Category Archives: ಪ್ರಶಾಂತ್ ಹುಲ್ಕೋಡು

ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ನಿಜವಾದ ಸಂತಾಪ!


– ಪ್ರಶಾಂತ್ ಹುಲ್ಕೋಡು


‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆ’ ಎಂಬ ಪರಿಭಾಷೆ ಬದಲಾಗುತ್ತಿರುವ ಸಂದರ್ಭವಿದು. ಮೊನ್ನೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ಮುದ್ದು peshawar-terrorists-attack-classroomಕಂದಮ್ಮಗಳ ಮೇಲೆ ಗುಂಡು ಮತ್ತು ಬಾಂಬ್ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ತಾಲಿಬಾನ್ ಸಂಘಟನೆ (ಟಿಟಿಪಿ), ಜನರ ಭಾವನೆ ಜತೆ ಆಟ ಆಡುವ ವಿಕೃತ ರೂಪವನ್ನು ಪ್ರದರ್ಶಿಸಿದೆ. ಈ ದಾಳಿ ಜನರ ಮನಸ್ಸಿನಲ್ಲಿ ಮೂಡಿಸಿದ ಅಸಹನೆಯ ಪ್ರಮಾಣ ದೊಡ್ಡದಿದೆ. ಎಲ್ಲರ ಹೃದಯಗಳನ್ನೂ ಒಂದು ಕ್ಷಣ ತಬ್ಬಿಬ್ಬುಗೊಳಿಸಿದ್ದು 132 ಮಕ್ಕಳ ಸಾವು ಮತ್ತು ಸೈನಿಕ ಶಾಲೆಯ ಆವರಣದಲ್ಲಿ ನಡೆದ ರಕ್ತಪಾತ. ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂಬ ಮಾತುಗಳು ಈ ದಾಳಿಯ ನಂತರ ಹೆಚ್ಚು ಪ್ರಸ್ತುತತೆ ಪಡೆದುಕೊಂಡವು. ಸಾಮಾಜಿಕ ಜಾಲತಾಣದ ಕನ್ನಡ ಸಮುದಾಯ ಘಟನೆಗೆ ಸ್ಪಂದಿಸಿದ ರೀತಿ ಗಮನಿಸುವ ಹಾಗಿತ್ತು. ಮಾನ್ವಿಯ ಮಜೀಬ್‍ ಎಂಬುವವರು ಪೇಶಾವರದ ಸೈನಿಕ ಶಾಲೆಯ ದಾಳಿ ನಂತರ ಬರೆದ ‘ಫೇಸ್‍ಬುಕ್‍ ಬರಹ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಧರ್ಮದ ನೆಲೆಯನ್ನು ಮೀರಿ ಮಾನವರಾಗೋಣ ಎಂಬ ಸಂದೇಶ’ ಆ ಪೈಶಾಚಿಕ ದಾಳಿಯಲ್ಲಿ ಮಡಿದ ಮಕ್ಕಳಿಗೆ ಸಲ್ಲಿಸಿದ ಸಂತಾಪದ ಅಭಿವ್ಯಕ್ತಿಯಾಗಿತ್ತು.

ಪೇಶಾವರದ ಸೈನಿಕ ಶಾಲೆಯ ಒಳಗೆ ದಾಳಿ ನಡೆಯುತ್ತಿದ್ದ ವೇಳೆಗೆ ಜಾಗತಿಕ ಮಾಧ್ಯಮಗಳು ಹಾಗೂ ನಮ್ಮ ರಾಷ್ಟ್ರೀಯ ಸುದ್ದಿವಾಹಿನಿಗಳು ಪದೇ ಪದೇ ಟಿಟಿಪಿಯ ಟ್ವೀಟ್‍ಗಳನ್ನು ಪ್ರಸ್ತಾಪಿಸುವ ಕೆಲಸವನ್ನು ಮಾಡುತ್ತಿದ್ದವು. ಇದು 2013ರ ಸೆಪ್ಟೆಂಬರ್‍ನಲ್ಲಿ ಕೀನ್ಯಾ ರಾಜಧಾನಿ ನೈರೋಭಿಯಲ್ಲಿ ನಡೆದ ಮಾಲ್‍ ಮೇಲಿನ ಭಯೋತ್ಪಾದನಾ ದಾಳಿಯನ್ನು ನೆನಪಿಸುತ್ತಿತ್ತು. ಅಂದು ಅಲ್ಲಿನ ವೆಸ್ಟ್‍ಗೇಟ್‍ ಮಾಲ್‍ಗೆ ಅಲ್‍-ಶಬಾಬ್‍ ಎಂಬ ಉಗ್ರ ಸಂಘಟನೆಯ ಕಾರ್ಯಕರ್ತರು ನುಗ್ಗಿದ್ದರು. ಮೂರು ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿತ್ತು. ಮಾಲ್‍ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ಕ್ಯಾಮೆರಾಗಳಿದ್ದವು. ವಿಶೇಷ ಎಂದರೆ, ಕೀನ್ಯಾ ಮಿಲಿಟರಿ ತನ್ನ ಕಾರ್ಯಾಚರಣೆ ಮುಗಿಸುವ peshawar-terror-attack1ವೇಳೆಗೆ ಅಲ್‍- ಶಬಾಬ್‍ ದಾಳಿ ನಡೆಸಿದ ಉದ್ದೇಶದ ಕುರಿತು ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿತ್ತು. ಅದಕ್ಕೆ ಕಾರಣವಾಗಿದ್ದು, ಅಲ್‍-ಶಬಾಬ್‍ನ ಟ್ವಿಟರ್‍ ಅಕೌಂಟ್‍. ಒಂದು ಕಡೆ ದಾಳಿ ನಡೆಯುತ್ತಿದ್ದರೆ, ಅಲ್‍-ಶಬಾಬ್‍ ದಾಳಿಯ ಕ್ಷಣಕ್ಷಣದ ಅಪ್‍ಡೇಟ್‍ನ್ನು ಟ್ವಿಟರ್‍ನಲ್ಲಿ ನೀಡುತ್ತಿತ್ತು. ಅನಿವಾರ್ಯವಾಗಿ ಮಾಧ್ಯಮಗಳು ಇದನ್ನು ಸುದ್ದಿಯ ರೂಪದಲ್ಲಿ ಭಿತ್ತರಿಸುತ್ತ ಹೋದವು. ದಾಳಿ ಮುಗಿಯುವ ವೇಳೆಗೆ ಅಲ್‍-ಶಬಾಬ್‍, ಕೇವಲ ಬಂದೂಕಿನ ದಾಳಿ ಮಾತ್ರವಲ್ಲ, ಮಾಹಿತಿ ಯುದ್ಧದಲ್ಲೂ ಕೀನ್ಯಾ ಸರಕಾರವನ್ನು ಮಣಿಸಿತ್ತು. ಅದು ಭಯೋತ್ಪಾದಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವ ಪರಿಗೆ ಸಾಕ್ಷಿಯಾಯಿತು.

ಮೊನ್ನೆ, ಪೇಶಾವರದ ಸೈನಿಕ ಶಾಲೆ ಮೇಲಿನ ದಾಳಿಯಲ್ಲೂ ಇದು ಪುನಾರಾವರ್ತೆಯಾಯಿತು. ಒಂದು ಕಡೆದ ಮಕ್ಕಳಿಗೆ ಗುಂಡಿಕ್ಕಿವ ಕೆಲಸ ನಡೆಯುತ್ತಿದ್ದರೆ, ತೆಹ್ರಿಕ್‍-ಇ-ತಾಲಿಬಾನ್‍ ಪಾಕಿಸ್ತಾನ್‍ (ಟಿಟಿಪಿ) ತನ್ನ ಟ್ವಿಟರ್‍ ಖಾತೆಯಲ್ಲಿ ದಾಳಿಯ ಕುರಿತು ಮಾಹಿತಿ ನೀಡುತ್ತಿತ್ತು. ಇದನ್ನು ಮಾಧ್ಯಮಗಳು ಪಾಕಿಸ್ತಾನದ ಜನಪ್ರತಿನಿಧಿಗಳಿಗೆ, ಮಿಲಿಟರಿ ಅಧಿಕಾರಿಗಳಿಗೆ ಪ್ರಶ್ನೆಯ ರೂಪದಲ್ಲಿ ತಲುಪಿಸುವ ಕೆಲಸ ಮಾಡಿದವು. ಇವತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬೇಕಿದೆ. ಕೇವಲ ದಾಳಿ ನಡೆಸುವುದು, ಒಂದಷ್ಟು ಜನರನ್ನು ಬಲಿ ತೆಗೆದುಕೊಂಡು ಮತ್ತೆ ಹಿನ್ನೆಲೆಗೆ ಸರಿಯುತ್ತಿದ್ದ ಕಾಲ ಇವತ್ತು ಬದಲಾಗಿದೆ. ದಾಳಿಯ ಜತೆಗೆ ತಮ್ಮ ಉದ್ದೇಶವನ್ನೂ ಅವು ಮುನ್ನಲೆಗೆ ತರಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ. ಕೇವಲ ಶಸಸ್ತ್ರ ಯುದ್ಧ ಮಾತ್ರವಲ್ಲ, ಮಾಹಿತಿಯ ಯುದ್ಧಕ್ಕೂ ಅವು ನೀಡುತ್ತಿರುವ ಪ್ರಾಶಸ್ತ್ಯಕ್ಕೆ ಇತ್ತೀಚೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.

ಲಂಡನ್‍ ಮೂಲಕ ಟೆಲಿಗ್ರಾಫ್‍ ಪತ್ರಿಕೆ ಭಯೋತ್ಪಾದಕ ಸಂಘಟನೆಗಳು ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್‍, ಇನ್ಟಾಗ್ರಾಮ್‍ನಂತಹ ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುತ್ತಿರುವ ಕುರಿತು ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, “ಸುಮಾರು 7 ಲಕ್ಷ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಐಸಿಸ್‍ನಂತಹ ಉಗ್ರ ಸಂಘಟನೆ ಕಳೆದ ವರ್ಷ ಉತ್ತರ ಇರಾಕ್‍ನ ನಗರವೊಂದರ ಮೇಲಿನ ದಾಳಿ ಸಮಯದಲ್ಲಿ ಒಂದೇ ದಿನ ಸುಮಾರು 40 ಸಾವಿರ ಟ್ವೀಟ್‍ಗಳನ್ನು ಮಾಡಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಪೂರಕವಾಗಿವೆ ಎಂಬ ಕಾರಣಕ್ಕೆ ಸುಮಾರು ಒಂದು ಸಾವಿರ ಖಾತೆಗಳನ್ನು ಟ್ವಿಟರ್‍ ಮುಚ್ಚಿದೆ.’’ ಕೀನ್ಯಾದ ಮಾಲ್‍ ಮೇಲಿನ ದಾಳಿಗೆ ಎರಡು ದಿನ ಮುಂಚೆ ಅಷ್ಟೆ ಅಲ್‍-ಶಬಾಬ್‍ ಹೊಸ ಟ್ವಿಟರ್‍ ಖಾತೆಯನ್ನು ತೆರೆಯಿತು. ಅದನ್ನು ಮಾಧ್ಯಮಗಳಿಗೆ ತಲುಪಿಸುವ ಕೆಲಸವನ್ನೂ ಮಾಡಿತ್ತು. ದಾಳಿ ಆರಂಭಿಸುತ್ತಿದ್ದಂತೆ ಹೊಸ ಖಾತೆಯಲ್ಲಿ ಮಾಹಿತಿ peshawar-terror-attack2ನೀಡುವ ಮೂಲಕ ಕೀನ್ಯಾ ಸರಕಾರದ ಅಧಿಕೃತ ಹೇಳಿಕೆಗಳನ್ನೂ ಮೀರಿ ತನ್ನ ನಿಲುವನ್ನು ಜಗತ್ತಿಗೆ ಸಾರಿ ಹೇಳಿತು. ಇವತ್ತು ಇರಾಕ್‍, ಮಧ್ಯಪ್ರಾಚ್ಯ ದೇಶಗಳಲ್ಲಿ ಭಯೋತ್ಪಾದಕ ದಾಳಿಯ ದೃಶ್ಯಗಳನ್ನು ಯೂ-ಟ್ಯೂಬ್‍ಗೆ ಅಪ್‍ಲೋಡ್‍ ಮಾಡಲಾಗುತ್ತಿದೆ. ಇದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಜಗತ್ತಿಗೆ ಭಿತ್ತರಿಸುವ ಅನಿವಾರ್ಯ ಕರ್ಮಕ್ಕೆ ಸಿಲುಕಿವೆ.

ಇತ್ತೀಚಿಗೆ ಬೆಂಗಳೂರಿನಿಂದ ‘ಐಸಿಸ್‍ ಪರ ಪ್ರಚಾರ’ ಮಾಡುವ ಟ್ವಿಟರ್‍ ಖಾತೆಯೊಂದು ಚಟುವಟಿಕೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಂಡನ್‍ ಮೂಲಕ ಚಾನಲ್‍ 4 ಭಿತ್ತರಿಸಿತ್ತು. ಇಲ್ಲಿ ಐಸಿಸ್‍ ಪರ ಪ್ರಚಾರವೇ ಹೊರತು ಐಸಿಸ್‍ನ ಅಧಿಕೃತ ಖಾತೆ ಅಲ್ಲ ಎಂಬುದನ್ನು ಗಮನಿಸಬೇಕಿದೆ. ಸುದ್ದಿ ಭಿತ್ತರಗೊಂಡ ಬೆನ್ನಿಗೇ ಬೆಂಗಳೂರು ಪೊಲೀಸರು ಪಶ್ಚಿಮ ಬಂಗಾಳ ಮೂಲದ ಮೆಹದಿ ಮಸ್ರೂರ್ ಬಿಸ್ವಾಸ್‍ ಎಂಬ ಯುವಕನನ್ನು ಬಂಧಿಸಿದ್ದರು. ಮೆಹದಿಯ ಬಂಧನ ಮತ್ತು ಅದರ ವಿವರಗಳು ಈ ಭಯೋತ್ಪಾದಕ ಚಟುವಟಿಗೆಳ ಮಾಹಿತಿ ಯುದ್ಧದ ಕುರಿತು ಹೊಸ ಆಯಾಮವನ್ನು ನೀಡುತ್ತವೆ. ಚಾನಲ್‍ 4 ನಲ್ಲಿ ಭಿತ್ತರಗೊಂಡ ಸುದ್ಧಿಯನ್ನು ಆಧಾರವಾಗಿ ಇಟ್ಟುಕೊಂಡು ಹೇಳುವುದಾದರೆ, ಸುದ್ದಿವಾಹಿನಿ ‘ಶಮಿ ವಿಟ್ನೆಸ್‍’ ಎಂಬ ಹೆಸರಿನಲ್ಲಿ ಮುಸ್ಲಿಂ ಧಾರ್ಮಿಕತೆಯ ಕುರಿತು ಟ್ವೀಟ್‍ಗಳು ಹರಿದಾಡುತ್ತಿರುವುದನ್ನು ಗಮನಿಸಿದೆ. ಅದಕ್ಕೆ ಟಿಪ್‍ ಸಿಕ್ಕಿರುವುದು ಈ ಕುರಿತು ಅಧ್ಯಯನ ನಡೆಸುತ್ತಿರುವ ಲಂಡನ್‍ನ ಕಿಂಗ್ಸ್‍ ಯೂನಿವರ್ಸಿಟಿಯಿಂದ ಅನ್ನಿಸುತ್ತದೆ. ಈ ಖಾತೆಯ ಮಾಹಿತಿಯಿಂದ ಪ್ರೇರಣೆಗೊಂಡ ಲಂಡನ್‍ ಮೂಲದ ಯುವಕನೊಬ್ಬ ಐಸಿಸ್‍ ಸೇರಿ ಹತನಾದ ಕುರಿತು ಮಾಹಿತಿ ಕಲೆ ಹಾಕಿದೆ. ನಂತರ ‘ಶಮಿ ವಿಟ್ನೆಸ್‍’ ಖಾತೆಯ ಮೂಲವನ್ನು ಹುಡುಕಿದೆ. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮೆಹದಿಯನ್ನು ಅದು ಸಂಪರ್ಕಿಸಿದೆ. ಈ ಸಮಯದಲ್ಲಿ ಮೆಹದಿ ಜತೆ ದೂರವಾಣಿಯಲ್ಲಿ ಮಾತನಾಡಿರುವ ಸುದ್ದಿ ವಾಹಿನಿ ಆತನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಶ‍್ನೆಗಳನ್ನು ಹಾಕಿದೆ. ವಾಹಿನಿಗೆ ದೂರವಾಣಿ ಮೂಲಕ ಮೆಹದಿ ನಡೆಸಿದ ಮಾತುಕತೆ ಹೀಗಿದೆ:

ಮೆಹದಿ: ನನಗೆ ಅವಕಾಶ ಇದ್ದಿದ್ದರೆ ಎಲ್ಲವನ್ನೂ ಬಿಟ್ಟು ಅವರ (ಐಸಿಸ್‍) ಜತೆ ಸೇರಿಕೊಳ್ಳುತ್ತಿದ್ದೆ ಅನ್ನಿಸುತ್ತದೆ.
ಚಾನಲ್‍ 4: ನಿನ್ನನ್ನು ತಡೆದಿದ್ದು ಏನು?
ಮೆಹದಿ: ಕುಟುಂಬಕ್ಕೆ ನನ್ನ ಅಗತ್ಯವಿದೆ. ನನ್ನ ತಂದೆ ತಾಯಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ.
ಚಾನಲ್‍ 4: ಅಂದ್ರೆ, ನಿನಗೆ ಅವಕಾಶ ಇದ್ದಿದ್ದರೆ ನೀನು ಐಸಿಸ್‍ ಸೇರಿಕೊಳ್ಳುತ್ತಿದ್ದೆ ಅಲ್ವಾ?
ಮೆಹದಿ: ಬಹುಶಃ…
ಚಾನಲ್‍ 4: ಹಾಗಾದ್ರೆ, ಐಸಿಸ್‍ನ ಮೆಥೆಡ್ಸ್‍ಗಳ ಬಗ್ಗೆ ನಿನಗೆ ಒಪ್ಪಿಗೆ ಇದೆ?
ಮೆಹದಿ: ನಾಟ್‍ ಆಲ್‍ ಮೆಥೆಡ್ಸ್‍…ನೋ…ಬಟ್‍ ಮೋಸ್ಟ್ಲಿ…
ಚಾನಲ್‍ 4: ಯಾವ ಮೆಥೆಡ್ಸ್‍…ಕೊಲ್ಲುವುದು, ತಲೆ ಕಡಿವುಯುದು…?
ಮೆಹದಿ: ತಲೆ ಕಡಿಯುವ ಕುರಿತು ಕುರಾನ್‍ ಮತ್ತು ಹಾದಿಥ್‍ನಲ್ಲೂ ಉಲ್ಲೇಖ ಇದೆ. ನನಗನ್ನಿಸುತ್ತದೆ ನಿಜವಾದ ಮುಸ್ಲಿಂ ಸಕಾರಣಕ್ಕೆ ತಲೆ ಕಡಿಯುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ.
ಚಾನಲ್‍ 4: ನೀನು ಪ್ರಾಮಾಣಿಕ ಮುಸ್ಲಿಂ…?
ಮೆಹದಿ: ಪ್ರಯತ್ನ ಪಡುತ್ತಿದ್ದೇನೆ…ನಾನು ಇರಬಹುದಾ ಅಂಥ ಖಾತ್ರಿ ಇಲ್ಲ…
(ಚಾನಲ್‍ 4 ಕಾಮೆಂಟರಿ: ಈತ ಲಂಡನ್‍ ಮೂಲದ ಜಿಹಾದಿಗಳ ಜತೆ ಸಂಪರ್ಕದಲ್ಲಿ ಇದ್ದಾನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ, ಅವರು ಐಸಿಸ್‍ ಸೇರಲು ಪ್ರೇರೇಪಣೆ ನನ್ನಿಂದ ಸಿಗುತ್ತಿದೆ ಎಂಬುದನ್ನು ನಿರಾಕರಿಸುತ್ತಾನೆ.)
ಮೆಹದಿ: ಯಾರೋ ನನ್ನನ್ನು ಫಾಲೋ (ಟ್ವಿಟರ್‍ನಲ್ಲಿ) ಮಾಡುತ್ತಾರೆ ಎಂಬ ಕಾರಣಕ್ಕೆ ನಾನು ಅವರು ಐಸಿಸ್‍ ಕಡೆ ಹೋಗುತ್ತಿರುವುದಕ್ಕೆ ಹೊಣೆಯಾಗುವುದಿಲ್ಲ. ಜನರು ಯಾಕೆ “radicalized” ಆಗುತ್ತಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳಿವೆ.

ಚಾನಲ್‍ 4 ನಲ್ಲಿ ಈ ಸುದ್ದಿ ಭಿತ್ತರಗೊಳ್ಳುತ್ತಿದ್ದಂತೆ ನಮ್ಮ ಮಾಧ್ಯಮಗಳು ಐಸಿಸ್‍ ಖಾತೆ ಬೆಂಗಳೂರಿನ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ ಎಂಬಂತೆ ಸುದ್ದಿಯನ್ನು ಭಿತ್ತರಿಸಿದವು. ಬೆಂಗಳೂರು ಉಗ್ರರ ಮುಂದಿನ ಗುರಿ ಎಂದು ಜನ ಮನಸ್ಸಿನಲ್ಲಿ ಭಯ ಮೂಡಿಸುವ ಕೆಲಸ ನಡೆಯಿತು. ಇರಾಕ್‍ನಲ್ಲಿ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಇವತ್ತು ಬಡಿದಾಡುತ್ತಿರುವ ಐಸಿಸ್‍ ಎಂಬ ಸಂಘಟನೆಗೆ ಅನಾವಶ್ಯಕವಾಗಿ ಪ್ರಾಮುಖ್ಯತೆ ನೀಡಿದವು. ಮೆಹದಿ ಬಂಧನ ನಂತರ ಆತ ಬೆಂಗಳೂರಿನಲ್ಲಿ ನೆಲೆಸಿದ್ದ ಮನೆಗೆ ತೆರಳಿದ್ದ ನನ್ನ ಪತ್ರಕರ್ತ ಮಿತ್ರರೊಬ್ಬರು ಆತನ ಮನಸ್ಥಿತಿಯನ್ನು ಹೀಗೆ ಊಹಿಸಿದ್ದರು. “ಬಹುಶಃ ಆತ ಟೆಕ್‍ಸ್ಸೇವಿಯಾಗಿದ್ದ ಅನ್ನಿಸುತ್ತದೆ. ಸುತ್ತಮುತ್ತಲಿನವರ ಪ್ರಕಾರ ಆತ ಧರ್ಮದ ಕುರಿತು ಹೆಚ್ಚು ಓದುತ್ತಿದ್ದ. ಯಾವುದೇ ಸಮಸ್ಯೆ ಎಂದರೂ, ಅದಕ್ಕೆ ಖುರಾನ್‍ನಲ್ಲಿ ಪರಿಹಾರ ಇದೆ ಎನ್ನುತ್ತಿದ್ದ. ಆತನ ಟ್ವಿಟರ್‍ ಖಾತೆಯಲ್ಲೂ ಇದೇ ಬರೆಯುತ್ತಿದ್ದ. ತಾತ್ವಿಕವಾಗಿ ಆತ ಐಸಿಸ್‍ನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದ. ಆದರೆ, ಆತ ತನ್ನನ್ನು ತಾನು ನಿಗೂಢವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡಿದಂತೆ ಕಾಣುತ್ತಿಲ್ಲ,’’ ಎಂಬುದು ಅವರು ಗಮನಿಸಿದ ಅಂಶಗಳು. ಮೆಹದಿಗೆ ನಿಜವಾಗಿಯೂ ಐಸಿಸ್‍ ಜತೆ ಸಂಪರ್ಕ ಇತ್ತಾ? Peshawar_school_injuredKidಆತನ ಮನಸ್ಥಿತಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಇತ್ತಾ? ಇದನ್ನು ಹೇಗೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆತ ತಪ್ಪು ಮಾಡಿದ್ದರೆ ಶಿಕ್ಷಿಸಲು ಕಾನೂನು ಇದೆ. ಆದರೆ, ನಾವು ಗಮನಿಸಬೇಕಿರುವುದು ಮೆಹದಿ ಮತ್ತು ಆತ ಪ್ರತಿನಿಧಿಸುವ ವಿಚಾರಗಳ ಮೂಲ ಉದ್ದೇಶವೇ ಮಾಹಿತಿ ಪ್ರಸಾರ ಮಾಡುವುದು. ಹೆಚ್ಚು ಹೆಚ್ಚು ಜನರಿಗೆ ತನ್ನ ಅಸ್ಥಿತ್ವವನ್ನು ಸಾರುವುದು. ಮೆಹದಿ ಘಟನೆಯನ್ನು ಸುದ್ದಿ ಮಾಡುವ ಭರಾಟೆಯಲ್ಲಿ ಮಾಧ್ಯಮಗಳೂ ಕೂಡ ಪರೋಕ್ಷವಾಗಿ ಇದೇ ಕೆಲಸ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕೊನೆಯದಾಗಿ ಇನ್ನೊಂದು ವಿಚಾರ ಇದೆ. ಅದು ಭಯೋತ್ಪಾದಕ ಚಟುವಟಿಕೆಗಳ ಕುರಿತು ಕಾನೂನು ಕ್ರಮಗಳ ಕುರಿತಾಗಿದ್ದು. ಕೀನ್ಯಾ ಮಾಲ್‍ ದಾಳಿಯ ನಂತರ ಅಲ್ಲಿನ ಪಾರ್ಲಿಮೆಂಟರಿ ಸಮಿತಿ ನೀಡಿದ ವರದಿಯ ಕುರಿತು ವ್ಯಾಪಕ ಟೀಕೆಗಳು ಬಂದಿದ್ದವು. ಇವತ್ತಿಗೂ ಆ ದಾಳಿಯ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಎಷ್ಟು ಜನ ಉಗ್ರರು ದಾಳಿ ನಡೆಸಿದ್ದರು? ಅವರ ತಪ್ಪಿಸಿಕೊಂಡು ಹೋದರಾ ಅಥವಾ ಎಲ್ಲರೂ ಹತರಾದರಾ ಎಂಬ ಕುರಿತೇ ಗೊಂದಲಗಳಿವೆ. ಕೆಲವು ದಿನಗಳ ಹಿಂದೆ ಅದೇ ನೈರೋಭಿಯ ವಿಮಾನ ನಿಲ್ದಾಣದಿಂದ ಹಾರಿದ್ದ ಅಲ್‍-ಶಬಾಬ್‍ನ ಮೂವರು ಉಗ್ರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಯಿತು. ಅಷ್ಟರ ಮಟ್ಟಿಗೆ ಅಲ್ಲಿನ ಸರಕಾರ ಭಯೋತ್ಪಾದಕರ ವಿರುದ್ಧದ ಸಮರದಲ್ಲಿ ಎಲ್ಲಾ ಆಯಾಮಗಳಲ್ಲೂ ಹಿನ್ನಡೆ ಅನುಭವಿಸುತ್ತಿದೆ. ನಮ್ಮಲ್ಲೂ ಚಿನ್ನಸ್ವಾಮಿ ಬಾಂಬ್‍ ಸ್ಫೋಟ ಪ್ರಕರಣ, ಸರಣಿ ಸ್ಫೋಟ ಪ್ರಕರಣಗಳು ಏನಾಗಿವೆ ಎಂಬ ಕುರಿತು ಮಾಹಿತಿ ಇಲ್ಲ. ಪೊಲೀಸರು ಸಲ್ಲಿರುವ ಸಾವಿರಾರು ಪುಟಗಳ ದೋಷಾರೋಪ ಪಟ್ಟಿ ತನಿಖೆಯನ್ನು ನಿಧಾನಗತಿಯಲ್ಲಿ ಇಟ್ಟಿದೆಯಾದರೂ, ಇವತ್ತಿಗೂ ಯಾವಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗಲೇ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಯುದ್ಧಕ್ಕೆ ಅಣಿಯಾಗಿವೆ. ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ನಮ್ಮ ತನಿಖಾ ಸಂಸ್ಥೆಗಳು, ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಭಯೋತ್ಪಾದಕ ಚಟುವಟಿಕೆಗಳ ಕಡಿವಾಣಕ್ಕೆ ಸಮಗ್ರವಾದ ಯೋಜನೆಗೆ ಆಲೋಚನೆ ಮಾಡಬೇಕಿದೆ. ಬದಲಾದ ಕಾಲಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇವತ್ತಿನ ಅಗತ್ಯ ಮತ್ತು ಅನಿವಾರ್ಯತೆ. ಆಗ ಮಾತ್ರವೇ ಉಗ್ರರ ಪೈಶಾಚಿಕ ಕೃತ್ಯಗಳಿಗೆ ಬಲಿಯಾಗುವ ಮುಗ್ಧ ಮನಸ್ಸುಗಳಿಗೆ ನಿಜವಾದ ಸಂತಾಪ ಸಲ್ಲಿಸಿದಂತೆ ಆಗುತ್ತದೆ.

ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಸಮರ ದೇಶದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ನಾಂದಿಯಾಗಲಿ…


– ಪ್ರಶಾಂತ್ ಹುಲ್ಕೋಡು


“…ಈ ದೇಶದ ಸಾಂಸ್ಕೃತಿಕ ಮರುಹುಟ್ಟಿಗಾಗಿ ರಮಣ ಮಹರ್ಷಿಯಂತಹ ಆಧ್ಯಾತ್ಮಿಕ ವ್ಯಕ್ತಿಗಳನ್ನೂ ಸಾರ್ವಜನಿಕ ಜೀವನಕ್ಕೆ ಅಹ್ವಾನಿಸಬೇಕು. ನಂಗೊತ್ತು ಈ ಮಾತುಗಳಿಂದ ನನ್ನ ಯುವ ಸ್ನೇಹಿತರು ಸಿಟ್ಟಿಗೇಳುತ್ತಾರೆ. ಆದರೂ ನಾನು ಅಂತಹದೊಂದು ಅ- ಸಂಪ್ರದಾಯಿಕ ಪ್ರಕ್ರಿಯೆಯನ್ನು ಶುರುಮಾಡಬೇಕಿದೆ. jp-jayaprakash-narayanನಾನು ನಿಮ್ಮನ್ನು ಪ್ರಚೋದಿಸಬೇಕು, ನಿಮ್ಮ ಆಲೋಚನೆಯನ್ನು ತಾಕಬೇಕು. ಹೀಗಾಗಿಯೇ ನಾನು ಇತ್ತೀಚೆಗೆ ರಮಣ ಮಹರ್ಷಿಗಳ ಬಗ್ಗೆ ನಿರಂತರವಾಗಿ ಹಾಗೂ ಪ್ರಜ್ಞಾ ಪೂರ್ವಕವಾಗಿ ಮಾತನಾಡುತ್ತಿದ್ದೇನೆ…’’

ಹೀಗಂತ ಹೇಳುತ್ತಿದ್ದರು ಜಯಪ್ರಕಾಶ್‍ ನಾರಾಯಣ್‍. ನಾನಿಲ್ಲಿ ಅವರು ಪ್ರತಿಪಾದಿಸಿದ ಸಿದ್ಧಾಂತ, ಅವರ ವಿಚಾರಗಳು, ಅವರ ಸಮಾಜ ಬದಲಾವಣೆಯ ಭಿನ್ನ ಕನಸಿನ ಹಾದಿ… ಮತ್ತಿತರ ವಿಚಾರಗಳ ಕುರಿತು ಹೇಳಲು ಹೋಗುವುದಿಲ್ಲ. ಯಾಕೆಂದರೆ, ಜೇಪಿ ಕುರಿತು ಇನ್ನೂ ಅರ್ಥ ಮಾಡಿಕೊಳ್ಳುವ ಹಂತದಲ್ಲಿ ನಾನಿದ್ದೇನೆ. ಆದರೆ, ನನ್ನಂತಹ ಯುವ ಮನಸ್ಸಿಗೂ ಜೇಪಿಯವರ ಈ ಮಾತು ತಾಕುತ್ತಿದೆ. ಒಂದಷ್ಟು ಹೊಳವುಗಳನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತಿದೆ. ನನ್ನ ಕೆಲವು ಸ್ನೇಹಿತರು ‘ಭಯೋತ್ಪಾದಕ ಜ್ಯೋತಿಷಿಗಳ’ ವಿರುದ್ಧ ಹೋರಾಟವನ್ನು ನಡೆಸಿದರು. ಆ ಮೂಲಕ ಬದಲಾಗುತ್ತಿರುವ ಕಾಲಘಟ್ಟದ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ಮತ್ತು ತಮ್ಮ ದನಿಯನ್ನು ಜೀವಂತವಾಗಿ ಇಟ್ಟುಕೊಳ್ಳುವ ಬಗೆಯನ್ನು ಅವರು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಂಡುಬಂದರು. ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಾಂತಗಳನ್ನು ಒಣ ಒಣವಾಗಿ ಅರ್ಥಮಾಡಿಕೊಂಡು ಮಾತನಾಡುವವರಿಗಿಂತ ಇವರು ಹೆಚ್ಚು ಆಶಾವಾದಿಗಳಾಗಿ ಕಾಣುತ್ತಾರೆ. ಹೀಗಿದ್ದೂ, ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲೇಬೇಕು ಅನ್ನಿಸುತ್ತಿದೆ.

ನಮ್ಮಲ್ಲಿ ‘ಟಿವಿ ಜ್ಯೋತಿಷ್ಯ’ ಆರಂಭವಾಗಿರುವುದು ಉದಯ ಟೀವಿ ಎಂಬ ದ್ರಾವಿಡ ಚಳವಳಿಯ ನೆರಳಿನಲ್ಲಿ ಹುಟ್ಟಿಕೊಂಡ ಚಾನಲ್‍ ಮೂಲಕ. ನನ್ನದೇ ಬಾಲ್ಯದ ನೆನಪುಗಳನ್ನು ಇಟ್ಟುಕೊಂಡು ಹೇಳುವುದಾದರೆ, ಆ ಹೊತ್ತಿಗೆ ಬೆಳಗ್ಗೆ 7. 30ಕ್ಕೆ ಜೈನ್‍ ಎಂಬಾತ ಉದಯ ಟೀವಿಯಲ್ಲಿ ರಾಶಿ ಭವಿಷ್ಯ ಹೇಳುತ್ತಿದ್ದ. ಬೋರ್ಡಿಂಗ್‍ ಶಾಲೆಯಲ್ಲಿದ್ದ ನಾವುಗಳು ನಮ್ಮ ಕಲ್ಪನೆಯ ರಾಶಿಗಳನ್ನು ಗೊತ್ತು ಮಾಡಿಕೊಂಡು, ಆತ ಹೇಳುತ್ತಿದ್ದ ಭವಿಷ್ಯದ ಮೂಲಕ ದಿನವನ್ನು ಆರಂಭಿಸುತ್ತಿದ್ದೆವು. ಆದರೆ, ಅದು ಯಾವತ್ತೂ ಚಟವಾಗಲಿಲ್ಲ. ನಮ್ಮಲ್ಲಿ ಅನೇಕರು ಆತನ ಮಾತುಗಳ ಆಚೆಗೂ ನಮ್ಮದೇ ಭವಿಷ್ಯವಿದೆ ಎಂಬುದನ್ನು ಕಂಡುಕೊಂಡೆವು. ಆದರೆ, ಕೆಲವರು ಇವತ್ತಿಗೂ ಅವರದ್ದೇ ಆದ ರೀತಿಯಲ್ಲಿ ಭವಿಷ್ಯವನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಹಾಗಂತ ಅವರು ವೈಯುಕ್ತಿಕವಾಗಿ ಕೆಟ್ಟವರಾಗಿಲ್ಲ. jain-astrologerಜೀವನ ಮೌಲ್ಯಗಳನ್ನು ಹಗುರವಾಗಿಯೂ ತೆಗೆದುಕೊಂಡಿಲ್ಲ. ಆದರೆ, ಏನಾದರೂ ಸಮಸ್ಯೆ ಅಂತ ಬಂದರೆ ಅವರಿಗೆ ತಕ್ಷಣ ನೆನಪಾಗುವುದು ಜ್ಯೋತಿಷ್ಯ ಮತ್ತು ದೇವಸ್ಥಾನಗಳು.

ಅವತ್ತು ಒಂದು ಟೀವಿಯಲ್ಲಿ ಒಬ್ಬ ಜ್ಯೋತಿಷಿ ಒಂದು ಗಂಟೆ ಮಾತನಾಡಿದ ಪರಿಣಾಮವೇ ಇದಾದರೆ, ಇವತ್ತಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಮನೋರಂಜನೆ, ಸುದ್ದಿ ಎರಡನ್ನೂ ಸೇರಿಸಿಕೊಂಡರೆ ಸುಮಾರು 15 ಚಾನಲ್‍ಗಳು, ಜತೆಗೆ ಕೇಬಲ್‍ ಟೀವಿಗಳು. ಹೀಗೆ ನಾನಾ ಮೂಲಗಳಿಂದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ಮನೆ ಬಾಗಿಲಿಗೂ ಜ್ಯೋತಿಷ್ಯ ತಲುಪಿದೆ. ಇದು ಅಪಾಯಕಾರಿ ಮತ್ತು ಗಂಭೀರ ಸಂಗತಿ. ಇದನ್ನು ವಿರೋಧಿಸಲು ಹೊರಡುವಾಗ ಒಂದು ಮಟ್ಟಿಗಿನ ಸಿದ್ಧತೆಯೂ ಬೇಕಿದೆ. ಜತೆಗೆ, ನಾವು ಹೇಳುವ ವಿಚಾರದಲ್ಲಿ ಜ್ಯೋತಿಷ್ಯದ ಅಪಾಯಕಾರಿ ನಡೆಗಳನ್ನು ಹೇಳುತ್ತಲೇ, ಅದರ ವ್ಯಾಪ್ತಿ ಒಳಗೆ ಇರುವವರ ಮನಸ್ಥಿತಿಯನ್ನು ಬದಲಾಯಿಸುವ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಇಲ್ಲಿ ಮನಸ್ಥಿತಿ ಎಂದರೆ, ಜೇಪಿಯವರ ‘ಇಡೀ ದೇಶದ ಸಾಂಸ್ಕೃತಿಕ ಮರು ಹುಟ್ಟು’ ಅಂತ ಅಂದುಕೊಳ್ಳಬಹುದಾ? ಆಲೋಚಿಸಬೇಕಿದೆ.

ಕಳೆದ ಇಷ್ಟು ವರ್ಷಗಳ ಅಂತರದಲ್ಲಿ ನಮ್ಮಲ್ಲಿ ನಡೆದ ಬಹುತೇಕ ಚಳವಳಿಗಳು ಅಪೂರ್ವ ಅನುಭವದ ಪಾಠಗಳನ್ನು ಬಿಟ್ಟುಹೋಗಿವೆ. ಈ ಪಾಠಗಳಲ್ಲಿ ಗೆಲುವಿಗಿಂತ ಜಾಸ್ತಿ ಸೋಲಿದೆ. ಅದು ರೈತ ಚಳವಳಿ ಇರಲಿ, ದಲಿತ ಚಳವಳಿಯಾಗಲಿ ಅಥವಾ ನಾವೇ ಹಿಂದೆ ಕಟ್ಟಿದ ವಿದ್ಯಾರ್ಥಿ ಚಳವಳಿಯನ್ನು ಇಟ್ಟುಕೊಂಡು ನೋಡಿದರೂ, ಸೋಲಿನ ಪಾಠಗಳು ದಂಡಿಯಾಗಿ ಸಿಗುತ್ತವೆ. ಒಂದು ಚಳವಳಿಯನ್ನು ಅದು ಬಿಡಿಬಿಡಿಯಾಗಿ ಆರಿಸಿಕೊಂಡ ವಿಚಾರಗಳು ಮತ್ತು ಅವುಗಳು ತಲುಪಿದ ತಾರ್ಕಿಕ ಅಂತ್ಯದ ಮೂಲಕ ನೋಡುವುದು ಒಂದು ಕ್ರಮ. ಇನ್ನೊಂದು ಈ ಬಿಡಿ ಬಿಡಿ ವಿಚಾರಗಳ ಮೂಲಕ ಇಡೀ ಚಳವಳಿ ಸಾಮಾಜಿಕವಾಗಿ ಮಾಡಿದ ಪರಿಣಾಮಗಳ ಒಟ್ಟು ಮೊತ್ತವನ್ನು ಅಳೆಯುವುದು ಮತ್ತೊಂದು ಕ್ರಮ. ಈ ಎರಡೂ ವಿಚಾರಗಳಲ್ಲೂ ಪ್ರಗತಿಪರ ಧಾರೆಯ ಚಳವಳಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಂತ ಇವು ಸಾಮಾಜಿಕ ಬದಲಾವಣೆ ಮಾಡಿಲ್ಲ ಅನ್ನುವಂತಿಲ್ಲ. ಆದರೆ, ಜನರ ಮನಸ್ಸಿನಲ್ಲಿ ಅವು ಬದಲಾವಣೆ ತರುವಲ್ಲಿ ಯಶಸ್ಸನ್ನು ಕಂಡಿಲ್ಲ tv9-media-astrologerಎಂಬುದನ್ನೂ ಗಮನಿಸಬೇಕಿದೆ.

ಇಲ್ಲಿ ಯಾಕೆ ಈ ವಿಚಾರವನ್ನು ಗಮನಿಸಬೇಕು ಎಂದರೆ, ಟೀವಿ ಜ್ಯೋತಿಷ್ಯಕ್ಕಿಂತ ಜ್ಯೋತಿಷ್ಯ ಹಳೆಯದು ಮತ್ತು ಹೆಚ್ಚು ಆಳವಾಗಿ ಬೇರು ಬಿಟ್ಟಿರುವ ಅಂಶ. ಜಾತಕ, ರಾಶಿಫಲ, ಗ್ರಹಗತಿ, ವಾಸ್ತು, ನಾಡಿ ಮತ್ತಿತರ ಸ್ವರೂಪಗಳಲ್ಲಿ ಜನರ ಅನಿಶ್ಚಿತತೆಗಳಿಗೆ ಪರ್ಯಾಯವಾಗಿ ನಿಂತಿವೆ. ಇಲ್ಲಿ ಅನಿಶ್ಚಿತತೆ ಎಂದರೆ, ಜೀವನದ ಕುರಿತು ಭಯವೂ ಆಗಿರಬಹುದು ಅಥವಾ ಅಂಧಕಾರವೂ ಆಗಿರಬಹುದು. ಇವುಗಳು ಸಾಮಾಜಿಕವಾಗಿ ಪರಿಣಾಮ ಬೀರುವ ಜತೆಗೆ ವೈಯುಕ್ತಿಕವಾಗಿಯೂ ಜನರನ್ನು ಮುಟ್ಟುತ್ತಿವೆ. ಸಾಮಾಜಿಕ, ಆರ್ಥಿಕ ಪಲ್ಲಟಗಳು ಎಂಥವರನ್ನೂ ಒಂದು ಕ್ಷಣಕ್ಕೆ ತಲ್ಲಣಗೊಳಿಸುತ್ತವೆ. ಈ ಸಮಯದಲ್ಲಿ ಸುಲಭವಾಗಿ, ಆ ಕ್ಷಣಕ್ಕೆ ಪರಿಹಾರ ನೀಡುವುದು ಈ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳು. ಹೀಗಾಗಿ, ಇವುಗಳನ್ನು ಅಷ್ಟು ಸುಲಭವಾಗಿ ಕಿತ್ತೆಸೆಯುವುದು ಕಷ್ಟದ ಕೆಲಸ. ಹಾಗಂತ, ಇದರೊಳಗೂ ತನ್ನವೇ ಆದ ಮಿತಿಗಳಿವೆ. ಜನರನ್ನು ತಮ್ಮ ಬಲೆಯಲ್ಲಿ ಹಿಡಿದಿಟ್ಟುಕೊಳ್ಳಲು ಹೆಣಗುತ್ತಿರುತ್ತವೆ. ಇಂತಹ ಸಮಯದಲ್ಲೇ ಕೆಲವು ಅತಿರೇಕಗಳೂ ನಡೆಯುತ್ತವೆ. ಅದಕ್ಕೆ ವರ್ತಮಾನದ ಉದಾಹರಣೆ, ಸಚ್ಚಿದಾನಂದ ಬಾಬುವಿನ ‘ರೇಪ್ ಸಿದ್ಧಾಂತ’.

ಈ ಟೀವಿ ಜ್ಯೋತಿಷ್ಯಕ್ಕಿರುವ ಮತ್ತೊಂದು ದೊಡ್ಡ ಮಿತಿ ಆರ್ಥಿಕ ಆಯಾಮದ್ದು. ಟೀವಿಗಳಿಗೆ ಗಂಟೆಗೆ ಇಷ್ಟು ಎಂದು ಹಣ ಕಟ್ಟುವ ಜ್ಯೋತಿಷಿಗಳು ಅಂತಿಮವಾಗಿ ಲಾಭ ಮತ್ತು ನಷ್ಟದ ಪರಿಕಲ್ಪನೆ ಒಳಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಟೀವಿಗಳಿಂದ ಸಿಗುವ ಜನಪ್ರಿಯತೆಯನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಿಮವಾಗಿ, ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರು, ಸರಕುಗಳನ್ನು ಕೊಳ್ಳುವ ಗ್ರಾಹಕರಾಗಿಯೇ ಕಾಣುತ್ತಾರೆ. ಸುಳ್ಳಿನ ಆಸರೆಯಲ್ಲಿ ಯಾವ ಉದ್ಯಮಗಳು ತುಂಬಾ ದಿನ ನಡೆಯುವುದಿಲ್ಲ. ಅಲ್ಲಿಯೂ ಕೂಡ ಬೇಡಿಕೆ kickout-astrologersಮತ್ತು ಪೂರೈಕೆ ನೀತಿಗಳು ಕೆಲಸ ಮಾಡುತ್ತವೆ. ಗ್ರಾಹಕ ಮತ್ತೆ ಹೊಸ ಸರಕಿಗಾಗಿ ಮತ್ತು ಕಡಿಮೆ ಬೆಲೆಗಾಗಿ ಹಂಬಲಿಸುತ್ತಾನೆ. ಒಂದು ಹಂತ ದಾಟಿದ ನಂತರ ಜ್ಯೋತಿಷ್ಯೋದ್ಯಮಕ್ಕೂ ಸಂಕಷ್ಟ ಎದುರಾಗುತ್ತದೆ. ಅವತ್ತಿಗೆ ಇದಕ್ಕೊಂದು ಪರ್ಯಾಯ ಹುಡುಕಿ ಇಟ್ಟರೆ, ಖಂಡಿತಾ ಸಮಾಜದ ತಲ್ಲಣಗಳಿಗೆ ವೈಯುಕ್ತಿಕ ನೆಲೆಗಿಂತ ಸಾಮಾಜಿಕ ಆಯಾಮದ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರೂ ಆಲೋಚಿಸುವಷ್ಟು ಪ್ರಬುದ್ಧರಾಗುತ್ತಾರೆ ಎಂಬುದು ನಂಬಿಕೆ ಮತ್ತು ಆಶಯ.

ಇವತ್ತು ಸಾಮಾಜಿಕ ಜಾಲತಾಣದ ಗೋಡೆಗಳನ್ನು ಮೀರಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಬೀದಿ ಸಮರಕ್ಕೆ ಇಳಿದಿರುವ ಕೆಲವು ಸ್ನೇಹಿತರು ಈ ಅಂಶಗಳನ್ನೂ ಒಳಗೊಳ್ಳಲಿ. ಆ ಮೂಲಕ ಅವರ ಹೋರಾಟ ತಾತ್ವಿಕ ಚಳವಳಿಯ ರೂಪ ಪಡೆಯಲಿ. ಅದಕ್ಕೆ ಸಮಾಜದ ಎಲ್ಲಾ ಸ್ಥರಗಳಿಂದ ಬೆಂಬಲ ಹರಿದು ಬರಲಿ. ಈಗಾಗಲೇ ನಿಡುಮಾಮಿಡಿ, ಮುರುಘ ಮಠ, ಸಾಣೇಹಳ್ಳಿಯಂತಹ ಮಠಗಳು ಈ ಹಾದಿಯಲ್ಲಿ ಆಶಯದಾಯಿಕ ಹೆಜ್ಜೆ ಹಾಕುತ್ತಿವೆ. ಈ ನೆಲೆಗೆ ಇನ್ನಷ್ಟು ಧಾರೆಗಳು ಸೇರಿಕೊಂಡರೆ, ಭವಿಷ್ಯದಲ್ಲಿ ‘ದೇಶದ ಸಾಂಸ್ಕೃತಿಕ ಪುನರಜ್ಜೀವನ’ಕ್ಕೆ ವೇದಿಕೆ ಸಿದ್ಧವಾಗುತ್ತದೆ. ಅದು ಇಲ್ಲಿಂದಲೇ ಶುರುವಾಗಲಿ.

TV9 ಬ್ಲಾಕ್‍ಔಟ್‍ ಮತ್ತು ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಚಳವಳಿ


– ಪ್ರಶಾಂತ್ ಹುಲ್ಕೋಡು


ಕಳೆದ ಒಂದು ದಶಕದ ಅವಧಿಯಲ್ಲಿ ಕರ್ನಾಟಕದ ನ್ಯೂಸ್ ಚಾನಲ್‍ಗಳ ಕುರಿತು ಹೀಗೊಂದು ಚರ್ಚೆ ಆರಂಭವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಸುದ್ದಿವಾಹಿನಿಗಳು, tv9-media-blackoutಅವುಗಳ ಮಹತ್ವ ಮತ್ತು ಇರಬೇಕಾದ ಸಂಯಮಗಳನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚೆತ್ತುಕೊಂಡಿರುವ ಸಮುದಾಯ ಪ್ರಶ್ನೆ ಮಾಡುತ್ತಿದೆ. ಇದು ಬರೀ ಪ್ರಶ್ನೆಗೆ ಮಾತ್ರವೇ ಸೀಮಿತವಾಗದೆ, ಆರೋಗ್ಯಕರ ಚರ್ಚೆಗೂ ನಾಂದಿ ಹಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಚಳವಳಿ (?)ಯನ್ನೂ ಹುಟ್ಟುಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಇವೆಲ್ಲವೂ ಈ ಕ್ಷಣ ಬೆಳವಣಿಗೆಗಳಲ್ಲ. ಟಿವಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮಗಳು ಆರಂಭವಾದ ದಿನದಿಂದಲೂ ವಿರೋಧ ಕೇಳಿಬಂದಿತ್ತು. ಅವತ್ತಿಗೆ ಮೀಡಿಯಾ ಕುರಿತು ಭಿನ್ನ ದನಿಯಲ್ಲಿ ಮಾತನಾಡುತ್ತಿದ್ದ ‘ಸಂಪಾದಕೀಯ’ದಂತ ಬ್ಲಾಗ್‍ಗಳು ಈ ಜ್ಯೋತಿಷಿಗಳ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸಿದ್ದವು. ಅದೆಲ್ಲರ ಪರಿಣಾಮ ಒಂದು ಕಡೆಗಿದ್ದರೆ, ಮೊನ್ನೆ ಮೊನ್ನೆ ಟಿವಿ9 ಮತ್ತು ನ್ಯೂಸ್‍9 ಎಂಬ ಚಾನಲ್‍ಗಳು ‘ಬ್ಲಾಕ್‍ ಔಟ್’ ಆಗುವ ಮೂಲಕ ಈ ಎಚ್ಚೆತ್ತ ಸಮಾಜಕ್ಕೆ ಮೊರೆ ಇಟ್ಟವು. ನನಗೆ ನೆನಪಿರುವಂತೆ, ಟಿವಿ9 ಮತ್ತು ನ್ಯೂಸ್‍9ನ ಬಹುತೇಕ ಸಿಬ್ಬಂದಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ತಾವು ಕೆಲಸ ಮಾಡುವ ಸಂಸ್ಥೆಗೆ ಒದಗಿ ಬಂದ ಸಂಕಷ್ಟದ ಕುರಿತು ಮಾಹಿತಿ ನೀಡಿದರು. news9-media-blackoutಇದಕ್ಕೆ ಉತ್ತಮ ಬೆಂಬಲವೂ ಸಿಕ್ಕಿತು ಕೂಡ. ನೀವು ಎಷ್ಟೆ ಕೆಟ್ಟವರಾದರೂ, ಜನ ಅಷ್ಟು ಸುಲಭಕ್ಕೆ ಕೈ ಬಿಡುವುದಿಲ್ಲ ಎಂಬುದರ ಸಂಕೇತ ಇದು. ತುರ್ತು ಪರಿಸ್ಥಿತಿ ಹೇರಿ, ಅಪಖ್ಯಾತಿಗೆ ಒಳಗಾಗಿ, ಹೀನಾಯವಾಗಿ ಸೋತು ಹೋಗಿದ್ದ ಇಂದಿರಾ ಗಾಂಧಿಗೂ ಮತ್ತೊಮ್ಮೆ ಅವಕಾಶ ಕೊಟ್ಟ ಜನ ನಾವು. ಹೀಗಿರುವಾಗ, ಟಿವಿ9 ಮತ್ತು ನ್ಯೂಸ್‍9ನಂತಹ ಸಂಸ್ಥೆಗಳನ್ನು ಬಿಟ್ಟುಕೊಡಲು ಸಾಧ್ಯನಾ?

ಬಹುಶಃ ಇದನ್ನು ಟಿವಿ9 ಮತ್ತು ನ್ಯೂಸ್‍9ನ ಮುಖ್ಯಸ್ಥರು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ, ಮಾರನೇ ದಿನವೇ ತಮ್ಮ ಚಾನಲ್‍ನಿಂದಾಗಿಯೇ tv9-media-astrologerಮನೆ ಮಾತಾಗಿರುವ   ಸಚ್ಚಿದಾನಂದ ಬಾಬುವನ್ನು ಕೂರಿಸಿಕೊಂಡು ರೇಪ್‍ ಕುರಿತು ಹೊಸ ಸಿದ್ಧಾಂತ ಮಂಡಿಸಲು ಮುಂದಾದರು. ಇಲ್ಲಿ ಲಾಜಿಕ್‍ ಹಾಳಾಗಿ ಹೋಗಲಿ, ಟಿಆರ್‍ಪಿ ಮಾನದಂಡ ಇಟ್ಟುಕೊಂಡು ನೋಡಿದರೂ, ಅದ್ಯಾವ ಬುದ್ಧಿವಂತನಿಗೆ ಈ ಪರಿಕಲ್ಪನೆ ವರ್ಕ್‍ಔಟ್‍ ಆಗುತ್ತೆ ಅಂತ ಹೇಗೆ ಅನ್ನಿಸಿತು ಎಂಬುದೇ ಸೋಜಿಗ. ಹಿಂದಿನ ದಿನವಷ್ಟೆ, ಕೇಬಲ್‍ ಟಿವಿ ಆಪರೇಟರ್ಸ್‍ಗೆ ತಪರಾಕಿ ನೀಡಿ, ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದವರು ಇದನ್ನು ನೋಡಿ ಒಂದು ಕ್ಷಣ ಬೇಸ್ತು ಬಿದ್ದರು. ತಾವು ನೀಡಿದ್ದ ಬೆಂಬಲ ಅವಧಿ ಮುಗಿಯಿತು ಎಂದು ಘೋಷಿಸಿದರು. ಇದೀಗ ಅದು ‘ಭಯೋತ್ಪದಾಕ ಜ್ಯೋತಿಷಿ’ಗಳ ವಿರುದ್ಧ ಜನಾಂದೋಲನ ಮೊಳಕೆ ಒಡೆಯಲು ಕಾರಣವಾಗಿದೆ. ಇದು ಹಚ್ಚುತ್ತಿರುವ ಕಿಚ್ಚು ಕಂಡ ಕೆಲವರು, ‘ಇದು ಕೆಲವು ಕಪಟ ಜ್ಯೋತಿಷಿಗಳ ವಿರುದ್ಧ ಸಮರ ಮಾತ್ರವೇ ಹೊರತು ಇಡೀ ಜ್ಯೋತಿಷ್ಯಾಸ್ತ್ರದ ವಿರುದ್ಧದ ಹೋರಾಟ,’ ಎಂಬುದನ್ನೂ ನೆನಪಿಸಿದ್ದಾರೆ.

ಈ ಜ್ಯೋತಿಷ್ಯದ ಭಯೋತ್ಪಾದನೆ ಎಂಬುದೇ ನಮಗೆ ಹೊಸ ವಿಚಾರ. ಇಲ್ಲೀವರೆಗೂ ದಾವೂದ್, ಅಬು ಸಲೇಂ, ಇತ್ತೀಚೆಗೆ ರಿಯಾಝ್ ಭಟ್ಕಳ್ ಅಂತವರನ್ನು ಗುರುತಿಸಲು ಬಳಸುತ್ತಿದ್ದ ಈ ಭಾಷಾ ಪ್ರಯೋಗದ ವ್ಯಾಪ್ತಿಗೆ ಜ್ಯೋತಿಷಿಗಳನ್ನೂ ತಂದಿರುವುದು ಕ್ರಿಯೇಟಿವಿಟಿಯ ಅಭಿವ್ಯಕ್ತಿ! ಬಿಡಿ, tv9-media-astrologer2ಹೇಗೂ ಇಂಥವರ ವಿರುದ್ಧ ಈಗಾಗಲೇ ಕಾನೂನಾತ್ಮಕ ಚೌಕಟ್ಟಿನಲ್ಲಿ ಕಾಯ್ದೆ ರೂಪಿಸುವ ಕೆಲಸ ನಡೆಯುತ್ತಿದೆ. ಕೆಲವು ಮಠಗಳು, ಧಾರ್ಮಿಕ ಕೇಂದ್ರಗಳೇ ಮುಂದೆ ನಿಂತು, ‘ಮೌಢ್ಯ ನಿಷೇಧಿಸಿ’ ಎನ್ನುತ್ತಿವೆ. ಮೌಢ್ಯ ಎಂಬ ಕಪಟ ಅರಮನೆಗೆ ಒಳಗಿನಿಂದ ಹಾಗೂ ಹೊರಗಿನಿಂದ ಕಲ್ಲು ತೂರುವ ಕೆಲಸ ನಡೆಯುತ್ತಿದೆ. ಇದರ ನಡುವೆ ಟಿವಿ ಚಾನಲ್‍ಗಳ ಜ್ಯೋತಿಷಿಗಳ ವಿರುದ‍್ಧ ಈಗ ಕೇಳಿ ಬರುತ್ತಿರುವ ಪ್ರತಿರೋಧ ಕೊಂಚ ಸಂಯಮ ಕಾಪಾಡಿಕೊಂಡರೆ, ಕಡಿಮೆ ಅಂತರದಲ್ಲೇ ಒಂದು ತಾತ್ವಕ ಅಂತ್ಯವನ್ನೂ ಕಾಣಬಲ್ಲದು.

ಆದರೆ, ಇಷ್ಟಕ್ಕೆ ಎಲ್ಲವನ್ನೂ ಮರೆತು ಮುಂದಿನ ಸುದ್ದಿಯ ಹಿಂದೆ ಓಡುವ ಮುನ್ನ ಒಂದು ವಿಚಾರ ಇದೆ. ಅದು ಟಿವಿ9 ಮತ್ತು ನ್ಯೂಸ್ 9 ಚಾನಲ್‍ಗಳ ‘ಬ್ಲಾಕ್‍ ಔಟ್‍’ಗೆ ಸಂಬಂಧಿಸಿದ್ದು. ರಾಜ್ಯದಲ್ಲಿ ಕೇಬಲ್‍ ಟಿವಿ ಕಾಯ್ದೆ ಜಾರಿಗೆ ತರಬೇಕು, ಸರಕಾರವೇ ಒಂದು ಹೊಸ ಟಿವಿ ಚಾನಲ್‍ ಆರಂಭಿಸುತ್ತಂತೆ, ಅದು ರಾಜ್ಯ ಸಭಾ ಟಿವಿ ತರಾನೇ ಇರುತ್ತಂತೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಕಾಲಘಟ್ಟದಲ್ಲೇ ಈ ‘ಬ್ಲಾಕ್‍ಔಟ್‍’ ಘಟನೆ ನಡೆದಿರುವುದನ್ನು ಗಮನಿಸಬೇಕಿದೆ. ಟಿವಿ9 ಮತ್ತು ಸಚಿವ ಡಿ. ಕೆ. ಶಿವಕುಮಾರ್‍ ನಡುವೆ ಅದೇನೇ ವೈಯುಕ್ತಿಕ ವಿಚಾರಗಳಿರಲಿ. ಅವರಿಬ್ಬರೂ ತಮ್ಮ ತಮ್ಮ ಅಸ್ಥಿತ್ವಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ, ಅದು ಅವರು ಸ್ವಾತಂತ್ರ್ಯ ಮತ್ತು ಅನಿವಾರ್ಯತೆ ಎಂದು ಸುಮ್ಮನಿದ್ದು ಬಿಡಬಹದಿತ್ತು. ಆದರೆ, ಅದು ಪತ್ರಿಕಾ ಸ್ವಾತಂತ್ರ್ಯದ ಮೊಟಕುಗೊಳಿಸುವಿಕೆ ಹಂತಕ್ಕೆ ಬಂದು ನಿಂತಿದೆ.

ನಮಗೆಲ್ಲಾ ನೆನಪಿರುವಂತೆ ಸಿನಿಮಾಗಳಲ್ಲಿ ಕೇಬಲ್‍ ಆಪರೇಟರ್ಸ್‍ ಎಂಬುದು ಕೇಬಲ್ ಮಾಫಿಯಾ ಆಗಿ ತೆರೆಯ ಮೇಲೆ ಕಾಣುತ್ತಿತ್ತು. ಪುಡಿ ರಾಜಕಾರಣಿಗಳು ಹಾಗೂ ಸ್ಥಳೀಯ ರೌಡಿ ಹಿನ್ನೆಲೆಯ ವ್ಯಕ್ತಿಗಳು ಈ ಮಾಫಿಯಾ ಹಿಂದೆ ಇದ್ದರು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಕೆಲವೇ ವರ್ಷಗಳ ಅಂತರದಲ್ಲಿ ಅವರು ಮಾಧ್ಯಮಗಳ, ವಿಷೇಶವಾಗಿ ನ್ಯೂಸ್‍ ಚಾನಲ್‍ ಒಂದರ ‘ಕಂಟೆಂಟ್’ ಕುರಿತು ತಗಾದೆ ತೆಗೆಯುವ ಬೌದ್ಧಿಕತೆ ಬೆಳೆಸಿಕೊಂಡಿದ್ದಾರೆ ಎಂಬುದು ಅಚ್ಚರಿ ವಿಚಾರ. ತೆಲುಗು ಸಿನಿಮಾಗಳಿಗೆ ಹೆಚ್ಚಿನ ಪ್ರೋತ್ಸಾಹ ಅಂತಲೋ, ನಾಳೆ ಕಪಟ kickout-astrologersಜ್ಯೋತಿಷಿಗಳ ವಿರುದ್ಧ ಸಮರ ಅಂತಲೋ ಅವರು ‘ಮೀಡಿಯಾ ಸೆನ್ಸಾರ್‍ ಮಂಡಳಿ’ ಎಂಬ ಅನೌಪಚಾರಿಕ ಚೌಕಟ್ಟನ್ನು ಕಟ್ಟಿಕೊಂಡರೆ ಗತಿ ಏನು? ಇಲ್ಲಿ ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಕೇಬಲ್‍ ಟಿವಿ ಕಾಯ್ದೆ ಕುರಿತು ಇನ್ನಷ್ಟು ಆಳದಲ್ಲಿ ಚರ್ಚೆ ಆಗಬೇಕಿದೆ. ಅದಕ್ಕೂ ಈ ಅನೌಪಚಾರಿಕ ‘ಕೇಬಲ್ ಸೆನ್ಸಾರ್‌ಶಿಪ್‍ಗೂ’ ಏನಾದರೂ ಸಂಬಂಧ ಇದೆಯಾ? ತಮಿಳುನಾಡಿನ ಅರಸು ಕೇಬಲ್‍ ನೆಟ್‍ವರ್ಕ್‍ ಬಂದ ಮೇಲೆ ಮಾಧ್ಯಮ ಮತ್ತು ಸರಕಾರದ ನಡುವಿನ ಸಂಬಂಧದಲ್ಲಿ ಆದ ಸೂಕ್ಷ್ಮ ಬದಲಾವಣೆಗಳು ಏನು? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ.

ಅದರ ಆಚೆಗೆ ಮಾಧ್ಯಮ ಸ್ವಾತಂತ್ರ್ಯ ಎಂಬುದು, ಬದಲಾದ ಕಾಲಮಾನದಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅಟ್‍ಲೀಸ್ಟ್ ಚಾನಲ್‍ಗಳನ್ನು ಮುನ್ನಡೆಸುತ್ತಿರುವವರಾದರೂ ಗಮನಿಸಬೇಕಿದೆ. ಇವೆಲ್ಲಕ್ಕೂ ಮುಂಚೆ, ಟಿವಿ9 ಮತ್ತು ನ್ಯೂಸ್‍9 ಚಾನಲ್‍ಗಳ ‘ಬ್ಲಾಕ್‍ ಔಟ್‍’ ಕುರಿತಂತೆ ಒಂದು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕಿದೆ. ನಿಜಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದನ್ನು ಜನರ ಮುಂದೆ ಇಡಬೇಕಿದೆ. ಇದಕ್ಕಾಗಿ ಉತ್ತಮ ಚಾರಿತ್ರ್ಯ ಹೊಂದಿರುವ ಯಾರಾದರೂ ನಿವೃತ್ತ ನ್ಯಾಯಾಧೀಶರಿಗೆ ಒಂದು ತಿಂಗಳ ಅವಕಾಶ ನೀಡಿದರೂ ಸಾಕಾಗುತ್ತದೆ. ಅದು ಭವಿಷ್ಯದ ಕರ್ನಾಟಕ ನ್ಯೂಸ್‍ ಮೀಡಿಯಾದ ಚಹರೆಯನ್ನು ರೂಪಿಸಲು ಒಂದು ತಾತ್ವಿಕ ತಳಹದಿಯನ್ನು ನಿರ್ಮಿಸುವ ಕೆಲವೂ ಆದಂತೆ ಆಗುತ್ತದೆ.

‘ಬ್ಲಾಕ್‍ಟೌಟ್‍’ ವಿರೋಧಿಸಿದ ಟಿವಿ9 ಮತ್ತು ನ್ಯೂಸ್‍9 ಸಿಬ್ಬಂದಿಗಳೂ, ಸಂಸ್ಥೆಯ ಮುಖ್ಯಸ್ಥರು, ಅವರಿಗೆ ಬೆಂಬಲಿಸಿದ ಎಚ್ಚೆತ್ತ ಸಮುದಾಯದ ಮುಂದಿರುವ ಅವಕಾಶ ಮತ್ತು ಹೊಣೆಗಾರಿಕೆ ಇದು. ‘ಭಯೋತ್ಪಾದಕ ಜ್ಯೋತಿಷಿಗಳ’ ಜನಾಂದೋಲದಲ್ಲಿ ಇದು ಮರೆತು ಹೋಗಬಾರದು ಅಷ್ಟೆ.