Category Archives: ವೀರಣ್ಣ ಮಡಿವಾಳರ

ಬಾವಿಯಲ್ಲಿ ನೀರು, ಬದುಕು ಕಣ್ಣೀರು

– ವೀರಣ್ಣ ಮಡಿವಾಳರ

ಈ ಬಾರಿಯ ಬರ ಬಹಳಷ್ಟು ಕಲಿಸಿದೆ. ಬಡವರ ಬದುಕಿನ ಬವಣೆಗಳಿಗೆ ಹೊಸ ಚಿತ್ರಗಳನ್ನು ಸೇರಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಣ ಹೆಂಡ ಬಟ್ಟೆಯ ಆಮಿಷ ತೋರಿಸಿ ವಂಚಿಸಿದ ಪರಂಪರೆಗೆ ಈಗ ಬರವೂ ಬಂಡವಾಳವಾದದ್ದು ಸೋಜಿಗವೇನು ಅಲ್ಲ. ಕೆಲವರಿಗೆ ನೀರು ಕೊಟ್ಟಂತೆ ಮಾಡಿ ಊರಿಗೆ ಕೊಟ್ಟೆವೆಂದು ಪತ್ರಿಕೆಗಳಲ್ಲಿ ನಗು ಮುಖ ಮೂಡಿಸಿಕೊಂಡವರು ತುಂಬ ಜನ. ಒಂದು ಕಾಲವಿತ್ತು ಮನೆಯಲ್ಲಿ ಹಿಟ್ಟಿಲ್ಲದಿದ್ದರೆ ಪಕ್ಕದ ಮನೆಯವರು ಕೇಳದೆಯೆ ಕೊಡುವಷ್ಟು ಉದಾರಿಯಾಗಿದ್ದರು. ಪಡೆದುಕೊಂಡವರು ಇದು ’ಕಡ’ ಮಾತ್ರ ಮರಳಿ ಪಡೆಯಬೇಕೆಂಬ ಶರತ್ತಿನೊಂದಿಗೆ ಪಡೆದು, ತಮ್ಮ ಕಾಲ ಬಂದಾಗ ಒಂದು ಹಿಡಿಯೂ ಕಡಿಮೆಯಿಲ್ಲದಂತೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಇಂದು ಹಾಗಲ್ಲ. ಕಿಲೋಮೀಟರ್ ಗಟ್ಟಲೆ ಕೊಡಪಾನ ನೀರಿಗೆ ಹಿಂಡು ಹಿಂಡು ಜನ ಉರಿಬಿಸಿಲಲ್ಲಿ ಬರಿಗಾಲಲ್ಲಿ ಅಲೆಯುತ್ತಿರುವುದ ಕಣ್ಣಾರೆ ಕಂಡೂ ಕಾಣದಂತೆ ಹೊರಟ ಪ್ರತಿನಿಧಿಗಳಿಗೆ, ಯಾರೋ ನೀರು ಕೊಟ್ಟು ಜನರನ್ನು ತನ್ನತ್ತ ಸೆಳೆಯುತ್ತಿರುವುದು ಗೊತ್ತಾದದ್ದೇ ತಡ ಮುಂದೆ ಚುನಾವಣೆ ಬರುತ್ತಿರುವುದು ನೆನಪಾಗಿ ಮತ್ತೆ ಜನರ ಮೇಲಿನ ಮಮಕಾರದ ವೇಷ, ಓಣಿಯಲ್ಲೊಂದು ನೀರಿನ ಟ್ಯಾಂಕರ್ ಪ್ರತ್ಯಕ್ಷ, ಇಂಥವರೇ ನೀರು ತಂದಿದ್ದಾರೆಂದು ಸಾರಲು ನಾಲ್ಕಾರು ಜನ ಕಾಲಾಳುಗಳು ತಯಾರು. ದುರಂತವೆಂದರೆ ಹೀಗೆ ಈ ಬರಪೀಡಿತ ಜನರ ಮೇಲಿನ ಪ್ರೀತಿ ಬಹಳಷ್ಟು ಜನಕ್ಕೆ ಒಮ್ಮೆಲೇ ಬಂದು ತಮ್ಮ ತಮ್ಮ ಬಂಡವಾಳ ಬಯಲು ಮಾಡಿಕೊಂಡರು. ಕೆಲವರು ನಗೆಪಾಟಲಿಗೆ ಈಡಾದರು. ಈಗ ಎಲ್ಲೆಲ್ಲೂ ನೀರೂ ಸಹ ರಾಜಕೀಯದ ದಾಳ.

ಬರದ ಬೆಂಕಿ ನಿಜವಾಗಿಯೂ ಸುಟ್ಟದ್ದು ರೈತರನ್ನು ಮತ್ತು ಶ್ರಮಿಕ ವರ್ಗವನ್ನು. ಶ್ರಮಸಂಸ್ಕೃತಿ ವ್ಯಾಖ್ಯಾನಿಸಿಕೊಳ್ಳುವ ನಮ್ಮ ಮಾದರಿಗಳು ಬದಲಾಗಬೇಕಿದೆ. ಹಾಗಂತ ಇಂದಿನ ಮಣ್ಣಿನ, ಬೆವರಿನ, ದುಡಿಮೆಯ ಸಂಗತಿಗಳು ಬಯಸುತ್ತಿವೆ. ಶ್ರಮವನ್ನು ಸಂಸ್ಕೃತಿಯಾಗಿಸಿ ಔದಾರ್ಯದಿಂದ, ಆದರದಿಂದ, ಗೌರವದಿಂದ ನೋಡುತ್ತಿರುವಾಗಲೇ ಅದರ ಆಳದ ದುರಂತಗಳನ್ನು, ಸಾವಿನ ವಾಸನೆಯನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನೋಡಲು ಒಳಗಣ್ಣುಗಳು ಬೇಕಿದೆ.

ನೀರು ಬರಿದಾಗಿ ಬೇಸತ್ತು, ಅದೆಷ್ಟೋ ಜನ ಕಂಗಾಲಾದರು. ಕಣ್ಣ ಮುಂದೆಯೇ ಉರಿಬಿಸಿಲಿನ ಝಳಕ್ಕೆ ಸುಟ್ಟು ಹೋಗುತ್ತಿರುವ ಬೆಳೆಯನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಅದರಲ್ಲಿ ಬಹಳಷ್ಟು ಜನ ಸರಿಯೋ ತಪ್ಪೋ ಲೆಕ್ಕಕ್ಕೆ ಸಿಗದಷ್ಟು ಕೊಳವೆ ಬಾವಿಗಳನ್ನು ತೆಗೆಸಿದರು, ಬಾವಿಗಳನ್ನು ತೋಡಿಸಲು ಮುಂದಾದರು. ಬಹುಶಃ ಬಹಳಷ್ಟು ಕಡೆ ಹಿಂದೆ ಎಂದೂ ಈ ಪ್ರಮಾಣದಲ್ಲಿ ಕಂಡಿರದ ಕೊಳವೆ ಬಾವಿಯ ಕೊರೆಯುವಿಕೆ ಈ ಬಾರಿ ಭೂಮಿಯ ಒಡಲು ಬಗಿದವು. ಸಿಕ್ಕಿದ್ದು ಎರಡಿಂಚು ನೀರಿಗಿಂತ ಹೆಚ್ಚಿಲ್ಲ. ಅದಕ್ಕೂ ಕಡಿಮೆ ಬಂದವರು ಮತ್ತೊಂದು ಪಾಯಿಂಟ್ ತೋರಿಸಿ ಬೆಳೆಯ ಜೊತೆ ಕೈಯನ್ನೂ ಸುಟ್ಟುಕೊಂಡರು. ಹೀಗೆ ಇದು ನಡೆಯುತ್ತಿರುವಾಗಲೇ ಕೆಲವೇ ದಿನಗಳಲ್ಲಿ ನೀರು ಬಿದ್ದಿದ್ದ ಬೋರ್‌ವಲ್‌ಗಳು ಬತ್ತಿಹೋದವು, ಮುಚ್ಚಿಯೂ ಹೋದವು. ಇದನ್ನು ಗಮನಿಸಿದ ಕೆಲವರು ಬಾವಿಗಳನ್ನು ತೆಗೆಸಿದರೆ ಶಾಶ್ವತವಾಗಿ ನೀರಾಗುತ್ತದೆ, ಒಂದು ಬಾರಿ ಮಳೆಯಾದರೂ ಸಾಕು ಎಲ್ಲಿಂದಲಾದರೂ ನೀರು ಬಂದು ಸೇರಿಕೊಳ್ಳುತ್ತದೆ ಎಂದು ಯೋಚಿಸಲಾರಂಭಿಸಿ ಬಾವಿ ತೋಡಿಸಲು ಮುಂದಾದರು. ಒಂದು ಊರಿಗೆ ನೂರರ ಸಂಖ್ಯೆಗಳಲ್ಲಿ ಕೊಳವೆ ಬಾವಿಗಳ ಜೊತೆಜೊತೆಗೆ ಹತ್ತಾರು ಬಾವಿಗಳು ಪ್ರಾರಂಭವಾದವು. ಅನುಮತಿ ಪಡೆಯುವ ಕಾನೂನು ಮರೆಯಲ್ಪಟ್ಟವು. ರೈತರಿಂದ ಗೊತ್ತಿಲ್ಲದೆ, ಆಡಳಿತದಿಂದ ಗೊತ್ತಿದ್ದೂ.

ಕೂಲಿ ಕಾರ್ಮಿಕರ ಬದುಕಿನ ಚೈತನ್ಯ ಮತ್ತು ದುರಂತಗಳೆರಡೂ ಬೇರೆ ಎಲ್ಲ ಶ್ರಮಿಕರಿಗಿಂತ ಭಿನ್ನವಾದವು. ಹಾಗೆಯೇ ಬಾವಿ ತೋಡಲು ಬಂದಿರುವ ಇಲ್ಲಿನ ಕೆಲವು ಕುಟುಂಬಗಳ ಕಥೆಗಳಲ್ಲಿ ವ್ಯಥೆಗಳೇ ತುಂಬಿವೆ. ಸುಮಾರು ದಶಕಗಳಿಂದ ಬಾವಿ ತೋಡುವುದನ್ನೇ ಕಾಯಕ ಮಾಡಿಕೊಂಡಿರುವ ಒಂದು ಸಮುದಾಯವನ್ನು ಮಾತನಾಡಿಸಿದಾಗ ಹಲವು ಅಸಹನೀಯ ಸತ್ಯಗಳು ಗೊತ್ತಾದವು. ಬಾವಿ ತೋಡುವ ಕ್ರಿಯೆಯೇ ಅತ್ಯಂತ ಎಚ್ಚರದ ಶ್ರಮವನ್ನು ಬೇಡುವಂಥದ್ದು. ಹೀಗೆ ಬಾವಿ ತೋಡುವಾಗ ಯಾರದೋ ಜೀವ ಯಾವುದೋ ಕಲ್ಲಿನಲ್ಲೋ , ಕುಸಿದು ಬೀಳುವ ಗೋಡೆಯಲ್ಲೋ, ಅಥವಾ ನೀರನ್ನೆತ್ತುವ ಯಂತ್ರದ ಕೈಗೋ ಕೊಟ್ಟಿರುವಂಥ ಅಪಾಯದ ಸ್ಥಿತಿ.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕದರಾಪುರ ತಾಂಡಾ ಬಾವಿ ತೋಡುವ ಕಾಯಕವನ್ನೇ ಮಾಡುವ ಸಮುದಾಯಗಳ ಒಂದು ಊರು. ಇಲ್ಲಿನ ಕುಟುಂಬಗಳು ಹಲವಾರು ದಶಕಗಳಿಂದ ಬಾವಿ ತೋಡುತ್ತ ಬಂದಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ರೈತರು ಈ ದುಡಿಮೆಗಾರರ ಶ್ರಮದಿಂದ ಹೊಲದ ಬೆಳೆಗೆ ನೀರು ಕಂಡು ನೆಮ್ಮದಿಯಿಂದಿದ್ದಾರೆ. ಆದರೆ ಬಾವಿ ತೋಡಿದವರು ಮಾತ್ರ ಅಲ್ಲೇ ಇದ್ದಾರೆ.

ರಮೇಶ ರಾಮಚಂದ್ರ ಜಾಧವ ಎಂಬ ನಲವತ್ತೈದು ವರ್ಷದ ಈ ಕೂಲಿ ಕಾರ್ಮಿಕ ಬದುಕಿಗೆ ತೆರೆದುಕೊಂಡಿದ್ದೇ ಬಾವಿ ತೋಡುವುದರ ಮೂಲಕ. ಈತನ ಇಲ್ಲಿಯವರೆಗಿನ ಮೂರು ದಶಕಗಳು ಬಾವಿ ತೋಡುವುದನ್ನು ಮಾತ್ರವೇ ತುಂಬಿಕೊಂಡಿವೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಈ ದಗದ ತನ್ನ ಮೂಲಕ ತನ್ನ ಮಕ್ಕಳನ್ನೂ ಒಳಗು ಮಾಡಿಕೊಂಡಿದೆ. ತನ್ನ ಕಾಯಕದ ಬಗ್ಗೆ ಆತನನ್ನು ಕೇಳಿದಾಗ ಹೀಗೆ ಹೇಳಿದ: “ನಾನು ಭಾಳ ಚಿಕ್ಕವನಿದ್ದಾಗಿನಿಂದ ಈ ಕೆಲಸ ಮಾಡಿಕೋತ ಬಂದಿನ್ರಿ, ನಮಗ ಗೊತ್ತಿರೋದು ಬಾವಿ ತೋಡೋದು ಒಂದರಿ. ಬಾವಿ ತೋಡಿಯೇ ನಾನು ನನ್ನ ಹೆಂಡ್ತಿ, ನನ್ನ ಮಕ್ಳು, ನನ್ನವ್ವ ಹೊಟ್ಟಿತುಂಬಿಕೋತೀವ್ರಿ. ವರ್ಷಕ್ಕೆ ಕಡಿಮೀ ಅಂದ್ರ ಎಂಟು ಬಾವಿ ತೋಡತೀವ್ರಿ, ಒಂದೊಂದು ಬಾವಿಗೆ ಹದಿನೈದು ಇಪ್ಪತ್ತು ದಿನ, ಒಂದೊಂದು ಬಾವಿ ಒಂದು ತಿಂಗಳೂ ಹಿಡೀತವ್ರಿ. ಮೂವತ್ತು ವರ್ಷದಾಗ ಕರ್ನಾಟಕ ಮಹಾರಾಷ್ಟ್ರದ ಹಲವಾರು ಕಡೆ ನಾವು ಕಡಿದ ಬಾವಿ ನೀರು ತುಂಬಿಕೊಂಡು ಎಲ್ಲರ ಬಾಳೆ ಹಸನು ಮಾಡೇವ್ರಿ, ಆದ್ರ ನಮ್ಮ ಬದುಕ ಮೂರಾಬಟ್ಟಿ ಆಗೇತ್ರಿ. ಇಷ್ಟು ವರ್ಷ ಬಾವಿ ಕಡದ್ರೂ ಎಲ್ಲೋ ಒಂದಿಷ್ಟು ಗಾಯ ಆಗಿದ್ದು , ಕೈಕಾಲು ಮುರಿಯೋದು ಆಗಿದ್ದು ಬಿಟ್ರ ಎಂದೂ ಜೀವ ಹಾನಿ ಆಗಿದ್ದಿಲ್ರಿ, ಆದ್ರ ಈಗ ಮೂರು ತಿಂಗಳದಾಗ ನಮ್ಮವ್ವ , ನಮ್ಮ ತಂಗಿ ಇಬ್ರು ಬಾವಿ ತೋಡದ್ರಗ ಸತ್ತು ಹೋದರರ್ರಿ. ನಿಪ್ಪಾಣಿ ತಾಲೂಕಿನ ಆಡಿಬೆನಾಡಿ ಊರಾಗ ಬಾವಿ ತೋಡೋ ಮುಂದ ನನ್ನ ತಂಗಿ ಜೀಮಾಬಾಯಿ ನೀರೆತ್ತುವ ಮೋಟಾರು ಚಾಲು ಮಾಡೋ ಮುಂದ ವೈರ್ ಕಾಲಿಗೆ ಸುತ್ತಿ ಶಾಕ್ ಹೊಡದು ಸತ್ತಳ್ರಿ, ಈಗ ಮೊನ್ನೆ ನಮ್ಮ ತಾಯಿ ಕಸ್ತೂರಬಾಯಿ ಬಾವಿಯಿಂದ ಕಲ್ಲು ತುಂಬಿದ ಕಬ್ಬಿಣ ಬುಟ್ಟಿ ಎತ್ತೋ ಮುಂದ ತಪ್ಪಿ ನಮ್ಮವ್ವನ ಮ್ಯಾಲೆ ಬಿದ್ದು ಆಕಿನು ಸತ್ತಳ್ರಿ. ಬಾವಿ ತೋಡದ ಇದ್ರ ಹೊಟ್ಟಿಗಿಲ್ಲದ ಸಾಯ್ತೀವ್ರಿ, ಬಾವಿ ತೋಡಾಕ ಬಂದ್ರ ಹಿಂಗ ದುರಂತದಾಗ ಸಾಯ್ತೀವ್ರಿ ಎಲ್ಲಾ ಕಡೆ ನಮಗ ಸಾವ ಐತ್ರಿ.” ಹೀಗೆ ಹೇಳುವಾಗ ಆತನಿಗೆ ಹುಟ್ಟಿನಿಂದ ಇಲ್ಲಿವರೆಗೆ ಅನುಭವಿಸಿದ ನೋವು ಒತ್ತರಿಸಿ ಬಂದಿತ್ತು.

ಈ ಗಡಿನಾಡು ಭಾಗ ಸುಮಾರು ಕಡೆ ಕಲ್ಲಿನ ಪದರುಗಳಿಂದ ನಿರ್ಮಿತವಾಗಿದೆ. ಈ ಜನ ಕಡಿಯುವ ಬಾವಿಯ ಉದ್ದ ಮತ್ತು ಅಗಲ 50×50 ಅಡಿ , ಆಳ 70 ರಿಂದ 80 ಅಡಿಯವರೆಗೆ ಇರುತ್ತದೆ. ಇಷ್ಟು ಅಳತೆಯ ಬಾವಿಯ ತುಂಬ ಬಹಳಷ್ಟು ಕಡೆ ಕಲ್ಲೇ ತುಂಬಿರುತ್ತವೆ. ಕಡಿಯುವಾಗ ಸರಿಯಾಗಿ ನಿಗಾವಹಿಸಿ ಕೆಲಸ ಮಾಡಲೇಬೇಕು. ಒಂದೊಂದು ಅಡಿ ಆಳಕ್ಕೆ ಹೋದಾಗಲೂ ಅಪಾಯಗಳ ಸಾಧ್ಯತೆ ಹೆಚ್ಚುತ್ತಾ ಹೋಗುತ್ತವೆ. ಆಳಕ್ಕೆ ಹೋದಂತೆ ಮೇಲಿನ ಕಲ್ಲಿನ ಪದರದ ಗೋಡೆಗಳು ಬಿಚ್ಚಿಕೊಂಡು ಮೇಲೆ ಬಿದ್ದು ಜೀವಂತ ಸಮಾಧಿಯಾಗುವ ಸಾಧ್ಯತೆಗಳಿರುತ್ತವೆ. ಈ ಕೂಲಿಕಾರರು ಎಲ್ಲ ಅಪಾಯಗಳನ್ನು ತಮ್ಮ ಬದುಕಿನ ದೈನಿಕದ ಸಂಗಾತಿಗಳೆಂದುಕೊಂಡು ಕೆಲಸ ಮಾಡುತ್ತಾರೆ. ಬಾವಿ ಆಳದಲ್ಲಿರುವುದರಿಂದ ಅದನ್ನು ಕಡಿಯುವ ಶ್ರಮ ನೋಡುಗರಿಗೆ ಅಷ್ಟು ಅನುಭವಕ್ಕೆ ಬರುವುದಿಲ್ಲ. ಆದರೆ ಈ ಜನ ಒಂದೊಂದು ಬಾವಿ ಕಡಿದಾಗಲೂ ಇವರ ದೇಹದಿಂದ ಹರಿದ ಬೆವರು, ರಕ್ತ ಅದೆಷ್ಟೋ. ಅದೆಷ್ಟೋ ಗುಡ್ಡಗಳನ್ನು ಕಡಿದು ಹಾಕಿದ ಶ್ರಮ ಇವರದ್ದು ಎನ್ನಿಸುತ್ತದೆ.

ಕದರಾಪೂರ ತಾಂಡಾದ ಈ ಜನ ಸಮುದಾಯ ಊರಿನಲ್ಲಿರುವ ಜಮೀನನ್ನು ಬಿತ್ತನೆಗೆ ಸಿದ್ದಮಾಡಿ ಹಿರಿಯರನ್ನು ಬಿಟ್ಟು, ಬಾವಿಕಡಿಯಲು ತಮ್ಮ ಸಂಸಾರದ ಗಂಟನ್ನು ಹೊತ್ತು ಊರೂರು ಅಲೆಯುತ್ತಾರೆ. ಹೀಗೆ ಇವರ ಅಲೆದಾಟ ಕರ್ನಾಟಕವನ್ನೂ ದಾಟಿ ಮಹಾರಾಷ್ಟ್ರದ ಹಲವು ಜಿಲ್ಲೆಗಳನ್ನೂ ವ್ಯಾಪಿಸಿದೆ. ಹೊಲಗಳಿದ್ದಲ್ಲೇ ಟೆಂಟು ಹಾಕಿಕೊಂಡು ಬಾವಿ ಪಕ್ಕವೇ ರಾತ್ರಿ ಹಗಲು ದೂಡುತ್ತಾರೆ. ಇವರೊಂದಿಗೆ ಹಸುಗೂಸುಗಳು, ಖಾಯಿಲೆ ಬಿದ್ದ ಸಂಬಂಧಿಕರು, ವಯಸ್ಸಾದವರು ಎಲ್ಲರಿಗೂ ಇದೇ ಸ್ಥಿತಿ. ಕತ್ತಲಾದರೆ ಬೆಳಕಿಲ್ಲ, ಹಗಲಾದರೆ ಅಡವಿಯೇ ಎಲ್ಲ. ಬೆಳಿಗ್ಗೆ ಎಂಟುಗಂಟೆಗೆ ಕೆಲಸಕ್ಕೆ ತೊಡಗಿದರೆಂದರೆ ಕತ್ತಲಾಗುವವರೆಗೆ ಕೆಲಸ ಮಾಡುತ್ತಲೇ ಇರುತ್ತಾರೆ. ಬಾವಿ ದಂಡೆಯಲ್ಲಿಯೇ ಊಟ, ದಣಿವಾದಾಗ ಬಾವಿದಂಡೆಯಲ್ಲಿ ಸ್ವಲ್ಪ ಹೊತ್ತು ವಿರಾಮ.

ಇಲ್ಲಿ ಇನ್ನೊಂದು ಮುಖ್ಯ ವಿಚಾರವೆಂದರೆ ಹೀಗೆ ಅಲೆಮಾರಿಗಳಾಗಿ ಬದುಕಿನ ನೊಗ ಹೊತ್ತ ಈ ದಲಿತ ಸಮುದಾಯ ಎಲ್ಲರೂ ಸಂಬಂಧಿಕರು, ಒಂದೇ ಊರಿನವರು. ಎಲ್ಲರೂ ಒಟ್ಟಾಗಿ ಊರು ಬಿಟ್ಟು ಬಾವಿ ಕಡಿಯುವ ವೇಳೆಗೆ ಏಳು ಎಂಟು ಜನರ ಗುಂಪಾಗಿ ಅಲ್ಲೊಂದು ಇಲ್ಲೊಂದು ಬಾವಿ ಕಡಿಯುವುದನ್ನು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಹೀಗೆ ಎರಡು ಜೀವ ಕಳೆದುಕೊಂಡದ್ದಕ್ಕೆ ಪರಿಹಾರದ ಕುರಿತು ಹೊಲದ ಮಾಲೀಕನನ್ನು ಪ್ರಶ್ನಿಸಿದರೆ ಅವ್ರಿಗೆ ಗುತ್ತಿಗಿ ಕೊಟ್ಟಿರತೀವ್ರಿ, ಏನ ಅಪಾಯ ಆದ್ರೂ ಅವ್ರ ಹೊಣಿರಿ ಎನ್ನುತ್ತಾನೆ. ಅಂದರೆ ಈ ಬಾವಿ ಕಡಿಯುವ ಜನ ತಮ್ಮ ಜೀವವನ್ನು ಪಣಕ್ಕಿಡುವುದರ ಜೊತೆಜೊತೆಗೇ ಅವರು ಕೊಡುವ ದುಡ್ಡಿಗಾಗಿ ಬಾವಿಕಡಿಯುವುದನ್ನು ಗುತ್ತಿಗೆ ಪಡೆದಿದ್ದಾರೆಂಬುದು ಹೊಲದ ಮಾಲೀಕನ ಅಭಿಪ್ರಾಯ.

ಈ ದುಡಿಯುವ ಜನರ ಬದುಕಿನ ಚೈತನ್ಯ ದುಡಿಯುವಿಕೆಯಲ್ಲಿಯೇ ಹಾಸುಹೊಕ್ಕಾಗಿಬಿಟ್ಟಿದೆ. ಇವರು ಕಡಿದ ಬಾವಿಯಿಂದ ತಲೆಮಾರುಗಳವರೆಗೆ ರೈತನ ಬದುಕು ಹಸಿರಾಗುತ್ತದೆ, ಆದರೆ ಹೀಗೆ ಬಾವಿ ಕಡಿದ ಜನ ಸಿಕ್ಕಷ್ಟು ತೆಗೆದುಕೊಂಡು ಮತ್ತೊಂದು ಬಾವಿ ಕಡಿಯಲು ಅಣಿಯಾಗುತ್ತಾರೆ. ರಮೇಶ ಜಾಧವರನ್ನು ಎಷ್ಟು ಬಾವಿ ಇದುವರೆಗೆ ಕಡಿದಿದ್ದೀರಿ ಎಂದು ಪ್ರಶ್ನಿಸಿದರೆ ಆತ ಹೀಗೆ ಹೇಳುತ್ತಾನೆ,  “ಎಷ್ಟು ಬಾವಿ ಕಡಿದೀನಿ ಅಂತ ಲೆಕ್ಕ ಇಟ್ಟಿಲ್ರಿ, ವರ್ಷಕ್ಕ ಕಡಿಮೀ ಅಂದ್ರ ಎಂಡು ಬಾವಿ ಕಡಿತೀವ್ರಿ, ಮೂವತ್ತು ಮೂವತ್ತೈದು ವರ್ಷದಿಂದ ಹೀಂಗ ಬಾವಿ ಕಡಕೋತ ಬಂದೀನ್ರಿ,” ಎನ್ನುತ್ತಾನೆ. ಅಂದರೆ ವರ್ಷಕ್ಕೆ ಐದು ಬಾವಿಯಂತೆ ತೆಗೆದುಕೊಂಡರು ಇಲ್ಲೀವರೆಗೆ ಆತ ಎರಡು ನೂರಕ್ಕೂ ಹೆಚ್ಚು ಬಾವಿಗಳನ್ನು ಕಡಿದಿದ್ದಾನೆ ಎಂದಾಯಿತು! ಇಷ್ಟು ವರ್ಷ ಬಾವಿ ಕಡಿದಿದ್ದರಿಂದ ನಿನಗ ಏನೇನು ಲಾಭವಾಗಿದೆ ಎಂದು ಕೇಳಿದರೆ ಲಾಭ ಅಂತ ಏನೂ ಇಲ್ರಿ ಎಲ್ಲಾರ ಹೊಟ್ಟಿ ತುಂಬೇತ್ರಿ ಎನ್ನುತ್ತಾನೆ.

ಈತನಿಗಿರುವ ಐದು ಮಕ್ಕಳಲ್ಲಿ ಈಗಾಗಲೇ ಮೂರು ಮಕ್ಕಳು ಕೆಲಸ ಮಾಡುವ ತಾಕತ್ತು ಬಂದ ಕೂಡಲೇ ಶಾಲೆ ಬಿಟ್ಟು ಈತನೊಂದಿಗೆ ಬಾವಿ ಕಡಿಯುತ್ತಿದ್ದಾರೆ. ಹೀಗೇಕೆ ಮಾಡುತ್ತೀರಿ ಎಂದರೆ ಅವರು ಸಾಲಿ ಕಲಿಯಾಕ ವಲ್ಲೆ ಅಂತಾರ್ರಿ ಎನ್ನುತ್ತಾನೆ. ಈ ಸಮುದಾಯವನ್ನು ಅಜ್ಞಾನ, ಮೂಢನಂಬಿಕೆ ಒಟ್ಟೊಟ್ಟಿಗೆ ಕಿತ್ತು ತಿನ್ನುತ್ತಿವೆ. ಇಷ್ಟು ವರ್ಷಗಳಾದರೂ ಇವರಿಗೆ ಅಕ್ಷರದ ಬಗ್ಗೆ ನಂಬಿಕೆಯೇ ಹುಟ್ಟಿಲ್ಲ. ತನ್ನ ಬದುಕಿನಲ್ಲಿ ಇತ್ತೀಚೆಗೆ ನಡೆದ ದುರಂತಗಳಿಗೆ ಆತ ಇಷ್ಟು ವರ್ಷ ಎಂದೂ ಹಿಂಗಾಗಿದ್ದಿಲ್ರಿ, ನಮ್ಮೂರಾಗ ನಮ್ಮ ತಮ್ಮನ ಮದುವ್ಯಾಗ ಎರಡೂ ನಿಂಬೆ ಹಣ್ಣು ಮಂತ್ರಿಸಿ ಹಂದರದಾಗ ಒಗದಾರ್ರಿ ನಮಗ ಕೇಡು ಮಾಡಾಕ, ಅದ್ಕ ಹಿಂಗಾಗೇತ್ರಿ ಎಂದು ತನ್ನ ಕಾರಣ ಹೇಳುತ್ತಾನೆ. ಹೀಗೆ ಹೇಳುವ ಈ ಮನಸ್ಥಿತಿ ಆತನಿಗೆ ಬಂದದ್ದಾದರೂ ಹೇಗೆ? ಮೇಲ್ವರ್ಗ, ಪುರುಹಿತಶಾಹಿ ವ್ಯವಸ್ಥೆಯ ಈ ಸಮಾಜ ಈ ರೀತಿಯ ಅಜ್ಞಾನದ ಬೀಜಗಳನ್ನು, ಮೂಢನಂಬಿಕೆಗಳನ್ನು ಅವರು ಅನುಭವಿಸುತ್ತಿರುವುದು ನೋವು ಎನ್ನುವುವದು ಅವರಿಗೆ ಗೊತ್ತಾಗದಂತೆ ಮಾಡಲು ಇವರ ಎದೆಗಳಲ್ಲಿ ಬಿತ್ತಿದೆಯೇನೋ ಎನ್ನಿಸುತ್ತದೆ. ಇವರ ಬಾವಿ ತೋಡುವ ಶ್ರಮ ಬೆಲೆಕಟ್ಟಲಾಗದ್ದು. ಆದರೆ ಇವರ ಬದುಕಿಗೇ ಯಾರೋ ಬಾವಿ ತೋಡಿ ಬಿಟ್ಟಿದ್ದಾರೆ, ಮೇಲೆತ್ತುವವರು ಎಲ್ಲೋ ಯಾವುದೋ ಯೋಚನೆಯಲ್ಲಿದ್ದಾರೆ! ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅಲ್ಲವೆ?

ಬಾವಿಗಿಂತಲೂ ಜೀವ ಅಗ್ಗ

ಬಾವಿ ತೋಡುವ ಜನರಲ್ಲಿ ಆಯಾ ಊರುಗಳ ಜನರ ಪರಿಸ್ಥಿತಿಗಳು ಬೇರೆ. ತಮ್ಮ ತಮ್ಮಲ್ಲಿಯೇ ಕೆಲವು ಗುಂಪುಗಳನ್ನು ಮಾಡಿಕೊಂಡು ಬಾವಿ ಕಡಿಯುವುದನ್ನು ಗುತ್ತಿಗೆ ಹಿಡಿಯುತ್ತಾರೆ. ಹಾಗೆ ನೋಡಿದರೆ ಈ ರೀತಿ ಬಾವಿ ತೋಡಿ ದುಡಿಯುವುದು ಇವರೇ ಹೇಳುವಂತೆ ಇವರಿಗೆ ಸ್ವಲ್ಪ ಲಾಭದಾಯಕವಂತೆ. ನಾಲ್ಕು ದುಡ್ಡು ಹೆಚ್ಚಿಗೆ ಕೂಲಿ ಬಂದರೆ ನಮ್ಮ ಜನ ಅದೆಷ್ಟು ಸಹಜವಾಗಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಲ್ಲಿ ಜೀವದ ಬೆಲೆ ತೋಡುವ ಬಾವಿಗಿಂತ ಅಗ್ಗವಾಗಿ ಹೋಗಿದೆಯಲ್ಲ, ಇದಕ್ಕಾರು ಹೊಣೆ?

ಇದೇ ಜುಲೈ ನಾಲ್ಕರ ಸಂಜೆ ಇನ್ನೇನು ಕತ್ತಲಾಗಬೇಕು, ಬಂಬಲವಾಡದ ಒಂದು ಬಾವಿ ಕಡಿಯುತ್ತಿದ್ದ ಜನರ ಬದುಕಿಗೆ ಕತ್ತಲಾವರಿಸಿಬಿಟ್ಟಿತು. ಬೆಳಿಗ್ಗೆಯಿಂದ ಎಡೆಬಿಡದೆ ಬಾವಿ ಕಡಿಯುತ್ತಿದ್ದವರು ಇನ್ನೇನು ಮುಗಿಸಿ ಮನೆಗೆ ಹೊರಡಬೇಕು ಅಷ್ಟರಲ್ಲಿ ನಡೆದ ಅನಾಹುತ ತಲ್ಲಣಿಸುವಂಥದ್ದು. ನಲವತ್ತು ಅಡಿಗಿಂತ ಹೆಚ್ಚು ಆಳ ಕಡಿದಿರುವ ಬಾವಿಯಿಂದ ಕೆಲಸ ಮುಗಿಯಿತು ಮೇಲೆ ಹೋಗೋಣ ಎಂದು ನಿರ್ಧರಿಸಿದ ಚುಕ್ಯಾ, ಪ್ರಕಾಶ, ಲಕ್ಷ್ಮಣ ಮೇಲೆ ಬರಲು ಕಲ್ಲು ಎತ್ತಿ ಹಾಕಲು ಇದ್ದ ಬುಟ್ಟಿಯನ್ನೇ ಬಳಸಲು ಬಯಸಿ, (ಪ್ರತಿಸಾರಿ ಅವರು ಮೇಲೆ ಬರಲು ಬಳಸುತ್ತಿದ್ದುದು ಅದೇ ಕಬ್ಬಿಣ ಬುಟ್ಟಿಯೇ. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇತ್ತು) ಯಾರಿ ಮಶಿನ್ ನಡೆಸಲು ಮೇಲೆ ಇದ್ದವನಿಗೆ ಹೇಳಿ, ತಾವು ಬಾವಿಯಲ್ಲಿದ್ದ ಕಬ್ಬಿಣ ಬುಟ್ಟಿಯಲ್ಲಿ ಮೂವರು ಕುಳಿತಿದ್ದಾರೆ. ವಿಷಾದದ ಸಂಗತಿಯೆಂದರೆ ಯಾರಿ ಯಂತ್ರವನ್ನು ನಡೆಸುತ್ತಿದ್ದವ ಬಹಿರ್ದೆಸೆಗೆ ಹೋಗಿದ್ದನಂತೆ, ಅಲ್ಲಿಯೇ ಬಾವಿಯ ಮೇಲಿದ್ದ ಮತ್ತೊಬ್ಬ ಮಶಿನ್ ನಡೆಸುವ ಮೂರ್ಖತನಕ್ಕಿಳಿದ. ಯಂತ್ರ ಮೂವರು ಕುಳಿತಿದ್ದ ಬುಟ್ಟಿ ಹೊತ್ತು ಮೇಲಕ್ಕೆ ಬರುತ್ತಿದ್ದಂತೆ ಅವಸರಿಸಿದ ಯಂತ್ರ ನಡೆಸುವವ ಜೋರಾಗಿ ಮಶಿನ್‌ನ್ನು ಈಚೆ ಎಳೆದದ್ದೇ ತಡ ಅನಾಹುತ ನಡೆದು ಹೋಯಿತು. ಇನ್ನೂ ಪೂರ್ತಿ ಮೇಲೆ ಬರದೇ ಇದ್ದ ಬುಟ್ಟಿ ಬಾವಿಯ ಗೋಡೆಗಳಿಗೆ ಜೋರಾಗಿ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮೂವರು ಕುಳಿತಿದ್ದ ಬುಟ್ಟಿ ಮುಗುಚಿದೆ. ಪ್ರಕಾಶ ಹೇಗೋ ಸಿಕ್ಕ ಆ ಯಂತ್ರದ ಕಬ್ಬಿಣದ ಚೈನಿಗೆ ಜೋತು ಬಿದ್ದ. ಆದರೆ ಚುಕ್ಯಾ, ಲಕ್ಮಣ ಇಬ್ಬರು ಅಷ್ಟು ಎತ್ತರದಿಂದ ಬಾವಿಯೊಳಕ್ಕೆ ಬಿದ್ದು ಜೀವ ಬಿಟ್ಟರೆಂದು ಅಲ್ಲಿದ್ದವರು ಹೇಳುತ್ತಾರೆ.

ಹೀಗೆ ಅನ್ಯಾಯವಾಗಿ ಜೀವ ಬಿಟ್ಟ ಲಕ್ಷ್ಮಣ ಎಮ್.ಎ. ಓದುತ್ತಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನ ತಂದೆಯ ದುಃಖ ಹೇಳತೀರದ್ದು. ಬೇಡವೆಂದರೂ ಕೇಳದೆ ಮನೆಯಲ್ಲಿ ಕೆಲಸ ಮಾಡದೇ ಕಾಲಹರಣ ಮಾಡುವುದೇಕೆಂದು ಬಾವಿ ತೋಡಲು ಬಂದಿದ್ದ ಲಕ್ಷ್ಮಣನ ಜೀವ ಬಾವಿ ಪಾಲಾಗಿ ಹೋಯಿತು.

ಚಿತ್ರಗಳು: ಮಲ್ಲಿಕಾರ್ಜುನ ದಾನಣ್ಣವರ

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

ಗಾಣಕ್ಕೆ ಸಿಕ್ಕ ಗಬಾಳಿಗರು

– ವೀರಣ್ಣ ಮಡಿವಾಳರ

ಉತ್ತರ ಕರ್ನಾಟಕದ ಕೂಲಿಯ ಚಿತ್ರಗಳು ಭಿನ್ನವಾದವು. ಇಲ್ಲಿ ತಂದೆಯೊಬ್ಬ ಬಡತನದ ದಯನೀಯ ಸ್ಥಿತಿಯಲ್ಲಿ ಎಳೆಯ ಹೆಣ್ಣುಮಕ್ಕಳನ್ನು ನೇಗಿಲಿಗೆ ಹೂಡಿ ಹೊಲ ಹಸನುಮಾಡುವ ಹೃದಯ ಬಿರಿಯುವ ಚಿತ್ರ, ಅದೀಗ ವಸಂತಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳು ಪೆನ್ನು ಪುಸ್ತಕ ಹಿಡಿದು ಕಾಲೇಜು ಓದುತ್ತಲೇ ಮಸಾರಿ ಹೊಲದಲ್ಲಿ ದೊಡ್ಡ ಎತ್ತುಗಳ ಪಳಗಿಸಿಕೊಂಡು ಅಷ್ಟು ಭಾರದ ಕುಂಟೆಯನ್ನು ಎತ್ತಿ ಕೆಡವಿ ಹರಗುವ ಪರಿಯ ಸೋಜಿಗದ ಚಿತ್ರ. ಹೀಗೆ ಅನೇಕ ಚಿತ್ರಗಳು ತಲ್ಲಣಿಸುವಂತೆ ಮಾಡುತ್ತವೆ. ಕಮತ ಇಂದು ಕಗ್ಗಂಟಾಗಿದೆ. ಕಾಲ ಸರಿದಂತೆ ಉಳ್ಳವರ ಮೋಸಕ್ಕೆ ಬಲಿಯಾಗಿ ಇದ್ದ ತುಂಡು ಜಮೀನುಗಳನ್ನು ಬಡ್ಡಿ ಚಕ್ರಬಡ್ಡಿಗೆ ಕಳೆದುಕೊಂಡು ತಮ್ಮದೇ ಜಮೀನಿನಲ್ಲಿ ಪರರಿಗೆ ಜೀತವಿರುವವರು ಇಲ್ಲಿ ಹಲವು ಜನರಿದ್ದಾರೆ.

ಇನ್ನೂ ನಮ್ಮ ಹಳ್ಳಿಗಳಲ್ಲಿ ಜಮೀನ್ದಾರರು, ಸಾಹುಕಾರರೇ ಬ್ಯಾಂಕುಗಳಾಗಿದ್ದಾರೆ. ಅವರು ಹಾಕಿದ್ದೇ ಬಡ್ಡಿ, ಇಟ್ಟದ್ದೇ ಲೆಕ್ಕ. ಯಾರದೋ ಬೆಳೆ ವಿಮೆಯ ದುಡ್ಡು ಯಾರದೋ ಜೇಬಿಗೆ ಸೇರುತ್ತದೆ. ಸಾಲ ಮರುಪಾವತಿ ಮಾಡಿ, ಹೊಸಸಾಲ ಪಡೆಯುವಾಗ ನಡೆಯುವ ಅಕ್ರಮಗಳು ಜೀವ ಹಿಂಡುತ್ತವೆ. ಸಾಲ ಪಾವತಿ ಮಾಡುವವನಿಗೆ ಬ್ಯಾಂಕಿನ ಬಾಗಿಲಲ್ಲೇ ದುಡ್ಡಿದ್ದವರು ಕಾದು ಕುಳಿತಿರುತ್ತಾರೆ. ಉಳ್ಳವರಿಂದ ದುಡ್ಡು ಪಡೆದು ಬ್ಯಾಂಕಿಗೆ ತುಂಬಿ, ಮರುಸಾಲ ಪಡೆದ ತಕ್ಷಣವೇ ದುಡ್ಡು ಕೊಟ್ಟವನಿಗೆ ನೂರಕ್ಕೆ ಹತ್ತು ರೂಪಾಯಿಯಂತೆ ಬಡ್ಡಿ ಸೇರಿಸಿ ಮರಳಿ ಕೊಡಬೇಕು. ಹತ್ತು ನಿಮಿಷದಲ್ಲಿ ಸಾವಿರ ಸಾವಿರ ದುಡ್ಡನ್ನು ಬಡ್ಡಿಯ ರೂಪದಲ್ಲಿ ಕಿತ್ತುಕೊಳ್ಳುವವರು ಇಲ್ಲಿ ಅನೇಕರಿದ್ದಾರೆ. ಸಾಮಾನ್ಯವಾಗಿ ಇವರು ಜಮೀನನ್ನು ಅಡವಿಟ್ಟುಕೊಂಡವರಿರುತ್ತಾರೆ.

ಜೀತದ ಸ್ವರೂಪವೇ ಇಂದು ಬೇರೆಯಾಗಿದೆ. ಬೆಳಗ್ಗೆ ಹೊತ್ತು ಮೂಡುವ ಮುನ್ನವೇ ಮಕ್ಕಳ ಮುಖ ನೋಡದೆ ಎದ್ದು ಬಂದು ಸಾಹುಕಾರರ ಎತ್ತಿನ ಮನೆಯನ್ನು ಚಂದಗಾಣಿಸಿ ಹೊಲದ ಕೆಲಸ ಮಾಡುತ್ತಾ ಹೊತ್ತೇರಿದಾಗ ತುತ್ತು ತಿಂದು ಹೊತ್ತು ಮುಳುಗಿದ ಮೇಲೆ ಸಾಹುಕಾರರ ಮನೆಗೆ ಬಂದು ಇದ್ದಬದ್ದ ಚಾಕರಿ ಮುಗಿಸಿ ತನ್ನ ಮನೆಗೆ ಹೋದಾಗ ಮಕ್ಕಳು ಮಲಗಿರುತ್ತವೆ. ಇದು ಒಂದು ಊರಿನ ಒಂದು ಮನೆಯ ಚಿತ್ರವೇನಲ್ಲ. ಹಲವು ಹಳ್ಳಿಗಳ ಹಲವು ಜನರ ಸಂಕಥನವೂ ಇದೇ.

ಕೃಷಿ ಕೂಲಿಕಾರ್ಮಿಕರ ಸ್ಥಿತಿಗತಿ ಹೇಳತೀರದು. ಅವರ ಸಂಕಷ್ಟದ ರೂಪಗಳು ಹಲವು. ಕೂಲಿಗೆ ನಿರ್ದಿಷ್ಟ ಸ್ವರೂಪವಿಲ್ಲ, ಕಾಲಮಿತಿಯಿಲ್ಲ, ಇಷ್ಟೇ ದುಡ್ಡು ಎಂತಲೂ ಇಲ್ಲ. ಅನುಭವಿಸಲಾಗದ, ಹಂಚಿಕೊಳ್ಳಲಾಗದ ತೀವ್ರ ಸಂಕಷ್ಟದಲ್ಲಿ ಇಲ್ಲಿನ ಕೂಲಿ ಕಾರ್ಮಿಕರಿದ್ದಾರೆ. ನಮ್ಮ ಕಾನೂನುಗಳು ಆರಕ್ಷಕ ಠಾಣೆಗಳಲ್ಲಿ, ಅಧಿಕಾರಿಗಳ ಫೈಲುಗಳಲ್ಲಿ ಮಲಗಿವೆ. ಹಳ್ಳಿಗಳಲ್ಲಿ ಉಳ್ಳವರೇ ನ್ಯಾಯಾಧೀಶರು, ಮಾತನಾಡಿದ್ದೇ ಕಾನೂನು.

ಬೆಳಗಾವಿ ಜಿಲ್ಲೆಯ ಸುಮಾರು ಕಡೆ ತಿರುಗಾಡುತ್ತಾ ಹೋದರೆ ಕರ್ನಾಟಕದ ಕೂಲಿ ಕಾರ್ಮಿಕರ ಸ್ಥಿತಿಗಳು ಹೆಚ್ಚು ಅರ್ಥವಾಗುತ್ತವೆ. ಅವು ಮನೆಗಳಲ್ಲ, ಗುಡಿಸಲುಗಳಲ್ಲ, ಗೂಡುಗಳು. ಇಂಥ ಸಾವಿರ ಗೂಡುಗಳಲ್ಲಿ ಸಾವಿರ ಸಾವಿರ ಕೂಲಿ ಕಾರ್ಮಿಕರು ಬದುಕುತ್ತಲೇ ದುಡಿಯುತ್ತಿದ್ದಾರೆ. ಈ ಜಿಲ್ಲೆಯಲ್ಲಿ  ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಮಧ್ಯದಲ್ಲಿ ನೂರಾರು ಗೂಡುಗಳ ಸಮೂಹ ಕಣ್ಣಿಗೆ ರಾಚುತ್ತವೆ. ಊರಿನಲ್ಲಿಯೇ ಇದ್ದರೂ ಒಳ್ಳೆಯ ಸಿಮೆಂಟ್ ಕಟ್ಟಡಗಳ ನಡುವಿನ ಜಾಗದಲ್ಲಿ ಇಂಥದೇ ಹತ್ತಾರು ಗೂಡುಗಳನ್ನು ಕಟ್ಟಿಕೊಂಡು ಬದುಕು ದೂಡುತ್ತಿರುವ ಸನ್ನಿವೇಷಗಳು ಸಾಕಷ್ಟು. ಇಂಡಿಯಾದ ವಾಸ್ತವಗಳೇ ಹೀಗೆ.

ಮನುಷ್ಯರೇ ಆದರೂ ಪ್ರಾಣಿಗಳೂ ಆಶ್ಚರ್ಯಪಡುವಂತೆ ಬದುಕುತ್ತಿರುವ ಇವರಾರು? ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು ಇಪ್ಪತ್ತೊಂದು ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಅರ್ಧ ಖಾಸಗಿ ಒಡೆತನದವು. ಎರಡು ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಜಮೀನಿನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹೀಗೆ ಬೆಳೆದ ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿ ದೇಶಕ್ಕೆಲ್ಲ ಸಕ್ಕರೆ ತಿನ್ನಿಸುವ ಕೂಲಿ ಕಾರ್ಮಿಕರೇ ಹೀಗೆ ಅನಾಥ ಬಯಲ ಬದುಕು ನಡೆಸುತ್ತಿರುವ ನಿರ್ಗತಿಕರು. ಇವರಲ್ಲಿ ಕೆಲವರು ಬಿಜಾಪುರ, ಬಾಗಲಕೋಟೆ, ಬಳ್ಳಾರಿ ಮುಂತಾದ  ಜಿಲ್ಲೆಗಳಿಂದ ಬಂದಿದ್ದರೆ, ಇನ್ನು ಕೆಲವರು ಮಹಾರಾಷ್ಟ್ರದ ಬೀಡ, ಜತ್, ಉಸ್ಮಾನಾಬಾದ್ ಮುಂತಾದ ಜಿಲ್ಲೆಗಳಿಂದ ಬಂದಿರುತ್ತಾರೆ. ಇಲ್ಲಿನ ಜನ ಇವರನ್ನು ಗಬಾಳಿಗರು ಎನ್ನುತ್ತಾರೆ. ಗಬಾಳ ಎನ್ನುವುದು ಇಲ್ಲಿನವರ ಪ್ರಕಾರ ಜಾತಿಯಲ್ಲ ಅದು ಒಟ್ಟು ಕಬ್ಬು ಕಡಿಯಲು ಬರುವ ಕೂಲಿ ಕಾರ್ಮಿಕರನ್ನು ಸೂಚಿಸುವ ಪದ.

ಕಾರ್ಖಾನೆಯ ಸಮೀಪ ಬಂದು ನೋಡಿದರೆ ಗೂಡುಗಳ ಸಮುದ್ರವೇ ಗೋಚರಿಸುತ್ತದೆ. ಈ ಗೂಡುಗಳಲ್ಲಿರುವವರೆಲ್ಲ ಬೇರೆ ಬೇರೆ ಕಡೆಗಳಿಂದ ಬಂದ ದುಡಿಯುವ ದರ್ದಿನವರೇ.  ಸ್ವಲ್ಪ ಹತ್ತಿರದಿಂದ ಈ ದುಡಿಯುವ ಜನಗಳ ಬದುಕನ್ನು ನೋಡಿದರೆ ಕೆಲವು ಅಸಹನೀಯ ಸತ್ಯಗಳು ಎದೆ ಕಲಕುತ್ತವೆ. ಈ ಗೂಡುಗಳನ್ನು ಇವರೆಲ್ಲ ಕಬ್ಬಿನ ರವುದಿಯಿಂದಲೇ ಕಟ್ಟಿಕೊಳ್ಳುತ್ತಾರೆ. ಪಕ್ಕದಲ್ಲೇ ತಮ್ಮೊಂದಿಗೆ ತಂದಿರುವ ಎಮ್ಮೆ ಆಕಳು ಎತ್ತುಗಳಿಗೂ. ಕೋಳಿಗಳ  ಜೊತೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಈ ಜನ ಅದು ಹೇಗೆ ಅಷ್ಟು ಪುಟ್ಟ ಗೂಡುಗಳಲ್ಲಿ ಬದುಕುತ್ತಾರೋ ಕಣ್ಣುಗಳೇ ಹೆದರುತ್ತವೆ. ಕುಡಿಯಲು ಸಾಕಷ್ಟು ನೀರಿಲ್ಲ. ಅಷ್ಟು ಸಾವಿರ ಜನರಿಗೆ ಮಧ್ಯದಲ್ಲೆಲ್ಲೋ ಒಂದು ನೀರಿನ ಟ್ಯಾಂಕು. ರಾತ್ರಿಯಾದರೆ ಕಗ್ಗತ್ತಲು. ಹೌದು ಸೂರ್ಯ ಮುಳುಗಿದರೆ ಸಾಕು ಎಲ್ಲೆಲ್ಲೂ ಹುಡುಕಿದರೆ ಬೊಗಸೆ ಬೆಳಕು ಸಿಗುವುದಿಲ್ಲ. ಬಹಳಷ್ಟು ಕಡೆ ಹೀಗಿದೆ. ವಿಷಕಾರಿ  ಕೀಟಗಳು ಹೀಗೆ ಕತ್ತಲಲ್ಲಿ ಬದುಕುತ್ತಿರುವ ಇವರ ಚೈತನ್ಯವನ್ನು ಕಂಡೇ ಹತ್ತಿರ ಸುಳಿಯುವುದಿಲ್ಲವೇನೋ. ಅಡುಗೆ ಮಾಡಿಕೊಳ್ಳಲು ಉರುವಲಿಗೆ ತಮ್ಮ ತಮ್ಮ ಎತ್ತುಗಳ ಸಗಣಿಯಿಂದ ಮಾಡಿದ ಕುಳ್ಳುಗಳೇ ಗತಿ. ಇವು ಯಾವುವೂ ಇವರನ್ನು ಬಾಧಿಸುವುದಿಲ್ಲ.

ಹೀಗೆ ಕಬ್ಬು ಕಡಿಯಲು ಬರುವ ಈ ಕೂಲಿ ಕಾರ್ಮಿಕರು ವರ್ಷದ ಸುಮಾರು ಎಂಟು ತಿಂಗಳು ಇಲ್ಲಿ ದುಡಿಯುತ್ತಾರೆ. ಕೊರೆಯುವ ಚಳಿ, ಜೀವ ಹಿಂಡುವ ಮಳೆ, ಉರಿಯುವ  ಬಿಸಿಲು ಎಲ್ಲವನ್ನೂ ಇವರು ಅನುಭವಿಸುತ್ತಾರೆ ಯಾವುದೇ ಆತಂಕವಿಲ್ಲದೆ. ಬೆಳಗಿನ ಜಾವ ಇನ್ನೂ ಕತ್ತಲಲ್ಲೇ ಎದ್ದು ಬಂಡಿಗೆ ಎತ್ತುಗಳನ್ನು ಹೂಡಿಕೊಂಡು ರಸ್ತೆ ಹಿಡಿದು ಹೊರಡ ಬೇಕು ಕಬ್ಬಿರುವ ಹೊಲಕ್ಕೆ. ಕೆಲವು ಹತ್ತಿರದಲ್ಲಿದ್ದರೆ, ಕೆಲವು ಕಾರ್ಖಾನೆಯಿಂದ ಹಲವು ಕಿಲೋಮೀಟರ್‌‌ಗಳ ದೂರದಲ್ಲಿರುತ್ತವೆ.

ಕಬ್ಬಿನ ಬೆಳೆಯ ರಚನೆಯೂ ಈ ಕೂಲಿ ಕಾರ್ಮಿಕರನ್ನು ಹೇಗೆ ಹಿಂಸಿಸುತ್ತದೆ ಎನ್ನುವುದಕ್ಕೆ ಇವರ ಮುಖ, ಅಂಗೈ, ಕೈಕಾಲುಗಳನ್ನು ನೋಡಬೇಕು. ಮುಖದ ತುಂಬ ಯಾರೋ ಹರಿತವಾದ ರೇಜರ್‌ನಿಂದ ಪರಚಿದಂತಹ ಗೆರೆಗಳು, ಕಬ್ಬು ಕಡಿಯುವಾಗ ತಪ್ಪಿ ಬಿದ್ದು ಇನ್ನೂ ತುಂಡಾಗದೆ ಅಲ್ಲೇ ಕೂಡಿಕೊಂಡಿರುವ ಕೈಬೆರಳುಗಳು. ಮೈತುಂಬ ಪರಚಿದ ಗಾಯಗಳು. ಕಬ್ಬಿನ ಹಸಿ ಎಲೆಗಳು ತುಂಬ ಹರಿತ. ಅವುಗಳನ್ನು ಮುಷ್ಠಿಮಾಡಿ ಹಿಡಿದು ಕುಡುಗೋಲಿನಿಂದ ಕಡಿಯುವಾಗ ಇಷ್ಟೆಲ್ಲವನ್ನೂ ಅನುಭವಿಸಲೇಬೇಕು. ಇದು ಯಾರದೋ ಒಬ್ಬರ ಸ್ಥಿತಿಯಲ್ಲ ಕಬ್ಬು ಕಡಿಯುವ ಯಾರ ಅಂಗೈಯನ್ನು ನೋಡಿದರು ಈ ರೀತಿಯ ಗಾಯಗಳು ಸಾಮಾನ್ಯ. ಈ ಜನ ಕೇವಲ ಬೆವರನ್ನು ಹರಿಸುವುದಿಲ್ಲ, ರಕ್ತದ ಹನಿಗಳನ್ನೂ ಉದುರಿಸಬೇಕು.

ದುಡಿಮೆಯಲ್ಲಿನ ಇವರ ಶ್ರದ್ಧೆ, ತನ್ಮಯತೆ ಕಠೋರತೆ ಅನನ್ಯವಾದುದು. ಕಬ್ಬಿನ ದೊಡ್ಡ ದೊಡ್ಡ ಹೊಲಗಳು ಗಬಾಳಿಗರ ದುಡಿತದ ದಾಳಿಗೆ ವಿನಯದಿಂದ ಬಾಗುತ್ತವೆ. ಈ ದುಡಿಮೆಯ ಚಿತ್ರಗಳನ್ನು ಗಮನಿಸಿದರೆ ಬಹುಶಃ ದುಡಿಮೆಯಾಚೆಗೆ ಇವರು ಬೇರೇನನ್ನೂ ಯೋಚಿಸುವುದಿಲ್ಲ ಎನ್ನಿಸುತ್ತದೆ. ಈ ರಾಜ್ಯ, ಇಲ್ಲಿನ ಜನಪ್ರತಿನಿಧಿಗಳು, ಇಲ್ಲಿನ ಬಡ್ಜೆಟ್ಟು ಎಲ್ಲವನ್ನೂ ಸಾರಾಸಗಟಾಗಿ ಧಿಕ್ಕರಿಸಿ ತಮ್ಮ ದುಡಿತದ ಮೂಲಕವೇ, ತಮ್ಮ ಬದುಕಿನ ಸಂಕಷ್ಟದ ಆತ್ಯಂತಿಕ ಸ್ಥಿತಿಯ ಮೂಲಕವೇ ಈ ಪ್ರಭುತ್ವಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನಿಸುತ್ತದೆ.

ಇಲ್ಲಿನ ದುಡಿಮೆಗಾರರನ್ನು ಮಾತನಾಡಿಸಿದರೆ ನಾವು ಬಹುಶಃ ಊಹಿಸಲಾರದ ಕಠೋರ ವಾಸ್ತವಗಳು ಹೊರಬೀಳುತ್ತವೆ. ಮುಖ್ಯವಾದದ್ದೆಂದರೆ ಈ ಗಬಾಳಿಗರಿಗೂ ಮತ್ತು ಕಾರ್ಖಾನೆಗಳಿಗೂ ಯಾವುದೇ ಸಂಬಂಧವೇ ಇಲ್ಲ. ಅಂದರೆ ಇವರು ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿದರೂ ಕಾರ್ಖಾನೆ ಇವರಿಗೆ ಕೂಲಿ ಕೊಡುವುದಿಲ್ಲ ಬದಲಾಗಿ ಮಧ್ಯದ ದಲ್ಲಾಳಿಗಳು ನೀಡುತ್ತಾರೆ. ಇಲ್ಲಿರುವುದೇ ಎಣಿಕೆಗೆ ನಿಲುಕದ ಸೌಮ್ಯ ಮೋಸಗಳು. ಹೀಗೆ ಅಲೆಮಾರಿಗಳಾಗಿ ಬರುವ ಗಬಾಳಿಗರ ಮೂಲ ಊರುಗಳಿಗೆ ಹೋಗಿ ದಲ್ಲಾಳಿಗಳು ಕೆಲಸಕ್ಕೆ ಬರುವ ಮೊದಲೇ ದುಡ್ಡನ್ನು ಕೊಟ್ಟು ಎಷ್ಟು ಜನ ಬರಬೇಕು, ಎಷ್ಟು ಕೆಲಸ ಮಾಡಬೇಕು ಎಲ್ಲಿ ಕೆಲಸ ಮಾಡಬೇಕು ಮುಂತಾಗಿ  ಎಲ್ಲವನ್ನೂ ನಿರ್ಧರಿಸಿರುತ್ತಾರೆ. ಹಾಗಾದರೆ ಈ ದಲ್ಲಾಳಿಗಳಿಗೆ ದುಡ್ಡು ಹೇಗೆ ಬರುತ್ತದೆ ಎಂದು ವಿಚಾರಿಸಿದರೆ ಕಾರ್ಖಾನೆಗಳೇ ಈ ದಲ್ಲಾಳಿಗಳಿಗೆ ದುಡ್ಡನ್ನು ಕೊಟ್ಟಿರುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ದಲ್ಲಾಳಿಗಳಿಗೇನಿದೆ ಲಾಭ ಎಂದು ಯೋಚಿಸಿದರೆ ತಾವು ಹೂಡುವ ಎತ್ತಿಗಿಂತಲೂ ಭಯಂಕರವಾಗಿ ದುಡಿಯುವುದು ಗೊತ್ತಿರುವ ನಮ್ಮ ಜನ ಅದೆಷ್ಟು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ ಎಂಬುದು ವಿಷದವಾಗುತ್ತದೆ.

ಹೊಲದಿಂದ ಟನ್ನುಗಟ್ಟಲೆ ಕಬ್ಬನ್ನು ಕಡಿದು, ಫ್ಯಾಕ್ಟರಿಗಳೇ ಪೂರೈಸಿರುವ ಬಂಡಿಗಳಲ್ಲಿ ತುಂಬಿ ತಂದು ಕಾರ್ಖಾನೆಗೆ ಮುಟ್ಟಿಸಿದರೆ ಟನ್ನಿಗೆ ಇಂತಿಷ್ಟು ಎಂದು ಕಾರ್ಖಾನೆ ದುಡ್ಡು ನಿಗದಿಪಡಿಸಿರುತ್ತದೆ. ಅಲ್ಲಿನ ಲೆಕ್ಕ ಬರೆದುಕೊಳ್ಳುವವ ಕೂಲಿಕಾರ್ಮಿಕನ ಹೆಸರು ಬರೆದುಕೊಂಡು ಎಷ್ಟು ದುಡ್ಡಾಯಿತು ಎಂದೂ ಬರೆದುಕೊಳ್ಳುತ್ತಾನೆ. ಕೂಲಿಕಾರ್ಮಿಕ ತಂದ ಕಬ್ಬಿಗೆ ಕಾರ್ಖಾನೆ ನಿಗದಿಪಡಿಸಿದ ದುಡ್ಡಿನಲ್ಲಿ ನೂರಕ್ಕೆ ೧೮ ರೂಪಾಯಿಯಿಂದ ೨೫ ರೂಪಾಯಿಯವರೆಗೆ ಕಮೀಷನ್ ದಲ್ಲಾಳಿಗೆ ಹೋಗುತ್ತದೆ ಎಂಬುದಾಗಿ ಇಲ್ಲಿನ ಜನ ಅಲವತ್ತುಕೊಳ್ಳುತ್ತಾರೆ. ಕಾರ್ಖಾನೆಯವರೂ ಸಹ ಬಂಡಿಯನ್ನೇನು ಪುಗಸಟ್ಟೆ ನೀಡುವುದಿಲ್ಲ, ಅದಕ್ಕೂ ದಿನಬಾಡಿಗೆ ಕಟ್ಟಲೇಬೇಕು. ಹೀಗೆ ದಲ್ಲಾಳಿಯ ಕಮೀಷನ್, ಬಂಡಿಯ ಬಾಡಿಗೆ ತೆಗೆದು ಒಂದು ಗಬಾಳ ಕುಟುಂಬ ಗಂಡ, ಹೆಂಡತಿಯ ದುಡಿಮೆಯ ಜೊತೆಗೆ ಎರಡು ಎತ್ತುಗಳ ದುಡಿಮೆಯನ್ನೂ ಸೇರಿಸಿ ಸಿಗುವ ಪ್ರತಿಫಲ ಮಾತ್ರ ಕನಿಕರ ಉಕ್ಕಿಸುವಂಥದ್ದು. ಹೀಗೆ ಯಾರದೋ ದುಡಿತದಿಂದ ತಮ್ಮ ಜೇಬು ತುಂಬಿಸಿಕೊಳ್ಳುವ ದಲ್ಲಾಳಿ ಜನ ಇಲ್ಲಿ ಬಹಳ. ಆದರೂ ಬೇರೆ ಕೃಷಿ ಕೂಲಿಗೆ ಹೋಲಿಸಿದರೆ ಗಬಾಳಿಗರ ದುಡಿಮೆಯ ಫಲ ಸ್ವಲ್ಪ ಹೆಚ್ಚೇ, ಅದು ಕೇವಲ ದುಡ್ಡಿನ ರೂಪದಲ್ಲಲ್ಲ ಬೆವರು ರಕ್ತದ ರೂಪದಲ್ಲೂ.

ದುಡಿಯಲು ಬರುವ ಮೊದಲೇ ಸಿಕ್ಕ ದುಡ್ಡನ್ನು ಕೆಲವರು ಮಕ್ಕಳ ಮದುವೆ ಮಾಡಿ, ಜಾತ್ರೆ, ಹಬ್ಬ ಮಾಡಿ, ಇನ್ನೂ ಕೆಲವರು ಕುಡಿದು, ಜೂಜಾಡಿ ಖಾಲಿಯಾಗಿ ದುಡಿತಕ್ಕೆ ಬರುತ್ತಾರೆ. ಹೀಗೆ ಬಂದು ಇಲ್ಲಿ ಸಿಕ್ಕ ಬಯಲಿನ ಜಾಗದಲ್ಲಿ ರವುದಿಯಿಂದ ಗೂಡು ಕಟ್ಟಿ ದಿನದ ದುಡಿತದ ಯುದ್ಧಕ್ಕೆ ಅಣಿಮಾಡುವ ತಾಯಂದಿರ ಸ್ಥಿತಿಗತಿಗಳು ಮಹಿಳಾ ಕಲ್ಯಾಣದ ಮಾತನ್ನಾಡುವ ಪ್ರಭುತ್ವವನ್ನು ಅಣಕಿಸುವಂತಿವೆ. ಹೊತ್ತು ಮೂಡುವ ಮುನ್ನವೇ ಕತ್ತಲು ತುಂಬಿರುವ ಬಯಲಿನ್ಲಲ್ಲಿಯೇ ನೂರಾರು ಮಹಿಳೆಯರ  ಸ್ನಾನವೆಂದರೆ ನಮ್ಮ ಅತ್ಯಾಧುನಿಕ ನಾಗರಿಕತೆ ಇನ್ನೂ ಅಲ್ಲೇ ಇದೆ ಅನಿಸುತ್ತದೆ. ಸಿಕ್ಕ ದುಂಡು ಕಲ್ಲುಗಳಿಂದಲೇ ಒಲೆ ಹೂಡಿ, ಬೆರಣಿಗಳಿಂದ ಒಲೆ ಹೊತ್ತಿಸಿ ಅಡುಗೆ ಮಾಡಿಕೊಂಡು ಬಂಡಿ ಹತ್ತಿದಾಗ ಇನ್ನೂ ಬೆಳಕು  ಮೂಡಿರುವುದಿಲ್ಲ. ಕಬ್ಬು ಕಡಿಯುವಿಕೆ ಪ್ರಾರಂಭವಾಗಿ  ಬಂಡಿ ತುಂಬಿಸಿ ಹೊಲ ಸಮೀಪವಿದ್ದರೆ ಒಂದು ಬಂಡಿ ಕಾರ್ಖಾನೆಗೆ ಮುಟ್ಟಿಸಿ ಮತ್ತೆ ಇನ್ನೊಂದು ಬಂಡಿ ಒಯ್ಯುವ  ಧಾವಂತದಲ್ಲಿ ಬಂಡಿ ಏರುತ್ತಾರೆ. ಹೆಣ್ಣುಮಕ್ಕಳೇ ಅಷ್ಟು ಬಲವಾದ ಉಢಾಳ ಎತ್ತುಗಳನ್ನು ಪಳಗಿಸಿ ತಾವೇ ಬಂಡಿ ಕಟ್ಟುತ್ತಾರೆ, ತಾವೇ  ಬಂಡಿ ನಡೆಸುತ್ತಾರೆ. ಟನ್ನುಗಟ್ಟಲೇ ಕಬ್ಬನ್ನು ಹೇರಿಕೊಂಡು  ಹೀಗೆ ಬಂಡಿ ನಡೆಸಿಕೊಂಡು ಬರುವ ದಾರಿಯೇನು  ಹಸನಾದದ್ದಲ್ಲ. ಮುದುಕರು ಸರಾಗವಾಗಿ ನಡೆದುಕೊಂಡು ಬರಲು ಸಾಧ್ಯವಿಲ್ಲದ ತಗ್ಗು ದಿನ್ನೆಗಳಿಂದ ಕೂಡಿರುವ ರಸ್ತೆಯಲ್ಲಿ ಹೀಗೆ ಬರುವುದು ದುಸ್ಸಾಹಸವೇ ಸರಿ. ಕಷ್ಟ ಎದುರಾಗುವುದು ಏರುದಿನ್ನೆಗಳು ಬಂದಾಗ . ಎತ್ತುಗಳು ಜಗ್ಗಲು ಆಗದೇ ಒದ್ದಾಡುವಾಗ ಈ ಹೆಣ್ಣುಮಕ್ಕಳು ತಮ್ಮೆಲ್ಲ ಶಕ್ತಿಯನ್ನೂ ಕೂಡಿಸಿಕೊಂಡು ಎತ್ತುಗಳ ಜೊತೆ ಕಬ್ಬು ತುಂಬಿದ ಬಂಡಿಯನ್ನು ಎಳೆಯುತ್ತಾರೆ. ಹೀಗೆ ಎಳೆಯುವಾಗ ಆಗುವ ಅನಾಹುತಗಳು ತುಂಬ ಕ್ರೂರವಾದವು. ಎತ್ತುಗಳ ಕಾಲುಗಳೇ ಮುರಿಯುತ್ತವೆ, ಕಬ್ಬು ತುಂಬಿದ ಬಂಡಿ ಮುಗುಚಿ ಬೀಳುತ್ತವೆ, ಮತ್ತೆ ಎತ್ತುಗಳನ್ನು ಸುಧಾರಿಸಿಕೊಂಡು, ಕಬ್ಬನ್ನು ಮರಳಿ ತುಂಬಿ ಕಾರ್ಖಾನೆಗೆ ಮುಟ್ಟಿಸುವ ಕರ್ಮವೇ ಇಲ್ಲಿನ ಜನರ ಬದುಕಿನ ಚೈತನ್ಯವನ್ನು ಹೇಳುತ್ತದೆ.

ಇದಕ್ಕಿಂತ  ಭಯಾನಕ ಸನ್ನಿವೇಶವೆಂದರೆ ಗರ್ಭಿಣಿ ಹೆಣ್ಣುಮಕ್ಕಳು ಯಾವುದೇ ಅಳುಕಿಲ್ಲದೆ, ಆತಂಕವಿಲ್ಲದೆ ಕಿಲೋಮೀಟರ್ ಗಟ್ಟಲೆ ನಡೆದು ಕಬ್ಬು ಕಡಿಯಲು ಬರುವ ಚಿತ್ರ ಎಂಥವರನ್ನೂ ಅಲುಗಾಡಿಸದೇ ಇರದು. ಇನ್ನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವಾಗಲೂ ಇಲ್ಲಿನ ಮಹಿಳೆಯರು ಹೊಲದಲ್ಲಿ ಕಬ್ಬು ಕಡಿಯುತ್ತಿರುತ್ತಾರೆ. ತೀರಾ ತುರ್ತಿಗೆ ಬಂದು ನರಳಲು ಪ್ರಾರಂಭಿಸಿದ ಮೇಲೆ ಕನಿಷ್ಠ ವೈದ್ಯಕೀಯ ಸೌಲಭ್ಯವಿಲ್ಲದೆ ಬದುಕುತ್ತಿರುವ ಈ ದುಡಿಮೆಗಾರರು ಹೇಗೋ ರಸ್ತೆಗೆ ಬಂದು ಸಿಕ್ಕ ಬಸ್ಸನ್ನೇರಿ ಎಲ್ಲೋ ಇರುವ ಆಸ್ಪತ್ರೆಯನ್ನು ಹುಡುಕಿ ನಡೆಯುತ್ತಾರೆ.  ಹೀಗೆ ಹೋಗುವಾಗ  ಬಸ್ಸಿನಲ್ಲಿಯೇ ಹೆರಿಗೆಯಾದ ಉದಾಹರಣೆಗಳನ್ನು ಕೇಳಿ ದಿಗಿಲಾಯಿತು .  ಜೀವ ಪಣಕ್ಕಿಟ್ಟು ಮತ್ತೊಂದು ಜೀವಕ್ಕೆ ಜನ್ಮ ಕೊಡುವಾಗ ಯಾವ ಡಾಕ್ಟರುಗಳೂ ಇಲ್ಲದೆ ಔಷಧ, ಇಂಜೆಕ್ಷನ್ ಇಲ್ಲದೆ ಹೆರಿಗೆ ನಡೆಯುತ್ತದೆ ಎಂದರೆ ನಮ್ಮ ನವನಾಗರೀಕ ಸಮಾಜದ ಹೊಣೆ ಹೊತ್ತ ನಾಡ ಪ್ರಭುಗಳು ಏನು ಹೇಳುತ್ತಾರೆ.  ‘ಜನನಿ ಸುರಕ್ಷಾ’ ಯೋಜನೆ ತಾನು ಸುರಕ್ಷಿತವಾಗಿದೆಯೇ ಎಂದು ಕೇಳಬೇಕಾಗುತ್ತದೆ. ಬಿಡಿ ಇದು ದುಡಿತಕ್ಕೆ ಒಗ್ಗಿಕೊಂಡ ಇಲ್ಲಿನ ಜನಕ್ಕೆ ಯಾವುದೂ ಅಸಹಜವೆನಿಸುವುದಿಲ್ಲ ಎಂಬುದು ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ. ಇಂಥ ಘೋರ ಸಂಕಷ್ಟಗಳನ್ನೆಲ್ಲ ಇವರು ತುಂಬ ಸರಳವಾಗಿ ನಿರಾಕರಿಸಿ ಮುಂದಡಿಯಿಡುತ್ತಾರಲ್ಲ ಈ ಧೀಮಂತಿಕೆಗೆ ಸಾಟಿ ಯಾವುದು.

ಇತ್ತೀಚೆಗೆ ಹೊಸದಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ಇದರ ಪ್ರಕಾರ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗುವಂತಿಲ್ಲ. ಹಾಗೇನಾದರೂ ಆದರೆ ಅದಕ್ಕೆ ಕಾರಣರಾದ ತಂದೆ ತಾಯಿಯಾಗಲಿ, ಶಿಕ್ಷಕರಾಗಲಿ ಎಲ್ಲರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದರೆ ಈ ದುಡಿಯುವ ಜನಗಳ ಜೊತೆ ಬರುವ ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಎಳೆಯ ರಟ್ಟೆಗಳಲ್ಲಿಯೇ ಕಬ್ಬು ಕಡಿಯುತ್ತಿರುವ ಚಿತ್ರ ಈ ಕಟ್ಟು ನಿಟ್ಟಿನ ಕಾಯಿದೆಯನ್ನು ಕಟ್ಟುನಿಟ್ಟಾಗಿ ನಿರಾಕರಿಸಿರುವುದನ್ನು ಸೂಚಿಸುತ್ತದೆ. ನಮ್ಮ ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದೆಂದು ಏನೆಲ್ಲ ಯೋಜನೆಗಳು, ಎಷ್ಟು ಸಾವಿರ ಕೋಟಿ  ರೂಪಾಯಿಗಳು ಎಲ್ಲಿ ಹೋಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ. ಆಟವಾಡಬೇಕಾದ ಮಕ್ಕಳು ಆಳೆತ್ತರದ ಕಬ್ಬನ್ನು ಹರಿತ ಕುಡುಗೋಲಿನಿಂದ ಕಡಿಯುತ್ತಾ, ಮೈಮುಖಗಳನ್ನೆಲ್ಲ ಗಾಯಮಾಡಿಕೊಂಡು ಎತ್ತುಗಳನ್ನು ಹೂಡಿಕೊಂಡು ಬಂಡಿ ನಡೆಸುವ ಚಿತ್ರಕ್ಕೆ ಉತ್ತರ ಕೊಡುವವರಾರು?

ಉತ್ತರ ಕರ್ನಾಟಕದ ಮಕ್ಕಳ ಎದೆಯ ಮೇಲೆ ಮತ್ತು ಎದೆಯ ಒಳಗೆ ಬಿದ್ದಿರುವ ಬರೆಗಳು ಅಮಾನುಷವಾದವು. ತೋರಿಸಿ ಅರ್ಥೈಸಲಾರದವು. ಹೊಲದಲ್ಲಿ ಕಬ್ಬು ಕಡಿಯುತ್ತಿರುವ ತಮ್ಮ ಪುಟ್ಟ ಮಕ್ಕಳನ್ನು, ಹಸುಗೂಸುಗಳನ್ನು ಅಲ್ಲಿಯೇ ನೆರಳಿರುವ ಜಾಗ ನೋಡಿ , ಕಬ್ಬಿನ ಎಲೆಗಳನ್ನೇ ಹಾಸಿ ಮಲಗಿಸಿರುತ್ತಾರೆ. ಹೀಗೆ ಮಲಗಿಸಿರುವಾಗ ಹಿಮ್ಮುಖವಾಗಿ ಕಬ್ಬು ಹೇರಲು ಬಂದ ಟ್ರ್ಯಾಕ್ಟರ್ ಗಾಲಿಗೆ ಸಿಕ್ಕು ಜೀವ ಕಳೆದುಕೊಂಡ ಹಸುಗೂಸುಗಳ ಸಾವಿನ ಹೊಣೆ ಯಾರು ಹೊರುತ್ತಾರೆ? ಈ ದುರಂತಗಳು ಹುಡುಕಿದಷ್ಟು ಭೀಕರ. ಆದರೆ ಈ ದುರಂತಗಳ ಪರಿಹಾರದ ದಾರಿಗಳ ತುಂಬ ಮುಳ್ಳುಗಳು ತುಂಬಿವೆ. ಕೂಲಿ ಕಾರ್ಮಿಕರಿಗೆ ಅವರ ದುಡಿಮೆಗೆ ಸಂಬಂಧಿಸಿದಂತೆ ಹಲವು ಕಾನೂನುಗಳಿವೆ. ಈ ಕಾನೂನುಗಳನ್ನು ರೂಪಿಸಿದ ಪ್ರಭುತ್ವವೇ ಕಾನೂನನ್ನು ಹೇಗೆ ಮುರಿಯುತ್ತಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಈಗಿರುವ ಕಾನೂನಿನ ಪ್ರಕಾರ ಒಂದು ದಿನಕ್ಕೆ ನಿಗದಿಪಡಿಸಿದ ಕೂಲಿಯನ್ನು ಪ್ರಭುತ್ವ ಅಂಗನವಾಡಿ ಆಯಾಗಳಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡುತ್ತಿದೆಯೆ? ಉತ್ತರಿಸುವವರಾರು?

ಕೃಷಿಯ ಅವಸಾನಕ್ಕೂ, ಕೂಲಿಕಾರ್ಮಿಕರು ಎದುರಿಸುತ್ತಿರುವ ದುರಂತಗಳಿಗೂ ನೇರವಾದ ಸಂಬಂಧಗಳಿವೆ. ನಮ್ಮ ಪ್ರಭುತ್ವದ ಇಂದಿನ ನಡೆಯನ್ನು ಗಮನಿಸಿದರೆ ಅದು ಕೃಷಿಗೆ ಬಂದೆರಗಿರುವ ವಿಪತ್ತುಗಳನ್ನು ದೂರಮಾಡುವಿಕೆಯಲ್ಲಿ  ಗಮನಹರಿಸದೆ ಕೃಷಿಯನ್ನು ಕಾರ್ಪೋರೇಟ್ ಗೊಳಿಸುವಿಕೆಯಲ್ಲಿ ಹೆಚ್ಚು ಆಸ್ಥೆವಹಿಸಿದೆ ಎಂಬುದು ಸಹಜವಾಗಿ ಅರಿವಿಗೆ ಬರುತ್ತದೆ. ಈ ಕಾರಣದಿಂದಲೇ ಇಂದು ಸಾವಿರ ಜನ ಭೂಮಿ ಕಳೆದುಕೊಳ್ಳುತ್ತಿದ್ದಾರೆ, ಹಾಗೆ ಭೂಮಿ ಕಳೆದುಕೊಂಡವರು ಸಹಜವಾಗಿ ಕೂಲಿಕಾರ್ಮಿಕರಾಗಿ ಈ ರೀತಿ ತಬ್ಬಲಿ ಬದುಕಿಗೆ ಒಗ್ಗಿಕೊಳ್ಳುವಂತಾಗಿದೆ. ನಮ್ಮ ಅನ್ನದಾತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿಪಡಿಸದೆ, ಆ ಬೆಳೆದ ಬೆಳೆಯ ಉತ್ಪನ್ನ, ಉಪಉತ್ಪನ್ನಗಳ ಬೆಲೆಯನ್ನು ಗಮನಿಸಿದರೆ ಈ ಮಹಾಮೋಸದ  ಅರಿವಾಗುತ್ತದೆ. ಗೋಧಿಯ ಬೆಲೆಯಲ್ಲಿ ಎರಡು ದಶಕಗಳಲ್ಲಿ ಆಗಿರುವ ಬೆಳವಣಿಗೆಗಳಿಗೂ, ಅದರ ಉತ್ಪನ್ನಗಳಾದ ಬಿಸ್ಕಿಟ್, ಬೇಕರಿ ತಿಂಡಿಗಳ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಹೋಲಿಸಿದರೆ ತುಂಬ ಆತಂಕವಾಗುತ್ತದೆ. ಹತ್ತಿ ಬೆಳೆಯ ಬೆಲೆಯಲ್ಲಿ  ಆಗದಿರುವ ಏರಿಕೆ ಬಟ್ಟೆಯ ಬೆಲೆಯಲ್ಲಿ ಆಗಿದೆಯಲ್ಲ, ಇದು ಎಂಥ ವಿಪರ್ಯಾಸ. ತಾನೇ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲಾಗದೆ ಬೆತ್ತಲೆ ಫಕೀರರಂತೆ ಬದುಕು ದೂಡುತ್ತಿರುವ ಹಲವು ರೈತರನ್ನು ನಾವು ನೋಡುತ್ತಲೇ ಬಂದಿದ್ದೇವೆ. ರೈತಮಕ್ಕಳ ಹರಕುಬಟ್ಟೆಯಲ್ಲಿ ಈ ದೇಶದ ಚಿತ್ರ ಯಾರು ಬರೆದರೋ?

ಈ ಬದುಕಿನ ಎರಡು ಅಂಚುಗಳನ್ನು ಗಮನಿಸಿದರೆ ಈ ನೆಲದ ಚೈತನ್ಯ ಮತ್ತು ಪ್ರಭುತ್ವದ ದಾರಿದ್ರ್ಯದ ವಾಸ್ತವಗಳು ಸ್ಪಷ್ಟವಾಗುತ್ತವೆ. ಹೀಗೆ ಏನೆಲ್ಲ ಸಂಕಷ್ಟಗಳನ್ನು ಎದುರಿಸಿಯೂ ಇದೇ ದುಡಿಮೆಯ ದುಡ್ಡಿನಿಂದ ಇರುವ ಎರಡೂ ಹೆಣ್ಣುಮಕ್ಕಳನ್ನು ಓದಿಸಿ ಡಾಕ್ಟರ್, ಟೀಚರ್ ಮಾಡಿ ಬದುಕನ್ನು ಚಂದಗಾಣಿಸಿಕೊಂಡಿರುವ ಕುಟುಂಬದ ಉದಾಹರಣೆಯೂ ಇಲ್ಲಿದೆ. ತಮ್ಮ ಮಕ್ಕಳ ಮದುವೆಗೆ ನಾಲ್ಕು ಲಕ್ಷದವರೆಗೆ ಖರ್ಚುಮಾಡಿ ದುಡಿಯಲು ಬಂದವರೂ ಇದ್ದಾರೆ. ಜಮೀನಿದ್ದೂ ಕಾಲದ ಅವಕೃಪೆಯಿಂದ  ವ್ಯವಸಾಯ ಮಾಡಲಾಗದೆ ಇಲ್ಲಿ ಬಂದು ದುಡಿದು ಮತ್ತೆ ತಮ್ಮ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುವ ಕುಟುಂಬಗಳೂ ಇಲ್ಲಿವೆ.

ಹಾಗೆಯೇ  ಹೀಗೆ ಅಲೆಮಾರಿಗಳಾಗಿ ಇಲ್ಲಿ ಕೃಷಿಕೂಲಿ ಕಾರ್ಮಿಕರಾಗಿ  ಬಂದವರಲ್ಲಿ ಬಹುತೇಕ ಜನ ಗ್ರಾಮೀಣ ತಳಸಮುದಾಯದವರು. ಇರಲು ಮನೆಯಿಲ್ಲದೆ ಜೋಪಡಿಗಳಲ್ಲಿ ವಾಸ ಮಾಡುತ್ತಲೇ ಸಿಕ್ಕ ಕೆಲಸ ಮಾಡುತ್ತ  ಜೀವನ ನಡೆಸುತ್ತಿದ್ದವರಿಗೆ, ಯಾವ  ಕೆಲಸಗಳೂ ಸಿಗದೆ ದುಸ್ಥರವಾದಾಗ ಹೀಗೆ ಗಬಾಳಿಗರಾಗಿ ಇಲ್ಲಿ  ಬಂದು ಬದುಕು ದೂಡುತ್ತಿದ್ದಾರೆ. ಊರಿನ ಸಾಮಾಜಿಕ ದೌರ್ಜನ್ಯಗಳು, ಅವಮಾನಗಳು, ಕೊನೆಗೆ ಮನುಷ್ಯರಾಗಿ  ನೋಡುವ ಕಣ್ಣಿಲ್ಲದ ಮೇಲ್ಜಾತಿಗಳ ಅಮಾನವೀಯತೆಗೆ ಬೇಸತ್ತು  ಊರು ತೊರೆದು ಬಂದವರಿದ್ದಾರೆ. ಈ ಪ್ರಭುತ್ವದ ದಲಿತೋದ್ಧಾರದ ಮಾತುಗಳು, ಯೋಜನೆಗಳು ಯಾರ  ಹೆಸರಿನಲ್ಲಿ ಯಾರಿಗೆ ಸೇರುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ವಾಸ್ತವಗಳು ಬೇರೆ ಇಲ್ಲ. ಹಲವರಿಗೆ ತಾವು ಇಂತವರೆಂದು ಹೇಳಿಕೊಳ್ಳಲೂ ಸಹ ಮತದಾನದ ಗುರುತಿನ ಚೀಟಿಗಳೇ ಇಲ್ಲದ ಮೇಲೆ ಯಾವ ಸೌಲಭ್ಯ ತಾನೆ ಯಾರಿಗೆ ದಕ್ಕುತ್ತೆ?

ಇಲ್ಲಿನ ಮೋಸದ ಚಹರೆಗಳನ್ನು ಗಮನಿಸುತ್ತಾ ಹೋದರೆ ನಮ್ಮ ಕಲ್ಪನೆಗೂ ಮೀರಿದ ವಾಸ್ತವಗಳು ತೆರೆದುಕೊಳ್ಳುತ್ತವೆ. ಕಬ್ಬು ಬೆಳೆಗಾರರೂ ಸಹ ಏಜೆಂಟರ ವಂಚನೆಗಳಿಗೆ ಬಲಿಯಾಗಿದ್ದಾರೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗಳಿಗೆ ಕೊಂಡೊಯ್ಯಲು ಇದೇ ಏಜೆಂಟರಿಗೆ ಎರಡು ಸಾವಿರದವರೆಗೆ ದುಡ್ಡು ಕೊಟ್ಟು ಕೈಸುಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ದುಡ್ಡು ಕೊಡದೆ ಹೋದರೆ ಆ ರೈತನ ಕಬ್ಬು ಹೊಲದಲ್ಲಿಯೇ  ಉಳಿಯಬೇಕಾಗುತ್ತದೆ. ವಂಚನೆಗೊಳಗಾಗಲೇಬೇಕಾಗದ ಅನಿವಾರ್ಯತೆಯನ್ನು ಇಲ್ಲಿನ ಏಜೆಂಟರು ಸೃಷ್ಟಿಸಿದ್ದಾರೆ.

ಇಲ್ಲಿ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಮ್ಮ ರೈತ ಹೋರಾಟಗಳು ಯಾರನ್ನು ಕೇಂದ್ರೀಕರಿಸಿಕೊಂಡಿವೆ, ಯಾರನ್ನು ಅಲಕ್ಷಿಸಿವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕಬ್ಬು ಬೆಳೆಗಾರರಿಗಾಗಿ ಸಂಘಗಳನ್ನು ಕಟ್ಟಿಕೊಂಡು ನ್ಯಾಯಯುತವಾದ  ಬೆಲೆಗಾಗಿ ಹೋರಾಟ ನಡೆಸುತ್ತಿರುವುದು ಸರಿಯಷ್ಟೆ, ಆದರೆ ಈ ಹೋರಾಟ ಜಮೀನು ಉಳ್ಳವರ ಸಮಸ್ಯೆಗಳಲ್ಲಿ ತೋರಿದ ಆಸಕ್ತಿಯನ್ನು, ಕೂಲಿಕಾರ್ಮಿಕರ  ಸಂಕಷ್ಟಗಳನ್ನು ನಿವಾರಿಸುವಲ್ಲಿ ತೋರುತ್ತಿಲ್ಲ  ಏಕೆ?  ರೈತ ಸಂಘ ಉಳ್ಳವರ, ಜಮೀನು ವಾರಸುದಾರರ ಪರವಾಗಿ ಮಾತ್ರವಿದೆಯೆಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಕೂಲಿ  ಇಂದು ನೆಮ್ಮದಿಯ ಘನತೆಯ ಬದುಕಿಗೆ ದಾರಿಯಾಗದೆ, ಜೀವ ಉಳಿಸಿಕೊಳ್ಳುವುದಕ್ಕಾಗಿ ನಡೆಯುವ ಹೋರಾಟದಲ್ಲಿ ಸಿಕ್ಕ ಸಣ್ಣ ಭರವಸೆ ಮಾತ್ರವಾಗಿದೆ. ರೈತ ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆ ದೊರೆತಿದ್ದರೆ  ಕೆಲವು ಜನ ಕೂಲಿಕಾರ್ಮಿಕರಾದರೂ ನೆಮ್ಮದಿಯಿಂದ  ಉಸಿರಾಡಬಹುದಿತ್ತು. ಜಮೀನನ್ನು ಊರ ಸಾಹುಕಾರನಿಗೋ, ಗೌಡನಿಗೋ ಅಡವಿಡದೆ ತಾವು ಬೆಳೆದ ಅನ್ನ ತಾವೇ ತಿನ್ನಬಹುದಿತ್ತು. ಇಂದು ಯಾರನ್ನೂ ಶೋಷಕರೆಂದು  ಬೊಟ್ಟು ಮಾಡಿ ತೋರಿಸುವಂತಿಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ದೌರ್ಜನ್ಯ ನಡೆಸುವವರಿಗೆ ನಿರ್ದಿಷ್ಟ ಆಕಾರವೇ ಇಲ್ಲ, ಇನ್ನು ಹೇಗೆ ಗುರುತಿಸುವುದು? ಶತಶತಮಾನದಿಂದ ನೋವೇ ಬದುಕಾದವರಿಗೆ ಶೋಷಣೆಯ ಚಹರೆಗಳು ಅರ್ಥವಾಗುವುದಿಲ್ಲ. ಸಮಾನತೆ ಕನಸೆ? ಕಾಲವೇ ಉತ್ತರಿಸುತ್ತದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

(ಚಿತ್ರಗಳು: ಲೇಖಕರವು)

nayakanuru-1.jpg

ನವಿಲು ಕಣ್ಣಿನ ಗಾಯದ ಚಿತ್ರಗಳು

ವೀರಣ್ಣ ಮಡಿವಾಳರ

ಊರು ಎನ್ನುವ ಪದ ಎಲ್ಲ ಸಮುದಾಯಗಳನ್ನು ಒಳಗೊಂಡ ತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದು ಮಾನಸಿಕವಾಗಿ ಕೇರಿಯಿಂದ ಬೇರ್ಪಟ್ಟ ಜಾಗ ಮಾತ್ರ. ಇದು ಇವತ್ತಿನ ಸ್ಥಿತಿಯೋ ಅಥವಾ ಯಾವತ್ತಿಗೂ ಹೀಗೆಯೇ ಇತ್ತೋ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. `ಗ್ರಾಮೀಣಕೇರಿ` ಎನ್ನುವ ಸಮುದಾಯ ಅದು ಒಂದು ಜೀವ ಸಮುದಾಯವಾಗಿಯೂ ಸಹ nayakanuru-1.jpgಇವತ್ತು ನಮ್ಮನ್ನಾಳುವ ಪ್ರಭುಗಳಿಗೆ ತೋರುತ್ತಿಲ್ಲ. ಇದೇ ಸಮುದಾಯದ ಪ್ರತಿನಿಧಿಗಳಾಗಿ ರಾಜಕೀಯ ಮುಖಂಡರಾದವರೂ ಸಹ ಅಲ್ಲಿಯೂ ಮತ್ತೊಂದು ರೀತಿಯ ದಾಸ್ಯದಲ್ಲಿಯೇ ಮುಂದೆ ನಡೆದಿದ್ದಾರೆ. ತಾವು ಹುಟ್ಟಿ ಬೆಳೆದ, ತಮಗೆ ಬದುಕು ಕೊಟ್ಟ ಹಳ್ಳಿಗಳ ಕೇರಿ ಇಂದವರಿಗೆ ಅಪರಿಚಿತ. ಗ್ರಾಮೀಣಕೇರಿಗಳ ತಳಮಳವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದ ಸ್ಥಿತಿಗೆ ತಳಸಮುದಾಯದ ಪ್ರತಿನಿಧಿಗಳು ತಲುಪಿರಬೇಕಾದರೆ, ಇನ್ನು `ಒಬ್ಬ ಏಕಲವ್ಯನಿಗಾಗಿ ಹಾಸ್ಟೆಲ್‌ಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ` ಎನ್ನುವ ನಾಡ ಪ್ರಭುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಭೋಜದಲ್ಲಿ ಮುರಿದು ಬಿದ್ದ ಕೇರಿ ಬದುಕು

ಊರಿಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತುದಿಯಲ್ಲಿರುವ ಈ ಭೋಜ ಕರ್ನಾಟಕದ ಗಡಿಯಲ್ಲಿರುವ ಒಂದು ಹಳ್ಳಿ. ಇತ್ತೀಚೆಗೆ ಒಂದು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಅಂದಾಜು ಐನೂರಕ್ಕೂ ಹೆಚ್ಚು ಜನ ಕೇರಿಯ ಮೇಲೆ ದಾಳಿ ಇಟ್ಟರು. ಅದೀಗ ನಿದಿರೆಗೆ ಜಾರುತ್ತಿದ್ದ ಜೀವಗಳ ಜೀವ ಕೈಗೆ ಬಂದು ತಲ್ಲಣದಲ್ಲಿ ಮುದುಡಿ ಹೋದವು.

ದಾಳಿಕೋರರು ತೂರಿದ ಕಲ್ಲುಗಳ ಬಾಯಿಗೆ ಕರುಣೆಯಿರಲಿಲ್ಲ. ಆ ಕಲ್ಲುಗಳಿಗೆ ಮೊದಲು ಬಲಿಯಾದದ್ದು ಆ ಕೇರಿಯ ಬೆಳಕು. ಬೀದಿಯ ಕಂಬದ ದೀಪಗಳೆಲ್ಲ ಉದುರಿ ಹೋದವು. ಒಮ್ಮಿಂದೊಮ್ಮೆಗೆ ಕೇರಿಯ ತುಂಬ ಕತ್ತಲು. ಕಿವಿಗಡಚಿಕ್ಕುವ ಬೈಗುಳಗಳು. ಮನೆ ಮನೆಯ ಕದಗಳೆಲ್ಲ ಮುರಿದುಬಿದ್ದವು. ಮನೆಯೊಳಗಿನ ಜೀವಗಳು ಬೇಟೆಗಾರರಿಗೆ ಹೆದರಿದ ಮಿಕಗಳಂತೆ ನಡುಗುತ್ತಾ ಮೂಲೆ nayakanuru-2.jpgಸೇರಿದವು. ಇವರ ಕ್ರೌರ್ಯಕ್ಕೆ ಬಲಿಯಾಗದ ವಸ್ತುಗಳೇ ಉಳಿಯಲಿಲ್ಲ. ನಾಲ್ಕಾರು ಬೈಕ್‌ಗಳು ನಜ್ಜುಗುಜ್ಜಾದವು. ಗುಡಿಸಲುಗಳು ನಡಮುರಿದುಕೊಂಡು ನೆಲಕ್ಕೆ ಒರಗಿದವು. ಗೋಡೆಗಳೆಲ್ಲ ಅಂಗಾತ ಮಲಗಿದವು ವಯಸ್ಸಾದ ಮುದುಕರಂತೆ. ಒಳಕ್ಕೆ ಬಂದು ಕೈಗೆ ಸಿಕ್ಕು ಒಡೆದು ಹೋದ ವಸ್ತುಗಳಲ್ಲಿ ಟಿ.ವಿ., ಡಿ.ವಿ.ಡಿ, ಕುರ್ಚಿಗಳು ತಾವೇ ಸೇರಿದವು. ಈ ರೀತಿ ಹಾಳು ಮಾಡುವ ಮನಸ್ಸುಗಳಿಗೆ ಬಲಿಯಾದ ವಸ್ತುಗಳ ಆಯ್ಕೆಯಲ್ಲಿಯೇ ತಿಳಿಯುತ್ತದೆ ಇವರ ಅಸಹನೆ ಎಂಥದ್ದು ಎಂಬುದು. ವಸ್ತುಗಳನ್ನು ಮತ್ತೆ ಕೊಳ್ಳಬಹುದು, ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹದಿನಾರು ವರುಷದ ಹುಡುಗನಿಗೆ ಆದ ತೊಂದರೆ ತುಂಬಿಕೊಡುವರಾರು?  ಕೆಟ್ಟ ಆಕ್ರೋಶದ ಮನಸ್ಸು ಒದ್ದ ರಭಸಕ್ಕೆ ಕದದ ಹಿಂದೆ ಆತು ನಿಂತಿದ್ದ ಗರ್ಭಿಣಿ ಹೆಣ್ಣುಮಗಳು ನೆಲಕ್ಕೆ ಬಿದ್ದು ಅನುಭವಿಸಿದ ಹಿಂಸೆಗೆ ಹೊಣೆ ಯಾರು?

ಕೇರಿಗೆ ಸೇರಿದ ಕೆಲ ಹುಡುಗರು ರಸ್ತೆಯಲ್ಲಿ ವಾಲಿಬಾಲ್ ತೂರಾಡುತ್ತಾ ಬರುತ್ತಿದ್ದಾಗ ಒಬ್ಬ ಅಜ್ಜನಿಗೆ ಚೆಂಡು ಬಡಿದಿದೆ. ಈ ತಪ್ಪಿಗೆ ಹುಡುಗರನ್ನು ಹಿಡಿದು ಬಡೆದದ್ದಾಗಿದೆ. ತಪ್ಪು ಮಾಡಿದ ಹುಡುಗರ ತಂದೆತಾಯಿಗಳು ಅಜ್ಜನ ಮನೆಗೆ ಹೋಗಿ ಕೈಮುಗಿದು ಕ್ಷಮೆ ಕೇಳಿ ಬಂದದ್ದಾಗಿದೆ. ಮತ್ತೊಂದು ದಿನ ಕೇರಿಯವನೊಬ್ಬ ದಾರಿಯಲ್ಲಿ ಕುಡಿದು ಓಲಾಡುತ್ತ ಬರುತ್ತಿದ್ದಾಗ ಒಬ್ಬ ಹೆಣ್ಣುಮಗಳಿಗೆ ಕೈ nayakanuru-3.jpgತಾಗಿಸಿದ್ದಾನೆ. ಆ ಹೆಣ್ಣುಮಗಳು ಕುಡಿದವನನ್ನು ಬಾರಿಸಿದ್ದಾಳೆ. ಕುಡಿದ ಅಮಲಿನ ಅವಿವೇಕದ ವ್ಯಕ್ತಿ ಮರಳಿ ಆ ಮಹಿಳೆಗೆ ಹೊಡೆದು ಪರಾರಿಯಾಗಿದ್ದಾನೆ. ಇದು ಘಟನೆಯ ಸ್ಥಳದಲ್ಲಿ ಈ ಹಲ್ಲೆಗೆ ತಿಳಿದು ಬಂದ ಕಾರಣ. ವಿಷಾದದ ಸಂಗತಿಯೆಂದರೆ ಮೇಲ್ಜಾತಿಯವರೇ ಸಾಮೂಹಿಕವಾಗಿ ತಪ್ಪು ಮಾಡಿದರೂ, ಅವರ ತಪ್ಪಿಗೆ ಕೇರಿಯೇ ಸಾಮೂಹಿಕವಾಗಿ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ಕೇರಿಯವ ಒಬ್ಬನೇ ತಪ್ಪು ಮಾಡಿದರೂ, ಇಡೀ ಕೇರಿಯೇ ಆ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ಭೋಜಕ್ಕೆ ಸಂಬಂಧಿಸಿದಂತೆ ಇಲ್ಲಿ ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇರೆ ದಾರಿಗಳಿರಲಿಲ್ಲವೆ? ಕರ್ನಾಟಕದ ಗ್ರಾಮೀಣಕೇರಿಗಳ ವಾಸ್ತವಗಳೇ ಹೀಗೆ ಎನಿಸುತ್ತದೆ.

ಹೇಗಿದೆ ನಾಯಕನೂರು?

ಊರಿನ ಜಮೀನ್ದಾರನ ಕೆಂಗಣ್ಣಿಗೆ ಬಲಿಯಾಗಿ, ಬಹಿಷ್ಕಾರಕ್ಕೆ ಒಳಗಾಗಿದ್ದ ನಾಯಕನೂರಿನ ಕೇರಿಯ ಜನ ಸರ್ಕಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಸಮಾಧಾನದಿಂದಿದ್ದರು. ಎಷ್ಟೆಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋಗಿ ಕೆಲವು ತಿಂಗಳೇ ಆದರೂ ಇಲ್ಲಿಯ ಪರಿಸ್ಥಿತಿ ವಿಷಾದ ಹುಟ್ಟಿಸುತ್ತದೆ. ಇವರನ್ನು ಮಾತನಾಡಿಸಿದಾಗ ಅವರ ಮನದಾಳದಿಂದ ಹೊರ ಬೀಳುವ nayakanuru-4.jpgಮಾತುಗಳು ಆರ್ದ್ರತೆ ತರಿಸುತ್ತವೆ. ಇನ್ನೇನು ಬಿದ್ದೇ ಬಿಡುತ್ತವೆ ಎನ್ನಿಸುವಂಥ ಮನೆಗಳು, ಇಕ್ಕಟ್ಟಾದ ಸಂದಿಗಳಲ್ಲಿ ಮೈಯೆಲ್ಲ ಗಾಯ ಮಾಡಿಕೊಂಡು ನಿಂತುಕೊಂಡಿವೆ. ಈ ಕೇರಿಯಲ್ಲಿ ಸುಮಾರು 37 ಕುಟುಂಬಗಳಿವೆ. ಒಬ್ಬರಿಗೂ ಹೇಳಿಕೊಳ್ಳಲೂ ಸಹ ತುಂಡು ಭೂಮಿಯಿಲ್ಲ. ಯಾವ ಮನೆಗೂ ಶೌಚಾಲಯವೇ ಇಲ್ಲವೆಂದ ಮೇಲೆ `ಗ್ರಾಮ ನೈರ್ಮಲ್ಯ` ಎಲ್ಲಿಂದ ಬರಬೇಕು. ಕೆಲವು ಕಡೆ ಮಾಡಲು ಕೆಲಸಗಳಿವೆ, ಆದರೆ ಕೈಗಳಿಲ್ಲ. ನಾಯಕನೂರಿನ ಈ ಕೇರಿಯಲ್ಲಿ ದುಡಿಯಲು ಕೈಗಳು ಸಿದ್ಧ ಇವೆ, ಕೆಲಸ ಕೊಡುವ ಮನಸ್ಸುಗಳಿಲ್ಲ. ತಿಪ್ಪಣ್ಣ ಮಾದರ ಯಾವಾಗಲೋ ನಿರ್ಮಿಸಲಾಗಿರುವ ತನ್ನ ಮನೆಯಲ್ಲಿ 20 ಜನರ ತನ್ನ ಕುಟುಂಬದೊಂದಿಗೆ ಒಟ್ಟಿಗೆ  ವಾಸಿಸುತ್ತಿರುವುದಾಗಿ ಹೇಳುತ್ತಾನೆ. `ಮನೆಗೆ ಅಳಿಯ ಬಂದರೆ ದುರ್ಗಮ್ಮನ ಗುಡಿಯೇ ಗತಿ` ಎನ್ನುತ್ತಾನೆ. ಇದು ತಿಪ್ಪಣ್ಣನ ಕಥೆ ಮಾತ್ರವಲ್ಲ. ಹಲವು ಜನರದ್ದು ಇದೇ ವ್ಯಥೆ. ಕರಿಯಪ್ಪ ತಾಯಿ ಯಲ್ಲವ್ವ ಮಾದರ ಎಂಬ ಅಜ್ಜನಿಗೆ ಎಂಟು ತಿಂಗಳಿನಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಕರಿಯಪ್ಪ ತಾಯಿ ಕರಿಯವ್ವ ಮಾದರ ಎಂಬ ಅಜ್ಜನ ಸ್ಥಿತಿಯೂ ಇದೆ. ಈ ಇಳಿವಯಸ್ಸಿನಲ್ಲಿಯೂ ಕೆಲಸ ಹುಡುಕಿಕೊಂಡು ದುಡಿದು ತಿನ್ನದೆ ಗತ್ಯಂತರವಿಲ್ಲದ ಸ್ಥಿತಿಯಲ್ಲಿ ಈ ಅಜ್ಜಂದಿರಿದ್ದಾರೆ.

ಈ ಕೇರಿ ಅಸಮಾನ ಅಭಿವೃದ್ಧಿಯ ಚಿತ್ರದಂತಿದೆ. ಇಲ್ಲಿ ತಲೆತಲಾಂತರದಿಂದ ಇಂದಿನವರೆಗೂ ಒಬ್ಬನೇ ಒಬ್ಬನಿಗೂ ನೌಕರಿ ಸಿಕ್ಕಿಲ್ಲವೆಂದರೆ, ಮೀಸಲಾತಿ ಮರೀಚಿಕೆಯೇ ಅಲ್ಲವೇ? ಸ್ವಾತಂತ್ರ್ಯ nayakanuru-5.jpgಬಂದು ಆರು ದಶಕಗಳೇ ಆಗಿದ್ದರೂ ನಮ್ಮ ಕೇರಿಗಳು ಇನ್ನೂ ಅಲ್ಲೇ ಇವೆ. ಆಶ್ರಯ ಯೋಜನೆ ಯಾರಿಗೆ ಆಶ್ರಯ ಕೊಟ್ಟಿದೆ? ಸಂಧ್ಯಾ ಸುರಕ್ಷಾ ಯಾರ ರಕ್ಷಣೆಗೆ ನಿಂತಿದೆ? ನಡುಮಧ್ಯಾಣ ತಲೆ ಮೇಲೆ ಕೈ ಹೊತ್ತು ಗುಂಪಾಗಿ ಕುಳಿತ ಮಹಿಳೆಯರನ್ನು ಮಾತನಾಡಿಸಿದರೆ- `ಇಷ್ಟು ದಿನ ಉದ್ಯೋಗ ಖಾತ್ರಿ ಒಳಗ ಕೆಲಸಕ್ಕ ಹೊಕ್ಕಿದ್ವಿರಿ, ಈಗ ಅದು ಮುಗಿದೈತಿ. ಕೆಲಸಕ್ಕ ಯಾರೂ ಕರಿ ಒಲ್ರು, ಬುದ್ದಿ ಬರಬೇಕ ನಿಮ್ಗ ಅಂತಾರೀ.. ಅದ್ಕ ಚಿಂತ್ಯಾಗೇತ್ರಿ`.

ಈ ಊರಿನಲ್ಲಿ ಕಾಯಿಲೆ ಬಿದ್ದರೆ ಔಷಧಿಗಾಗಿ ಪಕ್ಕದ ಊರಿಗೆ ಹೋಗಬೇಕಾದ ಸ್ಥಿತಿ ಹಳ್ಳಿಗರದು. ನೀವು ಜಾತ್ರೆ ಮಾಡುವುದಿಲ್ಲವೆ ಎಂದರೆ, `ಅಲ್ರಿ… ಒಂದು ಸಾರಿ ಎಲ್ಲಾರೂ ಸೇರಿ ನಮ್ಮ ಕೇರಿ ದುರ‌್ಗವ್ವನ ಜಾತ್ರಿ ಮಾಡೋಣಂತ ನಿರ್ಧಾರ ಮಾಡಿದ್ವಿ. ಆದ್ರ ನಮ್ಮ ದುರ‌್ಗವ್ವಗ ಯಾರೂ ಬನ್ನಿ ಮುಡಿಯಾಕ ತಮ್ಮ ಹೊಲದೊಳಗ ಬಿಟ್ಟುಕೊಳ್ಳಲಿಲ್ರಿ. ಅದ್ಕ ಬಿಟ್ಟು ಬಿಟ್ವಿರಿ` ಎನ್ನುತ್ತಾರೆ. ಶೋಷಣೆ ಸಾಂಸ್ಕೃತಿಕವಾಗಿಯೂ ಇರಬಹುದೆ?

ಈ ಬಹಿಷ್ಕಾರದ ಘಟನೆ ನಡೆದ ನಂತರ ಬಂದ ಜನ ಪ್ರತಿನಿಧಿಗಳು ಎಲ್ಲರ ಮನೆ ರಿಪೇರಿ ಮಾಡಿಸಿಕೊಡುವುದಾಗಿಯೂ, ವಾರಕ್ಕೊಮ್ಮೆ ಬಂದು ಯೋಗಕ್ಷೇಮ ವಿಚಾರಿಸುವುದಾಗಿಯೂ ಹೇಳಿ ಹೋದದ್ದೇ ಬಂತು, ಅವರಿಗಾಗಿ ಇವರು ಕಾಯುತ್ತಿದ್ದಾರೆ. ಭೂಮಿ ಕೊಡುವುದಾಗಿ ಹೇಳಿದ್ದನ್ನು ಕನವರಿಸುತ್ತಿದ್ದಾರೆ.

nayakanuru-6.jpgನಾಯಕನೂರಿನ ಕೇರಿಯ ಜನ ಐವತ್ತು ಲಕ್ಷ ರೂಪಾಯಿ ಅನುದಾನ ಬಂದಿರುವುದನ್ನು ಅಧಿಕಾರಿಗಳಿಂದ ತಿಳಿದು ಆ ದುಡ್ಡಿನಲ್ಲಿ ತಮಗೊಂದು ವಸತಿ ಪ್ರದೇಶ, ಅದರಲ್ಲಿ ಕನಿಷ್ಠ ಅಗತ್ಯಗಳಾದರೂ ಇರುವ ಮನೆಗಳು ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಹೇಳುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮ ಅನ್ನ ತಾವೇ ದುಡಿದುಕೊಳ್ಳಲು, ದುರ್ಗವ್ವನಿಗೆ ಬನ್ನಿ ಮುಡಿಸಲು, ಭೂಮಿಗಾಗಿ ಹಂಬಲಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ನೈತಿಕ ಇಚ್ಛಾಶಕ್ತಿ ಇರುವವರಾರು?

ಮತ್ತೆ ಮತ್ತೆ ಏಕಲವ್ಯ

ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಇದು ತಳಸಮುದಾಯಗಳ ಅಳಿವಿನ ಕಾಲ ಎನ್ನಿಸುತ್ತದೆ. ನಮ್ಮ ಊರುಗಳ ಶಾಲೆಗಳನ್ನು ಕೋರ್ಟಿಗೆ ಹೋಗಿ ಉಳಿಸಿಕೊಳ್ಳಲು ಹೆಣಗುತ್ತಿರುವಾಗಲೇ, 154 ಪರಿಶಿಷ ್ಟ ಜಾತಿ ಪಂಗಡಗಳ ಹಾಸ್ಟೆಲ್‌ಗಳನ್ನು ಮುಚ್ಚುತ್ತಿರುವ ಸುದ್ದಿ ಬಂದಿದೆ. ಕೆಲವು ಹಾಸ್ಟೆಲ್‌ಗಳಲ್ಲಿ, ಕೊಠಡಿಯೊಂದರಲ್ಲಿ ಹಿಡಿಸಲಾರದಷ್ಟು ಹುಡುಗರು ತುಂಬಿಕೊಂಡು ಓದುತ್ತಿರುವುದಕ್ಕೆ ಇನ್ನೂ 200 ಹಾಸ್ಟೆಲ್‌ಗಳ ಬೇಡಿಕೆ ಸರಕಾರದ ಮುಂದಿರುವಾಗಲೇ ಈ ನಿರ್ಧಾರ! ಅಂದರೆ, ನಮ್ಮನ್ನಾಳುವ ಪ್ರಭುಗಳ ನೀತಿ ದಲಿತ ವಿರೋಧಿ ಮಾತ್ರವಲ್ಲ, ಮುಖ್ಯವಾಗಿ ಅಸ್ಪೃಶ್ಯರ ವಿರೋಧಿ ಎನಿಸುತ್ತದೆ.

ಏಕಲವ್ಯರು ಮತ್ತೆ ಮತ್ತೆ ಅನಾಥರಾಗುತ್ತಿದ್ದಾರೆ. ಜಮಖಂಡಿಯ ಹಾಸ್ಟೆಲ್‌ವೊಂದರಲ್ಲಿ ತಿನ್ನಬಹುದಾದ ಅನ್ನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿ ಬಂದಿರುವಾಗ ಹಾಸ್ಟೆಲ್‌ಗಳೇ ಮುಚ್ಚಿದರೆ ಮುಂದೇನು? ಅಕ್ಷರದಿಂದಲೇ ಅನ್ನದ ಕನಸು ಕಾಣುವ ಕಣ್ಣುಗಳಿಗೆ ಭರವಸೆಗಳೇ ಉಳಿಯುತ್ತಿಲ್ಲ. ಆಧುನಿಕತೆಯ ನಾಗಾಲೋಟದಲ್ಲಿ ಶಿಕ್ಷಣ ದುಬಾರಿ ಸರಕಾಗಿರುವಾಗ ನಾಯಕನೂರಿನಂಥ ಕೇರಿಗಳಿಂದ ಬರುವ ಕಣ್ಣೀರು ಮಾರುವ ಹುಡುಗರು ಕೊಳ್ಳುವುದೆಲ್ಲಿಂದ ಬಂತು? ಅಕ್ಷರದಿಂದ ಬದುಕಿಗೆ ಬೆಳಕು ಹುಡುಕುವ ಹುಡುಗರ ಆಸೆಗಳು ಕೇರಿಯಲ್ಲೇ ಕಮರಬೇಕೆ?

ಗಾಯಕ್ಕೆ ಮುಲಾಮು ಹುಡುಕುತ್ತಾ…

ಈಗೀಗ ನವಿಲಿನ ಅಷ್ಟೂ ಕಣ್ಣಿನಲ್ಲಿ ತೋರಲಾಗದ ಗಾಯದ ಚಿತ್ರಗಳು. ಕೇರಿ ಅಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ. ಸಾಂವಿಧಾನಿಕ ಮೀಸಲಾತಿ ಅಸಮಾನತೆಯ ಅಭಿವೃದ್ಧಿಗೆ ಬಲಿಯಾಗಿದೆ. ಈ nayakanuru-7.jpgಗಾಯಗಳು ಕೇವಲ ನಿರ್ಗತಿಕತೆಯಿಂದ ಆದವುಗಳಲ್ಲ, ಯಾರೋ ಬಾರಿಸಿದ ಗಾಯಗಳೂ ಸೇರಿವೆ. ಸಾವಿರ ಸಾವಿರ ಕೋಟಿಯ ಲೆಕ್ಕದಲ್ಲಿ ಮಾತನಾಡುವ ನಮ್ಮ ಸರ್ಕಾರದ ಅಭಿವೃದ್ಧಿ ನೀತಿ ಯಾರ ಪರವಾಗಿದೆ ಅಥವಾ ಯಾರ ಹೆಸರಿನಲ್ಲಿ ಯಾರಿಗೆ ದೊರೆಯುತ್ತಿದೆ ಎಂಬುದನ್ನು ಅವಲೋಕಿಸಿದಾಗ ಸಿಕ್ಕ ಕೆಲವು ಚಿತ್ರಗಳು ಮಾತ್ರ ಇವು. ದುಡಿಯಲು ಜನರಿಲ್ಲ ಎಂಬ ಕೊರಗು ನಾಯಕನೂರಿನಂತಹ ಊರುಗಳಲ್ಲಿ ಎಷ್ಟು ನಿಜ. ಊರು ಮತ್ತು ಕೇರಿಯ ನಡುವಿನ ಅಂತರ ಬರಬರುತ್ತಾ ಕಡಿಮೆಯಾಗುವುದರ ಬದಲಾಗಿ ಆಧುನಿಕತೆಯ ಧಾವಂತದಲ್ಲಿ ಕೇರಿಯನ್ನು ಮರೆತ ಊರು ಬಹಳ ದೂರ ಬಂದು ಬಿಟ್ಟಿದೆ, ಅಲ್ಲಿಯೇ ಉಳಿದವರಿಗೆ ತೆವಳಲೂ ಸಾಧ್ಯವಾಗುತ್ತಿಲ್ಲ.

ಜಾತಿ ಮಾತ್ರ ಇಂದು ತನ್ನ ಕ್ರೌರ್ಯ ಪ್ರದರ್ಶಿಸುತ್ತಿಲ್ಲ, ಭೋಗದ ವಾರಸುದಾರರ ಆಳದ ಸ್ವಾರ್ಥ ಇಲ್ಲಿ ತನ್ನ ಕರಾಳತೆ ಮೆರೆಯುತ್ತಿದೆ. ಇಂದು ದಲಿತ ಲೋಕ ಸಮಾನ ಆಭಿವೃದ್ಧಿಗೆ ಹಪಿಹಪಿಸುತ್ತಿಲ್ಲ, ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಅನ್ನ, ವಸತಿ, ಬಟ್ಟೆಗಳು ಕಡಿಮೆಯಾದರೂ ವಿದ್ಯೆಗೇ ಕುತ್ತು ಬಂದರೆ ಹೇಗೆ ಬದುಕುವುದು?

ಇವೆಲ್ಲದರ ನಡುವೆ ಸವಣೂರಿನ ಭಂಗಿ ಬಂಧುಗಳು ನಡೆಸಿದ ಎರಡು ವರ್ಷದ ನಿರಂತರ ಹೋರಾಟದ ಛಲದಿಂದ, ಕಡಿಮೆಯಾದರೂ ಇರಬಹುದಾದ ಕೆಲವು ಸಾಂಸ್ಕೃತಿಕ, ಸಾಹಿತ್ಯಿಕ, ತಳಸಮುದಾಯದ ನಾಯಕರ ಚಿಂತನೆಯ ಇಚ್ಛಾಶಕ್ತಿಯ ಸಾಥ್‌ನಿಂದ ಎಂಟು ಜನ ಭಂಗಿ ಬಂಧುಗಳಿಗೆ ನೌಕರಿ ದೊರೆತು, ಅನ್ನಕ್ಕೆ ದಾರಿಯಾಗಿದೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಬಿದ್ದು nayakanuru-8.jpgಪೌರಕಾರ್ಮಿಕರು ಸಾಯುತ್ತಲೇ ಇದ್ದಾರೆ. ಕೆಲವು ಜೀವಗಳನ್ನೇ ಕಳೆದುಕೊಂಡ ಕೆಜಿಎಫ್‌ನ ಕುಟುಂಬಗಳು ಅನಾಥವಾಗಿ, ಹೊತ್ತಿನ ಗಂಜಿಗೂ ಪರದಾಡುತ್ತಿವೆ.

ಭೋಜ, ನಾಯಕನೂರು, ಹಾಳಕೇರಿಯಂಥ ಊರುಗಳು ಮಾತ್ರ ಅಸಮಾನತೆಯ ದಳ್ಳುರಿಯಲ್ಲಿ ಬದುಕನ್ನು ಸುಟ್ಟುಕೊಳ್ಳುತ್ತಿಲ್ಲ. ಒಂದೇ ಬಿಕ್ಕಿನ ಹಲವು ಮರುದನಿಗಳು ಯಾವುದೇ ಊರಿಗೆ ಹೋದರೂ ಕೇಳಿಸುತ್ತವೆ, ಕರುಣೆ ಇರುವ ಮನಸ್ಸುಗಳಿಗೆ ಮಾತ್ರ. ಶೋಷಣೆಯ ಮುಖಗಳನ್ನು ಹೇಗೆ ವಿಭಾಗಿಸುವುದು? ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ- ನಮ್ಮ ವಿಂಗಡಣೆಗಳನ್ನು ಅಣಕಿಸುವಂತೆ ಕಾಲ ಮುನ್ನಡೆಯುತ್ತಿದೆ. ಕೇರಿಯೊಂದಿಗಿನ ಊರಿನ ಅಸಹನೆಯನ್ನು ತಾಳಿಕೊಳ್ಳುವ ದಲಿತ ಲೋಕದ ಚೈತನ್ಯವನ್ನು ಹೊಗಳುವುದೋ? ಕಂಬಾಲಪಲ್ಲಿಯಲ್ಲಿಯೇ ಅಪರಾಧಿಗಳು ಬಿಡುಗಡೆಯಾಗಿರುವಾಗ ಬಹಿಷ್ಕಾರ ಹಾಕಿದವರಿಗಾಗಲೀ, ಕೇರಿಯ ಮೇಲೆ ದೊಡ್ಡ ದೊಡ್ಡ ಕಲ್ಲು ತೂರಿದವರಿಗಾಗಲೀ ಶಿಕ್ಷೆ ಹೇಗೆ ನಿರೀಕ್ಷಿಸಬಹುದು? ಒಂದು ಹಂತಕ್ಕೆ ಕೇರಿಯ ಜೀವಗಳಿಗೆ ಮನೆ ಕೊಡಬಹುದು, ಭೂಮಿ ಕೊಡಬಹುದು, ಆದರೆ ಅಂದು ರಾತ್ರಿ ಮನೆಯ ಮೇಲೆ ಕಲ್ಲುಗಳು ಬಿದ್ದಾಗ ಅನುಭವಿಸಿದ ತಲ್ಲಣಗಳಿಗೆ, ಬಿದ್ದ ಹೊಡೆತಕ್ಕೆ, ಶತಶತಮಾನದಿಂದಲೂ ಅನುಭವಿಸುತ್ತಲೇ ಬಂದು ಮನಸ್ಸಿನೊಳಗೆ ಉಂಟಾಗಿರುವ ಮಾಯದ ಗಾಯಗಳಿಗೆ ಮುಲಾಮು ಯಾರು, ಹೇಗೆ ಕೊಡಲು ಸಾಧ್ಯ.nayakanuru-9.jpg

ಕೃಪೆ: ಪ್ರಜಾವಾಣಿ
ಚಿತ್ರಗಳು: ಲೇಖಕರವು