Category Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 5)


– ಡಾ.ಎನ್.ಜಗದೀಶ ಕೊಪ್ಪ 


ಕಾರ್ಬೆಟ್‌ ಪಾಲಿಗೆ ಶಾಲೆಗಿಂತ ಹೆಚ್ಚಾಗಿ ಅರಣ್ಯವೇ ಪಾಠಶಾಲೆಯಾಯಿತು. ಬಿಡುವಿನ ವೇಳೆಯಲ್ಲಿ ಹಾಗೂ ಶಾಲಾ ರಜಾದಿಗಳಲ್ಲಿ ತಮ್ಮ ಮನೆಯ ಸಾಕು ನಾಯಿಗಳ ಜೊತೆ ರೈಫಲ್ ಹಿಡಿದು ಕಾರ್ಬೆಟ್‌ ಕಲದೊಂಗಿ ಹಾಗೂ ನೈನಿತಾಲ್ ನಡುವಿನ ಅರಣ್ಯ ಪ್ರದೇಶಕ್ಕೆ ಶಿಖಾರಿಗೆ ಹೊರಟು ಬಿಡುತಿದ್ದ. ತೀರಾ ಅರಣ್ಯದ ಮಧ್ಯ ಭಾಗಕ್ಕೆ ಕಾರ್ಬೆಟ್‌ ಹೋಗುತ್ತಿರಲಿಲ್ಲ. ಬದಲಾಗಿ ಕಲದೊಂಗಿಯಿಂದ ನೈನಿತಾಲ್‌ಗೆ ಅಂಚೆಯವರು, ಪಾದಯಾತ್ರಿಗಳು, ಯಾತ್ರಿಕರು ತೆರುಳುತಿದ್ದ ಹಾದಿಯ ಪಕ್ಕದಲ್ಲಿ ಶಿಖಾರಿಯಲ್ಲಿ ತೊಡಗಿರುತಿದ್ದ. ಈ ರಸ್ತೆಯ ಮಧ್ಯೆ ಕೊಟಾ ಎಂಬ ಹಳ್ಳಿ ಇದ್ದುದರಿಂದ ಉರುವುಲು ಆಯ್ದುಕೊಳ್ಳುವುದಕ್ಕೆ ಮಹಿಳೆಯರು ಬರುತಿದ್ದರು. ಜೊತೆಗೆ ಅವರಿಗೆ ಬೆಂಗಾಲಾಗಿ ಹಳ್ಳಿಯ ಗಂಡಸರು ತಮ್ಮ ಜಾನುವಾರುಗಳನ್ನ ಮೇಯಿಸುತ್ತಾ ಅಲ್ಲೇ ಇರುತಿದ್ದರು. ಸಾಮಾನ್ಯವಾಗಿ ಕಾಡಿನ ಅಪಾಯಕಾರಿ ಪ್ರಾಣಿಗಳು ಮನುಷ್ಯರು ಇರುವ ಕಡೆ ಸುಳಿಯುತ್ತಿರಲಿಲ್ಲ. ಇದರ ಜೊತೆಗೆ ಕಾರ್ಬೆಟ್‌ ಪ್ರಾಣಿಗಳನ್ನು ನಾವು ಉದ್ರೇಕಿಸದ ಹೊರತು ಅವು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂಬುದನ್ನು ಅನುಭವದಿಂದ ಮನವರಿಕೆ ಮಾಡಿಕೊಂಡಿದ್ದ.

ನೈನಿತಾಲ್ ಪರ್ವತ ಪ್ರದೇಶಕ್ಕೆ ಹೊಂದಿಕೊಂಡಿದ್ದ ಆ ಅರಣ್ಯದಲ್ಲಿ ಕೆಲೆವೆಡೆ 50 ಅಡಿ ಎತ್ತರದ ಮರಗಳಿದ್ದರೆ, ಮತ್ತೆ ಕೆಲವೆಡೆ ಸಮತಟ್ಟಾದ ಪ್ರದೇಶವಿದ್ದು 8ರಿಂದ 10 ಅಡಿ ಎತ್ತರ ಬೆಳೆಯುತಿದ್ದ ಹಲ್ಲುಗಾವಲಿನ ಪ್ರದೇಶವಿರುತ್ತಿತ್ತು. ಇಲ್ಲಿ ಬಗೆ ಬಗೆಯ ಪಕ್ಷಿಗಳು ಇರುತ್ತಿದ್ದರಿಂದ ಈ ಪ್ರದೇಶ ಕಾರ್ಬೆಟ್‌ಗೆ ಅಚ್ಚು ಮೆಚ್ಚಿನ ಬೇಟೆಯ ತಾಣವಾಗಿತ್ತು. ಮಳೆಗಾಲದಲ್ಲಿ ಅನೇಕ ಬಗೆಯ ಕಾಡುಕೋಳಿ ಮತ್ತು ಹುಂಜಗಳು ಈ ಸ್ಥಳಕ್ಕೆ ಬರುತ್ತಿದ್ದರಿಂದ ಅವುಗಳನ್ನು ಬೇಟೆಯಾಡುವುದು ಅವನ ಹವ್ಯಾಸವಾಗಿತ್ತು. ಪೊದೆಯೊಳಕ್ಕೆ ಹೊಕ್ಕ ಯಾವುದೇ ಪಕ್ಷಿ ಅಥವಾ ಪ್ರಾಣಿಯ ಮೇಲೆ ಕಾರ್ಬೆಟ್‌ ಗುಂಡು ಹಾರಿಸುತ್ತಿರಲಿಲ್ಲ. ಏಕೆಂದರೆ, ಪೊದೆಯ ಗಿಡಗಳನ್ನು ಉರುವಲಿಗಾಗಿ ಕಡಿಯುತ್ತಾ ಮಹಿಳೆಯರು ಆ ಜಾಗದಲ್ಲಿರುವುದನ್ನ ಮನಗಂಡಿದ್ದ ಅವನು ಬಂದೂಕಿನಿಂದ ಗುಂಡು ಹಾರಿಸುವಾಗ ಎಚ್ಚರಿಕೆ ವಹಿಸುತಿದ್ದ. ಬೇಟೆಯ ಸಂದರ್ಭದಲ್ಲಿ ಸ್ಥಳೀಯರ ಜೊತೆ ಸದಾ ಒಡನಾಡುತ್ತಿದ್ದರಿಂದ ಅವರ ಭಾಷೆ, ಸಂಸ್ಕೃತಿ ಎಲ್ಲವನ್ನು ಅರಿಯತೊಡಗಿದ.

ಪಕ್ಷಿ ಮತ್ತು ಮೊಲಗಳಂತಹ ಚಿಕ್ಕ ಪ್ರಾಣಿಗಳ ಬೇಟಿಯನ್ನು ಹೊರತುಪಡಿಸಿ, ಎಂದೂ ದೊಡ್ಡ ಪ್ರಾಣಿಗಳನ್ನು ಬೇಟಿಯಾಡಿ ಅನುಭವವಿಲ್ಲದ ಕಾರ್ಬೆಟ್‌ ತನ್ನ ಹನ್ನೊಂದನೇ ವಯಸ್ಸಿಗೆ ಪ್ರಥಮ ಭಾರಿಗೆ ಏಕಾಂಗಿಯಾಗಿ ತೋಳವೊಂದನ್ನು ಬೇಟೆಯಾಡಿದ. ಅದೊಂದು ದಿನ ನವಿಲು ಅಥವಾ ಕಾಡುಕೋಳಿಗಳನ್ನು ಬೇಟೆಯಾಡಿ ಬರಲು ಹೋದ ಕಾರ್ಬೆಟ್‌ ಕಾಡಿನ ನವಿಲು, ಹುಂಜ, ಪಕ್ಷಿಗಳ ವಿಚಿತ್ರ ಶಬ್ಧ ಅಪಾಯದ ಸೂಚನೆಗಳನ್ನು ಕೊಡುತ್ತಿರುವುದನ್ನು ಅರಿತು ತಾನಿದ್ದ ಕಣಿವೆ ಪ್ರದೇಶದ ಬಳಿ ಬಂದು ಕಲ್ಲಿನ ಬಂಡೆಗೆ ಒರಗಿ ಹೆಗಲಿಗೆ ಬಂದೂಕು ಇಟ್ಟು ಅಪಾಯ ಎದುರಿಸಲು ಸಿದ್ಧನಾಗಿ ಕುಳಿತ. ತನ್ನ ಹಿಂಬದಿಗೆ ಬೃಹತ್ ಬಂಡೆ ಇದ್ದು ಹಿಂಬದಿಯಿಂದ ಪ್ರಾಣಿ ದಾಳಿ ಮಾಡುವ ಸಾಧ್ಯತೆ ಇಲ್ಲದ್ದರಿಂದ ಅವನ ಗಮನವೆಲ್ಲಾ ತನ್ನ ಮುಂದೆಯೇ ಕೇಂದ್ರೀಕೃತವಾಗಿತ್ತು. ಕಡೆಗೂ ಅವನ ನಿರಿಕ್ಷೆಯಂತೆ ಕಣಿವೆಯೊಂದರ ಪೊದೆಯಿಂದ ಘೀಳಿಡುತ್ತಾ ಹೊರಬಂದ ತೋಳ ಒಂದು ಕ್ಷಣ ಕಾರ್ಬೆಟ್‌ನನ್ನು ಗಮನಿಸಿ, ಈತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂಬುದನ್ನ ಖಾತರಿಪಡಿಸಿಕೊಂಡು ಹೊರಡಲು ಅಣಿಯಾಗುತ್ತಿದ್ದಂತೆ ಕಾರ್ಬೆಟ್‌ ಅದರ ಎದೆಯನ್ನ ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ. ಬಂದೂಕಿನಿಂದ ಗುಂಡು ಸಿಡಿದ ತಕ್ಷಣ ಕಪ್ಪು ಹೊಗೆ ಆವರಿಸಿಕೊಂಡಿದ್ದರಿಂದ ಗುಂಡು ತೋಳಕ್ಕೆ ತಾಗಿತೊ, ಅಥವಾ ಇಲ್ಲವೊ ಎಂಬುದು ಗೊತ್ತಾಗಲಿಲ್ಲ. ಆ ಕಾಲದಲ್ಲಿ ಈಗಿನಂತೆ ಸುಧಾರಿತ ತೋಟಗಳು ಬಳಕೆಯಲ್ಲಿ ಇರಲಿಲ್ಲ. ಕಪ್ಪು ಬಣ್ಣದ ಗನ್ ಪೌಡರ್ ಅನ್ನು ಗೋಲಿ ಗಾತ್ರದ ಉಂಡೆಗಳನ್ನಾಗಿ ಮಾಡಿ ಬಳಸಲಾಗುತ್ತಿತ್ತು. ಗುಂಡು ಹಾರಿದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ತೋಳಕ್ಕೆ ಗೊಂಡು ತಾಗಿರುವುದು ಅಲ್ಲಿ ಬಿದ್ದಿದ್ದ ರಕ್ತದ ಕಲೆಗಳಿಂದ ಖಾತರಿಯಾಯಿತು. ಆದರೆ ಯಾವ ಸ್ವರೂಪದ ಗಾಯವಾಗಿದೆ ಎಂಬುದು ಕಾರ್ಬೆಟ್‌ಗೆ ತಿಳಿಯದಾಯ್ತು. ಏಕೆಂದರೆ, ಅದು ಅವನ ಮೊದಲ ಬೇಟೆಯಾಗಿತ್ತು. ಮುಂದಿನ ದಿನಗಳಲ್ಲಿ ಅವನು ಎಷ್ಟೊಂದು ನಿಷ್ಣಾತನಾದನೆಂದರೆ, ರಕ್ತದ ಕಲೆ, ಅದರ ಒಣಗಿರುವಿಕೆ, ಅಥವಾ ಹಸಿಯಾಗಿರುವ ರೀತಿಯ ಮೇಲೆ ಪ್ರಾಣಿಗಳ ಭವಿಷ್ಯವನ್ನು ಹೇಳುತ್ತಿದ್ದ.

ರಕ್ತದ ಕಲೆಯ ಜಾಡು ಹಿಡಿದು ಸಮಾರು ನೂರು ಅಡಿ ಹೋಗಿ ನೋಡಿದಾಗ, ಪೊದೆಯೊಂದರ ಬಳಿ ಅರೆ ಜೀವವಾಗಿ ಒದ್ದಾಡುತ್ತಾ ಬಿದ್ದಿದ್ದ ತೋಳವನ್ನು ಕಂಡಕೂಡಲೇ ಅದರ ತಲೆಗೆ ಗುಂಡು ಹಾರಿಸಿ.ಕೊಂದು ಹಾಕಿದ. ಕಾರ್ಬೆಟ್‌ ಬೇಟೆಯಾಡಿದ ಸಮಯ ಇಳಿ ಸಂಜೆಯಾದ್ದರಿಂದ ಸ್ಥಳೀಯ ಗ್ರಾಮಸ್ಥರನ್ನು ಕರೆಸಿ ಮನೆಗೆ ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅದರ ಕಳೇಬರವನ್ನ ಪೊದೆಯಲ್ಲಿ ಸೊಪ್ಪುಗಳಿಂದ ಮುಚ್ಚಿ ಹಾಕಿದ. ತನ್ನ ಶಿಖಾರಿ ಸಾಹಸಕ್ಕೆ ಸಾಕ್ಷಿಯಾಗಿ ಇರಲಿ ಎಂಬಂತೆ ಅದರ ಬಾಲವನ್ನ ಕತ್ತರಿಸಿಕೊಂಡು, ಮೂರು ಮೈಲು ದೂರವಿದ್ದ ನೈನಿತಾಲ್ ಮನೆಗೆ ಓಡಿ ಬಂದು ತನ್ನ ತಾಯಿ, ಮತ್ತು ಸಹೋದರಿ ಮ್ಯಾಗಿಗೆ ಸುದ್ಧಿ ತಿಳಿಸಿದ. ಬಾಲಕ ಕಾರ್ಬೆಟ್‌ನ ಸಾಹಸಕ್ಕೆ ಖುಷಿಗೊಂಡ ಮ್ಯಾಗಿ ತನ್ನ ಮನೆಯ ಸೇವಕರನ್ನು ಕಳಿಸಿ ತೋಳದ ಶವವನ್ನು ಎತ್ತಿ ತರಿಸಿ ಅದರ ಚರ್ಮವನ್ನ ಸುಲಿಸಿ, ಕಾರ್ಬೆಟ್‌ನ ಮೊದಲ ಬೇಟೆಯ ನೆನಪಿಗಾಗಿ ತಮ್ಮ ಮನೆಯ ಗೋಡೆಗೆ ನೇತು ಹಾಕಿದಳು. ಬಹಳ ವರ್ಷ ಗೋಡೆಯಲ್ಲಿದ್ದ ತೋಳದ ಚರ್ಮವನ್ನು ಮುಂದೆ ಕಾರ್ಬೆಟ್‌ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಲ್ಲಿಸಿದಾಗ ಮನೆಯ ಗೋಡೆಯಿಂದ ತೆಗೆಸಿಹಾಕಿದ.

ಕಾರ್ಬೆಟ್‌ನ ಈ ಸಾಹಸ ಅವನಿಗೊಬ್ಬ ಕಾಡಿನ ಗುರು ಹಾಗೂ ಮಾರ್ಗದರ್ಶಕನೊಬ್ಬನನ್ನು ದೊರಕಿಸಿಕೊಟ್ಟಿತು. ಆತನೆ ಕುನ್ವರ್ ಸಿಂಗ್. ಕಾರ್ಬೆಟ್‌ ತನ್ನ ಬಾಲ್ಯದಿಂದ ಸ್ಥಳೀಯರಾದ ಮನೆಯ ಸೇವಕರು, ಗ್ರಾಮಗಳ ಜನತೆಯ ಜೊತೆ ಮತ್ತು ಅವರ ಭಾಷೆ, ಸಂಸ್ಕೃತಿ ಜೊತೆ ಒಡನಾಡಿದ್ದರಿಂದ ಕುನ್ವರ್ ಸಿಂಗ್ ಜೊತೆಗಿನ ಸ್ನೇಹ ಅವನಿಗೆ ಕಷ್ಟವಾಗಲಿಲ್ಲ.

ಕುನ್ವರ್ ಸಿಂಗ್ ಠಾಕೂರ್ ಜಾತಿಯವನಾಗಿದ್ದು ಸ್ಥಳೀಯ ಚಾಂದಿನಿ ಚೌಕ್ ಎಂಬ ಹಳ್ಳಿಯ ಮುಖಂಡನಾಗಿದ್ದ. ಆತನಿಗೂ ಮತ್ತು ಕಾರ್ಬೆಟ್‌ನ ಅಣ್ಣ ಟಾಮ್‌ಗೂ ಮೊದಲಿನಿಂದಲೂ ಶಿಖಾರಿ ಕುರಿತಂತೆ ಸ್ನೇಹವಿತ್ತು. ಕುನ್ವರ್ ಸಿಂಗ್‌ಗೆ ಬಾಲ್ಯದಿಂದಲೂ ಕಾಡಿನ ಶಿಖಾರಿ ಎಂದರೆ ಹುಚ್ಚು. ಆದರೆ ಅಂದಿನ ನಿಯಾಮಾವಳಿಗಳ ಪ್ರಕಾರ ಬ್ರಿಟೀಷ್ ಅಧಿಕಾರಿಗಳು, ಯುರೊಪಿಯನ್ನರು, ಮತ್ತು ಸಂಸ್ಥಾನಗಳ ರಾಜ ಮಹಾರಾಜರು ಇವರುಗಳನ್ನು ಹೊರತುಪಡಿಸಿದರೆ, ಜನಸಾಮಾನ್ಯರಿಗೆ ಅರಣ್ಯಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಅವಕಾಶವಿರಲಿಲ್ಲ. ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಅನೇಕ ರಾಜರುಗಳು ತಮ್ಮ ಬೇಟೆಯ ಖಯಾಲಿಗಾಗಿ ಅನೇಕ ಅರಣ್ಯಗಳನ್ನು ಮೀಸಲಾಗಿ ಇಟ್ಟುಕೊಳ್ಳುತಿದ್ದರು. ಈ ಕಾರಣಕ್ಕಾಗಿ ಕುನ್ವರ್ ಸಿಂಗ್ ಕಾರ್ಬೆಟ್‌ ಕುಟುಂಬದೊಂದಿಗೆ ಸಲಿಗೆ ಬೆಳೆಸಿಕೊಂಡು ತನ್ನ ಶಿಖಾರಿಯ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದ. ಎಷ್ಟೋಬಾರಿ ಒಬ್ಬನೆ ಕದ್ದು ಬೇಟೆಯಾಡಿದ ಪ್ರಸಂಗವೂ ಉಂಟು. ಹಾಗಾಗಿ ಆತನನ್ನು ಸ್ಥಳೀಯರು ಕಳ್ಳ ಬೇಟೆಗಾರ ಎಂದೂ ಸಹ ಕರೆಯುತ್ತಿದ್ದರು.

ಕಾರ್ಬೆಟ್‌ ಏಕಾಂಗಿಯಾಗಿ ತೋಳವನ್ನು ಬೇಟೆಯಾಡಿದ ನಂತರ ಅವನನ್ನು ಒಬ್ಬ ನುರಿತ ಶಿಖಾರಿಗಾರ ಎಂದು ಒಪ್ಪಿಕೊಂಡ ಕುನ್ವರ್ ಕಾರ್ಬೆಟ್‌ ಜೊತೆ ಅರಣ್ಯದಲ್ಲಿ ಅಲೆದಾಡಲು ಶುರುವಿಟ್ಟುಕೊಂಡ. ಕಾರ್ಬೆಟ್‌ ಕುನ್ವರ್ ಸಿಂಗ್‌ನಿಂದ ಬೇಟೆಯ ಕುರಿತಂತೆ ಅನೇಕ ಸಂಗತಿಗಳನ್ನು ಸಹ ಕಲಿತ. ಇದರಲ್ಲಿ ಮೊದಲ ಪಾಠವೆಂದರೆ, ಅಪಾಯಕಾರಿ ಪ್ರಾಣಿಗಳು ಎದುರಾದಾಗ ಜೀವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ, ಹತ್ತಿರದ ಮರವೇರಿ ಕುಳಿತುಕೊಳ್ಳುವುದು. ಹುಲಿ ಹಾಗೂ ಕೆಲವು ಜಾತಿಯ ಚಿರತೆಗಳು ಬಿಟ್ಟರೆ, ಉಳಿದ ಪ್ರಾಣಿಗಳು ಮರವನ್ನು ಏರಲಾರವು. ಮರವೇರಿ ಕುಳಿತ ವ್ಯಕ್ತಿಗಳನ್ನು ಹುಲಿ, ಅಥವಾ ಚಿರತೆ ಬೆನ್ನಟ್ಟುವ ಸಾಹಸವನ್ನು ಮಾಡಲಾರವು ಎಂಬುದನ್ನ ಕಾರ್ಬೆಟ್‌ ಕುನ್ವರ್ ಮೂಲಕ ಕಲಿತ. ಜೊತೆಗೆ ಕಾಡಿನಲ್ಲಿ ನಾವು ಸಂಚರಿಸುವಾಗ ವಹಿಸಬೇಕಾದ ಎಚ್ಚರಿಕೆ, ಬೇಟೆಯ ಸಂದರ್ಭದಲ್ಲಿ ನಾವು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಳ. ಇವುಗಳ ಬಗ್ಗೆ ಅರಿತ. ಅಕಸ್ಮಾತ್ ಬೇಟೆ ಗುರಿತಪ್ಪಿ, ಅಪಾಯ ಎದುರಾದ ಸಂದರ್ಭದಲ್ಲಿ ಪ್ರಾಣಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕುನ್ವರ್ ಕಾರ್ಬೆಟ್‌ಗೆ ಮನವರಿಕೆ ಮಾಡಿಕೊಟ್ಟ. ಯಾವುದೇ ಕಾರಣಕ್ಕೂ ಕಣಿವೆ ಅಥವಾ ಹಳ್ಳದಂತಹ ಪ್ರದೇಶಗಳಲ್ಲಿ ನಾವು ಕೆಳಗೆ (ತಗ್ಗು ಪ್ರದೇಶದಲ್ಲಿ) ಕುಳಿತು ಹೊಂಚು ಹಾಕಿ ಮೇಲಿಂದ ಬರುವ ಪ್ರಾಣಿಗಳ ಮೇಲೆ ಗುಂಡು ಹಾರಿಸಬಾರದು. ನಾವು ಬೇಟೆಗೆ ಕುಳಿತ ಸ್ಥಳದಲ್ಲಿ ನಮ್ಮ ಹಿಂಬದಿಗೆ ದೊಡ್ಡದಾದ ಮರ ಇಲ್ಲವೆ, ಕಲ್ಲಿನ ಬಂಡೆ ಆಸರೆಯಾಗಿರಬೇಕು ಇದರಿಂದ ಅಪಾಯಕಾರಿ ಪ್ರಾಣಿಗಳಾದ ಹುಲಿ ಚಿರತೆ ಇವುಗಳು ಹಿಂದಿನಿಂದ ನಮ್ಮ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಿಕೊಳ್ಳಬಹುದು. ಇಂತಹ ಶಿಖಾರಿಯ ಅತ್ಯಮೂಲ್ಯ ಪಾಠಗಳನ್ನು ಕಾರ್ಬೆಟ್‌ ಕುನ್ವರ್ಸಿಂಗ್ ಮೂಲಕ ಕಲಿತ. ಹಾಗಾಗಿ ಮುಂದೆ ಬಹಳ ವರ್ಷಗಳ ಕಾಲ ಕುನ್ವರ್ ಸಿಂಗ್ ಕಾರ್ಬೆಟ್‌ಗೆ ಬೇಟೆಯ ಸಂಗಾತಿಯಾಗಿದ್ದ.

ಕಾರ್ಬೆಟ್‌ಗೆ ಅರಣ್ಯ ಕುರಿತಂತೆ ಇದ್ದ ಏಕೈಕ ಭಯವೆಂದರೆ, ಕಾಡ್ಗಿಚ್ಚು. ಬೇಸಿಗೆಯಲ್ಲಿ ಒಣಗುತಿದ್ದ ದಟ್ಟವಾದ ಹುಲ್ಲುಗಾವಲು, ಸಣ್ಣ ಗಿಡಗಳು, ಬಿದಿರು ಮರಗಳ ಘರ್ಷಣೆ ಮತ್ತು ತಿಕ್ಕಾಟದಿಂದ ಉಂಟಾಗುತಿದ್ದ ಬೆಂಕಿಯ ಕಿಡಿಗಳಿಂದ ಹೊತ್ತಿಕೊಂಡು ಉರಿಯುವುದು ಸಾಮಾನ್ಯವಾಗಿತ್ತು. ಗಾಳಿ ಬೀಸಿದ ಕಡೆಯೆಲ್ಲಾ ಹಬ್ಬುತ್ತಿದ್ದ ಈ ಕಾಡ್ಗಿಚ್ಚು ನಿರಂತರ ತಿಂಗಳುಗಟ್ಟಲೆ ಉರಿದು ಒಮ್ಮೊಮ್ಮೆ ಇಡೀ ಅರಣ್ಯವನ್ನು ಆಪೋಷನ ತೆಗೆದುಕೊಳ್ಳುತ್ತಿತ್ತು. ಇಂತಹ ವೇಳೆ ಕಾಡಿನಲ್ಲಿ ಆವರಿಸಿಕೊಳ್ಳುತಿದ್ದ ದಟ್ಟಹೊಗೆ ಅನೇಕ ಪ್ರಾಣಿಗಳ ಜೀವಕ್ಕೆ ಎರವಾಗುತಿತ್ತು. ಯಾವ ವೇಳೆಯಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ತನ್ನ ಬದುಕಿನ ಕಡೆಯವರೆಗೂ ಕಾರ್ಬೆಟ್‌ ಕಾಡ್ಗಿಚ್ಚಿನ ಬಗ್ಗೆ ಹೆದುರುತ್ತಿದ್ದ ಹಾಗೂ ಎಚ್ಚರಿಕೆ ವಹಿಸುತ್ತಿದ್ದ. ಇದೊಂದನ್ನ ಹೊರತು ಪಡಿಸಿದರೆ, ತನ್ನ ವೈಯಕ್ತಿಕ ಅನುಭವದ ಮೇಲೆ ಕಾಡಿನ ಲೋಕದ ಎಲ್ಲಾ ವ್ಯವಹಾರಗಳನ್ನು ಅರ್ಥಮಾಡಿಕೊಂಡಿದ್ದ. ಪಕ್ಷಿ ಮತ್ತು ಮಂಗಗಳ ಧ್ವನಿಯನ್ನು ಅವುಗಳಂತೆಯೇ ಅನುಕರಣೆ ಮಾಡುವುದನ್ನು ಕಲಿತ.

ನಿಸರ್ಗದ ಬಗ್ಗೆ, ಅರಣ್ಯದ ಬಗ್ಗೆ ಇಷ್ಟೆಲ್ಲಾ ಆಸಕ್ತಿ ಇದ್ದರೂ ಕೂಡ ಕಾರ್ಬೆಟ್‌ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ತುಂಬಾ ಬುದ್ಧಿವಂತ, ಪ್ರತಿಭಾವಂತ ವಿದ್ಯಾರ್ಥಿ ಅಲ್ಲದಿದ್ದರೂ, ಉತ್ತಮ ಅಂಕಗಳನ್ನು ತೆಗೆದುಕೊಂಡು ಪ್ರತಿ ತರಗತಿಯನ್ನು ಪಾಸಾಗುವಷ್ಟು ಬುದ್ಧಿಮತ್ತೆ ಅವನಲ್ಲಿತ್ತು. ನೈನಿತಾಲ್‌ನಲ್ಲಿ ಆಂಗ್ಲರೇ ನಡೆಸುತಿದ್ದ ಓಕ್ ಎಂಬ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿದ ಅವನು ಮುಂದೆ ಡೈಯೊಸೆಸನ್ ಬಾಯ್ಸ್ ಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ. ಶಾಲೆಯಲ್ಲಿದ್ದ ಸ್ಕೌಟ್ ತಂಡಕ್ಕೆ ಸೇರ್ಪಡೆಯಾಗಿ ಅತ್ಯುತ್ತಮ ಕೆಡೆಟ್ ಎಂಬ ಗೌರವಕ್ಕೆ ಕಾರ್ಬೆಟ್‌ ಪಾತ್ರನಾಗಿದ್ದ.

ಕಾರ್ಬೆಟ್‌ ವಯಸ್ಸಿಗೆ ಬರುತ್ತಿದ್ದಂತೆ ತನ್ನ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದ. ಅವನ ಮುಂದೆ ಶಿಕ್ಷಣ ಕುರಿತಂತೆ ಅನೇಕ ಅವಕಾಶಗಳಿದ್ದವು. ತನ್ನ ಕುಟುಂಬದ ವೃತ್ತಿಯಾಗಿ ಬಂದಿದ್ದ ವೈದ್ಯವೃತ್ತಿಗೆ, ಅಥವಾ ಇಂಜಿನಿಯರ್ ವೃತ್ತಿಗೆ ಹೋಗುವ ಅವಕಾಶಗಳಿದ್ದವು. ಆದರೆ ಉನ್ನತ ಶಿಕ್ಷಣಕ್ಕೆ ಬೇಕಾಗುವಷ್ಟು ಹಣವನ್ನು ಪೂರೈಸುವ ಸ್ಥಿತಿಯಲ್ಲಿ ಅವನ ಕುಟುಂಬ ಇರಲಿಲ್ಲ. ಅವನ ಸಹೋದರರೆಲ್ಲರೂ ತಮ್ಮ ವಿವಾಹವಾದ ನಂತರ ಹೊರ ಹೋಗಿದ್ದರು. ಕಾರ್ಬೆಟ್‌ನ ತಾಯಿಗೆ ಬರುತ್ತಿದ್ದ ತಂದೆಯ ಪಿಂಚಣಿ ಹಣ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಿಂದ ಬರುತ್ತಿದ್ದ ಅಲ್ಪ ಹಣದಿಂದ ಕುಟುಂಬದ ನಿರ್ವಹಣೆ ಸಾಗಬೇಕಿತ್ತು. ಮನೆಯಲ್ಲಿ ಕಾರ್ಬೆಟ್‌, ಅವನ ಚಿಕ್ಕ ತಮ್ಮ ಆರ್ಚರ್, ಅಕ್ಕ ಮ್ಯಾಗಿ, ವಿಧವೆಯಾಗಿ ಅಣ್ಣನ ಮನೆ ಸೇರಿದ್ದ ಕಾರ್ಬೆಟ್‌ನ ಸೋದರತ್ತೆ ಮತ್ತು ಆಕೆಯ ಇಬ್ಬರು ಸಣ್ಣ ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ನಡೆಯಬೇಕಾಗಿತ್ತು.

ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತ ಕುಟುಂಬವಲ್ಲದ ಬಗ್ಗೆ ಅರಿವಿದ್ದ ಕಾರ್ಬೆಟ್‌ ತನ್ನ 17ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಲ್ಲಿಸಿ ಉದ್ಯೋಗದ ಮೂಲಕ ತನ್ನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದ.್

ಆ ಕಾಲದಲ್ಲಿ ಏಳನೇ ತರಗತಿ ಪಾಸಾದವರಿಗೆ ಶಿಕ್ಷಕ ಹುದ್ದೆ, ಹತ್ತನೇ ತರಗತಿ ಪಾಸಾದವರಿಗೆ ಅಮಲ್ದಾರ್ ಹುದ್ದೆ ಸಿಗುತ್ತಿತ್ತು. ಅದೂ ಬ್ರಿಟೀಷ್ ಕುಟುಂಬದ ಸದಸ್ಯನಾಗಿದ್ದ ಕಾರ್ಬೆಟ್‌ ಮುಂಬೈ, ಕೊಲ್ಕ್ಲತ್ತ, ದೆಹಲಿ ಮುಂತಾದ ಕಡೆ ಇದ್ದ ಬ್ರಿಟೀಷರ ಕಚೇರಿಗಳಲ್ಲಿ, ಇಲ್ಲವೇ ಸೈನ್ಯದಲ್ಲಿ ಕೆಲಸಕ್ಕೆ ಸೇರಬಹುದಾಗಿತ್ತು. ಕಾರ್ಬೆಟ್‌ ಇವೆಲ್ಲವನ್ನು ಬದಿಗೊತ್ತಿ ತಿಂಗಳಿಗೆ 150 ರೂಪಾಯಿ ಸಂಬಳದ ರೈಲ್ವೆ ಉದ್ಯೋಗಕ್ಕೆ ಸೇರ್ಪಡೆಯಾದ.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 4)


– ಡಾ.ಎನ್.ಜಗದೀಶ ಕೊಪ್ಪ


ಜಿಮ್ ಕಾರ್ಬೆಟ್ ಸ್ವತಂತ್ರವಾಗಿ ನಡೆದಾಡುವಂತಾದ ಮೇಲೆ ಅವನಿಗೆ ನಿಸರ್ಗದ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು. ತನ್ನ ಪಾಲನೆಗಾಗಿ ನೇಮಕ ಮಾಡಿದ್ದ ಸೇವಕಿಯರ ಕಣ್ಣು ತಪ್ಪಿಸಿ ಒಮ್ಮೊಮ್ಮೆ ಮನೆಯಿಂದ ಬಹುದೂರದವರೆಗೆ ನಡೆದು ಹೋಗುತಿದ್ದ. ಇದು ಅವನ ಕುಟುಂಬದವರಿಗೆ ಆತಂಕದ ವಿಷಯವಾಗಿತ್ತು. ಆ ಕಾಲದಲ್ಲಿ ವಿಷಪೂರಿತ ಹಾವುಗಳು, ಮಲೇರಿಯ ಸೊಳ್ಳೆಗಳು ಮನೆಯ ಸುತ್ತಾ ಆವರಿಸಿದ್ದರಿಂದ ಆತನನ್ನು ಹೊರಗೆ ಕಳಿಸಲು ಮನೆಯವರು ಅಂಜುತ್ತಿದ್ದರು.

ಆ ಕಾಲದಲ್ಲಿ ನೈನಿತಾಲ್ ಪರ್ವತ ಪ್ರದೇಶದಲ್ಲಿ ಬೇಸಿಗೆಯಲ್ಲಿ ಎಂಟು ಅಡಿ ಎತ್ತರ ಬೆಳೆಯುತಿದ್ದ ದಟ್ಟವಾದ ಹುಲ್ಲು ಹಾಗೂ ಲಂಟಾನ ಗಿಡಗಳಿಂದ ಅರಣ್ಯ ಪ್ರದೇಶ ಆವೃತ್ತವಾಗಿರುತಿತ್ತು. ಆದರೆ ಚಳಿಗಾಲಕ್ಕೆ ಇವುಗಳು ಮುದುರಿಕೊಂಡು, ಕೇವಲ ದೇವದಾರು, ಓಕ್ ಮರಗಳು ಮಾತ್ರ ಕಾಣಸಿಗುತಿದ್ದವು. ಚಳಿಗಾಲದಲ್ಲಿ ಮರಗಳಿಂದ ಉದುರುವ ಎಲೆಗಳಿಂದಾಗಿ ಅರಣ್ಯ ಭೂಮಿಯಲ್ಲಿ ಹಾಸಿಗೆಯಂತಹ ದಟ್ಟ ಹೊದಿಕೆ ನಿರ್ಮಾಣವಾಗುತಿತ್ತು. ಇವುಗಳ ಅಡಿಯಲ್ಲಿ ಹುಳು ಹುಪ್ಪಟೆಗಳು, ಹಾವುಗಳು ಆಶ್ರಯ ಪಡೆಯುತಿದ್ದ ಕಾರಣ ಜಿಮ್ ಕಾಡಿಗೆ ಹೊರಟಾಗಲೆಲ್ಲಾ ಮನೆಯವರು ಅವನನ್ನು ತಡೆಯುತಿದ್ದರು.

ತಂದೆಯ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಣ್ಣ ಟಾಮ್ ಕಾರ್ಬೆಟ್‌ ಜಿಮ್‌ಗೆ ನಿರಾಸೆಗೊಳಿಸದೆ ಒಮ್ಮೊಮ್ಮೆ ಕಾಡಿಗೆ ಕರೆದೊಯ್ದು ಪ್ರಾಣಿ ಪಕ್ಷಿಗಳನ್ನ ತಮ್ಮನಿಗೆ ಪರಿಚಯಿಸುತಿದ್ದ.

ನೈನಿತಾಲ್ ಗೆ ಹೋಲಿಸಿದರೆ ತಪ್ಪಲಿನ ಕಲದೊಂಗಿಯ ಅರಣ್ಯ ಪ್ರದೇಶ ಸಮತಟ್ಟಾಗಿತ್ತು. ಜೊತೆಗೆ ಆ ಹಳ್ಳಿಯಲ್ಲಿ ಅನೇಕ ಆಂಗ್ಲ ಕುಟುಂಬಗಳು ವಾಸವಾಗಿದ್ದವು. ಇಲ್ಲಿ ನಿವಾಸಿಗಳ ಕೋರಿಕೆಯಂತೆ ಆಗಿನ ಅಧಿಕಾರಿ ರಾಮ್ ಸ್ಸೆ ಎಂಬಾತ ಹಳ್ಳಿಗೆ ಕಾಲುವೆಯೊಂದನ್ನು ನಿರ್ಮಿಸಿಕೊಟ್ಟಿದ್ದ. ಕಲದೊಂಗಿ ಮತ್ತು ಚೋಟಹಲ್ದಾನಿಗೆ ಹೊಂದಿಕೊಂಡಂತೆ ಇದ್ದ ಈ ಕಾಲುವೆಯಲ್ಲಿ ಮಕ್ಕಳು ಈಜಾಟವಾಡುವುದು ಸಾಮಾನ್ಯವಾಗಿತ್ತು. ಅಂತಹ ಸಮಯದಲ್ಲಿ ಹೆಣ್ಣು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗದಂತೆ ಕಾಲುವೆ ದಡದಲ್ಲಿ ಕಾರ್ಬೆಟ್ ಅವರ ಬಟ್ಟೆಗಳ ಸಹಿತ ಹೆಣ್ಣು ಮಕ್ಕಳನ್ನು ಕಾಯುತ್ತಾ ಕೂರುತಿದ್ದ. ನೈನಿತಾಲ್ ಮನೆಗಿಂತ ಕಲದೊಂಗಿಯ ಮನೆಯಲ್ಲಿ ಕಾರ್ಬೆಟ್‌ಗೆ ಹೊರಗೆ ತಿರುಗಾಡಲು ಹೆಚ್ಚಿನ ಸ್ವಾತಂತ್ರ್ಯ ಇತ್ತು. ಕಾಡಿನ ಅಂಚಿನಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದರಿಂದ ಆ ಪ್ರದೇಶಗಳಿಗೆ ಬೇಟಿ ನೀಡಿ ಅವರ ಆಚಾರ, ವಿಚಾರಗಳನ್ನ ಕುತೂಹಲದಿಂದ ಗಮನಿಸುತಿದ್ದ. ಕಾಲುವೆ ಏರಿಯ ಮೇಲೆ ನಡೆದಾಡುತ್ತಾ ಪಕ್ಷಿಗಳ ಕೂಗು, ಅವುಗಳ ಚಲನ ವಲನ ಗಮನಿಸುತಿದ್ದ. ಕಲದೊಂಗಿ ಅರಣ್ಯ ಪ್ರದೇಶ ಕೂಡ ದಟ್ಟವಾದ ಹುಲ್ಲು ಮತ್ತು ಗಿಡಗಳಿಂದ ಕೂಡಿತ್ತು. (ಈ ಅರಣ್ಯ ಪ್ರದೇಶವನ್ನು ಈಗ ಉತ್ತರಾಂಚಲ ಸರ್ಕಾರ “ಕಾರ್ಬೆಟ್ ಅಭಯಾರಣ್ಯ” ಎಂದು ಘೋಷಿಸಿದೆ. ಇದರ ವಿಸ್ತೀರ್ಣ 18 ಸಾವಿರ ಚದುರ ಕಿ. ಮಿ.) ಇಲ್ಲಿ ಅನೇಕ ವಿಧದ ಮಂಗಗಳು, ನರಿ, ತೋಳ, ಆರು ಅಡಿ ಎತ್ತರವಿದ್ದ ಕರಡಿಗಳು, ಹುಲಿ, ಚಿರತೆ, ಆನೆಗಳು, ಬಗೆ ಬಗೆಯ ಪ್ರಾಣಿ ಪಕ್ಷಿಗಳು ಇದ್ದುದರಿಂದ ಬಾಲಕ ಕಾರ್ಬೆಟ್‌ಗೆ ಸದಾ ಈ ಅರಣ್ಯದ ಬಗ್ಗೆ ಕುತೂಹಲ ಮನೆಮಾಡಿರುತಿತ್ತು. ಅಲ್ಲಿನ ಜಿಂಕೆ ಮತ್ತು ನವಿಲುಗಳ ಬಗ್ಗೆ ಕಾರ್ಬೆಟ್ ಗಂಭೀರ ಆಸಕ್ತಿ ತಾಳಿದ್ದ. ಕಾಡು‍ಹಂದಿ, ಕಾಡುಕುರಿ, ಕಾಡುಕೋಳಿ, ಸಾರಂಗ ಮತ್ತು ಅವುಗಳ ಟಿಸಿಲೊಡೆದ ಕೊಂಬುಗಳು ಇವುಗಳ ಬಗ್ಗೆ ಅವನಿಗೆ ಅನೇಕ ಪ್ರಶ್ನೆಗಳಿದ್ದರೂ ಉತ್ತರಿಸಲು ಕಾರ್ಬೆಟ್ ಬಳಿ ಯಾರೂ ಇಲ್ಲದ್ದರಿಂದ ಎಲ್ಲವುಗಳನ್ನು ಮೌನವಾಗಿ ಮನದಣೀಯೆ ವೀಕ್ಷಿಸುತಿದ್ದ.

ಆ ಕಾಲದಲ್ಲಿ ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಶ್ರೀಮಂತರಿಗೆ ಮತ್ತು ರಾಜರಿಗೆ ಪ್ರತಿಷ್ಠೆಯ ಹವ್ಯಾಸವಾಗಿತ್ತು. ಅನೇಕ ಬ್ರಿಟೀಷ್ ಅಧಿಕಾರಿಗಳು ತಮ್ಮ ಬಿಡುವಿನ ವೇಳೆ ಕಲದೊಂಗಿ ಸಮೀಪದ ಅರಣ್ಯಕ್ಕೆ ಬಂದು ಹುಲಿ, ಚಿರತೆಗಳನ್ನು ಶಿಖಾರಿ ಮಾಡುತ್ತಿದ್ದರು. ತಾವು ಕೊಂದ ಪ್ರಾಣಿಗಳನ್ನು ವಿಶೇಷವಾಗಿ ಹುಲಿ, ಚಿರತೆಗಳನ್ನು ಅವುಗಳ ಮೂಗಿನಿಂದ ಬಾಲದವರೆಗೆ ಅಳೆದು ಅಳತೆ ನೋಡುವ ಪ್ರವೃತ್ತಿ ಇತ್ತು. ಆ ಪ್ರದೇಶದಲ್ಲಿ ಹತ್ತು ಅಡಿ, ನಾಲ್ಕು ಇಂಚು ಉದ್ದದ ಹುಲಿಯನ್ನು ಶಿಖಾರಿ ಮಾಡಿರುವುದು ಈವರೆಗೆ ದಾಖಲಾಗಿದೆ. ಬೇಟೆಯಾಡಿದ ಹುಲಿ, ಚಿರತೆ, ಜಿಂಕೆ, ಸಾರಂಗ ಇವುಗಳ ಚರ್ಮವನ್ನು ಸುಲಿದು, ಅವುಗಳ ತಲೆ ಮತ್ತು ಕೊಂಬುಗಳನ್ನು ತಮ್ಮ ಮನೆಗಳಲ್ಲಿ ಅಲಂಕಾರಿಕ ವಸ್ತುಗಳಂತೆ ಪ್ರದರ್ಶನಕ್ಕೆ ಇಡುವುದು ಶ್ರೀಮಂತರಿಗೆ, ಅಧಿಕಾರಿಗಳಿಗೆ ಹವ್ಯಾಸವಾಗಿತ್ತು.

ಇವೆಲ್ಲವನ್ನು ಗಮನಿಸುತಿದ್ದ ಕಾರ್ಬೆಟ್‍ಗೆ ಬಾಲ್ಯದಲ್ಲೇ ತಾನೂ ಶಿಖಾರಿಕಾರನಾಗಬೇಕೆಂಬ ಆಸೆ ಚಿಗುರಿತ್ತು. ಆದರೆ ಅವನ ವಯಸ್ಸು ಬಂದೂಕ ಹಿಡಿಯುವ ವಯಸ್ಸಾಗಿರಲಿಲ್ಲ. ಇಂತಹ ವೇಳೆ ಕಲದೊಂಗಿಗೆ ಬ್ರಿಟಿಷ್ ಸೇನಾಧಿಕಾರಿಯ ಮಗ ಬಂದದ್ದು ಕಾರ್ಬೆಟ್‌ನ ಶಿಖಾರಿಗೆ ನೆರವಾಯಿತು. ಡ್ಯಾನ್ಸೆ ಎಂಬ ಆ ಯುವಕ ತಾನು ಮಾಡಿದ ಯಾವುದೋ ಒಂದು ತಪ್ಪಿಗಾಗಿ ಮಿಲಿಟರಿ ಸೇವೆಯಿಂದ ವಜಾಗೊಂಡು ಕಲದೊಂಗಿಯ ತನ್ನ ಪೂರ್ವಿಕರ ಮನೆಗೆ ಬಂದಿದ್ದ. ಅವನ ಬಳಿ ಒಂದು ನಾಡ ಬಂದೂಕವಿದ್ದುದರಿಂದ ಹಗಲೆಲ್ಲಾ ಕಾಡು ಅಲೆದು ಶಿಖಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಕಾರ್ಬೆಟ್ ಕೂಡ ಕ್ಯಾಟರ್ಪಿಲ್ಲರ್ ಹಾಗೂ ಬಿಲ್ಲು ಬಾಣಗಳನ್ನ ತೆಗೆದುಕೊಂಡು ಅವನ ಜೊತೆ ಪಕ್ಷಿಗಳ ಬೇಟೆಗೆ ಹೊರಡುತಿದ್ದ. ಎಲೆಗಳಲ್ಲಿ ಗೂಡು ಕಟ್ಟಿಕೊಂಡಿರುವ ಕೆಂಜಿರುವೆಗಳನ್ನು ತಿನ್ನುವ ಕರಡಿ, ಆ ದಿನದ ಶಿಖಾರಿ ಮುಗಿಸಿ ಮೈಮರೆತು ಮರದ ಮೇಲೆ ಮಲಗಿರುವ ಚಿರತೆ, ಜಿಂಕೆಗಳ ಹಿಂಡು, ನವಿಲಿನ ನರ್ತನ ಇವುಗಳನ್ನ ನೋಡಿ ಕಾರ್ಬೆಟ್ ರೋಮಾಂಚಿತನಾಗುತಿದ್ದ. ಒಮ್ಮೆ ಗೆಳೆಯನನ್ನು ಕಾಡಿ ಬೇಡಿ ತಾನು ಎದೆಗೆ ಬಂದೂಕು ಒತ್ತಿ ಹಿಡಿದು ಎಡಗಾಲು ಮುಂದಿರಿಸಿ, ಬಲಗಾಲನ್ನು ಅಗಲಿಸಿ ನೆಲಕ್ಕೆ ಒತ್ತಿ ಮರದ ಮೇಲಿನ ಪಕ್ಷಿಗೆ ಬಂದೂಕಿನಿಂದ ಗುಂಡು ಹಾರಿಸಿದ. ಗುಂಡು ಚಿಮ್ಮಿದ ರಭಸಕ್ಕೆ ಕಾರ್ಬೆಟ್ ಮೂರು ಅಡಿ ಹಿಂದಕ್ಕೆ ಹಾರಿಬಿದ್ದ. ಬಂದೂಕ ಬಳಸಲು ದೈಹಿಕ ಶಕ್ತಿ ಮತ್ತು ಯುಕ್ತಿ ಎರಡೂ ಬೇಕು ಎಂಬುದನ್ನ ಆ ದಿನ ಕಾರ್ಬೆಟ್ ಅನುಭವದಿಂದ ಪಾಠ ಕಲಿತ.

ತಮ್ಮನ ಅಗಾಧ ಉತ್ಸಾಹವನ್ನು ನೋಡಿದ ಅಣ್ಣ ಟಾಮ್ ಕಡೆಗೆ ಎರಡು ಬಂದೂಕಗಳನ್ನು ಖರೀದಿಸಿ ಕಾರ್ಬೆಟ್‌ಗೆ ಒಂದನ್ನು ಉಡುಗೊರೆಯಾಗಿ ನೀಡಿದ. ಅಲ್ಲದೆ ಸಂಜೆ ವೇಳೆ ತಾನೂ ಅರಣ್ಯಕ್ಕೆ ಶಿಖಾರಿಗೆ ಹೊರಟು ನಿಂತ. ಅಣ್ಣ ಟಾಮ್, ಕಾರ್ಬೆಟ್‌ಗೆ ಕಾಡಿನಲ್ಲಿ ಪ್ರಾಣಿಗಳನ್ನು ಕೊಲ್ಲುವ ಬಗ್ಗೆ, ಬಂದೂಕವನ್ನು ಬಳಸುವ ಕುರಿತು ಶಿಕ್ಷಣ ನೀಡಿದ. ಆತ ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಯಾಗಿ ಆಪ್ಘನ್ ಗುಡ್ಡಗಾಡಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರಿಂದ ಪರ್ವತಗಳನ್ನು ಹತ್ತಿ ಇಳಿಯುವುದು, ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮರ ಹತ್ತುವುದು ಹೀಗೆ ಎಲ್ಲವನ್ನು ತಮ್ಮ ಕಾರ್ಬೆಟ್‌ಗೆ ಮನವರಿಕೆ ಮಾಡಿಕೊಟ್ಟ. ಜೊತೆಗೆ ಯಾವ ಕಾರಣಕ್ಕೂ ಮೊಟ್ಟೆಗಳ ಮೇಲೆ ಕಾವು ಕುಳಿತಿರುವ ಅಥವಾ ಗೂಡಿನೊಳೆಗೆ ಮರಿಗಳನ್ನು ಸಲುಹುತ್ತಿರುವ ತಾಯಿ ಪಕ್ಷಿಗಳನ್ನು ಕೊಲ್ಲಬಾರದು, ಎಳೆಯ ಪ್ರಾಣಿಗಳನ್ನು ಬೇಟೆಯಾಡಬಾರದೆಂದು ಶಿಖಾರಿಯ ನಿಯಮಗಳನ್ನು ಹೇಳಿಕೊಟ್ಟ. ಪ್ರತಿದಿನ ಕಾಡಿಗೆ ಹೋಗುತಿದ್ದ ಅಣ್ಣ ತಮ್ಮ ಇಬ್ಬರೂ ಕಾಡು ಕೋಳಿಗಳನ್ನು ತಪ್ಪದೆ ಬೇಟೆಯಾಡಿ ತರುತಿದ್ದರು. ಹೀಗೆ ಕೇವಲ ಹನ್ನೊಂದನೇ ವಯಸ್ಸಿಗೆ ಕಾರ್ಬೆಟ್ ಬಂದೂಕ ಹಿಡಿಯುವುದನ್ನು ಮತ್ತು ಶಿಖಾರಿಯ ಅಲಿಖಿತ ನಿಯಮಗಳನ್ನು ಅಣ್ಣನಿಂದ ಕಲಿತ. ನಿಸರ್ಗದ ಬಗ್ಗೆ ಆಸಕ್ತಿ ಹುಟ್ಟುತಿದ್ದ ಇಂತಹ ಸಮಯದಲ್ಲಿ ಕಾರ್ಬೆಟ್ ನ್ಯೂಮೊನಿಯಾ ಜ್ವರಕ್ಕೆ ತುತ್ತಾಗಿ ತಿಂಗಳುಗಟ್ಟಲೆ ನಿತ್ರಾಣನಾಗಿ ಹಾಸಿಗೆ ಹಿಡಿದ. ಈ ಸಮಯದಲ್ಲಿ ಅವನ ಕುಟುಂಬದ ಸಂಬಂಧಿ ಸ್ಟೀಪನ್ ಡೀಸ್ ಎಂಬಾತ ಉತ್ತರ ಭಾರತದ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ಚಿತ್ರವುಳ್ಳ ಮಾಹಿತಿ ಪುಸ್ತಕವೊಂದನ್ನು ಪ್ರಕಟಿಸಿದ್ದ. ಕಾರ್ಬೆಟ್ ನನ್ನು ನೋಡಲು ಬಂದಾಗ ಈ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ. ಅನಾರೋಗ್ಯದ ದಿನಗಳಲ್ಲಿ ಕಾರ್ಬೆಟ್ ಗೆ ಆ ಪುಸ್ತಕವೇ ನಿತ್ಯ ಸಂಗಾತಿಯಾಗಿತ್ತು.

ಅನಾರೋಗ್ಯದಿಂದ ಚೇತರಿಸಿಕೊಂಡ ಕಾರ್ಬೆಟ್ ಮತ್ತೆ ಅರಣ್ಯದತ್ತ ಮುಖ ಮಾಡಿದ. ಈ ಬಾರಿ ಅವನಿಗೆ ರಕ್ಷಣೆಗಾಗಿ ಅಣ್ಣ ಟಾಮ್ ಆಪ್ಘಾನಿಸ್ಥಾನದ ಕಾಬೂಲ್‌ನಿಂದ ತಂದಿದ್ದ ಎರಡು ನಾಯಿಗಳು ಸಂಗಾತಿಗಳಾದವು. ಆ ದಿನಗಳಲ್ಲಿ ಸಾಮಾನ್ಯವಾಗಿ ಬೇಟೆಗೆ ಹೊರಡುತಿದ್ದ ಶಿಖಾರಿಕಾರರು ಕಾಡುಪ್ರಾಣಿಗಳ ಅನಿರೀಕ್ಷಿತ ದಾಳಿಗಳಿಂದ ರಕ್ಷಣೆ ಪಡೆಯಲು ನಾಯಿಗಳನ್ನು ತಮ್ಮೊಂದಿಗೆ ಕರೆದೊಯ್ಯುವುದು ಸಾಮಾನ್ಯವಾಗಿತ್ತು. ಈ ಬಾರಿ ಕಾರ್ಬೆಟ್‌ಗೆ ಬೇಟೆಗಿಂತ ಪ್ರಾಣಿ ಪಕ್ಷಿಗಳ ಚಲನ ವಲನಗಳ ಅಧ್ಯಯನ ಮುಖ್ಯವಾಗಿತ್ತು. ಹಾಗಾಗಿ ಪುಟ್ಟದೊಂದು ನೋಟ್ ಬುಕ್ ಮತ್ತು ಪೆನ್ಸಿಲ್ ಹಿಡಿದು ಎಲ್ಲವನ್ನು ಗಮನಿಸುತ್ತಾ ಬರೆದುಕೊಳ್ಳತೊಡಗಿದ.

ನಿಸರ್ಗ, ಅಲ್ಲಿನ ಜೀವ ಜಾಲ ಕುರಿತಂತೆ ಅನೇಕ ಸಂಗತಿಗಳು ಕಾರ್ಬೆಟ್‌‍ಗೆ ಅರಿವಾಗತೊಡಗಿದವು. ಪಕ್ಷಿಗಳು ತಮ್ಮ ಸಂಗಾತಿಗಳನ್ನ ಆರ್ಕಷಿಸಲು ಹೇಗೆ ಧ್ವನಿ ಹೊರಡಿಸುತ್ತವೆ, ಹುಲಿ, ಚಿರತೆಯಂತಹ ಅಪಾಯಕಾರಿ ಪ್ರಾಣಿಗಳು ಸುಳಿದಾಗ ಇತರೆ ಪ್ರಾಣಿಗಳಿಗೆ ಹೇಗೆ ಸಂದೇಶ ರವಾನಿಸುತ್ತವೆ, ಪಕ್ಷಿಗಳ ಅಪಾಯದ ಸಂಕೇತಗಳನ್ನು ಗ್ರಹಿಸಿದ ಮಂಗಗಳು ತಕ್ಷಣ ಮರವೇರಿ ಇತರೆ ಪ್ರಾಣಿಗಳಿಗೆ ವಿಶೇಷವಾಗಿ ಜಿಂಕೆ, ಸಾರಂಗ, ಕಡವೆ, ಕಾಡಮ್ಮೆ, ಕಾಡುಕುರಿಗಳಿಗೆ ಹೇಗೆ ಎಚ್ಚರಿಕೆ ನೀಡುತ್ತವೆ ಎಲ್ಲವನ್ನು ಸೂಕ್ಷವಾಗಿ ಗ್ರಹಿಸತೊಡಗಿದಂತೆ, ಕಾಡಿನ ಹಾಗೂ ಅಲ್ಲಿನ ಜೀವ ಜಗತ್ತಿನ ಬಗ್ಗೆ ಅವನಲ್ಲೊಂದು ನಿರ್ಧಾರ ದೃಢವಾಗತೊಡಗಿತು. ಅದೇನೆಂದೆರೆ, ಕಾಡಿನ ಯಾವ ಪ್ರಾಣಿಗಳು ತಮಗೆ ತೊಂದರೆಯಾಗದ ಹೊರತು ಇನ್ನೊಂದು ಪ್ರಾಣಿಯ ಮೇಲೆ ದಾಳಿ ನಡೆಸುವುದಿಲ್ಲ ಎಂಬುದು. ಕಾರ್ಬೆಟ್ ತನ್ನ ಸತತ ಅಧ್ಯಯನದಿಂದ ಹಾವುಗಳು ಸೇರಿದಂತೆ ಬಹುತೇಕ ಪ್ರಾಣಿಗಳ ವರ್ತನೆ ಅವು ನಡೆದಾಡುವ ಜಾಡು, ವೈಖರಿ ಇವೆಲ್ಲವನ್ನು ಮನನ ಮಾಡಿಕೊಂಡ. ವಿಷಪೂರಿತ ಹಾವುಗಳಿಗಿಂತ ವಿಷವಿಲ್ಲದ ಹಾವುಗಳು ಹೆಚ್ಚು ವೇಗವಾಗಿ ಚಲಿಸುತ್ತವೆ ಎಂಬುದನ್ನ ಅರಿತ. ಚಿರತೆಗಳ ಪಾದಗಳು ಮೃದುವಾಗಿರುವ ಕಾರಣ ಅವು ಸಾಮಾನ್ಯವಾಗಿ ಇತರೆ ಪ್ರಾಣಿಗಳು ನಡೆದಾಡಿದ ಹಾದಿಯಲ್ಲಿ ಮಾತ್ರ ಕ್ರಮಿಸುತ್ತವೆ, ಅದೇ ರೀತಿ ಹುಲಿಗಳು ತಮ್ಮ ಬೇಟೆಯನ್ನು ಅರಸುವಾಗ ಪೊದೆಗಳನ್ನು ಆಶ್ರಯಿಸುತ್ತವೆ. ಇದಕ್ಕೆ ಕಾರಣ ತಮ್ಮ ಸುಳಿವು ಪಕ್ಷಿಗಳ ಮುಖಾಂತರ ಇತರೆ ಪ್ರಾಣಿಗಳಿಗೆ ತಿಳಿಯಬಾರದು ಎಂಬುದನ್ನ ಕಾರ್ಬೆಟ್ ಗ್ರಹಿಸಿದ. ಜಿಂಕೆ, ಸಾರಂಗಗಳು ತಮಗೆ ಅಪಾಯ ತಂದೊಡ್ಡುವ ಪ್ರಾಣಿಗಳನ್ನು ಕಂಡಾಗ ಅಸ್ತಮಾ ರೋಗಿಯಂತೆ ಏದುಸಿರು ಬಿಡುವುದು, ಕಾಡೆಮ್ಮೆ ಗುಟುರು ಹಾಕುವುದು, ಹುಲಿ ಘರ್ಜಿಸುವುದು, ಕಾಡುಕೋಳಿ ಎತ್ತರದ ದಿಬ್ಬವನ್ನೇರಿ ಕೂಗು ಹಾಕುವುದು, ಇವುಗಳನ್ನು ಗಮನಿಸುತ್ತಲೇ ಅವುಗಳ ಧ್ವನಿಯನ್ನು ಅನುಕರಿಸತೊಡಗಿದ. ವಯಸ್ಸಾದ ಪ್ರಾಣಿಗಳಿಗಿಂತ ಹೆಚ್ಚಾಗಿ ಮರಿಗಳು ತಮ್ಮ ಓಟದಲ್ಲಿ ನೆಲದ ಮೇಲಿನ ದೂಳನ್ನು ಎಬ್ಬಿಸುತ್ತವೆ ಎಂಬುದು ಕಾರ್ಬೆಟ್‌ಗೆ ಅರಿವಾಗತೊಡಗಿಂತೆ ಅವುಗಳ ವಯಸ್ಸನ್ನು ಅವನು ಅಂದಾಜಿಸಬಲ್ಲವನಾಗಿದ್ದ. ಹಲವು ವರ್ಷಗಳ ಕಾಲ ಕಡವೆ ಮತ್ತು ಕಾಡು‍ಹಂದಿಗಳನ್ನು ನಿಖರವಾಗಿ ಗುರುತಿಸುವಲ್ಲಿ ಕಾರ್ಬೆಟ್ ಗೊಂದಲಕ್ಕೊಳಗಾಗುತಿದ್ದ. ಸಾಮಾನ್ಯವಾಗಿ ಕಾಡುಹಂದಿಗಳಲ್ಲಿ ಮೈ ಮೇಲೆ ಚುಕ್ಕೆ ಇರುತಿದ್ದುದು ಇದಕ್ಕೆ ಕಾರಣವಾಗಿತ್ತು. ನಂತರ ಹಂದಿಯ ಕಾಲುಗಳು ಕಡವೆ ಕಾಲುಗಳಿಗಿಂತ ಉದ್ದವಾಗಿರುವುದನ್ನ ದೃಢಪಡಿಸಿಕೊಂಡು ಅವುಗಳನ್ನು ಗುರುತಿಸಲು ಆರಂಭಿಸಿದ. ಹೀಗೆ ಪ್ರತಿದಿನ ಅವನು ಪರ್ವತಗಳನ್ನು ಹತ್ತಿ ಇಳಿಯುವುದು, ಅರಣ್ಯದಲ್ಲಿ ಅಲೆಯುದರ ಮೂಲಕ ಪರಿಸರದ ಜೈವಿಕ ಚಟುವಟಿಗಳನ್ನು ಕರಗತ ಮಾಡಿಕೊಂಡ. ಕಾರ್ಬೆಟ್ ಈ ವಿಷಯದಲ್ಲಿ ಎಷ್ಟು ನಿಷ್ಣಾತನಾದನೆಂದರೆ, ತನ್ನ ಮನೆಯಲ್ಲಿ ಕುಳಿತುಕೊಂಡು ಇದು ಇಂತಹದ್ದೇ ಪಕ್ಷಿಯ ಧ್ವನಿ, ಅಥವಾ ಇಂತಹದ್ದೇ ಪ್ರಾಣಿಯ ಕೂಗು ಎಂದು ಅತ್ಯಂತ ನಿಖರವಾಗಿ ಗುರುತಿಸುತಿದ್ದ. ಅಷ್ಟೇ ಅಲ್ಲ ನೆಲದ ಮೇಲೆ ಬಿದ್ದ ತರಗೆಲೆಗಳ ಕೆಳಗೆ ಚಲಿಸುವ ಜಂತುಗಳನ್ನು ಎಲೆಗಳ ಕದಲುವಿಕೆಯಿಂದ ಗುರುತಿಸುವಷ್ಟು ಜ್ಞಾನವನ್ನು ಕಾರ್ಬೆಟ್ ತನ್ನದಾಗಿಸಿಕೊಂಡಿದ್ದ.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -3)

– ಡಾ.ಎನ್.ಜಗದೀಶ ಕೊಪ್ಪ

ನೈನಿತಾಲ್ನಲ್ಲಿ ಕಾರ್ಬೆಟ್  ಜನಿಸಿದ್ದು 1875ರ ಜುಲೈ25ರಂದು. ಆತನ ತಾಯಿ ಮೇರಿಗೆ ಇದು 12ನೇ ಹೆರಿಗೆ (ಆಕೆಯ ಮೊದಲ ಪತಿಯ ನಾಲ್ಕು ಮಕ್ಕಳು ಸೇರಿ) ಮೇರಿಯ 38 ನೆ ವಯಸ್ಸಿಗೆ ಜನಿಸಿದ ಈತನ ನಿಜ ನಾಮಧೇಯ ಎಡ್ವರ್ಡ್  ಜೇಮ್ಸ್ ಕಾರ್ಬೆಟ್  ಎಂದು. ಆದರೆ ಕುಟುಂಬದ ಸದಸ್ಯರೆಲ್ಲಾ ಪ್ರೀತಿಯಿಂದ ಕರೆಯತೊಡಗಿದ ಜಿಮ್ ಎಂಬ ಹೆಸರು ಆತನಿಗೆ ಶಾಶ್ವತವಾಗಿ ಉಳಿದುಹೋಯಿತು.   ತಾಯಿಯ ಹೆರಿಗೆಗೆ ಸೂಲಗಿತ್ತಿ ಗಿತ್ತಿಯಾಗಿ ಕೆಲಸ ಮಾಡಿದವಳು ಕಾರ್ಬೆಟ್‌ನ ಮೊದಲನೇ ಮಲ ಅಕ್ಕ ಎಂಜಿನಾ. ಹೆರಿಗೆ ವೇಳೆಯಲ್ಲಿ ಈತನ ತಾಯಿ ಬದುಕುವ ಸಂಭವವೇ ಇರಲಿಲ್ಲ. ಚೇತರಿಸಿಕೊಂಡ ಈಕೆ ಮತ್ತೇ ಎರಡು ವರ್ಷದಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದಳು.

ಇಡೀ ಕಾರ್ಬೆಟ್  ಕುಟುಂಬವೇ ಒಂದು ಶಾಲೆಯ ಮಾದರಿಯಲ್ಲಿ ಇತ್ತು. ಕುಟುಂಬದಲ್ಲಿ ಈ ದಂಪತಿಗಳ ಮೊದಲ ವಿವಾಹದ ಮಕ್ಕಳೂ ಸೇರಿದಂತೆ 14 ಮಕ್ಕಳನ್ನು ಸಾಕುವ ಸಲುಹುವ ಹೊಣೆಗಾರಿಕೆಯಿತ್ತು. ಅದನ್ನು ಇ ದಂಪತಿಗಳು ಸಮರ್ಥವಾಗಿ ನಿರ್ವಹಿಸಿದರು. ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ವಿಲಿಯಮ್ಸ್ ನ ಮೊದಲ ಮಗ ಥಾಮಸ್ ತಂದೆಯ ಕಚೇರಿಯಲ್ಲೇ  ಜ್ಯೂನಿಯರ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರಿಂದ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಎಲ್ಲರೂ ವೈದ್ಯ ಮತ್ತು ಇಂಜಿನಿಯರ್ ವೃತ್ತಿಯಲ್ಲಿ ಪದವಿಗಳಿಸಿ ದೇಶ ವಿದೇಶಗಳಲ್ಲಿ ಉದ್ಯೋಗ ದೊರಕಿಸಿಕೊಂಡರು.

ಕ್ರಿಸ್ಟೊಫರ್‌ನ ಅಕ್ಕಳ ಪತಿ ಅನಿರೀಕ್ಷಿತವಾಗಿ ತೀರಿ ಹೋದ್ದರಿಂದ ಆಕೆಯು ಸೇರಿದಂತೆ ನಾಲ್ವರು ಮಕ್ಕಳನ್ನು ಸಲುಹುವ ಜವಬ್ದಾರಿ ಕಾರ್ಬೆಟ್  ಕುಟುಂಬದ ಮೇಲೆ ಬಿತ್ತು. ಆ ವೇಳೆಗೆ ಕಾರ್ಬೆಟ್  ನ ತಂದೆ ಕ್ರಿಸ್ಟೊಫರ್‌ಗೆ  ನಿವೃತ್ತಿಯಾಗಿ ಪಿಂಚಣಿ ಹಣದಲ್ಲಿ ಸಂಸಾರ ಸಾಕುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿಂತವಳು ಕಾರ್ಬೆಟ್  ತಾಯಿ ಮೇರಿ.

ತನ್ನ ಮೊದಲ ವಿವಾಹದಲ್ಲಿ ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳ ಜೊತೆ ಹೋರಾಟದ ಬದುಕನ್ನ ಕಟ್ಟಿಕೊಂಡಿದ್ದ ಮೇರಿಗೆ ಸವಾಲುಗಳನ್ನು ಎದುರಿಸುತ್ತಾ ಜೀವನ ನಿರ್ವಹಣೆ ಮಾಡುವ ಅನುಭವ ಇದ್ದುದರಿಂದ ಆಕೆ ಎದೆಗುಂದಲಿಲ್ಲ. ಆಗ ತಾನೆ ಹೊರಜಗತ್ತಿಗೆ ತೆರೆದುಕೊಳ್ಳುತಿದ್ದ ನೈನಿತಾಲ್ನಲ್ಲಿ ಖಾಲಿ ನಿವೇಶನಗಳನ್ನ ಖರೀದಿಸಿ ಅಲ್ಲಿ ಮನೆಗಳನ್ನ ನಿರ್ಮಿಸಿ ಮಾರುವ ವ್ಯವಹಾರಕ್ಕೆ ಇಳಿದಳು. ಅಲ್ಪ ಕಾಲದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ವಿಯಾದಳು. ಲಾಭದ ಹಣವನ್ನು ಮತ್ತೆ ಭೂಮಿಗೆ ಹಾಕುತಿದ್ದ ಮೇರಿ, ಮನೆಗಳು ಮಾರಾಟವಾಗದಿದ್ದ ಸಮಯದಲ್ಲಿ ಅವುಗಳನ್ನು ಬೇಸಿಗೆಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅಲ್ಪ ಸಮಯಕ್ಕೆ ಬಾಡಿಗೆ ನೀಡುತಿದ್ದಳು. ಅಲ್ಲದೆ, ನೈನಿತಾಲ್ನಲ್ಲಿ ಮನೆಗಳನ್ನು ಹೊಂದಿ ಉದ್ಯೋಗದ ಮೇಲೆ ಹೊರ ಜಾಗಗಳಿಗೆ ಹೋಗಿರುವ ಆಂಗ್ಲರ ಮನೆಗಳನ್ನು ಪಡೆದು ಕಮಿಷನ್ ಆಧಾರದ ಮೇಲೆ ಬಾಡಿಗೆಗೆ ನೀಡುತಿದ್ದಳು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಮೇರಿಯ ರಿಯಲ್ ಎಸ್ಟೇಟ್ ವ್ಯವಹಾರ ಕಾರ್ಬೆಟ್  ಕುಟುಂಬಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿತು.

ನಿವೇಶನಗಳ ಜೊತೆಗೆ ಹಳೆಯ ಮನೆಗಳನ್ನು ಖರೀದಿಸಿ ಅವುಗಳನ್ನು ನವೀಕರಿಸಿ ಮಾರಾಟ ಮಾಡುತಿದ್ದಳು. ಮನೆ ನಿರ್ಮಾಣದ  ಕಚ್ಚಾ ಸಾಮಾಗ್ರಿಗಳನ್ನು ದೂರದ ಊರುಗಳಿಂದ ಕೊಂಡು ತರುವುದನ್ನು ತಪ್ಪಿಸಲು ತಾನೇ ನೈನಿತಾಲ್ನಲ್ಲಿ ಅಂಗಡಿಯೊಂದನ್ನು ತೆರೆದಳು. ಈಕೆಯ ವ್ಯವಹಾರ ಕುಶಲತೆ, ಮತ್ತು ಸ್ಥಳೀಯ ಆಂಗ್ಲರಿಗೆ ನೆರವಾಗುವ ಶೈಲಿ ಇವೆಲ್ಲವೂ ಮೇರಿಯನ್ನು ನೈನಿತಾಲ್ ಗಿರಿಧಾಮದ ಪಟ್ಟಣದ ಗೌರವಾನ್ವಿತ ಮಹಿಳೆಯಾಗಿ ರೂಪಿಸಿದವು.

ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಕೂಡ ನೈನಿತಾಲ್ ಪಟ್ಟಣದ ಹಿರೀಯ ಹಾಗೂ ಗೌರವಾನ್ವಿತ ನಾಗರೀಕನಾಗಿ, ಅಲ್ಲಿನ ಪುರಸಭೆಯ ಪ್ರಾರಂಭಕ್ಕೆ ಕಾರಣನಾದುದಲ್ಲದೆ ಹಲವಾರು ವರ್ಷಗಳ ಕಾಲ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದನು. ಅಲ್ಲಿನ ಮನೆಗಳಿಂದ ಹೊರಬೀಳುವ ಕೊಳಚೆ ನೀರು ನೈನಿತಾಲ್ ಸರೋವರಕ್ಕೆ ಸೇರಿ ಕಲ್ಮಶವಾಗದಂತೆ ತಡೆಗಟ್ಟಲು ಪ್ರಥಮವಾಗಿ ಆಲೋಚಿಸಿದವನು ಕ್ರಿಸ್ಟೊಫರ್. ( ನಂತರ ಮುಂದಿನ ದಿನಗಳಲ್ಲಿ ಮಗ ಜಿಮ್ ಕಾರ್ಬೆಟ್  ಇದೇ ಪುರಸಭೆಯ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಭಾರತದಲ್ಲೇ ಪ್ರಥಮಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿದನು.)

ಕಾರ್ಬೆಟ್   ಕುಟುಂಬ ನೈನಿತಾಲ್ ನಲ್ಲಿ ಸುಖಮಯ ಜೀವನ ಸಾಗಿಸುತಿದ್ದಾಗಲೇ, 1880ರಲ್ಲಿ ನೈಸರ್ಗಿಕ  ದುರಂತವೊಂದು ಸಂಭವಿಸಿತು. ಆ ವರ್ಷದ ಸೆಪ್ಟಂಬರ್ 16 ರಂದು ಸತತ 40 ಗಂಟೆಗಳ ಕಾಲ ಬಿದ್ದ ಮಳೆಯಿಂದಾಗಿ ಇವರು ವಾಸವಾಗಿದ್ದ ನೈನಿತಾಲಿನ  ಕೇಂದ್ರ ಭಾಗದ ಬಝಾರ್ ರಸ್ತೆ ಸಮೀಪದ  ಗುಡ್ಡದ ಬಹುಭಾಗ ಕುಸಿದುಬಿತ್ತು. ಇದರಿಂದಾಗಿ ಕಾರ್ಬೆಟ್   ಕುಟುಂಬಕ್ಕೆ ಆದಾಯ ತರುತಿದ್ದ ಅನೇಕ ಬಾಡಿಗೆ ಮನೆಗಳು ನೆಲಸಮವಾದವು. ಇದರಿಂದ ವಿಚಲಿತರಾದ ಕಾರ್ಬೆಟ್   ತಂದೆ ತಾಯಿ ಅಲ್ಲಿದ್ದ ತಮ್ಮ ಮನೆಯನ್ನು ಮಾರಿ ಸರೋವರದ ಪೂರ್ವ ದಿಕ್ಕಿನಲ್ಲಿದ್ದ ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸತೊಡಗಿದರು. ಇಲ್ಲಿ ಸೂರ್ಯನ ಉದಯವಾಗಲಿ ಅಥವಾ ಬಿಸಿಲಾಗಲಿ ಇವುಗಳ ದರ್ಶನವಾಗುವುದೇ ಕಷ್ಟಕರವಾಗಿತ್ತು. ಆನಂತರ ಅದೇ ಪ್ರದೇಶದ ಬಹು ದೂರ ದಕ್ಷಿಣ ದಿಕ್ಕಿನಲ್ಲಿದ್ದ ಪುರಾತನ ಮನೆಯೊಂದನ್ನ ಖರೀದಿಸಿ, ಸಂಪೂರ್ಣ ನವೀಕರಿಸಿ ಅದಕ್ಕೆ ಗಾರ್ನ್ ಹೌಸ್ ಎಂದು ನಾಮಕರಣ ಮಾಡಿ ಹೊಸ ಬಂಗಲೆಗೆ ಸ್ಥಳಾಂತರಗೊಂಡರು. ಮುಂದೆ ಕಾರ್ಬೆಟ್  ಕುಟುಂಬಕ್ಕೆ ಇದೇ ಶಾಶ್ವತ ನೆಲೆಯಾಯಿತು.

ಕಾರ್ಬೆಟ್  ಜನಿಸಿದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಬಡತನವಿರಲಿಲ್ಲ. ಆತನ ತಾಯಿ ತನ್ನ ವ್ಯವಹಾರ ಕುಶಲತೆಯಿಂದ ಇಡೀ ಕುಟುಂಬ ನೆಮ್ಮದಿಯಿಂದ ಬದುಕುವ ಹಾಗೆ ಆದಾಯದ ಮಾರ್ಗಗಳನ್ನ ರೂಪಿಸಿದ್ದಳು. ಕಾರ್ಬೆಟ್  ಪುಟ್ಟ ಬಾಲಕನಾಗಿದ್ದಾಗ ಅವನ ಮಲ ಸಹೋದರರು, ಸಹೋದರಿಯರು, ಪ್ರೌಢವಸ್ಥೆಗೆ ತಲುಪಿದ್ದರು. ಅವನ ಸ್ವಂತ ಸಹೋದರರು ಅವನಿಗಿಂತ 10-12 ವರ್ಷ ಹಿರಿಯರಾಗಿದ್ದರು ಹಾಗಾಗಿ ಅವನ ಬಾಲ್ಯದ ಒಡನಾಟವಲ್ಲಾ ಅವನಿಗಿಂತ ಒಂದು ವರ್ಷ ಹಿರಿಯವಳಾದ ಅಕ್ಕ ಮ್ಯಾಗಿ ಜೊತೆ ಸಾಗುತಿತ್ತು. ಅಕ್ಕನಿಗೂ ತಮ್ಮ ಜಿಮ್ ಎಂದರೆ ಎಲ್ಲಿಲ್ಲದ ಅಕ್ಕರೆ. ದಿನದ 24 ಗಂಟೆಯೂ ಒಬ್ಬರಿಗೊಬ್ಬರು ಅಂಟಿಕೊಂಡು ಇರುತಿದ್ದರು. ಹಾಗಾಗಿ ಇವರ ತಾಯಿ ಮೇರಿ ಇವರಿಬ್ಬರಿಗೂ ಬ್ರೆಡ್- ಜಾಮ್ ಎಂದು ಅಡ್ಡ ಹೆಸರೊಂದನ್ನು ಇಟ್ಟಿದ್ದಳು. ಸೋಜಿಗವೆಂಬಂತೆ ಇವರಿಬ್ಬರೂ ತಮ್ಮ ಕಡೆಯ ಉಸಿರು ಇರುವ ತನಕ ಹಾಗೆಯೇ ಉಳಿದರು. ತಮ್ಮನ ಮೇಲಿನ ಪ್ರೀತಿಯಿಂದ ಅಕ್ಕ ಅವಿವಾಹಿತಳಾಗಿ ಅವನ ಆಸರೆಗೆ ನಿಂತಳು. ತಮ್ಮ ಕಾರ್ಬೆಟ್   ಕೂಡ ಅಕ್ಕನ ತ್ಯಾಗಕ್ಕೆ ಮನಸೋತು ತಾನೂ ಕೂಡ ಅವಿವಾಹಿತನಾಗಿ ಉಳಿದು ಬದುಕಿನುದ್ದಕ್ಕೂ ಆಕೆಯ ನೆರಳಿನಂತೆ ಬದುಕಿದ.

ನೈನಿತಾಲ್ ಹಾಗು ಕಲದೊಂಗಿಯಲ್ಲಿ ವಾಸವಾಗಿದ್ದ ಆಂಗ್ಲ ಮನೆತನಗಳ ಪೈಕಿ ಸುಸಂಸ್ಕೃತ ಕುಟುಂಬವಾಗಿದ್ದ ಕಾರ್ಬೆಟ್‌ನ  ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಬಾಲ್ಯದಲ್ಲಿ ಅವನ ಪಾಲನೆ, ಪೋಷಣೆ ನೋಡಿಕೊಳ್ಳಲು ಅವನ ತಾಯಿ ಮನೆತುಂಬಾ ಸೇವಕಿಯರನ್ನ ನೇಮಿಸಿದ್ದಳು. ಕಾರ್ಬೆಟ್  ಗೆ ಬಾಲ್ಯದಿಂದಲೇ ಏಕಕಾಲಕ್ಕೆ ಎರಡು ಸಂಸ್ಕೃತಿಯನ್ನು ಗ್ರಹಿಸಲು ಸಾಧ್ಯವಾಯಿತು. ತನ್ನ ಮನೆಯ ವಾತಾವರಣ ಸಂಪೂರ್ಣ ಇಂಗ್ಲೀಷ್ಮಯವಾಗಿತ್ತು. ಅವನ ಆಹಾರ ಉಡುಪು ಎಲ್ಲವೂ ಆಂಗ್ಲ ಮಕ್ಕಳಂತೆ ಇದ್ದವು ನಿಜ. ಆದರೆ ಅವನು ಬೆಳೆದಂತೆ ಅವನಿಗೆ ಅರಿವಿಲ್ಲದಂತೆ ಭಾರತೀಯ ಸಂಸ್ಕೃತಿಯ ಬೀಜಗಳು ಅವನೆದೆಯಲ್ಲಿ ನೆಲೆಯೂರಿದ್ದವು. ಕಾರ್ಬೆಟ್   ಗೆ  ಭಾರತೀಯರು, ಅದರಲ್ಲೂ ಹಳ್ಳಿಗಾಡಿನ ಬಡಜನತೆಯ ಬಗ್ಗೆ ಅಷ್ಟೋಂದು ಅಕ್ಕರೆ ಏಕೆ? ಎಂಬುದಕ್ಕೆ ನಮಗೆ ಉತ್ತರ ಸಿಗುವುದು ಇಲ್ಲೇ.

ಕಾರ್ಬೆಟ್  ನ ತಾಯಿ ಮೇರಿಯ  ರಿಯಲ್ಎಸ್ಟೇಟ್ ವೈವಹಾರ ದೊಡ್ಡದಾಗುತಿದ್ದಂತೆ ಆಕೆ ಮಕ್ಕಳ ಪಾಲನೆಗೆ ಸ್ಥಳೀಯ ಬಡ ಹೆಣ್ಣುಮಕ್ಕಳನ್ನು. ನೇಮಕ ಮಾಡಿಕೊಂಡಿದ್ದಳು. ಇವರೆಲ್ಲಾ ಬಾಲಕ ಕಾರ್ಬೆಟ್   ಅತ್ತಾಗ ಕಣ್ಣೀರು ಒರೆಸಿ, ಹಸಿವಾದಾಗ ಅನ್ನ ತಿನ್ನಿಸಿ, ತಮ್ಮ ಮಾತೃ ಬಾಷೆಯಾದ ಕುಮಾವನ್ ವೈಖರಿಯ ಹಿಂದಿ ಭಾಷೆಯಲ್ಲಿ ಅವನಿಗೆ ಜೋಗುಳವಾಡಿದರು. ಮಲ ವಿಸರ್ಜಿಸಿದಾಗ  ಹೆತ್ತ ತಾಯಿಯಂತೆ ಬೇಸರಿಸದೆ ಅವನ ಅಂಡು ತೊಳೆದರು, ಆಟವಾಡುತ್ತಾ ಮೈ ಕೈ ಕೊಳೆ ಮಾಡಿಕೊಂಡಾಗ ಅವನಿಗೆ ಸ್ನಾನ ಮಾಡಿಸಿ ಹೊಸ ಪೋಷಾಕು ಹಾಕಿದರು. ಇದರಿಂದಾಗಿ ತನ್ನ ಮನೆಯ ಸಂಸ್ಕೃತಿಯ ಜೊತೆ ಜೊತೆಗೆ ಇನ್ನೋಂದು ಭಾಷೆ ಮತ್ತು ಸಂಸ್ಕೃತಿಗೆ ಕಾರ್ಬೆಟ್   ತನಗರಿವಿಲ್ಲದಂತೆ ತೆರೆದುಕೊಂಡ. ಆ ಬಡ ಹೆಣ್ಣುಮಕ್ಕಳ ಪ್ರೀತಿ ಅವನೆದೆಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು ಇದು ಅವನ ಬದುಕಿನುದ್ದಕ್ಕೂ ಬಡವರಿಗೆ ನೆರವಾಗಲು ಪ್ರೇರಣೆಯಾಯಿತು.

ಕಾರ್ಬೆಟ್   ನ ಪ್ರಾಥಮಿಕ ವಿದ್ಯಾಭ್ಯಾಸ ನೈನಿತಾಲ್ನಲ್ಲೇ ನಡೆಯಿತು. ಮನೆಯಲ್ಲಿ ಹಿರಿಯವರಾಗಿದ್ದ ಆತನ  ಅಣ್ಣಂದಿರು, ಅಕ್ಕಂದಿರು ಅವನಿಗೆ ಪಾಠ ಹೇಳುವಲ್ಲಿ ನೆರವಾದರು. ಮನೆಯೊಳಗೆ ಭಾರತ ಮತ್ತು ಇಂಗ್ಲೇಂಡ್ ಇತಿಹಾಸದ ಕೃತಿಗಳು, ಛಾಸರ್ನ ಜಾನಪದ ಶೈಲಿಯ ಕೌತುಕದ ಕಥಾ ಮತ್ತು ಕವಿತೆಯ ಪುಸ್ತಕ ಮತ್ತು ವಿಲಿಯಮ್ ಷೇಕ್ಷ್ ಪಿಯರ್ನ ನಾಟಕಗಳು, ಇವೆಲ್ಲಕಿಂತ ಹೆಚ್ಚಾಗಿ ಆರ್ಯವೇದ ಮತ್ತು ಅಲೊಪತಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಸದಾ ಕೈಗೆಟುಕುವಂತೆ ಇರುತಿದ್ದವು. ಪಕ್ಷಿ ಪ್ರಾಣಿ ಕುರಿತಾದ ಸಚಿತ್ರ ಮಾಹಿತಿ ಪುಸ್ತಕಗಳು ಹೆಚ್ಚಾಗಿ ಅವನ ಗಮನ ಸೆಳೆದವು.

ಕಾರ್ಬೆಟ್  ಮೂರು ವರ್ಷದ ಬಾಲಕನಾಗಿದ್ದಾಗಲೇ ತನ್ನ ಹಿರಿಯಣ್ಣಂದಿರಲ್ಲಿ ಒಬ್ಬನಾಗಿದ್ದ ಜಾನ್ ಕ್ವಿಂಟಾನ್ ಕೈಹಿಡಿದು ನೈನಿ ಸರೋವರ, ಅಲ್ಲಿರುವ ನೈನಾದೇವಿಯ ದೇಗುಲ, ಬಝಾರ್ ರಸ್ತೆ ಇವುಗಳನ್ನ ಸುತ್ತು ಹಾಕುತಿದ್ದ. ತನ್ನ ಮನೆಗೆ ಅತಿ ಸನೀಹದಲ್ಲಿದ್ದ ಸರೋವರಕ್ಕೆ ಬರುವ ಬಗೆ ಬಗೆಯ ಪಕ್ಷಿಗಳೆಂದರೆ ಕಾರ್ಬೆಟ್ಗೆ ಎಲ್ಲಿಲ್ಲದ ಆಸಕ್ತಿ. ರಾತ್ರಿಯ ವೇಳೆ ತನ್ನ ಮನೆಯ ಸಮೀಪದ ಅರಣ್ಯದಲ್ಲಿನ ಹುಲಿ, ಚಿರತೆಗಳ ಘರ್ಜನೆಯ ಶಬ್ದಗಳನ್ನು ಕುತೂಹಲದಿಂದ ಆಲಿಸುತಿದ್ದ. ಅಪರೂಪಕ್ಕೆ ಅರಣ್ಯದಲ್ಲಿ ಆನೆಗಳ ಹಿಂಡು ಸಾಗುವ ದೃಶ್ಯವೂ ಅವನಿಗೆ ಲಭ್ಯವಾಗುತಿತ್ತು. ಹೀಗೆ ಬಾಲ್ಯದಿಂದ ನಿಸರ್ಗವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದ ಕಾರ್ಬೆಟ್  ನಿಗೆ ಮುಂದೆ ಅದು ಅವನ ಜೀವನದ ಹವ್ಯಾಸವಾಗಿ ಬೆಳೆದುಹೋಯಿತು.

ಕಾರ್ಬೆಟ್‌ನ ತಂದೆ ತಾಯಿಗಳಾದ ಕ್ರಿಸ್ಟೊಫರ್‌ ವಿಲಿಯಮ್ಸ್ ಹಾಗು ಮೇರಿಜನ್ ಇವರಿಗೆ ಕುಟುಂಬ ಕುರಿತಂತೆ ಯಾವುದೇ ಅಸ್ತಿರತೆ ಇರಲಿಲ್ಲ. ಕ್ರಿಸ್ಟೊಫರ್‌ ತನ್ನ ಮೊದಲ ಪತ್ನಿಯಿಂದ ಪಡೆದಿದ್ದ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಂಡ್ನಲ್ಲಿ ನೆಲೆಯೂರಿದ್ದರು. ಅದೇ ರೀತಿ ಮೇರಿ ತನ್ನ ಮೊದಲ ಪತಿಯಿಂದ ಪಡೆದು ಉಳಿದುಕೊಂಡಿದ್ದ ಏಕೈಕ ಪುತ್ರಿ ಎಂಜಿನಾಮೇರಿ ಶುಶ್ರೂಷಕಿಯಾಗಿ ಬ್ರಿಟಿಷ್ ಸಕರ್ಾರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಳು. ಉಳಿದ ಮಕ್ಕಳ ಶಿಕ್ಷಣ ಕೂಡ ಯಾವುದೇ ಅಡೆ ತಡೆಯಿಲ್ಲದೆ ಸಾಗುತಿತ್ತು.

ಕಾರ್ಬೆಟ್   ಕುಟುಂಬ ನೆಮ್ಮದಿಯ ಜೀವನ ಸಾಗಿಸುತಿದ್ದಾಗಲೇ 1881ರಲ್ಲಿ ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಹೃದಯಾಪಘಾತದಿಂದ ಮರಣ ಹೊಂದಿದ. ಕೇವಲ 59ನೆ ವಯಸ್ಸಿಗೆ ತೀರಿ ಹೋದ ಪತಿಯ ಸಾವು ಪತ್ನಿ ಮೆರಿಯ ಪಾಲಿಗೆ ಅನಿರೀಕ್ಷಿತ ಆಘಾತವಾಯಿತು.

ನೈನಿತಾಲ್ ಪಟ್ಟಣವನ್ನು ರೂಪಿಸುವಲ್ಲಿ ಅಪಾರ ಶ್ರಮ ವಹಿಸಿ, ಅಲ್ಲಿ ಪುರಸಭೆಯ ಸಂಸ್ಥಾಪಕಕನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ  ಕ್ರಿಸ್ಟೊಫರ್‌ ವಿಲಿಯಮ್ಸ್ ಬಗ್ಗೆ ಪಟ್ಟಣದ ನಾಗರೀಕರಲ್ಲಿ ಮತ್ತು ಅಲ್ಲಿ ವಾಸವಾಗಿದ್ದ ಆಂಗ್ಲರ ಕುಟುಂಬಗಳಲ್ಲಿ ವಿಶೇಷ ಗೌರವಗಳಿದ್ದವು. ಹಾಗಾಗಿ ನೈನಿತಾಲ್ ಹೃದಯ ಭಾಗದಲ್ಲಿದ್ದ ಚರ್ಚ್ ನಲ್ಲಿ ಆತನ ಪಾರ್ಥಿವ ಶರೀರಕ್ಕೆ ಎಲ್ಲಾ ಗಣ್ಯರು ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿ ಸಮೀಪದಲ್ಲಿ ಇದ್ದ ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಲಾಯಿತು. ಈಗ ಮುಚ್ಚಲ್ಪಟ್ಟಿರುವ ಆ ಸ್ಮಶಾನ ಭೂಮಿಯ ಮುಖ್ಯಬಾಗಿಲಿನ ಬಲಭಾಗದಲ್ಲಿ ಈಗಲೂ ಅವನ ಸಮಾಧಿಯನ್ನು ನಾವು ನೋಡಬಹುದು.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-2)

-ಡಾ. ಎನ್. ಜಗದೀಶ್ ಕೊಪ್ಪ

ಜಿಮ್ ಕಾರ್ಬೆಟ್‌ ಭಾರತದಲ್ಲಿ ಹುಟ್ಟಿ ಅಪ್ಪಟ ಭಾರತೀಯನಂತೆ ಬದುಕಿದ. ಇಲ್ಲಿನ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಕಾರ್ಬೆಟ್‌ ಹಿಂದಿ ಒಳಗೊಂಡಂತೆ ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಈತನ ಪೂರ್ವಿಕರು ಇಂಗ್ಲೆಂಡ್‌ನ ಆಳ್ವಿಕೆಯಲ್ಲಿದ್ದ ಐರ್ಲೆಂಡ್ ದೇಶದಿಂದ ಸಿಪಾಯಿ ದಂಗೆಗೆ ಮುನ್ನ ಭಾರತದಲ್ಲಿದ್ದ ಬ್ರಿಟಿಷರ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಬಂದವರು.

ಅದು 18ನೇ ಶತಮಾನದ ಅಂತ್ಯದ ಕಾಲ. ಆಗತಾನೆ ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆ ಇಡುತಿತ್ತು. ಅಂದಿನ ದಿನಗಳಲ್ಲಿ ಇಂಗ್ಲೆಂಡ್ ಸೇರಿದಂತೆ ಐರ್ಲೆಂಡ್ ದೇಶದಲ್ಲಿ ಜನಸಾಮಾನ್ಯರು ಬದುಕುವುದು ದುಸ್ತರವಾಗಿತ್ತು. ಇದೇ ವೇಳೆಗೆ ಜಗತ್ತಿನಾದ್ಯಂತ ಇಂಗ್ಲೆಂಡ್ ಸಾಮ್ರಾಜ್ಯ ವಿಸ್ತರಿಸುತಿತ್ತು. ಬ್ರಿಟಿಷ್ ವಸಾಹತುಶಾಹಿ ಪ್ರದೇಶಗಳಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಜೊತೆ ಸಂವಹನದ ಕೊರತೆ ಇದ್ದ ಕಾರಣ ಬ್ರಿಟಿಷರು ಬಹುತೇಕ ಜವಾಬ್ದಾರಿ ಹುದ್ದೆಗಳಿಂದ ಹಿಡಿದು, ಸೈನಿಕ ವೃತ್ತಿಗೂ ತಮ್ಮವರನ್ನೇ ನೇಮಕ ಮಾಡಿಕೊಳ್ಳುತ್ತಿದರು. ಜೊತೆಗೆ ತಮ್ಮ ವಸಾಹತು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ತಮ್ಮ ಜನರನ್ನು ಪ್ರೊತ್ಸಾಹಿಸುತಿದ್ದರು. ಹಿಗಾಗಿಯೇ ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಬ್ರಿಟಿಷರು ನೆಲೆಯೂರಲು ಸಾಧ್ಯವಾಯಿತು.

ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಭ್ರಮೆಯಲ್ಲಿ ಓಲಾಡುತಿದ್ದ ಇಂಗ್ಲೆಂಡ್ ಮತ್ತು ಅಲ್ಲಿನ ಜನತಗೆ ತಾವು ಹುಟ್ಟಿರುವುದು ಜಗತ್ತನ್ನು ಆಳುವುದಕ್ಕೆ ಎಂಬ ನಂಬಿಕೆಯಿತ್ತು. ತಾವು ಈ ನೆಲದ ಮೇಲಿನ ದೊರೆಗಳು, ಉಳಿದವರು ನಮ್ಮ ಸೇವೆ ಮಾಡುವುದಕ್ಕಾಗಿ ಹುಟ್ಟಿದ ಸಂಸ್ಕೃತಿಯಿಲ್ಲದ ಗುಲಾಮರು ಎಂಬ ಭ್ರಮೆ ಅವರಲ್ಲಿ ಬಲವಾಗಿ ಬೇರೂರಿತ್ತು.

ಇಂತಹದ್ದೇ ಸಂದರ್ಭದಲ್ಲಿ ಕಾರ್ಬೆಟ್‌ನ ತಾತ ಹಾಗೂ ಅಜ್ಜಿ ಜೊಸೆಪ್ ಮತ್ತು ಹ್ಯಾರಿಯೆಟ್ ಎಂಬುವರು 1814ರ ಜುಲೈ 26ರಂದು ಐರ್ಲೆಡಿನಿಂದ ರಾಯಲ್ ಜಾರ್ಜ್ ಎಂಬ ಹಡಗಿನ ಮೂಲಕ ಪ್ರಯಾಣ ಆರಂಭಿಸಿ, 1815ರ ಪೆಬ್ರವರಿ 7 ರಂದು ಭಾರತದ ನೆಲಕ್ಕೆ ಕಾಲಿಟ್ಟರು. ಬರುವಾಗಲೇ ಈ ಯುವ ದಂಪತಿಗಳಿಗೆ ಒಂದು ವರ್ಷದ ಎಲಿಜಾ ಎಂಬ ಹೆಣ್ಣು ಮಗುವಿತ್ತು. 1796 ರಲ್ಲಿ ಐರ್ಲೆಂಡಿನ ಬೆಲ್ಫಾಸ್ಟ್ ನಗರದಲ್ಲಿ ಜನಿಸಿದ್ದ ಜೋಸೆಪ್ ಅಲ್ಲಿ ಕೆಲ ಕಾಲ ಕ್ರೈಸ್ತ ಸನ್ಯಾಸಿಯಾಗಿ ಕಾರ್ಯ ನಿರ್ವಹಿಸಿದ್ದ. ಅವನು ತನ್ನ ಪತ್ನಿ ಹ್ಯಾರಿಯೆಟ್ ಜೊತೆ ಐರ್ಲೆಂಡ್ ತೊರೆಯುವ ಮುನ್ನವೇ ಅಂದರೆ 1814 ಜೂನ್ 15 ರಂದು ಭಾರತದ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಉದ್ಯೋಗ ಪತ್ರ ಪಡೆದುಕೊಂಡಿದ್ದರಿಂದ ಇಲ್ಲಿಗೆ ನೇರವಾಗಿ ಬಂದವನೇ ಸೇನೆಯಲ್ಲಿ ಸೇರ್ಪಡೆಯಾದ. ಕೇವಲ ಎರಡು ವರ್ಷಗಳಲ್ಲಿ ಭಡ್ತಿ ಪಡೆದು, ಅಶ್ವರೋಹಿ ಪಡೆಗೆ ವರ್ಗವಾಗಿ ಮೀರತ್ ನಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸುತಿದ್ದಾಗಲೇ ತನ್ನ 33ನೇ ವಯಸ್ಸಿನಲ್ಲಿ ಅಂದರೆ, 1830ರ ಮಾಚ 28ರಂದು ಅಸುನೀಗಿದ. ಈ ವೇಳೆಗಾಗಲೇ ಜೋಸೆಪ್ ಮತ್ತು ಹ್ಯಾರಿಯೆಟ್ ದಂಪತಿಗಳಿಗೆ ಒಂಬತ್ತು ಮಂದಿ ಮಕ್ಕಳಿದ್ದರು. ಇವರಲ್ಲಿ ಆರನೇಯವನಾಗಿ 1822ರಲ್ಲಿ ಮೀರತ್ ನಲ್ಲಿ ಜನಿಸಿದವನು ಕ್ರಿಸ್ಟೋಪರ್ ವಿಲಿಯಮ್ ( ಜಿಮ್ ಕಾರ್ಬೆಟ್‌ ತಂದೆ).

ಈತ ಕೂಡ ತಂದೆಯಂತೆ ಸೇನೆಯಲ್ಲಿ ವೈದ್ಯಕೀಯ ಚಿಕಿತ್ಸಕನ ಸಹಾಯಕನಾಗಿ ಸೇರ್ಪಡೆಯಾಗಿ ಮಸ್ಸೂರಿಯಲ್ಲಿ ಕಾರ್ಯನರ್ವಹಿಸುತಿದ್ದ. ತನ್ನ 20 ನೇ ವಯಸ್ಸಿಗೆ ಉಪ ಶಸ್ತ್ರಚಿಕಿತ್ಸಕನಾಗಿ ಭಡ್ತಿ ಪಡೆದು ಆಘ್ಪಾನಿಸ್ಥಾನದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ, ಸ್ಥಳೀಯ ಬುಡಕಟ್ಟು ಜನಾಂಗದೊಡನೆ ಬ್ರಿಟಿಷರು ನಡೆಸಿದ ಯುದ್ಧದಲ್ಲಿ ಪಾಲ್ಗೊಂಡು ತನ್ನ ಸೇವೆಗಾಗಿ ಪದಕವನ್ನೂ ಪಡೆದ. ಯುದ್ದ ಮುಗಿದ ಬಳಿಕ ಕ್ರಿಸ್ಟೋಪರ್ ವಿಲಿಯಮ್‌ನನ್ನು ಸರ್ಕಾರ ಮಸ್ಸೂರಿ ಬಳಿಯ ಡೆಹರಾಡೂನ್‌ಗೆ ವರ್ಗಾವಣೆ ಮಾಡಿತು. ಈ ವೇಳೆಯಲ್ಲಿ ಅಂದರೆ, 1845 ರಲ್ಲಿ ಮಸ್ಸೂರಿಯಲ್ಲಿ ಬೇಟಿಯಾದ ಮೇರಿ ಆನ್ನ್‌ಳನ್ನು ಮೊದಲ ನೋಟದಲ್ಲೇ ಮೋಹಗೊಂಡು ಪ್ರೀತಿಸಿ ಡಿಸೆಂಬರ್ 19 ರಂದು ಮದುವೆಯಾದ. ಅವನ ಮಧುಚಂದ್ರ ಮುಗಿಯುವುದರೊಳಗೆ ಬ್ರಿಟಿಷ್ ಸೇನೆ ಅವನನ್ನು ಮತ್ತೇ ಪಂಜಾಬ್‌ಗೆ ವರ್ಗ ಮಾಡಿತು. ಅಲ್ಲಿ ಸಿಖ್ಖರೊಡನೆ ನಡೆಯುತಿದ್ದ ಸಂಘರ್ಷದಲ್ಲಿ ಹಲವಾರು ಸೈನಿಕರು ಗಾಯಗೊಂಡ ಕಾರಣ ಕ್ರಿಸ್ಟೋಪರ್ ಸೇವೆ ಅಲ್ಲಿ ಅಗತ್ಯವಾಗಿತ್ತು. ಈತನನ್ನು 18ನೇ ವಯಸ್ಸಿಗೆ ಮದುವೆಯಾಗಿದ್ದ ಮೇರಿ ಆನ್ನ್ ಎರಡು ಮಕ್ಕಳಿಗೆ ಜನ್ಮ ನೀಡಿ ತನ್ನ 20ನೇ ವಯಸ್ಸಿಗೆ ಆಕಸ್ಮಿಕವಾಗಿ ಮರಣ ಹೊಂದಿದಳು. ತನ್ನ ಎರಡು ಮಕ್ಕಳೊಂದಿಗೆ ಪಂಜಾಬ್ ಬಂಗಾಳ ದೆಹಲಿ ಮುಂತಾದ ಕಡೆ ಕಾರ್ಯನಿರ್ವಹಿಸಿ, 1857ರಲ್ಲಿ ನಡೆದ ಸಿಪಾಯಿ ದಂಗೆ ಯುದ್ಧದಲ್ಲಿ ಬ್ರಿಟಿಷ್ ಸೇನೆ ಪರ ಶೌರ್ಯ ಪ್ರದರ್ಶಿಸಿ ಪದಕಗಳನ್ನು ಪಡೆದ ಕ್ರಿಸ್ಟೋಪರ್ 1858ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು,1959ರಲ್ಲಿ ಮಸ್ಸೂರಿಯ ಅಂಚೆ ಇಲಾಖೆಗೆ ಪೊಸ್ಟ್ ಮಾಸ್ಠರ್ ಆಗಿ ಸೇರ್ಪಡೆಗೊಂಡ. ಅಲ್ಲಿನ ಚರ್ಚ್ ಒಂದರ ಸಮಾರಂಭದಲ್ಲಿ ಬೇಟಿಯಾದ ನಾಲ್ಕು ಮಕ್ಕಳ ತಾಯಿ ಹಾಗೂ ವಿಧವೆ ಮೇರಿ ಜೇನ್‌ ಡೋಯಲ್‌ಳನ್ನು ಮರು ವಿವಾಹವಾದ. ಈ ವೇಳೆಗೆ ಕ್ರಿಸ್ಟೋಪರ್ ವಿಲಿಯಮ್‌ಗೆ ಇಬ್ಬರು, ಆಕೆಗೆ ನಾಲ್ವರು ಒಟ್ಟು ಆರು ಮಕ್ಕಳಿದ್ದರು. (ಇವರಲ್ಲಿ ಆಕೆಯ ಮೂರು ಮಕ್ಕಳು ಅಸು ನೀಗಿ ಏಕೈಕ ಹೆಣ್ಣು ಮಾತ್ರ ಉಳಿಯಿತು.)

ಮೇರಿ ಜೇನ್ ಡೊಯಲ್‌ಳದು ಒಂದು ರೀತಿ ಹೋರಾಟದ ಬದುಕು. ತನ್ನ 14ನೇ ವಯಸ್ಸಿಗೆ ಮಿಲಿಟರಿಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತಿದ್ದ ಡಾ. ಚಾರ್ಲ್ಸ್ ಜೇಮ್ಸ್ ಎಂಬಾತನ ಜೊತೆ ವಿವಾಹವಾಗಿ ಆಗ್ರಾ ನಗರದಲ್ಲಿ ನೆಮ್ಮದಿಯ ಜೀವನ ನಡೆಸುತಿದ್ದಳು.1857ರಲ್ಲಿ ಸಂಭವಿಸಿದ ಸಿಪಾಯಿ ದಂಗೆ ಹೋರಾಟದ ಸಮಯದಲ್ಲಿ ದೆಹಲಿಯಲ್ಲಿ ಭಾರತೀಯರು ನಡೆಸಿದ ಬ್ರಿಟಿಷರ ನರಮೇಧದಿಂದ ಎಚ್ಚೆತ್ತುಕೊಂಡ ಆಗ್ರಾ ಬ್ರಿಟಿಷರ ಸೇನೆ ತಮ್ಮ ಹೆಂಗಸರು ಮತ್ತು ಮಕ್ಕಳನ್ನು ಕೋಟೆಯೊಳೆಗೆ ಸುರಕ್ಷಿತ ಜಾಗದಲ್ಲಿರಿಸಿ ಭಾರತೀಯ ಸಿಪಾಯಿಗಳ ಜೊತೆ ಹೋರಾಟ ನಡೆಸಿತು. ಈ ಸಮಯದಲ್ಲಿ ಸೇನಾ ತುಕಡಿಯ ಕಮಾಂಡರ್ ಆಗಿದ್ದ ಈಕೆಯ ಪತಿ ಡಾ. ಚಾರ್ಲ್ಸ್ ಜೇಮ್ಸ್ ಭಾರತೀಯರ ಧಾಳಿಗೆ ತುತ್ತಾಗಿ ಅಸುನೀಗಿದ. ಈ ವೇಳೆಯಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಮೇರಿ ತನ್ನ ಮಕ್ಕಳೊಂದಿಗೆ ಸೀರೆಯ ಸಹಾಯದಿಂದ ಆಗ್ರಾ ಕೋಟೆಯನ್ನು ಹಾರಿ ಯಮುನಾ ನದಿ ತೀರದುದ್ದಕ್ಕೂ ನಡೆದು, ನಂತರ ಯುರೋಪಿಯನ್ ಮಹಿಳೆಯರೊಂದಿಗೆ ಭಾರತದ ಸಿಪಾಯಿಗಳ ದಾಳಿಗೆ ಸಿಲುಕದೆ, ಕಾಲು ನಡಿಗೆಯಲ್ಲಿ ಬ್ರಿಟಿಷರ ಸುರಕ್ಷಿತ ಸ್ಥಳವಾದ ಮಸ್ಸೂರಿ ತಲುಪಿದ ದಿಟ್ಟ ಹೆಂಗಸು ಆಕೆ.

ಮೇರಿ ಕ್ರಿಸ್ಟೋಪರ್‌ನನ್ನು ಮದುವೆಯಾಗುವವರೆಗೂ ಬ್ರಿಟಿಷ್ ಸರ್ಕಾರ ತನ್ನ ಮೃತ ಗಂಡನಿಗೆ ನೀಡುತಿದ್ದ ಜೀವನಾಂಶದಲ್ಲಿ ತನ್ನ ಮಕ್ಕಳೊಂದಿಗೆ ಮಸ್ಸೂರಿಯಲ್ಲಿ ಬದುಕು ದೂಡುತಿದ್ದಳು.

ಈ ಇಬ್ಬರೂ ಮರು ವಿವಾಹವಾದ ನಂತರ ದಂಪತಿಗಳು ಎರಡು ವರ್ಷ ಮಸ್ಸೂರಿಯಲ್ಲಿದ್ದರು. ನಂತರ 1862ರಲ್ಲಿ ಕ್ರಿಸ್ಟೋಪರ್ ವಿಲಿಯಮ್ಸ್ ಶಾಶ್ವತವಾಗಿ ನೈನಿತಾಲ್ ಗಿರಿಧಾಮದ ಅಂಚೆಕಚೇರಿಗೆ ವರ್ಗವಾದ ಕಾರಣ ಕಾರ್ಬೆಟ್ ಕುಟುಂಬ ಇಲ್ಲಿ ನೆಲೆಯೂರಲು ಸಾಧ್ಯವಾಯಿತು. ಇವರು ನೈನಿತಾಲ್‌ಗೆ ಬಂದಾಗ ಈ ಗಿರಿಧಾಮ ಆಗ ತಾನೆ ಹೊರಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತಿತ್ತು.

ಕುಮಾವನ್ ಪರ್ವತಗಳ ಶ್ರೇಣಿಗಳ ನಡುವೆ 6800 ಅಡಿ ಎತ್ತರದಲ್ಲಿ ಇದ್ದ ನೈನಿ ಎಂಬ ಪರಿಶುದ್ಧ ತಿಳಿನೀರಿನ ಸರೋವರವನ್ನು ಕಂಡುಹಿಡಿದ ಕೀರ್ತಿ ಬ್ರಿಟಿಷ್ ವರ್ತಕ ಬ್ಯಾರನ್ ಎಂಬಾತನದು. ಶಹಜಾನ್ಪುರದಲ್ಲಿ ವರ್ತಕನಾಗಿದ್ದ ಈತನಿಗೆ ಬಿಡುವು ಸಿಕ್ಕಾಗಲೆಲ್ಲಾ ಗುಡ್ಡ ಕಣಿವೆಗಳನ್ನು ಹತ್ತಿ ಇಳಿಯುವ ಹವ್ಯಾಸ. 1841ರಲ್ಲಿ ಒಮ್ಮೆ ಅಲ್ಮೋರ ಬಳಿಯ ಕೋಸಿ ನದಿ ತೀರದ ಕಣಿವೆಯಲ್ಲಿ ಅಡ್ಡಾಡುತಿದ್ದಾಗ ಎತ್ತರದ ಪರ್ವತವನ್ನೇರಿ ಈ ಸರೋವರವನ್ನು ಗುರುತಿಸಿದ. ಮತ್ತೊಮ್ಮೆ ಸೇನೆಯ ಇಂಜಿನೀಯರ್ ಕ್ಯಾಪ್ಟನ್ ವೆಲ್ಲರ್ ಹಾಗೂ ಕುಮಾವನ್ ಪ್ರಾಂತ್ಯದ ಅಧಿಕಾರಿ ಲುಷಿಂಗ್ಟನ್ ಇವರನ್ನ ಕರೆದೊಯ್ದು ಅವರಿಗೆ ಬೇಸಿಗೆಯಲ್ಲಿ ಯುರೋಪಿಯನ್ನರು ವಾಸಿಸಲು ಇದು ಪ್ರಶಸ್ತವಾದ ಸ್ಥಳ ಎಂದು ಮನದಟ್ಟು ಮಾಡಿಕೊಟ್ಟ.

1842 ರಲ್ಲಿ ಅಧಿಕಾರಿ ಲುಷಿಂಗ್ಟನ್ ಅಲ್ಲಿನ ಜಾಗವನ್ನು ಗುರುತಿಸಿ, ವಾಸಸ್ಥಳದ ರೂಪುರೇಷೆಗಳನ್ನು ವಿನ್ಯಾಸಗೊಳಿಸಿದ. ವಾಸಸ್ಥಳಕ್ಕಾಗಿ ಗುರುತಿಸಿದ ಸ್ಥಳಗಳನ್ನು ಈ ಗಿರಿಧಾಮದಲ್ಲಿ ವಾಸಿಸಲು ಬರುವವರಿಗೆ (ಬ್ರಿಟಿಷರಿಗೆ ಮಾತ್ರ) ಎಕರೆಗೆ 12 ಆಣೆಗಳಂತೆ ( ಮುಕ್ಕಾಲು ರೂಪಾಯಿ ಅಂದರೆ ಈಗಿನ 75 ಪೈಸೆ) ಮಾರಲಾಯಿತು. ಈ ಸ್ಥಳವನ್ನು ಕಂಡು ಹಿಡಿದ ಬ್ಯಾರನ್ ತಾನೂ ಜಮೀನು ಖರೀದಿಸಿ ಅಲ್ಲಿ ಪ್ರವಾಸಿಗರಿಗಾಗಿ ವಸತಿಗೃಹ ಪ್ರಾರಂಭಿಸಿದ. ಕೇವಲ 10 ವರ್ಷಗಳಲ್ಲಿ ಈ ಗಿರಿಧಾಮ ಯುರೋಪಿಯನ್ನರ ಮೆಚ್ಚಿನ ತಾಣವಾಯಿತು. 1857ರ ಸಿಪಾಯಿ ದಂಗೆಯ ಸಮಯದಲ್ಲೂ ಕೂಡ ಸುರಕ್ಷಿತವಾಗಿದ್ದ ಕಾರಣ, ಸಮೀಪದ ರಾಮ್‌ಪುರ್, ಮುರದಾಬಾದ್,  ರಾಯ್‌ಬರೇಲಿ ಮುಂತಾದ ಊರುಗಳಲ್ಲಿ ವಾಸವಾಗಿದ್ದ ಬ್ರಿಟಿಷರು ಇಲ್ಲಿಗೆ ಬರಲು ಆರಂಭಿಸಿದರು.

1862ರಲ್ಲಿ ಜಿಮ್ ಕಾರ್ಬೆಟ್ ತಂದೆ ಕ್ರಿಸ್ಟೋಪರ್ ವಿಲಿಯಮ್ಸ್ ಹಾಗೂ ತಾಯಿ ಮೇರಿಜನ್ ಡೊಯಲ್ ನೈನಿತಾಲ್ ಬರುವ ವೇಳೆಗೆ ಅದು ಪ್ರವಾಸ ತಾಣ ಪಟ್ಟಣವಾಗಿ ರೂಪುಗೊಂಡಿತ್ತು. ಪಾರಂಭದಲ್ಲಿ ಮಲ್ಲಿ ಎಂಬ ಸರೋವರದ ಬಳಿ ಬಾಡಿಗೆ ಮನೆಯಲ್ಲಿದ್ದು ನಂತರ ತಾವು ಕೂಡ ಒಂದು ನಿವೇಶನ ಖರೀದಿಸಿ ಸ್ವಂತ ಮನೆ ಮಾಡಿಕೊಂಡರು. ಕ್ರಿಸ್ಟೋಪರ್ ವಿಲಿಯಮ್ಸ್ ಪೋಸ್ಟ್ ಮಾಸ್ಟರ್ ಆಗಿದ್ದ ಕಾರಣ ಎಲ್ಲರ ಜೊತೆ ನಿಕಟ ಸಂಬಂಧ ಹೊಂದಿದ್ದ. ಜೊತೆಗೆ ನಿವೃತ್ತ ಸೇನಾಧಿಕಾರಿಯಾಗಿದ್ದ. ಆತ ಆಗಿನ ಜಿಲ್ಲಾಧಿಕಾರಿ ಸರ್ ಹೆನ್ರಿ ರಾಮ್ಸೆ ಅವರ ಮನವೊಲಿಸಿ ನೈನಿತಾಲ್ ತಪ್ಪಲಿನ ಚೋಟ ಹಲ್ದಾನಿ ಮತ್ತು ಕಲದೊಂಗಿ ಹಳ್ಳಿಗಳ ನಡುವೆ 10 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡ. ನೈನಿತಾಲ್ ಬೇಸಿಗೆಗೆ ಹೇಳಿ ಮಾಡಿಸಿದ ಪ್ರಶಸ್ತ ಸ್ಥಳವಾದರೂ, ಚಳಿಗಾಲದ ನವೆಂಬರ್‌ನಿಂದ ಫೆಬ್ರವರಿವರೆಗೆ ಅಲ್ಲಿ ಚಳಿ ತಡೆಯಲು ಅಸಾಧ್ಯವಾಗಿತ್ತು. ಹಾಗಾಗಿ ಕ್ರಿಸ್ಟೋಪರ್ ತನ್ನ ಕುಟುಂಬದ ಚಳಿಗಾಲಕ್ಕಾಗಿ ಕಲದೊಂಗಿಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡ.

1860 ಕ್ಕೂ ಮುನ್ನವೆ ಈ ಎರಡು ಹಳ್ಳಿಗಳು ಅಸ್ತಿತ್ವದಲ್ಲಿದ್ದವು. ಸುತ್ತ ಮುತ್ತಲಿನ ಅರಣ್ಯ ಪ್ರದೇಶದಿಂದ ಆವರಿಸಿಕೊಂಡಿದ್ದ ಈ ಹಳ್ಳಿಗಳು ಮಲೇರಿಯಾ ಸೊಳ್ಳೆಗಳ ವಾಸಸ್ಥಾನವಾಗಿದ್ದವು. ಆದರೂ ಕೂಡ ಚಳಿಗಾಲದ ವಾಸಕ್ಕೆ ಕಲದೊಂಗಿ ಹಳ್ಳಿ ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಆಗತಾನೆ ದೇಶದುದ್ದಕ್ಕೂ ರೈಲ್ವೆ ಮಾರ್ಗ ಹಾಕಲು ಆರಂಭಿಸಿತ್ತು. ರೈಲ್ವೆ ಹಳಿಗಳನ್ನು ತಯಾರು ಮಾಡುವ ಇಂಗ್ಲೆಂಡ್ ಮೂಲದ ಡೆವಿಸ್ ಅಂಡ್ ಕೋ ಎಂಬ ಕಂಪನಿ ಈ ಹಳ್ಳಿಯಲ್ಲೇ ಕಬ್ಬಿಣದ ಹಳಿಗಳನ್ನು ತಯಾರು ಮಾಡುತಿತ್ತು. ಕಬ್ಬಿಣದ ಅದಿರನ್ನು ಕಾಯಿಸಲು ಬೇಕಾದ ಮರದ ಇದ್ದಿಲು ತಯಾರು ಮಾಡುವ ಅನೇಕ ಘಟಕಗಳು ಇಲ್ಲಿ ಕಾರ್ಯ ನಿರ್ವಹಿಸುತಿದ್ದವು. ಇದ್ದಿಲು ಸುಡುವುದಕ್ಕಾಗಿ ಮರಗಳನ್ನು ಅಪಾರ ಪ್ರಮಾಣದಲ್ಲಿ ಕಡಿಯುತಿದ್ದರಿಂದ ಮುಂದಿನ ದಿನಗಳಲ್ಲಿ ಈ ಘಟಕಗಳನ್ನು ಮುಚ್ಚಿಹಾಕಲಾಯಿತು. ಅಷ್ಟರ ವೇಳೆಗಾಗಲೆ ಕಲದೊಂಗಿ ಸುತ್ತಮುತ್ತಲಿನ ನಗರಗಳ ಪಾಲಿಗೆ ಸಂಪರ್ಕ ಕೇಂದ್ರವಾಗಿತ್ತು. ರೈಲ್ವೆ ಹಳಿಗಳನ್ನು ಸಾಗಿಸಲು ಬ್ರಿಟಿಷ್ ಸರ್ಕಾರ ಮುರದಾಬಾದ್‌ನಿಂದ ಕಲದೊಂಗಿಯವರೆಗೆ ರೈಲು ಮಾರ್ಗವನ್ನು ಸಹ ನಿರ್ಮಿಸಿತ್ತು. ಆದರೆ ಕಲದೊಂಗಿಯಿಂದ ನೈನಿತಾಲ್‌ಗೆ ಹೋಗಿ ಬರುವ ಮಾರ್ಗ ಮಾತ್ರ ದುರ್ಗಮವಾಗಿತ್ತು. ಹೆಂಗಸರು ಮತ್ತು ಮಕ್ಕಳನ್ನು ಡೋಲಿ ಇಲ್ಲವೆ ಕುದುರೆಯ ಮೇಲೆ ಕೂರಿಸಿ, ಗಂಡಸರು ನಡೆಯಬೇಕಾದ ಸ್ಥಿತಿ. ಜೊತಗೆ ಅರಣ್ಯದ ನಡುವೆ ಹುಲಿ, ಚಿರತೆ ಮತ್ತು ಡಕಾಯಿತರ ಕಾಟ. ಇದರಿಂದ ತಮ್ಮ ಜೊತೆ ಹಲವಾರು ಹಳ್ಳಿಗರನ್ನು ದಿನಗೂಲಿ ಆಧಾರದ ಮೇಲೆ ರಕ್ಷಣೆಗಾಗಿ ತಮ್ಮ ಜೊತೆ ಕರೆದೊಯ್ಯುವುದು ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

1862 ರ ನಂತರ ನೈನಿತಾಲ್‌ನಲ್ಲಿ ಶಾಶ್ವತವಾಗಿ ನೆಲೆ ನಿಂತ ಕ್ರಿಸ್ಟೋಪರ್ ಮತ್ತು ಮೇರಿ ದಂಪತಿಗಳಿಗೆ ತಮ್ಮ ಮರು ವಿವಾಹದ ನಂತರ ಒಂಬತ್ತು ಮಕ್ಕಳು ಜನಿಸಿದರು. ಮೇರಿ ತನ್ನ ಮೊದಲ ಪತಿಯಿಂದ ನಾಲ್ಕು, ಎರಡನೆ ಪತಿ ಕ್ರಿಸ್ಟೋಪರ್‌ನಿಂದ ಒಂಬತ್ತು, ಒಟ್ಟು ಹದಿಮೂರು ಮಕ್ಕಳ ತಾಯಿಯಾದರೆ, ಕಾರ್ಬೆಟ್ ನ ತಂದೆ ಕ್ರಿಸ್ಟೋಪರ್ ತನ್ನ ಮೊದಲ ಪತ್ನಿಯಿಂದ ಎರಡು ಹಾಗೂ ಮೇರಿಯಿಂದ ಪಡೆದ ಒಂಬತ್ತು ಮಕ್ಕಳು ಒಟ್ಟು ಹನ್ನೊಂದು ಮಕ್ಕಳ ತಂದೆಯಾದ. ಇವರಲ್ಲಿ ಮೇರಿಯ ಮೂರು ಮಕ್ಕಳು ಅಕಾಲಿಕ ಮರಣಕ್ಕೆ ತುತ್ತಾದುದರಿಂದ ಹನ್ನೆರಡು ಮಕ್ಕಳ ದೊಡ್ಡ ಕುಟುಂಬ ಇವರದಾಗಿತ್ತು. ಇವರಲ್ಲಿ ನಮ್ಮ ಕಥಾನಾಯಕ ಜಿಮ್ ಕಾರ್ಬೆಟ್ ಎಂಟನೆಯವನು.

ಬಹುತೇಕ ಯುರೋಪಿಯನ್ ಕುಟುಂಬಗಳು ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ಸೇವಾವಧಿ ಮುಗಿದ ನಂತರ ತಾಯ್ನಾಡಿನ ಸೆಳೆತದಿಂದ ಇಂಗ್ಲೆಂಡ್‌ಗೆ ತೆರಳಿದರೆ, ಕಾರ್ಬೆಟ್ ಕುಟುಂಬ ಮಾತ್ರ ಭಾರತೀಯರಾಗಿ ಬದಕಲು ಇಚ್ಚಿಸಿ ನೈನಿತಾಲ್‌ನಲ್ಲೇ ಉಳಿದುಕೊಂಡಿತು. ಹಾಗಾಗಿ ಜಿಮ್ ಕಾರ್ಬೆಟ್ ನ ವ್ಯಕ್ತಿತ್ವ ಅಪ್ಪಟ ಭಾರತೀಯವಾಗಿ ರೂಪುಗೊಳ್ಳಲು ಕಾರಣವಾಯಿತು.

(ಮುಂದುವರೆಯುವುದು.)

(ಚಿತ್ರಗಳು: ವಿಕಿಪೀಡಿಯ ಮತ್ತು ಲೇಖಕರದು)

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಗೆಳೆಯರೆ,

ಎಲ್ಲರಿಗೂ 2012 – ಹೊಸ ವರ್ಷದ ಶುಭಾಶಯಗಳು. ಹಿಂದೆ ಡಾ. ಜಗದೀಶ್ ಕೊಪ್ಪರವರು ಜಿಮ್ ಕಾರ್ಬೆಟ್ ಬಗೆಗಿನ ತಮ್ಮ ಲೇಖನದಲ್ಲಿ ತಿಳಿಸಿದ್ದಂತೆ, ಇಂದಿನಿಂದ “ಬಿಳಿ ಸಾಹೇಬನ ಭಾರತ” ಲೇಖನ ಮಾಲೆಯನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ಲೇಖನ ಮಾಲೆ ಪ್ರತಿ ಭಾನುವಾರ ಪ್ರಕಟವಾಗಲಿದೆ. ಇಲ್ಲಿಯವರೆಗೂ ಭಾನುವಾರದಂದು ಪ್ರಕಟವಾಗುತ್ತಿದ್ದ “ಜೀವನದಿಗಳ ಸಾವಿನ ಕಥನ” ಈ ವಾರದಿಂದ ಬುಧವಾರದಂದು ಪ್ರಕಟವಾಗುತ್ತದೆ. ಎಂದಿನಂತೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. -ವರ್ತಮಾನ ಬಳಗ.

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಡಾ. ಎನ್. ಜಗದೀಶ್ ಕೊಪ್ಪ

ಅದು 1985ರ ಚಳಿಗಾಲದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಪ್ರಾರಂಭದ ಒಂದು ದಿನ. ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಚಾನಲ್‌ನ ತಂಡ ಕಲದೊಂಗಿಯ ಕಾರ್ಬೆಟ್ ಮನೆಯಲ್ಲಿ ಬೀಡು ಬಿಟ್ಟು ಆತನ ಬಗ್ಗೆ ಚಿತ್ರೀಕರಣ ಮಾಡುತಿತ್ತು.

ಕಾರ್ಬೆಟ್‌ನ ಶಿಖಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಖಾರಿಯ ವೇಳೆ 30ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಪಾತ್ರಗಳನ್ನು ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‌ನ ಪಾತ್ರಕ್ಕಾಗಿ ಆತನನ್ನೇ ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಆತ್ಮ ಕಥನ ಬರೆದಿದ್ದ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.

ಚಿತ್ರಿಕರಣದ ವೇಳೆ ಸ್ಥಳಿಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಙರು ಮತ್ತು  ಸಹಾಯಕರನ್ನು ಸಹ ಕರೆಸಲಾಗಿತ್ತು. ಅದೊಂದು ದಿನ  ಚಿತ್ರೀಕರಣ ನಡೆಯುತಿದ್ದ ಬೆಳಿಗ್ಗೆ ವೇಳೆ ಸ್ಥಳೀಯರು ಬಂದು ದೂರದ ಊರಿನಿಂದ ಕಾರ್ಬೆಟ್‌ನನ್ನು ನೋಡಲು ವೃದ್ಧನೊಬ್ಬ ಬಂದಿದ್ದಾನೆ ಎಂದರು. ಚಿತ್ರದ ತಂಡ ಬಹುಷಃ ಕಾರ್ಬೆಟ್‌ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊ