Category Archives: ಶ್ರೀಪಾದ್ ಭಟ್

ಮಾಯಾ-ಮುಲಾಯಮ್ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ “ಹಿಂದ” ರಾಜಕೀಯ

-ಬಿ.ಶ್ರೀಪಾದ ಭಟ್

“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ

ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು   ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ.

ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ  ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ  ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್.

ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು  ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ  ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ  ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ.

ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ  ಅಂಬೇಡ್ಕರ್ ಅವರ  “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ  ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ.

ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ.

20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ.

ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ

ಬಿ.ಶ್ರೀಪಾದ ಭಟ್

ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ  20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ.

ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು:

1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು.

ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ  ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ?

ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು.

ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ  ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು.

ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ.

ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ.

ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು.

ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ  ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ.

ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು.

ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ  ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ  ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ  ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ.

ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ,  ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು,

ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ.

ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ  ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ.

ದೃಶ್ಯ 4 : ಇಷ್ಟೆಲ್ಲ  ಹತಾಶೆಯ, ಆತಂಕದ  ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು.

ನಾಡಿನ ಗರ್ಭದಲ್ಲಿ ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವು…

ಬಿ. ಶ್ರೀಪಾದ ಭಟ್

“ಜಟೆಯಿಂದಾಗಲೀ, ಗೋತ್ರದಿಂದಾಗಲೀ, ಹುಟ್ಟಿನಿಂದಾಗಲೀ ಯಾರೂ ಬ್ರಾಹ್ಮಣರಾಗುವುದಿಲ್ಲ, ಇದು ಶುದ್ದ ಸುಳ್ಳು, ಕೇವಲ ಧರ್ಮಗ್ರಂಥಗಳಲ್ಲಿ ಬರೆದಿದೆ ಎಂದ ಮಾತ್ರಕ್ಕೆ ತಲಾಂತರಗಳಿಂದ, ನಿಮ್ಮ ಹಿರಿಯರಿಂದ ನಡೆದುಕೊಂಡು ಬಂದ ಪದ್ಧತಿ ಎಂದ ಮಾತ್ರಕ್ಕೆ ಅವುಗಳನ್ನು ಒಪ್ಪಿಕೊಳ್ಳಲೇ ಬೇಡಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ.” –ಬುದ್ಧ

“ಯಾರು ಬಹಳ ನಮ್ರರಾಗಿ ಕೆಳಕೆಳಗೆ ಇಳಿದರೋ ಅವರೆಲ್ಲ ಪಾರಾದರು, ಉಚ್ಚಕುಲೀನರಾಗಿದ್ದು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು.” –ಕಬೀರ

“ಆಧುನಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಹಿಂದೂ ಧರ್ಮದ ಅಂತರಂಗದಲ್ಲಿ ಸ್ಥಳವೇ ಇಲ್ಲ.ಈ ಹಿಂದೂ ಧರ್ಮ ಸಹೋದರತೆ ಹಾಗೂ ಸಮಾನತೆಯನ್ನು ಸದಾ ಹತ್ತಿಕ್ಕುತ್ತುರುತ್ತದೆ. ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಗಳನ್ನು ತೆಗೆದರೆ ಈ ಹಿಂದೂ ಧರ್ಮದಲ್ಲಿ ಇನ್ನೇನು ಉಳಿಯುವುದಿಲ್ಲ.” –ಅಂಬೇಡ್ಕರ್

“ಅಸ್ಪೃಶ್ಯತೆ ಹಿಂದೂ ಧರ್ಮದ ಭಾಗವೆಂದು ಯಾರಾದರೂ ಸಾಬೀತು ಮಾಡಿದರೆ ಅಂದೇ ಆ ಧರ್ಮ ನನಗೆ ಬೇಕಿಲ್ಲವೆಂದು ಸಾರುವೆ.” –ಮಹಾತ್ಮ ಗಾಂಧಿ

“ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ ಇತ್ಯಾದಿಗಳನ್ನು ಉಳಿಸಿಕೊಳ್ಳೋದಾದರೆ, ನನಗೆ ಆ ಭಾರತೀಯತೇನೇ ಬೇಡ. ನನಗೆ ಭಾರತೀಯನಾಗೋದಂದ್ರೆ ವಿಶ್ವ ಮಾನವನಾಗೋದು.”  –ಕುವೆಂಪು

“ಗಾಂಧೀಜಿಯವರು ಆಸ್ತಿಕರಾಗಿಲ್ಲದಿದ್ದರೆ ಮೇಲ್ಜಾತಿಯವರು ಹಾಗೂ ಭಾರತದ ಸಂಘಪರಿವಾರ ಬಾಪೂ ಅವರನ್ನು ಸೈದ್ಧಾಂತಿಕವಾಗಿ ಎಂದೋ  ಮುಗಿಸಿಬಿಡುತ್ತಿದ್ದರು.” –ಅಸ್ಗರ್ ಅಲಿ ಇಂಜಿನಿಯರ್

ಬಹಳ ಹಿಂದೆ ಲಂಕೇಶರ ಬ್ರಾಹ್ಮಣ ಸ್ನೇಹಿತರೊಬ್ಬರು ಲಂಕೇಶರ ಬಳಿ ಹೇಳುತ್ತಿದ್ದರು, “ಸರ್ ನಾನು ಕೂಡ ದೇವಸ್ಥಾನಗಳಿಗೆ ಹೋಗುವುದಿಲ್ಲ, ಬಿಯರ್ ಕುಡಿಯುತ್ತೇನೆ, ಜನಿವಾರವನ್ನು ಕೂಡ ಹಾಕುವುದಿಲ್ಲ.” ಅದಕ್ಕೆ ಲಂಕೇಶರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಅಲ್ಲ ಕಣಯ್ಯ, ಇದೆಲ್ಲ ಸರಿ ಆದರೆ ನಿನ್ನ ಮನಸ್ಸಿಗೆ ಹಾಕಿಕೊಂಡ ಜನಿವಾರ ಎಂದು ತೆಗೆಯುತ್ತೀಯ?”

ಅಷ್ಟೇ ಅಲ್ಲವೆ? ಸಂಪ್ರದಾಯನಿಷ್ಟ ಬ್ರಾಹ್ಮಣರು ಮತ್ತು ಆಧುನಿಕರೆನಿಸಿಕೊಂಡ ಬ್ರಾಹ್ಮಣರು ಇಬ್ಬರೂ ತಮ್ಮ ಮನಸ್ಸಿಗೆ ಹಾಕಿಕೊಂಡ ಜನಿವಾರ ಕಳಚಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಇವರು ಜೀವವಿರೋಧಿಗಳು ಮತ್ತು ವಿತಂಡವಾದಿಗಳಾಗಿ ನಿಂತ ನೀರಾಗುತ್ತಾರೆ. ತಮ್ಮ ಸಂಪ್ರದಾಯ,ತಮ್ಮ ಧರ್ಮಭೀರುತ್ವ, ತಮ್ಮ ಭೂತಗಳನ್ನು ನೆನೆಸಿಕೊಳ್ಳುವಾಗ, ಅದನ್ನು ವೈಭವೀಕರಿಸಿ ಮಾತನಾಡುವಾಗ, ಮೀಸಲಾತಿಯನ್ನು ಹಂಗಿಸಿ ಕೊಂಕು ನುಡಿಯುವಾಗ, ಶೂದ್ರರನ್ನು, ತಳಸಮುದಾಯದವರನ್ನು ವಿನಾಕಾರಣ ಅವಮಾನಿಸುವಾಗ ಈ ಸಂಪ್ರದಾಯನಿಷ್ಟ ಬ್ರಾಹ್ಮಣರು ಹಾಗೂ ಆಧುನಿಕ ಬ್ರಾಹ್ಮಣರು ಒಂದೇ ಧ್ವನಿಯಲ್ಲಿ, ಸಮಾನ ಪಾತಳಿಯಲ್ಲಿ ಮಾತನಾಡುತ್ತಾರೆ. ಇವರು ಎಂಜಲು ಮಡೆಸ್ನಾನದಂತಹ ಅಮಾನವೀಯ ಆಚರಣೆಗಳ ಬಗ್ಗೆ ಸಂಪ್ರದಾಯದ ಹೆಸರಿನಲ್ಲಿ ಅದರ ಪರವಹಿಸಿಯೋ ಇಲ್ಲವೇ ಜಾಣ ಮೌನ, ಮರೆ ಮೋಸದ ಮುಖವಾಡವನ್ನು ತೊಡುತ್ತಾರೆ.

40ರ ದಶಕದಲ್ಲಿ ಕುವೆಂಪುರವರ ಸಮತಾವಾದದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತಿ ಹಿಡಿಯುವ, ಪುರೋಹಿತಶಾಹಿಯ ಅನೀತಿ ಒಳ ಹುನ್ನಾರಗಳನ್ನು ತೋರಿಸುವ ಜನಪರ ನಾಟಕ “ಶೂದ್ರ ತಪಸ್ವಿ”ಯನ್ನು ಆಗ ಎಲ್ಲಿ ಇದು ಸನಾತನ ವೈದಿಕ ಧರ್ಮವನ್ನು ಶಿಥಿಲಗೊಳಿಸುತ್ತದೆಯೋ ಎನ್ನುವ ಭೀತಿಯಲ್ಲಿ ಮಾಸ್ತಿಯವರು ವಿರೋಧಿಸಿದಾಗಿನಿಂದ ಹಿಡಿದು, ಕುವೆಂಪುರವರು “ನಿರಂಕುಶಮತಿಗಳಾಗಿ”, “ನೂರು ದೇವರನ್ನು ನೂಕಾಚೆ ದೂರ,” ಎಂದು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದಾಗ ಅದನ್ನು ವೈದಿಕ ನೆಲೆಗಟ್ಟಿನಲ್ಲಿ ನಿಂತು ವಿರೋಧಿಸಿದ ಯಥಾಸ್ಥಿತಿವಾದಿಗಳಾದ ದೇವುಡುರವರಿಂದ ಹಿಡಿದು, ತಮ್ಮ ಗುಪ್ತ ಕಾರ್ಯಸೂಚಿಗಳಿಗೆ, ವೈದಿಕ ಚಿಂತನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎನ್ನುವ ಭ್ರಮೆಯಿಂದ ಎಚ್.ನಾಗವೇಣಿಯವರಂತಹ ಕನ್ನಡದ ಪ್ರಮುಖ ಲೇಖಕಿಯ ವಿರುದ್ಧ, ಅವರ ಅರ್ಥಪೂರ್ಣ ಕಾದಂಬರಿ “ಗಾಂಧಿ ಬಂದ”ದ ವಿರುದ್ಧ ಹಾಸ್ಯಾಸ್ಪದವಾಗಿ ಚೀರಾಡುವುದು, ಅಂದಿನಿಂದ ಇಂದಿನವರೆಗೆ ಇವರ ದುರಂತದ ಮುಖವನ್ನು ತೋರಿಸುತ್ತದೆ.

ಈ ಎರಡೂ ವಿಷಯಗಳಲ್ಲಿಯೂ ಈ ಬಿಲ್ಲುವಿದ್ಯಾಪ್ರವೀಣರು ತಳಸಮುದಾಯದವರನ್ನೂ, ಶೂದ್ರರನ್ನು ಬಾಣಗಳಂತೆ ಬಳಸಿಕೊಂಡಿದ್ದಾರೆ. ಕಡೆಗೂ ಈ ರಕ್ತ ಸಿಕ್ತ ಬಾಣ ಮಾತ್ರ ತನ್ನ ಕತ್ತು ಮುರಿದುಕೊಳ್ಳುತ್ತದೆ. ಆದರೆ ಅದನ್ನು ಪ್ರಯೋಗಿಸಿದಾತ ಶ್ರೇಷ್ಟ ಬಿಲ್ಲುಗಾರನೆನೆಸಿಕೊಳ್ಳುತ್ತಾನೆ. ಪ್ರಾಚೀನ ಭಾರತದಲ್ಲಿ, ಬಹುವಾಗಿ ಆಧುನಿಕ ಭಾರತದಲ್ಲಿ, ವರ್ತಮಾನದಲ್ಲಿಯೂ ಕೂಡ ಬ್ರಾಹ್ಮಣರು ಈ ಪರಿಣಿತ ಬಿಲ್ಲುಗಾರರಾಗಿಯೇ ಗುರುತಿಸಲ್ಪಡುತ್ತಾರೆ.

ಅರ್ವೆಲ್ ಹೇಳಿದ ಹಾಗೆ “ದ್ವಂದಾಲೋಚನೆಯೆಂದರೆ ಏಕಕಾಲದಲ್ಲಿ,ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಸ್ವೀಕರಿಸುವುದು. ಈ ದ್ವಂದಾಲೋಚನೆಯ ಉಪಯೋಗದ ಫಲವಾಗಿ ತಾನು ವಾಸ್ತವವನ್ನು ಭಂಗಗೊಳಿಸುತ್ತಿಲ್ಲವೆನ್ನುವ ಸಮಾಧಾನ ಅವನಿಗಿರುತ್ತದೆ.” ಎನ್ನುವ ಮಾತು ಇಂದಿನ ಆಧುನಿಕತೆಯ ವಿಚಾರಗಳನ್ನು ಬೆಳೆಸಿಕೊಂಡ ಅನೇಕ ಬ್ರಾಹ್ಮಣರ ಪಾಲಿಗೆ ಸತ್ಯ. Intellectual pride ಅನ್ನು  ಬೇರೆಯವರಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುವುದು ಆಧುನಿಕತೆಯ ಒಂದು ಕೆಟ್ಟ ಚಟ. ಆದರೆ ಈ ದುಷ್ಚಟಕ್ಕೆ ತಳಸಮುದಾಯದವರು ಬಲಿಯಾಗುತ್ತಿರುವುದು ಮಾತ್ರ ಒಂದು ದುರಂತ. ಇದನ್ನು 2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡದಲ್ಲಿ ಸ್ಪಷ್ಟವಾಗಿ ಗುರಿತಿಸಬಹುದು. ಅಲ್ಲಿ ಮುಸ್ಲಿಂರ ವಿರುದ್ಧ ಜನಾಂಗೀಯ ದ್ವೇಷ ಹುಟ್ಟು ಹಾಕಿದವರು, ವಿಷಪೂರಿತ ಭಾಷಣ ಮಾಡಿ ರೊಚ್ಚಿಗೆಬ್ಬಿಸಿದವರು ಸಂಘಪರಿವಾರದವರು, ಮೇಲ್ಜಾತಿಯ ಜನ, ಆದರೆ ವಿನಾಕಾರಣ ಈ ರೀತಿ ರೊಚ್ಚಿಗೆದ್ದು ಅನಗತ್ಯವಾಗಿ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ, ಕೊಲೆ ಕೇಸಿನಲ್ಲಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿರುವವರು ದಲಿತರು, ಆದಿವಾಸಿಗಳು.

ಅದಕ್ಕೇ ಕುವೆಂಪು ಶೂದ್ರರಿಗೆ, ದಲಿತರಿಗೆ ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಈ ಪುರೋಹಿತಶಾಹಿಯನ್ನು, ವೈದಿಕ ಪರಂಪರೆಯನ್ನು ಎದುರಿಸಬೇಕೆಂದರೆ ಮೊದಲು ನಿಮ್ಮ ತಲೆಗಳನ್ನು ಶುಚಿಗೊಳಿಸಿಕೊಳ್ಳಿ, ನಿಮ್ಮ ತಲೆಯಲ್ಲಿರುವ ಪುರೋಹಿತ ಪರಂಪರೆಯ ಬಗೆಗಿನ, ಪಂಚಾಗದ ಬಗೆಗಿನ, ಬ್ರಾಹ್ಮಣೀಕರಣದ ಬಗೆಗಿನ ಗುಪ್ತ ವ್ಯಾಮೋಹವನ್ನು ಸಂಪೂರ್ಣವಾಗಿ ತೊಡೆದು ಹಾಕುವವರೆಗೂ ನೀವು ಈ ಪುರೋಹಿತಶಾಹಿ ಎಂಬ ಹುಲಿಯನ್ನು ಎದುರಿಸುವುದು ಒಂದು ಸೋಲೇ ಸರಿ.”

ಇದು ಅಂದಿಗೆ ಅಲ್ಪ ಪ್ರಮಾಣದಲ್ಲಿದ್ದರೆ ಇಂದು 21ನೇ ಶತಮಾನದಲ್ಲಿ ಶೂದ್ರರಲ್ಲಿ, ದಲಿತರಲ್ಲಿನ ಬ್ರಾಹ್ಮಣೀಕರಣ ತಾರಕಕ್ಕೇರುತ್ತಿದೆ. ಇದನ್ನು ನಾವು ಶ್ರೀರಾಮುಲು ಎನ್ನುವ ಹಿಂದುಳಿದ ಶೂದ್ರ ರಾಜಕಾರಣಿಯ ಮುಖಾಂತರ ವಿವೇಚಿಸಬಹುದು. ಆಳದಲ್ಲಿ ಮುಗ್ಧರಂತೆ, ಮಗುವಿನಂತೆ ಕಾಣುವ ಈ ಶ್ರೀರಾಮುಲು ಇಂದು ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ, ಹುಂಬ, ಗೊತ್ತುಗುರಿಯಿಲ್ಲದ, ಅರ್ಥಹೀನ ರಾಜಕಾರಣಿಯಾಗಿ ಕಂಗೊಳಿಸುತ್ತಾರೆ. ಇವರು ತಮ್ಮ ಹುಂಬತನದಿಂದ ಗಣಿಚೋರರಾದ ರೆಡ್ಡಿಗಳ ಜೊತೆ ಸೇರಿಕೊಂಡು ಇಡೀ ಬಳ್ಳಾರಿಯನ್ನು ರೆಡ್ಡಿಗಳ ಸರ್ವಾಧಿಕಾರತ್ವಕ್ಕೆ ವಹಿಸಲು ನೆರವಾದರು. ಬಿಜೆಪಿಗೆ ಆಪರೇಷನ್ ಕಮಲ ರುಚಿ ತೋರಿಸಿ ನಮ್ಮ ರಾಜ್ಯದಲ್ಲಿಯೇ ಭ್ರಷ್ಟತೆಗೆ ಒಂದು ಹೊಸ ಪದ್ಧತಿಯನ್ನೇ ಸೃಷ್ಟಿಸಿದರು. ಇಂದು ಬಳ್ಳಾರಿಯ ಉಪಚುನಾವಣೆಯನ್ನು ಅಸಹ್ಯವಾಗಿ, ಭ್ರಷ್ಟಾಚಾರದಿಂದ ಗೆದ್ದಿರುವ ಈ ಶ್ರೀರಾಮುಲು ಇನ್ನು ತನ್ನ ಆನೀತಿ, ಭ್ರಷ್ಟ ಗೆಲುವಿನ ಠೇಕಾಂರದಿಂದ, ಮತ್ತದೇ ತನ್ನ ಗೊತ್ತು ಗುರಿಯಿಲ್ಲದ ಅಪ್ರಬುದ್ಧ ರಾಜಕಾರಣದಿಂದ ಇನ್ನು ಈ ರಾಜ್ಯದ ರಾಜಕಾರಣದಲ್ಲಿ ಹುಟ್ಟು ಹಾಕಲಿರುವ ಅನಾಹುತಾಕಾರಿ, ಆತ್ಮಹತ್ಯಾತ್ಮಕ ನಡೆಗಳು, ಆ ಮೂಲಕ ಹುಟ್ಟಿಕೊಳ್ಳುವ ರಾಜಕೀಯ ಅತಂತ್ರ ಸ್ಥಿತಿ, ಇಂತಹ ಬೌದ್ಧಿಕ ದಿವಾಳಿತನದ ಶೂದ್ರ ನಾಯಕನ ಹಿಂದೆ ಕೇವಲ ಆ ಕ್ಷಣದ ಉತ್ಸಾಹದಲ್ಲಿ ನೆರೆಯುವ, ಭವಿಷ್ಯದ ಅರಿವೇ ಇಲ್ಲದ ಹಿಂದುಳಿದ ವರ್ಗಗಳ ಜನತೆ. ಈ ತರಹದ ನಾಯಕನನ್ನು ಅರಾಧಿಸುವ ಜನತೆ ಆ ಮೂಲಕ ಪ್ರಜಾಪ್ರಭುತ್ವಕ್ಕೆ ತಂದೊಡ್ಡುವ ಸೋಲು. ಅತ್ತ ಕುಮಾರಾಸ್ವಾಮಿ ಅವರ ನಿಗೂಢ, ಅವಾಂತಕಾರಿ, ಸ್ವೇಚ್ಛಾಚಾರಿ ನಡೆಗಳು ಪ್ರಜ್ಞಾವಂತರಲ್ಲಿ ನಡುಕ ಹುಟ್ಟಿಸುತ್ತಿವೆ.

ಇವು ಈ ಶೂದ್ರ ಶಕ್ತಿಗಳು ಹುಟ್ಟುಹಾಕುತ್ತಿರುವ ದುರಂತಮಯ ವರ್ತಮಾನ ಹಾಗೂ ಭವಿಷ್ಯ. ಇಲ್ಲಿ ಇವರೇ ನಿಗೂಢ ಬಾಣ ಹಾಗೂ ಬಿಲ್ಲು. ಆದರೆ ನಿಜದ ಬಿಲ್ಲುಗಾರರಾದ ಸುಷ್ಮಾ ಸ್ವರಾಜ್, ಅಡ್ವಾನಿ, ಅನಂತಕುಮಾರ್, ನಾಗಪುರದ ಕೇಶವ ಕೃಪಾ, ಹಾಗು ಸಂಘ ಪರಿವಾರ ಈ ಶೂದ್ರರನ್ನು ಉಂಡ ನಂತರ ಬಾಳೆ ಎಲೆ ಬಿಸಾಡುವಂತೆ ಬಿಸಾಡಿ ಈಗ ತಾವು ಮಾತ್ರ ಡಿಟರ್ಜೆಂಟ್ ಸೋಪಿನಂತೆ ಹುಸಿ ಬಿಳುಪನ್ನು ತೋರುತ್ತ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಕೈ ಚಾಚುತ್ತಿದ್ದಾರೆ.

ಬಲಿಷ್ಟ ಜಾತಿಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಉತ್ತರ ಭಾರತದ ಅಹಿಂದ ವರ್ಗಗಳು 90ರ ದಶಕದಲ್ಲಿ ಹಾಗೂ ಇಲ್ಲಿವರೆಗೂ ಅಲ್ಲಿನ ಸಮಯಸಾಧಕ, ಜಾತೀವಾದಿ ರಾಜಕಾರಣಿಗಳ ಕೈಯಲ್ಲಿ ಸಿಲುಕಿಕೊಂಡು ಈಗ ಅತ್ಯಂತ ಉಸಿರುಗಟ್ಟಿಸುವ, ಕೊಳೆತ ಸ್ಥಿತಿಗೆ ತಲುಪುತ್ತಿರುವುದು ನಮ್ಮ ರಾಜ್ಯದ ಅಹಿಂದ ವರ್ಗಗಳಿಗೆ ಪಾಠವಾಗದಿದ್ದರೆ ಇಲ್ಲಿ ಭವಿಷ್ಯದಲ್ಲಿ ಪ್ರತಿಗಾಮಿ ಪರಿಸ್ಥಿತಿಯೇ ಉಂಟಾಗುವುದು, ಜೊತೆಗೆ ಈ ನಮ್ಮ ನಾಡು ತನ್ನ ಗರ್ಭದಲ್ಲಿ ತುಂಬಿಕೊಳ್ಳಲಿರುವುದು ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವುಗಳನ್ನು. ಇದು ಗರ್ಭಪಾತವಾದರೆ ಅದರ ತೀವ್ರವಾದ ಮೊದಲ ಹಾಗೂ ಕೊನೆಯ ಹೊಡೆತ ಬೀಳುವುದು ಈ ಅಹಿಂದ ವರ್ಗಗಳಿಗೆ. ಇದರಿಂದ ಉಂಟಾಗುವ ದೊಡ್ದ ದುರಂತ ಇಡೀ ರಾಜ್ಯವನ್ನು ಮತ್ತೆ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.

ಇಲ್ಲಿ ಒಂದು ಕಾಲದಲ್ಲಿ ಸ್ವಘೋಷಿತವಾಗಿಯೇ ಸಹಜವಾಗಿಯೇ ಹುಟ್ಟಿಕೊಂಡ, ಬೆಳೆದುಬಂದ ಸಮಾಜವಾದಿ ತತ್ವಗಳು, ಜನಪರ ಕಾಳಜಿಗಳು, ಪ್ರಗತಿಪರ ನೀತಿಗಳು, ನ್ಯಾಯವಂತಿಕೆ ಕೊನೆ ಉಸಿರೆಳೆಯುತ್ತಿವೆ. ಏಕೆಂದರೆ ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ಆಡಳಿತ ಯಂತ್ರವೇ ಇಲ್ಲ. ಇಲ್ಲಿ ಮನೆಯಲ್ಲಿ ಮನೆಯೊಡೆಯನಿದ್ದನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಹೊಸ್ತಿಲಲ್ಲಿ ಹುಲ್ಲು ತುಂಬಿರುವ ಮನೆಯಲ್ಲಿ ಮನೆಯೊಡೆಯನಿಲ್ಲವೇ ಇಲ್ಲ. ಅಭಿವೃದ್ದಿಯ ಯೋಜನೆಗಳು, ಕನಸುಗಳು, ಸಮತಾವಾದದ ನೀತಿ ಕಾರ್ಯಗತವಾಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಪ್ರಭುತ್ವ ಇದನ್ನು ಗಣನೆಗೂ ಕೂಡ ತೆಗೆದುಕೊಂಡಿಲ್ಲ, ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಅವುಗಳನ್ನು ಯಾರು ಕೂಡ ಕನಸಿರಲೂ ಇಲ್ಲ. ಇದು ಕಟುವಾದ, ಭೀಕರ ವಾಸ್ತವ. ಇದು ಉತ್ಪ್ರೇಕ್ಷೆಯಲ್ಲ. ಹೊಸ ನಡೆಗೆ, ಹೊಸ ಚಿಂತನೆಗೆ, ಹೊಸ ಕನಸುಗಳಿಗೆ, ಹೊಸ ಪಲ್ಲಟಗಳಿಗೆ, ಹೊಸ ನಾಯಕನಿಗೆ ಕಾಯುತ್ತಿದೆ ಈ ರಾಜ್ಯ. ಪ್ರಗತಿಪರ ಸಂಘಟನೆಗಳಿಗೆ,ವೈಚಾರಿಕ ಶಕ್ತಿಗಳಿಗೆ ಇದು ಅತ್ಯಂತ ಸವಾಲಿನ ಆದರೆ ಅಷ್ಟೇ ಜೀವಂತಿಕೆಗಾಗಿ space ಇರುವ ಕಾಲ ಕೂಡ.

ಅಬುವಿನ ಅಂತರಂಗ, ರಾಜೀವನ ತ್ಯಾಗ, ಬಡ ರೈತನ ನಿಸ್ವಾರ್ಥತೆ…

-ಬಿ. ಶ್ರೀಪಾದ ಭಟ್

ನಾನು ಚಿಕ್ಕವನಿದ್ದಾಗ ನನ್ನ ಚಿಕ್ಕಮ್ಮಳೊಂದಿಗೆ “ಬಂಗಾರದ ಮನುಷ್ಯ” ಚಿತ್ರ ನೋಡಲಿಕ್ಕೆ ಹೋಗಿದ್ದೆ. ಅಂತ್ಯದ ವೇಳೆಗಾಗಲೇ ಪ್ರೇಕ್ಷಕರು ಅಸಹನೆಯಿಂದ, ನೋವಿನಿಂದ ವಜ್ರಮುನಿಗೆ “ನೀನು ರಾಜಣ್ಣನ ಬಾಳು ಹಾಳು ಮಾಡಿದ ದ್ರೋಹಿ, ನಿನಗೆ ನಿಜಕ್ಕೂ ಒಳ್ಳೆಯದಾಗದು” ಎಂದು ಶಾಪ ಹಾಕುತ್ತಿದ್ದರು. ಕೆಲವು ವರ್ಷಗಳ ನಂತರ ಎರಡನೇ ಬಾರಿ “ಬಂಗಾರದ ಮನುಷ್ಯ” ಚಿತ್ರ ನೋಡಲು ಹೋಗಿದ್ದೆ. ಆಗಲೂ ಅಷ್ಟೇ ಅದಾಗಲೇ ಹತ್ತಾರು ಬಾರಿ ಈ ಚಿತ್ರವನ್ನು ನೋಡಿದ ಜನ ಮಧ್ಯಂತರದ ವೇಳೆಗೆ ರಾಜಕುಮಾರರನ್ನು “ಅಣ್ಣಾ ನೀನು ಈ ವಜ್ರಮುನಿಗೆ ಸಹಾಯ ಮಾಡಬೇಡ, ಮುಂದೆ ನಿನಗೇ ದ್ರೋಹ ಮಾಡುತ್ತಾನೆ” ಎಂದು ಎಚ್ಚರಿಸುತ್ತಿದ್ದರು, ಕೂಗುತ್ತಿದ್ದರು. ಇವರೆಲ್ಲ ಇದು ಚಿತ್ರವೆಂದು ಯಾವಾಗಲೋ ಮರೆತಾಗಿತ್ತು. ಜನಪ್ರಿಯತೆಯ ಹೊರತಾಗಿ ರಾಜ್ ರವರು ನಿಜ ಜೀವನದಲ್ಲೂ ಕೂಡ ತಮ್ಮ ನೈತಿಕತೆಯನ್ನ, ಪ್ರಾಮಾಣಿಕತೆಯನ್ನ, ಸರಳತೆಯನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದದ್ದು ಕೂಡ ಇದಕ್ಕೆ ಕಾರಣವಿರಬಹುದು. ಅಲ್ಲದೆ ರಾಜ್ ತಮ್ಮ ಚಿತ್ರಗಳಲ್ಲಿ ಪ್ರತಿಪಾದಿಸುತ್ತಿದ್ದ ಸಂಸಾರ ನಿಷ್ಟೆ, ತಾಯಿಯ ಸೇವೆ, ತಮ್ಮಂದಿರ-ತಂಗಿಯರ ವಿದ್ಯಾಭ್ಯಾಸ, ಅವರ ಮದುವೆಯ ನಂತರವಷ್ಟೇ ತಾನು ಮದುವೆ ಮಾಡಿಕೊಳ್ಳುವುದು, ಇವೆಲ್ಲ ಕರ್ನಾಟಕದ ಬಹುಪಾಲು ಮಧ್ಯಮ, ಕೆಳ ಮಧ್ಯಮ ವರ್ಗಗಳನ್ನು ಪೊರೆದಿದ್ದವು. ಏಕೆಂದರೆ ಅಂದಿಗೂ ಇಂದಿಗೂ ಈ ಮಧ್ಯಮ, ಕೆಳ ಮಧ್ಯಮ ವರ್ಗಗಳ ಜೀವನದ ಶೈಲಿ ಈ ನೀತಿಗಳನ್ನು ಪಾಲಿಸುತ್ತಿದೆ.

ಇದನ್ನೆಲ್ಲ ಈಗ ಹೇಳಲಿಕ್ಕೆ ಕಾರಣವಿದೆ. ಸಲೀಂ ಅಹ್ಮದ್ ನಿರ್ದೇಶನದಲ್ಲಿ ತೆರೆ ಕಂಡ ಮಲೆಯಾಳಂ ಚಿತ್ರ “ಅದಮಿಂಟೆ ಮಕನ್ ಅಬು” ಈ ಬಾರಿ ಅತ್ಯುತ್ತಮ ನಿರ್ದೇಶನ (ಸಲೀಂ ಅಹಮದ್), ಹಾಗು ಅತ್ಯುತ್ತಮ ನಟ ( ಸಲೀಂ ಕುಮಾರ್) ರಾಷ್ರ್ಟ ಪ್ರಶಸ್ತಿ ಗಳಿಸಿದೆ. ನಿರ್ದೇಶಕ ಸಲೀ ಅಹಮದ್ ರವರ ಪ್ರಾಮಾಣಿಕತೆ ಹಾಗು ಕುಶಲತೆ, ತನ್ನ ಸರಳತೆ, ಸಲೀಂ ಕುಮಾರ್ ರವರ ಅತ್ಯುತ್ತಮ ನಟನೆ, ಅತ್ಯಂತ ಚುರುಕಾದ ಸಂಕಲನ, ಬಿಗಿಯಾದ ಅಚ್ಚುಕಟ್ಟಾದ ಚಿತ್ರಕಥೆ, ಮಧು ಅಂಬಟ್ ಅವರ ಅತ್ಯಧ್ಬುತ ಸಿನಿಮಾಟೋಗ್ರಾಫಿ ಈ ಚಿತ್ರವನ್ನು ಒಂದು ಮಾನವೀಯ, ಜೀವಂತ ದೃಶ್ಯ ಕಾವ್ಯವನ್ನಾಗಿಸಿವೆ. ಈ ಚಿತ್ರದಲ್ಲಿ ನಾಯಕ “ಅಬು” ಹಜ್ ಯಾತ್ರೆಗೆ ಹೋಗಲು ತನ್ನ ಸ್ವಂತ ದುಡಿಮೆ, ಪ್ರಾಮಾಣಿಕತೆಯಿಂದ ಗಳಿಸಿದ ಹಣವನ್ನು ಕೂಡಿಸಿಡುತ್ತಾನೆ. ಆದರೆ ಹಣದ ಅಡಚಣೆ ಉಂಟಾದಾಗ ಬೇರೆಯವರ ಸಹಾಯ ಪಡೆಯಲು ನಿರಾಕರಿಸುತ್ತಾನೆ. ಏಕೆಂದರೆ ತನ್ನ ಸ್ವಂತ ಪರಿಶ್ರಮದಿಂದ ದುಡಿದ ಹಣದಿಂದ ಮಾತ್ರ ತಾನು ಹಜ್ ಯಾತ್ರೆಗೆ ಹೋಗಬೇಕೆ ಹೊರತು ಇನ್ನೊಬ್ಬರ ದಾನದ, ಸಾಲದ ರೂಪದಿಂದ ಬಂದ ಸಹಾಯದಿಂದ ಹೋದರೆ ಅಲ್ಲಾ ಸ್ವೀಕರಿಸುವುದಿಲ್ಲ ಎನ್ನುವ ಆತ್ಮಸಾಕ್ಷಿ ಅವನದು. ಬಸವಣ್ಣ ಹೇಳಿದ ಹಾಗೆ ‘ಛಲ ಬೇಕು ಶರಣಂಗೆ ಪರಧನ ಒಲ್ಲೆನೆಂಬ,’ ಎನ್ನುವ ಮೂಲಭೂತ ಶರಣ ತತ್ವಕ್ಕೆ ಇವನು ಬದ್ಧನಾಗಿರುತ್ತಾನೆ. ಇವನಿಗೆ ಆತ್ಮದ ಸೊಲ್ಲು ಎಲ್ಲಕ್ಕಿಂತಲೂ ಮಿಗಿಲಾದದ್ದು. ಅದಕ್ಕಿಂತ ಬೇರೆ ನಿಯಮಗಳು ಅವನಿಗೆ ಗೊತ್ತೇ ಇಲ್ಲ. ಕೊನೆಗೆ ಈ ಅತ್ಮಸಾಕ್ಷಿಗೆ ಓಗೊಟ್ಟು ಇದಕ್ಕಾಗಿ ತನ್ನ ಜೀವಮಾನದ ಕನಸಾದ ಹಜ್ ಯಾತ್ರೆಯನ್ನೇ ಕೈಬಿಡುತ್ತಾನೆ. ಇದು ಚಿತ್ರದ ಸಂಕ್ಷಿಪ್ತ ಸಾರಾಂಶ. ಇದರ ಹೆಚ್ಚುಗಾರಿಕೆಯನ್ನು ನಾವು ಚಿತ್ರ ನೋಡಿಯೇ ಅನುಭವಿಸಬೇಕು. ಈ ಚಿತ್ರ ಈಗ ಅಸ್ಕರ್ ಪ್ರಶಸ್ತಿಗೆ ಕೂಡ nominate ಆಗಿದೆ.

ಇಲ್ಲಿಂದಲೇ ಇದರ ನಿರ್ದೇಶಕರಿಗೆ ಒಂದು ರೀತಿಯ ತಳಮಳ, ಸಂಧಿಗ್ಧತೆಗಳು ಶುರುವಾಗತೊಡಗಿವೆ. ಏಕೆಂದರೆ ಅಲ್ಲಿ ಲಾಸ್ ಎಂಜಲೀಸ್‌ನಲ್ಲಿ, “ಅಸ್ಕರ್ ಪ್ರಶಸ್ತಿ” ಆಯ್ಕೆಗಾಗಿ ಆರಿಸಲ್ಪಟ್ಟ ವಿಮರ್ಶಕರ ಎದುರು ಇದನ್ನು ಮಾರ್ಕೆಟಿಂಗ್ ಮಾಡಲು, ಅನೇಕ ರೀತಿಯ ಕಸರತ್ತುಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಕೋಟ್ಯಾಂತರ ಹಣ ಬೇಕಾಗುತ್ತದೆ ( ಇದಕ್ಕಾಗಿ ಅಮೀರ್ ಖಾನ್ ತನ್ನ ಲಗಾನ್ ಚಿತ್ರಕ್ಕಾಗಿ ಚೆಲ್ಲಿದ ಹಣವನ್ನು ನೆನಪಿಸಿಕೊಳ್ಳಿ). ಆದರೆ ಸಾಲ ಮಾಡಿ ಕೇವಲ ಒಂದು ಕೋಟಿಯೊಳಗೆ ಈ ಚಿತ್ರವನ್ನು ಮಾಡಿದ ಇವರಿಗೆ ಮತ್ತೆ ಇನ್ನಿತರ ಯಾವುದೇ ರೀತಿಯ ದುಡ್ಡನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಸ್ನೇಹಿತರ, ದಾನಿಗಳ ಸಹಾಯ ಪಡೆಯುವದಕ್ಕೆ ಆ ಚಿತ್ರದ ಕಥೆಯೇ ನೈತಿಕ ಪ್ರಶ್ನೆಗಳನ್ನೊಡ್ಡುತ್ತದೆ. ಒಂದು ವೇಳೆ ಇವರು ದಾನ ರೂಪದಲ್ಲೋ, ಸಾಲದ ರೂಪದಲ್ಲೋ ಪಡೆದ ಹಣವನ್ನು ಚಿತ್ರದ ಪ್ರಶಸ್ತಿಗೋಸ್ಕರ promote ಮಾಡಲು ಬಳಸಿದರೆ ಇದು ಚಿತ್ರದ ಮೂಲ ಆಶಯಕ್ಕೇ ಭಂಗ ಬಂದಂತಾಗುತ್ತದೆ. ಅಂದರೆ ಸ್ವತಹ ನಿರ್ದೇಶಕ ತಾನು ಈ ಚಿತ್ರದ ಮೂಲಕ ಹೇಳಿದ ನೈತಿಕತೆಯ, ಪ್ರಾಮಾಣಿಕ ಆಶೋತ್ತರಗಳನ್ನೇ ನಿಜ ಜೀವನದಲ್ಲಿ ಧಿಕ್ಕರಿಸಿದಂತಾಗುತ್ತದೆ. ಎಂತಹ ವಿಪರ್ಯಾಸ !!!

ನಿರ್ದೇಶಕ ಸಲೀಂ ಅವರಿಗೆ ಈ ಚಿತ್ರವನ್ನು ಮಾಡುವಾಗ ಮುಂದೊಂದು ದಿನ ಈ ಬಿಕ್ಕಟ್ಟು ತಂದೊಡ್ಡಬಹುದೆಂದು ಕನಸಲ್ಲೂ ಭಾವಿಸಿರಲಿಕ್ಕಿಲ್ಲ. ಅದೇ ಅಲ್ಲವೆ ಇದರ ಮಾಂತ್ರಿಕತೆ. ಉತ್ತಮ, ಜೀವಪರ ಆಶೋತ್ತರಗಳುಳ್ಳ ಚಿತ್ರವೊಂದು ಸರ್ವಕಾಲಕ್ಕೂ ಸಮಾಜವನ್ನು ಪೊರೆಯುತ್ತಿರುತ್ತದೆ. ನೈತಿಕತೆಯನ್ನು ಜೀವನ್ಮರಣದ ಪ್ರಶ್ನೆಯನ್ನಾಗಿಸಿಬಿಡುತ್ತದೆ.

ಇದೇ ವೇಳೆಗೆ ಟಾಲ್ಸ್‌ಟಾಯ್ ಬರೆದ “ಜೆರೊಸೊಲಂ ಯಾತ್ರೆ” ಎನ್ನುವ ಕತೆ ನೆನಪಿಗೆ ಬರುತ್ತದೆ. ಅದರಲ್ಲಿ ಹಳ್ಳಿಯ ಇಬ್ಬರು ರೈತರು ಅನೇಕ ವರ್ಷಗಳಿಂದ ಜೆರೊಸೊಲಂಗೆ ಹೋಗುವ ಕನಸು ಕಾಣುತ್ತಿರುತ್ತಾರೆ. ಅದಕ್ಕಾಗಿ ಅಬುವಿನಂತೆ ಪ್ರಾಮಾಣಿಕತೆಯಿಂದ, ಕಷ್ಟದಿಂದ ದುಡಿದು ಹಣ ಕೂಡಿಸಿಡುತ್ತಾರೆ. ಒಂದು ದಿನ ಇಬ್ಬರೂ ಒಟ್ಟಿಗೇ ಯಾತ್ರೆಗೆ ಹೊರಡುತ್ತಾರೆ. ಹಲವಾರು ತಿಂಗಳು ಕಳೆಯುತ್ತದೆ. ಹೀಗೆ ದಾರಿ ಕ್ರಮಿಸುವಾಗ ಮಧ್ಯದಲ್ಲೊಂದು ಹಳ್ಳಿ ಸಿಗುತ್ತದೆ. ಅಲ್ಲಿನ ವಯಸ್ಸಾದ ಬಡ ರೈತದಂಪತಿಗಳು ಅನಾರೋಗ್ಯದಿಂದ, ಅಸಹಾಯಕತೆಯಿಂದ ನರಳುತ್ತಿರುತ್ತಾರೆ. ಆಗ ಇಬ್ಬರಲ್ಲಿ ಒಬ್ಬ ರೈತ ಅಲ್ಲೇ ಅವರ ಸೇವೆಗಾಗಿ ಉಳಿಯುತ್ತಾನೆ, ಮತ್ತೊಬ್ಬ ತನ್ನ ಯಾತ್ರೆ ಮುಂದುವರಿಸುತ್ತಾನೆ. ಅನೇಕ ತಿಂಗಳುಗಳು ಕಳೆಯುತ್ತವೆ. ಆ  ಬಡ ರೈತದಂಪತಿಗಳ ಸೇವೆಗೆಂದು ಯಾತ್ರೆಯನ್ನು ಮೊಟಕುಗೊಳಿಸಿದ ರೈತ ತನ್ನಲ್ಲಿರುವ ಹಣವನ್ನೆಲ್ಲ ಆ ಬಡ ದಂಪತಿಗಳ ಆರೈಕೆಗೆ ಖರ್ಚು ಮಾಡಿಕೊಂಡು, ಆದರೆ ತನ್ನ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡು ತನ್ನ ಕನಸಿನ ಜೆರೊಸೊಲಂ ಯಾತ್ರೆ ವಿಫಲವಾದದ್ದಕ್ಕೆ ಯಾವುದೇ ಹಳಹಳಿಕೆಗಳಿಲ್ಲದೇ ಮರಳಿ ತನ್ನ ಹಳ್ಳಿಗೆ ಪ್ರಯಾಣ ಬೆಳೆಸುತ್ತಾನೆ. ಇನ್ನೊಬ್ಬ ರೈತ ನಂತರ ಜೆರೊಸೊಲಂ ತಲುಪಿ ಏಸುವಿನ ದರ್ಶನಕ್ಕೆಂದು ದಿನಗಟ್ಟಲ್ಲೆ ಸಾಲಿನಲ್ಲಿ ನಿಂತು ಕೊನೆಗೆ ಮಂದಿರದ ಒಳಕ್ಕೆ ತಲಪುತ್ತಾನೆ. ಆದರೆ ಅಲ್ಲಿ ಅವನಿಗೆ ದೊಡ್ಡ ಶಾಕ್ ಕಾದಿರುತ್ತದೆ. ಅಲ್ಲಿ ಅವನು ಏಸುವಿನ ಪ್ರತಿಮೆಯ ಮೊದಲನೇ ಸಾಲಿನಲ್ಲಿ ಅವನ ಜೊತೆಗಾರ ಗೆಳೆಯ ನಿಂತಿರುವುದು ಕಾಣಿಸುತ್ತದೆ! ಈ ರೈತನಿಗೆ ನಂಬಲಿಕ್ಕೆ ಆಗದಷ್ಟು ಧಿಗ್ಭ್ರಮೆ!

ಇಲ್ಲಿ ಟಾಲ್ಸ್‌ಟಾಯ್ ಅತ್ಯಂತ ಮನೋಜ್ಞವಾಗಿ ನಮಗೆ ನಿಸ್ವಾರ್ಥ. ಪ್ರಾಮಾಣಿಕ ಬದುಕಿನ ಸಾರ್ಥಕತೆಯನ್ನು ಮನಗಾಣಿಸುತ್ತಾರೆ. ಬಡ ದಂಪತಿಗಳ ಸೇವೆಯನ್ನು ನಿಸ್ವಾರ್ಥದಿಂದ, ಪ್ರಾಮಾಣಿಕತೆಯಿಂದಮಾಡಿದ ಆ ರೈತನಿಗೆ ಏಸುವು ಆಗಲೇ ತನ್ನ ದರ್ಶನವನ್ನು ಈ ರೀತಿ ನೀಡಿರುತ್ತಾನೆ ಎಂದು ಸಾಂಕೇತಿತಕಾಗಿ ಹೇಳುತ್ತಾರೆ ಟಾಲ್ಸ್‌ಟಾಯ್. ಈ ಮಹಾನ್ ಲೇಖಕನೇ ಅಲ್ಲವೇ ಇಡೀ ಮನುಕುಲಕ್ಕೆ ಕೊಟ್ಟ ಸಂದೇಶ “ಮನುಷ್ಯನಿಗೆ ಎಷ್ಟು ಭೂಮಿ ಬೇಕು?” ಕೇವಲ 6X3 ಜಾಗವಷ್ಟೇ! ಮಿಕ್ಕಿದ್ದೆಲ್ಲ ಕಸಕ್ಕೆ ಸಮ ಎನ್ನುವುದು ತಲೆಮಾರುಗಳಿಂದ ಪ್ರಜ್ಞಾವಂತ, ಸೂಕ್ಷ್ಮ ಪೋಷಕರು ತಮ್ಮ ಮಕ್ಕಳಿಗೆ ಕಲಿಸುತ್ತ ಬಂದಿರುವುದು. ಇದನ್ನು ನಮ್ಮ ಇಂದಿನ ಡಿನೋಟಿಫ಼ೈಯ್ಡ್ ಶೂರರಿಗೆ, 10 ಎಕರೆ, 20 ಎಕರೆ ವೀರರಿಗೆ, ಯಾವುದೇ ನಾಚಿಕೆ, ಆತಂಕ, ಲಜ್ಜೆ, guilt ಇಲ್ಲದೆ ಆತ್ಮವಂಚನೆಯಿಂದ ಪರಧನವನ್ನು ಕಬಳಿಸುತ್ತ ಈ ನಾಡನ್ನು ಧ್ವಂಸಗೊಳಿಸಿದ ಈ ರಾಜಕಾರಣಿಗಳಿಗೆ ಈ ಅಬುವಿನ ಅಂತರಂಗವೂ, ರಾಜೀವನ ತ್ಯಾಗವೂ, ಬಡ ರೈತನ ನಿಸ್ವಾರ್ಥತೆಯೂ ಅರ್ಥವಾಗುವ ದಿನಗಳು ಬಂದಾಗ ಮಾತ್ರ…

(ಚಿತ್ರಕೃಪೆ: ವಿಕಿಪೀಡಿಯ)

ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ?

 ಬಿ.ಶ್ರೀಪಾದ ಭಟ್

ಈ ದೇಶದ ನಾಲ್ಕು ಸ್ತಂಭಗಳೆಂದು ಕರೆಯಿಸಿಕೊಳ್ಳುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳು ಇಂದು ಹಿಂದೆಂದಿಗಿಂತಲೂ ಸುದ್ದಿಯಲ್ಲಿವೆ, ಅದರೆ ಕೆಟ್ಟ ಕಾರಣಗಳಿಗಾಗಿ. ಶಾಸಕಾಂಗ, ಕಾರ್ಯಾಂಗಗಳು ಹಾಗೂ ಅಲ್ಲಿನ ಜನ, ಅಧಿಕಾರಿಗಳು, ರಾಜಕಾರಣಿಗಳು ಒಬ್ಬರಿಗೊಬ್ಬರು ಮಿಲಕಾಯಿಸಿಕೊಂಡು ಭ್ರಷ್ಟಾಚಾರದಲ್ಲಿ, ಜಾತೀಯತೆಯಲ್ಲಿ ಹೊಸ ಹೊಸ ಮೈಲಿಗಲ್ಲುಗಳನ್ನು ನೆಟ್ಟು ಈ ದೇಶವನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿರುವುದು ಸೂರ್ಯ ಸ್ಪಷ್ಟ. ಇವೆರೆಡೂ ರಂಗಗಳು  ಸ್ವಾರ್ಥಕ್ಕಾಗಿ, ಸ್ವಜಾತಿ ಬಂಧುಗಳು, ಸ್ನೇಹಿತರುಗಳ ಭೋಗ ಜೀವನಕ್ಕಾಗಿ ನಡೆಸಿದ ಭ್ರಷ್ಟಾಚಾರದ ಕೃತ್ಯಗಳು ಇಂದು ಜನಸಾಮಾನ್ಯರ ಕಣ್ಣಲ್ಲಿ ತಿರಸ್ಕಾರಕ್ಕೆ, ಅಸಹಾಯಕತೆಗೆ ಕಾರಣವಾಗಿವೆ.

ಇದನ್ನು ಸ್ವಚ್ಚಗೊಳಿಸಲು ಸಲುವಾಗಿ ನ್ಯಾಯಾಂಗ ಇಂದು ತೊಡಗಿಕೊಂಡಿರುವ ರೀತಿ ಭವಿಷ್ಯದ ಬಗ್ಗೆ ಅಶಾವಾದವನ್ನು ಮೂಡಿಸುತ್ತದೆ ಹಾಗೂ ಅದರ ಕ್ರಿಯಾಶೀಲತೆ ಯ ನಡೆಗಳು ನಮ್ಮನ್ನು ಸದಾಕಾಲ ಎಚ್ಚರದಿಂದ ಇರುವಂತೆ ಮಾಡಿವೆ. ಅಲ್ಲದೆ ನಾವೆಲ್ಲ ಕೇವಲ ಮಾತಿನಲ್ಲಿ ಮನೆ ಕಟ್ಟದೆ ಸ್ವಯಂ ಪ್ರೇರಿತರಾಗಿ ಈ ಎರಡೂ ರಂಗಗಳು ತಂದಿಟ್ಟ ಅನಿಷ್ಟ ಪರಂಪರೆಯ ವಿರುದ್ಧ ಹೋರಾಡಲು ನಮಗೆಲ್ಲ ಒಂದು open space ಕಲ್ಪಿಸಿಕೊಟ್ಟಿದೆ. ಇಂತಹ ಪರಿಸ್ಥಿಯಲ್ಲಿ ಪತ್ರಿಕಾರಂಗದ ರೀತಿನೀತಿಗಳು ಕುತೂಹಲಕರವಾಗಿವೆ. ತಾವು ಟೀಕಾತೀತರು ಎನ್ನುವ ಭ್ರಮೆಯಲ್ಲಿಯೇ ವರ್ತಿಸುವ ಇಲ್ಲಿನ ಬಹುಪಾಲು ಮಂದಿ ಪದೇ ಪದೇ ತಮ್ಮ ನೈತಿಕತೆಯ, ಸಂಯಮದ ಲಕ್ಷ್ಮಣರೇಖೆಯನ್ನು ದಾಟುವ ಹುನ್ನಾರಗಳಿಂದಾಗಿ ಇಂದು ಈ ರಂಗದಲ್ಲಿಯೂ ಅನೇಕ ರೀತಿಯ ತಲ್ಲಣಗಳಿಗೆ, ತಿರಸ್ಕಾರಗಳಿಗೆ ಕಾರಣರಾಗಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಖಟ್ಟು ಅವರು ತಮ್ಮದೇ ಆದ ಬೀಸು ಶೈಲಿಯಲ್ಲಿ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ (ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರು ಈ ಬಗ್ಗೆ ಅತ್ಯುತ್ತಮವಾಗಿ ಅತ್ಯಂತ ಮಾರ್ಮಿಕವಾಗಿ ಬರೆದಿದ್ದಾರೆ).

ನಮ್ಮ ರಾಜ್ಯದ ಒಂದು ಉದಾಹರಣೆಯನ್ನೇ ತೆಗೆದುಕೊಂಡರೆ ಇಂದು ಇಲ್ಲಿನ ಬಹುಪಾಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತುಂಬಿಕೊಂಡಿರುವ ಅನೇಕ ಬಲಪಂಥೀಯ ಚಿಂತನೆಯ ಪತ್ರಕರ್ತರು ಪತ್ರಿಕಾ ನೀತಿ ಗಾಳಿಗೆ ತೂರಿ ಈ ಮೂಲಕ ತಮ್ಮದೇ ಆದ ಒಂದು ವಿಷಮಯ ಹಿಡನ್ ಅಜೆಂಡಾವನ್ನು ಹಬ್ಬಿಸುತ್ತಿದ್ದಾರೆ. ಉದಾಹರಣೆಗೆ ವಿಶ್ವೇಶ್ವರ ಭಟ್ ಎನ್ನುವ ಬೆಂಗಳೂರಿನ ಸುತ್ತಮುತ್ತಲು ಜಗತ್ಪ್ರಸಿದ್ದಿ ಪಡೆದ ಪತ್ರಕರ್ತರು. ತಮ್ಮ ಬಹುಪಾಲು ಸಮಾನಮನಸ್ಕ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಬಸ್ ಮಾಲೀಕರ ಒಡೆತನದಲ್ಲಿ ಹೊರ ಬರುತ್ತಿದ್ದ ವಿಜಯ ಕರ್ನಾಟಕ ಎನ್ನುವ ಒಂದು ಅಮಾಯಕ ದಿನಪತ್ರಿಕೆಯನ್ನು ಕಬ್ಜಾ ಮಾಡಿಕೊಂಡು ಕಳೆದ ಏಳೆಂಟು ವರ್ಷಗಳಿಂದ ಅಕ್ಷರದ ಹೆಸರಿನಲ್ಲಿ ನಡೆಸಿದ ಅನೈತಿಕತೆ ನಡತೆಗಳು, ದ್ವೇಷಪೂರಿತ ವರದಿಗಳ ಮೂಲಕ ನಮ್ಮ ರಾಜ್ಯದ ಒಂದು ತಲೆಮಾರಿನ ಚಿಂತನೆಯನ್ನು ಅಲ್ಪ ಸಂಖ್ಯಾತರ ವಿರುದ್ಧ ರೂಪಿಸಿದ ರೀತಿ, ಅದರಿಂದಾದ ಅನಾಹುತಗಳು ಬಣ್ಣನೆಗೂ ನಿಲುಕದಷ್ಟಿವೆ.

ತಮ್ಮ ಕೆಲವು ಹಿಡನ್ ಅಜೆಂಡಗಳ ಮೂಲಕ ಪತ್ರಿಕ ರಂಗಕ್ಕೆ ಪ್ರವೇಶಿಸಿದ ಇವರು ಮಾಡಿದ ಮೊದಲ ಕೆಲಸ ದರ ಸಮರವನ್ನು ಹುಟ್ಟು ಹಾಕಿದ್ದು. ಪತ್ರಿಕೆಯೊಂದು ತಾನು ಮಂಡಿಸುವ ವಿಷಯಗಳೊಂದಿಗೆ ಸಾಧ್ಯವಾದಷ್ಟೂ ಸಮಾಜದಲ್ಲಿ ಗುರುತಿಸಿಕೊಳ್ಳುವ, ಆ ಮೂಲಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ಮೂಲಭೂತ ಸಂಪ್ರದಾಯವನ್ನೇ ಗಾಳಿಗೆ ತೂರಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರವನ್ನು ನಿಗದಿಪಡಿಸಿ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳುವ ಅನೀತಿ ಸಂಪ್ರದಾಯ ಹುಟ್ಟು ಹಾಕಿದರು. ಇದರಿಂದ ಕಳೆದ 60 ವರ್ಷಗಳಿಂದ ತಮ್ಮ ಪತ್ರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಕನ್ನಡದ ಕೆಲವು ಪ್ರಮುಖ ದಿನ ಪತ್ರಿಕೆಗಳು ಆಗ ತತ್ತರಿಸಿದ್ದು ಸರ್ವವಿಧಿತ. ಜಾತೀವಾದಿ, ಕೋಮುವಾದಿ ಚಿಂತನೆಗಳಿಗೆ ಅನುಗುಣವಾಗಿ ಪತ್ರಿಕೆಯನ್ನು ನಡೆಸಿದ ವಿ.ಭಟ್ ರು ನಂತರ ಸಂಘ ಪರಿವಾರದ ಅನೇಕ ಅನಾಹುತ, ಧ್ವಂಸ ಪ್ರವೃತ್ತಿಯ ಅನೀತಿಗಳನ್ನು ಸದರಿ ಪತ್ರಿಕೆಯ ಮೂಲಕ ಇಡೀ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಿದರು. ಇದಕ್ಕಾಗಿ ಇವರು ಬೆಳಸಿದ ನಕಲಿ ಸಿಂಹಗಳು, ಹುಲಿಗಳು ತಮ್ಮ ಬಾಲಿಶತನವನ್ನೇ ಗಂಭೀರ ಚಿಂತನೆಗಳೆಂದು ಬಿಂಬಿಸಿ, ಪ್ರಗತಿಪರ ಹೋರಾಟಗಾರರ ವಿರುದ್ಧ, ಅಲ್ಪ ಸಂಖ್ಯಾತರ ವಿರುದ್ಧದ ಕಪೋಲ ಕಲ್ಪಿತ ಹಸೀ ಸುಳ್ಳುಗಳನ್ನು ವ್ಯವಸ್ಥಿತವಾಗಿ ಸಮಾಜದಲ್ಲಿ ಬಿತ್ತಲೆತ್ನಿಸಿದರು.

ಇವರ ವ್ಯವಸ್ಥಿತ ಪಿತೂರಿ ಅಷ್ಟೊಂದು ತೀವ್ರವಾಗಿದ್ದರೂ ಕೂಡ ( ಸಾಹಿತಿ ಯು.ಅರ್.ಅನಂತ ಮೂರ್ತಿಯವರ ವಿರುದ್ಧ ಇವರ ಅಪ ಪ್ರಚಾರ ಅತ್ಯಂತ ಕೆಳ ಮಟ್ಟಕ್ಕೆ ತಲುಪಿತ್ತು) ನಮ್ಮ ಕನ್ನಡದ ವೈಚಾರಿಕತೆ, ಪ್ರಗತಿಪರತೆಯ ತಳಪಾಯ ಎಷ್ಟು ಗಟ್ಟಿಯಾಗಿದೆಯೆಂದರೆ ಇವೆಲ್ಲವನ್ನೂ ಮೆಟ್ಟಿನಿಂತಿತು.ಆದರೆ ಈ ಕೂಟ ಒಂದು ಯವ ತಲೆಮಾರನ್ನು ದಿಕ್ಕು ತಪ್ಪಿಸಿದ್ದಂತೂ ನಿಜ. ಇದು ನಮ್ಮಲ್ಲೆರ ಕಣ್ಣೆದುರಿಗೇ ಜರುಗಿದ್ದು ಮಾತ್ರ ನಮಗೆಲ್ಲ ಅತ್ಯಂತ ನೋವುಂಟು ಮಾಡುವ ಸಂಗತಿ.

ಪ್ರಜಾವಾಣಿ, ಕನ್ನಡ ಪ್ರಭ ದಂತಹ ಪತ್ರಿಕೆಗಳು, ತಮ್ಮ ಹಿಂದಿನ ಮೂರ್ನಾಲ್ಕು ತಲೆಮಾರಿನಿಂದ ಅತ್ಯಂತ ನ್ಯಾಯದಿಂದ, ಶ್ರಮದಿಂದ ಕಟ್ಟಿ ಬೆಳೆಸಿದ ಪತ್ರಿಕಾ ರಂಗದ ನೀತಿ ಸಂಪ್ರದಾಯಗಳನ್ನು, ಸೂಕ್ಷ್ಮತೆಗಳನ್ನು,ನೈತಿಕತೆಯನ್ನು, ಸಂಪೂರ್ಣವಾಗಿ ಧ್ವಂಸಗೊಳಿಸುವ ತಮ್ಮ ಕುಕೃತ್ಯದ ಎರಡನೇ ಇನ್ನಿಂಗ್ಸ್ ಅನ್ನು ಈ ಸದರಿ ಪತ್ರಕರ್ತರು ಹಾಗೂ ಅವರ ದುಷ್ಟಕೂಟ ಈಗ ಮತ್ತೊಮ್ಮೆ ಕೇರಳದ ಉದ್ಯಮಿಯ ಹಾಗೂ BJP ರಾಜ್ಯಸಭಾ ಸದಸ್ಯರ ಒಡೆತನದ ಪತ್ರಿಕೆಯನ್ನು ಸೇರಿಕೊಂಡು ಆ ಪತ್ರಿಕೆಯನ್ನೂ ಗಬ್ಬೆಬ್ಬಿಸುತ್ತ ಆ ಮೂಲಕ ನಮ್ಮ ನಾಡಿನ ಹೆಮ್ಮೆಯ ಪತ್ರಿಕೋದ್ಯಮದ ನೈತಿಕತೆಯ ಸೂಕ್ಷ್ಮ ಗೆರೆಯನ್ನು ಅಳಸಿಹಾಕಿ ಇಂದು ಇವರು ಅಕ್ಷರ ದೌರ್ಜ್ಯನ್ಯಗಳನ್ನು ಎಸಗುತ್ತಿದ್ದಾರೆ.

ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಯಡಿಯೂರಪ್ಪನವರು ಅತ್ಮಾವಲೋಕನ ಮಾಡಿಕೊಳ್ಳುವ ಅಪೂರ್ವ ಅವಕಾಶಗಳನ್ನೇ ಸ್ವತಃ ಕೈಯಾರೆ ಹಾಳು ಮಾಡಿಕೊಳ್ಳುತ್ತ, ಮತ್ತೆ ಮತ್ತೆ ಅಂಧಾಧುಂದಿ ರಾಜಕಾರಣದ, ಭಸ್ಮಾಸುರ ಕ್ರುತ್ಯಕ್ಕೆ ಕೈ ಹಾಕಿದ್ದಾರೆ. ತಾವೇ ಬೆಳಸಿದ ಈ ಗಣಿ ಚೋರರಾದ ರೆಡ್ಡಿ ಪಡೆಯನ್ನು ಬಳಸಿಕೊಂಡೇ ಕಳೆದ 3 ವರ್ಷ ಅಧಿಕಾರ ನಡೆಸಿದರು. ಇಲ್ಲಿನ ಸಂಪಲ್ಮೂನಗಳನ್ನು ಲೂಟಿ ಮಾಡಿ ಗಳಿಸಿದ ದುಡ್ಡಿನಿಂದ ಚುನಾವಣೆ ಗೆಲ್ಲುತ್ತಾ,ಆ ಮರೀಚಿಕೆಯನ್ನೇ ಜನರ ತೀರ್ಪು ಎಂದು ತಮ್ಮನ್ನು ತಾವೇ ಮೋಸಗೊಳಿಸುತ್ತ, ನಾಡಿನ ಜನತೆಯನ್ನು ಮರುಳುಗೊಳಿಸಿದ್ದೇವೆ ಎನ್ನುವ ಅತಾರ್ಕಿಕ ಭ್ರಮಾ ಲೋಕದಲ್ಲಿದ್ದಾರೆ ಯಡಿಯೂರಪ್ಪ.

3 ವರ್ಷಗಳ ಕಾಲ ತಾವು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲೂ ಅಲ್ಲಿನ “ಗಣ ರಾಜ್ಯ ಬಳ್ಳಾರಿಯ” ಸರ್ವಾಧಿಕಾರಿಗಳಾದ ರೆಡ್ಡಿಗಳ ಅನುಮತಿಯಿಲ್ಲದೆ ತಾವಾಗಲಿ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ ಅಲ್ಲಿ ಕಾಲಿಡಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇತ್ತು. ಈಗ ಇದನ್ನು ತಮ್ಮ ಅಸಹ್ಯಯಕರ, ಅನೀತಿ ರಾಜಕಾರಣದ ಮೂಲಕ ಜನತೆಯನ್ನು ಮತ್ತೊಮ್ಮೆ ದಿಕ್ಕು ತಪ್ಪಿಸಬಹುದೆನ್ನುವ ಭ್ರಮೆಯಲ್ಲಿದ್ದಾರೆ. ಒಬ್ಬ ಯಜಮಾನನ ಅಡಿಯಲ್ಲಿ ನಡೆಯುವ ಅನ್ಯಾಯಗಳು, ಅತ್ಯಾಚಾರಗಳು, ದಬ್ಬಾಳಿಕೆಗಳಿಗೆ ಅದನ್ನು ನಡೆಸುವವರೆಷ್ಟು ಕಾರಣವೋ, ಅವರ ಅಧಿಪತಿಯೆನಿಸಿಕೊಂಡ ಯಜಮಾನ ಕೂಡ ಅಷ್ಟೇ ಜವಾಬ್ದಾರನಾಗುತ್ತಾನೆ ಎನ್ನುವುದು ಈ ನೆಲದ ನ್ಯಾಯ.

ನನ್ನ ಪ್ರಕಾರ ಅವರ ಡಿನೋಟಿಫ಼ಿಕೇಶನ್ ಹಗರಣಗಳಿಗಿಂತಲೂ ಅತ್ಯಂತ ಭ್ರಷ್ಟ ಹಗರಣ ಬಳ್ಳಾರಿಯ ದುರಂತ. ಇದರಿಂದ ಯಡಿಯೂರಪ್ಪನವರು ಎಷ್ಟೇ ತಲೆ ಕಳಗು ಮಾಡಿದರೂ ತಪ್ಪಿಸಿಕೊಳ್ಳಲಾರರು. ಈ ಪತ್ರಕರ್ತರು ಇದನ್ನು ತಮ್ಮೆಲ್ಲ ಜ್ನಾನವನ್ನು, ಅನುಭವವನ್ನು ಬಳಸಿ, ಪ್ರಾಮಾಣಿಕ ರಾಜಕೀಯ ವಿಶ್ಲೇಷಣೆಯ ಮೂಲಕ ಜನತೆಗೆ ವಸ್ತುಸ್ಥಿತಿಯನ್ನು ತೋರಿಸಿಕೊಡಬಹುದಿತ್ತು. ಆದರೆ ಇವರು ಮಾಡಿದ್ದೇನು ? ಇವರದೇ ಬಳಗಕ್ಕೆ ಸೇರಿದ ಟಿವಿ ಛಾನಲ್ ನ -ಸಂಯೋಗದೊಂದಿಗೆ ಈ ದುಷ್ಟಕೂಟ ಪತ್ರಿಕಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಿ ಈ ರಾಜ್ಯದ ನೆಲವನ್ನು ಲೂಟಿ ಮಾಡಿದ ಭ್ರಷ್ಟಚಾರದ ಅಪಾದನೆಗೊಳಗಾಗಿರುವ ಯಡಿಯೂರಪ್ಪನವರನ್ನು ದುರಂತ ವ್ಯಕ್ತಿಯಂತೆ ಏನೋ ಸಣ್ಣ ತಪ್ಪು ಮಾಡಿದ್ದಾರಷ್ಟೇ ಎನ್ನುವಂತೆ ಬಿಂಬಿಸುವುದು, ಸಂತೋಷ ಹೆಗ್ಡೆ ಅವರ ವಿರುದ್ಧ ನಡೆಸುತ್ತಿರುವ ಪ್ರತೀಕಾರದ ಅಪಪ್ರಚಾರ,… ಇದಕ್ಕೆ ಯಡಿಯೂರಪ್ಪನವರನ್ನುdefault ಆಗಿ ಬಳಸಿಕ್ಕೊಳುತ್ತಿರುವ ರೀತಿ ಆ ಮೂಲಕ ರಾಜ್ಯದ ಹೆಮ್ಮೆಯ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ದಿಕ್ಕು ತಪ್ಪಿಸಿ ನಿಶ್ಯಕ್ತಗೊಳಿಸುವುದು, ತಮ್ಮ ದುಷ್ಟ ಕೃತ್ಯಗಳಿಗೆ ತೊಡರುಗಾಲು ಹಾಕಿದವರ ವಿರುದ್ಧ ನಡೆಸುವ ಅಪಪ್ರಚಾರಗಳು ಹಾಗೂ ತಮ್ಮ ಈ ಯಾವುದೇ ಲಂಗು ಲಗಾಮಿಲ್ಲದ ಭ್ರಷ್ಟ ನಡವಳಿಕೆಗಳಿಂದ, ತತ್ವರಹಿತ ಕೆಲಸಗಳಿಂದ ಈ ರಾಜ್ಯದ ಪ್ರಜ್ಞಾವಂತರ conscious ಗೆ ಒಂದು ಸವಾಲನ್ನು ಎಸೆದಿದ್ದಾರೆ.

ಇದನ್ನು ನೋಡಿ ನಾವೆಲ್ಲ ಕಣ್ಣು ಮುಚ್ಚಿಕೊಂಡು ಸುಮ್ಮನೆ ಗೊಣಗುತ್ತಿರುವುದು ನಿಜಕ್ಕೂ ಒಂದು ದುರಂತವೇ ಸರಿ. ಏಕೆ ಇವರಿಗೆಲ್ಲ ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ ?? ನಾವೆಲ್ಲ ಈ ಬಾರಿಯೂ ಜಾಣ ಮೌನವಹಿಸಿದ್ದೇ ಆದರೆ ನಮ್ಮ ಕಣ್ಣೆದುರಿಗೇ ಮತ್ತೊಂದು ತಲೆಮಾರನ್ನು ಕಳೆದುಕೊಳ್ಳಬೇಕಾಗುತ್ತದೆ. ಶಂಕರ್ ಹೇಳಿದಂತೆ ಈಗಾಗಲೇ “ಇಲ್ಲಿ ಅಳುವವರು ಯಾರೂ ಇಲ್ಲ”