Category Archives: ಪ್ರಸಾದ್ ರಕ್ಷಿದಿ

ನಮ್ಮ ಪರಿಸರ – ನೆಲ ಜಲ : 1

– ಪ್ರಸಾದ್ ರಕ್ಷಿದಿ

ನೀರಿನ ಬೆಲೆ ಹಾಲಿಗಿಂತ ದುಬಾರಿ ಯಾಕೆ?  ಶುಂಠಿ ಬೇಸಾಯ ಯಾರಿಗೆ ಆದಾಯ? ಎಂಡೋಸಲ್ಫಾನ್ ಬಳಕೆಯಿಂದ ನರಕವಾದ “ಸ್ವರ್ಗ” (ಸ್ವರ್ಗ ಎನ್ನುವುದು ಕಾಸರಗೋಡು ತಾಲ್ಲೂಕಿನ ಒಂದು ಊರು). ಇತ್ಯಾದಿ ಶೀರ್ಷಿಕೆ-ಬರಹಗಳನ್ನು, ನಾವು ಪ್ರತಿನಿತ್ಯ ಪತ್ರಿಕೆಗಳಲ್ಲಿ ಕಾಣುತ್ತೇವೆ. ಇತರೆ ಮಾಧ್ಯಮಗಳಲ್ಲೂ, ಹಾಳಾಗುತ್ತಿರುವ ನಮ್ಮ ನೆಲ, ಜಲ, ಗಾಳಿ, ಪರಿಸರ, ಆರೋಗ್ಯಗಳ ಬಗ್ಗೆ, ವರದಿಗಳು ಚರ್ಚೆಗಳು, ನುಡಿಚಿತ್ರಗಳು, ಜೊತೆಗೆ ದಿನನಿತ್ಯ ಅದಕ್ಕೆಂದೇ ಮೀಸಲಾದ ಕಾರ್ಯಕ್ರಮಗಳು, ಇವುಗಳಿಗೆಲ್ಲ ಲೆಕ್ಕವೇ ಇಲ್ಲ. ಇವೆಲ್ಲದರ ಜೊತೆಯಲ್ಲಿ ಇದೇ ವಿಷಯಗಳ ಬಗ್ಗೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆಯೂ ಕಡಮೆಯೇನಲ್ಲ.

ಇವುಗಳ ಜೊತೆಗೆ ನೆಲ, ಜಲ, ಪರಿಸರ ಸಂರಕ್ಷಣೆಯನ್ನೇ ಕಾಯಕವನ್ನಾಗಿಸಿಕೊಂಡ ಅನೇಕ ವ್ಯಕ್ತಿಗಳು ಹಲವು ಸಂಘಸಂಸ್ಥೆಗಳು ಇವೆ. ಇವುಗಳಲ್ಲಿ ಕೆಲವು ಸದ್ದಿಲ್ಲದೆ ಕೆಲಸ ಮಾಡುತ್ತ ಇನ್ನುಕೆಲವು ಬರೀ ಸದ್ದನ್ನೇ ಮಾಡುತ್ತ ಮುಂದುವರಿಯುತ್ತಿವೆ. ಪರಿಸರ ಸಂರಕ್ಷಣೆಗೆಂದೇ ಕೇಂದ್ರ ಸರ್ಕಾರದ ಸಂಪುಟ ದರ್ಜೆ ಸಚಿವಾಲಯವೂ ಇದೆ. ಈ ವರ್ಷ ಕರ್ನಾಟಕ  ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಹಲವು ಕೋಟಿ ರೂಪಾಯಿಗಳ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆಯೆಂಬ ಸುದ್ದಿಯೂ ಇತ್ತೀಚೆಗೆ ಕೇಳಿ ಬಂದಿದೆ. ಅದರ ಅನುಷ್ಠಾನಕ್ಕಾಗಿಯೇ ಹಲವಾರು ಸಂಸ್ಥೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಇವೆ.

ಇನ್ನು ನಮ್ಮಲ್ಲಿ ‘ಫುಕುವೋಕಾ’ನ ಶಿಷ್ಯರು, ತದ್ರೂಪಿಗಳು, ಸಮರ್ಥಕರು ಹಾಗೂ ವಿರೋಧಿಗಳು ಇವರುಗಳಿಗೇನೂ ಕೊರತೆಯಿಲ್ಲ.  Do nothing Farming ಎನ್ನುವುದನ್ನು ಅಪಹಾಸ್ಯಕ್ಕೀಡಾಗುವಷ್ಟು ಅಧ್ವಾನವನ್ನು ಇವರಲ್ಲಿ ಹಲವರು ಈಗಾಗಲೇ ಎಬ್ಬಿಸಿದ್ದಾರೆ. ಈ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ‘ಫುಕುವೋಕಾ’ನ ವಿಚಾರ ನಮಗೆ ಹೊಸದೇನಲ್ಲ. ನಮ್ಮಜ್ಜನ ಕಾಲದಲ್ಲಿ ಹೀಗೆಯೇ ಕೃಷಿ ನಡೆದಿತ್ತು, ನಮ್ಮ ಹಳೆಯ ಗ್ರಂಥದಲ್ಲಿ ಹೀಗೆ ಹೇಳಿದೆ ಎಂದು ಒಳ್ಳೆಯದೇನಾದರೂ ವಿಚಾರ ಬಂದರೆ ಅದು ನಮ್ಮಲ್ಲಿ ಹಿಂದೆಯೇ ಇತ್ತು ಎಂದೂ ಕೆಟ್ಟದ್ದೇನಾದರೂ ಇದ್ದರೆ ಅದು ಹೊರಗಿನವರಿಂದ ಬಂತು ಎಂದು ಹೇಳುತ್ತ ಭಾರತದ ಗತಕಾಲದ ಶ್ರೇಷ್ಟತೆಯಲ್ಲೇ ಇಂದೂ ಮುಳುಗಿರುವವರ ಬಗ್ಗೆ ಹೇಳದಿರುವುದೇ ಕ್ಷೇಮ. ಆದರೆ ನಮ್ಮಲ್ಲಿ ಒಳ್ಳೆಯದೇನೂ ಇರಲೇ ಇಲ್ಲವೆಂದು ನನ್ನವಾದವಲ್ಲ. ಆ ಒಳ್ಳೆಯದನ್ನು ನಮಗೆ ಯಾಕೆ ಉಳಿಸಿಕೊಂಡು ಬರಲಾಗಲಿಲ್ಲ, ಅದಕ್ಕೆ ಕಾರಣಗಳೇನು? ಇತ್ಯಾದಿಗಳನ್ನೆಲ್ಲ ನಮ್ಮ ನಡುವೆಯೇ ಹುಡುಕಬೇಕಲ್ಲವೇ? ಇದು ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ.

ನಮ್ಮ ಪರಿಸರ ಎಂದಾಗ, ನಮಗೆ ತಟ್ಟನೆ ಮನಸ್ಸಿಗೆ ಬರುವುದು ನಮ್ಮ ಕಾಡುಗಳು, ಹೊಳೆ, ನದಿ ಕೆರೆ, ಸಮುದ್ರ, ಗಾಳಿ, ಆಕಾಶ, ಅನಂತರ ಪ್ರಾಣಿಗಳು, ಮತ್ತು ಕೊನೆಯದಾಗಿ ಮನುಷ್ಯನೆಂಬ ಪ್ರಾಣಿ. ಇವುಗಳಲ್ಲಿ ಯಾರ ಅಂಕೆಯಲ್ಲೂ ಇಲ್ಲದ  ಆದರೆ ಎಲ್ಲವನ್ನೂ ಕಾಲಬದ್ಧ, ನಿಯಮಬದ್ಧವಾಗಿ ನಡೆಸುವ ಪ್ರಕೃತಿ ಒಂದೆಡೆಯಾದರೆ, ತನ್ನ ಅಲ್ಪಜ್ಞಾನವನ್ನೇ ಮಹಾನ್ ಸಾಧನೆಯೆಂದು ನಂಬಿ ಪ್ರಕೃತಿಯನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಿರುವ ಮನುಷ್ಯ ಇನ್ನೊಂದೆಡೆಯಲ್ಲಿದ್ದಾನೆ.  ಪ್ರಕೃತಿ ತನ್ನ ಅಗಾಧವಾದ ಸಾಮರ್ಥ್ಯದೊಡನೆ ಪ್ರಕೋಪ-ವಿಕೋಪಗಳನ್ನುಂಟುಮಾಡುತ್ತ ಮತ್ತೆ ಅದೇ ಅದ್ಭುತ ರೀತಿಯಲ್ಲಿ ತನ್ನನ್ನು ತಾನೇ ಪುನಶ್ಚೇತನಗೊಳಿಸಿಕೊಳ್ಳುತ್ತ, ಬೇಡವಾದದ್ದನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಳ್ಳುತ್ತ, ಬೇಕಾದ ಹೊಸತನ್ನು ಸೃಷ್ಟಿಸಿಕೊಳ್ಳುತ್ತ ಇದೆ. ಆದರೆ ಮನುಷ್ಯನೆಂಬ ಪ್ರಾಣಿ ಜಗತ್ತಿನ ಎಲ್ಲವೂ ತನ್ನ ಉಪಯೋಗಕ್ಕಾಗಿಯೇ ಇದೆಯೆಂಬ ಅಹಂಕಾರದಿಂದ ಮಾಡಿರುವ, ಮಾಡುತ್ತಿರುವ ಅನಾಹುತಗಳು ಬಲುದೊಡ್ಡವು.  ನಾವು ಯೋಚಿಸಬೇಕಿರುವುದು, ಪ್ರಕೃತಿಗೆ ಇರುವ-ತನಗೆ ಬೇಡವಾದದ್ದನ್ನು  ನಿರ್ದಾಕ್ಷಿಣ್ಯವಾಗಿ ನಿವಾರಿಸಿಬಿಡುವ ಅಗಾಧ ಶಕ್ತಿಯ ಬಗ್ಗೆ. ಆದ್ದರಿಂದ ಪ್ರಕೃತಿಗೆ ಬೇಡವಾದದ್ದರಲ್ಲಿ ಮನುಷ್ಯನೇ ಮೊದಲಿಗನಾಗನಹುದೆಂಬ ಭಯ ಮತ್ತು ಎಚ್ಚರದಿಂದ ನಾವು ವರ್ತಿಸಬೇಕಾಗಿದೆ.

ಪ್ರಕೃತಿಯಲ್ಲಿ ಒಂದಾಗಿ, ಸಹಜವಾಗಿ ಇತರ ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಈ ಮನುಷ್ಯ ಬಹಳದೂರ ಬಂದಿದ್ದಾನೆ. ಅತ್ಯಂತ ಜಟಿಲ ಹಾಗೂ ಸಂಕೀರ್ಣ ಜೀವನಕ್ರಮದ ಬುದ್ಧಿವಂತನೆನಿಸಿದ್ದಾನೆ. ಈಗ ಮನುಷ್ಯನಿಗೆ ಸಾಮಾಜಿಕ,  ಆರ್ಥಿಕ,  ಸಾಂಸ್ಕೃತಿಕವಾದ ಭಿನ್ನತೆಗಳು ಮತ್ತು ಕಾಲ ದೇಶಗಳ ವೈವಿದ್ಯತೆಗಳೂ ಸೇರಿಕೊಂಡಿವೆ. ಹಾಗಾಗಿ ನಾವು ಪರಿಸರದ ಬಗ್ಗೆ ಮಾತಾಡುವಾಗಲೆಲ್ಲ ಈ ವಿಷಯಗಳನ್ನೆಲ್ಲ ಮರೆತು ಅಥವಾ ಬಿಟ್ಟು ಆಯಾ ಸಂದರ್ಭದಲ್ಲಿ ಒಂದೊಂದೇ ವಿಷಯವನ್ನು ಪ್ರತ್ಯೇಕವಾಗಿ ಕಂಡುಕೊಂಡು ಪರಿಹಾರ ಹುಡುಕುತ್ತಾ ಹೋದರೆ ರೋಗಕ್ಕಿಂತ ಚಿಕಿತ್ಸೆಯೇ ಭಯಾನಕವಾದೀತು. ಹಾಗಾಗಿ ನಮ್ಮ ಪರಿಸರ ಪ್ರಜ್ಞೆಯೂ ಕೂಡಾ ನಮ್ಮ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳೊಂದಿಗೆ, ಪ್ರತಿಯೊಂದನ್ನು ಸಮಗ್ರವಾಗಿ ಗ್ರಹಿಸುತ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೃಷಿ, ಉದ್ಯಮ, ವಿದ್ಯಾಭ್ಯಾಸ, ಆಡಳಿತ, ಆರ್ಥಿಕತೆ,  ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ಪುನರ್ ಪರಿಶೀಲಿಸುತ್ತ  ಪುನರ್ರಚಿಸುತ್ತ ಸಾಗಬೇಕಾಗಿದೆ.

ಮೊದಲನೆಯದಾಗಿ ನಮ್ಮ ಕೃಷಿವಲಯದ ಬಗ್ಗೆ ಯೋಚಿಸೋಣ. ಸಧ್ಯದಲ್ಲಿ ಪರಿಸರ ಪ್ರಿಯರೆಲ್ಲರ ಬಾಯಲ್ಲಿ ಯಾವಾಗಲೂ ಕೇಳುತ್ತಿರುವ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವ ವಿಷಯವೆಂದರೆ  ” ಸಹಜ ಕೃಷಿ”. ಇದೊಂದು ಆದರ್ಶಸ್ಥಿತಿ. ಧ್ಯಾನದಂತಹ ಕ್ರಿಯೆ. ನೀರಿನಲ್ಲಿ ಮೀನಿನಂತೆ ಸಹಜವಾಗಿ ಬದುಕುವ ಗತಿ. ಇಲ್ಲಿ ಕೃಷಿಕ ಸಂಪೂರ್ಣವಾಗಿ ಪ್ರಕೃತಿಯ ಭಾಗವೇ ಆಗಿರುತ್ತಾನೆ. ಈ ಸಹಜ ಕೃಷಿಯು ನಮ್ಮ ಇಂದಿನ ಪರಿಸ್ಥಿತಿಯಲ್ಲಿ  ಕೆಲವೇ ಕೆಲವರಿಗೆ (ಅದೂ ಕೂಡಾ ಪೂರ್ಣವಾಗಿ ಅಲ್ಲ) ಸಾಧ್ಯವಾಗಬಹುದು. ಇಂತಹವರಲ್ಲಿ ಜಪಾನಿನ ‘ಫಕುವೋಕಾ’ ನಮ್ಮವರೇ ಆದ ‘ಚೇರ್ಕಾಡಿ ರಾಮಚಂದ್ರರಾಯರು’ ಬರುತ್ತಾರೆ.

ಚೇರ್ಕಾಡಿ ರಾಮಚಂದ್ರರಾಯರು

ಯಾಕೆಂದರೆ ಇವರು ಯಾವುದೇ ಆಧುನಿಕ ಸೌಲಭ್ಯಗಳನ್ನು ಬಯಸದೆ ಎಣ್ಣೆದೀಪ ಉರಿಸುತ್ತ,ಬಾವಿಯಿಂದ ನೀರನ್ನು ಸೇದಿ ಬಳಸುತ್ತ, ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ಎಲ್ಲ ಕೆಲಸಗಳನ್ನು ತಾವೇಮಾಡುತ್ತ ನಮ್ಮ ಪ್ರಾಚೀನ ಕಾಲದ ಋಷಿಮುನಿಗಳಂತೆ ಬದುಕಿದವರು. ಆದ್ದರಿಂದಲೇ ಇರಬೇಕು ಫುಕುವೋಕಾ ಹೇಳಿದ್ದು ನನ್ನ ತೋಟ, ಮನೆ ಆಧುನಿಕರಿಗೆ ಎಷ್ಟು ಕುತೂಹಲ ತಂದಿದೆಯೋ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು. (ನಮ್ಮ ಮಠ ಮಾನ್ಯರುಗಳು ಈ ಆಧ್ಯಾತ್ಮಿಕ ಗುಂಪಿಗೆ ಸೇರುವುದಿಲ್ಲ) ಹಾಗಾಗಿ ಈ ‘ಸಹಜ ಕೃಷಿ’ ಒಂದು ಆದರ್ಶವಾಗಿ ಉಳಿದೀತೆ ಹೊರತು, ಸಾರ್ವತ್ರಿಕ ಆಚರಣೆಗೆ ಬರುವುದು ಕಷ್ಟ,

ಎರಡನೆಯದಾಗಿ ನಾವೀಗ ಎಲ್ಲಡೆ ಕಾಣುವ- ಕೇಳುವ, ಇತ್ತೀಚೆಗಂತೂ ಕಿವಿಗೆ ಅಪ್ಪಳಿಸುತ್ತಿರುವ ‘ಹೈಟೆಕ್ ತಂತ್ರಜ್ಞಾನ’ ಮತ್ತು ‘ಹೈಟೆಕ್ ಕೃಷಿ’ ಈ ಹೈಟಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ.

ಒಂದುಕಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ ಈ ಹೈಟೆಕ್ ಕೃಷಿಗೆ ನೀಡುತ್ತಿರುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಸರ್ಕಾರ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಜಾನರು ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ   ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್ ಮಾಡಿ ಸರ್ಜರಿ ಆಪರೇಷನ್ಗೆಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’ , ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗುದೆಯೇ? ಎಂದು.

ಅನ್ನಿಸದೆ ಇರದು. ಆದರೆ ಹೌದು ಅವರ ಪಾಲಿಗೆ ನಮ್ಮ ಕೃಷಿಕ್ಷೇತ್ರ ಖಂಡಿತವಾಗಿಯೂ ಸಮೃದ್ಧವಾಗಿದೆ! ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’  ‘ಕೃಷಿಉದ್ಯಮ’  ಜೊತೆಗೆ  ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು,  ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ,  ಗದ್ದೆ, ಹೊಲಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

(ಮುಂದುವರೆಯುವುದು)

Elephant Corridor…ಎಂಬ ಆನೆ ದಾರಿ

-ಪ್ರಸಾದ್ ರಕ್ಷಿದಿ

ಕಾಡಾನೆಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.  ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ಆನೆಗಳಿಂದ ಗಾಯಗೊಂಡಿರುವವರ, ಸತ್ತುಹೋದವರ ವರದಿಗಳು ಬರುತ್ತಿವೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಪ್ರದೇಶಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಮೂವತ್ತನ್ನು ದಾಟಿದೆ. ಆದರೆ ನಗರ ಪ್ರದೇಶಕ್ಕೆ ಆನೆಗಳು ಬಂದು ದಾಂಧಲೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ವ್ಯಾಪಕ ಪ್ರಚಾರ ಮಾತ್ರ ರೈತರು ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಮಾಮೂಲಿನಂತೆ ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರೂ ಕೂಡಾ ತೇಪೆ ಹಚ್ಚಿದಂತೆ ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸಧ್ಯದ ಮಟ್ಟಿಗೆ ಬಚಾವಾದೆವೆಂದು ಸುಮ್ಮನಾಗುತ್ತಾರೆ.

ಕೇವಲ ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹತ್ತು ವರ್ಷಗಳಿಂದ ಆನೆಗಳ ಉಪಟಳ ಪ್ರಾರಂಭವಾಯಿತು.

ನಮ್ಮ ತಾಲ್ಲೂಕಿನಲ್ಲಿ ಆನೆಗಳಿಂದ ತೊಂದರೆ ಅನುಭವಿಸಿದ ಇಬ್ಬರು ರೈತರ ಮಾತುಗಳೊಂದಿಗೆ ಮುಂದಿನ ವಿಚಾರವನ್ನು ವಿವರಿಸುತ್ತೇನೆ. ಒಬ್ಬರು ಹಿರಿಯ ರೈತರು-ವಿದ್ಯಾವಂತರು, ಒಂದು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದವರು. ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆಬೆಳೆಯನ್ನು ನಾಶಮಾಡಿದ್ದವು, ಕಾಫಿ ತೋಟವೂ ಹಾನಿಗೊಳಗಾಗಿತ್ತು ಯಂತ್ರೋಪಕರಣಗಳು ಜಖಂಗೊಂಡಿದ್ದವು. ಆ ಸಂದರ್ಭದಲ್ಲಿ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಅವರಿಗುಂಟಾದ ನಷ್ಟದ ಬಗ್ಗೆ ಮಾತನಾಡುತ್ತ, ಸರ್ಕಾರದಿಂದ ಏನಾದರೂ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಅವರನ್ನು ಕೇಳಿದೆ. ಅದಕ್ಕವರು ಅದೆಲ್ಲ ಸರಿ ಆದರೆ ಏನು ಮಾಡೋದು ಅವರು (ಆನೆಗಳು) ನಮಗಿಂತ ಸಾವಿರಾರು ವರ್ಷ ಮೊದಲೇ ಭೂಮಿಗೆ ಬಂದವರು.  ಅವರ ಜಾಗದಲ್ಲಿ ನಾವು ಬಂದು ಕೂತಿದ್ದೀವಿ, ತಪ್ಪು ನಮ್ಮದೇ ಅನುಭವಿಸಬೇಕು ಎಂದರು.

ಇನ್ನೊಂದು ಘಟನೆ ಇತ್ತೀಚಿನದ್ದು. ಆನೆ ಧಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಮೃತ ದೇಹದ ಪಕ್ಕದಲ್ಲಿ ಕುಳಿತಿದ್ದ ಅವರ ಮಗ ನಾವು ಗಣಪತೀನ ಇಷ್ಟೊಂದು ಪೂಜೆ ಮಾಡ್ತೀವಿ ಏನನ್ಯಾಯ ಮಾಡ್ದ ಅಂತ ಗಣಪತಿ ನಮ್ಮಪ್ಪನ್ನ ಕರ್ಕೊಂಡು ಹೋದ… ಎಂದು ಬಂದವರೆಲ್ಲರ ಮುಂದೆ ಹೇಳುತ್ತ ರೋಧಿಸುತ್ತಿದ್ದ.

ಮೊದಲನೆಯವರದು ಸಂಪೂರ್ಣ ಅರಿವಿನೊಂದಿಗೆ ಬಂದಂತಹ  ಪ್ರತಿಕ್ರಿಯೆಯಾದರೆ, ಎರಡನೆಯವರದ್ದು ಮುಗ್ಧ ಭಾವುಕ ಅಳಲು. ಆದರೆ ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲ ಅನುಭವಿಸಿದ ಮೇಲೂ ಇಬ್ಬರಲ್ಲೂ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲದಿರುವುದು.

ಇದು ನಮ್ಮ ರೈತರ ಸಾಮಾನ್ಯ ಮನೋಧರ್ಮವನ್ನು ತೋರಿಸುತ್ತದೆ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರಲ್ಲದೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಬಹಳ ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಮತ್ತು ಹಾಗೂ ಕಾನೂನಿನ ಭಯ ಕಾರಣವಾಗಿದೆ. ( ಕಾನೂನಿನ ಭಯವಿದ್ದಾಗಲೂ ಆಹಾರಕ್ಕೆ ಬಳಸುವ ಕಾಡು ಪ್ರಾಣಿಗಳ ಬೇಟೆ ಇಂದಿಗೂ ನಡೆದೇ ಇದೆ) ಆದರೆ ರೈತರು ಆನೆಗಳನ್ನು ಕೊಲ್ಲದಿರಲು ಅದೊಂದೇ ಕಾರಣವಲ್ಲ.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪಿಗೆ ಸೇರಿದವುಗಳು. ಇವು ಬಯಲು ಸೀಮೆಗೂ ಧಾಳಿ ಮಾಡುತ್ತವೆ. ಹಗಲೆಲ್ಲ ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆಯುತ್ತವೆ. ಇವುಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇವು ಸತತವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಈ ಆನೆಗಳು ತುಂಬಾ ಅಪಾಯಕಾರಿಯಾಗಿವೆ. (ಸಾಮಾನ್ಯವಾಗಿ ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ), ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆ ನಾಶಮಾಡಿ ತಿಂದು ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಇವುಗಳನ್ನು ಮತ್ತೆ ಕಾಡಿಗೆ ಅಟ್ಟಿದರೂ ಅವು ಹೋಗಲಾರವು. ಆದ್ದರಿಂದ ಈ ಆನೆಗಳನ್ನು ಹಿಡಿದು, ಸಾಧ್ಯವಾದರೆ ಪಳಗಿಸುವುದು-ಇಲ್ಲವೇ ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೆ ವಿಧದ ಆನೆಗಳು ಈ ರೀತಿಯವಲ್ಲ. ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ.  ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ  ರೊಚ್ಚಿಗೆದ್ದು ದಾಳಿ ಮಾಡಿವೆ. ಈ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ  ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಜನ  ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ.  ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.  ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.

ಆನೆ ನಡೆದದ್ದೇ ದಾರಿ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮಥ್ರ್ಯಗಳನ್ನು ಪರಿಚಯಿಸಲು ಹೇಳುವ ಮಾತು. ಆನೆಗಳು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ಪಶ್ಚಿಮಘಟ್ಟಗಳಲ್ಲಿ ಸಂಚರಿಸುತ್ತಾ ತಾವಾಗಿಯೇ ನಿರ್ಮಿಸಿಕೊಂಡಿರುವ  ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಬಯಸುತ್ತವೆ. ಇವುಗಳನ್ನೇ ‘ಆನೆದಾರಿ’ಗಳೆನ್ನುವುದು. ಆದರೆ ಮನುಷ್ಯನೇ ಅವುಗಳ ದಾರಿಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ.

ಈ ಎಲ್ಲ ಅನಾಹುತಗಳು ನಡೆಯುತ್ತಿರುವಾಗ ಸುಮ್ಮನಿದ್ದ ಸರ್ಕಾರಗಳು, ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಕಾಲಹರಣ ಮಾಡಿ ಇದೀಗ ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡುತ್ತಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ‘ಆನೆದಾರಿ’ಗಳನ್ನು ಮತ್ತೆ ಆನೆಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ  elephant corridor ಗಳನ್ನು ‘ನಿರ್ಮಿಸುವ’ ಮಾತನಾಡುತ್ತಿವೆ. ವಿದ್ಯುತ್ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರಿದರೆ, ಕೇಂದ್ರ ಸಚಿವರೊಬ್ಬರು ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ಹೊಣೆ, ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅರುವತ್ತು ಕಡತಗಳಿಗೆ ರಾಜ್ಯ ಸಕಾರ ಇನ್ನೂ ಅನುಮತಿ ನೀಡದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಗತಿ ಕುಂಠಿತವಾಗಿದೆ ಎನ್ನುತ್ತಾರೆ. ಈಗ ಅನುಮತಿ ಸಿಕ್ಕಿರುವ ಕಂಪೆನಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಘಟ್ಟಪ್ರದೇಶವನ್ನು ಹಾಳುಗೆಡವಿರುವುದರ ಬಗ್ಗೆ, ಮತ್ತು ಆ ಅರುವತ್ತು ಯೋಜನೆಗಳೂ ಮತ್ತದೇ ದಟ್ಟಅರಣ್ಯ ಪ್ರದೇಶದಲ್ಲಿ ಬರುತ್ತದೆಂಬ ವಿಚಾರದ ಬಗ್ಗೆ, ಜಾಣ ಕಿವುಡುತನ ತೋರುತ್ತಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು ಆನೆಗಳಿಂದ ತೊಂದರೆಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಾಕಷ್ಟು ವಿವರವಾಗಿಯೇ ಮಾಹಿತಿಗಳನ್ನು ಸಂಗ್ರಹಿಸಿದರು. ಅವರೆದುರಿನಲ್ಲೇ ಆನೆಗಳು ಕೂಲಿಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆಯೂ ನಡೆಯಿತು. ಮತ್ತದೇ ಆನೆದಾರಿ ನಿರ್ಮಾಣ ಭರವಸೆಯನ್ನು ನೀಡಿ ಸಚಿವರು ವಾಪಸ್ಸಾದರು.

ಇವರೆಲ್ಲ ನಿರ್ಮಾಣ ಮಾಡಲು ಬಯಸುವ ಆನೆದಾರಿ  ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಇವರು ಹೇಳುವಂತೆ ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ  ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ಮಾಡಲಿರುವ ಹೊಸ ಆನೆದಾರಿಗಳಿವು. ಆದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟದ್ದಿಲ್ಲ. ಸಾಮಾನ್ಯವಾಗಿ  ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ದಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆ ದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃಧ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಆಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಬೇಧವಿಲ್ಲದೆ) ನೀಡುತ್ತಲೇ ಇರುತ್ತವೆ. ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿಧರ್ಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತ ಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ.  ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ.  ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.  ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು, (ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಹಾಗೂ ಐ.ಟಿ.-ಬಿ.ಟಿ ಕಂಪೆನಿಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರ. ಇದೀಗ ಆನೆ ದಾರಿ ನಿರ್ಮಾಣಕ್ಕೆಂದು ಇವರು ನೀಡುತ್ತೇವೆಂದು ಹೇಳುತ್ತಿರುವ ಮೊತ್ತವೂ ಅಷ್ಟೇ ಸಣ್ಣದು.

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಮಕ್ಕಳಿಗೆ ನಾನಾ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವೂ ಇದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಬದಲಿಯಾಗಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದು ವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಆನೆಗಳು ಹೀಗೇ ಉಳಿದರೆ ಪುಂಡಾನೆಗಳಾಗಿ ಪರಿವರ್ತನೆಯಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಈಗ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು. ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. (ಒತ್ತುವರಿ ಸರಿಯೆಂದು ನನ್ನ ವಾದವಲ್ಲ, ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಯಾವುದೇ ಸರ್ಕಾರದ ಕರ್ತವ್ಯ ಕೂಡಾ) ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ, ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ,  ಕೆಲವೊಮ್ಮೆ ಮೋಟಾರ್ ರ್‍ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಇವೂ ಕೂಡಾ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ.

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾದ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಆನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ನಮ್ಮ ಆಭಿವೃದ್ಧಿ ಕಾರ್ಯಗಳನ್ನೆಲ್ಲ ಪಶ್ಚಿಮ ಘಟ್ಟದ ಅರಣ್ಯ ಪದೇಶದಿಂದ ಶಾಶ್ವತವಾಗಿ ದೂರಮಾಡಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ. ಇದರೊಂದಿಗೆ ಸ್ವಇಚ್ಛೆಯಿಂದ ಅಲ್ಲಿಂದ ತೆರಳಲು ಬಯಸುವವರಿಗೆ (ಅನೇಕ ವರ್ಷಗಳಿಂದ ಅಲ್ಲಿ ನೆಲೆಸಿರುವ ಭೂರಹಿತ ಕೃಷಿಕಾರ್ಮಿಕರೂ ಸೇರಿದಂತೆ) ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಅನುಮಾನ ಕಂಡುಬರುತ್ತಿದೆ. ಇದರಿಂದಾಗಿಯೇ ಕೆಲವು ‘ಅಭಿವೃದ್ಧಿಪರ’ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪೆನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ (ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ). ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನು ಕೂಡಾ ತಜ್ಞರ ಮಾತಿಗೆ ಮಣಿದು ಹಿಂತೆಗೆದುಕೊಂಡು ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸಲು ಮುಂದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ….. ನಮಗೂ ಇಲ್ಲ-ಆನೆಗಳಿಗೂ ಇಲ್ಲ.

ಫೋಟೋ ಕೃಪೆ: sheldrickwildlifetrust.org