Category Archives: ಸೂರ್ಯ ಮುಕುಂದರಾಜ್

ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?