕೆ ಮಹಾರಾಷ್ಟ್ರದ ಗೊಂಡಿಯ ಮತ್ತು ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಯ ನಡುವೆ ಅರಣ್ಯದ ಮಧ್ಯೆ ಇರುವ ಲಾಂಜಿ ಎಂಬ ಹಳ್ಳಿಯಲ್ಲಿ ಸಾಮಂತ ನಿರ್ಮಿಸಿದ್ದ ಮಣ್ಣಿನ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಅಲ್ಲದೆ ಈ ಕೋಟೆಯ ಸಮೀಪವಿರುವ ಶಿವನ ದೇವಸ್ಥಾನಕ್ಕೆ ಸಾವಿರಾರು ಆದಿವಾಸಿಗಳು ಈಗಲೂ ಭೇಟಿ ನೀಡುತಿದ್ದಾರೆ. ಈಗ ಬಿಹಾರದ ರಾಂಚಿ ಜಿಲ್ಲೆಗೆ ಸೇರಿರುವ ಅರಣ್ಯದಲ್ಲಿ 1900 ರಲ್ಲಿ ಮುಂಡಾ ಎಂಬ ಆದಿವಾಸಿ ಜನಾಂಗದ ಬಿರ್‍ಸಾ ಮುಂಡಾ ಎಂಬ ನಾಯಕ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಕೂಡ ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಆದಿವಾಸಿ ಜನಾಂಗಕ್ಕೆ ಸೇರದ ಅಂಧ್ರದ ಈ ಮೇಲ್ಜಾತಿಗೆ ಸೇರಿದ ಯುವಕ ನಡೆಸಿದ ಹೋರಾಟ ಮಾತ್ರ ಅವಿಸ್ಮರಣೀಯವಾದುದು.

ಬ್ರಿಟಿಷರ ಫಿರಂಗಿ, ಬಂದೂಕಗಳ ನಡುವೆ ಬಿಲ್ಲು ಬಾಣಗಳನ್ನು ಹಿಡಿದು ಚೆಂಚು ಎಂಬ ಬುಡಕಟ್ಟು ಜನಾಂಗವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುತಿದ್ದ ಅಲ್ಲೂರಿ ಸೀತಾರಾಮರಾಜುವನ್ನು ಅಂತಿಮವಾಗಿ ಸೆರೆ ಹಿಡಿದ ಬ್ರಿಟೀಷರು ದರೋಡೆಕೋರ ಎಂಬ ಪಟ್ಟ ಕಟ್ಟಿದಾಗ, ಕೆಚ್ಚೆದೆಯಿಂದ ಕೆರಳಿ ನಿಂತ ಸಾಹಸಿ ಈತ, ಈ ದೇಶವನ್ನು ಕೊಳ್ಳೆ ಹೊಡೆಯಲು ಬಂದ ನೀವು ನಿಜವಾದ ದರೋಡೆಕೋರರು, ನಾನಲ್ಲ ಎಂದು ಮುಖಕ್ಕೆ ಬಾರಿಸಿದ ಹಾಗೆ ಹೇಳಿದ ಅಪ್ರತಿಮ ಧೈರ್ಯಶಾಲಿ.

1887 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಸೀತಾರಾಮರಾಜು ನಂತರ ತಂದೆಯ ಊರಾದ ಭೀಮಾವರಂ ಸಮೀಪದ ಮೊಗಳ್ಳು ಗ್ರಾಮದಲ್ಲಿ ಚಿಕ್ಕಪ್ಪನಾದ ರಾಮಚಂದ್ರ ರಾಜು ಎಂಬುವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಚಿಕ್ಕಪ್ಪ ಪಶ್ಚಿಮ ಗೋದಾವರಿ ಜಲ್ಲೆಯ ನರಸಾಪುರದಲ್ಲಿ ತಹಶಿಲ್ದಾರ್ ಆಗಿ ಕೆಲಸ ನಿರ್ವಹಿಸುತಿದ್ದರಿಂದ ಸೀತಾರಾಮು ರಾಜುವಿಗೆ ಅರ್ಥಿಕವಾಗಿ ನೆರವಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ತಾಯಿಯ ತವರೂರಾದ ವಿಶಾಖಪಟ್ಟಣಕ್ಕೆ ಬಂದ ಈತ ಅಲ್ಲಿ ಎ.ವಿ.ಎನ್. ಕಾಲೇಜಿಗೆ ದಾಖಲಾದನು. ೧೯೧೨-೧೩ರ ವೇಳೆಗೆ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಪಣ ತೊಟ್ಟಿದ್ದನು.

ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ 1882ರ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶಿಕ್ಷಣ ತೊರೆದು ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆ ಇಳಿದನು. ಅರಣ್ಯ ಕಾಯ್ದೆ ಪ್ರಕಾರ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಪೋಡುಗಳನ್ನು( ಹಳ್ಳಿ) ಬಿಟ್ಟು ಬೇರೊಂದೆಡೆ ವಲಸೆ ಹೋಗಬಾರದು. ಇದು ಆದಿವಾಸಿಗಳ ಸಹಜ ಬದುಕಿನ ಮೇಲೆ ನಿಯಂತ್ರಣ ಹೇರುವ ಕಾನೂನಾಗಿತ್ತು. ಕೃಷಿ ಚಟುವಟಿಕೆ ಮತ್ತು ಪ್ರಾಣಿಗಳ ಬೇಟೆ, ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತಿದ್ದ ಈ ಜನರು ಬೇಸಾಯಕ್ಕಾಗಿ ಬೇರೆಡೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ, ಅವರು ಒಂದು ಪ್ರದೇಶದಲ್ಲಿ ಒಮ್ಮೆ ಬೆಳೆ ತೆಗೆದ ನಂತರ ನಂತರ ಭೂಮಿಯನ್ನು ಹಲವಾರು ವರ್ಷಗಳ ಕಾಲ ಹಾಗೆಯೇ ಬಿಡುವುದು ವಾಡಿಕೆಯಾಗಿತ್ತು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮತ್ತು ನಿಸರ್ಗಕ್ಕೆ ಎರವಾಗದ ರೀತಿ ಇದ್ದ ಅವರ ದೇಶಿ ಜ್ಞಾನ ಆದಿವಾಸಿಗಳ ಬದುಕಿನೊಳಗೆ ಪರಂಪರಾನುಗತವಾಗಿ ಬೆಳೆದು ಬಂದಿತ್ತು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮರಾಜು ನಡೆಸಿದ ಹೋರಾಟ “ರಂಪ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರ ಅಮಾನವೀಯವಾದ ಈ ಅರಣ್ಯ ಕಾನೂನಿನ ವಿರುದ್ಧ ಸಮರ ಸಾರುವ ಮುನ್ನ ಆದಿವಾಸಿಗಳನ್ನು ಸಂಘಟಿಸಿದ ರಾಮರಾಜು ಹೋರಾಟಕ್ಕೆ ಮುನ್ನ ಆದಿವಾಸಿಗಳಲ್ಲಿ ಮನೆ ಮಾಡಿಕೊಂಡಿದ್ದ ಹಲವು ಅನಿಷ್ಟ ಆಚರಣೆಗಳನ್ನು (ಭಾನಾಮತಿ, ನರಬಲಿಯಂತಹ ಪದ್ಧತಿಗಳು) ಹೋಗಲಾಡಿಸಿದ್ದ. ಆದಿವಾಸಿಗಳ ಸೇನೆಯೊಂದನ್ನು ಕಟ್ಟಿಕೊಂಡು ಬ್ರಿಟಿಷರ ಕಚೇರಿಗಳ ಮೇಲೆ ದಾಳಿನಡೆಸಿದ. ಅಲ್ಲೂರಿ ಸೀತಾರಾಮರಾಜು ರೂಪಿಸಿದ್ದ ಯೋಜನೆಗಳು ಆತನಿಗೆ ಯಶಸ್ಸು ತಂದುಕೊಟ್ಟವು. ಈತನ ಮಾರ್ಗದರ್ಶನದಲ್ಲಿ ತಯಾರಾದ ಆದಿವಾಸಿಗಳ ತಂಡ ಬ್ರಿಟಿಷರ ಕಚೇರಿ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬಂದೂಕ ಮತ್ತು ಮದ್ದು ಗುಂಡುಗಳನ್ನು ದೋಚಿತು. ಇದಲ್ಲದೆ, ಇವರ ಮೇಲೆ ಕ್ರಮಕೈಗೊಳ್ಳಲು ಅರಣ್ಯಕ್ಕೆ ಬಂದ ಬಂದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿತು.

ಈ ಬೆಳವಣಿಗೆಯಿಂದ ವಿಚಲಿತವಾದ ಬ್ರಿಟಿಷ್ ಸರ್ಕಾರ 1922 ರಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಿ ಅನುಭವ ಇದ್ದ ಅಸ್ಸಾಂ ರೈಫಲ್ ಸೇನೆಯನ್ನು ಆಂಧ್ರಕ್ಕೆ ಕರೆಸಿಕೊಂಡಿತು. ಸೇನೆಯು ಬಸ್ತರ್ ಪ್ರದೇಶದ ಗಡಿಭಾಗದ ಅರಣ್ಯಕ್ಕೆ ಆಗಮಿಸಿದಾಗ, ಅರಣ್ಯದಲ್ಲಿ ಭೂಗತನಾಗಿದ್ದುಕೊಂಡು ಹೋರಾಟ ನಡೆಸುತಿದ್ದ ಸೀತಾರಾಮ ರಾಜುವನ್ನು 1924 ರಲ್ಲಿ ಆಂದ್ರದ ಪೊಲೀಸ್ ಅಧಿಕಾರಿ ಜ್ಞಾನೇಶ್ವರ ರಾವ್ ಎಂಬಾತ ಸೆರೆ ಹಿಡಿದನು. ಅಲ್ಲೂರಿ ಸೀತಾರಾಮರಾಜುವನ್ನು ಮರಕ್ಕೆ ಕಟ್ಟಿ ಹಾಕಿದ ಬ್ರಿಟಿಷ್ ಅಧಿಕಾರಿಗಳು ಸಾವಿರಾರು ಆದಿವಾಸಿಗಳ ಎದುರಿನಲ್ಲಿ ಆತನ ಎದೆಗೆ ಗುಂಡಿಟ್ಟು ಕೊಂದು ಹಾಕಿದರು. ಸೀತಾಮರಾಜುನನ್ನು ಹಿಡಿದು ಕೊಟ್ಟ ಪೊಲೀಸ್ ಅಧಿಕಾರಿಗೆ ಬ್ರಿಟಿಷ್ ಸರ್ಕಾರ “ರಾವ್ ಬಹದ್ದೂರ್” ಎಂಬ ಬಿರುದು ನೀಡಿ ಗೌರವಿಸಿತು.

ಆದಿವಾಸಿಗಳ ಮತ್ತು ಉತ್ತರ ತೆಲಂಗಾಣದ ಜನರ ಬಾಯಲ್ಲಿ “ಮಾನ್ಯಂ ವೀರುಡು” (ಅರಣ್ಯದ ನಾಯಕ) ಎಂದು ಕರೆಸಿಕೊಳ್ಳು ಈ ಹುತಾತ್ಮನ ಬಗ್ಗೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಆಂಧ್ರ ಸರ್ಕಾರ ಒರಿಸ್ಸಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ನಿಲ್ಲಿಸಲಾಗಿದೆ. ಭಾರತ ಸಕಾರ 1997 ರಲ್ಲಿ ಈತನ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು. ಈಗಿನ ತೆಲಗು ಚಿತ್ರರಂಗದ ಸೂಪರ್‍ಸ್ಟಾರ್‌ಗಳಲ್ಲಿ ಒಬ್ಬನಾಗಿರುವ ಯುವ ನಟ ಮಹೇಶ್ ಬಾಬುವಿನ ತಂದೆ, ಹಿರಿಯ ನಟ ಕೃಷ್ಣ 1980 ರಲ್ಲಿ ತಮ್ಮ ನೂರನೇ ಚಿತ್ರವಾಗಿ ಅಲ್ಲೂರಿ ಸೀತಾರಾಮರಾಜು ಚಿತ್ರವನ್ನು ನಿರ್ಮಿಸಿದ್ದರು. ಸ್ವತಃ ತಾವೇ ಸೀತರಾಮುವಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇವತ್ತಿಗೂ ತೆಲುಗು ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

ಇಂತಹ ಸುಧೀರ್ಘ ಇತಿಹಾಸವಿರುವ ಬಸ್ತಾರ್ ಅರಣ್ಯ ವಲಯಕ್ಕೆ 1980ರ ದಶಕದಲ್ಲಿ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಕಾರ್ಯಕರ್ತರು ಪ್ರವೇಶ ಮಾಡುವ ಮುನ್ನವೇ 70ರ ದಶಕದಲ್ಲಿ ಇಲ್ಲಿನ ಆದಿವಾಸಿ ಜೊತೆ ಪಶ್ಚಿಮ ಬಂಗಾಳದ ನಕ್ಸಲ್ ಕಾರ್ಯಕರ್ತರು ಸಹ ಸಂಪರ್ಕ ಸಾಧಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಚಳುವಳಿಯ ಕಿಚ್ಚು ಹತ್ತಿಸಿದ ಚಾರು ಮುಜಮದಾರ್ ಮಾರ್ಗದರ್ಶನದಲ್ಲಿ ಜೋಗು ರಾಯ್ ಎಂಬ ಸಿ.ಪಿ.ಐ.(ಎಂ.ಎಲ್.) ನಾಯಕ ಈ ಪ್ರದೇಶಕ್ಕೆ ಭೇಟಿ ನೀಡಿ “ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಪಾರ್ಟಿ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದ. ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದ ಆದಿವಾಸಿಗಳು ತಮ್ಮ ರಕ್ಷಣೆಗೆ ಬಂದ ನಕ್ಸಲ್ ಕಾರ್ಯಕರ್ತರನ್ನು ಸ್ವಾಗತಿಸಿದ್ದರು. ಪ್ರಥಮ ಬಾರಿಗೆ ಜಗದಾಲ್ ಪುರ್ (ಈಗ ಛತ್ತೀಸ್‌ಘಡದ ಒಂದು ಜಿಲ್ಲಾ ಕೇಂದ್ರ) ಪಟ್ಟಣದಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದವು.

ಈ ಘಟನೆ ಹೊರತು ಪಡಿಸಿದರೆ, 1980 ರಲ್ಲಿ ಪೆದ್ದಿ ಶಂಕರ್ ಮಹರಾಷ್ಟ್ರದ ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವೇಣು ಎಂಬ ಇನ್ನೊಬ್ಬ ಯುವಕ ಬಸ್ತಾರ್ ಅರಣ್ಯ ವಲಯ ಪ್ರವೇಶಿಸಿ ಆದಿವಾಸಿಗಳ ಜೊತೆ ಕಳಚಿ ಹೋಗಿದ್ದ ನಕ್ಸಲ್ ಸಂಬಂಧದ ಕೊಂಡಿಯನ್ನು ಮತ್ತೇ ಬೆಸೆದ. (ಈಗಿನ ಬಸ್ತಾರ್ ಅರಣ್ಯದ ನಕ್ಸಲರ ಹಿರಿಯ ನಾಯಕನಾಗಿ ವೇಣು ಕಾರ್ಯ ನಿರ್ವಹಿಸುತಿದ್ದಾನೆ.)

ಬಸ್ತಾರ್ ಅರಣ್ಯಕ್ಕೆ ದಕ್ಷಿಣದಿಂದ ಅಂಧ್ರದ ನಕ್ಸಲ್ ಸಂಘಟನೆ ಮತ್ತು ಪೂರ್ವದಿಂದ ಪಶ್ಚಿಮ ಬಂಗಾಳದ ನಕ್ಸಲರು ಪ್ರವೇಶಿಸುವ ಮುನ್ನ ಅನಕ್ಷರಸ್ತ ಆದಿವಾಸಿಗಳಿಗೆ ದಿಕ್ಕು, ದೆಸೆ, ಆಧಾರವಾಗಿ ಹಲವಾರು ಉದಾತ್ತ ಮನೋಭಾವದ ವ್ಯಕ್ತಿಗಳು ಕೆಲಸ ಮಾಡುತಿದ್ದರು. ಇವರುಗಳಲ್ಲಿ ಅಸ್ಪತ್ರೆ ಸ್ತಾಪಿಸಿದ ಬಾಬಾ ಅಮ್ಟೆ, ಶಿಕ್ಷಣಕ್ಕಾಗಿ ಹಳ್ಳಿಗಳಲ್ಲಿ ಶಾಲೆ ತೆರೆದ ಕೊಲ್ಕತ್ತ ನಗರದ ರಾಮಕೃಷ್ಣ ಮಿಷನ್ ಸಂಸ್ಥೆಯ ಪದಾಧಿಕಾರಿಗಳು, ಆರೋಗ್ಯ ಶಿಬಿರ ಏರ್ಪಡಿಸಿ, ಚಿಕಿತ್ಸೆ ನೀಡುತಿದ್ದ, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಹಾಗೂ ಆಕೆಯ ಪತಿ ಮತ್ತು ಹಿಮಾಂಶುಕುಮಾರ್ ಮೊದಲಾದವರು ಮುಖ್ಯರಾಗಿದ್ದಾರೆ.

(ಮುಂದುವರೆಯುವುದು)

ರಾಜ್ಯ ಸರ್ಕಾರಕ್ಕೆ ಮಾರ್ಕಂಡೇಯ ಖಟ್ಜು ಮಂಗಳಾರತಿ


– ಡಾ.ಎನ್.ಜಗದೀಶ್ ಕೊಪ್ಪ


 

ಸರ್ಕಾರಿ ಸವಲತ್ತುಗಳಾದ ಸಾರಿಗೆ ಭತ್ಯೆ ಮತ್ತು ಮನೆ ಭತ್ಯೆ, ಹಾಗೂ ಗೂಟದ ಕಾರಿನಲ್ಲಿ ತಿರುಗುವುದು ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ರಾಜ್ಯ ಬಿ.ಜೆ.ಪಿ. ಸರ್ಕಾರದ ಜನಪ್ರತಿನಿಧಿಗಳು ಮತ್ತು ಸಚಿವರು ಎಂಬ ಆರೋಪ ಹೊತ್ತಿರುವ ಮಹನೀಯರಿಗೆ ಭಾರತೀಯ ಪತ್ರಿಕಾ ಮಂಡಲಿ ಅಧ್ಯಕ್ಷರೂ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ಮಾರ್ಕಂಡೇಯ ಖಟ್ಜು ಮಂಗಳೂರಿನಲ್ಲಿ ಮಂಗಳಾರತಿ ಎತ್ತುವುದರ ಮೂಲಕ ಮುಖದ ನೀರು ಇಳಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆಯ ಅಕ್ರಮ ಬಂಧನ ಮತ್ತು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಕೆಂಡಾಮಂಡಲರಾಗಿರುವ ಖಟ್ಜು ಸೋಮವಾರ ಮಂಗಳೂರಿನಲ್ಲಿ ಕರ್ನಾಟಕದಲ್ಲಿ ಈ ರೀತಿ ಪತ್ರಿಕಾ ಸ್ವಾತಂತ್ರ್ಯ ಹರಣವಾದರೆ, ಸಂವಿಧಾನದ ವಿಧಿ 356ನೇ ಪ್ರಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಯನ್ನು ಪಡೆದ ಮೊದಲ ರಾಜ್ಯ ಎಂಬ ಕುಖ್ಯಾತಿ ಈಗ ಕರ್ನಾಟಕಕ್ಕೆ ಲಭ್ಯವಾಗಿದೆ.

ತನ್ನ ಆತ್ಮಹತ್ಯೆಯ ಹಾದಿಯಲ್ಲಿ ಬಹುತೇಕ ಗುರಿ ತಲುಪಿರುವ ಬಿ.ಜೆ.ಪಿ. ಸರ್ಕಾರಕ್ಕೆ ಇಂತಹ ರಾಷ್ಟ್ರೀಯ ಮಟ್ಟದ ಅಪಮಾನಗಳು ಮರ್ಮಕ್ಕೆ ತಾಕುವ ಸಂಭವ ತೀರಾ ಕಡಿಮೆ. ಭಂಡತನವನ್ನು ಮೈಗೂಡಿಸಿಕೊಂಡಿರುವ ಇವರು, ಆಡಳಿತ ಯಂತ್ರವನ್ನು ಖದೀಮ ಅಧಿಕಾರಿಗಳು ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಉರಿಯುವ ಮನೆಯಲ್ಲಿ ಸಿಕ್ಕಿದ್ದನ್ನು ದೋಚಿದರು ಎಂಬಂತೆ ಸರ್ಕಾರಿ ಭೂಮಿಯ ಮೇಲೆ ಕಣ್ಣು ನೆಟ್ಟು ಹಾಡು ಹಗಲೇ ಯಾವುದೇ ನಾಚಿಕೆ, ಆತ್ಮಸಾಕ್ಷಿ ಇಲ್ಲದವರಂತೆ ದೋಚುತ್ತಿರುವಾಗ ಕರ್ನಾಟಕದ ಜನತೆಯ ಸ್ಥಿತಿ ’ಹರ ಕೊಲ್ಲಲ್ ಪರ ಕಾಯ್ವನೆ?’ ಎಂಬಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಇತ್ತೀಚೆಗಿನ ವರ್ತನೆಯನ್ನು ಗಮನಿಸಿದರೆ, ಇವರು ಪೊಲೀಸರ ಕೆಲಸವಿರಲಿ, ಯಾವುದೇ ಶ್ರೀಮಂತರ ಮನೆಯ ಬಾಗಿಲು ಕಾಯುವ ಸೆಕ್ಯೂರಿಟಿ ಹುದ್ದೆಗೂ ನಾಲಾಯಕ್ ಆಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ವರ್ಷದ ಹಿಂದೆ ಮನೆಯಲ್ಲಿ ಚಹಾಪುಡಿ ಮತ್ತು ಭಗತ್ ಸಿಂಗನ ಸಾಹಿತ್ಯ ಸಿಕ್ಕಿತು ಎಂಬ ಕಾರಣಕ್ಕಾಗಿ ವಿಠಲ ಮಲೆಕುಡಿಯ ಎಂಬ ಪತ್ರಿಕೋದ್ಯಮದ ಹುಡುಗನನ್ನು ಬಂಧಿಸಿ, ಜೈಲಿಗೆ ತಳ್ಳಿ ಆತನ ಭವಿಷ್ಯವನ್ನು ಹಾಳುಗೆಡವಿದ ಇದೇ ಪೊಲೀಸರು ಈಗ ಯುವ ಪತ್ರಕರ್ತ ನವೀನ್ ಬದುಕಿಗೆ ಮುಳ್ಳಾಗಿದ್ದಾರೆ. ಇವರ ಕುಕೃತ್ಯದ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಕಳೆದ ಶನಿವಾರ ಬೆಂಗಳೂರಿನ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್ ಲೇಖನವೊಂದನ್ನು ಬರೆದರು. ಈ ಲೇಖನ ಹಿಂದೂ ಪತ್ರಿಕೆಯ ರಾಷ್ಟ್ರದ ಎಲ್ಲಾ ಅವೃತ್ತಿಗಳಲ್ಲಿ ಪ್ರಕಟವಾಗಿ ಕರ್ನಾಟಕದ ಪೊಲೀಸರ ಸಣ್ಣತನವನ್ನು ಅನಾವರಣಗೊಳಿಸಿದೆ.

ಮಂಗಳೂರಿನಲ್ಲಿ ಹೋಂಸ್ಟೇ ದಾಳಿ ನಡೆದ ನಂತರ ಮಾಧ್ಯಮಗಳಿಗೆ ದೃಶ್ಯ ಮತ್ತು ವಿವರಗಳನ್ನು ಹಂಚಿಕೊಂಡ ನವೀನ್ ಮಂಗಳೂರಿನಲ್ಲಿ ಇದ್ದರೂ ಕೂಡ ಕಾಣೆಯಾಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಿಜಕ್ಕೂ ಮಂಗಳೂರಿನಲ್ಲಿ ನವೀನ್ ಕಾಣೆಯಾಗಿದ್ದರೆ, ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬೇಕಿದೆ:

  • ಒಂದು: ನೀವು ವಿಚಾರಣೆಗೆ ಕರೆದಾಗ ನವೀನ್ ಬಂದು ವಿವರಣೆ ಒದಗಿಸಲಿಲ್ಲವೆ?
  • ಎರಡು: ಹೋಂಸ್ಟೇ ಘಟನೆ ನಡೆದ ನಂತರ ನವೀನ್ ಸೂರಿಂಜೆ ಕೆಲಸ ಮಾಡುತ್ತಿರುವ ಕಸ್ತೂರಿ ಛಾನಲ್ ಗೆ ಸುದ್ಧಿಗಳನ್ನು ಕಳಿಸುತ್ತಾ, ಕೆಲಸ ಮಾಡಲಿಲ್ಲವೆ? ಮಾಡಿಲ್ಲವಾದರೆ, ಆತ ಈ-ಮೈಲ್ ಮೂಲಕ ವಾಹಿನಿಗೆ ಮಂಗಳೂರಿನ ಸುದ್ಧಿ ಕಳಿಸಿದ ಬಗ್ಗೆ ಮಾಹಿತಿ ನೀಡಿದರೆ, ನೀವು ನೇಣು ಹಾಕಿಕೊಳ್ಳಲು, ಇಲ್ಲವೇ ಖಾಕಿ ಬಟ್ಟೆ ಕಳಚಿಟ್ಟು ಮಂಗಳೂರಿನ ಬೀದಿಯಲ್ಲಿ ಕಸ ಗುಡಿಸಲು ಸಿದ್ದರಿದ್ದೀರಾ?
  • ಮೂರು: ಕಳೆದ ನವಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಬೇಟಿ ನೀಡಿದಾಗ ನವೀನ್ ಸೂರಿಂಜೆಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲು ಪಾಸ್ ನೀಡಿದವರು ಯಾರು? ಆ ಸಮಯದಲ್ಲಿ ಪೊಲೀಸರು ಏನಾದರೂ ಹೆಂಡ ಕುಡಿದು ಪಾಸ್ ವಿತರಣೆ ಮಾಡಿದ್ದಾರೆಯೆ?

ಈ ಬಗ್ಗೆ ಕರ್ನಾಟಕದ ಜನತೆಗೆ ಪೊಲೀಸರು ಮತ್ತು ಗೃಹ ಇಲಾಖೆಯ ಹೊಣೆ ಹೊತ್ತಿರುವ ಆರ್. ಅಶೋಕ್ ಕೂಡಲೇ ಉತ್ತರಿಸಬೇಕಿದೆ.

ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಪೊಲೀಸರಿಂದ ಹರಣವಾಗುತ್ತಿರುವ ಸಂದರ್ಭದಲ್ಲಿ ದ್ವನಿ ಎತ್ತಬೇಕಾದ ನಮ್ಮ ಮಾಧ್ಯಮಗಳು ಪ್ರಳಯ ಎಂಬ ಪುಕಾರಿನ ಬಗ್ಗೆ ಪುಂಗಿ ಊದುತ್ತಾ ಕುಳಿತಿವೆ. ಪತ್ರಕರ್ತರಂತೂ ತಮಗೆ ಸಂಬಂಧಿಸದ ವಿಷಯವಲ್ಲವೇನೋ ಎಂಬಂತೆ ಪ್ರತಿಯೊಬ್ಬನೂ ತನ್ನ ಕಂಫರ್ಟ್‌-ಜೋನ್ (ಸುರಕ್ಷಿತ ವಲಯ) ನಲ್ಲಿ ಆರಾಮವಾಗಿದ್ದಾನೆ. ಪ್ರಜಾವಾಣಿಯ ಮಿತ್ರ ದಿನೇಶ್ ಅಮ್ಮಿನ್ ಮಟ್ಟು ಹಾಗೂ ಒಂದಿಬ್ಬರೂ ಹೊರತು ಪಡಿಸಿದರೆ, ಉಳಿದವರು ತಮ್ಮ ಪಂಚೇಂದ್ರಿಯವನ್ನು ಕಳೆದುಕೊಂಡವರಂತೆ ವರ್ತಿಸುತಿದ್ದಾರೆ. ಇನ್ನೂ ಪತ್ರಕರ್ತರ ಸವಲತ್ತುಗಳಿಗಾಗಿ ಸಂಘಗಳು, ವೇದಿಕೆಗಳು, ಪರಿಷತ್ತುಗಳು, ಕೂಟಗಳು, ಕ್ಲಬ್‌ಗಳು ಹೀಗೆ ರಾಜ್ಯಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿಜೃಂಭಿಸುತ್ತಿವೆ. ಪಾಪ ಇವುಗಳ ಪದಾಧಿಕಾರಿಗಳು ರಾಜಕಾರಣಿಗಳ ಕಾಲು ಒತ್ತುತ್ತಾ ಅವರ ಪಾದದಡಿ ವಿಶ್ರಮಿಸಿರಬೇಕು.

ಕಳೆದ ವಾರ ಈ ಕುರಿತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೆಳೆಯರಾದ ಗಂಗಾಧರ್ ಮೊದಲಿಯಾರ್ ಜೊತೆ ದೂರವಾಣಿಯಲ್ಲಿ ಚರ್ಚಿಸಿದೆ. ಪಾಪ ಅವರೂ ಮರೆತಿರಬೇಕು. ಈ ಕಾರಣಕ್ಕಾಗಿಯೇ, ಪತ್ರಕರ್ತರ ಸಂಘವನ್ನು “ಕಾರ್ಯ ಮರೆತ ಪತ್ರಕರ್ತರ ಸಂಘ”ವೆಂದು ಲೇವಡಿ ಮಾಡಲಾಗುತ್ತಿದೆ. ಇಲ್ಲಿ ಕಾರ್ಯ ಮರೆತರೆ ಅಂತಹ ದೊಡ್ಡ ಅನಾಹುತವಿಲ್ಲ, ಪತ್ರಕರ್ತರ ಹಕ್ಕನ್ನೇ ಮರೆತರೆ ಹೇಗೆ? ಇದು ಪ್ರತಿಯೊಬ್ಬ ಪತ್ರಕರ್ತ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. (ಯಾವುದೇ ಪತ್ರಕರ್ತ ತನ್ನ ಸುದ್ದಿಯ ಮೂಲವನ್ನು ಪೊಲೀಸರಿಗೆ ಅಥವಾ ಸರ್ಕಾರಕ್ಕೆ ನೀಡಲೇಬೇಕೆಂಬ ನಿರ್ಬಂಧ ಇಲ್ಲ.)

ಮಿತ್ರರೇ, ಪೊಲೀಸರ ಈ ವಂಚನೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ದೊಡ್ಡದೊಂದು ಆಂದೋಲನ ತುರ್ತಾಗಿ ಕರ್ನಾಟಕದಲ್ಲಿ ನಡೆಯಬೇಕಿದೆ. ಇದಕ್ಕೆ ಮುಂದೆ ಬರುವ ಮಹನೀಯರ ಜೊತೆ ನಾನೂ ಸಹ ಕೈ ಜೋಡಿಸಲು ಸಿದ್ದನಿದ್ದೇನೆ. ಬೆಳಗಾವಿಯ ವಿಶೇಷ ಅಧಿವೇಶನ ಮುಗಿದ ಕೂಡಲೇ ಒಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿ ನಮ್ಮ ತಾತ್ವಿಕ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಆವಾಗ ಮಾತ್ರ ನವೀನ್ ಸೂರಿಂಜೆಯಂತಹವರಿಗೆ ನ್ಯಾಯ ಸಿಗಲು ಸಾಧ್ಯ.

ಪ್ರಜಾ ಸಮರ – 11 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

1980 ರಲ್ಲಿ ಪೆದ್ದಿಶಂಕರನ ಹತ್ಯೆಯಿಂದಾಗಿ ಮಹಾರಾಷ್ಟ್ರದಲ್ಲಿ ಹತ್ತಿಕೊಂಡ ನಕ್ಸಲ್ ಚಟುವಟಿಕೆ ಮತ್ತು ಹಿಂಸಾಚಾರದ ಕಿಡಿ ಮೂರು ದಶಕಗಳ ನಂತರವೂ ಆರದ ಬೆಂಕಿಯಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಗಡಿಭಾಗದ ಜಿಲ್ಲೆಗಳಾದ ಗಡ್‌ಚಿರೋಲಿ, ಚಂದ್ರಾಪುರ, ಗೊಂಡಿಯ ಮತ್ತು ಭಂಡಾರ ಜಿಲ್ಲೆಗಳಲ್ಲಿ ಇವೊತ್ತಿಗೂ ಹತ್ತಿ ಉರಿಯುತ್ತಿದೆ. ಇವುಗಳನ್ನು ನಕ್ಸಲ್ ಪೀಢಿತ ಜಿಲ್ಲೆಗಳೆಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಗಡ್‌ಚಿರೋಲಿ ಜಿಲ್ಲೆಯ 120 ಆದಿವಾಸಿಗಳ ಹಳ್ಳಿಗಳನ್ನು ನಕ್ಸಲರ ತಾಣಗಳೆಂದು ಗುರುತಿಸಲಾಗಿದ್ದು ಈ ಪ್ರದೇಶಕ್ಕೆ ಪೊಲೀಸರು ಕಾಲಿಡಲು ಹೆದರುತ್ತಾರೆ. ಇಲ್ಲಿನ ಹಿಂಸಾಚಾರಕ್ಕೆ ಬಲಿಯಾದ ನಕ್ಸಲಿಯರು ಮತ್ತು ಪೊಲೀಸರಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಸ್ಥಳಿಯ ಆದಿವಾಸಿಗಳಾದ ಗೊಂಡ ಮತ್ತು ಚೆಂಚು ಜನಾಂಗದವರಾಗಿದ್ದಾರೆ. ಹಿಂಸೆ ಹೇಗೆ ಹಲವು ರೂಪಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಇಲ್ಲಿನ ಜನರನ್ನು ಕಾಡುತ್ತಿದೆ ಎಂಬುದಕ್ಕೆ 1997 ರಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಆದಿವಾಸಿ ಜನಾಂಗದ ಪ್ರಭಾಕರ ಟೆಕವಾಡೆ ಮತ್ತು ಪಂಡುಅಲಂ ಇಬ್ಬರೂ ಬಾಲ್ಯದಿಂದಲೂ ಸಹಪಾಠಿಗಳು ಮತ್ತು ಗೆಳೆಯರು. ಮಹಾರಾಷ್ಟ್ರ ಸರ್ಕಾರ ಗಿರಿಜನ ಮಕ್ಕಳಿಗಾಗಿ ಗಡ್‌ಚಿರೋಲಿ ಜಿಲ್ಲೆಯ ಬ್ರಹ್ಮಗಡ್ ಎಂಬಲ್ಲಿ ಸ್ಥಾಪಿಸಿದ್ದ ಲೋಕ್ ಬಿರದಾರಿ ಎಂಬ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೂ ಒಟ್ಟಿಗೆ ಓದಿದವರು. ಶಿಕ್ಷಣದ ನಂತರ ಪಂಡು ಅಲಂ ಮಹರಾಷ್ಟ್ರ ಪೊಲೀಸ್ ಪಡೆಗೆ ಸೇರಿದ ನಂತರ ನಕ್ಸಲ್ ನಿಗ್ರಹ ಪಡೆ ಕೋಬ್ರಾ ತಂಡಕ್ಕೆ ಕಮಾಂಡೊ ಆಗಿ ನಿಯೋಜಿತನಾದರೆ, ಆತನ ಗೆಳೆಯ ಪ್ರಭಾಕರ ಟೆಕವಾಡೆ ನಕ್ಸಲ್ ಸಂಘಟನೆ ಸೇರಿ ದಳಂ ಹೆಸರಿನ ತಂಡವೊಂದರಲ್ಲಿ ಜುರು ಎಂಬ ಹೆಸರಿನಲ್ಲಿ ನಾಯಕನಾದ.

ತನ್ನ ಹುಟ್ಟೂರಾದ ಜಾಂಡಿಯ ಎಂಬ ಹಳ್ಳಿಗೆ ತನ್ನ ಸಂಬಂಧಿಕರ ಮದುವೆ ಬಂದಿದ್ದ ಪ್ರಭಾಕರ ಅಲಿಯಾಸ್ ಜುರು ಬಗ್ಗೆ ಅವನ ಒಂದು ಕಾಲದ ಗೆಳೆಯನೇ ಆದ ಪಂಡು ಆಲಂ ತಾನು ಸೇವೆ ಸಲ್ಲಿಸುತಿದ್ದ ಪೊಲೀಸ್ ಕಮಾಂಡೊ ಗುಂಪಿನ ಕೋಬ್ರಾ ಪಡೆಗೆ ಮಾಹಿತಿ ರವಾನಿಸಿ ಪ್ರಭಾಕರನನ್ನು ಗುಂಡಿಟ್ಟು ಕೊಲ್ಲಲು ಸಹಕರಿಸಿದ. ಇದಕ್ಕೆ ಪ್ರತಿಯಾಗಿ ನಕ್ಸಲರು ಪಂಡುವನ್ನು ನೆಲ ಬಾಂಬ್ ಸ್ಪೋಟಿಸುವುದರ ಮೂಲಕ ಕೊಂದು ಹಾಕಿದರು. ಈ ಇಬ್ಬರೂ ಬಾಲ್ಯದ ಗೆಳೆಯರು ಮೂರು ತಿಂಗಳ ಅವಧಿಯಲ್ಲಿ ಮೃತ ಪಟ್ಟಾಗ ಇವರುಗಳ ವಯಸ್ಸು ಮುವತ್ತೈದನ್ನು ದಾಟಿರಲಿಲ್ಲ.

ಇಂತಹ ಘಟನೆಗಳಲ್ಲದೆ, ಪೊಲೀಸ್ ಮಾಹಿತಿದಾರರೆಂದು ನಕ್ಸಲಿಯರ ಕೈಯಲ್ಲಿ ಮತ್ತು ನಕ್ಸಲ್ ಬೆಂಬಲಿಗರೆಂದು ಪೊಲೀಸರ ಹಿಂಸೆಯಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ಆದಿವಾಸಿಗಳು ಗಡ್‌ಚಿರೋಲಿ ಜಿಲ್ಲೆಯಲ್ಲಿ ಅಸುನೀಗುತಿದ್ದಾರೆ. ಇದನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ವತಃ ಒಪ್ಪಿಕೊಂಡಿದ್ದಾರೆ.

ನಿರಂತರ ಹಿಂಸಾತ್ಮಕ ಚಟುವಟಿಕೆಗಳ ಕಾರಣದಿಂದಾಗಿ ಮಹಾರಾಷ್ಟ್ರದ ಗೊಂಡಿಯ, ಗಡ್‌ಚಿರೋಲಿ, ಚಂದ್ರಾಪುರ, ಭಂಡಾರ ಜಿಲ್ಲೆಗಳಲ್ಲಿ ಯಾವುದೇ ಕೈಗಾರಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗದೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿ ಉಳಿದಿವೆ. ಚಂದ್ರಾಪುರ ಜಿಲ್ಲೆಯಲ್ಲಿ ನೆರೆಯ ಛತ್ತೀಸ್‌ಗಡ ರಾಜ್ಯದಿಂದ ಬರುವ ಕಚ್ಛಾ ಕಲ್ಲಿದ್ದನ್ನು ಸಂಸ್ಕರಿಸುವ 24 ಕ್ಕೂ ಹೆಚ್ಚು ಘಟಕಗಳಿದ್ದು ಇವೆಲ್ಲವೂ ಬಹುತೇಕ ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನೂ ಗ್ರಾಮೀಣಾಭಿವೃದ್ಧಿಯಂತೂ ಇಲ್ಲಿನ ಜನತೆಯ ಪಾಲಿಗೆ ಕನಸಿನ ಮಾತಾಗಿದೆ. ಮಹಾರಾಷ್ಡ್ರ ಮತ್ತು ಛತ್ತೀಸ್ ಗಡ ಗಡಿಭಾಗದ 231 ಹಳ್ಳಿಗಳ 40 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶವನ್ನು ರೆಡ್ ಏರಿಯಾ ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ನಕ್ಸಲ್ ನಿಗ್ರಹ ಪಡೆ ಕೋಬ್ರಾ ಕೂಡ ಕಾಲಿಡಲು ಸಾಧ್ಯವಾಗಿಲ್ಲ. ಈ ಪ್ರದೇಶದ ಹಳ್ಳಿಗಳಲ್ಲಿ ಮಾವೋವಾದಿ ನಕ್ಸಲರಿಂದ ಜನಾತನ್ ಸರ್ಕಾರ ಎಂಬ ಪರ್ಯಾಯ ಸರ್ಕಾರ ಅಸ್ಥಿತ್ವದಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ನಕ್ಸಲ್ ತರಬೇತಿ ಕೇಂದ್ರ, ಮದ್ದುಗುಂಡುಗಳ ತಯಾರಿಕಾ ಕೇಂದ್ರ, ಮತ್ತು ಮುದ್ರಣ ಘಟಕಗಳಿದ್ದು, ನಕ್ಸಲಿಯರೇ ಹಲವು ಹಳ್ಳಿಗಳಲ್ಲಿ ಶಾಲೆ ನಡೆಸುತಿದ್ದಾರೆ. ಗೊಂಡಿ ಭಾಷೆಗೆ ಲಿಪಿ ಇಲ್ಲದ ಕಾರಣ ತೆಲುಗು ಭಾಷೆಯಲ್ಲಿ ನಕ್ಸಲರು ಮಕ್ಕಳಿಗೆ ಶಿಕ್ಷಣ ನೀಡುತಿದ್ದಾರೆ.

ಗಡ್‌ಚಿರೋಲಿ ಜಿಲ್ಲೆಯಲ್ಲಿ ತಲಾ 10 ರಿಂದ 12 ಸದಸ್ಯರಿರುವ 20 ಕ್ಕೂ ಹೆಚ್ಚು ದಳಂ ಹೆಸರಿನ ತಂಡಗಳಿದ್ದು ಇವರಿಗೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಆದಿವಾಸಿ ಯುಕ, ಯುವತಿಯರು ಸಮವಸ್ತ್ರವಿಲ್ಲದೆ ನಕ್ಸಲ್ ಕಾರ್ಯಕರ್ತರಾಗಿ ದುಡಿಯುತಿದ್ದಾರೆ. ಈ ಪ್ರದೇಶದಲ್ಲಿರುವ ಮಾವೋವಾದಿ ಸಕ್ಸಲ್ ಸಂಘಟನೆಗೆ ಪ್ರಸಿದ್ಧ ಸಿಗರೇಟ್ ತಯಾರಿಕಾ ಕಂಪನಿಯಾದ ಐ.ಟಿ.ಸಿ. ಕಂಪನಿ ಒಡೆತನಕ್ಕೆ ಸೇರಿದ ಬಲ್ಲಾಪುರ್ ಕಾಗದ ತಯಾರಿಕಾ ಕಂಪನಿ ಮತ್ತು ಕಲ್ಲಿದ್ದಲು ಘಟಕಗಳು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸುತ್ತಿವೆ. ಅರಣ್ಯದ ನಡುವೆ ಇರುವ ನಕ್ಸಲ್ ತಂಡಗಳಿಗೆ ಧವಸ, ಧಾನ್ಯಗಳನ್ನು ಆದಿವಾಸಿಗಳು ನೀಡುತಿದ್ದಾರೆ. ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡದಿರುವ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದರೂ ಸಹ ಆದಿವಾಸಿಗಳು ಅಸಹಾಯಕರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ನಕ್ಸಲಿಯರೇ ಆದಿವಾಸಿಗಳಿಗೆ ಆಪತ್‌ಬಾಂಧವರಾಗಿದ್ದಾರೆ. ಪೊಲೀಸರ, ಅರಣ್ಯಾಧಿಕಾರಿಗಳ ಮತ್ತು ದಲ್ಲಾಳಿಗಳ ಕಿರುಕುಳ ತಪ್ಪಿದೆ. ಆದಿವಾಸಿಗಳು ಸಂಗ್ರಹಿಸುವ ಅರಣ್ಯದ ಕಿರು ಉತ್ಪನ್ನಗಲಿಗೆ ಯೋಗ್ಯ ಬೆಲೆ ದೊರಕುತ್ತಿದೆ. ನಕ್ಸಲರ ಆರ್ಭಟಕ್ಕೆ ಹೆದರಿರುವ ಬೀಡಿ ತಯಾರಿಕೆಯ ಎಲೆಯಾದ ತೆಂಡು ಮತ್ತು ಕಾಗದ ತಯಾರಿಕೆಗೆ ಬಳಸಲಾಗುವ ಬಿದರಿನ ಬೊಂಬಿಗೂ ಸಹ ದಲ್ಲಾಳಿಗಳು ಉತ್ತಮ ಬೆಲೆ ನೀಡುತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆದಿವಾಸಿಗಳು ಸದ್ಯಕ್ಕೆ ಅಭಿವೃದ್ಧಿಯಿಂದ ವಂಚಿತರಾದರೂ ನಕ್ಸಲೀಯರ ನೆಪದಿಂದಾಗಿ ನೆಮ್ಮದಿಯಿಂದ ಇದ್ದಾರೆ. ಗಡ್‌ಚಿರೋಲಿ ಜಲ್ಲೆಯ ಎರಡು ತಾಲೂಕುಗಳಲ್ಲಿ ಜಮೀನ್ದಾರರ ವಶವಾಗಿದ್ದ 20 ಸಾವಿರ ಸಾವಿರ ಎಕರೆ ಕೃಷಿ ಭೂಮಿಯನ್ನು ವಾಪಸ್ ಪಡೆದು ಆದಿವಾಸಿಗಳಿಗೆ ಹಂಚಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಗಡ್‌ಚಿರೋಲಿ ಜಿಲ್ಲೆಯ ಅಹೇರಿ ತಾಲೂಕಿನ ಹಳ್ಳಿಯೊಂದರಲ್ಲಿ ಅರಣ್ಯಾಧಿಕಾರಿಗಳು ತನ್ನ ಅಪ್ಪನಿಗೆ ನೀಡುತಿದ್ದ ಕಿರುಕುಳ ಸಹಿಸಲಾಗದೆ ನಕ್ಸಲ್ ಸಂಘಟನೆಗೆ ಸೇರಿದ್ದ ಆದಿವಾಸಿ ಯುವತಿಯೊಬ್ಬಳು ಇಂದು ಈ ಪ್ರಾಂತ್ಯದ ಮಹಿಳಾ ಕಮಾಂಡರ್ ಆಗಿ ಬೆಳೆದು ನಿಂತಿದ್ದಾಳೆ. ಯಮುನಕ್ಕ ಎಂಬ ಹೆಸರಿನ ಈಕೆ ಆದಿವಾಸಿಗಳಿಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ಹಿಡಿದು ತಂದು ಹಳ್ಳಿಗಳ ನಡುವಿನ ಮರಕ್ಕೆ ಕಟ್ಟಿ ಹಾಕಿ ಎಲ್ಲಾ ಹೆಂಗಸರಿಂದ ಮುಖಕ್ಕೆ ಉಗುಳಿಸುವ ಕಾರ್ಯಕ್ರಮ ಹಮ್ಮಿಕೊಂಡ ನಂತರ ಮಹಿಳೆಯರ ಮೇಲಿನ ಅಪರಾಧದ ಚಟುವಟಿಕೆ ಕೂಡ ಕಡಿಮೆಯಾಗಿದೆ.

ವರ್ತಮಾನದ ನಕ್ಸಲ್ ಇತಿಹಾಸದ ವಿಪರ್ಯಾಸವೆಂದರೆ, ಗಡ್‌ಚಿರೋಲಿ ಜಿಲ್ಲೆಯಷ್ಟೆ ಅಲ್ಲ, ಇಡೀ ದಂಡಕಾರಣ್ಯದಲ್ಲಿ ನಕ್ಸಲ್ ಚಟುವಟಿಕೆ ಈಗ ಆದಿವಾಸಿ ಯುವಕರ ಕೈಯಲ್ಲಿದೆ. ಕಳೆದ ಎರಡು ಮೂರು ದಶಕದಿಂದ ನಕ್ಸಲ್ ಹೋರಾಟದಲ್ಲಿ ಬೆಳೆದು ಬಂದ ಇವರೆಲ್ಲಾ ಈಗ ನಾಯಕರಾಗಿ ಹೊರ ಹೊಮ್ಮಿದ್ದಾರೆ. ವಾಸ್ತವವಾಗಿ ಇವರೆಲ್ಲಾ ಅನಕ್ಷಸ್ತರಾಗಿದ್ದು ನಕ್ಸಲ್ ಚಳುವಳಿಯ ಮೂಲ ತತ್ವ ಮತ್ತು ಸಿದ್ಧಾಂತಗಳಿಂದ ವಿಮುಖರಾಗಿದ್ದಾರೆ. ಒಂದು ಕಾಲದಲ್ಲಿ ಮಾವೋ, ಲೆನಿನ್, ಮಾರ್ಕ್ಸ್ ವಿಚಾಧಾರೆಗಳ ಆಧಾರದ ಮೇಲೆ ಹೋರಾಟವನ್ನು ಹುಟ್ಟು ಹಾಕಿದ ಆಂಧ್ರ ಮೂಲದ ಮಾವೋವಾದಿ ನಕ್ಸಲ್ ನಾಯಕರು ವೃದ್ಧಾಪ್ಯದಿಂದ ನಿವೃತ್ತಿ ಹೊಂದಿದ್ದಾರೆ, ಇಲ್ಲವೇ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ನಗರಗಳಲ್ಲಿ ಕುಳಿತು ಮಾವೋವಾದಿಗಳ ಹೋರಾಟವನ್ನು ಕುರಿತು ಇಲ್ಲವೇ ಅವರ ಪರವಾಗಿ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಕೂಡ ನಕ್ಸಲ್ ಬೆಂಬಲಿಗರ ಆತ್ಮವಂಚನೆಯ ಮಾತುಗಳಾಗಿ ಪರಿವರ್ತನೆ ಹೊಂದುತ್ತಿವೆ.

ಛತ್ತೀಸ್‌ಗಡ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಮುಂದುವರಿಸುತ್ತಿರುವ ಬುಡಕಟ್ಟು ಜನಾಂಗದ ನಾಯಕರು ಗಣಿ ಕಂಪನಿಗಳಿಂದ ಬೆದರಿಕೆಯ ಮೂಲಕ ಸಂಪಾದಿಸುತ್ತಿರುವ ಹಣದಲ್ಲಿ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಏಕೆಂದರೆ, ಇವರಿಗೆಲ್ಲಾ ನಕ್ಸಲ್ ಹೋರಾಟದ ಮೂಲ ಆಶಯವಾಗಲಿ, ಚಿಂತನೆಗಳಾಗಲಿ, ಇವುಗಳ ಗಂಧ-ಗಾಳಿ ಕೂಡ ತಿಳಿದಿಲ್ಲ. ತತ್ವ ಮತ್ತು ಸಿದ್ಧಾಂತ ಕೊರತೆಯಿಂದಾಗಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಇತೀಚೆಗಿನ ವರ್ಷಗಳಲ್ಲಿ ನಕ್ಸಲಿಯರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಾಗತೊಡಗಿದೆ.

2003 ಆಗಸ್ಟ್ 29 ರಂದು ಅರಣ್ಯದಲ್ಲಿ ಗಸ್ತು ತಿರುಗುತಿದ್ದ ಪೊಲೀಸ್ ಜೀಪನ್ನು ನೆಲಬಾಂಬ್ ಮೂಲಕ ಸ್ಪೋಟಿಸಿದರ ಪರಿಣಾಮ ಐವರು ಪೊಲೀಸರು ಮೃತಪಟ್ಟರು. 2004 ರ ಮಾರ್ಚ್ ತಿಂಗಳಿನಲ್ಲಿ ಚಂದ್ರಾಪುರ ಜಿಲ್ಲೆಯಲ್ಲಿ ಆಂಧ್ರ ಗಡಿಭಾಗಕ್ಕೆ ಸಮೀಪವಿರುವ ಮೊಕಾಡಿ ಎಂಬ ರೈಲ್ವೆ ನಿಲ್ದಾಣವನ್ನು ಸ್ಪೋಟಿಸಲಾಯಿತು. 2005 ರ ಪೆಬ್ರವರಿಯಲ್ಲಿ ಬ್ರಹ್ಮಘಡ್ ಪೊಲೀಸ್ ಠಾಣೆಯ ಪೊಲೀಸ್ ವಾಹನವನ್ನು ನೆಲಬಾಂಬ್ ಮೂಲಕ ಧ್ವಂಸಗೊಳಿಸಿದ್ದರಿಂದ ಏಳು ಮಂದಿ ಪೊಲೀಸರು ಮೃತಪಟ್ಟರೆ, ಅದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಗೊಂಡಿಯ ಜಿಲ್ಲೆಯಲ್ಲಿ ಇಬ್ಬರು ನಾಗರೀಕರು ಮತ್ತು ಐವರು ಪೊಲೀಸರು ಅಸುನೀಗಿದರು. 2009 ರ ಅಕ್ಟೋಬರ್ ತಿಂಗಳಿನಲ್ಲಿ ಗಡ್‌ಚಿರೋಲಿ ಅರಣ್ಯದ ಬಳಿ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ನಸುಕಿನ ಜಾವ ನಡೆಸಿದ ಧಾಳಿಯಲ್ಲಿ ನಿದ್ರೆಯಲ್ಲಿದ್ದ ಸಿಬ್ಬಂದಿ ಸೇರಿದಂತೆ 17 ಮಂದಿ ಪೊಲೀಸರು ನಕ್ಸಲಿಯರ ಹಿಂಸೆಗೆ ಬಲಿಯಾದರು.

ಜಗತ್ತಿನಲ್ಲಿ ಹಿಂಸೆ ಎಂಬುದು ಅದು ಪೊಲೀಸರ ಕೃತ್ಯವಾಗಿರಲಿ ಅಥವಾ ನಕ್ಸಲಿಯರ ಕೃತ್ಯವಾಗಿರಲಿ ಅದು ಮನುಕುಲದ ವಿರೋಧಿ ನೀತಿ ಎಂಬುದನ್ನು ಮರೆಯಬಾರದು. ಇದನ್ನು ಪ್ರೋತ್ಸಾಹಿಸುವುದು ಇಲ್ಲವೇ ನಿಗ್ರಹದ ನೆಪದಲ್ಲಿ ಪರೋಕ್ಷವಾಗಿ ಮುಂದುವರಿಸುವುದು ಮನುಷ್ಯರು ಮಾಡಬಹುದಾದ ಕ್ರಿಯೆ ಅಲ್ಲ. ಇದನ್ನು ನಾಗರೀಕ ಜಗತ್ತು ಎಂದಿಗೂ ಸಮರ್ಥಿಸಿವುದಿಲ್ಲ, ಜೊತೆಗೆ ಸಮರ್ಥಿಸಲೂಬಾರದು.

(ಮುಂದುವರಿಯುವುದು)