Category Archives: ರವಿ ಕೃಷ್ಣಾರೆಡ್ಡಿ

ಅಣ್ಣಾ ಹಜಾರೆ, ರಾಮಚಂದ್ರ ಗುಹಾ, ಗಂಗಾಧರ ಮೊದಲಿಯಾರ್‌

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಇಂದಿನ ಎರಡು ಅಂಕಣ ಲೇಖನಗಳು ಬಹಳ ಗಂಭೀರ ವಿಚಾರಗಳನ್ನು ಪ್ರಬುದ್ಧವಾಗಿ ಮತ್ತು ತೀಕ್ಷಣವಾಗಿ ಮಂಡಿಸಿವೆ.

ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾರ “ಅಣ್ಣಾ ಹಜಾರೆ ಹೋರಾಟದ ಶಕ್ತಿ ಮತ್ತು ಮಿತಿ” ಲೇಖನ ಹಜಾರೆಯವರ ಹೋರಾಟವನ್ನಷ್ಟೆ ಅಲ್ಲದೆ ಅವರ ಕೆಲವು ಚಿಂತನೆಗಳನ್ನೂ ಸಹ ವಿಮರ್ಶೆಗೆ ಒಡ್ಡಿದೆ. ನನ್ನ ಪ್ರಕಾರ ಆ ಲೇಖನದ ಬಹುಮುಖ್ಯ ಅಂಶಗಳು ಇವು:

“ಹಾಗೆ ಹೇಳಿದ ನಂತರವೂ ಅಣ್ಣಾ ಜೊತೆಗೆ ಅತಿಯಾಗಿ ಗುರುತಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಜಾರೆ  ಒಳ್ಳೆಯ ವ್ಯಕ್ತಿ. ಬಹುಶಃ ಸಂತನಂತಹ ವ್ಯಕ್ತಿ. ಆದರೆ ಅವರ ಗ್ರಹಿಕೆ, ಗ್ರಾಮದ ಹಿರಿಯನ ಮಟ್ಟದಲ್ಲಷ್ಟೇ ಉಳಿದುಬಿಡುತ್ತದೆ.

ಅಣ್ಣಾ ಹಜಾರೆ ಅವರ ಶಕ್ತಿ ಹಾಗೂ ಮಿತಿಗಳೆರಡನ್ನೂ  ಈ ವರ್ಷದ ಕೊನೆಗೆ ಬಿಡುಗಡೆ ಆಗಲಿರುವ ಮುಕುಲ್ ಶರ್ಮಾ ಅವರ `ಗ್ರೀನ್ ಅಂಡ್ ಸ್ಯಾಫ್ರನ್` ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ. ಶರ್ಮಾ ಅವರು ಬಹಳ ಜನ ಮೆಚ್ಚುವಂತಹ ಪರಿಸರ ಪತ್ರಕರ್ತ.

ರಾಲೇಗಾಂವ್ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಅವರು ಮಾಡಿದ್ದಾರೆ. ಅಲ್ಲಿ ಕಂಡ ಸಂಗತಿಗಳಿಂದ ಅವರು ಪ್ರಭಾವಿತರಾಗಿದ್ದಾರೆ. ಸಮರ್ಪಕ  ಜಲ ನಿರ್ವಹಣೆ ಬೆಳೆ ಇಳುವರಿಯನ್ನು ಸಾಕಷ್ಟು ಹೆಚ್ಚಿಸಿದೆ. ಇದರಿಂದಾಗಿ ಆದಾಯ ಹೆಚ್ಚಿ ಸಾಲದ ಹೊರೆಗಳನ್ನೂ  ಜನರಿಗೆ ಕಡಿಮೆ ಮಾಡಿದೆ. ಬದಲಿಗೆ, ಅಣ್ಣಾ ಹಜಾರೆ ಅವರ ಮಾರ್ಗ `ಆಳದಲ್ಲಿ ಬ್ರಾಹ್ಮಣಿಕೆ`ಯದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.

ಮದ್ಯ, ತಂಬಾಕು ಹಾಗೂ ಕೇಬಲ್ ಟಿವಿಗೂ ಅಲ್ಲಿ ನಿಷೇಧವಿದೆ. ಸಸ್ಯಾಹಾರವನ್ನೇ ಅಳವಡಿಸಿಕೊಳ್ಳಲು ದಲಿತ ಕುಟುಂಬಗಳಿಗೆ ಒತ್ತಾಯಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಂಬಕ್ಕೆ ಕಟ್ಟಿ  ಹೊಡೆಯಲಾಗಿದೆ.

ಹಜಾರೆಯವರ ಸೂಚನೆಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳೇ ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ, ರಾಲೇಗಾಂವ್ ಸಿದ್ಧಿಯಲ್ಲಿ ಪ್ರಚಾರಕ್ಕೇ ಅವಕಾಶ ನೀಡಿರಲಿಲ್ಲ. `ಆಧುನಿಕ ಪ್ರಜಾಪ್ರಭುತ್ವದ ಅನೇಕ ನಿರ್ಣಾಯಕ ಆದರ್ಶಗಳಿಗೆ ಹೊರತಾಗಿರುವುದು, ಈ ಪ್ರಾಮಾಣಿಕ ಸುಧಾರಣಾ ಪ್ರಯೋಗದಲ್ಲಿ ಬಹುಮುಖ್ಯವಾದದ್ದು` ಎಂದು ಈ ವರದಿಗಾರ ಬರೆದಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಅಣ್ಣಾ ಹಜಾರೆ ಅವರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಹೇಳಿಕೆಗಳು ವಿಶ್ವಾಸವನ್ನು ಮೂಡಿಸುವುದಿಲ್ಲ.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕಕ್ಕೆ ಇಷ್ಟೇ ಮುಖ್ಯವಾದ ಲೇಖನ ಗಂಗಾಧರ ಮೊದಲಿಯಾರ್‌ರ “ಸಿನಿಮಾದೊಳಗೇ ಒಬ್ಬ `ಅಣ್ಣಾ’ ಇದ್ದಾನಲ್ಲಾ” ಅಂಕಣ ಲೇಖನ. It’s a shame that something of this importance and critical had to be published in a cinema supplement rather in the op-ed page. ಈ ಲೇಖನ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಸಿನಿಮಾ ಲೋಕದ ವ್ಯಕ್ತಿಗಳ ಹಿನ್ನೆಲೆಯಲ್ಲಿ ಕೆಲವು ಕೇಳಲೇಬೇಕಿದ್ದ ಪ್ರಶ್ನೆಗಳನ್ನು ಎತ್ತಿರುವುದೇ ಅಲ್ಲದೆ ಹೇಳಲೇಬೇಕಾದ ಉತ್ತರಗಳನ್ನೂ ಕೊಡುತ್ತದೆ. ಆ ಲೇಖನದ ಕೆಲವು ಸಾಲುಗಳು:

“ಲಾಂಗು ಮಚ್ಚುಗಳನ್ನು ಹಿಡಿದು, ಭೂಗತ ಲೋಕದ ಡಾನ್ ಆಗಿ, ಯುವಕರು ಕತ್ತಿ, ಚಾಕು ಚೂರಿ ಹಿಡಿಯಲು ಪ್ರೇರಣೆಯಾಗುವ `ಜೋಗಯ್ಯ` ಚಿತ್ರದ ಬಿಡುಗಡೆಗೆ ಎರಡು ದಿನ ಮುಂಚೆ ನಟ ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಸ್ವಾತಂತ್ರ್ಯಯೋಧರ ಉದ್ಯಾನವನದಲ್ಲಿ ನಡೆಯುತ್ತಿರುವ ನಿರಶನ ವೇದಿಕೆಯಲ್ಲಿ ಕಾಣಿಸಿಕೊಂಡರು.

ಸಿನಿಮಾ ನಟರು ಹೀಗೆ ದೇಶ ಸೇವೆಗೆ ಮುಂದಾಗುತ್ತಿರುವ ವೇಳೆಯಲ್ಲೇ ಕೆಲ ದಿನಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ.  ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಿರ್ಮಾಪಕ ಕೆ.ಮಂಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಕಿರುತೆರೆ ನಟರೂ, ನಿರ್ಮಾಪಕರೂ, ನಿರ್ದೇಶಕರೂ ಆಗಿರುವ ಸಿಹಿಕಹಿ ಚಂದ್ರು, ರವಿಕಿರಣ್ ಅವರುಗಳ ಭವ್ಯ ಬಂಗಲೆಗಳನ್ನು ಜಾಲಾಡಲಾಯಿತು. ಕೆಲವು ನಟರು, ನಿರ್ದೇಶಕರು, ನಟಿಯರು ಟಿವಿ ಚಾನಲ್ ಕಚೇರಿಗೆ ನುಗ್ಗಿ, ದಾಂದಲೆ ಮಾಡಿ ಸುದ್ದಿ ಮಾಡಿದರು. ಅತ್ತ ಕೇರಳದಲ್ಲಿ ಸೂಪರ್‌ಸ್ಟಾರ್‌ಗಳೆಂದೇ ಅಭಿಮಾನಿಗಳು ಆರಾಧಿಸುವ ಮುಮ್ಮಟಿ, ಮೋಹನ್‌ಲಾಲ್ ಅವರುಗಳ ಮನೆಗಳ ಮೇಲೆ ಸತತ ಮೂರುದಿನ ಆದಾಯ ತೆರಿಗೆ ವಂಚನೆ ಶಂಕೆಯಿಂದ ದಾಳಿ ನಡೆಸಿದ ತನಿಖಾಧಿಕಾರಿಗಳು ತಲಾ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡರು. ಇಂತಹ ಜನ ಇಂದು `ಜನಲೋಕಪಾಲ`ಕ್ಕೆ ಒತ್ತಾಯಿಸಿ, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ತೊಲಗಿಸಲು ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ

ಆರಂಭದ ದಶಕಗಳಲ್ಲಿ ಸಿನಿಮಾದಲ್ಲಿ ಜಮೀನ್ದಾರಿ ಪದ್ಧತಿ, ಅಲ್ಲಿನ ಕ್ರೌರ್ಯ ರೀತಿ ನೀತಿಗಳನ್ನು ವಿಶ್ಲೇಷಿಸುವ ಚಿತ್ರಗಳನ್ನು ಕಾಣಬಹುದಿತ್ತು. ಸ್ವಾತಂತ್ರ್ಯಾ ನಂತರ ತಲೆದೋರಿದ ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಬಡತನ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮೊದಲಾದ ಸಮಸ್ಯೆಗಳ ಕಡೆ ಸಿನಿಮಾ ಮಂದಿ ಗಮನ ಹರಿಸಿದ್ದರು.

70ರ ದಶಕದ ನಂತರ ಸಿನಿಮಾಕ್ಕೆ ಯಾವುದೇ ಸ್ಪಷ್ಟ ನಿಲುವೇ ಇಲ್ಲದೆ, ಸಾಮಾಜಿಕಬದ್ಧತೆಯೇ ಇಲ್ಲದೆ ಜನರಿಗೆ ಮನರಂಜನೆ ಒದಗಿಸುವುದೊಂದೇ ಸಿನಿಮಾ ಉದ್ದೇಶ ಎನ್ನುವಂತಾಯಿತು. ಗಾಂಧೀಜಿ ಅವರನ್ನು ತೋರಿಸುವುದು, ಅವರ ಆದರ್ಶಗಳನ್ನು ಹೇಳುವುದು ಈಗ ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. `ಲಗೇ ರಹೋ ಮುನ್ನಾಬಾಯಿ` ನೆನಪಿಸಿಕೊಳ್ಳಿ. ಗೂಂಡಾಗಿರಿ ಮಾಡುತ್ತಿದ್ದವನು ಗಾಂಧೀಗಿರಿ ಮಾಡಲಾರಂಭಿಸುವುದು ಗಾಂಧೀಜಿಯವರನ್ನು ವಿಡಂಬಿಸಿದಂತೆಯೇ ಅಲ್ಲವೇ? ನಮ್ಮ ಬಹುತೇಕ ಸಿನಿಮಾಗಳಲ್ಲಿ ಕೆಟ್ಟ ರಾಜಕಾರಣಿಗಳನ್ನು ತೋರಿಸುವುದು ಅವರ ಗಾಂಧೀ ಟೋಪಿ ಮೂಲಕವೇ! ಈಗ ಸಿನಿಮಾ ನಟರು ಗಾಂಧೀ ಟೋಪಿ ಹಾಕಿಕೊಂಡು ಬೀದಿಗಿಳಿದಿದ್ದಾರೆ!

ಸಮಾಜವನ್ನು ಪರಿವರ್ತಿಸುವ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಮೌಢ್ಯವನ್ನು ತೊಲಗಿಸುವ, ನೈತಿಕ ವಾತಾವರಣ ಸೃಷ್ಟಿಸುವ, ಭ್ರಷ್ಟಾಚಾರದ ವಿರುದ್ಧ ಜನರನ್ನು ಕೆರಳಿಸುವ ಪ್ರಬಲ ಹಾಗೂ ಪ್ರಖರ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ ಎನ್ನುವ ವಾಸ್ತವ ಸತ್ಯವೇ ನಮ್ಮ ಸಿನಿಮಾ ಜನಕ್ಕೆ ಗೊತ್ತಿಲ್ಲವಲ್ಲಾ ಎಂದು ಮರುಕವಾಗುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಅಣ್ಣಾ ಹಜಾರೆ ಆಗಬಹುದು ಎನ್ನುವ  ಮಾಧ್ಯಮಶಕ್ತಿಯನ್ನೇ ನಮ್ಮ ಸಿನಿಮಾ ಮಂದಿ ಮನವರಿಕೆ ಮಾಡಿಕೊಂಡಿಲ್ಲ.

ಸಿನಿಮಾದ ಪ್ರಭಾವೀ ಆಯಸ್ಕಾಂತ ಶಕ್ತಿಯನ್ನು ಬಳಸಿಕೊಳ್ಳಲು ನಮ್ಮವರು ವಿಫಲರಾದರೆಂದೇ ಹೇಳಬೇಕು. ಸಿನಿಮಾ ಒಂದು ದೇಶವನ್ನೇ ಕಟ್ಟಲು ಏಣಿ ಆಗಬಹುದು ಎನ್ನುವುದನ್ನು ರಷ್ಯಾ ನೋಡಿ ಕಲಿಯಬೇಕು. ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯ ಎಲ್ಲವೂ ತುಂಬಿತುಳುಕುತ್ತಿದ್ದ ಭಾರತ ದೇಶಕ್ಕೆ ಸಿನಿಮಾ ಪರಿವರ್ತನೆಯ ಹಾದಿಗಳನ್ನು ತೋರಬಹುದಿತ್ತು. ಭಾರತದಲ್ಲಿ ಸಿನಿಮಾ ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

Screenshot courtesy: ಪ್ರಜಾವಾಣಿ

ರವಿ ಕೃಷ್ಣಾ ರೆಡ್ಡಿ

Anna_Hazare

ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…

ಅಣ್ಣಾ ಹಜಾರೆಯವರ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಯಾವುದೋ ಒಂದು ಲೊಕಪಾಲ್ ಮಸೂದೆ ಮುಂದಿನ ಒಂದೆರಡು ತಿಂಗಳಿನಲ್ಲಿ ಅಂಗೀಕಾರವಾಗುವುದು ಈಗ ನಂಬಬಹುದಾದ ವಿಚಾರ. ಇಂದಲ್ಲ ನಾಳೆ ಯಾವುದೋ ಒಂದು ಲೋಕ್‌ಪಾಲ್ ಬರುತ್ತಿತ್ತು. ಆದರೆ, ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಇಲ್ಲದೇ ಹೋಗಿದ್ದರೆ ಅದು ಇಷ್ಟು ಬೇಗ ಆಗುತ್ತಿರಲಿಲ್ಲ. ಮತ್ತು ಇಷ್ಟು ಪರಿಣಾಮಕಾರಿಯಾಗಿಯೂ ಇರುತ್ತಿರಲಿಲ್ಲ.

Anna_Hazare

Anna_Hazare

ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಮೂಲ ಬೇರು ಇರುವುದು ನಮ್ಮ ಸಮಾಜದಲ್ಲಿ ಸಾರ್ವತ್ರಿಕವಾಗಿಲ್ಲದ ಮೌಲ್ಯಗಳಿಂದ ಮತ್ತು ಪ್ರಜಾಪ್ರಭುತ್ವದ ಆಳವಾದ ಕಲ್ಪನೆ ನಮ್ಮ ಬಹುತೇಕ ದೇಶವಾಸಿಗಳಿಗೆ ಇಲ್ಲದಿರುವುದರಿಂದ. ಮೂರ್ನಾಲ್ಕು ದಶಕಗಳ ಹಿಂದೆ ಕಳ್ಳತನ-ಕೊಲೆ-ಸುಲಿಗೆಯಲ್ಲಿ ತೊಡಗಿದ ಜನರನ್ನು, ಲಂಚ ತೆಗೆದುಕೊಂಡು ಸಿಕ್ಕಿಬೀಳುತ್ತಿದ್ದವರನ್ನು ಸಮಾಜ ಒಂದು ರೀತಿ ನೋಡುತ್ತಿತ್ತು. ಅಘೋಷಿತ ಬಹಿಷ್ಕಾರ ಹಾಕುತ್ತಿತ್ತು. ಆದರೆ ಯಾವಾಗ ದುಡ್ಡು ಮತ್ತು ನಮ್ಮ ಈಗಿನ ಬುದ್ಧಿಗೇಡಿ ಭ್ರಷ್ಟ ರಾಜಕಾರಣಿಗಳ ಅಭಿವೃದ್ಧಿಯ ಕಲ್ಪನೆ ಸಮಾಜದಲ್ಲಿ ಸ್ಥಾನ ಪಡೆದುಕೊಂಡಿತೊ, ಆಗ ನಮ್ಮ ಸಮಾಜದಲ್ಲಿದ್ದ ಅಷ್ಟಿಷ್ಟು ನೀತಿ-ನಿಜಾಯಿತಿಗಳೆಲ್ಲ ಮೂಲೆಗುಂಪಾದವು. ನ್ಯಾಯವಾಗಿರುವುದು, ಸರಳ-ಆದರ್ಶ ಜೀವನ ನಡೆಸುವುದು ಸಮಾಜದ ಪ್ರಕಾರ ಕೇವಲ ಸೋತವರ ಮೌಲ್ಯಗಳಾದವೇ ಹೊರತು ಸಮಾಜದ ಮೌಲ್ಯಗಳಾಗಲಿಲ್ಲ. ನಮ್ಮದೇ ದೇಶದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಪ್ರಕಾರ ನಡೆದುಕೊಳ್ಳುವುದಕ್ಕೆ, ಕಾನೂನು ಪಾಲಿಸುವುದಕ್ಕೆ ನಾವು ಯಾಕಾಗಿ ಲಂಚ ನೀಡಬೇಕು ಎಂದು ಜನ ನಿಂತು ಯೋಚಿಸಲಿಲ್ಲ. ಕೊಡದಿದ್ದರೆ ಕೆಲಸ ಆಗುವುದಿಲ್ಲ; ಎಲ್ಲರೂ ಕೊಡುತ್ತಾರೆ, ನಾವೂ ಕೊಡುವುದರಲ್ಲೇನು ತಪ್ಪು; ಇದು ಲೋಕಸಮ್ಮತ ಎನ್ನುವ ತೀರ್ಮಾನಕ್ಕೆ ಬಹುತೇಕ ಜನ ಬಂದ ಸಂದರ್ಭ ಇದು.

ಇದೇ ಸಮಯದಲ್ಲಿ ನಮ್ಮ ಜನರಿಗೆ ರಾಜಕೀಯ ಪಕ್ಷಗಳಲ್ಲಿ ಆಯ್ಕೆಗಳೂ ಇರಲಿಲ್ಲ. ನಾನು ಇತ್ತೀಚೆಗೆ ಎಲ್ಲರಿಗೂ ಹೇಳುವ ವಿಷಯ ಏನೆಂದರೆ, ’ಯಾವುದಾದರೂ ಒಂದು ಒಳ್ಳೆಯ ನಾಯಕನ ಅಥವ ಪಕ್ಷದ ಆಯ್ಕೆ ಕರ್ನಾಟಕದ ಜನಕ್ಕೆ ಇದ್ದಿದ್ದರೆ ಇಲ್ಲಿ ವರ್ಷದ ಹಿಂದೆಯೇ ಕ್ರಾಂತಿಯಾಗಿಬಿಡುತ್ತಿತ್ತು,’ ಎಂದು. ನಿಸ್ಸಂಶಯವಾಗಿ ಯಡ್ಡಯೂರಪ್ಪ ಮತ್ತವರ ಪಕ್ಷದ ಆಡಳಿತ ಹಗಲುದರೋಡೆಕೋರರದ್ದು. ಆ ಹಗಲುದರೋಡೆಯಿಂದಲೇ ಇಷ್ಟರಲ್ಲಿಯೇ ಮತ್ತೊಂದಷ್ಟು ಕರ್ನಾಟಕದ ರಾಜಕಾರಣಿಗಳು ಜೈಲು ಸೇರಬೇಕಾಗಿ ಬರಬಹುದು. ಆದರೆ ಮಿಕ್ಕ ಪಕ್ಷಗಳ ಕತೆ ಏನು? ಬಿಜೆಪಿಯದು ಹಗಲುದರೋಡೆಯಾದರೆ ಇತರರದು ಒಂದು ರೀತಿಯಲ್ಲಿ ರಾತ್ರಿದರೋಡೆ. ಕರ್ನಾಟಕದ ಕಾಂಗ್ರೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ ಆದರ್ಶ ಮತ್ತು ಪ್ರಾಮಾಣಿಕತೆಯನ್ನು ಜನರಲ್ಲಿ ಉತ್ತೇಜಿಸುವ, ತಮ್ಮ ಮಾತುಗಳಲ್ಲಿ ಜನರಿಗೆ ನಂಬಿಕೆ ಉಂಟುಮಾಡುವಂತಹ ಒಬ್ಬನೇ ಒಬ್ಬ ಸಮೂಹನಾಯಕನಿಲ್ಲ. ’ಬಿಜೆಪಿಯವರಿಗೆ ಮಾತ್ರ ಆಡಳಿತ ನಡೆಸುವುದಕ್ಕೆ ಮತ್ತು ಅಕ್ರಮ ರೀತಿಯಲ್ಲಿ ಹಣ ಮಾಡುವುದಕ್ಕೆ ಅವಕಾಶ ಇದೆ, ನಮಗಿಲ್ಲ, ದಯವಿಟ್ಟು ನಮಗೂ ಆ ಅವಕಾಶ ಮಾಡಿಕೊಡಿ,’ ಎನ್ನುವಂತಹ ಮಾತುಗಳು ಇವರಿಂದ ಬರುತ್ತಿತ್ತೇ ಹೊರತು, ’ನಾವು ಅಕ್ರಮ-ಭ್ರಷ್ಟಾಚಾರಗಳಿಲ್ಲದ ರಾಜಕಾರಣ ಮತ್ತು ಆಡಳಿತ ನಡೆಸುತ್ತೇವೆ,’ ಎಂದು ಅವರು ಹೇಳಲು ಆಗಲೇ ಇಲ್ಲ. ಈಗಲೂ ಹೇಳುತ್ತಿಲ್ಲ. ಅವರು ಈ ಸಂದರ್ಭದಲ್ಲಿ ಬಿಜೆಪಿಗಿಂತ ಭಿನ್ನವಾದ ಆಡಳಿತ ಕೊಡಬಲ್ಲರು ಎನ್ನುವಂತಹ ನಂಬಿಕೆ ಕರ್ನಾಟಕದ ಜನಕ್ಕೆ ಬರದೇ ಇದ್ದುದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವಯಂ‍ಕೃತಾಪರಾಧಗಳು ಕಾರಣವೇ ವಿನಃ ಅನ್ಯವಲ್ಲ.

Sansad_Bhavan

Sansad_Bhavan

ಬಹುಶಃ ಇಂತಹ ಕಾರಣಗಳಿಂದಲೇ ಕರ್ನಾಟಕದ ಜನ ಕಳೆದ ಎರಡು ಮೂರು ವರ್ಷಗಳ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಕೊಡದೇ ಇದ್ದದ್ದು. ಅದರ ಜೊತೆಗೆ ಜನರ ವೈಯಕ್ತಿಕ ಜಾತಿ ಮೂಲದ ಭ್ರಷ್ಟತೆಯೂ ಸೇರಿತ್ತು. ನಮ್ಮ ಜಾತಿಯವನು ಮಾಡಿದರೆ ಮಾತ್ರ ತಪ್ಪಾ ಎನ್ನುವಂತಹ ಸಮರ್ಥನೆ ನೀಚತನದ್ದು, ಅದನ್ನು ಆಡಲು ಸಂಕೋಚಪಟ್ಟುಕೊಳ್ಳಬೇಕು ಎಂದು ಜಾತಿವಾದಿಗಳು ಅಂದುಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿಯೇ ನಾವು ಇಂದಿನ ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕದಲ್ಲಿ ದೊರೆಯುತ್ತಿರುವ ಜನಬೆಂಬಲವನ್ನು ಗ್ರಹಿಸಲು ಯತ್ನಿಸಬೇಕು. ಇಷ್ಟೂ ದಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದ ಕರ್ನಾಟಕದ ಹಲವು ಆಕ್ಟಿವಿಸ್ಟ್‌ಗಳಿಗೆ ಹಜಾರೆ ಹೋರಾಟಕ್ಕೆ ದೊರೆಯುತ್ತಿರುವ ಬೆಂಬಲ ಕಸಿವಿಸಿ ಉಂಟುಮಾಡಿರುವುದು ಸಹಜ. ಆದರೆ ಈ ಹೋರಾಟಗಾರರು ಮುಟ್ಟಲು ಸಾಧ್ಯವಾಗದಿದ್ದ ಜನವರ್ಗವನ್ನು ಈ ಅಣ್ಣಾ ಹಜಾರೆ ತಂಡ ಮುಟ್ಟಿದೆ ಎಂದು ಅವರು ತಿಳಿದುಕೊಂಡರೆ ಅವರ ಕಸಿವಿಸಿ ಮತ್ತು ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು. ಈ ಹೋರಾಟಕ್ಕೆ ಅಜ್ಜ-ಗಾಂಧೀವಾದಿ-ಅಹಿಂಸೆ-ಉಪವಾಸ ಎಂಬಂತಹ ಸಾಂಸ್ಕೃತಿಕ-ಸಾಮಾಜಿಕ ರೂಪ ಇದೆ ಮತ್ತು ಅದಕ್ಕೆ ಟಿವಿ-ಪತ್ರಿಕಾ ಮಾಧ್ಯಮಗಳ ಅತಿಯಾದ ಉತ್ತೇಜನ ಮತ್ತು ಪ್ರಚಾರವೂ ದೊರಕಿದೆ. ಇದೊಂದು ರೀತಿಯಲ್ಲಿ ಈ ಸಂದರ್ಭದಲ್ಲಿ ಮಾತ್ರವೇ ಸಾಧ್ಯವಾಗಬಹುದಾದ ಘಟನೆಯೇ ಹೊರತು ಎರಡು-ಮೂರು ವರ್ಷಗಳ ಮೊದಲು ಘಟಿಸಲು ಸಾಧ್ಯವೇ ಇರಲಿಲ್ಲ. ಇದು 2G-CWG-ಗಣಿ ಮುಂತಾದ ಬಯಲಿಗೆ ಬಂದಂತಹ ಹಗರಣಗಳ ತದನಂತರದ ಕಾಲಘಟ್ಟದಲ್ಲಿ ಘಟಿಸಿದ ಕ್ರಿಯೆಯೇ ಹೊರತು, ಅವು ಈ ಮಟ್ಟದಲ್ಲಿ ಬಯಲಿಗೆ ಬರದೇ ಹೋಗಿದ್ದಲ್ಲಿ ಇದೇ ಅಣ್ಣಾ ಹಜಾರೆ ಎಷ್ಟೇ ಉಪವಾಸ ಕೂತಿದ್ದರೂ ಜನರಾಗಲಿ ಅಥವ ಮಾಧ್ಯಮಗಳಾಗಲಿ ಈ ಪರಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಅಣ್ಣಾ ಹಜಾರೆ ಮತ್ತವರ ತಂಡದ ಬಗ್ಗೆ ಚಿಂತಕರ ಒಂದು ಗುಂಪಿನ ತಕರಾರು ಏನೇ ಇರಲಿ, ಅದು ಜನಸಾಮಾನ್ಯರಿಗೆ ಅಷ್ಟೇನೂ ಮುಖ್ಯವಾದದ್ದಲ್ಲ. ಸೈದ್ಧಾಂತಿಕ ಹಿನ್ನೆಲೆ ಮತ್ತು ಅದಕ್ಕೆ ಬೇಕಾದ ಓದು ಇಲ್ಲದ ಜನತೆ ಯಾವುದೇ ಸಂದರ್ಭದಲ್ಲಾಗಲಿ ಕೆಟ್ಟತನದ ವಿರುದ್ಧ ಮಾತನಾಡುತ್ತಿರುವವನ ಪರ ನಿಲ್ಲುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ದೊರಕುತ್ತಿರುವ ಜನಬೆಂಬಲ ನಿಜಕ್ಕೂ ಪ್ರಶಂಸನಾರ್ಹ. ಜನರಿಗೆ ಒಂದಲ್ಲ ಒಂದು ಸಮಯದಲ್ಲಿ ಆದರ್ಶಗಳು ಬೇಕು. ನ್ಯಾಯ-ನೀತಿಗಳು ಬೇಕು. ಅದರ ಪರ ನಿಲ್ಲಬೇಕು. ಅದನ್ನೇ ಈಗ ಬಹುತೇಕರು ಮಾಡುತ್ತಿರುವುದು.

ಹಾಗೆಂದ ಮಾತ್ರಕ್ಕೆ ಹಜಾರೆ ತಂಡದ ಕಾರ್ಯವೈಖರಿ ಮತ್ತು ಅವರು ಮುಂದೊಡ್ಡೂತ್ತಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ವಿಮರ್ಶಿಸುತ್ತಿರುವವರನ್ನು ವಿಮರ್ಶಿಸುವುದಾಗಲಿ, ಅವರನ್ನು ಕೀಳುಮಾಡುವುದಾಗಲ್ಲಿ ಸರಿಯಲ್ಲ. ಇದು ಒಂದು ರೀತಿಯಲ್ಲಿ ಜನಪ್ರೀಯತೆ ಕಳೆದುಕೊಳ್ಳುವ ಕೆಲಸವಾದರೂ ಆಗಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ನಾವು ಅರುಣಾ ರಾಯ್ ಮತ್ತವರ ಸಹಚರರನ್ನು ಮತ್ತು ಆರುಂಧತಿ ರಾಯ್‌ರಂತಹವರನ್ನು ಅಭಿನಂದಿಸಲೇಬೇಕು. ಈ ಸಂದರ್ಭದಲ್ಲಿ ನಾವು ಗಮನವಿಟ್ಟು ಅವಲೋಕಿಸಿದಾಗ, ಅಣ್ಣಾ ಹಜಾರೆ ತಂದದವರ್‍ಯಾರೂ ಅರುಣಾ ರಾಯ್ ಮತ್ತವರ ತಂಡದವರ ವಿರುದ್ಧ ವೈಯಕ್ತಿಕ ದಾಳಿ ಮಾಡುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನ್‌ಲೋಕ್‍ಪಾಲ್ ನೈಜ ರೀತಿಯಲ್ಲಿ ಜನರ ಕಾನೂನಾಗುವುದಕ್ಕೆ ಈ ರೀತಿಯ ವಿಮರ್ಶೆ ಅಗತ್ಯ ಎನ್ನುವ ಅರಿವು ಮತ್ತು ತಮ್ಮ ನಿಲುವಿನಲ್ಲಿಯೂ ಕೆಲವೊಂದು ತಪ್ಪುಗಳಿರಬಹುದು ಎನ್ನುವಂತಹ ವಿನಯ ಹಜಾರೆ ತಂಡದಲ್ಲಿರುವುವರಲ್ಲಿ ಇರುವ ಲಕ್ಷಣಗಳಿವೆ. ಅರುಣಾ ರಾಯ್ ಮತ್ತು ಅಣ್ಣಾ ಹಜಾರೆ ತಂಡದವರ ಸೌಜನ್ಯಯುತವಾದ ಭಿನ್ನಾಭಿಪ್ರಾಯ ಮಾದರಿಯಾದಂತಹುದು.

ಇದೇ ಸಂದರ್ಭದಲ್ಲಿ ದೇಶದ ಕೆಲವು ದಲಿತ ವರ್ಗದ ಹಿನ್ನೆಲೆಯ ಚಿಂತಕರು ಈ ಚಳವಳಿ ಮೇಲ್ಜಾತಿಯ-ಮೇಲ್ವರ್ಗಗಳ ಪಿತೂರಿ ಎನ್ನುವಂತೆ ಅಭಿಪ್ರಾಯ ಪಡುತ್ತಿದ್ದಾರೆ. ಅವರು ಹಾಗೆ ಹೇಳಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೇ ಕಾಣಿಸುತ್ತವೆ. ಆಧ್ಯಾತ್ಮ ಎಂಬ ಢೋಂಗಿಯ ಪುಂಗಿಯನ್ನು ಊದುವವರೂ ಈ ಚಳವಳಿಯ ಮುಖ್ಯಪಾತ್ರಧಾರಿಗಳಾಗಿರುವುದು ಈ ಚಳವಳಿಯ ಮಿತಿಗಳಲ್ಲಿ ಒಂದು. ಪ್ರಗತಿಪರ ಚಿಂತನೆ ಮತ್ತು ಸಮಾನತಾವಾದದ ವಿರೋಧಿಗಳು ಈ ಚಳವಳಿಯ ಮೂಲಕ ಜನಮಾನಸದಲ್ಲಿ ಚಲಾವಣೆಯಾಗಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಮೇಧಾ ಪಾಟ್ಕರ್‌ರಂತಹವರು, ಹಿಂದೂ ಸಮಾಜದ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತುತ್ತಲೆ ಬಂದಿರುವ, ಕೋಮುವಾದವನ್ನು ವಿರೋಧಿಸುವ ಅಗ್ನಿವೇಶ್‌ರಂತಹವರೂ ಈ ಚಳವಳಿಯ ಮುಂಚೂಣಿಯಲ್ಲಿರುವುದರಿಂದ ನಮ್ಮ ವಿಮರ್ಶೆ ಸಂಯಮದಿಂದ ಕೂಡಿರಬೇಕಾದ ಮತ್ತು ಕೆಲವು ವ್ಯಕ್ತಿ-ಗುಂಪುಗಳಿಗೆ ಸೀಮಿತಗೊಳಿಸಬೇಕಾದ ಅವಶ್ಯಕತೆ ಇದೆ. ಆಡಳಿತದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ, ಭ್ರಷ್ಟರಿಗೆ ಶಿಕ್ಷೆಯಾದರೆ, ಅದರ ಒಳಿತು ಸಮಾಜದ ಎಲ್ಲಾ ವರ್ಗಗಳಿಗೂ ಇರುತ್ತದೆಯೇ ಹೊರತು ಕೇವಲ ಕೆಲವೇ ಜನವರ್ಗಗಳಿಗೆ ಅಲ್ಲ. ಮಿಕ್ಕ ವಿಷಯಗಳನ್ನು ಪ್ರಸ್ತಾಪಿಸಲು, ಹೋರಾಡಲು, ಮತ್ತೊಂದು ಸಮಯ-ಸಂದರ್ಭ ಇದ್ದೇ ಇರುತ್ತದೆ. ಆ ವಿಷಯಗಳನ್ನು ಪ್ರಾಮಾಣಿಕವಾಗಿ ಎತ್ತಬಲ್ಲ ಜನರೂ ಇರುತ್ತಾರೆ. ಅಣ್ಣಾ ಹಜಾರೆ ಸಮಾಜದ ಎಲ್ಲಾ ವಿಚಾರಗಳನ್ನು ಯೋಚಿಸಬಲ್ಲಂತಹ ಚಿಂತಕರಾಗಲಿ, ಸಮಾಜ ಸುಧಾರಕರಾಗಲಿ ಅಲ್ಲ. ನಮ್ಮ ಎಲ್ಲಾ ವಿಚಾರಗಳಿಗೆ, ಸಮಸ್ಯೆಗಳಿಗೆ ಅವರೇ ನಾಯಕರಾಗಲಿ, ಆದರ್ಶವಾಗಲಿ, ಪರಿಹಾರವಾಗಲಿ, ಅಲ್ಲ. ಆದರೆ, ಈ ಸಂದರ್ಭದಲ್ಲಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಅವರನ್ನು ನಾಯಕರನ್ನಾಗಿ, ಆದರ್ಶವನ್ನಾಗಿ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಇಲ್ಲಿಯವರೆಗಿನ ಜೀವನದಲ್ಲಿ ಅವರು ಇಂತಹ ಹೋರಾಟವನ್ನು ಮಾಡಿಕೊಂಡೂ ಬಂದಿದ್ದಾರೆ. ಹಾಗಾಗಿ ಅವರು ಯೋಗ್ಯರೂ ಹೌದು, ಸಮರ್ಥರೂ ಹೌದು.

ಮತ್ತು, ಅಣ್ಣಾ ಹಜಾರೆ ನಮ್ಮ ಈಗಿನ ವಿಸ್ಮೃತಿಯಲ್ಲಿದ್ದ ಸಮಾಜವನ್ನು ಗಾಂಧಿಗೆ, ಅವರ ವಿಚಾರಕ್ಕೆ, ಆಚಾರಕ್ಕೆ ಎದುರು ತಂದು ನಿಲ್ಲಿಸಿದ್ದಾರೆ. ಗಾಂಧಿಯವರ ಅವಹೇಳನೆ ಮಾಡುವುದನ್ನೇ ಒಂದು ಮೌಲ್ಯ ಎಂದುಕೊಂಡ ಗುಂಪನ್ನೂ ಅವರು ತಮ್ಮ ಹಿಂದೆ ಬರುವಂತೆ ಮಾಡಿದ್ದಾರೆ. ದೇಶ ಈ ಮೂಲಕವಾದರೂ ಗಾಂಧಿಯನ್ನು ಮತ್ತೊಮ್ಮೆ ಪರಿಚಯಿಸಿಕೊಂಡರೆ ಅದು ಈ ಚಳವಳಿಯ ಸಾರ್ಥಕ್ಯದಲ್ಲೊಂದೆಂದು ನಾವು ಭಾವಿಸಬೇಕು. ದೇಶದ ಅನೇಕ ಕಡೆ ಅಕ್ಷರಶಃ ಲಕ್ಷಾಂತರ ಜನರು ಬೀದಿಗಿಳಿದಿದ್ದರೂ ಈ ಚಳವಳಿ ಅಹಿಂಸೆ ಮತ್ತು ಸೌಜನ್ಯತೆಯನ್ನು ಕಾಪಾಡಿಕೊಂಡಿದೆ ಎಂದರೆ ಅದು ಕೋಮು ಉನ್ಮಾದದಲ್ಲಿ ಆಗಾಗ ಜ್ವಲಿಸುವ ದೇಶದಲ್ಲಿ ಗಾಂಧಿಮಾರ್ಗದ ಜಯವಾಗಿಯೇ ಕಾಣಿಸುತ್ತಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಇಲ್ಲಿ ಅನೇಕ ಜನ ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಕೇವಲ ಒಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸುತ್ತಿಲ್ಲ. ಎಲ್ಲರ ಭ್ರಷ್ಟಾಚಾರವನ್ನೂ ಟೀಕಿಸುತ್ತಿದ್ದಾರೆ, ಕೇವಲ ಅದಷ್ಟನ್ನೇ ಅಲ್ಲ, ಅವರು ಮಠಗಳ ಭ್ರಷ್ಟಾಚಾರವನ್ನೂ ಎತ್ತುತ್ತಿದ್ದಾರೆ. ಸಮಾಜದ ಅನೇಕ ಲೋಪದೋಷಗಳನ್ನೂ ಎತ್ತುತ್ತಿದ್ದಾರೆ, ಹಾಗೆಯೇ ಪ್ರಜಾಪ್ರಭುತ್ವದ ಪಾಠವನ್ನೂ ಮಾಡುತ್ತಿದ್ದಾರೆ. ಅತಿರೇಕಗಳೂ ಇರುತ್ತವೆ, ನಿಜ. ಆದರೆ, ಅವೆಲ್ಲವುಗಳ ಮಧ್ಯೆ ಮುಕ್ತವಾದ ವಾತಾವರಣದಲ್ಲಿ ಜನರನ್ನು ಮುಕ್ತವಾಗಿ ಮಾತನಾಡಲು ಬಿಟ್ಟಿರುವುದು ಗಮನಿಸಬೇಕಾದ ಅಂಶ. ಕನ್ನಡದ ಚಿಂತಕ ವರ್ಗ ಮತ್ತು ಕ್ರಾಂತಿಗೀತೆಗಳನ್ನು ಹಾಡಿಕೊಂಡೇ ಒಂದೆರಡು ತಲೆಮಾರುಗಳನ್ನು ಪ್ರಭಾವಿಸುತ್ತ ಬಂದಂತಹ ಗಾಯಕರು ಇಲ್ಲಿ ಮಾಯವಾಗಿರುವುದು ವಿಪರ್ಯಾಸ. ಇದು ಆಯೋಜಕರ ಆಲೋಚನೆಯ ಮಿತಿಯೂ ಹೌದು, ಮತ್ತು ಈ ಚಿಂತಕ-ಗಾಯಕರ ಬದ್ಧತೆಯ ಪ್ರಶ್ನೆಯೂ ಹೌದು. ಇಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ವೈಯಕ್ತಿಕ ದೌರ್ಬಲ್ಯಗಳೇ ಕಾರಣವಾಗಿ ಕಾಣಿಸುತ್ತವೆ.

ದುಡ್ಡು ಕೊಟ್ಟು ಜನರನ್ನು ಸೇರಿಸಿ ರ್‍ಯಾಲಿ ಸಂಘಟಿಸುವುದನ್ನು ಕಂಡೂಕಂಡು ನಮ್ಮ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ಚಿಂತಿತರಾಗಿದ್ದವರಿಗೆ ಇಲ್ಲೊಂದು ಉದಾಹರಣೆ ಇದೆ. ಈ ಚಳವಳಿಗೆ ಮಧ್ಯವಯಸ್ಕರು, ಉದ್ಯೋಗದಲ್ಲಿರುವವರು, ಜನಸಾಮಾನ್ಯರು, ಸ್ವಯಂಪ್ರೇರಿತರಾಗಿ ಬರುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ನಮ್ಮ ಮುಂದಿನ ಚಳವಳಿಗಳು ಮತ್ತು ರಾಜಕಾರಣ ನಡೆಯಬೇಕಿರುವುದೇ ಈ ರೀತಿಯಲ್ಲಿ. ಆದರೆ, ಈಗ ಯಾವುದೋ ಹುಮ್ಮಸ್ಸಿನಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಜನತೆ ಮತ್ತೆ ಚುನಾವಣಾ ಸಮಯದಲ್ಲಿ ತಮ್ಮ ಬೇಜವಾಬ್ದಾರಿ ತೋರಿಸಿದರೆ ಆಗ ಈ ಚಳವಳಿಯ ಮಿತಿ ಗೊತ್ತಾಗುತ್ತದೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಇದೇ ಜನ ಯೋಗ್ಯರಾದವರನ್ನು ಆರಿಸಿಕೊಂಡಿದ್ದರೆ ಈ ಚಳವಳಿಯ ಜರೂರತ್ತೇ ಇರುತ್ತಿರಲಿಲ್ಲ. ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಸಂಸದರು ಮತ್ತು ಶಾಸಕರೇ ಬರೆಯುತ್ತಿದ್ದರು. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇಂತಹುದೊಂದು ಚಳವಳಿಯಲ್ಲಿ ಮಾತ್ರ ಪಾಲ್ಗೊಳ್ಳಲು ಬರುತ್ತಿರುವವರೇ ಇಲ್ಲಿ ದೋಷಿಗಳು. ಭ್ರಷ್ಟಾಚಾರದ ವಿರುದ್ಧ ಕೂಗುವ ಧಿಕ್ಕಾರ ಇವರ ಭ್ರಷ್ಟಾಚಾರಕ್ಕೂ ಮತ್ತು ಬೇಜವಾಬ್ದಾರಿತನಕ್ಕೂ ಕೂಗುವ ಧಿಕ್ಕಾರವೂ ಹೌದು. ಪಕ್ಷಾತೀತವಾದ ಈ ಹೋರಾಟದ ನಂತರ ಜನ ಮತ್ತೆ ತಮಗಿಷ್ಟವಾದ ಪಕ್ಷವನ್ನು ವಿಮರ್ಶೆಗೊಳಪಡಿಸದೇ ಬೆಂಬಲಿಸಿದರೆ ಅದು ಅವರು ಈ ಚಳವಳಿಯಿಂದ ಏನನ್ನೂ ಕಲಿಯಲಿಲ್ಲ ಎಂದಾಗುತ್ತದೆ. ಜಾತಿವಾದಕ್ಕೆ, ಕೋಮುವಾದಕ್ಕೆ, ಹಣಕ್ಕೆ, ಬಲಕ್ಕೆ, ವಿವಿಧ ಲಾಲಸೆಗಳಿಗೆ ಬಲಿಯಾಗದೆ ಬಹುಸಂಖ್ಯಾತ ಜನ ಪ್ರಾಮಾಣಿಕವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಅದು ನಿಜವಾದ ಬದ್ಧತೆ.

(ಚಿತ್ರಕೃಪೆ: ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ

Karnataka High Court

ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹೈಕೋರ್ಟನ್ನೂ ಟೀಕಿಸಿಲ್ಲವೆ?

(ಈ ಲೇಖನ ಸುಮಾರು ಮೂರು ತಿಂಗಳಿನ ಹಿಂದೆ (16/05/11) ಬರೆದದ್ದು. ಕಾರಣಾಂತರಗಳಿಂದ ಇದು ಪ್ರಕಟವಾಗಬೇಕಾದ ಕಡೆ ಪ್ರಕಟವಾಗಲಿಲ್ಲ. ನೆನ್ನೆ (18/08/11) ರಾಜ್ಯಸಭೆಯಲ್ಲಿ ಬಂಗಾಳದ ಹೈಕೋರ್ಟ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಮೇಲೆ ಚರ್ಚೆ ಮತ್ತು ಮತ ಚಲಾವಣೆ ನಡೆದು ಜಡ್ಜ್ ವಿರುದ್ದ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಪ್ರಕ್ರಿಯೆ ಲೋಕಸಭೆಯಲ್ಲಿ ಪೂರ್ಣಗೊಂಡಾಗ ಆ ಜಡ್ಜ್ ವಜಾ ಆಗಲಿದ್ದಾರೆ. ಆದರೆ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಮಾತು ಕೇಳಬರುತ್ತಿರುವುದು ಇದೇ ಮೊದಲಲ್ಲ. ಲೊಕಪಾಲ ಮಸೂದೆಯಲ್ಲಿ ನ್ಯಾಯಾಂಗವನ್ನು ಹೊರಗಿಡುವ ಬಗ್ಗೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆ ಬರೆದ ಈ ಲೇಖನ ಈಗಲೂ ಪ್ರಸ್ತುತ ಇಂದು ಇಲ್ಲಿ ಪ್ರಕಟಿಸುತ್ತಿದ್ದೇನೆ… ರವಿ…)

Karnataka High Courtಕಳೆದ ಶುಕ್ರವಾರ ( ಮೇ 13, 2011 )  ಸುಪ್ರೀಂಕೋರ್ಟ್ ಕರ್ನಾಟಕದ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿ ಆದೇಶ ಹೊರಡಿಸುವುದರ ಜೊತೆಗೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಕಟುಶಬ್ದಗಳಲ್ಲಿ ಟೀಕಿಸಿತು. ಆದರೆ, ಇದಕ್ಕೂ ಮುಖ್ಯವಾದುದನ್ನು ಸುಪ್ರೀಂಕೋರ್ಟ್ ನೇರವಾಗಿ ಹೇಳಲಿಲ್ಲ. ಅದೇನೆಂದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (11 ಬಿ.ಜೆ.ಪಿ. ಶಾಸಕರ ಅನರ್ಹತೆ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ) ಕರ್ನಾಟಕ ರಾಜ್ಯದ ಉಚ್ಚನ್ಯಾಯಾಲಯ ಕೊಟ್ಟಿದ್ದ ತೀರ್ಪಿನಲ್ಲಿ ನ್ಯಾಯ ಇರಲಿಲ್ಲ ಎನ್ನುವುದು.

ಕಳೆದ ಅಕ್ಟೋಬರ್ 11ರ ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ತರಾತುರಿಯಲ್ಲಿ ವಿಧಾನಸಭೆಯ ಸ್ಪೀಕರ್ ಮೇಲೆ ಉಲ್ಲೇಖಿಸಿದ 16 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಅವರು ಹಾಗೆ ಮಾಡಲು ಕಾನೂನು ಮತ್ತು ನ್ಯಾಯಪಾಲನೆಗಿಂತ ಹೆಚ್ಚಾಗಿ ತಮ್ಮ  ಬಿ.ಜೆ.ಪಿ. ಪಕ್ಷದ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಜಯ ಲಭಿಸುವಂತೆ ಮಾಡುವುದೇ ಆಗಿತ್ತು. ಸ್ಪೀಕರ್‌ರ ಈ ಕ್ರಮ ಅನೈತಿಕ ಮತ್ತು ಅಕ್ರಮವಾದದ್ದು ಎಂದು ಎದ್ದು ಕಾಣಿಸುವಷ್ಟು ಲಜ್ಜಾಹೀನವಾಗಿತ್ತು. ಸ್ಪೀಕರ್‌ರ ಈ ಕ್ರಮವನ್ನು ಪ್ರಶ್ನಿಸಿ ಅನರ್ಹಗೊಂಡ ಬಿ.ಜೆ.ಪಿ.ಯ 11 ಬಂಡಾಯ ಶಾಸಕರು, ಮತ್ತು ಐವರು ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಹೈಕೋರ್ಟ್‌ಗೆ ದೂರು ನೀಡಿದರು.

ಬಂಡಾಯ ಶಾಸಕರ ಅನರ್ಹತೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಸಾಕಷ್ಟು ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 18ರಂದು ಪರಸ್ಪರ ಒಮ್ಮತವಿಲ್ಲದ ನ್ಯಾಯತೀರ್ಮಾನಕ್ಕೆ ಬಂದರು. ನ್ಯಾ. ಖೇಹರ್ ಸ್ಪೀಕರ್ ಮಾಡಿದ್ದು ಸರಿ ಎಂದರೆ, ನ್ಯಾ. ಕುಮಾರ್ ಸ್ಪೀಕರ್‌ರ ಕ್ರಮದಲ್ಲಿ ಲೋಪವನ್ನು ಗುರುತಿಸಿದರು. ಹೀಗೆ ಒಮ್ಮತದ ತೀರ್ಪಿಲ್ಲದ ಕಾರಣವಾಗಿ ಈ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಯ ಅಭಿಪ್ರಾಯಕ್ಕಾಗಿ ನ್ಯಾ. ಸಭಾಹಿತರಿಗೆ ಕಳುಹಿಸಲಾಯಿತು.

ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನ್ಯಾ. ಸಭಾಹಿತರು ಅಕ್ಟೋಬರ್ 29ರಂದು ಮುಖ್ಯನ್ಯಾಯಮೂರ್ತಿ ಖೇಹರ್‌ರ ನ್ಯಾಯತೀರ್ಮಾನವನ್ನು ಅನುಮೋದಿಸಿದರು. ಇದರೊಂದಿಗೆ 2:1 ರ ಅನುಪಾತದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಸ್ಪೀಕರ್‌ರ ಕ್ರಮವನ್ನು ಎತ್ತಿಹಿಡಿದು 11 ಬಂಡಾಯ ಶಾಸಕರ ಅನರ್ಹತೆಯನ್ನು ಮಾನ್ಯಗೊಳಿಸಿತು. ಈ ಇಡೀ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವ ಅತಿಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಉಚ್ಚನ್ಯಾಯಾಲಯದ ದೃಷ್ಟಿಗೆ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯಲ್ಲಿ ಯಾವುದೇ ಅನೈತಿಕತೆ ಮತ್ತು ಅಕ್ರಮ ಕಾಣಿಸದೆ ಇದ್ದುದು.

ಅನರ್ಹಗೊಂಡ ಬಂಡಾಯ ಶಾಸಕರ ಜೊತೆಜೊತೆಗೆ ಅನರ್ಹಗೊಂಡ ಐವರು ಪಕ್ಷೇತರ ಶಾಸಕರೂ ಕೂಡ ಕರ್ನಾಟಕದ ಉಚ್ಚನ್ಯಾಯಾಲಯಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಅಬ್ದುಲ್ ನಜೀರ್, ಮತ್ತು ನ್ಯಾ. ಎಸ್. ಬೋಪಣ್ಣನವರ ಪೀಠವು ಸುದೀರ್ಘ ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವುದೇ ದುರುದ್ದೇಶದಿಂದ ನಡೆದುಕೊಂಡಿಲ್ಲ ಮತ್ತು ಅವರ ಕ್ರಮ ಸರಿ ಎಂಬ ತೀರ್ಪನ್ನು ಫೆಬ್ರವರಿ 15ರಂದು ನೀಡಿತು. ಇಲ್ಲಿ ಒತ್ತಿಹೇಳಬೇಕಾದ ಸಂಗತಿಯೆಂದರೆ ಈ ತೀರ್ಪು ಮೂವರು ನ್ಯಾಯಮೂರ್ತಿಗಳ ಒಮ್ಮತದ ನ್ಯಾಯತೀರ್ಮಾನವಾಗಿದ್ದದ್ದು.

ಹೀಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟಿನ ಆರು ನ್ಯಾಯಮೂರ್ತಿಗಳ ಪೈಕಿ ಐವರಿಗೆ ಸ್ಪೀಕರ್‌ರ ಕ್ರಮ ಮತ್ತು ನಡವಳಿಕೆಯಲ್ಲಿ ಯಾವುದೇ ಪಕ್ಷಪಾತ, ದುರುದ್ದೇಶ, ಮತ್ತು ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಕಂಡಿರಲಿಲ್ಲ.

ತಮಗೆ ಸಿಕ್ಕ ನ್ಯಾಯತೀರ್ಮಾನದಿಂದ ತೃಪ್ತರಾಗದ ಎಲ್ಲಾ 16 ಅನರ್ಹ ಶಾಸಕರು ದೆಹಲಿಯ ಸುಪ್ರೀಂಕೋರ್ಟಿಗೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದರು. ಈ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಪರಿಶೀಲಿಸಿದ ಅದೇ ದಾಖಲೆಗಳನ್ನು ಪುನರ್‌ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಕಬೀರ್ ಮತ್ತು ನ್ಯಾ. ಜೋಸೆಫ್ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ವ್ಯತಿರಿಕ್ತವಾದ ಅವಳಿ ತೀರ್ಮಾನವನ್ನು ನೀಡಿದರು. ಅಷ್ಟೇ ಅಲ್ಲದೆ, “ನೈಸರ್ಗಿಕ ನ್ಯಾಯ ಮತ್ತು ನ್ಯಾಯಯುತ ನಡವಳಿಕೆಯ ಅವಳಿ ತತ್ವಗಳ ಪರೀಕ್ಷೆಯಲ್ಲಿ ಸ್ಪೀಕರ್ ಬೋಪಯ್ಯನವರ ಆದೇಶ ಪಾಸಾಗುವುದಿಲ್ಲ. ಸಂವಿಧಾನದ 10ನೇ ಷೆಡ್ಯೂಲಿನಲ್ಲಿ ಕಾಣಿಸಲಾಗಿರುವ ಸಾಂವಿಧಾನಿಕ ನಡವಳಿಕೆಗಳು ಮತ್ತು 1986ರ ಅನರ್ಹತೆ ನಿಯಮಗಳನ್ನು ಉಲಂಘಿಸುವುದಷ್ಟೇ ಅಲ್ಲದೆ ನ್ಯಾಯಯುತ ವಿಚಾರಣೆಯ ಮೂಲತತ್ವವನ್ನು ಕೂಡ ಗಾಳಿಗೆ ತೂರಿದ ಸ್ಪೀಕರ್ ಮುಂದಿದ್ದ ಏಕೈಕ ಗುರಿ ಎಂದರೆ ಯಡಿಯೂರಪ್ಪ ಸರ್ಕಾರವನ್ನು ವಿಶ್ವಾಸಮತದ ಸಂಕಟದಿಂದ ಪಾರುಮಾಡುವುದು. ಸ್ಪೀಕರ್ ಮುಂದೆ ಪರಿಶೀಲನೆಗೆ ಇಟ್ಟಿದ್ದ ಪ್ರಕರಣಕ್ಕೆ ನೇರವಾಗಿ ಸಂಬಂಧ ಪಡದೇ ಇರುವಂತಹ ಬಾಹ್ಯ ಪರಿಗಣನೆಗಳು ಸ್ಪೀಕರ್ ಆದೇಶದ ಮೇಲೆ ಎದ್ದು ಕಾಣಿಸುತ್ತಿವೆ. ಇಂತಹ ಆದೇಶವನ್ನು ತಳ್ಳಿ ಹಾಕಲೇಬೇಕು,” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಸ್ಪೀಕರ್ ಕ್ರಮವನ್ನು ತಳ್ಳಿಹಾಕಿದ್ದೇ ಅಲ್ಲದೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೂಡ ಅಮಾನ್ಯಗೊಳಿಸಿದರು.

ಇದರೊಂದಿಗೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಅದರ ನ್ಯಾಯಮೂರ್ತಿಗಳ ಸಂವಿಧಾನವನ್ನು ಅರ್ಥೈಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ಪ್ರಶ್ನಿಸಿದಂತಾಗಿದೆ ಎನ್ನುವ ಅಭಿಪ್ರಾಯಕ್ಕೆ ಸದ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರು ಬರುವ ಹಾಗೆ ಆಗಿದೆ.

ಕರ್ನಾಟಕದ ಸಮಕಾಲೀನ ರಾಜಕೀಯ ವ್ಯವಸ್ಥೆ ಅತ್ಯಂತ ಭ್ರಷ್ಟವೂ, ಅನೈತಿಕವೂ, ಸ್ವಾರ್ಥಪೂರಿತವೂ ಆಗಿರುವುದನ್ನು ಕಳೆದ ನಾಲ್ಕೈದು ವರ್ಷಗಳ ಇತಿಹಾಸ ಸಾರಿ ಹೇಳುತ್ತಿದೆ. ಈ ಅನೈತಿಕತೆ ಮತ್ತು ಭ್ರಷ್ಟತೆ ರಾಜಕೀಯ ವಲಯಕ್ಕಷ್ಟೆ ಸೀಮಿತವಾಗದೆ ಬೇರೆಲ್ಲ ಸಾರ್ವಜನಿಕ ರಂಗಗಳಿಗೂ ವ್ಯಾಪಿಸುತ್ತ ಬಂದಿದೆ. ಇಂತಹ ನಿರಾಶಾದಾಯಕ ಸಂದರ್ಭದಲ್ಲಿ ಪ್ರಾಮಾಣಿಕರಿಗೆ ಮತ್ತು ದೇಶಪ್ರೇಮಿಗಳಿಗೆ ಉಳಿದಿದ್ದ ಏಕೈಕ ಭರವಸೆ ಎಂದರೆ ಅದು ನಮ್ಮ ಭ್ರಷ್ಟವಾಗಿಲ್ಲದಿದ್ದ ಮತ್ತು ಸಾಮರ್ಥ್ಯದಿಂದ ಕೂಡಿದ್ದ ನ್ಯಾಯಸ್ಥಾನಗಳು. ಈಗ ಮೇಲೆ ಉಲ್ಲೇಖಿಸಿರುವ ಪ್ರಕರಣಗಳಿಂದ ತಾವು ಇಟ್ಟುಕೊಂಡಿದ್ದ ಆ ಒಂದು ಭರವಸೆಯ ಬಗ್ಗೆಯೂ ನಾಗರಿಕರು ಸಂಶಯಾಸ್ಪದಿಂದ ನೋಡುವಂತೆ ಆಗಿದೆ. ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವ ಸಂಶಯ ಇವೆಲ್ಲದರಿಂದ ಗಟ್ಟಿಯಾಗದೆ?

ಸುಪ್ರೀಂಕೋರ್ಟ್ ಕಂಡಂತೆ ಅಕ್ರಮ ಆದೇಶ ಹೊರಡಿಸಿದ್ದ ಸ್ಪೀಕರ್‌ರ ಕ್ರಮ ರಾಜ್ಯದ ಹೈಕೋರ್ಟ್‌ನಲ್ಲಿ ಸಕ್ರಮವಾಗಿ ಮಾನ್ಯತೆ ಪಡೆದಿದ್ದರ ಹಿಂದೆ ಇರುವ ಕಾರಣಗಳಾದರೂ ಏನು? ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ ಜನರ ಪ್ರಜ್ಞೆಗೂ ಬಂದಿರುವ ನ್ಯಾಯಾಧೀಶರುಗಳ ಭ್ರಷ್ಟಾಚಾರವೆ? ಅಥವ, ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಸಮರ್ಥರೂ ನ್ಯಾಯಮೂರ್ತಿಗಳಾಗಿರುವುದೇ? ಅಥವ, ನ್ಯಾಯಮೂರ್ತಿಗಳ ವೈಯಕ್ತಿಕ ರಾಜಕೀಯ ನಿಲುವುಗಳೂ ಅವರು ಕೊಡುತ್ತಿರುವ ತೀರ್ಪಿನ ಮೇಲೆ ಪ್ರಭಾವ ಬೀರುತ್ತಿರುವುದೆ? ಅಥವ, ಅಧಿಕಾರರೂಢರ ಪರ ಇರುವುದರಿಂದ ತಮ್ಮ ಸವಲತ್ತುಗಳಲ್ಲಿ ಹೆಚ್ಚಳವಾಗುತ್ತದೆಯೆಂಬ ಸ್ವಹಿತಾಸಕ್ತಿಯೆ? ಒಟ್ಟಿನಲ್ಲಿ, ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವುದೇ?

ಈ ಪ್ರಶ್ನೆಗಳು ರಾಜ್ಯದಲ್ಲಿ ಈಗ ನಡೆಯುತ್ತಿರುವ ಎಲ್ಲಾ ರಾಜಕೀಯ ಘಟನೆಗಳಿಗಿಂತ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಕೂಡಲೇ ಸರಿಪಡಿಸಬೇಕಾದ ವಿಷಯಗಳಾಗಿವೆ. ನ್ಯಾಯಸ್ಥಾನದ ಬಗ್ಗೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಂದಿಗೂ ನ್ಯಾಯಮೂರ್ತಿಗಳದ್ದೇ ಆಗಿದೆ. ಅಲ್ಲವೆ?

ರವಿ ಕೃಷ್ಣಾ ರೆಡ್ಡಿ

ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?

ಅಣ್ಣಾ ಹಜಾರೆಯವರ ಮತ್ತವರ ಹೋರಾಟದ ಬಗ್ಗೆ ಹಲವರಿಗೆ ಹಲವು ಸಂದೇಹ ಮತ್ತು ಸಂಶಯಗಳಿರುವುದು ಸಹಜ. ಅದರಲ್ಲೂ ನಗರಕೇಂದ್ರಿತ ಮತ್ತು ಮಧ್ಯಮವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಹೋರಾಟ ನೈಜವಾದದ್ದಲ್ಲ, ಮಾಧ್ಯಮ ಸೃಷ್ಟಿ, ಎಂಬ ಗಂಭೀರ ಆರೋಪಗಳಿವೆ.

ನೆನ್ನೆ (17/8/11) NDTV ಯಲ್ಲಿ ಒಂದು ಜನಮತ ನಡೆಸಿದರು. ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ? ಎಂಬುದಾಗಿ. ಮೊಬೈಲ್‌ ಎಸ್‍ಎಂ‍ಎಸ್ ಮೂಲಕ ನಡೆದ ಜನಾಭಿಪ್ರಾಯ ಅದು. ಶೇ.55 ಜನ ಹೌದು ಎಂದರೆ, ಅಲ್ಲ ಎಂದವರು ಶೇ.45.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಯಾವುದೇ ಒಂದು ಜನಪರ ವಿಚಾರದ ಕುರಿತು ಗಂಭೀರ ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡಿರುವ ಹಲವಾರು ಜನ ಮತ್ತು ಸಂಘಟನೆಗಳು ಈ ಹೋರಾಟದಿಂದ ದೂರವೇ ಉಳಿದಿವೆ. ಇದು ಕೇವಲ ಕರ್ನಾಟಕದ ಉದಾಹರಣೆ ಮಾತ್ರವಲ್ಲ ಎಂದು ನಾವು ಕೆಲವು ಇಂಗ್ಲಿಷ್ ಚಾನಲ್‌ಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಯಾಕೆ ಹೀಗೆ? ಒಂದು ರೀತಿಯಲ್ಲಿ ನೈಜ ಹೋರಾಟಗಾರರು ಎನಿಸಿಕೊಂಡಿರುವವರೆಲ್ಲ ಈ ಹೋರಾಟದಿಂದ ವಿಮುಖರಾಗಿಯೇ ಉಳಿದಿದ್ದಾರೆ. ಕೊನೆಗೆ ವೃತ್ತಿಪರ ಹೋರಾಟಗಾರರೂ ಸಹ!

ಈ ಜನ ಹಗಲುರಾತ್ರಿ ಬೆವರು ಸುರಿಸಿ ಓಡಾಡುವವರು; ಸಂಘಟನೆ ಕಟ್ಟುವವರು; ಅವಕಾಶ ಸಿಕ್ಕ ಎಲ್ಲಾ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ, ಅಸಮಾನತೆಯ ವಿರುದ್ಧ ಮಾತನಾಡುವವರು. ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮದೇ ಆದ ಗಂಭೀರ ನಿಲುವುಗಳನ್ನಿಟ್ಟುಕೊಂಡಿರುವವರು. ಸಾಕಷ್ಟು ಬದ್ಧತೆ ಉಳಿಸಿಕೊಂಡವರು. ಕೇವಲ ಬಾಯಿಮಾತಿನ ಆಡಂಬರ ಅಲ್ಲದೆ ಚುನಾವಣೆಯಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು. ಕಡ್ಡಾಯವಾಗಿ ಮತ ಹಾಕುವವರು. ಹಾಗಿದ್ದಲ್ಲಿ ಇವರೇಕೆ ಈ “ಭ್ರಷ್ಟಾಚಾರದ ವಿರುದ್ಧ ಭಾರತ”ದ ಹೋರಾಟದಲ್ಲಿ ತೊಡಗಿಸಿಕೊಂಡಿಲ್ಲ?

ಇದು, ಈಗಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಹಿಪಾಕ್ರಸಿಯನ್ನು ಮತ್ತು ಅವರ ಇಲ್ಲಿಯವರೆಗಿನ ಬೇಜವಾಬ್ದಾರಿಯನ್ನು ನೋಡಿ ಅವರಲ್ಲಿ ನಂಬಿಕೆ ಇಲ್ಲದೆ ಆಗಿರುವ ಸಿನಿಕತೆಯೆ? ಅಥವ ಇಲ್ಲಿ ಅದಕ್ಕಿಂತ ಗಂಭೀರವಾದ ನಗರ-ಗ್ರಾಮೀಣ, ಮೇಲ್ವರ್ಗ-ಕೆಳವರ್ಗ, ಮೇಲ್ಜಾತಿ-ಕೆಳಜಾತಿ, ಇಂತಹುವುಗಳ ಹಿನ್ನೆಲೆಯಲ್ಲಿ ಹುಟ್ಟಿರುವ ಅಪನಂಬಿಕೆಯೆ?

ಈಗ ಒಂದಷ್ಟು ಜನ ಸ್ವಯಂ‍ಪ್ರೇರಿತರಾಗಿ ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಜನ, ವಿಶೇಷವಾಗಿ ಕಾಲೇಜು ಹುಡುಗರು, ಕೆಲವು ವಿದ್ಯಾರ್ಥಿ ಸಂಘಟನೆಗಳ ಒತ್ತಾಯದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಕೆಲವು ಲೆಟರ್-ಹೆಡ್ ಸಂಘಗಳ ಪದಾಧಿಕಾರಿಗಳು ಚಲಾವಣೆಯಲ್ಲಿ ಉಳಿಯುವ ಕಾರಣಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಇವರೆಲ್ಲರ ಬದ್ಧತೆ ಎಷ್ಟು ದಿನ? ಯಾವ ರೀತಿ?

ನನ್ನ ಪ್ರಕಾರ ಈಗಿನ ಚಳವಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅದೂ ನಗರಗಳಲ್ಲಿ ಬೆಂಬಲ ವ್ಯಕ್ತವಾಗಬೇಕಿತ್ತು. ಎಲ್ಲಾ ವಯೋಮಾನದ ಜನ ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಇದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡುತ್ತಿರುವವರು ಸಾವಿರಕ್ಕೆ ಒಬ್ಬರಿದ್ದಂತಿಲ್ಲ. ತ್ಯಾಗಕ್ಕೆ ಸಿದ್ದರಿಲ್ಲದ ಜನ ಬಾಯಿಮಾತಿನ ಬೆಂಬಲ ನೀಡುತ್ತಿದ್ದಾರೆ. ಯಾಕೆ?

ಜೊತೆಗೆ, ಈಗ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಚಿತ್ತಶುದ್ಧಿ ಎಷ್ಟರ ಮಟ್ಟಿಗೆ ಇದೆ? ಇದು ಅಣ್ಣಾ ಹಜಾರೆ ಎಂಬ ವ್ಯಕ್ತಿಯ ಪರವಾಗಿ ಮಾತ್ರವೇ? ಅಥವ ಕೇವಲ ರಾಜಕಾರಣಿ-ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಮಾತ್ರವೇ? ಅಥವ ಜನಲೋಕ್‌ಪಾಲ್ ಮಸೂದೆಯ ಜಾರಿಗಾಗಿ ಮಾತ್ರವೇ? ಅಥವ, ಅದಕ್ಕೂ ಮಿಗಿಲಾಗಿ, ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಾವೂ ಜವಾಬ್ದಾರಿತನದಿಂದ ಪಾಲ್ಗೊಳ್ಳುವ ನಿಟ್ಟಿನಲ್ಲಿ ತಮಗೆ ತಾವೇ ನೀಡಿಕೊಳ್ಳುತ್ತಿರುವ ವಚನವೆ?

ಹಾಗೆಯೇ, ಯಾಕಾಗಿ ಗ್ರಾಮೀಣ ಜನತೆ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕಾಣಿಸುತ್ತಿಲ್ಲ? ಅವರು ಭ್ರಷ್ಟಾಚಾರದ ಮೌನ-ಪೋಷಕರೆ, ಅಥವ ಈ ಚಳವಳಿಯನ್ನು ರೂಪಿಸಿರುವ ರೀತಿಯಲ್ಲಿಯೇ ದೋಷಗಳಿವೆಯೆ? ಮೇಣದ ಬತ್ತಿ ಹತ್ತಿಸುವುದು ಮತ್ತು ಪೆಂಡಾಲ್ ಕೆಳಗೆ ಕೂತು ಘೋಷಣೆ ಕೂಗಿ ಮಾತು ಕೇಳಿಸಿಕೊಂಡು ಎದ್ದು ಹೋಗುವುದು, ಗ್ರಾಮೀಣರಿಗೆ ಪರಕೀಯವಾಗಿ ಕಾಣಿಸುತ್ತಿದೆಯೆ?

ಗಾಂಧಿಜಿಯವರ ಹೋರಾಟದಲ್ಲಿ ಪಾಲ್ಗೊಂಡ ಜನ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲೂ ತೊಡಗಿಸಿಕೊಂಡರು. ಅನೇಕ ಜನ ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಂಡು ಹೊಸ ಆದರ್ಶಗಳನ್ನು ಮೈದುಂಬಿಸಿಕೊಂಡರು. ಈಗಿನ ಚಳವಳಿಯಿಂದ ಅದು ಸಾಧ್ಯವಿದೆಯೆ? ಈಗ ಬೀದಿಗೆ ಇಳಿದಿರುವವರು ಮುಂದಿನ ಚುನಾವಣೆಗಳಲ್ಲಿ ಕನಿಷ್ಠ ಪಕ್ಷ ಜಾತಿ-ಹಣ-ತೋಳ್ಬಲಗಳನ್ನು ಮೀರಿ ಮತ ಚಲಾಯಿಸಲಿದ್ದಾರೆಯೆ? ಕೊನೆಗೆ ಮತಗಟ್ಟೆಗಾದರೂ ಹೋಗಲಿದ್ದಾರೆಯೆ?

ಈಗಿನ ಚಳವಳಿಯನ್ನು ರೂಪಿಸುತ್ತಿರುವವರು ಈ ಮಾತುಗಳನ್ನು ಆಡದೇ ಇದ್ದಲ್ಲಿ ಮತ್ತು ಆ ನಿಟ್ಟಿನಲ್ಲೂ ಜನ ಜಾಗೃತಿ ಮೂಡಿಸದಿದ್ದಲ್ಲಿ ಇದೊಂದು ಕ್ಷಣಿಕ ಭಾವಾವೇಶದ ಪ್ರತಿಭಟನೆ. ಈ ತಲೆಮಾರಿನ defining-moment ಇನ್ನೂ ಬಂದಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಹಾಗಾದಲ್ಲಿ ಅದೊಂದು ದುರಂತಗಳ ನಾಳೆಯಾಗುತ್ತದೆ.

(ಚಿತ್ರ-ಕೃಪೆ : ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ.

“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

  • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
  • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
  • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
  • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ