Category Archives: ಶ್ರೀಪಾದ್ ಭಟ್

ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…

ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ : ಐಡಿಯಾಲಜಿಯ ವಾಸ್ತವೀಕರಣ, ವಾಸ್ತವದ ಆದರ್ಶೀಕರಣ

– ಬಿ.ಶ್ರೀಪಾದ ಭಟ್

ಇತಿಹಾಸವನ್ನು ತಮ್ಮ ಮತೀಯವಾದಿ ಸಿದ್ಧಾಂತಗಳಿಗೆ ಅನುಗುಣವಾಗಿ ಉತ್ಪಾದಿಸುವುದರಲ್ಲಿ ಸಿದ್ಧಹಸ್ತರಾದ ಸಂಘ ಪರಿವಾರ ಮತ್ತು ಮುಖ್ಯವಾಗಿ ಆರೆಸ್ಸೆಸ್ ಇಂದು ಡಾ.ಬಿ.ಆರ್.ಆಂಬೇಡ್ಕರ್ ಅವರನ್ನು appropriation ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಅಂಬೇಡ್ಕರ್ ’ಘರ್ ವಾಪಸಿ’ ನೀತಿಯನ್ನು ಬೆಂಬಲಿಸಿದ್ದರು ಎನ್ನುವ ಸುಳ್ಳನ್ನು ಉತ್ಪಾದಿಸುತ್ತಿದ್ದಾರೆ. ಗೋಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವ ಸಂಘ ಪರಿವಾರ ಸಾವಿರ Young_Ambedkarಸುಳ್ಳುಗಳನ್ನು ಹೇಳುತ್ತಿದೆ. ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ೨೦೦ ಪುಟಗಳ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ತನ್ನ ಪ್ರಕಾಶನದ ಮೂಲಕ ಹೊರತರಲು ಆರೆಸ್ಸೆಸ್ ನಿರ್ಧರಿಸಿದೆ. ಈ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರು ಇಸ್ಲಾಮಿಕ್ ಅಗ್ರೆಶನ್, ಮತಾಂತರ, ಆರ್ಟಿಕಲ್ ೩೭೦ ಗಳ ಕುರಿತಂತೆ ಸಂಘ ಪರಿವಾರದ ಚಿಂತನೆಗಳನ್ನೆ ಹೊಂದಿದ್ದರು ಎಂದು ವಿವರಿಸಲಾಗಿದೆ. ಅವರೊಬ್ಬ ರಾಷ್ಟ್ರೀಯವಾದಿ ಎಂದೇ ಹೇಳುವ ಸಂಘ ಪರಿವಾರದ ಮುಖವಾಣಿ ’ಆರ್ಗನೈಸರ್‌’ನ ಸಂಪಾದಕ ಪ್ರಫುಲ್ಲ ಕೇಟ್ಕರ್ ’ಪಾಕಿಸ್ತಾನದ ಹೈದರಾಬಾದನಲ್ಲಿ ಪರಿಶಿಷ್ಟ ಜಾತಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿದಾಗ ಅದನ್ನು ಕಟುವಾಗಿ ಟೀಕಿಸಿದ ಅಂಬೇಡ್ಕರ್ ಮತಾಂತರಗೊಂಡ ಹಿಂದೂಗಳು ಮರಳಿ ತಮ್ಮ ಧರ್ಮಕ್ಕೆ ಬಂದರೆ ತಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಈ ಮೂಲಕ ಅವರು ’ಘರ್ ವಾಪಸಿ’ಯನ್ನು ಬೆಂಬಲಿಸಿದರು’ ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ’ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಬೇಕಾಗಿದೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂಬೇಡ್ಕರ್‌ಗೆ ಆದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ’ ಎಂದು ಹೇಳಿದ್ದಾರೆ. narender_modi_rssಮಹಾರಾಷ್ಟ್ರದ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಐಡಿಯಾಲಜಿ ಗೋಳ್ವಲ್ಕರ್, ಸಾವರ್ಕರ್ ಹೆಸರನ್ನು ಸ್ಮರಿಸದೆ ತಾನು ಅಂಬೇಡ್ಕರ್ ಮತ್ತು ಜೋತಿಬಾ ಫುಲೆ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಮುಂದಿನ ಒಂದು ವರ್ಷದ ಕಾಲ ಅಂಬೇಡ್ಕರ್ ಅವರ ಕುರಿತಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಇಡೀ ಸಂಘ ಪರಿವಾರವೇ ಅಂಬೇಡ್ಕರ್ ಮೂಲಕ ತಳ ಸಮುದಾಯಗಳ ಓಟ್ ಬ್ಯಾಂಕ್‌ಗೆ ಲಗ್ಗೆ ಇಟ್ಟಿದೆ ಎನ್ನುವುದು ಮಾತ್ರ ಇವೆಲ್ಲದರ ಒಟ್ಟು ಸಾರಾಂಶ. ಏಕೆಂದರೆ ದಲಿತರ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಸಾಧ್ಯವಿಲ್ಲ ಎಂದು ಈ ಮತೀಯವಾದಿಗಳಿಗೆ ಅರಿವಾಗಿದೆ.

ಸುಮಾರು ೧೩೦ ವರ್ಷಗಳ ಹಿಂದೆ ಆರ್ಯ ಸಮಾಜ ಪ್ರಾರಂಬಿಸಿದ “ಜಾತ್-ಪಾತ್-ತೋಡಕ್ ಮಂಡಲ್” ಎನ್ನುವ ಒಕ್ಕೂಟ ಮೂಲಭೂತವಾಗಿ ಹಿಂದೂ ಧರ್ಮದಲ್ಲಿ ಸುಧಾರಣೆಯನ್ನು ತರಲು ಬಹುಪಾಲು ಬ್ರಾಹ್ಮಣರು ಕಟ್ಟಿಕೊಂಡ ಒಂದು ಸಂಸ್ಥೆ. ಹಿಂದೂ ಧರ್ಮದ ಜಾತಿ ಪದ್ಧತಿಯಲ್ಲಿ ಸುಧಾರಣೆ ಬಯಸುವ ಈ ಮೇಲ್ಜಾತಿಗಳ ಗುಂಪಿನಲ್ಲಿ ಒಬ್ಬ ದಲಿತನೂ ಸದಸ್ಯನಾಗಿರಲಿಲ್ಲ. ೧೯೩೫ರಲ್ಲಿ ತಮ್ಮ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಅಂಬೇಡ್ಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಮೊದಲು ಈ ಆಹ್ವಾನವನ್ನು ತಿರಸ್ಕರಿಸುವ ಅಂಬೇಡ್ಕರ್ ನಂತರ ತಮ್ಮ ಮಾತುಗಳನ್ನು ಸೆನ್ಸಾರ್ ಮಾಡಕೂಡದು ಎನ್ನುವ ಕರಾರಿನೊಂದಿಗೆ ಸಮ್ಮತಿಸುತ್ತಾರೆ. ತಮ್ಮ ಭಾಷಣದ ಸಾವಿರ ಪ್ರತಿಗಳನ್ನು ಮುದ್ರಿಸಿ “Annihilation of Caste” ತಲೆಬರಹದ ಅಡಿಯಲ್ಲಿ ತಮ್ಮ ಭಾಷಣದ ಪ್ರತಿಯನ್ನು “ಜಾತ್-ಪಾತ್-ತೋಡಕ್ ಮಂಡಲ್”ಗೆ ಕಳುಹಿಸಿಕೊಡುತ್ತಾರೆ. ಆದರೆ ತಮ್ಮ ಈ ಲೇಖನಗಳಲ್ಲಿ ಅಂಬೇಡ್ಕರ್ ಅವರು ಮಂಡಲ್‌ನ ಈ ಸುಧಾರಣ ತಂತ್ರವನ್ನು ನಿರಾಕರಿಸಿ ಇಂಡಿಯಾದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ’ಜಾತಿ ವಿನಾಶ’ ಒಂದೇ ಉಳಿದಿರುವ ಮಾರ್ಗ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಮನುನೀತಿಯನ್ನು, ವರ್ಣಾಶ್ರಮ ಪದ್ಧತಿಯನ್ನು, ಬ್ರಾಹ್ಮಣ್ಯದ ಕುಟಿಲತೆಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಮಂಡಲ್‌ನ ನೇತೃತ್ವವನ್ನು ವಹಿಸಿರುವ ಬ್ರಾಹ್ಮಣರಿಂದ ಜಾತಿ ಸುಧಾರಣೆ ಸಾಧ್ಯವೆ ಎಂದು ಪ್ರಶ್ನಿಸುವ ಅಂಬೇಡ್ಕರ್, ಬ್ರಾಹ್ಮಣರ ನಾಯಕತ್ವದಲ್ಲಿ ಜಾತಿ ವಿನಾಶ ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾರೆ. ’ನಿಮ್ಮಲ್ಲಿ ಸುಧಾರಣವಾದಿ ಬ್ರಾಹ್ಮಣರು ಇರಬಹುದು. ಆದರೆ ಇವರೆಲ್ಲ ಸಂಪ್ರದಾಯವಾದಿ ಬ್ರಾಹ್ಮಣರ ವಿರುದ್ಧ ಸಂಘಟನೆ ನಡೆಸುತ್ತಾರೆ ಎನ್ನುವುದನ್ನು ನಾನಂತೂ ನಂಬುವುದಿಲ್ಲ ಮತ್ತು ಇದು ಸಾಧ್ಯವೂ ಇಲ್ಲ’ ಎಂದು ಅಂಬೇಡ್ಕರ್ ಸ್ಪಷ್ಟ ಮಾತುಗಳಲ್ಲಿ ಮಂಡಲ್‌ನ ಒಕ್ಕೂಟವನ್ನು ಉದ್ದೇಶಿಸಿ ಹೇಳುತ್ತಾರೆ. ಅಂಬೇಡ್ಕರ್ ಅವರ ನೇರವಾದ, ಸತ್ಯನಿಷ್ಠ ಮಾತುಗಳಿಂದ ಹಿಂಜರಿದ ಬ್ರಾಹ್ಮಣರ ನೇತೃತ್ವದ ಜಾತ್-ಪಾತ್-ತೋಡಕ್ ಮಂಡಲ್ ಕೊನೆಗೂ ಆ ಸಮ್ಮೇಳವನ್ನು ನಡೆಸುವುದೇ ಇಲ್ಲ. ಅಂಬೇಡ್ಕರ್ ಅವರು ತಮ್ಮ ಭಾಷಣದ ಪ್ರತಿಯನ್ನು “Annihilation of Caste” ಹೆಸರಿನಲ್ಲಿ ಪುಸ್ತಕರೂಪದಲ್ಲಿ ಮುದ್ರಿಸುತ್ತಾರೆ.

ಹಿಂದೂ ಧರ್ಮದಲ್ಲಿನ ಜಾತಿ ವಿನಾಶವು ಅದರ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿರುವ ಮೇಲ್ಜಾತಿಗಳ ಜವಾಬ್ದಾರಿ ಎನ್ನುವುದು ಅಂಬೇಡ್ಕರ್ ಮತ್ತು ಪುಸ್ತಕದ ಒಟ್ಟಾರೆ ಆಶಯವಾಗಿತ್ತು. ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಸುತ್ತಾ ಬಂದಿರುವ ಮೇಲ್ಜಾತಿಗಳು ಸ್ವತಃ ತಾವೇ ಈ ಜಾತಿ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ಅಂಬೇಡ್ಕರ್ ಚಿಂತನೆಗಳು ಆಶಿಸುತ್ತವೆ. ಆದರೆ ೧೯೩೬ರಿಂದ ಇಂದಿನವರೆಗೂ ಜಾತಿ ವಿನಾಶದ ಕುರಿತಾಗಿ ಮೇಲ್ಜಾತಿಗಳಲ್ಲಿ ಯಾವುದೇ ಬಗೆಯ ಹೊಸ ಚಿಂತನೆಗಳು ಕಂಡು ಬರುತ್ತಿಲ್ಲ. ಜಾತಿ ವಿನಾಶಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಮೇಲ್ಜಾತಿಯ ಸಮಾಜ ಸಂಪ್ರದಾಯಸ್ಥರ ಮೂಲಕ ನೇರವಾಗಿ ಮತ್ತು ಸುಧಾರಣವಾದಿಗಳ ಮೂಲಕ ಪರೋಕ್ಷವಾಗಿ ಜಾತಿ ಪದ್ಧತಿಯನ್ನು ಪೋಷಿಸುತ್ತಿದೆ. ಬ್ರಾಹ್ಮಣರಿಂದ ಮೊದಲುಗೊಂಡು ಮುಟ್ಟಿಸಿಕೊಳ್ಳುವ ಎಲ್ಲಾ ಜಾತಿಗಳಲ್ಲಿಯೂ ಬ್ರಾಹ್ಮಣ್ಯದ ಜಾತೀಯತೆ ಮತ್ತು ಸನಾತನವಾದವು ಬೆರೆತು ಹೋಗಿದೆ. ಮೇಲ್ಜಾತಿಯ ಸಂಪ್ರದಾಯನಿಷ್ಠರು ಮತ್ತು ಸುಧಾರಣವಾದಿಗಳು ತಮ್ಮ ಜಾತಿ ಐಡೆಂಟಿಟಿಯನ್ನು ಕಳಚಿಕೊಳ್ಳಲು ವಿಫಲರಾಗಿದ್ದಾರೆ. ಇದು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾದದ್ದು. ಜಾತಿ ಐಡೆಂಟಿಟಿಯಿಂದ ಸಂಪೂರ್ಣವಾಗಿ ಹೊರಬರದೆ, ಜಾತಿ ವಿನಾಶದ ಪರಿಕಲ್ಪನೆಗೆ ಹೆಗಲು ಕೊಡದೆ ಅಂಬೇಡ್ಕರ್ ಲೆಗಸಿಯ ಉತ್ತರದಾಯಿತ್ವವನ್ನು ಹೆಗಲಗೇರಿಸಿಕೊಳ್ಳುವುದು ಕೇವಲ ಆತ್ಮವಂಚನೆ ಎನಿಕೊಳ್ಳುತ್ತದೆ. ಇವರ ಈ ಮರೆ ಮೋಸದ ಫಲವಾಗಿ ತಳ ಸಮುದಾಯಗಳು ಈ ಸುಧಾರಣವಾದಿಗಳಿಂದಲೂ ಮತ್ತಷ್ಟು ಅಂತರ ಕಾಯ್ದುಕೊಳ್ಳುತ್ತಾ ಹೊಸ ಸಾಮಾಜಿಕ-ರಾಜಕೀಯ ಪಲ್ಲಟಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಆದರೆ ಸುಧಾರಣಾವಾದಿಗಳನ್ನು ಹೊರತುಪಡಿಸಿ ಹಿಂದೂ ಧರ್ಮದ ಅಡಿಯಲ್ಲಿ ರಾಜಕೀಯವಾಗಿ ಒಂದಾಗುವ ಈ ಸಂಪ್ರದಾಯನಿಷ್ಠ ಜಾತಿ ಸಮೂಹಗಳು ಇಂದು ಬಿಜೆಪಿ ಮತ್ತು ಆರೆಸ್ಸೆಸ್‌ನ ಶಕ್ತಿಕೇಂದ್ರಗಳಾಗಿವೆ. ಈ ಜಾತಿಸಂಘಟನೆಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಬಿಜೆಪಿ ಪಕ್ಷ ತಳ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆ. ಅದಕ್ಕೆ ಸಂಘ ಪರಿವಾರ ಬಳಸಿಕೊಳ್ಳುತ್ತಿರುವುದು ಅಂಬೇಡ್ಕರ್ ಅವರ ಲೆಗಸಿಯನ್ನು. ಆದರೆ ಅಂಬೇಡ್ಕರ್ ಅವರ ಎಲ್ಲಾ ಹೋರಾಟಗಳು, ಸಂಘಟನೆಗಳು, ಚಿಂತನೆಗಳು ಸಂಪೂರ್ಣವಾಗಿ ಹಿಂದೂ ಧರ್ಮದ ವಿರುದ್ಧವಾಗಿತ್ತು. ಅಂಬೇಡ್ಕರ ಅವರ ಬರಹಗಳು, ಭಾಷಣಗಳಲ್ಲಿ ಇದು ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ.

ಆದರೆ ಮೂವತ್ತು ಮತ್ತು ನಲವತ್ತರ ದಶಕಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಮತ್ತು ಮುಸ್ಲಿಂ ಲೀಗ್‌ನ ಮತೀಯವಾದಿ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದ್ದರು. ೧೯೪೦ರಲ್ಲಿ ಅಂಬೇಡ್ಕರ್ ಅವರು ಬರೆದ “ಪಾಕಿಸ್ತಾನ ಅಥವಾ ವಿಭಜನೆಗೊಂಡ ಇಂಡಿಯಾ” ಪುಸ್ತಕದಲ್ಲಿ ಎಲ್ಲಾ ಮಾದರಿಯ ಮೂಲಭೂತವಾದಿಗಳನ್ನು, ಕೋಮುವಾದಿ ಶಕ್ತಿಗಳನ್ನು ವಿರೋಧಿಸಿದ್ದರು ಮತ್ತು ಕಟುವಾದ ಶಬ್ದಗಳಿಂದ ಟೀಕಿಸಿದ್ದರು. ಆ ಪುಸ್ತಕದಿಂದ ಆಯ್ದ ಭಾಗಗಳು:

“ಒಂದು ವೇಳೆ ಹಿಂದೂ ರಾಜ್ ಎನ್ನುವ ತತ್ವವು ಜಾರಿಗೊಂಡರೆ, ನಿಜಕ್ಕೂ ಅದು ಈ ದೇಶದ ಬಲು ದೊಡ್ಡ ದುರ್ಘಟನೆ ಎಂದೇ ನಾನು ಭಾವಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ. ಇದು ದುರಹಂಕಾರದ ಚಿಂತನೆಗಳು. ಈ ಕುರಿತಾಗಿ ಹಿಂದೂಗಳು ಏನೇ ಹೇಳಿಕೊಂಡರೂ ಸ್ವಾತಂತ್ರ, ಸಮಾನತೆಗೆ ಹಿಂದೂಯಿಸಂ ಒಂದು ವಿಪತ್ತು. ಈ ಹಿನ್ನೆಲೆಯಲ್ಲಿ ಈ ಮಾದರಿಯ ಚಿಂತನೆಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಹತೆ ಇಲ್ಲ. ಹಿಂದೂ ರಾಜ್ ಅನ್ನು ನಾವು ಯಾವುದೇ ಬೆಲೆ ತೆತ್ತಾದರೂ ಸರಿ, ತಡೆಯಬೇಕಾಗಿದೆ.

“ಮೇಲ್ಜಾತಿ ಹಿಂದೂಗಳು ಹಿಂದುತ್ವದ ಹೆಸರಿನಲ್ಲಿ ಸ್ವತಃ ಹಿಂದೂಗಳನ್ನು ನಾಶಮಾಡುವಂತಹ ವಿಶೇಷ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ. ಸಂಪತ್ತು ಮತ್ತು ಶಿಕ್ಷಣದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿದ ಈ ಮೇಲ್ಜಾತಿ ಹಿಂದೂಗಳಿಗೆ ಈ ಏಕಸ್ವಾಮ್ಯತೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ಈ ಸ್ವಾರ್ಥದ ಗುಣದಿಂದಾಗಿ ತಳ ಸಮುದಾಯಗಳಿಗೆ ಶಿಕ್ಷಣ ಮತ್ತು ಆರ್ಥಿಕ ಸುಭದ್ರತೆಯಂದ ವಂಚನೆಗೊಳಿಸಿದರು. ತಳಸಮುದಾಯಗಳೊಂದಿಗೆ ಬೆಳೆಸಿದ ಪ್ರತ್ಯೇಕತೆ ಮತ್ತು ತಾರತಮ್ಯ ತತ್ವವನ್ನು ಈ ಮೇಲ್ಜಾತಿ ಹಿಂದೂಗಳು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸುತ್ತಿದ್ದಾರೆ. ಇವರು ಮುಸ್ಲಿಂರನ್ನು ಸಹ ಶಿಕ್ಷಣ ಮತ್ತು ಸಂಪತ್ತಿನಿಂದ ದೂರವಿಡಲು ಬಯಸುತ್ತಿದ್ದಾರೆ.

“ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ ಸಾವರ್ಕರ್ ಮತ್ತು ಜಿನ್ನಾ ಒಂದು ರಾಷ್ಟ್ರ ವರ್ಸಸ್ ದ್ವಿರಾಷ್ಟ್ರದ ತತ್ವದ ವಿರುದ್ಧ ಪರಸ್ಪರ ವಿರೋಧಿಸುವುದರ ಬದಲು ಇಬ್ಬರೂ ಅದರ ಕುರಿತಾಗಿ ಸಮ್ಮತದಿಂದಿದ್ದಾರೆ. ಅಲ್ಲದೆ ಒಂದು ಮುಸ್ಲಿಂ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡಿದ್ದಾರೆ.

“ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ನೀತಿಯ ಆಧಾರದಲ್ಲಿ ಸಮಾನಮನಸ್ಕ ಸಮ್ಮಿಶ್ರ ರಾಜಕೀಯ ಪಕ್ಷಗಳು ಧೃವೀಕರಣಗೊಳ್ಳಬೇಕಾಗಿದೆ. ಈ ಮೂಲಕ ಈ ಹಿಂದೂ ರಾಜ್ ಮತ್ತು ಮುಸ್ಲಿಂ ರಾಜ್ ತತ್ವಗಳಿಗೆ ಅಂತ್ಯ ಹೇಳಬೇಕಾಗಿದೆ.ಇಂಡಿಯಾದಲ್ಲಿ ತಳ ಸಮುದಾಯಗಳು ಮತ್ತು ಮುಸ್ಲಿಂ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಒಂದೇ ಆಗಿರುವುದರಿಂದ ತಮ್ಮನ್ನು ಶತಮಾನಗಳ ಕಾಲ ಅವಕಾಶವಂಚಿತರಾಗಿ ಮಾಡಿದ ಈ ಮೇಲ್ಜಾತಿ ಹಿಂದೂಗಳ ವಿರುದ್ಧ ಒಂದಾಗಬೇಕಿದೆ.”

ಹಿಂದೂಗಳ ಕುರಿತಾಗಿ ಅಂಬೇಡ್ಕರ್ ಅವರು “Annhilation of CVaste” ಪುಸ್ತಕದಲ್ಲಿ ಬರೆದ ಕೆಲವು ಭಾಗಗಳು:

“ಹಿಂದೂಗಳು ತಮ್ಮನ್ನು ತಾವು ಸಹನಾಶೀಲರೆಂದು ಕೊಚ್ಚಿಕೊಳ್ಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಗ್ರಹಿಕೆ. ಬಹುತೇಕ ಸಂದರ್ಭಗಳಲ್ಲಿ ಅಸಹನೀಯ ಮತ್ತು ಉದ್ರೇಕಿತರಾಗಿ ವರ್ತಿಸುವ ಹಿಂದೂಗಳು ತಾವು ಬಲಹೀನರಾಗಿದ್ದಾಗ ಮಾತ್ರ ಸೈರಣೆಯಿಂದ ವರ್ತಿಸುತ್ತಾರೆ. ಹಿಂದೂಗಳು ಮುಸ್ಲಿಂರು ತಮ್ಮ ಧರ್ಮವನ್ನು ವಿಸ್ತರಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಾರೆ. ಇದಕ್ಕಾಗಿ ಖಡ್ಗವನ್ನು ಬಳಸಿದ್ದಾರೆಂದು ಮುಸ್ಲಿಂರನ್ನು ದೂರುತ್ತಾರೆ. ಇದೇ ಮಾದರಿಯಲ್ಲಿ ಕ್ರಿಶ್ಚಿಯನ್ನರನ್ನು ದೂರುತ್ತಾರೆ. ಹಿಂದೂ ಆದವನು ಬೆಳಕನ್ನು ಕೊಡದಿದ್ದರೆ, ಬೇರೆಯವರನ್ನು ಶಾಶ್ವತವಾಗಿ ಕತ್ತಲಲ್ಲಿಟ್ಟರೆ, ತನ್ನ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಮುಸ್ಲಿಂ ಅವರ ಕುತ್ತಿಗೆಯನ್ನು ಹಿಡಿದಿದ್ದರಲ್ಲಿ ನನಗೆ ತಪ್ಪೇನು ಕಾಣುತ್ತಿಲ್ಲ. ಏಕೆಂದರೆ ಹಿಂದೂವಿನ ಈ ಸಂಕುಚಿತ ಮನೋಭಾವ ಮತ್ತು ಬೌದ್ಧಿಕ ಸರ್ವಾಧಿಕಾರ ಮುಸ್ಲಿಂನ ದಾಳಿಗಿಂತಲೂ ಕ್ರೂರವೆಂದು ನಾನು ನಂಬಿದ್ದೇನೆ.

“ಸಮಾಜ ಶಾಸ್ತ್ರಜ್ಞರು ಹಿಂದೂಗಳನ್ನು ’ಕರುಣೆಯ ಪ್ರಜ್ಞಾರೂಪ’ ಎಂದು ಕರೆಯುತ್ತಾರೆ. ಆದರೆ ಇದನ್ನು ತಿರಸ್ಕರಿಸುತ್ತೇನೆ. ಹಿಂದೂನಲ್ಲಿ ಕರುಣೆಯ ಪ್ರಜ್ಞೆ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲಿರುವುದು ಜಾತಿಯ ಪ್ರಜ್ಞೆ. ಈ ಕಾರಣಕ್ಕಾಗಿಯೇ ಹಿಂದೂಗಳನ್ನು ಸಮಾಜ ಅಥವಾ ದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಸಮಾಜವು ಒಂದು ಮಿಥ್ಯೆ ಎಂದು ನಾನು ಖಚಿತವಾಗಿ ನಂಬಿದ್ದೇನೆ. ಹಿಂದೂ ಎನ್ನುವ ಪದವೇ ವಿದೇಶಿ ಮೂಲದ್ದು. ಸ್ಥಳೀಯರನ್ನು ಗುರುತಿಸಲು ಮುಸ್ಲಿಂರು ಕೊಟ್ಟ ಪದ. ಮುಸ್ಲಿಂ ಸಾಮ್ರಾಜ್ಯಕ್ಕಿಂತಲೂ ಮೊದಲು ಸಂಸ್ಕೃತ ಪಠ್ಯಗಳಲ್ಲಿ ಈ ಪದಬಳಕೆ ಇಲ್ಲ. ಹಿಂದೂ ಸಮಾಜ ಎನ್ನುವುದೇ ಆಸ್ತಿತ್ವದಲ್ಲಿ ಇಲ್ಲ. ಇದು ಜಾತಿಗಳ ಒಂದು ಗುಂಪು ಅಷ್ಟೇ. ಪ್ರತಿಯೊಂದು ಜಾತಿಗೂ ಅದರ ಕುರಿತಾದ ಪ್ರಜ್ಞೆ ಜಾಗೃತವಾಗಿರುತ್ತದೆ.

“ಇಂದು ಧರ್ಮವೆಂದು ಕರೆಯಲ್ಪಡುವ ಹಿಂದೂ ಧರ್ಮ ಕೇವಲ ಪ್ರತಿಬಂಧನೆಗಳ, ನಿಷೇಧಗಳ, ಆಜ್ಞೆಗಳ ಒಂದು ಗೂಡು.”

ಅಂಬೇಡ್ಕರ್ ಅವರು ಬರೆದ “ಹಿಂದೂಯಿಸಂನ ಫಿಲಾಸಫಿ, ಇಂಡಿಯಾ ಮತ್ತು ಕಮ್ಯುನಿಸಂನ ಪೂರ್ವ ಕರಾರುಗಳು. ಕ್ರಾಂತಿ ಮತ್ತು ಪ್ರತಿ ಕ್ರಾಂತಿ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್” ಪುಸ್ತಕದಿಂದ ಆಯ್ದ ಭಾಗಗಳು (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ೩ನೇ ಸಂಪುಟ):

“ಆದರೆ ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹಿಂದೂಗಳು ಬದುಕಿನ ಸುಖ ಮತ್ತು ದುಖಗಳನ್ನು ಹಂಚಿಕೊಳ್ಳಲು ಏಕೆ ನಿರಾಕರಿಸುತ್ತಾರೆ? ಇದಕ್ಕೆ ಉತ್ತರವೂ ಸಹ ಸರಳ ಮತ್ತು ಸ್ಪಷ್ಟ. ಹಿಂದೂಗಳು ಹಂಚಿಕೊಳ್ಳಲು ನಿರಾಕರಿಸುತ್ತಾರೆ ಏಕೆಂದರೆ ಅವರ ಧರ್ಮವು ಹಂಚಿಕೊಳ್ಳಬಾರದೆಂದು ಬೋಧಿಸುತ್ತದೆ. ಹಾಗಿದ್ದರೆ ಹಿಂದೂಯಿಸಂ ಏನನ್ನು ಬೋಧಿಸುತ್ತದೆ? ಅದು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬಾರದು, ಅಂತರ್ಜಾತಿ ವಿವಾಹ ಆಗಬಾರದು, ಗೆಳೆತನ ಬೆಳೆಸಬಾರದು ಇಂತಹ ತತ್ವಗಳನ್ನು ಬೋಧಿಸುತ್ತದೆ. ಭ್ರಾತೃತ್ವದ ನೇರವಾದ ನಿರಾಕರಣೆಯೇ ಹಿಂದೂಯಿಸಂನ ಫಿಲಾಸಫಿ.

“ಸಾಮಾಜಿಕ ನ್ಯಾಯದ ನೆಲೆಯಿಂದ ಹಿಂದೂಯಿಸಂ ಫಿಲಾಸಫಿಯನ್ನು ಅಧ್ಯಯನ ಮಾಡಿದಾಗ ಅದು ಸಮಾನತೆಯ ದ್ವೇಷ, ಸ್ವಾತಂತ್ರದ ಪ್ರತಿರೋಧಿ, ಭ್ರಾತೃತ್ವದ ವಿರೋಧಿ ತತ್ವಗಳನ್ನು ಬೋಧಿಸುತ್ತದೆ.

“ಸಮಾನತೆ ಮತ್ತು ಮಾನವ ಘನತೆಯ ಗೌರವಗಳಿಗೆ ಭ್ರಾತೃತ್ವ ಮತ್ತು ಲಿಬರ್ಟಿ ತತ್ವಗಳು ಅಡಿಪಾಯಗಳು. ಮೂಲ ಬೇರುಗಳು. ಸಮಾನತೆಯನ್ನು ನಿರಾಕರಿಸಿದರೆ ಬಾಕಿ ಎಲ್ಲಾ ತತ್ವಗಳನ್ನೂ ನಿರಾಕರಿಸಿದಂತೆ. ನನಗೆ ಸಂಪೂರ್ಣ ಮನವರಿಕೆ ಆದಂತೆ ಹಿಂದೂಯಿಸಂನಲ್ಲಿ ಸಮಾನತೆ ಇಲ್ಲ.

“ಹಿಂದೂಯಿಸಂನಲ್ಲಿ ಅಸಮಾನತೆ ಎನ್ನುವುದು ಧಾರ್ಮಿಕ ಸಿದ್ಧಾಂತ ಮತ್ತು ಇದನ್ನು ಅತ್ಯಂತ ಪಾವಿತ್ರ ಎಂದು ಬೋಧಿಸಲಾಗುತ್ತದೆ ಮತ್ತು ಪ್ರಜ್ಞಾಪೂರ್ವಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಸಮಾನತೆ ಎನ್ನುವುದು ಹಿಂದೂಗಳ ಜೀವನ ಕ್ರಮ. ಅಸಮಾನತೆ ಹಿಂದೂಯಿಸಂನ ಆತ್ಮ.

“ಜಾತಿ ಎನ್ನುವ ಆದರ್ಶ ಮತ್ತು ಕೇವಲ ಆದರ್ಶ ಮಾತ್ರವಲ್ಲ. ಜಾತಿಯನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜರ್ಮನ್ ಫಿಲಾಸಫರ್ ನೀಟ್ಸೆ ಹೇಳಿದಂತೆ ’ಆದರ್ಶವನ್ನು ವಾಸ್ತವೀಕರಿಸು ಮತ್ತು ವಾಸ್ತವವನ್ನು ಆದರ್ಶೀಕರಿಸು’ ಎನ್ನುವ ನೀತಿಯನ್ನು ಚಾತುವರ್ಣದ ಜಾತಿಪದ್ಧತಿಯಲ್ಲಿ ಹಿಂದೂಗಳು ಶ್ರದ್ಧೆಯಿಂದ ಆದರಿಸುತ್ತಾರೆ ಮತ್ತು ಪಾಲಿಸುತ್ತಾರೆ

“ಆದರೆ ಹಿಂದೂಯಿಸಂನ ಈ ಆದರ್ಶದ ಮೌಲ್ಯವನ್ನು ಅದರ ಪರಿಣಾಮಗಳನ್ನು ವಿಮರ್ಶಿಸುವುದರ ಮೂಲಕ ಪರೀಕ್ಷಿಸಬೇಕು. ಪರಿಶುದ್ಧವಾದ ಸಾಮಾಜಿಕ ಹಿನ್ನೆಲೆಯಲ್ಲಿ ಈ ಚಾತುವರ್ಣ ಜಾತಿಪದ್ಧತಿಯನ್ನು ಖಂಡಿಸಬೇಕು. ಉತ್ಪಾದಕರ ಸಂಸ್ಥೆಯಾಗಿ ಅದರ ನಿಲುವುಗಳ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಬೇಕು. ಈ ಚಾತುವರ್ಣ ಜಾತಿ ಪದ್ಧತಿಯು ಸಮಾನ ಹಂಚಿಕೆ ಎನ್ನುವ ಆದರ್ಶದ ನೆಲೆಯಲ್ಲಿ ಸಂಪೂರ್ಣವಾಗಿ ಸೋತಿದೆ. ಒಂದು ವೇಳೆ ಈ ಹಿಂದೂಯಿಸಂ ಒಂದು ಆದರ್ಶ ಸಂಸ್ಥೆ ಎನ್ನುವುದಾದರೆ ಅದು ಸಾಮಾನ್ಯ ಪ್ಲಾಟ್‌ಫಾಮ್ ಅನ್ನು ಕಟ್ಟಲು ಅಸಮರ್ಥವಾಗಿರುವುದೇಕೆ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಈ ಹಿಂದೂಯಿಸಂ ಉತ್ಪಾದನೆಯ ನೆಲೆಯ ಆದರ್ಶ ಎನ್ನುವುದಾದರೆ ಅದರ ತಂತ್ರಜ್ಞಾನವು ಆದಿಮಾನವನ ಕಾಲದಿಂದ ಯಾತಕ್ಕೆ ಹೊರಬಂದಿಲ್ಲ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಇದು ಹಂಚಿಕೆಯ ನೆಲೆಯಲ್ಲಿ ಆದರ್ಶ ಎನ್ನುವುದಾದರೆ ಅದು ಹೇಗೆ ಸಂಪತ್ತಿನ ಅಸಮಾನ ಕ್ರೋಢೀಕರಣ ಮತ್ತು ಶ್ರೀಮಂತ ಮತ್ತು ಬಡವರ ನಡುವೆ ಅಗಾಧ ಕಂದಕ ಸೃಷ್ಟಿಸಿತು ಎನ್ನುವುದಕ್ಕೆ ಉತ್ತರಿಸಬೇಕು.

“ಜಾತಿ ಪದ್ಧತಿಯ ವ್ಯವಸ್ಥೆಗೆ ಅಪಾರವಾದ ಮೌಲಿಕತೆಯನ್ನು, ಮಹತ್ವವನ್ನು ಪ್ರತಿಪಾದಿಸುವ ಬಹುಪಾಲು ಹಿಂದೂಗಳು ಈ ಜಾತಿ ಪದ್ಧತಿಗೆ ಧಾರ್ಮಿಕ ಚೌಕಟ್ಟನ್ನು ವಿಧಿಸಿದ ಮನುವನ್ನು ಪ್ರಶಂಸಿಸುತ್ತಾರೆ.

“ಸಮಾಜವನ್ನು ತುಂಡು ತುಂಡಾಗಿ ವಿಭಜಿಸುವ, ಕೂಲಿ ಕಾರ್ಮಿಕನಿಂದ ಜ್ಞಾನದ ಕೊಂಡಿಯನ್ನು ಕತ್ತರಿಸಿ ಪ್ರತ್ಯೇಕಿಸುವ ಈ ಹಿಂದೂಯಿಸಂ ಫಿಲಾಸಫಿಯನ್ನು ಸಾಮಾಜಿಕ ಉಪಯುಕ್ತತೆಗೆ ಪೂರಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.ಈ ಹಿಂದೂಯಿಸಂ ಫಿಲಾಸಫಿ ಸಾಮಾಜಿಕ ಉಪಯುಕ್ತತೆಯ ಅಗತ್ಯವನ್ನು ಮತ್ತು ವೈಯಕ್ತಿಕ ನೆಲೆಯ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತಿರಸ್ಕರಿಸುತ್ತದೆ.”

೧೯೩೪ರಲ್ಲಿ ಯೆರವಾಡ ಜೈಲಿನಲ್ಲಿರುವ ಸಂದರ್ಭದಲ್ಲಿ ಗಾಂಧೀಜಿಯವರು ಸುಬ್ರಮಣ್ಯನ್ ಅವರ ದೇವಸ್ಥಾನ ಪ್ರವೇಶ ಮಸೂದೆಗೆ ಬೆಂಬಲ ಸೂಚಿಸುವಂತೆ ಅಂಬೇಡ್ಕರ್ ಅವರನ್ನು ಕೇಳಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೆಲೆಯಲ್ಲಿ ಈ ಕೋರಿಕೆಯನ್ನು ತಿರಸ್ಕರಿಸುವ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಕಾನೂಬಾಹಿರ ಎಂದು ಘೋಷಿಸುವುದನ್ನು ಬಿಟ್ಟು ಕೇವಲ ದೇವಸ್ಥಾನ ಪ್ರವೇಶವನ್ನು ಕೈಗೆತ್ತಿಕೊಂಡಿರುವುದು ಪ್ರಾಯೋಗಿಕವಲ್ಲ ಎಂದು ಟೀಕಿಸುತ್ತಾರೆ. ನಂತರ ಗಾಂಧಿಯವರಿಗೆ ಒಂದು ಪತ್ರವನ್ನು ಸಹ ಬರೆಯುತ್ತಾರೆ. ಅದರ ಒಂದು ಭಾಗ ಹೀಗಿದೆ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಕೆಲಕಾಲದ ಹಿಂದೆ ಇಂಡಿಯಾದಲ್ಲಿ ಯುರೋಪಿಯನ್ನರ ಕ್ಲಬ್‌ಗಳು, ಸಾಮಾಜಿಕ ಮನರಂಜನ ಕೂಟಗಳ ಹೊರ ಬಾಗಿಲಲ್ಲಿ ’ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಫಲಕ ನೇತಾಡುತ್ತಿತ್ತು. ಇಂದಿನ ದಿನಗಳಲ್ಲಿ ಹಿಂದೂ ದೇವಸ್ಥಾನಗಳ ಬಾಗಿಲಲ್ಲಿ ಇದೇ ಮಾದರಿಯ ಫಲಕಗಳು ನೇತಾಡುತ್ತಿರುತ್ತವೆ. ಆದರೆ ಒಂದು ಬದಲಾವಣೆ ಇರುತ್ತದೆ ಮತ್ತು ಆ ಫಲಕ ಹೀಗಿರುತ್ತದೆ: ’ಅಸ್ಪೃಶ್ಯರನ್ನು ಹೊರತುಪಡಿಸಿ ಎಲ್ಲಾ ಹಿಂದೂಗಳು ಮತ್ತು ಪ್ರಾಣಿಗಳಿಗೆ ದೇವಸ್ಥಾನದಲ್ಲಿ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ.’ ಮೇಲಿನ ಎರಡೂ ಉದಾಹರಣೆಗಳಲ್ಲಿ ಸಂದರ್ಭದ ವಿಷಯದಲ್ಲಿ ಸಾಮ್ಯತೆ ಇದೆ. ಆದರೆ ಯುರೋಪಿಯನ್ನರ ಎದುರು ಹಿಂದೂಗಳು ತಮಗೆ ಕ್ಲಬ್‌ಗಳಲ್ಲಿ ಪ್ರವೇಶ ಕೊಡಿರೆಂದು ಬಿಕ್ಷೆ ಬೇಡಿರಲಿಲ್ಲ, ಹಾಗಿದ್ದ ಪಕ್ಷದಲ್ಲಿ ಅಸ್ಪೃಶ್ಯರೇಕೆ ದುರಹಂಕಾರದ ಹಿಂದೂಗಳ ಮುಂದೆ ದೇವಸ್ಥಾನ ಪ್ರವೇಶಕ್ಕೆ ಬಿಕ್ಷೆ ಬೇಡಬೇಕು? ಶಿಕ್ಷಣ, ಉನ್ನತ ಉದ್ಯೋಗ, ಉತ್ತಮ ಬದುಕಿಗಾಗಿ ದಲಿತ ಸಮುದಾಯದ ವ್ಯಕ್ತಿ ಆಶಿಸುತ್ತಾನೆ. ದಲಿತ ವ್ಯಕ್ತಿಯು ಹಿಂದೂಗಳಿಗೆ ನಿಮ್ಮ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಕೊಡುತ್ತೀರೋ, ಇಲ್ಲವೋ ಎನ್ನುವುದು ನಿಮಗೆ ಸಂಬಂಧಪಟ್ಟ ವಿಷಯ. ಇದು ನನಗೆ ಪ್ರತಿಭಟನೆಯ ಸಂಗತಿಯಲ್ಲ. ನಿಮಗೆ ಜ್ಞಾನೋದಯವಾಗಿ ಪ್ರಜ್ಞಾವಂತರಾದರೆ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಅಮಾನವೀಯ ಎಂದು ಮನವರಿಕೆಯಾದಲ್ಲಿ ನಮಗೆ ಪ್ರವೇಶ ಕೊಡಿ. ಆದರೆ ನೀವು ಕೇವಲ ಹಿಂದೂ ಮಾತ್ರ, ಪ್ರಜ್ಞಾವಂತನಲ್ಲ ಎನ್ನುವುದಾದರೆ ನಿಮ್ಮ ದೇವಸ್ಥಾನದ ಬಾಗಿಲುಗಳನ್ನು ಶಾಶ್ವತಾಗಿ ಮುಚ್ಚಿಕೊಳ್ಳಿ. ನಾನು ಇದಕ್ಕೆ ತಲೆ ಕೆಡಿಸಿಕೊಳ್ಳಲಾರೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾನೆ.”

೧೯೩೦ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ಕಲಾರಾಮ್ ದೇವಸ್ಥಾನ ಪ್ರವೇಶದ ಸತ್ಯಾಗ್ರಹಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿರುತ್ತವೆ. ಅದರ ಉದ್ಘಾಟನ ಭಾಷಣ ಮಾಡುವ ಅಂಬೇಡ್ಕರ್ ನಂತರ ಸತ್ಯಾಗ್ರಹವನ್ನು ವಿರೋಧಿಸಿ ಇದಕ್ಕೆ ಸಂಬಂಧಪಟ್ಟಂತೆ ೩ ಮಾರ್ಚ್, ೧೯೩೪ರಂದು ಬಾಬುರಾವ್ ಗಾಯಕವಾಡರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರ ಒಂದು ಭಾಗ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಬರುವ ರಾಮನವಮಿಯ ದಿನದಂದು ನಾಸಿಕ್‌ನ ಕಲರಾಮ ದೇವಸ್ಥಾನ ಪ್ರವೇಶ ಕುರಿತಂತೆ ಸತ್ಯಾಗ್ರಹದ ಕುರಿತಾಗಿ ನೀವು ನನ್ನ ಅಭಿಪ್ರಾಯವನ್ನು ಕೇಳಿದ್ದೀರಿ. ನನ್ನ ಅಭಿಪ್ರಾಯದಲ್ಲಿ ಇದು ಬೇಕೆ, ಬೇಡವೇ, ಸಾಧುವೇ ಎಂದು ಚರ್ಚಿಸುವುದಕ್ಕಿಂತಲೂ ಈ ಸತ್ಯಾಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳಿತು. ಆದರೆ ಈ ಸತ್ಯಾಗ್ರಹದ ನೇತೃತ್ವ ವಹಿಸಿದವನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ಹಿಂಜರಿಕೆಯಿಂದಲೆ ನನ್ನ ಬದಲಾದ ನಿಲುವನ್ನು ಪ್ರಕಟಿಸುತ್ತಿದ್ದೇನೆ. ನಾನು ದೇವಸ್ಥಾನ ಪ್ರವೇಶ ಸತ್ಯಾಗ್ರಹವನ್ನು ಒಪ್ಪಿಕೊಳ್ಳಲಾರೆ. ದಲಿತರು ಮೂರ್ತಿಗಳನ್ನು ಪೂಜಿಸಲಿ ಎನ್ನುವ ಕಾರಣಕ್ಕೋಸ್ಕರ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಿಲ್ಲ ಅಥವಾ ದೇವಸ್ಥಾನ ಪ್ರವೇಶದಿಂದ ದಲಿತರು ಹಿಂದೂ ಸಮಾಜದಲ್ಲಿ ಸಮಾನರಾಗಿ ಬದುಕುತ್ತಾರೆ ಎನ್ನುವ ಕಾರಣದಿಂದಲೂ ಅಲ್ಲ. ಆದರೆ ’ಹಿಂದೂ ಧರ್ಮವು ಸಂಪೂರ್ಣವಾಗಿ ಸುಧಾರಣೆಯಾಗಬೇಕು, ಪ್ರಗತಿಪರವಾಗಬೇಕು. ನಂತರವಷ್ಟೇ ನಾವು ಹಿಂದೂ ಧರ್ಮದ ಭಾಗವಾಗುತ್ತೇವೆ’ ಎಂದು ಹೇಳಿರೆಂದು ತಳಸಮುದಾಯಗಳಿಗೆ ಸೂಚಿಸುತ್ತಿದ್ದೇನೆ. ತಳಸಮುದಾಯಗಳು ಚೈತನ್ಯಶೀಲರಾಗಲಿ ಮತ್ತು ಅವರ ಸ್ಥಾನದ ಕುರಿತಾದ ವಾಸ್ತವ ಪ್ರಜ್ಞೆ ಅವರಲ್ಲಿ ಮೂಡಲಿ ಎನ್ನುವ ಒಂದೇ ಕಾರಣಕ್ಕೆ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೆ. ಈಗ ನನ್ನ ಈ ಉದ್ದೇಶ ಈಡೇರಿದೆ ಎಂದು ನನಗೆ ಮನವರಿಕೆಯಾಗಿದೆ. ಇನ್ನು ದೇವಸ್ಥಾನ ಪ್ರವೇಶದ ಅವಶ್ಯಕತೆ ಇಲ್ಲ. ನಾನು ತಳಸಮುದಾಯಗಳು ಶಿಕ್ಷಣ, ರಾಜಕೀಯ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಆಶಿಸುತ್ತೇನೆ.”

ನ್ಯಾಯವಾದಿ ಸಂಜಯ ಹೆಗ್ಡೆ “ದೇಶವು ಧಾರ್ಮಿಕ ನೆಲೆಯಲ್ಲಿ ವಿಭಜನೆಗೊಂಡ ನಂತರ ತಳ ಸಮುದಾಯಗಳು ಹಿಂದೂಗಳೆಂದು ಪರಿಗಣಿಸಬೇಕೇ ಬೇಡವೇ ಎನ್ನುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿತು. ಬಿ.ಶಾಮಸುಂದರ್ ರಂತಹ ದಲಿತ ನಾಯಕರು ’ನಾವು ಹಿಂದೂಗಳಲ್ಲ, ನಮಗೆ ಹಿಂದುಗಳ ಜಾತಿಪದ್ಧತಿಯೊಂದಿಗೆ ಯಾವ ಸಂಬಂಧವೂ ಇಲ್ಲ, ಆದರೂ ಹಿಂದೂಗಳು ತಮಗಾಗಿ ನಮ್ಮನ್ನು ಅಲ್ಲಿ ಸೇರಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದರು ಎಂದು ಹೇಳುತ್ತಾರೆ.

ಹಿಂದೂ ಎನ್ನುವ ವಿಶಾಲ ವೇದಿಕೆಯಲ್ಲಿ ತಳ ಸಮುದಾಯಗಳನ್ನು ಒಳಗೊಳ್ಳುವುದರ ಮೂಲಕ ಹಿಂದುತ್ವದ ಸಬಲೀಕರಣ ಮತ್ತು ವಿಸ್ತರಣೆ ಆರೆಸ್ಸೆಸ್‌ನ ಮುಖ್ಯ ಉದ್ದೇಶ. ಈಗಾಗಲೇ ಒಡಿಸ್ಸಾ ಮತ್ತು ಛತ್ತೀಸ್‌ಗಡ್ ರಾಜ್ಯಗಳಲ್ಲಿ ಆದಿವಾಸಿ ಸಮುದಾಯಗಳನ್ನು ತನ್ನ ವಿವಿಧ ಸಹಯೋಗಿ ಸಂಘಟನೆಗಳಾದ ’ವನವಾಸಿ ಕಲ್ಯಾಣ ಕೇಂದ್ರ’, ’ಏಕಲವ್ಯ ವಿದ್ಯಾ ಕೇಂದ್ರ’ಗಳ ಮೂಲಕ ತನ್ನೊಳಗೆ ಜೀರ್ಣಿಸಕೊಳ್ಳತೊಡಗಿದೆ. ಇದರ ಫಲವಾಗಿ ಛತ್ತೀಸಘಡ್ ರಾಜ್ಯದಲ್ಲಿ ಸತತವಾಗಿ ಅಧಿಕಾರಕ್ಕೆ ಮರಳಿರುವುದು ಆರೆಸ್ಸೆಸ್‌ಗೆ ಇಂದು ತಳ ಸಮುದಾಯಗಳೊಂದಿಗೆ ಹಿಂದುತ್ವದ ಜೊತೆ ಸಂಧಾನ ನಡೆಸಲು ಹುಮ್ಮಸ್ಸನ್ನು ನೀಡಿದೆ.

ಕೆ.ಎನ್.ಪಣಿಕ್ಕರ್ ಅವರು “ಅಂಬೇಡ್ಕರ್ ನಂತರದ ದಲಿತ ರಾಜಕಾರಣದ ಪ್ರಕ್ರಿಯೆಗಳೆಲ್ಲವೂ ಅಂತಿಮವಾಗಿ ಕೂಡಿದ ಸ್ತರದ ಫಲವಾಗಿ ಇಂದು ಹಿಂದುತ್ವದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ದಲಿತ ರಾಜಕಾರಣದಲ್ಲಿ ಐಡೆಂಟಿಟಿ ರಾಜಕಾರಣ, ಚಳುವಳಿಗಳ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮತ್ತು ಹಿತಾಸಕ್ತಿಗಳ ರಾಜಕಾರಣ ಎಂಬ ನಾಲ್ಕು ಹಂತಗಳನ್ನು ಕಾಂಬ್ಳೆಯವರು ಗುರುತಿಸುತ್ತಾರೆ. ಅಂಬೇಡ್ಕರ್ ನಂತರ ಈ ನಾಲ್ಕೂ ಮುಖಗಳ ನಡುವೆ ಸಮತೋಲನವಿಲ್ಲದಂತಾದ್ದರಿಂದಲೇ ಹಿಂದುತ್ವ ಶಕ್ತಿಗಳು ದಲಿತರನ್ನು ಸಮೀಪಿಸಲು ಸಾಧ್ಯವಾಗಿದೆ. ಗೋಪಾಲ ಗುರು ತಮ್ಮ ಲೇಖನದಲ್ಲಿ ದಲಿತ ರಾಜಕಾರಣದ ಅಂತರಿಕ ಪಲ್ಲಟಗಳು ಮತ್ತು ಆರ್ಥಿಕ ಪೇಚಾಟಗಳಿಂದಾಗಿ ಅದು ಹಿಂದುತ್ವ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ನೈತಿಕ ಬಲವನ್ನು ಕಳೆದುಕೊಂಡಿದೆ ಎಂಬ ಮತ್ತೊಂದು ಪ್ರಮುಖ ಅಂಶವನ್ನು ಮುಂದಿಟ್ಟಿದ್ದಾರೆ. ದಲಿತರ ಸಾಮಾಜಿಕ ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ಸಂಸ್ಕೃತೀಕರಣಗೊಳಿಸುವುದರ ಮೂಲಕ ಸಂಘ-ಪರಿವಾರವು ಅವರ ಸಾಂಸ್ಕೃತಿಕ ಬಯಕೆಯನ್ನು ಹಿಂದುತ್ವ ರಾಜಕಾರಣದ ಬಲಸಂವರ್ಧನೆಗೆ ಬಳಸಿಕೊಳ್ಳುತ್ತಿದೆ. ಹಿಂದುತ್ವದ ಪ್ರಭಾವಿ ಯಜಮಾನ್ಯೀಕರಣಕ್ಕೆ ಒಳಗಾಗುತ್ತಿರುವ ದಲಿತರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆಗೆ ಅಂತಿಮವಾಗಿ ಅವರದಲ್ಲದ, ದಮನಕಾರಿ ಸಾಂಸ್ಕೃತಿಕ ಪರಂಪರೆಗೆ ದಾರಿ ಮಾಡಿಕೊಡುತ್ತಿರುವ ಈ ಪ್ರಕ್ರಿಯೆಯ ಅಂತರಾಳವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎನ್ನಿಸುತ್ತದೆ” ಎಂದು ವಿವರಿಸುತ್ತಾರೆ. (ಹಿಂದುತ್ವ ಮತ್ತು ದಲಿತರು, ಚಿಂತನ ಪ್ರಕಾಶನ)

ಮನುಸ್ಮೃತಿಯನ್ನು ಸುಟ್ಟ ಡಾ.ಅಂಬೇಡ್ಕರ್ ಅವರನ್ನು ಮನುಸ್ಮೃತಿಯನ್ನು ಆರಾಧಿಸುತ್ತಿರುವ ಆರೆಸ್ಸೆಸ್ ತನ್ನ ಐಡಿಯಾಲಜಿಯಲ್ಲಿ ಸೇರಿಸಿಕೊಳ್ಳಲು ಯತ್ನಗಳನ್ನು ನಡೆಸಿದೆ. ಈ ಆತಂಕಕಾರಿ ಪ್ರಕ್ರಿಯನ್ನು ವಿಫಲಗೊಳಿಸಲು ಸಿದ್ಧ ಮಾದರಿಗಳನ್ನು ಹುಡುಕುತ್ತಾ ಹೊರಟರೆ ನಾವು ಪ್ರಾರಂಭಿಸಿದ ಜಾಗಕ್ಕೆ ಮರಳಿ ತಲುಪುತ್ತೇವೆ ಅಷ್ಟೆ.

ಇಂಡಿಯಾದ ರಾಜಕಾರಣ, ರಾಜಕಾರಣಿಗಳು ಮತ್ತು ದಲಿತರು (೧೯೫೬ -೧೯೯೮)

ಮೂಲ : Oliver Mendelsohn & Marika Vicziany
ಅನುವಾದ : ಬಿ.ಶ್ರೀಪಾದ ಭಟ್

ಕಾಂಗ್ರೆಸ್‌ನ ಅಧಿಕಾರದ ಸಂದರ್ಭದಲ್ಲಿನ ದಲಿತ ರಾಜಕಾರಣ

ಸ್ವಾತಂತ್ರ ನಂತರ ಇಲ್ಲಿಯವರೆಗೆ (೧೯೯೮) ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಐದು ಪ್ರಧಾನ ಮಂತ್ರಿಗಳು ಬ್ರಾಹ್ಮಣರಾಗಿದ್ದರು. ಕಾಂಗ್ರೆಸ್ಸೇತರ ಪಕ್ಷಗಳ ಅಧಿಕಾರವಿದ್ದಾಗ ಇಬ್ಬರು ಬ್ರಾಹ್ಮಣ ಮತ್ತು ಇಬ್ಬರು ರಜಪೂತ ಪ್ರಧಾನ ಮಂತ್ರಿಗಳಾಗಿದ್ದರು. ಇಬ್ಬರು ಪ್ರಧಾನ ಮಂತ್ರಿಗಳು ಶೂದ್ರರಾಗಿದ್ದರು.

೧೯೩೦, ೧೯೪೦ರ ದಶಕಗಳಲ್ಲಿ ಆಗಿನ ಕಾಂಗ್ರೆಸ್‌ನೊಂದಿಗೆ ದಲಿತ ಸಮುದಾಯದ ಬಾಂಧವ್ಯ ಸೌಹಾರ್ದಯುತವಾಗೇನು ಇರಲಿಲ್ಲ. ಆದರೆ ಸ್ವಾತಂತ್ರ ನಂತರದ ಭಾರತದಲ್ಲಿ ಅಂದರೆ ೧೯೫೨ರಿಂದ ೧೯೮೯ರವರೆಗೆ ದಲಿತರು ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಗಟ್ಟಿಗೊಳ್ಳತೊಡಗಿತು ಮತ್ತು ೧೯೭೭ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ದಲಿತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದರು. ಆಗ ಅವರ ಕಾಂಗ್ರೆಸ್ ಪರವಾಗಿ ನೀಡಿದ ಮತ ಪಾರ್ಟಿ ಮತ್ತು ಸರ್ಕಾರದ ಪರವಾಗಿ ನೀಡಿದ ಮತವಾಗಿತ್ತು. ಆದರೆ ಒಂದುವೇಳೆ ಕಮ್ಯ್ಠುನಿಷ್ಟರ ಪಶ್ಚಿಮ ಬಂಗಾಲ ಮತ್ತು ಕೇರಳವನ್ನು ಹೊರತುಪಡಸಿ ದೇಶದ ಇನ್ನಿತರ ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಸಿಕೊಂಡಿದ್ದರೆ ದಲಿತರು ಮತ್ತು ಕಾಂಗ್ರಸ್ ಪಕ್ಷದ ನಡುವಣ ಸಂಬಂಧ ಈಗಿನಂತಿರುತಿರಲಿಲ್ಲ ಬದಲಾಗಿ ಕುಂಠಿತಗೊಳ್ಳುತ್ತಿತ್ತು. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸೋಷಿಯಲಿಷ್ಟರು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಮತಗಳನ್ನು ಗಳಿಸಿದ್ದರು. periyar-ambedkarಇಂದಿಗೂ ಇಂಡಿಯಾದ ಬಹುತೇಕ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕಾಂಗ್ರೆಸ್ ಪಕ್ಷದ ಪ್ರಮುಖ ಓಟ್ ಬ್ಯಾಂಕ್ ಆಗಿದ್ದರೂ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರವಿರುವ ರಾಜ್ಯಗಳಲ್ಲಿನ ವಸ್ತುಸ್ತಿತಿ ಬೇರೆಯದೇ ಇದೆ. ಉದಾಹರಣೆಗೆ ಮತ್ತೊಂದು ರಾಜಕೀಯ ಪಕ್ಷ ಅಥವಾ ಕಾಂಗ್ರೆಸ್ ವಿರೋಧಿ ಹೋರಾಟಗಳನ್ನು ನಡೆಸಿದ ಪ್ರಾದೇಶಿಕ ಪಕ್ಷಗಳನ್ನು ಹೊಂದಿದಂತಹ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳನ್ನೇ ಅವಲೋಕಿಸಿದರೆ ಪಶ್ಚಿಮ ಬಂಗಾಳ, ಕೇರಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯವಾಗಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಪ್ಪತ್ತರ ದಶಕದ ನಂತರ ದಲಿತರ ರಾಜಕೀಯ ಐಡೆಂಟಿಟಿ ಜಾತಿಗಳು ಮತ್ತು ವರ್ಗಗಳಾಗಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ನಡುವೆ ಹಂಚಿ ಹೋದರೆ ಕೇರಳದಲ್ಲಿ ಪರಿಶಿಷ್ಟ ಜಾತಿಗಳು ವರ್ಗಗಳಾಗಿ ಕಮ್ಯುನಿಷ್ಟರ ಕೌನ್ಸಿಲ್‌ಗಳಲ್ಲಿ ಪ್ರತಿನಿಧಿಸಿದ್ದು ಕಡಿಮೆಯಾದರೂ ಪಶ್ಚಿಮ ಬಂಗಾಳಕ್ಕಿಂತಲೂ ಹತ್ತು ವರ್ಷಗಳ ಮುಂಚೆಯೇ ಅಧಿಕಾರದ ಮೆಟ್ಟಿಲನ್ನು ತುಳಿದಿದ್ದರು. ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ದಲಿತರು ಆಗಿನ ಆ ಎರಡು ರಾಜ್ಯಗಳಲ್ಲಿ ಬಹುಮತವಿರುವಂತಹ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರೇ ಹೊರತಾಗಿ ರಾಜಕೀಯವಾಗಿ ತಮ್ಮದೇ ಆದ ಹೊಸ ಐಡೆಂಟಿಟಿಗಾಗಿ ಹುಡುಕಾಟ ನಡೆಸಿದ್ದು ಇಲ. ಏಕೆಂದರೆ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಧಿಯೊಳಗಿನ ತಮ್ಮ ಸ್ಥಾನಮಾನಗಳ ಮಿತಿಗಳನ್ನು ಆಧರಿಸಿಯೇ ಐಡೆಂಟಿಯನ್ನು ಕಂಡುಕೊಂಡಿದ್ದರೇ ವಿನಹಃ ಮಾರ್ಕ್ಸಿಸಂ ಕುರಿತಾದ ವ್ಯಾಮೋಹದಿಂದಂತೂ ಖಂಡಿತ ಅಲ್ಲ.

ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿದವು. ತಮಿಳು ನಾಡಿನಲ್ಲಿ ಬ್ರಾಹ್ಮಣ ವಿರೋಧಿ ಚಳುವಳಿಯು ಮೊದಲು ಜಸ್ಟೀಸ್ ಪಾರ್ಟಿ ನಂತರ ದ್ರಾವಿಡ ಮುನ್ನೇತ್ರ ಕಳಗಂದಂತಹ ಪ್ರಾದೇಶಿಕ ಪಕ್ಞಗಳಿಗೆ ಜನ್ಮ ನೀಡಿತು. ಬ್ರಾಹ್ಮಣ ವಿರೋಧಿ ಚಳುವಳಿಯು ಈ ಡಿಎಂಕೆ ಪಕ್ಷದೊಂದಿಗೆ ಬೆರೆತು ಹೋಗಿ ಹೊಸ ಬಗೆಯ ಸಾಂಸ್ಕೃತಿಕ ಹುಟ್ಟಿಗೆ ಕಾರಣವಾಯ್ತು. ನಂತರ ಡಿಎಂಕೆ ಒಡೆದು ಎಐಡಿಎಂಕೆ ಪಕ್ಷವಾಗಿ ಇಬ್ಭಾಗವಾದಾಗಲೂ ಸಹ ಈ ಬ್ರಾಹ್ಮಣ ವಿರೋಧಿ ಚಳುವಳಿ ಸ್ಥಗಿತಗೊಳ್ಳದೆ ಇವೆರೆಡೂ ಪಕ್ಷಗಳ ನಡುವೆ ಹಂಚಿಹೋಯಿತು. ಹೀಗಾಗಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ರಾಜಕೀಯ ವೈರತ್ವವಿದ್ದರೂ ಅವರ ಅಜೆಂಡಗಳು ಮಾತ್ರ ಸಮಾನ ನೆಲೆಯಲ್ಲಿಯೇ ಹುದುಗಿದ್ದವು. ಏಕೆಂದರೆ ೧೯೨೦ರ ದಶಕದಲ್ಲಿಯೇ ಈ ಬ್ರಾಹ್ಮಣ ವಿರೋಧಿ ಚಳುವಳಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ದಲಿತರು ೧೯೬೦ರವರೆಗೂ ತಮ್ಮ ಈ ರಾಜಕೀಯ ನಿಲುವನ್ನು ಬದಲಿಸಿರಲಿಲ್ಲ. ೧೯೬೦ರ ದಶಕದ ನಂತರ ಡಿಎಂಕೆ ಒಂದು ರಾಜಕೀಯ ಪಕ್ಷವಾಗಿ ಚುನಾವಣಾ ಕಣಕ್ಕೆ ಧುಮುಕಿದ ನಂತರವಷ್ಟೇ ಅದರ ಕಡೆಗೆ ವಾಲತೊಡಗಿದರು. ಆದರೂ ಎಂಭತ್ತರ ದಶಕದವರೆಗೂ ರಾಜ್ಯ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಪಕ್ಷಗಳಿಗೂ ಕೇಂದ್ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಓಟ್ ಹಾಕುತಿದ್ದರು. ತೊಂಬತ್ತರ ದಶಕದಲ್ಲಿ ಈ ಸಂಪ್ರದಾಯವನ್ನು ಮುರಿದರು.

ಪಕ್ಕದ ಆಂದ್ರ ಪ್ರದೇಶದಲ್ಲಿ ಎನ್.ಟಿ.ರಾಮರಾವ್ ನೇತೃತ್ವದ ಟಿಡಿಪಿ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಮೂಲಭೂತ ಅಜೆಂಡ ತೆಲುಗು ಜನರ ಆತ್ಮಾಭಿಮಾನದ ಪ್ರಶ್ನೆಯಾಗಿತ್ತು. ಎನ್.ಟಿ.ರಾಮರಾವ್ ಅವರ ಸಿನಿಮಾ ನಟನ ಆಕರ್ಷಣೆ ಮತ್ತು ಜನಪ್ರಿಯತೆಯ ಮೇಲೆಯೇ ಆ ಪಕ್ಷಕ್ಕೆ ದಲಿತರ ಮತಗಳು ದೊರಕಿದ್ದು. ಆದರೆ ಪಕ್ಕದ ತಮಿಳುನಾಡಿಗೆ ಹೋಲಿಸಿದರೆ ಚುನಾವಣಾ ರಾಜಕೀಯದಲ್ಲಿ ಕ್ರಮೇಣ ತೆಲುಗುದೇಶಂ ಪಕ್ಷದ ಪ್ರಭಾವವು ಕುಂಠಿತಗೊಂಡಿದೆ. (ಇದು ೯೦ರ ದಶಕದ ಅವಲೋಕನ : ಅನುವಾದಕ)

ತಳಸಮುದಾಯಗಳ ಪ್ರಾಮುಖ್ಯತೆ ಮತ್ತು ಓಟ್ ಬ್ಯಾಂಕ್ ಸಾಮರ್ಥ್ಯ ಕಾಂಗ್ರೆಸ್‌ನ ಪಕ್ಷದೊಳಗೆ ಮತ್ತು ಮಂತ್ರಿಮಂಡಲದಲ್ಲಿ ದಲಿತ ರಾಜಕಾರಣಿಗಳಿಗೆ ವೈಯುಕ್ತಿಕವಾಗಿ ಪ್ರಭಾವವನ್ನು ಹೆಚ್ಚಿಸಲಿಲ್ಲ ಮತ್ತು ಬಲು ದೊಡ್ಡ ಪರಿವರ್ತನೆಯನ್ನು ತಂದು ಕೊಡಲಿಲ್ಲ. ದಲಿತ ಸಮುದಾಯದ ಸಂಸದರು ಅಥವಾ ಮಂತ್ರಿಗಳ ವೈಯುಕ್ತಿಕ ಸಾಧನೆಗಳು ಮತ್ತು ವರ್ಚಸ್ಸಿಗಿಂತಲೂ ಆ ಪಕ್ಷದಲ್ಲಿ ಓಟ್ ಬ್ಯಾಂಕ್‌ನ ಚುನಾವಣಾ ರಾಜಕೀಯದ ಲೆಕ್ಕಾಚಾರಗಳೇ ಮೇಲುಗೈ ಸಾಧಿಸಿ ದಲಿತ ರಾಜಕಾರಣಿಗಳ ಪ್ರಾಮುಖ್ಯತೆಯೇ ಗೌಣಗೊಂಡಿತು. ಉದಾಹರಣೆಗೆ ಐವತ್ರರ ದಶಕದಲ್ಲಿ ಮೂರು ಬಾರಿ ಸೀಮಿತ ಅವಧಿಗೆ ಬಿಹಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಲಿತ ನಾಯಕ ಭೋಲೆ ಪಾಸ್ವಾನ್ ಶಾಸ್ತ್ರಿ ಅವರು ತಮ್ಮ ಪರಿಶುದ್ಧ ರಾಜಕಾರಣ, ಸರಳತೆ, ಘನತೆವೆತ್ತ ವ್ಯಕ್ತಿತ್ವದಿಂದ ಪಕ್ಷದಲ್ಲಿ ಮತ್ತು ರಾಜ್ಯದಲ್ಲಿ ಮನ್ನಣೆ ಗಳಿಸಿದ್ದರು. ಆದರೆ ರಾಜ್ಯದ ದಲಿತ ರಾಜಕಾರಣದ ಸಂಬಂಧದಲ್ಲಿ ಅವರು ತಳಮಟ್ಟದಲ್ಲಿ, ಪಕ್ಷದ ಕಾರ್ಯಕರ್ತರ ನೆಲೆಯಲ್ಲಿ ಪ್ರಭಾವ ಬೀರಲಿಲ್ಲ. ಅಥವಾ ಪ್ರಭಾವಶಾಲಿಯಾಗಲು ಅವಕಾಶವೇ ಇರಲಿಲ್ಲ. ಇದೇ ರೀತಿ ಇತರೇ ಕೆಲವು ದಲಿತ ಮಂತ್ರಿಗಳು ರಾಜಕೀಯವಾಗಿ ಮುಂಚೂಣಿಗೆ ಬರಲಿಲ್ಲ.

ದಲಿತ ರಾಜಕಾರಣಿಗಳು ತಮ್ಮ ಸಬಲ್ಟ್ರಾನ್ ನೆಲೆಯನ್ನು ಮೀರಿ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ಶ್ರೇಣೀಕೃತ ವ್ಯವಸ್ಥೆಯೊಳಗೆ ಮೇಲ್ಜಾತಿಯವರೊಂದಿಗೆ ಸರಿಸಮನಾಗಿ ಸ್ಪರ್ಧಿಸತೊಡಗಿದಾಗಲೂ ರಾಜಕೀಯವಾಗಿ ಸವರ್ಣೀಯರ ಮತ್ತು ದಲಿತರ ನಡುವಿನ ಕಂದಕವನ್ನು ಮಾತ್ರ ಮುಚ್ಚಲಾಗಲಿಲ್ಲ. ಉನ್ನತ ಸ್ಥಾನಗಳಲ್ಲಿ ಇಂದಿಗೂ ಮೇಲ್ಜಾತಿಗಳ ಪ್ರಮಾಣ, ಪ್ರಭಾವ ಮೇಲುಗೈ ಸಾಧಿಸಿದೆ. ಒಂದು ವೇಳೆ ಪಕ್ಷದ ಚೌಕಟ್ಟಿನೊಳಗೆ ತನ್ನ ಸಮುದಾಯದ ಹಿತಾಸಕ್ತಿಗಳಿಗಾಗಿ, ಅವರ ಒಳಿತಿಗಾಗಿ ವಕಾಲತ್ತು ವಹಿಸುತ್ತ ದಲಿತ ರಾಜಕಾರಣಿ ನಿರಂತರವಾಗಿ ಕಾರ್ಯಪ್ರವೃತ್ತನಾಗಿದ್ದರೆ, ಅವರ ಪರವಾಗಿ ಸದಾ ಧ್ಯಾನಿಸುತ್ತಿದ್ದರೆ ಪಕ್ಷದೊಳಗೆ ಆತನ ರಾಜಕೀಯ ಬೆಳವಣಿಗೆ ಹೆಚ್ಚೂ ಕಡಿಮೆ ಮುಗಿದ ಕಥೆಯಾಗುತಿತ್ತು. ಉದಾಹರಣೆಯಾಗಿ ಯೋಗೇಂದ್ರ ಮಕ್ವಾನ ಅವರ ರಾಜಕೀಯ ಜೀವನವನ್ನೇ ವಿಶ್ಲೇಷಣೆ ಮಾಡಬಹುದು. ಪ್ರತಿಭಾವಂತ ಮತ್ತು ಚೈತನ್ಯಶೀಲ ದಲಿತ ರಾಜಕಾರಣಿಯಾಗಿದ್ದ ಯೋಗೇಂದ್ರ ಮಕ್ವಾನ ಅವರು ತಳಸಮುದಾಯಗಳ ಬದುಕನ್ನು ಕಾಂಗ್ರೆಸ್ ರಾಜಕಾರಣದೊಂದಿಗೆ ಹೇಗೆ ಬೆಸೆಯಬೇಕೆಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ ರಾಜಕೀಯವಾಗಿ ಪ್ರಾಮುಖ್ಯತೆ ದಕ್ಕಲೇ ಇಲ್ಲ. ಆದರೆ ಇವರ ಸಮಕಾಲೀನರಾದ ಬೂಟಾಸಿಂಗ್ ಅವರು a Mazhabi Sikh (converted from a Sweeper caste) ಇದೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಗೃಹಮಂತ್ರಿಗಳಾಗಿ ನಂ ೨ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು. ಬೂಟಾಸಿಂಗ್ ಅವರು ತಳ ಸಮುದಾಯಗಳ ಒಳಿತಿಗಾಗಿ ಒಂದು ಪದವನ್ನೂ ಉದ್ಗರಿಸಲಿಲ್ಲ, ಬದಲಾಗಿ ನೆಹರೂ-ಗಾಂಧಿ ವಂಶಕ್ಕಾಗಿ ತೋರಿದ ಅಚಲ ನಿಷ್ಠೆ ಮತ್ತು ನಿರಂತರ ಭಟ್ಟಂಗಿತನಕ್ಕಾಗಿ ಎಲ್ಲ ಬಗೆಯ ರಾಜಕೀಯ ಸವಲತ್ತುಗಳನ್ನು ಗೃಹ ಮಂತ್ರಿಯಂತಹ ಅತ್ಯನ್ನತ ಸ್ಥಾನವನ್ನು ಸಹ ಅಲಂಕರಿಸಿದರು. ಅಷ್ಟೇಕೆ ಈ ನೆಹರೂ-ಗಾಂಧಿ ವಂಶದವರೂ ಸಹ ರಾಜಕಾರಣಿಯೊಬ್ಬ ವೈಯುಕ್ತಿಕ ವರ್ಚಸ್ಸಿನಿಂದ, ತನ್ನ ಜನಪ್ರಿಯತೆಯ ಆಧಾರದಿಂದ ಪಕ್ಷದೊಳಗೆ ಬೆಳೆಯುತ್ತಿದ್ದರೆ ಆತನ ಭವಿಷ್ಯವನ್ನು ಮೊಟಕುಗೊಳಿಸುವಂತಹ ಷಡ್ಯಂತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಕಾಂಗ್ರಸ್ ಪಕ್ಷದ ಈ ಅನಧಿಕೃತ ಪ್ರಣಾಳಿಕೆಗಳು ಮತ್ತು ಜಮೀನ್ದಾರಿ ಐಡಿಯಾಲಜಿಗಳು ತಳ ಸಮುದಾಯದವರಿಗೆ ಪಕ್ಷದೊಳಗೆ ಅಂತರಿಕವಾಗಿ ಮೇಲ್ಮುಖ ಚಲನೆಗೆ ಇರುವ ವಿವಿದ ಅವಕಾಶಗಳನ್ನು ನಿರಾಕರಿಸಿದ್ದವು. ಇದರಿಂದಾಗಿಯೇ ದಲಿತ ರಾಜಕಾರಣಿಗಳು ಪಕ್ಷದೊಳಗಿನ ಮೇಲ್ಜಾತಿ ರಾಜಕಾರಿಣಿಗಳ ಅಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಅವರ ಪರ ಮತ್ತು ವಿರೋಧದ ಗುಂಪಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಂಡರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ದಲಿತ ರಾಜಕಾರಣಿಯನ್ನಾಗಲಿ, ಗುಂಪನ್ನಾಗಲೀ ಕಾಣಲೇ ಇಲ್ಲ. ಇದನ್ನು ಊಹಿಸಲೂ ಸಾಧ್ಯವಿಲ್ಲ

ಆದರೆ ಜಗಜೀವನ ರಾಂ ಅವರು ಇದಕ್ಕೆ ಅಪವಾದ. ಅವರು ದಲಿತ ನಾಯಕರಾಗಿ ಮತ್ತು ಸಮರ್ಥ ಕೇಂದ್ರ ಮಂತ್ರಿಯಾಗಿ ವೈಯುಕ್ತಿಕ ನೆಲೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ರಕ್ಷಣಾ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ೧೯೭೯ರ ಚರಣಸಿಂಗ್ ಸರ್ಕಾರದಲ್ಲಿ ಉಪಪ್ರಧಾನ ಮಂತ್ರಿಗಳಾಗಿದ್ದರು. ಜಗಜೀವನ್ ರಾಂ ಅವರು ಕಾಂಗ್ರೆಸ್ ಪಕ್ಷದೊಳಗೆ ಸುಮಾರು ಮೂವತ್ತು ವರ್ಷಗಳ ಕಾಲ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕಾರಣಿಗಳಾಗಿದ್ದರು. ಇದಕ್ಕೆ ಅವರ ವೈಯುಕ್ತಿಕ ಪರಿಶ್ರಮ ಮತ್ತು ಪ್ರತಿಭೆಯ ಮತ್ತು ನಿರಂತರ ಜನಸಂಪರ್ಕದ ಚಟುವಟಿಕಗಳು ಒಂದು ಕಾರಣವಾಗಿದ್ದರೆ ಕಾಂಗ್ರೆಸ್‌ನೊಂದಿಗಿನ ಆ ಸುಧೀರ್ಘ ಒಡನಾಟದಲ್ಲಿ ಪಕ್ಷದೊಳಗೆ ಯಾವುದೇ ಬಗೆಯ ಭಿನ್ನಮತೀಯ ರಾಜಕಾರಣಕ್ಕೆ ಕೈ ಹಾಕಲಿಲ್ಲ ಮತ್ತು ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ ಮತ್ತು ಮಹಾತ್ವಾಕಾಂಕ್ಷೆ ರಾಜಕಾರಣಕ್ಕೆ ಕಡಿವಾಣ ಹಾಕಿದ್ದರು ಎನ್ನುವ ಅಂಶಗಳೂ ಸಹ ಪ್ರಮುಖ ಕಾರಣಗಳು. ಇವೆರಡೂ ಗುಣಗಳು ಮತ್ತು ಜಗಜೀವನ್ ರಾಂ ಅವರ ದಕ್ಷ ಮಂತ್ರಿಯಾಗಿ ಅವರ ಸಾಧನೆಗಳು ಕಾಂಗ್ರೆಸ್ ಪಕ್ಷವು ಅವರನ್ನು ತಮ್ಮ ಪಕ್ಷದ ದಲಿತ ಮುಖವಾಡವನ್ನಾಗಿ ಬಿಂಬಿಸಲು ಪ್ರೇರೇಪಿಸಿತ್ತು

ಸ್ವಾತಂತ್ರಪೂರ್ವ ಕಾಲದಲ್ಲಿ ೩೦ರ ದಶಕದಲ್ಲಿ ಜಗಜೀವನ ರಾಂ ಅವರು ಗಾಂಧಿಯವರ ಹರಿಜನ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ೧೯೩೫ರಲ್ಲಿ The All-India Depressed Classes League ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಜಗಜೀವನರಾಂ ಅವರು ೧೯೩೭ರಲ್ಲಿ ಬಿಹಾರ್‌ನ ವಿಧಾನಸಭೆಗೆ ಶಾಸಕರಾಗಿ ಚುನಾಯಿತರಾದರು. ೧೯೪೬ರಲ್ಲಿ Viceroy’s Executive Council ನಲ್ಲಿ ಕಾರ್ಮಿಕ ಮಂತ್ರಿಯಾಗಿದ್ದರು. ಅಂದಿನಿಂದ ೧೯೮೦ರಲ್ಲಿ ಜನತಾ ಪಕ್ಷ ಪತನದವರೆಗೂ ಸುಮಾರು ನಲವತ್ತು ವರ್ಷಗಳ ಕ್ಯಾಬಿನೆಟ್ ಮಂತ್ರಿಯಾಗಿದ್ದರು. ಒಮ್ಮೆ ಮಂತ್ರಿಯಾದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಜೆಂಡಾವನ್ನು ಒಂದು ಅಸ್ಮಿತೆಯನ್ನಾಗಿ, ಒಂದು ಅಗತ್ಯವಾದ ಚರ್ಚೆಯನ್ನಾಗಿ ಜಗಜೀವನರಾಂ ತೀವ್ರವಾಗಿ ಮಾಡಲಿಲ್ಲ. ಇವರ ಈ ಜಾತಿ ಸಂಕೀರ್ಣತೆ ಮತ್ತು ಶೋಷಣೆಯ ಕುರಿತಾಗಿ ತಮ್ಮ ಪುಸ್ತಕ Caste Challenge in India ದಲ್ಲಿ ಹೀಗೆ ಬರೆಯುತ್ತಾರೆ: “Not to hurt any class or caste but to provide a brief historical account of the Hindu social system… and the miserable condition of the Scheduled Castes and Tribes” (Ram 1980: 5-6).

ಬಾಬು ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರವನ್ನು ತಮ್ಮ ಬಳಿ ಕೋಢೀಕರೆಸಿಕೊಂಡಿದ್ದರೆಂಬುದಕ್ಕೆ, ಅವರೊಬ್ಬ ಪ್ರಭಾವಿಶಾಲಿ ರಾಜಕೀಯ ನಾಯಕರಾಗಿದ್ದರೆಂಬುದಕ್ಕೆ ಮಹತ್ವದ ವಿಶ್ಲೇಷಣೆಗಳು ದೊರಕುತ್ತಿಲ್ಲ. ಆದರೆ ನೆಹರೂ ನಂತರದ ವರ್ಷಗಳಲ್ಲಿ ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಸಂಧಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುತ್ತಾರೆ. ೧೯೬೬ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಿದ ಇಂದಿರಾ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಗೊಂಡಾಗ ಇಂದಿರಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಾಬುರವರ ಇಂದಿರಾ ಕಾಂಗ್ರೆಸ್‌ನೊಂದಿಗಿನ ವಿಶ್ವಾಸ ೧೯೭೭ರವೆರೆಗೂ ಮುಂದುವರೆಯುತ್ತದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಬಿಹಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಾಬುರವರು ಸಂಪೂರ್ಣ ಅಧಿಕಾರವನ್ನು ಪಡೆದಿದ್ದರು. ಅವರ ಈ ಅಧಿಕಾರ ಪಕ್ಕದ ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು ಎಂದೇ ವ್ಯಾಖ್ಯಾನಿಸುತ್ತಾರೆ. ಅವರ ಚಮ್ಮಾರ ಸಮುದಾಯವು ಉತ್ತರ ಭಾರತದಲ್ಲಿ ಬಹುಸಂಖ್ಯಾತ ಪರಿಶಿಷ್ಟ ಜಾತಿಗಳಲ್ಲೊಂದಾಗಿತ್ತು. ಇದರ ಫಲವಾಗಿ ಅನೇಕ ಸಂದರ್ಭಗಳಲ್ಲಿ ಉತ್ತರ ಭಾರತದ ಬಹುಪಾಲು ದಲಿತ ಸಂಸದರು ರಾಜಕೀಯವಾಗಿ ಬಾಬುರವರು ಅನುಯಾಯಿಗಳಾಗಿದ್ದರು ಮತ್ತು ಅನೇಕ ಕ್ಲಿಷ್ಟ ಪರಿಸ್ಥತಿಗಳಲ್ಲಿ ಬಾಬುರವರ ಸಮರ್ಥಕರಾಗಿ ಅವರನ್ನು ಬೆಂಬಲಿಸುತ್ತಿದ್ದರು. ಬಾಬು ಜಗಜೀವನ ರಾಂ ಅವರು ತಮ್ಮ ಈ ಪ್ರಭಾವವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದೊಳಗಿನ ಅನೇಕ ಆತಂಕದ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಮತ್ತು ಇಂದಿರಾ ಗಾಂಧಿಯವರನ್ನು ಕೂಡ ಈ ಕ್ಲಿಷ್ಟ ಸಂದರ್ಭಗಳಿಂದ ಹೊರ ಬರಲು ನೆರವಾಗಿದ್ದರು. ರೇಲ್ವೆ ಮಂತ್ರಿಗಳಾಗಿದ್ದಾಗ ರೈಲ್ವೇ ಕಾರ್ಮಿಕರ ಮಟ್ಟದಲ್ಲಿ ದಲಿತರ workforce ಅನ್ನು ಕಟ್ಟಿದ್ದರು. ಇತರೇ ಖಾತೆಗಳ ಮಂತ್ರಿಗಳಾಗಿದ್ದಾಗಲೂ ಮೀಸಲಾತಿ ಕೋಟಾದ ಅಡಿಯಲ್ಲಿ ಬರುವ ಕಾನೂನಿಗೆ ಅನುಗುಣವಾದ ನೇಮಕಾತಿಗಳನ್ನು ನ್ಯಾಯಬದ್ಧವಾದ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ೧೯೭೭ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಒಬ್ಬನೇ ಒಬ್ಬ ದಲಿತ ಸಂಸದ ಕೂಡ ಬಾಬುರವರನ್ನು ಹಿಂಬಾಲಿಸಲಿಲ್ಲ. ನಂತರ ಜನತಾ ಪಕ್ಷವನ್ನು ಸೇರಿಕೊಂಡರು. ಆದರೆ ಮರಳಿ ೧೯೮೦ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಧಿಕ ದಲಿತರ ಮತಗಳನ್ನು ಗಳಿಸುವುದನ್ನು ತಡೆಯುವಲ್ಲಿ ಸೋತರು. ಇದಕ್ಕೆ ಉತ್ತರ ಹುಡುಕುವುದು ಕಷ್ಟ. ಬಹುಶಃ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬಾಬುರವರು ದಲಿತ ಸಂಸದರನ್ನೊಳಗೊಂಡ ತಮ್ಮದೇ ಆದ ಒಂದು ಪ್ರಭಾಶಾಲಿ ತಂಡವನ್ನು ಕಟ್ಟಿಕೊಳ್ಳದೇ ಹೋದದ್ದು ಇದಕ್ಕೆ ಮೂಲಭೂತ ಕಾರಣವಿರಬಹುದು.

ಅಂಬೇಡ್ಕರ್ ನಂತರದ ದಲಿತರು ಮತ್ತು ಅಂಬೇಡ್ಕರ್‌ವಾದ

ಬಹುಜನ ಸಮಾಜ ಪಕ್ಷವು ಇಂಡಿಯಾದಲ್ಲಿ ರಾಜಕೀಯ ಪಕ್ಷವಾಗಿ ಪ್ರವೇಶ ಪಡೆಯುವವರೆಗೂ “ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ” ( ಆರ್‌ಪಿಐ) ಪಕ್ಷವೊಂದೇ ದಲಿತರ ಹಿತಾಸಕ್ತಿಯನ್ನೇ ಪ್ರಮುಖವಾದ ಅಜೆಂಡವಾಗುಳ್ಳ ರಾಜಕೀಯ ಪಕ್ಷವಾಗಿತ್ತು. ಕಾಂಗ್ರೆಸ್ ತೊರೆದ ನಂತರ ಅಂಬೇಡ್ಕರ್ ಅವರು ತಮ್ಮ ಕಡೆಯ ರಾಜಕೀಯ ಚಳುವಳಿಯನ್ನು ರೂಪಿಸಿದ್ದು ಈ ಆರ್‌ಪಿಐ ಪಕ್ಷವನ್ನು ಸ್ಥಾಪಿಸುವುದರ ಮೂಲಕ. ಆದರೆ ಅಂಬೇಡ್ಕರ್ Young_Ambedkarಅವರ ನಿಧನದ ನಂತರವಷ್ಟೇ ಈ ಆರ್‌ಪಿಐ ಪಕ್ಷದ ಗಮನಾರ್ಹ ಬೆಳವಣಿಗೆಯನ್ನು ಸಾಧಿಸತೊಡಗಿತು. “ಪರಿಶಿಷ್ಟ ಜಾತಿಗಳ ಒಕ್ಕೂಟ”ವೇ ರೂಪಾಂತರಗೊಂಡು “ಆರ್‌ಪಿಐ” ಪಕ್ಷವಾಗಿ ಹುಟ್ಟು ಪಡೆಯಿತು. ಆದರೆ ತನ್ನ ಪ್ರಾರಂಭದ ದಿನಗಳಿಂದಲೆ ಆರ್‌ಪಿಐ ಪಕ್ಷವು ಐಡಿಯಾಲಜಿ, ಭಿನ್ನಮತೀಯತೆಗಳಂತಹ ಆರ್ಗನೈಸೇಷನ್ ಬಿಕ್ಕಟ್ಟಿಗೆ ತುತ್ತಾಯಿತು. ಬಹುಪಾಲು ಮಹರ್ ಸಮುದಾಯಕ್ಕೆ ಸೇರಿದ ವಿಶಾಲ ವ್ಯಾಪ್ತಿಯ ಆರ್ಥಿಕ ಮತ್ತು ವರ್ಗ ಸಂಘರ್ಷವನ್ನು ಆಧರಿಸಿ ಸಂಘಟನೆ ಕಟ್ಟಲು ಮುಂದಾಗಿದ್ದ ಹಳ್ಳಿಗಳಲ್ಲಿ ವಾಸಿಸುವ ಹಳೆ ತಲೆಮಾರಿನ ಕಾರ್ಯಕರ್ತರಿಗೂ ಮತ್ತು ಹಳ್ಳಿಗಳನ್ನು ತೊರೆದು ನಗರ ಕೇಂದ್ರಿತ ದಲಿತ ಚಳುವಳಿಯನ್ನು ಕಟ್ಟಲು ಉತ್ಸುಕರಾದಂತಹ ಶಿಕ್ಷಿತ ಹೊಸ ತಲೆಮಾರಿನ ಕಾರ್ಯಕರ್ತರ ನಡುವೆಯೂ ಮೊದಲ ಒಡಕು ಉಂಟಾಯಿತು. ೧೯೫೯ರ ವೇಳೆಗೆ ಆರ್‌ಪಿಐ ಪಕ್ಷವು ಇಬ್ಭಾಗವಾಗಿ ಎರಡು ವಿಭಿನ್ನ ಬಣಗಳು ದಲಿತ ಸಮಾವೇಶಗಳನ್ನು ಹಮ್ಮಿಕೊಂಡವು. ಆರ್‌ಪಿಐ ಪಕ್ಷದ ಈ ಒಡಕಿನಿಂದಾಗಿ ೧೯೬೨ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕೀಕರಣಗೊಂಡ ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಯಿತು. ನಂತರದ ವರ್ಷಗಳಲ್ಲಿ ಬೆರೆಳೆಣಿಕೆಯಷ್ಟು ವಿಧಾನಸಭೆ ಸ್ಥಾನಗಳನ್ನು ಗೆಲ್ಲುವಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಂತರ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ, ಹರ್‍ಯಾಣ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ಸಂಘಟಿಸಿತು. ಉತ್ತರ ಪ್ರದೇಶದಲ್ಲಿ ಚಮ್ಮಾರ್ ಸಮುದಾಯಕ್ಕೆ ಸೇರಿದ ಬೌದ್ಧ ಮತದ ಅನುಯಾಯಿ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ಸಂಘಟಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಲಿತರ ಮತ್ತು ಮುಸ್ಲಿಂ ಮತಗಳನ್ನು ಆರ್‌ಪಿಐ ಪಕ್ಷದ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ೧೯೬೯ರ ಕಾಂಗ್ರಸ್ ಪಕ್ಷದ ವಿಭಜನೆ ರಾಜಕೀಯ ಲೆಕ್ಕಚಾರಗಳನ್ನೇ ಬುಡಮೇಲು ಮಾಡಿತು. ೧೯೭೧ರ ವೇಳೆಗೆ ಆರ್‌ಪಿಐ ಪಕ್ಷದಲ್ಲಿ ತನ್ನ ಎದುರಾಳಿಯಾಗಿದ್ದ ರಾಮಜಿ ರಾಮ್ ಅವರೊಂದಿಗೆ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರಸ್ ಪಕ್ಷಕ್ಕೆ ಸೇರಿಕೊಂಡು ಮರಳಿ ಕಾಂಗ್ರೆಸ್ ಪಕ್ಷದಡಿಯಲ್ಲಿ ಲೋಕಸಬೆಗೆ ಆಯ್ಕೆಗೊಂಡರು.ಅಲ್ಲಿಗೆ ಉತ್ತರ ಪ್ರದೇಶದಲ್ಲಿ ಆರ್‌ಪಿಐ ಪಕ್ಷದ ರಾಜಕೀಯ ಆಸ್ತಿತ್ವ ಹೆಚ್ಚೂ ಕಡಿಮೆ ಅಂತ್ಯಗೊಂಡಿತು.

RPI ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ್ ಪ್ಯಾಂಥರ್‍ಸನ ಸ್ಪೂರ್ತಿಯಿಂದಾಗಿ ೧೯೭೦ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್‍ಸ ಸಂಘಟನೆ ಹುಟ್ಟಿಕೊಂಡಿತು.ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ.ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಈ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್‍ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು. ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವನಿರ್ಮಾಣದ ಜೆ.ಪಿ. ಚಳುವಳಿಯೊಂದಿಗೂ ಗುರುತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ ಸಂಘಟನೆಯನ್ನೂ ಬಿಡಲಿಲ್ಲ. ರಾಜಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು.ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು ೧೯೭೭ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಆದರೆ ೭೦ರ ದಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಪೂರ್ತಿಯಿಂದ ೭೦ ಹಾಗು ೮೦ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು.ಹೊಸ ಚಿಂತನೆಯನ್ನೇ ರೂಪಿಸಿದರು. ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು.

ಈ ದಲಿತ ಸಾಹಿತ್ಯ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಕರ್ನಾಟಕದಲ್ಲಿಯೂ ದಲಿತ ಲೇಖಕರ ಒಕ್ಕೂಟ ಸಂಘಟಿತಗೊಳ್ಳತೊಡಗಿತು. ಅದೇ ಸಂದರ್ಭದಲ್ಲಿ ೧೯೭೪ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ ತಳಸಮುದಾಯಗಳ ನೋವಿಗೆ, ಬಡತನಕ್ಕೆ ಸ್ಪಂದಿಸಲಾರದ ಸಾಹಿತ್ಯಕ್ಕೆ ಅರ್ಥವೇ ಇಲ್ಲ, ಈ ಹಿನ್ನೆಲೆಯಲ್ಲಿ ಒಂದು ವೇಳೆ ಕನ್ನಡದಲ್ಲಿ ಸಾಹಿತ್ಯ ರಚನೆಗೊಂಡಿದ್ದರೆ ಆಗ ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಎಂದು ಟೀಕಿಸಿದರು. ಆಗ ಕರ್ನಾಟಕದಲ್ಲಿ ಬಲು ದೊಡ್ಡ ವಿವಾದವೇ ಸೃಷ್ಟಿಯಾಯಿತು. ದಲಿತ ಲೇಖಕರು ಮತ್ತು ಇತರೇ ಪ್ರಗತಿಪರ ಚಿಂತಕರು ಬಸವಲಿಂಗಪ್ಪನವರನ್ನು ಸಂಪೂರ್ಣವಾಗಿ ಬೆಂಬಲಿಸಿದರು. ೧೯೭೪ರಲ್ಲಿ ದಲಿತ ಲೇಖಕರ ಸಮ್ಮೇಳನ ನಡೆಯಿತು. ಮುಂದಿನ ವರ್ಷಗಳಲ್ಲಿ ಲೇಖಕ ಇಂದೂಧರ ಹೊನ್ನಾಪುರ ಸಂಪಾದಕತ್ವದಲ್ಲಿ “ಸುದ್ದಿ ಸಂಗಾತಿ” ಪತ್ರಿಕೆ ಪ್ರಕಟಣೆಗೊಳ್ಳತೊಡಗಿತು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಗುಂಪುಗಳು ಮತ್ತು ಸಂಘಟಣೆಗಳೆಲ್ಲ ಒಗ್ಗೂಡಿ “ದಲಿತ ಸಂಘರ್ಷ ಸಮಿತಿ” ಎನ್ನುವ ಪ್ರಗತಿಪರ ಸಂಘಟನೆಯನ್ನು ಕಟ್ಟಿದರು. ನಂತರ ೨೦ ವರ್ಷಗಳ ಕಾಲ ೮೦ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ತೊಂಬತ್ತರ ದಶಕದ ವೇಳೆಗೆ ಸಾವಿರಾರು ದಲಿತ ಕಾರ್ಯಕರ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕನಾಟಕದ ದಲಿತ ಚಳುವಳಿ ನಗರಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿತ್ತು. ಗ್ರಾಮಗಳಲ್ಲಿನ ದಲಿತರು ಹೆಚ್ಚಾಗಿ ದಲಿತ ಸಂಘರ್ಷ ಸಮಿತಿಯ ಮೂವ್‌ಮೆಂಟನಲ್ಲಿ ಒಳಗೊಳ್ಳಲಿಲ್ಲ. ಅವರ ಪಾಲ್ಗೊಳ್ಳುವಿಕೆ ಸೀಮಿತವಾಗಿತ್ತು. ಆದರೆ ಬಿಹಾರ್ ರಾಜ್ಯದಲ್ಲಿ ಮಾರ್ಕ್ಸಿಸಂನಿಂದ ಪ್ರೇರಣೆ ಪಡೆದ ದಲಿತ ಸಂಘಟನೆಗಳು ಗ್ರಾಮಗಳಲ್ಲಿ ಪ್ರಭಾವಶಾಲಿಯಾಗಿದ್ದವು. ಅಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ದಲಿತ ಸಂಘಟನೆಗಳು ಮಾರ್ಕ್ಸಿಸಂ ಅನ್ನು ತಮ್ಮ ಚಳುವಳಿಗೆ ಸ್ಪೂರ್ತಿಯಾಗಲಿಲ್ಲವೆಂದರ್ಥವಲ್ಲ ಅಥವಾ ಅಂಬೇಡ್ಕರ್‌ವಾದ ಕೇವಲ ನಗರಕ್ಕೆ ಸೀಮಿತವಾಗಿತ್ತು ಎನ್ನುವುದೂ ಸತ್ಯವಲ್ಲ. ಏಕೆಂದರೆ ಕಾನ್ಸೀರಾಂ ಅವರು ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಅವರ ತತ್ವಗಳನ್ನು, ಚಿಂತನೆಗಳನ್ನು ಬಳಸಿಕೊಂಡು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದರು.

ಚುನಾವಣಾ ರಾಜಕೀಯದ ಹಿನ್ನೆಲೆಯಲ್ಲಿ ಉತ್ತರ ಭಾರತ ಮತ್ತು ಪಶ್ಚಿಮ ಭಾರತಗಳಲ್ಲಿ ಅಂಬೇಡ್ಕರ್‌ವಾದದ ಚಳುವಳಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದಿದ್ದರೂ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಹೊಸ ತಲೆಮಾರಿನ ದಲಿತರು ಅಂಬೇಡ್ಕರ್‌ವಾದದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ( ೯೦ರ ದಶಕ) ಅಂಬೇಡ್ಕರ್ ಅವರು ಬರೆದ ಪುಸ್ತಕ “Riddles in Hinduism” ಅತಿ ಹೆಚ್ಚು ಮುದ್ರಣಗಳನ್ನು ಮತ್ತು ಮರುಮುದ್ರಣಗಳನ್ನು ಕಂಡಿತು. ಇದನ್ನು ಸರ್ಕಾರವೇ ದಲಿತ ಚಿಂತಕರ ನೇತೃತ್ವದಲ್ಲಿ ಪ್ರಕಟಿಸಿದರು. ಅಂಬೇಡ್ಕರ್ ಅವರ ಕಾಲಘಟ್ಟದಲ್ಲಿ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಇದು ತುಂಬಾ inflammatory ಎಂದೇ ವಿವಾದಕ್ಕೀಡಾಗಿತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಅಂಬೇಡ್ಕರ್ legacy ಯ ಕೇಂದ್ರ ಸ್ಥಾನಗಳಾಗಿವೆ. ಅಂಬೇಡ್ಕರ್ ಅವರ ಮೂರ್ತಿಗಳು ದೇಶಾದ್ಯಾಂತ ಸ್ಥಾಪಿತಗೊಂಡಿವೆ. ಅಂಬೇಡ್ಕರ್‌ವಾದ ಇಂದು (೯೦ರ ದಶಕ) ತಳಸಮುದಾಯಗಳ ನಾಯಕರಿಗೆ, ಚಿಂತಕರಿಗೆ ತಮ್ಮನ್ನು ತಮ್ಮ ಸಮುದಾಯಗಳ ಹಕ್ಕದಾರರು ಮತ್ತು ನೇತಾರರನ್ನಾಗಿ ಬಿಂಬಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಂಬೇಡ್ಕರ್‌ವಾದದ ಈ ಹೊಸ ಹುಟ್ಟು ಮತ್ತು ಯಶಸ್ವೀ ಸಂಘಟನೆಯ ತೀವ್ರತೆಯಲ್ಲಿ ನಿಜಕ್ಕೂ ಘಾಸಿಗೊಂಡಿದ್ದು ಗಾಂಧಿ. ಒಂದು ಕಾಲದಲ್ಲಿ ಹರಿಜನರ ನೇತಾರ ಎಂದು ಕರೆಯಲ್ಪಡುತ್ತಿದ್ದ ಗಾಂಧೀಜಿಗೆ ಇಂದಿನ ಸಬಲ್ಟ್ರಾನ್ ನೆಲೆಯಲ್ಲಿ ಒಂದಿಂಚೂ ಜಾಗವಿಲ್ಲ.

ಕಾನ್ಸೀರಾಂ : BAMCEF ನಿಂದ ಬಹುಜನ ಸಮಾಜ್ ಪಾರ್ಟಿಯವರೆಗೆ

೧೯೩೪ರಲ್ಲಿ ಪಂಜಾಬಿ ಚಮಾರ್ ಸಮುದಾಯದಲ್ಲಿ ಜನಿಸಿದ ಕಾನ್ಸೀರಾಂ ಅವರು ತಮ್ಮ ಬಾಲ್ಯದ ವರ್ಷಗಳಲ್ಲಿ ಅಸ್ಪೃಶ್ಯತೆಯ ದೌರ್ಜ್ಯನ್ಯವನ್ನು ಹೆಚ್ಚಾಗಿ ಎದುರಿಸಲಿಲ್ಲ. ಅವರ ತಾರುಣ್ಯದ ದಿನಗಳಲ್ಲಿಯೂ ಅಸಮಾನತೆ ಮತ್ತು ತಾರತಮ್ಯ ಅವರ ಪಂಜಾಬಿನ ವ್ಯವಸ್ಥೆಯಲ್ಲಿ ತೀವ್ರವಾಗಿ ಭಾದಿಸುತ್ತಿರಲಿಲ್ಲ. ಬಿಎಸ್.ಸಿ ಪದವಿಯನ್ನು ಮುಗಿಸಿದ ನಂತರ ಸರ್ವೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಕಾನ್ಸೀರಾಂ ನಂತರ ಡಿಫೆನ್ಸ್ ಇಲಾಖೆಯ ಪ್ರೊಡಕ್ಷನ್ ವಿಭಾಗದಲ್ಲಿ ವರ್ಗಾವಣೆಗೊಂಡರು. ನೇರವಾಗಿ ಅಸ್ಪೃಶ್ಯತೆಯ ದೌರ್ಜ್ಯನ್ಯಕ್ಕೆ ಒಳಗಾಗದಿದ್ದರೂ ೧೯೬೫ರಲ್ಲಿ ಅಂಬೇಡ್ಕರ್ ಜನ್ಮದಿನದಂದು ಅಂಗೀಕಾರವಾಗಿದ್ದ ಸರ್ಕಾರಿ ರಜವನ್ನು ರದ್ದು ಮಾಡುವ ಆದೇಶದ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾಗ maya[1]ಈ ಹೋರಾಟಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಿದ್ದ ಕಾನ್ಸೀರಾಂ ಮೊಟ್ಟ ಮೊದಲ ಬಾರಿಗೆ ಪರಿಶಿಷ್ಟ ಜಾತಿಗಳ ಶೋಷಣೆಯ ಅನುಭವಕ್ಕೆ ಒಳಗಾದರು. ನಂತರ ಅಂಬೇಡ್ಕರ್ ಅವರ “Annihilation of Caste” ಪುಸ್ತಕವನ್ನು ಓದಿದಾಗ ಅವರಿಗೆ ಇಂಡಿಯಾದ ಜಾತಿಪದ್ಧತಿಯ ಕ್ರೂರತೆ ಆಳವಾಗಿ ಕಲುಕಿತು. ಈ ಪುಸ್ತಕವನ್ನು ಒಂದು ರಾತ್ರಿಯಲ್ಲಿ ಮೂರು ಬಾರಿ ಓದಿದ ಕಾನ್ಸೀರಾಂ ನಂತರ ಮೂರು ದಿನಗಳ ಕಾಲ ನಿದ್ರಿಸಲಿಲ್ಲ. ಅಂಬೇಡ್ಕರ್ ಅವರ ರಾಜಕೀಯ ಆಕ್ಟಿವಿಸಂಗೆ ಕಾಲಿಟ್ಟ ಕಾನ್ಸೀರಾಂ ಅವರಿಗೆ ಬುದ್ಧಿಸಂ ಕಡೆಗೆ ಆಕರ್ಷಿತರಾಗಲಿಲ್ಲ. ಆದರೆ ಆರಂಭದಲ್ಲಿ ಕಾನ್ಸೀರಾಂ ಅವರೊಂದಿಗೆ ಕೈಜೋಡಿಸಿದ್ದು ಮಹರ್ ಜಾತಿಗೆ ಸೇರಿದ ನಂತರ ಬೌದ್ಧ ಮತಕ್ಕೆ ಮತಾಂತರಗೊಂಡ ಡಿ.ಕೆ.ಖಾರ್ಪಡೆ ಅವರು. ಇವರಿಬ್ಬರೂ ಮೇಲ್ಜಾತಿ ಅಧಿಕಾರಿಗಳು ಪರಿಶಿಷ್ಟ ಜಾತಿಯ ನೌಕರರ ಮೇಲೆ ಕೆಲಸದ ವೇಳೆಯಲ್ಲಿ ನಡೆಸುವ ಶೋಷಣೆಗಳ ವಿರುದ್ಧ ದಲಿತ ಮತ್ತು ಹಿಂದುಳಿದ ಜಾತಿಯ ನೌಕರರ ಸಂಘಟನೆಗೆ ಮುಂದಾದರು. ೧೯೭೧ರ ವರೆಗೂ ಸರ್ಕಾರಿ ಸೇವೆಯಲ್ಲಿ ಮುಂದುವರೆದ ಕಾನ್ಸೀರಾಂ ಅವರು ಪರಿಶಿಷ್ಟ ಸಮುದಾಯದಕ್ಕೆ ಸೇರಿದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿದರು. ಈ ಪ್ರತಿಭಟನೆ ಮುಂದುವರೆದು ಕಾನ್ಸೀರಾಂ ಅವರು ಸೀನಿಯರ್ ಅಧಿಕಾರಿಯೊಬ್ಬರಿಗೆ ಕೆನ್ನೆಗೆ ಬಾರಿಸುವವರೆಗೂ ಮುಂದುವರೆಯಿತು. ನಂತರ ಶಿಸ್ತು ಸಮಿತಿಯ ಸಭೆಗಳಿಗೂ ಹಾಜರಾಗದೆ ಪ್ರತಿಭಟಿಸಿದ ಕಾನ್ಸೀರಾಂ ತಮ್ಮ ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ಸಂಪೂರ್ಣ ಹೋರಾಟದ ಹಾದಿಗೆ ಧುಮುಕಿದರು.

೧೯೭೧ರಲ್ಲಿ ಕಾನ್ಸೀರಾಂ ಮತ್ತು ಅವರ ಸಂಗಡಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟವನ್ನು ಹುಟ್ಟುಹಾಕಿದರು. ಈ ಫೆಡರೇಶನ್ ಅನ್ನು ಪೂನಾ ಚಾರಿಟಿ ಕಮಿಷನರ್ ಅಡಿಯಲ್ಲಿ ನೊಂದಾಯಿಸಿದರು. ಇದು ಸ್ಥಾಪಿತಗೊಂಡ ಒಂದು ವರ್ಷದೊಳಗೆ ಒಂದು ಸಾವಿರ ಸದಸ್ಯರು ಈ ಒಕ್ಕೂಟಕ್ಕೆ ನೊಂದಾಯಿತರಾದರು. ಬಹುಪಾಲು ಸದಸ್ಯರು ಡಿಫೆನ್ಸ್, ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ ನೌಕರರು. ಈ ಒಕ್ಕೂಟದ ಮೊದಲ ವಾರ್ಷಿಕ ಸಮಾವೇಶವನ್ನು ಅಂದಿನ ಡಿಫೆನ್ಸ್ ಮಂತ್ರಿಗಳಾಗಿದ್ದ ಜಗಜೀವನ ರಾಮ್ ಅವರು ಉದ್ಘಾಟಿಸಿ ಮಾತನಾಡಿದರು.

೧೯೭೩ ರಲ್ಲಿ ಕಾನ್ಸೀರಾಂ ಮತ್ತು ಸಂಗಡಿಗರು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಫೆಡರೇಶನ್ (BAMCEF) ಸ್ಥಾಪಿಸಿದರು. ಇದರ ಮುಖ್ಯ ಕಛೇರಿಯನ್ನು ದೆಹಲಿಯಲ್ಲಿ ತೆರೆಯಲಾಯಿತು. ೧೯೭೮ರಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ ೬ರಂದು ಸುಮಾರು ೨೦೦೦ ಸದಸ್ಯರ ದೆಹಲಿಯ ಬೋಟ್ ಕ್ಲಬ್‌ನಲ್ಲಿ ಬೃಹತ್ ಸಮಾವೇಶವನ್ನು ಸಂಘಟಿಸಲಾಯಿತು. ಇದರ ಅಜೆಂಡಾಗಳು ಮತ್ತು ಪ್ರಣಾಳಿಕೆಗಳು ಮಾತೃ ಸಂಸ್ಥೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ಸ್ವರೂಪದಲ್ಲಿ ಇದ್ದರೂ ಇದರ rhetoric ತೀವ್ರವಾಗಿತ್ತು. ಇವರ ಹೋರಾಟ ಕೇವಲ ಮೇಲ್ಜಾತಿ ಶೋಷಕರ ವಿರುದ್ಧ ಮಾತ್ರವಲ್ಲದೆ ದೌರ್ಜ್ಯನ್ಯ ನಡೆಸುವ ದಲಿತ ಅಧಿಕಾರಿಗಳ ವಿರುದ್ಧವೂ ಕೇಂದ್ರಿತವಾಗಿತ್ತು.

ಎಪ್ಪತ್ತರ ದಶಕದ ಮಧ್ಯದ ವೇಳೆಗೆ ಕಾನ್ಸೀರಾಂ ಮತ್ತು ಅವರ ಸಂಘಟನೆಗಳು ಮತ್ತು ಚಳುವಳಿಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ರರ ಪ್ರದೇಶ, ಪಂಜಾಬ್, ಹರ್‍ಯಾಣ, ದೆಹಲಿಯವರೆಗೂ ವ್ಯಾಪಿಸಿತ್ತು. ಆಗಿನ ದಿನಗಳಲ್ಲಿ ಕಾನ್ಸೀರಾಂ ಅವರು ಪೂನಾ ಮತ್ತು ದೆಹಲಿಯ ನಡುವೆ ರೈಲ್ವೆ ಮಾರ್ಗದಲ್ಲಿ ನಿರಂತರವಾಗಿ ಪಯಣಿಸುತ್ತಿದ್ದರು. ತಮ್ಮ ಬಿಎಸ್‌ಪಿ ಪಕ್ಷದ ಪರವಾಗಿ ಒಲವಿರುವಂತಹ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಳ್ಳಲು ತಮ್ಮ ಈ ಪಯಣದ ಮಧ್ಯೆ ಬರುವಂತಹ ನಾಗಪುರ್, ಜಬಲ್‌ಪುರ್, ಭೂಪಾಲ್ ನಗರಗಳಲ್ಲಿ ಇಳಿದು ಅಂತಹ ಉತ್ಸಾಹಿ ಯುವಕರನ್ನು ಬೇಟಿ ಮಾಡುತ್ತಿದ್ದರು. ನಂತರ ತಮ್ಮ ವಾಸ್ತವ್ಯವನ್ನು ದೆಹಲಿಗೆ ಬದಲಾಯಿಸಿದ ನಂತರ ಮಧ್ಯಪ್ರದೇಶ, ಪಂಜಾಬ್, ಹರ್‍ಯಾಣ, ಉತ್ತರ ಪ್ರದೇಶಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸಲು ಕಾರ್ಯತಂತ್ರಗಳಲನ್ನು ರೂಪಿಸಿದರು. ತಮ್ಮ ಈ ಸಂಘಟನೆ ಮತ್ತು ಚಳುವಳಿಗಳ ಜೊತೆಜೊತೆಗೆ ಅಂಬೇಡ್ಕರ್ ಅವರ ವಿಚಾರಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಎಂಬತ್ತರ ದಶಕದಲ್ಲಿ ’Ambedkar Mela on Wheels’ ಎನ್ನುವ ಜಾಥಾವನ್ನು ಪ್ರಾರಂಬಿಸಿದರು. ಈ ಜಾಥಾದಲ್ಲಿ ಅಂಬೇಡ್ಕರ್ ಅವರ ಜೀವನ, ಚಿಂತನೆಗಳು, ಲೇಖನಗಳನ್ನು ದೃಶ್ಯರೂಪದಲ್ಲಿ, ಭಾಷಣಗಳ ರೂಪದಲ್ಲಿ ನಿರಂತರವಾಗಿ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಅವರು ತಳಸಮುದಾಯಗಳ ಪರವಾಗಿ ಹೇಗೆ ನಿರಂತರ ಹೋರಾಡುತ್ತಿದ್ದರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ತಮ್ಮೊಂದಿಗೆ ಕೈಜೋಡಿಸಿದರೆ ಮುಂದೊಂದು ದಿನ ಆಳುವವರಾಗಿ ರೂಪಿಸುತ್ತೇನೆ ಎಂದು ಉತ್ಸಾಹ ತುಂಬುತ್ತಿದ್ದರು.

ಮಹತ್ವಾಕಾಂಕ್ಷಿಯಾಗಿದ್ದ ಕಾನ್ಸೀರಾಮ್ BAMCEF ಫೆಡರೇಶನ್‌ನ ಕೇವಲ ಸರ್ಕಾರಿ ನೌಕರರ ಸಂಘಟನೆಯನ್ನು ಮೀರಿ ಹೊಸ ರಾಜಕೀಯ ಅವಕಾಶಗಳನ್ನು ತೆರೆಯಲು ಉತ್ಸುಕರಾಗಿದ್ದರು. ಇದರ ಮೊದಲ ಹೆಜ್ಜೆಯಾಗಿ ೧೯೮೧ರಲ್ಲಿ “ಶೋಷಿತ ಸಮಾಜ ಸಂಘರ್ಷ ಸಮಿತಿ” (DS-4) ಯನ್ನು ಸ್ಥಾಪಿಸಿದರು. ಈ ಸಂಘಟನೆಯನ್ನು BAMCEF ನ ರಾಜಕೀಯ ಘಟಕವೆಂದು ಘೋಷಿಲಾಯಿತು. ಆದರೆ ಸರ್ಕಾರಿ ನೌಕರರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಈ “ಶೋಷಿತ ಸಮಾಜ ಸಂಘರ್ಷ ಸಮಿತಿ”ಯು ಸಂಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಹೀಗಾಗಿ BAMCEF ನ ಸದಸ್ಯರು ಶೋಷಿತ ಸಮಾಜ ಸಂಘರ್ಷ ಸಮಿತಿಯೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸತೊಡಗಿದರು. ಕಡೆಗೆ ಇದರ ಇಬ್ಭಾಗ ಅನಿವಾರ್ಯವಾಯ್ತು. ಆದರೆ ಕಾನ್ಸೀರಾಮ್ ಅವರು ರಾಜಕೀಯವೇ ತಮ್ಮ ಮುಂದಿನ ಗುರಿ ಎಂದು ನಿರ್ಧರಿಸಿಬಿಟ್ಟಿದ್ದರು. ೧೯೮೬ರ ವೇಳೆಗೆ ಬಹುಜನ ಸಮಾಜ ಪಕ್ಷಕ್ಕಾಗಿ ತನ್ನ ಜೀವನವನ್ನು ಮೀಸಲಿಡುತ್ತೇನೆ ಎಂದು ಘೋಷಿಸಿದರು. ಸಮಾಜ ಕಾರ್ಯಕರ್ತನ ಹೊಣೆಯಿಂದ ರಾಜಕಾರಣಿಯಾಗಿ ತಮ್ಮ ಕ್ಷೇತ್ರವನ್ನೇ ಬದಲಾಯಿಸಿಕೊಂಡರು. ಅತ್ಯತ್ತಮ ಸಂಘಟಕ ಮತ್ತು ಪರಿಣಿತ ರಾಜಕಾರಣಿಯಾಗಿದ್ದ ಕಾನ್ಸೀರಾಮ್ ಬುದ್ಧಿಜೀವಿಯಾಗಿರಲಿಲ್ಲ, ಆಕರ್ಷಕ ಮಾತುಗಾರರಾಗಿರಲಿಲ್ಲ. ೧೯೯೩ರ ಚುನಾವಣೆಯ ವೇಳೆಗೆ ಉತ್ತರ ಪ್ರದೇಶದಲ್ಲಿ “ಬ್ರಾಹ್ಮಿನ್, ಬನಿಯಾ, ಠಾಕೂರ್ ಚೊರ್, ಬಾಕಿ ಸಬ್ DS-4”, “ತಿಲಕ್, ತರಾಜು, ತಲ್ವಾರ್ ಮಾರೋ ಉನ್ಕೋ ಜೂತೆ ಚಾರ್” ಎನ್ನವ ಘೋಷಣೆಗಳು ಜನಪ್ರಿಯವಾಗಿದ್ದವು. ಇದನ್ನು ತಾವು ಹುಟ್ಟು ಹಾಕಿದ್ದಲ್ಲವೆಂದು ಕಾನ್ಸೀರಾಮ್ ಮತ್ತು ಮಾಯಾವತಿ ನಿರಾಕರಿಸಿದ್ದರೂ ಸಹ ಈ ಸ್ಲೋಗನ್‌ಗಳು ಬಿಎಸ್‌ಪಿ ಪಕ್ಷದ ಅತ್ಯಂತ ಜನಪ್ರಿಯ ಘೋಷಣೆಗಳಾಗಿದ್ದವು. ಆ ಪಕ್ಷದ ಐಡಿಯಾಲಜಿಯನ್ನೇ ಬಿಂಬಿಸುವಂತೆ ಈ ಸ್ಲೋಗನ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದವು.

ಕಾನ್ಸೀರಾಮ್ ಅವರಿಗೆ ಸಮಾಜ ಸುಧಾರಣೆಯಲ್ಲಿ ನಂಬಿಕೆ ಇರಲಿಲ್ಲ. ರಾಜಕೀಯ ಅಧಿಕಾರವನ್ನು ಪಡೆದರೆ ಈ ಎಲ್ಲ ಸುಧಾರಣೆಗಳು ತಂತಾನೆ ಜಾರಿಗೊಳ್ಳುತ್ತವೆ ಎಂದು ಬಲವಾಗಿ ನಂಬಿದ್ದರು. ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ಭಿಕ್ಷೆ ಎಂದೇ ಟೀಕಿಸುತ್ತಿದ್ದ ಕಾನ್ಸೀರಾಮ್ ಒಮ್ಮೆ ಬಹುಜನ್ ಸಮಾಜ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಲಾಗುತ್ತದೆ ಮತ್ತು ಬ್ರಾಹ್ಮಣರಿಗೆ ಮೀಸಲಾತಿಯನ್ನು ನೀಡುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ ಎಂದು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

೧೯೮೫ರ ಉಪಚುನಾವಣೆಯಲ್ಲಿ ಉತ್ತರಪ್ರದೇಶದ ಬಿಜಿನಾರ್ ಲೋಕಸಭಾ ಕ್ಷೇತ್ರದಿಂದ ಚಮ್ಮಾರ್ ಸಮುದಾಯಕ್ಕೆ ಸೇರಿದ ಬಿ.ಎ.ಎಲ್.ಎಲ್.ಎಲ್.ಬಿ ವ್ಯಾಸಂಗ ಮಾಡಿದ ಯುವ ಮಹಿಳೆಯನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು. ಆಕೆಯ ಹೆಸರು ಮಾಯಾವತಿ. ೨೫ರ ಹರೆಯದ ಮಾಯಾವತಿಯ ವಿರುದ್ಧ ಕಣದಲ್ಲಿದ್ದವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಕಾಂಗ್ರೆಸ್ ಪಕ್ಷದಿಂದ ಜಗಜೀವನ್ ರಾಂ ಅವರ ಪುತ್ರಿ ಮೀರಾ ಕುಮಾರ್. ಆಗ ರಾಜೀವ್ ಗಾಂಧಿಯ ಜನಪ್ರಿಯತೆಯ ಅಲೆಯಲ್ಲಿ ಮೀರಾ ಕುಮಾರ್ ಆಯ್ಕೆಯಾದರು. ೧೯೮೫ ರಿಂದ ೧೯೯೧ರ ಕಾಲಘಟ್ಟ ಬಹುಜನ್ ಸಮಾಜ ಪಕ್ಷದ ಅತ್ಯಂತ ನಿರ್ಣಾಯಕ ಘಟ್ಟವಾಗಿತ್ತು. ರಾಜೀವ್ ಗಾಂಧಿಯ ಜನಪ್ರಿಯತೆ ಕ್ರಮೇಣ ಕುಸಿಯಲಾರಂಬಿಸಿದಂತೆ ಅದರ ಪ್ರಯೋಜನ ಪಡೆದುಕೊಂಡ ಕಾನ್ಸೀರಾಮ್ ಅಭೂತಪೂರ್ವವಾಗಿ ಪಕ್ಷವನ್ನು ಸಂಘಟಿಸಿದರು. ಅವರೊಂದಿಗೆ ಅಲಿಘರ್ ಯೂನಿವರ್ಸಿಟಿಯ ಲೆಕ್ಚರರ್ ಡಾ. ಮಸೂದ್ ಅಹ್ಮದ್‌ರಂತಹ ಪರಿಣಿತ ನಾಯಕರಿದ್ದರು. ೧೯೮೯-೧೯೯೧ ರ ಚುನಾವಣೆಗಳಲ್ಲಿ ಬಹುಜನ ಸಮಾಜದ ಮತಗಳಿಕೆಯ ಸರಾಸರಿ ಶೇಕಡ ೯.೪ರಷ್ಟಿತ್ತು. ಆದರೆ ೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷವು ೪೨೫ ಸೀಟುಗಳ ಪೈಕಿ ಕೇವಲ ೧೪ ಸೀಟುಗಳಲ್ಲಿ ಮಾತ್ರ ಜಯ ಗಳಿಸಿತ್ತು, ೧೯೯೧ರಲ್ಲಿ ಕೇವಲ ೧೧ ಸೀಟುಗಳನ್ನು ಗಳಿಸುವಲ್ಲಿ ತೃಪ್ತಿ ಹೊಂದಬೇಕಾಯಿತು. ಅಂದರೆ ಮತಗಳಿಕೆಯ ಸರಾಸರಿ ಪ್ರಮಾಣ ಅಧಿಕವಾಗಿದ್ದರೂ ಅದಕ್ಕೆ ಪೂರಕವಾಗಿ ಕ್ಷೇತ್ರಗಳನ್ನು ಗೆಲ್ಲಲು ಬಿಎಸ್‌ಪಿ ವಿಫಲವಾಯಿತು. ಅತ್ಯತ್ತಮ ಮಟ್ಟದ ಸಂಘಟನೆಯನ್ನು ಕಟ್ಟಿದ್ದರೂ ದಲಿತರ ಸಂಪೂರ್ಣ ಮತಗಳನ್ನು ಕೂಡಿ ಹಾಕಲು ಬಿಎಸ್ಪಿ ಪಕ್ಷ ವಿಫಲಗೊಂಡಿತ್ತು. ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಚಮ್ಮಾರ್ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿದ್ದರು. ಇದಕ್ಕೆ ಮಯಾವತಿಯವರ ದುರ್ಬಲ ಸಂಘಟನೆಯೇ ಕಾರಣವೆಂದು ಆಗ ದೂರಲಾಗಿತ್ತು.

೧೯೯೨ರ ಬಾಬ್ರಿ ಮಸೀದಿಯ ಧ್ವಂಸದಿಂದ ಉಂಟಾದ ರಾಜಕೀಯ ಅನಿಶ್ಚಿತಿಯ ಸಂದರ್ಭದಲ್ಲಿ ಬಿಎಸ್ಪಿ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಶೇಕಡಾ ೧೧ರಷ್ಟು ಪ್ರಮಾಣದಲ್ಲಿ ಮತಗಳಿಸಿದ ಬಿಎಸ್‌ಪಿ ೬೭ ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಶೇಕಡಾ ೨೫.೮೩ರಷ್ಟು ಪ್ರಮಾಣದಲ್ಲಿ ಮತ ಗಳಿಸಿದ ಸಮಾಜವಾದಿ ಪಕ್ಷವು ೧೦೯ ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಪಕ್ಷವು ೧೭೭ ಸೀಟುಗಳಲ್ಲಿ (ಶೇಕಡಾ ೩೩.೩ ಪ್ರಮಾಣ) ಗೆಲುವನ್ನು ಪಡೆದುಕೊಂಡಿತ್ತು. ಬಾಬರಿ ಮಸೀದಿಯ ಧ್ವಂಸದ ಅಪಖ್ಯಾತಿಯನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿತ್ತು. ಸಮಾಜವಾದಿ ಮತ್ತು ಬಿಎಸ್‌ಪಿಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಲಾಯಂ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇವರಿಬ್ಬರ ಮೈತ್ರಿ ಬಹಳ ವರ್ಷಗಳ ಕಾಲ ನಿಲ್ಲಲಿಲ್ಲ. ೧೯೯೫ರ ವೇಳೆಗೆ ಈ ಸಮ್ಮಿಶ್ರ ಸರ್ಕಾರ ತನ್ನ ಬಹುಮತ ಕಳೆದುಕೊಂಡಿತು.

ಒಂದು ಕಾಲದಲ್ಲಿ ಮನುವಾದಿಗಳೆಂದು ಜರಿದಿದ್ದ ಬಿಜೆಪಿಯೊಂದಿಗೆ ಕೈಜೋಡಿಸಿದ ಕಾನ್ಸೀರಾಮ್ ೧೯೯೫ರ ಎಪ್ರಿಲ್‌ನಲ್ಲಿ ಬಿಎಸ್‌ಪಿ ಮತ್ತು ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮಾಯಾವತಿ ಪ್ರಥಮ ದಲಿತ ಮಹಿಳಾ ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಅಕ್ಟೋಬರ್ ೧೯೯೫ರ ವೇಳೆಗೆ ಬಿಜೆಪಿ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಮಾಯಾವತಿ ನೇತೃತ್ವದ ಸರ್ಕಾರ ಆರು ತಿಂಗಳ ನಂತರ ಅಧಿಕಾರ ಕಳದುಕೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಗೊಳಿಸಲಾಯಿತು.

ಕಡೆಗೆ ಬಿಎಎಸ್‌ಪಿ ಪಕ್ಷದ ಆತುರದ ನಡೆಗಳು, ಆತ್ಮಹತ್ಯಾತ್ಮಕ ಮತ್ತು ವಿವೇಚನಾ ಶೂನ್ಯ ನಡೆಗಳು ಆ ಪಕ್ಷವು ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು. ಉದಾಹರಣೆಗೆ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೇ ಬಂಡವಾಳ ಮಾಡಿಕೊಂಡು ಗಾಂಧಿಯನ್ನು ಮನುವಾದಿ ಎಂದು ಹೀಯಾಳಿಸತೊಡಗಿದ್ದು ಬಿಎಸ್‌ಪಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ದೊಡ್ಡ ಮಿತಿಯನ್ನೇ ಸೃಷ್ಟಿಸಿತು. ಮತ್ತೊಂದು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು.

ಇಂದು ಭಾರತದಾದ್ಯಂತ (೧೯೯೮) ದಲಿತರಿಗೆ ಒಂದೇ ಮಾದರಿಯ ರಾಜಕೀಯ ರಣನೀತಿ ಎನ್ನುವುದು ಸಾಧ್ಯವಿಲ್ಲ. ಇಲ್ಲಿನ ವರ್ಗ ಮತ್ತು ಸಾಪೇಕ್ಷವಾದ ಪ್ರತಿಕೂಲದ ಆಧಾರದ ಮೇಲೆ ರಾಜಕಾರಣವನ್ನು ಅಭಿವೃದ್ಧಿಪಡಿಸಿದ್ದರೆ ಅದು ಬೇರೆ ಮಾತಾಗುತ್ತಿತ್ತು. ಆದರೆ ಈ ಮಾದರಿಯ ರಾಜಕಾರಣವು ದಲಿತರಿಗೆ ಪೂರಕವಾಗುತ್ತಿತ್ತು ಎಂದು ಸಾರಾಸಗಟಾಗಿ ನಂಬುವುದೂ ಸಹ ತಪ್ಪು ಗ್ರಹಿಕೆಯಾಗುತ್ತದೆ. ಇಂದಿನ ಸಂದರ್ಭದಲ್ಲಿ (೧೯೯೮) ಅಪೂರ್ಣವಾದ ಪಕ್ಷ ರಾಜಕಾರಣದ ಅರ್ಥವೇನೆಂದರೆ ಯಾವುದೇ ಪಕ್ಷವು ದಲಿತ ಸಮುದಾಯದ ಓಟನ್ನು ತಮ್ಮ ಪರವಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದರ ಆಧಾರದ ಮೇಲೆ ರಾಷ್ಟ್ರ ರಾಜಕೀಯದಲ್ಲಿ ಬಹುಮತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಈ ತರ್ಕವೂ ಸಹ ದಲಿತರಿಗೆ ಪ್ರತಿಕೂಲವಾಗುತ್ತದೆ ಎಂದೂ ಅರ್ಥೈಸಬೇಕಿಲ್ಲ. ಒಂದು ಕಾಲದಲ್ಲಿ ದಲಿತರು ಕಾಂಗ್ರೆಸ್‌ನ ಪರವಾಗಿ ರಾಷ್ಟ್ರಾದ್ಯಾಂತ ಮತ ಚಲಾಯಿಸಿದಾಗ ಆಗ ಅವರ ಸಾಮಾಜಿಕ-ರಾಜಕೀಯ ಪರಿಸ್ಥಿತಿ ಮತ್ತು ಶಕ್ತಿ ಈಗಿನ ಸಂದರ್ಭಕ್ಕಿಂತಲೂ ತುಂಬಾ ಕಡಿಮೆಯಿತ್ತು. ಆದರೆ ದಲಿತರ ಹಕ್ಕುಗಳಿಗೆ ನ್ಯಾಯ ಒದಗಿಸಬಲ್ಲಂತಹ,ಹೊಸ ದಿಕ್ಕನ್ನು ತೋರಿಸುವಂತಹ ಒಂದು ಕಾರ್ಯತಂತ್ರ ಸಹ ಇಂದು ( ೧೯೯೮) ನಮ್ಮ ಬಳಿ ಇಲ್ಲ.

(ಕೃಪೆ: THE UNTOUCHABLES Subordination, Poverty And The State In Modern India ಪುಸ್ತಕದಿಂದ ಆಯ್ದ ಭಾಗ)

2014 ರ ಭೂ ಸ್ವಾಧೀನ ಮಸೂದೆ : ರೈತ ವಿರೋಧಿ ನರೇಂದ್ರ ಮೋದಿ (ಬಂಡವಾಳಶಾಹಿಗಳಿಗೆ ಅಚ್ಛೇ ದಿನ್)

– ಬಿ. ಶ್ರೀಪಾದ ಭಟ್

ಭೂಸ್ವಾದೀನ ಮಸೂದೆ 2014 ಸಂವಿಧಾನಬಾಹಿರ ಮತ್ತು ಜನವಿರೋಧಿ ಕಾಯ್ದೆಯಾಗಿದೆ. ಇದು ರೈತರ ಅಸ್ತಿತ್ವವನ್ನೇ ನಿರ್ನಾಮ ಮಾಡುತ್ತದೆ. ಕಾರ್ಪೋರೇಟ್ ಶಕ್ತಿಗಳಿಗೆ ಮಣಿದಿರುವ ಈ 56 ಇಂಚಿನ ನರೇಂದ್ರ ಮೋದಿ ಸರ್ಕಾರ ಕಾರ್ಪೋರೇಟ್ ಅಜೆಂಡಾಗಳಿಗೆ ಅನುಗುಣವಾಗುವಂತೆ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಸುಗ್ರೀವಾಜ್ಞೆಯ ಮೂಲಕ ಅದನ್ನು ಜಾರಿಗಳಿಸಲು ಹಠ ತೊಟ್ಟಿದೆ. modi_ambani_tata_kamathತನ್ನದೇ ಮಂತ್ರಿಮಂಡಲದೊಳಗೆ ಈ ಕರಾಳ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕೇರ್ ಮಾಡದ ಈ ನರೇಂದ್ರ ಮೋದಿ ತನ್ನ ಸಂಸದರು ಮತ್ತು ಮಂತ್ರಿಗಳಿಗೆ ಸರ್ವಾಧಿಕಾರದ ಧ್ವನಿಯಲ್ಲಿ ಜನರ ಮುಂದೆ ಹೋಗಿ ವಿವರಿಸಿ ಎಂದು ತಾಕೀತು ಮಾಡುತ್ತಿದ್ದಾರೆ. ಇದನ್ನು ವಿವರಗಳನ್ನು ಚರ್ಚಿಸುವ ಮೊದಲು 1894, 2013, ಮತ್ತು 2014ರ ತಿದ್ದುಪಡಿ ಭೂಸ್ವಾದೀನ ಮಸೂದೆಯ ಪ್ರಮುಖ ಅಂಶಗಳನ್ನು ಮೊದಲು ಪರಿಶೀಲಿಸಬೇಕು:

ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (Social Impact Assement –SIA)
1894 : ಅವಕಾಶವಿಲ್ಲ
2013 : ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIಂ) ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIA) ಅಗತ್ಯವಿಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ
1894 : ಅವಕಾಶವಿಲ್ಲ
2013 : ಖಾಸಗಿ ಕಂಪನಿಗಳಿಗೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಕಂಪನಿಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಶೇಕಡಾ 80ರಷ್ಟು ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಅವಶ್ಯಕತೆ ಇಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ನೀರಾವರಿ, ಫಲವತ್ತಾದ ಭೂಮಿ (Multi Crop Land)
1984 : ಅವಕಾಶವಿಲ್ಲ
2013 : ಕಡ್ಡಾಯವಾಗಿ ಬೇರೆ ದಾರಿಯಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ (Mandatory Situation) ಇಡೀ ಜಿಲ್ಲೆಯಲ್ಲಿನ ನೀರಾವರಿ ಭೂಮಿಯಲ್ಲಿ ಶೇಕಡಾ 5ರಷ್ಟನ್ನು ಮಾತ್ರ ಸ್ವಾಧೀನ ಪಡೆಸಿಕೊಳ್ಳಬಹುದು. ಇನ್ನುಳಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ನೀರಾವರಿ ಪ್ರದೇಶದ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವಂತಿಲ್ಲ.
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ನೀರಾವರಿ, ಫಲವತ್ತಾದ ಭೂಮಿಯನ್ನು ಸಹ ನೇರವಾಗಿ ಸ್ವಾಧೀನ ಪಡೆಸಿಕೊಳ್ಳಬಹುದು.

ಮೇಲಿನ ವಿವರಗಳನ್ನು ಗಮನಿಸಿದಾಗ ಮೋದಿ ಸರ್ಕಾರ ತಿದ್ದುಪಡಿ ಮಾಡಿದ 2014ರ ಭೂಸ್ವಾದೀನ ಮಸೂದೆಯ ಕರಾಳತೆ ಸ್ಪಷ್ಟವಾಗುತ್ತದೆ. farmer-land-acquisitionಪದೇ ಪದೇ ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು, ಈ ವಲಯಗಳ ಹೆಸರಿನಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ನಿರ್ನಾಮಗೊಳಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಂಡಿಯಾದಂತಹ ಭ್ರಷ್ಟಗೊಂಡ ದೇಶದಲ್ಲಿ ಈ ಖಾಸಗಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಏಜಂಟರು, ದಲ್ಲಾಳಿಗಳು, ಮಧ್ಯವರ್ತಿಗಳು ತಮ್ಮ ಎಲ್ಲಾ ವ್ಯಾಪಾರದ ವಹಿವಾಟುಗಳನ್ನು ಈ ಮೇಲೆ ಹೇಳಿದ 5 ವಲಯಗಳಿಗೆ ಸಂಬಂಧಪಟ್ಟಂತೆ, ಅವುಗಳ ಅಡಿಯಲ್ಲಿಯೇ ಬರುವಂತೆ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆದುಕೊಂಡುಬಿಡುತ್ತಾರೆ. ಉದಾಹರಣೆಗೆ ಗಾಲ್ಫ್ ಮೈದಾನ, ಈಜುಕೊಳ, ರೆಸಾರ್ಟಗಳಂತಹ ಮೋಜುವಾನಿ ಕೂಟಗಳು ನಿರಾಯಾಸವಾಗಿ ‘ಸಾಮಾಜಿಕ ಮೂಲಭೂತ ಸೌಲಭ್ಯ’ಗಳ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡುಬಿಡುತ್ತವೆ. ಇದು ಒಂದು ಸಣ್ಣ ಉದಾಹರಣೆ.

ಮುಖ್ಯವಾಗಿ ಒಮ್ಮೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಷರತ್ತನ್ನು ಕಿತ್ತು ಹಾಕಿದ ನಂತರ ಈ ಭೂಸ್ವಾಧೀನ ಪ್ರಕ್ರಿಯೆಯ ಹೊಣೆ ಹೊತ್ತ ಅಧಿಕಾರಶಾಹಿ ಮತ್ತು ರಾಜಕಾರಣಿಗಳ ನೆಕ್ಸಸ್ ನೀತಿ-ನಿಯಮಗಳನ್ನು ತಮ್ಮ ಹಿತಾಸಕ್ತಿಗೆ ಅನುಕೂಲವಾಗುವಂತೆ ತಿರುಚಿ ಖಾಸಗಿ ಬಂಡವಾಳಶಾಹಿಗಳ ಎಲ್ಲಾ ಯೋಜನೆಗಳನ್ನು ಸಾರ್ವಜನಿಕ ಹಿತಾಸಕ್ತಿಯ ಅಡಿಯಲ್ಲಿ ಅನುಮೋದಿಸಿಬಿಡುತ್ತದೆ. ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಅವಶ್ಯಕತೆ ಇಲ್ಲದ ಮೇಲೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ, ತಮ್ಮ ವೈಯುಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಪರಿಹಾರ ಮೊತ್ತವನ್ನು ಸಹ ನಿರ್ಧರಿಸಿಬಿಡುತ್ತಾರೆ. ಸಹಜವಾಗಿಯೇ ಅತ್ಯಂತ ಕನಿಷ್ಠ ಮೊತ್ತವನ್ನು ನಿಗದಿಪಡಿಸುವ ಈ ಅಧಿಕಾರ ವರ್ಗ ಭವಿಷ್ಯದಲ್ಲಿ ರೈತರನ್ನು ವಂಚಿಸುವ ದಿನಗಳನ್ನು ನೆನೆಸಿಕೊಂಡರೆ ಇನ್ನು ಇಂಡಿಯಾದಲ್ಲಿ ಕೃಷಿ ಉದ್ಯೋಗ ಮತ್ತು ರೈತಾಪಿ ಸಮುದಾಯಗಳು ಶೀಘ್ರದಲ್ಲೇ ಕಣ್ಮರೆಯಾಗುವ ದಿನಗಳು ದೂರವಿಲ್ಲ.

ಇನ್ನು ನೀರಾವರಿ, ಫಲವತ್ತಾದ ಭೂಮಿಯನ್ನೂ ಸಹ ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿಯವರಿಗೆ ಹಸ್ತಾಂತರಗೊಳಿಸಿದ ಮೇಲೆ ಇದರ ದುಷ್ಪರಿಣಾಮಗಳನ್ನು ಅಂದಾಜಿಸುವುದು ಕಷ್ಟಕರವಲ್ಲ.

ಮುಖ್ಯವಾಗಿ ಕಾರ್ಪೋರೇಟ್ ಶಕ್ತಿಗಳ ಮುಂದೆ ಶರಣಾಗಿರುವ ಮೋದಿ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಖಾಸಗಿ ಉದ್ಯಮಿಗಳು ಬಲು ಸುಲಭವಾಗಿ ತಮ್ಮ ಎಲ್ಲಾ ಯೋಜನೆಗಳನ್ನು ಮೇಲಿನ ವಲಯಗಳ ಅಡಿಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ. ಈಗಾಗಲೇ ಈ ಕಾರ್ಪೋರೇಟ್ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಿರುವ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲಾ ಉದ್ದಿಮೆಗಳನ್ನು ಹಸ್ತಾಂತರಿಸಲು ತುದಿಗಾಲಲ್ಲಿ ನಿಂತಿದೆ. 2013ರ ಮಸೂದೆಯಲ್ಲಿ ಒಳಗೊಂಡಿರುವ ಪೂರ್ವ ಶರತ್ತು ಎನ್ನುವ ಮುಖ್ಯವಾದ ಪ್ರಜಾತಾಂತ್ರಿಕ ಆಶಯವನ್ನು ಮೋದಿ ಸರ್ಕಾರದ 2014ರ ತಿದ್ದುಪಡಿ ಮಸೂದೆ ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಮೂಲಕ ರಾಷ್ಟ್ರದ ಅಭಿವೃಧ್ಧಿಯ ಹೆಸರಿನಲ್ಲಿ ತನ್ನ ಕಾನೂನು, ಅಧಿಕಾರಶಾಹಿ, farmer-land-acquisition-2ನಿಷ್ಕರುಣಿ ನೀತಿಗಳನ್ನು ಬಳಸಿಕೊಂಡು ಬಲತ್ಕಾರವಾಗಿ ರೈತರಿಂದ ಜಮೀನನ್ನು ವಶಪಡೆಸಿಕೊಂಡು ಖಾಸಗಿ ಶಕ್ತಿಗಳಿಗೆ ಹಸ್ತಾಂತರಿಸುತ್ತದೆ. ದೇಶವನ್ನು 150 ವರ್ಷಗಳ ಹಿಂದಿನ ಬ್ರಿಟೀಷರ ಕಲೋನಿಯಲ್ ವ್ಯವಸ್ಥೆಗೆ ಕೊಂಡೊಯ್ದಿದೆ ಈ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಇನ್ನು ಭೂಮಿಯನ್ನು ಖಾಸಗಿ ಉದ್ಯಮಿಗಳಿಗೆ ಉಚಿತವಾಗಿ ಹಸ್ತಾಂತರಿಸಲು ಈ ಕರಾಳ 2014 ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುತ್ತಿದೆ. ಮುಖ್ಯವಾಗಿ ಬಂಡವಾಳ ಹೂಡಿಕೆದಾರರಿಗೆ, ವಿದೇಶಿ ಕಂಪನಿಗಳಿಗೆ ಇಂಡಿಯಾ ದೇಶವು ಸದಾ ಸ್ನೇಹಮಯಿಯಾಗಿರುತ್ತದೆ ಮತ್ತು ಎಲ್ಲಾ ಬಗೆಯ ಪರ್ಮಿಟ್ ರಾಜ್ ವ್ಯವಸ್ಥೆಯನ್ನು ಕೊನೆಗೊಳಿಸಿ ಸಂಪೂರ್ಣ ಮುಕ್ತ ಮಾರ್ಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದು ತೋರಿಸಿಕೊಳ್ಳಲು ಮೋದಿ ಸರ್ಕಾರ ಈ ಜನವಿರೋಧಿ ಕೃತ್ಯಕ್ಕೆ ಕೈ ಹಾಕಿದೆ. ಇದು ಹೀಗೆ ಮಂದುವರೆದರೆ ಜನರಿಗಾಗಿ ಸರ್ಕಾರ ಎನ್ನುವ ಪ್ರಜಾಪ್ರಭುತ್ವದ ಆಶಯ ಕಣ್ಮರೆಯಾಗಿ ನಾಯಕನಿಗಾಗಿ ಸರ್ಕಾರ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆ ಜಾರಿಗೊಳ್ಳುತ್ತದೆ.

ಒಂದು ಉದಾಹರಣೆಯ ಮೂಲಕ ವಿವರಿಸಬಹುದಾದರೆ ಮುಂಬೈ-ದೆಹಲಿ ನಗರಗಳ ಮಧ್ಯೆ ಕೈಗಾರಿಕಾ ಕಾರಿಡಾರ್ ಅನ್ನು ನಿರ್ಮಾಣ ಮಾಡಲು ಸುಮಾರು 3,90,000 ಹೆಕ್ಟೇರ್ ಭೂಮಿಯ ಅವಶ್ಯಕತೆಯ ಇದೆ. ಇದರಲ್ಲಿ ಶೇಕಡಾ ಎಂಬತ್ತರಷ್ಟು ಕೃಷಿ ಭೂಮಿ ಸೇರಿಕೊಂಡಿದೆ. ಇನ್ನು 2014ರ ಭೂಸ್ವಾಧೀನ ಮಸೂದೆಯ ಅನುಸಾರ ಈ ಕೈಗಾರಿಕಾ ಕಾರಿಡಾರ್‌ಗೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ, ರೈತರ, ಭೂ ಮಾಲೀಕರ ಅನುಮತಿ ಮತ್ತು ನೀರಾವರಿ, ಫಲವತ್ತಾದ ಭೂಮಿಯ ಪ್ರಶ್ನೆ, ಎಲ್ಲವೂ ಕಡೆಗಣಿಸಲ್ಪಟ್ಟು ಕೇವಲ ಯೋಜನೆ ಅನುಷ್ಠಾನ ಮುಖ್ಯವಾಗಿಬಿಡುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ರೈತರು ಬೀದಿ ಪಾಲಾಗುತ್ತಾರೆ. ಇನ್ನು ದೇಶಾದ್ಯಾಂತ ನಗರಗಳ ನಡುವೆ ಕೈಗಾರಿಕಾ ಕಾರಿಡಾರ್‌ಗಳ ಯೋಜನೆಯ ದುಷ್ಪರಿಣಾಮಗಳು ಊಹೆಗೂ ನಿಲುಕುವುದಿಲ್ಲ. ಇಂತಹ ಕರಾಳ, ಪ್ರಜಾತಾಂತ್ರಿಕ ವಿರೋಧಿ ಮಸೂದೆಯ ಪರವಾಗಿ ಹಠ ತೊಟ್ಟಿರುವ ನರೇಂದ್ರ ಮೋದಿ ಒಬ್ಬ ಜನವಿರೋಧಿ ಪ್ರಧಾನ ಮಂತ್ರಿ ಎಂದು ಸಾಬೀತಾಗುತ್ತದೆ.

ಈ 2014 ಭೂಸ್ವಾಧೀನ ಮಸೂದೆಯ ಪರವಾಗಿ ವಾದಿಸುತ್ತಿರುವ ಗುಂಪು ಪರಿಹಾರ, ಪುನರ್ವಸತಿಗಳಿಗೆ ಸಂಬಂಧಪಟ್ಟಂತೆ ಸದಾಕಾಲವೂ ಜನರ ಪರವಾಗಿಯೇ ಇರುತ್ತದೆ. ಕೇವಲ ಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಒಮ್ಮೆ ಭೂಮಿಯನ್ನು ಸ್ವಾಧಿನ ಪಡೆಸಿಕೊಂಡ ನಂತರ ಪರಿಹಾರ, ಪುನರ್ವಸತಿ ಎನ್ನುವುದು ಒಂದು ದೊಡ್ಡ ಮರೆಮೋಸದ ಜಾಲವಾಗಿ ಪರಿವರ್ತನೆಗೊಳ್ಳುತ್ತದೆ. ಅದು ಗಗನಕುಸುಮ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ 60 ವರ್ಷಗಳ ಇತಿಹಾಸವೇ ನಮ್ಮ ಮುಂದಿದೆ. ಸಾವಿರಾರು ಉದಾಹರಣೆಗಳಿವೆ. ಯಾವುದೇ ಪೂರ್ವ ಶರತ್ತುಗಳಿಲ್ಲದೆ ಭೂಮಿಯನ್ನು ಹಸ್ತಾಂತರಗೊಳಿಸಿದ ನಂತರ ಯಾವ ಆಧಾರದ ಮೇಲೆ ಪರಿಹಾರವನ್ನು ಕೇಳುವುದು Industrial_Mangaloreಎನ್ನುವ ಯಕ್ಷಪ್ರಶ್ನೆಗೆ ಈ ಮೋದಿ ಮತ್ತವರ ಪಟಾಲಂ ಉತ್ತರಿಸುತ್ತಿಲ್ಲ. ಇದಿರಲಿ ವ್ಯವಸಾಯಕ್ಕೆ ಸಂಬಂಧಪಟ್ಟಂತೆ ಸಾವಿರಾರು ತೊಂದರೆಗಳಲ್ಲಿ ಮುಳುಗಿರುವ ಭಾರತದ ರೈತ ಪ್ರತಿ ಬಾರಿಯೂ ಈ ಭೂಸ್ವಾಧೀನ ಸಂದರ್ಭದಲ್ಲಿ ಅಧಿಕಾರಶಾಹಿ, ಖಾಸಗಿ ಉದ್ಯಮಿಗಳು, ರಾಜಕಾರಣಿಗಳ ಅಪವಿತ್ರ ನೆಕ್ಸಸ್ ಅನ್ನು, ಪಶುಸದೃಶ ಅಧಿಕಾರವನ್ನು ಮುಖಾಮುಖಿಯಾಗಲು ಸಾಧ್ಯವೇ ಇಲ್ಲ.

ಇಂದು ಕೃಷಿ ವಲಯವೇ ಸಂಪೂರ್ಣವಾಗಿ ಸೋತುಹೋಗಿರುವ, ದಿನನಿತ್ಯ ಆತ್ಮಹತ್ಯೆ ಅಥವಾ ನಗರದ ವಲಸೆಯಲ್ಲಿ ಸಿಲುಕಿ ನರಳುತ್ತಿರುವ ರೈತನ ಪರವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡದ, ದೂರಗಾಮಿ ಯೋಜನೆಗಳನ್ನು ರೂಪಿಸಲು ಸಹ ನಿರಾಕರಿಸುವ ಈ ಮೋದಿ ಸರ್ಕಾರ ಕೇವಲ ಪರಿಹಾರ, ಪುನರ್ವಸತಿ ಕುರಿತಾಗಿ ಮಾತನಾಡುತ್ತಿರುವುದು ಈ ಬಿಜೆಪಿ ಪಕ್ಷದ ದುರಹಂಕಾರ, ದರ್ಪ ಮತ್ತು ಬೌದ್ಧಿಕ ಭ್ರಷ್ಟತೆ ರೈತರಿಗೆ ಉರುಳಾಗುತ್ತಿರುವುದರ ಸಂಕೇತ.

2013ರ ಭೂಸ್ವಾಧೀನ ಮಸೂದೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನಿರ್ದಿಷ್ಠ ಅವಧಿಯೊಳಗೆ (5 ವರ್ಷ) ಸಂಬಂಧಪಟ್ಟ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ಆ ಭೂಮಿಯು ಮರಳಿ ಅದರ ಮಾಲೀಕನಿಗೆ ಅಥವಾ ಲೋಕಲ್ ಬ್ಯಾಂಕ್‌ಗೆ ಮರಳಿಸಬೇಕು ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಅನುಷ್ಠಾನದ ಜವಬ್ದಾರಿ ಹೊತ್ತಿರುವ ಕಂಪನಿಗಳ ವಿರುದ್ಧ ತನಿಖೆಯನ್ನು ನಡೆಸಬೇಕು.

ಆದರೆ ಮೋದಿಯ 2014ರ ತಿದ್ದುಪಡಿ ಮಸೂದೆಯ ಅನುಸಾರ 5 ವರ್ಷಗಳ ಒಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ಭೂಮಿಯನ್ನು ಅದರ ಒಡೆಯನಿಗೆ ಮರಳಿಸುವ ಅಗತ್ಯವಿಲ್ಲ ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಮಾಲೀಕರ ವಿರುದ್ಧ ತನಿಖೆಯನ್ನು ನಡೆಸಲು ಸರ್ಕಾರದ ಅನುಮತಿ ಪಡೆಯಬೇಕು. 2014ರ ಈ ತಿದ್ದುಪಡಿ ಮರಳಿ 1894ರ ಡ್ರಕೋನಿಯನ್ ಮಸೂದೆಗೆ ಮರಳುತ್ತದೆ. ಬ್ರಿಟೀಷ್ ಕಾಲದ ಕಲೋನಿಯಲ್ ಸಂದರ್ಭದ ದೌರ್ಜನ್ಯವನ್ನು ಮರಳಿ ಜಾರಿಗೊಳಿಸಲು ಮುಂದಾಗಿದೆ ಮೋದಿ ಸರ್ಕಾರ. ಆದರೆ ಇದರ ಒಳ ಹುನ್ನಾರವೇನೆಂದರೆ ಇಲ್ಲಿ ಒಂದು ವೇಳೆ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಸಂಬಂಧಪಟ್ಟ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ.

2013 ಭೂಸ್ವಾಧೀನ ಮಸೂದೆಯ ಸೆಕ್ಷನ್ 105 ರ ಅಡಿಯಲ್ಲಿ ಬರುವ 13 ಕೇಂದ್ರ ಸರ್ಕಾರ ಆಕ್ಟ್‌ಗಳಿಗೆ ಐಂಖಖ, 2013 ಮಸೂದೆ ಅನ್ವಯವಾಗುವುದಿಲ್ಲ.( ಅವು – The Coal Bearing Areas Acquisition and Development Act 1957, the National Highways Act 1956, Land Acquisition (Mines) Act 1885,   Atomic Energy Act 1962, the Indian Tramways Act 1886, the Railways Act 1989, the Ancient Monuments and Archaeological Sites and Remains Act 1958, the Petroleum and Minerals Pipelines (Acquisition of Right of User in Land) Act 1962 and the Damodar Valley Corporation Act 1948. The Electricity Act 2003, Requisitioning and Acquisition of Immovable Property Act 1952, the Resettlement of Displaced Persons (Land Acquisition) Act 1948 and the Metro Railways (Construction of Works) Act 1978.)

ಡಿಸೆಂಬರ್ 2014ರ ಒಳಗೆ ಈ 13 ಆಕ್ಟ್‌ಗಳು ತಿದ್ದುಪಡಿಗೊಳ್ಳಬೇಕು, ನಂತರವಷ್ಟೇ ಹೊಸ ಭೂಸ್ವಾಧೀನ ಮಸೂದೆಯ ಪರಿಹಾರ, ಪುನರ್ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಕ್ಕೆ ಸಾಧ್ಯವಾಗುತ್ತದೆ. ಇದನ್ನು ಉದಾಹರಿಸಿ ತನ್ನ 2014ರ ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆಯನ್ನು ಮೋದಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಆದರೆ 2013 ಭೂಸ್ವಾಧೀನ ಮಸೂದೆ ಸೆಕ್ಷನ್ 105 (4) ರ ತಿದ್ದುಪಡಿಯು “ಸೆಕ್ಷನ್ 105 (3) ಅಡಿಯಲ್ಲಿ ಭೂಸ್ವಾಧೀನಕ್ಕಾಗಿ ನೋಟಿಫಿಕೇಶನ್ ಅನ್ನು ಮಂಡಿಸಿದ ನಂತರ ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಬೇಕು. ಸಂತ್ತಿನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇದು ಚರ್ಚೆಗೆ ಬರಬೇಕು. ಎರಡೂ ಸದನಗಳಲ್ಲಿ ಬಹುಮತದಲ್ಲಿ ಈ ನೋಟಿಫಿಕೇಶನ್ ಅನ್ನು ಅನುಮೋದನೆ ಮಾಡಲು ಒಪ್ಪದೇ ಇದ್ದ ಪಕ್ಷದಲ್ಲಿ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಲು ಅವಕಾಶವಿಲ್ಲ. ಸೂಕ್ತ ತಿದ್ದುಪಡಿಯ ನಂತರ ಮತ್ತೊಮ್ಮೆ ಬಹುಮತದ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಬಹುದು” ಎಂದು ಸ್ಪಷ್ಟವಾಗಿ ವಿವರಿಸುತ್ತದೆ. ಹೀಗಾಗಿ LARR, 2013 ಮಸೂದೆಯ ಸೆಕ್ಷನ್ 105ರ ಪರಿಣಾಮಗಳು ಜನರ ಹಿತಾಸಕ್ತಿಗೆ ಮಾರಕವಾಗಿಲ್ಲವೆಂದೇ
ಹೇಳಬೇಕು

ಕಾನೂನು ಮತ್ತು ಬಡತನದ ಹಿನ್ನಲೆಯಲ್ಲಿ ಆದಿವಾಸಿ ಸಮುದಾಯಗಳ ಸಾಮಾಜಿಕ-ಆರ್ಥಿಕತೆಯ ಕುರಿತಾಗಿ ಅಧ್ಯಯನ ಮಾಡುತ್ತಿರುವ ಉಷಾ ರಾಮನಾಥನ್ ಅವರು “ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಂತೆಯೇ ಈಗಿನ ನರೇಂದ್ರ ಮೋದಿ ಸರ್ಕಾರವೂ ಕಾಡು, ನೀರು, ಗಾಳಿ ಮತ್ತು ಬುಡಕಟ್ಟು ಸಮುದಾಯಗಳ ರಕ್ಷಣೆಗಳನ್ನು ತನ್ನ ಆರ್ಥಿಕ ಯೋಜನೆಗಳು ಮತ್ತು ಪ್ಲಾನ್‌ಗಳ ಮೂಲಕವೇ ಅರ್ಥೈಸುತ್ತದೆ. ಈ ಪ್ರಕ್ರಿಯಯಲ್ಲಿ ಬುಡಕಟ್ಟು ಸಮುದಾಯಗಳ ಬದುಕು ಮತ್ತು ಪರಿಸರದ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸುತ್ತದೆ. ತನ್ನ ಆರ್ಥಿಕ ಯೋಜನೆಗಳ ಅನುಷ್ಠಾನಕ್ಕಾಗಿ ಸುಗ್ರೀವಾಜ್ಞೆಯನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ Forest Rights Act (FRA) of 2006, ಅನುಸಾರ ಯಾವುದೇ ಬಗೆಯ ಯೋಜನೆಗಳಿಗೆ ಪೂರ್ವಭಾವಿಯಾಗಿ ಅರಣ್ಯ ಸಂರಕ್ಷಣೆಯ ನಿಯಮಗಳು ಮತ್ತು ಅದರ ಅವಲಂಬಿತರ ಹಕ್ಕುಗಳು ಉಲ್ಲಂಘನೆ ಆಗಬಾರದು. ಒಮ್ಮೆ ಆ ಹಕ್ಕುಗಳನ್ನು ಮಾನ್ಯ ಮಾಡಿ ಸೂಕ್ತ ನ್ಯಾಯ ಒದಗಿಸಿದ ನಂತರವಷ್ಟೇ ಯೋಜನೆಗಳ ಕುರಿತಾಗಿ ಚರ್ಚಿಸಬಹುದು. ಆದರೆ ಹಿಂದಿನ ಯುಪಿಎ ಸರ್ಕಾರ 2013ರಲ್ಲಿ ನೇಮಿಸಿದ ಕ್ಯಾಬಿನೆಟ್ ಕಮಿಟಿಯು ತನ್ನ ವರದಿಯಲ್ಲಿ 1000 ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಪ್ರಮಾಣದ ಯೋಜನೆಗಳಿಗೆ ಯಾವುದೇ ಬಗೆಯ ಅರಣ್ಯ ಕಾನೂನುಗಳು, ಪರಿಸರ ರಕ್ಷಣೆಯ ಸಂಬಂದಿತ ಕಾನೂನುಗಳು, ವಾಯು ಮಾಲಿನ್ಯ ಕುರಿತಾದ ಕಾನೂನುಗಳು ಅನ್ಯವಾಗುವುದಿಲ್ಲ ಎಂದು ನಿರ್ಣಯ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದುವರೆದ ಮೋದಿ ಸರ್ಕಾರ ಈ ಕಾನೂನುಗಳನ್ನೇ ನಿಷ್ಕ್ರಿಯಗೊಳಿಸಿ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಸಾಧಿಸಲು ಹೊರಟಿದೆ. ಅರಣ್ಯಗಳ ವಿಷಯಕ್ಕೆ ಬಂದರೆ ಪರಿಶಿಷ್ಟ ವರ್ಗಗಳ ಬುಡಕಟ್ಟು ಸಮುದಾಯಗಳು ಅಧಿಕ ಜನಸಂಖ್ಯೆಯಲ್ಲಿರುವ 5ನೇ ಶೆಡ್ಯೂಲ್‌ನ ವಲಯಗಳಲ್ಲಿ ಭೂ ಹಸ್ತಾಂತರ, ambani-modiಪರಭಾರೆಗೆ ಸಂಬಂಧಪಟ್ಟಂತೆ ಬಹಳಷ್ಟು ನಿರ್ಬಂಧನೆಗಳಿವೆ ಮತ್ತು ಆದಿವಾಸಿ ಸಮುದಾಯಗಳು ಮತ್ತು ಕಾಡಿನೊಂದಿಗಿನ ಅವರ ಭಾವನಾತ್ಮಕ, ಆರ್ಥಿಕ ಸಂಬಂಧಗಳನ್ನು ರಕ್ಷಿಸುವ ವಿಷಯದಲ್ಲಿ ಆಯಾ ರಾಜ್ಯಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಈ ನಿಯಮಗಳು ಮತ್ತು ನಿರ್ಬಂಧನೆಗಳು ಈ ಅಭಿವೃದ್ಧಿಯ ಹೆಸರಿನ ಅನೇಕ ಯೋಜನೆಗಳಿಗೆ ಅಡ್ಡಗಾಲಾಗಿರುವುದರಿಂದ ಮನಮೋಹನ್ ಸಿಂಗ್ ಸರ್ಕಾರವು Forest Rights’ Act and Provisions of the Panchayats (Extension to the Scheduled Areas) Act (PESA) -1996ಗೆ ತಿದ್ದುಪಡಿ ತಂದು ರಸ್ತೆ, ಕಾಲುವೆ, ಹೈವೇ, ಬ್ರಾಡ್‌ಬಾಂಡ್, ವಿದ್ಯುತ್‌ಶಕ್ತಿ ಇತ್ಯಾದಿಗಳಂತಹ ಯೋಜನೆಗಳಿಗೆ ಈ ಮೇಲಿನ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ. ಆದರೆ ಈಗಿನ ಮೋದಿ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿಯಂತೆ ವರ್ತಿಸುತ್ತ ಈ ಯೋಜನೆಗಳಿಂದ ಸಂತ್ರಸ್ಥರಾಗುವ ಆದಿವಾಸಿ, ಬುಡಕಟ್ಟು ಸಮುದಾಯಗಳೊಂದಿಗೆ ಸಮಾಲೋಚಿಸುವ ಸಹನೆಯನ್ನು ಪ್ರದರ್ಶಿಸುತ್ತಿಲ್ಲ. ಇಲ್ಲಿ ನನ್ನ ಮೂಲಭೂತ ಪ್ರಶ್ನೆಯೆಂದರೆ ರಾಜ್ಯವು ಭೂಮಾಲೀಕನೇ? ಟ್ರಸ್ಟಿಯೇ?ಯಜಮಾನನೇ? ಕಾನೂನನ್ನು ಮೀರಿದ ಸಂಸ್ಥೆಯೇ? ಇಂದಿನ ಮೋದಿ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ದೊರೆಯದಿದ್ದರೂ ಅದನ್ನು ಸುಗ್ರೀವಾಜ್ಞೆಯ ಮೂಲಕ ಈ 2014ರ ಭೂ ಸ್ವಾದೀನ ಮಸೂದೆಯನ್ನು ತರಲು ಹೊರಟಿದೆ. ಆದರೆ 1986ರ ಡಿ.ಸಿ. ವಾದ್ವ ಕೇಸಿನಲ್ಲಿ ಸುಪ್ರೀಂ ಕೋರ್ಟ ಏಕಪಕ್ಷೀಯವಾಗಿ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವುದನ್ನು ವಂಚನೆ ಮತ್ತು ಮೋಸ (ಜಿಡಿಚಿuಜ) ಮತ್ತು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ” ಎಂದು ವಿವರಿಸಿದ್ದಾರೆ.

’ಅಚ್ಛೆ ದಿನ್’, ’ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎನ್ನುವ ಬೋಗಸ್ ಸ್ಲೋಗನ್‌ಗಳನ್ನು ಮುಂದಿಟ್ಟುಕೊಂಡು ಭಾರತದ ಯುವ ಜನತೆಯನ್ನು ಮೋಸ ಮಾಡಿದ್ದ ನರೇಂದ್ರ ಮೋದಿಯ ಸರ್ವಾಧಿಕಾರಿ ಮುಖ ಇಂದು ಹಂತ ಹಂತವಾಗಿ ಬಯಲಾಗುತ್ತಿದೆ. ಕಾರ್ಪೋರೇಟ್ ಶಕ್ತಿಗಳಿಗೆ, ಬಂಡವಾಳ ಶಾಹಿಗಳಿಗೆ “ಅಚ್ಚೆ ದಿನ್” ತಂದು ಕೊಡಲು ಈ 56 ಇಂಚಿನ ಎದೆಯ ಮೋದಿ ಇಂಡಿಯಾ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕೊಲೆ ಮಾಡಲು ಮುಂದಾಗಿದ್ದಾರೆ.

ಸಂಘ ಪರಿವಾರ – ಹಿಂದೂ, ಹಿಂದುತ್ವ, ಹಿಂದೂಯಿಸಂ: ಮತೀಯವಾದಿ ಕುಟುಂಬ

ಟಿ ಬಿ.ಶ್ರೀಪಾದ ಭಟ್

ಹಿಂದುಸ್ತಾನದ ಈ ಮಾತೃಭೂಮಿಯನ್ನು ಯಾರು ಪಿತೃಭೂಮಿ ಮತ್ತು ಪವಿತ್ರಭೂಮಿಯನ್ನಾಗಿ ಮಾಡಿಕೊಂಡಿರುತ್ತಾರೋ ಅವರು ಮಾತ್ರ ಹಿಂದೂಗಳು.ಈ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳದ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ಹಿಂದುಸ್ತಾನಕ್ಕೆ ಸೇರಿದವರಲ್ಲ– ವಿ.ಡಿ.ಸಾವರ್ಕರ್

ಹಿಂದುಸ್ತಾನದಲ್ಲಿರುವ ವಿದೇಶಿ ಜನಾಂಗಗಳು ( ಮುಸ್ಲಿಂರು,ಕ್ರೈಸ್ತರು) ಇಲ್ಲಿನ ಹಿಂದೂ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಹಿಂದೂ ಧರ್ಮಕ್ಕೆ ಗೌರವ ತೋರಿಸಬೇಕು. ಒಂದು ಧ್ವಜ,ಒಬ್ಬನೇ ನಾಯಕ,ಒಂದೇ ಸಿದ್ಧಾಂತ ಇದು ಆರೆಸೆಸ್ ಮೂಲಮಂತ್ರ. ಇದು ದೇಶದ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ– ಗೋಲ್ವರ್ಕರ್.

ಇಂಗ್ಲೆಂಡ್ ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು…ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ — ಮೋಹನ್ ಭಾಗವತ್.

ಬಜರಂಗದಳವು ಹಿಂದೂಗಳನ್ನು ರಕ್ಷಿಸುವ ಸಂದರ್ಭದಲ್ಲಿ ಅವಶ್ಯಕತೆ ಉಂಟಾದಗಲೆಲ್ಲ ಹಿಂಸೆಯನ್ನು ಬಳಸಿಕೊಳ್ಳುತ್ತದೆ. ಹಾವು ನಮ್ಮನ್ನು ಕಚ್ಚಿದಾಗ ನಾವು ಅದನ್ನು ಸಾಯಿಸುವುದಿಲ್ಲವೇ? –ಸುಭಾಷ್ ಚೌಹಾಣ್, ಬಜರಂಗದಳದ ನಾಯಕ.

ಯುಪಿಎ ಸರ್ಕಾರವು ಬೀಫ್ ರಫ್ತಿನ ಮೂಲಕ ಪಿಂಕ್ ರೆವಲ್ಯೂಷನ್ ಅನ್ನು ಜಾರಿಗೊಳಿಸುತ್ತಿದೆ – ನರೇಂದ್ರ ಮೋದಿ.

ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು– ಡಾ.ಬಿ.ಆರ್.ಅಂಬೇಡ್ಕರ್

ಮೇ 6, 1945ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಹೇಳುತ್ತಾರೆ “ಇಂಡಿಯಾದಲ್ಲಿ ಬಹುಸಂಖ್ಯಾತರೆಂದರೆ ರಾಜಕೀಯ ಬಹುಸಂಖ್ಯಾತರಲ್ಲ. ಇಂಡಿಯಾದಲ್ಲಿ ಬಹುಸಂಖ್ಯಾತ ತತ್ವವನ್ನು ವ್ಯಕ್ತಿಯ ಹುಟ್ಟಿನ ನೆಲೆಯಿಂದ ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಬಹುಸಂಖ್ಯಾತರು ಮತ್ತು ಮತೀಯ ಬಹುಸಂಖ್ಯಾತರು ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ರಾಜಕೀಯ ಬಹುಸಂಖ್ಯಾತ ತತ್ವವು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿರುತ್ತದೆ. ಈ ಮಾದರಿಯ ಬಹುಸಂಖ್ಯಾತ ತತ್ವವು ಕಟ್ಟಲ್ಪಡುತ್ತದೆ, ಮುರಿಯಲ್ಲಡುತ್ತದೆ, ಮರಳಿ ಕಟ್ಟಲ್ಪಡುತ್ತದೆ. ಆದರೆ ಮತೀಯ ಬಹುಸಂಖ್ಯಾತ ತತ್ವವು ಒಂದು ನಿರ್ದಿಷ್ಟ ಗ್ರಹಿಕೆಯ ನೆಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ಇದು ಶಾಶ್ವತವಾಗಿರುತ್ತದೆ. ಇದನ್ನು ನಾಶಪಡಿಸಬಹುದು. ಆದರೆ ಪರಿವರ್ತಿಸಲಾಗುವುದಿಲ್ಲ. ನಿರಂಕುಶ (absolute) ಮಾದರಿಯ ಬಹುಸಂಖ್ಯಾತ ತತ್ವವನ್ನು ತಿರಸ್ಕರಿಸಿ ಸಾಪೇಕ್ಷತೆಯ (relative) ಆಧಾರದ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ನಾನು ಹಿಂದೂಗಳನ್ನು ಕೇಳಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೆ ಹೋದರೆ ಅಲ್ಪಸಂಖ್ಯಾತರು ಇಂಡಿಯಾದ ಸ್ವಾತಂತ್ರವನ್ನು ತಡೆಹಿಡಿದಿದ್ದಾರೆ ಎನ್ನುವ ವಾದಕ್ಕೆ ಸಮರ್ಥನೆ ದೊರಕುವುದಿಲ್ಲ. ಈ ಮಾದರಿಯ ತಪ್ಪಾದ ಪ್ರಚಾರವು ಫಲ ಕೊಡಲಾರದು.”

ಸಂಘ ಪರಿವಾರ

ಆರೆಸ್ಸಸ್ – ಹಿಂದುತ್ವ ಐಡಿಯಾಜಿಯ ಮಾತೃ ಸಂಘಟನೆ. ( ಹೈಕಮಾಂಡ್)

ಬಿಜೆಪಿ – ರಾಜಕೀಯ ಪಕ್ಷ, ವಿ ಎಚ್ ಪಿ – ಧಾರ್ಮಿಕ ಘಟಕ, ಬಜರಂಗದಳ – ಮಿಲಿಟೆಂಟ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್- ಸಾಹಿತ್ಯ ಕ್ಷೇತ್ರ, ದೀನ ದಯಾಳ್ ಸಂಶೋಧನ ಸಂಸ್ಥೆ, ಸೇವಾ ಭಾರತಿ, ವಿದ್ಯಾ ಭಾರತಿ, ಶಿಕ್ಷ ಭಾರತಿ, ಸರಸ್ವತಿ ವಿದ್ಯಾಮಂದಿರ, ಸರಸ್ವತಿ ಶಿಶುಮಂದಿರ, ವನವಾಸಿ ಕಲ್ಯಾಣ ಆಶ್ರಮ – ಬುಡಕಟ್ಟು ಜನರಿಗಾಗಿ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ, ಜನಸೇವಾ ವಿದ್ಯಾಕೇಂದ್ರ, ಭಾರತೀಯ ಇತಿಹಾಸ ಸಂಕಲನಾ ಯೋಜನೆ, ರಾಷ್ಟ್ರೋತ್ಥಾನ ಸಾಹಿತ್ಯ, ವಿವೇಕಾನಂದ ಕೇಂದ್ರ, ಸ್ವದೇಶಿ ಜಾಗರಣ ಮಂಚ್, ಹಿಂದೂ ಜಾಗರಣ ಮಂಚ್, ಭಾರತ ವಿಕಾಸ್ ಪರಿಷತ್, ಭಾರತೀಯ ಮಜ್ದೂರ ಸಂಘ, ಭಾರತೀಯ ಕಿಸಾನ ಸಂಘ, ರಾಷ್ಟ್ರೀಯ ಸೇವಿಕಾ ಸಮಿತಿ.

ಅನಿವಾಸಿ ಭಾರತೀಯರಿಗಾಗಿ

ಭಾರತೀಯ ಸ್ವಯಂ ಸೇವಕ ಸಂಘ, ಹಿಂದೂ ಸ್ವಯಂ ಸೇವಕ ಸಂಘ, Overseas Friends of the BJP, ವಿ ಎಚ್ ಪಿ ಅಮೇರಿಕ, IDR

ಮೇಲ್ನೋಟಕ್ಕೆ ಅಬ್ಬರದಿಂದ ಸದಾ ದ್ವೇಷದ ಧ್ವನಿಯಲ್ಲಿ ಮಾತನಾಡುವ ಆರೆಸ್ಸಸ್ ಗೆ ಯಾವುದೇ ರೀತಿಯ ಜನ ಬೆಂಬಲವಿಲ್ಲ. RSS_meeting_1939ಆರೆಸ್ಸಸ್ ನಲ್ಲಿ ಜನನಾಯಕರಿಲ್ಲ. ಇತಿಹಾಸದ ಅನ್ಯಾಯಗಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು ಎಂದು ದ್ವೇಷದ ಚಿಂತನೆಯನ್ನು ಬೋಧಿಸುವ ಆರೆಸ್ಸಸ್ ಹೊಸತನ್ನು ಚಿಂತಿಸಲು ನಿರಾಕರಿಸುತ್ತದೆ. ಜೀವಪರ ಆಧುನಿಕ ಚಿಂತನೆಗಳನ್ನು, ಅರ್ಥಪೂರ್ಣ ಬದಲಾವಣೆಗಳನ್ನು ತಿರಸ್ಕರಿಸುವ ಆರೆಸ್ಸಸ್ ಸ್ವತಃ ತನ್ನ ದೇಶದಲ್ಲಿಯೇ ಯಾವುದೇ ನೆಲೆಯಿಲ್ಲದ ಒಂದು ಮತೀಯವಾದಿ ಸಂಘಟನೆ. ಜನಸಾಮಾನ್ಯರ ಪಾಲಿಗೆ ಎಂದೋ ತಿರಸ್ಕೃತಗೊಂಡ ಗೋಳ್ವಲ್ಕರ್, ಸಾವರ್ಕರ್ರಂತಹವರ ಫ್ಯಾಸಿಸ್ಟ್ ಚಿಂತನೆಯನ್ನು ಎಂಬತ್ತು ವರ್ಷಗಳಿಂದ ಆರಾಧಿಸುತ್ತಿರುವ ಆರೆಸ್ಸಸ್ ತನ್ನೊಳಗೆ ಸಂಪೂರ್ಣವಾಗಿ ಟೊಳ್ಳಾದ, ದಿವಾಳಿಯಾದ, ಕೇವಲ ಕರ್ಮಠ ನೀತಿಗಳನ್ನು ನಂಬುವ ಬೌದ್ಧಿಕ ವಲಯವನ್ನು ಬೆಳೆಸಿಕೊಂಡಿದೆ. ವ್ಯಕ್ತಿ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಎನ್ನುವ ಪದಗಳು ಮತ್ತು ಜೀವನ ಕ್ರಮವನ್ನು ಆರೆಸ್ಸಸ್ ತಿರಸ್ಕರಿಸುತ್ತದೆ ಮತ್ತು ಸಂಪೂರ್ಣವಾಗಿ ನಿಷೇದಿಸುತ್ತದೆ. ಮಾತೃಭೂಮಿಯ ಕುರಿತಾಗಿ ಭಾವೋದ್ರೇಕದಿಂದ ಮಾತನಾಡುವ ಆರೆಸ್ಸಸ್ ಮಾತೃಭೂಮಿಯನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ನಡೆದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇ ಇಲ್ಲ. ಆ ಸಂದರ್ಭದಲ್ಲಿ ವಿತಂಡವಾದದಿಂದ ವರ್ತಿಸಿದ ಆರೆಸ್ಸಸ್ ಹಿಟ್ಲರ್ ನ ನಾಜಿ ಪಕ್ಷವನ್ನು ಬೆಂಬಲಿಸಿತು.

ಆರೆಸ್ಸಸ್ ಸಂಘಟನೆಯು ‘ಭಗವದ್ವಜ’ವನ್ನು ತನ್ನ ಅಧಿಕೃತ ಧ್ವಜವನ್ನಾಗಿ ಆರಿಸಿಕೊಂಡಿದೆ. ಓಂ, ಸ್ವಸ್ತಿಕ್, ಖಡ್ಗದ ಚಿತ್ರವಿರುವ ಕೇಸರಿ ಧ್ವಜವೇ ಹಿಂದೂ ರಾಷ್ಟ್ರದ ಧ್ವಜವಾಗಲಿದೆ. ಅದು ವೇದ ಕಾಲಗಳ ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ಸಾವರ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದರು. ಬೇರೆ ಸಮುದಾಯಗಳಿಗೆ, ಅನ್ಯಧರ್ಮೀಯರಿಗೆ ವಂದೇ ಮಾತರಂ ಹಾಡಬೇಕೆಂದು ಆಗ್ರಹಿಸುವ ಆರೆಸ್ಸಸ್ ತನ್ನ ಬೈಠಕ್ ಗಳಲ್ಲಿ, ಪ್ರತಿಯೊಂದು ಸಭೆಗಳಲ್ಲಿ, ಚಿಂತನಮಂಥನಗಳಲ್ಲಿ ಹಾಡುವುದು ಹೆಡ್ಗೇವಾರ್, ಗೋಳ್ವಲ್ಕರ್ ಮಾರ್ಗದರ್ಶನದಲ್ಲಿ ನಾರಾಯಣ ಭಿಡೆ ಸಂಸ್ಕೃತದಲ್ಲಿ ರಚಿಸಿದ ನಮಸ್ತೆ ಸದಾ ವತ್ಸಲೆ, ಮಾತೃಭೂಮಿ, ತ್ವಯಾ ಹಿಂದೂಭೂಮಿ ಎಂದು ಪ್ರಾರಂಭವಾಗುವ ಮತೀಯವಾದಿ ಪ್ರಾರ್ಥನಾ ಗೀತೆಯನ್ನು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೆಸ್ಸಸ್ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು.

1948ರಲ್ಲಿ ಮಹಾತ್ಮ ಗಾಂಧಿಯನ್ನು ಇದರ ಸಹಯೋಗಿ ಸಂಘಟನೆ ‘ಹಿಂದೂ ಮಹಾ ಸಭಾ’ದ ಸದಸ್ಯ ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದಾಗ 1948 ಇದರ ಚಟುವಟಿಕೆಗಳನ್ನು ನಿಷೇಧಿಸಲಾಯಿತು.

1975-1977 ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸಸ್ ನಿಷೇಧಕ್ಕೆ ಒಳಗಾಗಿತ್ತು.

1993ರ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನಿಷೇಧಕ್ಕೆ ಒಳಗಾಗಿತ್ತು.

2006ರಲ್ಲಿ ಮಾಲೆಗಾವ್ ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ( 30 ಜನರ ಸಾವು), 2007ರಲ್ಲಿ ಸಂಜೋತ ಎಕ್ಸಪ್ರೆಸ್ ಸ್ಪೋಟ ( 60 ಜನರ ಸಾವು), 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಪೋಟ (24 ಜನರ ಸಾವು), 2007ರಲ್ಲಿ ಅಜ್ಮೀರ ದರ್ಗಾ ಸ್ಪೋಟ( 3 ಜನರ ಸಾವು) ಈ ಎಲ್ಲಾ ಭಯೋತ್ಪಾದನೆಯ ದುಷ್ಕೃತ್ಯಗಳ ಹಿಂದೆ ಆರೆಸ್ಸಸ್ ನ ಕೈವಾಡವಿದೆ, ಇದರೊಂದಿಗೆ ಇತರೆ ಹಿಂದುತ್ವ ಗುಂಪುಗಳು ಕೈಜೋಡಿಸಿವೆ ಎಂದು ಆರೆಸ್ಸಸ್ನ ಹಿರಿಯ ಸದಸ್ಯ ಸ್ವಾಮಿ ಅಸ್ಸೀಮಾನಂದ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೆಯ ಹೇಳಿಕೆ ಕೊಟ್ಟಿದ್ದ. ಈ ದುಷ್ಕೃತ್ಯಗಳ ತನಿಖೆ ನಡೆಸುತ್ತಿರುವ ತನಿಖಾ ತಂಡ ಈ ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿರುವ ಅಸ್ಸೀಮಾನಂದ, ಸಾಧ್ವಿ ಪ್ರಜ್ಞಾಸಿಂಗ್, ಲೆ.ಕರ್ನಲ್ ಪುರೋಹಿತ್, ಚಂದ್ರಪ್ರತಾಪ್ ಸಿಂಗ್ ಠಾಕೂರ್ ಇನ್ನೂ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದೆ. ವಿಚಾರಣೆ ಮುಂದುವರೆಯುತ್ತಿದೆ.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ ಎಚ್ ಪಿಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ

1969ರಲ್ಲಿ ಅಹಮದಾಬಾದ್ನಲ್ಲಿ ನಡೆದ ಗಲಭೆೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ಶೆಡ್ಪುರನಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್, ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಲಿಬರ್ ಹಾನ್ ಕಮಿಷನ್ ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಈ ಆರೆಸ್ಸಸ್ ಸಂಘಟನೆಯನ್ನು ಒಂದು ಸೀಕ್ರಟ್ ಸೊಸೈಟಿ ಎಂದು ಹೇಳಿದ ನೆಹರೂ ಅವರು ಮುಂದುವರೆದು ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ನಿಜಕ್ಕೂ ಆರೆಸ್ಸಸ್ ಒಂದು ಸೀಕ್ರೆಟ್ ಸೊಸೈಟಿ. ಹಿಂದೂ ರಾಷ್ಟ್ರ ನಿರ್ಮಾಣ ಎನ್ನುವುದು ಆರೆಸ್ಸಸ್ ನ ಸಾರ್ವಜನಿಕ ಅಜೆಂಡವಾದರೆ ಅದರ ಗುಪ್ತ ಅಜೆಂಡ ಇಂದಿಗೂ ರಹಸ್ಯಮಯವಾಗಿದೆ. ವರ್ಣಾಶ್ರಮದ ಶ್ರೇಣೀಕೃತ ಸಮಾಜದ ಕನಸನ್ನು ಕಾಣುತ್ತಿರುವ ಆರೆಸ್ಸಸ್ ಅದರ ಅನುಷ್ಠಾನಕ್ಕಾಗಿ ಕಳೆದ ಎಂಬತ್ತು ವರ್ಷಗಳ ಕಾಲ ತನ್ನ ಇಡೀ ಸಂಘಟನೆಯನ್ನು ಒಂದು ಸೀಕ್ರೆಟ್ ಸೊಸೈಟಿ ಮಾದರಿಯಲ್ಲಿ ರೂಪಿಸಿತು. ಇಂದಿಗೂ ಆರೆಸ್ಸಸ್ ನ ಪ್ರಮುಖ ಸಂಚಾಲಕರು, ಮುಖ್ಯಸ್ಥರು ತಮ್ಮ ವ್ಯಕ್ತಿತ್ವದ ಆಳದಲ್ಲಿ ಅತ್ಯಂತ ನಿಗೂಢವಾಗಿ ವರ್ತಿಸುತ್ತಾರೆ. ಇಂಡಿಯಾದ ಸಂವಿಧಾನವನ್ನು ತಿರಸ್ಕರಿಸುವುದು ಸಹ ಇವರ ಸೀಕ್ರೆಟ್ ಅಜೆಂಡಾಗಳಲ್ಲೊಂದು.

ಇದಕ್ಕೆ ಇತಿಹಾಸವಿದೆ.

ಮಾನವೀಯತೆಯನ್ನು, ಜನಪರ ತತ್ವಗಳನ್ನು, ಅಹಿಂಸೆಯನ್ನು ಬೋಧಿಸಿದ ಬೌದ್ಧ ಧರ್ಮವನ್ನು ನಂತರ ಬಂದ ಭ್ರಾಹ್ಮಣ್ಯದ, ಸನಾತನವಾದಿ ಶಂಕರಾಚಾರ್ಯ ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಿ ಇದಕ್ಕೆ ಮುನ್ನುಡಿಯಾಗಿ ಶೂದ್ರರಿಗೆ ಶಿಕ್ಷಣವನ್ನು ನಿರಾಕರಿಸಿದ (ಆಗ ಈ ಹಿಂದೂ ಧರ್ಮ ಎನ್ನುವುದು ಇರಲಿಲ್ಲ.RSS ವರ್ಣಾಶ್ರಮ ಪದ್ಧತಿ ಆಚರಣೆಯಲ್ಲಿತ್ತು). ದಕ್ಷಿಣದಲ್ಲಿ ಪಲ್ಲವರು ಮತ್ತು ಉತ್ತರದಲ್ಲಿ ಚಾಲುಕ್ಯ ರಾಜಮನೆತನವನ್ನು ಬಳಸಿಕೊಂಡು ಬೌದ್ಧ ಧರ್ಮವನ್ನು ನಿರ್ಣಾಮ ಮಾಡಿದ್ದು ಈ ಶಂಕರಾಚಾರ್ಯ. ಬೌಧ್ಧರ ನಾಗಾರ್ಜುನಕೊಂಡವನ್ನು ತನ್ನ ಅನುಯಾಯಿಗಳ ಮತ್ತು ಮೇಲ್ಕಾಣಿಸಿದ ರಾಜಮನೆತನಗಳ ಬೆಂಬಲದಿಂದ ಧ್ವಂಸಗೊಳಿಸಿದ. ಅಲ್ಲಿನ ಸ್ತೂಪಗಳು, ಬೌದ್ಧ ವಿಗ್ರಹಗಳನ್ನು ಧ್ವಂಸ ಮಾಡಿದ ಕೀರ್ತಿ ಈ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಇದು ಮುಂದುವರೆದು ಉತ್ತರ ಭಾರದಾದ್ಯಾಂತ ಬೌದ್ಧ ಧರ್ಮದ ಎಲ್ಲಾ ಸ್ತೂಪಗಳು, ಸ್ಮಾರಕ, ಗ್ರಂಥಗಳನ್ನು ನಾಶಪಡಿಸಲಾಯಿತು. ಈ ಶಂಕರಾಚಾರ್ಯರಿಂದ ಪ್ರಾರಂಭಗೊಂಡ ಅನ್ಯ ಧರ್ಮೀಯರ ವಿರುದ್ಧದ ದಾಳಿ ಮತ್ತು ಹಲ್ಲೆ ಇಪ್ಪತ್ತನೇ ಶತಮಾನದ ಚರ್ಚ ಮತ್ತು ಮಸೀದಿಗಳ ಧ್ವಂಸದವರೆಗೂ ಮುಂದುವರೆದು ಡಿಸೆಂಬರ್ 3, 2014ರಲ್ಲಿ ದೆಹಲಿಯ ಸೇಂಟ್ ಸೆಬಾಸ್ಟಿಯನ್ ಚರ್ಚ ಅನ್ನು ಧ್ವಂಸಗೊಳಿಸಲಾಗಿದೆ. ಡಿಸೆಂಬರ್ 11 2014ರಂದು ಲೂಧಿಯಾನದ ಕಲವರಿ ಚರ್ಚನ ಮೇಲೆ ದಾಳಿ ಮಾಡಲಾಗಿದೆ. ಕಂಧಮಾಲ್ ನಲ್ಲಿ ಹಿಂದೂ ಸ್ವಾಮಿಯೊಬ್ಬರನ್ನು ಭೂಗತ ಹೋರಾಟಗಾರರು ಹತ್ಯೆ ಮಾಡಿದರೆ ಸಂಘ ಪರಿವಾರ ಪ್ರತೀಕಾರವಾಗಿ ಅಲ್ಲಿನ ಚರ್ಚಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿತು. ಕ್ರಿಶ್ಚಿಯನ್ನರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿತು. ಮೂಲಭೂತವಾಗಿ ‘ಭ್ರಾಹ್ಮಣ್ಯ’ದ ಧರ್ಮವನ್ನು ಹಿಂದೂಯಿಸಂನ ಐಡೆಂಟಿಟಿಯಾಗಿ ರೂಪಿಸಿದ್ದು ಆರೆಸ್ಸಸ್. ಈ ಭ್ರಾಹ್ಮಣ್ಯದ ಐಡೆಂಟಿಟಿಯನ್ನು ತೊಬತ್ತರ ದಶಕದವರೆಗೂ ಕಾಯ್ದುಕೊಂಡು ಬರಲಾಯಿತು. ಆದರೆ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಶೂದ್ರ ಸಮುದಾಯದ ಶಕ್ತಿ ರಾಜಕಾರಣವನ್ನು ಸಂಪೂರ್ಣವಾಗಿ ಬಳಸಿಕೊಂಡ ಆರೆಸ್ಸಸ್ ಇಂದು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ಒಳಗೊಳ್ಳುವಿಕೆಯ ಮಾತನಾಡುತ್ತಿದೆ.

ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು.

ಇತಿಹಾಸಕಾರ ಡಿ.ಆರ್.ಗೋಯಲ್ ಅವರು ‘ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರಸ್ಸಸ್ ಸಂತುಷ್ಟದಿಂದಿರುತ್ತದೆ’ ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ.ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಕೋಮುವಾದದ ಮನಸ್ಥಿತಿ, ಚಹರೆ, ಸ್ವರೂಪ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ,ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ. ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಸಮಾಜದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವುದರ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವುದು ಈ ಕೋಮುವಾದದ ಮತ್ತೊಂದು ಮಾದರಿಗಳಲ್ಲೊಂದು. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಆರಂಭದಲ್ಲಿ ಇಟಲಿಯ ಮುಸಲೋನಿಯ ಆಡಳಿತವನ್ನು ತನ್ನ ಸ್ವಯಂಸೇವಕರಿಗೆ ತರಬೇತಿ ಕೊಡಬೇಕೆಂದು ಕೊಂಡಾಡಿದ್ದ ಆರೆಸ್ಸಸ್ ನಂತರ ಹಿಟ್ಲರ್ ನನ್ನೂ ಪ್ರಶಂಸಿತ್ತು. ಇಂದಿಗೂ ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲೇ ಗೊಂದಲಗಳಿವೆ. ಆದರೆ 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ಚುನಾವಣೆಯ ಸಂದರ್ಭದಲ್ಲಿ ಕೋಮುವಾದವನ್ನು ಹುಟ್ಟು ಹಾಕುವುದು, ಜಾತಿಗಳ ಧೃವೀಕರಣ ಸಾಧಿಸುವುದು, ದೇಶ ವಿಭಜನೆಯ ಸಂದರ್ಭದ ಹಿಂಸಾಚಾರವನ್ನು ನೆನಪಿಸುತ್ತ ಸಿಖ್ಖರನ್ನು ಮುಸ್ಲಿಂರ ವಿರುದ್ಧ ಸಂಘಟಿಸುವುದು, ಮತಾಂತರದ ವಿರುದ್ಧ ಸಂಘಟಿತರಾಗುತ್ತಲೇ ಮರು ಮತಾಂತರ ಪ್ರಕ್ರಿಯೆ ಜಾರಿಗೊಳಿಸುವುದು, ಅನ್ಯ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವುದು, ಇವೆಲ್ಲವೂ ಕೋಮುವಾದದ ಫ್ಯಾಸಿಸಂ ಅಜೆಂಡಾಗಳು. ತನ್ನ ಪ್ರಣಾಳಿಕೆಯಲ್ಲಿ ಹಿಂದೂಯಿಸಂನ ಕುರಿತಾಗಿ ಸಮರ್ಥಿಸಿಕೊಂಡರೆ ಆಚರಣೆಯಲ್ಲಿ ಕೇವಲ ಎಲೈಟ್ ವರ್ಗಗಳ ಹಿತಾಸಕ್ತಿಯನ್ನು ಮತ್ತು ಭ್ರಾಹ್ಮಣ ಜಾತಿಯ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ.

ಮೇಲ್ಜಾತಿಗಳ ಅಧಿಪತ್ಯದಲ್ಲಿ ವರ್ಣಾಶ್ರಮ ಸಮಾಜವನ್ನು ಸ್ಥಾಪಿಸಲು ಹಿಂದೂ ಧರ್ಮದ ಇತರೇ ಜಾತಿಗಳನ್ನು ಬಳಸಿಕೊಳ್ಳುತ್ತದೆ. ಇದು ಕೋಮುವಾದದ ಫ್ಯಾಸಿಸಂ ಮುಖ. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದು ಕೋಮುವಾದ, ಫ್ಯಾಸಿಸಂ ಒಂದಕ್ಕೊಂದು ಬೆರೆತುಕೊಂಡ ಮುಖ. ರಾಮ ಜನ್ಮ ಭೂಮಿ ನಿರ್ಮಾಣಕ್ಕಾಗಿ ಹಿಂದೂ ಧರ್ಮದ ವಿವಿಧ ಜಾತಿಗಳನ್ನು ಒಗ್ಗೂಡಿಸಿ, ಶಿಲಾನ್ಯಾಸಕ್ಕಾಗಿ ಇಟ್ಟಿಗೆಗಳನ್ನು ಸಾಗಿಸುವುದು, ಅಯೋಧ್ಯೆಗೆ ರಥಯಾತ್ರೆ ಮತ್ತು ಇದೆಲ್ಲದರ ಮೂಲಕ ದೇಶಾದ್ಯಾಂತ ಗಲಭೆ,ಹಿಂಸಾಚಾರವನ್ನು ಸೃಷ್ಟಿಸುವುದು, ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕೋಮುವಾದ ಮತ್ತು ಫ್ಯಾಸಿಸಂನ ಬೆರೆತುಕೊಂಡ ಮುಖ.

ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳುnarender_modi_rss ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಕೋಮುವಾದವಾದರೆ ನಂತರ ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದು ಫ್ಯಾಸಿಸಂನ ಮುಖ. ಹಿಂದೂ ಧರ್ಮದ ಜಾತೀಯತೆ ಮತ್ತು ಅಸಮಾನತೆಯ ದೌರ್ಜನ್ಯಕ್ಕೆ ಬಲಿಯಾದ ತಳಸಮುದಾಯಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದನ್ನು ಕಟುವಾಗಿ ಟೀಕಿಸುವ ಆರೆಸ್ಸಸ್ ಈ ರೀತಿ ಮತಾಂತರಗೊಂಡವರನ್ನು ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಸ್ಲೋಗನ್ ಅಡಿಯಲ್ಲಿ ಮರು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ಆದರೆ ಪೂರ್ವ ಮತ್ತು ಈಶಾನ್ಯ ಭಾರತದ ಆದಿವಾಸಿ ಸಮುದಾಯ ಸುಮಾರು ಮೂರು ತಲೆಮಾರುಗಳ ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿವೆ. ಅವರ ಧಾರ್ಮಿಕ ನಂಬಿಕೆ, ಅವೈದಿಕ ಆಚರಣೆಗಳು ಈ ಹಿಂದೂ ಧಾರ್ಮಿಕತೆಗಿಂತಲೂ ಸಂಪೂರ್ಣ ಭಿನ್ನವಾಗಿದೆ. ಆದರೆ ಮತೀಯವಾದಿ ಸಂಘ ಪರಿವಾರ ‘ಘರ್ ವಾಪಸಿ’ ಹೆಸರಿನಲ್ಲಿ ಅವರಿಗೆ ಪರಕೀಯವಾದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಇಡೀ ಪ್ರಕ್ರಿಯೆಯೇ ಹಿಂಸಾಚಾರದಿಂದ ರೂಪುಗೊಂಡಿದೆ. ಎಂಬತ್ತರ ದಶಕದಲ್ಲಿ ತಮಿಳುನಾಡಿನ ಮೀನಾಕ್ಷಿಪುರಂ ಮತಾಂತರದ ಹಿಂಸೆಯಿಂದ ಮೊದಲುಗೊಂಡು ಇತ್ತೀಚಿನ ಅಗ್ರಾದಲ್ಲಿ ನಡೆದ ಮರು ಮತಾಂತರದ ಪ್ರಹಸನದವರೆಗೂ ಸಂಘ ಪರಿವಾರದ ಹಿಂಸೆ ವಿಜೃಂಭಿಸಿದೆ. ಹೀಗೆ ಕೋಮುವಾದ ಮತ್ತು ಫ್ಯಾಸಿಸಂ ಎರಡನ್ನೂ ಒಂದುಗೂಡಿಸಿದ ಆರೆಸ್ಸಸ್ ತನ್ನ ಸಂಘಟನೆಗೆ ವಿ ಎಚ್ ಪಿ ಮತ್ತು ಬಜರಂಗದಳ ಗುಂಪುಗಳ ಮೂಲಕ ಮಿಲಿಟೆಂಟ್ ಸ್ವರೂಪವನ್ನು ಪಡೆದುಕೊಂಡಿದೆ.

ಸಂಘಪರಿವಾರದ ಫ್ಯಾಸಿಸಂ ಮತ್ತು ಕೋಮುವಾದ ಒಟ್ಟಿಗೆ ಮೇಳೈಸಿದ ತೀರಾ ಇತ್ತೀಚಿನ ಉದಾಹರಣೆ ಎಂದರೆ ಗೋಹತ್ಯೆ ನಿಷೇಧ ಕಾನೂನು. 2015ರಲ್ಲಿ ದನ, ಎಮ್ಮೆ, ಗೋವುಗಳ ಹತ್ಯೆ ನಿಷೇಧ ಮಸೂದೆಯನ್ನು ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದುಕೊಂಡ ನಂತರ ಮಹರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಇನ್ನು ಮುಂದೆ ಆ ರಾಜ್ಯದಲ್ಲಿ ಬೀಫ್ ಮಾರಾಟ ಮಾಡಿದರೆ, ಸೇವಿಸಿದರೆ, ಅದರ ತುಂಡನ್ನು ಕೈಯಲ್ಲಿ ಹಿಡಿದರೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಲು ತುದಿಗಾಲಲ್ಲಿರುವ ಮಧ್ಯಪ್ರದೇಶ ಸರ್ಕಾರವು ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ನಿಗದಿಪಡಿಸಲು ನಿರ್ಧರಿಸಿದೆ. ಹರ್ಯಾಣ ರಾಜ್ಯವು 9 ವರ್ಷಗಳ ಶಿಕ್ಷೆಯನ್ನು ಜಾರಿಗೊಳಿಸಲು ಚಿಂತಿಸುತ್ತಿದೆ. 2004ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಗೋಹತ್ಯಾ ನಿಷೇಧಕ್ಕೆ ಸಂಬಂಧಪಟ್ಟಂತೆ ಮಸೂದೆಯನ್ನು ಜಾರಿಗೊಳಿಸಿದ್ದರು.

ಆ ಮಸೂದೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಕಾರಣ ಕೊಡುತ್ತ ‘ಮನುಸ್ಮುತಿಯಲ್ಲಿ ಗೋ ಹತ್ಯೆಯನ್ನು ಅಕ್ಷಮ್ಯ ಅಪರಾಧವೆಂದು ಅದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆಯಲಾಗಿದೆ’ ಅದಕ್ಕೇ ಈ ಮಸೂದೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಬಿಜೆಪಿ ಪಕ್ಷವು ಸಂವಿಧಾನಿಕ ಮಸೂದೆಯೊಂದನ್ನು ಜಾರಿಗೊಳಿಸಲು ಮನುಸ್ಮುತಿಯನ್ನು ಬಳಸಿಕೊಂಡಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯದಾಗಿತ್ತು. ಆರೆಸ್ಸಸ್ ಮತ್ತು ಅದರ ಎಲ್ಲಾ ಪರಿವಾರ ಸಂಘಟನೆಗಳು ಈ ಗೋಹತ್ಯೆ ನಿಷೇಧಗೊಂಡ ಭಾರತವನ್ನು ನೆನಪಿಸಿಕೊಂಡು, ಸನಾತನ ಹಿಂದೂ ಧರ್ಮದ ಭಾರತವನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತಾ ಈ ಸನಾತನ ಭಾರತದಲ್ಲಿ ಮನುಷ್ಯರಿಗಿಂತ ಗೋವುಗಳು ಮುಖ್ಯ ಎಂದು ಎಚ್ಚರಿಸುತ್ತಿದ್ದಾರೆ. ಹೌದು ಇದು ನಿಜ. ಅಕ್ಟೋಬರ್ 12,2002 ರಂದು ಹರ್ಯಾಣ ರಾಜ್ಯದ ಜಾಜ್ಜರ್ ಪಟ್ಟಣದ ದುಲಿನಾ ಪೋಲಿಸ್ ಚೌಕಿಯ ಬಳಿ ದನಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಆಪಾದನೆಯ ಮೇಲೆ ಬಂಧಿತರಾಗಿದ್ದ 5 ದಲಿತರನ್ನು ಸುಮಾರು ಐನೂರು ಜನರ ಲುಂಪೆನ್ ಗುಂಪು ಕೊಚ್ಚಿ ಕೊಂದು ಹಾಕಿತು.

ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಾಂಧೀಜಿ ಹಂತಕ, ಚಿತ್ಪಾವನ್ ಭ್ರಾಹ್ಮಣ, ಹಿಂದೂ ಮಹಾಸಭಾದ ಸದಸ್ಯ ಗೋಡ್ಸೆಯನ್ನು ಒಬ್ಬ ದೇಶಭಕ್ತ ಎಂದು ಬಣ್ಣಿಸಿದ್ದರು. ಹಿಂದೂ ಮಹಾಸಭಾದ ಅಧ್ಯಕ್ಷ ಚಂದ್ರ ಪ್ರಸಾದ್ ಕೌಶಿಕ್ ‘ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ನಡೆದ ಘಟನೆಗಳನ್ನು ಕೂಲಂಕುಶ ತನಿಖೆ ಆಗಬೇಕಿದೆ. ಗೋಡ್ಸೆಯವರು ನಿಜಕ್ಕೂ ಹಂತಕನಲ್ಲ, ಆದರೆ ಗಾಂಧಿಯನ್ನು ಕೊಲ್ಲುವಂತೆ ಪ್ರೇರೇಪಿಸಲಾಗಿತ್ತು’ ಎಂದು ಹೇಳುತ್ತಾರೆ. ಈ ಹಿಂದೂ ಮಹಾ ಸಭಾ ದೇಶದ ಹದಿಮೂರು ಜಿಲ್ಲೆಗಳಲ್ಲಿ ಈ ಹಂತಕ ಗೋಡ್ಸೆ ಮೂರ್ತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಗಾಂಧಿ ಲೆಗಸಿಯನ್ನು ಮಣ್ಣುಗೂಡಿಸಿ ಸ್ವಚ್ಛ ಭಾರತ ಎನ್ನುವ ಸವಕಲು ಸ್ಲೋಗನ್ನಿನ ಮೂಲಕ ಗಾಂಧಿಯನ್ನು ಹಿಂದೂಯಿಸಂನ ಜಠರದೊಳಗೆ ಜೀರ್ಣಿಸಿಕೊಳ್ಳಲಾಗಿದೆ.ಮುಂದುವರೆದ ಭಾಗವಾಗಿ ತಪ್ಪುದಾರಿಗೆಳೆಯಲ್ಪಟ್ಟ ದೇಶಭಕ್ತ ಎಂದು ಈ ಗೋಡ್ಸೆಯ ವೈಭವೀಕರಣದ ಮೂಲಕ ಸೆಕ್ಯುಲರಿಸಂ, ಮಾನವತವಾದದ ತತ್ವಗಳನ್ನು ಮಣ್ಣುಗೂಡಿಸಿ ನವಫ್ಯಾಸಿಸಂ ಮಾದರಿಯ ‘ಗೋಡ್ಸೆ ಸಿದ್ಧಾಂತ’ವನ್ನು ತೇಲಿ ಬಿಡುತ್ತಾ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬಿತ್ತಲಾಗುತ್ತಿದೆ.

ಈ ಮತೀಯವಾದಿ ಆರೆಸ್ಸಸ್ ನ ಸೀಕ್ರೆಟ್ ಸೊಸೈಟಿಯ ಗುಪ್ತ ಅಜೆಂಡಾದ ಮತ್ತೊಂದು ಸಾರ್ವಜನಿಕ ಅವತಾರ ‘ಹಿಂದೂ ರಾಷ್ಟ್ರೀಯತೆ’. 1909ರಲ್ಲಿ ‘ಹಿಂದೂ ಸಾಯುತ್ತಿರುವ ಧರ್ಮ’ ಹೆಸರಿನ ಕರಪತ್ರದಲ್ಲಿ ‘ಮುಂದಿನ ಕೆಲವು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ, ಮುಸ್ಲಿಂರು ಬಹುಸಂಖ್ಯಾರಾಗುತ್ತಾರೆ’ ಎಂದು ಪ್ರಚೋದನಾತ್ಮಕವಾಗಿ ಬರೆಯಲಾಗಿತ್ತು. 1923ರಲ್ಲಿ ‘ಹಿಂದೂ ಎಂದರೆ ಏನು’ ಎನ್ನುವ ಲೇಖನದಲ್ಲಿ ಸಾವರ್ಕರ್ ಅವರು ‘ಹಿಮಾಲಯದ ತಪ್ಪಲಿನಿಂದ ಹಿಂದೂ ಮಹಾಸಾಗರದವರೆಗಿನ ಭೂಖಂಡವನ್ನು ಪಿತೃಭೂಮಿ, ಪವಿತ್ರ ಭೂಮಿ ಎಂದು ಪೂಜಿಸುವ ಹಿಂದೂ, ಜೈನ ಧರ್ಮಗಳ ಅನುಯಾಯಿಗಳು ಇಲ್ಲಿನ ನಾಗರಿಕರು. ಇತರೇ ಧರ್ಮೀಯರು ಬೇರೆ ಭೂಖಂಡವನ್ನು ಹುಡುಕಿಕೊಳ್ಳಬೇಕು’ ಎಂದು ಬರೆಯುತ್ತಾರೆ. ಅದೇ ಕಾಲದಲ್ಲಿ ‘ಮುಸ್ಲಿಂರು, ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರಿಕರೆಂದು ಕರೆದ ಗೋಲ್ವಲ್ಕರ್ ಮುಂದುವರೆದು ಇವರನ್ನು ದೇಶದ ಅಂತರಿಕ ಶತೃಗಳೆಂದು ಜರೆದರು. ಗೋಳ್ವಲ್ಕರ್, ಸಾವರ್ಕರರಿಂದ ಮೊದಲುಗೊಂಡು ಇಂದಿನ ಮೋಹನ್ ಭಾಗವತ್ವರೆಗೂ ಎಲ್ಲರೂ ಭಾರತವನ್ನು ಅದರ ಧಾರ್ಮಿಕತೆಯನ್ನು ‘ಹಿಂದೂ ರಾಷ್ಟ್ರೀಯತೆ’ಯೊಂದಿಗೆ ನಂಟು ಹಾಕುತ್ತ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯದ ಮಾಡೆಲ್ ಅನ್ನು ತಿರಸ್ಕರಿಸುತ್ತಾರೆ.

ಕಲೋನಿಯಲ್ ಆಡಳಿತ ವಿರೋಧಿಸಿದ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಇಪ್ಪತ್ತು ಮತ್ತು ಮೂವತ್ತರ ದಶಕಗಳಲ್ಲಿRSS-mohanbhagwat ‘ಸೆಕ್ಯುಲರಿಸಂ’ ಅನ್ನು ‘ರಾಷ್ಟ್ರೀಯತೆ’ಯೊಂದಿಗೆ ಸಮೀಕರಿಸಿದರೆ ಈ ಸಮೀಕರಣವನ್ನೇ ಹೈಜಾಕ್ ಮಾಡಿದ ಆರೆಸ್ಸಸ್ ರಾಷ್ಟ್ರೀಯತೆಯನ್ನು ಕೋಮುವಾದದೊಂದಿಗೆ ಸಮೀಕರಿಸಿಬಿಟ್ಟಿತು. ನೆಹರೂ ಯುಗ ಪ್ರಾರಂಭಗೊಂಡು ಇಂದಿರಾಗಾಂಧಿ ತೀರಿಕೊಳ್ಳುವುವರೆಗೂ ಆರೆಸ್ಸಸ್ ನ ಈ ‘ಹಿಂದೂ ರಾಷ್ಟ್ರೀಯತೆ’ ತನ್ನ ಹೆಡೆ ಬಿಚ್ಚಲಿಕ್ಕೆ ಸಾಧ್ಯವಾಗಲಿಲ್ಲ. ತೊಂಬತ್ತರ ದಶಕದ ಜಾಗತೀಕರಣ ಈ ‘ಹಿಂದೂ ರಾಷ್ಟ್ರೀಯತೆ’ ಮರಳಿ ಮುಖ್ಯಧಾರೆಯಲ್ಲಿ ಚರ್ಚೆಗೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಮೂಲಭೂತವಾಗಿ ತಮ್ಮ ಚಹರೆಗಳಲ್ಲಿ, ನಡುವಳಿಕೆಗಳಲ್ಲಿ, ವ್ಯಕ್ತಿತ್ವದಲ್ಲಿ ಧಾರ್ಮಿಕ ನಂಬಿಕೆಯನ್ನು ಶ್ರದ್ಧಾಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದ ಇಂಡಿಯಾದ ಮಧ್ಯಮವರ್ಗ ಕಳೆದ ಎರಡು ದಶಕಗಳಲ್ಲಿ ‘ಮುಸ್ಲಿಂ ಭಯೋತ್ಪಾದನೆ’ ಎನ್ನುವ ಫೋಬಿಯಾಗೆ ಬಲಿಯಾಗಿ ಅದನ್ನು ವಿರೋಧಿಸಲು ಈ ಹಿಂದೂ ರಾಷ್ಟ್ರೀಯತೆಯ ಕಡೆಗೆ ಚಲಿಸತೊಡಗಿದರು. ಇಂದು ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆರೆಸ್ಸಸ್ ನ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ ಎಲ್ಲೆಲ್ಲೂ ಪ್ರತ್ಯಕ್ಷಗೊಳ್ಳತೊಡಗಿದೆ. ಮೊಟ್ಟ ಮೊದಲ ಬಾರಿಗೆ ಇಂದಿನ ದಿನಗಳಲ್ಲಿ ದಸರಾ, ಗಣೇಶನ ಹಬ್ಬ, ದೀಪಾವಳಿಗಳಂತಹ ಹಿಂದೂ ಹಬ್ಬಗಳು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ಮಧ್ಯಮವರ್ಗಗಳೂ ಸಹ ಈ ಸೋಕಾಲ್ಡ್ ರಾಷ್ಟ್ರೀಯ ಹಬ್ಬಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೂ ರಾಷ್ಟ್ರೀಯತೆಯಲ್ಲಿ ಹಿಂದುತ್ವದ ಹೊರತಾಗಿ ಬೇರೆ ಪರ್ಯಾಯ ಪಠ್ಯಗಳು, ಧರ್ಮಗಳು, ಸಂಸ್ಕೃತಿಗಳಿಗೆ ಸ್ಥಾನ ಇರುವುದೇ ಇಲ್ಲ.

ಈ ಸೀಕ್ರೆಟ್ ಸೊಸೈಟಿ ಆರೆಸ್ಸಸ್ ನ ಬಿಜೆಪಿ ಪಕ್ಷ ಇಂದು ರಾಜಕೀಯವಾಗಿ ಅಧಿಕಾರದಲ್ಲಿದೆ. ಸಧ್ಯದ ಪರಿಸ್ಥಿಯಲ್ಲಿ ಏಕಾಏಕಿ ಸಂವಿಧಾನವನ್ನು ಧಿಕ್ಕರಿಸಿ ಮರಳಿ ವರ್ಣಾಶ್ರಮಕ್ಕೆ ಮರಳಲು ಸಾಧ್ಯವಿಲ್ಲ ಎಂದು ಅರಿತಿರುವ ಆರೆಸ್ಸಸ್ ಇದಕ್ಕಾಗಿ ದೂರಗಾಮಿ ಯೋಜನೆಗಳನ್ನು ಹಾಕಿಕೊಂಡಿದೆ. 56 ಇಂಚಿನ ಎದೆಯ ನರೇಂದ್ರ ಮೋದಿ ಎಲ್ಲರ ವಿಕಾಸ, ಆಡಳಿತ ಮತ್ತು ಅಭಿವೃದ್ಧಿಯ ಸ್ಲೋಗನ್ ಅನ್ನು ತಮ್ಮ ಸರ್ಕಾರದ ಆದ್ಯತೆ ಎನ್ನುತ್ತಿರುವಾಗಲೇ ಮತ್ತೊಂದೆಡೆ ಆರೆಸ್ಸಸ್ ತನ್ನ ಸೀಕ್ರೆಟ್ ಅಜೆಂಡಾಗಳನ್ನು ಕ್ಷಣವೂ ವ್ಯರ್ಥ ಮಾಡದೆ ಏಕಕಾಲಕ್ಕೆ ಕಾರ್ಯರೂಪಕ್ಕೆ ತರುತ್ತಿದೆ. ಈ ಹಿಂದೆ ಧಾರ್ಮಿಕ ವ್ಯಕ್ತಿಗಳನ್ನು ಮಾಡಿಕೊಂಡಂತೆ ರಾಜಕೀಯ, ಸಾಮಾಜಿಕ ನಾಯಕರನ್ನು (ವಿವೇಕಾನಂದ, ವಲ್ಲಭಾಯಿ ಪಟೇಲ್, ಗಾಂಧಿ, ಅಂಬೇಡ್ಕರ್, ಪುಲೆ ದಂಪತಿಗಳು) ತನ್ನ ಹಿಂದುತ್ವಕ್ಕೆ appropriation ಮಾಡಿಕೊಳ್ಳುವುದು ಆರೆಸ್ಸೆಸ್ ನ ಪ್ರಮುಖ ಕಾರ್ಯಸೂಚಿ. ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರದ ಹಿಂದೂ ಮಹಾ ಸಭಾ ಇಂದು ಅಕ್ಟೋಬರ್ 2 ಗಾಂಧಿ ಹುಟ್ಟಿದ ದಿನವನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿತ್ತು. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿತ್ತು. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.

ತೊಂಬತ್ತರ ದಶಕದಲ್ಲಿ ಬಿಎಸ್ಪಿ ಪಕ್ಷವು ಮೇಲ್ಮುಖ ಚಲನೆಯಾಗಿ ‘ಬಹುಜನ’ರಿಂದ ‘ ಸರ್ವಜನ’ ಎನ್ನುವ ಘೋಷಣೆಯೊಂದಿಗೆ ರಾಜಕೀಯ ರೂಪಿಸಿದ್ದರೆ ಇಂದು ಅದನ್ನು ಬುಡಮೇಲು ಮಾಡಿರುವ ಆರೆಸ್ಸಸ್ ‘ಸರ್ವಜನ’ ರಿಂದ ‘ಬಹುಜನ’ರ ಕಡೆಗೆ ಎನ್ನುವ ಸಿದ್ಧಾಂತವನ್ನು ರೂಪಿಸುತ್ತಿದೆ. ತಳಸಮುದಾಯಗಳನ್ನು, ಆದಿವಾಸಿಗಳನ್ನು ಬಹುಸಂಖ್ಯಾತ ಎನ್ನುವ ತತ್ವದಲ್ಲಿ appropriation ಮಾಡಿಕೊಳ್ಳುವುದು ಈ ಆರೆಸ್ಸಸ್ ನ ಬಲು ಮುಖ್ಯ ಅಜೆಂಡಾಗಳಲ್ಲೊಂದು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ನಿರಂತರವಾಗಿ ನಡೆದ ಅಭಿವ್ಯಕ್ತಿ ಸ್ವಾತಂತ್ರದ ದಮನ, ಕೋಮು ಗಲಭೆಗಳು, ಅನ್ಯ ಧರ್ಮೀಯರ ಮೇಲಿನ ಹಲ್ಲೆಗಳು, ಪಠ್ಯ ಪುಸ್ತಕಗಳ ಮತೀಯವಾದಿಕರಣ, ಇತಿಹಾಸವನ್ನು ಪುನ ರಚನೆಗಳಂತಹ ಸಂಗತಿಗಳನ್ನು ಅವಲೋಕಿಸಿದಾಗ ಸಂವಿಧಾನದ ಕಲಮು 15(1) ಅನುಸಾರ ಜಾತಿ, ಧರ್ಮ, ಬಣ್ಣ, ಲಿಂಗ ಆಧಾರದ ಮೇಲೆ ತಾರತಮ್ಯ ನೀತಿಯನ್ನು ನಿಷೇಧಿಸಲಾಗಿದೆ ಎನ್ನುವ ತತ್ವವು ಇನ್ನು ಮುಂದಿನ ದಿನಗಳಲ್ಲಿ ಅಪ್ರಸ್ತುತಗೊಳ್ಳುತ್ತದೆ.

ಇದು ಆರೆಸಸ್ ಮತ್ತು ಅದರ ಕುಟುಂಬದ ಮತೀಯವಾದದ ಶೈಲಿ. ಅಪ್ಪಟ ಫ್ಯಾಸಿಸ್ಟ್ ಶೈಲಿ.