Category Archives: ಸರಣಿ-ಲೇಖನಗಳು

ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್ : ಗಂಗೆ, ಗೌರಿ,.. ಭಾಗ–5

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ

ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್

ಒಕ್ಕಲು ಕೆಲಸಕ್ಕಾಗಿ ಹಸು ಕರುಗಳನ್ನು ಸಾಕಿದರೂ ಅದೇ ಹೊಲಗದ್ದೆಗಳಿಗೆ ಅವು ಮೂತಿಯಿಟ್ಟರೆ ಬೆಳೆದದ್ದು ಇಲ್ಲವಾಗುತ್ತದೆ. ಸಾಕಿದವರ ಮನೆಯ ಗದ್ದೆಯಾಗಲೀ, ಪರರದ್ದಾಗಲೀ ಬೆಳೆದ ಪೈರನ್ನು ನಾಶಮಾಡುವುದು ಅಪರಾಧವೆಂಬುದು ನಮ್ಮೆಲ್ಲರ ಸಮಾನಾಭಿಪ್ರಾಯ. ದೇವರೆಂದು ನಾವೇ ಹಟ್ಟಿಯಲ್ಲಿ ಕರೆಯುವ ಈ ಭಾಗ್ಯಲಕ್ಷ್ಮಿಗಳು ಬೆಳೆದು ನಿಂತ ನಮ್ಮದೇ ಅಥವಾ ಇನ್ಯಾರದೊ ಪೈರಿಗೆ ದಾಳಿಯಿಟ್ಟಾಗ ಅವುಗಳಿಗೆ ಸಿಗುತ್ತಿದ್ದ ಸಂಭಾವನೆಗೆ holy-cowಅವುಗಳ ಮೈಮೇಲಿನ 33 ಕೋಟಿ ದೇವತೆಗಳು ಏಕಕಾಲದಲ್ಲಿ ಎದ್ದು ಓಡಿಹೋಗಬೇಕು. ಮನೆಯ ಹಸುವಾದರೆ ಹಟ್ಟಿಯಲ್ಲಿಯೇ ಸ್ವಲ್ಪ ಮಿತವಾಗಿಯೇ ನಡೆಯಬಹುದಾದ ಈ ದಂಡನೆ ಪರರ ಹಸುವಾದರೆ ಸೆರೆಹಿಡಿದು ಕಟ್ಟಿ ರೋಷ ತೆಗೆಯುವಷ್ಟು ಬಡಿದು, ದೊಡ್ಡಿಗೆ ಕಟ್ಟಿ ಬರುವಲ್ಲಿಯವರೆಗೆ ಪ್ರಕಟವಾಗಬಹುದು. ಇನ್ನು ಕೆಲವೊಮ್ಮೆ ಸೆರೆಹಿಡಿಯುವ ಯತ್ನದಲ್ಲಿ ಅವುಗಳ ಕಾಲು ಮುರಿಯಬಹುದು. ಕತ್ತಿ ಎಸೆದು ಕಾಲು ಕಡಿಯುವುದೂ ಸಂಭವಿಸಬಹುದು, ಕಲ್ಲು- ದೊಣ್ಣೆಯಿಂದ ಬಡಿದು ಅಟ್ಟುವ ಬರಕ್ಕೆ ಪ್ರಾಣಕ್ಕೆ ಸಂಚಕಾರವೂ ಆಗಬಹುದು. ಹಾಗೆ ಆದುದೂ ಇದೆ. ಹೊಡೆದ ಕಲ್ಲೋ, ಇಟ್ಟ ಬಡಿಗೆಯೋ ಆಯಕಟಿನ ಜಾಗಕ್ಕೆ ಬಿದ್ದು ಅನುದ್ದೇಶಿತವಾದರೂ ಕೊಂದು ತೆಗೆದ ಉದಾಹರಣಗಳಿವೆ. ಗದ್ದೆಗೆ ಬಂದ ಹಸುವಿನಿಂದಾದ ಹಾನಿಗೆ ಪ್ರತಿಯಾಗಿ ಮನೆಯ ಹಸುಗಳನ್ನು ಅವರ ಮನೆಯ ಗದ್ದೆಗೆ ಬಿಟ್ಟುಕೊಂಡು ಕೊಲೆಯತನಕ ಸಂಘರ್ಷನಡೆದ ಸಂದರ್ಭಗಳೂ ನನ್ನ ಅಕ್ಕ-ಪಕ್ಕದೂರುಗಳಲ್ಲಿ ನಡೆದುದಿದೆ. ಹಸುಕರುಗಳು ಬಂದು ಮಾಡಿದ ದಾಳಿಯೇ ಹೇತುವಾಗಿ ಎರಡು ಮನೆಗಳು ಬೈದಾಡಿಕೊಂಡು ಆಣೆಭಾಷೆ ಹಾಕಿಕೊಂಡು (ಅಣ್ಣಪ್ಪನ/ಮಂಜುನಾಥನ ಹೆಸರು ಹೇಳಿಹಾಕುವ ಆಣೆ) ನೀರಿನ ಸಂಬಂಧ ಕಳೆದುಕೊಂಡವರೂ ಉಂಟು. ಏನು ಮಾಡಿದರೂ ದನ ಬಿಡುವವರು ಬಂದೋಬಸ್ತು ಮಾಡೋದಿಲ್ಲವೆಂಬ ಸಿಟ್ಟಿನಿಂದ ಬೆಳೆದ ಬೆಳೆಗೆ ಎಂಡೋಸಲ್ಫಾನ್ ಹೊಡೆದು ಹಸುಗಳು ಸತ್ತದ್ದೂ ಉಂಟು (ಗದ್ದೆಗೆ ಬರುವ ಕೋಳಿಗಳಿಗೆ ಇಲಿಪಾಷಾಣ ಕಲಸಿದ ಅನ್ನವನ್ನು ತೆಂಗಿನ ಚಿಪ್ಪಿನಲ್ಲಿಟ್ಟು ಕೊಲ್ಲುವಂತೆ). ಹಸುಬಿಟ್ಟವರ ಮೇಲಿನ ಸಿಟ್ಟನ್ನು ಹಸುಗಳ ಮೇಲೆ ತೀರಿಸಿ ಅವುಗಳನ್ನು ದಿಕ್ಕು ತಪ್ಪುವಂತೆ ಓಡಾಡಿಸಿಕೊಂಡು ಯಾವುದೋ ದಿಕ್ಕಿಗೆ ಎಬ್ಬುವುದರಿಂದ ಹುಲಿ-ಕುರ್ಕನ ಬಾಯಿಗೆ ತುತ್ತಾದ ಸಾಕಷ್ಟು ಉದಾಹರಣೆಗಳೂ ಹಿಂದೆ ಇದ್ದವು. ದಿಕ್ಕುತಪ್ಪಿ ಹಟ್ಟಿಗೆ ಬರದ ಹಸುಗಳನ್ನು ಕಳೆದುಕೊಂಡು ಅಂಡಲೆದು ಹುಡುಕುವಂತಾದ ಅನೇಕ ಪ್ರಸಂಗಗಳು ಇವೆ. ಯಾರ್‍ಯಾರನ್ನೋ ಕಣಿಕೇಳಿ ಜೀವಧನವನ್ನೇ ಕಳೆದುಕೊಂಡಂತೆ ಹುಡುಕಾಡಿ ಕಾಣದೆ ಕಂಗೆಟ್ಟುದಿದೆ, ಹುಡುಕಿ ನಿಟ್ಟುಸಿರು ಬಿಟ್ಟುದಿದೆ.

ನನ್ನೂರಿನ ಅನೇಕರಲ್ಲಿ ಹಸುಗಳನ್ನು ಬಂದೋಬಸ್ತ್ ಮಾಡುವುದಕ್ಕೆ ಸಂಬಂಧಿಸಿ ಅಸಡ್ಡೆಯೂ ಇದೆ. ಹೀಗೆ ಅಸಡ್ಡೆ ಮಾಡುವವರು ತಮ್ಮ ಹಸು-ಕರುಗಳಿಂದಾಗಿ ಹಗುರ ಮಾತುಗಳನ್ನು ಕೇಳುವುದನ್ನು ತಪ್ಪಿಸಿಕೊಳ್ಳಲಾಗದು. ಈ ಉದಾಸೀನತೆಯ ಕಾರಣದಿಂದ ಕಣ-ಮನೆ-ಗದ್ದೆಗಳಿಗೆ ಸ್ವಲ್ಪ ಮುಕ್ತವಾಗಿಯೇ ನುಗ್ಗುವ ಇವರ ಹಸುಕರುಗಳಿಂದಾಗಿ ಕೇಳಬಾರದ ಬೈಗುಳಗಳನ್ನೂ ಅಷ್ಟೇ ಮುಕ್ತವಾಗಿ ಕೇಳಬೇಕಾಗುತ್ತದೆ. ಅದು ಅನೇಕರಿಗೆ ಸ್ವಲ್ಪ ಅಭ್ಯಾಸವಾಗಿಯೂ ಉಂಟು. ನನ್ನ ಹತ್ತಿರದ ದಾಯಾದ್ಯರೊಬ್ಬರ ಈ ಸಂಬಂಧವಾದ ಅಜಾಗ್ರತೆ ಒಂದು ಮಳೆಗಾಲದ ಆರಂಭದಲ್ಲಿ ಸ್ವಲ್ಪ ದುಬಾರಿಯೇ ಆಯ್ತು. ಸಾಕಷ್ಟು ಬೇಸಾಯದ ಹೊಲವಿದ್ದ ಅವರಲ್ಲಿ ಊಳುವುದಕ್ಕೆಂದು ಗಟ್ಟಿಮುಟ್ಟಾದ ಆಳೆತ್ತರದ ಎರಡು ಕೋಣಗಳಿದ್ದವು. traditional-ploughing-india-buffaloesಅವು ಅಂತಹ ಕಾಟು ಸ್ವಭಾವದವುಗಳೂ ಆಗಿರಲಿಲ್ಲ. ಆದರೆ ಜಾನುವಾರು ಜಾತಿಯಲ್ಲವೇ? ಹಸಿರು ಕಂಡಲ್ಲಿಗೆ ಬಾಯಿ ಎತ್ತಿಕೊಂಡು ಹೋಗುವುದು ಸಹಜವೇ. ಪಾಪದ ಕೋಣಗಳಿಗೆ ಸಂಬಂಧಿಸಿದಂತೆ ಒಂದಾನೊಂದು ಮಳೆಗಾಲದ ದಿನದಲ್ಲಿ ಆಗಬಾರದ ಅನಾಹುತದ ಘಟನೆಯೊಂದು ಘಟಿಸಿಯೇ ಹೋಯಿತು. ಆ ಘಟನೆಯಲ್ಲಿ ನಡೆದುದಿಷ್ಟು. ನೇಜಿಗೆ ಪೂರ್ವದಲ್ಲಿ ಗದ್ದೆಯಗಳನ್ನು ಉಳುಮೆಮಾಡಿ ಮಣ್ಣು ಹದ ಮಾಡುವ ಸಲುವಾಗಿ ಅರ್ಕ್ಲ್‌ಹೂಂಟಿ ಅಂತ ನಮ್ಮೂರಕಡೆ ಮಾಡುವುದಿದೆ. ಗದ್ದೆಯಲ್ಲಿ ಬೆಳೆದ ಹುಲ್ಲುಕಸಗಳು ಮಳೆಗಾಲದ ನೀರಲ್ಲಿ ಕೊಳೆಯುವುದಕ್ಕೆ ಅನುಕೂಲವಾಗುವಂತೆ ಮಾಡುವ ಮೊದಲ ಉಳುಮೆಗಳಿವು. ಈ ಉಳುಮೆಗಾಗಿ ಎಂದಿನಂತೆ ಕೋಣದ ಮಾಲಿಕ ಅವುಗಳನ್ನು ಉಳುಮೆಗೆ ಒಯ್ದಿದ್ದಾನೆ. ಹೂಡಿಬಿಟ್ಟು (ಉಳುಮೆ ಮಾಡಿ) ದೈವದಮನೆಯ ಎದುರಿನ ಮಕ್ಕಿಯ (ಬೆಟ್ಟುಗದ್ದೆ) ಹೊಂಡದಲ್ಲಿ ಮೈತೊಳೆದು, ಹಾಗೆಯೇ ಮೇಯಲಿ ಎಂದು ಅಲ್ಲಿಯೇ ಬಿಟ್ಟ ಯಜಮಾನ ಮನೆಯ ಕಡೆಗೆ ಬಂದಿದ್ದಾನೆ. ಅವುಗಳೊ ಹಾಗೆಯೇ ಮೇಯುತ್ತಾ ಮತ್ತೊಬ್ಬ ದಾಯಾದ್ಯರ ಮನೆಯೆದುರಿನ ಅಗೆ ಹಾಕಿದ ಗದ್ದೆಗೆ ಇಳಿದಿವೆ. ವಯಸ್ಸು ಮೀರಿದ ಯಜಮಾನ ದೊಣ್ಣೆ ಸಮೇತವಾಗಿ ಇವುಗಳನ್ನು ಅಟ್ಟಿಸಿಕೊಂಡು ಬಂದಾಗ ಕಕ್ಕಾಬಿಕ್ಕಿಯಾಗಿ ಹೊಳೆಬದಿಯ ಕಡೆಗೆ ಅವು ಪೇರಿಕಿತ್ತಿವೆ. ಆ ದಿಕ್ಕಿಗೆ ಬಂದವುಗಳನ್ನು ಬೆನ್ನಟ್ಟಿಕೊಂಡು ಬಂದ ಅಜ್ಜನ ಗಂಟಲಿಗೆ ಹೆದರಿ ಹೊಳೆಹಾರಿದ ಕೋಣಗಳಲ್ಲಿ ಒಂದು ಮಾತ್ರ ಮತ್ತೆಲ್ಲೋ ದಡ ಸೇರಿತ್ತು. ಆದರೆ ಮತ್ತೊಂದು ಕೋಣ ಯಾವ ದಿಕ್ಕಿಗೆ ಹೋಯಿತೆಂಬುದೇ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಬಂದ ಹೋರಿ(ಕೋಣ)ಯ ಯಜಮಾನ ಬಯಲಿನಲ್ಲಿ ಸಿಕ್ಕಿದ ಒಂಟಿಕೋಣವನ್ನು ಹಟ್ಟಿಗೆ ಕಟ್ಟಿ ಮಿಕ್ಕಿದ್ದನ್ನು ಸಿಕ್ಕ ಸಿಕ್ಕ ಕಡೆ ಹುಡುಕಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ.

ದಿನಗಳು ಉರುಳಿದವು. ಹಟ್ಟಿಯಲ್ಲಿ ಕಟ್ಟಿದ ಒಂಟಿಕೋಣ ತನ್ನ ಸಂಗಾತಿಗಾಗಿ ಅಲ್ಲಿಂದಲೇ ಗೆಲೆಯ(ಕೂಗ)ತೊಡಗಿತು. ಮನೆಮಂದಿ ಊರೆಲ್ಲಾ ಹುಡುಕಿ ಕಾಣದೆ ನಿಮಿತ್ತ ಕೇಳಿದರು. ದೈವ ಆಳಿಕೆ ಮಾಡಿ ನುಡಿ ಕೇಳಿದರು. ಮಾತ್ರವಲ್ಲ ತುಂಬಿದ ಮಳೆಗಾಲದಲ್ಲಿ ಬೆಳೆದುನಿಂತ ಅಗೆ ಬೆದೆಯನ್ನು ಮಣ್ಣಿನಲ್ಲಿ ಸೇರಿಸಲಾರದೆ ಹಡುಬಿದ್ದುಹೋಗುವ ಆತಂಕದಲ್ಲಿ ನರಳಿದರು. ದೈವದ ಪಾತ್ರಿ, ನಿಮಿತ್ತದ ಜ್ಯೋತಿಷಿಗಳು ಇವರಲ್ಲಿ ಇದ್ದಬದ್ದ ಭರವಸೆಯೂ ಕಳೆದುಹೋಗುವಂತೆ ಮಾಡಿದರೆ ವಿನಹಾ ಪರಿಹಾರ ನೀಡಲಾಗಲಿಲ್ಲ. ಒಬ್ಬೊಬ್ಬರು ಒಂದೊಂದು ತರಹ ಮಾತಾಡಿದರು. ಊರೂರು ಸುತ್ತಿಯೂ ಕೋಣದ ಸುಳಿವೇ ಸಿಗಲಿಲ್ಲ.

ಘಟನೆ ನಡೆದ ನಾಲ್ಕೈದು ದಿನಗಳ ತರುವಾಯ ತುಂಬಿದ ಹೊಳೆಯಲ್ಲಿ ತೇಲಿಬರುವ ಕಟ್ಟಿಗೆಯ ದಿಮ್ಮಿಗಳನ್ನು ಒಟ್ಟು ಹಾಕಿಕೊಂಡುಹೋಗುವ ತಮ್ಮ ರೂಢಿಯಂತೆ ಕಂಡ್ಲೂರಿನ ಕೆಲ ಸಾಬರುಗಳು ದೋಣಿ ಪಾತಿಯೊಂದಿಗೆ ಬಂದಿದ್ದರು. ವಾರಾಹಿಯ ಎಡದಂಡೆಯಲ್ಲಿರುವ ಬೀಳು-ಬಲ್ಲೆಗಳಲ್ಲಿ ಸೌದೆ ಕೂತಿರುತ್ತದೆ ಎಂಬ ಆಸೆಯಲ್ಲಿ ಪಾತಿಯನ್ನು ತೆಗೆದುಕೊಂಡು ಬಿದಿರು ಮೆಳೆಯೊಂದರಲ್ಲಿ ದೋಣಿಯ ಜಲ್ಲೆಯನ್ನು ತುರುಕಿದಾಗ ದೀರ್ಘವಾಗಿ ಉಸಿರು ಬಿಟ್ಟಂತಾಗಿ ಖಾದರ್‌ಸಾಬ್ ಬೆಚ್ಚಿಬಿದ್ದ! Dog sits on buffalo who is cooling off in Ravi River in Lahoreತಕ್ಷಣ ಅದೊಂದು ಭೀಕರವಾದ ಹಾವಿರಬಹುದು ಎಂಬ ಆತಂಕಕ್ಕೆ ಒಳಗಾದ ಅಬ್ದುಲ್‌ ಖಾದರ್ ಹತ್ತಿರದಲ್ಲಿ ಲಭ್ಯವಿದ್ದ ಒಂದಿಬ್ಬರನ್ನು ಪಾತಿಯೊಂದಿಗೆ ಅಲ್ಲಿಗೆ ಬರುವಂತೆ ಕೂಗಿದ. ಪ್ರವಾಹದಲ್ಲಿ ತೇಲಿ ಬರುವ ಇಂತಹ ಹಾವುಗಳನ್ನು ಮುಟ್ಟಲು ಹೋಗುವುದು ಸ್ವಲ್ಪ ಆತಂಕಕಾರಿ. ಆದರೆ ನಂತರ ಸ್ವಲ್ಪ ಧೈರ್ಯ ಮಾಡಿಕೊಂಡು ದೋಣಿಯಲ್ಲಿಯೇ ನಿಂತು ಸರ್ಕಸ್ ಮಾಡಿ ಜಲ್ಲೆ ತೂರಿನೋಡುವಾಗ ಕೋಡಿಗೆ ಸಿಕ್ಕಿದ ಹಗ್ಗ ಬಿಡಿಸಿಕೊಳ್ಳಲಾರದೆ, ನೀರಿನಲ್ಲಿಯೇ ಕಾಲನ್ನೂ ಬಡಿಯಲಾರದ ನಿಸ್ತೇಜ ಸ್ಥಿತಿಯಲ್ಲಿರುವ ಕೋಣವನ್ನು ಕಂಡು ನಿರಾಳರಾಗಿ ತಮ್ಮ ಸೌದೆ ಕೆಲಸ ಮರೆತು, ಅದನ್ನು ಬಚಾವು ಮಾಡುವ ಕೆಲಸದಲ್ಲಿ ತೊಡಗಿಕೊಂಡರು. ಕೋಡಿಗೆ ಸಿಕ್ಕಿದ ಬೀಳಿನಿಂದ ಬಿಡಿಸಿಕೊಳ್ಳಲಾರದೇ ನೀರಿನಲ್ಲಿಯೇ ನಿಂತ ಕೋಣವನ್ನು ಅಲ್ಲಿಂದ ಬಿಡಿಸಿ ತೇಲಿ ಹೋಗದ ಹಾಗೆ ಹಗ್ಗವೊಂದನ್ನು ಬಳಸಿ ಕಟ್ಟಿಕೊಂಡು ದಡಕ್ಕೆ ತಂದರು. ಆದರೆ ಅವರಿಗೆ ಅದು ಯಾರ ಕೋಣ(ಹೋರಿ) ಎಂಬ ಮಾಹಿತಿಯಿರಲಿಲ್ಲ. ನಮ್ಮೂರಿನ ಕೋಣ ಕಳೆದು ಸುದ್ದಿಯನ್ನೂ ಆವರು ಬಲ್ಲವರಾಗಿರಲಿಲ್ಲ. ಯಾವ ಊರಿನ ಕೋಣವೊಂದು ಹೀಗೆ ತೇಲಿ ಬಂದು ಸಿಕ್ಕಿಹಾಕಿಕೊಂಡಿದೆ ಎಂಬುದನ್ನು ತಿಳಿಯದ ಅವರುಗಳು ಕಾಕತಾಳೀಯವಾಗಿ ಅದನ್ನು ನಮ್ಮಕಡೆಯ ಹೊಳೆಯದಡಕ್ಕೆ ತರಬೇಕಾಗಿ ಬಂದುದರಿಂದ ಆ ಸುದ್ದಿಯನ್ನು ನಮ್ಮೂರಿಗೆ ಮುಟ್ಟಿಸಿದರು. ಊರ ಕಡೆಗೆ ಬಂದು ಸಂಗತಿ ತಿಳಿಸಿದಾಗ ಇಲ್ಲಿಯವರೆಗೆ ಕೋಣ ಕಳೆದುಕೊಂಡು ಕಂಗಾಲಾಗಿದ್ದವರು ನಿಟ್ಟುಸಿರುಬಿಟ್ಟರು. ಅವರು ಮತ್ತು ಆ ಊರಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಅನೇಕರಿಗೆ ಅದೊಂದು ಸಾಹಸವಾಗಿ, ಉಪಕಾರವಾಗಿ ಏನೇನೋ ಆಗಿ ಕಂಡಿತು. ಅಂದಿನಿಂದ ಖಾದರ್ ಈ ಘಟನೆಯೇ ನಿಮಿತ್ತವಾಗಿ ನಿರಂತರ ಸಂಪರ್ಕ ಹೊಂದಿದ ವ್ಯಕ್ತಿಯಾಗಿ ಊರಿನ ನಂಬಿಕಸ್ತನಾದುದು ಮುಂದಿನ ಮಾತು.

ಹೊಳೆಯಿಂದ ಹೊರಬಂದರೂ 4-5 ದಿನಗಳಿಂದ ಒಂದೇ ಸಮನೆ ಸುರಿಯುವ ಮಳೆ, ಕಾಲಬುಡದಲ್ಲಿರುವ ತಂಡಿನೀರುಗಳ ನಡುವೆ ಸಿಕ್ಕಿ ತಿನ್ನುವುದಕ್ಕೆ ಏನೂ ಇಲ್ಲದೆ ನಾಲ್ಕು ಹೆಜ್ಜೆ ನಡೆಯಲಾರದ ಸ್ಥಿತಿಗೆ ತಲುಪಿದ ಕೋಣವನ್ನು ಆ ಮುಸಲ್ಮಾನ ಹುಡುಗರ ನೆರವಿನಿಂದ ಹಟ್ಟಿಗೆ ತಂದರು. ಕೋಣ ಕಳೆದುಕೊಂಡಿದ್ದ ನನ್ನ ದಾಯಾದ್ಯರಿಗೆ ಅದು ಯಾವ ಸ್ಥಿತಿಯಲ್ಲಿಯೇ ಇರಲಿ, ಮನೆಗೆ ಬಂತಲ್ಲಾ ಎನ್ನುವ ನೆಮ್ಮದಿಯ ಮುಂದೆ ಸ್ವರ್ಗವೂ ಆ ಕ್ಷಣದಲ್ಲಿ ಹಗುರವಾಗಿಯೇ ಕಂಡಿತ್ತು. ಈ ಘಟನೆ ನಡೆಯುವ ವೇಳೆ ನಾನು 5-6 ನೇ ತರಗತಿಯಲ್ಲಿದ್ದೆ. ಇದು ಕನಿಷ್ಠ 30 ವರ್ಷಗಳ ಹಿಂದಿನ ಕಥೆ. ಅಚ್ಚರಿಯೆಂದರೆ ಇಂದು ನಾವು ಕೇಳಿಸಿಕೊಲ್ಳುತ್ತಿರುವ ಹಾಗೆ ಎಲ್ಲೆಂದರಲ್ಲಿ ಸಿಕ್ಕ ಹಸು ಕೋಣಗಳನ್ನು ಕದಿಯುತ್ತಾರೆಂಬ ಆಪಾದನೆಯನ್ನು ಯಾರ ಮೇಲೆ ಹೊರಿಸಲಾಗುತ್ತಿದೆಯೋ, ಅವರೇ ನನ್ನ ದಾಯಾದಿಗಳ ಎತ್ತುಬೀಜವನ್ನು ಆ ವರ್ಷದ ಮಟ್ಟಿಗೆ ಉಳಿಸಿಕೊಟ್ಟಿದ್ದರು ಎಂಬುದನ್ನು ಹೇಳಲು ನನಗೆ ಯಾವ ಮುಜುಗರವೂ ಇಲ್ಲ. ಆದರೆ ಕೋಣದ ಸಿಕ್ಕಿದ ತಕ್ಷಣ ಸಮಸ್ಯೆಯೆಲ್ಲವೂ ಪರಿಹಾರ ಕಂಡಿರಲಿಲ್ಲ. ನೀರಿಗೆ ಬಿದ್ದ ಕೋಣ ಸಿಕ್ಕಿದ್ದರೂ, ಸೋತು ಹೋದ ಕೋಣನ ಹೆಗಲ ಮೇಲೆ ನೊಗ ಇಡುವ ಧೈರ್ಯ ಬರಬೇಕಾದರೆ ಮತ್ತೆ 10-12 ದಿನಗಳೇ ಸಂದು ಹೋದವು. ಬೆಳೆದು ನಿಂತ ಅಗೆಬೆದೆಗಳು ಗಂಟುಬೀಳ ತೊಡಗಿದವು. ಕೊನೆಗೂ ನಟ್ಟಿಯೆಂಬ ಶಾಸ್ತ್ರವನ್ನು ಮುಗಿಸುವಾಗ ಎರಡು ವಾರಗಳು ತಡವಾಗಿ ಆ ವರ್ಷದ ಅವರ ಸಾಗುವಳಿಯ ಫಸಲಿನ ಮೇಲೇನೇ ಹೊಡೆತಬಿತ್ತು. ಆದರೆ ಆ ಸಜ್ಜನಿಕೆಯ ಯುವಕರಿಂದಾಗಿ ಕೋಣದ ಮೇಲಿನ ಗಂಟು ವಾರಾಹಿ ಪಾಲಾಗುವುದು ತಪ್ಪಿತು. ಆರ್‍ಹೂಡಿ ಹೊಟ್ಟುಸುಟ್ಟು ಮಾಡಿದ ಸಾಗುವಳಿಯ ವಾರ್ಷಿಕ ದೀಕ್ಷೆ ಈಡೇರಿತ್ತು.

ನಿಂಗಮ್ಮನ ಹರಕೆ, ಸೂರಿದೇವರ ಗೂಳಿ : ಗಂಗೆ, ಗೌರಿ,..: ಭಾಗ–4

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ

ಉಳುವ ಎತ್ತು/ಕೋಣ ಕಳಿಹಾಕಿದರೆ, ಕರೆವ ಹಸು ಹಾಲಿಳಿಸದಿದ್ದರೆ, ಗಬ್ಬಕಟ್ಟಿ ಕರುಹಾಕದಿದ್ದರೆ, ಕಾಲುಕುಂಟಿದರೆ, ಕೈತಪ್ಪಿ ಹೋಗಿಯೇ ಬಿಟ್ಟಿತೆಂಬ ಕಾಯಿಲೆಗೆ ತುತ್ತಾದರೆ-ಹೀಗೆ ಹಸುಗಳ ಮೇಲೆಹರಕೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣಗಳು ಹಲವು. ನಾಗ, ಬೊಬ್ಬರ್ಯ, ಹೈಗುಳಿ, ಚೌಂಡಿ, ಕೀಳು ಹೀಗೆ ಸರದಿಯ ಮೇಲೆ ಹಟ್ಟಿಯ ಹಸುವಿನ ಮೇಲಿನ ಮೌಲು ಹಾಳಾಗದ ಹಾಗೆ ಕಾದುಕೊಡುವ ಸೈನಿಕರಿಗೆ ತೆಂಗಿನಕಾಯಿ, ಹಸುವಿನ ಹಾಲು,ಕೋಳಿ-ಪಾಳಿ ಇನ್ನು ಏನೇನೋ ಹರಕೆ ಹೇಳಿಕೊಂಡು ಸಂದಾಯ ಮಾಡಿ ‘ಚಾಷ್ಟಿ’ (ಚೇಷ್ಟೆ) ಆಗದ ಹಾಗೆ ಜಾಗೃತೆವಹಿಸದೆ ಹೋದರೆ ಹಟ್ಟಿ ಖಾಲಿಯಾದೀತೆಂಬ ಭಯ. Pongal-calfಈ ಭಯ-ಭಕ್ತಿಯ ಭಾಗವಾಗಿ ಅಮ್ಮನವರಮನೆಗೆ (ಈಗ ಅವುಗಳೆಲ್ಲಾ ಪರಮೇಶ್ವರಿಯ ದೇವಸ್ಥಾನಗಳಾಗಿವೆ!) ಹಸು ಕರುವನ್ನೇ ಬಿಡುವ ಕ್ರಮವೂ ಇದೆ. ಇದೊಂತರಹ ಹಸುಗಳ ಪಾಲಿಗೆ ವಿಮೆ ಮಾಡಿಸಿದ ಹಾಗೆ!

ನನ್ನ ಅಕ್ಕಪಕ್ಕದ ಮನೆಗಳೆರಡರಲ್ಲಿ ಎರಡು ಕುತೂಹಲಕಾರಿ ಹಸುಸಂಬಂಧಿ ಹರಕೆಗಳಿದ್ದವು. ಒಂದು ಮನೆಯಲ್ಲಿ ಕಮ್ರಸಾಲಿನಿಂಗಮ್ಮ (ಕಮಲಶಿಲೆ ಬ್ರಾಹ್ಮೀದುರ್ಗಾಪರಮೇಶ್ವರಿ!)ನ ಹೆಸರು ಹೇಳಿ ಬಿಟ್ಟ ಹರಕೆಯ ಚಾಲ್ತಿ ರೂಪವಿದೆ. ಇನ್ನೊಂದು ಮನೆಯಲ್ಲಿ ನಾನು ಮತ್ತೆಲ್ಲೂ ಕೇಳಿರದ ಸೂರೀ ದೇವರಿಗೆ (ಸೂರ್ಯ ದೇವರಿಗೆ) ಬಿಟ್ಟ ಹರಕೆ ನಡೆದುಕೊಂಡು ಬರುತ್ತಿತ್ತು ಮಾತ್ರವಲ್ಲ ಈಗಲೂ ಇದೆ. ನಿಂಗಮ್ಮನಿಗೆ ಹರಕೆಬಿಟ್ಟ ಹಸುವಿನ ಕರುಮರಿ ಮಾಡಿ ಕರಾವು ಮಾಡಿಕೊಂಡು ಉಣ್ಣುವುದಕ್ಕೆ ತೆರಿಗೆ ಕಟ್ಟುವ ಹಾಗೆ ವರ್ಷಕ್ಕೊಂದಾವರ್ತಿ ನಿಂಗಮ್ಮನಿಗೆ ಹಾಲು,ತುಪ್ಪ ಒಪ್ಪಿಸಿ ಕಾಸುರುಬಿ (ಕಾಸುರೂಪಾಯಿ) ಕಾಣಿಕೆ ಸಲ್ಲಿಸುವ ಕ್ರಮವಿತ್ತು. ಈ ಹಸುವಿನ ಹೆಣ್ಣು ಕರುಗಳೆಲ್ಲಾ ನಿಂಗಮ್ಮ ಕೊಟ್ಟ ಸಂತಾನವಾಗಿ ಆ ಹಟ್ಟಿಯಲ್ಲಿಯೇ ಹರಕೆಯ ನಿಯಮಕ್ಕೊಳಪಟ್ಟು ಸಾಕಲ್ಪಡುತ್ತಿದ್ದವು. ಆದರೆ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬಹುದು, ಇಲ್ಲವೇ ಅವುಗಳನ್ನು ‘ಯಾರಿಗಾದರೂ’ ಮಾರಿದರೆ ಮೌಲು ಹಾಕಬೇಕಾಗಿತ್ತು.

ನಿಂಗಮ್ಮನ ಹರಕೆಯಲ್ಲಿ ಹರಕೆ ಸಂದಾಯ ಮಾಡುವ ದಾರಿಯ ಬಗ್ಗೆ ಹೆಚ್ಚು ಗೊಂದಲ ಇರಲಿಲ್ಲ. ಆದರೆ ಸೂರೀದೇವರ ಹರಕೆಯ ಕರುಮರಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇರಲಿಲ್ಲ. ಈ ಹಸುವಿನ ಕರುಗಳನ್ನು ಮಾರುವುದಕ್ಕಿಲ್ಲ. ಹರಕೆ ಸಂದಾಯದ ಭಾಗವಾಗಿ ಬೆಳಿಗ್ಗೆ ಹಾಲು ಕರೆದು (ಹಾಲುತಿಂಡಿ) ಒಳತರುವಾಗ ಪಾತ್ರೆಯನ್ನು ಸೆರಗಿನಿಂದ ಮುಚ್ಚದೆ, ತೆರೆದುಕೊಂಡೇ ತರಬೇಕು. ಒಳತರುವ ಮುನ್ನ ತುಳಸಿಕಟ್ಟೆಯ ಎದುರಿಗೆ ಮೂಡುದಿಕ್ಕಿನ ಸೂರ್ಯನಿಗೆ ತೋರಿಸಿ, ಒಂದಿಷ್ಟು ಹಾಲನ್ನು ತುಳಸಿಬುಡಕ್ಕೆ ಬಿಟ್ಟು ನಂತರ ತಮ್ಮ ಉಪಯೋಗಕ್ಕಾಗಿ ಮನೆಯ ಒಳಕ್ಕೆ ಕೊಂಡೊಯ್ಯುವ ಕ್ರಮ ಹರಕೆ ಸಂದಾಯದ ದಿನಚರಿಯ ಭಾಗವಾಗಿತ್ತು. ಹಾಲು ಮಾರುವುದಕ್ಕೆ , ಮಜ್ಜಿಗೆ ಮೊಸರು ತಿನ್ನುವುದಕ್ಕೆ ತಕರಾರಿರದ ಈ ಹರಕೆಯಲ್ಲಿ ‘ಹಣ’ ಎಂಬುದರ ಪ್ರಶ್ನೆಯೇ ಇರಲಿಲ್ಲ. ಶುದ್ಧ ಆದಿಮಸ್ವರೂಪದ ವಿಕ್ರಯ ವಿಲೇವಾರಿಯಿರದ ಈ ಹರಕೆಯಲ್ಲಿ ಯಾವುದೇ ನಿರ್ದಿಷ್ಟ ದೈವ ಕೇಂದ್ರದ ಕಲ್ಪನೆಯೂ ಇಲ್ಲ. ವಸ್ತುರೂಪದ ಸಂದಾಯವೂ ಇಲ್ಲ.bull ಭಾವನೆಯ ಬುನಾದಿಯಲ್ಲಿ ಕಟ್ಟಲಾಗಿದ್ದ ಪರಿಹಾರದ ಸುಲಭದಾರಿಗಳಿಲ್ಲದ ಈ ಹರಕೆಯಲ್ಲಿ ಅಳಿದುಳಿದು ಬದುಕಿ ಬಿಡುವ ಗಂಡುಕರುಗಳದ್ದೇ ಸಮಸ್ಯೆ. ಅವುಗಳನ್ನು ಬೀಜ ಒಡೆಯುವಂತಿಲ್ಲ (ಶೀಲ ಮಾಡುವಂತಿಲ್ಲ). ಶೀಲಮಾಡದೆ ಉಳಲು ಬಳಸುವುದು ಅಷ್ಟು ಸುಲಭವಲ್ಲ. ಜೀವಿತದುದ್ದಕ್ಕೂ ಮನೆಯ ಹಟ್ಟಿಯಲ್ಲಿಯೇ ಅವನ್ನು ಉಳಿಸಿಕೊಳ್ಳಬೇಕಾಗಿತ್ತು. ಉಳಿದ ಹರಕೆಗಳಲ್ಲಿ ಅಂದರೆ ಧರ್ಮಸ್ಥಳದ ಅಣ್ಣಪ್ಪನಿಗೋ, ಹಿರಿಯಡಕದ ಅಬ್ಬಗದಾರಕನಿಗೋ ಬಿಡುವ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬೇಕಾಗಿರಲಿಲ್ಲ. ಅವುಗಳನ್ನು ಉಳುವವರಿಗೋ,ತಿನ್ನುವವರಿಗೋ ಮಾರಿ ಮೌಲು ಕಳಿಸಿದರೆ ಮುಗಿಯಿತು. ಅಣ್ಣಪ್ಪ ದೇವರಿಗೆ ಹರಕೆಬಿಟ್ಟ ಗಂಡುಕೋಳಿಯನ್ನು ಗೃಹಸ್ಥರು ಕಟ್ಟುವ ರೇಟಿಗೆ ಕೊಟ್ಟು ಮೌಲು ಕಳಿಸುವ ಕ್ರಮದಷ್ಟೆ ಸರಳವಿದು. ಆದರೆ ಸೂರೀದೇವರ ಹರಕೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ಮೇಲೆ ಹೇಳಲಾದ ಕಮ್ರಸಾಲಿ ಮತ್ತು ಸೂರೀದೇವರ ಹರಕೆಯ ಕುಡಿಗಳು ಈಗಲೂ ಆ ಎರಡು ಮನೆಗಳಲ್ಲಿ ಮುಂದುವರೆದುಕೊಂಡು ಬಂದಿವೆ. ನನ್ನ ದಾಯದ್ಯರೇ ಆದ ನನ್ನ ಪಕ್ಕದಮನೆಯಲ್ಲಿ ಕಮ್ರಸಾಲಿಗೆ ಬಿಟ್ಟದ್ದೆಂದು ಹೇಳಲಾಗುವ ರತ್ನು ಎಂಬ ದನವಿತ್ತು. ನನಗೆ ಬುದ್ಧಿ ಬರುವಾಗಲೇ 3-4 ಕರುಹಾಕಿ ಮುಗಿಸಿರುವ ಈ ಹಸು ದಿನಕ್ಕೆ 2-3 ಸಿದ್ದೆ ಹಾಲು ಕೊಡುತ್ತಿದ್ದ ಕಿರುಗಾತ್ರದ ಬೂದುಗೆಂಪು ಬಣ್ಣದ್ದು. ತಲೆಯ ಮೇಲೆ ಬೆಳ್ಳನೆಯ ಬೆರಳಿನಷ್ಟೇ ಉದ್ದದ ಅಲುಗಾಡುವ ಪುಟ್ಟ ಪುಟ್ಟ ಹಾಲುಗೋಡುಗಳನ್ನು ಹೊಂದಿದ್ದ ಈ ಹಸುವಿನ ಬಗೆಗೆ ಅಕ್ಕಪಕ್ಕದ ಮನೆಗಳಲ್ಲಿ ಒಳ್ಳೆಯ ಮಾತೆಂಬುದೇ ಇರಲಿಲ್ಲ. ಎಂತಹ ಬೇಲಿಯನ್ನಾದರೂ ಹಂದಿಯ ಹಾಗೆ ತೂರಿಕೊಂಡು ಕಳ್ಳನ ಹಾಗೆ ನುಗ್ಗಿ ಬಿಡುವ ಛಾತಿಯ ಹಸುವಿದು. ಈ ಹಸು ತಿಂದ ಬೆಳೆಗಳು ಅಲ್ಲಿಯೇ ಕಮರಿಹೋಗುತ್ತವೆ ಎಂಬುದಾಗಿ ಆಡಿಕೊಳ್ಳುತ್ತಿದ್ದ ಊರಮಂದಿ ಇದನ್ನು ಒಡುವಿನಂತೆ ಕಬರು ನಾಲಿಗೆಯದ್ದೆಂದೂ (ಉಡ/ಒಡು = ಅರಿಷ್ಟದ ಪ್ರಾಣಿ), ಅರಿಷ್ಟ ಹಿಡಿದದ್ದೆಂದೂ ಕರೆಯತ್ತಿದ್ದುದನ್ನು ಕೇಳಿದ್ದೇನೆ. ನನ್ನಪ್ಪನಂತೂ ಈ ದನವನ್ನು ಕಂಡರೇ ಕುದಿಯುತ್ತಿದ್ದುದನ್ನು ಕಂಡಿದ್ದೇನೆ. ನೋಡಲು ಪಾಪದ ನಿರುಪದ್ರವಿಯಂತೆ ಕಾಣಿಸುತತ್ತಿದ್ದ ಈ ದನ ನುಗ್ಗಿ ಬಾಯಿ ಹಾಕಿದ ಬೆಳೆ ಹಾಳಾಯಿತೆಂದೇ ಊರಲ್ಲನೇಕರು ಭಯಪಡುತ್ತಿದ್ದರು. ನಮ್ಮ ತಂದೆ ಹೊಳೆ ಬದಿಯಲ್ಲಿ ತಮ್ಮೆಲ್ಲಾ ಶ್ರಮ ಹಾಕಿ ಮಕ್ಕಳಂತೆ ಬೆಳೆಸಿದ ಮೆಣಸಿನ ಹಿತ್ತಲಿಗೆ ಎಂತಹದೇ ಬೇಲಿ ಮಾಡಿದರೂ ಈ ದನ ಅದನ್ನು ತಿನ್ನದೇ ಬಿಟ್ಟ ವರ್ಷವೇ ಇಲ್ಲ. ಹೆಚ್ಚು ವೇಗವಾಗಿ ಓಡಲಾರದ, decorated-bullಎಂತಹ ಬೇಲಿಯನ್ನಾದರೂ ನುಸಿಯುವ ಈ ದನ ತೊಂಡು ತಿನ್ನುವಾಗ ಸಿಕ್ಕಿದರೆ ಇದನ್ನೇನು ದೇವರಿಗೆ ಬಿಟ್ಟದನ ಎಂದು ಯಾರೂ ರಿಯಾಯಿತಿ ತೋರುತ್ತಿರಲಿಲ್ಲ. ಸಿಕ್ಕಿದಲ್ಲಿ ಬುಡ್ಡುಬುಡ್ಡು ಅಂತ ಹೇರುತ್ತಿದ್ದರು. (ಹೊಡೆಯುತ್ತಿದ್ರು). ಇಷ್ಟೆಲ್ಲ ಮಾಡಿ ಅದು ಕರೆಯುತ್ತಿದ್ದುದೇನೂ ಲೀಟರ್‌ಗಟ್ಟಲೆಯಾಗಿರಲಿಲ್ಲ. ಹಾಗಾಗಿ ಸಾಕಿದವರಿಗೆ ಕರೆಯುವ ಹಾಲಿನ ಪಾತ್ರೆ ತುಂಬಿಸದೆ ಹೋದರೂ ಕಿವಿತುಂಬ ಬೈಗುಳ ತುಂಬಿಸದೇ ಬಿಡುತ್ತಿರಲಿಲ್ಲ. ಗದ್ದೆಗಳಿಗೆ ನುಗ್ಗುವ ಪ್ರತೀ ಬಾರಿಯೂ ಶಾಪವನ್ನೇ ಬಳುವಳಿಯಾಗಿ ಪಡೆಯುತ್ತಿದ್ದ ‘ರತ್ನು’ ತನ್ನ ಮೈಯಲ್ಲಿ ಕಸುವು ಇರುವಲ್ಲಿಯವರೆಗೂ ಕಾಡುವುದನ್ನು ಬಿಡಲಿಲ್ಲ. ಜತೆಗೆ ಈ ಪುಣ್ಯಾತಗಿತ್ತಿ ಹಸುವಿನ ಬಳುವಳಿಯಾಗಿ ಬದುಕಿದ್ದು ಒಂದೋ ಎರಡೋ ಹೆಣ್ಣು ಕರುಗಳು ಮಾತ್ರ.. ಮತ್ತುಳಿದಂತೆ ಬದುಕಿದ ಕೆಲವು ಗಂಡುಕರುಗಳು ಮೌಲಾಗಿ ಪರಿವರ್ತಿಸಲ್ಪಟ್ಟು ನಿಂಗಮ್ಮನ ಕಾಣಿಕೆ ಹುಂಡಿ ಸೇರಿದುವು. ಕಸುವಿರುವ ತನಕ ಕಾಡುತ್ತಾ, ಕರುಹಾಕುತ್ತಾ ಬದುಕಿದ ರತ್ನು, ಮುದಿ ಅವಸ್ಥೆಯಲ್ಲಿ ತನ್ನ ಮೇಲೆ ಈ ಹಿಂದೆಬಿದ್ದ ಸಾಪುಳಿ (ಶಾಪದಉಲಿ) ಯನ್ನೆಲ್ಲಾ ತಾನೇ ಅನುಭವಿಸಿ ತೀರಿಸುವಂತೆ ಒಣಹುಲ್ಲು ಜಗಿಯಲಾರದೆ, ನಡೆಯಲು ತ್ರಾಸಪಡತೊಡಗಿತು. ಅದೇನು ದೊಡ್ಡಗಾತ್ರದ ಹಸುವಾಗಿರಲಿಲ್ಲ. ಒಂದಿಬ್ಬರು ಆರಾಮವಾಗಿ ಅದನ್ನು ಎತ್ತಿ ನಿಲ್ಲಿಸಬಹುದಿತ್ತು. ಆದರೆ ಆ ಒಂದಿಬ್ಬರು ಮನೆಯಲ್ಲಿ ಇರಬೇಡವೇ? ಇಲ್ಲಿಯವರೆಗೆ ನಿಂಗಮ್ಮನ ಹರಕೆಯ ಹೊರೆ ಅರ್ಥವಾಗದ ಮನೆಮಂದಿಗೆ ಹಟ್ಟಿಯಲ್ಲ್ಲಿಯೇ ಮಲಗಿ ಗಾಯವಾಗಿ ಹುಳಪಳ ಆಗಿ ನವೆಯತೊಡಗಿದಾಗ ಆದಷ್ಟು ಬೇಗ ಸಾವಿನ ಮೂಲಕವಾದರೂ ಅದರ ನೋವಿಗೆ ಪರಿಹಾರ ಸಿಕ್ಕಲಿ ಎಂದು ಬೇಡತೊಡಗಿದರು. ಒಂದೆರೆಡು ತಿಂಗಳು ಕೊರಗಿ ಕೊನೆಗೂ ಸತ್ತು ಹೋದ ರತ್ನುವನ್ನು ಹಟ್ಟಿಯಿಂದ ಕದಲಿಸಿ ಹಪ್ಪುಗಳ (ರಣಹದ್ದಿಗೆ) ಬಾಯಿಗೆ ಆಹಾರವಾಗಿಸಲು ಅದನ್ನು ಸಾಕಿ ಈಗ ಮುದಿಯಾಗಿ ಕುಳಿತ ಯಜಮಾನದಂಪತಿಯೇ ತ್ರಾಸ ಪಡಬೇಕಾಯಿತು. ಅದನ್ನು ಸಾಕಿದ ಕಾರಣದಿಂದಾಗಿ ಅದರ ಹಾಲಿಗಿಂತ ತುಸು ಹೆಚ್ಚೇ ಬೈಗುಳ ತಿಂದ ಆ ಮುದಿ ಗಂಡ-ಹೆಂಡತಿಯೇ ಒದ್ದಾಡಬೇಕಾಗಿ ಬಂತು. ಅದು ಅನಿವಾರ್‍ಯವೂ ಹೌದು. ಯಾಕೆಂದರೆ ಅನ್ನ ಹುಡುಕುವ ಅನಿವಾರ್‍ಯತೆಯಲ್ಲಿ ಮನೆಯಲ್ಲಿ ಹುಟ್ಟಿದವರೆಲ್ಲಾ ಮನೆಯಲ್ಲಿಯೇ ಕೂರಲಾದೀತೆ? ಅಪ್ಪ-ಅಮ್ಮನನ್ನು ನೋಡಲು ವರ್ಷಕ್ಕೊಂದಾವರ್ತಿ ನೋಡಲು ಬರುವ ಅವರ ಮಕ್ಕಳಿಗೆ ಮುದಿರತ್ನುವನ್ನು ಸಾಕುತ್ತಾ ಕೂತುಬಿಡಿ ಎನ್ನಲಾದೀತೆ? ಅವರ ಹೊಟ್ಟೆ ಮತ್ತು ಆ ಹೊಟ್ಟೆಯಲ್ಲಿ ಮತ್ತೆ ಹುಟ್ಟುವವರ ಹೊಟ್ಟೆಗಳ ಪ್ರಶ್ನೆ ರತ್ನುವಿಗಿಂತಲೂ ಕಂಡಿತಾ ದೊಡ್ಡದಲ್ಲವೆ? ಅಂತೂ ನಿಂಗಮ್ಮನ ಹರಕೆಯ ಹಸು ಕೊನೆಗೂ ಹೆಣವಾಗಿ, ಮೂಳೆಯಾಗಿ ಹಾಡಿಯಲ್ಲಿ ಚದುರಿ ಹೋಯಿತು.

ಹಟ್ಟಿಯ ಹಸುವನ್ನು ಹುಲಿ ಹಿಡಿದು ತಿನ್ನುತ್ತಿದ್ದ ಕಾಲದಲ್ಲಿ ‘ಸೂರೀದೇವರೇ ನೀನೇ ಕಾದುಕೊಡು’ ಎಂದು ಹೇಳಿಕೊಂಡು ಆರಂಭಿಸಿದ ಹರಕೆಯೆಂಬಂತೆ ಪ್ರತೀತಿಯುಳ್ಳ ಹರಕೆಯನ್ನು ಪಾಲಿಸುತ್ತಿದ್ದ ಇನ್ನೊಂದು ಮನೆಯಲ್ಲಿ ಹುಟ್ಟಿದವುಗಳಲ್ಲಿ ಸತ್ತು-ಬದುಕಿ ಅಂತೂ ಕೆಲವು ಕರುಮರಿಗಳಿದ್ದವು. ಈ ಹರಕೆಯ ಗಂಭೀರ ಪರಿಣಾಮವನ್ನು ಹರಕೆಯಾಚರಣೆಯ ಮನೆಯವರು, ಊರವರು ಅನುಭವಿಸುವಂತಾದುದು ಪಾಪದ ಹೆಣ್ಣುಕರುಗಳಿಂದಲ್ಲ. ಬದಲಾಗಿ ಶೀಲಮಾಡಲು ನಿಷೇಧವಿರುವ ಕಾರಣಕ್ಕಾಗಿ ಸೊಕ್ಕಿದ ಗಂಡುಗೂಳಿಯಿಂದ. ಮೈಕೈ ತುಂಬಿಕೊಂಡು ಗುಟುರು ಹಾಕುತ್ತಾ ಗದ್ದೆ ಅಂಚುಗಳನ್ನು ತನ್ನ ಎಳೆಗೋಡುಗಳ ತೀಟೆಗೆ ಉದುರಿಸುತ್ತಿದ್ದ ಗುಡ್ಡನ(ಗೂಳಿಯ)ಕೋಡು ಮನುಷ್ಯರ ಕಡೆಗೆ ತಿರುಗಲು ಹೊರಟಾಗಲೇ ಅಪಾಯ ಆರಂಭವಾದುದು. ಸೊಕ್ಕಿನ ಈ ಗುಡ್ಡ ಗಾತ್ರದಲ್ಲಿ ಬಹಳವಾಗಿಯೇನು ಇರಲಿಲ್ಲ. ಹಾಗಿದ್ದೂ ಊರಿನ ಬೆದೆಹಸುಗಳ ಯಜಮಾನನಾಗಿ ಕಂಡವರ ಹಟ್ಟಿಗೆ ದಾಳಿಯಿಟ್ಟು ಪ್ರತಾಪ ತೋರಿಸಲು ತೊಡಗಿ, ಪ್ರಾಯದ ಎತ್ತುಗಳ ಜತೆಗೆ ಇದರ ಹೊ ಕೈ ನಿತ್ಯದ ಸಂಗತಿಯಾಯ್ತು. ರಾಜನಹಾಗೆ ಗುಟುರುಹಾಕುತ್ತಾ ಬೆದೆಬರಿಸಿದ ಹಸುಗಳಿಗೆಲ್ಲಾ ಹುಟ್ಟಿದವುಗಳು ಇದಕ್ಕಿಂತಲೂ ಚಿಕ್ಕ ಮಾವಿನಕಾಯಿ ಗಾತ್ರದ ಕರುಗಳೇ ಆದವು. ಆರಂಭದಲ್ಲಿ ಮನೆಮಂದಿಗೆ ತಕರಾರು ಮಾಡದಿರುತ್ತಿದ್ದ ಗುಡ್ಡ ಊರಲ್ಲಿರುವ ಮಕ್ಕಳು, ಹೆಂಗಸರ ಪಾಲಿನ ಆತಂಕವಷ್ಟೇ ಆಗಿತ್ತು. ಬರಬರುತ್ತಾ ಮನೆಮಂದಿಯೇ ಆದ ಬಚ್ಚಣ್ಣ, ಅಣ್ಣಪ್ಪಣ್ಣನಂತವರನ್ನು ಹೊರಳಾಡಿಸಿಕೊಂಡು ಗುದ್ದಿತು. ಬೆದೆಗೆ ಒಂದು ಬೀಜದ ಗುಡ್ಡವಿದೆಯಲ್ಲಾ ಎಂಬ ನೆಮ್ಮದಿಯ ನಡುವೆಯೇ ಇದರ ಉಪಟಳಕ್ಕಾಗಿ ಇಷ್ಟು ದಿನ ಊರ ಮಂದಿ ಬೈಯುತ್ತಿದ್ದರು. ಈಗ ಮನೆಮಂದಿಯೂ ಅದರ ಮೇಲೆ ವ್ಯಗ್ರರಾಗತೊಡಗಿದರು. bull-Jallikattuಒಮ್ಮೆ ಮನೆ ಹುಡುಗನೊಬ್ಬನ ಎಡವಟ್ಟಿನಿಂದ ಈ ಗೂಳಿಯಿರುವ ಹಟ್ಟಿಗೆ ಬಲಿಪಾಡ್ಯದಂದು ರಾತ್ರಿ ಬೆಂಕಿ ಬಿದ್ದಿತ್ತು. ಆಗ ಪ್ರಾಣ ರಕ್ಷಣೆಗಾಗಿ ಹಟ್ಟಿಯಲ್ಲಿರುವ ಹಸುಗಳ ಕೊರಳ ಬಳ್ಳಿಯನ್ನು ಕತ್ತರಿಸಿ ಬಿಡಲಾಯಿತು. ಈ ವೇಳೆಯಲ್ಲಿ ಹಟ್ಟಿಯಿಂದ ಹೊರಬಂದ ಆ ಗೂಳಿ ಇತರ ಹಸುಗಳೊಂದಿಗೆ ನಮ್ಮ ಹಿತ್ತಿಲಿಗೆ ನುಗ್ಗಿತ್ತು. ಅದು ಹಿತ್ತಲಲ್ಲಿದ್ದುದನ್ನು ಅರಿಯದ ನನ್ನಮ್ಮ ಕತ್ತಲೆಯಲ್ಲಿ ಅವುಗಳನ್ನು ಹೊರಗಟ್ಟಲು ಹೋಗಿ ಅಪಾಯಕ್ಕೆ ಸಿಕ್ಕಿದ್ದಳು. ಈ ಗೂಳಿಯ ಉಪಟಳ ಹೀಗೆ ದಿನೇ ದಿನೇ ಏರುತ್ತಾ ಹೋಯಿತು. ಹಣವೇ ಇಲ್ಲದ ಹರಕೆ ಮನೆಮಂದಿಗೆ ಪರಿಹಾರವೇ ಕಾಣದ ಸಮಸ್ಯೆಯಾಗಿ ಕಾಡತೊಡಗಿತು. ಕೊನೆಗೊಂದು ದಿನ ಸಂಬಂಧವೇ ಇರದಿದ್ದರೂ ಪರಿಹಾರಕ್ಕ್ಕಾಗಿ ಊರದೈವದ ದರ್ಶನದಲ್ಲಿ ಕೇಳಿಕೆಯಾಯ್ತು. ಸಿಕ್ಕ ಪರಹಾರ ಅದಕ್ಕೊಂದು ಎಣೆ(ಜೋಡು)ಮಾಡಿ ಮಾರಿ ಮೌಲನ್ನು ತನ್ನ ಹುಂಡಿಗೆ ಹಾಕುವಂತೆ ಕೊಟ್ಟ ಆದೇಶವಾಗಿತ್ತು. ಎಲ್ಲಿಯ ಸೂರ್‍ಯ ಇನ್ನೆಲ್ಲಿಯ ಮಕ್ಕಿಯಲ್ಲಿ ಕೂತ ನಂದಿ? ಏನೇ ಆಗಲಿ ಕೊನೆಗೂ ಹರಕೆಯ ಮನೆಯವರಿಗೆ ಪರಿಹಾರ ಸಿಕ್ಕಿದ ನೆಮ್ಮದಿ. ಮನೆಯವರಿಗಿಂತ ಹೆಚ್ಚಾಗಿ ಊರಿನ ಮಕ್ಕಳುಮರಿ, ಹೆಂಗಸರು ಅದು ಓಡಿಸಿಕೊಂಡು ಬರುವಾಗಿ ಸೀರೆಯೆತ್ತಿಕೊಂಡು ಓಡುವ ದಾರಿ ಹುಡುಕಬೇಕಾದ ಸ್ಥಿತಿ ತಪ್ಪಿದಕ್ಕಾಗಿ ಖುಷಿಪಟ್ಟರು. ಈ ಸಂಕಟಕಂಡು ಸೂರೀದೇವರಿಗೆ ಸಂಕಟವಾಯಿತೊ ಏನೋ. ಮತ್ತೆ ಅಂತಹ ಇನ್ನೊಂದು ಕಂಟಕ ಆ ಹಸುಗಳ ಒಡಲಿನಿಂದ ಹುಟ್ಟಿದರೂ ಬದುಕಲಿಲ್ಲ. ಆದರೆ ಅಲ್ಲಿಯೇ ಕಾಣುವಂತಾದ ಗೊಡ್ಡು ಹಸುವೊಂದನ್ನು ಗಬ್ಬ ಕಟ್ಟಿಸುವಲ್ಲಿ ಸೋತು, ಹಡ್ಲು-ಪಡ್ಲು ಎಳೆಸಿ ಏನೂ ಮಾಡಲಾರದೆ ಹರಕೆ ಹೊತ್ತ ಕಾರಣಕ್ಕಾಗಿ ಶಾಪಹಾಕಿಕೊಳ್ಳುತ್ತಾ ಐದು ನಯಾ ಪೈಸೆ ಪ್ರಯೋಜನ ಕಾಣದೆ ಬದುಕಿನುದ್ದಕ್ಕೂ ಸಾಕಿ ಸೈ ಎನಿಸಿ ನಿಟ್ಟುಸಿರುಬಿಟ್ಟರು.

ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು : ಗಂಗೆ, ಗೌರಿ,..: ಭಾಗ–3

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು

ಭಾಗ – 3 : ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ನಾನು ಕಂಡಂತೆ ನಮ್ಮ ಹಟ್ಟಿಯಲ್ಲಿ ಉಳುವುದಕ್ಕೆ ಕೋಣ/ಎತ್ತು, ಹಾಲಿಗಾಗಿ ಕೆಂಪಿದನ ಮತ್ತು ಚಿಕ್ಕು ಎಮ್ಮೆಗಳು ಬಹಳ ಕಾಲದವರೆಗೆ ಇದ್ದುವು. ಈ ನಡುವೆ ಮೊಳಹಳ್ಳಿಯ ಮಾವಿನಕಟ್ಟೆಯಲ್ಲಿ ಹಾಲುಡೈರಿ ಬರುವುದು ಅಂತಾದಮೇಲೆ ಅದರ ಪರವಾಗಿ ಮತ್ತೊಂದು ಎಮ್ಮೆ ತಂದೆವು. ಬೆಳ್ಳಗಿದ್ದ ಆ ಎಮ್ಮೆಯನ್ನು ಬೆಳ್ಳಿಎಂದು ಕರೆಯುತ್ತಿದ್ದೆವು. ಅದಕ್ಕಿಂತ ಮುಂಚೆ ಇದ್ದ ಚಿಕ್ಕುವಿಗಿಂತ ಗುಣದಲ್ಲಿ ಅದು ಸ್ವಲ್ಪ ಒಳ್ಳೆಯ ಎಮ್ಮೆ. ಎರಡು ಎಮ್ಮೆಗಳನ್ನು ಕಟ್ಟಿ ಸಾಕುವುದು ದುಸ್ತರವಾಗಿ ಚಿಕ್ಕು ಎಮ್ಮೆಯನ್ನು ಯಾರಿಗೋ ಮಾರಿಬಿಟ್ಟೆವು. ಈ ನಡುವೆ 6 ವರ್ಷಗಳವರೆಗೆ ಬೆಳ್ಳಿಯ ಕಾರುಬಾರು ನಡೆಯಿತು. ಆದರೆ ಅದರ ಒಂದೇ ಒಂದು ಕರುವನ್ನು ಉಳಿಸಿಕೊಳ್ಳಲಾಗಲಿಲ್ಲ. ಎಮ್ಮೆಕರುಗಳ ಕಿರುಕೋಡುಗಳು ಕಿವಿಯ ಮೂಲವನ್ನು ಕಳೆಯುವುದಕ್ಕಿಂತ ಮುಂಚಿತವಾಗಿಯೇ ಅವು ಹೊಟ್ಟೆಬಾತುಕೊಂಡೋ, ಕಾಲುಸೋತೋ, ಸಗಣಿಗಟ್ಟಿಯಾಗಿಯೋ, ಇನ್ನು ಏನೇನೋ ಆಗಿ ಸತ್ತು ಬಿಡುತ್ತಿದ್ದವು. ಕಣ್ಣ್ಹೆಡಿಗೆ(ಬೀಳಿನಹೆಡಿಗೆ)ಯಲ್ಲ್ಲಿ ಹಾಕಿಕೊಂಡು ನೇರಳಜಡ್ಡಿಗೆ ಕರುಗಳನ್ನು ಎಳೆದು ಹಾಕುವಾಗಲೇ ಒಂದಾದರೂ ಬದುಕಿದ್ರೆ ಒಳ್ಳೆಯದಾಗಿತ್ತು ಎಂದು ಆಸೆ ಕಣ್ಣಿನಿಂದ ನೋಡುವುದಷ್ಟೇ ನಮ್ಮ ಪಾಡಾಗಿತ್ತು. ಅಂತೂ ಈ ಸಾವಿನ ಸಾಲಿನ ನಡುವೆ ಒಂದು ಎಮ್ಮೆ ಕರು, ಅದೂ ಹೆಂಗರುವೊಂದು ಉಳಿದುಕೊಂಡು ಬಿಡ್ತು. ಪ್ರೀತಿಯ ಕರುವಿಗೆ ಮನೆಯ ಕಿರಿಮಗಳಿಗೆ ಇದ್ದ ಹೆಸರನ್ನೇ ಇಟ್ಟು ಹುಲ್ಲು ತಿನ್ನಿಸಿ, ಹಿಂಡಿಕೊಟ್ಟು ಅದರ ಚಿಕ್ಕ ಚಿಕ್ಕ ಕೋಡುಗಳು ಕಿವಿಯಬುಡಬಿಟ್ಟು ಮುಂದುವರೆಯುತ್ತಿದ್ದಂತೆ ನಮಗೆ ಯುದ್ಧಗೆದ್ದ ಸಂಭ್ರಮವಿತ್ತು. ಅದು ನಿಜವೂ ಆಗುವಂತೆ ಕರು ಮೈಕೈ ತುಂಬಿಕೊಂಡು ಬೆಳೆದೇ ಬಿಟ್ಟಿತ್ತು!

ಅದು ಬೆಳೆಯಿತು. ಬೆಳೆದು ಕರುವಾದದ್ದು ಕಡಸಾಯಿತು. ಈ ನಡುವೆ ಅದಕ್ಕೊಂದು ಕೆಟ್ಟ ಚಾಳಿ ಅಂಟಿಕೊಂಡಿತು. ಬಟ್ಟೆ ಕಂಡಿತೆಂದರೆ ಹುಲ್ಲನ್ನೂ ಬಿಟ್ಟು ಬಟ್ಟೆಯನ್ನು ಬಾಯಿಗಿಟ್ಟು ಅಗಿದು ಹಾಕುತ್ತಿತ್ತು. ಕಂಡವರು ತೊಳೆದು ಒಣಗಿಸಿದ ಬಟ್ಟೆ ತಿನ್ನುವುದಕ್ಕೆ ಯಾವಾಗ ತೊಡಗಿತೋ ಅಲ್ಲಿಂದ ಪೇಚಿಗಿಟ್ಟುಕೊಂಡಿತು. ಆಚೀಚೆ ಮನೆಯವರು ಎಮ್ಮೆಯ ಕರುವಿನ ಈ ಮಂಗಾಟಕ್ಕೆ ರೋಸಿ ಹೋಗಿ, ಸಾಕಿದವರಿಗೆ ಸೋಬಾನೆ ಹೇಳಲು ಶುರುಮಾಡಿದಾಗ ಈ ಚಾಳಿ ಬಿಡಿಸುವುದು ನಮ್ಮ ಪಾಲಿನ ಸವಾಲಾಯಿತು. ತಿನ್ನಲು ಬಟ್ಟೆಯನ್ನು ಎದುರಿಗೆ ಹಿಡಿದು ಮುಸುಡಿ ಒಡೆದು ಹೋಗುವಂತೆ ಹೊಡೆದು ನೋಡಿದೆವು. ಆದರೆ ನೆತ್ತರುಕಂಡದ್ದು ಬಂತಲ್ಲದೆ, ಚಾಳಿ ಬಿಡಿಸಲಾಗಲಿಲ್ಲ. ಬಟ್ಟೆಯೊಳಗಡೆ ಚೂರಿಮುಳ್ಳು ಇಟ್ಟುಕೊಟ್ಟೆವು. Cows-pastureಇದರಿಂದ ಆ ಬಟ್ಟೆಯನ್ನು ಹೊರಗೆ ಉಗಿಯಿತಲ್ಲದೆ ಚಾಳಿ ತಪ್ಪಲಿಲ್ಲ. ಕೊನೆಗೆ ಒಂದು ಮಹಾಸಾಹಸಕ್ಕೆ ಕೈ ಹಾಕಿದೆವು. ತಿನ್ನಲು ಬಟ್ಟೆಕೊಟ್ಟು ಅದರ ಕೆಳತುದಿಗೆ ಬೆಂಕಿಕೊಟ್ಟೆವು. ಬಟ್ಟೆ ಕೊಟ್ಟ ತಕ್ಷಣ ಸಿಹಿತಿಂಡಿ ಸಿಕ್ಕವರಂತೆ ಅರ್ಧಬಟ್ಟೆಯನ್ನು ನಮ್ಮ ಕಣ್ಣೆದುರೇ ಜಗಿಯಹತ್ತಿದ ಮೇಲೆ ಅದನ್ನು ಹೆದರಿಸುವುದಕ್ಕಾಗಿ ಬಟ್ಟೆಯ ಹೊರತುದಿಗೆ ಬೆಂಕಿ ಕೊಟ್ಟೆವು. ಬಾಯಿಯ ಬಟ್ಟೆಯನ್ನು ಉಗಿಯುವ ದಾರಿಕಾಣದೆ ಮತ್ತು ಇಲ್ಲಿಯವರೆಗೆ ಬೆಂಕಿಯಿಂದ ಅಂತಹ ಅನುಭವವನ್ನೇ ಹೊಂದಿರದ ಆ ಕೆಟ್ಟಚಾಳಿಯ ಎಮ್ಮೆಯಕರು ಬೆಂಕಿಯನ್ನೂ ಲೆಕ್ಕಿಸದೆ ಬಟ್ಟೆಯ ಚಂಡೆಯನ್ನು ಜಗಿಯತೊಡಗಿದ್ದರಿಂದ ಅದರ ಮುಖ ಮೂತಿ ಸುಟ್ಟುಹೋಗಿ ಕೊನೆಗೂ ಬಟ್ಟೆಯನ್ನು ಹೊರಕ್ಕೆ ಉಗಿಯಿತು. ಬೆಂಕಿ ಹಿಡಿದ ಬಟ್ಟೆಯನ್ನು ಹೊರಕ್ಕುಗಿದ ಮೇಲೆ ಬೇರೆ ಇನ್ನೊಂದು ಬಟ್ಟೆತುಂಡನ್ನು ಕೊಟ್ಟೆವಾದರೂ ಹೆದರಿದ ಎಮ್ಮೆಕರು ಬಟ್ಟೆಗೆ ಬಾಯಿಹಾಕಲಿಲ್ಲ. ಬಟ್ಟೆಯ ಮೇಲೆ ಹಾತೊರೆಯುವುದು ಕಡಿಮೆಯಾಯಿತೆಂಬ ಖುಷಿಯ ನಡುವೆಯೂ ನಮಗೆ ಇದರ ಪರಿಣಾಮದ ಬಗೆಗೆ ಭಯವಿತ್ತು. ಹಾಗಾಗಿ ಸುಟ್ಟಗಾಯಕ್ಕೆ ಏನೂ ಆಗದಿರಲಿ ಎಂದು ಒಂದಷ್ಟು ಎಣ್ಣೆ ಉದ್ದಿ ಅಪ್ಪನಿಗೆ ಹೇಳದೆ ಸುಮ್ಮನಾದೆವು. ಆದರೆ ಒಂದೆರಡು ದಿನದಲ್ಲಿ ನಮ್ಮ ಭಯ ನಿಜಗೊಂಡಿತ್ತು. ಸುಟ್ಟಗಾಯಕ್ಕೆ ನಾವು ಅಂದು ಲೇಪಿಸಿದ ಎಣ್ಣೆ-ಬೆಣ್ಣೆಗಳಿಂದ ಏನೂ ಉಪಯೋಗವಾಗದೆ ಬಾಯಿಯ ಕೆಳತುದಿಯ ಚರ್ಮದಹಾಸು ಸಿಪ್ಪೆಯಂತೆಯೇ ಕಳಚಿಬಂದಿತ್ತು. ಒಳಗಿನ ಮಾಂಸ ಬೆಂದುಹೋಗಿತ್ತು. ಸುಟ್ಟು ಚರ್ಮಕಳಚಿ ಉಂಟಾದ ಗಾಯದ ಮೇಲೆ ನೊಣಕುಳಿತು ಇಪ್ಪಿಹಾಕಿದ ಪರಿಣಾಮವಾಗಿ ಹುಳುವಾಯಿತು. ಹುಳುಗಳು ಮಾಡಿದ ತೂತಿನಿಂದ ನೆತ್ತರು ಸೋರಲು ಶುರುವಾಯಿತು. ಸೋರುವ ನೆತ್ತರಿಂದ ಗಾಬರಿ ಬಿದ್ದ ನಾವು ಅಪ್ಪನಿಗೆ ಹೇಳಿ ಒಂದಿಷ್ಟು ಬೈಸಿಕೊಂಡು ಮದ್ದುಮಾಡುವ ಬಗೆ ತಿಳಿದೆವು. ಕಳ್ಳಿಹಾಲು, ಕರಿಮದ್ದು ಹಾಕಿ ಹುಳ ತೆಗೆದು, ಮತ್ತೆ ನೊಣಕೂರದಂತೆ ಯಾವ್ಯಾವುದೋ ಎಣ್ಣೆ ಉದ್ದಿ ಸಹಜ ಸ್ಥಿತಿಗೆ ತರಬೇಕಾದರೆ ಸಾಕುಬೇಕಾಯಿತು. ಅಂತೂ ಕಂಡವರ ಬೈಗುಳಕ್ಕೆ ಕಡಸಿನ ಮೂತಿ ಸುಟ್ಟರೂ ಅದರ ಚಾಳಿಯನ್ನು ಪೂರ್ತಿಬಿಡಿಸಲಾಗಲಿಲ್ಲ. ದಕ್ಕಿದ್ದು ಕೆಲಮಟ್ಟಿನ ನಿಯಂತ್ರಣ ಸಾಧಿಸಿದ ಯಶಸ್ಸಷ್ಟೇ.

ಈ ಕೆಟ್ಟಚಾಳಿಯ ನಡುವೆಯೂ ಅದು ಬದುಕಿ ಉಳಿದ ಒಂದೇ ಕರುವಾದ ಕಾರಣ ಮತ್ತು ನಮ್ಮೊಂದಿಗೆ ತೋರುತ್ತಿದ್ದ ಸಲುಗೆಯ ಕಾರಣದಿಂದ ಅಕ್ಕರೆಯ ಕರುವೇ ಆಗಿತ್ತು. ಕೊಂಡಾಟದ ಕಡಸು ಹೋದಲ್ಲಿ ಬಂದಲ್ಲಿ ಮನೆಮಂದಿಯ ಅಕ್ಕರೆಯ ಬಳುವಳಿ ಅನಿಭವಿಸಿ ಹುಲುಸಾಗಿ ಬೆಳೆಯಿತು. ಬೆಳೆದದ್ದು ಜಾಸ್ತಿಯಾಗಿ ಚರ್ಬಿಸೊಕ್ಕಿದ ಅದಕ್ಕೆ ಗರ್ಭನಿಲ್ಲಲಿಲ್ಲ. ಈಗ ಅದರ ನೆಣಕರಗಿಸುವ ಸರದಿ. ಹುಲ್ಲು ಒಕ್ಕುವ ಕಲ್ಲುಕಟ್ಟಿ ಎಳೆಸಿದೆವು. ಹಡ್ಲುಒಕ್ಕಲು ಉಳಿದ ಎತ್ತು,ಕರುಗಳ ಜತೆಗೆಕಟ್ಟಿ ತಿರುಗಿಸಿದೆವು. ಮಾತ್ರವಲ್ಲ ಬೆದೆಬರಲು ಅನುಕೂಲವಾಗುವಂತೆ ಉದ್ದಿನಕಾಳು ನೆನೆಹಾಕಿ ಕಡೆದುಕೊಟ್ಟು ಅಮವಾಸ್ಯೆಯ ಎದುರಿಗೆ ಬೆದೆಗೆ ಕೂಗುವಂತೆ ಮಾಡಿದೆವು. ಹೇಳಿಕೇಳಿ ಅದು ಸಹಜರೂಪದಲ್ಲಿ ಹುಟ್ಟಿದ ಕರು. ಅದಕ್ಕೆ ಕೋಣವನ್ನೇ ಹುಡುಕಬೇಕಿತ್ತು. ದುರಾದೃಷ್ಟಕ್ಕೆ ಊರಲ್ಲಿ ಶೀಲವಾಗಿರದ ಬೀಜದ ಕೋಣಗಳಿರಲಿಲ್ಲ. ಊರಲ್ಲಿ ಕೋಣಗಳಿರದೆ ಪಕ್ಕದೂರಾದ ಗುಡಿಬೆಟ್ಟಿಗೆ ಹೋಗಿ ಯಾರದೋ ಮನೆಯ ಹಟ್ಟಿಯ ಹಿಂದೆ ಕಟ್ಟಿ ಗಬ್ಬ ನಿಲ್ಲುವಂತೆ ಮಾಡಿ ಅದರ ಚೊಚ್ಚಲ ಹೆರಿಗೆಯನ್ನು ಕಂಡೆವು.

ಹೀಗೆ ಅಕ್ಕರೆ, ಅವಸ್ಥೆಗಳ ನಡುವೆ ಮನೆಯಲ್ಲಿಯೇ ಹುಟ್ಟಿನೆರೆದ ಕರು, ಎಮ್ಮೆಯಾಗಿ 8-10 ಕರುಗಳನ್ನು ಹಾಕಿದರೂ ಅವುಗಳಲ್ಲಿ ಒಂದೇ ಒಂದು ಕರುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆದೆಗೆ ಬಂದಾಗ ಮೈಮೇಲೆ ಏರಿ ಬಂದಂತೆ ತೊಕ್ಕಲಿಗೆ ಹಾತೊರೆಯುವ ಎಮ್ಮೆಗೆ ಬೆದೆಕೋಣಗಳೇ ಬೇಕಾಗಿದ್ದವು. ಡಾಕ್ಟರ್ ಕೊಡುವ ಇಂಜಕ್ಷನ್‌ಗೆ ಗಬ್ಬಕಟ್ಟದೆ ಕೆಲವು ಸುಳಿ(ಸರದಿ)ತಪ್ಪಿ ಹೋಗುತ್ತಿತ್ತು. ಹೇಗೋ ಕಷ್ಟಪಟ್ಟು ಅದರ ಬೆದೆ ಪೂರೈಸಿ ಹುಟ್ಟಿಸಿಕೊಂಡ ಕರುಗಳು 6-8 ತಿಂಗಳು ಬದುಕಿ ಯಾಕೋ ಏನೋ ಲೋಕಬಿಡುತ್ತಿದ್ದವು. ಈ ನಡುವೆ ಮೇಯಲು ಇದ್ದ ಬಿಡುಬೀಸಾದ ಜಾಗವೂ ದರಖಾಸ್ತುಗಳಿಂದಲೂ, ಕಬ್ಬಿನ ತೋಟಗಳಾದುದರಿಂದಲೂ ಕಡಿಮೆ ಬೀಳತೊಡಗಿತು. ಬಿಟ್ಟು ಮೇಯಿಸಿ ಹಟ್ಟಿಗೆ ಕಟ್ಟುವುದೇ ಬರುಬರುತ್ತಾ ತ್ರಾಸವಾಗತೊಡಗಿತು. ಎಮ್ಮೆಗೆ ವಯಸ್ಸಾಗುತ್ತಿದ್ದಂತೆ ಮನೆಯಲ್ಲಿ ಮಂದಿಯ ಸಂಖ್ಯೆಯೂ ಕಡಿಮೆಯಾಗತೊಡಗಿತು. ಉದ್ಯೋಗ ಹುಡುಕಿ, ಶಾಲೆಕಲಿತ ನಾವುಗಳು ಊರುಬಿಡುತ್ತಿದ್ದಂತೆ ಹೊತ್ತು ಹೊತ್ತಿಗೆ ಈ ಎಮ್ಮೆಯನ್ನು ಬಿಟ್ಟು ಕಟ್ಟುವ ಕ್ರಮಾನುಸರಣೆಯಲ್ಲಿ ಏರು ಪೇರುಗಳಾಗತೊಡಗಿತು. ಸಿಕ್ಕಷ್ಟು ಹೊತ್ತು ಬೇಸಿಗೆ-ಮಳೆಗಾಲವೆಂಬ ಭೇದವಿಲ್ಲದೆ ಹೊಳೆಬದಿಯಲ್ಲಿ ಒಂದಿಷ್ಟು ಮೇಯಿಸಿ, ವೈನಾಗಿ ಮೈತಿಕ್ಕಿ ಹಟ್ಟಿಯಲ್ಲಿ ಕಟ್ಟುವ ಜವಾಬ್ದಾರಿಯನ್ನು ಅಪ್ಪನೇ ನಿರ್ವಹಿಸುವಂತಾಯಿತು. ಹೀಗೆ ಮಾಡುವಾಗಲೆಲ್ಲಾ ಹೊಳೆ ನೋಡಿದ ತಕ್ಷಣ ಚಂಗುಬೀಳುವ ಎಮ್ಮೆ ಆಚೆ ಪೇರಿಕೀಳುವುದಕ್ಕೆ ಯತ್ನಿಸುವುದು, ಅಪ್ಪನಿಂದ ಹೊಡೆತ ತಿನ್ನುವುದು ಸಾಮಾನ್ಯ ಸಂಗತಿ. brahma-cow-indiaಅಪಾಯದ ಸಂಗತಿಯೆಂದರೆ ಅದು ಈ ಚಾಳಿಯನ್ನು ಮಳೆಗಾಲ-ಅರೆಗಾಲವೆಂಬ ಬೇದವಿಲ್ಲದೆ ತುಂಬಿದ ಹೊಳೆಯಲ್ಲಿಯೂ ಕಾರ್ಯರೂಪಕ್ಕೆ ತರುತ್ತಿತ್ತು. ಹೊಳೆ ತಡಿಯಲ್ಲಿಯೇ ಬದುಕಿದ ಅನುಭವ ಇರುವ ಅಪ್ಪನಿಗೆ ಹೊಳೆ ಮತ್ತು ಅದರ ನೀರು ಬಹಳದೊಡ್ಡ ಸಂಗತಿಯಾಗಿರಲಿಲ್ಲ. ಆಚೆಗೆ ಹೊರಟಾಗಲೋ, ಹೋದಮೇಲೆಯೋ ತಾನೇ ಕೊನೆಯಲ್ಲಿ ಈಜಿ ಈಚೆಗೆ ಹೊಡೆದುಕೊಂಡು ಬರುತ್ತಿದ್ದರು. ಅಪ್ಪನಿಗೆ 75 ರ ವಯಸ್ಸು ದಾಟುತ್ತಿರುವಂತೆ ಈ ಸಾಹಸ ದುಬಾರಿ ಎನಿಸತೊಡಗಿತ್ತು. ಹಾಳಾದ ಎಮ್ಮೆ ಹೊಳೆಬದಿಯಲ್ಲದೆ ಬೇರೆ ಎಲ್ಲಿಬಿಟ್ಟರೂ ಸೊಡ್ಡು ಕುತ್ತುತ್ತಿರಲಿಲ್ಲ. ಒಂದು ಹೊಳೆ ತುಂಬಿದ ದಿನ ಎಮ್ಮೆಯ ಯಥಾ ಪ್ರಕಾರದ ಜಲಪ್ರಯಾಣಕ್ಕೆ ಪ್ರತಿಯಾಗಿ ಅಪ್ಪ ತುಂಬಿದ ಹೊಳೆಗೆ ಹಾರಿ ಈಜಿಕೊಂಡು ಅದನ್ನು ಮರಳಿ ದಡಕ್ಕೆ ಎಬ್ಬುವ ಸಲುವಾಗಿ ಬಾಲಹಿಡಿದು ಬೆನ್ನಿಗೆ ಬಾರಿಸಿದ್ದೇ, ಅಪ್ಪನನ್ನು ಜಾಡಿಸಿ ಬಾಲತಪ್ಪಿಸಿಕೊಂಡು ಹಿಂತಿರುಗಿತು. ತುಂಬಿದ ಹೊಳೆ, ವಾರಾಹಿ ಯೋಜನೆಯ ಅಣೆಕಟ್ಟೆಯ ಹೆಚ್ಚುವರಿ ನೀರು ಬೇರೆ ಬಿಟ್ಟಿದ್ದರಿಂದ ಎರಡೂ ದಡಗಳು ಒಂದಾಗಿವೆ. ಅಪ್ಪನಿಗೆ ದಿಕ್ಕು ತಪ್ಪಿತು. ಹೊಳೆನೀರಿನ ಒಯ್ಲಿನಲ್ಲಿ ಹರೆಯ ಜಾರಿದ ಅಪ್ಪನ ತೊಡೆಯ ಬಲ ಸಾಕಾಗಲಿಲ್ಲ. ಕೈಕಾಲು ಬಲಿಯಲಾಗದೆ ತೇಲಿಹೋಗಿಯೇ ಬಿಟ್ಟರು. ಜೀವಮಾನ ಪೂರ್ತಿ ಹೊಳೆಯೆದುರಿಗೇ ಬೆಳೆದರೂ ತುಂಬಿದ ಹೊಳೆಯಲ್ಲಿ ಸಾಹಸ ಮಾಡಬಾರದ ವಯಸ್ಸಿನಲ್ಲಿ ಸಾಹಸಕ್ಕಿಳಿದ ಅಪ್ಪ ಹೇಗೋ ನೀರಿನಲ್ಲಿ ಬಚಾವಾಗುವ ದಾರಿ ಕಂಡುಕೊಂಡದ್ದರಿಂದ ಈಚೆಯ ದಡಕ್ಕೆ ಬರಬೇಕಾದವರು ಬರಲಾರದೇ ಹೋದರೂ, ತೇಲಿಕೊಂಡು ಯಾವುದೋ ಒಂದು ದಡಮುಟ್ಟಿ ಸುಧಾರಿಸಿಕೊಂಡರು. ದೋಣಿಯವನನ್ನು ಕರೆದು ದೋಣಿಯ ಮೂಲಕ ಈಚೆಗೆ ಬರುವಷ್ಟರಲ್ಲಿ ಹೊಳೆಯ ದಡಯೇರಿದ ಎಮ್ಮೆ ಬೈಲು ಹತ್ತಿಕೊಂಡು ಯಾರದೋ ಅಗೇಡಿಯಲ್ಲಿ ಅಗೆ(ಭತ್ತದಸಸಿ)ತಿನ್ನುತ್ತಿತ್ತು. ಅಪ್ಪನಿಗೆ ಎಮ್ಮೆಯನ್ನು ಕಾಣುತ್ತಲೇ ನೆತ್ತಿಗೇರಿದ್ದ ಕೋಪ ಮತ್ತಷ್ಟು ಹೆಚ್ಚಾಯಿತು. ‘ನನ್ನನ್ ಕೊಲ್ತಿದ್ಯಲೆ?’ ಎಂದು ಕೈಯಲ್ಲಿನ ಹೂಂಟಿಕೋಲಿಂದ ಎರಡು ಬಾರಿಸಿ, ಅದರ ಮೈಯನ್ನೂ ತೊಳೆಯದೆ ಹಾಗೆಯೇ ತಂದು ಹಟ್ಟಿಯಲ್ಲಿ ಕಟ್ಟಿ, ಮನೆ ಸೇರಿಕೊಂಡು ನಿಟ್ಟುಸಿರುಬಿಟ್ಟರು.

ಅಪ್ಪನಿಗೆ ತನ್ನ ಮೇಲೆ ಇಲ್ಲಿಯವರೆಗೆ ಇದ್ದ ಅಪಾರವಾದ ಭರವಸೆಯನ್ನು ಇನ್ನು ಮುಂದೆಯೂ ಈ ಎಮ್ಮೆಯ ಕಾರಣದಿಂದ ಪರೀಕ್ಷಿಸುತ್ತಲೇ ಹೋಗಬೇಕೆಂಬ ಉತ್ಸಾಹ ಕಡಿಮೆಯಾಗತೊಡಗಿತು. ವಯಸ್ಸುಕಳೆದರೂ, ಗಬ್ಬಕಟ್ಟಿ ಹಾಲುಕರೆಯುವ ನಿಯಮಿತತೆ ತಪ್ಪಿದರೂ ಎಮ್ಮೆಯ ಹಾರಾಟ ಕಡಿಮೆಯಾಗಲಿಲ್ಲ, ಜಾಸ್ತಿಯಾಗುತ್ತಲೇ ಹೋಯಿತು. ಹಟ್ಟಿಯಲ್ಲಿ ಹಾಕುವುದಾಗಲೀ, ಬಿಟ್ಟಾಗ ಸಿಕ್ಕುವುದಾಗಲೀ ಅದಕ್ಕೆ ಸಾಕೆನಿಸುತ್ತಿರಲಿಲ್ಲ. ಕಂಡಲ್ಲಿಗೆ ಓಡತೊಡಗುವ ಅದರಿಂದ ಬಹುದೊಡ್ಡ ಅಪಾಯ ಇರುತ್ತಿದ್ದುದು ಹೊಳೆಯ ಮೂಲಕ. ಈಗೀಗ ಅದರ ವೇಗಕ್ಕೆ ಸರಿಯಾಗಿ ಓಡಿ ಹೋಗಿ ಅಡ್ಡ ಹಾಕುವುದು ಅಪ್ಪನಿಂದ ಸಾಧ್ಯವಾಗುತ್ತಿಲ್ಲ. ನಿಯಂತ್ರಣಕ್ಕೆ ಕುಂಟಿಕಟ್ಟಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಕಾಲುಕುತ್ತಿಗೆಗೆ ಬಳ್ಳಿ ಹಾಕಿದರು. ಇದರಿಂದ ಅದರ ಓಟಕ್ಕೆ ಬ್ರೇಕ್ ಬಿದ್ದರೂ ಕಾಟಕ್ಕೆ ಬ್ರೇಕ್ ಹಾಕಲು ಆಗಲೇ ಇಲ್ಲ. ಮಾತ್ರವಲ್ಲ ಅದಕ್ಕಿರುವ ಹೊಳೆಹಾರಿ ಪೇರಿಕೀಳುವ ಹವ್ಯಾಸದ ವೇಳೆಯಲ್ಲಿಯೂ ಈ ಕಾಲುಕುತ್ತಿಗೆಗೆ ಹಾಕಿದ ಬಳ್ಳಿ ಅದರ ಜೀವಕ್ಕೂ ಅಪಾಯ ಎನಿಸತೊಡಗಿತು. ಈ ನಡುವೆ ಹೊಳೆದಾಟಿ ಹೋದಾಗ ಅಪ್ಪ ಜಾಗ್ರತೆ ಮಾಡಿ, ಸಾಹಸವನ್ನೂ ತೋರಿ ಅದನ್ನು ಹೇಗೋ ಹಟ್ಟಿಗೆಹೊಡಕೊಂಡು ಬರುತ್ತಿದ್ದರು. ಇದು ನಿತ್ಯದ ಕಾಯಕದಂತಾದಾಗ ಆಚೀಚೆಯವರು ಈ ಸಾಹಸಕ್ಕೆ ಕೊನೆಹಾಡಿ ಎಂದು ಅಪ್ಪನಿಗೆ ಬೈಯಲು ಶುರು ಮಾಡಿದರು. ಅವರಿಗೆ ವಯಸ್ಸಾದುದನ್ನು ನೆನಪಿಸಿ ಈ ಹುಚ್ಚಾಟ ಆಡದಂತೆ ಎಚ್ಚರ ಹೇಳಲು ಶುರುಮಾಡಿದರು. ನಮಗೂ ಆ ಎಮ್ಮೆಯನ್ನು ಇಷ್ಟು ದುಬಾರಿಯಾಗಿ ಪ್ರೀತಿಸುವುದು ಸಾದ್ಯವಿರಲಿಲ್ಲ. ಕೊನೆಗೂ ಅಪ್ಪ ಒಂದು ನಿರ್ಧಾರಕ್ಕೆ ಬಂದು ಅದನ್ನು ಕೊಟ್ಟುಬಿಡಲು ನಿರ್ಧರಿಸಿದರು.

ಹಾಲುಕರೆಯದ, ಗಬ್ಬಕಟ್ಟದ ಎಮ್ಮೆಯನ್ನು ಮಾರಬೇಕು ಯಾರಿಗೆ? ಪೈರಿನವರೋ, ಸಾಕುವವರೋ ಕೊಂಡ್ಕೊಂಡು ಮಾಡುವುದಾದರೂ ಏನನ್ನು? ಕೊನೆಗೂ ಆ ಎಮ್ಮೆಯ ಗಿರಾಕಿಯಾಗಿ ಅಪ್ಪನಿಗೆ ಸಿಕ್ಕಿದ್ದು ಕಂಡ್ಲೂರಿನ ಪರಿಚಿತ ಸಾಬಿಯೇ. ಚೌಕಾಸಿ ಮಾಡಿ ಒಂದು ರೇಟಿಗೆ ಒಪ್ಪಿಕೊಂಡು ಕಾಸನ್ನೂ ಕೊಡುವುದಾಗಿ ಸಂಚಕಾರಕೊಟ್ಟು ಮುಂದಿನವಾರ ಬರುವುದಾಗಿ ಹೇಳಿಹೋದ. ಆತ ಇನ್ನೊಬ್ಬನ ಜತೆಗೆ ಬಂದು ಯಥಾಪ್ರಕಾರ ಉಳಿದ ಹಣಕೊಟ್ಟು ಅಪ್ಪನಿಲ್ಲದ ವೇಳೆಯಲ್ಲಿ ಮನೆಯಲ್ಲಿರುವ ಅಮ್ಮ ಹಾಗೂ ನನ್ನ ಅಕ್ಕತಂಗಿಯರ ಅನುಮತಿ ಪಡೆದು ಹಟ್ಟಿಯಿಂದ ಎಬ್ಬಿಕೊಂಡು ನಡೆದ. ಹಟ್ಟಿಯಿಂದ ಹೊರಟು ಎರಡು ಫರ್ಲಾಂಗು ನಡೆದುಹೋಗುವುದರೊಳಗೆ, ತಾನು ಊಹಿಸಿಯೇ ಇರದ ಭೀಕರದಾಳಿಗೆ ಆತ ತುತ್ತಾಗುವಂತಾದುದು ನನ್ನೂರಿನ ಮೊದಲ ಆಕಸ್ಮಿಕ.!

ದನ, ಎಮ್ಮೆ, ಕೋಣ, ಎತ್ತುಗಳೆಂಬ ನಾಲ್ಕು ಕಾಲಿನ ಜಾನುವಾರುಗಳನ್ನು ಸಾಯುವ, ಸಾಕಲಾರದ ಸ್ಥಿತಿಯಲ್ಲಿ ಹೀಗೆ ಮಾರುತ್ತಿದ್ದುದು ಅದೇ ಮೊದಲಾಗಿರಲಿಲ್ಲ. Indian-Cow-calfಕೊನೆಯೂ ಆಗಿರಲಿಲ್ಲ. ನಾವೇ ಸಾಕಿದ ಕರು-ಕಡಸು-ಎಮ್ಮೆ ಎಲ್ಲವೂ ಆಗಿದ್ದೂ ನಮಗೆ ಅದಕ್ಕಿಂತ 75 ರ ಅಪ್ಪನೂ ಮುಖ್ಯವಾಗಿದ್ದರಲ್ಲವೇ? ನಮ್ಮಪ್ಪನಿಗೆ ಬೇರೆ ದಾರಿಯಿಲ್ಲದೆ ಕೊಡಲೇಬೇಕಾಗಿ ಕೊಟ್ಟ ಎಮ್ಮೆಯದು. ಅದಕ್ಕೆ ಪ್ರತಿಯಾಗಿ ನಮ್ಮ ಮನೆಯವರು ಕಾಸನ್ನೂ ಪಡೆದಿದ್ದರು. ಆದರೆ ನನ್ನೂರಿಗೆ ಪರಿಚಿತವೇ ಅಲ್ಲದ ಬೆಳವಣಿಗೆಯೊಂದು ಚುರುಕು ಪಡೆದುಕೊಳ್ಳುತ್ತಿದ್ದ ಕಾಲವದಾಗಿತ್ತು ಅಂತ ಕಾಣುತ್ತದೆ. ಅಲ್ಲಿ ಇಲ್ಲಿ ಗುಸುಗುಸು ಅನ್ನುತ್ತಿದ್ದ ಸಮಸ್ಯೆಯೊಂದು ನಮ್ಮ ಹಟ್ಟಿಗೆ ತಗುಲಿಕೊಂಡು ಅಂದು ನಡೆದು ಹೋಗಿತ್ತು. ಎಮ್ಮೆಯನ್ನು ಹೊಡೆದುಕೊಂಡು ಒಂದೆರಡು ಫರ್ಲಾಂಗು ಬರುವಷ್ಟರಲ್ಲಿ ನಿರಪರಾಧಿಯಾದ ಆ ಸಾಬಿ ಮತ್ತು ಆತನ ಸಹಚರನ ಮೇಲೆ ದಾಳಿ ಮಾಡಿದ ಈ ತಂಡ ಆ ಬೋಳುಗುಡ್ಡೆಯಲ್ಲಿ ನಿರ್ದಯವಾಗಿ ಕೇಳುವವರೇ ಇಲ್ಲದಂತೆ ಸಿಕ್ಕಸಿಕ್ಕಲ್ಲಿ ಬಾರಿಸಿತು. ಈ ಹೊಡೆತ ತಿಂದೂ ಆ ಸಾಬಿ ಮತ್ತು ಆತನೊಂದಿಗಿದ್ದ ಹುಡುಗ ಎಮ್ಮೆಯನ್ನು ಮರಳಿ ನಮ್ಮ ಹಟ್ಟಿಗೇ ತಂದು ಕಟ್ಟಿದರು. ನನ್ನ ಅಮ್ಮ ಮತ್ತು ಅಕ್ಕ ತಂಗಿಯರು ಹೇಳುವಂತೆ ಪೆಟ್ಟು ತಿಂದು ಬಾತುಕೊಂಡ ತನ್ನ ಕೆನ್ನೆಯನ್ನು ತೋರಿ ಆ ಮನುಷ್ಯ ಅತ್ತದ್ದು ಕರಳು ಕರಗುವಂತಿತ್ತು. ತಪ್ಪೇ ಮಾಡದ ತಮ್ಮ ಮೇಲೆ ಹೀಗೆ ದಾಳಿ ಮಾಡಬಹುದೇ ಎಂಬ ಪ್ರಶ್ನೆಗೆ ನನ್ನ ಮನೆಯಲ್ಲಿದ್ದವರಲ್ಲಿ ಅಂದು ಉತ್ತರವಿರಲಿಲ್ಲ. ಅವರಿಗೆ ಈ ನೋವಿನ ಜತೆಗೇ ಆ ಎಮ್ಮೆ ಮತ್ತೆ ಹಟ್ಟಿಗೆ ಬಂದದ್ದು ಮತ್ತಷ್ಟು ಚಿಂತೆಗಿಟ್ಟುಕೊಂಡಿತು. ನಮ್ಮದೇ ಅಕ್ಕರೆಯ ಎಮ್ಮೆ ನಮಗೆ ಅಂದು ನಿಶ್ಚಿತವಾಗಿಯೂ ಹೊರೆಯೆನಿಸಿತ್ತು. ಎಮ್ಮೆಯನ್ನು ಹಟ್ಟಿಯಲ್ಲಿ ಕಟ್ಟಿದ ಕೆಲಹೊತ್ತಿನಲ್ಲಿ ಬಂದ ಅಪ್ಪನಿಗೆ ಈ ಹೊಸ ಸಂಗತಿ ಕೇಳಿ ಸಿಟ್ಟುಬಂತು. ಹೀಗೆ ಎಮ್ಮೆಯನ್ನೂ, ಕೋಣವನ್ನೋ, ಎತ್ತಿನಗುಡ್ಡವನ್ನೋ ಅವರು ಮೊದಲನೆ ಬಾರಿ ಮಾರಿದುದಲ್ಲ. ಹಿಂದಣೆಯಲ್ಲಿ ಕಟ್ಟಲು ಜಾಗವಿಲ್ಲದಾಗ ಮುಂದಣೆಯಲ್ಲಿದ್ದು ಭಾರವಾಗುವಾಗ ಹಗುರವಾಗಲು ನನ್ನ ಅಪ್ಪನಿಗಾಗಲೀ, ಆ ಊರಿನ ಸುತ್ತಮುತ್ತಲಿನ ಎಲ್ಲರಿಗೂ ಇರುವ ಕೊನೆಯ ದಾರಿ ಇದೊಂದೇ ಆಗಿತ್ತು. ಅದು ಅವರ ಪಾಲಿಗೆ ಯಾವುದೇ ತೆರನಾದ ಕೃತಘ್ನತೆಯ ಕೆಲಸವೂ ಆಗಿರಲಿಲ್ಲ. ಹಾಗೆಯೇ ಅದನ್ನವರು ಉತ್ಸಾಹದಿಂದಲೂ ಮಾಡುತ್ತಿರಲಿಲ್ಲ. ಅಂತಹ ಯಾವುದೇ ನೀತಿಪಾಠವೂ ಅವರ ಹಟ್ಟಿಯ ಮತ್ತು ಹೊಟ್ಟೆಯ ಸಮಸ್ಯೆಯನ್ನು ನೀಗಿಸುತ್ತಿರಲಿಲ್ಲ. ಹಟ್ಟಿಯಲ್ಲಿ ಕಟ್ಟಿಕೊಳ್ಳಲಾಗದವುಗಳನ್ನು ಏನು ‘ಕೊರಳಿಗೆ ಕಟ್ಟಿಕೊಳ್ಳುವುದೇ?’ ಎಂಬ ಸರಳ, ನೇರಪ್ರಶ್ನೆ ಅವರದ್ದಾಗಿತ್ತು. ಸಾಬಿಗೆ ಬಿದ್ದಏಟು, ಏಟು ಕೊಟ್ಟ ಹುಡುಗರ ವಯಸ್ಸು ಕೇಳಿ ಅಪ್ಪ ಉರಿದುಹೋದರು. ‘ಇಪ್ಪತ್ತರಲ್ಲಿ ಯಜಮಾನ್ಕಿ ಸಿಕ್ಕುಕಾಗ, ಎಪ್ಪತ್ತರಲ್ಲಿ ಹೇಲು ಸುರುವಾಪ್ಕಾಗ’ ಎಂಬಂತೆ ಹಿರಿಯರು ಹೇಳುವ ಗಾದೆಯನ್ನು ಉಲ್ಲೇಖಿಸಿ, ‘ಅದ್ಯಾವುದಕ್ಕೊ ಯಜಮಾನಿಕೆ ಸಿಕ್ಕಿದರೆ ಮನೆಮಂದಿಗೆಲ್ಲಾ ಬಸುರು ಮಾಡುತ್ತದೆ’ ಎಂದು ಗುಟುರು ಹಾಕಿದ ಎಪ್ಪತ್ತೈದರ ಅಪ್ಪ ‘ಅದ್ಯಾವನು ಬಂದು ಹೊಡಿತಾನೆ ಬಾ ನಾನೇ ಬಂದು ಹೊಡೆದುಕೊಂಡು ಬರುತ್ತೇನೆ’ ಎಂದು ಸಾಬಿಗೆ ಧೈರ್ಯ ತುಂಬಿದರು. ಬರಿಯ ಧೈರ್ಯ ತುಂಬಿದ್ದಲ್ಲ. ಕಂಡ್ಲೂರಿನ ತನಕ ತಾವೇ ಸ್ವಯಂ ಆತನ ಜೊತೆಗೆ ಹೋಗಿ ಅಂತೂ ಆ ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ತೇಲಿಹೋಗುವ ಅಪಾಯದಿಂದ ಮುಕ್ತಿ ಕಂಡರು.

ಸಾಬಿ ಪೆಟ್ಟು ತಿಂದುದು, ಸಾಬಿಗೆ ಹೊಡೆದು ಪೌರುಷ ಮೆರೆದುದು ಎರಡೂಕಡೆ ಸುದ್ದಿಯಾಯಿತೇ ವಿನಹಾ ಸರಿ-ತಪ್ಪುಗಳ ವಿಮರ್ಶೆಗೆ ಒಳಪಡಲಿಲ್ಲ. ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ನಡೆಸಬೇಕಾಗಿದ್ದ ಸರ್ಕಸ್‌ನಿಂದ ಅಪ್ಪ ಪಾರಾದರು. ಇದೇ ಕಾರಣದಿಂದ ಪೆಟ್ಟುತಿಂದ ಅಪ್ಪನಿಗಿಂತ ತುಸು ಕಡಿಮೆ ಪ್ರಾಯದ ಮಾಲುಕೊಂಡಾತನೂ ಸುಮ್ಮನಾದ. ವಯಸ್ಕರಿಬ್ಬರ ನಡುವೆ ನಡೆದ ಈ ವ್ಯವಹಾರದಲ್ಲಿ ತಲೆಹಾಕಿ ತಮ್ಮ ತಮ್ಮ ಸಂಸ್ಕೃತಿ ಪರಂಪರೆಯ ರಕ್ಷಣೆಗಾಗಿ ಹೊಡೆದಾಟಕ್ಕೆ ನಿಂತವರು ೨೦ರ ಆಸುಪಾಸಿನ ಹುಡುಗರು. ನ್ಯಾಯವಾದ ಹಣ ನೀಡಿ, ಮಾಲುಕೊಂಡು ಬರುವಾಗ ಅಮಾನವೀಯ ಥಳಿತಕ್ಕೊಳಗಾದ ಸಾಬಿಯಕಡೆಯ ಪಡ್ಡೆಹುಡುಗರಿಗೆ ಇದೊಂದು ಶೌರ್ಯದ ಸವಾಲಾಯಿತು. ಪೆಟ್ಟು ತಿಂದ ಸಾಬಿ ತನ್ನ ಉಬ್ಬಿದ ದವಡೆಯ ನೋವು ಸುಧಾರಿಸಿಕೊಂಡು ತಣ್ಣಗಾದ. ಆದರೆ ಈ ಹುಡುಗರು ಸೇಡಿಗಾಗಿ ಕಾತರಿಸಿದರು. ಘಟನೆ ನಡೆದ ನಾಲ್ಕೆಂಟು ದಿನಗಳ ಅಂತರದಲ್ಲಿ ಸಾಬಿಯ ಮೇಲೆ ಆಕ್ರಮಣ ಮಾಡಿ ಸಾಹಸಮೆರೆದ ತಂಡದನಾಯಕನ ಮೇಲೆ ತಮ್ಮೂರಿನ ಹೆದ್ದಾರಿಯಲ್ಲಿ ಈ ಹುಡುಗರು ಮುಗಿಬಿದ್ದು ಮುಖಮೂತಿ ನೋಡದೆಯೇ ಹೊಡೆದು ಬಿಟ್ಟರು. ಅಲ್ಲಿಯವರೆಗೆ ಸಣ್ಣ ಪುಟ್ಟ ಮಟ್ಟದ ತರಲೆ ತಕರಾರಿಗಷ್ಟೇ ಸೀಮಿತವಾಗಿದ್ದ ಊರು ಬೆಂಕಿಯ ಕುಂಡವಾಯಿತು. ದಿಗ್ಭಂಧನ, ನಿಷೇಧ, ಸಂಘಟನೆ, ಹೋರಾಟ ಮುಂತಾದ ಪರಿಭಾಷೆಗಳೇ ತೇಲಾಡಿದವು.

ದೀಪಾವಳಿಯ ಕೊಯ್ಲಿಗೆ ಮೊದಲೇ ಹುರಿಹಗ್ಗ ಮಾಡಿಕೊಂಡು ಯಾರ ಹೆಸರು ಎನೇ ಆಗಿರಲಿ ಎಲ್ಲರನ್ನೂ ‘ಪುಟ್ಟಯ್ಯ ಶೆಟ್ರೇ, ಪುಟ್ಟಮ್ಮ ಶೆಡ್ತಿರೇ’ ಎಂದು ಕರೆಯುತ್ತಾ ಮುಂಗಡ ಹಗ್ಗ ಕೊಟ್ಟು, ಕೊಯ್ಲಾದ ಮೇಲೆ ಭತ್ತ ಸಂಗ್ರಹಿಸುತ್ತಿದ್ದ ಖಾದಿರನಂತವರು, ಹಳೇಬಾಟ್ಲಿ,ಪಾತ್ರೆ,ಗುಜಿರಿ ಒಟ್ಟು ಮಾಡಲು ಬರ್‍ತಾಯಿದ್ದ ಕಂಪದ ಅಹಮ್ಮದ್‌ಸಾಹೇಬರು, ಗೇರುಬೀಜ,ಕಾಸಾನಬೀಜ,ಅಟ್ಲಕಾಯಿ ಒಟ್ಟುಮಾಡಿಕೊಂಡು ಹೋಗ್ತಿದ್ದ ಗುಲ್ವಾಡಿಯ ಇಸ್ಮಾಯಿಲ್ ಇವರೆಲ್ಲಾ ಊರ ಮೇಲೆ ಬರುವುದು ಒಮ್ಮೆಗೆ ಬಂದ್ ಆಯಿತು. ಕಂಡ್ಲೂರೆಂಬ ಪಾಕಿಸ್ತಾನವನ್ನು ಬಿಟ್ಟು ಈ ಊರಮೇಲೆ ಬರುವವರಿಗೆಲ್ಲಾ ಅಘೋಷಿತವಾದ ನಿಷೇಧವೇ ಆಗ ಹೆಚ್ಚು ಕಡಿಮೆ ಜಾರಿಗೆ ಬಂದಿತ್ತು. ಬೀಡಿ ಕಂಪೆನಿಯ ಸಾಬಿಯೂ ಕೆಲ ದಿನ ಬೀಡಿ ಸಂಗ್ರಹಿಸಲು ಬರದಾದ. ಅಷ್ಟೋ ಇಷ್ಟೋ ಮೋಸ ಮಾಡಿಯೂ ಊರವರ ಪ್ರೀತಿಗಳಿಸಿ ಚೆನ್ನಾಗಿಯೇ ಮಾತಾಡಿಕೊಂಡು ತಮ್ಮ ಹೊಟ್ಟೆಪಾಡಿನ ವ್ಯವಹಾರ ಮಾಡಿಕೊಂಡಿದ್ದ ಹಳೆಯ ತಲೆಮಾರಿನ ಎರಡೂ ಕಡೆಯ ಮಂದಿ ಅಕ್ಷರಶಃ ಚಡಪಡಿಸಿದರು. cow-calfಗೇರುಬೀಜ,ಕಾಸಾನಬೀಜಗಳು ಕೊಂಕಣಿಗಳ ಇಲ್ಲವೇ ಸ್ವಧರ್ಮಿಕರ ಅಂಗಡಿಗೆ ಹೊತ್ತುಕೊಂಡು ಹೋಗಿ ಹಾಕಬೇಕಾಗಿ ಬಂದು ಹೆಂಗಸರ ಕೈಗೆ ಅಷ್ಟೋ ಇಷ್ಟೋ ಸಿಕ್ತಾಯಿದ್ದ ಕಾಸು ನೇರವಾಗಿ ಗಂಡಸರ ಕಿಸೆಗೆ ಜಮೆಯಾಗತೊಡಗಿದವು. ಈ ನಡುವೆ ಮೊದಲು ಪೆಟ್ಟುಕೊಟ್ಟು ಆಮೇಲೆ ಆಕ್ರಮಣಕ್ಕೊಳಗಾದವರ ಪರವಾಗಿ ಚಿಕ್ಕಚಿಕ್ಕ ಊರುಗಳಲ್ಲಿ ಪ್ರತಿಭಟನೆಗಳು ನಡೆದವು. ತಾವು ಮಾಡಿದುದನ್ನು ಕರ್ತವ್ಯವೆಂದೂ, ತಮ್ಮ ಮೇಲಾದುದನ್ನು ಆಕ್ರಮಣವೆಂದೂ ವ್ಯಾಖ್ಯಾನಿಸಿ ಈ ಸಭೆಗಳಲ್ಲಿ ವೇದಿಕೆಯ ಮೇಲಿಂದ ಉಗ್ರಭಾಷಣಗಳು ನಡೆದವು. ಈ ಮಾದರಿಯ ಗಿರಾಕಿಗಳನ್ನು ಕೊಳ್ಳುವವರೆಂಬುದಕ್ಕೆ ಬದಲಾಗಿ ಕದಿಯುವರೆಂದೂ, ತಾವುಗಳು ಗೋವುಗಾಳಗಕ್ಕೆ ಮುಂದಾಗಿ ಊರಳಿವನ್ನು ನಿವಾರಿಸುವಂತೆ ಕರೆಕೊಡುವ ಶಾಸನಗಳ ಮಾತನ್ನು ಪಾಲಿಸುವವರೆಂದು ಘೋಷಿಸಲಾಯಿತು. ಇದಕ್ಕೆ ಪೂರಕವಾಗಿ ದನದ ಅಪಹರಣದ ದಿಟವಾದ, ಸುಳ್ಳಿನ ಎರಡೂ ಮಾದರಿಯ ಸಂಗತಿಗಳು ಸೇರಿದ ಕಥೆಗಳು ಹುಟ್ಟಿಕೊಂಡವು. ಸಾಕುವವರ ಪರವಾಗಿ ಅವುಗಳನ್ನು ಹಗಲು-ರಾತ್ರಿ ಕಾಯುವುದು ತಮ್ಮ ಕರ್ತವ್ಯವೆಂದು ಸ್ವಯಂ ಘೋಷಿಸಿಕೊಳ್ಳುವ ಅರಿಯದ ಹರೆಯದ ಹುಡುಗರ ಪಡೆಗಳು ಹುಟ್ಟಿಕೊಂಡವು. ಈ ಪಡೆಗಳು ಗಟ್ಟಿಗೊಳ್ಳುತ್ತಿದ್ದಂತಯೇ ಊರವರಲ್ಲಿ ಚಿಂತೆ ಆವರಿಸಿಕೊಳ್ಳಹತ್ತಿತು. ಕೆಲವರು ಗುಟ್ಟಾಗಿ ಹಟ್ಟಿಯಲ್ಲಿ ಇದ್ದ-ಬಿದ್ದ ದನಕರುಗಳನ್ನು ಹೊಳೆಯ ಮೂಲಕ ದನಕೊಳ್ಳುವವರಿಗೆ ರವಾನಿಸಿ ತಮ್ಮ ಹಟ್ಟಿಯನ್ನು ಸಗಣಿ ಮುಕ್ತವಾಗಿಸಿಕೊಳ್ಳತೊಡಗಿದರು. ‘ಯಾವನು ಬಂದು ತಡೆಯುತ್ತಾನೆ ನೋಡೋಣ?’ ಎಂದು ಸ್ವಯಂ ಕೆಚ್ಚುತೋರಿ ಅಲ್ಲಗೇ ಹೋಗಿ ಮುಟ್ಟಿಸಿಬಂದಿದ್ದ ನನ್ನ ಅಪ್ಪನೂ ಮತ್ತೆ ಎಮ್ಮೆ ತರುವ ಉಸಾಬರಿಗೆ ಹೋಗಲಿಲ್ಲ. ಮಾತ್ರವಲ್ಲ ಎಮ್ಮೆಯ ಜತೆಗೆ ಗೋಮಯಕ್ಕಾಗಿ ಇದ್ದ ಒಂದೇ ಒಂದು ದನ ಹಾಗೂ ಅದರ 2 ವರ್ಷದ ಗಂಡುಕರುವನ್ನು ಅದೇ ವರ್ಷ ಗುಟ್ಟಾಗಿ ಸಾಗಹಾಕಿದ ಮೇಲೆ ಹಳೆಯ ಹಸು-ಎಮ್ಮೆಗಳ ತಳಿಗಳಿಗೆ ಖಾಯಂ ಆದ ಪೂರ್ಣವಿರಾಮಬಿತ್ತು. ಈ ಮಾರುವಿಕೆಯ ಚಾಳಿ ಮತ್ತೂ ಮುಂದುವರೆದು ಗಟ್ಟಿಮುಟ್ಟಾಗಿದ್ದ ಕೋಣಗಳನ್ನು ಉಳುವವರಿಗೆ ಮಾರಿ ಗಂಟಿಸಾಕುವ ಉಸಾಬರಿಯೇ ಸಾಕು ಎಂಬ ನಿರ್ಧಾರಕ್ಕೆ ಬಂದಂದಿನಿಂದ ನಮ್ಮ ಗದ್ದೆಗಳಲ್ಲಿ ಮಳೆಗಾಲದಲ್ಲಿ ಟ್ರಿಲ್ಲರ್‌ಗಳ ಸದ್ದಷ್ಟೇ ಕೇಳಿಸುತ್ತದೆ. ಇದು ನನ್ನೊಬ್ಬನ ಮನೆಯ ಪರಿಸ್ಥಿತಿಯಲ್ಲ. ನನ್ನೂರಿನ ಯಾವ ಮನೆಯಲ್ಲಿಯೂ ಇಂದು ಜೋಡಿಲ್ಲ. ಹಿಂದೆ ಜೋಡು ಇರುವಾಗ ಬೆಳೆಯುತ್ತಿದ್ದ ಎಳ್ಳು, ಉದ್ದು, ಹುರುಳಿ, ಅವಡೆ, ಹೆಸರು ಮುಂತಾದ ಧಾನ್ಯದ ಕಾಳುಗಳು ಮತ್ತು ಗೆಣಸಿನ ಬೆಳೆ ಪೂರ್ಣವಾಗಿ ನಿಂತು ಹೋಗಿವೆ. ನನ್ನೂರು ಚಿಕ್ಕದಾದರೂ ತಾಲೂಕಿನಲ್ಲಿಯೇ ಅತ್ಯಂತ ಸಮೃದ್ಧವಾದ ಎಳ್ಳ್ಳುಬೆಳೆಯುವ ಜಾಗವಾಗಿತ್ತು. ಗೆಣಸು,ಉದ್ದು, ಹುರುಳಿ, ಕಾಳುಕಡಿ ಏನೆಲ್ಲವನ್ನೂ ಬೆಳೆಯುವ ಮೂಲಕ ಬೇಸಿಗೆಯಲ್ಲೂ ನನ್ನೂರಿನ ಬಯಲು ಹಸಿರು ತುಂಬಿಕೊಳ್ಳುತ್ತಿತ್ತು. ಬೆಳೆಯುವ ಬಯಲು ಖಾಲಿಯಾದಂತೆ ಎಮ್ಮೆ, ಕೋಣ,ನಾಟಿಹಸು ಯಾವುದೂ ಇರದ ನನ್ನ ಹಟ್ಟಿಯೂ ವಸ್ತುಶಃ ಖಾಲಿಯಾಗಿದೆ. ಆದರೆ ಕಟ್ಟಿಟ್ಟ ಹಟ್ಟಿ ಖಾಲಿ ಎನ್ನದ ಹಾಗೆ ಈಗ ಅಲ್ಲಿ ಬೂಸಾತಿಂದು, ಹಾಲುಕರೆಯುವ ಎರಡು ಯಂತ್ರಗಳಿವೆ. ಅವುಗಳ ಹೆಣ್ಣುಕರುಗಳಿಗೆ ಮಾತ್ರ ಬದುಕುವಹಕ್ಕು ಎಂಬ ಶಾಸನವೂ ಜಾರಿಯಲ್ಲಿದೆ. ಇವುಗಳ ಗಂಡುಕರುಗಳನ್ನು ಮಾರುವ ತಾಪತ್ರಯವಿಲ್ಲ.ಅವುಗಳಿಗೆ ಕೊಡುವ ಹಾಲಿನಲ್ಲಿಯೇ ಏರುಪೇರು ಮಾಡಿ ಕೊಂದುಬಿಡುತ್ತಾರೆ. ಪಾಪ ಅವರಾದರೂ ಏನೂ ಮಾಡಿಯಾರು?

ಎಮ್ಮೆ ಕಟ್ಟಿದ ದಪ್ಪ ಮರ್ಚುಗಳು ಹಟ್ಟಿಯಗೋಡೆಯೇರಿ ಅಲ್ಲಿಯೇ ಲಡ್ಡಾಗಿವೆ. Two old and weak cows looking hungry, weak and unhealthy standinಶಾಲೆಯ ದಿನಗಳಲ್ಲಿ ಅಮ್ಮ ತುಂಬಿಕೊಡುತ್ತಿದ್ದ ಬುತ್ತಿಯಲ್ಲಿನ ದಪ್ಪನೆಯ ಕೆನೆಬರಿತ ಎಮ್ಮೆ ಹಾಲಿನ ಮೊಸರಹೆಟ್ಟೆ (ಗಟ್ಟಿಮೊಸರು) ನೆನಪಿನ ಖಜಾನೆ ಸೇರಿದೆ. ಹಿಂದಿನಂತೆ ಕಿರ್‍ಗಾಲು,ಕಡಾಲುಗಳಿಗೆ ಕೆಲಸವಿಲ್ಲ. ‘ಸಾರ್‌ಬೋರ್ ಸಕ್ಕರ್ ಬೋರ್ ಅಜ್ಜಿಮನಿಮಜ್ಜಿಗಿ ಮಜ್ಜನಾರೂ ತಿಕ್ಲಿಲ್ಲೆ’ ಎಂಬ ರೂಢಿಯ ಸೊಲ್ಲುಗಳೂ ನಮ್ಮ ಎಳೆಯ ತಲೆಮಾರುಗಳಿಗೆ ಕೇಳಿಸುತ್ತಿಲ್ಲ. ನಾಲ್ಕೆಂಟು ದಿನದ ಬೆಣ್ಣೆಸೇರಿಸಿ ಮಾಡುತ್ತಿದ್ದ ಪರಿಮಳಭರಿತವಾದ ಬಾಳಿಕೆಯ ತುಪ್ಪದ ಭರಣಿಗಳು ಖಾಲಿಕುಳಿತಿವೆ. ದೇವರ ಪೂಜೆಗೆ ನಿರಾಕೃತವೆಂದೂ, ಎಮ್ಮೆಹಾಲು ಕುಡಿದ ತಲೆಮಂದ(ಚುರುಕಲ್ಲ)ವೆಂದೂ ಕಥೆಗಳ ಮೇಲೆ ಕಥೆಗಳಿದ್ದರೂ ಕಾಣೆಯಾಗದೆ ಗಟ್ಟಿಯಾಗಿ ಉಳಿದಿದ್ದ ನನ್ನ ಹಟ್ಟಿಯ ‘ಎಮ್ಮೆ’ ಎಂಬ ಬಹುಗಾತ್ರದ ‘ರೂಹು’ ಈ ಮಹೋನ್ನತ ರಕ್ಷಣಾಕಾರ್ಯದ ಅಭಿಯಾನ ಆರಂಭವಾಗುತ್ತಿದ್ದಂತಯೇ ನಾಪತ್ತೆಯಾಗಿ ಹೋಯಿತು. ಹಟ್ಟಿಯ ಈ ಖಾಲಿತನವು ನನ್ನಂತವರ ಹೊಣೆಗಾರಿಕೆಯನ್ನೇ ಅಣಕಿಸುವಂತೆ ಎಪ್ಪತ್ತಾರರ ಅಪ್ಪನಸಾಹಸವನ್ನೇ ದರ್ಶಿಸಿ ಅಲ್ಲಿಗೇ ನಿಂತು ಬಿಡುತ್ತಿದೆ. ಬಹುಗಾತ್ರದ ಅಕ್ಕಚ್ಚು ಬೇಯಿಸುವ ಹರಿ (ಹಂಡೆ), ಅಕ್ಕಚ್ಚಿನ ಕೊಣ್ಣೆಯನ್ನು ಕೊಚ್ಚುತ್ತಿದ್ದ ಕೊಳ್ಳಿ(ದಿಮ್ಮಿ), ಅಕ್ಕಚ್ಚು ಬೇಯುತ್ತಿದ್ದಾಗಲೇ ಮಗಚಿಹಾಕಲು ಬಳಸುತ್ತಿದ್ದ ಕೊಕ್ಕೋಲು (ಸೊಟ್ಟಗಿರುವ ಬಿದಿರಕೋಲು), ಕರುಗಳಿಗೆ ಹಾಲು,ಮದ್ದು ಕುಡಿಸುತ್ತಿದ್ದ ನೆಳಾಲ್(ಬಿದಿರಲೋಟದಂತಹ ವಸ್ತು)ಗಳು ಎತ್ತ ಸರಿದುಹೋದವೋ ಅರ್ಥವೇ ಆಗುತ್ತಿಲ್ಲ!? ಹೋರ್ ಸತ್ತ್ಹೋಯ್ತೋ ಎಂಬ ಹಕ್ಕಿಯಾಗಿ ಹಾರಿದವನಿಗೆ ಸತ್ತದ್ದು ಹೋರಿಯಷ್ಟೇ ಆಗಿತ್ತು. ಆದರೆ ನಮ್ಮ ಕಾಲದಲ್ಲಿ ಹೋರಿ ಎಮ್ಮೆ ಹಸುಗಳ ಜೊತೆಗೆ ನೇಗಿಲು, ನೊಗ, ಗೋರಿ, ಅಕ್ಕಚ್ಚು, ನಳಗಳೆಂಬ ನಮ್ಮ ಒಡಿನಾಡಿಗಳಾಗಿದ್ದ ಪರಿಕರಗಳೆಲ್ಲವೂ ಜೀವ ಕಳೆದುಕೊಂಡಿವೆ.

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 2

– ಎಚ್.ಜಯಪ್ರಕಾಶ್ ಶೆಟ್ಟಿ

(ಭಾಗ – 1)

ಭಾಗ – 2 – ಹಟ್ಟಿಯ ಅವತಾರ, ಹಕ್ಕಿಯ ಕೂಗು

ನಾವು ಹಸು ಎಂದು ಸಾಮಾನ್ಯಾರ್ಥದಲ್ಲಿ ಕರೆಯುವ ಜಾನುವಾರುಗಳಲ್ಲಿ ವರ್ಗವಾರು-ಹೋರೆಮ್ಮೆ, ಕಡಗಂಟಿ ಎಂಬ ಎರಡು ವಿಭಾಗಗಳಿವೆ. ಎರಡನ್ನೂ ಸೇರಿಸಿ ಗಂಟಿ ಎಂದೇ ಕರೆಯುವ ರೂಢಿ ನಮ್ಮದು. ಹಟ್ಟಿ, ಕೋಳಿಗೂಡು ಮತ್ತು ಬಸಳೆಚಪ್ಪರಗಳಿಲ್ಲದ ಮನೆಗಳೇ ನನ್ನೂರಿನಲ್ಲಿಲ್ಲ. ಮನೆ ಎಂದ ಮೇಲೆ ಗೋಮಯಕ್ಕಾದರೂ ಒಂದು ಹಸು ಇರಲೇಬೇಕೆಂಬ ಅಲಿಖಿತ ಸಂವಿಧಾನವನ್ನು ಅನುಸರಿಸಿಕೊಂಡು ಬಂದ ಊರು ನಮ್ಮದು. ನಮಗೆ ಮನೆಯಿರುವ ಹಾಗೆಯೇ ಗಂಟಿಗಳಿಗೆ ಹಟ್ಟಿ ಇರಲೇಬೇಕು. ಹಟ್ಟಿಯಲ್ಲಿಯೂ ಉತ್ತಮ ಮತ್ತು ಕನಿಷ್ಠ ಎನ್ನುವ ಒಳವಿಭಾಗಗಳುಂಟು. indian-buffaloಹಟ್ಟಿಯ ಒಳವಿನ್ಯಾಸದಲ್ಲಿ ಎದುರು ಭಾಗವನ್ನು ‘ಮುಂದಣೆ’ ಎಂತಲೂ ಹಿಂಭಾಗವನ್ನು ‘ಹಿಂದಣೆ’ ಎಂತಲೂ ಕರೆಯುವುದು ವಾಡಿಕೆ. ಮುಂದಣೆಯಲ್ಲಿ ಕಟ್ಟುವುದಕ್ಕೆ ಯೋಗ್ಯವಾದ ದಳಕಟ್ಟು, ಅಕ್ಕಚ್ಚ್ಟು-ಬಾಯರು ಕುಡಿಯಲು ಬಾಣಿ/ಮರ್ಗಿ ಇವುಗಳ ಸಹಿತ ಆ ಹಟ್ಟಿಯ ಮಟ್ಟಿಗೆ ಅದು ವಿಐಪಿ ಸ್ಟ್ಯಾಂಡ್ ತರಹ ಇರುತ್ತದೆ. ‘ಹಿಂದಣೆ’ ಹೆಸರೇ ಹೇಳುವಂತೆ ಮುಖ್ಯ ಜಾನುವಾರುಗಳ ಬೆನ್ನಿಗೆ ಸಿಕ್ಕಜಾಗದಲ್ಲಿ ಮಲಗುವುದಕ್ಕೆ ಇರುವ ಅವಕಾಶ. ಈ ಅವಕಾಶದಲ್ಲಿ ಕೆಲವೊಮ್ಮೆ ಮುಂದಿನ ಹಸು ಹಿಂದಕ್ಕೆ ಬಂದು ಹಾಕಿದ ಸಗಣಿಯೂ ಇರಬಹುದು. ಇಲ್ಲವೇ ಹುಲ್ಲು ತಿನ್ನುವಾಗಲೆ (ಹೆಣ್ಣು ಹಸುವಾದರೆ) ಹಿಂದಕ್ಕೆ ಚಿಮ್ಮಿಸಿ ಬಿಡುವ ಉಚ್ಚೆಯೂ ಇರಬಹುದು. ಒಟ್ಟಾರೆ ಹಿಂದಣೆ ಎಂದರೆ ನಮ್ಮ ಸಮಾಜದಲ್ಲಿ ದಲಿತರ ಜಾಗ ಇದ್ದಂತೆ. ನಗರದಲ್ಲಿ ಕೊಳೆಗೇರಿ ಇದ್ದಂತೆ. ಇಕ್ಕಟ್ಟಿನಲ್ಲಿಯೇ ಸಿಕ್ಕಿದ್ದನ್ನು ತಿಂದು ಬದುಕಬೇಕು. ಮುಂದಣೆಯಲ್ಲಿ ಕಟ್ಟಲು ಜಾಗವಿಲ್ಲದೆ ಹೋದಾಗ ಮಿಕ್ಕವುಗಳಿಗೆ ಇಲ್ಲಿಯೇ ಜಾಗ ಸಿಕ್ಕಬೇಕು. ಇವುಗಳ ಪರಿಸ್ಥಿತಿಯೆಂದರೆ ತಿನ್ನುವುದರಲ್ಲಿ ಹಿಡಿಯಷ್ಟು ಪಾಲು ಆದರೆ ಅಪಾಯದಲ್ಲಿ ಹಿರಿದಾದ ಪಾಲು. ಯಾರಾದಾದರೂ ಮನೆಯ ಹಗ್ಗಬಿಚ್ಚಿಕೊಂಡ ಬೀಡಾಡಿ ಹಸುಗಳು ಹಟ್ಟಿಗೆ ನುಗ್ಗಿದಲ್ಲಿ ಮೊದಲು ಆಕ್ರಮಣ ಮಾಡುವುದು ಈ ಹಿಂದಣೆಯಲ್ಲಿರುವವುಗಳನ್ನೇ. ಅದಲ್ಲದೆ ಹಟ್ಟಿಗೆ ನುಗ್ಗುವ ಅಪಾಯಕಾರಿ ಪ್ರಾಣಿಗಳು ಮೊದಲು ಎರಗುವುದು ಇವುಗಳ ಮೇಲೆಯೇ. ಇದೊಂದರ್ಥದಲ್ಲಿ ಗಂಟಿಗುರಾಣಿಗಳ ತಾಣ. ಇನ್ನೂ ಒಂದರ್ಥದಲ್ಲಿ ಇದು ಹಟ್ಟಿಯಿಂದ ಹೊರಹಾಕಲೇಬಾಕಾದ ಅನುಪಯುಕ್ತವೆನಿಸಿದವುಗಳ ತಾತ್ಕಾಲಿಕ ತಂಗುದಾಣವೂ ಹೌದು.

ಹಸು ಸಾಕುವುದು ಅಲಂಕಾರಕ್ಕಲ್ಲ ಎಂಬುದನ್ನು ನಾನು ಹೇಳಬೇಕಾಗಿಲ್ಲ. ಆದರೆ ಹಾಗೆ ಸಾಕುವವರೂ ಉಂಟು. ಕಂಬಳದ ಫಲಕ ಗೆದ್ದು ಮೀಸೆ ತಿರುವುದಕ್ಕಾಗಿ ಅಲಂಕಾರಕ್ಕೆಂಬಂತೆ ಸಾಕುವವರಿರುವರಾದರೂ ಅವರುಗಳು ನಮ್ಮ ಜಾಗತೀಕರಣದ ಜಗತ್ತಿನ ಉದ್ಯಮಪತಿಗಳಂತಿರುವವರು. ಕ್ರಿಕೆಟಿಗರನ್ನು ಕೊಂಡುಕೊಂಡು ಆಟವಾಡಿಸಿ ಮೋಜುಮಾಡಬಲ್ಲವರು, ಮೃಗಾಲಯದ ಆನೆಯನ್ನು ದತ್ತುಪಡೆಯಬಲ್ಲವರು ಮತ್ತು ದೇಗುಲ/ಮಠಗಳಿಗೆ ಆನೆದಾನ ಮಾಡಬಲ್ಲವರು. ಅಂತಹ ಅಲಂಕಾರ ಪ್ರಿಯರಾರೂ ನನ್ನೂರಿನಲ್ಲಿ ಇರಲು ಅಂದಿಗೆ ಅವಕಾಶವಿರಲಿಲ್ಲ. ಅವರೆಲ್ಲಾ ಇರುವ ಹೊಲಮನೆ ಉಳುವುದಕ್ಕಾಗಿ, ಚಾಕಣ್ಣು (ಡಿಕಾಕ್ಷನ್) ಬಿಡಿಸಿ ಅದಕ್ಕೊಂದಿಷ್ಟು ಹಾಲು ಬೆರೆಸುವುದಕ್ಕಾಗಿ, ಹೋಟೆಲು ಮನೆಗಳಿಗೆ ಹಾಲು ಹಾಕಿ ಚೂರು ಪಾರು ಕಾಸು ಗಿಟ್ಟಿಸಿ ತಾವು ಬೆಳೆಯದ ಉಪ್ಪು ಮೆಣಸು ಹೊಂದಿಸುವ ದೈನಿಕದ ಒತ್ತಡಕ್ಕಾಗಿ ಹಸು ಸಾಕುತ್ತಿದ್ದರು ಮತ್ತು ಸಾಕುತ್ತಿರುವವರು. ಈ ಒತ್ತಡಕ್ಕಾಗಿಯೂ ಅವರು ವೈಜ್ಞಾನಿಕ ಹೈನುಗಾರಿಕೆ ನಡೆಸಲಾರದ ಸ್ಥಿತಿಯಲ್ಲಿ ಕರಾವಿಗೆಂದು ಸಾಕುತ್ತಿದ್ದುದು ಬಹುವಾಗಿ malenadu-giddaಮಲೆನಾಡು ಗಿಡ್ಡ ಇಲ್ಲವೆ ದೇಸೀ ತಳಿಯ ಕಿರುಗಾತ್ರದ ಅವೇ ಹುಂಡಿ, ಕೆಂಪಿ, ಬುಡ್ಡಿಯಂತಹ ದನಗಳನ್ನು. ವರ್ಷಕ್ಕೊ, ಎರಡು ವರ್ಷಕ್ಕೊ ಕರುಹಾಕುವ ಈ ಹಸುಗಳು, ದಿನಕ್ಕೆ ನಾಲ್ಕೈದು ಸಿದ್ದೆ ಹಾಲು ಕೊಟ್ಟರೆ ಅದೇ ಹೆಚ್ಚು. ಇವು ಹಾಕುವ ಹೆಣ್ಣು ಕರುಗಳನ್ನು ಸಂತಾನವಾಗಿ ಬಳಸಿಕೊಳ್ಳಲು ಸಮಸ್ಯೆಯಿರಲಿಲ್ಲ. ಆದರೆ ಗಂಡುಕರುಗಳು ಮಾವಿನಕಾಯಿ ಗಾತ್ರದವುಗಳೇ ಹೆಚ್ಚಾಗಿರುತ್ತಿದ್ದ ಕಾರಣಕ್ಕಾಗಿ ಉಳುವ ಗುಡ್ಡಗಳನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಬೆಳೆಯುವ ತನಕ ಕೆಲವೊಂದಿಷ್ಟು ಕಾಲ ಹಿಂದಣೆಯಲ್ಲಿ ಕಟ್ಟಿ, ಅಲ್ಲ್ಲಿಯೇ ಸಗಣಿಯ ಮೇಲೆಯೇ ಹುಲ್ಲುತಳಿದು, ಬಿಟ್ಟು-ಕಟ್ಟಿ ಹೇಗೋ ಅನುಭವಿಸುವಷ್ಟು ಉಪದ್ರವವನ್ನು ಅವುಗಳಿಂದ ಅನುಭವಿಸಿಯಾದ ಮೇಲೆ ಮತ್ತು ಹಿಂದಣೆಯಲ್ಲಿ ಮತ್ತೊಂದನ್ನು ಕಟ್ಟಲೇಬೇಕಾದಾಗ ಇವುಗಳನ್ನು ಸಿಕ್ಕಷ್ಟಕ್ಕೆ ಸಾಗಹಾಕಿ ಯಾವುದಾದರೂ ಒಂದು ಸಣ್ಣ ಖರ್ಚನ್ನು ಸರಿತೂಗಿಸಿಕೊಳ್ಳುತ್ತಿದ್ದುದು ರೂಢಿ. ಕಟ್ಟಿ ಸಾಕಲು ಸಾಧ್ಯವಿಲ್ಲವೆನಿಸಿದಾಗ, ಯಾರು? ಮತ್ತು ಯಾಕೆ? ಕೊಳ್ಳುತ್ತಾರೆ ಎಂಬ ಅರಿವಿದ್ದೂ, ಹಟ್ಟಿಯನ್ನು ವಿಸ್ತರಿಸಲಾರದ, ಮನುಷ್ಯರಂತೆ ಅನುಪಯುಕ್ತ ಮಗುವನ್ನು ಲಿಂಗಪತ್ತೆ ಮಾಡಿ ಭ್ರೂಣಹತ್ಯೆ ಮಾಡುವ ವೈದ್ಯಕೀಯ ರೂಢಿಯೂ ಇರದ ಅವರು ಅವುಗಳನ್ನು ಮಾರಲೇಬೇಕು. ಅವುಗಳು ಎಲ್ಲಿಗೆ ಹೋಗುತ್ತವೆ ಎಂಬ ಅರಿವಿದ್ದೂ ಒಂದೂ ಕಾಸಿಲ್ಲದೆ ಎಲ್ಲಿಗೋ ಹೊಡೆದು ಬರುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಮಾತ್ರವಲ್ಲ ನನ್ನೂರಿನಲ್ಲಿ ಹಾಗೆ ಹೊಡೆದುಬಂದ ಒಂದೇ ಒಂದು ಉದಾಹರಣೆಯನ್ನು ನಾನು ಕಂಡಿಲ್ಲ. ಆದರೆ ಹಿಂದಣೆಗಳು ಮಾತ್ರ ಹೊಸ ಸದಸ್ಯನಿಗಾಗಿ ಖಾಲಿಯಾಗುತ್ತಿದ್ದುದು ನಿಜ.

ಹಾಗೆಯೇ ಉಳುವುದಕ್ಕಾಗಿ ತರುತ್ತಿದ್ದ ಸಾಕಷ್ಟು ಜಾನುವಾರುಗಳಲ್ಲಿ ಬಾಯ್ಗೂಡಿ ಹಲ್ಲಾದವುಗಳೇ ಹೆಚ್ಚು. 2-3 ಸಾಗುವಳಿ ಮಾಡಿದ ಮೇಲೆ ಬಹುಸಂದರ್ಭಗಳಲ್ಲಿ ಇವುಗಳ ವಿಕ್ರಯವೂ ಮೇಲಿನಂತೆಯೇ ಅನಿವಾರ್ಯ. ಸಣ್ಣ ಬಂಡವಾಳವನ್ನು ಹೂಡಿ ತರುತ್ತಿದ್ದ ಎತ್ತು/ಕೋಣಗಳು ತಮ್ಮಿಂದ ಖಾಲಿಯಾಗುವಾಗ ಒಂದಿಷ್ಟಾದರೂ ಇಡಗಂಟು ಉಳಿಸಿಹೋಗದೇ ಇದ್ದರೆ ಸಣ್ಣ ರೈತರ ಪಾಡು ನಿಲುಗಡೆಗೆ ಬಿದ್ದಂತೆಯೇ. ಅದೇ ತೆರನಾಗಿ ಹಾಲು ಕರೆಯುವ ಮುದಿಹಸುಗಳೂ ತಮ್ಮ ಕರು ಉತ್ಪಾದಿಸುವ ಸಾಮರ್ಥ್ಯ ತೀರಿದ ಮೇಲೆ, ಹಾಲು ಕೊಡಲಾರದ ಸ್ಥಿತಿಯಲ್ಲಿ ಮುಂದಣೆಯಿಂದ ಹಿಂದಣೆಗೆ ಬರಲೇಬೇಕು. ಯಾಕೆಂದರೆ ಕರಾವಿನಚಕ್ರದಲ್ಲಿ ಆ ಮುದಿ ಹಸುವಿನ ಮಗಳಿಗೆ ಹೊಸಜಾಗ ಬೇಕಲ್ಲವೇ? ಇವು ಹಿಂದಣೆಯಲ್ಲಿ ಸಗಣಿ ಮೇಲೆ ಅಷ್ಟಿಷ್ಟು ದಿನ ಕಳೆದು ಖಾಲಿಯಾಗುತ್ತಿದ್ದವು, ಇಲ್ಲವೇ ಮಾರಲ್ಪಡುತ್ತಿದ್ದವು. ಕರು ಹಾಕಲಾರದ ಕರಾವಿನ ದನ, ಎಮ್ಮೆಗಳನ್ನು ಬಂಡವಾಳಕ್ಕಿಂತ ಹೆಚ್ಚಾಗಿ ಮುದಿವಯಸ್ಸಿನಲ್ಲಿ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ವಯಸ್ಸಾದಂತೆ ಬಾಯಿಯ ಹಲ್ಲುಗಳು ಒಂದೊಂದಾಗಿ ಜಾರಿ ಆಹಾರವನ್ನು ಸ್ವಯಂ ಜಗಿದು ನುಂಗಲಾರದ ದುರ್ಬಲ ಸ್ಥಿತಿಯಲ್ಲಿ ಚಂಡೆ ಉಗಿಯುವಂತಾಗುವ ಅವುಗಳ ಪಾಡು ಯಾತನಾದಾಯಕ. ಮೆಂದು ಬರಲಾರದ, ಹಾಕಿದ್ದನ್ನೂ ಚೆನ್ನಾಗಿ ಜಗಿದು ತಿನ್ನಲಾರದ ಜೀರ್ಣಾವಸ್ಥೆಯಲ್ಲಿ, ವಯಸ್ಸಿನ ಪರಿಣಾಮವಾಗಿ ಮೈಮೇಲೆ ಆಗುವ ಗಾಯಗಳು ಬೇರೆ. Two old and weak cows looking hungry, weak and unhealthy standinಚರ್ಮದ ಮೇಲೆ ಈ ಹಂತದಲ್ಲಿ ಆಗುವ ಗಾಯಗಳು, ಅವುಗಳ ಮೇಲೆ ಕೂತು ಇಪ್ಪಿ ಹಾಕುವ ನೊಣಗಳನ್ನು ಓಡಿಸಿಕೊಳ್ಳುವಲ್ಲ್ಲಿಯೂ ಸೋಲುವ ಚೋಂಕಾಗಿ(ರೋಮಉದುರಿ) ನಿತ್ರಾಣಗೊಂಡ ಬಾಲ ಹಾಗೂ ಅಲ್ಲಾಡಿಸಲಾರದ ಕಿವಿಗಳಿಂದಾಗಿ ಈ ಗಾಯಗಳಲ್ಲಿ ಹುಳುವಾಗಿ ನೆತ್ತರು ಸೋರುವಂತಾಗುತ್ತದೆ. ಬಯಲು ಹಾಗೂ ತೆರದ ಹಟ್ಟಿಯಲ್ಲಿ ಈ ಗಾಯಗಳ ಮೇಲೆ ದಾಳಿಮಾಡುವ ಕಾಗೆಗಳ ಹಿಂಸೆ ನೋಡಿಕೊಂಡಿರುವುದೇ ಯಾತನಾದಾಯಕ. ಅದೂ ಸಹಿಸಿಕೊಂಡು ಅವುಗಳು ಹಟ್ಟಿಯಲ್ಲಿಯೇ ಉಳಿದವೆಂದರೆ ಹಾಲುಕೊಡುವಾಗ ಕಾಮಧೇನುವಾಗಿದ್ದ ಅದೇ ಹಸು ಅಕ್ಷರಶ: ‘ಕಾಡುವಧೇನು’ ಆಗಲೂಬಹುದು. ಮಲಗಿದಲ್ಲಿಂದ ಏಳಲಾರದ ಅವುಗಳನ್ನು ಎಬ್ಬಿಸುವ ಸಲುವಾಗಿ ಅನಿವಾರ್‍ಯವಾಗಿ ಬಾಲವನ್ನು ತಿರುವಲಾಗುತ್ತದೆ. ಕೊನೆ ಕೊನೆಗೆ ಹೀಗೆ ತಿರುವುವ ವೇಳೆ ಉಂಟಾಗುವ ಬಾಲದ ವೇದನೆಗೂ ಎದ್ದು ನಿಲ್ಲುವ ತಾಕತ್ತು ಕಳೆದುಕೊಂಡ ಮೇಲೆ ಅವುಗಳ ಶುಶ್ರೂಷೆಗೆ ಕನಿಷ್ಠ 3-4 ಜನ ನಿಲ್ಲಬೇಕಾದ ಸ್ಥಿತಿ ಉಂಟಾಗಬಹುದು. ಎಮ್ಮೆ, ಕೋಣ, ಎತ್ತುಗಳಾದರೆ ಈ ಸ್ಥಿತಿ ಮತ್ತಷ್ಟು ಸಂಕಟದಾಯಕ. ಆದಾಯವೂ ಇಲ್ಲದೆ ಬಂಡವಾಳವನ್ನೂ ಕಳೆದುಕೊಳ್ಳುತ್ತಾ ಅನಾಥಾಶ್ರಮದಂತೆ ಚಾರಿಟಿಯ ಕೆಲಸ ಮಾಡುವ ಸಾಮರ್ಥ್ಯ ಒಬ್ಬ ಸಾಮಾನ್ಯ ರೈತನಿಗೆ ಇರುವುದು ಸಾಧ್ಯವೇ? ಕೈ ಮೈ ನೆಕ್ಕಿದ ಅದೇ ಹಸು ಈಗ ಇಡಿಯ ಮನೆಯನ್ನೇ ನೆಕ್ಕಿನಾಶ ಮಾಡಿದ ಅನುಭವವಾಗುತ್ತದೆ. ದುರಂತವೆಂದರೆ ಈ ಸ್ಥಿತಿಗೆ ತಲುಪಿದ ಹಸುವನ್ನು ಕೊಂದು ಪಾಪಕಟ್ಟಿಕೊಳ್ಳಲಾರದ ಅವರು ಅದು ಸಾಯುವ ತನಕ ಪಡಬಾರದ ಪಾಡುಪಡುತ್ತಾರೆ. ಹಾಗಾಗಿ ಆ ಸ್ಥಿತಿ ಒದಗದಿರಲಿ ಎಂದು ಮುಂಚಿತವಾಗಿಯೇ ಅದನ್ನು ಹಿಂದಣೆಯಲ್ಲಿ ಕಟ್ಟಿ ಹಟ್ಟಿಯಿಂದ ಹೊರಹಾಕಿ ಹಗುರಾಗಲು ಕಾಯುತ್ತಾರೆ.

ಹಸುಗಳ ಸಾವು ನಮ್ಮ ನಡುವಿನ ನಂಬಿಕೆಯಂತೆ ‘ಹೊಟ್ಟೆಗೆಂಡೆಗೆ ಬೀಳುವ ಪೆಟ್ಟು’. ಹಾಗಾಗಿಯೇ ‘ಹಟ್ಟಿಗೆ ಬೆಂಕಿ ಬೀಳಲಿ’, ‘ಕರುಮರಿ ನಾಶವಾಗಲಿ’, ‘ನಿರ್ಗ್ವಾಮಯ್ ಆಗ್ಲಿ’ ಎಂಬವುಗಳು ನಮ್ಮ ನಡುವಿನ ತೀವ್ರವಾದ ಶಾಪಾಶಯಗಳು (ಸಾಪುಳಿಗಳು). ಹಾಕಿದ ಬಂಡವಾಳ ಹಿಂತಿರುಗಿ ಬಾರದೆ, ಉಳುವ ಜಾನುವಾರು ಹಟ್ಟಿಯಲ್ಲಿಯೇ ಸತ್ತವೆಂದರೆ ಬೇಸಾಯದ ಮೂಲಬಂಡವಾಳಕ್ಕೇ ಪೆಟ್ಟು ಬಿದ್ದಂತೆ. ನನಗೆ ಗೊತ್ತಿರುವ ಹಾಗೆ ನಮ್ಮೂರಿನ ಕಿರುಹಿಡುವಳಿದಾರ ರೈತರೊಬ್ಬರು ಒಂದೇ ಮಳೆಗಾಲದಲ್ಲಿ ಕಾಯಿಲೆಯಿಂದ ಮತ್ತು ಚೇಳುಕಚ್ಚಿ ಎರಡುಜೋಡಿ ಕೋಣಗಳನ್ನು ಬೆನ್ನಿಂದ ಬೆನ್ನಿಗೆ ಕಳೆದುಕೊಂಡ ಪರಿಣಾಮ ಅವರ ಹಟ್ಟಿಯಲ್ಲಿ ಮುಂದಿನ ಆರು ವರ್ಷಗಳ ತನಕ ಉಳುವ ಜಾನುವಾರುಗಳನ್ನು ಕಟ್ಟಲಾಗಿಲ್ಲ. ಕೊನೆಗೂ ಅವರು ಜೋಡುಮಾಡಿದುದು ಒಂದು ಸಾಹಸವೇ ಆಗಿತ್ತು. ಹೇಳಿಕೇಳಿ ಈ ಜನ ಇಂದಿಗೂ ತಾವು ತರುವ ಜಾನುವಾರುಗಳ ಮೇಲೆ ವಿಮೆ ಮಾಡುವ ರೂಢಿ ಹೊಂದಿಲ್ಲ. ಅನೇಕ ಸಂದರ್ಭದಲ್ಲಿ ಕಾಯಿಲೆ ಬಿದ್ದರೆ ದೇವರು-ದಿಂಡರ ಜೊತೆಗೆ ನಾಟಿ ವೈದ್ಯವನ್ನೇ ಅವಲಂಬಿಸಿ ಗಂಟು ಕಳೆದುಕೊಳ್ಳುವವರಿವರು. ಹೀಗಿದ್ದ ಮೇಲೆ ಬಂಡವಾಳದ ಭಾಗಶಃ ಹಿಂಪಡೆಯುವಿಕೆಯೂ ಇಲ್ಲದೆ, ಅಲ್ಲೇ ಕಂತಿಹೋದರೆ (ಮುಳುಗಿದರೆ) ಅವರ ಪಾಡು ಹಕ್ಕಿಯಾಗಿ ಹಾರಬೇಕಷ್ಟೇ.

ನಮ್ಮ ಪರಿಸರದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುವ ಅನೇಕ ನೈಸರ್ಗಿಕ ಸಂಗತಿಗಳನ್ನು ಜಾನಪದಲೋಕ ಗುರುತಿಸುತ್ತದೆ. ಅವುಗಳಲ್ಲಿ ಮಳೆಯ ಆರಂಭದವಾರ್ತೆ ತರುವಂತೆ ಕೂಗುವ ‘ಉರಿಯೋ ಅಕ್ಕ’ ಹಾಗೂ ‘ಹೋರ್ ಸತ್ತ್ಹೋಯ್ತೊ’ ಎಂಬ ಹಾಗೆ ಕೂಗುವ ಎರಡು ಹಕ್ಕಿಗಳ ಕೂಗನ್ನು ಮಳೆಗಾಲದ ಖಚಿತ ಮಾಹಿತಿಯೆಂಬಂತೆ ಗಮನಿಸಲಾಗುತ್ತದೆ. ಈ ಹಕ್ಕಿಗಳನ್ನು ಗಂಡ ಹೆಂಡತಿಯರಾಗಿ ಈ ಭಾಗದ ಜನ ಕಥೆಕಟ್ಟಿಕೊಂಡಿದ್ದಾರೆ. ರೈತ ದಂಪತಿ ಎಂಬಂತೆ ಪ್ರಚಲಿತವಿರುವ ಈ ಹಕ್ಕಿಗಳ ಕುರಿತಾದ ಕಥನದ ಮೇರೆಗೆ,-“ಹೋರಿ (ಕೋಣ) ತಂದೂ ತಂದೂ ಸಾಯುತ್ತಲೇ ಹೋದಾಗ, ನೇಲು-ನೊಗ ಅಟ್ಟಕ್ಕೆ ಹಾಕುವಂತಾಗಿ ಮಳೆಗಾಲದ ವ್ಯವಸಾಯ ಮಾಡಲಾರದ ಸ್ಥಿತಿಯಲ್ಲಿ ಬದುಕಲಾಗದ ಹಂತ ತಲುಪಿದ ಬೇಸಾಯಗಾರ ಹಕ್ಕಿಯಾಗಿ ಹಾರಿ ಹೋದನೆಂದೂ, ಅವನ ಬಸುರಿಹೆಂಡತಿ ಗಂಡನಿಲ್ಲದೇ ಹೆರಿಗೆಯಾಗಿ, ಗಂಡನ ಅಕ್ಕನ ಆರೈಕೆ ಪಡೆಯಬೇಕಾಗಿದ್ದವಳು ಅವಳ ಕುದಿನೀರಿನ ಬಿಸಿ ತಾಳಲಾರದೇ ಅವಳೂ ಹಕ್ಕಿಯಾಗಿ ಹಾರಿದಳೆಂ”ದೂ ಕಥೆ. ಈ ಬೇಸಾಯಗಾರ ಸಮಕಾಲೀನ ಸಂದರ್ಭದ ರೈತನ ಆತ್ಮಹತ್ಯೆಯನ್ನು ನೆನಪಿಸುವಂತೆ ಹಕ್ಕಿಯಾಗಿ ಹಾರಿಯೂ ಉಳುಮೆ ಮಾಡಲಾಗದ ಆತ್ಮ ಸಂಕಟವನ್ನು ತೋಡಿಕೊಳ್ಳುವವನಂತೆ ‘ಹೋರ್‌ಸತ್ತ್ಹೋಯ್ತೋ’ ಎಂದು ಕೂಗುತ್ತಾನೆ. ಗಂಡನನ್ನು ಕಳೆದುಕೊಂಡು ಅನಾಥಳಾಗಿ ಅತ್ತಿಗೆಯ ವಂಚನೆಯಿಂದ ಸತ್ತವಳು ಬೀದಿಪಾಲಾದ ಕುಟುಂಬ ಸ್ಥಿತಿಯನ್ನು ಗಂಡನೊಂದಿಗೆ ನೆನೆದುಕೊಳ್ಳುವಂತೆ ‘ಉರಿಯೋ ಅಕ್ಕ’ ಎಂದು ಕೂಗುವ ಮೂಲಕ ಜಾನುವಾರು ಕಳೆದುಕೊಂಡು ನಿರ್ಗತಿಕನಾಗುವ ರೈತನ ದುರ್ಗತಿಯನ್ನು ಪ್ರತಿಧ್ವನಿಸಿಕೊಂಡೇ ಬರುತ್ತಿದ್ದಾಳೆ. ಈ ಕೂಗು ಕೇಳಿದಾಗೆಲ್ಲಾ ನಾವದಕ್ಕೆ ‘ಹೋರ್ ಸತ್ಹೋಯ್ತೋ ನೇಲ್‌ನೊಗ ಅಟ್ಕ್‌ಹಾಕ್ಯೊ’ ಎಂದು ಉಳಿದಭಾಗವನ್ನು ಸೇರಿಸಿ ಹಾಡುತ್ತಿದ್ದೆವು. Tilling_Rice_Fieldsಆದರೆ ಆ ಸ್ಥಿತಿ ನಮ್ಮ ಹಟ್ಟಿಯದೇ ಆದಾಗ ನಮಗೆ ಹಾಗೆ ಉಳಿದ ಕೋರಸ್ ಸೇರಿಸುವ ಶಕ್ತಿಯೇ ಇರುತ್ತಿರಲಿಲ್ಲ. ಚಾಲ್ತಿಯಲ್ಲಿರುವ ಈ ಕಥೆಯ ಆಳದಲ್ಲಿರುವುದು ಚಿಕ್ಕಹಿಡುವಳಿದಾರನ ಬಂಡವಾಳದ ಮುಳುಗುವಿಕೆಯಿಂದಾಗುವ ಸಂಸಾರದ ಅನಾಥಸ್ಥಿತಿ. ದುಡಿಮೆಯ ಹತಾರು, ದುಡಿಯುವ ನೆಲ ಕಳೆದುಕೊಳ್ಳುವ ರೈತರಿಗೆ ಒಂದೇ ದಾರಿ ಸಾವು. ಇಂತಹ ಸರಳ ಸತ್ಯಗಳು ಅರ್ಥವಾಗದ ವಾಣಿಜ್ಯೀಕೃತ ಆಸಕ್ತಿಗಳು ಅಭಿವೃದ್ಧಿಯ ಹೆಸರಲ್ಲಿ ರೈತರನ್ನು ಎತ್ತಂಗಡಿ ಮಾಡಿ, ಅವರಿಗೆ ಅವರು ಮಾಡಲಾರದ ಕೆಲಸ/ಉದ್ಯೋಗ ಕೊಡುವ ಮಾತಾಡುತ್ತವೆ. ಹಾಗೆಯೇ ಬಂಡವಾಳ ಹೂತು ಹೋದರೂ ಪರವಾಗಿಲ, ಭಾವನೆಯನ್ನು ಗೌರವಿಸು ಎಂಬ ಶಾಸನ ರೂಪಿಸುವಲ್ಲಿ ಒತ್ತಡ ಹೇರುತ್ತವೆ. ಮೂಲವನ್ನೇ ಕಳೆದುಕೊಳ್ಳುವ ರೈತರು ಮುಂದಿನ ದಿನಗಳಲ್ಲಿ ಮಳೆ ಬರುವುದನ್ನೂ ಎಚ್ಚರಿಸುವ ಭಾಗ್ಯ ಪಡೆಯುವರೆಂಬ ವಿಶ್ವಾಸವಿಲ್ಲ. ಯಾಕೆಂದರೆ ಕನಿಷ್ಠ ಆ ಸಂವೇದನೆಯನ್ನಾದರೂ ದುಡ್ಡು-ಧರ್ಮಗಳ ಅಮಲು ಉಳಿಸಬೇಕಲ್ಲವೇ?

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 1

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1

ಅಭಿಮಾನದಿಂದ ಹೇಳುತ್ತೇನೆ ನಾನು ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ಆಸಾಡಿ ತಿಂಗಳ ಬಿರುಮಳೆಯ ನಡುವೆಯೂ ಮೂರು ದಿನಗಳ ತನಕ ನೋವು ತಿನ್ನುತ್ತಾ ನನ್ನವ್ವ ನನ್ನನ್ನು ನಮ್ಮ ದನಕಟ್ಟುವ ಕೊಟ್ಟಿಗೆಯಲ್ಲಿಯೇ ನೆಲಕ್ಕೆ ತಂದಳಂತೆ. ನನ್ನ ಹೊಕ್ಕಳಬಳ್ಳಿಯನ್ನು ಹೊಂದಿದ ಅಮೆಕಸವನ್ನು ಹಟ್ಟಿಯಣೆಗೆ ತಾಗಿಕೊಂಡಂತೆ ಇದ್ದ ಬಸಲೆ ಚಪ್ಪರದಡಿಯೇ ಹೂಳಲಾಯಿತಂತೆ. ಇದು ನನ್ನೊಬ್ಬನ ಕತೆಯಲ್ಲ. ನನ್ನನ್ನೂ ಒಳಗೊಂಡಂತೆ ನಮ್ಮೂರಿನಲ್ಲಿ ಬಹುತೇಕರ ಹುಟ್ಟು ಹಟ್ಟಿಯಣೆಯಲ್ಲಿ ನಡೆದುದು. ತುಂಬಿದ ಬಸುರಿಯರಿಗೆ ಹೆರಿಗೆ ನೋವು ಶುರುವಾದ ತಕ್ಷಣ ಅವರನ್ನು ವರ್ಗಾಯಿಸುತ್ತಿದ್ದುದು ಹಸು ಎಮ್ಮೆಗಳನ್ನು ಕಟ್ಟುವ ಜಾಗಕ್ಕೆ ತಾಗಿಕೊಂಡೇ ಇರುತ್ತಿದ್ದ ಕೊಟ್ಟಿಗೆಗಳಿಗೆ. ದನದ ಕಲಗಚ್ಚು ಕಾಯಿಸುವ ಬಾಯರು ಒಲೆ, ಭತ್ತಕುಟ್ಟಲು ಬಳಸುತ್ತಿದ್ದ ಕುಟ್ಟೊಒರಲು, Indian-Cow-calfಸ್ನಾನಕ್ಕಾಗಿ ಇಡುತ್ತಿದ್ದ ನೀರು ಕಾಯಿಸುವ ವ್ಯವಸ್ಥೆಯಲ್ಲವನ್ನೂ ಹೊಂದಿರುತ್ತಿದ್ದ ಹಟ್ಟಿಯಣೆಗಳೇ ನಮ್ಮ ತಾಯಂದಿರು ನಮ್ಮನ್ನು ಭೂಮಿಗೆ ಇಳಿಬಿಡುವ ತಾಣಗಳಾಗಿದ್ದವು. ಹಾಗಾಗಿ ಹುಟ್ಟಿದ ಮಕ್ಕಳನ್ನು ತಂದೆ ಮನೆಯ ಕಡೆಯವರು ನಮ್ಮ ಹಟ್ಟಿಯಣೆಗಳಲ್ಲಿ ಹುಟ್ಟಿದವನಲ್ವಾ? ಎಂದೇ ಸಂಭೋಧಿಸುತ್ತಿದ್ದುದುಂಟು. ಇಂತಹ ಹಟ್ಟಿಯಣೆಗಳಲ್ಲಿ ಹುಟ್ಟುವುದು ಮಾತ್ರವಲ್ಲದೆ ಅದೇ ಕರುಮರಿಗಳ ಜತೆಗೆ ಜನನೋತ್ತರವಾದ ಬಾಲ್ಯವನ್ನು ಕಳೆಯುವ ಬದುಕಿನ ಸುಖವನ್ನು ಕೈತುಂಬ ಚಾಚಿಕೊಂಡೇ ಬೆಳೆದ ಆನಂದ ನನ್ನೊಂದಿಗಿದೆ. ಇದಲ್ಲದೆ ಈ ನಾಲ್ಕು ಕಾಲಿನ ಹಸು-ಕೋಣ-ಎಮ್ಮೆ-ಎತ್ತುಗಳೆಂಬ ಪಶುಲೋಕ ಭಾಷಿಕವಾಗಿಯೂ ನುಡಿಗಟ್ಟು, ಗಾದೆ, ಕಥೆ ಇತ್ಯಾದಿಗಳ ಮೂಲಕವೂ ನನ್ನ ಮಾನಸಿಕ ವಲಯವನ್ನು ಹೊಕ್ಕು ಗಟ್ಟಿಯಾಗಿ ಕುಂತು ಬಿಟ್ಟಿವೆ.

ಅಕ್ಷರವೆಂಬ ಶಿಕ್ಷಣ ಕ್ರಮಕ್ಕೆ ಒಡ್ಡಿಕೊಳ್ಳುವ ಮೊದಲೇ ಹಾಡಿಹಕ್ಕಲುಗಳಲ್ಲಿರುವ ಛಿದ್ರವಾದ ದೇವರ ಲಿಂಗಗಳಿಗೊ, ಮೂರ್ತಿಗಳಿಗೋ ಸಂಬಂಧಿಸಿದಂತೆ ಕೇಳುತ್ತಿದ್ದ ಕಥೆಗಳಲಿ, ಹಾಗೆಯೇ ಜಾನಪದ ಲೋಕದ ಅನಾಥ ನಾಯಕ ನಾಯಕಿಯರಿಗೆ ಸಂಬಂಧಿಸಿದ ಕಥೆಗಳಲ್ಲಿ ಈ ಹಸುಗಳ ಲೋಕದ ಅಂಶಿಕ ಪರಿಚಯ ನಿರಂತರವಿತ್ತು. ಅದೇ ತೆರನಾಗಿ ಅಕ್ಷರ ಜಗತ್ತಿನ ಶಿಕ್ಷಣ ಕ್ರಮಕ್ಕೆ ತೆರೆದುಕೊಳ್ಳುತ್ತಿದ್ದಂತೆ, ಅನ್ನದಾತನ ಒಡನಾಡಿಯಾದ ಜಾನುವಾರುಗಳು ಮತ್ತೆ ಎದುರಾಗುತ್ತಿದ್ದವು. ಈ ಹಂತದಲ್ಲಿ ನನಗೆ ಸ್ಪಷ್ಟವಾಗಿ ನೆನಪಿರುವ ಹಾಗೆ ಮೂರನೇ ತರಗತಿಯಲ್ಲಿ ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ಉಳಿದ ಯಾವ ಪಾಠವನ್ನೂ ನೆಟ್ಟಗೆ ಮಾಡದೆ ಇದ್ದಾಗಲೂ “ಧರಣಿ ಮಂಡಲ ಮಧ್ಯದೊಳಗೆ…” ಎಂಬ ಗೋವಿನ ಹಾಡನ್ನು ರಾಗಬದ್ಧವಾಗಿ ಹಾಡಿ ಹೇಳುವುದನ್ನು ಮರೆತವರಲ್ಲ. ಆಗಿನ್ನೂ ಒಂಭತ್ತರ ಹರೆಯದ ಆಸುಪಾಸಿನ ನಾನು ಈ ಪಠ್ಯದ ಜತೆಗೆ ಮೂಡುತ್ತಿರುವ ಲಿಂಗಗಳಿಗೋ, ಬೆಳೆಯುತ್ತಿರುವ ಹುತ್ತಗಳಿಗೋ, ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೋ, indian_buffaloತಾಯ್ತನದ ಅನುಬಂಧದಲ್ಲಿ ಹಾಲು ಸೂಸುವ ಕಥೆಗಳನ್ನು ಕೇಳಿದವನಿದ್ದೆ. ಹುಟ್ಟಿದಾರಭ್ಯದಿಂದ ತೊಡಗಿ ಆಕ್ಷರಿಕವಲ್ಲದ ಮತ್ತು ಅಕ್ಷರ ಜಗತ್ತಿನ ಪಠ್ಯಗಳೆರಡರ ಮೂಲಕವೂ ನಾನು ಕೇಳಿದ ಬಹುಪಾಲು ಕಥೆಗಳು ಕೈಲೂತಿಯಂತಹ ವರ್ಣ ಶ್ರೇಷ್ಠವೋ, ಗಂಗೆ ಗೌರಿಯರಂತಹ ನಾಮ ಶ್ರೇಷ್ಠವೋ ಆಗಿದ್ದ ಹಸುಗಳಿದ್ದು, ಅಂತಹ ಕಥೆಗಳಲ್ಲಿ ನನ್ನ ಮುದ್ದಿನ ಎಮ್ಮೆಗಳಾಗಲೀ, ಕೋಣಗಳಾಗಲೀ, ಎತ್ತುಗಳಾಗಲೀ, ಕರುಹಡೆಯದ ಒಂದೇ ಕಾರಣಕ್ಕೆ “ಗೊಡ್ಡು”ಗಳೆನಿಸಿಕೊಳ್ಳುತ್ತಿದ್ದ ಬಂಜೆಹಸುಗಳಾಗಲೀ ಇರುತ್ತಿರಲಿಲ್ಲ! ಕಥೆಗಳಲ್ಲಿ ಇರುತ್ತಿದ್ದ ಬಹುಪಾಲು ಹಸುಗಳು ತುಂಬಿದ ಕೆಚ್ಚಲನ್ನು ಹೊತ್ತುಕೊಂಡು ಹಾಲು ಸುರಿಯಲು ತಯಾರಾಗಿಯೇ ನಿಂತವುಗಳು! ಯಾರೂ ಕಾಣದಂತೆಯೇ ಹುತ್ತದ ಮೇಲೆ ಹಾಲು ಸುರಿಯುವ, ಕಾಳಿಂಗನಂತಹ ಗೊಲ್ಲ ಕರೆದ ತಕ್ಷಣ ಬಂದು ಅವನ ತಂಬಿಗೆಯನ್ನು ತುಂಬುವಂತೆ ಚಲ್ಲಿ ಸೂಸಿ ಹಾಲು ಕರೆಯುತ್ತಿದ್ದ ಹಸುಗಳೇ. ಪ್ರಾಯಶಃ ಈ ಹಸುಗಳಿಗಿಂತ, ತಂಬಿಗೆ ತುಂಬುವ ಹಾಲೇ ಅತಿಮುಖ್ಯ ವಸ್ತುವೆನಿಸುತ್ತದೆ. ತುಂಬಿದ ಕೆಚ್ಚಲು, ಕರೆದಾಕ್ಷಣ ಬರುವ ಸಿಪಾಯಿ ಶಿಸ್ತು, ತಪ್ಪೇ ಮಾಡಲಾರದ ಸಾತ್ವಿಕ ಮುಖಗಳು, ಜತೆಗೆ ಬಹುಮಟ್ಟಿಗೆ ಎಲ್ಲವೂ ತಾಯಂದಿರುಗಳು. ತಮ್ಮ ಹೆಸರು (ಗಂಗೆ, ಗೌರಿ, ತುಂಗಭದ್ರೆ, ಪುಣ್ಯಕೋಟಿ), ಬಗೆ ಇತ್ಯಾದಿಗಳಲ್ಲಿ ಸ್ವಚ್ಛತೆಯನ್ನು ಮೈಗೂಡಿಸಿಕೊಂಡಿರುವ ಜತೆಗೆ ಪ್ರವೃತ್ತಿಯಲ್ಲೂ ಕನಿಷ್ಠತೆಯ ಸೋಂಕಿನಿಂದ ಮುಕ್ತವಾದಂತೆಯೇ ಇರುವ ಈ ಕೊಟ್ಟಿಗೆಯ ಕಪಿಲೆಯರನ್ನು ಅಕ್ಷರ ಮತ್ತು ಮೌಖಿಕ ಪಠ್ಯಗಳೆರಡೂ ಅಚ್ಚುಹಾಕಿ ಕೊಡುತ್ತಾ ಹೋಗುತ್ತವೆ.

ಗಂಟಿಗಳು ಮತ್ತು ಗಂಟಿ ಮೇಯಿಸುವುದು:
ನಾವು ಗಂಟಿಗಳು ಹುಟ್ಟುವ ಜಾಗದಲ್ಲಿ ಹುಟ್ಟಿದವರು. ಅವುಗಳನ್ನೇ ಬದುಕಿನ ಆಧಾರವಾಗಿ ಅವಲಂಬಿಸಿದವರು. ಹಸುವಿನ ಕುರಿತಾಗಿ ಲೋಕ ಕೊಡುವ ನಿರೂಪಣೆ ಹೇಗೇ ಇರಲಿ, ಹಸುಗಳ ಜೊತೆಗಿನ ನಮ್ಮ ಅನುಭವವೇ ಬೇರೆ. ನಮಗೊ ಹಟ್ಟಿಯಣೆಯಲ್ಲಿ ಹುಟ್ಟಿದಂದಿನಿಂದ ತಗುಲಿಕೊಂಡ ಹಸುಕರುಗಳ ಜೊತೆಗಿನ ನಂಟು, ಅವುಗಳನ್ನೇ ಬಯಲಿಗೆ ಬಿಟ್ಟು ಮೇಯಿಸುವ ಹೊಣೆಗಾರಿಕೆಯಾಗಿಯೇ ಮುಂದುವರೆಯುತ್ತದೆ. ಆದರೆ ನಾವಿದನ್ನು ಮನರಂಜನೆಯಾಗಿಯೇ ಬದಲಿಸಿಕೊಂಡವರು. ಇವುಗಳನ್ನು ಬಯಲಿಗೆ ಬಿಟ್ಟು ಅಲ್ಲಿಯೇ ಆಟದಂಗಣವನ್ನು ಅಣಿಗೊಳಿಸಿಕೊಳ್ಳುತ್ತಿದ್ದವರು. ಕಾಯಕದ ಜೊತೆಗೆ ಮನರಂಜನೆಯ ಅವಕಾಶವೂ ಆಗುತ್ತಿದ್ದ ಈ ಗಂಟಿಹಿಂಡಿನಲ್ಲಿ ಆಡುತ್ತಿದ್ದ ಲಗೋರಿ, ಚಿಣ್ಣಿದಾಂಡು, ಬೆನ್ಚೆಂಡುಗಳೆಂಬ ಬಗೆಬಗೆಯ ಆಟಗಳು ಬೇರೆಲ್ಲಿ ಸಾಧ್ಯ? ಬೆಳ್ಳಂಬೆಳಿಗ್ಗೆ ಹೊತ್ತು ಮೂಡುತ್ತಿದ್ದಂತೆ ಅವುಗಳ ಕೊರಳಹಗ್ಗವನ್ನು ತಪ್ಪಿಸಿ, ಬಾಲಹಿಡಿದು ಬಯಲಿಗೆ ಹೊಂಟೆವೆಂದರೆ ನಮಗೆ ಲೋಕ ಮರೆತು ಹೋಗುತ್ತಿತ್ತು. ಶಾಲೆ, ಮನೆ, ಊಟ ಇವೆಲ್ಲವನ್ನೂ ಮರೆತು ಹೊತ್ತೇರುವ ತನಕ ಅವುಗಳನ್ನು ಕಾಯುವ ಎಚ್ಚರದ ಜೊತೆಗೆ ಮೈಮರೆತು ಆಡುತ್ತಿದ್ದೆವು. ಹೀಗೆ ಆಡುತ್ತಾ ಹಸು-ಎತ್ತುಗಳೆಂಬ ಕಡಗಂಟಿಗಳನ್ನೂ, ಕೋಣ-ಎಮ್ಮೆಗಳೆಂಬ “ಹೋರೆಮ್ಮೆ”ಗಳನೂ ಕಾಡು-ಬಯಲುಗಳಲ್ಲಿ ಮೇಯಿಸಿಕೊಂಡು ಬೆಳೆದ ಅನುಭವವೇ ಬೇರೆ. ಅವುಗಳ ಒಡನಾಟದ ಫಲದಿಂದಾಗಿ ನಮ್ಮೊಳಗೆ ಅಚ್ಚಾದ ಜಾನುವಾರುಗಳ ಜಗತ್ತಿನಲ್ಲಿ ಲಿಂಗ-ವರ್ಗ-ಗುಣ ವೈವಿದ್ಯಗಳು ಸಹಜವಾಗಿಯೇ ಇವೆ. ಪಠ್ಯದ ಹಸು ಹಾಗೂ ಅವುಗಳು ಅಳವಡಿಸಿಕೊಂಡ ಮಿಲಿಟರಿ ಶಿಸ್ತುಗಳು, ನಾವೇ ಸ್ವಯಂ ಮೇಯಿಸಿ ಹಟ್ಟಿಗೆ ಕಟ್ಟುತ್ತಿದ್ದ ವೇಳೆ ನನಗಂತೂ ಬಹುಮಟ್ಟಿಗೆ ಕಂಡಿಲ್ಲ. ಅವು ನಮ್ಮ ಕಣ್ಣು ತಪ್ಪಿಸಿ ನಮ್ಮ ಆಟಗಳಿಗೆ ಬ್ರೇಕ್ ಕೊಡುವಂತೆ ಯಾರ್‍ಯಾರದೋ ಗದ್ದೆಗಳಿಗೆ ನುಗ್ಗುತ್ತಿದ್ದವು. ನಮ್ಮ ಅಪ್ಪಣೆ ಪಡೆಯದೇ ಅವುಗಳ ಕರುಗಳಿಗೆ ಕದ್ದುಮುಚ್ಚಿ (?) ಹಾಲೂಡುಸಿ ನಮ್ಮಿಂದ ಶಿಸ್ತಿನ ಪಾಠದ ಭಾಗವಾಗಿ ದೊಣ್ಣೆ/ಬಡ್ತಿಗೆಗಳ ಹೊಡೆತ ತಿನ್ನುತ್ತಿದ್ದವು. ಇನ್ನು ಕೆಲವೊಮ್ಮೆ ಹಾಗೆ ಬಿಟ್ಟುದಕ್ಕಾಗಿ ಅಮ್ಮಂದಿರ ಕೈಯಲ್ಲಿ ನಮಗೆ ಹೊಡೆತ ತಿನ್ನಿಸುತ್ತಿದ್ದವು. ಹೋರೆಮ್ಮೆಗಳ ಪಜೀತಿ ಇನ್ನೂ ಹೆಚ್ಚಿನದು. ಅವುಗಳಿಗೆ ನೀರಿನ ಭಯವಿಲ್ಲ. ಮಳೆಗಾಳಿಯ ನಡುವೆ ದಿಕ್ಕಾಪಾಲಾಗುವ ಅವಕಾಶವನ್ನೇ ಬಳಸಿಕೊಂಡು ತುಂಬಿದ ಹೊಳೆಯಲ್ಲಿ ಈಜಿ ಮರಾತೂರು, ಕೈಲ್ಕೆರೆ, ಕೊರಾಳವೆಂಬ ಹೊಳೆಯ ಆಚೆ ದಡದ ಊರುಗಳಲ್ಲಿ ಯಾರ್‍ಯಾರಿಗೋ ಸೇರಿದ ಬಯಲುಗಳಿಗೆ ನುಗ್ಗಿ ದಾಂದಲೆಮಾಡಿ ಕೇಂದ್ರೀಯ ಕಾರಾಗೃಹಕ್ಕೆ ರವಾನಿಸಲ್ಪಡುವಂತೆ ದೊಡ್ಡಿಗೆ ಕಟ್ಟಲ್ಪಡುತ್ತಿದ್ದವು. ಇನ್ನು ಕಡಗಂಟಿಗಳೆನಿಸಿದ ಎತ್ತು-ದನಗಳದ್ದು ಬೇರೆಯೇ ಕಥೆ. ಇವು ಬಾಲವನ್ನು ಸುರುಳಿಸುತ್ತಿ ಓಡಲು ಹಿಡಿದರೆ ಹಿಡಿಯುವುದು ಹಟ್ಟಿಯ ದಾರಿಯನ್ನಲ್ಲ. ಅವುಗಳ ಸ್ವ್ವಾತಂತ್ರ್ಯಘೋಷಣೆಗೆ ಯಾವುದು ಸರಿಯೋ ಆ ದಾರಿಯನ್ನು. ಇವುಗಳು ಹೀಗೆ ಕಂಡ ದಾರಿಹಿಡಿದು ಹಟ್ಟಿಗೆ ನೇರವಾಗಿ ಬಾರದೇ, ಯಾರದೋ ಗದ್ದೆಗಳಿಗೆ ನುಗ್ಗಿ ಮನೆಮಂದಿಗೆ ಬೈಗುಳದ ಉಡುಗೊರೆ ತರುತ್ತಿದ್ದವು. ನಮಗೋ ಮೂರ್ಖಾಸಿನ ಬೆಲೆಯಿರದ ದನಕಾಯಲೂ ಲಾಯಕ್ಕಲ್ಲದ ದುಸ್ಥಿತಿ ತರುವ ಜೊತೆಗೆ ಬಾಸುಂಡೆ ಬರುವಂತೆ ಹೊಡೆತ ಹಾಕಿಸುತ್ತಿದ್ದವು. ಮನೆಮಂದಿಯಿಂದಲೂ ಬೈಗುಳ, ಪಕ್ಕದ ಮನೆಯವರಿಂದಲೂ ಅದೇ ಆರತಿ. ಯಾತಕ್ಕೂ ಪ್ರಯೋಜನಕ್ಕಿರದವ ಎಂಬರ್ಥದ “ಎರ್‍ಡ್‌ಬಾಲ್ ಗಂಟೀನ್ನೂ ಮೇಯಿಸಲಾರ”ದವ ಎನ್ನುವ ಹೆತ್ತವರ ಹತಾಶೆಯ ಮಾತು ಬೇರೆ. ಪರೀಕ್ಷಾ ಫಲಿತಾಂಶದಲ್ಲಿ ಫೇಲಾಗುವುದಾದರೂ ಬೇಕು, ಆದರೆ ಈ ಗಂಟಿಮೇಯಿಸಲೂ ಆಗದ ನಾಪಾಸು ಸರ್ಟಿಫಿಕೇಟು ಖಂಡಿತಾ ಬೇಡ. ಅವುಗಳ ನಿಯಮೋಲ್ಲಂಘನೆ ಗದ್ದೆಗೆ ದಾಳಿಯಿಟ್ಟು ಬೈಯಿಸುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಕೆಲವಂತೂ ಉಗ್ರಪ್ರತಾಪಿಗಳು ಬೇರೆ. ಕಂಡವರನ್ನಷ್ಟೇ ಅಲ್ಲ ಮನೆಮಂದಿಗೂ ರಿಯಾಯಿತಿ ಕೊಡದೆ ಕೋಡುಮಂಡೆ ಬಳಸಿ ಎತ್ತ್ಹಾಕಿಕೊಂಡು ಪೌರುಷ ತೋರುತ್ತಿದ್ದವು.

ಇಂತಹ ಹಸು-ಕರು-ಎಮ್ಮೆಗಳನ್ನು ಬೇಸಿಗೆಯ ಕಾಲದಲ್ಲಿ ಬಯಲಿನಲ್ಲಿ ಬಿಟ್ಟುಕೊಂಡು “ಅಕ್ಕಿಹುರಿದು” indian-cowತಿಂದು ಆಟವಾಡುವಾಗ ಒಂದು ತರದ ಫಜೀತಿಯಾದರೆ ಮಳೆಗಾಲದ ಕಥೆ ಬೇರೆಯದೇ. ಮಳೆಗಾಲದಲ್ಲಿ ಇವುಗಳ ಮೇವಿಗಾಗಿ ಬಯಲಿಗೆ ಎಬ್ಬುವಂತಿರಲಿಲ್ಲ. ಎಲ್ಲಾ ಗದ್ದೆಗಳು ನೇಜಿಗೊಂಡು ಸಾಗುವಳಿಗೆ ಒಳಪಟ್ಟಿರುತ್ತಿದ್ದುದರಿಂದ ಹುಲ್ಲಿನೊಂದಿಗೆ ಹಸಿರೆಲೆಗಳನ್ನು ಹೊಂದಿರುವ ಹಾಡಿ-ಗುಡ್ಡೆಗಳೆ ಅವಗಳ ಆಡುಂಬೊಲವಾಗುತ್ತಿತ್ತು. ಹಾಡಿ-ಗುಡ್ಡೆಗಳಲ್ಲಿ ಮೇಯಿಸುವಾಗ ನಮಗೆ ಆಟದ ಬಯಲು ಸಿಕ್ಕುವುದಿಲ್ಲ. ಆದರೆ ಆಟ ನಿಲ್ಲಬೇಕಲ್ಲ. ಚಿಕ್ಕಚಿಕ್ಕ ಕಲ್ಲುಗಳನ್ನು ಬಳಸಿ ಹೆಮ್ಮಕ್ಕಳ ಜೊತೆಗೆ ಗುಡ್ನಾಡುತ್ತಿದ್ದೆವು. ನೆಲದ ಕಿರುಜಾಗಗಳನ್ನೇ ಬಳಸಿ ಜುಬಲಿ(ಬೆಟ್ಟಾ) ಆಡುತ್ತಿದ್ದೆವು.ನೆಲದಲ್ಲಿಯೇ ಚನ್ನೆಮನೆಗಳನ್ನು ಮಾಡಿಕೊಂಡು ಚನ್ನೆಯಾಟಗಳನ್ನಾಡುತಿದ್ದೆವು. ಇದರ ಜೊತೆಗೆ ಬಹುವಿಧದ ಕಾಡುಹಣ್ಣುಗಳನ್ನು ಒಟ್ಹಾಕಿಕೊಂಡು ತಿನ್ನುತಿದ್ದುದು ಮಾಮೂಲಿಯಾಗಿತ್ತು. ನಮ್ಮ ಈ ಸುಖಕ್ಕಾಗಿ ಆಟ ಮತ್ತು ಹಣ್ಣು ಹುಡುಕಾಟದಲ್ಲಿ ಬೀಳುವ ಹೊತ್ತಿನಲ್ಲಿಯೇ ನಮ್ಮ ಕಣ್‌ತಪ್ಪಿಸಿಕೊಳ್ಳುವ ಅವುಗಳ ಮರಾಣಿ೧ ಸದ್ದೂ ಕೇಳಿಸದಂತಾದಾಗ ನಾವು ಗಾಬರಿ ಬೀಳುತ್ತಿದ್ದೆವು. ಮನೆಗೆ ಹೋಗುವ ಮುನ್ನವಾದರೂ ಕಣ್ಣಿಗೆ ಬಿದ್ದರೆ ಸಾಕು ಎಂದು ಹೊಳೆಕಡು, ಯಾರ್‍ಯಾರದೋ ಗದ್ದೆಕಡುವುಗಳನ್ನು ಹುಡುಕಿ ಎಲ್ಲಿಯೂ ಕಾಣದಂತಾದಾಗ ಹರಕೆಯ ಮೊರೆಹೋಗುತ್ತಿದ್ದೆವು. ನಮಗೆ ಸುಲಭದಲ್ಲಿ ಸಾಧ್ಯವಾಗುತ್ತಿದ್ದುದು ಮತ್ತು ಗುಟ್ಟಾಗಿ ಮನೆಯವರ ನೆರವಿಲ್ಲದೆ ಗೇರುಬೀಜ ಮಾರಿದ ದುಡ್ಡಿನಲ್ಲಿಯೇ ಒಂದೆರಡು ಲಾಡು,ಜಿಲೇಬಿಗಳ ತ್ಯಾಗ ಮಾಡುವಷ್ಟಕ್ಕೇ ಪೂರೈಸಬಹುದಾಗಿದ್ದ ಹರಕೆಯೆಂದರೆ ಸ್ವಾಮಿಮನೆಯ ನಿಂಗಮ್ಮನಿಗೆ ಕಪ್ಪುಬಳೆ ಹಾಕುವುದು. ಇಲ್ಲಾ ಗಣಪತಿ ದೇವರ ಡಬ್ಬಿಗೆ ೨-೩ಪೈಸೆ ಕಾಣಿಕೆ ಹಾಕುವುದು. ಇನ್ನೂ ಸ್ವಲ್ಪ ಜಾಸ್ತಿ ಗಾಬರಿಯಾದರೆ ದುಬಾರಿ ಹರಕೆಯಾಗಿ ಗಣಪತಿಗೆ ಒಂದು ರೂಪಾಯಿ ಪಂಜಕಜ್ಜಾಯ ಮಾಡಿಸುವುದು. ಈ ಹರಕೆಗಳಿಗೂ ಕೆಲವೊಮ್ಮೆ ದನಗಳು ದಕ್ಕದೇ ಇದ್ದಾಗ ಇದ್ದೇ ಇದೆ ದೇವರಿಗೆ ಹಿಡಿಶಾಪಹಾಕುವುದು ಮತ್ತು ಕೊನೆಗೆ ಮನೆಯಲ್ಲಿ ಬೆನ್ನಿಗೆ ಎಣ್ಣೆ ಉಜ್ಜಿಸಿಕೊಳ್ಳುವುದು. ಇವೆಲ್ಲವೂ ಅಂದಿನ ಹಸಿರಾದ ನೆನಪುಗಳು. ಈ ಗಂಟಿಕರುಗಳನ್ನು ಮೇಯಿಸುತ್ತಾ, ಮಳೆ ಬಂದಾಗ ಕಂಬ್ಳಿಕುಪ್ಪೆ ಹಾಕಿಕೊಂಡು ಓಡಾಡುವ ಸಂಕಟ ಪರಿಹಾರವಾಗಲಿ ಎಂಬ ಆಶಯದಿಂದ,-“ಹಾರ್‍ಮಳೆ ಬೋರ್‍ಮಳೆ ಬೋಳ್‌ಗುಡ್ಡೆಗ್ ನಾ ಕೂತಿದಿ ಹಾರಿಯೇ……..ಹೋಗ್, ಕೂರಿಯೇ……….ಬಾ” ಎಂಬಂತೆ ಮಳೆದೂರಾಗಬಯಸಿ ಹಾಡುತ್ತಿದ್ದ ಅಹವಾಲಿನ ಸೊಲ್ಲಾಗಲೀ; ತನ್ನ ಬಾಯಿಪತ್ತಿ(ಆಹಾರ)ಯನ್ನು ಬಯಸಿ

ಹನಿಹನಿ ಮಳಿ ಬರುತಿರಬೇಕು
ವಾಂಟಿಕೊಳಾಲ್ ಉರಿಯಲೆಬೇಕು
ಗಂಟಿಕರಾಳ್ ಮೇಯ್ತಿರಬೇಕು
ನನಗೊಂದ್ ಬಡ್ಕಟಿ ಸಿಕ್ಕಲೆಬೇಕು

ಎಂಬಂತೆ ಹುಲಿರಾಯ ಹಾಡಿಕೊಳ್ಳುವ ಸೊಲ್ಲೆಂಬಂತೆ ಗುನುಗುಡುತ್ತಿದ್ದ ಸೊಲ್ಲುಗಳಾಗಲೀ ನನ್ನ ನೆನಪಿನ ಬುತ್ತಿಯಲ್ಲಿ ಖಾಲಿಯಾಗದೇ ಉಳಿದಿವೆ. ಈ ಹಾಡುಗಳು, ಅವುಗಳ ಕೊರಳಿಗೆ ಕಟ್ಟುವ ಮರಾಣಿಗಳ ಸದ್ದು ಹಾಗೂ ದನಕಾಯುತ್ತಾ ನಾವು ಕೇಳಿಸಿಕೊಳ್ಳುತ್ತಿದ್ದ ಕಥೆಗಳು, ಮೆಂದು ಹೊಟ್ಟೆ ತುಂಬಿಸಿಕೊಂಡ ಹಸು-ಎಮ್ಮೆಗಳ ಹೊಟ್ಟೆ ಮುಟ್ಟಿ ಅನುಭವಿಸುತ್ತಿದ್ದ ಖುಷಿಗಳು ಎಲ್ಲವೂ ನೆನಪಿನ ಬುತ್ತಿಯ ಸರಕುಗಳೇ. ಯಾವ್ಯಾವುದೋ ಗಿಡದ ಎಲೆ,ಬೇರುಗಳನ್ನು ಕಿತ್ತು ಅವುಗಳ ಬಾಯಿಗಿಕ್ಕಿ ಪ್ರೀತಿತೋರಿಸುತ್ತಲೇ ನಮ್ಮ ದನಿಕೇಳಿದ ತಕ್ಷಣ ಹತ್ತಿರಕ್ಕೆ ಬರುವಂತೆ ಮಾಡಿಕೊಳ್ಳುತ್ತಿದ್ದ ವಶೀಕರಣದ ತಂತ್ರಗಳು, ಮೈಮೇಲಿನ ಉಣ್ಣೆ ಎತ್ತಿ, ಮೈತೊಳೆದು ತೋರುತ್ತಿದ್ದ ಆತ್ಮೀಯತೆಗೆ ನಮ್ಮ ಕೈಮೈಗಳನ್ನು ನೆಕ್ಕಿ ಅವು ನೀಡುತ್ತಿದ್ದ ಕಚಗುಳಿಯ ವಿಶಿಷ್ಠ ಅನುಭವ ಕಳೆದು ಹೋದ ಮಾಯಾಲೋಕವೊಂದರಂತೆ ಭಾಸವಾಗುತ್ತದೆ. ಈ ಆತ್ಮೀಯತೆಯಿದ್ದೂ ಅವುಗಳನ್ನು ನಂಬಿ ನಿರುಮ್ಮಳವಾಗಿ ಕೂರುವಂತಿರಲಿಲ್ಲ. ನಂಬಿ ಕೂತಲ್ಲಿ ಪ್ರಮಾಣಪತ್ರಗಳು ಸಿದ್ಧಗೊಳ್ಳುತ್ತಿದ್ದುವು!

ಹಾಗಾಗಿ ಕಾಳಿಂಗನೆಂಬ ಗೊಲ್ಲನ ಹಸುಗಳಿಗಿದ್ದ ಸಿಪಾಯಿ ಶಿಸ್ತಿರದ ನಮ್ಮ ಹಸುಗಳ ಲೋಕವೇ ಒಂದಿದೆ ಎನಿಸುತ್ತದೆ. ಈ ಲೋಕದೊಳಗಡೆ ಹಸು ಎಂದಾಗಲೇ ನನಗೆ ಹಸಿವು-ಹಸುವುಗಳೆರಡನ್ನೂ ಕೇಳಿದೆಂತೆನಿಸುತ್ತದೆ. ನನಗನಿಸುವ ಹಾಗೆ ಈ ಎರಡರ ಅನುಬಂಧವಿಲ್ಲದಿದ್ದಲ್ಲಿ ನನ್ನವರ ಹಟ್ಟಿಗಳಿಗೆ ಅರ್ಥವೇ ಇರಲಿಲ್ಲ. ಹಟ್ಟಿ ಮತ್ತು ಹೊಟ್ಟೆಯ ನಡುವೆ ಬಹಳ ಅಂತರವೇನೂ ಇಲ್ಲ. ಹಾಗಾಗಿಯೇ ಏನೋ ಈ ಹಟ್ಟಿಗಳು ಇರುತ್ತಿದ್ದುದೇ ಮನೆಗೆ ತಾಗಿಕೊಂಡು. ನೆಲದ ಜತೆಗೆ ಗುದ್ದಾಡುತ್ತ ಬದುಕನ್ನು ಕಟ್ಟಿಕೊಳ್ಳುವ ನನ್ನವರ ಲೋಕದ (ಉದ್ಯೋಗದ ಹಸಿವು, ಹೊಟ್ಟೆಯ ಹಸಿವು, ಬೆಳೆಯ ಹಸಿವು, ಬಂಡವಾಳದ ಹಸಿವುಗಳೆಂಬ) ಹಸಿವಿನ ಹಲವು ಬಗೆಗಳಿಗೆ ಸುತ್ತಿಕೊಂಡಿರುವ ಹಸು ಕೇವಲ ಒಂದು ಸಂಗತಿಯಲ್ಲ, ಬದಲಾಗಿ ಬದುಕಿನ ಬಹುಮುಖ್ಯ ಭಾಗ. ಹುಲ್ಲು ಮಾಡುಗಳಿಗೋ, ಮರದಡಿಗೋ ಇರುತ್ತಿದ್ದ ದೈವದ ಹೆಸರಿನ ಕಲ್ಲುಚಕ್ಕೆ/ಮುಂಡಿಗೆ/ಉರಗಳ ಎದುರು ಹರಕೆಯ ಸರಕುಗಳಾಗಿ ಪ್ರತಿಬಾರಿಯ ತಿಂಗೋಡು ಪೂಜೆಗಳಲ್ಲಿ ಇರಿಸುತ್ತಿದ್ದುದು ಚಿನ್ನ ಬೆಳ್ಳಿಯ ಕಿರೀಟಗಳನ್ನಾಗಿರಲಿಲ್ಲ. ಬದಲಾಗಿ ಕಂಚು, ಹಿತ್ತಾಳೆಯಿಂದ ಮಾಡಿದ ಈ ಹಸು,ಕೋಣ,ಕರುಗಳ ರೂಹುಗಳನ್ನ! ನಾಕ್ಕಾಲ್‌ಮುಂಬು ಆಗಿ ಪರಿಭಾವಿತವಾಗಿದ್ದ ಈ ಜಾನುವಾರುಗಳನ್ನ ಹುಲಿಗಳಿಂದ, ಕಾಯಿಲೆಗಳಿಂದ ಕಾಪಾಡಿಕೊಟ್ಟ ದೈವಕ್ಕೆ ನೀಡಿದ ಕುರುಹುಗಳಿವು. ಹಾಗೆಯೇ ಕಟ್ಟೆವಸಂತ ಮಾಡಿ ಕಾಳಭೈರವನನ್ನು ಕೂಗಿ ಕರೆದು ಹರಕೆಯ ಹುಂಡಿಗಳಿಗೆ ಕಾಣಿಕೆ ಹಾಕಿ “ಪಾವುತೀರ್ಥ, ಪಾವುಕಡ್ಲೆಯನ್ನ ಮಂದಾಲಗಿರಿಗೆ ಸೇರಿಸಿಕೊಂಡು ಗಂಟಿಕರು, ಎತ್ತು-ಬೀಜ, ಮಕ್ಕಳು ಮರಿಗಳನ್ನು ತಲೆಕಾದು, ಹೋದಲ್ಲಿ ಬಂದಲ್ಲಿ ಒಳ್ಳೇದು ಕೊಡು” ಎಂದು ಮಾಡುತ್ತಿದ್ದ ಏಕಮುಖೀ ಕೇಳಿಕೆಯಲ್ಲೂ ಜಾಗಪಡೆಯುತ್ತಿದ್ದದ್ದು ಈ ಎತ್ತು ಕರುಗಳೇ. ಜೀವನ ಭದ್ರತೆಯ ಸಾಧನವಾಗಿ ನೇಲ್ (ನೇಗಿಲು), ನೊಗ, ಎತ್ತು, ಬೀಜಗಳನ್ನು ಸಮಾನವಾಗಿ ಗೌರವಿಸುವ ಕೃಷಿಲೋಕ ನೇಗಿಲು-ನೊಗಗಳಿಗೆ ಕದಿರುಕಟ್ಟಿ, ಬೀಜಕ್ಕೆ ಹತ್ರಾವದಿಯ ಪೂಜೆಮಾಡಿ, ಎತ್ತು ಕೋಣಗಳಿಗೆ ಆರ್‍ಹೂಡಿ ಬರುವ ದಿನ ಕಾಲು ತೊಳೆದು, ಕರು ದನ-ಎತ್ತುಗಳಿಗೆ ದೀಪಾವಳಿಯ ದೀಪತೋರಿಸಿ, ಕೊಡಿಹಬ್ಬದಂದು ಹುಂಡುಹಾಕಿ, ರೊಟ್ಟಿ ಕಟ್ಟಿ – ಹೀಗೆ ಎಲ್ಲವನ್ನೂ ಪೂಜೆಯ ವರ್ತುಲದೊಳಗೆ ತಂದು ಪೂಜಿಸಿ ಗೌರವಿಸುವ ಜತೆಗೆ ಬಳಕೆಯ ಸಾಧನ ಪಳೆಯುಳಿಕೆಯಾದಾಗ ಸಂಗ್ರಹಾಲಯದಲ್ಲಿರಿಸುವುದಿಲ್ಲ. “ಮ್ಯೂಸಿಯಂ ಸಂಸ್ಕೃತಿ”ಯ ಮಾದರಿಯದಲ್ಲದ ಈ “ಪ್ರೀತಿಯ” ಲೌಖಿಕ ಜಗತ್ತು ನಿರುಪಯುಕ್ತ ನೇಗಿಲನ್ನು ಬೂದುನೀರ ಒಲೆಗೆ ಹಾಕಿ ಎಣ್ಣೆನೀರ ಸ್ನಾನದ ಸರಕಾಗಿಸಬಲ್ಲದು. ಹಾಗೆಯೇ ಅನುಪಯುಕ್ತ ಸರಕಾದ ಹಸು-ಕರುಗಳನ್ನು ಅಷ್ಟೇ ಸಹಜವಾಗಿ ವಿಕ್ರಯಮಾಡಿ ಹೊಸ ಹಸು ಕರುಗಳ ವರ್ತುಲವನ್ನು ಮುಂದುವರೆಸಬಲ್ಲದು. ಕುಟುಂಬಯೋಜನೆಯನ್ನು ದಿಕ್ಕರಿಸಿಯೂ, ಹಟ್ಟಿಯ ಗಾತ್ರವನ್ನು ವಿಸ್ತರಿಸದೆ ಅದೇ ಅವಕಾಶದಲ್ಲಿ ಪ್ರೀತಿಯನ್ನು ಧಾರೆಯೆರೆದು, ಹಸುವನ್ನು ಸಾಕಿ ಹಸಿವಿಂಗಿಸಿಕೊಳ್ಳಬೇಕಲ್ಲವೇ?. ಇಂತಹ ಹಸು ಕೋಣಗಳ ಮೈತೊಳೆದು ಕೋಡ ಇಡುಕಿನಲ್ಲಿರುವ ಕೊಳೆ ತೆಗೆಯಲು ಬೀಳು/ಹುಲ್ಲಿನ ಕೋಡಶೆಳೆ೫ಹಾಕಿ ಸ್ವಚ್ಛಗೊಳಿಸಿ, ಮೈಮೇಲೆ, ಬಾಲದ ಗೊಂಚಿನಲ್ಲಿ ಮೆತ್ತಿಕೊಂಡಿರುತ್ತಿದ್ದ ಒಣಗು(ಉಣ್ಣೆ), ಚಟ್ಟ್‌ಒಣಗು, ಹೇನು-ಚೀರುಗಳನ್ನು ಎಳೆದು ತೆಗೆದು ಅವುಗಳ ಜತೆಗೇ ಹೊಳೆಯಲ್ಲಿ ಮಿಂದು ಬರುತ್ತಿದ್ದ ನಮ್ಮೊಳಗೆ ಆ ಹಸು-ಹಸಿವುಗಳೆರಡೂ ನೆನಪಾಗಿ ಕೂತುಬಿಟ್ಟಿವೆ.

ಹಟ್ಟಿಯಣೆಯಲ್ಲಿ ಹುಟ್ಟಿ ಬಹುಕಾಲದ ಬದುಕನ್ನು ಅದರ ಸುತ್ತಲೇ ಕಳೆದು ಅಲ್ಲಿಯೇ ಬದುಕಿರುವಲ್ಲಿಯವೆರೆಗೆ ನಮ್ಮದೇ ಎಮ್ಮೆ,ದನಗಳು ಕರೆದ ಹೊಚ್ಚ ಹೊಸ ಅಪ್ಪಟ ಹಾಲನ್ನು ಕುಡಿಯುವ ಅವಕಾಶವಿತ್ತು. ಆದರೆ ನಗರ ಸೇರಿಕೊಂಡ ಮೇಲೆ ದೇವಲೋಕದ ಹಸು ನಂದಿನಿಯ ಹೆಸರು ಹೊತ್ತ ಲಕೋಟೆಯಿಂದ ಸೋರುವುದನ್ನೇ ಹಾಲು ಅಂತ ಕುಡಿಯಬೇಕಾಗಿದೆ. ಬೆಳ್ಳಂಬೆಳಿಗ್ಗೆ ಓದೋ ಪೇಪರ್ ಜೊತೆಗೆ ಮನೆಯಂಗಣಕ್ಕೆ ಬಂದು ಬೀಳುವ ಹಾಲಿನ ಲಕೋಟೆಯಲ್ಲಿ ಹಾಲೇನೋ ಇರುತ್ತದೆ. ಆದರೆ ಅದರ ಜೊತೆಗೆ ನನ್ನ ಕೆಂಪಿ,ಚಿಕ್ಕು, ಬೆಳ್ಳಿಯರ ಕೆಚ್ಚಲ ವಾಸನೆಯಿಲ್ಲ. ಹೋಗಲಿ ಕನಿಷ್ಟ ಒಂದು ಎಮ್ಮೆಯ ಚಿತ್ರವಾದರೂ ಇತ್ತೇ ಅಂದರೆ ಅದೂ ಇಲ್ಲ. ಇರುವುದು ದೇವಲೋಕದ ನಂದಿನಿಯ ಹೆಸರಲ್ಲಿ ಹೈಬ್ರೀಡ್ ಹಸುವೊಂದರ ಚಿತ್ರ. ಹಾಲು ಕುಡಿಯುವುದು ಬೇರೆ, ಹಾಲು ಕೊಡುವ ಹಸುಗಳೊಂದಿಗೆ ಬದುಕುವುದು ಬೇರೆ. ನನ್ನ ಮನೆಯೊಳಗೆ ನಂದಿನಿಯ ಪ್ಯಾಕೇಟ್ ಬಂದು ಬಿದ್ದಾಗ ಆ ಹೈಬ್ರೀಡ್ ತಳಿಯ ಹಸುವಿನ ಚಿತ್ರಣ ಕಂಡಾಗಲೆಲ್ಲಾ ನನ್ನೊಳಗೆ ಅತೀವ ಸಂಕಟವಾಗುವುದುಂಟು. ಉದ್ಯೋಗದ ಬೇಟೆಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಊರು ಬಿಟ್ಟವರು ನಾವುಗಳು. ಹೀಗಿದ್ದು ನಾನು ಬದುಕಿದ ಮನೆ ಇರುವಲ್ಲಿಯೇ ಇದೆ. ಹಸು ಕಟ್ಟುತ್ತಿದ್ದ ಹಟ್ಟಿಯೂ ಇದೆ. ಆದರೆ ಈಗ ಆ ಹಟ್ಟಿಯಲ್ಲಿ ನನ್ನ ಕೆಂಪಿ, ಬುಡ್ಡಿ, ಕರಿಯಮ್ಮನಾಗಲಿ, ಕರಿಯ, ನೀಲ ಕೆಂಪಣ್ಣ್ಣನಾಗಲೀ, ಚಿಕ್ಕು, ಬೆಳ್ಳಿ ಎಮ್ಮೆಯಾಗಲೀ, ಬೆಳ್ಳು, ಕಾಳುಗಳೆಂಬ ದೀರ್ಘಕಾಯದ ಕೋಣಗಳಾಗಲೀ ಇಲ್ಲದಂತಾಗಿ ಖಾಲಿಯಂತಿದೆ. ಈಗ ಅಲ್ಲಿರುವುದೂ ನಂದಿನಿ ಪ್ಯಾಕೇಟ್ ಮೇಲೆ ಮುದ್ರಿತವಾದ kamadenu(ಆದರೆ ಜೀವಂತವಾದ) ಬೂಸಾ ತಿಂದು ಹಾಲು ಕರೆಯುವ ಯಂತ್ರ! ಬೆದೆಗೆ ಬಂದಾಗ ಪಶುವೈದ್ಯನ ಸೂಜಿಯ ಮೂಲಕ ಗರ್ಭಕಟ್ಟುವ, ಗಂಡುಕರುಗಳಾದರೆ ಹಾಲು ಕೊಡದೇ ಕೊಲ್ಲಲ್ಪಡುವ, ಏನೇನೊ ರೋಗದ ರೂಢಿಯಲ್ಲಿ ಮತ್ತೆ ಮತ್ತೆ ವ್ಯಾಕ್ಷಿನ್ ಪಡೆಯುವ ಈ ಪರದೇಶಿ ಹಸುವಿನೆದುರು ದೀಪಾವಳಿಯ ರಾತ್ರಿ ಗದ್ದೆಗೆ ಹಿಟ್ಟು ಬಡಿಸಿ ಬಂದ ಮೇಲೆ “ಆಸಾಡಿ ಹಬ್ಬದ ಆಸಿ ಕಂಡೆ, ದೀಪೋಳಿ ಹಬ್ಬದ ದೀಪ ಕಂಡೆ, ಮುಂದ್ ಬತ್ತ್ ಕೊಡಿ ಕಾಣ್” ಎಂದು ಹಾಡು ಹಾಡುತ್ತಾ ಹಿಟ್ಟು ನೀಡುವ ಅಮ್ಮ ಬದಲಾಗಲಿಲ್ಲ. ಅಮ್ಮನ ಸಿಕ್ಕ (ಮಜ್ಜಿಗೆ ತೂಗಿಡುವ ಸಾಧನ), ಕಿರ್‍ಗಾಲು, ಕಡಾಲು (ಕಡೆಗೋಲು)ಗಳು ಅಟ್ಟ ಹತ್ತಿವೆ/ಕಣ್ಮರೆಯಾಗಿವೆ. ಅಮ್ಮನ ಹಾಗೆಯೇ ಅಚ್ಚೊತ್ತಿ ನಿಂತ ನನ್ನ ಒಟ್ಟು ಹಸು ಕರುಗಳೆಂಬ ಸಂಗತಿಗಳ ಜತೆಗಿನ ಬಾಲ್ಯ ನನ್ನವರ ಹಸುವಿನ ಲೋಕದ ಪರಿಚಿತ ಮುಖವಾಗಿಯೇ ಉಳಿದುಕೊಂಡಿದೆ. ಹಾಗೆಯೇ ಇವತ್ತು ನಮ್ಮ ಹಟ್ಟಿಗಳಲ್ಲಿ ಅವತರಿಸಿರುವ ದೇವಲೋಕದ ನಂದಿನಿಯೆಂಬ ಹಾಲುಯಂತ್ರಗಳು ಅವುಗಳ ಗಂಡುಕರುಗಳ ಉದ್ದೇಶಿತ ಕೊಲೆಗಳು ನಮ್ಮ ಹಸಿಯಾದ ಹಸಿವೆಯ ಭಾಗವೇ ಆಗಿವೆ. ಹಾಗಾಗಿ ನಮ್ಮ ಪಾಲಿಗೆ ಹಸುವೆಂದರೆ ಕ್ಯಾಲೆಂಡರ್‌ಗಳಲ್ಲಿಯೋ, ವರ್ಣಚಿತ್ರಗಳಲ್ಲಿಯೋ ಮಮತೆಯ ಪೋಸ್‌ನಲ್ಲಿ ಅಂಟಿಸಲ್ಪಟ್ಟ ನಾಲ್ಕು ಕಾಲಿನ ಹುಲ್ಲು ತಿನ್ನುವ ದೇವರಲ್ಲ್ಲ. ಅಥವಾ ಹಸುಸಾಕದೇ ಪ್ಯಾಕೇಟ್ ಹಾಲು ಕುಡಿಯುವವರು ಕಲ್ಪಿಸಿಕೊಟ್ಟಿರುವ ಕಾಮಧೇನುವೊ, ಪುಣ್ಯಕೋಟಿಯೊ ಅಲ್ಲ. ಅದೊಂದು ಆಪ್ತವಾದ ಜೀವ. ಪ್ರೀತಿಗೆ ಕಾರಣವಾಗುತ್ತಾ ಬದುಕಿಗೆ ಆಧಾರವಾಗಬೇಕೆಂದು ಸಹಜ ಮನುಷ್ಯರಾದ ರೈತರು, ದನಗಾಹಿಗಳು ಇಲ್ಲಿಯವರೆಗೆ ಮತ್ತು ಇನ್ನು ಮುಂದು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರತ್ಯೇಕವಾದ ಲೋಕ. ಆ ಲೋಕದೊಳಗೆ ಪ್ರವೇಶ ಕಾಣದೆ ಮತ್ತು ಪ್ರವೇಶ ಬಯಸದ ಶುಭ್ರವಸನ ದಾರಿಗಳು ಭಾವಿಸುವಂತೆ ಒಂದೇ ಏಟಿಗೆ ಆರಾಧನೆ ಮಾಡಿಯೋ, ಪೂಜ್ಯತೆಯ ಸರಕಾಗಿ ಮ್ಯೂಸಿಯಂನಲ್ಲಿಟ್ಟೋ ಕೂರುವ ಜಗತ್ತಲ್ಲ ಅದು. ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಲಾರದೆ ಬಾಳಿನ ಬವಣೆಯಿಂದ ಬೇಯುವ ನೈಜ ಅನುಭವದ ಆ ಲೋಕದಲ್ಲಿ ಭಾವನೆಯಿದೆ, ಬದುಕಿದೆ, ವ್ಯವಹಾರವಿದೆ, ಬಳಕೆಯಿದೆ. ಇಂತಹ ಸಂಕೀರ್ಣ ಆಯಾಮದಲ್ಲಿ ನಿಜಗೊಳ್ಳುವ ಹಸುವಿನ ಲೋಕವನ್ನು ಯಾವುದೋ ಒಂದು ಚಿತ್ರಕ್ಕ್ಕೆ/ಪ್ರತಿಮೆಗೆ ಜೋತುಹಾಕಲಾಗದು. ಕಾಳಿಂಗನೆಂಬ ಗೊಲ್ಲನ ಲೋಕದಲ್ಲಿಯ ಗಂಗೆ, ಗೌರಿ, ತುಂಗೆಯರೂ ಅಲ್ಲಿದ್ದಾರೆ. ಹಾಗೆಯೇ (ಗೊಡ್ಡು) ಅಹಲ್ಯಾನಂತವರೂ ಅಲ್ಲಿದ್ದಾರೆ. ಅಂತಹ ಲೋಕದಲ್ಲಿ ದನ ಕಟ್ಟುವ ಹಟ್ಟಿಗಳು ದೇವಾಲಯವೂ ಆಗುತ್ತವೆ.(ತಾತ್ಕಾಲಿಕವಾಗಿ) ಕೆಲಹೊತ್ತಿನ ನಿಲ್ದಾಣಗಳೂ ಆಗುತ್ತವೆ. ಹಾಗೆಯೇ ಜೀತದ ಮನೆಯೂ ಆಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಹಟ್ಟಿಯಲ್ಲಿರುವುದು “ಕೊರಳಿಗೆ ಕಟ್ಟುವ ಹಗ್ಗಗಳೇ ವಿನಃ ಮಲ್ಲಿಗೆಯ ದಂಡೆಯಲ್ಲ.”

ಹಸು, ಎಮ್ಮೆ, ಎತ್ತುಗಳ ಕೊರಳಿಗೆ ಹಗ್ಗ ಕಟ್ಟಿ, ಬೆನ್ನು ಸವರಿ, ಸರಿಯೆನಿಸಿದಾಗ ಬಾಸುಂಡೆ ಬರುವಂತೆ ಬಾರಿಸಿ, ಮಾನ ತೆಗೆಯದಂತೆ ನಿಯಂತ್ರಿಸಲು ಒದ್ದಾಡಿ, ಮಳೆಗಾಲದ ಉಳುಮೆಗೆ ಜೋಡಿಲ್ಲದವರ ಪಾಡನ್ನು ಕಂಡು ಅನುಭವಿಸಿದ ನನಗೆ ಇತ್ತೀಚಿಗಿನ ದಿನಗಳಲ್ಲಿ ಅವುಗಳನ್ನು ಸಾಕುವುದೇ ಒಂದು ಶಿಕ್ಷೆಯಾಗುತ್ತಿರುವುದು ಆತಂಕದಾಯಕವೆನಿಸುತ್ತಿದೆ. ಹಿಂದೆಂದೂ ಕಂಡುಕೇಳರಿಯದ ಹಾಗೆ ದಿಡೀರ್ ಆಗಿ ಗೋವಿನ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿರುವ ಈ ಗಳಿಗೆಯಲ್ಲಿ ಅದೊಂದು ಜೀವವೆಂಬುದಕ್ಕಿಂತ ಹೆಚ್ಚಾಗಿ ಲಾಂಛನವಾಗುತ್ತಿರುವುದು ಕಳವಳಕಾರಿ ಸಂಗತಿ. ಹಸುವೆಂಬುದನ್ನು ಒಂದು ಏಕರೂಪಿ ಅಚ್ಚಿನಲ್ಲಿ ನಿರೂಪಿಸುತ್ತಿರುವ ಈ ಹೊತ್ತಿನಲ್ಲಿ ನಾನು ಕಂಡ “ಹಸುವಿನ ಲೋಕ”, ಅದರ ಪಾಡು, ಅನಿವಾರ್ಯತೆಗಳನ್ನು ಈ ಮೂಲಕ ಹಂಚಿಕೊಂಡು ಹಗುರಾಗ ಬಯಸುತ್ತೇನೆ.

(ಮುಂದುವರೆಯುತ್ತದೆ…)