Category Archives: ಪರಶುರಾಮ್ ಕಲಾಲ್

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ

– ಪರಶುರಾಮ ಕಲಾಲ್

’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ.

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ.

ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ.

ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ.

ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್  ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ.

ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ?

ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ?

ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!

-ಪರಶುರಾಮ ಕಲಾಲ್.

ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ 60 ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.

ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ, ಇತಿಹಾಸ ನಿರ್ಮಾಣಕಾರರು ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.

ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.

ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೆ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಸ್ಸು ಬಂದಾಗ ಇನ್ನೂ ಸೇತುವೆ ಯಾಕೆ ಬೇಕು, ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.

ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.

ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ, ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು 30ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.

ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ವಿಹಾರ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.

ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?

ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು (ಪತ್ರಕರ್ತನಾಗಿದ್ದರಿಂದ). ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.

ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, “ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.” ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾದದ ನಗೆಯಲ್ಲಿಯೇ “ನಿಮ್ಮಂತವರ ಅಗತ್ಯ ಹಂಪಿಗೆ ಇದೆ,” ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.

“ಕಾಲಿದ್ದವರು ಹಂಪಿಯನ್ನು ನೋಡಬೇಕು,” ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.

ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.

ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. 12 ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ಅಂತೂ ಕೊನೆಗೆ ಬಂದಿರಲ್ಲ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿಬಿಟ್ಟು ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. “ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ,” ಎನಿಸಿಬಿಟ್ಟಿತು.

(ಚಿತ್ರಗಳು: ಲೇಖಕರದು)

Anna_Hazare

ಅಣ್ಣಾ ಹಜಾರೆ ಹೋರಾಟ : ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ?

ಪರಶುರಾಮ ಕಲಾಲ್

ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.

ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.

Anna_Hazare

Anna_Hazare (Pic courtesy: wikipedia)

ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)

ನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?

ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.

ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.

ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.

ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.