Category Archives: ವಿಶ್ವಾರಾಧ್ಯ ಸತ್ಯಂಪೇಟೆ

ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೋ?

-ವಿಶ್ವಾರಾಧ್ಯ ಸತ್ಯಂಪೇಟೆ

ಇಂದು ನಾವು ಯಾವುದೆ ಚಾನಲ್‌‍ಗಳನ್ನು ನೋಡಿದರೂ, ಪತ್ರಿಕೆಗಳನ್ನು ಓದಿದರೂ ನಿಮ್ಮ ಕಣ್ಣಿಗೆ ರಾಚುವಂತೆ ಜೋತಿಷ್ಯ-ಭವಿಷ್ಯ ಹೇಳುವವರ ಹಿಂಡು ಕಾಣುತ್ತದೆ. ದೃಶ್ಯಮಾಧ್ಯಮಗಳಲ್ಲಂತೂ ಮೈತುಂಬಾ ಜರತಾರಿ ಬಟ್ಟೆಗಳನ್ನುಟ್ಟುಕೊಂಡ, ಹಣೆಗೆ ಢಾಳವಾಗಿ ವಿಭೂತಿ ಬಡಿದುಕೊಂಡು ಕೈಗಳ ತುಂಬೆಲ್ಲ ರುದ್ರಾಕ್ಷಿಗಳನ್ನು ಕಟ್ಟಿಕೊಂಡಿರುವ ಜೋತಿಷ್ಯಿಗಳು ಆವರಿಸಿಕೊಂಡಿರುತ್ತಾರೆ. ಕೆಲವು ಸಲ ನಮ್ಮ ಮನೆಗಳ ಟಿ.ವಿ.ಯ ಪರದೆ ಆಚೆಗೂ ಅವರ ಮೈ ಕೈ ಇವೆಯೇನೋ ಎಂಬಂತೆ ಭಾತುಕೊಂಡಿರುವ ದೃಶ್ಯಾವಳಿ ನೋಡಿದಾಗ ನಿಜಕ್ಕೂ ನನಗೆ ಅತ್ಯಂತ ನೋವಾಗುತ್ತದೆ. ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಷ್ಟು ಸ್ಪಷ್ಟವಾಗಿ, ವಿಚಿತ್ರ ಮಾನರಿಸಂಗಳ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ತಂತ್ರಗಾರಿಕೆಗೆ ಬೆರಗಾಗಿದ್ದೇನೆ.

ಆದರೆ ಇವರ ತಂತ್ರಗಾರಿಕೆ, ಮೋಸಗಳು ಗೊತ್ತಿಲ್ಲದ ಜನಸಾಮಾನ್ಯರು ಮಾತ್ರ ನಿತ್ಯವೂ ಲೈವ್‌ಪ್ರೋಗ್ರಾಮ್‌ಗಳಲ್ಲಿ ವಿಚಿತ್ರವಾದ ಪ್ರಶ್ನೆಗಳನ್ನು ಭವಿಷ್ಯವಾದಿಗಳಿಗೆ ಕೇಳುತ್ತಿರುವುದನ್ನು ನೋಡಿದಾಗಲೆಲ್ಲ ಸಂಕಟ ಪಟ್ಟಿದ್ದೇನೆ. ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ನಮ್ಮ ದೇಶವನ್ನು ಸಶಕ್ತವಾಗಿ ಕಟ್ಟುವ ಶಕ್ತಿ ಇರುವ ಮಾಧ್ಯಮಗಳು ಮೌಢ್ಯವನ್ನೆ ಆಧುನಿಕ ವಿಜ್ಞಾನ ಎನ್ನುವಂತೆ ತೋರಿಸುತ್ತ ನಡೆದಿವೆಯಲ್ಲ ಎಂದು ಖೇದವಾಗುತ್ತದೆ.

ಬರವಣಿಗೆಯ ಮಾಧ್ಯಮವಾದ ಪತ್ರಿಕೆಗಳು, ದೃಶ್ಯ ಮಾಧ್ಯಮವಾದ ಚಾನಲ್‌ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ ಸ್ಪಷ್ಟವಾಗಿ ಈ ದೇಶಕ್ಕೆ ಮತ್ತದೆ ಸನಾತನ ವಾದದ ವಿಚಾರಗಳನ್ನು ಚಾಲಾಕಿತನದಿಂದ ಹೇಳುತ್ತಿರುವಂತೆ ಕಂಡುಬರುತ್ತದೆ. ಏಕೆಂದರೆ ಬೆಳಂಬೆಳಗ್ಗೆ ಚಾನಲ್‌ಗಳ ಕಿವಿ ಹಿಂಡುತ್ತಿರುವಂತೆ ದುತ್ತನೆ ಎದುರಾಗುವುದೆ ಅಸಂಖ್ಯಾತ ದೇವರುಗಳು. ಆ ದೇವರುಗಳನ್ನು ಹಾಲಿನಿಂದ, ಮೊಸರಿನಿಂದ, ತುಪ್ಪದಿಂದ, ಜೇನುತುಪ್ಪ ಹಾಗೂ ಶ್ರೀಗಂಧ ಎಂಬ ಪಂಚಗವ್ಯಗಳ ಮೂಲಕ ಮೈ ತೊಳೆಯುವುದನ್ನೆ ದೊಡ್ಡ ಕಸರತ್ತು ಎಂಬಂತೆ ತೋರಿಸಲಾಗುತ್ತದೆ. ಇದರ ಜೊತೆ ಜೊತೆಗೆ ಅರ್ಥವೆ ಆಗದಿರುವ ಮಂತ್ರಗಳು ಮುಗ್ಧ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ‘ತಿಳಿಯದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೇ ಜ್ಞಾನ’ ಎಂದು ಲಿಂ.ವೀರನಗೌಡ ನೀರಮಾನ್ವಿ ಅವರ ಮಾತು ಅಕ್ಷರಶಃ ಸತ್ಯ.

ದೇಹಕ್ಕೆ ವಿಪರೀತವಾಗುವಷ್ಟು ಬೊಜ್ಜು ಬರಿಸಿಕೊಂಡಿರುವ ಟೊಣ್ಯಾನಂತಹ ಪುರೋಹಿತ ಮಾತಾಡದ, ಕಿವಿಯ ಮೂಲಕ ಕೇಳಿಸಿಕೊಳ್ಳದ ದೇವರಿಗೆ ‘ಎದ್ದೇಳು ಮಂಜುನಾಥ ಏಳು ಬೆಳಗಾಯಿತು’, ‘ಕಾಪಾಡು ಶ್ರೀಸತ್ಯ ನಾರಾಯಣ’, ‘ ವಾರ ಬಂತಮ್ಮ ಗುರುವಾರ ಬಂತಮ್ಮ’, ‘ಸ್ವಾಮಿಯೆ ಶರಣಂ ಅಯ್ಯಪ್ಪ…’, ‘ಭಾಗ್ಯದ ಲಕ್ಷ್ಮೀಬಾರಮ್ಮ ನಮ್ಮಮ್ಮ ನೀ ಸೌಭ್ಯಾಗ್ಯದ ಲಕ್ಷ್ಮಿಬಾರಮ್ಮ…’ ಮುಂತಾಗಿ ಹಾಡಿ ಎಚ್ಚರಿಸಿದರೂ ದೇವರುಗಳು ಎದ್ದು ಕೂಡುವುದಿಲ್ಲ. ಅದು ನಮ್ಮೆಡೆಗೆ ಬರುವುದಂತೂ ದೂರದ ಮಾತು. ಹೂವಿನ ರಾಸಿಗಳಲ್ಲಿ ಮುಳುಗಿಸಿ, ಗಂಧದ ಪರಿಮಳ ಅವುಗಳ ಮೈಮೆಲೆಲ್ಲ ಚೆಲ್ಲಿದರು ಅವು ಮಿಸುಗಾಡುವುದಿಲ್ಲ. ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’ ಎಂಬ ಕವಿ ಕುವೆಂಪು ಅವರ ಮಾತು ಅಕ್ಷರಶಃ ನಾವೆಲ್ಲ ಮರೆತುಹೋಗಿದ್ಧೇವೇನೋ ಎಂದು ಭಾಸವಾಗುತ್ತದೆ.

‘ಕಣ್ಣೊಳಗೆ ಕಣ್ಣಿದ್ದು ಕಾಣಲರಿಯರಯ್ಯ
ಕಿವಿಯೊಳಗೆ ಕಿವಿಯಿದ್ದು ಕೇಳಲರಿಯರಯ್ಯ,
ಘ್ರಾಣದೊಳಗೆ ಘ್ರಾಣವಿದ್ದು ಘ್ರಾಣಿಸಲರಿಯರಯ್ಯ’

ಎಂಬ ಅಲ್ಲಮಪ್ರಭುಗಳ ಮಾತು ಅರ್ಥವಾಗುವುದು ಇನ್ನೂ ಯಾವಾಗ?

‘ಭವ್ಯ ಬ್ರಮ್ಮಾಂಡ’ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಪುರೋಹಿತನಂತೂ ತನ್ನ ದಿವ್ಯ ಅಜ್ಞಾನವನ್ನು ಹೊರಗೆಡಹುತ್ತಿರುತ್ತಾನೆ. ಆದರೆ ಅದನ್ನು ಪರಾಂಭರಿಸಿ ನೋಡುವಾಗ-ವಿವೇಚಿಸುವ ಮನಸ್ಸುಗಳ ಕೊರತೆಯಿಂದ ಅವರು ಹೇಳಿದ್ದೆ ದೊಡ್ಡ ಸತ್ಯ ಎಂದು ಜನ ತಿಳಿಯುತ್ತಾರೆ. ಮತ್ತೊಂದು ಸಂಗತಿಯನ್ನು ಇಲ್ಲಿ ಹೇಳುವ ಅವಶ್ಯಕತೆ ಇದೆ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಗಳಲ್ಲಿ ಬರುವ ಸಂಗತಿಗಳೆಲ್ಲ ಪರಮಗಂತವ್ಯ ಎಂದು ನಂಬಿರುವ ಸಾಕಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಇದನ್ನು ಚೆನ್ನಾಗಿಯೆ ಮನಗಂಡಿರುವ ಪುರೋಹಿತಶಾಹಿ ಮಾತ್ರ ಹಿಂದೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಎಂಬ ಕತೆಗಳ ಮೂಲಕ ಮೌಢ್ಯ ಹಂಚಿ ದೇಶವನ್ನು ಬೌದ್ಧಿಕ ಅಥಃಪತನಕ್ಕೆ ತಳ್ಳಿಬಿಟ್ಟಿದ್ದರು. ‘ಯದಾ ಯದಾಯಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಎಂಬಂತಹ ನುಣ್ಣನೆಯ ಮಾತುಗಳನ್ನು ಹೇಳಿ ನಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದಾರೆ. ಭಾರತ ಹಾಳಾಗುವವರೆಗೆ ಶ್ರೀಕೃಷ್ಣ (ಸಿರಿ ಕೃಷ್ಣ) ಯಾಕೆ ಕಾಯಬೇಕು? ಅದು ಅವನತಿಯ ದಾರಿಹಿಡಿಯುತ್ತಿದೆ ಎಂದು ಗೊತ್ತಾಗುತ್ತಿರುವಂತೆಯೆ ಪ್ರತ್ಯಕ್ಷರಾಗಿ ಅದನ್ನು ಸರಿಪಡಿಸಬೇಕು ಎಂಬ ಚಿಕ್ಕಜ್ಞಾನವೂ ಆತನಿಗೆ ಇಲ್ಲವೆ, ಎಂದು ಎಂದಾದರೂ ನಾವುಗಳು ಆಲೋಚಿಸಿದ್ದೇವೆಯೆ?

ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮ ವೈಜ್ಞಾನಿಕ ಕೌಶಲ್ಯವನ್ನು ಮೆರೆದು ಖಗೋಳಶಾಸ್ತ್ರಗಳ ಬೆನ್ನುಹತ್ತಿ ಹೋಗುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯದ ಕೊಳಕಿನಲ್ಲಿ ಕೊಳೆಯುತ್ತಿದೆ. ರಷ್ಯಾ, ಅಮೇರಿಕಾದವರು ಕ್ಷಿಪಣಿ, ರಾಕೇಟ್‌ಗಳನ್ನು ಕಂಡು ಹಿಡಿಯಲು ಗ್ರಹತಾರೆಗಳ ಗುಣಿಸಿ ಲೆಕ್ಕಹಾಕುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯವನ್ನು ಹಿಡಿದು ಹುಟ್ಟುವ ಮಗು ಹೆಣ್ಣೋ-ಗಂಡೋ, ಕಂಕಣಬಲ ಕೂಡಿಬರುತ್ತದೋ ಇಲ್ಲವೊ ಎಂಬ ಲೆಕ್ಕಾಚಾರ ಹಾಕುತ್ತಿದೆ ಎಂಬ ಲೋಹಿಯಾ ಅವರು ಅರವತ್ತು ವರ್ಷಗಳ ಹಿಂದೆ ಹೇಳಿದ ಮಾತಿಗೆ ಈಗಿನ ಪರಿಸ್ಥಿತಿಗೂ ಏನೂ ಬದಲಾವಣೆ ಆಗಿಲ್ಲವೆನಿಸುತ್ತದೆ.

ವಿವೇಚನೆ ಹಾಗೂ ವೈಜ್ಞಾನಿಕ ಮನೋಭಾವವನ್ನು ನಾವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ (ಕೆಲವನ್ನು ಹೊರತುಪಡಿಸಿ) ಹುಡುಕುವುದೆ ತಪ್ಪಾಗಬಹುದೇನೊ ಎಂದನಿಸುತ್ತದೆ. ಏಕೆಂದರೆ ಈ ಎರಡು ಮಾಧ್ಯಮಗಳಲ್ಲಿ ತೊಡಗಿಕೊಂಡಿರುವವರು ಮತ್ತದೆ ಬ್ರಾಹ್ಮಣಿಕೆಯ ಪಳಿಯುಳಿಕೆಗಳು. ನೂಲು ಎಂಥದೋ ಅಂಥ ಸೀರೆ ಎಂದು ಹೇಳುವಂತೆ, ಎಂಥ ಬೀಜವೋ ಅಂಥದೆ ವೃಕ್ಷ ಸಹಜವಾಗಿ ಪ್ರಕಟಗೊಳ್ಳುತ್ತದೆ. ‘ಹೀಗೂ ಉಂಟೆ?’, ‘ಜನ್ಮಾಂತರ’, ‘ಭವಿಷ್ಯ ಹೇಳುವುದು’, ‘ವಾಮಾಚಾರದ ಸಂಗತಿ’ಗಳನ್ನು ಪದೆ ಪದೇ ಹೇಳುವುದು ತೋರಿಸುವುದು ಮಾಡುವುದರಿಂದ ಸಹಜವಾಗಿಯೆ ಓದುಬರಹ ಹಾಗೂ ವಿವೇಚನೆಯನ್ನು ಮಾಡದೆ ಇರುವ ಮನುಷ್ಯ ನಂಬಿಬಿಡುವುದೆ ಹೆಚ್ಚು.

ಸಿನೆಮಾಗಳಲ್ಲಿ ತೋರಿಸುವ ಮೋಹಿನಿಯರ ರೂಪವನ್ನು ಗಮನಿಸಿ ಗಮನಿಸಿ ನಮಗೆ ಗೊತ್ತಿಲ್ಲದೆ ಮೋಹಿನಿಗೆ ಕಾಲುಗಳು ಇರುವುದಿಲ್ಲ, ಮುಖ ಕಾಣುವುದಿಲ್ಲ, ಆಕೆ ನಡೆದಾಡುವಾಗ ಪ್ರಕಾಶಮಾನವಾದ ಬೆಳಕು ಆಕೆಯ ಸುತ್ತಲೆ ಸುತ್ತುತ್ತಿರುತ್ತದೆ, ಬೆನ್ನು ಮಾತ್ರ ಕಾಣುತ್ತದೆ, ಆಕೆ ಪ್ರತ್ಯಕ್ಷ್ಯಳಾಗುವುದು ಮದ್ಯರಾತ್ರಿಯ ನಂತರ, ಎಂಬಂತಹ ಅನಿಸಿಕೆಗಳು ನಮ್ಮಲ್ಲಿ ಈಗಾಗಲೆ ಬೇರೂರಿ ಬಿಟ್ಟಿವೆ. ಆಕಸ್ಮಿಕವಾಗಿ ಗವ್ವೆನ್ನುವ ಕತ್ತಲಲ್ಲಿ ಯಾರಾದರೂ ಬಿಳಿಸಿರಿ ಉಟ್ಟು ಅವರು ನಡೆದಾಡಿದಂತೆಲ್ಲ ಗೆಜ್ಜೆ ಸಪ್ಪಳವಾದರೆ ಸಾಕು ನಮ್ಮ ಎದೆಗಳಲ್ಲೆಲ್ಲ ಭಯದ ತಾಂಡವ ನೃತ್ಯ ಶುರುವಾಗಿರುತ್ತದೆ. ಮಸಂಟಿಗೆಗಳಲ್ಲಿ ಆಗ ಕುಣಿದು ಕುಪ್ಪಳಿಸುತ್ತ ಗ್ರಾಮಕ್ಕೆ ಗ್ರಾಮವನ್ನೆ ಭಯದ ನೆರಳಿನಲ್ಲಿ ಇಡುತ್ತಿದ್ದ ಕೊಳ್ಳಿದೆವ್ವಗಳು ಈಗ ಎಲ್ಲಿ ಮಾಯವಾಗಿವೆಯೊ? ಆದರೆ ಇಂದಿಗೂ ಕೆಲವು ಸಿನೆಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಅವು ಹಾಗೆ ವಿಜೃಂಭಿಸುತ್ತಿವೆ.

ನಾಗರಹಾವು ತನಗೆ ಕಚ್ಚುತ್ತದೆ ಎಂದರಿತ ಹೀರೋ ಒಬ್ಬ ಸಿನೆಮಾದಲ್ಲಿ ಆಕಸ್ಮಿಕವಾಗಿ ಸಾಯಿಸಿ ಬಿಟ್ಟರೆ ಆ ಹಾವು ಮಾತ್ರ ಪದೆ ಪದೆ ಬಂದು ಆತನಿಗೆ ಕಾಟ ಕೊಡುತ್ತಲೆ ಇರುತ್ತದೆ. ಆ ಹೀರೋನನ್ನು ನರಳಿಸಿ, ನರಳಿಸಿ ಸಾಯುವಂತೆ ಮಾಡುವವರೆಗೆ ಆ ಸಿನೆಮಾ ನಿರ್ದೇಶಕನಿಗೆ ಸಮಾಧಾನವೆ ಇರುವುದಿಲ್ಲ. ಈ ನಡುವೆ ಆ ಸಿನೆಮಾ ಹೀರೋಯಿನ್ ದೈವಭಕ್ತೆಯಾಗಿ ನಾಗದೇವತೆಗೆ ಪೂಜೆ ಮಾಡಿ ಆ ನಾಗದೇವತೆ ಪ್ರತ್ಯಕ್ಷಳಾಗಿ ವರವನ್ನು ಕರುಣಿಸಿದರೆ, ಗಂಡುಮಕ್ಕಳು ಬಚಾವಾಗೊದು ತುಸು ಕಷ್ಟವೆಂದೆ ಹೇಳಬೇಕು.

ಮೈನೆರೆದು ದೊಡ್ಡವಳಾದ ಯುವತಿಗೆ ಸರಿಯಾದ ವರ ದೊರಕಬೇಕೆಂದರೆ ಹಳೆ ಸಿನೆಮಾಗಳಲ್ಲಿ ಸತ್ಯನಾರಾಯಣವ್ರತವನ್ನು ಆಚರಿಸಲೆ ಬೇಕಿತ್ತು. ಯಾರಿಗೋ ಸಂಬಂಧಿಸಿದ ಕತೆಯನ್ನು ಓದುವುದರಿಂದ, ನೆನೆಯುವುದರಿಂದ ನಾವು ಅವರಂತೆ ಆಗುತ್ತೇವೆ ಎಂದು ಹೇಳುವುದು ಎಷ್ಟು ಮೂರ್ಖತನ?

ಕರಿಕ ಕೆಂಚನನೆನೆದರೆ ಕೆಂಚನಾಗಬಲ್ಲನೆ
ಕೆಂಚ ಕರಿಕನನೆನೆದರೆ ಕರಿಕನಾಗಬಲ್ಲನೆ
ದರಿದ್ರ ಸಿರಿವಂತನನೆನೆದರೆ ಸಿರಿವಂತನಾಗಬಲ್ಲನೆ
ಸಿರಿವಂತೆ ದರಿದ್ರನನೆನೆನೆದರೆ ದರಿದ್ರನಾಗಬಲ್ಲನೆ
ಮುನ್ನಿನ ಪುರಾತನರನೆನೆದು ಧನ್ಯನಾದೆಹೆವೆಂಬ
ಮಾತಿನ ರಂಜನಕರನೇನೆಂಬೆ ಕೂಡಲಸಂಗಮದೇವಾ

ಬೇಕಂತಲೆ ಒಂದು ಸಲ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ರಾಶಿ-ಫಲ ನಕ್ಷತ್ರಗಳ ಕುರಿತುಹೇಳುತ್ತಿದ್ದ ಜ್ಯೋತಿಷ್ಯಿಯ ಅಟಾಟೋಪವನ್ನು ಗಮನಿಸಿದೆ. ಅವನ ವಾಕ್ಚಾತುರ್ಯ, ಸುಳ್ಳನ್ನು ನಯವಾಗಿ, ನವಿರಾಗಿ ಹೇಳುವ ಫಟಿಂಗತನ ಅವನಿಂದ ಮಾತ್ರ ಕಲಿಯಲು ಸಾಧ್ಯ ಎನ್ನುವಂತೆ ಇತ್ತು. ಯಾವುದೆ ದೇವಸ್ಥಾನವನ್ನು ಬಲಗಡೆಯಿಂದಲೇ ಸುತ್ತಬೇಕಂತೆ. ಬಲಗೈಯಲ್ಲಿ ಅಗ್ನಿ ಇದೆಯಂತೆ. ಅದು ಶಾಂತವಾಗಿ ಇರಬೇಕೆಂದರೆ, ನಾವು ಬಯಸಿದ್ದೆಲ್ಲ ನಮಗೆ ಸಿಗಬೇಕಾದರೆ ಹಾಗೆ ಸುತ್ತಿದಾಗಲೆ ನಮಗೆ ಒಳ್ಳೆಯದಾಗುತ್ತದಂತೆ. ಮತ್ತೆ ನಾವು ಯಾವುದೆ ಮೌಲ್ಯವುಳ್ಳ ವಸ್ತುಗಳನ್ನು ಪಡೆಯಬೇಕೆಂದರೂ ಅದು ಬಲಗೈಯಲ್ಲಿಯೆ ತೆಗೆದುಕೊಳ್ಳಬೇಕಂತೆ. ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ಆಕೆ ಬಲಗಾಲನ್ನು ಮಾತ್ರವೆ ಇಟ್ಟು ಬರಬೇಕೆಂಬುದನ್ನು ರೂಢಿಯೆ ಮಾಡಿಬಿಟ್ಟಿದ್ದಾರೆ. ಆಕಸ್ಮಿಕವಾಗಿ ಆಕೆ ಎಡಗಾಲು ಇಟ್ಟು ಒಳಬಂದರೆ ಆ ಮನೆಯಲ್ಲಿ ಏನೇನೋ ಅವಘಡಗಳು ಘಟಿಸಿಬಿಡುತ್ತವೆ ಎಂದು ಭಯದ ಬೀಜ ಬಿತ್ತುತ್ತಾರೆ. ಆದರೆ ಎಡಗೈ ಬಾಲಿಂಗ್ ಹಾಗೂ ಬ್ಯಾಟ್ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಕ್ರಿಕೆಟಿಗರ ಸಾಧನೆಯನ್ನು ಮುದ್ದಾಂ ಮರೆಯಿಸಿಬಿಡುತ್ತಾರೆ. ನಮ್ಮದೆ ದೇಹದ ಅಂಗಾಗಳಲ್ಲಿಯೂ ಶ್ರೇಷ್ಠ-ಕನಿಷ್ಠ ಎಂಬ ತರತಮ ಭಾವನೆ ಉಂಟುಮಾಡಿರುವ ರೋಗಿಷ್ಟ ಮನಸ್ಸುಗಳ ಕುರಿತು ಏನು ಹೇಳುವುದು?

ನಮ್ಮ ಇಂದಿನ ಬದುಕಿಗೆ ಸುಖ-ಸಂತೋಷ, ಒಳ್ಳೆಯದು-ಕೆಟ್ಟದ್ದಕ್ಕೆ, ಸ್ನೇಹ-ವೈರತ್ವಕ್ಕೆ, ಹಣಗಳಿಸುವುದಕ್ಕ-ಬಿಕಾರಿಯಾಗುವುದಕ್ಕೆ ಕಾರಣ ನಾವಲ್ಲವೆ ಅಲ್ಲವಂತೆ. ಅದೆಲ್ಲ ಮೊದಲೆ ನಮ್ಮ ಹುಟ್ಟಿದ ನಕ್ಷತ್ರ, ರಾಶಿ-ಫಲಗಳನ್ನು ಅವಲಂಬಿಸಿದೆಯಂತೆ. ತೀರಾ ಇತ್ತೀಚೆಗೆ ಈ ರಾಶಿ-ನಕ್ಷತ್ರಗಳನ್ನು ಎಷ್ಟು ಸೀಳಿ ಸೀಳಿ ಇಟ್ಟಿದ್ದಾರೆಂದರೆ ಇನ್ಮುಂದೆ ಸೀಳುವುದಕ್ಕೆ ಸಾಧ್ಯವೆ ಇಲ್ಲವೆನ್ನುವಷ್ಟು ಸೂಕ್ಷ್ಮವಾಗಿ ಸೀಳಿ ಬಿಟ್ಟಿದ್ದಾರೆ. ನಮ್ಮ ವ್ಯಾಪಾರ ವಹಿವಾಟಿಗೂ, ಗಂಡ-ಹೆಂಡತಿಯ ಸಂಬಂಧಕ್ಕೆ, ನಮ್ಮ ಉಡುಗೆ ತೊಡುಗೆಗಳ ಬಣ್ಣಕ್ಕೆ, ಚಂದ್ರ ಗ್ರಹಕ್ಕೆ ರಾಹು ಪ್ರವೇಶಿಸುವ, ಪ್ರವೇಶಿಸದೆ ಇರುವುದರಿಂದಲೆ ಸುಖ-ದುಃಖಗಳು ಉಂಟಾಗುತ್ತವಂತೆ.

ಕರ್ಕಲಗ್ನ ರಾಶಿಯನ್ನು ಹೊಂದಿದವರಂತೂ ಬಹಳ ಸೆನ್ಸಿಟಿವ್ ಆಗಿ ಇರುತ್ತಾರಂತೆ. ಏಕೆಂದರೆ ಇವರ ರಾಶಿಯಲ್ಲಿ ಚಂದ್ರ ದುರ್ಬಲನಂತೆ. ಇದೆಲ್ಲ ಹೀಗೇಕೆ? ಎಂದು ನೀವು ಯಾರಾದರೂ ಪ್ರಶ್ನೆ ಕೇಳಿದರೆ ಮತ್ತೆ ಸುಳ್ಳಿನ ಮಾತಿಗೆ ಮತ್ತಷ್ಟು ಸುಳ್ಳು ಪೋಣಿಸಿ ಸುಳ್ಳಿನ ಸರಮಾಲೆಯನ್ನೆ ನಿಮ್ಮ ಕೊರಳಿಗೆ ಹಾಕಿಬಿಡುತ್ತಾರೆ. ‘ಜಟ್ಟಿ ಕೆಳಗೆ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ’ ಎಂದು ವಾದಿಸುವ ಧೂರ್ತತನ ಇವರಲ್ಲಿ ತುಂಬಿತುಳುಕ್ಯಾಡುತ್ತಿದೆ. ಕಪೋಲ ಕಲ್ಪಿತ ಕಟ್ಟು ಕತೆಗಳೆ ಇವರಿಗೆ ಆಧಾರ. ತಮ್ಮ ಇಂಥ ಪೊಳ್ಳು ಮಾತಿಗೆ ಆಧಾರವಾಗಿ ಕೆಲವು ದಾಸರು ಬರೆದ ‘ನಂಬಿಕೆಟ್ಟವರಿಲ್ಲವೋ ಓ ಮನುಜ ನಂಬಿಕೆಟ್ಟವರಿಲ್ಲವೊ’ ಎಂದು ಹೇಳಿ ಬುದ್ದಿಯನ್ನು ಕ್ಷೀಣಿಸುವಂತೆ ಆಲೋಚಿಸದಂತೆ ಮಾಡುತ್ತಾರೆ.

ಭೂಮಿಯೆ ವಿಶ್ವದ ಕೇಂದ್ರ, ಅದು ಚಪ್ಪಟೆಯಾಗಿದೆ, ಭೂಮಿಯ ಸುತ್ತಲೆ ಎಲ್ಲಾ ಗ್ರಹಗಳು, ನಕ್ಷತ್ರಗಳು ತಿರುಗುತ್ತವೆ ಎಂದು ಜ್ಯೋತಿಷ್ಯ ಹೇಳುವವರು ನಂಬಿದ್ದರು. ಆದರೆ ಗೆಲಿಲಿಯೋ ಮಾತ್ರ ಭೂಮಿ ಗುಂಡಗಿದೆ, ಅದು ಸೂರ್ಯನ ಸುತ್ತ ತಿರುಗುತ್ತದೆ ಎಂದು ಸತ್ಯವನ್ನು ವೈಜ್ಞಾನಿಕ ಆಧಾರಗಳ ಮೇಲೆ ಹೇಳಿದ. ಆದರೆ ಗೆಲಿಲಿಯೋನ ಪರಿಸ್ಥಿತಿ ಏನಾಯಿತು? ಆದ್ದರಿಂದ ಭವಿಷ್ಯವಾದಿಗಳಿಗೆ ನಂಬಿಕೆಯೆ ಆಧಾರವೆ ಹೊರತು ಸತ್ಯವಲ್ಲ. ಈಗಲೂ ಈ ಮೂರ್ಖರು ನವಗ್ರಹಗಳಿವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಆ ಪಟ್ಟಿಯಲ್ಲಿ ಗ್ರಹಗಳಿರುವುದು ಐದುಮಾತ್ರ. ಒಂದು ನಕ್ಷತ್ರ, ಇನ್ನೊಂದು ಉಪಗ್ರಹ. ಎರಡಂತೂ ಇಲ್ಲವೆ ಇಲ್ಲ. ಇಂಥ ಇಲ್ಲಸಲ್ಲದ ಗ್ರಹಗಳ ಮೇಲೆ ರಚಿತವಾದ ಭವಿಷ್ಯ ರಾಶಿ -ಫಲ-ಜ್ಯೋತಿಷ್ಯ ಅದು ಹೇಗೆ ಖರೆಯಾದೀತು? ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟ ಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳೆ ನಿಯಂತ್ರಿಸುತ್ತವೆ ಎಂಬುದು ಯಾವ ವಿಜ್ಞಾನಿಯೂ ಖಚಿತಪಡಿಸಿಲ್ಲ.

ಜ್ಯೋತಿಷ್ಯನ ಒಂದು ಹಳೆಯ ಕಥೆ ಇದೆ. ಅವನು ಒಬ್ಬ ರಾಜನ ಬಳಿ ಬಂದು ‘ನೀನು ಇನ್ನು ಆರು ತಿಂಗಳಲ್ಲಿ ಸಾಯುವೆ’ ಎಂದ. ರಾಜ ಭಯದಿಂದ ಕಂಪಿಸತೊಡಗಿದ. ಅಂಜಿಕೆಯಿಂದ ಅವನು ಆಗಲೇ ಸಾಯುವ ಸ್ಥಿತಿಯಲ್ಲಿದ್ದ. ಆದರೆ ಮಂತ್ರಿ ಬಹಳ ಬುದ್ದಿವಂತ. ರಾಜನಿಗೆ ಈ ಜ್ಯೋತಿಷ್ಯವನ್ನೆಲ್ಲಾ ನಂಬಬೇಡಿ, ಇವರೆಲ್ಲಾ ಮೂರ್ಖರು ಎಂದು ಬುದ್ದಿ ಹೇಳಿದ. ರಾಜ ಇದನ್ನು ನಂಬಲಿಲ್ಲ. ಮಂತ್ರಿ ಜ್ಯೋತಿಷ್ಯ ಮೂರ್ಖ ಎಂಬುದನ್ನು ತೋರಿಸುವುದಕ್ಕೆ ಜ್ಯೋತಿಷ್ಯನನ್ನು ಪುನಃ ಅರಮನೆಗೆ ಬರಮಾಡಿಕೊಂಡ. ಮಂತ್ರಿ ಅವನಿಗೆ ನಿನ್ನ ಲೆಕ್ಕಾಚಾರವೆಲ್ಲ ಸರಿಯಾಗಿದೆಯೇ? ನೋಡು ಎಂದ. ಜ್ಯೋತಿಷ್ಯನಿಗೆ ಲವಲೇಶವೂ ಸಂದೇಹವಿರಲಿಲ್ಲ. ಆದರೆ ಮಂತ್ರಿಯ ತೃಪ್ತಿಗಾಗಿ ಪುನಃ ಲೆಕ್ಕಾಚಾರ ಹಾಕಿ ಎಲ್ಲ ಸರಿಯಾಗಿದೆ ಎಂದ. ಭಯದಿಂದ ರಾಜನ ಮುಖ ಸಪ್ಪೆಯಾಯಿತು. ಮಂತ್ರಿ ಜ್ಯೋತಿಷ್ಯನನ್ನು ನೀನು ಇನ್ನೆಷ್ಟು ದಿನಗಳವರೆಗೆ ಬದುಕಿರುವೆ ಎಂದ. ಜ್ಯೋತಿಷ್ಯ ತನ್ನ ಜಾತಕದ ಪ್ರಕಾರ ಹನ್ನೆರಡು ವರ್ಷ ಎಂದ. ಮಂತ್ರಿ ತಕ್ಷಣ ತನ್ನ ಸೊಂಟದ ಕತ್ತಿಯಿಂದ ಜ್ಯೋತಿಷ್ಯನ ತಲೆಯನ್ನು ಛೇದಿಸಿ ರಾಜನಿಗೆ ಈ ಸುಳ್ಳುಗಾರನ ಗತಿ ಏನಾಯಿತು ಗೊತ್ತಿಲ್ಲವೆ? ಹನ್ನೆರಡು ವರುಷ ಬದುಕಿರುತ್ತೇನೆ ಎಂದವನು ಈ ಕ್ಷಣ ಸತ್ತು ಹೋದನು ಎಂದು ಹೇಳಿದ.

ಬಹುತೇಕ ಜೋತಿಷ್ಯಿಗಳು ಮಗು ಹುಟ್ಟುವ ಜನನ ಸಮಯದಿಂದ ಜಾತಕ ಬರೆದಿಡುವ ಪದ್ಧತಿ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದರೆ ಮಗು ಹುಟ್ಟುವ ಸಮಯ ಅಂದರೆ ಯಾವುದು? ಆ ಮಗು ನೆಲಕ್ಕೆ ಬಿದ್ದು ಅತ್ತಾಗಲೋ, ಅಥವಾ ಗಂಡಿನ ವೀರ್ಯ ಹೆಣ್ಣಿನ ಅಂಡಾಶಯದೊಂದಿಗೆ ಫಲಿತವಾಗಿ ಭ್ರೂಣವಾಗಿ ಬೆಳೆಯುತ್ತಿರುವಾಗಲೋ? ಇವರಿಗೆ ಖಚಿತವಾಗಿ ಅದು ಹೇಗೆ ಗೊತ್ತಾಗುತ್ತದೆ? ಆದ್ದರಿಂದಲೆ ಮಹಾತ್ಮ ಬುದ್ಧ ‘ಜ್ಯೋತಿಷ್ಯವನ್ನು ಹೇಳಿ ಉದರ ಪೋಷಣೆ ಮಾಡುವವರ ಜೊತೆ ಸಂಬಂಧ ಇಟ್ಟುಕೊಳ್ಳಬೇಡಿ’ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ‘ಜ್ಯೋತಿಷ್ಯ ಮಂತ್ರವಾದಿಗಳ ಕೈಗೆ ಸಿಕ್ಕುಬಿದ್ದು ಒದ್ದಾಡುವುದಕ್ಕಿಂತ ಯಾವುದನ್ನೂ ನಂಬದೆ ಸಾಯುವುದು ಲೇಸು’, ‘ಜ್ಯೋತಿಷ್ಯ-ಭವಿಷ್ಯ ಮುಂತಾದ ರಹಸ್ಯಗಳನ್ನೆಲ್ಲ ನೆಚ್ಚುವುದು ದೌರ್ಬಲ್ಯದ ಚಿಹ್ನೆ’ ಎಂಬುದು ವಿವೇಕಾನಂದರ ಅಭಿಪ್ರಾಯ.

ಗುಡಿ ಗುಂಡಾರ, ಮಸೀದಿ, ಇಗರ್ಜಿಗಳನ್ನು ಒಂದು ರೌಂಡು ಸುತ್ತಿ ಬಂದರಂತೂ ಎಲ್ಲಾ ಫಲಾಫಲಗಳು ಉದುರಿ ಬೀಳುತ್ತವೆ ಎಂದು ಚಿತ್ರಿಸಿ ತೋರಿಸಲಾಗುತ್ತದೆ. ಗಂಗಾ-ಯಮುನಾ-ಬ್ರಹ್ಮಪುತ್ರ ನದಿಗಳ ನೀರು ಅತ್ಯಂತ ಪವಿತ್ರ ಎಂದು ಹೇಳಾಗುತ್ತದೆ. ಹರಿದ್ವಾರ-ಋಷಿಕೇಷ-ಕೇದಾರ-ಬದರಿ-ವೈಷ್ಣವಿದೇವಿ ದೇವರ ದರ್ಶನಭಾಗ್ಯ ದೊರಕಿದರೆ ಏನೆಲ್ಲವೂ ಸಾಧ್ಯ ಎಂದು ನಂಬಿಸಲಾಗುತ್ತದೆ. ಆದರೆ ವಾಸ್ತವವಾಗಿ ಇದೆಲ್ಲ ಸಾಧ್ಯವೆ ಎಂದು ಯಾರೂ ಆಲೋಚಿಸಿ ನೋಡುವುದಿಲ್ಲ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ
ತುಟ್ಟ ತುದಿಯಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ
ಅತ್ತಲಿತ್ತ ಹರಿವಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು

ಎಂಬ ಅರಿವಿನ ಮಾತುಗಳಿಗೆ ನಾವು ಕಿವಿಕೊಡುವುದು ಯಾವಾಗ?

ತಮ್ಮ ಚಾನಲ್‌ಗಳ ಟಿ.ಆರ್.ಪಿ. ಹೆಚ್ಚಿಸುವುದಕ್ಕೆ ಏನನ್ನಾದರೂ ಕೊಡಲು ರೆಡಿಯಾಗಿರುವ, ಯಾವುದೆ ಬದ್ಧತೆಗಳನ್ನು ಇಟ್ಟುಕೊಳ್ಳದಿರುವ ಸಮೂಹ ಮಾಧ್ಯಮಗಳು ಜನ್ಮಜನ್ಮಾಂತರ ಎಪಿಸೋಡುಗಳನ್ನು ಮಾಡುತ್ತಲೆ ಜನರನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತ ನಡೆದಿವೆ. ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಈ ಐನಾತಿ ಆಸಾಮಿಗಳು ಅವರ ಮೌಢ್ಯದ ಮೇಲೆ ತಮ್ಮ ಉಪ್ಪರಿಗೆ ಕಟ್ಟಿಕೊಂಡು ಆರಾಮವಾಗಿರುತ್ತಾರೆ. ಇಂಥ ಫಟಿಂಗರನ್ನು ನೋಡಿಯೆ ಕುವೆಂಪು

ಬೆಂಕಿಯನಾರಿಸಿ ಬೂದಿಯಮಾಡಿ
ಆ ಬೂದಿಯ ಮಹಿಮೆಯ ಕೊಂಡಾಡಿ
ಪೂಜಾರಿಯೆ ಮಿಂಚುವನು

ಎಂದು ಅತ್ಯಂತ ಸ್ಪಷ್ಟವಾಗಿ ಪುರೋಹಿತರ ಚಾಲಬಾಜಿತನದ ಕುರಿತು ಹೇಳಿದರೂ ನಾವು ಎಷ್ಟು ಮಂದಿ ಆ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ? ಹಿಂದೊಂದು ಸಂದರ್ಭದಲ್ಲಿ ತರಂಗ ಪತ್ರಿಕೆಯ ಸಂಪಾದಕನೋರ್ವ ತನ್ನ ಪತ್ರಿಕೆ ಪ್ರಳಯದ ಅಂಚಿಗೆ ತಲುಪಿದಾಗ ಪ್ರಳಯವಾಗುತ್ತದೆ ಎಂದು ಲೇಖನಗಳನ್ನು ಬರೆಬರೆದು ತನ್ನ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡ. ಆ ಪತ್ರಿಕೆಯಲ್ಲಿ ಬರೆದ ಜ್ಯೋತಿಷ್ಯಿಗಳಿಗೆ ವಿಜ್ಞಾನಜ್ಯೋತಿಷ್ಯಿಗಳೆಂದು ಕರೆದು ತನ್ನ ಬಡತನವನ್ನು ತಾನೆ ಹೇಳಿಕೊಂಡ. ಡಿವೈನ್‌ಪಾರ್ಕ್‌ನ ಮತ್ತೊಬ್ಬ ಫಟಿಂಗ ಡಾ.ಉಡುಪ ಎಂಬ ತಿರುಬೋಕಿಯೊಬ್ಬ ತಾನೇ ವಿವೇಕಾನಂದರ ಅಪರವತಾರ ಎಂದು ಹೇಳಿದ್ದನ್ನು, ವಿವೇಕಾನಂದರೆ ತನ್ನ ಮೈಯೊಳಗೆ ಪ್ರವೇಶಿಸಿ ಏನನ್ನೋ ಉಪದೇಶಿಸುತ್ತಾರೆ ಎಂದು ನಂಬಿಸಿ ಜನರನ್ನು ದಿಶಾಬೂಲ್‌ಗೊಳಿಸುತ್ತಿರುವುದನ್ನು ಬಹುದೊಡ್ಡ ವಿಸ್ಮಯ ಎಂಬಂತೆ ಪ್ರಕಟಿಸಿಬಿಟ್ಟ.

ದಕ್ಷಿಣ ಕನ್ನಡದ ಆ ಸಾಲಿಗ್ರಾಮದ ಒಂದು ತುದಿಗೆ ಶಿವರಾಮ್ ಕಾರಂತ ಎಂಬ ಅಪ್ಪಟ ವೈಚಾರಿಕ ಪ್ರಜ್ಞೆಯ ಮನುಷ್ಯನಿದ್ದರೆ ಇನ್ನೊಂದು ಕಡೆ ಚಂದ್ರಶೇಖರ ಉಡುಪ ಎಂಬ ಅವಿವೇಕಿಯೊಬ್ಬ ಮೆಲ್ಲಗೆ ಬೆಳೆದು “ವಿವೇಕ ಸಂಪದ” ಎಂಬ ಧಾರ್ಮಿಕ ಲೇಬಲ್‌ನ ಅವಿವೇಕತನವನ್ನು-ಅಜ್ಞಾನವನ್ನು ವಿವೇಕ ಎಂಬಂತೆ ಮಾರುತ್ತಿರುವುದು, ಇಂದಿನ ವಿಸ್ಮಯಗಳಲ್ಲಿ ಒಂದು.

‘ಎಲ್ಲಾ ಮೂಢನಂಬಿಕೆಗಳನ್ನು ಧ್ವಂಸಮಾಡಿ. ಗುರುವಾಗಲಿ, ಧರ್ಮ ಗ್ರಂಥಗಳಾಗಲಿ, ದೇವರಾಗಲಿ ಇಲ್ಲ. ಈ ಎಲ್ಲವೂ ನೆಲೆಯಿಲ್ಲದವು. ಅವತಾರ ಪುರುಷರನ್ನು ಪ್ರವಾದಿಗಳನ್ನು ಧ್ವಂಸ ಮಾಡಿ. ನಾನೇ ಪರಮ ಪುರುಷೋತ್ತಮ, ತತ್ವಜ್ಞಾನಿಗಳೆ ಎದ್ದು ನಿಲ್ಲಿ, ಭಯಬೇಡ. ದೇವರನ್ನು ಕುರಿತು ಮೂಢನಂಬಿಕೆಗಳನ್ನು ಕುರಿತು ಮಾತು ಬೇಡ! ಸತ್ಯಕ್ಕೇ ಜಯ ಇದು ನಿಜ, ನಾನು ಅನಂತ. ಎಲ್ಲಾ ಮೂಢನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು’ – ಎಂದು ಅತ್ಯಂತ ನಿಖರವಾಗಿ, ಅಷ್ಟೆ ಸತ್ವಶಾಲಿಯಾಗಿ ಹೇಳಿದ ವಿವೇಕಾನಂದರ ಮಾತುಗಳಿಗೆ ಉಡುಪ ಎಂಬ ಉಪದ್ವ್ಯಾಪಿ ಏನು ಹೇಳುತ್ತಾನೊ?

ಚದ್ಮವೇಷಧಾರಿಯಾಗಿರುವ, ಬ್ರಾಹ್ಮಣಿಕೆಯ ಪಳಿಯುಳಿಕೆಗಳ ಹಾವಳಿ ಇಪ್ಪತ್ತೊಂದನೆಯ ಶತಮಾನದ ಇಂದಿನ ಕಂಪ್ಯೂಟರ ಯುಗದ ಈ ದಿನಗಳಲ್ಲಿಯೂ ವಿಪರೀತವಾಗಿದೆ. ಅನಂತಪದ್ಮನಾಭ ದೇವಾಲಯದ ಒಳಗಡೆಯ ಕೋಣೆಯ ಬಾಗಿಲುಗಳ ಬೀಗ ತೆಗೆದರೆ ಎಂಥೆಂಥವೋ ಅನಾಹುತಗಳು ಸಂಭವಿಸುತ್ತವೆ ಎಂದು ಕೋರ್ಟ್‌ನ ಮುಂದೆಯೂ ರೀಲು ಬಿಡುತ್ತಾರೆ. ಆ ರೀಲಿನಲ್ಲಿ ಸುತ್ತಿಕೊಳ್ಳದವರು ಯಾರಿದ್ದಾರೆ? ಕೋರ್ಟಿನ ಜಡ್ಜುಗಳೆಲ್ಲರೂ ನಮ್ಮ ನಿಮ್ಮಂತೆ ಅಲ್ಲವೆ? ಹೀಗಾಗಿಯೆ ಅನಂತ ಪದ್ಮನಾಭನ ದೇವಾಲಯದ ಒಂದು ಕೋಣೆಯ ಬೀಗ ತೆಗೆಯಲಾಗಲಿಲ್ಲ.

ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಬಹುದೊಡ್ಡ ಕಿರೀಟವನ್ನು ನೀಡಿದರೂ ಬಳ್ಳಾರಿಯ ರೆಡ್ಡಿಗಳಿಗೆ ಜೇಲುವಾಸ ತಪ್ಪಲಿಲ್ಲ ಎಂದು ಯಾರಾದರೂ ಪುರೋಹಿತರನ್ನು ಕೆಣಕಿದರೆ ರೀ ದೇವರಿಗೆ ಕೊಟ್ಟ ಆ ಕಿರೀಟದ ಮೇಲೆ ತಮ್ಮ ಹೆಸರನ್ನು ಬರೆಯಿಸಿದ್ದರಿಂದಲೆ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಯಿತು ಎಂಬ ಮತ್ತೊಂದು ಸುಳ್ಳನ್ನು ಉರುಳಿಸಿ ಬಿಡುತ್ತಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಸಚಿನ್ ತೆಂಡೋಲ್ಕರ ದರ್ಶನ ಮಾಡಿದ್ದರಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸಮನ್ವಂತರ ಬರೆಯಲು ಸಾಧ್ಯವಾಯಿತಂತೆ. ಹಾಗಾದರೆ ಸಚಿನ್ನನ ಸಾಧನೆಗಿಂತಲೂ ಸುಮ್ಮನೆ ಕುಳಿತಲ್ಲಿಯೆ ಕುಳಿತು ಆಶಿರ್ವದಿಸುವ ಸುಬ್ರಮಣ್ಯನೆ ಸರ್ವಶ್ರೇಷ್ಠನೆ? ಎಂಥ ಬಾಲಿಶವಾದ ಮಾತು?

ಅಯ್ಯಯ್ಯಪ್ಪ ಸ್ವಾಮಿಯ ಹುಟ್ಟಿನ ಕತೆಯಂತೂ ಅತ್ಯಂತ ಹೇಸಿಗೆಯಿಂದ ಕೂಡಿದ್ದು. ಆದರೆ ಆ ಹಿನ್ನೆಲೆಯನ್ನು ಮಾಧ್ಯಮಗಳು ಎಲ್ಲೂ ತೋರಿಸದೆ ಅಯ್ಯಪ್ಪ ಸ್ವಾಮಿಯ ಜ್ಯೋತಿಯನ್ನು ಲೈವ್ ತೋರಿಸುತ್ತೇವೆ ಎಂದು ಕೋಟ್ಯಂತರ ಜನರನ್ನು ಮೌಢ್ಯದ ಹೊಂಡಕ್ಕೆ ತಳ್ಳುತ್ತಾರಲ್ಲ?! ಈ ಅಧಿಕಾರವನ್ನು ಇವರಿಗೆ ಯಾರು ಕೊಟ್ಟರು? ಸುಮಾರು 50 ವರ್ಷಗಳ ಹಿಂದೆಯೆ ಕೇರಳದ ವಿಚಾರವಾದಿಗಳು ಹಾಗೂ ದೇಶದ ಹಲವಾರು ಜನ ಪ್ರಾಜ್ಞರು ಅಯ್ಯಪ್ಪಸ್ವಾಮಿಯ ಪೊನ್ನಾಂಬುಲ ಮೇಡು ಬೆಟ್ಟದಲ್ಲಿ ಕಾಣಿಸುವ ಜ್ಯೋತಿ ಕೃತಕವಾದ ಜ್ಯೋತಿ ಎಂದು ಸಾರಿಕೊಂಡು ಬಂದರು. ಆ ಮಾತುಗಳಿಗೆ ಹೆಚ್ಚು ಪ್ರಚಾರವನ್ನು ಈ ಮಾಧ್ಯಮಗಳು ನೀಡಲಿಲ್ಲವೇಕೆ? ಮೌಢ್ಯವನ್ನು ಹೇಳುವುದು, ಪುರಸ್ಕರಿಸುವುದು ಕಾನೂನು ವಿರೋಧಿ ಕೃತ್ಯವೆಂದು ನಮ್ಮ ಸಂವಿಧಾನ ಹೇಳುತ್ತಿದ್ದರೂ ಯಾರೊಬ್ಬರೂ ಮಾಧ್ಯಮಗಳ ಅವಿವೇಕತನವನ್ನು ಪ್ರಶ್ನಿಸಲಿಲ್ಲ?

ಸಂಘಪರಿವಾರಿಗಳು ದೇಶದ ಚುಕ್ಕಾಣಿ ಎಂದು ಹಿಡಿದರೋ ಅಂದಿನಿಂದ ಪುರೋಹಿತರು ನೇರವಾಗಿ ಯಾವ ನಾಚಿಕೆ-ಹೆದರಿಕೆಗಳಿಲ್ಲದೆ ಧೂರ್ತರಂತೆ ಮುನ್ನುಗ್ಗಿ ಹೊರಟಿದ್ದಾರೆ. ಮೇಲ್ಪಂಕ್ತಿಯಲ್ಲಿದ್ದಾರೆ. ರವಿಶಂಕರ ಗುರೂಜಿ, ಪೇಜಾವರ ಮಠದ ಸ್ವಾಮಿಗಳ ಅಟಾಟೋಪಗಳು ಮೇರೆ ಮೀರಿವೆ. ಪ್ರತಿಯೊಂದು ಸಂಗತಿ, ಸಂದರ್ಭದಲ್ಲೂ ತಮ್ಮೊಂದಿಷ್ಟು ಇರಲಿ ಎಂದು ಮೂಗು ತೂರಿಸಿ ಇಡೀ ರಾಷ್ಟ್ರವನ್ನೆ ತಾವು ಹೊತ್ತುಕೊಂಡವರಂತೆ ಪ್ರತಿಕ್ರಿಯಿಸುತ್ತ ನಡೆದಿದ್ದಾರೆ. ನಮ್ಮ ಆಹಾರ ವಿಹಾರಗಳು ಕೂಡ ಇಂತಿಂಥವೆ ಇರಬೇಕು ಎಂದು ಫರ್ಮಾನು ಹೊರಡಿಸಿದರೆ ಅದನ್ನು ಯಾವ ನಾಚಿಕೆಯಿಲ್ಲದೆ ಬಿತ್ತರಿಸುವ ಮಾಧ್ಯಮಗಳಿಂದ ನಮಗೇನು ಲಾಭ ?

ನಮ್ಮ ದೇಶದ ಇಂದಿನ ರಾಜಕೀಯ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಅವರ ಅಡಿದಾವರೆಗಳಿಗೆ ಅಡ್ಡಬಿದ್ದಿವೆಯೇನೋ ಎಂಬಂತೆ ಕಾಣಿಸುತ್ತಿರುವುದು ಸುಳ್ಳೆ? ಇದರ ಕುರಿತು ಯಾವ ಮಾಧ್ಯಮಗಳು ಯಾಕೆ ಚಕಾರ ಎತ್ತುವುದಿಲ್ಲ? ರಾಮಚಂದ್ರಾಪುರ ಮಠದ ರಾಘವೇಶ ಭಾರತಿ ಎಂಬ ಸ್ವಾಮಿ ಸುಖಾಸುಮ್ಮನೆ ಗೋಕರ್ಣ ದೇವರ ದೇವಸ್ಥಾನಕ್ಕೆ ಅಮರಿಕೊಂಡಾಗ, ಉಡುಪಿಯ ಮಠ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಪೇಜಾವರರು ಹೊಡಕೊಂಡಾಗಲೂ ಮಾಧ್ಯಮಗಳು ಸುದ್ದಿಗಳನ್ನು ಮಾಡಲಿಲ್ಲವೇಕೆ? ಬಿಡದಿ ಆಶ್ರಮದ ನಿತ್ಯಾನಂದನ ಲೀಲೆಗಳನ್ನು ಪುಂಖಾನುಪುಂಖವಾಗಿ ಸಾರುವ ದೃಶ್ಯಮಾಧ್ಯಮಗಳು ನಿತ್ಯಾನಂದನನ್ನು ಮೀರಿಸುವ ಸ್ವಾಮಿ-ಸನ್ಯಾಸಿಗಳಿದ್ದರೂ ಅವಕೆ ಏಕೆ ರಿಯಾಯತಿ ನೀಡಿದ್ದಾರೆ? ಮಂತ್ರಾಯಲದ ರಾಘವೇಂದ್ರನನ್ನು ವಾರ ಬಂತು, ಸ್ಮರಣೆಮಾಡು ಎಂಬ ಹಾಡುಗಳನ್ನು ಹಾಡಿ ಹಾಡಿ ಡಾ.ರಾಜ್ ಆತನನ್ನು ಪಾಪುಲರ್ ಮಾಡಿದರು. ಆದರೆ ಅದೆ ರಾಜ್‌ರನ್ನು ಮಂತ್ರಾಲಯದ ಗುಡಿಯ ಪಟಾಲಂ ಗರ್ಭಗುಡಿಯ ಒಳಗೆ ಬಿಟ್ಟುಕೊಳ್ಳಲಿಲ್ಲವೇಕೆ ಎಂದು ಒಮ್ಮೆಯಾದರೂ ಯಾವುದಾದರೂ ಮಾಧ್ಯಮ ಕೂಗಿ ಹೇಳಿದೆಯೆ?

ವಾಸ್ತುವಿನ ವಿಷಯವಾಗಿಯಂತೂ ವಿವರಿಸದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳೆ ಇಲ್ಲವೆಂದರು ನಡೆಯುತ್ತದೆ. ಈ ಹಿಂದೆ ಅಷ್ಟಾಗಿ ಗಮನಿಸದೆ ತಮ್ಮ ವಾಸ್ತವ ಸ್ಥಿತಿಗೆ ಅನುಗುಣವಾಗಿ ಮನೆಗಳನ್ನು-ಅಂಗಡಿಗಳನ್ನು ಕಟ್ಟಿಕೊಳ್ಳುತ್ತಿದ್ದವರು, ಇದೀಗ ಪ್ರತಿಯೊಂದಕ್ಕೂ ವಾಸ್ತುವಿಗೆ ತಗಲುಬಿದ್ದು ಬಿಟ್ಟಿದ್ದಾರೆ. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದ ಅತ್ತತ್ತ ಬ್ರಹ್ಮಾಂಡದಿಂದ ಅತ್ತತ್ತ ಆವರಿಸಿಕೊಂಡಿರುವ ಶಿವ ಇರುವಿಕೆ ಯಾವುದೋ ಒಂದು ಮೂಲೆಯಲ್ಲಿ ಇಲ್ಲ ಎಂದು ಯಾವನೋ ಒಬ್ಬ ಫಟಿಂಗ ಹೇಳುತ್ತಾನೆಂದರೆ ನಾವು ಕೇಳುತ್ತ ಅದನ್ನು ಅನುಸರಿಸುತ್ತಿದ್ದೇವೆಂದರೆ ನಮ್ಮನ್ನು ಕುರಿಗಳು ಎನ್ನದೆ ಮತ್ತೆ ಯಾವ ಹೆಸರಿನಿಂದ ಕರೆಯಬೇಕು?

ಸಮಾಜದಲ್ಲಿ ರಾಜಕಾರಣಿಗಳನ್ನು ನಾವು ಬಹುದೊಡ್ಡವರು ಎಂದು ತಿಳಿದುಕೊಂಡಿರುವುದೆ ಮೊದಲ ತಪ್ಪು. ರಾಜಕೀಯದ ಚದುರಂಗದಲ್ಲಿ ಪಳಗಿರುವ ಪುಢಾರಿಗಳು ಬೌದ್ಧಿಕವಾಗಿ ಬೆಳೆದಿರುವುದಿಲ್ಲ. ಅತಿ ಕಡಿಮೆ ಅವಧಿಯಲ್ಲಿ ಮೋಸ, ದಗಲ್ಬಾಜಿತನ ಮಾಡಿ ದುಡ್ಡು ಗಳಿಸಿದಾಗ ಸಹಜವಾಗಿ ಇವರಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ಈ ಭಯ ನಿವಾರಣೆ ಮಾಡಿ ದೇವರ ಕರುಣೆ ಒದಗಿಸುವುದಾಗಿ ಪೂಜಾರಿ ಪುರೋಹಿತರು ಹೇಳಿದಾಕ್ಷಣ ಇವರು ಅವರ ಬುಟ್ಟಿಗೆ ಬಿದ್ದು ಮಾಡಬಾರದ ಏನೆಲ್ಲವನ್ನು ಯಾವ ನಾಚಿಕೆ ಇಲ್ಲದೆ ಮಾಡತೊಡಗಿದ್ದಾರೆ. ಆಂಧ್ರದ, ಕೇರಳದ, ಜಮ್ಮು-ಕಾಶ್ಮೀರದ ದೇವರುಗಳಿಗೆ ಇವರೆಲ್ಲ ಎಡತಾಕುವುದು ಪೂಜಾರಿಯ ಅಪ್ಪಣೆಯ ಮೇರೆಗೆ. ಅವರಿಂದ ಸಂಕಲ್ಪ ಪೂಜೆ ಹೋಮ ಹವನಗಳನ್ನು ಮಾಡಿಸಿ ಬಿಟ್ಟರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ನಂಬಿಕೊಂಡು ಓಡಾಡುತ್ತಾರೆ. ಇಂಥ ಅವಿವೇಕಿಗಳ ಬಾಲಿಶ ನಡಾವಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತವೆ. ‘ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ?’ ಎಂಬಂತೆ ನಾವೆಲ್ಲ ಅವನ್ನು ಅನುಸರಿಸುತ್ತೇವೆ.

‘ಬ್ರಾಹ್ಮಣ ಬನಿಯಾಗಳಿಬ್ಬರ ನೃಪರ ಕೌಲು ಕೂಟವು ಇಂಡಿಯಾದ ಇತಿಹಾಸದ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ. ಬನಿಯಾ ಹೊಟ್ಟೆಯನ್ನು ಆಳುತ್ತಾನೆ. ಬ್ರಾಹ್ಮಣ ದೇಶದ ಮನಸ್ಸನ್ನು ಆಳುತ್ತಾನೆ. ಈ ರಾಷ್ಟ್ರ ತನ್ನನ್ನು ಬಲಪಡಿಸಿಕೊಳ್ಳಬೇಕಿದ್ದರೆ ಅದು ಬ್ರಾಹ್ಮಣ ಬನಿಯಾ ಗುತ್ತೇದಾರಿಕೆಯನ್ನು ನಾಶ ಮಾಡುವ ಮೂಲಕವೆ ಆಗಬೇಕು’ ಎಂಬ ಡಾ.ರಾಮಮನೋಹರ ಲೋಹಿಯಾರ ನಿಷ್ಠುರವಾದ ಮಾತುಗಳ ಹಿಂದಿನ ಆಂತರ್ಯವನ್ನು ಅರಿತವರಿಗೆ ಮಾತ್ರ ಸತ್ಯ ಗೋಚರವಾಗುತ್ತದೆ.

ಯಾವುದೇ ಒಂದು ಗ್ರಂಥವಾಗಲಿ, ಇಲ್ಲಾ ವ್ಯಕ್ತಿಯಾಗಲೀ ಪರಮ ಪೂಜ್ಯ ಎಂದು ನಂಬುವುದು ಸಹಜತೆ ವಿರೋದವಾದುದು. ಅದು ಅಂಧ ಆಚರಣೆಗೆ ಅವಕಾಶ ಮಾಡಿಕೊಡುತ್ತದೆ. ಮೌಢ್ಯಕ್ಕೆ ಮೂಲವಾಗುತ್ತದೆ. ಮೂಢನಂಬಿಕೆ ಮಾನವನ ದೊಡ್ಡ ಶತ್ರು. ಎಂದು ಅರಿತುಕೊಂಡರೆ ಮಾತ್ರ ಮಾಧ್ಯಮಗಳ ಮುಖವಾಡಗಳು ಬಿಚ್ಚಿಕೊಳ್ಳುತ್ತವೆ.

ಇಲ್ಲದ ದೇವರುಗಳ ಸುತ್ತ ಮುತ್ತ

-ವಿಶ್ವಾರಾಧ್ಯ ಸತ್ಯಂಪೇಟೆ

ದೇವರುಗಳ ಬಗೆಗೆ ನನಗೆ ಆರಂಭದಿಂದಲೂ ಅಷ್ಟಕಷ್ಟೆ. ಇದಕ್ಕೆಲ್ಲ ಮುಖ್ಯವಾಗಿ ನನ್ನ ಮನೆಯೊಳಗೆ ನಡೆಯುತ್ತಿದ್ದ ಚರ್ಚೆಗಳು, ಪುಸ್ತಕಗಳ ಓದು ಕೂಡ ಕಾರಣವಾಗಿರಬಹುದು. ಅಂದಂತೆ ನನಗೆ ಆಗಾಗ ಅವರಿವರ ಮೈಮೇಲೆ ಬರುತ್ತಿದ್ದ ದೇವರುಗಳು, ಹೆಜ್ಜೆಗೂ ಸಿಕ್ಕುವ ದೇವರುಗಳು, ಎಳ್ಳು ನೀರು ಕಾಣದೆ ಬೇಕಾಬಿಟ್ಟಿಯಾಗಿ ಅಲ್ಲಲ್ಲಿ ಬಿದ್ದಿರುವ ದೇವರುಗಳನ್ನು ನೋಡಿದಾಗಲೆಲ್ಲ ಹಳಹಳಿಯಾಗುತ್ತಿತ್ತು. ತಲೆಯ ಮೇಲೆ ಗುಡಿಯನ್ನು ಹೊತ್ತುಕೊಂಡು ಬಂದು ಅವರಿವರ ಅಂಗಳದಲ್ಲಿ ದೇವರನ್ನು ನಿಲ್ಲಿಸಿ ಮೈಮೇಲೆ ಬಾಸುಂಡೆ ಬರುವಂತೆ ಹೊಡಕೊಳ್ಳುತ್ತಿದ್ದ ಪೋತರಾಜರ ಬಾರುಕೋಲಿನ ‘ಚಟಲ್’ ‘ಚಟಲ್’ ಶಬ್ಧ ಕಿವಿಗೆ ಬೀಳುತ್ತಿತ್ತು. ಆಗ ಪೋತರಾಜರ ಮೈಮೇಲೆ ಬಾಸುಂಡೆ ಅಥವಾ ರಕ್ತ ಚಿಲ್ಲನೆ ಚಿಮ್ಮಿನಿಲ್ಲುತ್ತಿತ್ತು. ರಕ್ತ ಬರುತ್ತಿರುವಂತೆ ಅಂಗಳ ತುಂಬೆಲ್ಲ ಓಡಾಡುತ್ತ ಪೋತರಾಜ ಏನೇನೋ ಹೇಳುತ್ತಿದ್ದ. ಆತ ಕಣ್ಣು ಕೆಂಪಗೆ ಮಾಡಿಕೊಂಡು ನಾಲಿಗೆ ಹೊರಚಾಚಿ ವಿಕಾರವಾಗಿ ಅರಚುತ್ತಿದ್ದ. ಇದನ್ನು ನಾನು ನೋಡಿ ಭಯದಿಂದ ನಡುಗುತ್ತಿದ್ದೆ. ಅಂಗೈಯನ್ನು ಮುಂದೆ ಚಾಚಿ ದೇವರಿಗಾಗಿ ದಾನವನ್ನು ಬೇಡುತ್ತಿದ್ದ. ಆತನ ಹೆಂಡತಿ ಮನೆಮನೆಗೆ ಹೋಗಿ ಮರದ ಮೂಲಕ ಕಾಳು ಪದಾರ್ಥಗಳನ್ನು ದಾನವಾಗಿ ಪಡೆಯುವುದು ನೋಡಿದಾಗಲೆಲ್ಲ. ದೇವರಂತ ದೇವರು ಭಿಕ್ಷೆ ಬೇಡುತ್ತಾನೆಯೆ? ಎಂದನ್ನಿಸುತ್ತಿತ್ತು.

ದಿನ ನಿತ್ಯದ ಮಲವಿಸರ್ಜನೆಗೆ ನಾನು ಬೇಕಂತಲೆ ಊರಿನಿಂದ ಒಂದು ಕಿ.ಮಿ.ದೂರ ಇರುವ ಬಯಲಿಗೆ ಚರಿಗೆ ಹಿಡಿದುಕೊಂಡು ಹೋಗುತ್ತಿದ್ದೆ. ಇದು ನಿರಂತರವೂ ನಮ್ಮ ಊರಿನ ಜನರೆಲ್ಲ ರೂಢಿಸಿಕೊಂಡು ಬಂದಿದ್ದ ಸಂಗತಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಮಧ್ಯಾಹ್ನದಲ್ಲಿ ಯಾರೋ ಒಬ್ಬರು ‘ಕೆರೆಯ ಕೆಳಗಡೆಯ ಗದ್ದೆಗಳಲ್ಲಿ ಮಣ್ಣು ಅಗೆಯುವಾಗ ಚಾಮುಂಡಿಯ ವಿಗ್ರಹ ಕಾಣಿಸಿಕೊಂಡಿದೆ’ ಎಂದು ಹೇಳುತ್ತ ನಡೆದಿದ್ದರು.

ಕುತೂಹಲ ತಡೆಯದ ನಾನು ಆ ಜಾಗಕ್ಕೆ ಹೋಗುವಷ್ಟರಲ್ಲಿ ಜನ ಜಾತ್ರೆಯಲ್ಲಿ ನೆರೆದಂತೆ ನೆರೆದು ಬಿಟ್ಟಿದ್ದರು. ಬಹಳ ವರ್ಷಗಳಿಂದ ಕಾಣಿಸಿಕೊಂಡ ‘ಚಾಮುಂಡಿ’ ನೆಲದಲ್ಲಿ ಸಿಕ್ಕಿರುವುದು ಊರಿನ ಎಲ್ಲರಿಗೂ ಒಳ್ಳೆಯದಾಗುವ ಲಕ್ಷಣ ಎಂದೆಲ್ಲ ಹೇಳುತ್ತಿದ್ದರು. ಅದಾಗಲೆ ಸಿಕ್ಕವಿಗ್ರಹಕ್ಕೆ ಕುಂಕುಮ, ಅರಿಶಿಣದ ಭಂಡಾರ ಚೆಲ್ಲಿದ್ದರು. ಕಾಯಿ, ಕರ್ಪೂರ ಊದುಬತ್ತಿ ಬೆಳಗಿದ್ದರು. ನಾಳೆ ಮಧ್ಯಾಹ್ನದ ಹೊತ್ತು ದೇವಿ ಚಾಮುಂಡಿಗೆ ವಿಶೇಷ ಪೂಜೆ ಇರುವುದಾಗಿ ಒಂದು ಕೋಣವನ್ನು ಬಲಿ ಕೊಡಬೇಕೆಂತಲೂ ಹೇಳುತ್ತಿದ್ದರು.

ಆದರೆ ಹೀಗೆ ಕೋಣವನ್ನು ಬಲಿ ಕೊಡುವ ಸಂದರ್ಭದಲ್ಲಿ ಯಾರೂ ಪರ ಊರಿನವರು ಅಲ್ಲಿ ಇರಬಾರದೆಂದು ಹೇಳಿದರು. ಒಂದು ವೇಳೆ ಅಂಥವರಿಗೆನಾದರೂ ಕೋಣ ಬಲಿ ಕೊಡುವಾಗ ಅದರ ರಕ್ತ ಹತ್ತಿದರೆ ಅವರನ್ನೆ ಬಲಿ ಕೊಡುವುದಾಗಿ ಹೇಳಿದ್ದರು. ಸತ್ಯಂಪೇಟೆಯಿಂದ ಶಹಾಪುರಕ್ಕೆ ವಲಸೆ ಬಂದಿರುವ ನಾನು ಮರುದಿನ ಅದರ ಸುತ್ತ ಮುತ್ತ ಕೂಡ ಸುಳಿಯದೆ ಬಹು ದೂರ ಉಳಿದು ಬಿಟ್ಟಿದ್ದೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ನಾನು ನಿತ್ಯವೂ ಕಕ್ಕಸಿಗೆ ಹೋಗಿ ಕೂಡುತ್ತಿದ್ದ ಬಯಲಿನ ಜಾಗ ಆ ಚಾಮುಂಡಿ ದೇವಿ ವಾಸವಾಗಿದ್ದ ಸ್ಥಾನವೇ ಆಗಿತ್ತು!

ದೇವರುಗಳಲ್ಲಿ ನಾನಾ ಬಗೆಯವು. ಕೆಲವು ಪಕ್ಕಾ ಸಸ್ಯಹಾರಿಯಾದರೆ ಇನ್ನು ಕೆಲವು ಮಾಂಸಾಹಾರಿಗಳು. ಕುರಿಕೋಳಿ ಬಲಿ ಕೆಲವಕ್ಕೆ ಬೇಕಾದರೆ ಕೋಣಗಳು ಕೆಲವಕ್ಕೆ ಆಹಾರ. ಮತ್ತೆ ಹಲವು ದೇವರಿಗೆ ಸಕ್ಕರೆ, ದೀಪ, ಧೂಪ ಇವಿಷ್ಟಿದ್ದರೆ ನಮ್ಮ ಇಷ್ಟಾರ್ಥವನ್ನು ಕೊಡಮಾಡಬಲ್ಲವು. ನಾನೀಗ ವಾಸಿಸುವ ಶಹಾಪುರದ ಕುಂಬಾರ ಓಣಿಯಲ್ಲಿ ನನ್ನ ತಂದೆ ಒಂದು ಹಳೆಯ ಮನೆಯನ್ನು ಖರೀದಿಸಿದ್ದರು. ಅದು ಸಂಪೂರ್ಣ ಸುಸಜ್ಜಿತ ಕಟ್ಟಡವಾಗಿರಲಿಲ್ಲ. ಗುಂಡು ಜಂತಿಯ, ಮಣ್ಣಿನ ಮನೆಯಾಗಿತ್ತು. ಎಡಕ್ಕಾಗಲಿ -ಬಲಕ್ಕಾಗಲಿ ಯಾವುದೆ ಕಿಟಕಿಗಳಿಲ್ಲದ ಹೊರಗಿನ ಗಾಳಿ ಬೆಳಕು ಇಲ್ಲದ ಉದ್ದಕ್ಕೆ ರೈಲುಡಬ್ಬಿಗಳಂತೆ ಮೂರು ರೂಮಿನ ಕಟ್ಟಡವಾಗಿತ್ತು. ಇಂಥ ರೂಮುಗಳ ರಿಪೇರಿ ಕೆಲಸಕ್ಕೆ ನನ್ನ ತಂದೆ ಗೌಂಡಿಗಳ ಜೊತೆಗೆ ನನ್ನನ್ನು ಅಲ್ಲಿ ಕುಳ್ಳಿರಿಸಿ ಹೋಗಿದ್ದರು. ಈ ಮನೆಯ ಮುಂದೆ ಕಾಲು ದಾರಿ ಇದ್ದುದ್ದರಿಂದ ಬಹಳಷ್ಟು ಜನ ಅಲ್ಲಿ ತಿರುಗಾಡುತ್ತಿದ್ದರು. ಕೂಸುಗಳನ್ನು ಮಗ್ಗುಲಲ್ಲಿ ಹೊತ್ತುಕೊಂಡ ತಾಯಂದಿರಂತೂ ಇಲ್ಲಿ ಹೇರಳವಾಗಿಯೆ ಹೋಗಿ ಬರುತ್ತಿದ್ದರು. ಇದನ್ನೆಲ್ಲ ನೋಡುತ್ತ ನಾನು ಮನೆಯ ಒಳಹೊರಗೆ ತಿರುಗಾಡುತ್ತಿದ್ದಾಗ ಒಬ್ಬ ತಾಯಿ ಬಂದು ‘ಇಗಾ ಎಪ್ಪಾ, ನಿಮ್ಮಮನ್ಯಾಗ ಏಳುಮಕ್ಕಳ ತಾಯಮ್ಮ ಅದಾಳ. ಆಕಿಗಿ ಸಕ್ಕರೆ ಹಾಕಿದೀಪಾ ಮುಡಸು. ನಮ್ಮಮನ್ಯಾಗ ಚುಕ್ಕೋಳು ಅಳಕತ್ಯಾವ’ – ಎಂದು ಒಂದೇ ಉಸುರಿನಲ್ಲಿ ಹೇಳುತ್ತ ನನ್ನ ಅಪ್ಪಣೆಗೂ ಕಾಯದೆ ಸಣ್ಣ ಸಕ್ಕರೆ ಚೀಟು, ಚಿಟಿಕೆ ದೀಪದ ಎಣ್ಣೆ, ಬತ್ತಿ ಕೊಟ್ಟು ಹೋಗಿಯೆಬಿಟ್ಟಳು.

ಇದನ್ನು ತಕ್ಕೊಂಡು ನಾನೇನು ಮಾಡಬೇಕು? ಗೊತ್ತಾಗಲಿಲ್ಲ. ಮನೆ ಒಳಕ್ಕೆ ದೀಪದ ಎಣ್ಣೆಯ ಗಿಂಡಿ, ಊದು ಬತ್ತಿ , ಸಕ್ಕರೆ ಚೀಟು ಹಿಡಕೊಂಡು ಒಳಹೋದೆ. ನನ್ನನ್ನು ನೋಡಿ ಗೌಂಡಿ ನಾಗಪ್ಪ ‘ಏನ್ರಿ…. ದೀಪಾ ಯಾರಿಗೆ ಮುಡಸಬೇಕು? ಎಲ್ಲಿ ಮುಡಸಬೇಕು?’ ಎಂದು ಕೇಳಿದ. ನನಗೂ ಇದೆಲ್ಲ ಹೊಸದಾದ್ದರಿಂದ ಆತನಿಗೆ: ಯಾರೋ ಒಬ್ಬ ಹೆಣ್ಣು ಮಗಳು ಬಂದು ಇದೆಲ್ಲ ಕೊಟ್ಟು ಏಳು ಮಕ್ಕಳ ತಾಯಮ್ಮಳ ಮುಂದೆ ದೀಪ ಮುಡಿಸರೀ ಎಂದು ಹೇಳಿಹೋದದ್ದಾಗಿ ಹೇಳಿದೆ. ಇಬ್ಬರೂ ಕೂಡಿ ಕತ್ತಲಲ್ಲಿ ದೀಪಹಚ್ಚಿ ಆ ಏಳುಮಕ್ಕಳ ತಾಯಿಯನ್ನು ಹುಡುಕ ತೊಡಗಿದೆವು. ಕೊನೆಯ ರೂಮಿನ, ನಟ್ಟನಡುವಿನ ಗೋಡೆಯ ಒಂದು ಮಾಡದಲ್ಲಿ ಆಕೆ ವಾಸವಾಗಿದ್ದ ಲಕ್ಷಣಗಳು ಗೋಚರಿಸ ತೊಡಗಿದವು. ಏಕೆಂದರೆ ಆ ಮಾಡ ಆಗಲೇ ದೀಪ ಹಚ್ಚಿಹಚ್ಚಿ ಕರ್ರಗಾಗಿತ್ತು. ಎಣ್ಣೆ ಚೆಲ್ಲಿಚೆಲ್ಲಿ ಮಾಡದಲ್ಲಿ ಒಂಥರಾ ಮೇಣದಂತಹ ಜಿಗುಟು ಹತ್ತಿಕೊಂಡಿತ್ತು. ಇದನ್ನು ಗುರುತಿಸಿದ ಗೌಂಡಿಯೆ ‘ಇಲ್ಯಾದ್ರಿ….. ಧಣಿ. ದೀಪ ಮುಡಸ್ರೀಮತ್ತ. ಖರೆವಂದ್ರ ಏಳುಮಕ್ಕಳ ತಾಯಿ ಬಲು ಖೋಡಿ ಹೆಣ್ಮಗಳು. ಚುಕ್ಕೋರು ಚುಣಗರು ಯಾರಾದರೂ ತನ್ನ ಮುಂದಹಾದು ಹೋದ್ರ ಅವ್ರಿಗಿ ಅಳಸಲಾರದೆ ಬಿಡಂಗಿಲ್ಲ. ಯಾವಾಗ ಆ ಮನೆಯವ್ರೂ ಸಕ್ಕರಿ ಕೊಟ್ಟು ದೀಪ ಹಚ್ಚತಾರೋ ಆವಾಗ ಮಾತ್ರ ಆಕಿ ಸುಮ್ನ ಆಗಾಕಿ’ ಎಂದು ಹೇಳಿದಾಗ, ಈಕೆ ಮಹಾಗಾಟಿ ಹೆಣ್ಣುಮಗಳಿರಬೇಕು ಎಂದುಕೊಂಡೆ.

ನನ್ನ ತಾಯಿ ಸ್ವಲ್ಪ ಜಾಸ್ತಿಯೆ ಸೆನ್ಸಿಟಿವ್ ಇರುವಾಕೆ. ದೇವರು ಎಂಬ ಪದವೆ ಆಕೆಗೆ ಅಪ್ಯಾಯಮಾನ. ಗೌರವ, ಪ್ರೀತಿ, ಭಕ್ತಿ. ಇದೆಲ್ಲಕ್ಕೂ ನನ್ನ ಮಕ್ಕಳಿಗೆ ಮರುಗಳಿಗೆ ಒಳ್ಳೆಯದಾಗಲಿ, ಯಾವುದೆ ತೊಂದರೆ ಬರದಿರಲಿ ಎಂಬುದೆ ಆಕೆಯ ಹೆಬ್ಬಯಕೆ. ಬಹುಶಃ ಇಂಥ ಮನಸ್ಥಿತಿ ಇರುವ ನನ್ನ ಅವ್ವನ ಕೈಗೆ ಈ ಏಳು ಮಕ್ಕಳ ತಾಯಮ್ಮ ಸಿಕ್ಕರೆ ಏನೋನೋ ಆವಾಂತರಗಳು ಘಟಿಸಬಹುದು ಎಂದೆನಿಸಿತು. ನನ್ನ ತಾಯಿ ನಿತ್ಯ ದೀಪ ಮುಡಿಸುತ್ತ, ಮುಡಿಸುತ್ತ ದೇವರನ್ನೆ ತನ್ನ ಮೈಮೇಲೆ ಆಹ್ವಾನಿಸಿ ಕೊಂಡರೆ? ಎಂದು ಕ್ಷಣ ಯೋಚಿಸಿದೆ. ದಿಗಿಲಾಯಿತು. ಆಗ ತಕ್ಷಣವೆ ನಮ್ಮ ಆಯಿ ನೆನಪಾದಳು. ಯಾವಾಗಲೋ ಒಂದು ಸಲ ಇದೆ ಏಳುಮಕ್ಕಳ ತಾಯಮ್ಮನ ವಿಷಯ ಬಂದಾಗ ಯಾರಿಗೋ ಹೇಳುತ್ತಿದ್ದಳು. ‘ಆಕಿ ಏಳು ಮಕ್ಕಳ ಹಡದಿರಬೇಕು. ನಾನು ಆಕೀಗಿಂತಲೂ ಎರಡು ಹೆಚ್ಚು ಮಕ್ಕಳ್ನಹಡದೀನಿ. ಯಾವ್ದು ಹೇಳಿತನ, ಉನೇಕಿ. ಕೆಲಸಕ್ಕಬರಲಾರದ್ದ. ದುಡುದು ಉಣ್ಣೋದು ಬಿಟ್ಟು ಇಂಥದ್ದಕ್ಕೆಲ ಗಂಟಬಿದ್ದಾವ’ ಎಂಬ ಮಾತುಗಳು ನೆನಪಿಗೆ ಬಂದವು. ಒಡನೆಯೆ ಈ ಏಳು ಮಕ್ಕಳ ತಾಯಮ್ಮನ ಮಾಡವನ್ನು ಮುಚ್ಚುವಂತೆನಾಗಪ್ಪ ಗೌಂಡಿಗೆ ಹೇಳಿದೆ. ಆತ ”ಏ ಎಪ್ಪಾ ಎಂಥ ಮಾತ್ಹೇಳ್ತೋ ಧಣಿ. ದೇವರ್ನ ಮುಚ್ಚು ಅಂತೇಲ್ಲಪ್ಪೋ! ನೀ ಬೇಕಾದ್ದಹೇಳ ನಾಮಾಡ್ತೀನಿ. ಈ ಕೆಲಸ ಮಾತ್ರನನ್ನಿಂದ ಸುತಾರಾಂ ಆಗೋದಿಲ್ಲ” ಎಂದು ಕೈ ಜಾಡಿಸಿ ಗೋಣು ಅಲ್ಲಾಡಿಸಿಬಿಟ್ಟ.

ಆಗ ಅನಿವಾರ್ಯವಾಗಿ ನಾನೇ ಆತನ ಹಳೆಯ ಜೋಡುಗಳನ್ನು ಆ ಮಾಡದಲ್ಲಿಟ್ಟು ಕಲ್ಲು ಸಿಮೆಂಟ್ನಿಂದ ಮುಚ್ಚಿಬಿಟ್ಟೆ! ಏಳು ಮಕ್ಕಳ ತಾಯಮ್ಮ ನಮ್ಮ ಮನೆಯ ಮಾಡದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಮಟ್ಟಸವಾಗಿ ಕುತುಗೊಂಡು ಸುಮಾರು ವರ್ಷಗಳೆ ಉರುಳಿ ಹೋಗಿವೆ. ಇದೆಲ್ಲ ಗೊತ್ತಿಲ್ಲದ ಕೆಲವು ಹೆಣ್ಣುಮಕ್ಕಳು ಆಗಾಗ ನಮ್ಮ ಮನಿಗಿ ಬಂದು ಸಕ್ಕರಿ ಚೀಟು, ಎಣ್ಣೆಯ ಗಿಂಡಿಹಿಡಕೊಂಡು ಏಳುಮಕ್ಕಳ ತಾಯಮ್ಮನನ್ನು ಹುಡುಕುತ್ತ ಬಂದರೆ ”ಒಂಭತ್ತು ಮಕ್ಳನ್ನ ಹಡದ ನಮ್ ಆಯಿ ಈ ಮನಿಗೆ ಬಂದಮ್ಯಾಲ ಏಳುಮಕ್ಕಳ ತಾಯಮ್ಮ ನಮ್ಮನಿಯಿಂದ ಹೊಂಟಹೋಗ್ಯಾಳ!” ಎಂದು ಸಲೀಸಾಗಿ ಹೇಳುತ್ತಿದ್ದೆ. ಆದರೆ ನನ್ನೆದುರಿಗೆ ಬಂದು ನಿಂತೋರೆಲ್ಲ ಕೇಳಬಾರದ್ದನ್ನ ಏನೋ ಕೇಳಿವಿ ಎಂಬಂತೆ ಕ್ಷಣ ಸ್ಥಂಭಿಬೂತರಾಗಿ ನಿಂತುಬಿಡುತ್ತಿದ್ದರು.ನಾನು ಚಿಕ್ಕವನಿದ್ದಾಗ ಸವಾರಿ ಬಂಡಿ ಕಟ್ಟಿಕೊಂಡು ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಗೆ ಹೋಗುತ್ತಿದ್ದೆವು. ಕೃಷ್ಣಾಪುರ, ಖಾನಾಪುರ ಊರುಗಳನ್ನು ಹಾಯ್ದು ಅಬ್ಬೆ ತುಮಕೂರಿಗೆ ಹೋಗಬೇಕಾಗುತ್ತಿತ್ತು. ದಾರಿಯಲ್ಲಿ ಹೋಗುವಾಗ ಟೊಂಕಮಟ ಎತ್ತರದ ಕಲ್ಲುಗಳಿಂದ ಕೂಡಿದ ಒಂದು ದಿಬ್ಬ ಬರುತ್ತದೆ. ಆ ದಿಬ್ಬದ ಸುತ್ತಲೂ ಅಮರಿ ಗಿಡದ ತೊಪ್ಪಲು ಬಿದ್ದಿರುತ್ತಿತ್ತು. ಆ ದಾರಿಯಲ್ಲಿ ಹೋಗುವವರು ಬರುವವರು ಒಂದೆ ಸಮ ಕ್ಯಾಕರಿಸಿ ಉಗುಳುತ್ತ, ಒಂದೆರಡು ಕಲ್ಲುಹೊಡೆದು, ಅಮರಿ ತಪ್ಪಲ ಅದರ ಮ್ಯಾಲೆ ಹಾಕಿ ಬರುತ್ತಿದ್ದರು. ಇದೆಲ್ಲ ಏನು? ಎಂದು ನಾನು ಸಹಜವಾಗಿ ಕೇಳಿದ್ದಕ್ಕೆ ಅಂದು ನನ್ನ ಜೊತೆಗೆ ಇದ್ದನಮ್ಮಮುತ್ಯಾ ‘ಇ(ವಿ)ಕಾರಗೇಡಿಗಳು. ಯಾವ್ದೂ ಗೊತ್ತಿಲ್ಲ ಇವಕ್ಕ. ಇದು ಉಗುಳು ಮಾರಿ ದೇವರಂತ! ಅದಕ್ಕ ಕ್ಯಾಕರಿಸಿ ಉಗುಳಿ ಮಂದೆಹೋಗ್ತಾರಂತ!’ ಎಂದು ಆತ ಸಲೀಸಾಗಿ ಹೇಳಿಬಿಟ್ಟ. ಆದರೆ ಉಗುಳಿಸಿಕೊಳ್ಳುವ ದೇವರೂನಮ್ಮಲ್ಲಿ ಇದ್ದಾನೆಯೆ? ಎಂಬುದಕ್ಕೆ ನನಗಿನ್ನೂ ಸ್ಷಷ್ಟ ಉತ್ತರ ಸಿಕ್ಕಿಲ್ಲ.

ಸತ್ಯಂ ಪೇಟೆಯ ನಮ್ಮಮನೆಯ ಹಿಂದುಗಡೆಯಿಂದ ನಮ್ಮ ತೋಟಕ್ಕೆ ಹೋಗುವ ಮಾರ್ಗದಲ್ಲೆಲ್ಲ ಮೂಟಿಗಟ್ಟಲೆ ಅಕ್ಕಿ ಅನಾಜನ್ನು ಅಲ್ಲಲ್ಲಿ ಇಟ್ಟಿದ್ದರು. ಕೆಲವು ಕಡೆ ಈಚಲ ಚಾಪೆಗಳು, ಈಚಲ ಪುಟ್ಟಿ, ಮೊರ ಎಲ್ಲವನ್ನು ಬಿಟ್ಟುಹೋಗಿದ್ದರು. ಯಾರು ಕೇಳದೆ ಅನಾಥವಾಗಿದ್ದರೂ ಇವನ್ನು ತೆಗೆದುಕೊಳ್ಳುವುದಿರಲಿ, ಅದರ ಕಡೆ ಯಾರೂ ತಲೆ ಎತ್ತಿ ಕೂಡ ನೋಡುತ್ತಿರಲಿಲ್ಲ. ಏಕೆಂದರೆ ಮರಗಮ್ಮ ದೇವರ ಹೆಸರಿನ ಮೇಲೆ ಇವೆಲ್ಲ ಮಾಡಿ ಇಳಿಸಿ ಇಟ್ಟುಹೋಗಿದ್ದರಂತೆ. ಇವನ್ನು ಮುಟ್ಟಿದರೆ ಅಥವಾ ಉಪಯೋಗಿಸಿದರೆ ಅವರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ನಂಬಿಕೆ ಇರುವುದರಿಂದ ಅದನ್ನು ಯಾರೂ ಬಳಸಿಕೊಳ್ಳುತ್ತಿರಲಿಲ್ಲ. ನಮ್ಮಮನೆಗೆ ಆಗಾಗ ಬರುತ್ತಿದ್ದ ಹಣಮಂತನಿಗೆ ಇವನ್ನೆಲ್ಲ ಮನೆಗೆ ಒಯ್ದು ಉಪಯೋಗಿಸು ಎಂದು ನನ್ನ ತಂದೆ ಹೇಳಿದಾಗ ಆತ ಭಯದಿಂದ ಗಡಗಡ ನಡುಗಿದ. ನನಗೆ ಇದೆಲ್ಲ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನನ್ನ ತಂದೆ ಮಾತ್ರ ಅಲ್ಲಲ್ಲಿ ದಾರಿಗುಂಟ ಇಟ್ಟಿದ್ದ ಅಕ್ಕಿಯ ಅನಾಜನ್ನು, ಈಚಲ ಚಾಪೆ, ಪುಟ್ಟಿ, ಮೊರಗಳನ್ನು ನಮ್ಮ ಮನೆಗೆ ತರಿಸಿದ್ದರು. ಸುಮಾರು ಮೂರ್ನಾಲ್ಕು ವರ್ಷಳಾದರೂ ನಾವೆಲ್ಲ ನಮ್ಮ ಮನೆಯಲ್ಲಿ ಈ ಈಚಲು ಚಾಪೆಗಳನ್ನೆಹಾಸಿ ಮಲಗುತ್ತಿದ್ದೇವು. ಅಕ್ಕಿಯನ್ನು ಬಳಸಿಕೊಂಡು ಅನ್ನಮಾಡಿ ಊಟಮಾಡಿದ್ದೇವು. ಈಚಲ ಪುಟ್ಟಿಗಳಂತೂ ಹೆಂಡಿ ಕಸವನ್ನು ಹೊತ್ತು ಹಾಕಲು ಉಪಯೋಗಿಸಿಕೊಂಡಿದ್ದೇವು.

ದೇವರುಗಳು ನಮ್ಮಂತೆ ಬಟ್ಟೆ ಉಟ್ಟುಕೊಳ್ಳುತ್ತವೆ. ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ ಅದನ್ನು ಅವು ಸೇವಿಸುತ್ತವೆ. ನಮ್ಮಂತೆಯೆ ಕೆಲವು ದೇವರು ಉಗ್ರ. ಕೆಲವು ಸಂಭಾವಿತ. ಜೊತೆಗೆ ನಮ್ಮ ಐಸತ್ತಿಗೆ (ನಮ್ಮನಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ) ತಕ್ಕಂತೆ ತಾಮ್ರದ, ಕಂಚಿನ, ಹಿತ್ತಾಳಿಯ, ಕೆಲವರಲ್ಲಿ ಬಂಗಾರದ ದೇವರೂ ಉಂಟು. ಕೆಲವು ದೇವರ ಮುಂದೆ ಶಂಖ ಊದಬೇಕು. ತಾಳ ಮದ್ದಳೆ ಬಾರಿಸಬೇಕು. ಜಾಗಟೆ ಠಣಗುಡುತ್ತಿರಬೇಕು. ಸತತ ಭಜನೆಯ ತಾಳಗಳು ಕೆಲವಕ್ಕೆ ಬೇಕು. ಇತ್ತೀಚೆಗೆ ಕೆಲವು ದೇವರಿಗೆ ಸತತವಾಗಿ ಎಚ್ಚರದಿಂದ ಇರುವಂತೆ ನೋಡಿಕೊಳ್ಳಲು ಲೌಡ್ ಸ್ಪೀಕರ್ ಹಾಗೆ ಹಾಡುತ್ತಿರಬೇಕು.

ಗಣಪತಿಯ ಹಬ್ಬ ಬಂದಾಗಲಂತೂ ಎಲ್ಲಾ ಕೆಲಸ ಬೊಗಸೆ ಬಿಟ್ಟು ಆತನ ಚತುರ್ಥಿಯನ್ನು ಆಚರಿಸುತ್ತಾರೆ. ತಮ್ಮ ಬದುಕಿಗೆ ವಿಘ್ನಗಳು ಬರಬಾರದೆಂದು ಆತನ ಮೊರೆಹೋಗುತ್ತಾರೆ. ಆಶ್ಚರ್ಯವೆಂದರೆ ಅಪ್ಪಿತಪ್ಪಿಯೂ ಗಣೇಶನಂಥ ರೂಪ ಇರುವ ಮಗನನ್ನು ದಯಪಾಲಿಸು ಎಂದು ಯಾರು ಬೇಡಿಕೊಳ್ಳುವುದಿಲ್ಲ. ಗಣಪತಿಯ ಮುಂದೆ ನಮ್ಮ ಭಕ್ತಿಯನ್ನು ಪ್ರದರ್ಶಿಸಲು ಕುಣಿಯುತ್ತೇವೆ. ಕುಡಿಯುತ್ತೇವೆ. ನಮ್ಮ ಗಣಪನಿಗಂತೂ ಇತ್ತೀಚೆಗೆ ನಾನಾ ವೇಷ ತೊಡಿಸಿ ಸಂಭ್ರಮಪಡುತ್ತೇವೆ. ಹೀಗೆ ದೇವರು ಕೆಲವರಿಗೆ ಹೊಟ್ಟೆಪಾಡನ್ನು ಪೂರೈಸುವ ಕಚ್ಚಾ ವಸ್ತು. ಆ ಕಚ್ಚಾ ವಸ್ತುವನ್ನು ಸಿಂಗರಿಸಿ, ಇಲ್ಲದ ಕಥೆಗಳನ್ನೆಲ್ಲ ಪೋಣಿಸಿ, ಸ್ಥಳಪುರಾಣಗಳನ್ನು ಹೇಳುತ್ತ ಹೋದರೆ ಸಾಕು ನೋಡನೋಡುವಷ್ಟರಲ್ಲಿ ಆ ದೇವರು ಪ್ರಖ್ಯಾತನಾಗುತ್ತಾನೆ.

ನಾವು ಬೇಡಿಕೊಂಡದ್ದನ್ನೆಲ್ಲ ಕೊಡುವ ದೇವರಿದ್ದರಂತೂ ಆ ದೇವರಿಗೆ ಇರುವೆ ಮುತ್ತಿದಂತೆ ಜನ ಮುತ್ತುತ್ತಾರೆ.  ತಿರುಪತಿಯ ತಿಮ್ಮಪ್ಪನ ಹುಂಡಿಗೆ ಇಂದುಬೀಳುವ ಚಿನ್ನಾಭರಣ ದುಡಿದು ಗಳಿಸಿದ್ದಂತೂ ಖಂಡಿತ ಅಲ್ಲ. ಅದು ಪಾಪದ ಆಭರಣ. ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಖಚಿತವಾದ ಕಿರೀಟವನ್ನು ಬಳ್ಳಾರಿಯ ರೆಡ್ಡಿಗಳು ಕೊಟ್ಟಾಗ ಆತ ಅದನ್ನು ಗಪ್ ಚುಪ್ ಪಡಕೊಳ್ಳುತ್ತಿರಲಿಲ್ಲ.

ಕೆಲವು ದೇವರುಗಳಂತೂ ಆಗಾಗ ಮನುಷ್ಯರು ನಡೆಸುವಂತೆ ಗಿಮಿಕ್ ನಡೆಸುತ್ತವೆ. ತಮ್ಮ ನಿರ್ಜೀವವಾದ ಕಣ್ಣಿನಿಂದ ನೀರನ್ನು ಉದುರಿಸುತ್ತವೆ. ಫೋಟೋಗಳ ಒಳಗಿಂದ ಒಣ ಭಸ್ಮವನ್ನು ಉದುರಿಸುತ್ತವೆ. ವರ್ಷಕ್ಕೊಂದು ಬಾರಿ ಮಾತ್ರ ತಾನು ಜ್ಯೋತಿಯಾಗಿ ಮಾತ್ರ ಕಾಣಿಸಿಕೊಳ್ಳುವುದಾಗಿ ಪ್ರಕಟಿಸಿದ ಅಯ್ಯಯ್ಯಪ್ಪ ಸ್ವಾಮಿಯ ಕತೆಯಂತೂ ಹೇಳಲಾಸಲ್ಲ. ಸುಮಾರು ವರ್ಷಗಳಿಂದ ಜ್ಯೋತಿಯ ಹೆಸರಿನಲ್ಲಿ ಎಲ್ಲರನ್ನು ಕೋತಿಮಾಡಿದ ಅಯ್ಯಪ್ಪ ಗಿಮಿಕ್ ಮಾಡದೆ ಇದ್ದರೆ ಆತನನ್ನು ಯಾರು ಕೇಳುತ್ತಿರಲಿಲ್ಲ. ವರ್ಷಕ್ಕೊಂದು ಸಲ ಕರಿಬಟ್ಟೆ ಹಾಕಿಕೊಂಡು , ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದೆ ಅವರು ಮಾಡಿದ ಅಡುಗೆಯನ್ನು ಉಣ್ಣದೆ ಕಟ್ಟು ನಿಟ್ಟಿನವೃತ ಮಾಡಿದರೆ ಅಯ್ಯಪ್ಪ ಅವರಿಗೆ ಒಲಿಯುತ್ತಾನಂತೆ. ಈಮಹಾಶಯ ಯಾರಿಗೆ ಒಲಿದಿದ್ದಾನೋ ಬಿಟ್ಟಿದ್ದಾನೋ ಒಂದೂ ಗೊತ್ತಾಗಿಲ್ಲ. ಆದರೆ ಈತನ ದರ್ಶನಕ್ಕೆ ಹೋದ ಸಹಸ್ರಾರು ಮಂದಿ ಮಾತ್ರ ಹುಳು ಸತ್ತಂತೆ ಜನರ ಕಾಲ್ತುಳಿತಕ್ಕೆಸಿಕ್ಕು ಪರಲೋಕ ಸೇರಿದ್ದಂತೂ ಖಚಿತ!

ನಮ್ಮ ದೇಶದ ದೇವರುಗಳಿಗೆ ದಿನ ನಿತ್ಯವೂ ಮುಂಜಾನೆ ಬೆಳಗ್ಗೆ ಎದ್ದುನಾವೇ ಅವುಗಳನ್ನ ‘ಎದ್ದೇಳು ಮಂಜುನಾಥ… ಏಳು ಬೆಳಗಾಯಿತು’ ಎನ್ನಬೇಕು. ಆತನಿಗೆ ಮೊಸರು, ತುಪ್ಪ, ಬೆಣ್ಣೆಗಳ ಮೂಲಕ ಸ್ನಾನ ಮಾಡಿಸಬೇಕು. ದೀಪ ಮುಡಿಸಬೇಕು. ಧೂಪ ಹಚ್ಚಬೇಕು. ಆತವಾಸವಾಗಿರುವ ಗುಡಿಯ ಬಾಗಿಲು ತೆಗೆದಾಗ ಮಾತ್ರ ಎಲ್ಲರಿಗೂ ಆತ ದರ್ಶನಭಾಗ್ಯ ಕರುಣಿಸುತ್ತಾನೆ. ಇದೆಲ್ಲಕ್ಕಿಂತ ಮುಖ್ಯವಾಗಿ ದಿನವೂ ಈ ದೇವರುಗಳಿಗೆ ಬೆಳಗ್ಗೆ ಆಹ್ವಾನ ಮಂತ್ರಗಳ ಮೂಲಕ ದೇವರು ಆಯಾ ಮೂರ್ತಿಗಳ ಒಳಗಡೆ ಬರುವಂತೆ ಪ್ರತಿಷ್ಠಾಪನೆ ಮಾಡಬೇಕು. ರಾತ್ರಿ ಗುಡಿಗೆ ಕೀಲಿ ಹಾಕಿನಡೆದಾಗ ಮತ್ತೆ ವಿಸರ್ಜನೆಮಂತ್ರ ಹೇಳಬೇಕು. ನಮ್ಮ ದೇವರುಗಳು ಈಗ ಪೂಜಾರಿ ಹೇಳಿದಂತೆ ಬಾ ಅಂದಾಗ ಬರುತ್ತಾನೆ. ಹೋಗು ಎಂದಾಗ ಎದ್ದು ಹೋಗುತ್ತಾನೆ.ಇಂಥ ದೇವರಿಗಾಗಿಯೆ ನಾವುಗಳೆಲ್ಲ ಭಜನೆ ಮಾಡಿದ್ದೇವೆ. ಕೀರ್ತನೆ ಕೇಳಿದ್ದೇವೆ. ಜಪ ಮಾಡಿದ್ದೇವೆ. ಊಟ ಬಿಟ್ಟು ಉಪವಾಸ ಇದ್ದು ದೇವರನ್ನು ಒಲಿಸಿಕೊಳ್ಳುವ ಕಸರತ್ತು ಮಾಡಿದ್ದೇವೆ. ಸಹಸ್ರಾರು ಬಿಳಿಯ ಹಾಳೆಯ ಮೇಲೆಲ್ಲ ದೇವರ ಹೆಸರನ್ನು ಬರೆಬರೆದು ಸಂತೃಪ್ತರಾಗಿದ್ದೇವೆ. ಹೋಮ-ಹವನಗಳಿಂದ ದೇವರನ್ನು ಮತ್ತಷ್ಟು ಖುಷಿಪಡಿಸಲು ಯತ್ನಿಸಿದ್ದೇವೆ. ನಿಗಿ ನಿಗಿಯಾಗಿ ಹೊಳೆಯುವ ಬೆಂಕಿಯ ಕೆಂಡವನ್ನು ದೇವರಿಗಾಗಿ ತುಳಿದಿದ್ದೇವೆ. ಮೈ ಮೇಲೆ ಬಾಸುಂಡೆ ಬರುವಂತೆ ಚಾಟಿಯಿಂದ ಹೊಡಕೊಂಡಿದ್ದೇವೆ. ಗಲ್ಲದ, ತುಟಿಯ ಒಳಗಡೆ ಕಿರುಬೆರಳ ದಪ್ಪದ ಸಣ್ಣನೆಯ ಕಬ್ಬಿಣದ ತುಂಡನ್ನು ಸಿಕ್ಕಿಸಿಕೊಂಡಿದ್ದೇವೆ. ಚೂಪಾದ ಮುಳ್ಳಾವಿಗೆಯ ಮೇಲೆ ಒಂಟಿ ಕಾಲಿನಲ್ಲಿ ನಿಂತಿದ್ದೇವೆ. ಮಡಿ ಬಟ್ಟೆ ಉಟ್ಟು , ಕೆಲವು ಸಲ ದಶಾ ಬತ್ತಲೆಯಿಂದಲೂ ಪೂಜಿಸಿದ್ದೇವೆ. ಆದರೆ ದೇವರೆಂಬ ಆ ದೇವರು ಯಾರಿಗೂ ದರ್ಶನ ಭಾಗ್ಯ ಕರುಣಿಸಿಲ್ಲ.

ವಿಜ್ಞಾನದ ಇಂದಿನ ಯುಗದಲ್ಲಿ ಯೂಮಡಿಕೆ ದೈವ. ಮರದೈವ. ಬೀದಿಯ ಕಲ್ಲು ದೈವ. ಹಣಿಗೆ ದೈವ. ಬಿಲ್ಲ ನಾರಿ ದೈವ. ದೈವದೈವೆಂಬುದು ಕಾಲಿಡಲಿಂಬಿಲ್ಲ ಎನ್ನುವಷ್ಟು ಲಿಬಿಲಿಬಿ ಗುಟ್ಟುತ್ತಿವೆ. ದೇವರೆಂಬ ಈ ಕಸವನ್ನು ತೆಗೆದುಹಾಕಲು ವಿಚಾರದ ಕಸುವು ಬೇಕು. ಆ ಕಸುವು ಯಾರು ನಮ್ಮಲ್ಲಿ ತುಂಬಲು ಸಾಧ್ಯವಿಲ್ಲ. ಅದನ್ನು ನಾವು ನಾವೇ ನಮ್ಮಲ್ಲಿಯೇ ತಂದು ಕೊಳ್ಳಬೇಕು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ. ಸತ್ಯದ ಬಲದಿಂದ ಅಸತ್ಯದ ಕೇಡನೋಡಯ್ಯ. ಜ್ಯೋತಿಯ ಬಲದಿಂದ ತಮಂಧದ ಕೇಡನೋಡಯ್ಯ’ ಎಂದು ತಿಳಿದು ನಡೆಯಬೇಕು.’ತನ್ನ ಬಿಟ್ಟು ದೇವರಿಲ್ಲ ಮಣ್ಣಬಿಟ್ಟು ಮಡಕೆ ಇಲ್ಲ’ ಎಂಬ ಜಾನಪದ ಮಹಿಳೆಯ ಮಾತಿಗೆ ಕಿವಿಗೊಡಬೇಕು. ‘ಸಣ್ಣನೆಯ ಮಳಲೊಳಗೆ. ನುಣ್ಣನೆಯ ಶಿಲೆಯೊಳಗೆ. ಬಣ್ಣಿಸುತ ಬರೆದ ಪಟದೊಳಗೆ ಇರುವಾತ ತನ್ನೊಳಗೆ ಇರನೆ ಸರ್ವಜ್ಞ’ ಎಂಬ ಕವಿಯ ಮಾತನ್ನು ನೆನೆಯುತ್ತ ನಮ್ಮ ಮನಸ್ಸಿನ ಕತ್ತಲೆಯನ್ನು ಹೊಡೆದೋಡಿಸಬೇಕು.

‘ಸತ್ತ ಕಲ್ಗಳ ಮುಂದೆ ಅತ್ತು ಕರೆಯದೆ ಜೀವದಾತೆಯನ್ನು ಕೂಗುವ ಮಾನವೀಯತೆ’ ನಾವು ಮೈಗೂಡಿಸಿಕೊಳ್ಳಬೇಕು ಎಂದು ಈಗ ಇನ್ನಷ್ಟು ಸ್ಪಷ್ಟವಾಗತೊಡಗಿದೆ.

(ಚಿತ್ರಕೃಪೆ : ಡಿ.ಜಿ. ಮಲ್ಲಿಕಾರ್ಜುನ್)