Category Archives: ಬಿ.ಜಿ.ಗೋಪಾಲಕೃಷ್ಣ

1 ರೂ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರದ ಹಿಂದಿರುವ ಕಟು ವಾಸ್ತವಗಳು

– ಬಿ.ಜಿ.ಗೋಪಾಲಕೃಷ್ಣ

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಯಾವುದೇ ನಿಯಮ, ಕಾಯ್ದೆ, ಕಾನೊನು ಅಥವಾ ನಿರ್ಧಾರಗಳು ಚರ್ಚೆಗೆ ಬಾರದೆ ಅಂಕಿತವಾಗಿಬಿಟ್ಟರೆ ಅದರ ಸ್ಯಾರಸ್ಯವೇ ಇರುವುದಿಲ್ಲ. ಒಂದು ಚರ್ಚೆ ಪ್ರಾರಂಭವಾಗಿ ಕೊನೆಗೊಳ್ಳುವುದರೊಳಗಾಗಿ ಅನೇಕ ಕಹಿ ವಾಸ್ತವಗಳು ಬೆಳಕಿಗೆ ಬರುತ್ತವೆ.

ನಾವು ಒಂದು ವಿಷಯವನ್ನು ಯಾವ ದೃಷ್ಟಿ ಕೋನದಲ್ಲಿ ನೋಡುತ್ತೇವೆ, ಯಾವ ಪರಿಸರದಲ್ಲಿ ಬೆಳೆಯುತ್ತಿದೇವೆ, ನಮ್ಮಲ್ಲಿರುವ ವಿಚಾರಧಾರೆಗಳು, ಇವು ನಮ್ಮ ಮುಂದಿರುವ ಚರ್ಚೆಯ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ತಂದು ನಿಲ್ಲಿಸುತ್ತವೆ. ಉದಾಹರಣೆಗೆ 1. ಮದುವೆಯ ಸಂದರ್ಭದಲ್ಲಿ ಮಾಂಗಲ್ಯ ಧಾರಣೆಯ ಸಮಯದಲ್ಲಿ ಅಕ್ಷತೆಕಾಳಿನ ಹೆಸರಿನಲ್ಲಿ ಅಕ್ಕಿಯನ್ನು ಪ್ರೊಕ್ಷಣೆ ಮಾಡುವುದು (ಕೆಲವು ಕಡೆ ನಿಷಿದ್ದ) . 2. ನವ ವಧು ಅಕ್ಕಿಯನ್ನು ಕಾಲಿನಿಂದ ಒದ್ದು ಗಂಡನ ಮನೆ ಪ್ರವೇಶಿಸುವುದು 3. ಹೊಸ ಮನೆ ಪ್ರವೇಶಿಸುವ ಮೊದಲು ಹಾಲು ಉಕ್ಕಿಸುವುದು. ಪ್ರಸಕ್ತ ಸಮಯದಲ್ಲಿ ಊರ್ಜಿತ. ಆದರೆ ಸತಿ ಪದ್ದತಿ ಅಥವಾ ಕೆರೆಗೆಹಾರ ಪದ್ದತಿಯ ಹೆಸರಿನಲ್ಲಿ ಹೆಣ್ಣಿನ ಪ್ರಾಣಹಾನಿ ಪ್ರಸಕ್ತ ಸಂದರ್ಭದಲ್ಲಿ ಅನೂರ್ಜಿತ. ಅಂದರೆ ನಮ್ಮ ದೃಷ್ಟಿ ಕೋನ ಬದಲಾದಂತೆ. ನಮ್ಮ ನಿರ್ಧಾರಗಳೂ ಬದಲಾಗುತ್ತಾ ಸಾಗುತ್ತವೆ.

ಈಗ ನಮ್ಮ ಮುಂದಿರುವ ಚರ್ಚೆಯ ವಿಷಯವೆಂದರೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ. ಈ ಸರ್ಕಾರದ ಸದ್ಯದ ಕ್ರಮ ಸೋಮಾರಿಗಳ ಸೃಷ್ಟಿಗೆ riceಕಾರಣವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾ ದೇಶದ ಬಗೆಗಿನ ಕಾಳಜಿ ತೊರುತ್ತಿರುವವರಿಗೆ ಕೃತಜ್ಞತೆಗಳು. ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಭೃಹತ್ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿಗಳು , ದೂರಸಂಪರ್ಕ ಟವರ್‌ಗಳ ನಿರ್ಮಾಣ ಮಾಡುತ್ತಿರುವವರು ಹೊರರಾಜ್ಯದವರೇ ಹೆಚ್ಚು. ತಮಿಳುನಾಡಿನಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಉಚಿತ, ಕೇರಳ ರಾಜ್ಯದಲ್ಲಿ 14 ಅವಶ್ಯಕ ವಸ್ತುಗಳನ್ನು ಅತೀಕಡಿಮೆ ಬೆಲೆಯಲ್ಲಿ ವಿತರಿಸಲಾಗುತ್ತಿದೆ. ಅವರುಗಳೆಲ್ಲಾ ಸೋಮಾರಿಗಳಾಗಿರುವರೇ?

ಕರ್ನಾಟಕ ರಾಜ್ಯದಲ್ಲಿ ಒಟ್ಟು 1.10 ಕೋಟಿ ಕುಟುಂಬಗಳಲ್ಲಿ ಸುಮಾರು 36 ಲಕ್ಷ ಕುಟುಂಬಗಳಿಗೆ ತಮ್ಮದೇ ಎಂಬ ಒಂದೇ ಒಂದು ಗುಂಟೆ ತುಂಡು ಜಮೀನು ಕೂಡ ಇಲ್ಲ. ಕೂಲಿ-ನಾಲಿ ಮಾಡಿ ಹೂಟ್ಟೆ ಹೊರೆಯ ಬೇಕು. ಇದು ನಮ್ಮ ಭಾರತ ದೇಶದ ಜಮೀನ್‌ದ್ದಾರಿ ಮತ್ತು ಪಾಳೇಗಾರಿ ಪದ್ದತಿಯ ಫಲ ಶೃತಿ. ವರ್ಷ ಪೂರ್ತಿ ಕೂಲಿ ಸಿಗುವುದೇ? ಅವರಿಗೇನು ವಿಶ್ರಾಂತಿ ಬೇಡವೇ? ಮಳೇ ಬಂದರೆ ಕೂಲಿ, ಕೂಲಿ ಮಾಡಿದರೆ ಊಟ. 2 ವರ್ಷಗಳಿಂದ ಮಳೆಯೇ ಕಾಣದ ಕರ್ನಾಟಕದಲ್ಲಿ ಕೂಲಿ ಮಾಡಿ ಬದುಕುವವರ ಬದುಕು ಏನಾಗಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 100 ದಿನ ಕೂಲಿ. ಕಾರ್ಮಿಕರಿಗೆ ನಿಗದಿಪಡಿಸಿದ ಕೆಲಸದ ಪರಿಮಾಣಕ್ಕೆ ಅನುಗುಣವಾಗಿ ದಿನಗೂಲಿ ರೂ 155. 18 ವರ್ಷ ಮೀರಿದ 70 ವರ್ಷದ ಒಳಗಿನವರಿಗೆ ಮಾತ್ರ. ಒಂದು ಕುಟುಂಬದಲ್ಲಿ ಸರಾಸರಿ ಒಬ್ಬ ದುಡಿಯುವವನಿದ್ದು ಐದು ತಿನ್ನುವ ಬಾಯಿಗಳಿದ್ದರೆ ಕೂಲಿ ಸಿಕ್ಕ ದಿನ ತಲಾ ಅದಾಯ 31 ರೂ . ಬಿಸಿಯೂಟ ನೌಕರರ ಸಂಬಳ 500-600 ರೂಪಾಯಿ. ಅಂಗನವಾಡಿ ನೌಕರರ ಸಂಬಳ 1300-1400 ರೂಪಾಯಿ. ಇವರುಗಳ ಬದುಕು ಏಷ್ಟು ಅಸಹನೀಯವಿರಬಹುದು!

ಈ ನಡುವೆ ಹೊಸ ಹೊಸ ಸಂಶೋಧನೆಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು ಉಳ್ಳವರ ಜೀವನವನ್ನು ಮತ್ತೊಟ್ಟು ಉತ್ತಮ ಪಡಿಸಿ, ಸುಲಬೀಕರಿಸುವುದರೊಂದಿಗೆ ಬಡವರ ಜೀವನ ಕಟ್ಟಿಕೊಡುವುದಿರಲಿ ಬದುಕನ್ನೇ ಮುರಾಬಟ್ಟೆಯನ್ನಾಗಿಸಿವೆಯನ್ನುವುದು ಕಟು ವಾಸ್ತವ.

ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಸರ್ಕಾರಿ ಗೋದಾಮುಗಳಲ್ಲಿ 6.67 ಕೋಟಿ ಟನ್ನುಗಳಷ್ಟು ಕೊಳೆಯುತ್ತಿರುವ ಆಹಾರ ಧಾನ್ಯಗಳು. ಲಂಡನ್ ಮೂಲದ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 210 ಲಕ್ಷ ಟನ್ ಗೋಧಿ ಅನಗತ್ಯವಾಗಿ ಹಾಳಾಗುತ್ತಿದೆ. ಶೇ.40 ರಷ್ಟು ಹಣ್ಣು ಮತ್ತು ತರಕಾರಿಗಳು ಜನರನ್ನು ತಲುಪದೆ ಹಾಳಾಗುತ್ತಿವೆ. ಇಷ್ಟಿದ್ದರೂ ನೆನ್ನೆ ಮೊನ್ನೆ ಕರ್ನಾಟಕದಲ್ಲಿ ಹಸಿವಿವಿನಿಂದ ಸತ್ತ ವರದಿ ಓದಿದ್ದೇವೆ. ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಖ್ಯೆಯ ಅಪೌಷ್ಠಿಕ ಜನರಿರುವ ದೇಶ ನಮ್ಮದು. ಅಷ್ಟಕ್ಕೂ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರ ಶಾಶ್ವತ ಪರಿಹಾರವೇನಲ್ಲವಲ್ಲ.

ಅದು ಸರಿ, ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ಸಿಕ್ಕರೆ ಸಾಕೇ? ಸಾಂಬಾರಿಗೆ ಬೇಕಾದ ಎಣ್ಣೆ, ಬೇಳೆ, ತರಕಾರಿ, ತೆಂಗು ಬೇಡವೆ? govt-school-kidsಅವರ ಆರೋಗ್ಯ, ವಿದ್ಯಾಭ್ಯಾಸ, ಮನೆ, ಬಟ್ಟೆ ಮತ್ತು ಇತರೆಗಳಿಗೇ ದುಡಿಯಲೇ ಬೇಕಲ್ಲವೇ? ಅಷ್ಟಕ್ಕೂ ಸರ್ಕಾರದ ಮೇಲೆ ಬೀಳುತ್ತಿರುವ ಹೊರೆಯೆಂದರೆ 24 ರೂಪಾಯಿಗೆ ಖರೀದಿಸಿ 1 ರೂಪಾಯಿ ನಲ್ಲಿ ವಿತರಿಸುವಾಗ 23 ರೂಪಾಯಿ ಹೊರೆ ಯಾಗುತ್ತದೆ ಎಂದರೆ 690 ರೂಪಾಯಿ ಪ್ರತಿ ಕುಟುಂಬಕ್ಕೆ. ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸುತ್ತಿರುವ ಅನಿಲದ ಸಿಲಿಂಡರ್‌ಗೆ ಸರ್ಕಾರ  450 ರೂಗಳ ವರಗೆ ರಿಯಾಯಿತಿ ಕೊಡುತ್ತಿಲ್ಲವೆ?

ಕೆಲವೇ ಕೆಲವು ಉದ್ದಮಿಗಳ ಉದ್ಯಮಕ್ಕೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಿರುವ ಭೂಮಿ, ನೀರು, ವಿದ್ಯುತ್, ರಸ್ತೆ, ತೆರಿಗೆ ರಿಯಾಯಿತಿ, ಸಹಾಯ ದನಗಳು ಲಕ್ಷ ಲಕ್ಷ ಕೋಟಿ ರೂಪಾಯಿ ರೂಪದಲ್ಲಿರುತ್ತವೆ. ಇದು ದೊಡ್ಡವರ (ಕೆಲವೇ ಕೆಲವರ) ವಿಷಯ, ಅಕ್ಕಿ ಸಣ್ಣವರ (ಬಹು ಸಂಖ್ಯಾತರ) ವಿಷಯವಲ್ಲವೇ?

ಕಾರ್ಮಿಕರಿಗೆ ಪೌಷ್ಠಿಕ ಅಹಾರ ದೊರೆತರೆ ಸದೃಢಕಾಯರಾಗಿ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ನಿರ್ವಹಿಸುವ ಸಾಧ್ಯತೆ ಇರಬಹುದಲ್ಲಾ. Working_in_the_rice_paddyಅನ್ಯ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವೆಲ್ಲಿ? ಕಾರ್ಮಿಕರ ಮದ್ಯ (ಸರಾಯಿ), ಬೆಟ್ಟಿಂಗ್ ನೆಡೆಯುತ್ತದೆ ಎಂದು ಇಸ್ಪೀಟ್ ಆಟ, ಕೋಳಿ ಜೂಜು. ನಿಷೇದಿಸಲಾಗಿದೆ. ಇನ್ನೆಲ್ಲಿಯ ಅನ್ಯ ಚಟುವಟಿಕೆ. ಅದೇ ಶ್ರಿಮಂತರ ಮದ್ಯ ನಿಷೇದಿಸಲಾಗಿದೆಯೇ? ಜಗತ್ ಜಾಹೀರಾಗಿ ಬೆಟ್ಟಿಂಗ್ ಮೂಲಕ ಆಟಗಾರರನ್ನು ಮಾರಾಟಮಾಡಿ, ಯುವ ಜನತೆಯನ್ನು ಬೆಟ್ಟಿಂಗ್ ಕರಾಳ ಬಲೆಗೆ ಕೆಡವಿ, ದೇಶವನ್ನೇ ಸೋಮಾರಿಗಳನ್ನಾಗಿಸಿ ವರ್ಷವಿಡೀ ರಾರಾಜಿಸುತ್ತಿರುವ ಕ್ರಿಕೆಟ್ ಏಷ್ಟೇ ಆದರೂ ಬುದ್ದಿವಂತ ಶ್ರಿಮಂತರ ಆಟವಲ್ಲವೇ?

ಒಂದು ರೂಪಾಯಿ ದರದಲ್ಲಿ 30ಕೆ.ಜಿ. ಅಕ್ಕಿ ದೊರೆತರೆ ಕಡಿಮೆ ಕೂಲಿಗೆ ಜನಸಿಗುವುದಿಲ್ಲಾ ಎಂಬುವುದು ಹಲವರ ಅಹವಾಲು. ಕಡಿಮೆ ಕೂಲಿಗೆ ಯಾಕೆ ದುಡಿಯಬೇಕಂದು ಬಯಸುತ್ತೀರಿ? ಹೌದು, ಯಾರು ಯಾರ ಮನೆಯಲ್ಲೇಕೆ ಕೂಲಿಗಳಾಗಿ ದುಡಿಯಬೇಕು? ನಾವೇನಾರೂ ಅದೇ ಕೂಲಿಗೆ ಅವರುಗಳ ಮನೆಯಲ್ಲಿ ಕೂಲಿಮಾಡುವ ಮನಸ್ಥಿತಿಯಲ್ಲಿದ್ದೇವ? ಬಡವರೂ ಸಹ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರರಾಗಿ ಬಾಳಲಿಬಿಡಿ.

ಬಡತನವನ್ನು ತೊಲಗಿಸಲು ಸಹಕಾರ ಕೊಡಿ, ಬಡವರನಲ್ಲಾ! ಬಡವರಿಗೆ ಶಿಕ್ಷಣ, ಸಮಾಜಿಕ ನ್ಯಾಯ, ಆರ್ಥಿಕ ಸದೃಢತೆ, ಸಾಂಸ್ಕೃತಿಕ ನ್ಯಾಯ ಅರ್ಥವಾಗದ ಪರಿಭಾಷೆಗಳೇ ಆಗಿವೆ. ಕಡೇ ಪಕ್ಷ ಅವರ ಪರವಾಗಿ ಸರ್ಕಾರದ ನಿರ್ದಾರಗಳು ಬಂದಾಗ ಬೆಂಬಲಿಸಲು ಸಾಧ್ಯವಾಗದಿದ್ದಲ್ಲಿ ಮೌನವನ್ನಾದರೂ ವಹಿಸೋಣ.