Category Archives: ಶ್ರೀಧರ್ ಪ್ರಭು

ಪುಗಸಟ್ಟೆ ಪವರ್ ಎಂಬೋ ಪುಂಗಿ ಪುರಾಣ ಅಥವಾ ರೈತರು ಯಾರಪ್ಪನ ಮನೆದೂ ತಿನ್ನುತ್ತಿಲ್ಲ


– ಶ್ರೀಧರ್ ಪ್ರಭು


ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಸಾರ್ವಜನಿಕರು ಜಮೆ ಮಾಡಿರುವ ಹಣ ಸರಿ ಸುಮಾರು ೭೫,೦೦೦ ಕೋಟಿ ರೂಪಾಯಿಯಷ್ಟು. ಹಾಗೆಯೇ, ಈ ದೇಶದ ನಾನೂರು ಗಣ್ಯ ಉದ್ಯಮಿಗಳು ಸೇರಿ ಇದೇ ಬ್ಯಾಂಕುಗಳಿಗೆ ತಿಕ್ಕಿರುವ ಉಂಡೆ ನಾಮದ ಮೊತ್ತ ೭೦,೩೦೦ ಕೋಟಿ ರೂಪಾಯಿ. ನಮ್ಮ ದೇಶದ ಸರಕಾರಗಳು ಮತ್ತು ಕಾನೂನು ರೀತ್ಯ ಜವಾಬ್ದಾರಿ ಇರುವ ರಿಸರ್ವ್ ಬ್ಯಾಂಕ್ ಈ ಅಂಕಿ ಅಂಶಗಳನ್ನು ಚಿದಂಬರ ರಹಸ್ಯದಂತೆ ಕಾಪಾಡಿಕೊಂಡು ಬಂದಿವೆ. ಆದರೆ ಹೀಗೆ ದೇಶದ ಸಂಪತ್ತು ಕೊಳ್ಳೆಹೋಗುತ್ತಿರುವುದನ್ನು ಧೈರ್ಯವಾಗಿ ಸಾರ್ವಜನಿಕಗೊಳಿಸುತ್ತಿರುವುದು ಬ್ಯಾಂಕ್ ನೌಕರರ ಸಂಘಟನೆಯೇ (AIBEA) ಹೊರತೂ, ಸರಕಾರ ಅಥವಾ ರಿಸರ್ವ್ ಬ್ಯಾಂಕ್ ಅಲ್ಲ ಎಂಬುದು ಗಮನಾರ್ಹ.

ಇದಕ್ಕಿಂತ ಗಮನಾರ್ಹವೆಂದರೆ, ಹೀಗೆ ಸಾರ್ವಜನಿಕವಾಗಿ ಅವರ ವಿವರಗಳು ಫೋಟೋ ಸಮೇತ ಹೊರಬಿದ್ದಾಗ, bankersಬ್ಯಾಂಕುಗಳಿಗೆ ಟೋಪಿ ಹಾಕಿರುವ ಯಾವ ಉದ್ಯಮಿಯೂ, ಇದುವರೆಗೂ, ಆತ್ಮಹತ್ಯೆ ಮಾಡಿಕೊಂಡ್ಡಿದ್ದು ಹಾಗಿರಲಿ, ಕನಿಷ್ಠ ಬೇಜಾರು ಮಾಡಿಕೊಂಡ ಪ್ರಸಂಗವೂ ಇಲ್ಲ. ಇನ್ನೊಂದೆಡೆ, ಜುಜುಬಿ ಹಣದ ಮೇಲೆ ಮೀಟರ್ ಬಡ್ಡಿ ಹಾಕಿಸಿಕೊಂಡು, ಸಾಲ ತೀರಿಸಲಾಗಲಿಲ್ಲ ಎಂಬ ಕೊರಗಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ, ಅದು ಐದ್ಹತ್ತು ರೂಪಾಯಿಯೇ ಆಗಲಿ, ‘ಸಾಲಗಾರ’ ಎಂದು ಆರೋಪ ಹೊತ್ತು ಬದುಕುವುದರ ಬದಲು ರೈತ ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ದುರಂತಮಯ.

ಈ ‘ಸಾಲಗಾರ’ ಎಂಬ ಆರೋಪಕ್ಕಿಂತ ‘ಪುಕ್ಕಟೆ ಕೂಳು ತಿನ್ನುವವ’ ಎಂಬ ಆರೋಪ ಇನ್ನೂ ಹೀನಾಯವಾದ್ದು. ಬೆಳಿಗ್ಗೆ ಹೊತ್ತು ಗಂಟೆಗೆ ಮೂರು ಬಾರಿ ವಿದ್ಯುತ್ ಕಡಿತ ಜೊತೆಗೆ ನಂಜಿಕೊಳ್ಳಲು ವೋಲ್ಟೇಜ್ ಸಮಸ್ಯೆ ಹಾಗೇ ರಾತ್ರಿ ಹೊತ್ತು ಹಾವು-ಚೇಳು ಕಚ್ಚಿಸಿಕೊಂಡು ದಿನವೂ ಸತ್ತು ಸತ್ತು ಬದುಕುತ್ತಿರುವ ರೈತರು ಖಡಾ ಖಂಡಿತವಾಗಿ ನಂಬಿರುವ ಸತ್ಯವೇನೆಂದರೆ: ವಿದ್ಯುತ್ ಸರಬರಾಜು ಕಂಪನಿಗಳು ಅವರಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿವೆ. ಈ ಅಪರಾಧಿ ಪ್ರಜ್ಞೆ ರೈತರನ್ನು ಅತಿಯಾಗಿ ಕಾಡುತ್ತಿದೆ. ರೈತರಿಗೆ ಎಂದಲ್ಲ, ಸಾಮುದಾಯಿಕವಾಗಿ ಎಲ್ಲರೂ ನಂಬಿರುವ ಸತ್ಯವೂ ಇದೇನೇ. ಆದರೆ ಇದು ನಿಜಕ್ಕೂ ನಿಜವೇ? ನೀವೇ ತೀರ್ಮಾನಿಸಿ.

ಮೊದಲಿಗೊಂದು ನಿದರ್ಶನ.

ನೀವು ನಿಮ್ಮ ಮಗನೊಂದಿಗೆ ಹೋಟೆಲ್ ಗೆ ಹೋಗಿ ಎರಡು ಪ್ಲೇಟ್ ಇಡ್ಲಿ ವಡೆ ಆರ್ಡರ್ ಮಾಡಿದಿರಿ ಎಂದುಕೊಳ್ಳಿ. ಬಿಲ್ ಕೊಡುವುದು ನೀವೇ ಎಂದು ಸುಲಭವಾಗಿ ತೀರ್ಮಾನಿಸಿದ ಮಾಣಿ ನಿಮಗೆ ಮಾತ್ರ ಇಡ್ಲಿ ವಡೆ ಆದರೆ ನಿಮ್ಮ ಮಗನಿಗೆ ಬರಿ ಇಡ್ಲಿ (ಚಟ್ನಿ ಕೂಡ ಇಲ್ಲದ್ದು) ಕೊಟ್ಟು, ಬಿಲ್ ಮಾತ್ರ ಎರಡು ಪ್ಲೇಟ್ ಇಡ್ಲಿ ವಡೆಗೇ ಕೊಟ್ಟರೆ ಏನು ಮಾಡುತ್ತೀರಿ? ಹೀಗೇ ಸಾಗಿರುವುದು ಈ ಉಚಿತ ವಿದ್ಯುತ್ ಗಾಥೆ.

ಹೇಗೆ ಅಂತೀರಾ?

೨೦೦೩ ರ ವಿದ್ಯುತ್ ಶಕ್ತಿ ಕಾಯಿದೆಯ ಪ್ರಕಾರ ರೈತರಿಗೂ ಸೇರಿದಂತೆ ಯಾರಿಗೂ ಪುಕ್ಕಟೆಯಾಗಿ ಅಥವಾ ಸರಬರಾಜಿನ ಖರ್ಚಿಗಿಂತ ಕಡಿಮೆ ದರದಲ್ಲಾಗಲಿ ವಿದ್ಯುತ್ ಸರಬರಾಜು ಮಾಡುವುದು ಕಾನೂನುಬಾಹಿರ. ಈ ಕಾನೂನು ಪ್ರಕಾರ ವಿದ್ಯುತ್ ದರ ಅಥವಾ ಸರಬರಾಜು ಅವಧಿಯನ್ನು ತೀರ್ಮಾನಿಸುವ ಹಕ್ಕಿರುವುದು ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಮಾತ್ರ. electricity-linesಸರಕಾರಕ್ಕೆ ಯಾವ ಅಧಿಕಾರವೂ ಇಲ್ಲ. ಹಾಗೊಂದು ವೇಳೆ ಸರಕಾರ ರೈತರಿಗೋ ಇಲ್ಲ ಇನ್ನೊಂದು ವರ್ಗಕ್ಕೋ ಉಚಿತ ವಿದ್ಯುತ್ ನೀಡಲು ನೀತಿ ನಿರೂಪಿಸಿದರೆ, ಸರಬರಾಜು ಕಂಪನಿಗಳಿಗೆ ಉಚಿತ (ಅಥವಾ ಕಡಿಮೆ ದರದ) ವಿದ್ಯುತ್ ಸರಬರಾಜು ಮಾಡಲು ತಗಲುವ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರ ಪೂರ್ತಿಯಾಗಿ ಭರಿಸಿ ಕೊಡಬೇಕು. ಹೀಗಾಗಿ, ರೈತರಿಗೆ ಉಚಿತ ವಿದ್ಯುತ್ ಕೊಡುವುದರಿಂದ, ವಿದ್ಯುತ್ ಕಂಪನಿಗಳಿಗೆ ದಮಡಿ ಕಾಸಿನ ನಷ್ಟವೂ ಆಗುವುದಿಲ್ಲ. ನಮ್ಮ ರಾಜ್ಯದ ಐದು ವಿದ್ಯುತ್ ಕಂಪನಿಗಳು ಸರಕಾರದಿಂದ ರೈತರ ಹೆಸರಿನಲ್ಲಿ ವರ್ಷಕ್ಕೆ ಸುಮಾರು ಐದು ಸಾವಿರದ ಇನ್ನೂರು ಕೋಟಿ ರೂಪಾಯಿ ಹಣ ಪಡೆಯುತ್ತಿವೆ. ಹಾಗಿದ್ದೂ, ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಖೋತಾ ಮಾಡುತ್ತಿರುವುದು ಏಕೆ? ರೈತ ಏಕೆ ಸುಮ್ಮನಿರುತ್ತಾನೆ? ಈಗ ಮೇಲಿನ ಇಡ್ಲಿ-ವಡೆ ಲೆಕ್ಕ ಮತ್ತೊಮ್ಮೆ ಓದಿ.

ಇನ್ನೊಂದು ವಿಚಾರ, ಸರಕಾರ ಈ ಐದು ಸಾವಿರದ ಇನ್ನೂರು ಕೋಟಿ ಹಣ ಹೇಗೆ ಹೊಂದಿಸುತ್ತದೆ ಗೊತ್ತೇ? ಪ್ರತಿ ಗ್ರಾಹಕನೂ ಕೊಡುವ ವಿದ್ಯುತ್ ಬಿಲ್ಲಿನ ಮೊತ್ತಕ್ಕೆ ಶೇಕಡಾ ಐದರಷ್ಟು ವಿದ್ಯುತ್ ತೆರಿಗೆಯನ್ನು ವಿಧಿಸಿ ಈ ಹಣ ಹೊಂದಿಸಲಾಗುತ್ತದೆ. ಈ ಪದ್ಧತಿ ಐವತ್ತರ ದಶಕದಿಂದಲೂ ಜಾರಿಯಲ್ಲಿದೆ. ಹೀಗಾಗಿ ಸರಕಾರಕ್ಕೆ ಕೂಡ ರೈತರಿಗೆ ವಿದ್ಯುತ್ ಸರಬರಾಜು ಮಾಡಿಸಲು ಯಾವ ರೀತಿಯಲ್ಲೂ ಹೊರೆಯಾಗುವುದಿಲ್ಲ. ಸರಕಾರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಖರ್ಚನ್ನು ಹೊಂದಿಸುತ್ತಿದೆ.

ರಾಜ್ಯ ಸರಕಾರ ಹೊರಡಿಸಿರುವ ಈ ಉಚಿತ ವಿದ್ಯುತ್ ಆದೇಶದ ಪ್ರಕಾರ ಸರಬರಾಜು ಕಂಪನಿಗಳು ಮೀಟರ್ ಅಳವಡಿಸಿದ ಸ್ಥಾವರಗಳಿಗೆ ಮಾತ್ರ ಉಚಿತ ವಿದ್ಯುತ್ ಲಭ್ಯ. ಹೀಗಾಗಿ ಮೀಟರ್ ಇಲ್ಲದ ಸ್ಥಾವರಗಳಿಗೆ ಸರಕಾರ ನ್ಯಾಯವಾಗಿ ಸಬ್ಸಿಡಿ ಕೊಡಬೇಕೆಂದೇನೂ ಇಲ್ಲ. ಆದರೆ ಸರಬರಾಜು ಕಂಪನಿಗಳು ಇದಕ್ಕೊಂದು ಒಳದಾರಿ ಕಂಡುಕೊಂಡಿವೆ. ಒಂದು ಪಂಪ್ ಸೆಟ್ ಗೆ ಸರಬರಾಜು ಮಾಡಲು ಇಂತಿಷ್ಟು ಖರ್ಚು, ಒಟ್ಟು ಪಂಪ್ ಸೆಟ್ ಗಳು ಇಂತಿಷ್ಟು ‘ಬೀರಬಲ್ಲನ ಊರಿನಲ್ಲಿರುವ ಕಾಗೆಗಳ’ ಲೆಕ್ಕ ತೋರಿಸಿ ಕಂಪನಿಗಳು ಸಬ್ಸಿಡಿ ಹಣ ಪಡೆಯುತ್ತಿವೆ. ವಿದ್ಯುತ್ ಕಾಯಿದೆಯನ್ನು ಕಡೆಗಣಿಸಿ,ಗುಂಡಾಗುತ್ತಿಗೆ ಲೆಕ್ಕದಲ್ಲಿ ಐದುಸಾವಿರದ ಇನ್ನೂರು ಕೋಟಿಯಷ್ಟು ಹಣ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿರುವುದು ಸ್ವತಃ ವಿದ್ಯುತ್ ನಿಯಂತ್ರಣ ಆಯೋಗ. ಈ ಪದ್ಧತಿಯನ್ನು ನಿಯಂತ್ರಣ ಆಯೋಗದ ಮೇಲಿನ (ಹೈ ಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶರಿರು ಅಧ್ಯಕ್ಷರಾಗಿರುವ) ಅಪೀಲು ನ್ಯಾಯಾಧಿಕರಣ ಕೂಡ ಅನುಮೋದಿಸಿದೆ.

ಒಟ್ಟಿನಲ್ಲಿ, ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ರಾಜ್ಯದ ಕಂಪನಿಗಳು ಸರಕಾರದಿಂದ water-pumpsetರೈತರ ಹೆಸರಿನಲ್ಲಿ ಪಡೆಯುತ್ತಿರುವ ಹಣ ಸದ್ವಿನಿಯೋಗವಾಗಿದ್ದೇ ನಿಜವಾದರೆ ಯಾವ ರೈತನೂ ಹಾವು ಚೇಳು ಕಚ್ಚಿಸಿಕೊಳ್ಳುವ ಪ್ರಮೇಯ ಇರಲಿಲ್ಲ. ಒಟ್ಟಾರೆ ದುಡ್ಡು ಸಂದಾಯವಾದ ಮೇಲೆ ರೈತನಿಗೆ ವಿದ್ಯುತ್ ಕೊಡಲು ಈ ಕಂಪನಿಗಳಿಗೆ ಏನು ಕಷ್ಟ? ಇನ್ನು ದುಡ್ಡು ಪಡೆಯುತ್ತಿರುವುದು ಕಾಗೆ ಲೆಕ್ಕದ ಗುಂಡಾ ಗುತ್ತಿಗೆ ಮೇಲೆ ಎಂದ ಮೇಲೆ ಮೀಟರ್ ಅಳವಡಿಸಿಲ್ಲ ಎಂಬ ಸಬೂಬು ಏಕೆ?

ಮಂಗಳೂರು ವಿದ್ಯುತ್ಶಕ್ತಿ ಕಂಪನಿ (ಮೆಸ್ಕಾಂ), ತಾನೇ ಹೇಳಿಕೊಳ್ಳುವಂತೆ ಶೇಕಡಾ ತೊಂಬತ್ತು ಭಾಗ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಿದೆಯಂತೆ. ಇರಬಹುದು ಎಂದಿಟ್ಟುಕೊಳ್ಳೋಣ. ಹಾಗದ ಮೇಲೆ, ರೈತರಿಗೆ ಸರಬರಾಜಾಗುವ ವಿದ್ಯುತ್ ಅಳೆಯುವುದು ಅತಿ ಸುಲಭವಾಗಲಿಲ್ಲವೇ? ಈ ಗುಂಡಾ ಗುತ್ತಿಗೆ ಲೆಕ್ಕ ಏಕೆ ಬೇಕು? ಹಾಗಿದ್ದೂ, ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ, ಮೆಸ್ಕಾಂಗೂ ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಸಬ್ಸಿಡಿ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿದೆ. ಹಾಗೆಂದು ಮೀಟರ್ ಅಳವಡಿಸುವ ಖರ್ಚು ಮೆಸ್ಕಾಂ ಗ್ರಾಹಕರ ಮೇಲೆ ಹೇರಲು ನಿಯಂತ್ರಣ ಆಯೋಗ ಮರೆತಿಲ್ಲ. ಸಬ್ಸಿಡಿ ಬರುವುದು ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಎಂದ ಮೇಲೆ ಮೀಟರ್ ಏಕೆ ಅಳವಡಿಸಬೇಕು? ಮೀಟರ್ ಅಳವಡಿಕೆಗೆ ತಗಲುವ ವೆಚ್ಚ ಗ್ರಾಹಕರು ಏಕೆ ಭರಿಸಬೇಕು? ಇದಕ್ಕೆಲ್ಲ ಯಾರ ಹತ್ತಿರವೂ ಉತ್ತರವಿಲ್ಲ.

ಸಾರ್ವಜನಿಕರಿಗೆ ಈ ರೀತಿ ತೊಂದರೆಯಾಗುತ್ತಿರುವುದು ತಪ್ಪಿಸಲು ಮತ್ತು ರೈತರ ಹೆಸರಿನಲ್ಲಿ ತಾನು ಕೊಡುವ ಸಬ್ಸಿಡಿ ಬಳಕೆ ಸದ್ವಿನಿಯೋಗ ಆಗಬೇಕು ಎಂಬ ಅಸೆಯಿಂದ, ೨೦೧೦ ರಲ್ಲಿ ರಾಜ್ಯ ಸರಕಾರ ತನ್ನದೇ ಕಂಪನಿಗಳ ಮೇಲೊಂದು ಕೇಸ್ ಹಾಕಿತು. ಈ ಕೇಸನ್ನು ಸಾರ್ವಜನಿಕರು ಸಂಪೂರ್ಣ ಬೆಂಬಲಿಸಿದರು. ಆದರೆ ಗುಂಡಾ ಗುತ್ತಿಗೆಯ ಸಬ್ಸಿಡಿ ಲೆಕ್ಕವೇ ಸರಿ ಎಂದು ಸಾರಿ ನಿಯಂತ್ರಣ ಆಯೋಗ ಸರಕಾರದ ಕೇಸನ್ನು ವಜಾ ಮಾಡಿತು. ಈಗ ಹೇಳಿ, ರೈತ ಮೀಟರ್ ಏಕೆ ಅಳವಡಿಸಬೇಕು? ತಪ್ಪು ಯಾರದು?

ಬಡವರಿಗೆ, ಅದರಲ್ಲೂ ರೈತರಿಗೆ, ಏನಾದರೂ ಸೌಲಭ್ಯ ಸಿಕ್ಕರೆ ಸಿಡಿಮಿಡಿಗೊಳ್ಳುವ ಮಧ್ಯಮ ವರ್ಗ ಕೂಡ ಗಮನಿಸಬೇಕಿರುವ ಒಂದು ಅಂಶ ಇದೆ. farmers-suicideಗೃಹ ಬಳಕೆಯ ವಿದ್ಯುತ್ ಸರಬರಾಜು ಮಾಡಲು ಸರಬರಾಜು ಕಂಪನಿಗಳಿಗೆ ಕೊಂಚ ಮಟ್ಟಿನ ನಷ್ಟ ತಗಲುತ್ತದೆ. ಈ ಹಣವನ್ನು ಸರಕಾರದಿಂದ ಇಲ್ಲವೇ ಬೇರೆ ಗ್ರಾಹಕರ ಜೇಬಿನಿಂದ ಹೊಂದಿಸಲಾಗುತ್ತದೆ. ಹಾಗೆಯೇ ಗೃಹ ಬಳಕೆದಾರರಿಗೆ ನೀರು ಬಿಸಿ ಮಾಡಲು ಸೌರ ವಿದ್ಯುತ್ ಯಂತ್ರ ಬಳಸಿದರೆ ಪ್ರತಿ ಯೂನಿಟ್ ಗೆ (ನೂರು ಯೂನಿಟ್ ವರೆಗೆ ಮಾತ್ರ) ಐವತ್ತು ಪೈಸೆ ಲಾಭವಿದೆ. ಇದರಿಂದಲೂ ವಿದ್ಯುತ್ ಕಂಪನಿಗಳಿಗೆ ಯಾವ ನಷ್ಟವೂ ಇಲ್ಲ. ಏಕೆಂದರೆ, ಈ ಐವತ್ತು ಪೈಸೆ ಕಡಿಮೆ ದರದ ನಷ್ಟ ಭರಿಸುವುದು ಬೇರೆ ಗ್ರಾಹಕರೇ ವಿನಃ ಕಂಪನಿಗಳಲ್ಲ. ಹಳ್ಳಿಗಳಲ್ಲಿ ತಣ್ಣೀರು ಸ್ನಾನ ಮಾಡಿ ಯಾವುದೇ ಹೀಟರ್ ಬಳಕೆ ಮಾಡದ ರೈತ, ಮಧ್ಯಮ ವರ್ಗದ ಜನರನ್ನು ಪೋಷಿಸುತ್ತಿದ್ದಾನೆ.

ರೈತ ತನಗೆ ಉಚಿತ ವಿದ್ಯುತ್ ಕೊಡಿ ಎಂದು ಯಾರ ಕಾಲೂ ಹಿಡಿಯಲಿಲ್ಲ. ಎಲ್ಲ ಪಕ್ಷಗಳೂ ರೈತನಿಗೆ ಅಸೆ ತೋರಿಸಿ ವೋಟನ್ನು ಬಾಚಿವೆ. ವಿಶ್ವ ಬ್ಯಾಂಕ್ ಪ್ರೇರಿತ ವಿದ್ಯುತ್ ಕಾಯಿದೆಯಲ್ಲಿನ ತಮಗೆ ಬೇಕಿರುವ ಅಂಶಗಳು ಮಾತ್ರ ಜಾರಿ ಮಾಡಿ, ರೈತರ ಹೆಸರಿನಲ್ಲಿ ಸಬ್ಸಿಡಿ ಹಣ ಪಡೆದು, ರೈತನಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ. ಇದೇ ನಿಯಂತ್ರಣ ಆಯೋಗ ಗ್ರಾಹಕರಲ್ಲಿ ‘ಜಾಗೃತಿ’ ಮೂಡಿಸುವ ‘ಶಿಕ್ಷಣ’ ಕೊಡಲು ಬೆಂಗಳೂರು ಸರಬರಾಜು ಕಂಪನಿಯೊಂದಕ್ಕೇ ಸುಮಾರು ಒಂದು ಕೋಟಿ ಹಣ ನಿಗದಿ ಮಾಡಿದೆ. ಗ್ರಾಹಕರಿಗೆ ಶಿಕ್ಷಣ ಸಿಕ್ಕಿತೋ ಇಲ್ಲವೇ ರೈತರಿಗೆ ಶಿಕ್ಷೆ ಸಿಕ್ಕಿತೋ – ನೀವೇ ತೀರ್ಮಾನಿಸಿ.

ಒಟ್ಟಿನಲ್ಲಿ, ರೈತ ಯಾರಪ್ಪನದ್ದೂ ತಿನ್ನುತ್ತಿಲ್ಲ; ರೈತನ ಸಂಪತ್ತನ್ನೇ ರೈತನ ಹೆಸರಿನಲ್ಲಿ, ಎಲ್ಲರೂ ತಿನ್ನುತ್ತಿದ್ದಾರೆ.

ಕರ್ನಾಟಕದ ವಿದ್ಯಾಸಾಗರ: ಪಂಚಮರ ಅರ್ ಗೋಪಾಲಸ್ವಾಮಿ ಅಯ್ಯರ್


– ಶ್ರೀಧರ್ ಪ್ರಭು


 

ಭಾರತದ ಇತಿಹಾಸದಲ್ಲಿಯೇ ದಲಿತರಿಗೆ ರಾಜರ ಆಸ್ಥಾನ ಪ್ರವೇಶ ಮಾಡಲು ಅನುವು ಮಾಡಿಕೊಟ್ಟ ಮೊದಲ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಇರಬಹುದೇನೋ. ಅಂಥಹ ಪುಣ್ಯ ಪುರುಷರ ಆಳ್ವಿಕೆಯ ಕಾಲ (೧೯೩೨). ಕುನ್ನೀರುಕಟ್ಟೆ, ಅಂದಿನ ಕಾಲಕ್ಕೆ ಇಡೀ ಮಳವಳ್ಳಿಯ ಬಾಯಾರಿಕೆ ತಣಿಸುವ ಉಣಿಸುವ ಕೆರೆ. ಆದರೆ ಅದು ದಲಿತರಿಗಲ್ಲ. ಕುನ್ನೀರುಕಟ್ಟೆ ಮಾತ್ರವಲ್ಲ, ದಲಿತರು, ಸುತ್ತಮುತ್ತಲ ಯಾವೊಂದು ಕೆರೆ, ಮಡುವು, Krishnaraja_Wodiyarಬಾವಿ ಇತ್ಯಾದಿಯಿಂದ ನೀರು ಬಳಸುವಂತಿರಲಿಲ್ಲ. ಮಳವಳ್ಳಿಯಿಂದ ಸುಮಾರು ೨೫ ಕಿ.ಮಿ ದೂರದ ಶ್ರೀರಂಗಪಟ್ಟಣದ ಹತ್ತಿರದ ಒಂದು ಜಾಗೆಯಿಂದ ನೀರು ಹೊರಬೇಕಿತ್ತು ಎಂದರೆ ನಂಬುತ್ತೀರಾ?

ನಾಲ್ವಡಿ ಕೃಷ್ಣರಾಜರ ಅವಿರತ ಪ್ರಯತ್ನದಿಂದ ದಲಿತರ ಮನೆಗಳಲ್ಲಿ ಶಿಕ್ಷಣದ ಹೊಂಗಿರಣ ಹೊಕ್ಕಿತ್ತು. ೧೯೨೭ ರಲ್ಲಿ ನಡೆದ “ಮಹಾಡ ಕೆರೆ ಸತ್ಯಾಗ್ರಹ” ವನ್ನು ಮಾದಯ್ಯನೆಂಬ ಯುವ ಶಿಕ್ಷಕ ತನ್ನವರಿಗೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದ. ದಲಿತರಲ್ಲಿನ ಒಂದು ಜಾಗೃತ ವರ್ಗ ಕುನ್ನೀರುಕಟ್ಟೆಯ ನೀರು ಬಳಸಲು ಮುಂದಾಯಿತು.

ನಾಲ್ವಡಿ ಕೃಷ್ಣರಾಜರ ಆಡಳಿತ ಎಂಥಹ ಪ್ರಗತಿಪರವಾಗಿತ್ತೆಂದರೆ, ಡಾ.ಅಂಬೇಡ್ಕರ್ ಮೈಸೂರು ಸಂಸ್ಥಾನದ ಮುಖ್ಯ ಕಾನೂನು ಸಲಹಗಾರರಾಗಿ ನೇಮಿಸಿಕೊಂಡು, ದಲಿತರಿಗೆ ಎಲ್ಲಾ ಸಾರ್ವಜನಿಕ ಸ್ಥಳಗಳು ಮತ್ತು ಸಂಪನ್ಮೂಲಗಳೂ ಸಿಗುವಂತೆ ಮಾಡಿತ್ತು. ಹಾಗಾಗಿ ನೀರಿಗಾಗಿ ದಲಿತರು ಹೋರಾಟವೇ ಮಾಡದೇ, ಅಮಲ್ದಾರರಿಗೆ ಆದೇಶವಿತ್ತು ಕುನ್ನೀರುಕಟ್ಟೆಯ ಒಂದು ಭಾಗದಲ್ಲಿ ಮೆಟ್ಟಿಲುಗಳನ್ನು ಕಟ್ಟಿಸಿಕೊಟ್ಟಿತು. ಅಷ್ಟೇ ಅಲ್ಲ, ಅಮಲ್ದಾರರ ನೇತೃತ್ವದಲ್ಲಿಯೇ ದೊಡ್ಡದೊಂದು ಮೆರವಣಿಗೆ ಆಯೋಜಿಸಿ ನೀರು ಬಳಸಲು ವ್ಯವಸ್ಥೆ ಮಾಡಲಾಯಿತು!

ಊರಿನ ಸವರ್ಣೀಯರು ಮತ್ತು ಮುಸಲ್ಮಾನರು ರೊಚ್ಚಿಗೆದ್ದರು. ಇಪ್ಪತ್ತೆರಡು ಜನ ದಲಿತರನ್ನು ಹಿಗ್ಗಾಮುಗ್ಗ ಥಳಿಸಲಾಯಿತು. ಕೆಲವರು ನಾಪತ್ತೆಯೇ ಆಗಿ ಹೋದರು. ಇಡೀ ಊರು ರಣರಂಗವಾಯಿತು. ನೀರು, ಸೀಮೆಯೆಣ್ಣೆ, ಕಾಳು-ಕಡಿ ಸಿಗುವುದಿರಲಿ, ಕಡೆಗೆ ಊರ ಆಚೀಚೆ ಕೂಡ ದಲಿತರು ಓಡಾಡದಂತೆ ಕಾವಲು ಹಾಕಿದರು.

ರುದ್ರಯ್ಯ ಎಂಬ ಧೈರ್ಯಸ್ಥ ದಲಿತ ಯುವಕನೊಬ್ಬ, ಅಂತಹ ಭಯಾನಕ ವಾತಾವರಣದಲ್ಲಿ ಬರಿ ಕ್ಷೌರಕತ್ತಿಯೊಂದನ್ನು ಹಿಡಿದು ಮದ್ದೂರು ರೈಲುನಿಲ್ದಾಣಕ್ಕೆ ಹೊರಟೇಬಿಟ್ಟ. ಮಳವಳ್ಳಿಯ ದಲಿತ ಯುವಕನೊಬ್ಬ ಬೆಂಗಳೂರಲ್ಲಿ ಮೆಟ್ರಿಕ್ ಪರೀಕ್ಷೆ ಬರಿಯುತ್ತಿದ್ದ ಶಂಕರಯ್ಯ ಎಂಬ ಇನ್ನೊಬ್ಬನನ್ನು ಜತೆ ಮಾಡಿಕೊಂಡು ಸೀದಾ ಹೋಗಿದ್ದು ವೈದಿಕ ಸಂಪ್ರದಾಯದಲ್ಲಿ ಅದ್ದಿಹೋಗಿದ್ದ ಬೆಂಗಳೂರಿನ ಚಾಮರಾಜಪೇಟೆ ಬಡಾವಣೆಗೆ! ಅದೂ, ಒಬ್ಬ ತಮಿಳು ಬ್ರಾಹ್ಮಣರ ಮನೆಗೆ!!

ಇತ್ತ ಮಳವಳ್ಳಿಯಲ್ಲಿ ಇಡೀ ದಲಿತೇತರ ಸಮುದಾಯ ಪಕ್ಷ, ಜಾತಿ, ಅಂತಸ್ತು ಮತ್ತು ಧರ್ಮಭೇದ ಮರೆತು ಒಂದಾಗಿತ್ತು. ದೌರ್ಜನ್ಯಕ್ಕೆ ಕಾರಣರಾದವರ ರಕ್ಷಣೆಗೆ ಊರಿಗೆ ಊರೇ ಟೊಂಕ ಕಟ್ಟಿ ನಿಂತಿತ್ತು. ಒಂದೆಡೆ ಬಹಿಷ್ಕಾರ, ಇನ್ನೊಂದೆಡೆ ದೌರ್ಜನ್ಯ, ದಲಿತರು ಬೆದರಿ, ಮುದುಡಿ ಹೋಗಿದ್ದರು. ಆಡಳಿತ ಯಂತ್ರ ನಡೆಸುವವರಿಗೂ, ಎಂಥ ಆಶಾವಾದಿ ಸುಧಾರಕ ಮನಸ್ಸಲ್ಲೂ, ಇನ್ನು ದಲಿತರು ಗುಳೆ ಹೋಗುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎನ್ನಿಸುವ ವಾತಾವರಣ ಮನೆ ಮಾಡಿತ್ತು.

ಅಂಥಹದರಲ್ಲಿ ಮೈಸೂರು ಪೇಟ, ಇಂಗ್ಲಿಷ್ ದಿರಿಸು ತೊಟ್ಟ ಐವತ್ತರ ಅಂಚಿನ ಮೈಸೂರು ಸಂಸ್ಥಾನದ ಕೃಶಕಾಯ ಅಧಿಕಾರಿಯೊಬ್ಬರು ಮಳವಳ್ಳಿಗೆ ಬಂದರು. ಅವರ ರಕ್ಷಣೆಗೆ ಅಷ್ಟಿಷ್ಟು ಪೋಲಿಸ್ ಪಡೆ ಇತ್ತಾದರೂ, ಅದಿಲ್ಲದಿದ್ದರೂ ಪರವಾಗಿಲ್ಲ ಎನ್ನುವಂತಿತ್ತು ಅವರ ಧೈರ್ಯ ಮತ್ತು ಗತ್ತು. ನೋಡಿದರೆ ಪಕ್ಕಾ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣನೆಂದು ಯಾರು ಬೇಕಿದ್ದರೂ ಹೇಳಬಹುದಿತ್ತು. ಹಿಂದೆಂದೂ ನಡೆಯದ ಸಾಮೂಹಿಕ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ ರಣರಂಗದಂತಹ ವಾತಾವರಣದಲ್ಲಿ ರಾತ್ರಿ ಹಗಲು ತಿರುಗಲು ಅವರಿಗೆ ಭಯವೇನೂ ಇರಲಿಲ್ಲ. gopalaswami iyerಪೊಲೀಸರಿಗೆ ಯಾವುದೇ, ಭಯ, ಆಮಿಷ ಅಥವಾ ಪಕ್ಷಪಾತವಿಲ್ಲದ ನಿರ್ಭೀತ ತನಿಖೆಗೆ ಆದೇಶ ಕೊಟ್ಟು, ಆಮೇಲೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ತಮ್ಮ ಇವರು ಕೆಲಸದಲ್ಲಿ ನಿರತರಾದರು. ಮಳವಳ್ಳಿ ಪಟ್ಟಣ ಏಕ ದಂ ತಣ್ಣಗಾಯಿತು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂತು. ಎಲ್ಲ ಆರೋಪಿಗಳ ಬಂಧನವಾಯಿತು. ಇನ್ನು ಸವರ್ಣೀಯರು ಲೆಕ್ಕ ಹಾಕಿದ್ದೇನೆಂದರೆ, ದಲಿತರು ಶ್ರೀರಂಗಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ತಿರುಗುವುದು ಅಸಾಧ್ಯ. ಹಾಗಾಗಿ ಮುಕದ್ದಮೆಗಳು ಬಿದ್ದು ಹೋಗುವುದು ಖಚಿತ ಎಂದು. ಹಾಗೇನೂ ಆಗಲಿಲ್ಲ. ಇದನ್ನು ಮೊದಲೇ ಗೃಹಿಸಿದ್ದ ಈ ಅಧಿಕಾರಿ ದೌರ್ಜನ್ಯದ ತನಿಖೆಗೆ ಮಳವಳ್ಳಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆದೇಶ ನೀಡಿದರು. ಹೀಗಾಗಿ ನ್ಯಾಯ ಸಿಗಲು ಸಾಧ್ಯವಾಗಿ ತಪ್ಪಿತಸ್ಥರಿಗೆಲ್ಲ ತಪ್ಪದೇ ಶಿಕ್ಷೆಯಾಯಿತು. ನ್ಯಾಯದೇವತೆ ದಲಿತರ ಮನೆಗೇ ನಡೆದು ಬಂದಳು.

ಈ ಘಟನೆಯ ನಂತರದ ಮೂರು ನಾಲ್ಕು ವರ್ಷಗಳಲ್ಲಿ ಮಂಡ್ಯದ ಕೊಮ್ಮರಹಳ್ಳಿ, ಹೆಮ್ಮನಹಳ್ಳಿ, ಸೋಮನಹಳ್ಳಿ, ರಾವಣಿ, ತುಮಕೂರಿನ ಹುಲಿಯೂರುದುರ್ಗ ಮತ್ತು ಹಲವು ಭಾಗಗಳಲ್ಲಿ ಸ್ವಾಭಿಮಾನ ಸಾಧನೆಯ ಹೋರಾಟಗಳು ನಡೆದವು. ಈ ಹೋರಾಟದ ನೇತೃತ್ವ ವಹಿಸಿದ್ದು ಪ್ರಭುತ್ವದ ಭಾಗವಾಗಿದ್ದ ಈ ವ್ಯಕ್ತಿ!

ಆಡಳಿತ ಯಂತ್ರವನ್ನು ದಲಿತ-ದಮನಿತರ ರಕ್ಷಣೆಗೆ ಹೇಗೆ ಸಮರ್ಥವಾಗಿ ಬಳಸಬಹುದು ಎಂದು ಮೊದಲ ಬಾರಿಗೆ ತೋರಿಸಿಕೊಟ್ಟವರು: ಪಂಚಮರ ಅರ್. ಗೋಪಾಲಸ್ವಾಮಿ ಅಯ್ಯರ್ ((೧೮೮೧-೧೯೪೩).

ಮೇಲು-ಕೀಳಿನ ಕಂದರವನ್ನು ಮುಚ್ಚುವ ಮೊದಲ ಪ್ರಯತ್ನವಾಗಿ, ದಲಿತರನ್ನು ಪಂಚಮರೆಂದು ಸಂಬೋಧಿಸಬೇಕೆಂದು ಮೈಸೂರು ಸಂಸ್ಥಾನದಲ್ಲಿ ಅಧಿಸೂಚನೆ ಜಾರಿಯಲ್ಲಿತ್ತು. ಸದಾ ದಲಿತರ ಹಿತಾಸಕ್ತಿಯನ್ನೇ ತಮ್ಮ ಭಾವಕೋಶದಲ್ಲಿ ತುಂಬಿಕೊಂಡ ಗೋಪಾಲಸ್ವಾಮಿಯವರನ್ನು “ಪಂಚಮರ ಗೋಪಾಲಸ್ವಾಮಿ” ಎಂದೇ ಸಂಬೋಧಿಸುವುದು ವಾಡಿಕೆಯಾಯಿತು.

ಹಳೆ ಮೈಸೂರಿನ ದಲಿತರ ಮೊದಲ ತಲೆಮಾರು ಶಿಕ್ಷಣ, ಸ್ಥೈರ್ಯ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಸಾಧಿಸಿದ್ದು ಇವರಿಂದಲೇ ಎಂದು ಹೇಳಬೇಕು.

ಚಾಮರಾಜಪೇಟೆಯ ನಾಲ್ಕನೆ ಮುಖ್ಯ ರಸ್ತೆಯಲ್ಲಿರುವ ‘ಎಲಿಫೆಂಟ್ ಲಾಡ್ಜ್’ ಎಂಬ ಹೆಸರಿನ ಮನೆಯನ್ನು ಈಗಲೂ ನೋಡಬಹುದು. ಒಂದು ಕಾಲಕ್ಕೆ ಈ ಮನೆಯಲ್ಲಿ ಸಹಸ್ರಾರು ಜನ ವಿದ್ಯಾಭ್ಯಾಸ ಪಡೆದಿದ್ದಾರೆ. ಇವರ ಅವಿರತ ಪ್ರಯತ್ನದಿಂದ, ಬೆಂಗಳೂರಿನ ಶ್ರೀರಾಮಪುರದಲ್ಲಿ ಇಂದು ಗೋಪಾಲಪುರ ( ಇವರ ನೆನಪಿನ ದ್ಯೋತಕವಾಗಿ) ಎಂದು ಕರೆಯಲಾಗುವ ಜಾಗದಲ್ಲಿ ೧೯೧೮ ರಲ್ಲಿ ಪಂಚಮರ ಹಾಸ್ಟೆಲ್ (ಈಗ “ಗೋಪಾಲಸ್ವಾಮಿ ಹಾಸ್ಟೆಲ್”) ತೆರೆಯಲಾಯಿತು. ಆ ಕಾಲದಲ್ಲೇ, ಹಾಸ್ಟೆಲ್ ಶುರುವಾದ ಮೊದಲ ವರ್ಷವೇ ಸುಮಾರು ೧೮೬ ದಲಿತ ವಿದ್ಯಾರ್ಥಿಗಳನ್ನ ಇವರು ಈ ಹಾಸ್ಟೆಲ್ ಗೆ ಸೇರಿಸಿದ್ದರು.

ಸೈಕಲ್ ಮೂಲಕ ಊರು ಹಳ್ಳಿ, ಕೇರಿಗಳನ್ನು ತಿರುಗುತ್ತಿದ್ದ ಗೋಪಾಲಸ್ವಾಮಿಗಳಿಗೆ ರೈಲು ಗಾಡಿ ಯಲ್ಲಿ ಸೈಕಲ್ ಕೊಂಡೊಯ್ಯಲು ಅರಸರು ಅವರಿಗೆ ವಿಶೇಷ ಅನುಮತಿ ನೀಡಿದ್ದರು. ಅನೇಕ ಬಾರಿ ಪ್ರೀತಿ ವಿಶ್ವಾಸ ಗೆದ್ದು, ಕೆಲವು ಬಾರಿ ಬಲವಂತದಿಂದ ವರ್ಷವೂ ನೂರಾರು ದಲಿತರ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುತ್ತಿದ್ದ ಗೋಪಾಲಸ್ವಾಮಿ, ಹಳೆ ಮೈಸೂರು ಭಾಗದ ಪ್ರತಿ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳನ್ನು ಗುರುತಿಸಿ, ಬೆಂಗಳೂರಿಗೆ ಬರುವುದಾದರೆ ಎಲ್ಲಾ ಖರ್ಚು ಭರಿಸಿ ಹಾಸ್ಟೆಲ್ ವ್ಯವಸ್ಥೆ ಮಾಡುವುದಾಗಿ ಪ್ರತೀ ವರ್ಷವೂ ಸ್ವತಃ ತಾವೇ ಪತ್ರ ಬರೆಯುತ್ತಿದ್ದರು.

ಇವರ ಶಿಷ್ಯರಾದವರಲ್ಲಿ ಪ್ರಮುಖರು: ಕೊರಟಗೆರೆ ಭೀಮಯ್ಯ (ಕರ್ನಾಟಕ ಉಚ್ಚ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶ), ಶಿಕ್ಷಣ ಭೀಷ್ಮ ಎನಿಸಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಎಚ್. ಎಂ. ಗಂಗಾಧರಯ್ಯ (ಹಾಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರರ ತಂದೆ), ಕರ್ನಾಟಕದ ಮೊದಲgopalaswami-iyer-elephant-lodge ದಲಿತ ಐ. ಎ. ಎಸ್. ಅಧಿಕಾರಿ ಭರಣಯ್ಯ, ಮಾಜಿ ಕೇಂದ್ರ ಮಂತ್ರಿ ಮತ್ತು ರಾಜ್ಯಪಾಲರಾದ ಬಿ. ರಾಚಯ್ಯ, ಡಾ. ಜಿ. ಗೋಪಾಲ್ (ಕರ್ನಾಟಕದ ಮೊದಲ ಶಿಶು ತಜ್ಞ ಮತ್ತು ವೈದ್ಯಾಧಿಕಾರಿ) ದಲಿತ ಜನಾಂಗದ ಮೊದಲ ಮಂತ್ರಿ ಚನ್ನಿಗರಾಮಯ್ಯ, ಖ್ಯಾತ ದಲಿತ ಕವಿ ಡಾ.ಸಿದ್ಧಲಿಂಗಯ್ಯ ಮೊದಲಾದವರು.

ಗೋಪಾಲಸ್ವಾಮಿಯವರಿಗೆ ಮಕ್ಕಳಿರಲಿಲ್ಲ. ಆದರೆ ಅವರ ಮಕ್ಕಳ ಪ್ರೀತಿ ಅಪೂರ್ವವಾದ್ದು. ೧೯೩೨ರ ಕಾಲಮಾನ. ಗಾಂಧೀಜಿ ಬೆಂಗಳೂರಿಗೆ ಬಂದಿದ್ದರು. ಎಚ್. ಎಂ. ಗಂಗಾಧರಯ್ಯನವರಿಗೆ ಸುಮಾರು ಹದಿನಾಲ್ಕು ಹದಿನೈದು ವರ್ಷವಿರಬೇಕು. ಯಾವ ಪುಸ್ತಕ, ತರಬೇತಿಯಿಲ್ಲದೆ ಗಾಂಧೀಜಿಯ ತೈಲವರ್ಣವೊಂದನ್ನು ಅತಿ ಸುಂದರವಾಗಿ ಬಿಡಿಸಿದರು. ಇದನ್ನು ನೋಡಿದ ಗೋಪಾಲಸ್ವಾಮಿಗಳು ಹುಡುಗನನ್ನು ಸೀದಾ ಗಾಂಧೀಜಿ ಬಳಿ ಕರೆದುಕೊಂಡು ಹೋಗಿಯೇ ಬಿಟ್ಟರು. ಅಪಾರ ಜನಸಂದಣಿಯಿದ್ದ ಕಾರಣ ಕಾಂಗ್ರೆಸ್ ನ ಪ್ರಮುಖ ನಾಯಕರಿಗೂ ಗಾಂಧೀಜಿಯನ್ನು ಭೇಟಿ ಯಾಗುವುದು ಅಷ್ಟು ಸುಲಭವಿರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ, ಗೋಪಾಲಸ್ವಾಮಿಗಳು ತಮ್ಮ ಶಿಷ್ಯನನ್ನು ಗಾಂಧೀಜಿಗೆ ಭೇಟಿ ಮಾಡಿಸಿದ್ದೇ ಅಲ್ಲದೇ ಮನಸ್ಸು ತುಂಬಿ ಪರಿಚಯಿಸಿದರು. ತುಂಬಾ ಸಂತಸಗೊಂಡ ಗಾಂಧೀಜಿ, ತರುಣ ಕಲಾವಿದನ ಬೆನ್ನು ಚಪ್ಪರಿಸಿ, ತೈಲಚಿತ್ರದ ಮೇಲೆ ಸಹಿ ಕೂಡ ಹಾಕಿ ಕೊಟ್ಟರು!

ಸಹಸ್ರಾರು ದಲಿತ ಕುಟುಂಬಗಳ ದೀಪ ಗೋಪಾಲಸ್ವಾಮಿ, ದೇಶ ಕಂಡ ಅಪ್ರತಿಮ ಸಾಧಕ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ತಮ್ಮ 200px-MKGandhi[1]ಇಡೀ ಜೀವನವನ್ನು ದಲಿತರಿಗೊಸ್ಕರ ಮುಡುಪಾಗಿಟ್ಟು ಆದರ್ಶ ಪ್ರಾಯ ಜೀವನ ನಡೆಸಿದ್ದವರು. ತಮ್ಮ ಇಳಿ ವಯಸ್ಸಿನಲ್ಲೂ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದ ಧೀರ!. ದಲಿತ ವಿಮೋಚನೆ, ಸಮಾಜ ಸೇವೆ, ನೈಜ ದೇಶಪ್ರೇಮದ ಮಾದರಿ ಗೋಪಾಲಸ್ವಾಮಿಯವರ ಬದುಕು.

ಪ್ರಭಾವಿ ರಾಜಕೀಯ ನೇತಾರರು, ಅಧಿಕಾರಿಗಳು, ವೈದ್ಯರು, ವಕೀಲರು ಸೇರಿದಂತೆ ಇವರ ಅಸಂಖ್ಯ ಶಿಷ್ಯಗಣ ಪ್ರಪಂಚದೆಲ್ಲೆಡೆ ಹಬ್ಬಿದೆ. ಆದರೆ ಅದೃಷ್ಟವಶಾತ್ ಇಂದೂ ಮೂಲ ಸ್ವರೂಪದಲ್ಲೇ ಇರುವ ಇವರ ಮನೆಯನ್ನೇ ಆಗಲಿ ಅಥವಾ ಇನ್ನೊಂದು ಸೂಕ್ತ ಕಡೆಯಲ್ಲಾಗಲಿ, ಇವರ ಪ್ರತಿಮೆ, ಸ್ಮಾರಕ ಮಾಡುವ ಯತ್ನ ಮಾತ್ರ ನಡೆದಂತಿಲ್ಲ.

ರಸ್ತೆ ಸಾರಿಗೆ ಸುರಕ್ಷಾ ಕಾನೂನು ಎಂಬ ಗರುಡ ಪುರಾಣದ ಕ್ರಿಮಿ ಭೋಜನ


– ಶ್ರೀಧರ್ ಪ್ರಭು


 

Come and see the blood in the streets.
Come and see
The blood in the streets.
Come and see the blood
In the streets.

– Pablo Neruda

ಕೃತಿ ಚೌರ್ಯ ಮಾಡಿದರೆ ಏನು ಶಿಕ್ಷೆ?
ಜೈಲು, ದಂಡ, ಇಲ್ಲ ಕನಿಷ್ಠ ಛೀಮಾರಿ? ಇಲ್ಲ. ಇದೆಲ್ಲ ಏನೂ ಇಲ್ಲ. ಕೇವಲ ‘ಕ್ರಿಮಿ ಭೋಜನ’ ಶಿಕ್ಷೆ.

ಹೌದು. ಗರುಡ ಪುರಾಣದ ಪ್ರಕಾರ ಇನ್ನೊಬ್ಬರಿಗೆ ಸೇರಿದ್ದನ್ನು ಎಗರಿಸಿದರೆ ಶಿಕ್ಷೆ ಮೈಮೇಲೆಲ್ಲ ಕ್ರಿಮಿಗಳನ್ನು ಹರಿಬಿಡುವುದು. ಇದೇ “ಕ್ರಿಮಿ ಭೋಜನ”.

‘ಕೆಂಟುಕಿ ಟ್ರಾಫಿಕ್ ಅಧಿನಿಯಮ’ ಎಂಬ ಅಮೇರಿಕೆಯ ಕಾನೂನನ್ನು, ಇಂಗ್ಲೆಂಡ್‌ನ ‘ರಸ್ತೆ ಸಂಚಾರ ಕಾನೂನಿನ’ ಜತೆ ಬೆರೆಸಿ traffic-cops-westಕಲಬೆರೆಕೆ ಗಿರಮಿಟ್ಟು ಮಾಡಿದರೆ ತಯಾರಾಗುವ ಕಾನೂನು ಕೇಂದ್ರ ಸರಕಾರ ತರಲು ಹೊರಟಿರುವ “ರಸ್ತೆ ಸಾರಿಗೆ ಮತ್ತು ಸುರಕ್ಷಾ ಕಾಯಿದೆ, ೨೦೧೪”. ಅಲ್ಲಿ ಡಾಲರ್-ಪೌಂಡ್ ಲೆಕ್ಕದಲ್ಲಿ ವಿಧಿಸುವ ದಂಡವನ್ನು ರೂಪಾಯಿ ಲೆಕ್ಕದಲ್ಲಿ ಪರಿವರ್ತಿಸಿ, ಚಿಲ್ಲರೆ ಉಲ್ಲಂಘನೆಗಳಿಗೆ ವರ್ಷಾನುಗಟ್ಟಲೆ ಜೈಲು ಶಿಕ್ಷೆ ಮಾಡಲು ಹೊರಟವರಿಗೆ ಏನು ಶಿಕ್ಷೆ? ಇದನ್ನು ಓದಿದ ನಂತರದಲ್ಲಿ ನೀವೇ ತೀರ್ಮಾನಿಸಿ.

ಹೌದು. ಈ ಕಾಯಿದೆ ಜಾರಿಗೊಂಡರೆ, ಕಡಿಮೆ ಎಂದರೆ, ಒಂದು ಸಾವಿರದಿಂದ ಶುರುವಾಗಿ ಐದು ಲಕ್ಷದವರೆಗೂ ದಂಡ, ಇಲ್ಲ ಏಳು ವರ್ಷ ಜೈಲು, ಇಲ್ಲ ಎರಡೂ ವಿಧಿಸಬಹುದು.

ಇದು ಬಿಡಿ, ರಸ್ತೆಯಲ್ಲಿ ಬದಿಯಲ್ಲಿನ ಚಿಕ್ಕ ಪುಟ್ಟ ಬೀದಿ ವ್ಯಾಪಾರ ಮಾಡುವವರನ್ನೂ, ರಸ್ತೆ ಸಂಚಾರಕ್ಕೆ ಅಡ್ಡಿ ಮಡಿದ ಘನಘೋರ ಅಪರಾಧಕ್ಕಾಗಿ ಗಂಟೆಗೆ ಒಂದು ಸಾವಿರದ ದಂಡ ವಿಧಿಸಬಹುದು. ಇನ್ನು ಮದುವೆ ದಿಬ್ಬಣದವರಿಗೂ ಮದುವೆ ಗ್ಯಾರಂಟೀ ಏನೋ. ಸತ್ಯಾಗ್ರಹ, ಮೆರವಣಿಗೆ, ರಸ್ತೆ ತಡೆ, ಧರಣ, ಚಳುವಳಿ ಇತ್ಯಾದಿ ಮರೆತು ಬಿಡಿ. ಯಾಕೆಂದರೆ ಗಂಟೆಗೆ ಒಂದು ಸಾವಿರ ರೂಪಾಯಿ ಲೆಕ್ಕದಲ್ಲಿ ದಂಡ ವಸೂಲಿ ಮಾಡುತ್ತಾರೆ. ಕಡೆಗೆ ಸೈಕಲ್ ಓಡಿಸುವ ಬಡಪಾಯಿಗಳನ್ನೂ ಬಿಡದ ಕಾನೂನು ಇದು. ಕಂಕುಳಲ್ಲಿ ಕೂಡುವ ಕೂಸಿಗೂ ಹೆಲ್ಮೆಟ್ ಕಡ್ಡಾಯ, ವಾಹನ ಮತ್ತು ಸುರಕ್ಷತೆಯ ಖಾಸಗೀಕರಣ, ಕಡೆಗೆ ರಸ್ತೆಯ ನಟ್ಟ ನಡುವೆ ಸಂಚಾರಿ ಪಥಗಣನ್ನು ನಿರ್ಮಿಸಿ (BRTS) traffic-violation-2ಗುಜರಾತ್ ಮಾದರಿಯಲ್ಲಿ ರಸ್ತೆಗಳನ್ನೇ ಖಾಸಗೀಕರಣಗೊಳಿಸುವವುದರ ದಟ್ಟ ಘಾಟು ಹೊಂದಿದೆ ಈ ಕಾನೂನು. ಸೈಕಲ್ ಸವಾರರಿಂದ ಹಿಡಿದು, ದ್ವಿಚಕ್ರ ವಾಹನ, ಅಟೋ, ಕಾರು, ಸೇರಿಕೊಂಡು ಸರಕು ಸಾಗಣೆವಾಹನಗಳೆಲ್ಲವೂ ಈ ಕಾನೂನಿನ ಬೋನಿಗೆ ಸೇರ್ಪಡೆ.

ಸಹಾಯಕಾರಿ ಅಂಶಗಳು ಏನೂ ಇಲ್ಲವೇ? ಇವೆ. ಜೀವನದಲ್ಲಿ ಒಮ್ಮೆ ಕೂಡ ಜೈಲು ನೋಡಿಯೇ ಇಲ್ಲ ಎಂದು ವ್ಯಥೆ ಪಡುವವರಿಗೆ ಇದು ತುಂಬಾ ಸಹಾಯಕಾರಿ.

ಈ ಕಾನೂನು ಮೂಲದಲ್ಲೇ ತಪ್ಪು ಮತ್ತು ಅಸಂವಿಧಾನಾತ್ಮಕ. ಸಂವಿಧಾನದ ಅಡಿ ಕೇಂದ್ರ ಸರಕಾರಕ್ಕೆ “ಮೊಟರು ಚಾಲಿತ ವಾಹನ” ಗಳ ಬಗ್ಗೆ ಕಾನೂನು ಮಾಡಲು ಅಧಿಕಾರ ಇದೆಯೆ ವಿನಃ ರಸ್ತೆ ಮತ್ತು ಸಾರಿಗೆ ವಿಷಯದಲ್ಲಿ ಅಲ್ಲ. ಇನ್ನು ಪೋಲೀಸರ ಅಧಿಕಾರ ವ್ಯಾಪ್ತಿ, ಪ್ರಾದೇಶಿಕ ಸಾರಿಗೆ, ರಾಜ್ಯ ಹೆದ್ದಾರಿಗಳು, ಪುರಸಭೆ, ನಗರಪಾಲಿಕೆ, ಪಂಚಾಯತಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ರಸ್ತೆ ಮತ್ತು ಸಾರಿಗೆ ಮತ್ತದರ ನಿರ್ವಹಣೆ ಸಂಪೂರ್ಣ ರಾಜ್ಯ ಸರಕಾರಗಳಿಗೆ ಸೇರಿದ್ದು.

ಇದು ಇನ್ನೂ ಜಾರಿಯಾಗಿಲ್ಲ. ಜಾರಿಯಾದರೆ ಇದರ ಔಚಿತ್ಯ, ಸಂವಿಧಾನಾತ್ಮಕತೆ ಇತ್ಯಾದಿ ಪ್ರಶ್ನೆ ಮಾಡಲು ಸಾಧ್ಯತೆಗಳಿವೆ. ಇನ್ನು ಅನೇಕ ರಾಜ್ಯಗಳು ಕೂಡ ಈ ಕಾನೂನನ್ನು ವಿರೋಧಿಸಿವೆ. ಸಂವಿಧಾನದತ್ತವಾಗಿ ತಮಗೆ ಇರುವ ಅಧಿಕಾರವನ್ನು ಕೇಂದ್ರ ಕಸಿಯುತ್ತಿದೆ ಎಂದಿವೆ. ಆ ಕಥೆ, ಈ ಕಥೆ, traffic-violation-1ಸಂವಿಧಾನಾತ್ಮಕತೆ ಎಲ್ಲವೂ ಕಾನೂನು ವಿಶಾರದರಿಗೆ ಬಿಡೋಣ. ಕಾನೂನು ಕಟ್ಟಳೆಗಳಿಗೆಲ್ಲ ಒಂದು ಸಾಮಾಜಿಕ ಆಯಾಮ ಇರುತ್ತದೆ. ಅದನ್ನು ಗಮನಿಸೋಣ.

ಒಂದು ದೇಶದ ಸಾಮಾಜಿಕ ಮತ್ತು ಅರ್ಥಿಕ ಪರಿಸ್ಹಿತಿಗೆ ತಕ್ಕನಾಗಿಯೇ ಒಂದು ಕಾನೂನು ಇರಬೇಕಾಗುತ್ತದೆ. ಇಂಗ್ಲೆಂಡ್, ಅಮೆರಿಕೆಗಳಲ್ಲಿ ಶತಮಾನಗಳ ಹಿಂದೆ ಅತ್ಯಂತ ಸುವ್ಯವಸ್ಥಿತ, ಅಗಲೀಕೃತ ರಸ್ತೆಗಳ ಜಾಲ ಹಬ್ಬಿದೆ. ಈ ದನ, ಎಮ್ಮೆಗಳು ಅಡ್ಡ ಬರುವ ಪ್ರಸಂಗ, ಹಳ್ಳ-ದಿಣ್ಣೆ ಬಂದರೆ ಕುಣಿಕುಣಿದು ಓಡಿಸುವ ಸೌಭಾಗ್ಯವೆಲ್ಲ ಗೊತ್ತೇ ಇಲ್ಲ. ಅಮೇರಿಕೆ, ಕೆನಡ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಹಲವು ಬಾರಿ ನೂರಾರು ಮೈಲಿ ಸಂಚರಿಸಿದರೂ ಒಂದು ನರಪಿಳ್ಳೆ ಗೋಚರಿಸುವುದಿಲ್ಲ. ಇನ್ನು ಅವರಲ್ಲಿನ ಸಾಮಾನ್ಯ ಪೌರ ಕಾರ್ಮಿಕ ಗಳಿಸುವಷ್ಟನ್ನು ದುಡ್ಡನ್ನು ನಮ್ಮಲ್ಲಿನ ಒಬ್ಬ ಸಣ್ಣ ಉದ್ದಿಮೆದಾರ ಕೂಡ ಗಳಿಸಲಾರ. ಅಲ್ಲಿರುವ ಸಾಮಾಜಿಕ ಸುರಕ್ಷತೆ, ಅರೋಗ್ಯ ಮತ್ತು ವಸತಿಯಂಥಹ ಪ್ರಾಥಮಿಕ ಅಗತ್ಯಗಳು ನಮ್ಮಲ್ಲಿ ಪೂರ್ತಿಯಾಗಿವೆಯೇ? ದಿನಕ್ಕೆ ಹೆಚ್ಚೆಂದರೆ ೪೦೦-೫೦೦ ಗಳಿಸುವ ಒಬ್ಬ ಆಟೋ ಚಾಲಕ ಯಾವ ಬ್ಯಾಂಕ್ ದರೋಡೆ ಮಾಡಿ ಈ ಸಾವಿರ-ಲಕ್ಷದ ಲೆಕ್ಕದಲ್ಲಿ ದಂಡ ಕಟ್ಟಬೇಕು? ವಿದೇಶದಿಂದ ಕಾನೂನು ಮಾತ್ರ ಕಾಪಿ ಹೊಡೆದು ಬಿಟ್ಟರೆ ಸಾಕೆ?

ಹಸಿವು, ಬಡತನವಿದ್ದ ಕಡೆ ಈ ಸರಕಾರ ಸಾವಿರ-ಲಕ್ಷದ ಲೆಕ್ಕದಲ್ಲಿ ದಂಡ ವಸೂಲಿಗೆ ಇಳಿಯಿತು ಎಂದು ಕೊಳ್ಳಿ, ಈ ಚಿಲ್ಲರೆ ‘ಉಲ್ಲಂಘನೆಗೆ’ ಸಾವಿರಗಟ್ಟಲೆ ದಂಡ ಹೊಂದಿಸುವ ಸಲುವಾಗಿ ಬಡವ ಗಂಭೀರ ಅಪರಾಧ ಮಾಡಲು ಇಳಿಯುತ್ತಾನೆ. ಸರಕಾರೀ ಅಂಕಿ ಸಂಖ್ಯೆ ಗಳ ಪ್ರಕಾರವೇ, ಭಾರತೀಯನೊಬ್ಬನ ಸರಾಸರಿ ಮಾಸಿಕ ಐದುವರೆ ಸಾವಿರ. ಎಂದಾದ ಮೇಲೆ ಲಕ್ಷಗಟ್ಟಲೆ ದಂಡ ಕಟ್ಟುವುದು ಹೇಗೆ? ಇಪ್ಪತ್ತು ಸಾವಿರಕ್ಕೂ ಜಾಸ್ತಿ ಇದು ಸರಕಾರಕ್ಕೆ ಗೊತ್ತಿಲ್ಲವೇ?

‘ಕೆಟ್ಟು’ ಪಟ್ಟಣ ಸೇರುವವರಲ್ಲಿ ಮೊಟ್ಟ ಮೊದಲು ತಲೆಗೆ ತೋಚುವುದೇ ಈ ಡ್ರೈವರ್ ಉದ್ಯೋಗ. ದಿನಗೂಲಿ ಲೆಕ್ಕದಲ್ಲಿ ಆಟೋ, ಕಾರು traffic-violation-3ಇತ್ಯಾದಿ ಓಡಿಸಿ ಹೊಟ್ಟೆ ಹೊರೆದು ಕೊಳ್ಳುವ ಗುಳೆ ಬಂದ ಬಡ ವರ್ಗ ಈ ಮಟ್ಟದ ದಂಡ ಕಟ್ಟಲು ಸಾಧ್ಯವೇ? ಬಡವರಷ್ಟೇ ಅಲ್ಲ, ಮೇಲು ಮಧ್ಯಮ, ಇನ್ನು ಶ್ರೀಮಂತ ವರ್ಗವೇ ತತ್ತರಿಸಿ ಹೋದೀತು. ಸರಕಾರ ಪಿಳ್ಳೆ ನೆಪ ಇಟ್ಟುಕೊಂಡು ಜೈಲಿಗೆ ಅಟ್ಟುವ ಸರ್ವಾಧಿಕಾರಿಯಂತಾದರೆ, ಸಮಾಜದ ಸ್ವಾಸ್ಥ್ಯ ಖಂಡಿತ ಕೆಟ್ಟು ಹೋಗುವುದು. ಅಲ್ಫೆರಿ ಎಂಬ ಚಿಂತಕ ಹೇಳುತ್ತಾನೆ ‘ಒಂದು ಅಪರಾಧವನ್ನು ಸೃಷ್ಟಿಸುವುದು ಸಮಾಜ – ಅಪರಾಧಿ ಅದನ್ನು ಜಾರಿ ಮಾತ್ರ ಮಾಡುತ್ತಾನೆ.’

ಮೊದಲು ಟೋಲ್ ಹೆಸರಿನಲ್ಲಿ ರಸ್ತೆಗಳನ್ನು ಖಾಸಗೀಕರಣಗೊಳಿಸಿ, ಜನರ ಮೂಲಭೂತ ಹಕ್ಕು ಕಸಿಯಲಾಯಿತು. ಸೀತಾರಾಂ ಯೆಚೂರಿ ನೇತೃತ್ವದ ಸಂಸತ್ ಸಮಿತಿ ಹೇಳುವ ಹಾಗೆ ಟೋಲ್ ಮಾಡಿರುವುದಕ್ಕೆ ಸಮರ್ಥನೆ ಪೆಟ್ರೋಲ್-ಡೀಸೆಲ್ ಉಳಿತಾಯ ಎಂದಾದರೆ, ಟೋಲ್ ದ್ವಾರ ತೆರೆಯಲು ಕಾಯುವ ವಾಹನಗಳು ಸುಡುವ ತೈಲ ಉಳಿತಾಯದ ಮೂರರಷ್ಟು. ಟೋಲ್ ಎಂಬ ಅಸಮರ್ಥನೀಯ ಅವೈಜ್ಞಾನಿಕ ಪದ್ಧತಿ ಬಂದದ್ದು ದೇಶದ ಬೆರಳೆಣಿಕೆಯ ಜನರನ್ನು ಖುಷಿ ಪಡಿಸಲು. ಹಾಗಾಗಿ ಟೋಲ್ ಇಲ್ಲವೇ ಜೈಲು ಎಂಬಂತಾಗಿದೆ. ಈಗ ವಾಹನ ರಸ್ತೆಗಿಳಿದರೆ ಜೈಲು ಖಾತ್ರಿ.

ಇನ್ನು ಈ ಕಾನೂನಿನ ಸಮರ್ಥಕರು ಹೇಳುವದು ನೋಡಿ: ಹತ್ತು ಲಕ್ಷ ಉದ್ಯೋಗ ಕಲ್ಪಿಸಿ, ಎರಡು ಲಕ್ಷ ಜನರ ಜೀವನ ಉಳಿಸಬಹುದಂತೆ. ಇದ್ದ ಬಿದ್ದವರನ್ನೆಲ್ಲ ಜೈಲಿಗೆ ಹಾಕಿದರೆ ಹಸಿವು ನಿರುದ್ಯೋಗ ಸಮಸ್ಯೆ ಬಗೆಹರಿಯುದೇ ಇದ್ದೀತೆ? ಇನ್ನು ಉದ್ಯೋಗ ಸೃಷ್ಟಿಯಾಗುವುದು ಯಾರಿಗೆ ಎಂದು ಬೇರೆ ವಿವರಿಸಿ ಹೇಳಬೇಕಿಲ್ಲ. traffic-cops-west-2ಜಾಗತಿಕ ಅರ್ಥಿಕ ಬಿಕ್ಕಟಿನ ಭಾಗವಾಗಿ ಕುಸಿತದ ೨೦೦೮-೧೦ ಅವಧಿಯಲ್ಲಿ ಅಮೇರಿಕಾದ ವಾಹನ ಉದ್ಯಮ ನೆಲ ಕಚ್ಚಿತು. ವಿದೇಶಿ ವಾಹನ ತಯಾರಿಕಾ ಕಂಪನಿಗಳ ಉದ್ಧಾರಕ್ಕಾಗಿ ಮಾಡಲಾದ ಅನೇಕ ‘ಕಲ್ಯಾಣ ಕ್ರಮ’ಗಳ ಪೈಕಿ ಈ ಕಾನೂನು ಕೂಡ ಒಂದು. ನಿಜಕ್ಕೂ ನೋಡಿದರೆ, ವಾಹನ ಮಾರಾಟವಾದ ಮೇಲೆಯೇ ವಾಹನ ತಯಾರಕರಿಗೆ ಬಿಡಿ ಭಾಗ, ಸರ್ವೀಸ್ ಎಂದೆಲ್ಲ ಹೆಚ್ಚು ಲಾಭ. ಈ ಲಾಭವನ್ನು ತಹಬಂದಿಗೆ ತಂದು ಕೈಗೆಟಕುವ ಬೆಲೆಯಲ್ಲಿ ಬಿಡಿ ಭಾಗಗಳು ದೊರೆಯುವ ಜವಾಬ್ದಾರಿ ಹೊರುವ ಬದಲು, ಸರಕಾರ ವಾಹನ ಚಾಲಕರನ್ನು ಶೋಷಿಸಲು ಮುಕ್ತ ಅವಕಾಶ ಮಾಡಿ ಕೊಡುತ್ತಿದೆ.

ವಾಹನಗಳ ಪರವಾನಿಗೆ ಪರ್ಮಿಟ್ ದರ ನಿರ್ಧರಣೆ ಹಕ್ಕು ಕೂಡ ಕೇಂದ್ರ ಸರಕಾರವೇ ಅಪಹರಿಸಿ ಬಿಟ್ಟಿದೆ. ಆಯಾ ರಾಜ್ಯದ ಅರ್ಥಿಕ ಸಾಮಾಜಿಕ ಸತ್ಯಗಳನ್ನು ಆಧರಿಸಿ ತೆಗೆದುಕೊಳ್ಳಬೇಕಾದ ಕಡೆ ದೇಶದಾದ್ಯಂತ ಒಂದೇ ದರ ನಿಗದಿ ಮಾಡಿದರೆ ತಪ್ಪಲ್ಲವೆ? ಇದೆಲ್ಲಕ್ಕಿಂತ ಮುಖ್ಯ, ಸಂವಿಧಾನದಲ್ಲಿ ಕೇಂದ್ರಕ್ಕೆ ಈ ಅಧಿಕಾರವೇ ಇಲ್ಲ. ಹೀಗಾಗಿ ಅನೇಕ ರಾಜ್ಯಗಳು ಅಪಸ್ವರ ಎತ್ತಿವೆ.

ರಾಜಕಾರಣಿ-ಖಾಸಗಿ ಗುತ್ತಿಗೆದಾರ-ಅಧಿಕಾರಿಗಳ ಒಳಗಿನ ನಂಟು-ಗಂಟುಗಳ ಪರಿಣಾಮ ಮೃತ್ಯು ಕೂಪದಂತಹ ರಸ್ತೆಗಳು ಹುಟ್ಟುತ್ತವೆ. ಈ ಕಡು ಭ್ರಷ್ಟತೆ, ಅವೈಜ್ಯಾನಿಕ ರಸ್ತೆ ಕಾಮಗಾರಿ ನಿರ್ಬಂಧ, ರಸ್ತೆ ನಿರ್ಮಾಣದಿಂದಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ, ಅಪಘಾತ ತಡೆ, ಸಾರ್ವತ್ರಿಕ ಅಪಘಾತ ವಿಮೆ ಇತ್ಯಾದಿ ಸರಕಾರದ ಆದ್ಯತೆಗಳಾಗಬೇಕು. ಇದು ಬಿಟ್ಟು, ಯಾವುದೋ ವಿದೇಶಿ ಕಾನೂನುಗಳ ಗಿರ್ಮಿಟ್ ಬೆರೆಸಿ, ಡಾಲರ್-ಪೌಂಡ್ ಲೆಕ್ಕದ ದಂಡ ವಿಧಿಸಿ, ಜತೆಗೆ ಸಾಮಾನ್ಯರನ್ನು ಜೈಲಿಗೆ ಹಾಕುವ ಪೋಲಿಸ್ ರಾಜ್ಯದ ಕಡೆ ದೂಡುವ ಹುನ್ನಾರ ನಡೆದಿದೆ.

ದೇಶದ ರಸ್ತೆಗಳ ಉದ್ದಕ್ಕೂ ರಕ್ತ ಚೆಲ್ಲಿದೆ. ಈ ರಕ್ತವನ್ನು ತೊಳೆಯಲು ಕೇಂದ್ರ ಸರಕಾರ ಇನ್ನಷ್ಟು ರಕ್ತ ಚೆಲ್ಲಲು ಹೊರಟಿದೆ.

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಜಯ ಜಯ ಜಯ ಜಯ ಹೇ…ಶ್ರಮೇವ ಜಯತೆ : ನೊಂದ ಪ್ರಧಾನಿ


– ಶ್ರೀಧರ್ ಪ್ರಭು


 

ಈ ದೇಶದ ಮಣ್ಣು ಗೋಪಿ ಚಂದನ; ಪ್ರತೀ ಗ್ರಾಮವೂ ತಪೋ ಭೂಮಿ; ಪ್ರತಿ ಬಾಲೆ ದೇವಿಯ ಪ್ರತಿಮೆ; ಪ್ರತೀ ಬಾಲಕನೂ ಸಾಕ್ಷಾತ್ ಶ್ರೀರಾಮ.

ಬೆಳಿಗ್ಗೆ ಏಳುವಾಗ ಭೂಮಿ ತಾಯಿಯ ಮೇಲೆ ಪಾದ ಸ್ಪರ್ಶ ಮಾಡುವ ಮುಂಚೆ ಕ್ಷಮಿಸಿ ಬಿಡು ತಾಯಿ ಎಂಬ ಪ್ರಾರ್ಥನೆ ಅತ್ಯಗತ್ಯ. ಹಾಗೆಯೇ, ಮಂಚದ ಮೇಲೆ ಮಲಗುವವರು ಮಾಡಿದ ಶಾಸ್ತ್ರದಲ್ಲಿ ಅಪ್ಪಣೆಯಾಗಿದೆ ಏನೆಂದರೆ ‘ಏನೊಂದೂ ಸ್ಪರ್ಶವಾಗದೆ ಅಡ್ಡಡ್ಡ ನುಂಗಿಬಿಟ್ಟರೆ ಪಾಪವಿಲ್ಲ’. ಕರುವನ್ನು ಬೇರೆ ಕಟ್ಟಿ ಹಾಕಿ ಹಿಂಡಿ ಹಿಪ್ಪೆಯಾಗುವಷ್ಟು ಹಾಲು ಕರೆದು, ತುಪ್ಪ ಬೆಣ್ಣೆ ತೆಗೆದು ಚಪ್ಪರಿಸಿ ‘ಗೋದಾನ’ ವೆರೆದು ಧನ್ಯರಾದ ಭೂದೇವರಿಗೆ bharath-maataಗೋಮಾತೆಯಲ್ಲಿ ಮೂವತ್ತ ಮೂರು ಕೋಟಿ ದೇವರ ನಿತ್ಯ ದರ್ಶನ. ವರ ದಕ್ಷಿಣೆ ಇಲ್ಲದೆ ಮದುವೆಯೇ ಧರ್ಮ ಸಮ್ಮತ ಅಲ್ಲ; ಹಣ ಸಂದಾಯವಾಗದಿದ್ದರೆ ಒಪ್ಪಂದ ಕಾನೂನು ಬದ್ಧ ಆಗುವುದೇ? ಹಾಗಾಗಿ ಹಣ ಪಡೆದು, ಹುರಿದು ಮುಕ್ಕಿ ಕಳೆ ಬರ ಸಿಗದಹಾಗೆ ಸುಟ್ಟು ಹಾಕಬೇಕಾದಾಕೆ – ಜಗನ್ಮಾತೆ. ದಲಿತರು ‘ಹರಿ’ ಜನ. ಇತ್ತೀಚಿನ ಹೊಸ ಸೇರ್ಪಡೆ – ‘ಶ್ರಮೇವ ಜಯತೆ’. ಶ್ರಮಿಕ ದೇವರಿಗೆ ಪೂಜೆ; ದೇವಸ್ಥಾನಗಳಲ್ಲಿ ನಿತ್ಯೋತ್ಸವ.

ಬೇರೆ ದೇಶಗಳೆಲ್ಲ ಈ ಗಿರಿ, ಆ ಗಿರಿ, ಕಡೆಗೆ ಗುಲಾಮಗಿರಿಯನ್ನು ಕಿತ್ತು ಬಿಸುಟುವಾಗ ನಾವು ಶ್ರಮವೇ ಇಲ್ಲದೆ ಕಿರುಬೆರಳಲ್ಲಿ ಗೋವರ್ಧನಗಿರಿ ಎತ್ತಿದ್ದೆವು. ನಾವು ಮಹತ್ತರವಾದ ಎಲ್ಲವನ್ನೂ ಸಾಧಿಸಿದ್ದು ಶ್ರಮದಿಂದಲ್ಲ ತಪೋ ಬಲದಿಂದ. ಹಾಗಾಗಿ ಬ್ರಹ್ಮ ಬಲವೇ ಬಲ. ಹಾಗೆಂದು ನಾವು ಮಲ ಹೊರುವ ಕೆಲಸಕ್ಕೂ ಪವಿತ್ರ ಸ್ಥಾನ ಕೊಟ್ಟಿದ್ದೇವೆ.

ಪುಣ್ಯ ಕಡಿಮೆ ಸಂಪಾದಿಸಿರುವ ದೇಶಗಳಲ್ಲಿ ಶ್ರಮದ ವಿಭಜನೆ (Division of Labour) ಸಾಧ್ಯವಾದರೆ ಪುಣ್ಯ ಭೂಮಿ ಭಾರತದಲ್ಲಿ ಶ್ರಮಿಕರ ವಿಭಜನೆ (Division of Labourers) ಸಾಧ್ಯವಾಗಿದೆ. ಹೀಗಾಗಿ ನಾವು ಇಂದಿಗಿಂತ ನೆನ್ನೆಯೇ ಅಭಿವೃದ್ಧಿ ಸಾಧಿಸಿದ್ದು ಜಾಸ್ತಿ.

ಕಾರಣಾಂತರಗಳಿಂದ, ಈ ಖೊಟ್ಟಿ ರಾಜಕೀಯ ಸ್ವಾತಂತ್ರ್ಯ ಬಂದ ಮೇಲೆ ಓಬೀರಾಯನ ಕಾಲದ ಭಾರತದ ಸಂವಿಧಾನ ಮತ್ತು ಕಾರ್ಮಿಕ ಕಾನೂನುಗಳು ನಮ್ಮ ಸಾಧನೆಯನ್ನು ಮೊಟಕು ಗೊಳಿಸಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಅದ್ದರಿಂದ ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ನೀತಿ ನಿರೂಪಣೆಯ ಮೂಲಕವೇ ಬದಲಾಯಿಸುವ ಸ್ತುತ್ಯರ್ಹ ಕೆಲಸಕ್ಕೆ ಕೈ ಹಾಕಿದೆ.

ಮೊದಲ ಹಂತದಲ್ಲಿ ಕಾರ್ಮಿಕ ಪರಿಶೀಲನಾಧಿಕಾರಿ (Inspector) ಗಳ ಅಧಿಕಾರ ಮೊಟಕು ಮಾಡಲಾಗಿದೆ. ಇನ್ನು ಮೇಲೆ ಅವರು ಮನುಷ್ಯನ ಮರ್ಕಟ ಮನಸ್ಸು ಹೇಳಿದ ಕಡೆ ಹೋಗದೇ ‘ಕಂಪ್ಯೂಟರ್’ ಹೇಳಿದ ಜಾಗಕ್ಕೆ ಮಾತ್ರ ಪರಿಶೀಲನೆ ಹೋಗಬೇಕು. ಕಾರ್ಮಿಕ ಪರಿಶೀಲನಾಧಿಕಾರಿಗಳು ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೋ ಅವಾಗ ಹೋಗುವ ಅವಾಂತರ ಇನ್ನು ಹಳೆಯ ಮಾತು.

ತಾವು ಚಿಕ್ಕಂದಿನಿಂದಲೂ ಕಾರ್ಮಿಕ ಅಧಿಕಾರಿಗಳು ಕಾರ್ಖಾನೆಯ ಮಾಲೀಕರಿಗೆ ಕೊಡುವ ಹಿಂಸೆಯ ಗಾಥೆಗಳನ್ನು ಕೇಳಿ ಮನ child-labourನೊಂದಿರುವುದಾಗಿ ಪ್ರಧಾನಿ ಮೋದಿ ತುಂಬಾ ಭಾವುಕರಾಗಿ ನುಡಿದರು. ಹೀಗಾಗಿ ಕಾರ್ಮಿಕ ಇಲಾಖೆಯಲ್ಲಿ Inspector ರಾಜ್ ಕೊನೆಗೊಳ್ಳಬೇಕು ಎಂದರು.

ಮೋದಿಯವರು ಹೆಚ್ಚು ನೊಂದು ಕೊಳ್ಳಬೇಕಿಲ್ಲ. ಈಗಾಗಲೇ ಕಾರ್ಮಿಕ ಇಲಾಖೆಯ ವ್ಯಾಪ್ತಿ ಸಾಕಷ್ಟು ಮೊಟಕು ಗೊಂಡಿದೆ. ಶೇಕಡಾ ನೂರರಷ್ಟು ರಫ್ತು ಆಧಾರಿತ ಉದ್ಯಮಗಳು, ವಿಶೇಷ ವಿತ್ತ ವಲಯಗಳು, ಐಟಿ-ಬಿಟಿ-ಕಾಲ್ ಸೆಂಟರ್ ಇನ್ನಿತರೆ ಕೆಲ ಮಹತ್ವದ ಉದ್ಯಮಗಳಿಗೆ ಕಾರ್ಮಿಕ ಇಲಾಖೆಯವರು ಕಾಲಿಡುವುದು ಇರಲಿ, ಕಾರ್ಮಿಕ ಕಾನೂನುಗಳೇ ಕಾಲಿಡಲು ಸಾಧ್ಯವಿಲ್ಲ. ಕಾರ್ಮಿಕ ಪರಿಶೀಲನ ಒಡಂಬಡಿಕೆ, 1947 (Labour Inspection Convention, 1947) ಪ್ರಕಾರ, ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ, ಕಾರ್ಮಿಕ ಇಲಾಖೆಯ ಅಧಿಕಾರ ಮೊಟಕು ಗೊಳಿಸುವಂತಿಲ್ಲ. ಇದು ಅಂತರರಾಷ್ಟ್ರೀಯ ಕಾನೂನು. ಭಾರತ ಕೂಡ ಇದಕ್ಕೆ ಸಹಿ ಹಾಕಿದೆ. ಆದರೆ, ಈ ಬಹುರಾಷ್ಟ್ರೀಯ ಕಾನೂನು ದೇಶದ ಅಭಿವೃದ್ಧಿಗೆ ಮಾರಕವಾದ್ದರಿಂದ, ಗಾಳಿಗೆ ತೋರಲು ಮಾತ್ರ ಯೋಗ್ಯ.

ಈ ಅಂತರರಾಷ್ಟ್ರೀಯ ಕಾನೂನು ಹೋಗಲಿ ನಮ್ಮದೇ ಸಂವಿಧಾನದ ಅಡಿ ನಮ್ಮದೇ ಸಂಸತ್ತು ಪಾಸು ಮಾಡಿದ ಕಾರ್ಖಾನೆಗಳ ಕಾಯಿದೆ (Factories Act ), ಕನಿಷ್ಠ ವೇತನ ಕಾಯಿದೆ, ಗ್ರ್ಯಾಚುಟಿ ಕಾಯಿದೆ, ಮಾತೃತ್ವ ಅನುಕೂಲಗಳ (Maternity Benefit) ಕಾಯಿದೆ ಮತ್ತು ವೇತನ ಪಾವತಿ (Payment of Wages) ಕಾಯಿದೆ ಇತ್ಯಾದಿಗಳಲ್ಲೂ ಕಾರ್ಮಿಕ ಕಾನೂನು ಜಾರಿಗೊಳಿಸಲು ಇಲಾಖಾ ಸಿಬ್ಬಂದಿಗೆ ಸಾಕಷ್ಟು ಅಧಿಕಾರ ನೀಡಲಾಗಿದೆ. ಆದರೆ, ಈ ದೇಶದ ಪ್ರತಿ ಒಬ್ಬ ಪ್ರಜೆಯೂ ಆರಿಸಿ ಕಳಿಸಿದ ಪ್ರಧಾನಿಗಳ ಕೋಮಲ ಮನಸ್ಸು ನೋಯಿಸಿದ ಮೇಲೆ ಯಾವ ಕಾನೂನು ತಾನೇ ಪಾಲಿಸಲು ಯೋಗ್ಯವಾಗಿ ಉಳಿದೀತು? ಆದ್ದರಿಂದ ನೀತಿ ನಿರೂಪಣೆಗಳ ಮೂಲಕವೇ ಈ ರಾಕ್ಷಸೀ ಕಾನೂನುಗಳನ್ನು ಸಂಹಾರ ಮಾಡುವ ಕೋಮಲ ಪ್ರಯತ್ನ: ಶ್ರಮೇವ ಜಯತೆ.

ಕಾರ್ಮಿಕ ಕಾನೂನುಗಳ ಸುಧಾರಣೆ ವಿಚಾರ ಪ್ರಸ್ತಾಪ ಮಾಡುತ್ತಾ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಬಹು ಮುಖ್ಯವಾದ ಒಂದು ಮಾತನ್ನು ಹೇಳಿದರು. modi_ambani_tata_kamathಅನೇಕ ಕಾರಣಗಳಿಂದ ನಮ್ಮ ದೇಶದಲ್ಲಿ ಶ್ರಮಕ್ಕೆ ಘನತೆ ಎಂಬುದಿಲ್ಲ ಎಂದು. ಈ ‘ಅನೇಕ’ ಕಾರಣಗಳಲ್ಲಿ ಒಂದನ್ನಾದರೂ ಅವರು ಬಿಡಿಸಿ ಹೇಳಬಹುದೇನೋ, ಇಲ್ಲ, ಕನಿಷ್ಠ ಪಕ್ಷ ಹೆಸರಿಸಬಹುದೇನೋ ಎಂದು ಆಸೆಯಿಂದ ಅವರ ಭಾಷಣ ಕೇಳಿದೆ. ನಿರಾಶೆ ಕಾದಿತ್ತು. ಇರಲಿ, ಆಸೆಯೇ ದುಃಖಕ್ಕೆ ಮೂಲ.

ಈ ದೇಶದಲ್ಲಿ ಕಾರ್ಮಿಕರ ವೇತನ-ಬೋನಸ್ ಹೆಚ್ಚಳವಾದಷ್ಟೂ ಎಡ ಪಕ್ಷಗಳ ಮೂಳೆ ಚಕ್ಕಳ ಹೆಚ್ಚು ಸ್ಪಷ್ಟವಾಗಿ ಕಾಣಿಸತೊಡಗಿದೆ. ಹೀಗಾಗಿ ದೇಶದ ಚಿಂತನೆಯಲ್ಲಿ ನಿತ್ಯ ನಿರತ ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಮಜ್ದೂರ್ ಸಂಘ ಬೆಳೆದದ್ದು. ಮಜ್ದೂರ್ ಸಂಘ ಒಂದು ಕೋಟಿ ಕಾರ್ಮಿಕರನ್ನು ಸದಸ್ಯರನ್ನಾಗಿ ಹೊಂದಿರುವುದಾಗಿ ಹೇಳಿಕೊಳ್ಳುವುದಲ್ಲದೇ, ತನ್ನನ್ನು ತಾನು ಈ ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಇದ್ದರೂ ಇರಬಹುದೇನೋ. ಈ ದೇಶದ ಕಾರ್ಮಿಕರಿಗೆ ಕೆಲಸದ ಸುರಕ್ಷತೆಗಿಂತ ಧರ್ಮದ ಸುರಕ್ಷತೆಯ ಚಿಂತೆ ಜಾಸ್ತಿ. ಧರ್ಮವಿದ್ದರಲ್ಲವೇ ನಾವು. ಆದರೆ ಈ ಧರ್ಮಕಾರಣದ ಮಧ್ಯೆ ಪ್ರಧಾನಿಯವರ ಜಯ ಘೋಷ ಅವರಿಗೆ ಸರಿಯಾಗಿ ಕೇಳಿಸಿದೆಯೋ ಇಲ್ಲವೋ. ಯಾವುದಕ್ಕೂ ಯಾರಾದರೂ ಒಬ್ಬರು ಕೇಳಿ ನೋಡುವುದು ಒಳ್ಳೆಯದು.