Category Archives: ದಿನೇಶ್ ಕುಮಾರ್ ಎಸ್.ಸಿ.

“ಬೆಂಕಿಪಟ್ಣ” ಸಿನೆಮಾಗೆ ಯಶಸ್ಸನ್ನು ಹಾರೈಸುತ್ತ…

ಆತ್ಮೀಯರೇ,

ಕಳೆದ ಮುವ್ವತ್ತೇಳು ದಿನಗಳಿಂದ ಧರಣಿ ಸತ್ಯಾಗ್ರಹ, ಉಪವಾಸ, ಅನಾರೋಗ್ಯ, ಪಕ್ಷದ ಕೆಲಸ, ಮುಂತಾದ ಕಾರಣಗಳಿಂದಾಗಿ ಅನೇಕ ವಿಷಯಗಳ ಕಡೆ ಗಮನ ಹರಿಸಲು ಆಗುತ್ತಿಲ್ಲ. ಸುಡುತ್ತಿರುವ ಮೈ ಮತ್ತು ದೈಹಿಕ ಅಶಕ್ತಿಯ ಕಾರಣಕ್ಕೆ ಕಳೆದ 37 ದಿನಗಳಲ್ಲಿ ಮೊದಲ ದಿನ ಧರಣಿ ಸಭೆಗೆ ಹೋಗಲು ಆಗುತ್ತಿಲ್ಲ. ಆದರೆ, ಇದನ್ನು ಇಂದು ಬರೆಯಲೇಬೇಕೆಂಬ ಕಾರಣಕ್ಕೆಮನೆಯಲ್ಲಿ ಲ್ಯಾಪ್‌ಟಾಪ್ ಹಿಡಿದಿದ್ದೇನೆ.

ನಮ್ಮ ವರ್ತಮಾನ ಬಳಗಕ್ಕೆ ಮತ್ತು ನಮ್ಮ ವಾರಿಗೆಯ ಅನೇಕ ಕನ್ನಡಿಗರಿಗೆ ಪತ್ರಕರ್ತ ಮತ್ತು ಕವಿ ಎಸ್.ಸಿ. ದಿನೇಶ್‌ಕುಮಾರ್ ಗೊತ್ತು. ವರ್ತಮಾನಕ್ಕೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಹಾಗೆಯೇ, ಕತೆಗಾರ, ಲೇಖಕ, ಸಾಮಾಜಿಕ ಕಾರ್ಯಕರ್ತ ಟಿ.ಕೆ.ದಯಾನಂದ್ ಸಹ. ದಯಾನಂದ್ ಬಹುಮುಖ ಪ್ರತಿಭೆಯ ದೇಸಿ ಪ್ರತಿಭೆ. ನಮ್ಮ ವರ್ತಮಾನ.ಕಾಮ್‍ನ ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಈ ಬಾರಿ ಉತ್ತಮ ಕತೆಗಾರರಾಗಿ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಮತ್ತಿತರ ದೀಪಾವಳಿ ಕಥಾಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಅಪಾರ ಕ್ರಿಯಾಶೀಲತೆಯ ಯುವಕ. ಮಲಹೊರುವವರ ಬಗ್ಗೆ ಇವರು ಬಹಳ ಕೆಲಸ, ಹೋರಾಟ ಮಾಡಿದ್ದಷ್ಟೇ ಅಲ್ಲದೆ, ಅದನ್ನು ಜನರ ಮುಂದೆ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇಟ್ಟವರು. ವರ್ತಮಾನದ ಮೊದಲ ವರ್ಷದಲ್ಲಿಯೇ ಕೆಜಿಎಫ್‌ನಲ್ಲಿ ಮಲದ ಗುಂಡಿ ಸ್ವಚ್ಚಗೊಳಿಸಲು ಹೋಗಿ ದುರ್ಮರಣಕ್ಕೀಡಾದ ವ್ಯಕ್ತಿಗಳ ಕುಟುಂಬಕ್ಕೆ ಮೂರು ವರ್ಷಗಳ ಹಿಂದೆ ಇದೇ ದಯಾನಂದ್ ಮತ್ತು ದಿನೇಶ್‌ಕುಮಾರ್ ನಮ್ಮ ವರ್ತಮಾನ.ಕಾಮ್ ಮೂಲಕ ಹಣ ಸಂಗ್ರಹಿಸಿ ಸಹಾಯ ಮಾಡಿದ್ದರು.

ಈಗ ದಿನೇಶ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿರುವ “ಬೆಂಕಿಪಟ್ಣ” ಸಿನೆಮಾವನ್ನು ತಮ್ಮದೇ ಕತೆ-ಚಿತ್ರಕತೆ-ಸಂಭಾಷಣೆಗಳೊಂದಿದೆ benkipatnaಟಿ.ಕೆ.ದಯಾನಂದ್ ನಿರ್ದೇಶಿಸಿದ್ದಾರೆ. ಈಗಾಗಲೆ ಆ ಸಿನೆಮಾದ ಹಾಡುಗಳು ಮತ್ತು ಟ್ರೈಲರ್ ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಹುಶಃ ಸಾವಿರಾರು ಅತ್ಯುತ್ತಮ ಮತ್ತು ಕೆಟ್ಟ ಸಿನೆಮಾಗಳನ್ನು ನೋಡಿರುವ ಟಿ.ಕೆ.ದಯಾನಂದ್, ಯಾವುದೇ ನೇರಗುರುವಿನ ಪಾಠವಿಲ್ಲದೆ ಮೊದಲ ಬಾರಿಗೆ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಸ್ವಯಂಅಭ್ಯಾಸಿಯಾಗಿರುವ ದಯಾನಂದರದು, ಏಕಲವ್ಯ ಪ್ರತಿಭೆ.

ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ “ಬೆಂಕಿಪಟ್ಣ”ದ ಹಾಡುಗಳು ಮತ್ತು ಟ್ರೈಲರ್ ಬಗ್ಗೆ ಒಳ್ಳೆಯ ಮಾತುಗಳು ಬರುತ್ತಿವೆ. ಜಯಂತ್ ಕಾಯ್ಕಿಣಿ, ದಿನೇಶ್‌ಕುಮಾರ್, ಯೋಗರಾಜ್ ಭಟ್ಟರು ಹಾಡು ಬರೆದಿದ್ದಾರೆ. ಬಿ.ಸುರೇಶ್, ಅರುಣ್ ಸಾಗರ್, ಸೇರಿದಂತೆ ಅನೇಕ ಅನುಭವಿ ಮತ್ತು ಹೊಸ ಪ್ರತಿಭೆಗಳು ಈ ಸಿನೆಮಾದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಪ್ರಾಮಾಣಿಕ ಚಿಂತನೆಗಳ ಮತ್ತು ಜೀವಪರ ನಿಲುವಿನ ದಿನೇಶ್‌ಕುಮಾರ್ ಮತ್ತು ದಯಾನಂದರ ಈ ಚೊಚ್ಚಲ ಸಿನೆಮಾ ಪ್ರಯತ್ನ ಯಶಸ್ವಿಯಾಗಲಿ ಮತ್ತು ಕನ್ನಡಿಗರಿಗೆ ಒಳ್ಳೆಯ ಸಿನೆಮಾ ಸಿಗಲಿ, ಹಾಗೂ ಉತ್ತಮ ಅಭಿರುಚಿಯ ಜನ ಹೆಚ್ಚುಹೆಚ್ಚು ಸಿನೆಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡು ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಸಂಪನ್ನಗೊಳಿಸಲಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.

ವಿಶ್ವಾಸದಲ್ಲಿ,
ರವಿ


“ಬೆಂಕಿಪಟ್ಣ” ಸಿನೆಮಾದ ಟ್ರೈಲರ್: http://youtu.be/8-3knn5d24c

ಸಿನೆಮಾದ ಎಲ್ಲಾ ಹಾಡುಗಳು ಕೇಳಲು ಇಲ್ಲಿ ಲಭ್ಯವಿದೆ: http://youtu.be/wkutzwqDeW8

ಜೀವನ್ಮುಖಿ ಮೇಷ್ಟ್ರು ಜತೆ ಪ್ರೀತಿ ಹಂಚಿಕೊಂಡ ನೆನಪುಗಳು

– ದಿನೇಶ್ ಕುಮಾರ್ ಎಸ್.ಸಿ.

ನಾನು ಡಾ.ಯು.ಆರ್. ಅನಂತಮೂರ್ತಿಯವರನ್ನು ಮೊದಲ ಬಾರಿ ನೋಡಿದ್ದು ಇಪ್ಪತ್ತು ವರ್ಷಗಳ 206585_1038575259571_5996571_nಹಿಂದೆ ಹೆಗ್ಗೋಡಿನಲ್ಲಿ. ಕೆ.ವಿ.ಸುಬ್ಬಣ್ಣನವರು ಪ್ರತಿ ವರ್ಷ ಏರ್ಪಡಿಸುತ್ತಿದ್ದ ಸಂಸ್ಕೃತಿ ಶಿಬಿರಕ್ಕೆ ನಾನು ಶಿಬಿರಾರ್ಥಿಯಾಗಿ ಹೋಗಿದ್ದೆ. ಆಗ ನನಗೆ ವಯಸ್ಸು ಹತ್ತೊಂಭತ್ತು. ತಲೆ ತುಂಬಾ ಸಾಹಿತ್ಯದ ಹುಚ್ಚು. ನಾನು ಓದುತ್ತಿದ್ದ ಸೈನ್ಸ್ಗೂ ನನ್ನ ಅಭಿರುಚಿಗಳಿಗೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆ ವರ್ಷ ದೇವ ದೇವಿಯರು ಎಂಬ ಥೀಮ್ ಇಟ್ಟುಕೊಂಡು ಶಿಬಿರ ಏರ್ಪಡಿಸಲಾಗಿತ್ತು. ಎಂದಿನಂತೆ ಅನಂತಮೂರ್ತಿಯವರೇ ಶಿಬಿರದ ನಿರ್ದೇಶಕರು. ಆ ವರ್ಷ ಪ್ರಖ್ಯಾತ ದೇಸೀ ಚಿಂತಕ ಆಶೀಶ್ ನಂದಿ ಬಂದಿದ್ದರು. ಇನ್ನು ನಮ್ಮ ಘಟನಾನುಘಟಿ ಸಾಹಿತಿಗಳ ದಂಡೇ ಅಲ್ಲಿ ನೆರೆದಿತ್ತು. ನಮ್ಮ ಬಹುತೇಕ ಸಾಹಿತಿಗಳೆಲ್ಲ ಮೇಷ್ಟ್ರುಗಳೇ. ಹೀಗಾಗಿ ಒಬ್ಬೊಬ್ಬರೂ ಸುತ್ತಲೂ ಪ್ರಭಾವಳಿಯಂತೆ ಒಂದಷ್ಟು ಹುಡುಗರು-ಹುಡುಗಿಯರು ನೆರೆದಿರುತ್ತಿದ್ದರು. ಹೆಚ್ಚು ಗುಂಪು ಸೇರುತ್ತಿದ್ದದ್ದು ಕಿ.ರಂ.ನಾಗರಾಜ್ ಅವರ ಸುತ್ತ. ಇನ್ನುಳಿದಂತೆ ಎಲ್ಲೋ ಒಂದು ಮೂಲೆಯಲ್ಲಿ ಎಲೆಅಡಿಕೆ ಜಗಿಯುತ್ತಾ ಸುಬ್ಬಣ್ಣ ಕೂತಿರುತ್ತಿದ್ದರು. ಡಿ.ಆರ್.ನಾಗರಾಜ್ ಆಗ ನಾವೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ದ ಹೊಳೆಯುವ ನಕ್ಷತ್ರ.

ಎಲ್ಲರ ನಡುವೆ ಅನಂತಮೂರ್ತಿಯವರು ಜೀನ್ಸ್ ಮತ್ತು ಟೀ ಶರ್ಟ್ ತೊಟ್ಟು ಮಿಂಚುತ್ತಿದ್ದರು. ಸದಾ ಹಸನ್ಮುಖಿ. ಎಲ್ಲರನ್ನೂ ಮೈದಡವಿ ಮಾತನಾಡುವ ಆತ್ಮೀಯತೆ. ಮಾತಿಗೆ ನಿಂತರೆ ಎಲ್ಲಿ ಒಂದು ಶಬ್ದ ಕೇಳದೇ ಹೋದೀತೋ ಎಂಬ ಆತಂಕದಿಂದಲೇ ಇಡೀ ಭಾಷಣವನ್ನು ಕೇಳುವಂತೆ ಮಾಡುವ ಮಾಯಾವಿತನ. ಇಡೀ ದಿನ ಏನೇ ಚರ್ಚೆ ಆಗಿರಲಿ, ಸಂಜೆ ಹೊತ್ತು ಗುಂಪುಗುಂಪುಗಳಲ್ಲಿ ಹರಟೆ ಶುರುವಾದಾಗೆಲ್ಲ ಮಾತಿನ ಕೇಂದ್ರ ಬಿಂದು ಅನಂತಮೂರ್ತಿಯವರೇ ಆಗಿರುತ್ತಿದ್ದರು. ಅಷ್ಟರಮಟ್ಟಿಗೆ ಇಡೀ ಶಿಬಿರವನ್ನು ಅವರು ಆವರಿಸಿಕೊಂಡುಬಿಟ್ಟಿದ್ದರು.

ಆಗ ನಿಜವಾಗಿಯೂ ನನಗೆ ಅನಂತಮೂರ್ತಿಯವರೆಂದರೆ ಅಷ್ಟಕ್ಕಷ್ಟೆ. ಸಂಸ್ಕಾರ, ಭಾರತೀಪುರ, ಅವಸ್ಥೆ ಕೃತಿಗಳನ್ನೆಲ್ಲ ಓದಿಯಾಗಿತ್ತು. ಸಂಸ್ಕಾರ ಕಾದಂಬರಿಯಂತೂ ಹುಚ್ಚು ಹಿಡಿಸುವಷ್ಟು ಇಷ್ಟವಾಗಿತ್ತು. ಆದರೆ ಅನಂತಮೂರ್ತಿಯವರನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ನಾನು ಲಂಕೇಶರ ಕಟ್ಟಾ ಅಭಿಮಾನಿ. ಹೀಗಾಗಿ ಅವರು ಏನೇ ಬರೆದರೂ ಅದೇ ಅಂತಿಮ ಸತ್ಯ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಿದ್ದೆ. ಲಂಕೇಶರು ಹಲವು ಬಾರಿ ಅನಂತಮೂರ್ತಿಯವರ ವಿರುದ್ಧ ನಿಂತಾಗ (ಡಾಲರ್ಸ್ ಕಾಲೋನಿ ಮನೆ ಇತ್ಯಾದಿ) ಸಹಜವಾಗಿಯೇ ಒಂದು ಗುಮಾನಿ ಶುರುವಾಗಿಬಿಟ್ಟಿತ್ತು. ಆ ವಯಸ್ಸೇ ಅಂಥದ್ದಾಗಿತ್ತು. ನನ್ನ ವಯೋಮಾನದ ಬಹುತೇಕರ ಸಮಸ್ಯೆಯೂ ಅದೇ ಆಗಿತ್ತು. ಲಂಕೇಶರ ಅಭಿಮಾನಿಗಳು ಅನಂತಮೂರ್ತಿ ಅಭಿಮಾನಿಗಳಾಗುವಂತಿರಲಿಲ್ಲ, ಅದೇ ರೀತಿ ಅನಂತಮೂರ್ತಿಯವರನ್ನು ಇಷ್ಟಪಡುವವರು ಲಂಕೇಶರ ಟೀಕಾಕಾರರಾಗಿರುತ್ತಿದ್ದರು. ಇದು ಒಂದು ಬಗೆಯಲ್ಲಿ ಕುವೆಂಪು-ಬೇಂದ್ರೆಯವರನ್ನು ಬೇರೆಬೇರೆಯಾಗಿಟ್ಟು ನೋಡಿದ ಸಾಂಸ್ಕೃತಿಕ ಜಗಳದ ಹಾಗೆಯೇ.

ಆ ಹೊತ್ತಿಗಾಗೆಲ್ಲ ಅನಂತಮೂರ್ತಿಯವರನ್ನು ಅನುಮಾನದ ಕಣ್ಣಿನಿಂದ ನೋಡುವ ಚಾಳೀಸು ಎಲ್ಲ ಕಡೆ ಹರಿದಾಡುತ್ತಿತ್ತು. ನಾನೂ ಸಹ ಅಂಥದ್ದೇ ಬಣ್ಣದ ಕನ್ನಡಕದಿಂದಲೇ ಅವರನ್ನು ನೋಡುತ್ತಿದ್ದೆ. ತೀರಾ ಕೆಲವರಂತೂ ಸಾರಾಸಗಟಾಗಿ “ಆಯಪ್ಪನೂ ಚಡ್ಡಿನೇ ಕಣ್ರೀ” ಎನ್ನುವಂಥ ಬಿರುಸಾದ ಹೇಳಿಕೆ ಕೊಟ್ಟುಬಿಡುತ್ತಿದ್ದರು. “ಅನಂತಮೂರ್ತಿಯವರು ಕೂಡ ಬ್ರಾಹ್ಮಣ್ಯಕ್ಕೆ ಅಂಟಿಕೊಂಡವರೇ ಕಣ್ರೀ, ಬುದ್ಧಿಜೀವಿ ಅನ್ನೋದು ಮುಖವಾಡ ಅಷ್ಟೆ” ಅನ್ನುವ ಮನೋಭಾವ ಆಗ ಸಾರ್ವತ್ರಿಕವಾಗಿ ಹರಿದಾಡುತ್ತಿತ್ತು. ಸಹಜವಾಗಿಯೇ ನಾನೂ ಆ ಪ್ರಭಾವಕ್ಕೆ ಒಳಗಾಗಿ ಒಂದು ಬಗೆಯ ಗುಮಾನಿಯಲ್ಲೇ, ಆದರೆ ಮತ್ತೊಂದೆಡೆ ಅಭಿಮಾನ-ಹೆಮ್ಮೆಯಿಂದ ಅವರನ್ನು ನೋಡುತ್ತಿದ್ದೆ.

ಸಂಸ್ಕೃತಿ ಶಿಬಿರದ ಸಮಾರೋಪದ ದಿನವೋ ಏನೋ? ಅನಂತಮೂರ್ತಿಯವರ ಜತೆ ಸಂವಾದ ಏರ್ಪಾಡಾಗಿತ್ತು. ಯಾರು ಬೇಕಾದರೂ ಪ್ರಶ್ನೆ ಕೇಳಬಹುದಿತ್ತು. ವೇದಿಕೆಯಲ್ಲಿ ಡಿ.ಆರ್.ನಾಗರಾಜ್ ಕೂಡ ಇದ್ದರು. ಯಾರು 207629_1039440921212_6241447_nಏನೇ ಪ್ರಶ್ನೆ ಕೇಳಿದರೂ ಅನಂತಮೂರ್ತಿಯವರು ಖಡಕ್ಕಾಗಿ, ನಗುನಗುತ್ತಾ ಉತ್ತರಿಸುತ್ತಿದ್ದರು. ನಾನು ಎದ್ದು ನಿಂತು ದಿಢೀರನೆ ಒಂದು ಪ್ರಶ್ನೆ ಕೇಳಿಬಿಟ್ಟೆ. ಇಡೀ ಸಭಾಂಗಣಕ್ಕೇ ಬಾಂಬ್ ಬಿದ್ದ ಹಾಗಾಗಿಹೋಗಿತ್ತು. ಭಾರತೀಪುರ ಕಾದಂಬರಿಯ ಪಾತ್ರವೊಂದನ್ನು ಉಲ್ಲೇಖಿಸುತ್ತ, ಅನಂತಮೂರ್ತಿಯವರು ದಸರಾ ಉದ್ಘಾಟನೆಯಲ್ಲಿ ಪೂಜೆ ಸಲ್ಲಿಸಿದ್ದರ ಔಚಿತ್ಯ ಕುರಿತ ಪ್ರಶ್ನೆ ಅದಾಗಿತ್ತು.

ಅನಂತಮೂರ್ತಿಯವರು ಉತ್ತರಿಸಲಿಲ್ಲ, ಈ ಪ್ರಶ್ನೆಗೆ ಡಿ.ಆರ್.ನಾಗರಾಜ್ ಉತ್ತರ ಹೇಳಲಿ ಎಂದು ಹೇಳಿ ಸುಮ್ಮನೆ ಕುಳಿತುಬಿಟ್ಟರು. ಇದು ನನಗೆ ಸಂಬಂಧಿಸಿದ ಪ್ರಶ್ನೆ ಅಲ್ಲ, ಹೀಗಾಗಿ ನನ್ನ ಬಳಿ ಉತ್ತರವಿಲ್ಲ ಎಂದು ಡಿ.ಆರ್ ಸುಮ್ಮನಾಗಿಬಿಟ್ಟರು. ಅಲ್ಲಿಗೆ ನನ್ನ ಪ್ರಶ್ನೆ ಉತ್ತರವಿಲ್ಲದೆ ಉಳಿದುಹೋಯಿತು. ಆದರೆ ಸಭೆ ಮುಗಿದ ನಂತರ ಎಷ್ಟೊಂದು ಮಂದಿ ನನ್ನನ್ನು ಮುತ್ತಿಕೊಂಡು ‘ಎಷ್ಟು ಒಳ್ಳೆಯ ಪ್ರಶ್ನೆ ಕೇಳಿದ್ಯಪ್ಪಾ, ಅವರು ಉತ್ತರ ಕೊಡಲೇ ಇಲ್ಲ’ ಎಂದು ಹೇಳಿದರು. ನನಗೆ ಒಳಗೊಳಗೆ ಒಂಥರಾ ಹೆಮ್ಮೆ, ಮತ್ತೊಂದೆಡೆ ಏನೋ ತಲೆಹರಟೆ ಮಾಡಿಬಿಟ್ಟೆನಾ ಅನ್ನುವ ಹಳಹಳಿಕೆ.

2001ರ ಹೊತ್ತಿಗೆ ಬದುಕನ್ನು ಅರಸಿಕೊಂಡು ಬೆಂಗಳೂರಿಗೆ ಬಂದನಂತರ ಕೆಲವು ಸಮಾನಮನಸ್ಕ ಪತ್ರಕರ್ತರೊಂದಿಗೆ ಸೇರಿ ‘ಸಂವಹನ’ ಎಂಬ ಪುಟ್ಟ ಸಂಘಟನೆಯನ್ನು ಆರಂಭಿಸಿದ್ದೆವು. ಅಷ್ಟು ಹೊತ್ತಿಗಾಗೆಲ್ಲ ಅನಂತಮೂರ್ತಿಯವರ ಕುರಿತಾದ ನನ್ನ ಪೂರ್ವಾಗ್ರಹಗಳೆಲ್ಲ ಕರಗಿಹೋಗಿದ್ದವು. ಅವರನ್ನು ನೋಡುವ ಕ್ರಮವೇ ಬದಲಾಗಿಹೋಗಿತ್ತು. ಪಿ.ಲಂಕೇಶರು ನಿಧನವಾದ ನಂತರವಂತೂ ಜಗತ್ತಿನ ಯಾವುದೇ ವಿದ್ಯಮಾನಗಳಿಗೆ ಅನಂತಮೂರ್ತಿಯವರು ಹೇಗೆ ಸ್ಪಂದಿಸುತ್ತಾರೆ ಎಂಬುದೇ ನನ್ನಂಥವರಿಗೆ ಮುಖ್ಯವಾಗಿಹೋಗಿತ್ತು. ಮೇಷ್ಟ್ರು ನಿಧಾನವಾಗಿ ಅರ್ಥವಾಗತೊಡಗಿದ್ದರು.

“ಸಂವಹನ”ದ ಮೂಲಕ ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಎಂಬ ವಿಷಯವನ್ನಿಟ್ಟುಕೊಂಡು ವಿಚಾರಸಂಕಿರಣವೊಂದನ್ನು ಏರ್ಪಡಿಸಿದೆವು. ಆಗಲೇ ನಾನು ಮೊದಲ ಬಾರಿಗೆ ಡಾಲರ್ಸ್ ಕಾಲೋನಿಯ ‘ಸುರಗಿ’ ಒಳಗೆ ಕಾಲಿಟ್ಟಿದ್ದು. ಅದೊಂದು ವಿಶಿಷ್ಟ ಅನುಭವ. ಮನೆಯ ಒಳಗೇ ಹಿತ್ತಲಿನಲ್ಲಿ ಒಂದು ಸಣ್ಣ ಮಾವಿನ ಮರ, ಮಾವಿನ ಹೀಚು ಬಂದಿತ್ತು. ಅಲ್ಲೇ ಕುಳಿತು ನಮ್ಮ ಮಾತುಕತೆ. ನಮ್ಮ ಈ ಮಾತುಕತೆ ಸಾಧ್ಯವಾಗಿದ್ದು ಆಗ ಉದಯವಾಣಿಯಲ್ಲಿದ್ದ ಎನ್.ಎ.ಎಂ. ಇಸ್ಮಾಯಿಲ್ ಅವರಿಂದಾಗಿ. ಜತೆಯಲ್ಲಿ ಪತ್ರಕರ್ತ ಗೆಳೆಯರಾದ ಸತೀಶ್ ಶಿಲೆ, ಮಂಜುನಾಥ ಸ್ವಾಮಿ, ಕುಮಾರ್ ಅವರುಗಳಿದ್ದರು. ಸುಮಾರು ಒಂದೂವರೆ ಗಂಟೆ ಅವರು ಮಾತನಾಡಿದರು. ನಾವು ತನ್ಮಯರಾಗಿ ಕೇಳುತ್ತಲೇ ಇದ್ದೆವು. ಮೇಷ್ಟ್ರು ನಮ್ಮ ವಿಚಾರ ಸಂಕಿರಣಕ್ಕೆ ಬರುವುದಾಗಿ ಒಪ್ಪಿಗೆ ಇತ್ತು ಕಳುಹಿಸಿಕೊಟ್ಟರು.

ಆ ವಿಚಾರ ಸಂಕಿರಣಕ್ಕೆ ಆಗಷ್ಟೇ ಅಮೆರಿಕದಿಂದ ಬಂದಿದ್ದ ರವಿ ಕೃಷ್ಣಾರೆಡ್ಡಿಯವರನ್ನು ಕರೆದಿದ್ದೆವು. ಅವರು ಮಾತನಾಡುತ್ತ, “ಈ ಮನುಷ್ಯ (ಅನಂತಮೂರ್ತಿ) ಎರಡೂ ಕಡೆಯಲ್ಲೂ ನಿಷ್ಠುರಗಳಿಗೆ ಒಳಗಾದವರು ಕಣ್ರೀ. ಒಂದು ಕಡೆ ಪ್ರಗತಿಪರರು ಅವರನ್ನು ಅನುಮಾನದಿಂದಲೇ ನೋಡುತ್ತ ಬಂದರು. ಅವರ ಮೇಲೆ ಟೀಕಾಪ್ರಹಾರ ಮಾಡುತ್ತಲೇ ಬಂದರು. ಇತ್ತ ಮೂಲಭೂತವಾದಿಗಳ ವಿರುದ್ಧ ನಿರಂತರ ಮಾತನಾಡುತ್ತ ಬಂದ ಪರಿಣಾಮವಾಗಿ ಅವರಷ್ಟು ನಿಂದನೆಗಳನ್ನು ಎದುರಿಸಿದವರು ಮತ್ತೊಬ್ಬರಿಲ್ಲ. ಈ ಸಮಯದಲ್ಲಿ ನಾವು ಅವರ ಬೆನ್ನಿಗೆ ನಿಲ್ಲಬೇಕು. ಅವರ ಧ್ವನಿ ಜೀವಂತವಾಗಿರಬೇಕು.” ಎಂದು ಹೇಳಿದ್ದರು.

ಈ ಕಾರ್ಯಕ್ರಮ ನಡೆದ ಕೆಲವು ತಿಂಗಳುಗಳ ನಂತರ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಮಂದಿ ಸತ್ತುಹೋದರು. ಊರೂರೇ ನಾಶವಾಗಿಹೋಯಿತು. ನೆರೆ ನಿರ್ವಹಣೆಯನ್ನು ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕಷ್ಟಪಡುವಂತಾಯಿತು. ನಾವು ‘ಸಂವಹನ’ದ ಮೂಲಕ ಮತ್ತೊಂದು ವಿಚಾರ ಸಂಕಿರಣವನ್ನು ಏರ್ಪಡಿಸಿದೆವು. ಮೇಷ್ಟ್ರನ್ನು ಕಂಡು ಮಾತನಾಡಿಸಲು ಹೋಗಿದ್ದ ನಾವು ಈ ವಿಚಾರಸಂಕಿರಣದ ಕುರಿತು ಹೇಳಿದಾಗ, ನಾನು ಬರುತ್ತೇನೆ ಎಂದು ತಾವಾಗಿಯೇ ಹೇಳಿದರು. ಹೇಳಿದಂತೆಯೇ ಬಂದು ಮಾತನಾಡಿದರು.

ಅದಾದ ನಂತರ 2009ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಟೀಕಿಸುವ ಭರದಲ್ಲಿ ತೀರಾ ಕೊಳಕಾದ ಭಾಷೆಯನ್ನು ಪ್ರಯೋಗಿಸತೊಡಗಿದ್ದರು. ಅದರಲ್ಲೂ ಕಡಿ, ಕೊಚ್ಚು, ಕೊಲ್ಲು ಥರದ ಭಾಷೆ ಯಥೇಚ್ಛವಾಗಿ ಬಳಕೆಯಾಗುತ್ತಿತ್ತು. ಈ ರೋಗ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗದೆ ಎಲ್ಲ ಪಕ್ಷಗಳಲ್ಲೂ ಕಾಣಿಸಿಕೊಂಡಿತ್ತು. ಇದನ್ನು ನಾಗರಿಕ ಸಮಾಜ ಸುಮ್ಮನೆ ನೋಡಿಕೊಂಡಿರುವುದು ಸರಿಯಲ್ಲ ಎಂಬುದು ನಮ್ಮ ಅಭಿಮತವಾಗಿತ್ತು. ಅದಕ್ಕಾಗಿ ‘ಸಂವಹನ’ದ ಮೂಲಕವೇ ಒಂದು ಸಣ್ಣ ಕ್ಯಾಂಪೇನ್ ಮಾಡಲು ಮುಂದಾದೆವು. ಕನ್ನಡದ ಹೆಸರಾಂತ ಸಾಹಿತಿ-ಕಲಾವಿದರನ್ನೆಲ್ಲ ಒಂದೆಡೆ ಸೇರಿಸಿ ಒಂದು ಪತ್ರಿಕಾಗೋಷ್ಠಿ ಮಾಡುವುದು, ನಂತರ ಚುನಾವಣಾ ಅಧಿಕಾರಿಗಳಿಗೆ ಒಂದು ಮನವಿ ಪತ್ರ ನೀಡುವುದೆಂದು ನಿರ್ಧಾರವಾಯಿತು. ಮತ್ತೆ ನಾವು ಹೋಗಿದ್ದು ಮೇಷ್ಟ್ರ ಬಳಿಗೆ. ಯಾರನ್ನೂ ಬಿಡದೇ, ಎಲ್ಲರನ್ನೂ ಕರೆಯಿರಿ ಎಂದು ಮೇಷ್ಟ್ರು ಹೇಳಿದರು. ಜಿ.ಎಸ್.ಎಸ್ ಅವರಿಗೆ ಹುಶಾರಿಲ್ಲ, ಬರುವುದು ಕಷ್ಟವಾಗಬಹುದು. ಆದರೆ ಅವರ ಸಹಿಯಾದರೂ ಪಡೆಯಲು ಪ್ರಯತ್ನ ಪಡಿ ಎಂದು ಸೂಚಿಸಿದ್ದರು. ಅವರು ಹೇಳಿದಂತೆಯೇ ಫೋನ್ ಮೂಲಕವೇ ಒಂದಷ್ಟು ಮಂದಿಗೆ ಆಹ್ವಾನ ನೀಡಿದೆವು. ಆಶ್ಚರ್ಯವೆಂದರೆ ನಾವು ಕರೆದ ಎಲ್ಲ ದಿಗ್ಗಜರೂ ಬಂದಿದ್ದರು. ಸಾಹಿತಿ-ಕಲಾವಿದರು ಒಂದೇ ವೇದಿಕೆಯಲ್ಲಿ ಹೀಗೆ ಸೇರಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಒಬ್ಬರ ಮುಖ ಒಬ್ಬರು ನೋಡದವರೂ ಅಂದು ಅಕ್ಕಪಕ್ಕ ಬಂದು ಕುಳಿತುಕೊಂಡಿದ್ದರು.

ಹೀಗೆ ಪದೇಪದೇ ಮೇಷ್ಟ್ರು ಜತೆ ಮಾತನಾಡುವ ಸಂದರ್ಭಗಳು ಒದಗಿಬರುತ್ತಿದ್ದವು. ಆದರೂ ನನ್ನ ಬಗ್ಗೆ ಅವರಲ್ಲಿ ಏನೂ ಹೇಳಿಕೊಂಡಿರಲಿಲ್ಲ. ಆದರೆ ಅವಧಿಯಲ್ಲಿ ಪ್ರಕಟಗೊಂಡ ನನ್ನ ಪದ್ಯಗಳನ್ನು ಓದಿ “ನಿನ್ನ ಪದ್ಯಗಳನ್ನು ಓದಿದೆ, ತುಂಬಾ ಚೆನ್ನಾಗಿವೆ, ಎಲ್ಲ ಪದ್ಯಗಳನ್ನು ನಾನು ಓದಬೇಕು, ನನಗೆ ಮೇಲ್ ಮಾಡು” ಎಂದು ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಒಮ್ಮೆ ಅಚಾನಕ್ಕಾಗಿ ನನ್ನ ಜನ್ಮದಿನದಂದೇ ಅವರು ಫೋನ್ ಮಾಡಿದ್ದರು. ಹೇಗೋ ಅವರಿಗೆ ಅವತ್ತು ನನ್ನ ಜನ್ಮದಿನ ಎಂಬುದು ಗೊತ್ತಾಗಿತ್ತು. ಶುಭಾಶಯ ಹೇಳಿದರು. ನನಗೆ ಮಾತೇ ಹೊರಡಲಿಲ್ಲ.

ನಾನು ಕೆಲಸ ಬದಲಿಸಿದ್ದೆ. ಅದು ಮೇಷ್ಟ್ರಿಗೆ ಗೊತ್ತಾಗಿತ್ತು. “ಹೇಗಿದೆಯೋ ಹೊಸ ಕೆಲಸ, ಸಾಕಷ್ಟು ಸಂಬಳ ಸಿಗ್ತಿದೆ ತಾನೇ? ಮೊದಲು ಬದುಕು- ಆಮೇಲೆ ಉಳಿದದ್ದು” ಎಂದು ಒಮ್ಮೆ ಹೇಳಿದರು. ಅದನ್ನು ನೆನಪಿಸಿಕೊಂಡಾಗೆಲ್ಲ ನನಗೆ ಕಣ್ಣು ತುಂಬಿಕೊಳ್ಳುತ್ತವೆ. ಅವರ ಅಷ್ಟೊಂದು ಪ್ರೀತಿಗೆ ಯೋಗ್ಯನಾಗಿದೆನಲ್ಲ ಎಂದು ಖುಷಿಯೆನಿಸುತ್ತದೆ.

ನನ್ನ ವೃತ್ತಿ ಬದುಕಿನಲ್ಲಿ ಏರಿಳಿತಗಳು ಆಗುತ್ತ ಕಡೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ಕರವೇ ನಲ್ನುಡಿಯನ್ನು ಆರಂಭಿಸುವ ಸಂದರ್ಭ ಎದುರಾಯಿತು. ಟಿ.ಎ.ನಾರಾಯಣಗೌಡರು ತುಂಬಾ ಕನಸುಗಳನ್ನು ಇಟ್ಟುಕೊಂಡು ಆರಂಭಿಸಿದ ಪತ್ರಿಕೆ ಇದು. ಪತ್ರಿಕೆ ಹೇಗಿರಬೇಕು ಎಂಬ ರೂಪುರೇಷೆಗಳನ್ನೆಲ್ಲ ಅಂತಿಮಗೊಳಿಸಿ ಅದರ ಬಿಡುಗಡೆಯ ಅದ್ದೂರಿ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಇಟ್ಟುಕೊಳ್ಳುವುದೆಂದು ತೀರ್ಮಾನವಾಯಿತು. ಯಾರಿಂದ ಪತ್ರಿಕೆಯನ್ನು ಬಿಡುಗಡೆಗೊಳಿಸುವುದು ಎಂದು ಚರ್ಚಿಸಿದಾಗ ಎಲ್ಲರೂ ಅಂತಿಮಗೊಳಿಸಿದ್ದು ಮೇಷ್ಟ್ರ ಹೆಸರನ್ನೇ.

ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ನಾರಾಯಣಗೌಡರ ಜತೆ ನಾನೂ ಸಹ ಮೇಷ್ಟ್ರ ಮನೆಗೆ ಹೋದೆ. ಮೇಷ್ಟ್ರು ನಗುನಗುತ್ತ ಬಂದು ಗೌಡರ ಕೈ ಹಿಡಿದು ಒಳಗೆ ಕರೆದುಕೊಂಡುಹೋದರು. ನಾನು ನಿಮ್ಮ ಜತೆ ಸ್ವಲ್ಪ ಹೊತ್ತು ಮಾತನಾಡಬೇಕು ಎಂದು ಹೇಳಿ ಅವರಾಗಿಯೇ ಒಂದಷ್ಟು ಹೊತ್ತು ಮಾತನಾಡಿದರು. ಕರವೇ ಸಂಘಟನೆಯ ಬಗ್ಗೆ ಅವರಿಗೆ ಅಭಿಮಾನವಿತ್ತು. “ಗೌಡ್ರೆ, ನಿಮಗೆ ಇದು ಸಾಧ್ಯವಿದೆ, ನೀವು ಇದನ್ನು ಮಾಡಬೇಕು” ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಅವರು ಪಾಠ ಹೇಳುವ ಮೇಷ್ಟ್ರೇ ಆಗಿದ್ದರು. ನಾವು ವಿಧೇಯ ವಿದ್ಯಾರ್ಥಿಗಳಾಗಿ ಕೇಳುತ್ತ ಹೋದೆವು. “ನನ್ನ ಬದುಕಿನ ಎರಡು ಕೊನೆಯ ಆಸೆಗಳನ್ನು ಹೇಳುತ್ತಿದ್ದೇನೆ. ಕನ್ನಡ ಶಾಲೆಗಳು ಉಳಿಯಬೇಕು. ಸಮಾನ ಶಾಲಾ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಎಲ್ಲದಕ್ಕೂ ನಾವು ಸರ್ಕಾರವನ್ನು ನಂಬಿಕೊಂಡು ಕೂರುವುದು ಸಾಧ್ಯವಿಲ್ಲ. ಹೀಗಾಗಿ ಪ್ರತಿ ತಾಲ್ಲೂಕಿನಲ್ಲೂ ನೀವೇ ಒಂದೊಂದು ಒಳ್ಳೆಯ ಕನ್ನಡ ಶಾಲೆಯನ್ನು ನಡೆಸುವಂತಾಗಬೇಕು. ಮತ್ತೊಂದು, ಗಣಿಗಾರಿಕೆ ರಾಷ್ಟ್ರೀಕರಣಗೊಳ್ಳಬೇಕು. ಗಣಿ ಸಂಪತ್ತನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕು. ನಮಗೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಸರ್ಕಕಾರವೇ ಗಣಿಗಾರಿಕೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಅಷ್ಟು ಹೊತ್ತಿಗಾಗಲೇ ಮೇಷ್ಟ್ರ ಆರೋಗ್ಯ ಸ್ಥಿತಿ ಹದಗೆಡುವುದಕ್ಕೆ ಶುರುವಾಗಿತ್ತು. ನಾರಾಯಣಗೌಡರು ಸ್ವಭಾವತಃ ಭಾವುಕರು. ಹೀಗಾಗಿ ಮೇಷ್ಟ್ರು ಕೊನೆಯ ಆಸೆ ಎಂದು ಹೇಳಿಕೊಂಡಿದ್ದನ್ನು ಅವರು ಬಹಳ ಸಂಕಟದಿಂದ ಕೇಳಿಸಿಕೊಂಡಿದ್ದರು. ಅನಾರೋಗ್ಯದ ನಡುವೆಯೂ ‘ಕರವೇ ನಲ್ನುಡಿ’ ಪತ್ರಿಕೆ ಉದ್ಘಾಟನೆಯ ಕಾರ್ಯಕ್ರಮಕ್ಕೆ ಮೇಷ್ಟ್ರು ಬಂದರು. ಮನೆಗೆ ಹೋದಾಗ ಮಾತನಾಡಿದ್ದನ್ನೇ ಅವರು ಇನ್ನೊಂದಿಷ್ಟು ವಿಸ್ತರಿಸಿ ಭಾಷಣ ಮಾಡಿದರು. ಆಗಲೂ ಸಹ ಇದು ನನ್ನ ಕೊನೆಯ ಆಸೆ ಎಂದೇ ಹೇಳಿದ್ದರು. ಆ ಭಾಷಣವನ್ನು ನಾನು ಕೇಳಿ ಬರೆದು, ಯಥಾವತ್ತಾಗಿ ‘ನಲ್ನುಡಿ’ಯಲ್ಲಿ ಪ್ರಕಟಿಸಿದೆ. ಆ ಭಾಷಣ ಅವರ ಕೃತಿಯೊಂದರಲ್ಲೂ ದಾಖಲಾಯಿತು.

ಮೇಷ್ಟ್ರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮಾತನಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ನಿಜಕ್ಕೂ ಖುಷಿ ಪಟ್ಟಿದ್ದರು. ಒಮ್ಮೆ ನಾನು, ಇಸ್ಮಾಯಿಲ್, ಟಿ.ಕೆ.ದಯಾನಂದ್ ಮೇಷ್ಟ್ರನ್ನು ಭೇಟಿಯಾಗಲು ಹೋದಾಗ ಒಂದಷ್ಟು ಇಶ್ಯೂಗಳ ಬಗ್ಗೆ ಅವರ ಗಮನ ಸೆಳೆಯಲು ಯತ್ನಿಸಿದೆವು. ತಲೆ ಮೇಲೆ ಮಲ ಹೊತ್ತು ಜೀವನ ಸಾಗಿಸುವವರ ಕುರಿತು ಒಂದಷ್ಟು ಮಾಹಿತಿ ನೀಡಿದೆವು. ಮೇಷ್ಟ್ರು ತುಂಬಾ ಹೊತ್ತು ನಮ್ಮ ಮಾತುಗಳನ್ನು ಕೇಳಿಸಿಕೊಂಡರು. ಅವರಿಗೆ ನಾವು ಹೇಳಿದ ಕೆಲವು ವಿಷಯಗಳು ತುಂಬಾ ಹೊಸದಾಗಿದ್ದವು. ಇಷ್ಟೆಲ್ಲಾ ಆದರೂ ನಮ್ಮ ಸರ್ಕಾರಗಳು ಯಾಕೆ ಏನೂ ಮಾಡುತ್ತಿಲ್ಲ ಎಂಬುದು ಅವರ ಆತಂಕದ ಪ್ರಶ್ನೆಯಾಗಿತ್ತು. ಇಂಥ ವ್ಯವಸ್ಥೆ ಇನ್ನೂ ಇದೆ ಎಂದರೆ ಅದನ್ನೊಪ್ಪಿಕೊಂಡೇ ಬರಲಾಗುತ್ತಿದೆ ಎಂದರೆ ಇದನ್ನು ಒಂದು ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವೇ? ಎಂದು ಹೇಳಿದರು.

ಮೇಷ್ಟ್ರು ಆರೋಗ್ಯ ಆಗ ತುಂಬಾ ಹದಗೆಟ್ಟಿತ್ತು. ಏನನ್ನೂ ಬರೆಯುವ ಸ್ಥಿತಿಯಲ್ಲಿ ಇರಲಿಲ್ಲ ಅವರು. ಆದರೂ ಇಸ್ಮಾಯಿಲ್ ಅವರಿಗೆ “ನೋಡೋ, ಒಂದು ಪತ್ರ ಬರಿ ಮುಖ್ಯಮಂತ್ರಿಗಳಿಗೆ. ನಾನು ಹೇಳ್ತಾ ಹೋಗ್ತೇನೆ, ನೀನು ಬರೀತಾ ಹೋಗು” ಎಂದರು. ಆ ಪತ್ರದ ಒಕ್ಕಣೆಯೇ ಹೀಗೆ ಶುರುವಾಗಿತ್ತು. ಮಾನ್ಯ ಮುಖ್ಯಮಂತ್ರಿಗಳಿಗೆ, ನಿಮಗೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪತ್ರ ಬರೆಯುತ್ತೇನೆ ಎಂದು ಮೊದಲೇ ಹೇಳಿದ್ದೆ. ಈಗ ಅಂಥ ಅನಿವಾರ್ಯ ಕಾರಣವಿರುವುದರಿಂದ ಈ ಪತ್ರ ಬರೆಯುತ್ತಿದ್ದೇನೆ. ಹೀಗೆ ಆರಂಭಿಸಿ ಮಲ ಹೊರುವ ಪದ್ಧತಿ ಸಂಪೂರ್ಣ ತೊಡೆದುಹಾಕುವ ನಿಟ್ಟಿನಲ್ಲಿ ಏನನ್ನು ಮಾಡಬೇಕು ಎಂಬ ಸ್ಪಷ್ಟ ಮಾತುಗಳನ್ನು ಪತ್ರದಲ್ಲಿ ಬರೆಸಿದರು. ಇದನ್ನು ನೇರವಾಗಿ ಸಿದ್ಧರಾಮಯ್ಯ ಅವರಿಗೇ ತಲುಪಿಸಬೇಕು ಎಂದು ಹೇಳಿದ್ದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಎರಡು ಆದೇಶಗಳು ಹೊರಬಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಆರಂಭಿಸಿತು. ಟಿ.ಎ.ನಾರಾಯಣಗೌಡರು ಬೆಂಗಳೂರಿನ ಸಿಟಡೆಲ್ ಹೋಟೆಲ್ನಲ್ಲಿ ದುಂಡುಮೇಜಿನ ಸಭೆಯೊಂದನ್ನು ಏರ್ಪಾಡುಮಾಡಿದರು. ಮೇಷ್ಟು ಆಗ ಪ್ರತಿನಿತ್ಯ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿತ್ತು. ಮನೆಯಲ್ಲೇ ಡಯಾಲಿಸಿಸ್ ಶುರುವಾಗಿತ್ತು. ಆದರೂ ಇಂಥದ್ದೊಂದು ಸಭೆ ಇದೆ, ನೀವು ಬರಬೇಕು ಎಂದು ಕರೆದೆವು. ಅವರ ಆರೋಗ್ಯ ಸ್ಥಿತಿ ಏರುಪೇರಾಗುತ್ತಲೇ ಇದ್ದರಿಂದಾಗಿ ಅವರು ಬರುವುದು ನಮಗಂತೂ ಅನುಮಾನವೇ ಆಗಿತ್ತು. ಬೆಳಿಗ್ಗೆ ಅನಂತಮೂರ್ತಿಯವರಿಂದಲೇ ನನಗೆ ಫೋನು ಬಂತು, “ನಾನು ಸಿದ್ಧನಾಗಿದ್ದೇನೆ, ನಿಮ್ಮ ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ” ಎಂದರು.

ಅವರಿಗೆ ಆಗ ನಡೆದಾಡಲೂ ಕಷ್ಟವಾಗುತ್ತಿತ್ತು. ಕೈಗೆ ಊರುಗೋಲೊಂದನ್ನು ಕೊಡಲಾಗಿತ್ತು. ಮೇಷ್ಟ್ರು ಸಭೆಗೆ ಬಂದರು. ಬಂದು ಅತ್ಯಂತ ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಅವರ ಮಾತಿನ ಮೇಲೆಯೇ ನಂತರ ಒಂದಷ್ಟು ಚರ್ಚೆಗಳು ಆದವು. ಇತರ ಗಣ್ಯರು ಮಾತನಾಡುವಾಗ ಅದನ್ನೆಲ್ಲ ಕೇಳಿಸಿಕೊಂಡು ಮೇಷ್ಟ್ರು ಆಗಾಗ ಪ್ರತಿಕ್ರಿಯೆ ನೀಡಿದರು. ಅವರ ಜೀವನೋತ್ಸಾಹಕ್ಕೆ, ಅಂದುಕೊಂಡಿದ್ದನ್ನು ಪ್ರತಿಪಾದಿಸಲು ಹೊರಡುವ ಧೀಮಂತಿಕೆಗೆ ಯಾವ ಬೇಲಿಯೂ ಇರಲಿಲ್ಲ. ಯಾವ ಗಡಿಯೂ ಇರಲಿಲ್ಲ.

ಕಳೆದ ಏಳೆಂಟು ವರ್ಷಗಳಲ್ಲಿ ಅನಂತಮೂರ್ತಿಯವರ ವಿರುದ್ಧ ಮೂಲಭೂತವಾದಿ ಸಮೂಹ ದೊಡ್ಡಮಟ್ಟದಲ್ಲಿ ದಾಳಿ ಆರಂಭಿಸಿದವು. ಕೆಲವು ಪತ್ರಿಕೆಗಳು ಇದಕ್ಕಾಗಿಯೇ ವೇದಿಕೆ ಕಲ್ಪಿಸಿದ್ದವು. ಒಂದು ಪತ್ರಿಕೆಯಂತೂ ಅನಂತಮೂರ್ತಿಯವರ ವಿರುದ್ಧ ದೊಡ್ಡದೊಂದು ಎಸ್ ಎಂಎಸ್ ಕ್ಯಾಂಪೇನ್ ನಡೆಸಿ, ಅವರ ವಿರುದ್ಧ ಬಂದ ಎಲ್ಲ ರೀತಿಯ ಟೀಕೆ, ಲೇವಡಿ, ನಿಂದನೆಗಳನ್ನು ಪುಟಗಟ್ಟಲೆ ಪ್ರಕಟಿಸಿತು. ಅನಂತಮೂರ್ತಿಯವರ ವಿರುದ್ಧ ಒಂದು ಬಗೆಯ ಸಾಂಸ್ಕೃತಿಕ ದ್ವೇಷ, ಅಸೂಯೆ, ಸಿಟ್ಟು ಹೊಂದಿದ್ದ ವೈಚಾರಿಕ ವಲಯದ ಗಣ್ಯರೂ ಕೂಡ ಇದನ್ನು ಪ್ರತಿಭಟಿಸಲು ಮುಂದಾಗಲಿಲ್ಲ. ಕೆಲವು ಪತ್ರಿಕೆಗಳಂತೂ ಮೇಷ್ಟ್ರ ಸುದ್ದಿಗಳನ್ನು ಪ್ರಕಟಿಸದೆ ಒಂದು ಬಗೆಯ ಅನಧಿಕೃತ ಬಹಿಷ್ಕಾರವನ್ನು ಜಾರಿಯಲ್ಲಿಟ್ಟಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ಅನಂತಮೂರ್ತಿಯವರನ್ನು ಹಣಿಯುವುದೇ ಫ್ಯಾಸಿಸ್ಟ್ ಶಕ್ತಿಗಳ ಪ್ರಮುಖ ಅಜೆಂಡಾ ಆಗಿಹೋಯಿತು.

ಅನಂತಮೂರ್ತಿಯವರನ್ನು ಪ್ರೀತಿಸುವವರು ಅವರ ಕುರಿತು ಏನೂ ಮಾತನಾಡದಂಥ ಮಾತಿನ ದಿಗ್ಬಂಧನವನ್ನು ಹೇರುವ ಪ್ರಯತ್ನಗಳೂ ನಡೆದವು. ಕಡೆಗೆ ನರೇಂದ್ರ ಮೋದಿ ಕುರಿತ “ಮೋದಿ ಭಾರತದಲ್ಲಿ ನಮ್ಮಂಥವರು ಬದುಕಿರಬಾರದು ಕಣ್ರೀ” ಎಂದು ಭಾವೋದ್ವೇಗದಲ್ಲಿ ಹೇಳಿದ ಹೇಳಿಕೆಗೆ ರೆಕ್ಕೆ ಪುಕ್ಕ ಮಾಂಸ ರಕ್ತ ಎಲ್ಲ ತುಂಬಿ ಅವರ ವಿರುದ್ಧ ಮತ್ತೊಂದು ಸುತ್ತಿನ ಸಂಘಟಿತ ದಾಳಿ ನಡೆದುಹೋಯಿತು. ಬದುಕಿನ ಕೊನೆಗಾಲದಲ್ಲಿ ಅವರ ಮನೆಯ ಮುಂದೆ ಮೀಸಲು ಪೊಲೀಸ್ ಪಡೆಯ ವ್ಯಾನ್ ರಕ್ಷಣೆಗಾಗಿ ನಿಲ್ಲುವಂಥ ಕರಾಳ ಸ್ಥಿತಿ ನಿರ್ಮಾಣವಾಯಿತು. ಆದರೆ ಮೇಷ್ಟ್ರು ಇದೆಲ್ಲವನ್ನೂ ಜೀರ್ಣಿಸಿಕೊಂಡಿದ್ದ ರೀತಿಯೇ ಆಶ್ಚರ್ಯಕರವಾದದ್ದು. ಅವರಿಗೆ ವೈಯಕ್ತಿಕವಾಗಿ ದ್ವೇಷಿಸುವುದು ಗೊತ್ತಿರಲಿಲ್ಲ. ಈ ಎಲ್ಲ ದಾಳಿಯ ಕುರಿತು ಮಾತನಾಡಿದಾಗೆಲ್ಲ ಅವರು ನಗುನಗುತ್ತಲೇ ಪ್ರತಿಕ್ರಿಯಿಸುತ್ತಿದ್ದರು. ಒಮ್ಮೆಯೂ ಅವರು ಆವೇಶಕ್ಕೆ ಒಳಗಾಗಿದ್ದನ್ನು ನಾನು ಕಾಣೆ. “ಹೌದು, ಕಾಲ ಬಹಳ ಕ್ರೂರವಾಗಿದೆ. ನನ್ನ ಬಗ್ಗೆ ಕೆಲವು ಲೇಖನ, ಕಮೆಂಟ್ ಗಳನ್ನು ನಾನು ನನ್ನ ಹೆಂಡತಿ, ಮಕ್ಕಳಿಗೆ ತೋರಿಸೋದೂ ಇಲ್ಲ. ಯಾಕೆಂದರೆ ಹುಶಾರಿಲ್ಲ, ನೀನು ಸಾಯಿ ಅಂತಾನೇ ಬರೆದಿರುತ್ತಾರೆ. ಹಾಗೆಲ್ಲ ಬರೆಯುವವರು ಹಿಂದೂಗಳಂತೂ ಅಲ್ಲ. ಯಾಕೆಂದರೆ ಹಿಂದೂಗಳಾಗಿದ್ದರೆ ಅವರಿಗೆ ಹಿರಿಯರ ಬಗ್ಗೆ ಗೌರವ ಇರುತ್ತೆ. ಇಂಥವರು ಪ್ರಾಚೀನ ಭಾರತವನ್ನೂ ಸೃಷ್ಟಿಸಲಾರರು. ಆಧುನಿಕ ಭಾರತವನ್ನೂ ಸೃಷ್ಟಿಸಲಾರರು.” ಎಂದು ತಣ್ಣಗೆ ಹೇಳುವ ಧೀಮಂತಿಕೆ ಅವರಿಗಿತ್ತು.

ಅನಂತಮೂರ್ತಿಯವರು ಬಹುತೇಕ ಸಂದರ್ಭದಲ್ಲಿ ಹೃದಯದ ಮಾತನ್ನೇ ಕೇಳುತ್ತಿದ್ದರೆನಿಸುತ್ತದೆ. ಅವರು ಏನನ್ನೇ ಮಾಡಿದರೂ ಪ್ರೀತಿಯಿಂದಲೇ ಮಾಡುತ್ತಿದ್ದರು, ಟೀಕೆಯನ್ನೂ ಸಹ. ಅವರಿಗೆ ಸಿಟ್ಟು ಬರುತ್ತಿರಲಿಲ್ಲವೆಂದೇನಲ್ಲ. ಆದರೆ ಸಿಟ್ಟಿಗಿಂತ ನೋವು ಪಟ್ಟುಕೊಳ್ಳುತ್ತಿದ್ದದ್ದೇ ಹೆಚ್ಚು. ಅವರಿಗೆ ಮೂತ್ರಪಿಂಡ ವೈಫಲ್ಯವಾದ ನಂತರ ಚಿಕಿತ್ಸಾ ವೆಚ್ಚಕ್ಕಾಗಿಯೇ ವಿಶ್ವವಿದ್ಯಾಲಯವೊಂದರ ಕುಲಪತಿಯಾದರು ಎಂಬ ಅರ್ಥ ಬರುವಂತೆ ಲೇಖಕರೊಬ್ಬರು ಬರೆದಿದ್ದರು. ananthamurthyಅದು ಬ್ಲಾಗ್ ಒಂದರಲ್ಲಿ ಪ್ರಕಟವಾಗಿತ್ತು. ಮೇಷ್ಟ್ರಿಗೆ ನಿಜಕ್ಕೂ ಸಿಟ್ಟು ಬಂದಿತ್ತು. “ಏನ್ರೀ ಇಷ್ಟೊಂದು ಇನ್ ಹ್ಯೂಮನ್ ಆಗಬೇಕಾ?” ಇವರುಗಳು ಎಂದು ನೊಂದು ನುಡಿದಿದ್ದರು. “ನಾನು ಫೋನ್ ಮಾಡಿ ಅವರಿಗೆ ಹೇಳಿದೆ, ತಕ್ಷಣ ಆ ಲೇಖನ ತೆಗೆಯುವುದಾಗಿ ಹೇಳಿದರು, ಆದರೆ ಇನ್ನೂ ತೆಗೆದಿಲ್ಲ” ಎಂದು ನೊಂದು ನುಡಿದಿದ್ದರು. ‘ಕರವೇ ನಲ್ನುಡಿ’ಗಾಗಿ ಅವರನ್ನು ಸಂದರ್ಶಿಸಿದಾಗ ನಿಮಗೆ ಅತಿ ಹೆಚ್ಚು ನೋವು ತಂದ ಘಟನೆ ಯಾವುದು ಎಂದು ಕೇಳಿದ್ದೆ. ಆಗ ಅವರು ಹೇಳಿದ್ದು ಜೆ.ಎಚ್.ಪಟೇಲರ ಕಾಲದಲ್ಲಿ ತಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ಎದ್ದ ವಿವಾದದ ಕುರಿತು. ಮೇಷ್ಟ್ರು ಮಾರುಕಟ್ಟೆ ದರದಲ್ಲೇ ನಿವೇಶನ ತೆಗೆದುಕೊಂಡಿದ್ದರು. ಆದರೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡೆದರು ಎಂಬ ಮಾತೇ ಉಳಿದುಕೊಂಡುಬಿಟ್ಟಿತು. “ಟೆನ್ನಿಸ್ ಕಲಿಯುವವರು ವಾಲ್ ಕ್ಲಾಕ್ ಅನ್ನು ಹೇಗೆ ಗುರಿಯಾಗಿಟ್ಟುಕೊಳ್ಳುತ್ತಾರೋ ಹಾಗೆ ರಾಜಕೀಯ ಟೆನಿಸ್ ಆಡುವವರು ನನ್ನನ್ನು ವಾಲ್ ಕ್ಲಾಕ್ ಮಾಡಿಕೊಂಡರು” ಎಂದು ಮೇಷ್ಟ್ರು ಒಂದೇ ಸಾಲಿನಲ್ಲಿ ಆ ಘಟನೆಯನ್ನು ವರ್ಣಿಸಿದ್ದರು.

ಇಂಥ ಕೆಲವು ವಿಷಯಗಳನ್ನು ಬಿಟ್ಟರೆ ಮೇಷ್ಟ್ರು ಯಾವುದೇ ರೀತಿಯ ನಿಂದನೆಗಳಿಗೂ ಅಂಜಿದವರಲ್ಲ. ಕೊನೆಗಾಲದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಸಮರವನ್ನು ಅವರು ಲೆಕ್ಕಕ್ಕೇ ಇಟ್ಟುಕೊಂಡಿರಲಿಲ್ಲ. ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ಅವರು ಹಿಂದೆ ಮುಂದೆ ನೋಡಿದವರೂ ಅಲ್ಲ. ನಡೆದಾಡುವ ವಿಶ್ವವಿದ್ಯಾಲಯದಂತಿದ್ದ ಅವರು ಕೊನೆಯ ದಿನಗಳವರೆಗೆ ತಮ್ಮ ಜ್ಞಾನವನ್ನು ತಮ್ಮ ನಂತರದ ಪೀಳಿಗೆಯವರಿಗೆ ದಾಟಿಸಲು ಪ್ರಯತ್ನಿಸುತ್ತಲೇ ಇದ್ದರು.

“ಎಲ್ಲದರ ಬಗೆಗಿನ ನಿಜವಾದ ಪ್ರೀತಿಯಿದ್ದರೆ ಅನಾರೋಗ್ಯ ಕಾಡುವುದೇ ಇಲ್ಲ” ಎನ್ನುತ್ತಿದ್ದರು ಅನಂತಮೂರ್ತಿಯವರು. ಹೀಗೆ ಹೇಳುವ ಸಂದರ್ಭದಲ್ಲಿ ಅವರ ಎರಡೂ ಮೂತ್ರಪಿಂಡಗಳು ವಿಫಲಗೊಂಡಿದ್ದವು. ರಕ್ತದೊತ್ತಡದ ಸಮಸ್ಯೆಯಿತ್ತು. ವೈದ್ಯರ ಪ್ರಕಾರ ಅವರು ಬಹುಬಗೆಯ ರೋಗಗಳಿಂದ ಬಳಲುತ್ತಿದ್ದರು! ನಿಜ, ಅವರ ಜೀವನಪ್ರೀತಿಯೇ ಅವರನ್ನು ಕೊನೆಗಾಲದವರೆಗೆ ಚೈತನ್ಯದ ಚಿಲುಮೆಯಂತೆ ಬದುಕಿಸಿತು. ಗಾಢ ಪ್ರೀತಿಯೇ ಅವರ ಜೀವದ್ರವ್ಯವಾಗಿತ್ತು. ಅವರಷ್ಟು ಜೀವನ್ಮುಖಿಯಾಗಿ ಬದುಕಲು ಮತ್ತೆ ಯಾರಿಗೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ತೀವ್ರವಾಗಿ ಬದುಕಿದರು, ಗಾಢವಾಗಿ ಬದುಕನ್ನು ಪ್ರೀತಿಸಿದರು. ಅವರ ಅಂತ್ಯಸಂಸ್ಕಾರದ ದಿನ ರವೀಂದ್ರ ಕಲಾಕ್ಷೇತ್ರ ಮತ್ತು ಕಲಾಗ್ರಾಮಕ್ಕೆ ಹರಿದು ಬಂದ ಸಾವಿರಾರು ಜೀವಗಳಿಗೆ ಅನಂತಮೂರ್ತಿಯವರ ಪ್ರೀತಿ ದಕ್ಕಿತ್ತು. ನಿಷ್ಠುರವಾದ ಸತ್ಯಗಳನ್ನು ಹೇಳುತ್ತಿದ್ದವರಾಗಿಯೂ ಮೇಷ್ಟ್ರು ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದರು ಎಂಬುದಕ್ಕೆ ಇದೇ ಸಾಕ್ಷಿಯಾಗಿತ್ತು.

ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?

– ದಿನೇಶ್ ಕುಮಾರ್ ಎಸ್.ಸಿ.

ಇದು ನನ್ನ ಮಟ್ಟಿಗಂತೂ ಬೆಚ್ಚಿಬೀಳಿಸುವ ಸುದ್ದಿ.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ “ದಿ ಹಿಂದೂ” ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಜಿ.ಟಿ.ಯವರಿಗೆ ನೋಟೀಸೊಂದು ಹೋಗಿದೆ. ನಿಮ್ಮನ್ನು ಸಂಘದ ಸದಸ್ಯತ್ವದಿಂದ ಉಚ್ಛಾಟಿಸಲಾಗುವುದು, ಯಾವುದೇ ಪತ್ರಿಕಾಗೋಷ್ಠಿ ವರದಿಗೆ ಕರೆಯಲಾಗುವುದಿಲ್ಲ ಮತ್ತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನಾಗಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂಬುದು ಈ ನೋಟೀಸಿನ ಒಟ್ಟು ತಾತ್ಪರ್ಯ.

“ದಿ ಹಿಂದೂ” ಪತ್ರಿಕೆ ರಾಷ್ಟ್ರಮಟ್ಟದಲ್ಲಿ ಪತ್ರಿಕಾಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. The_Hindu_logoಈ ಪತ್ರಿಕೆಯ ಬಹುತೇಕ ವರದಿಗಾರರು ಶುದ್ಧಹಸ್ತರಾಗಿಯೇ ಇರುತ್ತಾರೆ. ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಕೆಲಸ ಮಾಡಿದವರು. ಗ್ರಾಮೀಣ ಭಾಗದ ವರದಿಗಾರಿಕೆಯ ಆಸಕ್ತಿಯಿಂದಾಗಿ ಈಗ ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬರುವ ಪತ್ರಕರ್ತರೇ ಹೆಚ್ಚಿರುವ ಸಂದರ್ಭದಲ್ಲಿ ಸತೀಶ್ ಬೆಂಗಳೂರೆಂಬ ಮಾಯಾನಗರಿ ಬಿಟ್ಟು ಹಾಸನಕ್ಕೆ ತೆರಳಿದವರು. ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರಿಕೆ ಆರಂಭಿಸಿದಾಗಿನಿಂದ ಆ ಎರಡೂ ಜಿಲ್ಲೆಗಳ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಂತೆ ಬರೆದಿದ್ದಾರೆ. ಯಾರಿಗೂ ಅಂಜದೆ, ಅಳುಕದೆ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿದ್ದಾರೆ.

ಇಂಥ ಸತೀಶ್ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾಕಾದರೂ ನೋಟೀಸು ಕೊಟ್ಟಿದೆ? Satish_GTಇದರ ಹಿನ್ನೆಲೆ ಏನು ಎಂಬುದಕ್ಕೆ ನೋಟೀಸಿನಲ್ಲೇ ಸ್ಪಷ್ಟ ಉತ್ತರವಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯೊಬ್ಬರ ವಿರುದ್ಧ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಅಪಮಾನಗೊಳಿಸಲಾಗಿದೆ ಎಂಬುದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸತೀಶ್ ಯಾಕಾಗಿ ಈ ದೂರನ್ನು ನೀಡಿದರು? ಆ ದೂರಿನಲ್ಲಿ ಏನಿದೆ ಎಂಬುದಕ್ಕೆ ಸತೀಶ್ ಕೊಟ್ಟ ದೂರೇ ಎಲ್ಲ ಉತ್ತರ ಹೇಳುತ್ತದೆ. ಸತೀಶ್ ನೀಡಿದ ದೂರು ಈ ಕೆಳಕಂಡಂತಿದೆ.

ಇಂದ.
ಸತೀಶ್ ಜಿ.ಟಿ.
ವರದಿಗಾರ,
ದಿ ಹಿಂದು,
ಹಾಸನ.

ಗೆ.
ಅಧ್ಯಕ್ಷರು,
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ,
ಬೆಂಗಳೂರು.

ಅಧ್ಯಕ್ಷರೆ,

ವಿಷಯ: ಹಾಸನದಲ್ಲಿ ಬೆಳಕಿಗೆ ಬಂದ ‘ಪ್ಯಾಕೆಜ್ ಸಂಸ್ಕೃತಿ’ ಮತ್ತು ಸಂಘದ ಪದಾಧಿಕಾರಿಯೊಬ್ಬರಿಂದ ಮುಖ್ಯವಾಹಿನಿ ಪತ್ರಿಕೆಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿಮಗೆ ದೂರು ಸಲ್ಲಿಸುವುದು.

‘ಭ್ರಷ್ಟರಿಂದ ಪತ್ರಿಕೋದ್ಯಮವನ್ನು ಮುಕ್ತ ಗೊಳಿಸುವುದು’ – ಈ ಸಂಘದ ಆಶಯಗಳಲ್ಲಿ ಒಂದು ಎಂದು ಭಾವಿಸಿ ಹಾಗೂ ನಾನು ಕೆಲಸ ಮಾಡುತ್ತಿರುವ “ದಿ ಹಿಂದು” ಪತ್ರಿಕೆಯ ಮ್ಯಾನೇಜ್‌ಮೆಂಟ್‌ನವರ ಸೂಚನೆ ಮೇರೆಗೆ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ.

ದಿನಾಂಕ ಅಕ್ಟೋಬರ್ 3 ರಂದು ಹಾಸನ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಸಮಾವೇಶ ಆಯೋಜಿಸಿತ್ತು. ಸಮಾವೇಶದ ಬಗ್ಗೆ ಹಾಸನ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಶಿವರಾಂ ಕೆಲವೇ ದಿನಗಳ ಹಿಂದೆ ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.

ಸಮಾವೇಶದ ದಿನ (ಅಕ್ಟೋಬರ್ 3ರಂದು) ಬೆಳಗ್ಗೆ 11.01 ಗಂಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರು ದೂರವಾಣಿ ಮೂಲಕ (ಅವರ ದೂರವಾಣಿ ಸಂಖ್ಯೆ 94486 55043) ನನ್ನನ್ನು ಸಂಪರ್ಕಿಸಿ ‘ನೀವು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ’ ಎಂದರು. ಅದಕ್ಕೂ ಮೊದಲು “ಕಾಂಗ್ರೆಸ್‌ನವರು ನನಗೆ ಮತ್ತು ಕೆಲ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರಷ್ಟೆ. ಆದರೆ ಸುದ್ದಿವಾಹಿನಿಯ ವರದಿಗಾರರು ಈ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ…” – ಹೀಗೆ ಹೇಳಿದರು. ಅವರ ಮಾತಿನ ಹಿನ್ನೆಲೆ ಗ್ರಹಿಸಲಾಗಲಿಲ್ಲ. ಆದರೆ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ ಎಂದು ಹೇಳಿದ್ದು ಮಾತ್ರ ಸ್ಪಷ್ಟ.

ಇದೇ ರೀತಿ ಇನ್ನೊಂದು ಇಂಗ್ಲಿಷ್ ಪತ್ರಿಕೆ ವರದಿಗಾರನಿಗೂ ದೂರವಾಣಿ ಕರೆ ಮಾಡಿ, ಆ ವರದಿಗಾರ ರಜೆಯ ಮೇಲೆ ಊರಿಗೆ ತೆರಳಿದ್ದರೂ, “ಹೇಗಾದರೂ ಮಾಡಿ ಒಂದೇ ಒಂದು ಸಾಲಿನಷ್ಟಾದರೂ ಈ ಕಾರ್ಯಕ್ರಮದ ವರದಿ ನಿಮ್ಮ ಪತ್ರಿಕೆಯಲ್ಲಿ ಬರುವಂತೆ ಮಾಡು, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಲೀಲಾವತಿಯವರು ಗೋಗರೆದಿದ್ದರು. ವರದಿಗಾರ ಮಿತ್ರ ಈ ಸಂಗತಿಯನ್ನು ಆಪ್ತರ ಬಳಿ ಹಂಚಿಕೊಂಡಿದ್ದಾನೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೀಗೆ ಇವರು ಆಹ್ವಾನ ನೀಡಿದ್ದು ಮತ್ತು ಗೋಗರೆದಿದ್ದು ತೀರಾ ವಿಚಿತ್ರ ಎನಿಸಿತು. ಕೆಲವೇ ನಿಮಿಷಗಳ ನಂತರ ಈ ವರ್ತನೆ ಮೂಲ ಉದ್ದೇಶ ಸ್ಪಷ್ಟವಾಯಿತು.

ಸುದ್ದಿ ವಾಹಿನಿಯೊಂದರ ವರದಿಗಾರ ಮಿತ್ರನಿಗೆ, ಬಿ.ಶಿವರಾಂ ಪತ್ರಿಕಾಗೋಷ್ಟಿಗೆ ತಡವಾಗಿ ಬಂದಿದ್ದರ ಕಾರಣ, ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಹಿತಿ ಇರಲಿಲ್ಲ. ಸಮಾವೇಶದ ದಿನ ಹೈಸ್ಕೂಲ್ ಆವರಣದಲ್ಲಿ ಶಾಮಿಯಾನ ಹಾಕಿದ್ದನ್ನು ನೋಡಿ, ಅಲ್ಲಿಯೇ ಇದ್ದ ಹಾಸನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲಿತಮ್ಮನವರನ್ನು ವಿಚಾರಿಸಿದ್ದಾರೆ. ಆಗ ಅವರಿಂದ ಬಂದ ಉತ್ತರ, “ಯಾಕ್ರಿ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲವಾ? ನಿಮಗೆ ಕೊಡಬೇಕಾದ ಪ್ಯಾಕೇಜನ್ನೆಲ್ಲಾ ನಿಮ್ಮ ಸಂಘದ ಅಧ್ಯಕ್ಷೆ ಲೀಲಾವತಿಯವರಿಗೆ ಕೊಟ್ಟಿದ್ದೇವಲ್ಲ, ಅವರು ಹೇಳಲಿಲ್ಲವಾ? ಇನ್ನು ನಿಮಗೆ ಕೊಡಬೇಕಾದ್ದು ಏನಾದರೂ ಇದ್ದರೆ, ಬನ್ನಿ ತಗೊಂಡು ಹೋಗಿ ಸುದ್ದಿ ಮಾಡಿ..” ಎಂದು ದರ್ಪದಿಂದಲೇ ಮಾತನಾಡಿದ್ದಾರೆ.

ಯಾವ ಸುದ್ದಿಗೂ ಯಾವ ದಿನವೂ ಯಾರ ಬಳಿಯೂ ಪುಡಿಕಾಸು ಕೇಳದ ನಾವು ಪಕ್ಷವೊಂದರ ಸಮಾವೇಶದಲ್ಲಿ ಸಾರ್ವಜನಿಕವಾಗಿ ಹೀಗೆ ಅನ್ನಿಸಿಕೊಳ್ಳಬೇಕಾಯಿತಲ್ಲ ಎಂದು ಕ್ರುದ್ಧನಾದ ವರದಿಗಾರ ತಕ್ಷಣ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಏನಿದರ ಮರ್ಮ ಎಂದು ಕೇಳಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸುದ್ದಿ ಸಂಸ್ಥೆ ಹೆಸರಿನಲ್ಲಿ ‘ಪ್ಯಾಕೇಜ್’ ಕೇಳುವ ಮತ್ತು ಆ ಮೂಲಕ ಚಾನೆಲ್‌ಗೆ ಮಸಿ ಬಳಿಯುತ್ತಿರುವ ಬಗ್ಗೆ ತನ್ನ ಸಿಟ್ಟು ವ್ಯಕ್ತ ಪಡಿಸಿದ್ದಾನೆ.

ಈ ಘಟನೆಯಿಂದ ವಿಚಲಿತನಾದ ವರದಿಗಾರ ಇತರೆ ಮಿತ್ರರೊಂದಿಗೆ ತನ್ನ ನೋವನ್ನು ಹಂಚಿಕೊಂಡಾಗ ಲೀಲಾವತಿಯವರು ಫೋನ್ ಮಾಡಿದ್ದರ ಹಿಂದಿನ ಉದ್ದೇಶ ಅರ್ಥವಾಯಿತು. ವರದಿಗಾರನೊಂದಿಗೆ ಸಂಭಾಷಣೆ ನಂತರ ಕಾಂಗ್ರೆಸ್ ನಾಯಕಿ ಶ್ರೀಮತಿ ಲಲಿತಮ್ಮನವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಯಾಕ್ರಿ ಯಾರಿಗೂ ನೀವು ಕಾರ್ಯಕ್ರಮದ ಬಗ್ಗೆ ಹೇಳಿಲ್ಲವೇ ಎಂದು ಕೇಳಿದ್ದಾರೆ. ಆ ನಂತರ ನನಗೂ ಮತ್ತು ಇನ್ನಿತರೆ ಮಿತ್ರರಿಗೂ ಲೀಲಾವತಿಯವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆದಿದ್ದಾರೆ.

ಈ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ (ದಿ ಹಿಂದು) ಪತ್ರಿಕೆಯನ್ನೂ ಸೇರಿದಂತೆ ಮುಖ್ಯವಾಹಿನಿಯ ಪತ್ರಿಕೆಗಳ ಹೆಸರುಗಳನ್ನು ಬಳಸಿಕೊಂಡು ಈ ಘನ ಸಂಘದ ಜಿಲ್ಲಾಧ್ಯಕ್ಷರು ‘ಪ್ಯಾಕೇಜ್’ ಸ್ವೀಕರಿಸಿರುವ ಅನುಮಾನ ಬರುತ್ತದೆ. ಅನುಮಾನಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಿಲತಮ್ಮನವರು ಸಮಾವೇಶದ ಸ್ಥಳದಲ್ಲಿ ಸುದ್ದಿ ವಾಹಿನಿಯ ವರದಿಗಾರನಿಗೆ ಹೇಳಿರುವ ಮಾತುಗಳು – ‘ಎಲ್ಲರಿಗೂ ಸೇರಿ ಪ್ಯಾಕೇಜನ್ನು ಈಗಾಗಲೇ ನಿಮ್ಮ ಅಧ್ಯಕ್ಷರಿಗೆ ನೀಡಿದ್ದೇವಲ್ಲ, ನಿಮಗೂ ಮತ್ತೇನಾದರೂ ಬೇಕಿದ್ದರೆ ತಗೊಂಡು ಹೋಗಿ ಸುದ್ದಿ ಮಾಡಿ..’ ಈ ಮಾತುಗಳನ್ನು ಕೇಳಿಸಿಕೊಂಡ ವರದಿಗಾರನ ಜೊತೆ ಕೆಮಾರಮನ್ ಕೂಡಾ ಇದ್ದರು. ರಾಷ್ಟೀಯ ಪಕ್ಷವೊಂದರ ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿರುವ ಮಾತನ್ನು ಅಲ್ಲಗಳೆಯಲಾದೀತೆ?

2. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿಯವರು ನನಗೆ ಮತ್ತು ಇತರೆ ಪತ್ರಕರ್ತರಿಗೆ ದೂರವಾಣಿ ಕರೆಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದು. (ಇವರು ಪ್ಯಾಕೇಜ್ ಲಾಭ ಪಡೆಯದಿದ್ದರೆ ನಮಗೆ ಫೋನ್ ಮಾಡಿ ಆಹ್ವಾನಿಸಲು ಇವರ್ಯಾರು? ಅಥವಾ ಇವರೇನು ಕಾಂಗ್ರೆಸ್ ಕಾರ್ಯಕರ್ತರೆ?)

3. “ಕಾರ್ಯಕ್ರಮದ ವರದಿ ಒಂದು ಸಾಲಿನಷ್ಟಾದರೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೋ, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಸಂಘದ ಅಧ್ಯಕ್ಷರು ಕೋರುತ್ತಾರೆಂದರೆ ಅದರ ಹಿಂದಿನ ಮರ್ಮವೇನು? ಪತ್ರಕರ್ತರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕ್ರಮ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗುವಂತೆ ನೋಡಿಕೊಳ್ಳುತ್ತೇನೆಂದು ಪಕ್ಷದ ನೇತಾರರಿಗೆ ಭರವಸೆ ನೀಡಿದ್ದರೆ?

ರಾಷ್ಟ್ರಮಟ್ಟದಲ್ಲಿ ‘ಪೇಯ್ಡ್ ನ್ಯೂಸ್’ ವಿರುದ್ಧ ದನಿ ಎತ್ತಿರುವವರ ಪೈಕಿ ದಿ ಹಿಂದು ಪತ್ರಿಕೆ ಪ್ರಮುಖವಾದದ್ದು. ಪ್ರಸ್ತುತ ಘಟನೆಯಲ್ಲಿ ನಮ್ಮ ಪತ್ರಿಕೆಯ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಸಂಶಯಗಳಿವೆ. ಈ ಬಗ್ಗೆ ನಮ್ಮ ಸಂಸ್ಥೆಗೂ ಮಾಹಿತಿ ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಈ ದೂರನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಿರೀಕ್ಷಿಸುತ್ತೇನೆ.

ಇತಿ,
ಸತೀಶ್ ಜಿ.ಟಿ
ಹಾಸನ
05-10-2012

• ದೂರು ನೀಡುತ್ತಿರುವುದು ನಮ್ಮ ಸಂಸ್ಥೆಯ ಸೂಚನೆ ಮೇರೆಗೆ. ಮಿತ್ರರು ಪ್ರತಿನಿಧಿಸುವ ಸಂಸ್ಥೆಗಳು ದೂರು ನೀಡುವ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಗೊತ್ತಿಲ್ಲ. ಹಾಗಾಗಿ ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ವರದಿಗಾರ ಮಿತ್ರರನ್ನು ಮತ್ತು ಅವರು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳನ್ನು ಹೆಸರಿಸಿಲ್ಲ.
• ಈ ದೂರಿನ ಪ್ರತಿಯನ್ನು ಹಾಸನ ಜಿಲ್ಲಾ ಸಂಘದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ಕಳುಹಿಸುತ್ತಿದ್ದೇನೆ. ಅಧ್ಯಕ್ಷರ ಮೇಲೆಯೇ ಆರೋಪ ಇರುವುದರಿಂದ, ಅವರಿಗೆ ಪ್ರತಿ ಕಳುಹಿಸುವುದು ಅರ್ಥಹೀನ ಎಂಬುದು ನನ್ನ ಅನಿಸಿಕೆ.

ಈ ದೂರನ್ನು ನೀಡಿರುವುದು 2012ರ ಅಕ್ಟೋಬರ್ 5ರಂದು. “ದಿ ಹಿಂದೂ” ನಂಥ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಪತ್ರಕರ್ತ ತಮ್ಮ ಹೆಸರಲ್ಲಿ, ತಮ್ಮ ಸಂಸ್ಥೆ ವಿಷಯದಲ್ಲಿ ಸುದ್ದಿಗಾಗಿ ಕಾಸು ಎತ್ತುತ್ತಿರುವುದು ಕಂಡುಬಂದರೆ ಏನನ್ನು ಮಾಡಬಹುದೋ ಅದನ್ನೇ ಸತೀಶ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕ್ರಮ ಕೈಗೊಳ್ಳುವುದಿರಲಿ, ದೂರು ತಲುಪಿರುವ ಕುರಿತು ಒಂದು ಸಾಲಿನ ಪ್ರತಿಕ್ರಿಯೆಯನ್ನೂ ಸತೀಶ್ ಅವರಿಗೆ ನೀಡಿಲ್ಲ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಗಮನಿಸಿದರೆ ಇಂಥ ಪ್ರತಿಕ್ರಿಯೆ, ಕ್ರಮ ಕೈಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಅದು ಬೇರೆಯ ವಿಷಯ.

ತಮಾಶೆಯೆಂದರೆ ಈಗ ನಾಲ್ಕು ತಿಂಗಳ ಬಳಿಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸತೀಶ್ ಅವರ ಸದಸ್ಯತ್ವ ರದ್ದುಗೊಳಿಸುವುದಾಗಿ ಗುಟುರು ಹಾಕುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಸೇರಿಸುವುದಿಲ್ಲ ಎಂದು ಯಜಮಾನಿಕೆ ದರ್ಪ ಪ್ರದರ್ಶಿಸಿದೆ.

ಹಾಸನ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ದೊಡ್ಡದು. ಇಲ್ಲಿ ತಮ್ಮ ಇಡೀ ಜೀವನವನ್ನೇ ಪತ್ರಿಕಾವೃತ್ತಿಗೆ ಸಮರ್ಪಿಸಿದ ಕೃ.ನ,ಮೂರ್ತಿಯಂಥವರಿದ್ದರು. ಪತ್ರಿಕಾವೃತ್ತಿಯನ್ನೇ ಒಂದು ಚಳವಳಿಯನ್ನಾಗಿಸಿಕೊಂಡ ಆರ್.ಪಿ.ವೆಂಕಟೇಶ್ ಮೂರ್ತಿ, ಮಂಜುನಾಥ ದತ್ತ ಅಂಥವರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು ಸೇರಿದಂತೆ ಬೇರೆಬೇರೆ ಕಡೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿದ್ದಾರೆ. ಶೇಷಾದ್ರಿ, ರಂಗನಾಥ್, ಎಚ್.ಬಿ.ಮದನ್ ಗೌಡ, ವೈ.ಪಿ.ರಾಜೇಗೌಡ, ಬಿ.ಜೆ.ಮಣಿ, ಮಂಜುನಾಥ್, ಕೆಂಚೇಗೌಡ, ಪ್ರಸನ್ನ ಕುಮಾರ್, ಬಾಳ್ಳು ಗೋಪಾಲ್, ಡಿ.ಜಿ.ರಾಜೇಶ್, ರವಿ ನಾಕಲಗೋಡು, ವೇಣು, ವೆಂಕಟೇಶ್, ರವಿಕುಮಾರ್, ಹರೀಶ್, ಬಿ.ಮಂಜು ಹೀಗೆ ನೆನಪಿಸಿಕೊಳ್ಳಲು ಹಾಸನದಲ್ಲಿ ಹತ್ತು ಹಲವಾರು ಹೆಸರುಗಳಿವೆ.

ಹೀಗಿರುವಾಗ ಇಂಥ ಅನೈತಿಕವಾದ, ಮುಖೇಡಿಯಾದ ತೀರ್ಮಾನವನ್ನು ಜಿಲ್ಲಾ ಪತ್ರಕರ್ತರ ಸಂಘ ತೆಗೆದುಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಅಷ್ಟಕ್ಕೂ ಸಂಘದಿಂದ ಉಚ್ಛಾಟಿಸಿದ ಮಾತ್ರಕ್ಕೆ, ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿರ್ಬಂಧಿಸಿದ ಮಾತ್ರಕ್ಕೆ ಸತೀಶ್ ಅವರ ವೃತ್ತಿಜೀವನವನ್ನು ಕಸಿದುಕೊಳ್ಳಲಾದೀತೆ? ಒಂದು ವೇಳೆ ಸತೀಶ್ ವೃತ್ತಿಯನ್ನು ಕಸಿದುಕೊಳ್ಳುವುದು ಸಂಘದ ಹವಣಿಕೆಯಾದರೆ ಇದೆಂಥ ಸಂಘ?

ನಾನು ಹಲವು ವರ್ಷಗಳ ಕಾಲ ಇದೇ ಹಾಸನ ಜಿಲ್ಲೆಯಲ್ಲಿ ಪತ್ರಿಕಾ ವೃತ್ತಿ ನಡೆಸಿದವನು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಈ ನೋಟೀಸನ್ನು ಗಮನಿಸಿದಾಗ ನಿಜಕ್ಕೂ ನೋವಾಯಿತು. ಸತೀಶ್ ಅವರನ್ನು ಅವಮಾನಿಸುವ ಭರದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ತನ್ನನ್ನು ತಾನು ಅಪಮಾನಿಸಿಕೊಂಡಿದೆ. ಕಾಸಿಗಾಗಿ ಸುದ್ದಿ ವಿರುದ್ಧ ಧ್ವನಿಯೆತ್ತಿದ ಪತ್ರಕರ್ತನ ನ್ಯಾಯಶೀಲತೆಯನ್ನು, ವೃತ್ತಿಧರ್ಮವನ್ನು ಗೌರವಿಸುವ, ಪ್ರಶಂಶಿಸುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಾತಾಳಕ್ಕೆ ಇಳಿದಿದೆ.

ಮೇಲೆ ಉಲ್ಲೇಖಿಸಿದ, ಉಲ್ಲೇಖಿಸದೇ ಇರುವ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನದೊಂದು ಪ್ರೀತಿಯ ಮನವಿ. ಇದೊಂದು ಕಪ್ಪುಚುಕ್ಕೆ ಅಳಿಸುವುದು ನಿಮ್ಮ ಕೈಯಲ್ಲೇ ಇದೆ. ಸತೀಶ್ ಅವರಿಗೆ ಕಳುಹಿಸಿರುವ ನೋಟೀಸನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಕಾಸಿಗಾಗಿ ಸುದ್ದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಈ ನೋಟೀಸಿನ ಕಾರಣಕ್ಕೆ ತಲೆತಗ್ಗಿಸಿ ನಿಲ್ಲುವಂತಾಗಬಾರದು. ಸತೀಶ್ ಅವರಿಗೆ ತಮ್ಮ ವೃತ್ತಿಯನ್ನು ಯಾರ ಅಡ್ಡಿ, ಆತಂಕ, ಹಸ್ತಕ್ಷೇಪ, ಬೆದರಿಕೆಗಳು ಇಲ್ಲದಂತೆ ನಡೆಸಿಕೊಂಡು ಹೋಗುವಂತೆ ಸಹಕರಿಸಬೇಕು.

ಅದು ಸಾಧ್ಯವಾಗದೆ ಹೋದರೆ, ನಾಡಿನ ನ್ಯಾಯಪರವಾದ ಮನಸ್ಸುಗಳು ಅನಿವಾರ್ಯವಾಗಿ ಜಿಲ್ಲಾ ಪತ್ರಕರ್ತರ ಸಂಘದ ಎದುರೇ ಬಂದು ಧರಣಿ ನಡೆಸಿ, ನಿಮ್ಮ ಕಣ್ಣುಗಳನ್ನು ತೆರೆಸಬೇಕಾದೀತು. ವಿಷಯ ದೊಡ್ಡದಾಗುವ ಮುನ್ನ ಜಿಲ್ಲಾ ಪತ್ರಕರ್ತರು ಎಲ್ಲದಕ್ಕೂ ತೆರೆ ಎಳೆದಾರೆಂಬ ನಂಬಿಕೆ ನನ್ನದು. ಯಾಕೆಂದರೆ ಜಿಲ್ಲೆಯ ಪತ್ರಕರ್ತರು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಬಲಿ ತೆಗೆದುಕೊಳ್ಳುವಷ್ಟು ಅಮಾನವೀಯರು, ಹೇಡಿಗಳು, ಫ್ಯಾಸಿಸ್ಟ್‌ಗಳು ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

ಅಸ್ಸಾಂ ಸಂಘರ್ಷ, ವದಂತಿ: ಕನ್ನಡ ಮೀಡಿಯಾ ನೋಡಿದ್ದು ಹೇಗೆ?

ದಿನೇಶ್ ಕುಮಾರ್ ಎಸ್.ಸಿ.

ಮೀಡಿಯಾ ಅನ್ನುವುದು ತೀವ್ರಗತಿಯಲ್ಲಿ ಬದಲಾಗುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆದಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮೀಡಿಯಾ ಸಶಕ್ತವಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಅದು ತನ್ನ ಮೇಲೆ ತಾನು ಇನ್ನಷ್ಟು ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾದ ಅಗತ್ಯವಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಸಾಮಾಜಿಕ ಪ್ರಜ್ಞೆಯನ್ನು ಅದು ಕಳೆದುಕೊಳ್ಳುತ್ತಲೇ ಸಾಗಿದೆ. ಇತ್ತೀಚಿನ ವಿದ್ಯಮಾನಗಳಲ್ಲಿ ಅದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇದೆ. ಮೀಡಿಯಾ ಭ್ರಷ್ಟಾಚಾರದ ವಿರುದ್ಧ ಇದೆ ಎಂಬ ಹಾಗೆ ಕಾಣಿಸುತ್ತಿರುತ್ತದೆ, ಆದರೆ ಸ್ವತಃ ತಾನೇ ಭ್ರಷ್ಟಗೊಂಡು ಹೋಗಿದೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವಂತೆ ಬರಿಗಣ್ಣಿಗೆ ಕಾಣಿಸುತ್ತಿರುತ್ತದೆ, ಆದರೆ ತಾನೇ ಜನರನ್ನು ಭೀತಗೊಳಿಸುವ ಕೆಲಸ ಮಾಡುತ್ತಿರುತ್ತದೆ. ಜಾತಿವಾದದ ವಿರುದ್ಧ ಗುಟುರು ಹಾಕಿದಂತೆ ಕಾಣುತ್ತಿರುತ್ತದೆ, ಆದರೆ ತೀರಾ ಅಸಹ್ಯವಾದ ಜಾತೀಯತೆಯನ್ನು ಮೀಡಿಯಾ ಇವತ್ತು ಮೈತುಂಬ ತುಂಬಿಕೊಂಡಿದೆ. ಮೀಡಿಯಾ ಇವತ್ತು ತೀವ್ರಗೊಳ್ಳುತ್ತಿರುವ ಕೋಮುವಾದದ ವಿರುದ್ಧ ಇರಬೇಕಿತ್ತು, ಆದರೆ ಕೋಮುವಾದಿ ನಿಲುವುಗಳಿಗೆ ಅಂಟಿಕೊಂಡು, ರಾಜಾರೋಷವಾಗಿ ಕೋಮುವಿಷವನ್ನು ಹರಡುವ ಕೆಲಸ ಮಾಡುತ್ತಿದೆ.

ಅಸ್ಸಾಂ ನಾಗರಿಕರು ಬೆಂಗಳೂರು ತೊರೆದು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿದ ವಿದ್ಯಮಾನದ ಕುರಿತು ಚರ್ಚಿಸುವ ಮುನ್ನ, ಇತ್ತೀಚಿಗೆ ನಡೆದ ಇನ್ನೊಂದು ವಿದ್ಯಮಾನದ ಕುರಿತು ಪ್ರತಿಕ್ರಿಯೆ ನೀಡಿ ಮುಂದುವರೆಯುತ್ತೇನೆ. ಇತ್ತೀಚಿಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಒಂದಷ್ಟು ಶಂಕಿತ ಆರೋಪಿಗಳನ್ನು ಬಂಧಿಸಿದರು. ಈ ಆರೋಪಿಗಳು ಕೆಲ ಗಣ್ಯ ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂಬುದು ಪೊಲೀಸರ ಹೇಳಿಕೆಯಾಗಿತ್ತು. ಇದಾದ ತರುವಾಯ ನಮ್ಮ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿ. ಪೊಲೀಸರು ಪತ್ರಕರ್ತರಿಗೆ ಬಿಡುಗಡೆ ಮಾಡುವ ಹೇಳಿಕೆಗಳು ಸರ್ಕಾರಿ ಗುಮಾಸ್ತರು ಬರೆಯುವ ಟಿಪ್ಪಣಿ ಹಾಗಿರುತ್ತದೆ. ಅಲ್ಲಿ ಊಹಾಪೋಹಗಳಿಗೆ ಅವಕಾಶ ಇರುವುದಿಲ್ಲ. ಪ್ರತಿಯೊಂದು ಪದಕ್ಕೂ ಅವರು ಜವಾಬ್ದಾರರಾಗಿರುವುದರಿಂದ ಈ ಹೇಳಿಕೆಗಳಲ್ಲಿ ಉತ್ಪ್ರೇಕ್ಷೆ ಇರುವ ಸಾಧ್ಯತೆ ಕಡಿಮೆ. ಕಾಗೆ ಗೂಬೆ ಕಥೆಗಳನ್ನು ಹೆಣೆದಿದ್ದರೂ ಪೊಲೀಸರು ಒಂದು ಹಂತದವರೆಗೆ ತೀರಾ ಅತಿರಂಜಿತವಾದ ಹೇಳಿಕೆ ನೀಡುವುದಿಲ್ಲ. ಇಂಥ ಪೊಲೀಸು ಹೇಳಿಕೆಗಳು ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಸೇಲ್ ಆಗುವ ವಸ್ತುಗಳಲ್ಲ. ಅವರಿಗೆ ಬೇರೆಯದೇ ಸ್ವರೂಪದ ಸುದ್ದಿ ಬೇಕು. ಆ ಸುದ್ದಿಯಲ್ಲಿ ರೋಚಕತೆ ಇರಬೇಕು, ಪ್ರಚೋದಿಸುವ ಗುಣವಿರಬೇಕು. ಹಾಗಾಗಿ ಸುದ್ದಿಗಳನ್ನು ಬೇಯಿಸಿ ತಯಾರಿಸುವ ಕೆಲಸ ಶುರುವಾಗುತ್ತದೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಸುದ್ದಿ ಹೊಸೆಯುವುದು ಈಗೀಗ ತುಂಬಾ ಸುಲಭ. ಒಂದು ಉದಾಹರಣೆ ಹೇಳುತ್ತೇನೆ. ಒಬ್ಬ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಭಾವಿಸಿಕೊಳ್ಳಿ. ನಾನು ಓರ್ವ ಪತ್ರಕರ್ತನಾಗಿ ನನ್ನ ಕಚೇರಿಯಲ್ಲೇ ಅದಕ್ಕೆ ಸಂಬಂಧಿಸಿದಂತೆ ನೂರು ಕಥೆ ಹೆಣೆಯಬಲ್ಲೆ. ಬಂಧಿತನಿಗೆ ಐಎಸ್ಐ ಸಂಪರ್ಕವಿದೆ. ಅವನು ಹುಜಿ, ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವನು. ಅಲ್ ಖೈದಾ ಸೇರಲು ಹವಣಿಸುತ್ತಿದ್ದ. ಅವನಿಗೆ ಮುಸ್ಲಿಂ ರಾಷ್ಟ್ರಗಳಿಂದ ಹಣ ಬರುತ್ತಿತ್ತು. ಅವನ ಮನೆಯಲ್ಲಿ ಜೆಹಾದಿಗೆ ಸಂಬಂಧಿಸಿದ ಪುಸ್ತಕಗಳಿದ್ದವು. ಈ ಒಂದೊಂದಕ್ಕೂ ಒಂದಷ್ಟು ರೆಕ್ಕೆ ಪುಕ್ಕ ಜೋಡಿಸಿದರೆ ಒಂದೊಂದು ಸ್ಟೋರಿಯಾಗಿ ಬಿಡುತ್ತದೆ. ಬಂಧನಕ್ಕೆ ಒಳಗಾದವರಲ್ಲಿ ಏನೂ ತಪ್ಪು ಮಾಡದ, ಭಯೋತ್ಪಾದನೆ ಎಂದರೆ ಏನೇನೂ ಗೊತ್ತಿಲ್ಲದ ಅಮಾಯಕರೂ ಇದ್ದಿರಬಹುದು ಎಂಬುದು ಪತ್ರಕರ್ತನಿಗೆ ಮುಖ್ಯವಾಗುವುದೇ ಇಲ್ಲ. ತಾನು ಬರೆಯುವ ಸುದ್ದಿ ಸೇಲ್ ಆಗಬೇಕು ಎನ್ನುವುದಷ್ಟೇ ಮುಖ್ಯ. ಆತ ಕೆಲಸ ಮಾಡುವ ಪತ್ರಿಕೆಯ ನೇತೃತ್ವ ವಹಿಸಿಕೊಂಡವನು ಸೇರಿದಂತೆ ಮಾಲೀಕನವರೆಗೆ ಎಲ್ಲರಿಗೂ ಇದಷ್ಟೇ ಮುಖ್ಯ. ಅದರಲ್ಲೂ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಇಟ್ಟುಕೊಂಡವನೇ ಪತ್ರಕರ್ತನಾಗಿದ್ದರೆ ಮುಗಿದೇಹೋಯಿತು. ಬಂಧಿತರನ್ನು ವಿಚಾರಣೆಯೂ ಇಲ್ಲದೆ ನೇಣಿಗೆ ಹಾಕಬೇಕು ಎಂದು ಸೂಚಿಸುವಂತಿರುತ್ತವೆ ಅವರ ವರದಿಗಳು.

ಬೆಂಗಳೂರು-ಹುಬ್ಬಳ್ಳಿಯಲ್ಲಿ ಬಂಧಿತರಾದವರ ಕುರಿತು ಕನ್ನಡ ಪತ್ರಿಕೆಗಳಲ್ಲಿ ಊಹಾಪೋಹದ ವರದಿಗಳೇ  ಪುಟಗಟ್ಟಲೆ ತುಂಬಿಕೊಂಡವು. ಕಡೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುಳ್ಳು ಸುಳ್ಳೇ ಸುದ್ದಿ ಬರೆಯಬೇಡಿ ಎಂದು ಪತ್ರಿಕೆಗಳಿಗೆ ಎಚ್ಚರಿಕೆ ನೀಡಬೇಕಾಯಿತು. ಇಂಥ ಎಚ್ಚರಿಕೆಗಳಿಗೆ, ಸೂಚನೆಗಳಿಗೆ, ಸಲಹೆಗಳಿಗೆ, ಟೀಕೆಗಳಿಗೆ ನಮ್ಮ ಪತ್ರಿಕೆಗಳು ಎಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಅವುಗಳಿಗೆ ಬಿಸಿಬಿಸಿಯಾದ ಸುದ್ದಿ ಬೇಕು, ಅವು ಸೇಲ್ ಆಗಬೇಕು. ಪೈಪೋಟಿಯಲ್ಲಿರುವ ಪತ್ರಿಕೆಗಳಿಗಿಂತ ಭಿನ್ನವಾದ ಸುದ್ದಿಯನ್ನು ನೀಡಬೇಕು. ಅದಕ್ಕಾಗಿ ಸುಳ್ಳಾದರೂ ಬರೆದು ದಕ್ಕಿಸಿಕೊಳ್ಳುತ್ತೇವೆ ಎಂಬ ಉಡಾಫೆಯ, ಬೇಜವಾಬ್ದಾರಿತನದ, ಸಮಾಜದ್ರೋಹದ ನಿಲುವಿಗೆ ಅಂಟಿಕೊಂಡಿರುತ್ತವೆ.

ಅಸ್ಸಾಂನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ನಡೆದ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಈಶಾನ್ಯ ರಾಜ್ಯಗಳ ಸಾವಿರಾರು ನಾಗರಿಕರು ಕರ್ನಾಟಕ ತೊರೆದು ತಮ್ಮ ಮಾತೃಭೂಮಿಗೆ ವಾಪಾಸಾದ ಘಟನೆಗಳಲ್ಲೂ ನಮ್ಮ ಮೀಡಿಯಾ ದೃಷ್ಟಿಕೋನವನ್ನು ಹಲವು ಬಗೆಗಳಲ್ಲಿ ಪ್ರಶ್ನಿಸಬೇಕಾಗುತ್ತದೆ.

ಮೊದಲನೆಯದಾಗಿ ಈಶಾನ್ಯ ರಾಜ್ಯದ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸಾಗಿದ್ದನ್ನು ವಲಸೆ ಎಂದು ಬಿಂಬಿಸಿದ್ದನ್ನೇ ನಾನು ಪ್ರಶ್ನಿಸಲು ಬಯಸುತ್ತೇನೆ. ಆ ನಾಗರಿಕರು ವಿದ್ಯಾಭ್ಯಾಸದ ಕಾರಣಕ್ಕೋ, ಉದ್ಯೋಗದ ಕಾರಣಕ್ಕೋ ಕರ್ನಾಟಕಕ್ಕೆ ವಲಸೆ ಬಂದವರು. ಅವರು ವಾಪಾಸು ತಮ್ಮ ಊರಿಗೆ ಹೋಗುತ್ತಿದ್ದರೆ, ಅದು ಯಾವುದೇ ಕಾರಣಕ್ಕೆ ಆಗಿದ್ದರೂ ಅದು ವಲಸೆ ಅಲ್ಲ, ತಮ್ಮ ಊರಿಗೆ ಮರಳುವ ಪ್ರಕ್ರಿಯೆ ಅಷ್ಟೆ. ಗುಳೆ, ವಲಸೆ ಎಂಬ ಶಬ್ದಗಳನ್ನು ಬಳಸುವ ಮೂಲಕ ಕನ್ನಡ ಪತ್ರಿಕೆಗಳು ತಾಂತ್ರಿಕ ದೋಷವನ್ನು ಮಾಡಿದವು. ತನ್ಮೂಲಕ ಬಹಳ ಸುಲಭವಾಗಿ ಬಗೆಹರಿಯಬಹುದಾಗಿದ್ದ ಸಮಸ್ಯೆಗೆ ದೊಡ್ಡ ಸ್ವರೂಪವನ್ನು ತಂದುಕೊಟ್ಟವು. ಭಾರತದ ಸಂವಿಧಾನ ದೇಶದ ಯಾವುದೇ ನಾಗರಿಕ ಯಾವುದೇ ಭಾಗದಲ್ಲಿ ಹೋಗಿ ವಾಸಿಸಿದರೂ ಅದು ವಲಸೆಯಾಗುವುದಿಲ್ಲ ಎಂದು ಕೆಲವರು ಸಮರ್ಥಿಸಬಹುದು. ಆದರೆ ಅದು ಕಾಯ್ದೆಯ ಮಾತು. ಭಾರತದ ಪ್ರಾದೇಶಿಕ ವೈವಿಧ್ಯತೆ, ಒಕ್ಕೂಟದ ವ್ಯವಸ್ಥೆ ಸೂಕ್ಷ್ಮಹೆಣಿಗೆಯಲ್ಲಿ ಜೋಡಿಸಲ್ಪಟ್ಟಿರುವುದರಿಂದ ಹೀಗೆ ಸರಳೀಕರಿಸಿ ನೋಡಲಾಗುವುದಿಲ್ಲ. ವಿಷಯ ಇಷ್ಟು ಸರಳವಾಗಿದ್ದರೆ, ಈಶಾನ್ಯ ರಾಜ್ಯಗಳು, ಬಿಹಾರ, ಒರಿಸ್ಸಾ, ಮಹಾರಾಷ್ಟ್ರ ಹಾಗು ದೇಶದ ಹಲವು ಭಾಗಗಳಲ್ಲಿ ಈಗ ನಡೆಯುತ್ತಿರುವ ಸಂಘರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತನ್ನು ಹೇಳಬೇಕಾಗುತ್ತದೆ. ಇದು ವಲಸೆಗೆ ಸಂಬಂಧಿಸಿದ ವಿಚಾರಸಂರ್ಕಿಣವಲ್ಲವಾದ್ದರಿಂದ ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಬಯಸುವುದಿಲ್ಲ. ಆ ವಿಷಯದಲ್ಲಿ ನನಗೆ ನನ್ನದೇ ಆದ ನಿಲುವುಗಳಿವೆ, ಅದನ್ನು ಬೇರೆ ಸಂದರ್ಭಗಳಲ್ಲಿ ಹೇಳುತ್ತೇನೆ.

ಮತ್ತೆ ಈಶಾನ್ಯ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸು ಹೋದ ವಿಷಯಕ್ಕೆ ಬರುವುದಾದರೆ, ಯಾವುದೇ ನಾಗರಿಕರು ತಾವು ಇರುವ ಜಾಗದಿಂದ ಭಯಭೀತರಾಗಿ, ಪ್ರಾಣರಕ್ಷಣೆಗಾಗಿ ಮತ್ತೊಂದು ಜಾಗಕ್ಕೆ ಹೋಗುವ ಪರಿಸ್ಥಿತಿ ಎಲ್ಲೂ ಉದ್ಭವವಾಗಬಾರದು. ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಇದನ್ನು ಒಪ್ಪುವುದಿಲ್ಲ. ಇದನ್ನು ಸಂಭ್ರಮಿಸುವ ಮನಸ್ಥಿತಿಯವರೂ ನಾಗರಿಕ ಸಮಾಜದಲ್ಲಿ ಇರಬಾರದು. ಇಂಥ ಪರಿಸ್ಥಿತಿ ಎದುರಾದರೆ ಅದನ್ನು ಮನುಷ್ಯತ್ವದ ಹಿನ್ನೆಲೆಯಲ್ಲೇ ಮೊದಲು ನೋಡಬೇಕಾಗುತ್ತದೆ.

ಇದು ಮಾಹಿತಿ ತಂತ್ರಜ್ಞಾನದ ಯುಗ. ಎಸ್ಎಂಎಸ್‌ಗಳು, ಸೋಷಿಯಲ್ ನೆಟ್‌ವರ್ಕ್‌ಗಳ ಕಾಲ. ಸೋಷಿಯಲ್ ನೆಟ್‌ವರ್ಕ್‌ಗಳು ಮುಖ್ಯವಾಹಿನಿಯ ಮೀಡಿಯಾ ಹೇಳದ ಸತ್ಯಗಳನ್ನು ಬಿಚ್ಚಿಡುತ್ತ ಹೋಗುತ್ತಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಆದರೆ ಅದೇ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಯಾವ, ಯಾರ ಅಂಕೆಯೂ ಇಲ್ಲದಂತೆ ಬೆಳೆಯುತ್ತಿರುವುದು, ಸಾಮಾಜಿಕ ಜವಾಬ್ದಾರಿಗಳು ಇಲ್ಲದ ವ್ಯಕ್ತಿ, ಗುಂಪುಗಳು ಅಶಾಂತಿಯನ್ನು ಹರಡಲು, ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಸಾಮಾಜಿಕ ತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಿಂದಾಗಿ ಅನೇಕ ರೀತಿಯ ಅಪಾಯಗಳನ್ನು ನಮ್ಮ ಮುಂದೆ ತಂದೊಡ್ಡುತ್ತಿವೆ.

ಅಸ್ಸಾಂ ಸಂಘರ್ಷದ ವಿಷಯದಲ್ಲಿ ಹಬ್ಬಿದ ವದಂತಿಗಳಲ್ಲಿ ಸೋಷಿಯಲ್ ಮೀಡಿಯಾದ ಪಾತ್ರವೇ ಹೆಚ್ಚಿನದು. ನಾನು ಗಮನಿಸಿದಂತೆ ಅಸ್ಸಾಂ ಸಂಘರ್ಷ ಶುರುವಾದ ಸಂದರ್ಭದಲ್ಲಿ ಚಿತ್ರ ವಿಚಿತ್ರ ಫೊಟೋಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡವು. ಇಂಥ ಫೊಟೋಗಳನ್ನು ಶೇರ್ ಮಾಡಿದವರು ಒಂದೋ ಹಿಂದೂ ಮೂಲಭೂತವಾದಿಗಳಾಗಿದ್ದರು ಅಥವಾ ಮುಸ್ಲಿಂ ಮೂಲಭೂತವಾದಿಗಳಾಗಿದ್ದರು. ಹಿಂದೂ ಮೂಲಭೂತವಾದಿಗಳು ಶೇರ್ ಮಾಡಿದ ಫೊಟೋಗಳಿಗೆ ಕೊಟ್ಟ ವಿವರಣೆ ಪ್ರಕಾರ ಮುಸ್ಲಿಮರು ಹಿಂದೂಗಳನ್ನು ಸಾಮೂಹಿಕ ಕಗ್ಗೊಲೆ ಮಾಡುತ್ತಿದ್ದರು, ಮುಸ್ಲಿಂ ಮೂಲಭೂತವಾದಿಗಳು ಅಂಟಿಸಿದ ಫೊಟೋಗಳ ಪ್ರಕಾರ ಹಿಂದೂಗಳು ಮುಸ್ಲಿಮರನ್ನು ಸಾಮೂಹಿಕ ಕಗ್ಗೊಲೆ ಮಾಡಿದ್ದರು. ಈ ಫೊಟೋಗಳ ನಿಜಾಯಿತಿಯನ್ನು ಪ್ರಶ್ನಿಸುವವರು ಯಾರು? ಈ ಫೊಟೋಗಳು ಅಸ್ಸಾಂ ಸಂಘರ್ಷಕ್ಕೆ ಸಂಬಂಧಿಸಿದ್ದೇ ಅಲ್ಲವೇ ಎಂಬುದನ್ನು ವಿವೇಚನೆಯಿಂದ ಗಮನಿಸುವ ಜವಾಬ್ದಾರಿಯೂ ಇಲ್ಲದಂತೆ ಒಬ್ಬರಿಂದ ಒಬ್ಬರಿಗೆ ಶೇರ್ ಆಗತೊಡಗಿದ್ದವು.

ಇದಾದ ನಂತರ ಭಗತ್ ಸಿಂಗ್ ಕ್ರಾಂತಿ ಸೇನೆ ಎಂಬ ಸಂಘಟನೆಯೊಂದು ಪ್ರಕಟಣೆ ನೀಡಿ, ಕರ್ನಾಟಕದಲ್ಲಿರುವ ಈಶಾನ್ಯ ರಾಜ್ಯಗಳ ನಾಗರಿಕರನ್ನು ರಂಜಾನ್ ಮುಗಿಯುವ ಸಂದರ್ಭದಲ್ಲಿ ಕೊಂದು ಹಾಕಲು ಮುಸ್ಲಿಂ ಸಂಘಟನೆಗಳು ಫತ್ವಾ ಹೊರಡಿಸಿವೆ, ಈಶಾನ್ಯ ರಾಜ್ಯದ ನಾಗರಿಕರು ಸಹಾಯಕ್ಕಾಗಿ ತಮ್ಮ ದೂರವಾಣಿ ಸಂಖ್ಯೆಯನ್ನು (ಹೆಲ್ಪ್ ಲೈನ್) ಸಂಪರ್ಕಿಸಿ, ಎಂದು ಹೇಳಿತ್ತು. ಈ ಥರದ ವದಂತಿಗಳು ಒಂದಕ್ಕೊಂದು ಬೆಳೆದು ಈಶಾನ್ಯ ರಾಜ್ಯದ ನಾಗರಿಕರಿಗೆ ಸಾಮೂಹಿಕ ಎಸ್ಎಂಎಸ್‌ಗಳ ರೂಪದಲ್ಲಿ ಭೀತಿ ಹುಟ್ಟಿಸಲಾರಂಭಿಸಿದವು. ಆಗ ಶುರುವಾಗಿದ್ದೇ ವಾಪಾಸು ತವರಿಗೆ ಹೋಗುವ ತವಕ.

ಈಶಾನ್ಯ ರಾಜ್ಯಗಳ ನಿವಾಸಿಗಳು ವಾಪಾಸು ಹೋಗಲು ಆರಂಭಿಸಿದ ಮೊದಲನೇ ದಿನ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಹಸನವೇ ನಡೆದುಹೋಯಿತು. ಈ ನಾಗರಿಕರು ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ತಮ್ಮ ಸಮವಸ್ತ್ರ ಸಮೇತ ಆರ್‌ಎಸ್‌ಎಸ್ ಕಾರ್ಯಕರ್ತರು ಹಾಜರಾದರು. ಪೊಲೀಸರು ತಂಡೋಪತಂಡವಾಗಿ ಬಂದು ನಿಂತರು. ಅದಾದ ಮೇಲೆ ಮಂತ್ರಿ ಮಹೋದಯರು ಒಬ್ಬರಾದ ಮೇಲೊಬ್ಬರಂತೆ ಬಂದುನಿಂತರು. ಆರ್‌ಎಸ್‌ಎಸ್ ಕಾರ್ಯಕರ್ತರು ಹೇಳಿಕೊಂಡ ಪ್ರಕಾರ ಅವರು ಅಸ್ಸಾಂ ನಾಗರಿಕರಿಗೆ ರಕ್ಷಣೆ ನೀಡಲು ಬಂದಿದ್ದರು! ರಕ್ಷಣೆ ಕೊಡಲು ಪೊಲೀಸರು ಇರುವಾಗ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರಿಗೇನು ಕೆಲಸ? ಈ ಪ್ರಶ್ನೆ ಪೊಲೀಸ್ ಅಧಿಕಾರಿಗಳಿಗೆ ಹೊಳೆಯಲೇ ಇಲ್ಲವೆನ್ನಿಸುತ್ತದೆ. ಮಂತ್ರಿ ಮಹೋದಯರು ವಾಪಾಸು ಹೋಗಬೇಡಿ ಎಂದು ಕಾಡಿ ಬೇಡಿ ಟಿಕೆಟ್ ಬುಕ್ ಮಾಡಿದ್ದ ಜನರನ್ನು ವಾಪಾಸು ಹೋಗಲು ಪುಸಲಾಯಿಸುತ್ತಿದ್ದರು. ಪೊಲೀಸರಿಗೆ ಮಾಮೂಲಿನಂತೆ ಎಲ್ಲರನ್ನೂ ಕಾಯುವ ಕೆಲಸ.

ಕನ್ನಡ ಮೀಡಿಯಾ ಇದೆಲ್ಲವನ್ನೂ ಅತಿರಂಜಿತವಾಗಿ ಚಿತ್ರಿಸಿತು. ನಿಜಕ್ಕೂ ಈಶಾನ್ಯ ರಾಜ್ಯದ ಜನರ ಸಾಮೂಹಿಕ ನರಮೇಧ ನಡೆದೇಹೋಗುವುದೇನೋ ಎಂಬಂತೆ ಬಣ್ಣಬಣ್ಣದ ಸುದ್ದಿಗಳು ಪ್ರಕಟಗೊಂಡವು. ಸಾಮಾನ್ಯ ಜನರಿಗೆ ಅರ್ಥವೇ ಆಗದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಪತ್ರಿಕೆಗಳು ಹೋಗಲಿಲ್ಲ.

’ವಿಜಯ ಕರ್ನಾಟಕ’  ಮುಖಪುಟದಲ್ಲೇ ಒಂದು ವರದಿ ಪ್ರಕಟಿಸಿತು. ವದಂತಿ ಮೂಲ ಹುಟ್ಟಿದ್ದು ಎಲ್ಲಿಂದ ಎಂಬುದನ್ನು ವಿವರಿಸುವ ವರದಿ ಅದು. ಬಹುಶಃ ಅದನ್ನು ಹೊರತುಪಡಿಸಿದರೆ ಇಷ್ಟು ರಂಪಕ್ಕೆ ಕಾರಣವಾದ ಹಿನ್ನೆಲೆ ಏನು ಎಂಬುದನ್ನು ವಿವರಿಸುವ ಗೋಜಿಗೆ ನಮ್ಮ ಪತ್ರಿಕೆಗಳು ಹೋಗಲಿಲ್ಲ. ಭಗತ್ ಸಿಂಗ್ ಕ್ರಾಂತಿ ಸೇನೆಯು ನೀಡಿದ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಿ ಮಾತನಾಡಿದ್ದ ವಿಜಯ ಕರ್ನಾಟಕ ವರದಿಗಾರ, ಯಾವ ಮುಸ್ಲಿಂ ಸಂಘಟನೆ ಫತ್ವಾ ನೀಡಿದೆ? ನಿಮ್ಮ ಬಳಿ ಮಾಹಿತಿ ಇದ್ದರೆ ನೀಡಿ ಎಂದು ಪ್ರಶ್ನೆ ಮಾಡಿದ್ದರು. ಆದರೆ ಅವರಿಂದ ಯಾವ ಉತ್ತರವೂ ಬಂದಿರಲಿಲ್ಲ. ಇದೆಲ್ಲವೂ ಆ ಮುಖಪುಟದ ವರದಿಯಲ್ಲಿ ಪ್ರಕಟಗೊಂಡಿತ್ತು. ಈ ಕ್ಷಣದವರೆಗೆ ಈ ವದಂತಿಗಳನ್ನು ಯಾಕಾಗಿ ಹಬ್ಬಿಸಲಾಯಿತು? ಹಬ್ಬಿಸಿದವರು ಯಾರು? ಇದರ ಪ್ರಯೋಜನ ಯಾರಿಗಾಯಿತು? ಈ ಪ್ರಶ್ನೆಗಳನ್ನು ಇಟ್ಟುಕೊಂಡು ವರದಿ ಮಾಡುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದನ್ನು ನಾನು ಹೇಳುವ ಹೊತ್ತಿನಲ್ಲಿ ಪತ್ರಿಕೆಗಳು ಏನನ್ನು ವರದಿ ಮಾಡಬೇಕಿತ್ತು? ಈಶಾನ್ಯ ಜನರು ವಾಪಾಸು ಹೋಗಿದ್ದನ್ನು ಬರೆದಿದ್ದೇ ತಪ್ಪಾ ಎಂದು ನೀವು ಪ್ರಶ್ನಿಸಬಹುದು. ನಿಜ, ಈಶಾನ್ಯ ರಾಜ್ಯದ ಜನರು ಅಸಹಜವಾಗಿ ಬೆಂಗಳೂರು ಬಿಟ್ಟು ಹೊರಟಿದ್ದನ್ನು ವರದಿ ಮಾಡುವುದು ಸರಿ. ಆದರೆ ಇಡೀ ವರ್ತಮಾನದ ಹಿಂದಿನ ಹುನ್ನಾರಗಳನ್ನು ಬಿಡಿಸಿಡುವ ಯತ್ನವನ್ನು ಯಾವ ಪತ್ರಿಕೆಯೂ ಮಾಡಲಿಲ್ಲ.

ನಾನು ಒಂದು ಮಾತನ್ನು ಹೇಳುತ್ತೇನೆ, ಇಲ್ಲಿರುವ ಈಶಾನ್ಯ ರಾಜ್ಯದ ನಾಗರಿಕರು ತಪ್ಪು ತಿಳಿಯಬಾರದು. ನಿಮ್ಮ ಬಗೆ ಹೃದಯಪೂರ್ವಕವಾದ ಕಾಳಜಿ ಇಟ್ಟುಕೊಂಡೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ಬಿಜೆಪಿ ಸರ್ಕಾರ ಬಂದ ನಂತರ ಭೀಕರ ಸ್ವರೂಪದ ನೆರೆ ಪ್ರವಾಹ ಉತ್ತರ ಕರ್ನಾಟಕದ ಲಕ್ಷಾಂತರ ಜನರ ಬದುಕನ್ನೇ ಛಿದ್ರಗೊಳಿಸಿತು. ನೂರಾರು ಜನರು ಸತ್ತರು. ಸಾವಿರಾರು ಮಂದಿ ಮನೆಮಠ ಕಳೆದುಕೊಂಡರು. ಊರೂರೇ ನಾಶವಾಯಿತು. ಹೀಗೆ ಪ್ರಕೃತಿ ವಿಕೋಪದಿಂದ ನೊಂದು ಬೆಂದವರ ರಕ್ಷಣೆಗೆ ಈ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ತನ್ನ ಉತ್ತರದಾಯಿತ್ವವನ್ನು ನಿಭಾಯಿಸಲೇ ಇಲ್ಲ. ಸಂತ್ರಸ್ಥರಿಗೆ ಮೂರು ವರ್ಷ ಕಳೆದರೂ ಮನೆಗಳನ್ನು ಕಟ್ಟಿಕೊಡುವ ಕೆಲಸ ಈ ಸರ್ಕಾರದಿಂದ ಆಗಿಲ್ಲ. ಈ ವರ್ಷ ಕಳೆದ ಒಂದು ದಶಕದಲ್ಲಿ ಕಾಣದಂತ ಭೀಕರ ಬರ ಅದೇ ಉತ್ತರ ಕರ್ನಾಟಕವನ್ನು ಬಾಧಿಸುತ್ತಿದೆ. ಜನ ತಂಡೋಪತಂಡವಾಗಿ ಮಹಾನಗರ, ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದೇ ಸರ್ಕಾರದ ಮಂತ್ರಿಯೊಬ್ಬರು ಹೇಳಿದ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಯಸುತ್ತೇನೆ. “ಉತ್ತರ ಕರ್ನಾಟಕದ ಜನರಿಗೆ ಗುಳೆ ಹೋಗುವುದೊಂದು ಚಟ, ಅದಕ್ಕಾಗಿ ಗುಳೆ ಹೋಗುತ್ತಾರೆ,” ಎಂದರು ಒಬ್ಬ ಘನತೆವತ್ತ ಮಂತ್ರಿ.

ಇಂಥ ಸರ್ಕಾರ ಈಶಾನ್ಯ ರಾಜ್ಯದ ನಾಗರಿಕರು ತಾತ್ಕಾಲಿಕವಾಗಿ ತಮ್ಮ ರಾಜ್ಯಗಳಿಗೆ ಹೊರಟು ನಿಂತಾಗ ತೋರಿದ ಕಾಳಜಿ ಎಷ್ಟು ಪ್ರಮಾಣದಲ್ಲಿ ಪ್ರಾಮಾಣಿಕವಾಗಿತ್ತು ಎಂಬ ಪ್ರಶ್ನೆ ಎಂಥ ದಡ್ಡರನ್ನಾದರೂ ಕಾಡುತ್ತದೆ. ಸಚಿವರೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಪ್ರಕಾರ ಸುಮಾರು ಆರುಗಂಟೆ ಅವರು ರೈಲ್ವೆ ನಿಲ್ದಾಣದಲ್ಲೇ ಇದ್ದು ಈಶಾನ್ಯ ರಾಜ್ಯದ ನಾಗರಿಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಜತೆಯಲ್ಲಿ ಪೊಲೀಸರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು. ಈ ಮಂತ್ರಿ ಎಂದೂ ಬರ ಬಂದು ಬವಣೆ ಅನುಭವಿಸುತ್ತಿರುವ ಜನರಿರುವ ಒಂದೇ ಒಂದು ಹಳ್ಳಿಯಲ್ಲಿ ಒಂದೇ ಒಂದು ಗಂಟೆ ಇದ್ದುಬಂದವರಲ್ಲ. ಯಾಕೆ ಈ ಆಷಾಢಭೂತಿತನ?

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಣಿಪುರದ ಉಕ್ಕಿನ ಮಹಿಳೆ ಐರೋನ್ ಶರ್ಮಿಳಾ ದೇವಿ ಕಳೆ 12 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ. ಒಂದೆಡೆ ಬಂಡುಕೋರರಿಂದ ಮತ್ತೊಂದೆಡೆ ನಮ್ಮದೇ ಸೈನ್ಯದಿಂದ ಮಣಿಪುರಿಗಳು ದೌರ್ಜನ್ಯ, ಕೊಲೆ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಆರ್‌ಎಸ್‌ಎಸ್ ಸಂಘಟನೆ ಎಂದಾದರೂ ಶರ್ಮಿಳಾಗೆ ಬೆಂಬಲ ಸೂಚಿಸಿದೆಯಾ? ಮಣಿಪುರಿ ಜನರ ನೋವಿಗೆ, ಸಂಕಟಕ್ಕೆ ಸ್ಪಂದಿಸಿದೆಯಾ? ಇಲ್ಲದಿದ್ದಲ್ಲಿ ಇದ್ದಕ್ಕಿದ್ದಂತೆ ಈಶಾನ್ಯ ರಾಜ್ಯದ ಜನರ ಬಗ್ಗೆ ಈ ಕಾಳಜಿ ಹುಟ್ಟಿಕೊಂಡಿದ್ದಾದರೂ ಹೇಗೆ?

ಇದೆಲ್ಲವೂ ಆಳುವ ಬಿಜೆಪಿ ಸರ್ಕಾರದ ಒಂದು ರಾಜಕೀಯ ಅಜೆಂಡಾದ ಭಾಗ, ಆರ್‌ಎಸ್‌ಎಸ್  ಪ್ರತಿಪಾದಿಸುತ್ತ ಬಂದಿರುವ ಹಿಂದೂರಾಷ್ಟ್ರ ನಿರ್ಮಾಣದ ಷಡ್ಯಂತ್ರದ ಒಂದು ಗಂಭೀರ ಹೆಜ್ಜೆ  ಎಂದು ನಮ್ಮ ಪತ್ರಿಕೆಗಳಿಗೆ ಯಾಕೆ ಹೊಳೆಯಲಿಲ್ಲ? ಈಶಾನ್ಯ ರಾಜ್ಯದ ನಾಗರಿಕರಿಗೆ ಸಹಾನುಭೂತಿ ತೋರಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರ ಜತೆ ನಿಂತು ಈ ಸಚಿವರುಗಳು ಮಾಡಿದ ನಾಟಕಗಳನ್ನು ಬಯಲುಗೊಳಿಸುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್ ಎಂಬ ವೆಬ್‌ಸೈಟ್ ಒಂದರಲ್ಲಿ ಒಂದು ಬರೆಹವನ್ನು ಗಮನಿಸಿದೆ. ಅಸ್ಸಾಂ ನಲ್ಲಿ ನಡೆದ ಸಂಘರ್ಷದ ತಲಸ್ಪರ್ಶಿ ಚಿತ್ರಣ ಅದರಲ್ಲಿತ್ತು. ಅಷ್ಟಕ್ಕೂ ಅಸ್ಸಾಂನಲ್ಲಿ ನಡೆದದ್ದು ಹಿಂದೂ-ಮುಸ್ಲಿಂ ಮತೀಯ ಸಂಘರ್ಷ ಅಲ್ಲವೇ ಅಲ್ಲ. ಅದು ಜನಾಂಗೀಯ ದ್ವೇಷಕ್ಕೆ ಹುಟ್ಟಿಕೊಂಡ ಗಲಭೆ. ಭೂಮಿಯ ಮಾಲಿಕತ್ವಕ್ಕಾಗಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ಉಂಟಾದ ಸಂಘರ್ಷವದು. ಇಂಥ ಸ್ಪಷ್ಟ ಮಾಹಿತಿಯನ್ನು ಕೊಡುವ ಕೆಲಸವನ್ನು ಮುಖ್ಯವಾಹಿನಿಯ ಪತ್ರಿಕೆಗಳು ನೀಡಬೇಕೆಂದು ನಾಗರಿಕ ಸಮಾಜದ ಸ್ವಾಸ್ಥವನ್ನು ಉಳಿಸಬಯಸುವ ಎಲ್ಲ ಮನಸುಗಳು ಬಯಸುವುದು ಸಹಜ. ಅಸ್ಸಾಂನ ಬೋಡೋಗಳು ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಅಲ್ಲಿರುವ ಜನರೇ ಹೇಳಬೇಕು. ಹೀಗಿರುವಾಗ ಹಿಂದೂ-ಮುಸ್ಲಿಂ ಸಂಘರ್ಷದ ರೂಪ ಪಡೆದುಕೊಂಡಿದ್ದಾದರೂ ಹೇಗೆ? ಇದನ್ನು ಪ್ರಶ್ನಿಸಬೇಕಾದವರು ಯಾರು? ಕನ್ನಡ ಮೀಡಿಯಾಗಳೇಕೆ ಆಳಕ್ಕೆ ಇಳಿದು ವರದಿ ಮಾಡಲಿಲ್ಲ?

ಈಶಾನ್ಯ ರಾಜ್ಯದ ಜನರು ಭೀತರಾಗಿ ತಮ್ಮ ರಾಜ್ಯಗಳಿಗೆ ಹೊರಟಿದ್ದಂತೂ ನಿಜ. ಆದರೆ ಅವರಲ್ಲಿದ್ದ ಇದ್ದ ಭೀತಿಯನ್ನು ಹೆಚ್ಚಿಸುವ ಕೆಲಸವನ್ನು ನಮ್ಮ ರಾಜಕಾರಣಿಗಳು, ಧರ್ಮ ರಕ್ಷಕ ಸಂಘಟನೆಗಳು, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮಾಡಿದವು. ಯಾರಿಗೂ ಸತ್ಯ ಹುಡುಕಿಕೊಳ್ಳುವ ಅಗತ್ಯವೂ ಕಾಣಲಿಲ್ಲ. ಬೆಂಗಳೂರಿನ ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ಮಾತನಾಡಿಸಿ, ಅವರಿಂದ ಹೇಳಿಕೆ ಪಡೆಯುವ ಪ್ರಯತ್ನಗಳೂ ನಮ್ಮ ಪತ್ರಿಕೆಗಳಿಂದ ಸರಿಯಾದ ಪ್ರಮಾಣದಲ್ಲಿ ನಡೆಯಲಿಲ್ಲ. ಕೆಲವು ಮುಸ್ಲಿಂ ಸಂಘಟನೆಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ತೆರಳಿ ಇಲ್ಲಿ ಭೀತಿಗೊಳ್ಳುವಂಥದ್ದು ಏನೂ ಇಲ್ಲ, ನಾವೆಲ್ಲರೂ ಅನ್ಯೋನ್ಯವಾಗಿರೋಣ ಎಂದು ಹೇಳಿದ್ದೂ ಸಹ ಸರಿಯಾದ ರೀತಿಯಲ್ಲಿ ವರದಿಯಾಗಲಿಲ್ಲ.

ವದಂತಿಕೋರರು, ಹಿಂಸಾವಿನೋದಿಗಳು, ಸರ್ಕಾರ, ಧರ್ಮರಕ್ಷಕ ಸಂಘಟನೆಗಳು ಮತ್ತು ಮೀಡಿಯಾ ಒಟ್ಟಾಗಿ ಸೇರಿ ಮಾಡಿದ್ದೇನೆಂದರೆ ಹುಸಿಶತ್ರುಗಳನ್ನು ಕಲ್ಪಿಸಿಕೊಂಡು ಗಾಳಿಯಲ್ಲಿ ಗುದ್ದಾಡಿದ್ದು. ಇಡೀ ಪ್ರಹಸನದಲ್ಲಿ ಖಳನಾಯಕನ ಸ್ಥಾನಕ್ಕೆ ಬಲವಂತವಾಗಿ ಕೂರಿಸಲಾಗಿದ್ದು ಮುಸ್ಲಿಂ ಸಮುದಾಯವನ್ನು. ಇಡೀ ಬೆಂಗಳೂರಿನಲ್ಲಿ ಯಾವ ರೀತಿಯ ಗಲಭೆ ನಡೆಯದಿದ್ದರೂ, ಹಿಂಸಾಚಾರ ಸಂಭವಿಸದಿದ್ದರೂ ಅದರ ಹೊಣೆಯನ್ನು ಮುಸ್ಲಿಂ ಸಮುದಾಯದ ಮೇಲೆ ಹೊರಿಸಲಾಯಿತು. ಇದಲ್ಲದೆ ಕರ್ನಾಟಕದ ಮಾನವನ್ನು ವಿನಾಕಾರಣ ಹರಾಜು ಹಾಕಲಾಯಿತು. ಬಿಜೆಪಿ ಸರ್ಕಾರಕ್ಕೆ ಮತ್ತು ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ತನ್ನ ಹಿಂದುತ್ವದ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಚಲಾವಣೆಗೆ ತಂದ ಸಂತೋಷ. ಮಂತ್ರಿಗಳಿಗೆ ನ್ಯಾಷನಲ್ ಟೆಲಿವಿಷನ್ ಚಾನಲ್ ಗಳಲ್ಲಿ ಮಿರಮಿರನೆ ಮಿಂಚಿದ ಖುಷಿ. ಇಲ್ಲಿ ಪ್ರದರ್ಶನದ ವಸ್ತುಗಳಾಗಿದ್ದು ಬಡಪಾಯಿ ಈಶಾನ್ಯ ರಾಜ್ಯದ ಜನತೆ.

ಮೀಡಿಯಾ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂಬುದು ಪ್ರಜ್ಞಾವಂತರ ಅಪೇಕ್ಷೆ. ಆದರೆ ಕನ್ನಡ ಮೀಡಿಯಾ ಸೇರಿದಂತೆ ಮೀಡಿಯಾ ಸಂಪೂರ್ಣವಾಗಿ ಅಪ್ಪಟ ವ್ಯಾಪಾರಿಗಳ ಕೈಗೆ, ರಾಜಕಾರಣಿಗಳ ಕೈಗೆ ಸಿಕ್ಕಿದೆ. ಹೀಗಾಗಿ ಜನರನ್ನು ಭೀತಿಯಿಂದ ಕಾಪಾಡಬೇಕಾದ ಮಾಧ್ಯಮವೇ ಇಂದು ಭಯೋತ್ಪಾದನೆಯ ಕೆಲಸದಲ್ಲಿ ತೊಡಗಿದೆ. ಈಶಾನ್ಯ ರಾಜ್ಯಗಳ ಜನರಲ್ಲಿ ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ, ನಂದಿನಿ ಹಾಲಿನಲ್ಲಿ ವಿಷ ಬೆರೆಸಲಾಗಿದೆ ಎಂಬ ವಿಷಯದಲ್ಲಾಗಲೀ, ಮೆಹಂದಿ ಹಚ್ಚಿಕೊಂಡ ಕೈಗಳಿಗೆ ಅಪಾಯವಾಗಲಿದೆ ಎಂದು ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ ಅಥವಾ ಬೆಂಗಳೂರು-ಹುಬ್ಬಳ್ಳಿಗಳಲ್ಲಿ ಬಂಧಿತ ಶಂಕಿತ ಆರೋಪಿಗಳ ವಿಷಯದಲ್ಲಾಗಲೀ, ನಮ್ಮ ಮೀಡಿಯಾ ಮಾಡಿದ್ದು ಭೀತಿ ಹಬ್ಬಿಸುವ ಭಯೋತ್ಪಾದನೆಯ ಕೆಲಸವನ್ನೇ.

ಕಡೆಯದಾಗಿ ಇಲ್ಲಿರುವ ಈಶಾನ್ಯ ರಾಜ್ಯಗಳ ಜನರು ಮತ್ತು ದೇಶದ ಇತರ ಯಾವುದೇ ಭಾಗದಿಂದ ಬಂದಿರಬಹುದಾದ ಜನರಿಗೆ ನನ್ನ ಮನವಿಯೊಂದಿದೆ. ಇದು ನಾನು ನನ್ನ ಭಾಷಾ ದುರಹಂಕಾರದಿಂದ ಹೇಳುತ್ತಿರುವ ಮಾತಲ್ಲ. ನಾನು ಆಂಧ್ರಪ್ರದೇಶದಲ್ಲಿ ಮೂರು ತಿಂಗಳಿದ್ದೆ. ತೆಲುಗು ಭಾಷೆ ಅರ್ಧದಷ್ಟು ಕಲಿತುಬಿಟ್ಟೆ. ನೀವು ಐದು ಹತ್ತು ವರ್ಷಗಳಿಂದ ಇಲ್ಲಿದ್ದೀರಿ. ಕನ್ನಡ ಭಾಷೆ ಕಲಿತಿಲ್ಲ, ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ಕೆಲವು ಬಡಾವಣೆಗಳಲ್ಲಿ ನಿಮ್ಮದೇ ತಂಡಗಳಲ್ಲಿ ಬದುಕುತ್ತಿದ್ದೀರಿ. ಇಲ್ಲಿನ ಜನ, ಸಂಸ್ಕೃತಿ, ಭಾಷೆ, ಸಮಾಜ ಯಾವುದನ್ನೂ ನೀವು ಪರಿಚಯ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಹೀಗಾಗಿ ಇಲ್ಲಿನ ಜನರೊಂದಿಗೆ ಒಂದು ಆರೋಗ್ಯಕರ ಸಂವಹನವೂ ನಿಮಗೆ ಸಾಧ್ಯವಾಗಿಲ್ಲ. ಇಂಥ ವದಂತಿಗಳು ಹಬ್ಬಿದ ಸಂದರ್ಭದಲ್ಲಿ ನಿಮಗೆ ಇಲ್ಲಿನ ಸ್ಥಳೀಯತೆ, ಸ್ಥಳೀಯ ಜನರ ಒಡನಾಟ, ಭಾಷೆ-ಸಂಸ್ಕೃತಿ ಅರ್ಥವಾಗಿದ್ದರೆ ಹೆದರಿ ಓಡಿಹೋಗುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಇನ್ನಾದರೂ ನೀವು ಇರುವ ಊರು, ರಾಜ್ಯದ ಭಾಷೆಯನ್ನು ಕಲಿತು, ಅಲ್ಲಿನ ಜನರೊಂದಿಗೆ ಒಡನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.

(ಮೀಡಿಯಾ ವಾಚ್, ಬೆಂಗಳೂರು ಸಂಸ್ಥೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ “ಎಕ್ಸೋಡಸ್ ಫ್ರಂ ಬೆಂಗಳೂರು, ವಾಟ್ ರೋಲ್ ಕ್ಯಾನ್ ಮೀಡಿಯಾ ಪ್ಲೇ ಇನ್ ಎ ಟೈಮ್ ಆಫ್ ಎಸ್ಎಂಎಸ್ ಅಂಡ್ ಫೇಸ್‌ಬುಕ್” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಭಾಷಣ.)

ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ


– ದಿನೇಶ್ ಕುಮಾರ್ ಎಸ್.ಸಿ


 
ಹೆಸರಾಂತ ಚಿತ್ರನಟ ಅಮೀರ್ ಖಾನ್ ಅವರ ಬಹುನಿರೀಕ್ಷೆಯ ಉದ್ದೇಶಿತ ಟೆಲಿವಿಷನ್ ಶೋ ’ಸತ್ಯಮೇವ ಜಯತೆ’ ಯಿಂದಾಗಿ ಕನ್ನಡ ಸಿನಿಮಾ-ಕಿರುತೆರೆಯಲ್ಲಿ ಚಾಲ್ತಿಯಲ್ಲಿರುವ ಡಬ್ಬಿಂಗ್ ನಿಷೇಧದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಾದವಿವಾದಗಳು ಬಿರುಸಾಗಿಯೇ ನಡೆಯುತ್ತಿದೆ. ಸತ್ಯಮೇವ ಜಯತೆಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಿಸುತ್ತೇವೆ ಎಂದು ಆಯೋಜಕರು ಘೋಷಿಸುತ್ತಿದ್ದಂತೆ, ಸಿನಿ-ಟಿವಿ ಸಂಘಟನೆಗಳು ತಮ್ಮ ಏಕತೆಯನ್ನು ಪ್ರದರ್ಶಿಸಿ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ. ಸಣ್ಣಪುಟ್ಟದಕ್ಕೂ ಕಾದಾಡಿಕೊಂಡು ಬಂದು ನ್ಯೂಸ್ ಟೆಲಿವಿಷನ್‌ಗಳ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಅಸಭ್ಯವಾಗಿ ಜಗಳವಾಡುವ ಈ ಮಂದಿ ಡಬ್ಬಿಂಗ್ ಧಾರಾವಾಹಿಯ ಕುರಿತಂತೆ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ಒಂದು ವಿಶೇಷ ಬೆಳವಣಿಗೆಯೆಂದೇ ಪರಿಗಣಿಸಬಹುದು!

ಆದರೆ ಮುಖ್ಯವಾಗಿ ಸಿನಿಮಾ-ಟಿವಿ ಸಂಘಟನೆಗಳ ಈ ಅಭೂತಪೂರ್ವ ಒಗ್ಗಟ್ಟಿಗೆ ಕಾರಣ ಹುಡುಕಿಕೊಂಡು ಹೋದರೆ ನಿರಾಶೆಯೇ ಕಾದಿರುತ್ತದೆ. ಕನ್ನಡದ ಸೂಕ್ಷ್ಮಮತಿ ನಟಿ, ಹಾಲಿ ರಾಜಕಾರಣಿಯೊಬ್ಬರು ಅಮೀರ್ ಖಾನ್ ಶೋ ಬಗ್ಗೆ ಹೇಳಿದ ಮಾತು ಗಾಬರಿ ಹುಟ್ಟಿಸುವಂತಿದೆ. ಅವರು ಶೋ ಡಬ್ ಮಾಡಿದರೆ ಮಾಡಿಕೊಳ್ಳಲಿ, ಪ್ರಸಾರ ಮಾಡಲು ಬಿಡುವವರು ಯಾರು? ಇದು ಅವರ ಮಾತು. ಉದ್ಯಮದ ಪ್ರತಿಕ್ರಿಯೆ ಈ ಧಾಟಿಯ ಪಾಳೆಗಾರಿಕೆ ಭಾಷೆಯಲ್ಲಿದ್ದರೆ ಅವುಗಳಿಗೆ ಉತ್ತರಿಸುವುದು ಕಷ್ಟ. ಆದರೂ ಕೆಲವು ಮುಖ್ಯವಾದ ಅಂಶಗಳನ್ನು ಚರ್ಚಿಸಲೇಬೇಕಾಗಿದೆ.

ಡಬ್ಬಿಂಗ್ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿರುವ ಸಿನಿಮಾ-ಟಿವಿ ಸಂಘಟನೆಗಳ ವಲಯದ ಬುದ್ಧಿಜೀವಿಗಳು ಬಳಸುತ್ತಾ ಇರುವುದು ಜಾಗತೀಕರಣದ ಭೂತವನ್ನು. ಹೀಗೆ ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಜಾಗತೀಕರಣಕ್ಕೆ ಕನೆಕ್ಟ್ ಮಾಡುವುದು ಬಲು ಸುಲಭ. ಇದು ಅತ್ಯಂತ ಬುದ್ಧಿವಂತಿಕೆಯ ಸಮರ್ಥನೆ. ಯಾಕೆಂದರೆ ಜಾಗತೀಕರಣ ಪ್ರತಿ ಮನೆಯನ್ನೂ ಪ್ರವೇಶಿಸಿದೆ. ಕುಡಿಯುವ ನೀರಿನಿಂದ ಹಿಡಿದು, ಉಸಿರಾಡುವ ಗಾಳಿಯವರೆಗೆ ಅದು ಎಲ್ಲವನ್ನೂ ಪ್ರಭಾವಿಸುತ್ತಿದೆ. ಸಮಸ್ಯೆಯನ್ನು ವಿಸ್ತಾರಗೊಳಿಸಿ ಅದಕ್ಕೊಂದು ಜಾಗತಿಕ ಆಯಾಮ ಕೊಡಲು ಸಿನಿ ಬುದ್ಧಿಜೀವಿಗಳು ಈಗ ಡಬ್ಬಿಂಗ್ ಜಾಗತೀಕರಣದ ಪಿಡುಗು ಎಂದು ಬಿಂಬಿಸುತ್ತಿದ್ದಾರೆ.

ಅಸಲಿಗೆ ಹೀಗೆ ಜಾಗತೀಕರಣವನ್ನು ಗುರಾಣಿಯನ್ನಾಗಿ ಬಳಸುವವರ ಧಾರಾವಾಹಿಗಳಿಗೆ ಜಾಹೀರಾತು ನೀಡುವವು ಬಹುರಾಷ್ಟ್ರೀಯ ಕಂಪೆನಿಗಳೇ ಆಗಿರುತ್ತವೆ. ಇವರ ಸಿನಿಮಾ ನಿರ್ಮಾಣಕ್ಕೆ ಸಹಯೋಗ ನೀಡುವ ಸಂಸ್ಥೆಗಳೂ ಅವೇ ಆಗಿರುತ್ತವೆ. ಈ ದ್ವಂದ್ವದಿಂದ ಹೊರಬರಲಾರದವರು ಡಬ್ಬಿಂಗ್ ಜಾಗತೀಕರಣದ ಉತ್ಪನ್ನ ಎಂದು ಹೇಳುವುದೇ ಒಂದು ತಮಾಷೆಯಾಗಿ ಕೇಳಿಸುತ್ತದೆ.

ಡಬ್ಬಿಂಗ್ ಏಕಸಂಸ್ಕೃತಿಯನ್ನು ಹೇರುವ ಪ್ರಯತ್ನ, ಇದು ಬಹುಸಂಸ್ಕೃತಿಗಳನ್ನು ನಾಶಪಡಿಸುತ್ತವೆ ಎಂಬುದು ಸಿನಿ ಬುದ್ಧಿಜೀವಿಗಳ ಮತ್ತೊಂದು ಗೋಳು. ಅಸಲಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಯೋಗ್ಯತೆ ಸಿನಿಮಾ ಮಂದಿಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಕನ್ನಡದಲ್ಲಿ ನಿರ್ಮಾಣವಾಗುವ ಅರ್ಧದಷ್ಟು ಸಿನಿಮಾಗಳ ಹೀರೋಗಳಿಗೆ ಸಿಗುವ ಪಾತ್ರ ರೌಡಿಯದ್ದೇ ಆಗಿರುತ್ತದೆ. ಮಿಕ್ಕ ಸಿನಿಮಾಗಳಲ್ಲೂ ರೌಡಿಜಂದೇ ಕಾರುಬಾರು. ಇದೇನು ಕನ್ನಡದ ಸಂಸ್ಕೃತಿಯೇ? ಮಚ್ಚು ಲಾಂಗು ಐಟಮ್ ಸಾಂಗುಗಳಿಲ್ಲದೆ ಸಿನಿಮಾ ಮಾಡೋದೇ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಕನ್ನಡ ಸಿನಿಮಾ ರಂಗ ತಲುಪಿದೆ. ಕನ್ನಡದ ಜನರು ಮಚ್ಚು ಸಂಸ್ಕೃತಿಯಿಂದ ಬಂದವರಾ? ಸಾಲುಮೀರಿ ಈ ಥರಹದ ಸಿನಿಮಾಗಳು ತೋಪಾಗುತ್ತಿದ್ದರೂ ಇದೇ ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುವುದಾದರೂ ಯಾಕೆ? ಇವತ್ತು ಕನ್ನಡದ ಧಾರಾವಾಹಿಗಳ ಪೈಕಿ ಟಾಪ್ ಟೆನ್‌ನಲ್ಲಿರುವ ಎಲ್ಲ ಧಾರಾವಾಹಿಗಳು ರೀಮೇಕ್ ಧಾರಾವಾಹಿಗಳು. ಅಂದರೆ ಬೇರೆ ಭಾಷೆಗಳಲ್ಲಿ ಬಂದ ಧಾರಾವಾಹಿಗಳನ್ನೇ ಕಾಪಿ ಹೊಡೆದು ನಿರ್ಮಿಸಿದ ಧಾರಾವಾಹಿಗಳು. ಇವು ಯಾವ ಸಂಸ್ಕೃತಿಯನ್ನು ಬಿಂಬಿಸುತ್ತವೆ? ವರ್ಷಗಟ್ಟಲೆ ನಡೆಯುವ ಕನ್ನಡ ಸೀರಿಯಲ್‌ಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣೇ ನಾಯಕಿ, ಹೆಣ್ಣೇ ವಿಲನ್. ಎಲ್ಲ ಸೀರಿಯಲ್‌ಗಳು ವಿಲನ್ ಹೆಣ್ಣುಗಳು ಸಾಲುಸಾಲು ಹೆಣಗಳನ್ನು ಉರುಳಿಸುವಷ್ಟು ವಿಕೃತ ಮನಸ್ಸಿನವರು. ಇವರು ಕನ್ನಡದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾರಾ? ಇದು ಕನ್ನಡ ಸಂಸ್ಕೃತಿಯಾ?

ಡಬ್ಬಿಂಗ್‌ನಿಂದ ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಘೋಷಿಸುವವರು ಮೊದಲು ಕನ್ನಡ ಸಿನಿಮಾಗಳು, ಧಾರಾವಾಹಿಗಳು ಯಾವ ಸಂಸ್ಕೃತಿಯನ್ನು ಪೋಷಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳುವಂತವರಾಗಬೇಕು. ಹಾಗೆ ನೋಡಿದರೆ ಬಹುಸಂಸ್ಕೃತಿಗಳು ಇವೆ ಎಂಬುದನ್ನೇ ಕನ್ನಡ ಸಿನಿಮಾಗಳು-ಧಾರಾವಾಹಿಗಳು ನಿರಾಕರಿಸುತ್ತವೆ. ಅಲ್ಲಿರುವುದು ಕಪ್ಪು ಬಿಳುಪು ಸಂಸ್ಕೃತಿ ಮಾತ್ರ. ಆದರ್ಶದ ಪಾತ್ರಗಳಿಗೆ ಮೇಲ್ವರ್ಗದ ಹೆಸರುಗಳಿದ್ದರೆ, ಕೇಡಿಗಳ ಹೆಸರುಗಳೆಲ್ಲ ಕೆಳವರ್ಗದವರ ಹೆಸರುಗಳೇ ಆಗಿರುತ್ತವೆ. ಹೀಗೆ ಕಪ್ಪು ಬಿಳುಪಾಗಿ ನೋಡುವ ಹಿನ್ನೆಲೆಯಲ್ಲಿ ಕೆಲಸ ಮಾಡುವ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆಮಾಡಬಹುದು. ಆದರೆ ನಾಡಿನ ನೂರಾರು, ಸಾವಿರಾರು ಸಂಸ್ಕೃತಿ-ಉಪಸಂಸ್ಕೃತಿಗಳಿಗೆ ಈತನಕ ಕುರುಡಾಗೇ ಇರುವ, ಆ ಕಡೆಗೆ ಕಣ್ಣುಹಾಯಿಸಿಯೂ ನೋಡದ ಜನರು ಬಹುಸಂಸ್ಕೃತಿಗಳು ನಾಶವಾಗುತ್ತವೆ ಎಂಬ ಅಸ್ತ್ರ ಹಿಡಿದು ಡಬ್ಬಿಂಗ್ ವಿರೋಧ ಸಮರ್ಥಿಸಿಕೊಳ್ಳುವುದೇ ನಾಚಿಕೆಗೇಡು. ಇವತ್ತಿಗೂ ಕನ್ನಡ ಸಿನಿಮಾ-ಧಾರಾವಾಹಿಗಳಿಗೆ ಇತರ ಭಾಷೆಗಳ ಸಿನಿಮಾ-ಧಾರಾವಾಹಿಗಳೇ ಕಚ್ಚಾ ಸರಕು. ಇತರೆ ಭಾಷೆ ಸಿನಿಮಾ-ಧಾರಾವಾಹಿಗಳನ್ನು ಒಂದೋ ನಿರ್ಭಿಡೆಯಿಂದ ಮಕ್ಕೀಕಾಮಕ್ಕೀ ರೀಮೇಕ್ ಮಾಡುತ್ತಾರೆ. ಅಥವಾ ಅವುಗಳ ದೃಶ್ಯಗಳನ್ನು ಕದಿಯುತ್ತಾರೆ. ಆಗ ಯಾವ ಸಂಸ್ಕೃತಿನಾಶ ಆಗುವುದಿಲ್ಲವೋ?

ಈ ಸಿನಿ-ಟಿವಿ ಸಂಘಟನೆಗಳ ತರ್ಕ, ವಾದ ಏನೇ ಇರಲಿ ಕೆಲವು ಮಹತ್ವದ ಕಾರಣಗಳಿಗಾಗಿ ಡಬ್ಬಿಂಗ್ ನಿಷೇಧವನ್ನು ತೆರವುಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಈಗಲಾದರೂ ಸಿನಿಮಾ-ಟಿವಿ ರಂಗ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಡಬ್ಬಿಂಗ್‌ಗಳಿಗೆ ಅವಕಾಶ ನೀಡುವುದು ಒಳ್ಳೆಯದು. ಡಬ್ಬಿಂಗ್ ಯಾಕೆ ಬೇಕು ಎಂಬುದಕ್ಕೆ ನನಗೆ ಹೊಳೆದ ಕಾರಣಗಳು ಹೀಗಿವೆ.

1. ಮೊದಲನೆಯದಾಗಿ ಡಬ್ಬಿಂಗ್ ನಿಷೇಧ ಎಂಬ ಪದಪ್ರಯೋಗವೇ ತಪ್ಪು. ಡಬ್ಬಿಂಗ್ ನಿಷೇಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ಅದರ ಉಪ ಸಂಘಟನೆಗಳಿಗಾಗಲಿ ಡಬ್ಬಿಂಗ್ ನಿಷೇಧಿಸುವ ಯಾವ ತರಹದ ಹಕ್ಕೂ ಇಲ್ಲ. ಡಬ್ಬಿಂಗ್ ನಿಷೇಧವಾಗಲೇಬೇಕೆಂದಿದ್ದರೆ ಅದು ಕಾನೂನಾಗಿ ಜಾರಿಗೆ ಬರಬೇಕು. ಅಂಥ ಕಾನೂನುಗಳು ದೇಶದ ಯಾವ ಮೂಲೆಯಲ್ಲೂ ನಿರ್ಮಾಣವಾಗಿಲ್ಲ.

2. ಜ್ಞಾನ-ಮನರಂಜನೆಯನ್ನು ತಮಗೆ ಇಷ್ಟವಾದ ಭಾಷೆಯಲ್ಲಿ ಪಡೆದುಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಜಗತ್ತಿನ ಯಾವುದೇ ಭಾಷೆಯಲ್ಲಿ ನಿರ್ಮಾಣವಾಗಬಹುದಾದ ಸಿನಿಮಾ, ಧಾರಾವಾಹಿ, ಡಾಕ್ಯುಮೆಂಟರಿ ಇತ್ಯಾದಿಗಳು ನನಗೆ ಕನ್ನಡ ಭಾಷೆಯಲ್ಲೇ ಬೇಕು. ಜಗತ್ತನ್ನು ನಾನು ಕನ್ನಡದ ಕಣ್ಣಿನಿಂದಲೇ ನೋಡಲು ಬಯಸುತ್ತೇನೆ. ನನ್ನ ಹಕ್ಕನ್ನು ಮೊಟಕುಗೊಳಿಸುವ ಸ್ವಾತಂತ್ರ್ಯವನ್ನು, ಅಧಿಕಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ನೀಡಿಲ್ಲ.

3. ಪರಭಾಷಾ ಸಿನಿಮಾಗಳು ಮಿತಿ ಮೀರಿವೆ. ಇದಕ್ಕೆ ಕಾರಣ ಕನ್ನಡ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನೇ ಆಕರ್ಷಿಸದೇ ಇರುವುದು. ಒಳ್ಳೆಯ ಸಿನಿಮಾಗಳು ಬಂದಾಗ (ಮುಂಗಾರುಮಳೆ, ಆಪ್ತಮಿತ್ರ) ಕನ್ನಡ ಪ್ರೇಕ್ಷಕರು ಅವುಗಳನ್ನು ಗೆಲ್ಲಿಸಿದ್ದಾರೆ. ಕಳಪೆ ಸಿನಿಮಾಗಳು ಬಂದಾಗ ತಿರಸ್ಕರಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಾರದೇ ಹೋದಾಗ ಭಾಷೆ ಬಾರದಿದ್ದರೂ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆ ಸಿನಿಮಾಗಳು ಕನ್ನಡದಲ್ಲೇ ಬರುವಂತಾದರೆ ಕನ್ನಡಿಗರು ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ, ಕನ್ನಡ ವಾತಾವರಣವೂ ನಿರ್ಮಾಣವಾಗುತ್ತದೆ.

4. ಡಬ್ಬಿಂಗ್ ಚಾಲ್ತಿಗೆ ಬಂದರೆ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಕನ್ನಡ ನಿರ್ಮಾಪಕರು-ನಿರ್ದೇಶಕರು ಒಳ್ಳೆಯ ಸಿನಿಮಾ-ಧಾರಾವಾಹಿಗಳನ್ನು ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಪೈಪೋಟಿ ಹೆಚ್ಚಿದಾಗಲೇ ಗುಣಮಟ್ಟವೂ ಹೆಚ್ಚಲು ಸಾಧ್ಯವಿದೆ. ಕನ್ನಡಿಗರು ಒಳ್ಳೆಯ ಗುಣಮಟ್ಟದ ಸಿನಿಮಾ-ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

5. ಕನ್ನಡವೊಂದೇ ಗೊತ್ತಿರುವ, ಬೇರೆ ಯಾವ ಭಾಷೆಗಳೂ ಬಾರದ ಕನ್ನಡ ಪ್ರೇಕ್ಷಕರು ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶವನ್ನು ಪಡೆಯುತ್ತಾನೆ. ಟೈಟಾನಿಕ್, ಅವತಾರ್‌ನಂಥ ಸಿನಿಮಾಗಳನ್ನು ಭಾಷೆಯ ಕಾರಣಕ್ಕಾಗಿ ನೋಡದೇ ಉಳಿದಿರುವ ಕನ್ನಡಿಗರಿಗೆ ಆಗುವ ಅನ್ಯಾಯಗಳು ತಪ್ಪುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಇದು ಪಾಳೇಗಾರಿಕೆಯ ಕಾಲವಲ್ಲ. ಜನರು ತಮಗೆ ಇಷ್ಟವಾಗಿದ್ದನ್ನು ನೋಡುವ, ಕೇಳುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿದ್ದಾರೆ. ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಡಬ್ಬಿಂಗ್ ವಿರೋಧಕ್ಕೆ ಕಾರಣವಾಗಿ ತಮ್ಮ ಹೊಟ್ಟೆಪಾಡನ್ನು ವಿವರಿಸಿದರೆ ಸಿನಿ-ಟಿವಿ ಸಂಘಟನೆಗಳಿಗೆ ಪರ್ಯಾಯ ಮಾರ್ಗ ದೊರಕಿಸಿಕೊಡಲು ಸರ್ಕಾರ, ಜವಾಬ್ದಾರಿಯುತ ಸಮಾಜದ ಗಣ್ಯರು ಚಿಂತಿಸಬಹುದು. ಅದನ್ನು ಬಿಟ್ಟು, ಡಬ್ಬಿಂಗ್ ಮೂಲಕ ಜಾಗತೀಕರಣ ಪ್ರವೇಶ ಪಡೀತಾ ಇದೆ, ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಎಳಸು ಎಳಸಾಗಿ ಮಾತನಾಡುವುದನ್ನು ಈ ಜನರು ಬಿಡಬೇಕಿದೆ. ಡಬ್ಬಿಂಗ್ ಇಂದಲ್ಲ ನಾಳೆ ಬರಲೇಬೇಕು, ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ತಡೆಯುವುದಕ್ಕೆ ಯಾವ ಸಕಾರಣಗಳೂ ಯಾರ ಬಳಿಯೂ ಇಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.