Category Archives: ಶರ್ಮಿಷ್ಠ

ಡಿ.ಕೆ.ರವಿ ಪ್ರಕರಣ : ಪ್ಲಾಂಟೆಡ್ ಮತ್ತು ಎಕ್ಸ್‌ಕ್ಲೂಸಿವ್ ಗಳ ಭರಾಟೆಯಲ್ಲಿ ಸತ್ಯ ಎಲ್ಲಿ?

– ಶರ್ಮಿಷ್ಠ

ಬಹು ಸಂಖ್ಯೆಯಲ್ಲಿರುವ ಮಾಧ್ಯಮಗಳು ಸತ್ಯವನ್ನೇನು ಅರುಹದೆ, ತಮ್ಮ ‘ಟಿಆರ್‌ಪಿ’ ಗಾಗಿ, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತಪ್ಪು ತಪ್ಪಾಗಿ ಜನಾಭಿಪ್ರಾಯವನ್ನು ರೂಪಿಸುವುದು ಡಿ.ಕೆ. ರವಿ ವಿಷಯದಲ್ಲೇನು ಹೊರತಲ್ಲ. ಈ ಹಿಂದೆ ಪದ್ಮಪ್ರಿಯ ಪ್ರಕರಣದಲ್ಲೂ ಮಾಧ್ಯಮಗಳು ಹೀಗೆ ಮಾಡಿದ್ದವು. ಆದರೆ ದೊಡ್ಡ ದುರಂತವಿರುವುದು ಇವು ಮುಚ್ಚಿ ಹಾಕುವ ಸತ್ಯಾಂಶದಲ್ಲಿ. tv-mediaಇವುಗಳ ಬುದ್ಧಿ ಗೊತ್ತಿರೋ ಆಡಳಿತ ವರ್ಗ ಸತ್ಯವನ್ನು ಮುಚ್ಚಿ ಹಾಕಲು ‘ಎಕ್ಸ್‌ಕ್ಲೂಸಿವ್’ ಅನ್ನೋ ಸುಳ್ಳುಗಳ ಕಂತೆಯಿಂದ ಮೂಳೆ ತುಂಡನ್ನು ಎಸಿತಾ ಇರುತ್ತವೆ, ಮಾಧ್ಯಮದ ಮಂದಿ ಇಡೀ ದಿನ ಅದನ್ನು ಅಗಿಯುತ್ತಾ ಕೂತಿರುತ್ತಾರೆ. ಅದರಲ್ಲಿ ಕೆಲವು ಸತ್ಯದ ’ಎಕ್ಸ್‌ಕ್ಲೂಸಿವ್‌’ಗಳಿರಬಹುದು, ಆದರೆ ಸುದ್ದಿಗಳ ಅಬ್ಬರದಲ್ಲಿ ಸತ್ಯ ಮೂಲೆಗುಂಪಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ಕೆಲವು ವೃತ್ತಿ ನಿಷ್ಠರಿಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅವು
೧. ಬಹುಶ: ಇದು ಸತ್ಯ ಎಂದು ವರದಿ ಮಾಡಿದರೆ, ಸ್ಟೋರಿ ‘ಪ್ಲಾಂಟ್’ ಮಾಡಿದ್ದೀರಿ ಎನ್ನೋ ಆರೋಪ
೨. ಪ್ಲಾಂಟ್ ಇರಬಹುದು ಎಂದು ಬಿಟ್ಟರೆ ನಾಳೆ ಬೇರೆ ಪತ್ರಿಕೆಯಲ್ಲಿ ಬಂದಾಗ ‘ನಮ್ಮಲ್ಲಿ ಮಿಸ್’ ಅಂಥ ಬೈಗುಳ

ನನಗೆ ಗೊತ್ತಿದ್ದ ಹಾಗೆ ಡಿಕೆ ರವಿ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಪತ್ರಿಕೆಯೊಂದು ಮಹಿಳಾ ಐಎಎಸ್ ಅಧಿಕಾರಿಯೊಬ್ಬಳು ರವಿ ಬಗ್ಗೆ ಚೀಫ್ ಸೆಕ್ರೆಟರಿಯೊಬ್ಬರಿಗೆ ಕೊಟ್ಟ ದೂರಿನ ಬಗ್ಗೆ ಬರೆಯಿತು. ಅದು ಪ್ಲಾಂಟ್ ಎಂದು ಸಾಕಷ್ಟು ಚರ್ಚೆಗಳಾದಾಗ, ಬೇಕಾದವರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅರ್ಥೈಸಿದಾಗ ಆ ಪತ್ರಿಕೆಯ ಸಂಪಾದಕರು ‘ನಮ್ಮ ವರದಿಗಾರರು ಸತ್ಯವನ್ನು ಬರಿಯಲು ನಿಯೋಜಿಸಲ್ಪಟ್ಟವರು , ಅವರು ಸತ್ಯದ ನಾನಾ ಮುಖಗಳನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ ಹೊರತು ಯಾರನ್ನೂ ಸಮರ್ಥಿಸುತ್ತಿಲ್ಲ’ ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು. ಇದು ಪತ್ರಿಕೋದ್ಯಮದ ಪ್ರಕಾರ ಸತ್ಯವೂ ಹೌದು. ಆದರೆ ಒವರ್‌ಆಲ್ ಆ ಸುದ್ದಿ ಸುಳ್ಳು ಎಂದೇ ಬಿಂಬಿಸಲ್ಪಟ್ಟಿತು.

ನನಗೆ ಗೊತ್ತಿರೋ ಪ್ರತಕರ್ತರೊಬ್ಬರು ಅದೇ ಸುದ್ದಿ ತಮಗೆ ಗೊತ್ತಿದ್ದರೂ ಸುಮ್ಮನಾದರು. ಅದನ್ನು ಬರೆಯುವುದು DKRavi_Kolar_PGಪತ್ರಿಕೋದ್ಯಮದ ಪ್ರಕಾರ ಸರಿ ಇದ್ದರೂ ತನಗಿರುವ ಸಾಮಾಜಿಕ ಜವಾಬ್ದಾರಿಯಿಂದ ಸುಮ್ಮನಾದರು. ವೈಯಕ್ತಿಕ ವಿಷಯವನ್ನು ಇಟ್ಟುಕೊಂಡು ಐಎಎಸ್ ಅಧಿಕಾರಿಯೊಬ್ಬರ ಮಾನಹಾನಿ ಮಾಡುವುದು ಸರಿ ಅಲ್ಲ ಎಂದು ಸುಮ್ಮನಾದರು. ಇದೆರಡರಲ್ಲಿ ಯಾವುದು ಸರಿ ನನಗಿನ್ನೂ ಅರ್ಥವಾಗಿಲ್ಲ. ಪತ್ರಕರ್ತರಾಗಿ ಅವರು ಸತ್ಯದ ಮಜಲನ್ನು ನೋಡಬೇಕಿತ್ತೇ ಅಥವಾ ಸಾಮಾಜಿಕ ಹೊಣೆ ಮುಖ್ಯವೇ?

ಆದರೆ ನನ್ನ ಕಾಮನ್ ಸೆನ್ಸ್ ಪ್ರಕಾರ ಕಷ್ಟಪಟ್ಟು ಓದಿ ಮೇಲೆ ಬಂದ ಬಡ ಅಧಿಕಾರಿ ಒಬ್ಬ ಅದೂ ಪ್ರಾಮಾಣಿಕ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾಗಿರುವುದಿಲ್ಲ. ಆದರೆ ಒಂದೊಂದು ಪತ್ರಿಕೆಗಳು ಒಂದೊಂದನ್ನು ಬರೆಯುತ್ತವೆ. ಅವರ ವರದಿಗಾರರಿಗೆ ಸಿಕ್ಕ ಸುದ್ದಿಯೇ ಸಾಮಾನ್ಯ ಓದುಗನಿಗೆ ಅಂತಿಮ ಸತ್ಯ. ಅದು ವರದಿಗಾರ ಅಥವಾ ಅವನ ಸಂಪಾದಕ ಸೃಷ್ಟಿಸಿದ ಸುದ್ದಿಯೂ ಆಗಿರಬಹುದು. ಕೊನೆಗೂ ಸಾಮಾನ್ಯ ಓದುಗನಿಗೆ ಸತ್ಯ ಸಿಗುವುದೇ ಇಲ್ಲ. ಅಥವಾ ಅದು ಅವನಿಂದ ಮರೆಮಾಚಲ್ಪಡುತ್ತದೆ. ಓದುಗನ ಗ್ರಹಿಕೆಗೆ ಸಿಕ್ಕಿದ್ದು ಮಾತ್ರ ಸತ್ಯ.

ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

– ಶರ್ಮಿಷ್ಠ

ಅನಂತಮೂರ್ತಿಯವರ ಸಂಸ್ಕಾರದ ನಂತರ ಅದರ ಕುರಿತು ನನ್ನಂತಹ ಅಜ್ಞಾನಿಯ ತಲೆಯಲ್ಲಿ ಹುಟ್ಟಿದ ಪ್ರಶ್ನೆಗಳಿವು. ನಾನೇನು ಅವರನ್ನು ಹತ್ತಿರದಿಂದ ಕಂಡಿಲ್ಲ ಮಾತಾಡಿಲ್ಲ. ಆದರೆ ಒಬ್ಬ ಲೇಖಕನನ್ನೋ, ಸಿನಿಮಾ ನಟನನ್ನೋ, ಕವಿಯನ್ನೋ ಕೆಲವರು ಆರಾಧಿಸುವುದು, ಮೆಚ್ಚಿಕೊಳ್ಳುವುದು, ಆದರ್ಶ ಎಂದು ಕೊಳ್ಳುವುದು ಇತ್ಯಾದಿ ಇತ್ಯಾದಿಯಾಗಿರುತ್ತದಲ್ಲಾ ಹಾಗೆ….

ಇದು ಸಾಮಾನ್ಯಳೊಬ್ಬಳ ತಲೆಯಲ್ಲಿ ಹುಟ್ಟಿದ ಇನ್ನು ಉತ್ತರ ಸಿಗದ ಕಾಡುತ್ತಿರುವ ಗೋಜಲು ಗೋಜಲಾಗಿರುವ ಪ್ರಶ್ನೆಗಳು. ಯಾರನ್ನೂ ದೂರುತ್ತಿಲ್ಲ.

ಸಂಸ್ಕಾರದಂತಹ ‘ಕ್ಲಾಸಿಕ್’ ಕಾದಂಬರಿಯನ್ನು ಬರೆದಂತಹ ಅನಂತಮೂರ್ತಿಯವರ ಸಂಸ್ಕಾರದ ರೀತಿ ನನಗಂತೂ ಸ್ವಲ್ಪವೂ ಸರಿಬರಲಿಲ್ಲ. 24bidತನ್ನ ಬ್ರಾಹ್ಮಣತ್ವವನ್ನು ಯಾವತ್ತೂ ಓರೆಗಲ್ಲಿಗೆ ಹಚ್ಚಿದಂತೆ ಬದುಕುತ್ತಿದ್ದ ಅವರಿಗೆ ಈ ರೀತಿಯ ವೇದ ಮಂತ್ರ ಘೋಷದ ಸಂಸ್ಕಾರ ಬೇಕಿತ್ತೆ? ಖಾಸಗೀ ವಾಹಿನಿಗಳ ದೃಶ್ಯ ವೈಭವ ಶ್ರೀಕಂಠದತ್ತ ಒಡೆಯರ್ ಸಂಸ್ಕಾರವನ್ನು ನೆನಪಿಸುವ ರೀತಿಯಲ್ಲಿತ್ತು. ಈ ಸಂಸ್ಕಾರದ ಅಗತ್ಯವಿತ್ತೇ? ಬ್ರಾಹ್ಮಣರ ಇಂಗಿನ ಒಗ್ಗರಣೆಯನ್ನೂ ಸೇರಿದಂತೆ ಎಲ್ಲವನ್ನೂ ಟೀಕಿಸುವ, ಅನಂತಮೂರ್ತಿ ತನ್ನ ತಂದೆಯಂತೆ ಎನ್ನುವ ಗೌರಿ ಲಂಕೇಶ ಈ ಸಂದರ್ಭದಲ್ಲಿ ಎಲ್ಲಿದ್ದರು? ಬಾಯಿ ತೆರೆದರೆ ಉಡುಪಿ ಬ್ರಾಹ್ಮಣರನ್ನು, ಬ್ರಾಹ್ಮಣರ ಆಚಾರ ವಿಚಾರಗಳನ್ನು ಪುಂಖಾನುಪುಂಖವಾಗಿ ಹೀಗಳೆಯುವ ಜಿ ಕೆ ಗೋವಿಂದರಾವ್ ಯಾಕೆ ಈ ಬಗ್ಗೆ ಬಾಯಿ ಬಿಡಲಿಲ್ಲ. ಪ್ರಗತಿಪರರು ಎನಿಸಿಕೊಂಡವರು, ‘ನಮ್ಮ ಮೇಷ್ಟ್ರು’ ಎಂದು ಪ್ರೀತಿಯಿಂದ ಕರೆದವರು ಎಲ್ಲ ಎಲ್ಲಿ ಹೋಗಿದ್ದರು?

ಹಿಂದೊಮ್ಮೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನಂತಮೂರ್ತಿಯವರು ಉಪನ್ಯಾಸಕರಾಗಿದ್ದಾಗ ವಿದ್ಯಾರ್ಥಿಯಾಗಿದ್ದವರೊಬ್ಬರು ಹೇಳಿದ ಮಾತುಗಳಿವು… ‘ಅನಂತಮೂರ್ತಿ ವಿಶ್ವವಿದ್ಯಾನಿಲಯದಲ್ಲಿದ್ದಾಗ ವಿದ್ಯಾರ್ಥಿಗಳನ್ನೆಲ್ಲ ಸೇರಿಸಿ ವಿಚಾರ ವೇದಿಕೆ ಆರಂಭಿಸಿದ್ದರು. ನಾವೆಲ್ಲ ಅದರ ಸದಸ್ಯರುಗಳು. ಉತ್ಸಾಹದಿಂದ ಎಲ್ಲಾ ಸಭೆಯಲ್ಲೂ ಪಾಲ್ಗೊಳ್ಳುತ್ತಿದ್ದೆವು. ಆದರೆ ಅದೇ ಅನಂತಮೂರ್ತಿ ತನ್ನ ಮನೆ ಗೃಹಪ್ರವೇಶದ ಸಮಯದಲ್ಲಿ ದನವನ್ನು ತಂದು ಶಾಸ್ತ್ರ ಕ್ರಮಪ್ರಕಾರ ಗೃಹಪ್ರವೇಶ ಮಾಡಿದರು. ಪ್ರಶ್ನಿಸಿದ್ದಕ್ಕೆ ಅಪ್ಪ ಅಮ್ಮನಿಗಾಗಿ ಎಂದರು’.

ಇದರಲ್ಲಿ ನನಗೆ ನಿಜವಾಗಿ ಅನಂತಮೂರ್ತಿಯವರದು ತಪ್ಪು ಎನಿಸಲಿಲ್ಲ. ಅಪ್ಪ ಅಮ್ಮ ಎನ್ನುವ ಸಂಬಂಧ ತುಂಬಾ ಸೂಕ್ಷ್ಮದ್ದು. ‘ನಾಡಿಗೆ ಅರಸನಾದರೂ ತಾಯಿಗೆ ಮಗ’ ಎಂಬಂತೆ ಅಪ್ಪ ಅಮ್ಮನ ಮಮತೆ ವಾತ್ಸಲ್ಯದ ಮುಂದೆ ಯಾವ ಆದರ್ಶಗಳೂ ಇಲ್ಲ. ಅಪ್ಪ ಅಮ್ಮನ ಕೋರಿಕೆ ಈಡೇರಿಸುವುದು ಮಕ್ಕಳ ಕರ್ತವ್ಯ ಅದನ್ನು ಅನಂತಮೂರ್ತಿ ಮಾಡಿದ್ದಾರೆ. ಆದರೆ ಅವರ ಸಂಸ್ಕಾರದ ವಿಷಯದಲ್ಲಿ ಈ ಮಾತುಗಳು ಅನ್ವಯಿಸುವುದಿಲ್ಲ.

ಲಂಕೇಶರ ಅವ್ವ ನಾಟಕದಲ್ಲಿ ಉಡುಪ ಮತ್ತು ಮಮ್ತಾಜ್ ಎಂಬ ಎರಡು ಪಾತ್ರಗಳು ಬರುತ್ತವೆ. ura-lankeshಅದನ್ನು ಲಂಕೇಶ್ ಅನಂತಮೂರ್ತಿಯವರನ್ನು ಟೀಕಿಸಲೆಂದೇ ಬರೆದಂತಿದೆ (ನನಗನಿಸಿದ್ದು). ಮೊನ್ನೆ ಪತ್ರಿಕೆಯೊಂದರಲ್ಲಿ ಲಂಕೇಶ ಅನಂತಮೂರ್ತಿಯವರಿಗೆ ಸ್ವಜಾತಿಯ ಕನ್ಯೆಯನ್ನೇ ಮದುವೆಯಾಗು ಎಂದು ಹೇಳಿದ್ದರು ಎಂದೂ ಓದಿದೆ (ಉದಯವಾಣಿ 23.8.2014). ಮೊನ್ನೆಯ ಸಂಸ್ಕಾರದ ನಂತರ ಉಡುಪ ಹಾಗು ಮಮ್ತಾಜ್ ಪಾತ್ರಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ.

ಎಲ್ಲೊ ಒಂದು ಕಡೆ ಓದಿದೆ ಅನಂತಮೂರ್ತಿ ವಿದ್ಯುತ್‌ನಲ್ಲಿ ಶವಸಂಸ್ಕಾರ ಬೇಡ ಎಂದಿದ್ದರು ಎಂದು. ಪರಿಸರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅನಂತಮೂರ್ತಿ ಕಟ್ಟಿಗೆ ಸುಡುವುದು ಬೇಡ ಎಂದು ಯಾಕೆ ಹೇಳಲಿಲ್ಲ. ಅಂತ್ಯಕ್ರಿಯೆ ಫ್ಯಾಮಿಲಿ ಮ್ಯಾಟರ್ ಅನ್ನೋದಕ್ಕೆ ಅನಂತಮೂರ್ತಿ ಈ ನಾಡಿನ ಆಸ್ತಿ. ಮೊನ್ನೆ ಮೊನ್ನೆಯವರೆಗೆ ಚಿಕಿತ್ಸೆಗೆ ಸರ್ಕಾರದ ಹಣ ಕೋರಿದ್ದು ಇದೇ ಆಧಾರದ ಮೇಲೇ ಅಲ್ಲವೇ?

ನನ್ನ ಪ್ರಶ್ನೆ ಒಂದೇ. ಸಂಸ್ಕಾರದಂತಹ ಮೇರು ಕೃತಿ ಬರೆದ ಸಾಹಿತಿಯೊಬ್ಬನ ಸಂಸ್ಕಾರಕ್ಕೆ ಈ ರೀತಿಯ ಬ್ರಾಹ್ಮಣವೈಭವೋಪೇತ ಸಂಸ್ಕಾರ ಬೇಕಿತ್ತೇ? ಸರಳ ರೀತಿಯ ಸಂಸ್ಕಾರ ಸಾಕಿತ್ತಲ್ಲವೇ? ಇದನ್ನು ಪ್ರಶ್ನೆ ಮಾಡದಿದ್ದರೆ ಅದು ಸ್ವಜನ ಪಕ್ಷಪಾತವಾಗುವುದಿಲ್ಲವೇ? ಹೆಜ್ಜೆ ಹೆಜ್ಜೆಗೂ ಪೇಜಾವರರನ್ನು, ಭೈರಪ್ಪನವರನ್ನು ಟೀಕಿಸುವ ನಾವು ಯಾಕೆ ಅನಂತಮೂರ್ತಿಯವರ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡಿದ್ದೇವೆ. ವೈಕುಂಠದ ಊಟಕ್ಕೆ ಹೋಗಿ ಮಂತ್ರಾಕ್ಷತೆ ಹಾಕಿಸಿಕೊಳ್ಳುವ ಮನಸ್ಥಿತಿಯಲ್ಲಿದ್ದೇವೆ?

21ನೇ ಶತಮಾನದಲ್ಲಿದ್ದರೂ ಹೆಣ್ಣಿನ ವಿಷಯಕ್ಕೆ ಗೋಯಿಂಗ್ ಬ್ಯಾಕ್ ಟ್ರೆಂಡ್

– ಶರ್ಮಿಷ್ಠ 

ಮಹಾಭಾರತ, ರಾಮಾಯಣ ಟೀಕಿಸಿದ ಕೂಡಲೇ ಹಿಂದೂಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಶುರುವಾಗತೊಡಗುತ್ತದೆ. ಆದರೆ ಅದನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡುವ ವ್ಯವಧಾನ ಯಾರಿಗೂ ಇಲ್ಲ. ತಮ್ಮ ತಮ್ಮ ಮನೆಯ ಬುಡದವರೆಗೂ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಬರುವವರೆಗೂ ಎಲ್ಲಾ ‘ನೈತಿಕ ಮೌಲ್ಯ’ಗಳು ಹಿತವಾಗಿಯೇ ಕೇಳುತ್ತವೆ. ಅಕ್ಕ ಹೇಳುವ ಹಾಗೆ ‘ನೊಂದ ನೋವನ್ನು ನೊಂದವರಲ್ಲದೆ ನೋಯದವರು ಹೇಗೆ ತಾನೇ ಅರಿಯಬಲ್ಲರು?’ ಫೇಸ್‌ಬುಕ್‌ನಲ್ಲಿ ಗಿಡ್ಡ ಸ್ಕರ್ಟ್ ಹಾಕಿರುವ, ಕುಡಿದು ಕುಣಿಯುತ್ತಿರುವ, woman-unchainedಪಬ್‌ಗಳಲ್ಲಿ ನರ್ತಿಸುತ್ತಿರುವ ಹುಡುಗಿಯರ ಚಿತ್ರಗಳನ್ನು ಹಾಕಿ ಇಂಥವರಿಗೆ ರಕ್ಷಣೆ ಬೇಕೆ? ಎಂದು ಹಿಂದೂ ಧರ್ಮದ ಗುತ್ತಿಗೆದಾರರು ಪ್ರಶ್ನೆ ಮಾಡುತ್ತಾರೆ. ಅದು ಮಹಿಳೆಯರಿಗೆ ನಿಷಿದ್ಧವಾದರೆ ಪುರುಷರಿಗೂ ಬೇಡ ಎಂದು ಏಕೆ ಹೇಳಬಾರದು? ಹಿಂದೂ ಧರ್ಮದ ರಕ್ಷಣೆಯ ಭಾರ ಕೇವಲ ಮಹಿಳೆಯರು ಮಾತ್ರ ಹೊತ್ತಿದ್ದಾರೆಯೇ?

ಮಹಾಭಾರತದಲ್ಲಿ ದ್ರೌಪದಿಯ ಸೀರೆಯನ್ನು ಎಳೆಯುವಾಗ ಶ್ರೀಕೃಷ್ಣ ಬಂದು ಸೀರೆ ಕೊಟ್ಟು ‘ಹೀರೋಯಿಸಂ’ ಪ್ರದರ್ಶಿಸುವ ಬದಲು, ‘ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿರುವ ಪಾಂಡವ ಕೌರವರಿಬ್ಬರಿಗೂ ನಿನಗೆ ತೋಚಿದ ಶಿಕ್ಷೆ ಕೊಡು, ನಿನ್ನ ಜೊತೆ ನಾನಿದ್ದೇನೆ ಎಂದಿದ್ದರೆ?’ ತನ್ನನ್ನು ಅಡ ಇಟ್ಟ ಪಾಂಡವರಿಗೂ, ಅವಮಾನ ಮಾಡ ಹೊರಟ ಕೌರವರಿಗೂ ದ್ರೌಪದಿ ಅಂದೇ ಬುದ್ಧಿ ಕಲಿಸಿದಿದ್ದರೆ? ಸ್ತ್ರೀ ಸಬಲೀಕರಣವನ್ನು ಮಾಡಿದ ಪ್ರಥಮ ಪುರುಷ ಕೃಷ್ಣನಾಗುತ್ತಿದ್ದ. ತನ್ನವರನ್ನೇ ಕೊಲ್ಲಲು ಹಿಂಜರಿದ ಅರ್ಜುನನಿಗೆ ಕೃಷ್ಣ ‘ಧರ್ಮ ರಕ್ಷಣೆಯ’ ನೆಪ ಹೇಳುತ್ತಾನೆ. ಹಾಗಿದ್ದಲ್ಲಿ ದ್ರೌಪದಿ ತನ್ನ ಮಾನ ರಕ್ಷಣೆಗಾಗಿ woman-insightಅಲ್ಲಿದ್ದವರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದರೆ ಅದನ್ನು ಧರ್ಮದ ‘ಕ್ರೈಟೀರಿಯಾ’ಕ್ಕೆ ಖಂಡಿತಾ ಸೇರಿಸಬಹುದಿತ್ತಲ್ಲವೇ? ಕಾಳಿದಾಸನ ಶಾಕುಂತಲೆ ಕೂಡ ಈಗಿನ ಕಾಲದ ‘ಫೇರ್ ಆಂಡ್ ಲವ್ಲಿ ಗರ್ಲ್’ ಅಷ್ಟೆ. ಅವಳೊಂದು ಸೌಂದರ್ಯದ ಪ್ರತೀಕ ಇವತ್ತಿನ ಜಾಹೀರಾತು ಜಗತ್ತಿನ ಅರ್ಥವಿಲ್ಲದ ಸೌಂದರ್ಯವೇ ಸರ್ವಸ್ವ ಜಾಹೀರಾತಿನ ಹಾಗೆ. ಯಾವ ಸ್ವಂತಿಕೆಯೂ ಇಲ್ಲ. ಪತಿವ್ರತಾ ಧರ್ಮ ಪಾಲನೆಗೆಂದು ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದೆ ತನ್ನ ಮಕ್ಕಳನ್ನು ನೀತಿವಂತರನ್ನಾಗಿ ಬೆಳೆಸಿದ್ದರೆ, ಮಹಾಭಾರತದಲ್ಲಿ ಕೌರವರು ‘ವಿಲನ್’ಗಳೇ ಆಗುತ್ತಿರಲಿಲ್ಲ.

ಹೀಗೆ ಎಷ್ಟೋ ತರ್ಕಗಳನ್ನು ಕೊಡುತ್ತಾ ಹೋಗಬಹುದು. ಆದರೆ ಅದೆಲ್ಲ ಕುತರ್ಕ ಅನಿಸಿಕೊಳ್ಳುವ ಅಪಾಯಗಳೇ ಜಾಸ್ತಿ. ಬರೆದವರು ಹಿಂದೂ ಧರ್ಮ ವಿರೋಧಿ ಎಂದು ಹಣೆಪಟ್ಟಿ ಹಚ್ಚಿಕೊಂಡುಬಿಡಬಹುದು. ಆದರೆ ಒಂದು ವಿಷಯವನ್ನು ಮಾತ್ರ ಒಪ್ಪಿಕೊಳ್ಳಲೇಬೇಕು. ಹಿಂದೂ ಧರ್ಮದಲ್ಲಿ ನನಗೆ ನನಗನ್ನಿಸಿದನ್ನು ಹೇಳುವ ಸ್ವಾತಂತ್ರ್ಯವಾದರೂ ಇದೆ. ನನ್ನ ಬೆಂಬಲಕ್ಕೆ ಹತ್ತಾರು ದನಿಗಳು ಕೈಗೂಡಬಹುದು. ಅದರೆ ಮುಸ್ಲಿಂ ಧರ್ಮದ ಮಹಿಳೆಯರಿಗೆ? 5-6 ವರ್ಷದ ಚಿಕ್ಕ ಮಕ್ಕಳಿಗೂ ಬುರ್ಖಾ ಹಾಕಿಸುವ ಸಂಪ್ರದಾಯ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ಎಂದು ನನಗನಿಸುತ್ತಿದೆ. ಅರ್ಥವಿಲ್ಲದ ಫತ್ವಾಗಳು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ವಿದ್ಯಾವಂತ ಸಮುದಾಯ ಅದನ್ನು ಧರ್ಮದ ಹೆಸರಿನಲ್ಲಿ ಬಲವಂತವಾಗಿ ಹೆಣ್ಮಕ್ಕಳ ಮೇಲೆ ಹೇರುತ್ತಿದೆ. inidan-muslim-womanಜನನಾಂಗ ಛೇಧನದಂತಹ ಸುದ್ದಿಯನ್ನು ಓದಲೂ ಹಿಂಸೆಯಾಗುತ್ತಿದೆ. ಅಂಥದರಲ್ಲಿ ಅದಕ್ಕೆ ಈಡಾಗುವ ಮಹಿಳೆಯರ ಸಂಕಷ್ಟವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ರಮ್ಜಾನ್‌ನ ಪ್ರಯುಕ್ತ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಕೆಲವು ಮಕ್ಕಳು ಪ್ರಾರ್ಥನೆ ಸಲ್ಲಿಸುತ್ತಿರುವುದರ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ಬಹುಶ: 4 ಹಾಗು 7 ವರ್ಷದ ಹೆಣ್ಣು ಮಕ್ಕಳಿಬ್ಬರು ಬುರ್ಖಾ ಧರಿಸಿದ್ದರು. ಈ ಚಿತ್ರಗಳನ್ನು ಪ್ರಕಟಿಸುವ ಮೂಲಕ ನಾವೇನು ಹೇಳ ಹೊರಟಿದ್ದೇವೆ? ಅದು ಏನನ್ನು ಬಿಂಬಿಸುತ್ತಿದೆ. ಆ ಚಿಕ್ಕ ಪ್ರಾಯದ ಮಕ್ಕಳಿಗೆ ಬುರ್ಖಾ ಯಾಕೆ ಹಾಕುತ್ತಿದ್ದೀರಾ? ದಯವಿಟ್ಟು ತಿಳಿಸಿ.

ಇತ್ತೀಚೆಗೆ ಒಂದು ಆಭರಣದ ಜಾಹೀರಾತು ನೋಡಿದೆ. ಅಪ್ಪ ಮಗಳಿಗೆ ಚಿನ್ನ ಕೊಡಿಸಿದ ಕಾರಣಕ್ಕೆ ಅವನು ಗಂಡನಿಗಿಂತ ಆಕೆಗೆ ಪ್ರಿಯನಾಗುತ್ತಾನೆ. ಅದಕ್ಕೆ ಆಕೆ ತನ್ನ ಹೆಸರಿನ ಜೊತೆಗೆ ಅಪ್ಪನ ಹೆಸರನ್ನೇ ಇಟ್ಟುಕೊಳ್ಳುತ್ತಾಳೆಯೇ ಹೊರತು ಗಂಡನ ಹೆಸರನ್ನು ಇಟ್ಟುಕೊಳ್ಳುವುದಿಲ್ಲ. ಇಲ್ಲಿ ಆಕೆ ಹೆಸರು ಬದಲಾಯಿಸದೇ ಇರುವುದಕ್ಕೆ ಕಾರಣ ‘ಚಿನ್ನ’ವೇ ಹೊರತು ಅಪ್ಪನ ಮೇಲಿನ ಪ್ರೀತಿ ಆಗಲಿ ಆಕೆಯ ಸ್ವಾಭಿಮಾನವಾಗಲಿ ಅಲ್ಲ. ಇನ್ನು ಧಾರವಾಹಿಗಳು ಶುರುವಾಗುವುದೇ ಹಿರೋಯಿನ್ ಮನೆಯವರಿಗೆಲ್ಲ ಬೆಡ್ ಕಾಫಿ ಕೊಡುವ ಮೂಲಕ. ಆಗ ಆಕೆ ಆದರ್ಶ ಗೃಹಿಣಿ. ಯಾವ ಗಂಡು ಪಾತ್ರವೂ ಅಡುಗೆ ಮನೆಗೆ ಬಂದು ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡೋಣ. ನೀನು ಅಡಿಗೆ ಮಾಡು ನಾನು ಪಾತ್ರೆ ತೊಳಿತೇನೆ ಅನ್ನುವುದಿಲ್ಲ. ಬೆಡ್ ಕಾಫಿ ಬೇಡ ನೀನು ಕಾಫಿ ಆದ ಮೇಲೆ ಕರೆ ನಾನು ನೀನಿದ್ದಲ್ಲಿಗೇ ಬರುತ್ತೇನೆ ಅನ್ನುವುದಿಲ್ಲ. ಒಳ್ಳೆಯ ಸರ್ವೆಂಟ್‌ನ ಹಾಗೆ ಹಿರೋಯಿನ್ ಕೆಲಸ ಮಾಡುತ್ತಿದ್ದರೆ, ಗಂಡು ಪಾತ್ರಧಾರಿಗಳು ಬಾಯಿತುಂಬ ಹೊಗಳುತ್ತವೆಯೇ ಹೊರತು, ಎಲ್ಲ ಕೆಲಸ ನೀನೆ ಯಾಕೆ ಮಾಡಬೇಕು, ನೀನು ಕೆಲಸದವಳಲ್ಲ, ನಮ್ಮ ತಟ್ಟೆ ಲೋಟ ನಾವೇ ತೊಳೆದುಕೊಳ್ಳತ್ತೇವೆ, ನಿನಗೆ ಸಹಾಯ ಮಾಡುತ್ತೇವೆ ಅನ್ನೋ ಮಾತನ್ನು ಆಡೋದೇ ಇಲ್ಲ, ಅವಳ ವ್ಯಕ್ತಿತ್ವವನ್ನು ಗೌರವಿಸೋದು ಇಲ್ಲ. ಸಿನಿಮಾಗಳ ಮಾತೇ ಬೇಡ. ಅಲ್ಲಿ ‘ಹಿರೋಯಿನ್ ಇಸಮ್’ ಗೆ ಜಾಗವೇ ಇಲ್ಲ.

ಇನ್ನು ಇವತ್ತಿನ ‘ಬದಲಾದ’ ಪ್ರಪಂಚವೋ ಅಲ್ಲಿ ಹೆಣ್ಣು ಕೆಲಸಕ್ಕೆ ಹೋಗಿ ಸಂಪಾದಿಸಬಹುದು ಆದರೆ ಆಕೆಗೆ ಸ್ವತಂತ್ರ ವ್ಯಕ್ತಿತ್ವ ಇರಬಾರದು. ಬೆಳಗ್ಗೆ ಹೋಗಿ ಸಂಜೆ ಬರಬೇಕು ಕೆರಿಯರ್ ಇಂಪ್ರುಮೆಂಟ್, ಔಟ್ ಸ್ಟ್ಯಾಂಡಿಂಗ್ ಅಚಿವ್‌ಮೆಂಟ್‌ಗಳೆಲ್ಲ ಆಕೆಗೆ ನಿಷಿದ್ಧ. ಪ್ರೊಗ್ರೆಸ್ಸಿವ್ ಥಿಂಕಿಂಗ್, Indian-policewomanಆದರ್ಶಗಳಂತೂ ಇರಲೇ ಬಾರದು. ಇದೆಲ್ಲ ಅಲಿಖಿತವಾಗಿರುವ ಹೆಣ್ಮಕ್ಕಳ ಮೇಲೆ ಹೇರಲ್ಪಟ್ಟ ನಿಯಮಗಳು. ಇದನ್ನು ನೀವು ಮೀರಿದರೆ ನೀವು ಅತ್ತೆ ಮನೆಗೆ ನಾಲಾಯಕ್ ಸೊಸೆ. ಗಂಡು ಮಗನ ಆದರ್ಶಗಳು ಅದು ಎಷ್ಟೇ ವಿವೇಚನಾರಹಿತವಾಗಿದ್ದರೂ ಅದೇ ತಾಯಿ ‘ನನ್ನ ಮಗನಿಗಾಗಿ’ ಅಂಥ ಎಲ್ಲಾ ರಾಜಿಗಳನ್ನು ಮಾಡಿಕೊಳ್ಳುತ್ತಾಳೆ. ಮನೆಯ ಎಲ್ಲಾ ಹೆಣ್ಮಕ್ಕಳು ಆತನ ಆದರ್ಶವನ್ನು ಎದುರಾಡದೆ ಅನುಸರಿಸಿಕೊಂಡು ಹೋಗಬೇಕು. ಕೆಲವು ಪತ್ರಿಕೆಗಳೂ ತಮ್ಮ ವಿಶೇಷ ಪುರವಣಿಗಳ ಮೂಲಕ ಈ ‘ಸಾರ್ಥಕ ಗೃಹಿಣಿ’ ಯ ತತ್ವಗಳನ್ನು ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಆದರೆ ಹೆಣ್ಣಾಗಿ ನಿಮಗೆ ಯಾವ ಆದರ್ಶಗಳೂ ಇರಕೂಡದು ನೀವು ಅದಕ್ಕೆ ಎಲಿಜಿಬಲ್ ಅಲ್ಲ. ಅದು ಅಹಂಕಾರ. ಮಗ ಉನ್ನತ ವ್ಯಾಸಾಂಗ ಮಾಡುತ್ತಾನೆ ಎಂದರೆ ತಾಯಿ ಅವನ ಕೆಲಸದಾಕೆಯೋ ಎಂಬಂತೆ ಆತನ ಎಲ್ಲಾ ಚಾಕರಿಗಳನ್ನು ಮಾಡುತ್ತಾ ಆತನ ಉನ್ನತಿಗಾಗಿ ಶ್ರಮಿಸುತ್ತಾಳೆ. ಆದರೆ ಹೆಣ್ಣು ಮನೆಯ ಜವಾಬ್ದಾರಿಯನ್ನು ಆಫೀಸಿನ ಎಲ್ಲಾ ಹೊಣೆಯೊಂದಿಗೂ ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋದರೆ ಮಾತ್ರ ವ್ಯಾಸಾಂಗ ಮುಂದುವರೆಸಬಹುದು. ಹೆಣ್ಣುಮಕ್ಕಳಿಗೆ ಯಶಸ್ಸು ಸಿಕ್ಕಿದರೆಷ್ಟು ಬಿಟ್ಟರೆಷ್ಟು. ಇನ್ನು ಟೆಕ್ಕಿಗಳ ಕೆಲಸ ಅತ್ಯಾಧುನಿಕ ಕಂಪ್ಯೂಟರ್‌ನಲ್ಲಾದರೂ ಅವರು ಮದುವೆ ಆಗುವ ಹುಡುಗಿಗೆ ಜಾತಕ ನೋಡುವುದು ಕಡ್ಡಾಯ. ಮಡಿ ಮೈಲಿಗೆ ಗೊತ್ತಿರಬೇಕು. ಇದು ಹೆಣ್ಣಿಗಾಗಿ ಬದಲಾಗಿರುವ ‘ಉದಾತ್ತ’ ಪ್ರಪಂಚ.

21 ನೇ ಶತಮಾನದಲ್ಲಿದ್ದೇವೆ. ಆದರೂ ನಮ್ಮಲ್ಲಿ ಅದೊಂಥರಾ ‘ಗೋಯಿಂಗ್ ಬ್ಯಾಕ್ ಟ್ರೆಂಡ್’ ಕಾಣಿಸುತ್ತಿದೆ. ಮನಸುಗಳು ಬದಲಾಗದ ಹೊರತು, ಹೆಣ್ಣನ್ನು ನೋಡುವ ರೀತಿಯನ್ನು ಹೆಣ್ಣೇ ಬದಲಾಯಿಸಕೊಳ್ಳದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಪ್ರತಿಯೊಬ್ಬ ಅಮ್ಮ ತನ್ನ ಮಗನನ್ನು ಹೆಣ್ಣಿನ ವಿಷಯದಲ್ಲಿ ಸಂವೇದನಾಶೀಲನನ್ನಾಗಿ ಮಾಡಹೊರಟರೆ ಸಾಕು ನಾಳೆಗಳು ಆಶಾದಾಯಕವಾಗಿರುತ್ತವೆ

ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.

ಈ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ…

– ಶರ್ಮಿಷ್ಠ

ಕಳೆದ ಹದಿನೈದು ದಿನಗಳಿಂದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿಗೆ ಬರುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಕೆಲವು ಓದುಗರು, ಕಮ್ಯುನಿಸ್ಟ್‌ರು ನಡೆಸುತ್ತಿರುವ ಹೋರಾಟ ಎಂಬ ಕಾರಣಕ್ಕೆ ತಮ್ಮ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು, ಎಲ್ಲರ ಕಾಳಜಿಯನ್ನು ಹಾದಿ ತಪ್ಪಿಸುತ್ತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ. ಇಲ್ಲಿ ನಕ್ಸಲರ ವಿಷಯ ಯಾಕೆ ಬೇಕು?

ಇಲ್ಲಿ ಒಂದು ಸ್ಪಷ್ಟವಾಗಬೇಕು ಮಹೇಶ ತಿಮರೋಡಿ ವಿಶ್ವಹಿಂದು ಪರಿಷತ್‌ನ ಮುಖಂಡನೇ ಹೊರತು ಕಮ್ಯುನಿಸ್ಟ್ ಪಕ್ಷದವರಲ್ಲ. Dharmasthala_Templeಅವರು ಯಾಕೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ? ಜೊತೆಗೆ ಕೆಲವು ಹಿಂದೂ ಪರ ಸಂಘಟನೆಗಳು ಅವರ ಜೊತೆ ಹೋರಾmಕ್ಕೆ ಕೈ ಜೋಡಿಸಿವೆ. ಜೊತೆಗೆ ಬಿಜೆಪಿ ನಾಯಕರ್‍ಯಾರು ಹೆಗ್ಗಡೆಯವರನ್ನು ಕಾಂಗ್ರೆಸ್ ನಾಯಕರ ಮಟ್ಟಿಗೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.

ಅವರ ವೈಯಕ್ತಿಕ ಹಿತಾಸಕ್ತಿ ಎಂದು ಎಲ್ಲರು ಕೊಡುವ ಕಾರಣಗಳನ್ನೇ ಇಟ್ಟುಕೊಳ್ಳೋಣ. ರಾಜಕೀಯ ಭವಿಷ್ಯಕ್ಕೆ ಹಾದಿಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಪೂಜಾರಿಯಂತಹ ಹಿರಿಯ ರಾಜಕಾರಣಿ ಚುನಾವಣೆಗಾಗಿ ತನ್ನತನವನ್ನೇ ಮಾರಿಕೊಂಡು ಚೀಪ್ ಗಿಮಿಕ್ ಮಾಡಲು ಹೊರಟಿರುವಾಗ, ಗೋಧ್ರಾ ಹತ್ಯಾಕಾಂಡದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ವಿಜೃಂಭಿಸುತ್ತಿರುವಾಗ, ರಿಯಲ್ ಎಸ್ಟೇಟ್ ಡಾನ್‌ಗಳು, ಗಣಿ ಕಳ್ಳರೆಲ್ಲ ಮಂತ್ರಿ ಪದವಿಗಾಗಿ ತಾಮುಂದು ತಾಮುಂದು ಎಂದು ಹೊರಟಿರುವಾಗ, ಅವರನ್ನೆಲ್ಲ ನಾವು ಸಹಿಸಿಕೊಂಡಿರುವಾಗ, ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅದಕ್ಕಾಗಿ ಹೋರಾಟ ಮಾಡಿ, ರಾಜಕೀಯಕ್ಕೆ ಹಾದಿ ಮಾಡಿಕೊಳ್ಳುವದರಲ್ಲಿ ಯಾವ ತಪ್ಪಿದೆ? ಬಡವರಿಗಾದ ಅನ್ಯಾಯಕ್ಕೆ ಧ್ವನಿ ಎತ್ತುವುದು ಯಾವ ತಪ್ಪು?

ನಮಗೆ ರಾಜಕೀಯ ಪಕ್ಷಗಳ ನಿಲುವು ನೊಂದವರ ಶೋಷಿತರ ಪರವಾಗಿರಬೇಕು. ತಿಮರೋಡಿಯೋ, ಕಮ್ಯುನಿಸ್ಟರೋ ಶೋಷಿತರಿಗಾಗಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಸಿನಿಕತನ ಯಾಕೆ? ಅವರನ್ನು ದೂಷಿಸುವರಿಗೆ ಸೌಜನ್ಯಳ ಪರವಾಗಿ ಹೋರಾಡಲು, ನ್ಯಾಯಕ್ಕಾಗಿ ಕಿಂಚಿತ್ತಾದರೂ ಮಾಡಲು ಸಾಧ್ಯವಿದೆಯೇ? ಬೇರೆಯವರ ಹೋರಾಟವನ್ನು ಯಾಕೆ ತೆಗಳಬೇಕು?

ಎಷ್ಟು ಜನ ರಾಜಕಾರಣಿಗಳು ತಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬರೆದುಕೊಳ್ಳುತ್ತಾರೆ? ಎಲ್ಲರೂ ಜನರನ್ನು ಮರಳು ಮಾಡಲು ಬಳಸುವುದು ಅಗ್ಗದ ಪ್ರಚಾರ ತಂತ್ರವನ್ನ ತಾನೇ? ಬಡವರು ಒಂದು ರೂಪಾಯಿ ಅಕ್ಕಿಗೆ, ಬಿಪಿಲ್ ಕಾರ್ಡ್‌ಗೆ, ಆಶ್ರಯ ಮನೆ ಕೇಳಲು ಮಾತ್ರ ಅರ್ಹರೇ?

ಸರ್ಕಾರ, ಪೋಲೀಸ್ ಇಲಾಖೆ ಎಲ್ಲರೂ sowjanya-heggadeಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವಾಗ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರಾದರೂ ಯಾರು? ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ? ಯಾರಾದರೂ ಮುಂದೆ ಬಂದು ಧ್ವನಿ ಎತ್ತಿದರೆ ಆಗುವ ನಷ್ಟವಾದರೂ ಏನು? ಅನ್ಯಾಯವಾಗಿ ಯಾರದೋ ಕಾಮದಾಹಕ್ಕೆ ಬಲಿಯಾದ ಆಕೆಯ ಮೇಲೆ ಎಳ್ಳಷ್ಟೂ ಕನಿಕರ ತೋರದೆ, ಹೋರಾಟವನ್ನೇ ಆರೋಪಿಸಿದರೆ?

ಆಕೆಯ ಮನೆಯವರು ಆರೋಪಿಸಿದವರನ್ನು ಪೋಲಿಸರು ತನಿಖೆ ಮಾಡಿದ್ದು ತೀರಾ ಇತ್ತೀಚೆಗೆ ತಾನೆ? ಅಂದರೆ ಹೋರಾಟ ಆರಂಭವಾದ ಬಳಿಕ. ತನ್ನದೇ ಸಂಸ್ಥೆ, ತನ್ನದೇ ಗ್ರಾಮದ ಹುಡುಗಿಯ ಸಾವಿನ ತನಿಖೆಗೆ ಹಗ್ಗಡೆಯವರೇ ಮುಂದೆಬರಬಹುದಿತ್ತಲ್ಲ? ಕಮಿನಿಸ್ಟರೋ, ತಿಮ್ಮರೋಡಿಯೋ, ಪ್ರಗತಿಪರರೋ ಯಾಕೆ. ಸಿಬಿಐ ತನಿಖೆಗೆ ಒತ್ತಾಯಿಸಲು ಒಂದು ವರ್ಷದ ನಂತರದ ಹೋರಾಟ ಬೇಕಾಯಿತೋ? ಸಮಾಜ ಸುಧಾರಕ ಖಾವಂದರಿಗೆ, ಧರ್ಮನಿಷ್ಠರಿಗೆ ಕಾಲಬುಡದಲ್ಲೇ ಹೋದ ಅಮಾಯಕ ಜೀವ ಕಾಣಲೇ ಇಲ್ಲವೇ? ಯಾಕೆ ಬಡವರಿಗೆ ನ್ಯಾಯ ಎಂಬ ಉದಾಸೀನವೋ ಅಥವಾ ಅಸಡ್ಡೆಯೋ?

ತಾನೇ ಗೃಹಮಂತ್ರಿಗಳಿಗೆ ತನಿಖೆ ಮಾಡಿಸಿ ಎಂದ ಹೆಗ್ಗಡೆಯವರಿಗೆ ಸಿಬಿಐ ಹೋಗಲಿ ಕನಿಷ್ಠ ಪಕ್ಷ ಸಿಓಡಿ ತನಿಖೆ ಯಾವ ಮಟ್ಟದಲ್ಲಿದೆ ಎಂಬ ವಿಷಯವನ್ನಾದರೋ ಫಾಲೋಅಪ್ ಮಾಡಿ ತನಿಖೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬಹುದಿತ್ತಲ್ಲಾ?

ಅಷ್ಟಕ್ಕೂ ಸೋಮನಾಥ ನಾಯಕ್ ಹಾಗು ನರೇಂದ್ರ ನಾಯಕ್ ವ್ಯಥಾ ಯಾರ ಮೇಲೂ ಆರೋಪ ಹೊರಿಸುವವರಲ್ಲ. ಅವರು ಸೌಜನ್ಯ ಪ್ರಕರಣದಿಂದ ಲಾಭ ಮಾಡಿಕೊಂಡು ಯಾವ ಚುನಾವಣೆಯನ್ನೂ ಸ್ಫರ್ಧಿಸಬೇಕಿಲ್ಲ. ಹೆಗ್ಗಡೆಯವರ ವಿರುದ್ಧ ಆರೋಪಕ್ಕೆ ದಾಖಲೆ ಕೇಳುವವರು , ಸ್ವಸಹಾಯ ಸಂಘ, ಭೂ ಮಾಫಿಯಾಕ್ಕೆ ಸಂಬಂಧಿಸಿದ ಅವ್ಯವಹಾರಗಳಿಗೆ ಸೋಮನಾಥ ನಾಯಕರನ್ನು ಸಂಪರ್ಕಿಸಬಹುದು. ಅವರಲ್ಲಿ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿವೆ. ಅದು ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವೇ? ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಈ ಮೊದಲೇ ಪ್ರಕಟವಾಗಿದೆ. ಪಿಪಿ ಹೆಗ್ಡೆಯಂತಹ ಲಾಯರ್ ಮಾನಹಾನಿ ಎಂಬ ಬ್ರಹ್ಮಾಸ್ತ್ರವನ್ನು ಹಿಡಿದು ನಿಂತಿರುವಾಗ ಯಾರೂ ಸುಳ್ಳು ಸುದ್ದಿ ಪ್ರಕಟಿಸುವಂತಹ ಹುಂಬತನ ಕೈ ಹಾಕುವುದಿಲ್ಲ. ಬೇಕಾದವರು ಆರ್‌ಟಿಐ ಮೂಲಕ ಅಸಹಜ JusticeForSowjanyaಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪ ಸುಳ್ಳು ಎಂದು ಸಾಬೀತುಪಡಿಸಬಹುದು. ಇನ್ನೂ ಅಗತ್ಯವಿದ್ದರೆ ಧರ್ಮಸ್ಥಳದಲ್ಲಿ ತಿರುಗಾಡಿ ಜನರ ಹತ್ತಿರ ಮಾತನಾಡಿದರೆ ಸತ್ಯಸಂಧ, ಧರ್ಮಸಂಧರ ಬಗೆಗೆ, ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೆಚ್ಚಿನ ವಿಷಯ ತಿಳಿಯುತ್ತದೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ. ಸತ್ತದ್ದು ಯಾವುದೋ ಜೀವ, ಹತ್ತರೊಂದಿಗೆ ಇದು ಹನ್ನೊಂದನೇ ರೇಪ್ ಪ್ರಕರಣ ಅಂದುಕೊಂಡಾಗಲ್ಲ. ನಮ್ಮ ಮನೆಮಗಳಿಗೇ ಈ ಸ್ಥಿತಿ ಬಂದಿದ್ದರೆ? ಸೌಜನ್ಯಳ ಅಸಹಾಯಕ ತಂದೆತಾಯಿಯ ಸ್ಥಾನದಲ್ಲಿ ನಾವಿದ್ದಿದ್ದರೆ, ಇದೇ ಕೊಂಕು ಮಾತು ಹೇಳುತ್ತಿದ್ದೆವಾ?