Category Archives: ಪರಶುರಾಮ್ ಕಲಾಲ್

ಸಣ್ಣಕತೆ : ಮಾಧವ ಕರುಣಾ ವಿಲಾಸ

– ಪರಶುರಾಮ್ ಕಲಾಲ್

ಎಸ್ಸೆಸ್ಸೆಲ್ಸಿ ಓದಿ ಮುಂದೆ ಓದಲಾಗದೇ ಹಳ್ಳಿಯಲ್ಲೇ ಪೆಟ್ಟಿಗೆ ಅಂಗಡಿ ತೆರೆದ ಮಾಧವನಿಗೆ ಗಳಗನಾಥರ ‘ಮಾಧವ ಕರುಣ ವಿಲಾಸ’ ಕಾದಂಬರಿ ಎಷ್ಟು ಹುಚ್ಚು ಹಿಡಿಸಿತು ಎಂದರೆ, ಅದನ್ನು ಎಷ್ಟು ಸಾರಿ ಓದಿದ್ದಾನೆಯೋ ಅವನಿಗೆ ಗೊತ್ತಿಲ್ಲ. ಪ್ರತಿಬಾರಿ ಓದಿದಾಗಲೂ ಹೊಸ ಸತ್ಯ ಕಂಡವನಂತೆ ರೋಮಾಂಚನ ಸುಖ ಅನುಭವಿಸುತ್ತಿದ್ದ. ಹಂಪಿಗೆ ಅಲೆದಾಡಿ, ಅಲ್ಲಿಯ ಕಲ್ಲುಬಂಡೆಗಳು, ಗೋಪುರಗಳು, ಮಂಟಪಗಳ, ಮೂಗು, ಮುಖ ಮುರಿದ ಕೊಂಡ ಮೂರ್ತಿಗಳನ್ನು ನೋಡಿ, ‘ವೈಭವದ ನಾಡೇ ಹೇಗಾಗಿ ಹೋದಿ’ ಎಂದು ಮಮ್ಮುಲ ಮರಗುವ, ಗೋಳಾಡುವ ಪರಿಪಾಠ ಬೆಳೆಸಿಕೊಂಡಿದ್ದ.

ಕೊಲಮಿಸಾಬ್ ಗಣೇಶ್ ಬೀಡಿ ಕಟ್ಟು ಒಯ್ಯುವಾಗ ಆತನಿಗೆ ವಿಜಯನಗರದ ಬಗ್ಗೆ ಹೇಳಿ ಮಾತಿನ ಮೊನೆಯಿಂದ ಚುಚ್ಚುತ್ತಿದ್ದ. ಕೊಲಮಿಸಾಬ್‌ಗೆ ಇದ್ಯಾವದೂ ಅರ್ಥವಾಗುತ್ತಿದ್ದಿಲ್ಲ. “ಬುದ್ಧಿವಂತ ಇದ್ದಿಯಾ ಮಾಧವಪ್ಪ. ನೀನು ಇನ್ನೂ ಓದಬೇಕಿತ್ತು” ಎಂದು ಮೆಚ್ಚುಗೆ ಸೂಚಿಸಿದಾಗ ಸೂಜಿ ಚುಚ್ಚಿದ ಬಲೂನಿನಂತೆ ಪೆಚ್ಚಾಗುವ ಸರದಿ ಮಾಧವನದಾಗಿರುತ್ತಿತ್ತು. ಯಾರಾದರೂ ಗಿರಾಕಿಗಳು ‘ಏನು ಪುಸ್ತಕ ಅದು’ ಅಂತ ಕೇಳಿದರೆ ಸಾಕು, ಹಂಪಿಯನ್ನು ಸೇರಿಸಿಕೊಂಡು ತನಗೆ ತೋಚಿದಂತೆ ಇತಿಹಾಸ, ಪುರಾಣ ಎಲ್ಲವನ್ನೂ ಬಡಬಡಿಸುತ್ತಿದ್ದ. ಎಲ್ಲಾ ಕೇಳಿದ ಗಿರಾಕಿಗಳು “ಏನು ಬಿಡಪ್ಪಾ, ಎಂತೆಂತವರೇ ಬಿದ್ದು ಹೋದರು. ಹಾಳುಪಟ್ನ ಆಯಿತು, ನಡೆಬೇಕಾಗಿದ್ದು ನಡೀತು, ಯಾರ ತಪ್ಪಸೋದಕ್ಕೆ ಆಗುತ್ತೇ? ಕಥೆ ಹೇಳಿಕೊಂತ, ಚಿಲ್ಲರೆ ಪರಪಾಟು ಮಾಡಿಕೊಂಡಿಯಾ ಹುಷಾರಪ್ಪ” ಎಂದು ಹೇಳಿ ಹೋದಾಗ ಈ ಜನರಿಗೆ ಎಂದು ಬುದ್ಧಿ ಬರುತ್ತೋ ಎಂದು ಹಣೆ ಹಣೆ ಬಡಿದುಕೊಂಡು ವ್ಯಥೆ ಪಟ್ಟುಕೊಳ್ಳುತ್ತಿದ್ದ.

ರಕ್ಷಾ ಬಂಧನಕ್ಕೆ ರಾಖಿ ಕಟ್ಟಲು ಬಂದ ಯುವಕರು ಇವನ ಮಾಧವ ಕರುಣಾ ವಿಲಾಸ ಪುಸ್ತಕವನ್ನು ನೋಡಿ, ಆಗಾಗ ನಡೆಯುವ ಬೈಠಕ್‌ಗೆ ಬರಲು ಹೇಳಿ ಹೋದಾಗ ಮಾಧವನಿಗಂತೂ ಬಲು ಖುಷಿಯಾಗಿತ್ತು. ಒಂದು ಪಥ ಸಂಚಲನದಲ್ಲಿ ಚೆಡ್ಡಿ ಟೋಪಿ ಹಾಕಿಕೊಂಡು ಅದೇ ವೇಷದಲ್ಲಿ ಹಳ್ಳಿಗೆ ಬಂದಾಗ ’ಏನು ಮಾಧವಪ್ಪ ಇದು, ಚೆಡ್ಡಿ ಹಾಕಿದ್ದಿಯಾ, ಹುಷಾರಪ್ಪ, ಒಳಗಿನದೆಲ್ಲಾ ಹೊರಗೆ ಕಂಡು ಬಿಟ್ಟೀತು,’ ಎಂದು ಕಡೇ ಅಗಸಿಯಲ್ಲಿ ಕುಳಿತಿದ್ದ ಗಾಳೆಪ್ಪ ತಮಾಷೆ ಮಾಡಿದಾಗ ಅಲ್ಲಿದ್ದ ಪಟಾಲಂ ಖೊಳ್ಳು ಅಂತಾ ನಕ್ಕು ಮಾಧವ ಅಪಮಾನದಿಂದ ಕುಗ್ಗಿ ಹೋಗುವಂತೆ ಮಾಡಿ ಬಿಟ್ಟಿದ್ದ. ತಕ್ಷಣವೇ ಮನೆಗೆ ಹೋಗಿ ಚೆಡ್ಡಿ ಬಿಚ್ಚಿಟ್ಟು, ಇನ್ನೂ ಮುಂದೆ ಹಳ್ಳಿಯಲ್ಲಿ ಎಂದೂ ಚೆಡ್ಡಿ ಧರಿಸದೇ, ಪಟ್ಟಣಕ್ಕೆ ಪಥ ಸಂಚಲನಕ್ಕೆ ಹೋದಾಗ ಅಲ್ಲಿಯೇ ಧರಿಸಿ, ನಂತರ ಕಳಚಿ ತನ್ನ ಮಾಮೂಲು ಬಟ್ಟೆ ಹಾಕಿಕೊಂಡು ಬರಲು ನಿರ್ಧರಿಸಿದ್ದ.

ಹೈಸ್ಕೂಲ್ ಮೆಟ್ಟಿಲು ಏರುವ ಮೊದಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಗೆಳೆಯ ಹನುಮ ಗಾರೆ ಕೆಲಸದವನಾಗಿ ಮನೆ ಕಟ್ಟಲು ಹೋಗುತ್ತಿದ್ದ. ಆಗಾಗ ಅಂಗಡಿಯ ಬಳಿ ಹರಟೆ ಹೊಡೆಯತ್ತಿದ್ದ. ಒಮ್ಮೆ ಮಾತಿನ ನಡುವೆ, ’ಅದೇ ಕಡ್ಡಿರಾಂಪುರ ಬಳಿ ಹಂಪಿ ಗೋರಿಗಳಿದ್ದಾವಲ್ಲ ಮಾಧವ, ಒಂದು ಗೋರಿ ಎಬ್ಬಿಸಿ ಹಂಡೆ ಕಿತ್ತಿಕೊಂಡು ಹೋಗಿದ್ದಾರೆ. ಅದರಲ್ಲಿ ಹಂಡೆ ತುಂಬಾ ಬಂಗಾರ ಇತ್ತಂತೆ,’ ಎಂದು ಹೇಳಿ ಮಾಧವನ ತಲೆಯಲ್ಲಿ ಹುಳ ಬಿಟ್ಟ.

ಮರುದಿನ ಕಡ್ಡಿರಾಂಪುರದ ಗೋರಿ ಸಮೀಪವೇ ಮುಕ್ಕಾಲು ಏಕರೆ ನೀರಾವರಿ ಭೂಮಿ ಹೊಂದಿದ್ದ ಪರಮೇಶಿ ಕೂಡಾ ಅದು, ಇದು ಮಾತನಾಡುತ್ತಾ ಮಾಧವ ಗೋರಿಯ ಪ್ರಸ್ತಾಪ ಮಾಡುತ್ತಿದ್ದಂತೆ ’ರಾತ್ರಿ ಯಾವ ಸೂಳೆ ಮಕ್ಕಳು ಏನು ಕಥೆಯೋ ಬಂದು, ಗೋರಿ ಅಗೆದು ಏನೋ ತಗೊಂಡು ಹೋಗಿದ್ದಾರೆ. ಅಲ್ಲಿ ಹಂಡೇವು ಸಿಕ್ಕಿರಬೇಕು,’ ಎಂದ. ಅದು ಹಂಡೇವು ಅಂತಾ ಹೇಗೆ ಹೇಳುತ್ತಿಯಾ ಅಂತಾ ಮಾಧವ ಪತ್ತೆದಾರಿಕೆ ಮಾತು ಹೊಗೆದ. ಏ…ಅಷ್ಟು ಗೊತ್ತಾಗುವುದಿಲ್ಲವೇ ಹಂಡೇವು ಆಕಾರದಲ್ಲಿ ಕುಣಿ ಇದೆ. ಹಂಡೇವು ಕಿತ್ತಿಕೊಂಡು ಹೋಗಿದ್ದಾರೆ ಅನ್ನೋದಕ್ಕೆ ಇನ್ನೇನು ಬೇಕು ಎಂದ. ಇದು ನಿನ್ನೆಮೊನ್ನೆಯ ಮಾತಲ್ಲ, ಅಮವಾಸ್ಯೆ ಬಂತು ಅಂದರೆ ಸಾಕು, ಒಂದು ಗೋರಿ ಅಗೆದು ಹಂಡೆವು ಕಿತ್ತಿ ಒಯ್ಯುತ್ತಾರೆ. ಎಲ್ಲಾ ಗೋರಿಗಳನ್ನು, ಗುಡಿಗಳನ್ನು ಅಗೆದು ಗುಂಡಾಂತರ ಮಾಡಿದ್ದಾರೆ. ಅಲ್ಲಿ ರಂಗೋಲಿ, ಹಾಕಿ ಕುಂಕುಮ ಭಂಡಾರ ಚೆಲ್ಲಿದ್ದಾರೆ. ಅಂಜನಾ ಹಾಕಿ ನೋಡಿರಬೇಕು ಎಂದ. ಏ..ಅದೆಲ್ಲಾ ಸುಳ್ಳು ಮೂಢನಂಬಿಕೆ ಎಂದು ವಾದಿಸಿದರೂ ಅವತ್ತು ರಾತ್ರಿ ನಿದ್ದೆಯೇ ಬರಲಿಲ್ಲ. ಎದ್ದು ಕುಳಿತು ಮಾಧವ ಕರುಣ ವಿಲಾಸ ಕಾದಂಬರಿಯನ್ನು ಮತ್ತೇ ತಿರುವಿ ಹಾಕಿದ. ದೇವಿ ಕೊಳ್ಳದ ಬಳಿ ವಿಜಯನಗರ ಸಾಮ್ರಾಜ್ಯದ ಸಂಪತ್ತು ಬಚ್ಚಿಟ್ಟ ವಿವರಗಳನ್ನು ಮತ್ತೇ ಮತ್ತೇ ಓದಿದ. ಹಂಪಿಯಲ್ಲಿ ಈಗಲೂ ಸಾಕಷ್ಟು ನಿಧಿಯನ್ನು ಗುಪ್ತ ಸ್ಥಳದಲ್ಲಿ ಹೂತಿದ್ದಾರೆ. ಈ ದೇವಿಕೊಳ್ಳ ಎಲ್ಲಿದೆ? ಅದನ್ನು ಪತ್ತೆ ಹಚ್ಚಬೇಕೆಂಬ ಗುಪ್ತ ಆಸೆಯೊಂದು ಚಿಗರೊಡೆಯಿತು. ಮರುದಿನ ಅಂಗಡಿ ತೆರೆಯದೇ ಸೈಕಲ್ ತಳ್ಳಿಕೊಂಡು ಹಂಪಿಗೆ ಹೊರಟು ಬಿಟ್ಟ. ಹಂಪಿಯ ಬೆಟ್ಟ, ಗುಡ್ಡ ಸುತ್ತು ಹಾಕಿದರೂ ದೇವಿಕೊಳ್ಳ ಪತ್ತೆಯಾಗಲಿಲ್ಲ. ದೇವಿಕೊಳ್ಳ ಎಲ್ಲಿ ಬರುತ್ತೇ ಎಂದು ಯಾರನ್ನೂ ಕೇಳಿದರೂ ಯಾರು ಸರಿಯಾಗಿ ಉತ್ತರವೇ ಕೊಡಲಿಲ್ಲ. ಹೊಟ್ಟೆ ಹಸಿದು, ಬಿಸಿಲು ಹೊಡೆತ ತಾಳಲಾರದೇ ಪೆಚ್ಚುಮೊರೆಯಿಂದ ಊರಕಡೆ ಸೈಕಲ್ ತಿರುಗಿಸಿದ.

ಹಂಪಿ ಹೇಮಕೂಟದ ಮೇಲೆ ಇದ್ದ ಗುಹೆಯಲ್ಲಿ ಶಿವರಾಮ ಅವಧೂತರ ಶಿಷ್ಯ ಶಿವಶರಣಪ್ಪ ಅವರಿಂದ ಗುರುಬೋಧೆ ತೆಗೆದುಕೊಂಡು ಕೆಲವು ದಿನ ಹಂಪಿಯಲ್ಲಿಯೇ ಇದ್ದ ಅವಟುಗಾಲು ಭರಮಪ್ಪನಿಗೆ ಈ ಬಗ್ಗೆ ಖಂಡಿತ ಮಾಹಿತಿ ಇರುತ್ತೆ ಅಂತಾ ಅನ್ನಿಸಿತು. ಸಾಧುಗಳನ್ನು, ಇಂತಹ ಭಕ್ತರನ್ನು ನಾವು ಉಪೇಕ್ಷೆ ಮಾಡಿದ್ದೀವಿ. ಇದು ತಪ್ಪು ಎಂದು ಪೇಚಾಡಿಕೊಂಡ. ಕಣ್ಣಿನ ರೆಪ್ಪೆಯ ಮೇಲೆ ವಿಭೂತಿ, ಮೈ ತುಂಬಾ ವಿಭೂತಿ ಬಳಿದುಕೊಂಡಿರುವ ಅವುಟುಗಾಲು ಭರಮಪ್ಪ ಕಣ್ಣು ಮುಚ್ಚಿ ತೆರೆದರೆ ವಿಚಿತ್ರವಾಗಿ ಕಾಣುತ್ತಿದ್ದ. ಮಾತನಾಡುವಾಗ ಮಾತಿಗೊಮ್ಮೆ ಶಿವ ಶಿವ ಎನ್ನುತ್ತಿದ್ದ. ಯಾರನ್ನು ಸಂಬೋಧಿಸಿದರೂ ಶಿವ ಎಂದೇ ಮಾತನಾಡುತ್ತಿದ್ದ. ಮಕ್ಕಳನ್ನು ಶಿವ ಅಂತಹ ಮಾತನಾಡಿಸಿ ಕಿಸಿ ಕಿಸಿ ನಗುವಿಗೆ ಕಾರಣವಾಗಿದ್ದ. ಕೆಂಪು ಮಡಿವಸ್ತ್ರವನ್ನು ಯಾವಾಗಲೂ ಹಾಕಿಕೊಂಡು, ಊರ ಹೊರಗಿದ್ದ ಗುಡಿಸಲು ಮಠದೊಳಗೆ ಇರುತ್ತಿದ್ದ. ಅಲ್ಲಿಗೆ ಸಾಧುಗಳು ಬಂದು ಹೋಗುತ್ತಿದ್ದರು. ಇತನನ್ನು ಹುಡುಕಿಕೊಂಡು ಆ ಮಠಕ್ಕೆ ಹೋದಾಗ ಕೆಲವು ಸಾಧುಗಳೊಂದಿಗೆ ಗಾಂಜಾ ಸೇವನೆಯಲ್ಲಿದ್ದ ಅವುಟುಗಾಲು ಭರಮಪ್ಪ ಮಾಧವನನ್ನು ನೋಡಿ, ಕಣ್ಣಿನಲ್ಲಿ ಕುಳಿತುಕೊಳ್ಳಲು ಹೇಳಿದ. ಮಾಧವ ಒಂದೆಡೆ ಕುಳಿತ. ಶಿವಾ ಶಿವಾ ಎನ್ನುತ್ತಾ ಗಾಂಜಾ ಚಿಲುಮೆಯನ್ನು ಇನ್ನೊಬ್ಬ ಸಾಧುಗೆ ಹಸ್ತಾಂತರಿಸುವುದು. ಆತ ಜೋರಾಗಿ ಚಿಲುಮೆ ಎಳೆದು, ಮತ್ತೊಬ್ಬ ಸಾಧುವಿಗೆ ದಾಟಿಸಿದ. ಆ ಸಾಧು ಚಿಲುಮೆ ಹಿಡಿದುಕೊಂಡು ಜೋರಾಗಿ ಎಳೆದುಕೊಂಡು ಹೊಗೆ ಬಿಡದೇ ಮುಗುಮ್ಮಾಗಿ ಅವುಟುಗಾಲು ಭರಮಪ್ಪಗೆ ನೀಡಿದ. ಹೀಗೆ ಕೋ ಆಟ ನಡೆಯುತ್ತಿತ್ತು. ಗಾಂಜಾ ಚಿಲುಮೆ ಕೊಡುವಾಗ ಎರಡೂ ಕೈಯಿಂದ ಅದನ್ನು ಅರ್ಪಿಸುವ ರೀತಿಯಲ್ಲಿಯೆ ಒಂದು ರಿಚ್ಯುಯಲ್ ಇತ್ತು. ಏನು ಮಾಧವಪ್ಪ ದೂರ ಬಂದಿ ಎಂದು ಭರಮಪ್ಪನೇ ಮಾತು ಆರಂಭಿಸಿದ. ಮಾಧವ ಹೇಗೆ ಪ್ರಾರಂಭಿಸಬೇಕೆಂದು ಗೊತ್ತಾಗದೇ ತಡವರಿಸಿದ. ಕೊನೆಗೆ ಹೇಗೋ ಮಾಡಿ ಹಂಪಿಯ ದೇವಿಕೊಳ್ಳದ ವಿವರ ನೀಡಿ, ಇದು ಎಲ್ಲಿ ಬರುತ್ತೆ ಅಂದ. ಹಂಪಿಯ ದೇವಿಕೊಳ್ಳ ಗೊತ್ತಿಲ್ಲವೇ ನಿನಗೆ ಎಂತಹ ದಡ್ಡನಪ್ಪ ನೀನು ಎಂದು ಒಮ್ಮೆ ಮಾಧವ ಪೆಚ್ಚಾಗುವಂತೆ ನಕ್ಕ ಅವುಟುಗಾಲು ಭರಮಪ್ಪ ’ನೋಡು ಮಾಧವ ಮತಂಗ ಪರ್ವತದ ಹಿಂದುಗಡೆ ಹತ್ತುಕೈ ತಾಯಮ್ಮ ಇದ್ದಾಳಲ್ಲ, ಅದೇ ದೇವಿಕೊಳ್ಳ,’ ಎಂದ. ಇವರ ಮಾತುಗಳನ್ನೇ ಆಲಿಸುತ್ತಿದ್ದ ಕಾವಿ ಬಟ್ಟೆಯನ್ನು ಧರಿಸಿದ್ದ ಉದ್ದನೆಯ ಗಡ್ಡದಾರಿ, ಕುಳ್ಳಗೆ ಇದ್ದ ಸಾಧು ಮಹಾರಾಜ್ ಅದಲ್ಲ ದೇವಿಕೊಳ್ಳ ಎಂದ. ಇದು ಪ್ರತಿ ಸವಾಲು ಹಾಕಿದಂತಾಗಿ ಅವುಟುಗಾಲು ಭರಮಪ್ಪ ಹಾಗಾದರೆ ಹೇಳು ಸ್ವಾಮಿ ಯಾವುದು ದೇವಿಕೊಳ್ಳ ಎಂದು ಪಟ್ಟು ಹಿಡಿದ. ಕುಳ್ಳ ಸಾಧು ಈ ಪ್ರಶ್ನೆಗೆ ಉತ್ತರ ಕೊಡದೇ ಚಿಲುಮೆ ಇಸಿದುಕೊಂಡು ಮತ್ತೊಮ್ಮೆ ಜೋರಾಗಿ ಎಳೆದುಕೊಂಡು ಆಕಾಶಕ್ಕೆ ಮುಖ ಮಾಡಿ ಹೊಗೆ ಬಿಟ್ಟ. ತಡವಾಗಿ ಹೊಗೆ ಬಿಟ್ಟಿದ್ದರಿಂದ ಕೆಮ್ಮ ತೊಡಗಿದ. ಮತ್ತೊಬ್ಬ ಸಾಧು ಮಹರಾಜ್ ಆತ ಕಣ್ಣುಮುಚ್ಚಿಯೇ ಕುಳಿತಿದ್ದ. ಸುಧಾರಿಸಿಕೊಂಡ ಕುಳ್ಳ ಸಾಧು ನಿಧಾನವಾಗಿ ಹೇಳಿದ ’ಪಟ್ಟದ ಯಲ್ಲಮ್ಮ ಇದ್ದಾಳಲ್ಲ ಅದೇ ದೇವಿಕೊಳ್ಳ,’ ಎಂದ.

ನಾನು ಎಷ್ಟು ವರ್ಷ ಹಂಪಿಯಲ್ಲಿದ್ದೀನಿ..ನಮ್ಮ ಗುರುಗಳೇ ದೇವಿಕೊಳ್ಳ ಎಂದು ಹತ್ತುಕೈ ತಾಯಮ್ಮನ ಹತ್ತಿರ ಕರೆದುಕೊಂಡು ಹೋಗಿ ದೇವಿಯ ದರ್ಶನ ಮಾಡಿಸಿದ್ದಾರೆಂದು ಅವುಟುಗಾಲು ಭರಮಪ್ಪ ರಗಳೆ ತೆಗೆದ. ಇದಕ್ಕೆ ಸಿಡಿಮಿಡಿಗೊಂಡ ಕುಳ್ಳ ಸಾಧು ಎದ್ದು ನಿಂತು, ’ಏ..ಮೂಢ..ನನ್ನ ಏನೆಂದುಕೊಂಡಿದ್ದಿಯಾ? ಒಮ್ಮೆ ನನ್ನೆದರು ಉಗ್ರವಾಗಿ ನಿಂತಳು. ನನ್ನದು ಏನು ಹರಕೊಳ್ಳಕೇ ಆಗಲಿಲ್ಲ, ಹೆದರಿಸಬೇಕೆಂದಳು ಲೌಡಿ ಅವಳಿಗೆ ಆಗಲೇ ಇಲ್ಲ,’ ಎಂದು ಅಶ್ಲೀಲವಾಗಿ ಕೈ ತೋರಿಸಿ ಮಾತನಾಡತೊಡಗಿದ. ಮಾಧವನಿಗೆ ಗಾಭರಿಯಾಗಿ ಹೊಯಿತು. ಈ ಜಾಗ ಖಾಲಿ ಮಾಡಬೇಕು ಅನ್ನಿಸಿ ಚಡಪಡಿಸತೊಡಗಿದೆ. ಆ ಕುಳ್ಳ ಸಾಧು ಕೆಳಗೆ ಕುಳಿತು ಮತ್ತೇ ಗಾಂಜಾ ಚಿಲುಮೆ ಸೇದ ತೊಡಗಿದ. ಮಾಧವನಿಗೆ ಇರಬೇಕೋ ಹೋಗಬೇಕೋ ಗೊತ್ತಾಗದೇ ಚಡಪಡಿಸತೊಡಗಿದ. ಕಣ್ಣುಮುಚ್ಚಿಯೇ ಕುಳಿತಿದ್ದ ಇನ್ನೊಬ್ಬ ಸಾಧು ಮಹಾರಾಜ್ ಮಾತ್ರ ಇದ್ದಕ್ಕಿದ್ದಂತೆ ಎಚ್ಚರಗೊಂಡ ಅವನು ದೇವಿಕೊಳ್ಳ ಎಲ್ಲಿದೆ ಗೊತ್ತಾ ಮುಟ್ಟಾಳರಾ…ಎಂದ. ಮಾಧವ ಆಶ್ಚರ್ಯಚಕಿತನಾಗಿ ಆ ಸಾಧುವಿನ ಕಡೆ ದೃಷ್ಠಿ ಬೀರಿದ. ಉಳಿದಿಬ್ಬರೂ ಇದು ಕೇಳಿಸಿಲ್ಲ ಎನ್ನುವಂತೆ ತಮ್ಮ ಪಾಡಿಗೆ ಚಿಲುಮೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದರು. ನಮ್ಮ ದೇಹನೇ ದೇವಿಕೊಳ್ಳ ಅಂದ. ಇಬ್ಬರು ಚಿಲುಮೆಗೆ ಗಾಂಜಾ ತುಂಬುವ ಕೆಲಸದಲ್ಲಿ ತಲ್ಲೀನರಾಗಿದ್ದರೂ ಈ ಮಾತಿಗೆ ಆಶ್ಚರ್ಯ ವ್ಯಕ್ತ ಪಡಿಸಲೇ ಇಲ್ಲ. ನಮ್ಮ ಗುರುಗಳಾದ ಶಿವಶರಣಪ್ಪ ತಾತ ಒಂದು ಸಲ ವಿಚಿತ್ರವೊಂದು ತೋರಿಸಿದ ಎಂದು ಅವುಟುಗಾಲು ಭರಮಪ್ಪ ತನ್ನ ಗುರುವಿನ ಕಥಾನಕ ಆರಂಭಿಸಿದ. ’ಳಗಿನದು ಸ್ವಚ್ಛ ಮಾಡಿಕೋ ಬೇಕು ಮೊದಲು ಅಂದರು.’ ಒಳಗಿನದು ಅಂದರೆ ಏನು? ಎಂದು ಮಾಧವನಿಗೆ ಪ್ರಶ್ನೆ ಎಸೆದ. ಮಾಧವನಿಗೆ ಸಾಕುಬೇಕಾಯಿತು. ಗಾಂಜಾ ಸೇವನೆಯ ಧೂಮ, ಅದು ಎಬ್ಬಿಸುವ ವಿನ್ಯಾssssಸ, ವಿಚಿತ್ರ ಪರಿಮಳ ಉಸಿರುಕಟ್ಟಿಸುವ ವಾತಾವರಣ ತಂದಿಟ್ಟು ತಪ್ಪಿಸಿಕೊಳ್ಳುವ ಭರದಲ್ಲಿ ಆತ್ಮಶುದ್ಧಿ ಅಂತಾ ಅರ್ಥ ಅಂದು ಬಿಟ್ಟ. ಈ ಮಾತು ಕೇಳುತ್ತಲೇ ಕುಳ್ಳ ಸಾಧು ಕೊಕ್ಕೊಕ್ಕೊ ನಕ್ಕು ಬಿಟ್ಟ.

ಅವುಟುಗಾಲು ಭರಮಪ್ಪ ಮಾತ್ರ ತನ್ನದೇ ಗುಂಗಿನಲ್ಲಿ ಕಥಾನಕ ಮುಂದುವರೆಸಿದ. ’ಒಮ್ಮೆ ಶಿವಶರಣಪ್ಪತಾತ, ಮಡಿಪಂಜೆಯ ಅಂಚು ತೆಗೆದುಕೊಂಡು ನಿಧಾನವಾಗಿ ನುಂಗುತ್ತಾ ಹೋದ, ಎಷ್ಟು ನುಂಗಿದ ಅಂದರೆ ಅದರ ಅಂಚು ಮಾತ್ರ ಉಳಿಯಿತು. ಜೋರಾಗಿ ಹೂಂಕರಿಸಿ, ಆ ಮಡಿಪಂಜೆಯ ಅಂಚನ್ನು ಕುಂಡಿಯಿಂದ ಹೊರ ತೆಗೆದ. ಬಾಯಿಯಲ್ಲಿ ಅಂಚು ಮತ್ತು ಕುಂಡಿಯಲ್ಲಿ ಅಂಚು ಎರಡು ಕೈಯಿಂದ ಹಿಡಿದುಕೊಂಡು ಹಿಂದೆ ಮುಂದೆ ಮಾಡುತ್ತಾ ಹೋದ. ಒಳಗಿನದೆಲ್ಲಾ ಸ್ವಚ್ಛ ಮಾಡಿ ಹೊರ ತೆಗೆದು ಹಾಕಿದ,’ ಎಂದ. ಮಾಧವನಿಗೆ ತಲೆ ಕೆಟ್ಟು ಹೊಯಿತು. ಒಳಗಿನದನ್ನು ಸ್ವಚ್ಛ ಮಾಡಿಕೊಂಡ ನಮ್ಮ ಶಿವಶರಣಪ್ಪ ತಾತಾ, ಚಿಲುಮೆ ಸೇದುತ್ತಾ ಹೋದರೆ ಹೊಗೆ ಕುಂಡಿಯಿಂದ ಹೊರಗೆ ಬರುತ್ತಿತ್ತು. ಎಲ್ಲಾ ನವರಂಧ್ರಗಳಲ್ಲಿ ಹೊಗೆ ಚಿಮ್ಮಿಸುವ ಅವರ ಮಹಿಮೆ ದೊಡ್ಡದು ಎಂದು ಅವಟುಗಾಲು ಭರಮಪ್ಪ ಆ ಧೂಮ ವಿಲಾಸವನ್ನು ಬಣ್ಣಿಸತೊಡಗಿದ. ಯಾವ ಮಾಯದಿಂದಲೂ ಎನ್ನುವಂತೆ ಮಾಧವ ಅಲ್ಲಿಂದ ಕಣ್ಮರೆಯಾಗಿ ಬಿಟ್ಟ. ಇದಾಗಿ ಸ್ವಲ್ಪದಿನಗಳ ಕಾಲ ಮಾಧವನಿಗೆ ಏನು ಮಾಡಬೇಕು ತೋಚದೇ ಅವುಟುಗಾಲು ಭರಮಪ್ಪ, ಕುಳ್ಳ ಸಾಧು ಹೇಳಿದ ಪ್ರದೇಶಗಳನ್ನು ಒಂದಿಷ್ಟು ನೋಡಿ ಬಿಡುವುದು ಸರಿ ಎಂಬ ನಿರ್ಧಾರಕ್ಕೆ ಬಂದು ಹಂಪಿ ಕಡೆ ಸೈಕಲ್ ಹೊರಳಿಸಿದ.

ಮಾತಂಗ ಪರ್ವತದ ಹಿಂದುಗಡೆ ಹತ್ತುಕೈಯ ತಾಯಮ್ಮ ಉಗ್ರವಾಗಿ ಕಂಡರೂ ಕಾದಂಬರಿಯಲ್ಲಿ ವರ್ಣಿತಗೊಂಡಿರುವ ದೇವಿ ಹಾಗೂ ದೇವಿಕೊಳ್ಳ ಇದಲ್ಲ ಅನ್ನಿಸಿತು. ಕಮಲ್ ಮಹಲ್ ಸಮೀಪ ದೊಡ್ಡ ಅರಳಿಮರದ ಕೆಳಗೆ ಇರುವ ಪಟ್ಟಣದ ಯಲ್ಲಮ್ಮನನ್ನು ನೋಡಿದ. ಸಮಾಧಾನ ಆಗಲಿಲ್ಲ.

ಗೆಳೆಯ ಹನುಮ, ಪರಮೇಶಿ ಇಬ್ಬರನ್ನು ಒಂದು ದಿನ ಕೂಡಿಸಿ, ಮಾಧವ ಕರುಣಾ ವಿಲಾಸ ಕಾದಂಬರಿಯನ್ನು ವರ್ಣಿಸಿ, ದೇವಿಕೊಳ್ಳದಲ್ಲಿ ಗುಪ್ತನಿಧಿ ಇದೆ. ಅದನ್ನು ಹೇಗಾದರೂ ಮಾಡಿ ಹುಡುಕೋಣ ಅಂತಾ ಆಸೆ ಹುಟ್ಟಿಸಿದ. ಈ ಪುಸ್ತಕ ಎಲ್ಲಿ ಸಿಕ್ಕಿತು ಮಾರಾಯ ಅಂತಾ ಆ ಕಾದಂಬರಿಯನ್ನು ಕೈಯಲ್ಲಿ ಹಿಡಿದು, ಯಾವುದೋ ಪುರಾತನ ಕಾಲದ ಅಮೂಲ್ಯ ಗ್ರಂಥ ಇದು ಎನ್ನುವಂತೆ ನೋಡಿದ ಹನುಮ, ಇದನ್ನು ಪೂರ್ತಿ ಓದಿದ್ದಿಯಾ ಎಂದ. ಪೂರ್ತಿನಾ ಎಷ್ಟು ಸಾರಿ ಓದಿದ್ದೇನೋ ಗೊತ್ತಿಲ್ಲ ಎಂದ ಮಾಧವ. ನೀಲಿ ಹೊತ್ತಿಗೆ ಏನು ಮಾರಾಯ ಇದು. ನೀಲಿ ಹೊತ್ತಿಗೆಯನ್ನು ಒಂದು ತಪ್ಪಿಲ್ಲದೇ ಓದಬೇಕಂತೆ ತಪ್ಪಿದರೆ ವಿಷ ಕಾರಿ ಸತ್ತು ಹೋಗುತ್ತಾರಂತೆ ನಮ್ಮ ದೊಡ್ಡಪ್ಪ ಹೇಳುತ್ತಿದ್ದ ಎಂದ. ಹನುಮ ನಾನು ಮಾತ್ರ ಓದೋದಿಲ್ಲ ಎಂದು ಪಟಕ್ಕನೆ ಮಾಧವನ ಕೈಯಲ್ಲಿ ಪುಸ್ತಕ ಇಟ್ಟು ಬಿಟ್ಟ. ಪರಮೇಶಿ ಮಾತ್ರ ದೇವಿಕೊಳ್ಳದ ಬಗ್ಗೆನೇ ಯೋಚಿಸುತ್ತಿದ್ದ ಎನ್ನುವಂತೆ ಎಲ್ಲಿ ಅಂತಾ ಹುಡುಕುವುದು. ಪುಸ್ತಕದಲ್ಲಿ ನಕ್ಷೆ ಇರುತ್ತೆ, ಸರಿಯಾಗಿ ನೋಡಿ ಹೇಳು ಅಂದ. ಇದು ಕಾದಂಬರಿ ಅಂತಾ ಹೇಳಿ ಮನವರಿಕೆ ಮಾಡಿಕೊಡುವಲ್ಲಿ ಸುಸ್ತಾದ ಮಾಧವ.

ಮೂರು ಜನ ಹಂಪಿಗೆ ವಾರವಿಡಿ ಓಡಾಡಿದರೂ ದೇವಿಕೊಳ್ಳ ಪತ್ತೆ ಆಗಲಿಲ್ಲ. ಸೋತು ಮಂಟಪದಲ್ಲಿ ಕುಳಿತಾಗ ಎಷ್ಟು ಜನ ಗೋರಿ ಅಗೆದು, ಹಂಡೇವು ಕಿತ್ತುಕೊಂಡು ಹೋಗಿದ್ದಾರೆ. ನಾವು ಅದನ್ನೇ ಯಾಕೇ ಮಾಡಬಾರದು ಎಂದು ಹನುಮ ಹೇಳಿದಾಗ ಮಾಧವನಿಗೂ, ಪರಮೇಶಿಗೂ ಇದು ಸರಿ ಎನಿಸಿತು. ಮಾಧವ ಕರುಣ ವಿಲಾಸವನ್ನು ಮತ್ತೊಮ್ಮೆ ಇಡೀದಿನ ಕುಳಿತು ತಿರುವಿ ಹಾಕಿದ ಮಾಧವ. ಹಿಂದೂ ಸಾಮ್ರಾಜ್ಯ ಉಳಿಸಿಕೊಳ್ಳಲೆಂದೇ ಸ್ಥಾಪಿತವಾಗಿರುವ ಮಹಾ ಸಾಮ್ರಾಜ್ಯದಲ್ಲಿ ಮ್ಲೇಂಛರು ಇಲ್ಲಿರಲಿಕ್ಕೆ ಸಾಧ್ಯವೇ ಇಲ್ಲ. ಮತ್ತೇ ಯಾಕೇ ಇಷ್ಟೊಂದು ಗೋರಿಗಳು? ತಲೆ ಕೆಡಿಸಿಕೊಂಡ. ಕಡ್ಡಿರಾಂಪುರ ಎನ್ನುವುದು ಮೊದಲು ರಾಮಪುರವಾಗಿತ್ತು ಎಂದು ಇತಿಹಾಸ ಪ್ರಾಧ್ಯಾಪಕ ವಿಚಾರ ಸಂಕಿರಣದಲ್ಲಿ ಹೇಳಿದ್ದು ನೆನಪಾಯಿತು. ಹಾಗಾದರೆ ರಾಮನ ಗುಡಿ ಎಲ್ಲಿಗೆ ಹೊಯಿತು? ಅದನ್ನು ಮ್ಲೇಂಚರು ನಾಶ ಮಾಡಿ ಗೋರಿ ನಿರ್ಮಿಸಿದರೇ? ನೂರಾರು ಯೋಚನೆಗಳು ಕಾಡಲಾರಂಭಿಸಿದವು. ಮುತ್ತುರತ್ನಗಳನ್ನು ಬಳ್ಳದಿಂದ ಮಾರಾಟ ಮಾಡುತ್ತಿರುವ ವಿಜಯನಗರ ಸಾಮ್ರಾಜ್ಯ ಕಣ್ಮುಂದೆ ಬಂತು. ಬಂಗಾರದ ಹಂಡೇವು ಪಡೆದು ಕೆಲವರು ದೊಡ್ಡ ಶ್ರೀಮಂತರಾದ ಕಥೆ ನೆನಪಾಯಿತು. ಇದೆಲ್ಲಾ ಸುಳ್ಳು ಇರಲಿಕ್ಕೆ ಸಾಧ್ಯವೇ ಇಲ್ಲ ಎಂಬ ಗುಪ್ತನಿಧಿಯ ಆಸೆ ಮಾತ್ರ ಬೆಳೆಯುತ್ತಲೇ ಹೊಯಿತು. ಅವತ್ತು ರಾತ್ರಿ ಕನಸಿನಲ್ಲಿ ವಿದ್ಯಾರಣ್ಯರು ಬಂದು ಮಾಧವ ಏನಾದರೂ ಮಾಡು, ನಿನ್ನಿಂದ ಎಲ್ಲಾ ಸಾಧ್ಯ ಎಂದು ಹೇಳಿದಂತೆ ಆಯಿತು. ಅವರು ವಿದ್ಯಾರಣ್ಯರೋ ಅಥವಾ ಗಳಗನಾಥರೋ ಗೊತ್ತಾಗಲಿಲ್ಲ. ತಲೆಯ ಮೇಲೆ ಪುಸ್ತಕ ಹೊತ್ತು ಮಾರಾಟ ಮಾಡಿದ ಗಳಗನಾಥರ ಕಥೆ ಗೊತ್ತಿತ್ತು. ಕನಸಲ್ಲಿ ಬಂದ ಯತಿಯ ತಲೆಯ ಮೇಲೆಯೂ ಪುಸ್ತಕ ಇದ್ದವು.

ದೇವಸ್ಥಾನ ಒಡೆದು ಅಲ್ಲಿ ನಿಧಿ ಇದ್ದರೆ ಮ್ಲೇಂಚರು ತೆಗೆದುಕೊಂಡು ಹೋಗುತ್ತಾರೆ. ಇದು ಗೊತ್ತಿದ್ದರಿಂದ ನಮ್ಮ ಹಿರಿಯರು ಜಾಣತನ ಮಾಡಿ, ಮ್ಲೇಂಚರು ಪೂಜಿಸುವ ಗೋರಿ ನಿರ್ಮಿಸಿ, ಅದರಲ್ಲಿ ನಿಧಿ ಬಚ್ಚಿಟ್ಟಿರಬೇಕು ಎಂಬ ಅಪೂರ್ವ ಸತ್ಯವನ್ನು ಇತಿಹಾಸ ಸಂಶೋಧಕನಂತೆ ಕಂಡುಕೊಂಡ ಮಾಧವ ಪುಳಕಿತನಾಗಿ ಬಿಟ್ಟ. ತಡ ಮಾಡದೇ ಗೆಳೆಯ ಹನುಮ, ಪರಮೇಶಿಯನ್ನು ಕೂಡಿಸಿಕೊಂಡು ತಾನು ಕಂಡು ಹಿಡಿದ ಸತ್ಯವನ್ನು ಒಂದಿಷ್ಟು ರಂಜಕವಾಗಿಯೇ ಹೇಳಿದ.

ಅಬ್ಬಾ ಅದಕ್ಕೆ ಅಷ್ಟೊಂದು ಗೋರಿಗಳಿವೆ ಎಂದು ಇಬ್ಬರೂ ಉದ್ಗಾರ ತೆಗೆದು ಮಾಧವನದು ತಲೆ ಅಂದರೆ ತಲೆ ಎಂದು ಕೊಂಡಾಡಿದರು. ಬರುವ ಅಮವಾಸ್ಯೆ ದಿನ ರಾತ್ರಿ ಹೋಗಿ ಗೋರಿ ಅಗೆದು ಹಂಡೇವು ತೆಗೆದುಕೊಂಡು ಬರೋಣ ಅಂತಾ ಮಾಧವ ಹೇಳಿದಾಗ, ಪರಮೇಶಿ ಆಯಿತು ಎಂದು ಹನುಮನ ಮುಖ ನೋಡಿದ. ಹನುಮ, ’ನೋಡು ಮಾಧವ, ಅಮವಾಸ್ಯೆಯ ದಿನ ಗೋರಿ ಅಗೆಯುವುದು ಅಪಾಯ. ಅಲ್ಲಿ ದೆವ್ವಗಳಿರುತ್ತವೆ. ಅಲ್ಲಿ ಎಷ್ಟೊಂದು ಗೋರಿಗಳಿವೆ. ಎಲ್ಲಾ ದೆವ್ವಗಳು ಕಲೆ ಬಿದ್ದರೆ ನಾವು ರಕ್ತಕಾರಿ ಸಾಯಬೇಕಾಗುತ್ತದೆ,’ ಎಂದ.

ಗೋರಿಗಳಲ್ಲ ಅವು, ಮ್ಲೇಂಚರನ್ನು ಹಾದಿ ತಪ್ಪಿಸಲು ಹಿರಿಯರು ಮಾಡಿದ ಪ್ಲಾನ್ ಅದು ಎಂದು ಮಾಧವ ಎಂದು ಎಷ್ಟೇ ಹೇಳಿದರೂ ಹನುಮ ಅದರೂ ಅವು ಗೋರಿಗಳು ತಾನೇ ಎಂದು ಹನುಮ ಪಟ್ಟು ಹಿಡಿದ.

ಹನುಮನ ಹಠ ಹೆಚ್ಚಾಗುತ್ತಿದ್ದಂತೆ ಮಾಧವನಿಗೂ ಒಳಗೆ ತಳಮಳ ಶುರುವಾಯಿತು. ಹೌದು ಅವು ಗೋರಿಗಳೇ ಆಗಿದ್ದರೆ ಪ್ರೇತಾತ್ಮಗಳು ಇದ್ದೇ ಇರುತ್ತವೆ ಎನ್ನಿಸಿ ಒಂದುಕ್ಷಣ ಭಯಭೀತನಾದ. ಸತ್ತಮೇಲೆ ಶವವನ್ನು ಸುಟ್ಟು ಗಂಗೆಯಲ್ಲಿ ಉಳಿದ ಆಸ್ತಿಗಳನ್ನು, ಬೂದಿಯನ್ನು ಚೆಲ್ಲಿ ಪ್ರೇತಾತ್ಮಕ್ಕೆ ಶಾಂತಿ ಮಾಡದೇ ಊಳುವ ಮೂಲಕ ಪ್ರೇತಾತ್ಮಗಳನ್ನು ಸುಡುಗಾಡಿನಲ್ಲಿ ಉಳಿಸುತ್ತಾರಲ್ಲ ಈ ಜನ ಅಂತಾ ಸಿಟ್ಟು ಬಂತು.

ಪರಮೇಶಿ ಮಾತ್ರ ಮಾಧವ ಗಾಳೆಮ್ಮನಗುಡಿ ಬಳಿ ಒಬ್ಬ ಪೂಜಾರಿ ಇದ್ದಾನೆ. ಆತ ಮಾಟ, ಮಂತ್ರ ಮಾಡುತ್ತಾನೆ. ಆತನಿಗೆ ಈ ವಿಷಯ ತಿಳಿಸಿ, ಮಾಟ, ಮಂತ್ರ ಮಾಡಿಸಿಕೊಂಡು ಹೋದರೆ ಹೇಗೆ ಎಂದ? ಮಾಧವನಿಗೂ ಅದು ಸರಿ ಅನ್ನಿಸಿತು. ಹನುಮನ ಮುಖ ನೋಡಿದ. ಹನುಮ ಅದಕ್ಕೆ ಒಪ್ಪಿಗೆ ಸೂಚಿಸಿ ತಲೆಯಾಡಿಸಿದ.

ಆದರೆ ಗೋರಿ ಅಗೆದು ಹಂಡೇವು ತರುವುದು ಆತನಿಗೆ ಹೇಳುವುದು ಹೇಗೆ? ಆತನೂ ಪಾಲು ಕೇಳುತ್ತಾನೆ. ಆ ಮೇಲೆ ಬೇರೆಯವರಿಗೆ ಇದನ್ನು ಹೇಳಿದರೆ ನಮ್ಮ ಕಥೆ ಮುಗಿದು ಹೋಗುತ್ತದೆ ಎಂದು ಪರಮೇಶಿಯೇ ಅನುಮಾನ ವ್ಯಕ್ತ ಪಡಿಸಿದ. ಪಾಲು ಎಂಬ ಶಬ್ದ ಬೀಳುತ್ತಿದ್ದಂತೆ ಹನುಮ ಪಾಲು ಹೇಗೆ ಅಂತಾ ಇಲ್ಲಿಯೇ ತೀರ್ಮಾನ ಆಗಿ ಬಿಡಬೇಕು. ಗೆಳಯರ ನಡುವೆ ಜಗಳ ಆಗಬಾರದು. ತಾಮ್ರದ ದುಡ್ಡು ತಾಯಿಮಕ್ಕಳನ್ನು ಕೆಡಿಸಿತಂತೆ ಎಂದ. ನೀವೇ ತೀರ್ಮಾನ ಮಾಡಿ, ನೀವು ಹೇಳಿದಂತೆ ಆಗಲಿ ಎಂದ ಮಾಧವ ಗೆಳೆಯರ ಮೇಲೆ ಹೊತ್ತು ಹಾಕಿಬಿಟ್ಟ.

ಹನುಮ, ಪರಮೇಶಿ ಇಬ್ಬರೂ ಮಾತನಾಡಿಕೊಂಡು ತಮ್ಮ ತೀರ್ಮಾನ ಪ್ರಕಟಿಸಿದರು. ಮೂವರಿಗೆ ಸಮಪಾಲು, ಮಾಧವ ತುಂಬಾ ಕಷ್ಟಪಟ್ಟಿದ್ದಕ್ಕೆ ಮೂರು ಪಾಲು ಮಾಡಿದ ನಂತರ ಬಂಗಾರದ ಗಟ್ಟಿಗಳನ್ನು ಎರಡರಂತೆ ತಲಾ ಇಬ್ಬರು ಮಾಧವನಿಗೆ ಕೊಡಬೇಕು ಎಂದರು. ಮಾಧವನಿಗೆ ಅವರ ತೀರ್ಮಾನ ತುಂಬಾ ಖುಷಿ ಕೊಟ್ಟರೂ ತೋರಿಸಿಕೊಳ್ಳದೇ ನೀವು ಹೇಳಿದಂತೆ ಆಯಿತು ಎಂದ.

ಪೂಜಾರ ಕಾಳಪ್ಪನ ಬಳಿ ಹೋಗಿ ’ನಾವು ಒಂದು ಒಳ್ಳೆಯ ಕೆಲಸಕ್ಕೆ ಅಮವಾಸ್ಯೆ ದಿನ ಹೋಗುತ್ತಿದ್ದೇವೆ. ದೆವ್ವಗಳು ನಮ್ಮ ತಂಟೆಗೆ ಬರಬಾರದು. ನಾವು ಹಿಡಿದ ಕೆಲಸ ಆಗಬೇಕ” ಅಂತಹ ಹೇಳೋಣ. ಮಾಟ ಮಾಡಿಸಿಕೊಂಡು ಬರೋಣ ಎಂಬ ಅಂತಿಮ ತೀರ್ಮಾನ ಚರ್ಚೆಯ ನಂತರ ಹೊರಬಿತ್ತು.

ಇವರು ಹೋದಾಗ ಪೂಜಾರ ಕಾಳಪ್ಪ ಪೂಜೆಯಲ್ಲಿದ್ದ. ಹುತ್ತದ ಮುಂದೆ ದೇವಿಮೂರ್ತಿ ಕುಂಕುಮ, ಭಂಡಾರ ಪೂಸಿಕೊಂಡು ಕೆಂಪಗೆ ಕುಳಿತಿದ್ದಳು. ಕುಂಬಳಕಾಯಿ ಹೊಡೆದು, ಅದರಲ್ಲಿ ಕುಂಕುಮ ಹಾಕಿ ಎರಡೂ ಬದಿ ಇಡಲಾಗಿತ್ತು. ಕೂದಲು ಚೆಲ್ಲು ಹೊಡೆದು ಹಣೆ ತುಂಬಾ ಕುಂಕುಮ ಬಳಿದುಕೊಂಡು ಬರೀ ಮೈಯಲ್ಲಿ ಪೂಜಾರ್ ಕಾಳಪ್ಪ ಕುಳಿತಿದ್ದ.

ಆತನ ಕಪ್ಪು ಕೃಶವಾದ ಮೈ ಹೊಳೆಯತ್ತಿತ್ತು. ದೊಡ್ಡ ದೀಪ ಉರಿಯುತ್ತಿತ್ತು. ಏನು ಬಂದಿದ್ದು ಅಂತಾ ಹನುಮ, ಪರಮೇಶಿಯತ್ತ ನೋಡಿದ. ಮಾಧವನನ್ನು ನೋಡಿ ಒಂದುಕ್ಷಣ ಆಶ್ಚರ್ಯವಾದರೂ ತೋರಿಸಿಕೊಳ್ಳದೇ ತಲೆ ಹಾಕಿದ. ಹನುಮನೇ ಬಾಯಿ ಬಿಟ್ಟ. ನಾವು ಅಮವಾಸ್ಯೆ ದಿನ ಒಂದು ಕೆಲಸಕ್ಕೆ ಹೋಗುತ್ತಿದ್ದೇವೆ. ದೆವ್ವಗಳು ಅಡ್ಡಮಾಡಬಾರದು. ಅದಕ್ಕೆ ಶಾಂತಿ ಮಾಡಬೇಕು ಅಂದ.

ಕವಡೆ ತೆಗೆದು ಹಾಕುತ್ತಾ ಮೂವರ ಮುಖವನ್ನು ನೋಡಿದ ಪೂಜಾರಿ ಕಾಳಪ್ಪ ಒಮ್ಮೆ ಎಲ್ಲಾ ಕವಡೆಗಳನ್ನು ಕೈಯಲ್ಲಿ ತೆಗೆದುಕೊಂಡು ಕಣ್ಣುಮುಚ್ಚಿಕೊಂಡು ಮುಖ ಮೇಲಕ್ಕೆ ಎತ್ತಿದ. ಯಾವದೋ ಮಂತ್ರ ಹೇಳುತ್ತಾ ನೆಲದ ಮೇಲೆ ಕವಡೆ ಚೆಲ್ಲಿದ. ದಿಕ್ಕಾಪಾಲಾಗಿ ಕವಡೆ ಬಿದ್ದವು. ಲೆಕ್ಕ ಹಾಕಿದ. ನೀವು ಎಲ್ಲಿಗೆ ಹೋಗುತ್ತೀರಿ ಎಂದು ಗೊತ್ತಾಯಿತು ಎಂದ. ಮೂವರು ಕೆಲಸ ಕೆಟ್ಟಿತು ಎನ್ನುವಂತೆ ಮುಖ ಮಾಡಿಕೊಂಡರು. ಹೋಗಿ ಬನ್ನಿ ಜಯ ಆಗುತ್ತೆ ಎಂದಾಗ ಸಮಾಧಾನದ ನಿಟ್ಟಿಸಿರು ಬಿಟ್ಟರು.

ಮಂತ್ರಿಸಿದ ಮೂರು ನಿಂಬೆಹಣ್ಣು, ಕುಂಕುಮ, ಭಂಡಾರ ನೀಡಿ, ಕಟ್ಟಿಕೊಳ್ಳಲು ತಾಯಿತ ನೀಡಿದ. ಮೊದಲು ಯಾವ ಕಡೆ ಕೆಲಸ ಮಾಡುತ್ತೀರೋ ಅದರ ಸುತ್ತ ಮೂರು ಸುತ್ತು ಹಾಕಬೇಕು. ಗಂಗಿದಿಕ್ಕಿನಿಂದ ಕೆಲಸ ಆರಂಭಿಸಬೇಕು. ದೆವ್ವಗಳು ಅಡ್ಡ ಮಾಡುವುದಿಲ್ಲ ಎಂದ. ಪರಮೇಶಿ ಕಣ್ಸನ್ನೆ ಮಾಡಲು ಮಾಧವ ನೂರರ ಎರಡು ನೋಟುಗಳನ್ನು ಪೂಜಾರ ಕಾಳಪ್ಪನಿಗೆ ಕೊಡಲು ಹೋದ. ದೇವಿಯ ಮುಂದೆ ಇಡು. ನಾನು ಹಣ ಮುಟ್ಟುವುದಿಲ್ಲ ಎಂದು ಪೂಜಾರ ಕಾಳಪ್ಪ ಹೇಳಿದ.

ಮಾಧವ ಉಡುದಾರದಲ್ಲಿ ತಾಯಿತ ಕಟ್ಟಿಕೊಂಡ. ಉಳಿದಿಬ್ಬರೂ ಕೊರಳಲ್ಲಿಯೇ ಈಗಾಗಲೇ ಇರುವ ತಾಯಿತದ ಜತೆ ಇದನ್ನು ಸೇರಿಸಿಕೊಂಡರು. ಅಮವಾಸ್ಯೆಯ ಹಿಂದಿನ ದಿನವೇ ಪರಮೇಶಿಯ ಕಬ್ಬಿನ ಗದ್ದೆಯಲ್ಲಿ ಹಾರೆ, ಸಲುಕೆ ಇಟ್ಟು ಬಚ್ಚಿಡಬೇಕು. ಯಾವ ಗೋರಿ ಅಂತಹ ಮೂವರು ಹೋಗಿ ಗುರುತು ಮಾಡಿ ಬರಬೇಕು ಎಂದುಕೊಂಡಿದ್ದರಿಂದ ಅದು ನಡೆದು ಹೋಗಿತ್ತು.

ಅಮವಾಸ್ಯೆ ಗಾಢ ಕತ್ತಲು, ಮೂವರು ಗೋರಿ ಬಳಿ ತೆರಳಿದರು. ಬ್ಯಾಟರಿ ಬೆಳಕು ಕಂಡು ಯಾರಾದರೂ ನೋಡಿಯಾರು ಎಂದು ಮೇಲುಗಡೆ ಬಟ್ಟೆ ಸುತ್ತಿದ್ದರು. ಆ ಮಬ್ಬು ಬೆಳಕಿನಲ್ಲಿ ಗುರುತು ಮಾಡಿದ ಗೋರಿಯ ಸುತ್ತ ಮೂವರೂ ಪ್ರದಕ್ಷಿಣೆ ಹಾಕಿದರು. ಪೂಜಾರಿ ಕಾಳಪ್ಪ ಹೇಳಿದಂತೆ ಪೂಜೆ ಸಲ್ಲಿಸಿದರು. ಹನುಮನೇ ಹಾರೆ ಹಿಡಿದು, ಗೋರಿಯ ಬುಡಕ್ಕೆ ಹಾರೆ ಹಾಕಿ ಮೀಟಿದ. ಕಲ್ಲು ಜಣ್ ಅಂತಹ ಸಪ್ಪಳ ಮಾಡಿತೆ ಹೊರತು ಜಪ್ಪಯ್ಯ ಅನ್ನಲಿಲ್ಲ. ಪರಮೇಶಿಯು ಸಾಹಸಕ್ಕೆ ಇಳಿದ. ಹನುಮನ ಜೊತೆ ಹಾರೆ ಹಿಡಿದು ಇಬ್ಬರೂ ಕಷ್ಟಪಟ್ಟ ನಂತರ ಕಲ್ಲು ಸ್ವಲ್ಪ ಅಲುಗಾಡಿತು. ಮಾಧವನಿಗೆ ಇಂತಹ ಕೆಲಸ ಮಾಡಿ ಗೊತ್ತಿಲ್ಲವಾದ್ದರಿಂದ ಸಲಹೆ ನೀಡುತ್ತಿದ್ದ. ಇಬ್ಬರೂ ಹೇಗೂ ಮಾಡಿ ಬಂಡೆ ಸ್ವಲ್ಪ ಎತ್ತಿದರು. ಒಡನೆ ಮಾಧವ ಅದರಡಿ ಕಲ್ಲು ಸರಿಸಿದ. ಬೆವತು ನೀರು ನೀರಾಗಿದ್ದ ಇಬ್ಬರೂ ಸ್ವಲ್ಪ ದಣಿವಾರಿಸಿಕೊಂಡರು. ಬಂಡೆ ಸ್ವಲ್ಪ ಮೇಲೆದ್ದಿದ್ದು ಅವರಿಗೆ ಇಮ್ಮಡಿ ಉತ್ಸಾಹ ನೀಡಿತ್ತು. ಇಬ್ಬರೂ ಕಲ್ಲಿಗೆ ಹೊಂದಿಕೊಂಡಿದ್ದ ಮಣ್ಣನ್ನು ಬೇರ್ಪಡಿಸಿ, ಅದನ್ನು ಇನ್ನೂ ಸ್ವಲ್ಪ ಎತ್ತಿ ಬಂಡೆ ಉರುಳಿಸುವದರಲ್ಲಿ ಅಂತೂ ಯಶಸ್ವಿಯಾದರು. ಮೂವರಿಗೂ ಕುತೂಹಲ. ಬ್ಯಾಟರಿ ಹಾಕಿ ನೋಡಿದರೂ ಅದರಡಿ ಏನೋ ಕಾಣಿಸುತ್ತಿಲ್ಲ. ಸಣ್ಣ ಕುಣಿಯಿದ್ದಂತೆ ತೋರುತ್ತದೆ. ಹನುಮ ಕುಣಿಯಲ್ಲಿ ಇಳಿದು ಕೈಯಿಂದ ಸವರಾಡಿ ನೋಡಿದ. ಏನೋ ಕಾಣಿಸುತ್ತಿಲ್ಲ. ಕೆಲವು ಬೆಣಚು ಕಲ್ಲು, ಎಲುಬುಗಳು ಸಿಕ್ಕವು, ಅವುಗಳನ್ನೆಲ್ಲಾ ಸಲುಕೆಯಿಂದ ಎತ್ತಿ ಹೊರ ಹಾಕಿದರು. ಹಾರೆಯಿಂದ ಕುಣಿ ತೋಡುತ್ತಾ ಹೋದಂತೆ ಎಲುಬಿನ ರಾಶಿಗಳಿಂದ ಕೂಡಿದ ಮಣ್ಣು. ರಾಶಿ ರಾಶಿ ಹೊರಗೆ ಹಾಕಿದರು. ಕೊನೆಗೆ ಜಣ್ ಅಂತ ಸಪ್ಪಳ ಕೇಳುತ್ತಿದ್ದಂತೆ ಹಂಡೇವು ಸಿಕ್ಕಿತು ಎಂದು ಮೂವರು ಖುಷಿಯಾದರು. ನಿಧಾನ ಎಂದ ಮಾಧವ. ಹಂಡೇವು ತೂತು ಮಾಡಿ ಬಿಟ್ಟಿಯಾ ಅಂದ ಪರಮೇಶಿ. ಬ್ಯಾಟರಿ ಹಾಕಿ ನೋಡಿದರೆ ಅದೊಂದು ತಲೆಬುರುಡೆ ಇವರನ್ನು ನೋಡಿ ಅಣಕಿಸಿದಂತೆ ಕಾಣಿತು. ಹನುಮ ಅದನ್ನು ಕೈಯಲ್ಲಿ ಹಿಡಿದು, ಎತ್ತಿ ತೋರಿಸಿದ. ಅದರ ಕಣ್ಣು, ಮೂಗಿನಲ್ಲಿ ಹೊಗೆ ಬಂದ ಹಾಗೇ ಕಾಣಿತು. ಚಿಲುಮೆಯಿಂದ ಬಂದ ಧೂಮದಂತೆ, ಶಿವಶರಣಪ್ಪ ತಾತನ ನವರಂಧ್ರಗಳ ಮೂಲಕ ಹೊಗೆ ಬಂದಂತೆ ಕಂಡು ಮಾಧವ ಬೆಕ್ಕಸಬೆರಗಾಗಿ ಕುಸಿದು ಕುಳಿತ.

ಮಾಧವ ಅಂಗಡಿಯಲ್ಲಿದ್ದಾಗ ತಿಪ್ಪಯ್ಯ ಬೀಡಿ ತೆಗೆದುಕೊಂಡು ಪುಸ್ಸು ಪುಸ್ಸು ಹೊಗೆ ಬಿಡುತ್ತಾ, ’ಮಾಧವ ಗೋರಿ ಅಗೆದು ಯಾರೊ ಹಂಡೇವು ಕಿತ್ತಿಕೊಂಡು ಹೋಗಿದ್ದಾರೆ ಮಹರಾಯ’ ಎಂದ. ಅವನು ವರ್ಣಿಸುತ್ತಿರುವುದು ನಾವು ಅಗೆದ ಗೋರಿಯೇ ಆಗಿದೆ ಎಂದು ಗೊತ್ತಾಗಿ ಮಾಧವ ಅವನನ್ನೇ ನೋಡಿದ. ಅವನು ಹೇಳುತ್ತಿರುವುದು ಕಿವಿಯ ಮೇಲೆ ಬೀಳುತ್ತಲೇ ಇದ್ದರೂ ಅವನ ಗಮನವೆಲ್ಲಾ ಅವನ ಬಾಯಿಂದ, ಮೂಗಿನಿಂದ ಹೊರ ಹೋಗುತ್ತಿರುವ ಧೂಮವನ್ನೇ ನೋಡುತ್ತಿತ್ತು.

imrana

ಹಂಪಿಯಲ್ಲಿ ಬಂಧಿತನಾದ “ಭಯೋತ್ಪಾದಕ” ಇಮ್ರಾನ್ ಏನಾದ?


– ಪರಶುರಾಮ ಕಲಾಲ್


 

‘ಭಯೋತ್ಪಾದಕ’ ಅಂತಹ ಪೊಲೀಸರು ಸಂದೇಹ ಪಡುವುದಕ್ಕೆ ಅರ್ಹತೆ ಏನು ಅಂದರೆ ನೀವು ಮುಸ್ಲಿಂ ಆಗಿರಬೇಕು ಹಾಗೂ ನಮಾಜು ಮಾಡುವುದಕ್ಕೆ ಮಸೀದಿಗೆ ಹೋಗುತ್ತಿರಬೇಕು. ನಿಮ್ಮನ್ನು ಸಂದೇಹದ ಮೇಲೆ ಬಂಧಿಸಿದರೆ ಉಳಿದಿದ್ದನ್ನು ಪೊಲೀಸರು ಹಾಗೂ ಮಾಧ್ಯಮದವರು ಭಯೋತ್ಪಾದಕ ಸಂಘಟನೆಗಳನ್ನು ತಲೆಗೆ ಕಟ್ಟಿ ವದಂತಿಗಳನ್ನು ಅವರೇ ಹಬ್ಬಿಸುತ್ತಾರೆ. ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರ ಕಾರ್ಯಾಚರಣೆ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ಬರುವ ಪುಂಖಾನುಪುಂಖ ಸುದ್ದಿಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇಷ್ಟು.

ಹಾಗಾದರೆ ಈಗ ಬಂಧಿಸಿರುವವರು ಸಾಚಾನಾ, ಅವರು ಭಯೋತ್ಪಾದಕರಲ್ಲವಾ ಎಂದು ಕೇಳಿದರೆ ಅದು ಮುಗ್ಧ ಪ್ರಶ್ನೆಯಾಗುತ್ತದೆ. ತನಿಖೆ ನಡೆಸಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಪೊಲೀಸರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಮೇಲೆ ನ್ಯಾಯಾಲಯ ಅದನ್ನು ಒಪ್ಪಿಕೊಂಡು ಶಿಕ್ಷೆ ವಿಧಿಸಿದಾಗ ಮಾತ್ರ ಗೊತ್ತಾಗುವ ಸಂಗತಿಯಾಗಿದೆ. ಇಷ್ಟು ಹೇಳುವುದಕ್ಕೆ ಕಾರಣವಿದೆ. 5 ವರ್ಷದ ಹಿಂದೆ ಹಂಪಿಯಲ್ಲಿ ಶಂಕಿತ ಉಗ್ರ ಇಮ್ರಾನ್ ಎಂಬುವವನ ಬಂಧನವನ್ನು ಇದೇ ಸಿಸಿಬಿ ಪೊಲೀಸರು ನಡೆಸಿದರು. ಆಗ ಕೂಡಾ ಮಾಧ್ಯಮಗಳಲ್ಲಿ ಶಂಕಿತ ಉಗ್ರನ ಕುರಿತು ಪುಂಖಾನುಪುಂಖ ವರದಿಗಳು ಬಂದವು.

ಅದರಲ್ಲಿ ಆತ ಲಕ್ಸರಿ ತೋಯಿಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ವಿವಿಧ ಕಡೆ ಉಗ್ರರಿಗೆ ತರಬೇತಿ ನೀಡುತ್ತಿದ್ದನು. ಪೊಲೀಸರು ಆತನ ಬಳಿ ಎಕೆ47 ಹಾಗೂ ಇತರ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದಾಗಿ ಇಷ್ಟು ವರ್ಷಗಳ ನಂತರ ಈ ಇಮ್ರಾನ್ ಏನಾದ ಆತನ ಬಗ್ಗೆ ತನಿಖೆ ಎಲ್ಲಿಗೆ ಬಂತು ಅಂತಾ ನಮ್ಮ ಮಾಧ್ಯಮಗಳು ಕೇಳಿಲ್ಲ. ಸಿಸಿಬಿ ಪೊಲೀಸರು ಈ ಬಗ್ಗೆ ಏನೂ ಹೇಳುತ್ತಿಲ್ಲ.

imranaಇಮ್ರಾನ್ ಮೂಲತಃ ಜಮ್ಮು-ಕಾಶ್ಮೀರಕ್ಕೆ ಸೇರಿದ ವ್ಯಕ್ತಿಯಾಗಿದ್ದನು. ಈತ ಹಂಪಿಗೆ ವ್ಯಾಪಾರಿಯಾಗಿ ಬಂದು ಹಂಪಿ ವಿರೂಪಾಕ್ಷ ಬಜಾರ್‌ನಲ್ಲಿ ಒಂದು ಕೊಠಡಿ ಬಾಡಿಗೆ ಹಿಡಿದು ಅಲ್ಲಿ ಮುತ್ತು ರತ್ನ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯೊಂದನ್ನು ತೆರೆದಿದ್ದನು. ಹೊಸಪೇಟೆಯ ರಾಣಿಪೇಟೆಯಲ್ಲಿ ಒಂದು ಗಲ್ಲಿಯಲ್ಲಿ ಮಹಡಿ ಮನೆಯೊಂದನ್ನು ಬಾಡಿಗೆ ಪಡೆದು ವಾಸ್ತವ್ಯದಲ್ಲಿದ್ದನು.  ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜಮ್ಮು-ಕಾಶ್ಮೀರಕ್ಕೆ ಸೇರಿದ 40ಕ್ಕೂ ಹೆಚ್ಚು ಯುವಕರ ಅಲಂಕಾರಿಕ ವಸ್ತುಗಳು ಹಾಗೂ ಇತರೆ ಅಂಗಡಿಗಳನ್ನು ತೆರೆದಿದ್ದರು. ಇವರ ನಡುವೆ ಜಗಳ ಉದ್ಭವಿಸಿದರೆ ಇಮ್ರಾನ್ ಅದನ್ನು ಬಗೆಹರಿಸುತ್ತಾ ಅವರ ನಾಯಕನಂತಿದ್ದನು.

ಹಂಪೆಯಲ್ಲಿ ಜಮ್ಮು-ಕಾಶ್ಮೀರದ ಯುವಕರು ವಿದ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದಾರೆ ಎಂದು ಸಂಘ ಪರಿವಾರದ ಸಂಘಟನೆಗಳು ದೂರುತ್ತಲೇ ಇದ್ದವು. ಒಂದು ದಿನ ರಾತ್ರಿ 11 ಗಂಟೆಯ ಸುಮಾರಿಗೆ ಇಮ್ರಾನ್ ಬಾಡಿಗೆ ಮನೆಗೆ ಬಂದ ಸಿಸಿಬಿ ಪೊಲೀಸರು ಆತನನ್ನು ಕರೆದುಕೊಂಡು ಹೋದರು. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ.

ಎರಡು-ಮೂರು ದಿನದ ನಂತರ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆದಲ್ಲಿ ಬಸ್‌ನಲ್ಲಿ ಹೊರಟಿದ್ದ ಇಮ್ರಾನ್‌ನನ್ನು ಬಂಧಿಸಿರುವುದಾಗಿ ಸಂಜೆಯ ವೇಳೆ ಪ್ರಕಟಿಸಿದರು.   ಈ ಸುದ್ದಿಯು ಮರುದಿನ ಪ್ರಕಟವಾಗಿ ಕಮಲಾಪುರ ಪೊಲೀಸರು ಹಂಪಿಯಲ್ಲಿರುವ ಅವನ ಅಂಗಡಿಯನ್ನು ಶೋಧನೆ ನಡೆಸಿ ಅದನ್ನು ಬೀಗ ಹಾಕಿ ಸುಪರ್ದಿಗೆ ತೆಗೆದುಕೊಂಡರು. ಅಲ್ಲಿ ಕುರಾನ್ ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಮರುದಿನ ಸಿಸಿಬಿ ಪೊಲೀಸರು ನಸುಕಿನಲ್ಲಿಯೇ ಇಮ್ರಾನ್ ಬಾಡಿಗೆ ಮನೆಗೆ ಬಂದರು. ಇಮ್ರಾನ್ ದಿನಚರಿ ಹೇಗಿತ್ತು ಅಂದರೆ ಬೆಳಿಗ್ಗೆ ತಿಂಡಿ ತಿಂದು ತನ್ನ ಬೈಕ್ ಏರಿ ಹಂಪಿಗೆ ಹೊರಟನೆಂದರೆ ಸಂಜೆಯೇ ಮನೆಗೆ ಮರಳುವುದು. ಬೀಗವನ್ನು ಕೆಳಗಿನ ಮನೆಯ ಓನರ್‌ಗೆ ಕೊಟ್ಟು ಹೋಗುತ್ತಿದ್ದನು.  ಈತ ವಾಸಿಸುತ್ತಿದ್ದ ಮನೆ ಎಷ್ಟು ಚಿಕ್ಕದು ಎಂದರೆ ಜೋರಾಗಿ ಓಡಾಡಿದರೆ ಕೆಳಗಿನ ಮನೆಯವರು ಸ್ವಲ್ಪ ಮೆಲ್ಲಗೆ ಓಡಾಡಿ ಎಂದು ಹೇಳುವಂತೆ ಇತ್ತು. ಇತನ ಮನೆಯನ್ನು ಜಾಲಾಡಿದ ಪೊಲೀಸರಿಗೆ ಅಲ್ಲಿಯೇ ಎಕೆ-47 ಮತ್ತಿತರ ಅಯುಧಗಳು ದೊರಕಿದವು ಎಂದು ನಂತರ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಅಲ್ಲಿ ಏನೂ ಸಿಕ್ಕಿರಲಿಲ್ಲ.

ಸಿಸಿಬಿ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ (ಇವರು ಕನ್ನಡದ ಸೂಕ್ಷ್ಮ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣರ ಮಗ) ಬೆಳಿಗ್ಗೆ ಜೀಪಿನಲ್ಲಿ ಬಂದಾಗ ಜೊತೆಯಲ್ಲಿ ಸಂಘ ಪರಿವಾರಕ್ಕೆ ಸೇರಿದ ಯುವಕನೊಬ್ಬ ಜೊತೆಯಲ್ಲಿದ್ದನು. ಇತನ ಮೇಲೆ ಆಗ ಎಷ್ಟು ಪ್ರಕರಣಗಳು ಇದ್ದವು ಎಂದರೆ ಪೊಲೀಸರು ಆತನನ್ನು ಗಡಿಪಾರು ಮಾಡಲು ಆಲೋಚಿಸಿದ್ದರು. ಫೈಲ್ ಕೂಡಾ ರೆಡಿ ಮಾಡಿದ್ದರು. ಈಗ ಆತ ಎಲ್ಲರಿಗೂ ಹಿರೋ ತರಹ ಕಾಣಿಸಿಕೊಂಡು ಬಿಟ್ಟ.

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬಗ್ಗೆ ಇರುವ ಪ್ರೀತಿಯಿಂದ ನಾನು ತುಂಬಾ ಇಷ್ಟ ಪಡುತ್ತಿದ್ದ ರವಿಕಾಂತೇ ಗೌಡರನ್ನು ಈ ಸ್ಥಿತಿಯಲ್ಲಿ ನೋಡಿದ ಮೇಲೆ ನನಗಿದ್ದ ಪ್ರೀತಿ ಹೊರಟು ಹೋಯಿತು.

ಬಿಜೆಪಿ ಸರ್ಕಾರ ಬಂದ ಮೇಲೆ ಅದೇ ಪೊಲೀಸ್ ಅಧಿಕಾರಿಗಳು ಸಾರ್ ಅನ್ನುತ್ತಾ ಆತನ ಮುಂದೆ ಕೈಕಟ್ಟಿಕೊಂಡು ಟ್ರಾನ್ಸ್‌ಫರ್‌ಗೆ ಕೇಳಿಕೊಳ್ಳುತ್ತಿರುವ ದಯನೀಯ ಸ್ಥಿತಿ ಬಂತು.

ಇದಾದ ಮೇಲೆ ಇಮ್ರಾನ್ ಸುದ್ದಿಯೇ ಇಲ್ಲ. ಇಮ್ರಾನ್ ಬಂಧನ ನಂತರ ಹಂಪಿಯಲ್ಲಿದ್ದ ಉಳಿದ ಜಮ್ಮು-ಕಾಶ್ಮೀರ ಯುವಕರ ಸ್ಥಿತಿ ನಾಯಿಪಾಡಾಯಿತು. ಬಾಡಿಗೆ ನೀಡಿದವರು ಅಂಗಡಿ ಖಾಲಿ ಮಾಡಲು ಒತ್ತಡ ನೀಡಲಾರಂಭಿಸಿದರು. ಪೊಲೀಸರು ಎಲ್ಲರನ್ನು ದಿನಾ ಪೊಲೀಸ್ ಠಾಣೆಗೆ ಬಂದು ಹಾಜುರಾಗಬೇಕು, ಸಹಿ ಮಾಡಿ ಹೋಗಬೇಕು, ಎಂದರು. ಹಂಪಿ ಗ್ರಾಮ ಪಂಚಾಯ್ತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಒಂದು ಠರಾವು ಪಾಸು ಮಾಡಿತು. ಜಮ್ಮು-ಕಾಶ್ಮೀರದ ಯುವಕರಿಗೆ ಅಂಗಡಿ, ಮನೆ ಬಾಡಿಗೆ ನೀಡಿದವರು ಅವರನ್ನು ಬಿಡಿಸಬೇಕು ಅವರು ಹಂಪಿಯಲ್ಲಿ ಇರಬಾರದು ಎನ್ನುವುದೇ ಈ ತೀರ್ಮಾನ. ಅವರು ಎಲ್ಲರೂ ಹಂಪಿಯನ್ನು ತೊರೆದು ಜಮ್ಮು- ಕಾಶ್ಮೀರಕ್ಕೆ ಹೋದರು. ಹೋಗಿ ಅಲ್ಲಿ ಏನು ಮಾಡುತ್ತಾರೆ ಗೊತ್ತಿಲ್ಲ.

ಭಾರತದ ನೆಲದಲ್ಲಿ ಅವರಿಗೆ ಜಾಗ ಇಲ್ಲ ಎನ್ನುವುದು ಮಾತ್ರ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಇಮ್ರಾನ್ ಏನಾದ? ಆತನ ಮೇಲೆನ ಆರೋಪಗಳು ಏನಾದವು? ಸಾಕ್ಷ್ಯಾಧಾರಗಳು ಸಿಕ್ಕವೇ? ಅತನ ಮೇಲೆ ಚಾರ್ಜ್‌ಶೀಟ್ ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತಾ ಅಥವಾ ತನಿಖೆ ಈಗಲೂ ಮುಂದುವರೆದಿದೆಯಾ? ಬೆಂಗಳೂರಿನ ಸಿಸಿಬಿ ಪೊಲೀಸರೇ ಹೇಳಬೇಕು.

ಹೊಸಪೇಟೆಯಲ್ಲಿ ಕಂಡ ಶ್ರೀರಾಮಲು ಪಾದಯಾತ್ರೆ


– ಪರಶುರಾಮ ಕಲಾಲ್


 

ಬಸವ ಕಲ್ಯಾಣದಿಂದ ಪಾದಯಾತ್ರೆ ನಡೆಸಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ. ಶ್ರೀರಾಮಲು ಪಾದಯಾತ್ರೆಯ ಶನಿವಾರ (19/5/12) ಹೊಸಪೇಟೆಗೆ ಆಗಮಿಸಿ ಬಹಿರಂಗ ಸಭೆ ನಡೆಯಿತು.

ಶ್ರೀರಾಮಲು ಹಾಗೂ ಇತರೆ ಮುಖಂಡರ ಮಾತು ಕೇಳಿದ ಮೇಲೆ ಶ್ರೀರಾಮಲು ಸ್ಥಾಪಿಸಿರುವ ಬಿ.ಎಸ್.ಆರ್. ಪಕ್ಷ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಶ್ರೀರಾಮಲು ಮುಖ್ಯಮಂತ್ರಿಯಾಗುತ್ತಾರೆಂಬ ಅವರ ವಿಶ್ವಾಸ ನೋಡಿ ಆಶ್ಚರ್ಯವಾಯಿತು.

ಕೆಎಂಎಫ್ ಆಧ್ಯಕ್ಷ ಶಾಸಕ ಜಿ.ಸೋಮಶೇಖರ ರೆಡ್ಡಿಯವರ ಪ್ರಕಾರ ರಾಮಲುರನ್ನು ಮುಖ್ಯಮಂತ್ರಿ ಮಾಡುವ ಕನಸು ಈಗ ಜೈಲಿನಲ್ಲಿರುವ ಜಿ.ಜನಾರ್ಧನ ರೆಡ್ಡಿ ಗುರಿಯಾಗಿದೆಯಂತೆ, ಅವರು ಇದನ್ನು ನನಸು ಮಾಡುವವರಿಗೆ ಮಲಗುವುದಿಲ್ಲವಂತೆ. ಮೊದಲಿಂದಲೂ ಜನಾರ್ಧನ ರೆಡ್ಡಿ ಹಾಗೇ. ಅವರು ಜೈಲಿನಿಂದ ಹೊರ ಬರುತ್ತಾರೆ. ಬಂದು ಬಿಎಸ್ಆರ್ ಪಕ್ಷವನ್ನು ಬೆಳೆಸಿ, ರಾಮಲು ಮುಖ್ಯಮಂತ್ರಿ ಮಾಡುತ್ತಾರೆ. ಇದು ಶತಃಸಿದ್ಧ ಅನ್ನುವುದು ಅವರ ಅಂಬೋಣ.

“ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಪಾದಯಾತ್ರೆ ನಡೆಸಿದ ನಂತರ ಮುಖ್ಯಮಂತ್ರಿಯಾದರು. ಹಾಗೇ ನಮ್ಮ ಬಿಎಸ್ಆರ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮಲು ಮುಖ್ಯಮಂತ್ರಿಯಾಗುತ್ತಾರೆ. ಜನಾರ್ಧನ ರೆಡ್ಡಿ ಮಾತ್ರ ಆಕ್ರಮ ಗಣಿಗಾರಿಕೆ ನಡೆಸಿದ್ದಾರೆಯೇ? ಬಲ್ಡೋಟ ಕಂಪನಿ, ಆನಂದ್ ಸಿಂಗ್, ಸಂತೋಷ ಲಾಡ್, ಅನಿಲ್ ಲಾಡ್ ಆಕ್ರಮ ಗಣಿಗಾರಿಕೆ ನಡೆಸಿಲ್ಲವೇ,” ಎಂದು ಪ್ರಶ್ನಿಸುವ ಸೋಮಶೇಖರ ರೆಡ್ಡಿ, “ಚಿತಾವಣೆಯ ಮೂಲಕ ಜನಾರ್ಧನ ರೆಡ್ಡಿಯನ್ನು ಜೈಲಿಗಟ್ಟಲಾಗಿದೆ. ಬಿಜೆಪಿಯನ್ನು ಬೆಳೆಸಿದ್ದು ಜನಾರ್ಧನ ರೆಡ್ಡಿ. ಅವರ ಬೆಂಬಲದಿಂದ ಶಾಸಕರು ಆಯ್ಕೆಯಾದರು. ಇವರನ್ನು ಹೀಗೆ ಬಿಟ್ಟರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಪರಿಶಿಷ್ಟ ಪಂಗಡದ ಬಿ.ಶ್ರೀರಾಮಲು ಅವರನ್ನು ಮಾಡಿ ಬಿಡುತ್ತಾರೆ ಎಂಬ ಭಯದಿಂದ ಅವರ ಮೇಲೆ ಗಣಿ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಅವರು ಹೊರ ಬರಲಿ ನೋಡಿ, ಶ್ರೀರಾಮಲುರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತಾರೆ;” ಹೀಗೆ ಸಾಗುತ್ತದೆ ಅವರ ಮಾತಿನ ವಾಗ್ಝರಿ.

ಇದು ಸೋಮಶೇಖರ ರೆಡ್ಡಿಯದು ಮಾತ್ರವಲ್ಲ. ಎಲ್ಲರ ಮಾತಿನ ವಾಗ್ಝರಿಯೇ. ಸ್ವತಃ ಶ್ರೀರಾಮಲು ಕೂಡಾ ಹೀಗೆಯೇ ಮಾತನಾಡುತ್ತಾರೆ. ಬಸವ ಕಲ್ಯಾಣದಿಂದ ಅವರು ಪಾದಯಾತ್ರೆ ಮಾಡಲು ಬಸವಣ್ಣ ನ ಹೋರಾಟ ಕಾರಣವಂತೆ. ಬಿಜ್ಜಳನ ರಾಜ್ಯದಲ್ಲಿ ಹಣಕಾಸು ಸಚಿವನಾಗಿದ್ದ ಬಸವಣ್ಣನ ಮೇಲೆ ಇತರೆ ಸಚಿವರು ಭೃಷ್ಠಾಚಾರದ ಆರೋಪ ಹೊರಿಸಿದ್ದರಿಂದ ಬಸವಣ್ಣ ತನ್ನ ಕಿರೀಟವನ್ನು ಬಿಜ್ಜಳನ ಮುಂದೆ ಇಟ್ಟು ಜನರ ಬಳಿ ಹೊರಟು ಜನಜಾಗೃತಿ ಮಾಡಿದನಂತೆ.

ಹಾಗೇ ಜನಜಾಗೃತಿ ಉಂಟು ಮಾಡಲು ಈ ಪಾದಯಾತ್ರೆ ನಡೆಸುತ್ತಿರುವೆ. ಬಿ.ಎಸ್.ಆರ್. ಪಕ್ಷ ಅಧಿಕಾರಕ್ಕೆ ಬಂದರೆ 2ರೂ.ಕೆಜಿ ಅಕ್ಕಿ ನೀಡುವೆ. ಹೀಗೆ ಅವರ ಪ್ರಣಾಳಿಕೆ ಬಿಚ್ಚುತ್ತಾ ಹೋಗುತ್ತದೆ.

ಕರ್ನಾಟಕದ ಜನರ ಬಗ್ಗೆ ಥೇಟ್ ತೆಲುಗು ಸಿನಿಮಾದ ಸ್ಟೈಲ್ ನಲ್ಲಿ ಮಾತನಾಡುವ ಇವರು, ರಾಜಕೀಯ ಅನ್ನುವುದು ಅಧಿಕಾರ ಪಡೆಯುವುದೇ ಎಂದು ಭಾವಿಸಿ ಬಿಟ್ಟಿದ್ದಾರೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಾಕೆ ವಿಫಲವಾಗಿವೆ ಎಂಬ ಬಗ್ಗೆ ಇವರು ಕನಿಷ್ಟ ಯೋಚಿಸಿಲ್ಲ. ಅದು ಹೋಗಲಿ, ಕರ್ನಾಟಕ ವಿಭಿನ್ನ ಬಗೆಯ ಪ್ರಾದೇಶಿಕ,ತೆ ಹಲವು ಬಗೆಯ ಸಂಸ್ಕೃತಿಗಳನ್ನು ಹೊಂದಿರುವ ಪ್ರದೇಶ ಎನ್ನುವ ಸೂಕ್ಷ್ಮತೆ ಕೂಡಾ ಇಲ್ಲ.

ತುಂಬಾ ಬಾಲಿಶವಾದ ಮಾತುಗಳನ್ನು ವೇದಿಕೆಯಲ್ಲಿ ಆಡುವ ಇವರನ್ನು ಜನ ಸಹಿಸಿ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಾರೆ. ಇದು ಮತ್ತೊಂದು ವಿಶೇಷ. ಎಲ್ಲರಲ್ಲೂ ಸೂಕ್ಷ್ಮತೆ ಮರೆಯಾಗುತ್ತಿದೆಯಾ? ಅಥವಾ ಜನರ ಜಾಣತನವೋ ಗೊತ್ತಾಗುತ್ತಿಲ್ಲ. ರಾಜಕೀಯ ಪಕ್ಷ ಅನ್ನುವುದು ಇಷ್ಟು ಅಸಡ್ಡೆಯಿಂದ ಕೂಡಿದರೆ ಹೇಗೆ?

ಇನ್ನು ಪಾದಯಾತ್ರೆಯಲ್ಲಿ ಒಂದು ಸುಸಜ್ಜಿತ ಬಸ್, ಭಾಗವಹಿಸುವ ಜನರಿಗೆ ಊಟ, ನೀರು ಕೊಡಲು ಗುತ್ತಿಗೆ ನೀಡಿರುವುದು, ಜೊತೆಯಲ್ಲಿ ಇರುವ ಜನಶ್ರೀ ಚಾನಲ್‌ನ ಓಬಿ ವ್ಯಾನ್; ಈ ಬಗ್ಗೆ ಬರೆದರೆ ಅದೇ ಮತ್ತೊಂದು ಅಧ್ಯಾಯವಾಗುತ್ತದೆ.

ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ?


– ಪರಶುರಾಮ ಕಲಾಲ್  


 

ಪತ್ರಿಕೆಗಳ ವಿಶ್ವಾಸಾರ್ಹತೆಯು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾವ ಪತ್ರಿಕೆಯನ್ನು ವಿಶ್ವಾಸಾರ್ಹ ಎನ್ನುವುದು? ಅತ್ಯಂತ ಜನಪ್ರಿಯ ದಿನಪತ್ರಿಕೆ ಎಂದು ಹಾಕಿಕೊಳ್ಳುತ್ತಿದ್ದ ಪ್ರಜಾವಾಣಿ, ವಿಜಯ ಕರ್ನಾಟಕ ಬಂದ ಮೇಲೆ ಅದನ್ನು ತೆಗೆದು ಹಾಕಿ ಆ ಜಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಎಂದು ಹಾಕಿಕೊಂಡಿತು.

ಪ್ರಜಾವಾಣಿಯನ್ನು ನೆನೆದರೆ ದುಃಖ, ವಿಷಾದ ಎರಡೂ ಆಗುತ್ತದೆ. ಕೆ.ಎನ್.ಹರಿಕುಮಾರ್ ಇದ್ದಾಗ ಪ್ರಜಾವಾಣಿ ಹೇಗಿತ್ತು? ದಲಿತರ, ಹಿಂದುಳಿದ ವರ್ಗಗಳ ಪಾಲಿಗೆ ಎಲ್ಲಾ ಬಾಗಿಲು ತೆರೆದು ಪತ್ರಿಕೋದ್ಯಮದಲ್ಲಿ ಅವಕಾಶ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹರಿಕುಮಾರ್ ಅವರಿಗಿದ್ದ ಬದ್ಧತೆ, ದೂರದೃಷ್ಠಿ, ಸಾಮಾಜಿಕ ನ್ಯಾಯದ ಕಲ್ಪನೆ ಅನುಕರಣೀಯವಾಗಿತ್ತು. ಇದು ಹರಿಕುಮಾರ್‌ರ ನಂತರದ ದಿನಗಳಲ್ಲಿ ಪ್ರಜಾವಾಣಿಯಲ್ಲಿ ಕಂಡು ಬರಲಿಲ್ಲ. ಸಂಪಾದಕೀಯ ಹೊಣೆ ಹೊತ್ತವರು ಅದನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಇದು ನಮ್ಮ ಕೆಲಸ ಅಲ್ಲ ಎಂದುಕೊಂಡರು. ಹೀಗಾಗಿ ಪತ್ರಿಕೆ ಹೊಣೆ ಹೊತ್ತ ಸಂಪಾದಕರು ಮಾಲೀಕರ ಸಂಪ್ರೀತಿ ಗಳಿಸುವ ಕೆಲಸ ನಡೆಸಿದರು. ಈ ಲೋಪವೇ ಪ್ರಜಾವಾಣಿಯ ಇವತ್ತು ಈ ಸ್ಥಿತಿ ಮುಟ್ಟಲು ಕಾರಣವಾಗಿದೆ.

ಹರಿಕುಮಾರ್ ನಂತರ ಬಂದ ಕೆ.ಎನ್. ತಿಲಕ್‌ಕುಮಾರ್, ಶಾಂತಕುಮಾರ್ ಅವರು ಹರಿಕುಮಾರರಷ್ಟು ಬುದ್ಧಿವಂತರಲ್ಲ. ಅವರು ತುಂಬಾ ಒಳ್ಳೆಯವರು. ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಸಂಪಾದಕೀಯ ಬಳಗ ತನ್ನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾ ಬಂತು. ಇದರಿಂದಾಗಿಯೇ, ಅತ್ಯಂತ ಜನಪ್ರಿಯವಾಗಿದ್ದ ಪತ್ರಿಕೆಯೊಂದು ವಿಜಯ ಕರ್ನಾಟಕ ಬಂದ ಮೇಲೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ ಎಂದು ಕರೆದುಕೊಳ್ಳಬೇಕಾಯಿತು. ಈಗ ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಜಯಂತಿಯಂದು ದೇವನೂರು ಮಹಾದೇವರ ಅತಿಥಿ ಸಂಪಾದಕತ್ವದಲ್ಲಿ ವಿಶೇಷ ಸಂಚಿಕೆ ರೂಪಿಸಿ ಸಾಂಸ್ಕೃತಿಕ ಲೋಕದವರಿಂದ ಭೇಷ್ ಅನ್ನಿಸಿಕೊಳ್ಳುತ್ತಿದೆ.

ಆದರೆ, ಇದೊಂದು ಸರ್ಕಸ್ ಎನ್ನುವುದು ಪ್ರಜಾವಾಣಿಯನ್ನು ಬಲ್ಲ ಎಲ್ಲರಿಗೂ ಗೊತ್ತು.

ಪ್ರಜಾವಾಣಿ ಮುಟ್ಟಿರುವ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯವಾಗಿ ಎರಡು ಅಥವಾ ಕೆಲವು ಕಡೆ ಮೂರು ಇರುವ ಸ್ಥಳೀಯ ಫೇಜ್‌ಗಳತ್ತ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಅಲ್ಲಿಯ ಭಾಷಾ ಶೈಲಿ, ಸುದ್ದಿಗಳ ಸಾರ ಎಲ್ಲವನ್ನೂ ಗಮನಿಸಿದರೆ ಪ್ರಜಾವಾಣಿಯ ಬಣ್ಣ ಬಯಲಾಗುತ್ತದೆ. ಪ್ರಜಾವಾಣಿಯಲ್ಲಿರುವ ಸ್ಥಾಪಿತ ಹಿತಾಸಕ್ತಿಗಳು ಇದನ್ನು ಮಾಲೀಕರಿಗೆ ಅನಿವಾರ್ಯ ಎಂದು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿವೆ. ಬರುತ್ತಿವೆ ಕೂಡಾ.

ಇಷ್ಟೆಲ್ಲದರ ನಡುವೆಯೂ ಪ್ರಜಾವಾಣಿ ರಾಜ್ಯಮಟ್ಟದಲ್ಲಿ ಇವತ್ತಿಗೂ ವಿಶ್ವಾಸಾರ್ಹ ಪತ್ರಿಕೆಯೇ. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ನಮ್ಮ ಆಯ್ಕೆ ಎನ್ನುವಂತಾಗಿದೆ.

ಪ್ರಜಾವಾಣಿಗೆ ಈಗಲೂ ಬದಲಾಗುವ ವಿಪುಲ ಅವಕಾಶಗಳಿವೆ. ಪ್ರಜಾವಾಣಿಯು ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದರೆ ಕರ್ನಾಟಕದಲ್ಲಿ ಅದು ಮತ್ತೇ ನಂಬರ್ ವನ್ ಆಗಲಿದೆ. ಆದರೆ ಇದಕ್ಕಾಗಿ ಕೆ.ಎನ್. ಶಾಂತಕುಮಾರ್ ತಮ್ಮ ಸುತ್ತಮುತ್ತಲು ಇರುವ ಬಹುಪರಾಕ್ ಜನರಿಂದ ಹೊರ ಬರಬೇಕಿದೆ. ಅವರು ಪ್ರಜಾವಾಣಿಯ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಸಹಜವಾಗಿ ಯೋಚಿಸಿದರೆ ಸಾಕು, ಸಾಕಷ್ಟು ಬದಲಾವಣೆಗಳು ಘಟಿಸುತ್ತವೆ. ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ ಪ್ರಜಾವಾಣಿಯು ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದು ವಿಶ್ವಾಸಾರ್ಹತೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಮತ್ತು ಅದಕ್ಕಾಗಿ ಸರ್ಕಸ್ ಮಾಡಬೇಕಿಲ್ಲ. ಅದು ತಾನು ತಾನಾಗಿಯೆ ರೂಪಗೊಳ್ಳಬೇಕು.

ಪ್ರಜಾವಾಣಿಯ ಜೊತೆ ಗುರುತಿಸಿಕೊಂಡೆ ಬೆಳೆದಿರುವ ನಮ್ಮಂತವರ ಹಾರೈಕೆ ಇದು. ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ ಎಂಬುದೇ ಇವತ್ತಿನ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.

ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ


– ಪರಶುರಾಮ ಕಲಾಲ್


 

ಭೀಮಾತೀರದಲ್ಲಿ.. ಸಿನಿಮಾ ಈಗ ವಿವಾದದ ವಸ್ತುವಾಗಿದೆ. ನಾನು ಬರೆದ ’ಭೀಮಾ ತೀರದ ಹಂತಕರು’ ಪುಸ್ತಕವನ್ನು ನೋಡಿಯೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಾದ ಮಾಡಿ, ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ. ಚಿತ್ರನಟ ವಿಜಯ್, ಟಿವಿ9 ಸ್ಟುಡಿಯೋದಲ್ಲಿ ರವಿ ಬೆಳಗೆರೆಯನ್ನು ಕುಳ್ಳರಿಸಿಕೊಂಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ ಫೋನ್‌ನಲ್ಲಿಯೇ ರವಿ ಬೆಳಗೆರೆ ಭಾಷೆಯಲ್ಲಿ ಹೇಳುವುದಾದರೆ ಕಂಡಂ ಮಾಡಿ ಹಾಕಿದ್ದಾನೆ. ಸುವರ್ಣ ಚಾನಲ್‌ನಲ್ಲಿ ಪ್ರತಾಪ ಸಿಂಹ ರವಿ ಬೆಳಗೆರೆಯ ಜನ್ಮ ಜಾಲಾಡಿ, ನನ್ನ ಎದುರು ಬಂದು ರವಿ ಬೆಳಗೆರೆ ತನ್ನ ವಿದ್ವತ್ ಪ್ರದರ್ಶಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲಾ ಪ್ರಹಸನ ನೋಡಿದ ಮೇಲೆ ಒಂದಿಷ್ಟು ಈ ಬಗ್ಗೆ ಚರ್ಚಿಸಬೇಕು ಎಂದು ಈ ಲೇಖನ ಬರೆಯುತ್ತಿರುವೆ.

ಚಂದಪ್ಪ ಹರಿಜನ ಎನ್ನುವನನ್ನು ಜಗತ್ತಿಗೆ ಪರಿಚಯಿಸಿದವನು ನಾನೇ ಎಂದು ರವಿ ಬೆಳಗೆರೆ ಎದೆತಟ್ಟಿಕೊಂಡು ಹೇಳಿದ್ದಾರೆ. ಎದೆಗೆ ಕಿವಿಗೊಟ್ಟು ಅವರು ಕೇಳಿಕೊಳ್ಳಲಿ ಚಂದಪ್ಪ ಹರಿಜನ ಸಾವಿಗೆ ನಾನೂ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ.

ಸಾಮಾನ್ಯನಾದ ವ್ಯಕ್ತಿಯೊಬ್ಬ ಸಾಮಾಜಿಕ ಕಾರಣಕ್ಕೂ, ಧ್ವೇಷದ ಕಾರಣಕ್ಕೂ ಅಪರಾಧಿಯಾಗಿ ಬದಲಾವಣೆಯಾದಾಗ ಆತನನ್ನು ಆ ದಾರಿಯಿಂದ ಹೊರ ತಂದು ಹೊಸ ದಾರಿ ತೋರಿಸಬೇಕಾಗಿದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಅದರ ಬದಲು ಆ ವ್ಯಕ್ತಿಯ ಅಪರಾಧವನ್ನು ವೈಭವಿಕರಿಸಿ, ಆತನನ್ನು ಹೀರೋ ಮಾಡುವ ಮೂಲಕ ಆತನಿಗೆ ಮತ್ತೊಂದು ಭ್ರಮೆಯನ್ನು ಉಣಬಡಿಸುವ ಮೂಲಕ ಆತ ಎನ್‌ಕೌಂಟರ್‌ನಲ್ಲೂ ವೀರನಂತೆ ಹೋರಾಡಲು ಹೋಗಿ ಸಾವನಪ್ಪಿಬಿಡುತ್ತಾನೆ. ಒಂದು ಪತ್ರಿಕೆಯ ಪ್ರಸರಣ ಏರಿಸಲು ಆತನನ್ನು ಹೀರೋ ಮಾಡಿ ಬಳಸಿಕೊಳ್ಳುವ ವಿಧಾನ ಇದೆಯಲ್ಲಾ ಇದು ಅತ್ಯಂತ ಹೇಯವಾದುದ್ದು.

ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಸೋಮ ಎಂಬ ಬಡಕಲು ಪುಡಿ ರೌಡಿಯೊಬ್ಬನಿಗೆ ಡೆಡ್ಲಿ ಸೋಮ ಎಂದು ಕರೆದು, ವರ್ಣಿಸಿ, ವೈಭವೀಕರಿಸಿದ್ದಕ್ಕೆ ಆ ಸೋಮು ಪೊಲೀಸರಿಗೆ ಶರಣಾಗದೇ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಗುಂಡಿಗೆ ಬಲಿಯಾಗಿ ಬಿಟ್ಟ.

ಯಾವುದೋ ಕಮರ್ಷಿಯಲ್ ಚಿತ್ರದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವುದೇ ಮೂಲಭೂತವಾಗಿ ಸರಿಯಾದುದ್ದಲ್ಲ. ಅದು ಪರವಾಗಿ ಇರಲಿ, ವಿರುದ್ಧವಾಗಿಯಾದರೂ ಇರಲಿ. ಅದು ದೊಡ್ಡ ಪಾಂಡಿತ್ಯದ ಚರ್ಚೆಯ ವಿಷಯವೇ? ತಮ್ಮ ತಮ್ಮ ವಿದ್ವತ್ ಎಂದು ಭಾವಿಸಿರುವ ಪೊಲೀಸ್ ರಿಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇತ್ತೇ?  ಇದು ಸ್ವಪ್ರತಿಷ್ಠೆಗಳ ನಡುವೆ ನಡೆಯುತ್ತಿರುವ ಕದನವಲ್ಲದೇ ಬೇರೇನೋ ಅಲ್ಲ.

ದರ್ಶನ್, ವಿಜಯ್ ಏನೇ ಎಳಸು ಇದ್ದರೂ ಚರ್ಚೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳು ಗಂಭೀರ ಪ್ರಶ್ನೆಗಳೇ ಆಗಿವೆ. ಖಾಸಗಿ ಬದುಕಿನ ಘಟನೆಗಳನ್ನು ವರ್ಣರಂಜಿತವಾಗಿ ಬರೆದು, ಅದೇ ಇವತ್ತಿನ ಪ್ರಸ್ತುತ ಸಮಸ್ಯೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವ ಅವರ ಮಾತು ಸುದ್ದಿಯನ್ನು ಮಾರಿಕೊಂಡೇ ಜೀವಿಸುವವರು ಕೇಳಿಕೊಳ್ಳಬೇಕಾದ ಮಾತೇ ಆಗಿತ್ತು.

ರಾಜ್ಯದಲ್ಲಿ ಬರಗಾಲ ತೀವ್ರ ರೀತಿಯಲ್ಲಿ ಕಾಡುತ್ತಿದೆ. ಜಾನುವಾರುಗಳಿಗೆ ಮೇವು ಇಲ್ಲ. ಹಳ್ಳಿಗಳ ಜನ ಗುಳೇ ಎದ್ದು ನಗರಗಳಿಗೆ ಹೋಗುತ್ತಿದ್ದಾರೆ. ಬಿಸಿಲು ತೀವ್ರವಾಗಿ ಹೆಚ್ಚಾಗಿದ್ದು, ಕರ್ನಾಟಕದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅನೇಕ ಕಡೆ ಕುಡಿಯುವ ನೀರು ಫ್ಲೊರೆಸೆಸ್‌ನಿಂದ  ಕೂಡಿದೆ. ಈಗ ಆ ನೀರು ಕೂಡಾ ಕುಡಿಯಲು ಸಿಗುತ್ತಿಲ್ಲ. ಜನ ಸಂಕಷ್ಟಗಳನ್ನೇ ಹೊದ್ದುಕೊಂಡು ಜೀವ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಉತ್ತರದಾಯಿತ್ವವಾಗಬೇಕಾದವರೂ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಒಣ ಪಾಂಡಿತ್ಯದ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಹಕ್ಕುದಾರಿಕೆಯ ಬಗ್ಗೆ, ತಮ್ಮ ಪ್ರತಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ?

ಕನ್ನಡದ ಯಾವ ದಿನ ಪತ್ರಿಕೆಯೂ ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರಣಿ ವರದಿ ಮಾಡುವ ಹೊಣೆಗಾರಿಕೆಯನ್ನು ಮರೆತು ಬಿಟ್ಟವಾ…? ಪ್ರಜಾವಾಣಿಯಾದರೂ ಈ ಕೆಲಸ ಮಾಡೀತು ಎಂದು ಕೊಂಡಿದ್ದರೆ ಅದು ಹುಸಿಯಾಗಿ ಹೋಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಕಾಲ ಇದಾಗಿದೆಯೆ?

ವಿಜಯ ಸಂಕೇಶ್ವರ ಸಾರಥ್ಯದಲ್ಲಿ ವಿಜಯವಾಣಿ ಎಂಬ ದಿನ ಪತ್ರಿಕೆಯು ಕಾಲಿಟ್ಟಿದೆ. ವಾರ ಪತ್ರಿಕೆಗಳ ಶೈಲಿಯು ದಿನ ಪತ್ರಿಕೆಗೆ ಬಂದು ಬಿಟ್ಟಿತಾ ಅನ್ನುವ ರೀತಿ ಸಾರಥ್ಯ ಬಂದು ಕೂತಿದೆ. ಇನ್ನೂ ಸಾರಥಿಗಳೇ ಎಲಾ, ಭಲರೇ ಎಲೈ ಸಾರಥಿ ನಾವುದಾರು ಎಂದರೆ ಎಂದು ಫರಾಕು ಹೇಳುವ ತಮ್ಮ ಕೀರ್ತಿ, ಅಭಿದಾನ, ಜಾತಿ, ಧರ್ಮ ಎಲ್ಲವನ್ನೂ ಪ್ರದರ್ಶಿಸಿ ಫಲಕ ಹಿಡಿದು ನಿಂತು ಕೊಳ್ಳುವ ಕಾಲಕ್ಕೆ ಬಂದು ನಿಂತಿದೆ ನಮ್ಮ ಕನ್ನಡದ ಪತ್ರಿಕೋದ್ಯಮ.

ಪ್ರಜಾವಾಣಿ, ಕನ್ನಡಪ್ರಭವನ್ನು ಕಟ್ಟಿ ಅದಕ್ಕೊಂದು ಘನತೆ, ಗಾಂಭಿರ್ಯ ತಂದಿರುವ ಮಹನೀಯರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರು ಬೇಜಾರು ಪಟ್ಟುಕೊಳ್ಳುವ ಸಂಭವವಿಲ್ಲ. ನಡೆಯಲಿ ಕರುನಾಟಕ ಪಾವನವಾಗಲಿ ಎಂದೇ ಹೇಳುವುದು ಬಿಟ್ಟು ಬೇರೇನೋ ತೋಚುತ್ತಿಲ್ಲ.

(ಚಿತ್ರಕೃಪೆ: ಚಿತ್ರಲೋಕ.ಕಾಮ್)