Category Archives: ಬಿ.ಎಲ್. ಶಂಕರ್

ಪ್ರಜಾಪ್ರಭುತ್ವ: ಆದರ್ಶ ಮತ್ತು ವೈರುಧ್ಯಗಳು


-ಡಾ. ಬಿ.ಎಲ್.ಶಂಕರ್  


ಪ್ರಜಾರಾಜ್ಯದ ಕನಸು ಮೊಳೆಕೆಯೊಡೆದಿದ್ದು ಕ್ರಾಂತಿಕಾರಿ, ಯುಗಪುರುಷ ಬಸವಣ್ಣನವರ ಜೀವಿತಕಾಲದಲ್ಲಿ; ಅನುಭವ ಮಂಟಪದಲ್ಲಿ 800 ವರ್ಷಗಳಷ್ಟು ಹಿಂದೆ, ಅದೂ ಕರ್ನಾಟಕದಲ್ಲಿ ಎಂಬುದು ನಮಗೆ ಹೆಗ್ಗಳಿಕೆಯ ವಿಚಾರ. ಕೂಡಲಸಂಗಮದ ಅನುಭವ ಮಂಟಪದಲ್ಲಿ ಆಗಿನ ಸಮಾಜದ ಅತ್ಯಂತ ಕೆಳಸ್ತರದ ಜನಸಾಮಾನ್ಯರೂ ಕೂಡ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ-ಅಹವಾಲುಗಳನ್ನು ವ್ಯಕ್ತಪಡಿಸುವ ಸಮಾನಾವಕಾಶವಿತ್ತೆಂಬುದು ಚರಿತ್ರೆಯಿಂದ ತಿಳಿದುಬರುವ ಸತ್ಯ. ಮೇಲ್ವರ್ಗದ ಸಂಪೂರ್ಣ ಶೋಷಣೆಗೆ ಒಳಗಾದವರು ಬಸವಣ್ಣನವರಿಗೆ ಸಮಾನವಾಗಿ ಕುಳಿತುಕೊಂಡು ವಿಚಾರಮಂಥನದಲ್ಲಿ ಭಾಗವಹಿಸಲು ಅವಕಾಶವಿದ್ದುದೇ ನಾವೀಗ ಅನುಭವಿಸಿಕೊಂಡು ಬರುತ್ತಿರುವ ಪ್ರಜಾಪ್ರಭುತ್ವ ಪದ್ಧತಿಯ ಅಡಿಗಲ್ಲು. ಇಂದು ಬಹುಚರ್ಚಿತವಾಗುತ್ತಿರುವ ಸಾಮಾಜಿಕ ನ್ಯಾಯ, ಸಮಾನ ಸ್ತ್ರೀಸ್ವಾತಂತ್ರ್ಯ, ಅಸ್ಪೃಶ್ಯತೆ ನಿವಾರಣೆ, ಸರ್ವರಿಗೂ ಸಮಾನಾವಕಾಶ… ಹೀಗೆ ಪ್ರತಿಯೊಂದಕ್ಕೂ ಅಡಿಪಾಯವನ್ನು, ಮೂಲಸತ್ವವನ್ನು ಎಂಟುನೂರು ವರ್ಷಗಳಷ್ಟು ಹಿಂದೆಯೇ ಬಸವಣ್ಣನವರು ಒದಗಿಸಿದ್ದರು.

ಶತಮಾನದಷ್ಟು ಹಿಂದೆಯೇ ಮೈಸೂರು ಸಂಸ್ಥಾನದ ಯದುವಂಶದ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಪ್ರಜಾ ಪರಿಷತ್ತನ್ನು ಸ್ಥಾಪಿಸಿ, ಆ ಮೂಲಕ ಜನಪ್ರತಿನಿಧಿಗಳಿಗೆ ಸಂಸ್ಥಾನದ ಕಾರ್ಯಚಟುವಟಿಕೆಗಳಲ್ಲಿ ನೇರಪಾಲ್ಗೊಳ್ಳುವಿಕೆಯ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ಇತಿಹಾಸ ನಮ್ಮ ಕಣ್ಣಮುಂದಿದೆ. ಜಾಗತಿಕ ಇತಿಹಾಸದಲ್ಲಿ ಯಾವುದೇ ರಾಷ್ಟ್ರ ಕಂಡುಕೊಂಡ ಅತ್ಯಂತ ಯಶಸ್ವೀ ಆಡಳಿತ ಪ್ರಯೋಗವೆಂದರೆ ಅದು ಪ್ರಜಾಪ್ರಭುತ್ವ ಪದ್ಧತಿಯೆಂಬುದು ನಿಚ್ಚಳ. ಆದರೆ, ನಾವಿಂದು ಬಾಳಿ ಬದುಕುತ್ತಿರುವ ಸ್ವತಂತ್ರ ಭಾರತದಲ್ಲಿ ಶತಮಾನಗಳ ಕಾಲ ರೂಢಿಸಿಕೊಂಡು ಬಂದ ಈ ಎಲ್ಲಾ ಗುಣಧರ್ಮ, ವಿಶ್ವ ಭ್ರಾತೃತ್ವ ನಡವಳಿಕೆ ಮತ್ತು ಸಂದೇಶಗಳು ಎಲ್ಲಿ ಕಣ್ಮರೆಯಾಗಿವೆ? ಕೇವಲ ಬ್ರಿಟಿಷರ ದಾಸ್ಯದಿಂದ ಮಾತ್ರ ಬಿಡುಗಡೆಯಾಯಿತೇ? ಬೌದ್ಧಿಕವಾಗಿ ನಾವಿನ್ನೂ ಅದೇ ಪ್ರಭಾವದಲ್ಲಿದ್ದೇವೆಯೇ? ಈ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರ ನಡೆದುಬಂದ ದಾರಿ, ನಮ್ಮ ಮುಂದಿರುವ ಸವಾಲುಗಳು – ಆಯ್ಕೆಗಳು, ಒಪ್ಪಿಕೊಂಡು ಬಂದಿರುವ ರಾಜಕೀಯ ಆದರ್ಶಗಳ ಮೇಲೆ ಕ್ಷಕಿರಣ ಬೀರಲು ಪ್ರಸ್ತುತ ಕಾಲಘಟ್ಟ ಬಹು ಪ್ರಸಕ್ತವಾದುದು.

ಪ್ರಜಾನಿರೀಕ್ಷೆ:

ನಾವಿಂದು ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ. ಶತಮಾನಗಳಲ್ಲಿ ಕಂಡುಕೊಳ್ಳಲಾಗದ ಪರಿಹಾರಗಳು ನಮಗೀಗ ಬೇಕಿವೆ. ಅದೂ ಇದೀಗ ತಾನೇ 60 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಇಷ್ಟು ಅಲ್ಪಕಾಲದಲ್ಲಿ! ಇಷ್ಟು ಅಗಾಧ ಮತ್ತು ಕ್ಷಿಪ್ರ ಬಯಕೆ ಎಷ್ಟು ಸಮಂಜಸ? ಅವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆಯಾದರೂ ಯೋಚಿಸಬೇಡವೇ? ಅಷ್ಟೂ ವ್ಯವಧಾನವಿಲ್ಲವಾಯಿತೇ? ಬದಲಾವಣೆ ಒಂದು ನಿರಂತರ ಪ್ರಕ್ರಿಯೆ ಎನ್ನುವ ಮೂಲಭೂತ ಸೂಕ್ಷ್ಮತೆಯನ್ನೇ ಮರೆತಿದ್ದೇವೆಯೇ? ಇವುಗಳ ಬಗೆಗೆ ವಿಚಾರವಿಮರ್ಶೆ ಮಾಡಬೇಕಾದ ಹೊಣೆಗಾರಿಕೆ ಯಾರ ಮೇಲಿದೆ? ಇದು ರಾಜಕಾರಣಿಗಳಿಗೆ ಮಾತ್ರ ಸಂಬಂಧಪಟ್ಟಿದೆಯೇ ಅಥವಾ ಯಾವುದೋ ಒಂದು ನಿರ್ದಿಷ್ಟ ವರ್ಗ-ಸಮೂಹಕ್ಕೆ ಮಾತ್ರ ಮೀಸಲೇ? ನಿರೀಕ್ಷಿತ ಬದಲಾವಣೆ, ಅಭಿವೃದ್ಧಿಗಳು ಏಕಮುಖವಾಗಿ ಸಾಧಿಸಲು ಸಾಧ್ಯವಿಲ್ಲ. ಸಮಾಜದ ಪ್ರತಿಹಂತದಲ್ಲಿಯೂ ಪರಸ್ಪರ ಸಹಕಾರ, ವಿಶ್ವಾಸ, ತೊಡಗಿಸಿಕೊಳ್ಳುವಿಕೆ ಅತಿ ಅವಶ್ಯ. ಸಾರ್ವತ್ರಿಕ ಪಾಲ್ಗೊಳ್ಳುವಿಕೆಗಾಗಿ ಮತದಾನ, ಅನಕ್ಷರತೆಯ ನಿವಾರಣೆ ಹಾಗೂ ಜ್ಞಾನವೃದ್ಧಿಯ ದಿಸೆಯಲ್ಲಿ ಶಿಕ್ಷಣ, ಲಿಂಗತಾರತಮ್ಯ ನಿವಾರಣೆಗಾಗಿ ಸ್ತ್ರೀಸಮಾನತೆ ಅವಶ್ಯವಿರುವ ಇಂದಿನ ಸಂದರ್ಭದಲ್ಲಿ ಬದಲಾವಣೆಯ ಹರಿಕಾರರಾಗಿ ಪರಿವರ್ತಿತರಾಗಬೇಕಾದವರು ಇಂದಿನ ಯುವಜನತೆ. ಯುವಮನಸ್ಸು, ಹಿರಿಯರ ಅನುಭವ ಮತ್ತು ಸ್ತ್ರೀ ಸಮೂಹದ ನಿಷ್ಠಾಪೂರ್ಣ ಪಾಲ್ಗೊಳ್ಳುವಿಕೆಯಿಂದ ನಿರೀಕ್ಷಿತ ಗುರಿ ಸಾಧನೆ ಕಷ್ಟವೇನಲ್ಲ.

ಆದ್ಯತೆ ಮತ್ತು ಬಾಧ್ಯತೆಗಳು

ಸಮಷ್ಠಿ ಚಿಂತನೆ :

ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕಿರುವ ಯುವವರ್ಗ ಇದ್ಯಾವ ವಿಚಾರಗಳ ಬಗ್ಗೆಯೂ ತಲೆಕಡಿಸಿಕೊಳ್ಳದೆ ಕೇವಲ ಲೌಕಿಕವಾಗಿ (materialistic) ಚಿಂತನೆ ನಡೆಸಿ, ಆರ್ಥಿಕ ಸ್ವಾವಲಂಬನೆಯೊಂದೇ ಜೀವಮಾನದ ಸಾಧನೆ ಎಂಬ ಮನೋಸ್ಥಿತಿಯಲ್ಲಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಇವತ್ತಿನ ಶಿಕ್ಷಣ ವ್ಯವಸ್ಥೆಯ ಪಾಲೂ ಗಣನೀಯ. ಒಂದು ಒಳ್ಳೆಯ ಉದ್ಯೋಗವನ್ನು ಹೊಂದುವುದು, ಜಾತಿ ಮತ್ತು ಹಣದ ಬಲದಲ್ಲಿ ಅಲ್ಲದೆ ವಿದ್ಯೆಯ ಬಲದಲ್ಲಿ ಸಮಾಜದಲ್ಲಿ ದೊಡ್ಡ ಸ್ಥಾನವನ್ನು ಹೊಂದುವುದೇ ಯುವಸಮೂಹದ ಗುರಿಯೇ? ಇಂದಿನ ಜಾಗತಿಕ ವಿದ್ಯಮಾನ-ಪ್ರಾಶಸ್ತ್ಯಗಳ ಹಿನ್ನೆಲೆಯಲ್ಲಿ ಭಾರತದ ಕೊಡುಗೆಯನ್ನು ಇಡೀ ವಿಶ್ವವೇ ಎದುರುನೋಡುತ್ತಿದೆ. ಹಾಗಾಗಿ ನಮ್ಮ ಮುಂದಿರುವ ಸುವರ್ಣ ಅವಕಾಶಗಳ ಬಗ್ಗೆ ಯುವಜನಾಂಗವನ್ನು ಯೋಚನೆಗೆ ಹಚ್ಚತಕ್ಕ ಪ್ರಯತ್ನವಾಗಬೇಕು. ಪಠ್ಯಪುಸ್ತಕಗಳ ಜ್ಞಾನವಷ್ಟೇ ಅಲ್ಲದೇ, ಪ್ರಯೋಗಶೀಲ ಕಾರ್ಯಚಟುವಟಿಕೆಗಳ ಮೂಲಕವೂ ಅನುಭವ ನೀಡುವುದು ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಬೇಕು. ಸಮಾಜದ ಮಾರ್ಗದರ್ಶಕ ಸ್ಥಾನದಲ್ಲಿರುವ ಹಿರಿಯರು, ಸಂಸ್ಥೆಗಳು, ಚಿಂತಕರು ಈ ನಿಟ್ಟಿನಲ್ಲಿ ತಮ್ಮ ಬಾಧ್ಯತೆಯನ್ನೂ ಅರಿಯಬೇಕು.

ಮಾತೃಭಾಷೆ, ರಾಷ್ಟ್ರಭಾಷೆಯ ಜತೆಜತೆಗೆ ವಿಶ್ವಭಾಷೆಯನ್ನೂ ಸಮಾನವಾಗಿ ಕಾಣುವ, ಕಲಿಯುವ ಮತ್ತು ಗೌರವಿಸುವ ಛಾತಿಯನ್ನು ಇಂದಿನ ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಭಾಷಾ ಮೇಲರಿಮೆ-ಕೀಳರಿಮೆಗಳಿಗೆ ಅವಕಾಶವಿರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮತ್ತು ಸಮಾಜದ ಹಿರಿಯರ ಮೇಲಿದೆ. ಆದರೀಗ ಬದಲಾದ ಜಾಗತಿಕ ಸನ್ನಿವೇಶದಲ್ಲಿ ವಿಷಯವನ್ನು ಕಲಿಯುವುದಕ್ಕಿಂತ ಆಂಗ್ಲ ಭಾಷಾ ಕಲಿಕೆಯೇ ಆದ್ಯತೆಯಾಗಿದೆ. ಅಮೆರಿಕಾದ ಜೊತೆಗಾಗಲೀ, ಯುರೋಪ್ ದೇಶಗಳ ಜೊತೆಗಾಗಲೀ ಪೈಪೋಟಿ ನಡೆಸಲು ಭಾಷಾ ಕಲಿಕೆಯೊಂದೇ ದಾರಿಯೆನ್ನುವುದನ್ನು ಮನಗಂಡ ಕಮ್ಯೂನಿಸ್ಟ್ ರಾಷ್ಟ್ರವಾದ ಚೀನಾ, ಆಂಗ್ಲ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ ಈ ರೀತಿಯ ಭಾವನೆಗಳು, ವಿಚಾರಗಳು ಇರಬಾರದೆನ್ನುವ ನಿರೀಕ್ಷೆ ತಪ್ಪಾಗುತ್ತದೆ.

ರಾಜಕೀಯ ಆದರ್ಶ ಮತ್ತು ವೈರುಧ್ಯಗಳು :

ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶ. ಪ್ರಜಾಪ್ರಭುತ್ವ ಮತ್ತು ಸಂಸದೀಯ ಪ್ರಜಾತಂತ್ರವ್ಯವಸ್ಥೆ (Parliamentary Democracy ) ಯನ್ನು ಒಪ್ಪಿಕೊಂಡ ನಂತರ, ಇದೇ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿರುವ ಇಲ್ಲಿನ ರಾಜಕೀಯ ಪಕ್ಷಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕಾದುದು ಅತ್ಯಂತ ಅವಶ್ಯಕ. ರಾಜಕಾರಣದಲ್ಲಿ ನೇರವಾಗಿ ಪಾಲ್ಗೊಂಡವರಿಗಷ್ಟೇ ಈ ಬದ್ಧತೆ ಸೀಮಿತವಲ್ಲ. ತಮ್ಮ ಪ್ರತಿನಿಧಿಗಳನ್ನಾಗಿ ಚುನಾಯಿಸಿದ ನಂತರ ಜನಪ್ರತಿನಿಧಿಗಳನ್ನು ನಿಯಮಿತವಾಗಿ ಒರೆಗಲ್ಲಿಗೆ ಹಚ್ಚುವ ಕಾರ್ಯವನ್ನೂ ಮಾಡಬೇಕಾದ ಬದ್ಧತೆಯನ್ನು ಮತದಾರರು ಹೊಂದಿದಾಗಲೇ ಪ್ರಯತ್ನ ಸಾರ್ಥಕವಾಗುವುದು. ಒಂದು ನಿರ್ದಿಷ್ಟ ಗುರಿ, ಚಳವಳಿಯ ಹಿನ್ನೆಲೆಯಿಂದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವವರಿಗೆ ಮತದಾರರ ಒಲವೇ ಇಲ್ಲದಾದಾಗ ಯಾವ ರೀತಿಯ ರಾಜಕಾರಣ ನಡೆಸಲು ಸಾಧ್ಯವಿದೆ? ಬಂದ ಮೂಲವೇ ಬೇರೆ, ಈಗಿರುವ ಮೂಲವೇ ಬೇರೆಯೆನ್ನುವ ಪರಿಸ್ಥಿತಿ ಉದ್ಭವಿಸಿದಲ್ಲಿ ಅಂಥ ಜನಪ್ರತಿನಿಧಿಗಳಿಂದ ಯಾವ ಗುಣಮಟ್ಟದ ಅಭಿವೃದ್ಧಿ, ಸಂಕಲ್ಪಶಕ್ತಿಯನ್ನು ಮತದಾರ ನಿರೀಕ್ಷಿಸಬಹುದು? ಹಾಗಾದರೆ ಈ ರೀತಿಯ ಸನ್ನಿವೇಶ ನಿರ್ಮಾಣದಲ್ಲಿ ಮತದಾರರ ನೇರ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮತದಾನ ಪ್ರಕ್ರಿಯೆ ಕೂಡ ಇದೀಗ ಒಂದು ಪ್ರಹಸನವಾಗಿ ಪರಿವರ್ತಿತವಾಗಿರುವುದು ಮತದಾರರ ಸಂಕಲ್ಪ ಶಕ್ತಿಯ ಕೊರತೆಯಿಂದಲೇ!

ಇನ್ನು ಮತಬ್ಯಾಂಕು ರಾಜಕಾರಣ. ಚುನಾವಣೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಯ ಕರ್ತೃತ್ವ ಶಕ್ತಿ, ಹಿನ್ನೆಲೆ ಮತ್ತು ಚಾರಿತ್ರ್ಯಗಳಷ್ಟೇ ಪರಿಗಣನೆಯಲ್ಲಿದ್ದಾಗ ಮತಬ್ಯಾಂಕು ರಾಜಕಾರಣಕ್ಕೆ ಅವಕಾಶವಿರಲಿಲ್ಲ. ಯಾವಾಗ ಜಾತಿ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪ್ರಾಮುಖ್ಯತೆ ದೊರೆಯಿತೋ ಆ ಘಳಿಗೆಯಿಂದ ಇದು ಪಿಡುಗಾಗಿ ಪರಿಣಮಿಸಿದೆ. ಹಾಗಾದರೆ ಈ ಪಿಡುಗಿನ ಹಬ್ಬುವಿಕೆಯಲ್ಲಿ ಯಾರ ಪಾಲೆಷ್ಟು ಎಂಬುದರ ಅನ್ವೇಷಣೆಗೆ ಹೊರಟರೆ ಅದು ಹೊರಟಲ್ಲಿಗೇ ಬಂದು ನಿಲ್ಲುವ ಸಾಧ್ಯತೆಯೇ ಹೆಚ್ಚು! ಚುನಾವಣಾ ಸುಧಾರಣೆ ಆಗಬೇಕೆಂದಿದ್ದರೆ, ಮತಬ್ಯಾಂಕು ರಾಜಕಾರಣ ಆಗಬಾರದೆಂದಿದ್ದರೆ ಸಿದ್ಧಾಂತ ರಾಜಕಾರಣವಾಗಬೇಕು. ವ್ಯಕ್ತಿಗಿಂತ ಪಕ್ಷಕ್ಕೆ ಮತಹಾಕುವ ಸಂದರ್ಭ ಬಂದಾಗ ಮಾತ್ರ ಇದು ಸಾಧ್ಯ. ವ್ಯಕ್ತಿ ವಿಚಾರ ಬಂದಾಗ ಜಾತಿಗೆ ಪ್ರಾಶಸ್ತ್ಯ ಬರುತ್ತದೆ. ಪಕ್ಷವಿಚಾರ ಬಂದಾಗ ಜಾತಿವಿಚಾರ ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಆದರೆ ಇಲ್ಲಿ, ಚುನಾವಣೆಯಲ್ಲಿ ಆರಿಸಿ ಬಂದ ನಂತರದ ವಿದ್ಯಮಾನಗಳಲ್ಲಿ ಪಕ್ಷದೊಳಗೆ ಜಾತಿ ಆಧಾರಿತ ಪ್ರಾಶಸ್ತ್ಯ ಬರುವ ಅಪಾಯವಿದೆ!

ಸಮಾಜವಾದಿ ಅಂತಲೇ ಹೆಸರನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವುದು ಒಂದು  ವಿರ್ಪಯಾಸ. ಮನುವಾದವನ್ನು ಪುರಸ್ಕರಿಸುತ್ತಾ ಬಂದಿರುವ, ಮಹಿಳೆಯರು ವೇದ-ಉಪನಿಷತ್ತುಗಳನ್ನು ಕೇಳಲೂಬಾರದೆನ್ನುವಷ್ಟರಮಟ್ಟಿಗೆ ಸಿದ್ಧಾಂತವನ್ನು ಪೋಷಿಸಿಕೊಂಡು ಬಂದಿರುವ ಪಕ್ಷವಿಂದು ಸಚೇತಕಾಜ್ಞೆ ಜಾರಿಮಾಡುವ ಮೂಲಕ ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸುತ್ತಿದೆ! ಈ ಬದಲಾವಣೆಯನ್ನು ಯಾವ ರೀತಿಯಲ್ಲಿ ಅರ್ಥೈಸಬಹುದು? ಜನರ ಮುಂದೆ ಇದನ್ನು ಯಾವ ರೀತಿಯಲ್ಲಿ ಪ್ರಸ್ತುತಪಡಿಸಬಹುದು? ಇದೂ ಕೂಡ ಮತಬ್ಯಾಂಕು ರಾಜಕಾರಣದ ಮತ್ತೊಂದು ಮಗ್ಗುಲೆಂಬ ಅನಿಸಿಕೆ ಬರುವುದಿಲ್ಲವೇ? ಚುನಾವಣಾ ರಾಜಕೀಯಕ್ಕೆ ನಾವು ಒಂದು ಬಾರಿ ಪ್ರವೇಶ ಮಾಡಿದ ನಂತರ ಎಷ್ಟೋ ಸಂದರ್ಭಗಳಲ್ಲಿ ಬೇಕು-ಬೇಡಗಳ ಸಂಘರ್ಷ ಸಹಜ. ಇಂತಹ ಸನ್ನಿವೇಶಗಳಲ್ಲಿ ಬಹುಜನಾಭಿಪ್ರಾಯಕ್ಕೇ ಮನ್ನಣೆಯಿರಬೇಕಾದುದು ಸರಿ ತಾನೇ.

ನಾವೆಲ್ಲರೂ ಬಯಸುತ್ತಿರುವ ಸುಧಾರಣೆ ಎಲ್ಲಿಂದ ಪ್ರಾರಂಭವಾಗಬೇಕು? ಒಂದು ದೇಶದ ಇತಿಹಾಸದಲ್ಲಿ 60 ವರ್ಷಗಳ ಅವಧಿ ಬಹಳ ದೊಡ್ಡ ಸಮಯವೇನಲ್ಲ. ನಮ್ಮ ಜೀವಿತ ಕಾಲದಲ್ಲಿಯೇ ಎಲ್ಲವನ್ನೂ ಕಂಡೇ ಸಾಯಬೇಕೆನ್ನುವ ನಮ್ಮ ಸ್ವಾರ್ಥವೇ ಈ ಪ್ರಮಾಣದ ನಿರೀಕ್ಷೆಗೆ ಕಾರಣವೆನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಅಸಮಾನತೆ, ಶೋಷಣೆ ವಿರುದ್ಧ ಪ್ರಜಾಪ್ರಭುತ್ವದ ಮೂಲಕ ಈಗ ನಡೆಯುತ್ತಿರುವ ಪ್ರಯತ್ನ ಒಂದು ನಿರಂತರ ಪ್ರಕ್ರಿಯೆ (process) ಎನ್ನುವುದನ್ನು ನಾವು ಮನಗಾಣಬೇಕು. ಇಂತಹ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಪಾತ್ರ – ಪ್ರಾಮುಖ್ಯತೆಯ ಬಗ್ಗೆ  ವಿಮರ್ಶೆ ಅವಶ್ಯ. ಪ್ರಸಕ್ತ ರಾಜಕೀಯದಲ್ಲಿ ಕಾಣುತ್ತಿರುವ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ರಾಷ್ಟ್ರೀಯ ಪಕ್ಷಗಳಲ್ಲಿ ಜಾಸ್ತಿಯೋ, ಇಲ್ಲ ಪ್ರಾದೇಶಿಕ ಪಕ್ಷಗಳಲ್ಲಿ ಜಾಸ್ತಿಯೋ? ಈ ದೇಶಕ್ಕೆ ರಾಷ್ಟ್ರೀಯ ಪಕ್ಷಗಳು ಸರಿಯೇ ಅಥವಾ ಪ್ರಾದೇಶಿಕ ಪಕ್ಷಗಳು ಸರಿಯೇ? ಮತಬ್ಯಾಂಕು ರಾಜಕಾರಣ ರಾಷ್ಟ್ರೀಯ ಪಕ್ಷಗಳಿಂದ ಜಾಸ್ತಿ ನಡೆಯುತ್ತಿದೆಯೇ ಅಥವಾ ಪ್ರಾದೇಶಿಕ ಪಕ್ಷಗಳು ಜಾಸ್ತಿ ಮಾಡುತ್ತಿವೆಯೇ? ಈ ಎಲ್ಲಾ ವಿಚಾರಗಳ ಬಗ್ಗೆ ಸಾಕಷ್ಟು ತೀವ್ರ ಮತ್ತು ವಿಸ್ರೃತ ಚರ್ಚೆ  ನಡೆಯಬೇಕಿದೆ. ಈ ರೀತಿಯ ಚರ್ಚೆಗಳು ಸಮಾಜ ಚಿಂತಕರೆಂದು ಕರೆಸಿಕೊಳ್ಳುವ ಅಭಿಪ್ರಾಯ ಸ್ವಾತಂತ್ರ್ಯದ ವಕ್ತಾರರಂತೆ  ವರ್ತಿಸುತ್ತಿರುವ ಬುದ್ಧಿಜೀವಿಗಳ ವರ್ತುಲದಲ್ಲಿ ಮಾತ್ರವೇ ಕೇಂದ್ರೀಕೃತಗೊಂಡಿರುವುದು ದುರದೃಷ್ಟಕರ. ರಾಜಕೀಯವನ್ನು, ರಾಜಕೀಯ ವ್ಯಕ್ತಿಗಳನ್ನು ಟೀಕೆ ಮಾಡುವುದೇ ತಮ್ಮ ಧ್ಯೇಯ ಎಂಬಂತೆ ನಡೆದುಕೊಳ್ಳುತ್ತಿರುವ ಈ ವರ್ಗದಿಂದ ಯುವಜನತೆ ಯಾವ ನೀತಿಪಾಠವನ್ನು ಕಲಿಯಬಹುದು?

ಉತ್ತಮ ಸಮಾಜ ನಿರ್ಮಾಣದಲ್ಲಿ ಅನುಕರಣೆಯ ಪಾತ್ರ ಬಹಳ ಮಹತ್ವದ್ದಾಗಿದೆ. ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಯುವಶಕ್ತಿಯನ್ನು ಹೊಂದಿರುವ ನಮ್ಮ ದೇಶಕ್ಕಂತೂ ಅನುಕರಣೆ ನೀಡಬಹುದಾದ ಕೊಡುಗೆ ನಿರೀಕ್ಷೆಗೂ ಮೀರಿದ್ದಾಗಿದೆ. ಇಂತಹ ಸನ್ನಿವೇಶದಲ್ಲಿ, ರಾಷ್ಟ್ರಜೀವನದ ಇತ್ತೀಚಿನ ಘಟ್ಟದವರೆಗೂ ಕೋರ್ಟ್ ಗಳನ್ನು, ನ್ಯಾಯಾಧೀಶರನ್ನು ಒಂದು ಆದರ್ಶವನ್ನಾಗಿ ಪರಿಗಣಿಸಿದಂತಹ ಸಮಾಜ ನಮ್ಮದು. ಆದರೀಗ ಆ ಸ್ಥಿತಿ ನಮ್ಮ ದೇಶದಲ್ಲಿಲ್ಲ. ಅವರೂ ನಮ್ಮಂತೆಯೇ ಎನ್ನುವಷ್ಟರಮಟ್ಟಿಗೆ ಇಳಿಮುಖವಾಗಿದೆ ಆದರ್ಶ; ಅನುಕರಣೆ. ಅದೀಗ ಸಹಜವೂ ಕೂಡ. ಅವರುಗಳನ್ನು ಆಯ್ಕೆ ಮಾಡಿರುವವರು ಯಾರು? ನಮ್ಮ ಪ್ರಧಾನಮಂತ್ರಿ, ನಮ್ಮ ರಾಷ್ಟ್ರಪತಿ, ನಮ್ಮ ಮುಖ್ಯ ನ್ಯಾಯಾಧೀಶರು ಅವರೆಲ್ಲರೂ ನಮ್ಮ ಮಧ್ಯದಿಂದಲೇ ಬಂದವರು, ನಾವೇ ಆರಿಸಿದವರು. ನಾವೇ ಬದಲಾಗದಿದ್ದಲ್ಲಿ ಅವರುಗಳಿಂದ ಬದಲಾವಣೆಯನ್ನು ಹೇಗೆ ನಿರೀಕ್ಷಿಸಬಹುದು? ಅವರ ಸ್ಥಿತಿ ಇದ್ದುದರಲ್ಲಿ ಪರವಾಗಿಲ್ಲವೆಂದು ಅನಿಸುತ್ತಿದೆ. ಏಕೆಂದರೆ, ಅವರು ಟೀಕೆಗೆ ಒಳಪಡುವ ಸಂದರ್ಭಗಳು ಕಡಿಮೆ. ಟೀಕೆ ಮಾಡಿದರೆ ಕೋರ್ಟ್  ಉಲ್ಲಂಘನೆಯಾಗುತ್ತದೆಂಬ ಭಯವಿದೆ. ಆದರಿವತ್ತು ಮಾಹಿತಿ ಹಕ್ಕು ಕಾಯಿದೆಯ ದೆಸೆಯಿಂದ ಬಹುತೇಕ ವಿಷಯಗಳು ಸಾರ್ವಜನಿಕ ಚರ್ಚೆಗೆ ಒಳಪಡುತ್ತಿವೆ. ಚರ್ಚೆಗೊಳಪಡಬೇಕಾದ ವಿಷಯಗಳು ಸಂಪೂರ್ಣ ಖಾಸಗಿಯಾಗಿ ಉಳಿದಿಲ್ಲ. ಶುದ್ಧೀಕರಣದ ನಿಟ್ಟಿನಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಒಂದು ನಿಟ್ಟಿಸಿರುಬಿಡುವಷ್ಟರಮಟ್ಟಿಗೆ!

ಯುಗಪುರುಷ ಬಸವಣ್ಣನವರಿಂದಾಗಲೀ ಅಥವಾ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠಮಾನ್ಯಗಳಿಂದಾಗಲೀ, ಒಂದೇ ಜಾತಿಯೊಳಗಿನ ಉಪಜಾತಿಗಳನ್ನು ಒಗ್ಗೂಡಿಸಲೂ ಸಾಧ್ಯವಾಗಿಲ್ಲ. ಯಾಕೆ? ಎಲ್ಲೆಡೆಯೂ ನಮ್ಮ ಅಸ್ತಿತ್ವ, ನಮ್ಮ ಸ್ವಾರ್ಥದ ಪ್ರಶ್ನೆ ಪ್ರಮುಖವಾಗುತ್ತಿದೆ. ಮೀಸಲಾತಿ – ಒಳಮೀಸಲಾತಿಯ ವಿಚಾರವಾಗಲೀ, ಮಹಿಳಾ ಸಬಲೀಕರಣವಾಗಲೀ ಎಲ್ಲಾ ಕಡೆಗಳಲ್ಲಿಯೂ ಅನೇಕ ಅನಾವಶ್ಯಕ ಗೊಂದಲಗಳು ಈಗಲೂ ಇವೆ! ಪ್ರಸ್ತುತ ಕಾಲಮಾನದ ಶಿಕ್ಷಣದ ಪ್ರಭಾವ ನಮ್ಮ ಚಿಂತನೆಯ ಮೇಲೆ ಯಾವ ಗುಣಾತ್ಮಕ ಪ್ರಭಾವ ಬೀರುವಲ್ಲಿ ಸಫಲವಾಗಿದೆ? ಅದಕ್ಕೆ ಬದಲಾಗಿ ಸಂಕುಚಿತ ಮನೋಭಾವನೆಯನ್ನು ಉದ್ದೀಪಿಸುವಲ್ಲಿ ಸಫಲವಾಗುತ್ತಿದೆ.

ಪ್ರಸ್ತುತ ರಾಜಕಾರಣದಲ್ಲಿ ಕಂಡುಬರುತ್ತಿರುವ ಯಜಮಾನ ಸಂಸ್ಕೃತಿಯೂ ಅಷ್ಟೇ. ವಿವಿಧ ಪ್ರಾಶಸ್ತ್ಯಗಳ ಹೆಸರಲ್ಲಿ ನಾವೀಗ ಯಜಮಾನರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರನ್ನು ಸೃಷ್ಟಿಸುತ್ತಿದ್ದೇವೆ. ಜಾತಿ ಆಧಾರದಲ್ಲಿ ತುಳಿತಕ್ಕೊಳಗಾದವರಲ್ಲೂ ಇಂದು ಆರ್ಥಿಕವಾಗಿ ಸದೃಢರಾದವರೇ ತಮ್ಮ ಜಾತಿಯ ಆರ್ಥಿಕ ದುರ್ಬಲರ ಶೋಷಕರಾಗುತ್ತಿರುವುದು ಪರಿಸ್ಥಿತಿಯ ವಿಡಂಬನೆಯೇ? ತಮ್ಮ ಜೊತೆ ಅವರುಗಳನ್ನು ಗುರುತಿಸಬಾರದೆನ್ನುವಷ್ಟರಮಟ್ಟಿಗೆ ತುಳಿತ ಮುಂದುವರಿದಿದೆ. ಈ ಬೆಳವಣಿಗೆ ಯಾವ ಜಾತಿಯನ್ನೂ ಬಿಡದೆ ಒಂದು ಸಾರ್ವತ್ರಿಕ ಪಿಡುಗಾಗಿದೆ.

ಇವತ್ತು ಕರ್ನಾಟಕದಲ್ಲಿ ಯಾರು ಪರಿಶಿಷ್ಟ ಜಾತಿಗೆ ಸೇರಿದ್ದಾರೋ ಅವರು ಪಕ್ಕದ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರದಲ್ಲಿ ಪರಿಶಿಷ್ಟರಲ್ಲ. ಪರಿಶಿಷ್ಟ ಜಾತಿ ಅನ್ನುವ ಸ್ವರೂಪವನ್ನೇ (concept) ದುರ್ಬಲಗೊಳಿಸಿ, ತಮ್ಮ ತಮ್ಮ ಅನುಕೂಲ ಸಿಂಧು ರಾಜಕಾರಣಕ್ಕೋಸ್ಕರ ಒಂದೊಂದೇ ಜಾತಿ-ವರ್ಗವನ್ನು ನಿರಂತರವಾಗಿ ಈ ಗುಂಪಿಗೆ ಸೇರಿಸುವ ಪ್ರಕ್ರಿಯೆ ನಡೆದಿದೆ; ನಡೆಯುತ್ತಿದೆ. ಹೀಗಾದಲ್ಲಿ ನಿಜವಾಗಿಯೂ ಸಮಾಜದ, ಸರಕಾರದ ಬೆಂಬಲ ದೊರೆಯಲೇಬೇಕಾದ ವರ್ಗಗಳು ಯಾವುವೆಂಬುದನ್ನು ನಿರ್ಧರಿಸುವುದಾದರೂ ಹೇಗೆ ಸಾಧ್ಯ?

ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ಜಾತಿ-ಮತ ವಹಿಸುವ ಪಾತ್ರಕ್ಕಿಂತ ಹೆಚ್ಚಾಗಿ ಹಣ ಅತಿ ದೊಡ್ಡ ಪಾತ್ರ ವಹಿಸುತ್ತಿದೆಯೆಂಬುದನ್ನು ನಾವೆಲ್ಲಾ ಕಾಣಬಹುದು. ಅಭ್ಯರ್ಥಿಗಳಿಗೆ ಗೆಲ್ಲುವ ಸಾಮರ್ಥ್ಯವೆಂದರೆ ಪ್ರಮುಖವಾಗಿ ಜಾತಿ ಮತ್ತು ಹಣದ ಬಲವೇ ಆಗಿರುವುದು ಇಂದಿನ ರಾಜಕೀಯದ ವೈಶಿಷ್ಟ್ಯ. ಇಂದಿನ ಎಲ್ಲಾ ಚಳವಳಿಗಳು, ವಿಚಾರಗಳು, ಸಂಘಟನೆಗಳನ್ನು ಹತ್ತಿಕ್ಕಲು ಬಳಕೆಯಾಗುತ್ತಿರುವಂಥಾದ್ದು ಹಣ. ಅದೂ ಅಕ್ರಮವಾಗಿ ಗಳಿಸಿರುವಂತಹ ಹಣ.

ಚಳವಳಿಗಳ ಪ್ರಸ್ತುತತೆ – ಸಾಫಲ್ಯತೆ ಮತ್ತು ಪ್ರಭಾವ :

ಚಳವಳಿಗಳು ನಮ್ಮ ಇಂದಿನ ರಾಜಕಾರಣದಲ್ಲಿ ಜನಸಮೂಹದ ಸಮಸ್ಯೆಗಳನ್ನು ಆಡಳಿತ ಯಂತ್ರದ ಗಮನಕ್ಕೆ ತರಲು ಉಳಿದಿರುವ ಏಕೈಕ ದಾರಿಯಾಗಿ ಉಳಿದಿದೆ! ಅಹವಾಲು ಸಲ್ಲಿಕೆ, ಮನವಿ ಪತ್ರಗಳಿಗೆ ಸರ್ಕಾರ ಕಿವಿಕೊಡುವ ಸಂದರ್ಭವೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಪ್ರಜಾಪ್ರಭುತ್ವ ದುರ್ಬಲವಾಗಿದೆ. ಚಳವಳಿಗಳಲ್ಲಿಯೂ ಕೂಡಾ ಸಾರ್ವಜನಿಕರ ಮತ್ತು ಸರ್ಕಾರದ ಆಸ್ತಿಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾದ ಮೇಲೆಯೇ ಸರ್ಕಾರ-ಜನಪ್ರತಿನಿಧಿಗಳು ಪ್ರಜೆಗಳೆಡೆಗೆ ಧಾವಿಸುವುದು ಪ್ರವೃತ್ತಿಯಾಗಿದೆ. ಚಳವಳಿಯ ಆರಂಭ ಕಾಲದಲ್ಲಿನ ಸರ್ಕಾರದ ನಿರ್ಲಕ್ಷ್ಯತೆಯೇ ಚಳವಳಿಕಾರರಿಗೆ ಅಸ್ತಿತ್ವದ ಸಾಧನವಾಗಿ ಪರಿಣಮಿಸಿದ ಘಟನೆಗಳು ನಮ್ಮ ಮುಂದೆ ಸಾಕಷ್ಟಿವೆ. ಈ ಬಗ್ಗೆ ಒಂದು ಅತ್ಯುತ್ತಮ ನಿದರ್ಶನ-ಸಣ್ಣ ಪ್ರಮಾಣದಲ್ಲಿ ಆರಂಭವಾದ ನಕ್ಸಲ್ ಚಳವಳಿಯ ಕಬಂಧ ಬಾಹುಗಳು ಇಂದು ರಾಷ್ಟ್ರವ್ಯಾಪಿ ಬೆಳೆದು ನಿಂತ ರೀತಿ!

ಚಳವಳಿಗಳ ದಾರಿ ತಪ್ಪಲು ಕಾರಣಗಳೇನು? ಸಮುದಾಯ ಕೇಂದ್ರಿತ ಸೂಕ್ಷ್ಮವಿಚಾರಗಳಲ್ಲಿ ಸಮಾಜದಲ್ಲಿ ಗಣ್ಯರೆಂದು ಪರಿಗಣಿಸಲ್ಪಟ್ಟಿರುವವರು ತಮ್ಮ ವೈಯಕ್ತಿಕ ಅಭಿಪ್ರಾಯ-ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಒಟ್ಟಾರೆ ಸಮಾಜದ ಮೇಲಾಗುವ ಲಾಭ-ನಷ್ಟಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾವುದೋ ಒಂದು ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ ವಿಶ್ವವಿದ್ಯಾಲಯಗಳು ಪ್ರತಿಭಟನೆ ಮಾಡಬೇಕೆಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಪ್ರತಿಭಟನೆ ನಡೆಸಬೇಕಾದವರು ವಿಧಾನಸಭೆ-ವಿಧಾನಪರಿಷತ್ತು-ಸಂಸತ್ತಿನಲ್ಲಿರುವವರು; ಜನತೆಯಿಂದ ಚುನಾಯಿತರಾದವರು. ಈ ಬಗ್ಗೆ ಕೋರ್ಟ್ ಗಳೂ ಕೂಡಾ ಏನೂ ಮಾಡುವಂತಿಲ್ಲ. ಇನ್ನು ಉದಾರೀಕರಣ (liberalization), ಜಾಗತೀಕರಣ (globalization), ಖಾಸಗೀಕರಣ (Privatization) ಗಳಿಂದಾಗಿ ರಾಜಕೀಯ ಪಕ್ಷ, ಚಳವಳಿ, ಸಂಘಟನೆಗಳ ಮೇಲೆ ಯಾವ್ಯಾವ ರೀತಿಯ ಪರಿಣಾಮ ಆಗುತ್ತಿವೆ? ಯಾಕೆ ಆಗುತ್ತಿವೆ? ಚಳವಳಿಗಳ ಮೂಲಸ್ವರಪವನ್ನೇ ದಿಕ್ಕು ತಪ್ಪಿಸುವಷ್ಟರಮಟ್ಟಿಗೆ ಹೇಗೆ ಯಶಸ್ವಿಯಾಗುತ್ತಿವೆ? ಎಂಬಿತ್ಯಾದಿ ವಿಚಾರಗಳ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇವತ್ತು ಬಹುತೇಕ ರಾಜಕೀಯ ಪಕ್ಷಗಳ ಮೇಲೆ ಕೈಗಾರಿಕೋದ್ಯಮಿಗಳು ಪರೋಕ್ಷವಾಗಿ ಹೊಂದಿರುವ ನಿಯಂತ್ರಣ ಕೂಡ ನಾವೆಲ್ಲ  ಚರ್ಚೆಗೆ ತೆಗೆದುಕೊಳ್ಳಬಹುದಾದ ಪ್ರಮುಖ ಸಂಗತಿಯಾಗಿದೆ.

ಚಳವಳಿ ಅಂದಾಗ ಕೇವಲ ದಲಿತ ಚಳವಳಿ ಮಾತ್ರ ಅಲ್ಲ. ಕಾರ್ಮಿಕ ಚಳವಳಿ, ಮಹಿಳಾ ಚಳವಳಿ, ರೈತ ಚಳವಳಿ, ಭಾಷಾ ಚಳವಳಿ… ಇವೆಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಹಾಗೆ ನಡೆಯುತ್ತಿಲ್ಲ. ವಿವಿಧ ಸಮುದಾಯಗಳ ಚಳವಳಿಗಳನ್ನು ಒಂದು ವಿಸ್ತೃತ; ಆದರೆ ನಿಖರವಾಗಿ ಗುರುತಿಸಲ್ಪಟ್ಟ ಕೆಲವು ನಿರ್ದಿಷ್ಟ ಕಾರ್ಯಸೂಚಿ ಯಡಿಯಲ್ಲಿ ಸಂಘಟಿಸಬೇಕು. ಎಲ್ಲ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ, ನಮ್ಮ ಜೀವಿತ ಕಾಲದಲ್ಲಿಯೇ ಬಗೆಹರಿಸುತ್ತೇವೆ, ನಮ್ಮ ಸಂಘಟನೆಯಿಂದಲೇ ಬಗೆಹರಿಸುತ್ತೇವೆ ಎಂಬ ಭ್ರಮೆಯಲ್ಲಿ ನಾವಿರಬಾರದು. ಎಲ್ಲಾ ಸಂಘಟನೆಗಳ ರೂಪುರೇಷೆ, ಆದ್ಯತೆಗಳು ನಿರಂತರವಾಗಿ ಸಮಯಕ್ಕನುಗುಣವಾಗಿ ಬದಲಾಗುತ್ತಲೇ ಇರುವುದನ್ನು ನಾವು ಗಮನಿಸುತ್ತಿದ್ದೇವೆ, ಹಾಗಾಗಿ ಚಳವಳಿಗಳ ಪೈಕಿ ಎಲ್ಲರೂ ಒಪ್ಪತಕ್ಕ ಸಾಮಾನ್ಯವಾದವುಗಳನ್ನು ಆಯ್ಕೆಮಾಡಿ, ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು; ಆಗಲೇ ಪ್ರಜಾಪ್ರಭುತ್ವದ ತಳಹದಿಯಾದ ಜನದನಿಗೆ ಬೆಲೆ ಬರುವುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)