Category Archives: ರವಿ ಕೃಷ್ಣಾರೆಡ್ಡಿ

ನ್ಯಾ.ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

ರಾಜ್ಯದ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಲೋಕಾಯುಕ್ತ ನೇಮಕದ ವಿಚಾರ ಇನ್ನೂ ಬಗೆಹರಿದಿಲ್ಲ. ಈ ವಿಷಯ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಪಡೆದುಕೊಳ್ಳುತ್ತಿದೆ. ವಿರೋಧಪಕ್ಷಗಳಿಗೂ ಲೋಕಾಯುಕ್ತರ ನೇಮಕ ಬೇಕಿದ್ದಂತಿಲ್ಲ. ಇದ್ದಿದ್ದರೆ ಈ ರೀತಿ ದಿವ್ಯನಿರ್ಲಕ್ಷ್ಯದಲ್ಲಿ ಕಾಲಹರಣ ಮಾಡುತ್ತಿರಲಿಲ್ಲ. ರಾಜ್ಯದಲ್ಲಿನ ಪ್ರಜಾಸತ್ತೆಯ ಪ್ರಕ್ರಿಯೆ ಮತ್ತು ಅದರ ಗುಣಮಟ್ಟದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗೂ ಕಿಂಚಿತ್ ಕಾಳಜಿ ಇದ್ದಂತಿಲ್ಲ.

ಈ ಮಧ್ಯೆ, ಮುಖ್ಯಸ್ಥನಿಲ್ಲದೆ ಲೋಕಾಯುಕ್ತ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದಕ್ಕೆ ಸಲ್ಲಿಸಲಾಗುತ್ತಿರುವ ದೂರುಗಳೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬ ವರದಿಗಳು ಬರುತ್ತಿವೆ.

ರಾಜ್ಯಪಾಲರು “ಕೆಲವು ಕ್ರಿಮಿನಲ್ ಶಕ್ತಿಗಳು” ನ್ಯಾ.ಬನ್ನೂರುಮಠರೇ ಲೋಕಾಯುಕ್ತರಾಗಬೇಕೆಂದು ಹಠ ಹಿಡಿದಿದ್ದಾರೆ ಎನ್ನುತ್ತಿದ್ದಾರೆ ಮತ್ತು ಬನ್ನೂರುಮಠರನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ನನ್ನ ಬಳಿ ಸಾಕಷ್ಟು ಕಾರಣಗಳಿವೆ ಎಂದಿದ್ದಾರೆ.

ನ್ಯಾ.ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬಾರದೆಂದು ಮೂರು ತಿಂಗಳಿಗೂ ಹಿಂದೆ ದಾವಣಗೆರೆ ಜಿಲ್ಲೆಯ ನಂದಿಗಾವಿ ಗ್ರಾಮದ ಹಲವು ನಾಗರಿಕರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದು ಇಲ್ಲಿಯವರೆಗೂ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಮಗೆ ಈಗ ಆ ಪತ್ರದ ಪ್ರತಿ ಲಭ್ಯವಿದ್ದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ






Karnataka High Court

ಸುಪ್ರೀಂಕೋರ್ಟಿನ ತೀರ್ಪು ಮತ್ತು ರಾಜ್ಯದ ಹೈಕೋರ್ಟಿನ ತೀರ್ಪು


– ರವಿ ಕೃಷ್ಣಾರೆಡ್ಡಿ  


ಕರ್ನಾಟಕದ ನ್ಯಾಯಾಂಗದ ಬಗ್ಗೆ ಮಾತನಾಡುವುದಕ್ಕೆ ಭಯವಾಗುತ್ತದೆ. ಇಲ್ಲಿರುವ ಭ್ರಷ್ಟತೆಯನ್ನು ಅಥವ ಅಯೋಗ್ಯತೆಯನ್ನು ಕುರಿತು ಎಷ್ಟು ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ ಮತ್ತು ಆಗುತ್ತದೆ ಎನ್ನುವುದೇ ಗೊತ್ತಾಗದ ಸ್ಥಿತಿಯಲ್ಲಿದ್ದೇವೆ.

ಯಾರಿಗೆ ಯಾವ ಆಧಾರದ ಮೇಲೆ ಜಾಮೀನು ಸಿಗುತ್ತದೆ ಅಥವ ಸಿಗುವುದಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಯಾರೊ ಯಾರೋ ಗರ್ಲ್‌ಫ್ರೆಂಡ್‌ ಜೊತೆ ಡೀಲ್ ಮಾಡಿಕೊಂಡು ಏನೋ ಮಾಡಿಸಿಕೊಂಡರಂತೆ ಎನ್ನುವ ಸುದ್ದಿಗಳೆಲ್ಲ ಹರದಾಡುತ್ತವೆ. ಇನ್ಯಾರದೋ ತೀರ್ಪಿನ ಬಗ್ಗೆ ಜನ ರಾಜ್ಯಪಾಲರಿಗೇ ನೇರ ದೂರು ನೀಡುತ್ತಾರೆ. ನನಗೆ ಇತ್ತೀಚೆಗೆ ಗೊತ್ತಾದ ಪ್ರಕಾರ ಯಾವ ಬೆಂಚಿಗೆ ತಮ್ಮ ಕೇಸು ಹಾಕಿಕೊಂಡರೆ ಕೇಸು ತಮ್ಮ ಪರ-ವಿರುದ್ಧ ಆಗುತ್ತದೆ ಎನ್ನುವ ಕಲ್ಪನೆ ವಕೀಲರಿಗೆ ಇರುತ್ತದಂತೆ. ಎಲ್ಲಿಗೆ ಹೋಯಿತು ನಮ್ಮ ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯ?

ಈಗ, ನೆನ್ನೆ ತಾನೆ ಸುಪ್ರೀಮ್ ಕೋರ್ಟ್ ಕರ್ನಾಟಕ ಹೈಕೊರ್ಟ್‌ ಈ ಹಿಂದೆ ನೀಡಿದ್ದ ತೀರ್ಪನ್ನು ಮತ್ತೊಮ್ಮೆ ತಳ್ಳಿ ಹಾಕಿದೆ.

ಇದು ಪಕ್ಷೇತರರ ಅನರ್ಹತೆ ವಿಷಯಕ್ಕೆ ಸಂಬಂಧಿಸಿದ್ದು. ಕರ್ನಾಟಕದ ಈಗಿನ ಸ್ಪೀಕರ್ ಇಲ್ಲಿಯವರೆಗೆ ನಮ್ಮೆಲ್ಲರಿಗೂ ಗೌರವ ಹುಟ್ಟುವ ರೀತಿಯಲ್ಲಿ ಏನೇನೂ ನಡೆದುಕೊಂಡಿಲ್ಲ. ಬಿಜೆಪಿಯ ಹನ್ನೊಂದು ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ ವಿಷಯದಲ್ಲಿ ಸ್ಪೀಕರ್ ಹುದ್ದೆಯ ಎಲ್ಲಾ ಘನತೆ ಮತ್ತು ಸ್ವಾತಂತ್ರ್ಯವನ್ನು ಮಣ್ಣುಮುಕ್ಕಿಸಿದವರು ಅವರು. ಎಂತೆಂತಹ ಅನರ್ಹರು ಮತ್ತು ಅಯೋಗ್ಯರೆಲ್ಲ ಸ್ಪೀಕರ್ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಮತ್ತು ಅದನ್ನು ವಿಧಾನಸಭೆಯ ಆಡಳಿತ ಮತ್ತು ವಿರೋಧ ಪಕ್ಷದವರು ಸಹಿಸಿಕೊಳ್ಳುತ್ತಾರೆ ಎನ್ನುವುದೇ ನಮ್ಮ ಹಾಲಿ ವಿಧಾನಸಭಾ ಸದಸ್ಯರ composition ಎಂತಹುದು ಎನ್ನುವುದನ್ನು ತೋರಿಸುತ್ತದೆ. ನಾಚಿಕೆಗೇಡು.

ಆದರೆ, ನ್ಯಾಯಾಲಯ? ಯಾವ ಕೋರ್ಟನ್ನು ನಂಬುವುದು? ಹೇಗೆ ಇಲ್ಲಿಯ ನ್ಯಾಯಾಲಯದ ತೀರ್ಪುಗಳ ನಿಷ್ಪಕ್ಷಪಾತವನ್ನು ಖಚಿತ ಪಡಿಸಿಕೊಳ್ಳುವುದು?

ನ್ಯಾಯಾಂಗ ಸುಧಾರಣೆಗಳನ್ನು ಆದಷ್ಟು ಬೇಗ ಸಾಧ್ಯಮಾಡಿಕೊಳ್ಳದಿದ್ದರೆ ಈ ದೇಶದ ನ್ಯಾಯವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ, ಎರಡೂ ಉಳಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಈ ಕೆಳಗಿನ ಲೇಖನ ನಾನು ಎಂಟು ತಿಂಗಳ ಹಿಂದೆ ಬರೆದದ್ದು ಮತ್ತು ಐದು ತಿಂಗಳ ಹಿಂದೆ ಇಲ್ಲಿ ವರ್ತಮಾನದಲ್ಲಿ ಪ್ರಕಟಿಸಿದ್ದು . ಇದನ್ನು ಸುಪ್ರೀಂ ಕೋರ್ಟ್‌ನ ನೆನ್ನೆಯ ತೀರ್ಪಿನ ಹಿನ್ನೆಲೆಯಲ್ಲಿ ನೋಡಿ; ಆ ತೀರ್ಪಿನ ವಿವರಗಳು ಡೆಕ್ಕನ್ ಹೆರಾಲ್ಡ್‌ನ ಈ ವರದಿಯಲ್ಲಿದೆ.

ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹೈಕೋರ್ಟನ್ನೂ ಟೀಕಿಸಿಲ್ಲವೆ

(ಈ ಲೇಖನ ಸುಮಾರು ಮೂರು ತಿಂಗಳಿನ ಹಿಂದೆ (16/05/11) ಬರೆದದ್ದು. ಕಾರಣಾಂತರಗಳಿಂದ ಇದು ಪ್ರಕಟವಾಗಬೇಕಾದ ಕಡೆ ಪ್ರಕಟವಾಗಲಿಲ್ಲ. ನೆನ್ನೆ (18/08/11) ರಾಜ್ಯಸಭೆಯಲ್ಲಿ ಬಂಗಾಳದ ಹೈಕೋರ್ಟ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಮೇಲೆ ಚರ್ಚೆ ಮತ್ತು ಮತ ಚಲಾವಣೆ ನಡೆದು ಜಡ್ಜ್ ವಿರುದ್ದ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಪ್ರಕ್ರಿಯೆ ಲೋಕಸಭೆಯಲ್ಲಿ ಪೂರ್ಣಗೊಂಡಾಗ ಆ ಜಡ್ಜ್ ವಜಾ ಆಗಲಿದ್ದಾರೆ. ಆದರೆ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಮಾತು ಕೇಳಬರುತ್ತಿರುವುದು ಇದೇ ಮೊದಲಲ್ಲ. ಲೊಕಪಾಲ ಮಸೂದೆಯಲ್ಲಿ ನ್ಯಾಯಾಂಗವನ್ನು ಹೊರಗಿಡುವ ಬಗ್ಗೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆ ಬರೆದ ಈ ಲೇಖನ ಈಗಲೂ ಪ್ರಸ್ತುತ ಇಂದು ಇಲ್ಲಿ ಪ್ರಕಟಿಸುತ್ತಿದ್ದೇನೆ… ರವಿ…)

Karnataka High Courtಕಳೆದ ಶುಕ್ರವಾರ ( ಮೇ 13, 2011 ) ಸುಪ್ರೀಂಕೋರ್ಟ್ ಕರ್ನಾಟಕದ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿ ಆದೇಶ ಹೊರಡಿಸುವುದರ ಜೊತೆಗೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಕಟುಶಬ್ದಗಳಲ್ಲಿ ಟೀಕಿಸಿತು. ಆದರೆ, ಇದಕ್ಕೂ ಮುಖ್ಯವಾದುದನ್ನು ಸುಪ್ರೀಂಕೋರ್ಟ್ ನೇರವಾಗಿ ಹೇಳಲಿಲ್ಲ. ಅದೇನೆಂದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (11 ಬಿ.ಜೆ.ಪಿ. ಶಾಸಕರ ಅನರ್ಹತೆ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ) ಕರ್ನಾಟಕ ರಾಜ್ಯದ ಉಚ್ಚನ್ಯಾಯಾಲಯ ಕೊಟ್ಟಿದ್ದ ತೀರ್ಪಿನಲ್ಲಿ ನ್ಯಾಯ ಇರಲಿಲ್ಲ ಎನ್ನುವುದು.

ಕಳೆದ ಅಕ್ಟೋಬರ್ 11ರ ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ತರಾತುರಿಯಲ್ಲಿ ವಿಧಾನಸಭೆಯ ಸ್ಪೀಕರ್ ಮೇಲೆ ಉಲ್ಲೇಖಿಸಿದ 16 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಅವರು ಹಾಗೆ ಮಾಡಲು ಕಾನೂನು ಮತ್ತು ನ್ಯಾಯಪಾಲನೆಗಿಂತ ಹೆಚ್ಚಾಗಿ ತಮ್ಮ ಬಿ.ಜೆ.ಪಿ. ಪಕ್ಷದ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಜಯ ಲಭಿಸುವಂತೆ ಮಾಡುವುದೇ ಆಗಿತ್ತು. ಸ್ಪೀಕರ್‌ರ ಈ ಕ್ರಮ ಅನೈತಿಕ ಮತ್ತು ಅಕ್ರಮವಾದದ್ದು ಎಂದು ಎದ್ದು ಕಾಣಿಸುವಷ್ಟು ಲಜ್ಜಾಹೀನವಾಗಿತ್ತು. ಸ್ಪೀಕರ್‌ರ ಈ ಕ್ರಮವನ್ನು ಪ್ರಶ್ನಿಸಿ ಅನರ್ಹಗೊಂಡ ಬಿ.ಜೆ.ಪಿ.ಯ 11 ಬಂಡಾಯ ಶಾಸಕರು, ಮತ್ತು ಐವರು ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಹೈಕೋರ್ಟ್‌ಗೆ ದೂರು ನೀಡಿದರು.

ಬಂಡಾಯ ಶಾಸಕರ ಅನರ್ಹತೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಸಾಕಷ್ಟು ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 18ರಂದು ಪರಸ್ಪರ ಒಮ್ಮತವಿಲ್ಲದ ನ್ಯಾಯತೀರ್ಮಾನಕ್ಕೆ ಬಂದರು. ನ್ಯಾ. ಖೇಹರ್ ಸ್ಪೀಕರ್ ಮಾಡಿದ್ದು ಸರಿ ಎಂದರೆ, ನ್ಯಾ. ಕುಮಾರ್ ಸ್ಪೀಕರ್‌ರ ಕ್ರಮದಲ್ಲಿ ಲೋಪವನ್ನು ಗುರುತಿಸಿದರು. ಹೀಗೆ ಒಮ್ಮತದ ತೀರ್ಪಿಲ್ಲದ ಕಾರಣವಾಗಿ ಈ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಯ ಅಭಿಪ್ರಾಯಕ್ಕಾಗಿ ನ್ಯಾ. ಸಭಾಹಿತರಿಗೆ ಕಳುಹಿಸಲಾಯಿತು.

ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನ್ಯಾ. ಸಭಾಹಿತರು ಅಕ್ಟೋಬರ್ 29ರಂದು ಮುಖ್ಯನ್ಯಾಯಮೂರ್ತಿ ಖೇಹರ್‌ರ ನ್ಯಾಯತೀರ್ಮಾನವನ್ನು ಅನುಮೋದಿಸಿದರು. ಇದರೊಂದಿಗೆ 2:1 ರ ಅನುಪಾತದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಸ್ಪೀಕರ್‌ರ ಕ್ರಮವನ್ನು ಎತ್ತಿಹಿಡಿದು 11 ಬಂಡಾಯ ಶಾಸಕರ ಅನರ್ಹತೆಯನ್ನು ಮಾನ್ಯಗೊಳಿಸಿತು. ಈ ಇಡೀ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವ ಅತಿಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಉಚ್ಚನ್ಯಾಯಾಲಯದ ದೃಷ್ಟಿಗೆ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯಲ್ಲಿ ಯಾವುದೇ ಅನೈತಿಕತೆ ಮತ್ತು ಅಕ್ರಮ ಕಾಣಿಸದೆ ಇದ್ದುದು.

ಅನರ್ಹಗೊಂಡ ಬಂಡಾಯ ಶಾಸಕರ ಜೊತೆಜೊತೆಗೆ ಅನರ್ಹಗೊಂಡ ಐವರು ಪಕ್ಷೇತರ ಶಾಸಕರೂ ಕೂಡ ಕರ್ನಾಟಕದ ಉಚ್ಚನ್ಯಾಯಾಲಯಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಅಬ್ದುಲ್ ನಜೀರ್, ಮತ್ತು ನ್ಯಾ. ಎಸ್. ಬೋಪಣ್ಣನವರ ಪೀಠವು ಸುದೀರ್ಘ ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವುದೇ ದುರುದ್ದೇಶದಿಂದ ನಡೆದುಕೊಂಡಿಲ್ಲ ಮತ್ತು ಅವರ ಕ್ರಮ ಸರಿ ಎಂಬ ತೀರ್ಪನ್ನು ಫೆಬ್ರವರಿ 15ರಂದು ನೀಡಿತು. ಇಲ್ಲಿ ಒತ್ತಿಹೇಳಬೇಕಾದ ಸಂಗತಿಯೆಂದರೆ ಈ ತೀರ್ಪು ಮೂವರು ನ್ಯಾಯಮೂರ್ತಿಗಳ ಒಮ್ಮತದ ನ್ಯಾಯತೀರ್ಮಾನವಾಗಿದ್ದದ್ದು.

ಹೀಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟಿನ ಆರು ನ್ಯಾಯಮೂರ್ತಿಗಳ ಪೈಕಿ ಐವರಿಗೆ ಸ್ಪೀಕರ್‌ರ ಕ್ರಮ ಮತ್ತು ನಡವಳಿಕೆಯಲ್ಲಿ ಯಾವುದೇ ಪಕ್ಷಪಾತ, ದುರುದ್ದೇಶ, ಮತ್ತು ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಕಂಡಿರಲಿಲ್ಲ.

ತಮಗೆ ಸಿಕ್ಕ ನ್ಯಾಯತೀರ್ಮಾನದಿಂದ ತೃಪ್ತರಾಗದ ಎಲ್ಲಾ 16 ಅನರ್ಹ ಶಾಸಕರು ದೆಹಲಿಯ ಸುಪ್ರೀಂಕೋರ್ಟಿಗೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದರು. ಈ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಪರಿಶೀಲಿಸಿದ ಅದೇ ದಾಖಲೆಗಳನ್ನು ಪುನರ್‌ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಕಬೀರ್ ಮತ್ತು ನ್ಯಾ. ಜೋಸೆಫ್ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ವ್ಯತಿರಿಕ್ತವಾದ ಅವಳಿ ತೀರ್ಮಾನವನ್ನು ನೀಡಿದರು. ಅಷ್ಟೇ ಅಲ್ಲದೆ, “ನೈಸರ್ಗಿಕ ನ್ಯಾಯ ಮತ್ತು ನ್ಯಾಯಯುತ ನಡವಳಿಕೆಯ ಅವಳಿ ತತ್ವಗಳ ಪರೀಕ್ಷೆಯಲ್ಲಿ ಸ್ಪೀಕರ್ ಬೋಪಯ್ಯನವರ ಆದೇಶ ಪಾಸಾಗುವುದಿಲ್ಲ. ಸಂವಿಧಾನದ 10ನೇ ಷೆಡ್ಯೂಲಿನಲ್ಲಿ ಕಾಣಿಸಲಾಗಿರುವ ಸಾಂವಿಧಾನಿಕ ನಡವಳಿಕೆಗಳು ಮತ್ತು 1986ರ ಅನರ್ಹತೆ ನಿಯಮಗಳನ್ನು ಉಲಂಘಿಸುವುದಷ್ಟೇ ಅಲ್ಲದೆ ನ್ಯಾಯಯುತ ವಿಚಾರಣೆಯ ಮೂಲತತ್ವವನ್ನು ಕೂಡ ಗಾಳಿಗೆ ತೂರಿದ ಸ್ಪೀಕರ್ ಮುಂದಿದ್ದ ಏಕೈಕ ಗುರಿ ಎಂದರೆ ಯಡಿಯೂರಪ್ಪ ಸರ್ಕಾರವನ್ನು ವಿಶ್ವಾಸಮತದ ಸಂಕಟದಿಂದ ಪಾರುಮಾಡುವುದು. ಸ್ಪೀಕರ್ ಮುಂದೆ ಪರಿಶೀಲನೆಗೆ ಇಟ್ಟಿದ್ದ ಪ್ರಕರಣಕ್ಕೆ ನೇರವಾಗಿ ಸಂಬಂಧ ಪಡದೇ ಇರುವಂತಹ ಬಾಹ್ಯ ಪರಿಗಣನೆಗಳು ಸ್ಪೀಕರ್ ಆದೇಶದ ಮೇಲೆ ಎದ್ದು ಕಾಣಿಸುತ್ತಿವೆ. ಇಂತಹ ಆದೇಶವನ್ನು ತಳ್ಳಿ ಹಾಕಲೇಬೇಕು,” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಸ್ಪೀಕರ್ ಕ್ರಮವನ್ನು ತಳ್ಳಿಹಾಕಿದ್ದೇ ಅಲ್ಲದೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೂಡ ಅಮಾನ್ಯಗೊಳಿಸಿದರು.

ಇದರೊಂದಿಗೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಅದರ ನ್ಯಾಯಮೂರ್ತಿಗಳ ಸಂವಿಧಾನವನ್ನು ಅರ್ಥೈಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ಪ್ರಶ್ನಿಸಿದಂತಾಗಿದೆ ಎನ್ನುವ ಅಭಿಪ್ರಾಯಕ್ಕೆ ಸದ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರು ಬರುವ ಹಾಗೆ ಆಗಿದೆ.

ಕರ್ನಾಟಕದ ಸಮಕಾಲೀನ ರಾಜಕೀಯ ವ್ಯವಸ್ಥೆ ಅತ್ಯಂತ ಭ್ರಷ್ಟವೂ, ಅನೈತಿಕವೂ, ಸ್ವಾರ್ಥಪೂರಿತವೂ ಆಗಿರುವುದನ್ನು ಕಳೆದ ನಾಲ್ಕೈದು ವರ್ಷಗಳ ಇತಿಹಾಸ ಸಾರಿ ಹೇಳುತ್ತಿದೆ. ಈ ಅನೈತಿಕತೆ ಮತ್ತು ಭ್ರಷ್ಟತೆ ರಾಜಕೀಯ ವಲಯಕ್ಕಷ್ಟೆ ಸೀಮಿತವಾಗದೆ ಬೇರೆಲ್ಲ ಸಾರ್ವಜನಿಕ ರಂಗಗಳಿಗೂ ವ್ಯಾಪಿಸುತ್ತ ಬಂದಿದೆ. ಇಂತಹ ನಿರಾಶಾದಾಯಕ ಸಂದರ್ಭದಲ್ಲಿ ಪ್ರಾಮಾಣಿಕರಿಗೆ ಮತ್ತು ದೇಶಪ್ರೇಮಿಗಳಿಗೆ ಉಳಿದಿದ್ದ ಏಕೈಕ ಭರವಸೆ ಎಂದರೆ ಅದು ನಮ್ಮ ಭ್ರಷ್ಟವಾಗಿಲ್ಲದಿದ್ದ ಮತ್ತು ಸಾಮರ್ಥ್ಯದಿಂದ ಕೂಡಿದ್ದ ನ್ಯಾಯಸ್ಥಾನಗಳು. ಈಗ ಮೇಲೆ ಉಲ್ಲೇಖಿಸಿರುವ ಪ್ರಕರಣಗಳಿಂದ ತಾವು ಇಟ್ಟುಕೊಂಡಿದ್ದ ಆ ಒಂದು ಭರವಸೆಯ ಬಗ್ಗೆಯೂ ನಾಗರಿಕರು ಸಂಶಯಾಸ್ಪದಿಂದ ನೋಡುವಂತೆ ಆಗಿದೆ. ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವ ಸಂಶಯ ಇವೆಲ್ಲದರಿಂದ ಗಟ್ಟಿಯಾಗದೆ?

ಸುಪ್ರೀಂಕೋರ್ಟ್ ಕಂಡಂತೆ ಅಕ್ರಮ ಆದೇಶ ಹೊರಡಿಸಿದ್ದ ಸ್ಪೀಕರ್‌ರ ಕ್ರಮ ರಾಜ್ಯದ ಹೈಕೋರ್ಟ್‌ನಲ್ಲಿ ಸಕ್ರಮವಾಗಿ ಮಾನ್ಯತೆ ಪಡೆದಿದ್ದರ ಹಿಂದೆ ಇರುವ ಕಾರಣಗಳಾದರೂ ಏನು? ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ ಜನರ ಪ್ರಜ್ಞೆಗೂ ಬಂದಿರುವ ನ್ಯಾಯಾಧೀಶರುಗಳ ಭ್ರಷ್ಟಾಚಾರವೆ? ಅಥವ, ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಸಮರ್ಥರೂ ನ್ಯಾಯಮೂರ್ತಿಗಳಾಗಿರುವುದೇ? ಅಥವ, ನ್ಯಾಯಮೂರ್ತಿಗಳ ವೈಯಕ್ತಿಕ ರಾಜಕೀಯ ನಿಲುವುಗಳೂ ಅವರು ಕೊಡುತ್ತಿರುವ ತೀರ್ಪಿನ ಮೇಲೆ ಪ್ರಭಾವ ಬೀರುತ್ತಿರುವುದೆ? ಅಥವ, ಅಧಿಕಾರರೂಢರ ಪರ ಇರುವುದರಿಂದ ತಮ್ಮ ಸವಲತ್ತುಗಳಲ್ಲಿ ಹೆಚ್ಚಳವಾಗುತ್ತದೆಯೆಂಬ ಸ್ವಹಿತಾಸಕ್ತಿಯೆ? ಒಟ್ಟಿನಲ್ಲಿ, ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವುದೇ?

ಈ ಪ್ರಶ್ನೆಗಳು ರಾಜ್ಯದಲ್ಲಿ ಈಗ ನಡೆಯುತ್ತಿರುವ ಎಲ್ಲಾ ರಾಜಕೀಯ ಘಟನೆಗಳಿಗಿಂತ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಕೂಡಲೇ ಸರಿಪಡಿಸಬೇಕಾದ ವಿಷಯಗಳಾಗಿವೆ. ನ್ಯಾಯಸ್ಥಾನದ ಬಗ್ಗೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಂದಿಗೂ ನ್ಯಾಯಮೂರ್ತಿಗಳದ್ದೇ ಆಗಿದೆ. ಅಲ್ಲವೆ?

ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…


– ರವಿ ಕೃಷ್ಣಾರೆಡ್ಡಿ  


ಇಂದು ಭಾರತ ಜನತಂತ್ರಗೊಂಡ ದಿನದ ವಾರ್ಷಿಕಾಚರಣೆ.

ಬಹುಶಃ ನಾನು ಈ ನನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಎಂದೂ ಇಷ್ಟೊಂದು ನಿರುತ್ಸಾಹಗೊಂಡಿರಲಿಲ್ಲ. ಅದರಲ್ಲೂ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಬಗ್ಗೆ, ಇಲ್ಲಿನ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ, ಮತ್ತು ಜನ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ಮತ್ತು ಅನೀತಿಗಳಿಗೆ ಪ್ರತಿಸ್ಪಂದಿಸುತ್ತಿರುವ ರೀತಿ ನೋಡಿ ನಿಜಕ್ಕೂ ವಾಕರಿಕೆ ಆಗುತ್ತಿದೆ.

ಇದಕ್ಕೆ ನಾನು ಕಳೆದ ಮೂರು ದಿನಗಳಿಂದ ಪಟ್ಟುಬಿಡದೆ ಕೂತು ಓದಿದ “All the President’s Men” ಪುಸ್ತಕ ಮತ್ತು ಇಂದು ಹರಡಿಕೊಂಡು ಕೂತಿರುವ ಶಾಸಕನೊಬ್ಬನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಗಳೂ ಸ್ವಲ್ಪಮಟ್ಟಿಗೆ ಕಾರಣ ಇರಬಹುದು.

ಬಹುಶಃ ನಿಮಗೆ ಗೊತ್ತಿರಬಹುದು, ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿ ಹೊರನಡೆದ ಏಕೈಕ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್. ಅಮೆರಿಕದ ರಾಜಕೀಯ ನಮ್ಮಷ್ಟು ಎಂದೂ ಗಬ್ಬೆದ್ದಿರಲಿಲ್ಲ. ಆದಷ್ಟೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆ ಅದು. ಅದಕ್ಕೆ ಕಾರಣ ಅಲ್ಲಿನ ರಾಜಕಾರಣಿಗಳಷ್ಟೇ ಅಲ್ಲ. ಅಲ್ಲಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಚಿಂತಕರು, ಉತ್ತರದಾಯಿತ್ವವನ್ನು ಗಟ್ಟಿಯಾಗಿ ಅಪೇಕ್ಷಿಸುವ ಅಲ್ಲಿಯ ಜನಸಾಮಾನ್ಯರು. ಹೀಗೆ ಎಲ್ಲರೂ ಅಲ್ಲಿಯ ವ್ಯವಸ್ಥೆ ತಕ್ಕಷ್ಟು ಮಟ್ಟಿಗೆ ನ್ಯಾಯಯುತವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿಯೂ ನಿಕ್ಸನ್ ಮತ್ತು ಆತನ ಕೆಳಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಅಮೇರಿಕದ ಮಟ್ಟಿಗೆ ಮಾಡಬಾರದಂತಹ ಅಪಚಾರ ಮಾಡಿದರು. ಅದು 1971-72ರ ಸಮಯ. ನಿಕ್ಸನ್‌ನ ಮರುಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ಆತನ ಗುಂಪು ತಮ್ಮ ವಿರೋಧಿ ಗುಂಪಿನ ಜನರ ಫೋನ್‌ಗಳನ್ನು ಕದ್ದಾಲಿಸಿದರು. ಅವರ ಮೇಲೆ ವ್ಯವಸ್ಥಿತ ಅಪಪ್ರಚಾರ ಮತ್ತು ಪಿತೂರಿಗಳನ್ನು ಮಾಡಿದರು. ಕೊನೆಗೆ ವಿರೋಧಪಕ್ಷದ ಕಚೇರಿಯಲ್ಲಿಯೇ ಕದ್ದಾಲಿಕೆ ಯಂತ್ರ ಅಳವಡಿಸಲು ಯತ್ನಿಸಿದರು. ಆ ಯತ್ನದಲ್ಲಿ ಇವರ ಜನ ತೊಡಗಿದ್ದಾಗ ಅಚಾನಕ್ ಆಗಿ ಸಿಕ್ಕಿಬಿದ್ದರು. ಅದೇ ವಾಟರ್‌ಗೇಟ್ ಪ್ರಕರಣ ಮತ್ತು ಹಗರಣ.

ಈ ಘಟನೆಯ ಹಿಂದೆ ಬಿದ್ದು ಆ ಇಡೀ ಪ್ರಕರಣವನ್ನು ಬೇಧಿಸುತ್ತಾ ಹೋಗಿದ್ದು ವುಡವರ್ಡ್ ಮತ್ತು ಬರ್ನ್‍ಸ್ಟೀನ್ ಎಂಬ ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪತ್ರಕರ್ತರು. ಆಗ ಅವರಿಬ್ಬರಿಗೂ ಮುವ್ವತ್ತರ ಆಸುಪಾಸು. ನಂತರದ ದಿನಗಳಲ್ಲಿ ಅಮೆರಿಕದ ಅನೇಕ ಪತ್ರಕರ್ತರು, ಟೈಮ್, ನ್ಯೂಸ್‌ವೀಕ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, .. ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಹಗರಣವನ್ನು ಬೇಧಿಸಲು ಯತ್ನಿಸುತ್ತವೆ. ಆದರೆ ವುಡವರ್ಡ್, ಬರ್ನ್‍ಸ್ಟೀನ್ ಮತ್ತು ವಾಷಿಂಗ್ಟನ್ ಪೋಸ್ಟ್‌ನ ಎಡಬಿಡದೆ ಸಾಗಿದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಆ ಹಗರಣ ಬಯಲಾಗಲು ಪ್ರಮುಖ ಕಾರಣ. ತನ್ನ ಸಹಚರರು ಮಾಡುತ್ತಿದ್ದ ಕೆಲವು ಅಕ್ರಮ ಕೆಲಸಗಳು ನಿಕ್ಸನ್‌ಗೆ ಗೊತ್ತಿತ್ತು. ಅದನ್ನು ಮುಚ್ಚಿ ಹಾಕಲು ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆಯೂ ಆತನಿಗೆ ಅರಿವಿತ್ತು. ಮತ್ತು ಆ ಇಡೀ ವಿದ್ಯಮಾನದಲ್ಲಿ ನಿಕ್ಸನ್ ಸುಳ್ಳು ಹೇಳುತ್ತ, ಆರೋಪಗಳನ್ನು ನಿರಾಕರಿಸುತ್ತ ಬಂದ. ಕೊನೆಗೆ ಎಲ್ಲವೂ ಬಯಲಾಗಿ ರಾಜೀನಾಮೆ ನೀಡಿ, ಆತನ ಉಪಾಧ್ಯಕ್ಷನೇ ಅಧ್ಯಕ್ಷನಾದ ಮೇಲೆ ಆತನಿಂದ ಕ್ಷಮಾದಾನ ಪಡೆದುಕೊಂಡು ಜೈಲುಪಾಲಾಗದೆ ಉಳಿದುಕೊಂಡ. (ಮತ್ತೂ ಒಂದಷ್ಟು ವಿವರಗಳಿಗೆ ನನ್ನ ಈ ಲೇಖನ ನೋಡಿ.)

ಈ ಪ್ರಕರಣ ಮತ್ತು ಅದನ್ನು ಬಯಲಿಗೆಳೆದ ರೀತಿ ನಮ್ಮ ಎಲ್ಲಾ ಪತ್ರಕರ್ತರಿಗೂ, ಅದರಲ್ಲೂ ವಿಶೇಷವಾಗಿ ರಾಜಕೀಯ ವರದಿಗಾರರಿಗೆ ಗೊತ್ತಿರಲೇಬೇಕು. ಈ ಪುಸ್ತಕ ಪತ್ರಕರ್ತರಿಗೆ ಪಠ್ಯವಾಗಬೇಕು. ಆದರೆ ಇತ್ತೀಚಿನ ಪತ್ರಕರ್ತರಿಗೆ ಇದು ಗೊತ್ತಿರುವ ಸಾಧ್ಯತೆಗಳು ಬಹಳ ಕಮ್ಮಿ ಎನ್ನಿಸುತ್ತದೆ. ನಾನು 2006ರಲ್ಲಿ ವಿಕ್ರಾಂತ ಕರ್ನಾಟಕ ಆರಂಭಿಸುವ ಮೊದಲು ಬೆಂಗಳೂರಿನಲ್ಲಿ ಕೆಲವು ಹಿರಿಯ ಪತ್ರಕರ್ತರು ಮತ್ತು ಸಂಪಾದಕರೊಡನೆ ಒಂದು ಸಂವಾದ ಏರ್ಪಡಿಸಿದ್ದೆ. ಅದಾದ ನಂತರ ಈ ಪುಸ್ತಕವನ್ನು ಆಧರಿಸಿ ತೆಗೆದಿರುವ ಅದೇ ಹೆಸರಿನ ಸಿನೆಮಾ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಲು ಉಳಿದವರು ಹತ್ತು ಜನರೂ ಇರಲಿಲ್ಲ.

ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ಎನ್ನುವುದು, ಅದರಲ್ಲೂ ರಾಜಕಾರಣಿಗಳ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳು, ಎಲ್ಲಾ ತರಹದ ಎಲ್ಲೆಗಳನ್ನೂ ಮೀರಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?

ಇವತ್ತು ಬಯಲಾಗುತ್ತಿರುವ ಪ್ರಕರಣಗಳೂ ಸಹ ರಾಜಕೀಯ ವಿರೋಧಿಗಳು ಪತ್ರಿಕಾಲಯಗಳಿಗೆ ತಾವೇ ಖುದ್ದಾಗಿ ತಲುಪಿಸುತ್ತಿರುವ ದಾಖಲೆ ಮತ್ತು ಮಾಹಿತಿಗಳೇ ಹೊರತು ಪತ್ರಕರ್ತರು ತಮ್ಮ ಕಚೇರಿಯಿಂದ ಹೊರಗೆ ಹೋಗಿ ಮಾಹಿತಿ ಕಲೆಹಾಕುತ್ತಿಲ್ಲ. ಇಂತಹ ಸ್ವಚ್ಚಂದ ಭ್ರಷ್ಟಾಚಾರದ ಸಮಯದಲ್ಲಿ ಮತ್ತು ಮಾಹಿತಿ ಹಕ್ಕಿನ ಯುಗದಲ್ಲೂ ಪತ್ರಕರ್ತರು ಮತ್ತು ಅವರ ಸಂಪಾದಕರು ದಡ್ಡರಾಗಿದ್ದಾರೆ; ಸೋಮಾರಿಗಳಾಗಿದ್ದಾರೆ; ಭ್ರಷ್ಟರಾಗಿದ್ದಾರೆ; ಖದೀಮರಾಗಿದ್ದಾರೆ; ಪಕ್ಷಪಾತಿಗಳಾಗಿದ್ದಾರೆ; ಶ್ರೀಮಂತರಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದ ಹಗರಣಗಳನ್ನೇ ನೆನಪಿಸಿಕೊಳ್ಳಿ. ಒಂದೊಎರಡೊ ಬಿಟ್ಟರೆ ಮಿಕ್ಕೆಲ್ಲ ಹಗರಣ ಖಾಸಗಿ ಜನ ಕೋರ್ಟ್ ಮೆಟ್ಟಿಲು ಹತ್ತಿ ಜನರ ಮುಂದೆ ಇಟ್ಟದ್ದೇ ಹೊರತು ನಮ್ಮ ಪತ್ರಿಕೆಗಳು ಬಯಲಿಗೆಳೆದದ್ದು ಎಷ್ಟು?

ಈ ಮಧ್ಯೆ ಅಧಿಕಾರಸ್ಥರಿಂದ ಲಾಭ ಮಾಡಿಕೊಂಡ ಪತ್ರಕರ್ತರ ಮತ್ತು ಮಾಧ್ಯಮಸಂಸ್ಥೆಗಳ ಪಟ್ಟಿಯೇ ದೊಡ್ದದಿದೆ.

ಇನ್ನು ವರ್ಷ ಒಪ್ಪತ್ತಿನಲ್ಲಿ ಬರಲಿರುವ ಚುನಾವಣೆಗಳಲ್ಲಿ ಅದೇ ಭ್ರಷ್ಟ ಜನ ಚುನಾವಣೆಗೆ ನಿಲ್ಲಲಿದ್ದಾರೆ. ನಮ್ಮ ರಾಜಕೀಯ ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ.

ಇಂತಹ ಸ್ಥಿತಿಯಲ್ಲಿ ಗಣತಂತ್ರ ಎಲ್ಲಿದೆ?

ಪರಾವಲಂಬಿ ಜೀವಿಗಳ ವಿವೇಕಾನಂದ ಮತ್ತು ಭಾರತಮಾತೆ…

-ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಒಂದು ವರ್ಗವಿದೆ. ಅವರನ್ನು ನೀವು ಕೆಲವೊಂದು ವಿಷಯಗಳನ್ನು ಮಾತನಾಡದಂತೆ ನಿರ್ಬಂಧಿಸಿಬಿಡಿ. ಬದುಕುವುದಕ್ಕಾಗಿ ಅನ್ನ ದುಡಿಯಲಾರದೆ ಸಾಯುತ್ತವೆ ಅವು. ದೇಶ, ಮತ, ದೇವರು, ಇಂತಹುಗಳನ್ನು ಅನ್ನ ದುಡಿಯುವುದಕ್ಕಾಗಿಯೇ ಬಳಸಿಕೊಳ್ಳುವ ಈ ಮೂಲಭೂತವಾದಿಗಳು ನಿಮಗೆ ಎಲ್ಲಾ ದೇಶಗಳಲ್ಲಿ, ಮತಗಳಲ್ಲಿ ಸಿಗುತ್ತಾರೆ.

ಈಗ ಅಂತಹುದೇ ಪರಾವಲಂಬಿ ಜೀವಿಗಳಿಗೆ, ಹಿಂದು ಮತದವರೆಂದು ಹೇಳಿಕೊಳ್ಳುವ ಈ ಕಷ್ಟಪಟ್ಟು ದುಡಿಯಲಾರದ ಕರ್ನಾಟಕದ ಒಂದು ವರ್ಗಕ್ಕೆ ಸೋಮವಾರ ದಿನೇಶ ಅಮಿನ್‌ಮಟ್ಟುರವರ ಲೇಖನ ಓದಿದಂದಿನಿಂದ ತಮ್ಮ ಜೀವನನಿರ್ವಹಣೆಯ ಅವಕಾಶವನ್ನೇ ಕಿತ್ತುಕೊಂಡಂತಹ ಭಯ ಆವರಿಸಿದೆ. ಹಾಗಾಗಿ ಪ್ರತಿಭಟನೆಯನ್ನು ಮಾಡಿಸುತ್ತಿದ್ದಾರೆ, ಮಾಡುತ್ತಿದ್ದಾರೆ.

ನನ್ನಂತಹವನಿಗೆ, ಹಾಗೂ ನನ್ನ ಅನೇಕ ಸಮಾನಮನಸ್ಕರಿಗೆ ಆ ಲೇಖನದಲ್ಲಿ ಆಕ್ಷೇಪಿಸುವಂತಹುದು ಏನೂ ಇರಲಿಲ್ಲ. ಆದರೆ ಇದನ್ನು ಕೋಮುವಾದಿಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನನಗನ್ನಿಸುವ ಪ್ರಕಾರ ಇದೇ ಲೇಖನವನ್ನು ಚಾಚೂ ಬದಲಾಯಿಸದೆ ಒಬ್ಬ ಅಪ್ರಬುದ್ಧ ಹಿಂದುತ್ವವಾದಿ ಲೇಖಕನೊಬ್ಬನ ಹೆಸರಿನಲ್ಲಿ ಪ್ರಕಟಿಸಿದ್ದರೆ, ನಿಜಕ್ಕೂ ಆತನ ವಿರುದ್ಧ ಒಂದೇ ಒಂದು ಮಾತನ್ನು ಈ ಬಳಗ ಆಡುತ್ತಿರಲಿಲ್ಲ. ಬದಲಿಗೆ ಕೊಂಡಾಡುತ್ತಿದ್ದರು. ಸಮಾಜ ಸುಧಾರಣೆಯ ಕೆಲಸ ಎನ್ನುತ್ತಿದ್ದರು. ಮತ್ತು ಅದು ಅಲ್ಲಿಗೇ ಕೊನೆಯಾಗುತ್ತಿತ್ತು. ಹಾಗಾಗಿ ನನಗನ್ನಿಸುವುದು ಇದು ವಿಚಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಬದಲಿಗೆ ಯಾರು ಹೇಳುತ್ತಿದ್ದಾರೆ ಎನ್ನುವುದು. ಯಾಕೆಂದರೆ, ದಿನೇಶರ ಬದಲಿಗೆ ಬೇರೊಬ್ಬರು, ಕನ್ನಡದ ಬೇರೆ ಯಾವುದೇ ದಿನಪತ್ರಿಕೆಯಲ್ಲಿ ಹೇಳಿದ್ದರೆ, ಅದು ಅನಪಾಯಕಾರಿಯೂ, ಸ್ವಹಿತಾಸಕ್ತಿಗೆ ಪೂರಕವೂ ಆಗಿರುತ್ತಿತ್ತು. ಆದರೆ ಪ್ರಸ್ತುತ ಲೇಖಕ, ಲೇಖನ, ಮತ್ತು ಅದು ಪ್ರಕಟವಾಗಿರುವ ಪ್ರಜಾವಾಣಿ ಪತ್ರಿಕೆ, ಈ ಕಾಂಬಿನೇಶನ್ ದೀರ್ಘಕಾಲೀನವಾದ ಮತ್ತು ಶಾಶ್ವತವಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಕಂಡು ಮೇಲಿನ ಪರಾವಲಂಬಿ ಜೀವಿಗಳು ಗಾಬರಿ ಬಿದ್ದಿರುವುದು.

ಎಷ್ಟೆಲ್ಲ ಓದಿದರೂ ಈ ಭೂಮಿ, ಸೂರ್ಯ, ಜೀವ, ಜೀವವಿಕಾಸ, ಮಾನವ ವಿಕಾಸ, ಇವುಗಳೆಲ್ಲ ಅರ್ಥವೇ ಆಗಿರದ ಅಥವ ಓದಿಯೇ ಇಲ್ಲದ ಜನರೇ ನಮ್ಮ ಮಧ್ಯೆ ಇದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸುವುದು ವೈಜ್ಞಾನಿಕ ತಿಳಿವಿನ ಮೂಲಕ ಅಲ್ಲ. ಬದಲಿಗೆ ಪುರಾಣಗಳ, ವೇದಾಂತ ಪ್ರವಚನಗಳ, ವೈರಾಗ್ಯ ಬೋಧಕರ, ಜ್ಯೋತಿಷಿಗಳ, ಮುಠ್ಠಾಳರ ಮೂಲಕ. ಗಿಣಿಶಾಸ್ತ್ರ ಹೇಳುವವರಿಗೆ, ಕವಡೆ-ನಾಡಿ ಶಾಸ್ತ್ರದವರಿಗೆ, ಭಯ ಹುಟ್ಟಿಸುವ ಜ್ಯೋತಿಷಿಗಳಿಗೆ, ದೇವಾಲಯದ ಪೂಜಾರಿಗಳಿಗೆ, ಯಾಗ ಮಾಡುವವರಿಗೆ, ಇದು ಸುಭಿಕ್ಷ ಕಾಲ.

ಈ ವರ್ಗದ ಮುಂದುವರೆದ ಅವತಾರಗಳೇ ವಿವೇಕಾನಂದರನ್ನು ಮತ್ತು ಭಾರತಮಾತೆಯನ್ನು ತಮ್ಮ ಜೀವನ ನಿರ್ವಹಣೆಗೆ ಮಾರ್ಗ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳು. ಇವರಿಗೆ ಭಾರತದ ಜನತೆಯ ಮೇಲಿರುವ ಪ್ರೀತಿಗಿಂತ ನೂರ್ಮಡಿ ಹೆಚ್ಚಿನ ಪ್ರೀತಿ ಅಖಂಡ ಭಾರತದ ಭೂಪಟದ ಮೇಲಿದೆ. ದೇಶ ಎಂದರೆ ಅಲ್ಲಿರುವ ಜನಗಳು ಮತ್ತು ಅವರ ಯೋಗ್ಯತೆ ಚಾರಿತ್ರ್ಯ ಎನ್ನುವುದಕ್ಕಿಂತ ಅದರ ಭೌಗೋಳಿಕ ರೂಪ ಎನ್ನುವುದೇ ಇವರ ಭಾವನೆ. ಈಡಿಯಟ್ಸ್.

ನೆನ್ನೆ ಬೆಂಗಳೂರಿನ ಪ್ರಜಾವಾಣಿ ಕಚೇರಿಯ ಮುಂದೆ ನೆರೆದಿದ್ದ, ಸ್ವಯಂಪ್ರೇರಣೆಯಿಂದ ಬಂದವರೇ ಹೆಚ್ಚು ಇದ್ದ, ಹಿರಿಯರು, ಹೆಂಗಸರು, ಕುಂಕುಮಧಾರಿ ಯುವಕರು. ಪ್ರವಚನಕಾರರು, ರಜೆ ಹಾಕಿ ಬಂದಿದ್ದ ವೃತ್ತಿಪರರು, ಬೇರೆಬೇರೆ ಊರುಗಳಿಂದ ಬಂದಿದ್ದ ಜನರನ್ನೆಲ್ಲ ನೋಡಿ ನನಗೆ ಈ ದೇಶದ ಭವಿಷ್ಯದ ಬಗೆಗಿನ ಆಶಾಭಾವನೆ ಒಂದಷ್ಟು ಮುರುಟಿತು. ಅಸಹನೆ, ಕುರುಡುಭಕ್ತಿ, ಮೌಢ್ಯತೆ, ಕೋಮುವಾದ, ಅವೈಜ್ಞಾನಿಕತೆ, ಅವೈಚಾರಿಕತೆ, ಎದೆಯಿಂದ ಎದೆಗೆ ಹರಿಯುತ್ತಿದೆ, ಸತತ. ಒಂದು ಲೇಖನದ ಆಶಯವನ್ನು ಗ್ರಹಿಸಲಾರದ ವಿದ್ಯಾವಂತರು, ವೈಚಾರಿಕತೆಯನ್ನು ಸಾಧಿಸಲಾಗದ ನಮ್ಮ ಶಿಕ್ಷಣ ಪದ್ದತಿ, ದಾರಿತಪ್ಪಿಸಲು ಬೀದಿಗೊಬ್ಬರಂತೆ ಎದ್ದು ನಿಂತಿರುವ ಜನ; ಇವೆಲ್ಲ ನಮ್ಮನ್ನು ಎತ್ತ ಒಯ್ಯಲಿದೆಯೊ?

ಇವುಗಳಿಗೆ ಸಾಮಾಜಿಕ-ರಾಜಕೀಯ ಪರ್ಯಾಯವೊಂದನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಳ್ಳಲಾಗದೆ ಹೋದರೆ…

ಕವಿಮನೆಯ ಬಗ್ಗೆ ಡಿ.ಎಸ್. ನಾಗಭೂಷಣ ದಂಪತಿಗಳ ಮಾತು…

-ರವಿ ಕೃಷ್ಣಾರೆಡ್ಡಿ

ಮೂರು ವರ್ಷ ಆಗುತ್ತ ಬಂತು. 2009 ರ ಮಾರ್ಚ್ 29 ರಂದು ಡಿ.ಎಸ್.ನಾಗಭೂಷಣ ದಂಪತಿಗಳು ಮತ್ತು ನಾನು ಉಡುಪಿಯಲ್ಲಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸಾಗುತ್ತ ರಾತ್ರಿ ಕುಪ್ಪಳ್ಳಿಯಲ್ಲಿ ಉಳಿದುಕೊಂಡಿದ್ದೆವು. ಮಾರನೆ ದಿನ ಕವಿಮನೆ, ಕವಿಶೈಲ, ಸಿಬ್ಬಲುಗುಡ್ಡೆ, ಮತ್ತಿತರ ಕೆಲವು ಸ್ಥಳಗಳನ್ನು ಸುತ್ತಾಡಿದ್ದೆವು. ಆಗ ನಾನು ಒಂದಷ್ಟು ವಿಡಿಯೊ ತೆಗೆದಿದ್ದೆ. ಹೀಗೇ ಕಾರಣಾಂತರಗಳಿಂದ ಅವನ್ನು ಸಂಕಲಿಸಿ ಯೂಟ್ಯೂಬ್‌ಗೆ ಹಾಕಲು ಆಗಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳಿಗೆ ತೊಡಗಿಕೊಂಡ ಪರಿಣಾಮವಾಗಿ ಈ  ವಿಡಿಯೊ ಸಿದ್ದಪಡಿಸಿದೆ.

ಇನ್ನು ಮುಂದೆ ವಾರಕ್ಕೆ ಒಂದೆರಡಾದರೂ ವಿಡಿಯೋಗಳನ್ನು ವರ್ತಮಾನದ ಮೂಲಕ ಸಿದ್ದಪಡಿಸಿ ಹಾಕಬೇಕಿದೆ. ಬರಹಗಳಷ್ಟೇ ಅಲ್ಲ, ನಾವು ಬಹುಮಾಧ್ಯಮ ಸಾಧ್ಯತೆಗಳಿಗೆ ಹೊರಳಬೇಕಿದೆ. ಈ ವಿಚಾರವಾಗಿ ನಿಮ್ಮ ಸಲಹೆ-ಸೂಚನೆಗಳಿಗೆ ಸ್ವಾಗತ.