Category Archives: ನಮ್ಮ ಲೇಖಕರು

ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಶ್ರೀಗಂಧ ಸಂಸ್ಕೃತಿಯ ಕಲ್ಲಡ್ಕದ ಭಟ್ಟರಿಗೆ ಕರಿಗಂಧದ ಪ್ರಸಾದ!

Naveen Soorinje


ನವೀನ್ ಸೂರಿಂಜೆ


“ತಲೆ ಸರಿ ಇರೋ ದೈವದ ಪಾತ್ರಧಾರಿಯು ದೈವಸ್ಥಾನಕ್ಕೆ ಬಂದ ಯು.ಟಿ.ಖಾದರ್ ಗೆ ಪ್ರಸಾದ ನೀಡಲ್ಲ. ಯು ಟಿ ಖಾದರ್ ಭೇಟಿ ಕೊಟ್ಟ ಎಲ್ಲಾ ದೈವ/ಭೂತಸಾನಗಳಿಗೆ ಬ್ರಹ್ಮಕಲಶ ಮಾಡಬೇಕು” ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ಹೇಳಿಕೆ ನೀಡಿರುವುದು ಸುದ್ದಿಯಾಗಿದೆ. ಅವರಾಡಿದ ಮಾತುಗಳು ಪ್ರತಿಗಾಮಿ ವೈದಿಕ ಶಕ್ತಿಗಳು ”ಮೈಲಿಗೆ-ಜೀರ್ಣೋದ್ಧಾರ-ಬ್ರಹ್ಮಕಲಶ”- ಈ ಸಮೀಕರಣವನ್ನಿಟ್ಟುಕೊಂಡು ಕರಾವಳಿಯ ಜನಾದರಣೀಯ ಭೂತಾರಾಧನೆ ಪರಂಪರೆಯನ್ನು ಕೆಡಿಸಿದ ಚರಿತ್ರೆಯನ್ನು ಪ್ರತಿನಿಧಿಸುತ್ತವೆ.

ಭೂತಗಳು ಕರಾವಳಿಯ ಮಣ್ಣಿನ ದೈವಗಳು. ಬ್ರಾಹ್ಮಣರು ಕರಾವಳಿಗೆ ಬರುವುದಕ್ಕೂ ಮೊದಲು ಈ ಶೂದ್ರ ದೈವಾರಾಧನೆ ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ದೈವ/ಭೂತಾರಾಧನೆಗೂ ಬ್ರಾಹ್ಮಣರಿಗೂ, ವೈದಿಕರ ಬ್ರಹ್ಮಕಲಶಕ್ಕೂ ಸಂಬಂಧವಿಲ್ಲ. ಬೂತಸಾನವೇನಾದರೂ ಅಶುದ್ದಿಯಾಯ್ತು ಎಂದರೆ ಸಾನದ ಬಾವಿಯಿಂದ ಒಂದು ತಂಬಿಗೆ ನೀರು ಸಿಂಪಡಿಸಿ ಶುದ್ದಗೊಳಿಸುವ ಶಕ್ತಿ ಭೂತಸಾನದ ಮನೆತನಕ್ಕಿದೆ. ಬೇರೆ  ಜಾತಿ/ ಧರ್ಮದ ವ್ಯಕ್ತಿ ಭೂತಸಾನಕ್ಕೆ ಬಂದನೆಂದರೆ ಅದು ಸಾನದೊಳಗಿರುವ ದೈವಕ್ಕೆ ಪ್ರತಿಷ್ಠೆಯ ವಿಚಾರವೇ ಹೊರತು ಅವಮರ್ಯಾದೆಯಲ್ಲ. ಇಷ್ಟಕ್ಕೂ ದೈವವೊಂದು ತಾನು ಎಷ್ಟು ಜಾತಿ, ಧರ್ಮದವರಿಗೆ ಗೌರವ ಕೊಟ್ಟೆ ಎನ್ನುವುದನ್ನು ತನ್ನ ಮಾತಿನಲ್ಲಿ ಉಲ್ಲೇಖಿಸುತ್ತದೋ ಅಷ್ಟು ಅದರ ಹಿರಿಮೆ ಹೆಚ್ಚಿದೆ ಎಂದರ್ಥ.

ಜಾರಂದಾಯ, ಕೋಡ್ದಬ್ಬು, ತನ್ನಿಮಾನಿಗ, ರಾಹು, ಗುಳಿಗ, ಬಂಟ, ಕಲ್ಲುರ್ಟಿ, ಸತ್ಯಪ್ಪೆ ಹೀಗೆ ತುಳುನಾಡಿನ ಸಾವಿರದ ಒಂದು ದೈವಗಳನ್ನು ಭೂಮಿಯಲ್ಲಿ ಮನುಷ್ಯನ ಮೇಲೆ ದರ್ಶನ ಬರಿಸಿದಾಗ ಎಲ್ಲಾ ಜಾತಿ ಧರ್ಮಗಳನ್ನು ಕರೆದೇ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸುತ್ತದೆ. “ಗುತ್ತಿನಾರ್ಲೇ, ಮೂಲ್ಯರೇ, ಪೂಜಾರ್ಲೇ, ಸೇಕುರ್ಕುಲೇ….. ಒರಿಯತ್ತು, ಒರಿಯಂದು…. ” ಅಂತ ದೈವ ಎಲ್ಲಾ ಜಾತಿ ಧರ್ಮದವರನ್ನು ಕರೆದು ಗೌರವಿಸಿ ಅವರೆಲ್ಲರ ಅನುಮತಿ ಪಡೆದು ತನ್ನ ನಡಾವಳಿಯನ್ನು  ಪ್ರಾರಂಭಿಸುತ್ತದೆ. ‘ಸೇಕುರ್ಕುಲೇ’ ಅಂದರೆ ತುಳುನಾಡಿನ ಮುಸ್ಲೀಮರಾದ ಬ್ಯಾರಿಗಳನ್ನು ಉದ್ದೇಶಿಸಿರುವುದು.

”ತಲೆ ಸರಿ ಇರುವ ದೈವದ ಪಾತ್ರಿ ಯು.ಟಿ. ಖಾದರ್ ಗೆ ಬೂಳ್ಯ ಕೊಡಲ್ಲ” ಎಂದು ಹೇಳಿರೋದು ತುಳುನಾಡಿನ ದೈವಗಳಿಗೆ ಪ್ರಭಾಕರ ಭಟ್ಟರು ಮಾಡಿದ ಅವಮಾನ. ದೈವಗಳೆಂದರೆ “ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ”ಗಳು (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂದೇ ಬಣ್ಣಿಸಲಾಗುತ್ತದೆ.

ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ ಒಂದೊಂದೇ ಶೂದ್ರ, ದಲಿತರ ದೈವಸ್ಥಾನಗಳನ್ನು ವೈದಿಕೀಕರಣಗೊಳಿಸಲು ಪ್ರಾರಂಭಿಸಿದರು ಎಂಬುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ. ಬ್ರಾಹ್ಮಣರಿಗೆ ಸಂಬಂಧವೇ ಇಲ್ಲದ ಕಿರುಸಂಸ್ಕೃತಿಯ ಒಳಗೆ ವೈದಿಕ ಆಚರಣೆಗಳು ಕಾಣಿಸಿಕೊಳ್ಳಲಾರಂಭಿದವು. ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ, ಅವರ ಕುತಂತ್ರಗಳಿಗೆ ಬಲಿಯಾದ ಎಷ್ಟೋ ಶೂದ್ರ, ದಲಿತ ವೀರಪುರುಷರು- ವೀರ ಮಹಿಳೆಯರು ನಮ್ಮನ್ನು ಕಾಪಾಡುವ ದೈವಗಳಾಗಿದ್ದಾರೆಂದು ಜನಪದ ನಂಬಿಕೊಂಡೇ ಬಂದಿದೆ. ಇತ್ತಿಚಿನ ಹತ್ತಿಪ್ಪತ್ತು ವರ್ಷಗಳಲ್ಲಿ ಯಾರಿಂದ ನಮ್ಮ ಹಿರೀಕರು ಹತರಾಗಿ ದೈವಗಳಾದರೋ ಅವರಿಂದಲೇ ಹಿರೀಕರ ದೈವಸ್ಥಾನಗಳಿಗೆ ಬ್ರಹ್ಮಕಲಶ, ಶುದ್ದೀಕರಣ ಹೋಮ ಮಾಡಿಸಲಾಗುತ್ತಿದೆ. ಪುರೋಹಿತರು ಮಾಡುವ ಬ್ರಹ್ಮಕಲಶದ ಹೋಮಕ್ಕೂ ನಮ್ಮ ಬೂತಗಳಿಗೂ ಸಂಬಂಧವೇ ಇಲ್ಲ. ದೈವಗಳಿಗೆ ಹೂ ನೀರು ಇಟ್ಟರೆ ಅದೇ ದೊಡ್ಡ ಬ್ರಹ್ಮಕಲಶ. ಹಳೇ ದೈವಸ್ಥಾನ ಕೆಡವಿ ಹೊಸ ದೈವಸ್ಥಾನ ಕಟ್ಟುವಾಗ ಒಂದು ಬಿದಿರ ಬುಟ್ಟಿಯಲ್ಲಿ ದೈವದ ಮೂರ್ತಿಗಳನ್ನು ಇಟ್ಟು ಅದಕ್ಕೆ ಬಾವಿಯ ನೀರು ಮತ್ತು ಗುಡ್ಡದಲ್ಲಿ ಹೇರಳವಾಗಿ ಸಿಗುವ ಕೇಪುಲ ಹೂ ಇಟ್ಟರೆ ಅದೇ ದೈವಸ್ಥಾನದ ಶುದ್ದೀಕರಣ ಪ್ರಕ್ರಿಯೆ. ಈಗೀಗ ನಮ್ಮ ದೈವಸ್ಥಾನಗಳ ಶುದ್ದೀಕರಣಕ್ಕೆ ವೈದಿಕರು ಬಂದು ನಮ್ಮನ್ನೇ ಅಸ್ಪೃಶ್ಯರಂತೆ ದೂರ ನಿಲ್ಲಿಸಲಾಗುತ್ತಿದೆ. ಇದನ್ನೇ ಯು.ಟಿ. ಖಾದರ್ ಬಂದು ಹೋಗಿರುವ ಭೂತಸಾನಗಳಲ್ಲಿ ಮಾಡುವಂತೆ ಕಲ್ಲಡ್ಕ ಭಟ್ಟರು ಹೇಳಿದ್ದಾರೆ.

ಹಾಗಂತ ಬ್ರಾಹ್ಮಣರಿಂದ ಅಥವಾ ಮೇಲ್ವರ್ಗಗಳ ದಬ್ಬಾಳಿಕೆಗೆ ಬಲಿಯಾಗಿ ಬೂತಗಳಾಗಿದ್ದು ಕೇವಲ ಶೂದ್ರರು ಮತ್ತು ದಲಿತರು ಮಾತ್ರವಲ್ಲ. ಬ್ರಾಹ್ಮಣ ಸಮುದಾಯಕ್ಕೂ ಅಂತದ್ದೊಂದು ಹಿರಿಮೆಯಿದೆ. “ಭಟ್ಟರಾಗಿದ್ದು ಭಟ್ಟರಂತಾಗದೇ” ಬ್ರಾಹ್ಮಣ ಸಮುದಾಯದೊಳಗೆ ಇದ್ದುಕೊಂಡೇ ಸಮಾನತೆಗಾಗಿ ಹೋರಾಡಿದವರನ್ನು ಪ್ರತಿಗಾಮಿ ವೈದಿಕ ಶಕ್ತಿಗಳೇ ಮುಗಿಸಿದ್ದಾರೆ. ಅಂತಹ  ಬ್ರಾಹ್ಮಣರನ್ನೂ ಶೂದ್ರರು ದೈವಗಳಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ.  ಭಟ್ಟಿ ಭೂತ, ಬ್ರಾಣ ಭೂತ / ಮಾಣಿ ಭೂತ, ಮುಂಡೆ ಭೂತ/ ಮರ್ಲು ಮಾಣಿ, ಓಪೆತ್ತಿ ಮದಿಮಾಳ್, ಬ್ರಾಹ್ಮಣತಿ ಭೂತ ಹೀಗೆ ಹಲವು ಬ್ರಾಹ್ಮಣ ಭೂತಗಳು ಶೂದ್ರರ ಆರಾಧನೆಯಲ್ಲಿದೆ. ಬ್ರಾಹ್ಮಣ ಸಮುದಾಯದ ಪುರೋಹಿತಶಾಹಿ ಚೌಕಟ್ಟನ್ನು ಮೀರಿ ಶೂದ್ರರ ಜೊತೆ ಸಂಬಂಧ ಸಾಧಿಸಿದ ಕ್ರಾಂತಿಕಾರಿಗಳನ್ನು “ಮಾಯ” ಮಾಡಲಾಯಿತು. ಅವರು ದೈವಗಳಾದರು.‌ ಕಲ್ಲಡ್ಕ ಭಟ್ಟರಂತವರಿಗೆ ದಲಿತ ದೈವಗಳನ್ನು ಮಾದರಿಯಾಗಿಟ್ಟುಕೊಳ್ಳಲು ಮಡಿಮೈಲಿಗೆಯಾದರೆ ಇಂತಹ ಬ್ರಾಹ್ಮಣ ದೈವಗಳನ್ನಾದರೂ ಮಾದರಿಯನ್ನಾಗಿಸಿಕೊಂಡು ಜಾತಿ ಧರ್ಮದ ಬಗ್ಗೆ ಮಾತನಾಡಲಿ.

ದೈವ/ಭೂತಸಾನದಲ್ಲಿ ಮುಸ್ಲೀಮನಿಗೆ ಪ್ರಸಾದ ಕೊಡಬಾರದು ಎಂದು ಭಟ್ಟರು ಹೇಳುವುದಕ್ಕೆ ಅದೇನು ವರ್ಣನೀತಿ ಅನುಸರಿಸೋ ಬ್ರಾಹ್ಮಣರ ದೇವಸ್ಥಾನವಲ್ಲ. ಬ್ರಾಹ್ಮಣರ ದೇವಸ್ಥಾನದಲ್ಲಿ ಯಾರಿಗೆ ಶ್ರೀಗಂಧದ ಪ್ರಸಾದ ಕೊಡಬೇಕು, ಯಾರಿಗೆ ಕೊಡಬಾರದು, ಯಾರಿಗೆ ಯಾವ ರೀತಿ, ಎಷ್ಟು ಎತ್ತರದಿಂದ, ಎಷ್ಟು ದೂರದಿಂದ ಗಂಧ ಪ್ರಸಾದ ನೀಡಬೇಕು ಎಂಬ ಅಲಿಖಿತ ನಿಯಮಗಳಿವೆ. ಆದರೆ ಭೂತಸಾನದಲ್ಲಿ ನೇಮ ಮುಗಿಯೋ ಕೊನೇ ಗಳಿಗೆಯಲ್ಲಿ ಬೂತ/ದೈವ ಗುತ್ತಿನಾರ ಬಳಿ ಕೇಳುತ್ತದೆ “ಎನ್ನ ಕರಿಗಂಧ ತಿಕ್ಕಂದೆ ಏರ್ಲಾ ಪೋತಿಜೆರತ್ತಾ ?” ( ನನ್ನ ಕರಿಗಂಧ ಸಿಗದೇ ಯಾರೂ ಹೋಗಿಲ್ಲ ತಾನೆ ?) ಎಂದು ಪ್ರಶ್ನಿಸುತ್ತದೆ. ಬ್ರಾಹ್ಮಣರ ದೇವಸ್ಥಾನದಲ್ಲಿ ಶ್ರೀಗಂಧದ ಕೊರಡು ತೇಯ್ದು ಜಾತಿ ಆಧಾರಿತ ಗಂಧ ಪ್ರಸಾದ ನೀಡಿದರೆ ಬೂತಸಾನದಲ್ಲಿ ಮಸಿ ಮತ್ತು ತೆಂಗು, ಎಣ್ಣೆಯಿಂದ ತೇಯ್ದ ಕರಿಗಂಧ ನೀಡಲಾಗುತ್ತದೆ. ಜಾತಿ, ಮತ, ಧರ್ಮ ಬೇದಭಾವ ಇಲ್ಲದೇ ಭೂತಸಾನಕ್ಕೆ ಬಂದ ಎಲ್ಲರಿಗೂ ಕರಿಗಂಧ ನೀಡಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಭಟ್ಟರದ್ದು ಶ್ರೀಗಂಧದ ಸಂಸ್ಕೃತಿ. ತುಳುವರದ್ದು ಕರಿಗಂಧದ ಸಂಸ್ಕೃತಿ. ಇಲ್ಲಿಯ ಸಂಸ್ಕೃತಿ ಎಲ್ಲರನ್ನೂ ಒಳಗೊಳ್ಳುವ, ತನ್ನವರೆನ್ನುವ ಪೆರ್ಮೆಯ ಸಂಸ್ಕೃತಿ. ತುಳುವ ಭಾಷೆಯ ಮೌಖಿಕ ಪರಂಪರೆಯ ಶ್ರೀಮಂತ ಅಭಿವ್ಯಕ್ತಿ ಬಲೀಂದ್ರ ಪಾಡ್ದನದ ಅವೃತ್ತಿಯೊಂದರಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು ವಾಮನನ್ನುಕೇಳುತ್ತಾನೆ. ಆಗ ವಾಮನನು,

“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”

ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿಗಳಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ). ಇದು ತುಳುನಾಡ ಸಂಸ್ಕೃತಿ. ಅದು ವೈದಿಕ ವಾಮನನ್ನೂ ಸಾಮರಸ್ಯ ಬಯಸುವ ಅಪ್ಪಟ ತುಳುವನನ್ನಾಗಿಸಿದೆ. ಸದ್ಯಕ್ಕೆ ಕರಾವಳಿಯ “ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ”ಗಳು ಮತ್ತು ಅವರನ್ನು ನಂಬುವ ತುಳುವರು ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಭೂತಸಾನದ ಕರಿಗಂಧ ಪ್ರಸಾದವನ್ನ ನೀಡಿ ಅವರನ್ನು ಸತ್ಯದ ದಾರಿಯಲ್ಲಿ ನಡೆಯುವಂತೆ ಮಾಡಬೇಕಿದೆ.

ತ್ರಿಪುರಾದಲ್ಲಿ ಬುದ್ದ, ಭೀಮರ ಕಮ್ಯೂನಿಸಂ : ರಕ್ತಚರಿತೆಯಲ್ಲಿ ಚಿರಸ್ಥಾಯಿ ಸೌಹಾರ್ದದ ಹೆಸರುಗಳು

Naveen Soorinje


ನವೀನ್ ಸೂರಿಂಜೆ


ತ್ರಿಪುರಾದಲ್ಲಿ ಎಡಪಂಥೀಯರ ಮೇಲೆ ಇಷ್ಟೊಂದು ರೀತಿಯ ದಾಳಿ ನಡೆಯುತ್ತಿದ್ದರೂ ಅವರ ಸಹನೆ ಅಚ್ಚರಿ ಮೂಡಿಸುತ್ತೆ. ಬುದ್ದ, ಅಂಬೇಡ್ಕರ್ ಜೊತೆಗೆ ಲೆನಿನ್ ಕ್ರಾಂತಿಗೆ ಮುಂದಾದರೆ ಬಹುಶಃ ತ್ರಿಪುರಾದ ಕಮ್ಯುನಿಷ್ಟರಾಗಬಹುದು. ಐಪಿಎಫ್’ಟಿ, ಎನ್.ಎಲ್.ಎಫ್.ಟಿ, ಎಟಿಟಿಎಫ್ ದಾಳಿ ಇವತ್ತಿನದ್ದಲ್ಲ. ಈಗಿನದ್ದಕ್ಕಿಂತಲೂ ಕರಾಳ ದಾಳಿ ಪ್ರತ್ಯೇಕತಾವಾದಿಗಳಿಂದ ನಡೆದಿತ್ತು. ಈಗ ನಡೆಯುತ್ತಿರೋದು ಪ್ರಭುತ್ವದ ಜೊತೆಗೂಡಿದ ಬಂದೂಕುದಾರಿಗಳ ದಾಳಿ. ವಿಚಿತ್ರ ಎಂದರೆ ಬುಡಕಟ್ಟು ಪ್ರತ್ಯೇಕ ರಾಜ್ಯ ಅಥವಾ ದೇಶಕ್ಕಾಗಿ ನಡೆಯುತ್ತಿದ್ದ ಬುಡಕಟ್ಟುಗಳ ಬಾಂಗ್ಲಾ ಪ್ರೇರಿತ ಸಶಸ್ತ್ರ ಹೋರಾಟಕ್ಕೆ ಬಲಿಯಾಗಿರೋದು ಎಡಪಂಥದ ಬುಡಕಟ್ಟು ನಾಯಕರೇ ಅತ್ಯಧಿಕ. ಬುಡಕಟ್ಟು ಅಲ್ಲದ ಮುಸ್ಲೀಮರು ಮತ್ತು ದಲಿತರನ್ನು ಬುಡಕಟ್ಟು ಉಗ್ರರು ಕೊಲೆ ಮಾಡಲು ಬಂದಾಗ ಅದಕ್ಕೆ ಎದುರು ನಿಂತು ಕೊಲೆಯಾದವರೆಲ್ಲರೂ ಸಿಪಿಐಎಂ ನ ಬುಡಕಟ್ಟು ನಾಯಕರು, ಶಾಸಕರು, ಸಚಿವರು. ಇದಕ್ಕೊಂದು ಧೀರ್ಘ ರಕ್ತಸಿಕ್ತ ಇತಿಹಾಸವೇ ಇದೆ.

ಅದು 1996 ಜನವರಿ ತಿಂಗಳು. ಸಿಮ್ನ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಶಾಸಕ ಪ್ರಣಬ್ ದೆಬ್ಬರ್ಮಾರನ್ನು ಹಾಡುಹಗಲೇ ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಭಯೋತ್ಪಾದನೆ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಅಪಹರಣ ಮಾಡಿದರು. ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಪ್ರಣಬ್ ದೆಬ್ಬರ್ಮಾ ತಪ್ಪಿಸಿಕೊಂಡು ಬಂದರು.

1996 ಮೇ 12 ರಂದು ಎಟಿಟಿಎಫ್ ( ಆಲ್ ತ್ರಿಪುರ ಟೈಗರ್ಸ್ ಫೋರ್ಸ್) ಬಂದೂಕುದಾರಿಗಳು ಬುಡಕಟ್ಟು ಅಲ್ಲದ ದಲಿತರ ಮೇಲೆ ದಾಳಿ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಿಪಿಐಎಂ ಹಿರಿಯ ಮುಖಂಡರೂ ಆಗಿರುವ ಬುಡಕಟ್ಟು ಸಮುದಾಯದ ಚಂದ್ರ ಮೋಹನ್ ದೆಬ್ಬರ್ಮಾ ಕೊಲೆಗೀಡಾಗುತ್ತಾರೆ. ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ನಡೆದ ಹೋರಾಟದಲ್ಲಿ ಬುಡಕಟ್ಟು ಅಲ್ಲದ ಏಳು ಜನರನ್ನು ರಕ್ಷಿಸಲು ಸಿಪಿಐಎಂ ನ ಬುಡಕಟ್ಟು ನಾಯಕ ಪ್ರಾಣತ್ಯಾಗ ಮಾಡುತ್ತಾರೆ.

ವಿಪರ್ಯಾಸ ಎಂದರೆ 1997 ಮೇ ಯವರೆಗೆ ಒಟ್ಟು ಒಂದು 300 ಜನ ಸಿಪಿಐಎಂ ಅಥವಾ ಸಿಪಿಐಎಂ ಬೆಂಬಲಿತ ಬುಡಕಟ್ಟು ಜನರು ಪ್ರತ್ಯೇಕತಾವಾದಿಗಳ ದಾಳಿಗೆ ಒಳಗಾಗಿ ಸತ್ತಿದ್ದಾರೆ ಎಂದು ಸರಕಾರ ಅಧಿಕೃತವಾಗಿ ಘೊಷಿಸಿತು.

ಅದು ತ್ರಿಪುರಾದ ಚಮನು ಗ್ರಾಮ. ಟೀ ಎಸ್ಟೇಟ್ ಮತ್ತು ಕಾಡಂಚಿನ ಕೃಷಿಯಲ್ಲಿ ತೊಡಗಿಕೊಂಡಿದ್ದ ಅಸಂಘಟಿತ ಕೃಷಿ ಕಾರ್ಮಿಕರನ್ನು ಎಡಪಂಥೀಯ ಕಾರ್ಮಿಕ ಚಳುವಳಿ ಸಂಘಟಿಸುತ್ತಿತ್ತು. 1997 ಜೂನ್ 09 ರಂದು ಎನ್.ಎಲ್.ಎಫ್.ಟಿ ಪ್ರತ್ಯೇಕತಾವಾದಿಗಳು ಗುಡ್ಡದ ತುದಿಯಿಂದ ಗೆರಿಲ್ಲಾ ಮಾದರಿಯಲ್ಲಿ ಎರಡು ಬಾರಿ ದಾಳಿ ನಡೆಸಿ ಚಮನು ಗ್ರಾಮದಲ್ಲಿ ಕಾರ್ಮಿಕ ಸಂಘಟನೆಯ 9 ಕಾರ್ಯಕರ್ತರನ್ನು ಬಲಿ ತೆಗೆದುಕೊಂಡಿತು. ಆ ಬಳಿಕ ನಡೆದ ಸಂಘರ್ಷದಲ್ಲಿ ಪ್ರತ್ಯೇಕತಾವಾದಿಗಳು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಕೊಲ್ಲುತ್ತಾರೆ.

ಅಕ್ಟೋಬರ್ 1998 ರಲ್ಲಿ ಎಟಿಟಿಎಫ್ ( ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್) ಉಗ್ರರು 34 ಸಿಪಿಐಎಂ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದರು. ಸಾವಿಗೀಡಾದವರಲ್ಲಿ ಇಬ್ಬರು ಸಿಪಿಐಎಂ ನ ಹಿರಿಯ ನಾಯಕರು. ಅದರಲ್ಲಿ ಒಬ್ಬರು ಸಿಪಿಐಎಂ ನ ಬುಡಕಟ್ಟು ನಾಯಕರೂ ಆಗಿದ್ದ ಮಾಜಿ ಶಾಸಕರು. ಈ ಘಟನೆಯ ಬಳಿಕವೂ ಸುಮಾರು 47 ಎಡಪಂಥದ ಬೆಂಬಲಿಗ ನಾಗರಿಕರನ್ನು ಎಟಿಟಿಎಫ್ ಉಗ್ರರು ಅಪಹರಿಸಿದರು.

1997 ಮಾರ್ಚ್ 20 ರಂದು ಸಿಪಿಐಎಂ ಹಿತೈಷಿ ಮಾಜ್ ಸಂತೋಷ್ ಪ್ರವಕರ್ ಮತ್ತು ನೈಕ್ ಕೋಟ್ ಶಿವಾಜಿ ತುಕಾರಾಂ ಎಂಬವರನ್ನು ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಕಾರ್ಯಕರ್ತರು ಗುಂಡಿಕ್ಕಿ ಕೊಲೆ ಮಾಡಿದರು.

1998 ರಲ್ಲಿ ತ್ರಿಪುರಾ ಸರಕಾರದ ಆರೋಗ್ಯ ಮತ್ತು ನಗರ ಅಭಿವೃದ್ದಿ ಸಚಿವರಾಗಿದ್ದ ಬಿಮಲ್ ಸಿನ್ಹರವರ ದತ್ತು ಸಹೋದರ ಬಿಕ್ರಂ ಸಿನ್ಹರನ್ನು ಎಟಿಟಿಎಫ್ ಉಗ್ರರು ಅಪಹರಿಸುತ್ತಾರೆ. ತನ್ನ ದತ್ತು ಸಹೋದರನನ್ನು ಬಿಡಿಸಿಕೊಂಡು ಬರಲು ಆರೋಗ್ಯ ಸಚಿವ ಬಿಮಲ್ ಸಿನ್ಹರು ಮಾತುಕತೆಗಾಗಿ ತನ್ನ ಮತ್ತೊಬ್ಬ ಸಹೋದರ ಬಿದ್ಯುತ್ ಸಿನ್ಹ ಜೊತೆ ಪ್ರತ್ಯೇಕತಾವಾದಿಗಳ ಅಡಗುತಾಣಕ್ಕೆ ತೆರಳುತ್ತಾರೆ. ಅವಾಂಗ ಘಾಟ್ ಬಳಿಯ ದಲೈ ನದಿ ಬಳಿಯ ತೀರದಲ್ಲಿ ಮಾತುಕತೆ ನಡೆಯುತ್ತದೆ. ದತ್ತು ಸಹೋದರನ ಬಿಡುಗಡೆಗೆ ಎಲ್ಲಾ ಷರತ್ತುಗಳಿಗೆ ಒಪ್ಪಲು ಸಿಪಿಐಎಂ ಸಚಿವ ಬಿಮಲ್ ಸಿನ್ಹ ಸಿದ್ದರಿದ್ದರೂ ಕಮ್ಯೂನಿಷ್ಠ್ ಸಿದ್ದಾಂತವನ್ನೇ ಬಿಡಬೇಕು ಮತ್ತು ಪ್ರದೇಶದಲ್ಲಿ ಸಂಘಟನೆ ಮಾಡಬಾರದು ಎಂಬ ಷರತ್ತಿಗೆ ಸಚಿವರು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 31 ರಂದು ಎಟಿಟಿಎಫ್ ಉಗ್ರರು ಸಚಿವ ಬಿಮಲ್ ಸಿನ್ಹ ಮತ್ತು ಸಹೋದರ ಬಿದ್ಯುತ್ ಸಿನ್ಹರನ್ನು ಗುಂಡಿಕ್ಕಿ ಸಾಯಿಸುತ್ತಾರೆ.

ಇದಾದ ಬಳಿಕ ತ್ರಿಪುರಾ ಸರಕಾರವು ಕೇಂದ್ರ ಗೃಹ ಇಲಾಖೆಗೆ ನೀಡಿದ ಮಾಹಿತಿಯಂತೆ 1998 ರವರೆಗೆ ಪ್ರತ್ಯೇಕತಾವಾದಿಗಳು ಸಿಪಿಐಎಂ ಬೆಂಬಲಿಸುವ 800 ನಾಗರಿಕರ ಕೊಲೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಸಿಪಿಐಎಂ ಸರಕಾರದ ಆರೋಗ್ಯ ಸಚಿವರೂ ಸೇರಿದ್ದರು. ಅಲ್ಲಿಯವರೆಗೆ ಒಟ್ಟು 2000 ಜನರನ್ನು ಅಪಹರಿಸಲಾಗಿದ್ದು, ಅದರಲ್ಲಿ ಬಹುತೇಕರು ಹಿಂದಿರುಗಿ ಬಂದಿಲ್ಲ ಎಂದು ಘೊಷಿಸಲಾಯಿತು.

1998 ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಆರಂಭವಾಗಿ ಸೆಪ್ಟೆಂಬರ್ ವರೆಗೆ ಎನ್ ಎಲ್ ಎಫ್ ಟಿ ಮತ್ತು ಎಟಿಟಿಎಫ್ ತನ್ನ ಹತ್ಯಾಕಾಂಡವನ್ನು ನಡೆಸುತ್ತದೆ. 32 ಎಡ ಕಾರ್ಯಕರ್ತರನ್ನು ಈ ಅವಧಿಯಲ್ಲಿ ಪ್ರತ್ಯೇಕತಾವಾದಿ ಉಗ್ರರು ಕೊಲೆ ಮಾಡಿದ್ದರು. ಅದರಲ್ಲಿ ಸಿಪಿಐಎಂ ಹಿರಿಯ ಮುಖಂಡ ಅನಿಲ್ ಬೈದ್ಯ ಕೂಡಾ ಸೇರಿದ್ದಾರೆ. ಇದೇ ಅವಧಿಯಲ್ಲಿ 28 ಸಿಪಿಐಎಂ ಬೆಂಬಲಿತರನ್ನು ಎಟಿಟಿಎಫ್ ಒತ್ತೆಯಾಳಾಗಿ ಇರಿಸಿಕೊಂಡಿತು.

ಸಿಪಿಐಎಂ ನಾಯಕ ಕಿಶೋರ್ ದೆಬ್ಬರ್ಮಾ ಎಂಬವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳು ಸಕ್ರೀಯರಾಗಿದ್ದ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರರ ಮಧ್ಯೆ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದ್ದರು. ಇದು ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಗುರಿಯಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯ್ತು. ಈ ರೀತಿ ಹುತಾತ್ಮರಾದ ಎಡನಾಯಕ ಕಿಶೋರ್ ದೆಬ್ಬರ್ಮಾ ಸ್ಮರಣಾರ್ಥ 1998 ಆಗಸ್ಟ್ 24 ರಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಟೂರ್ನಮೆಂಟ್ ಅನ್ನು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವಿನ ಸೌಹಾರ್ಧದ ಕ್ರೀಡಾಕೂಟ ಎಂದು ಸಿಪಿಐಎಂ ಕರೆಯಿತು. ಈ ಕ್ರೀಡಾಕೂಟವನ್ನು ಗುರಿಯಾಗಿರಿಸಿ ಪ್ರತ್ಯೇಕತಾವಾದಿ ಉಗ್ರರು ದಾಳಿಯನ್ನು ನಡೆಸುತ್ತಾರೆ. ಎಡ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಹದಿನೇಳರ ಹರೆಯದ ಮಹಿಳಾ ಕ್ರಿಕೆಟರ್ ಕಾಜಲ್ ದೆಬ್ಬರ್ಮಾ ಮತ್ತು ಇಬ್ಬರನ್ನು ಎನ್ ಎಲ್ ಎಫ್ ಟಿ ಬಂದೂಕುದಾರಿಗಳು ಗುಂಡಿಟ್ಟು ಕೊಲೆ ಮಾಡಿದರು. ಇದು ಇಂದಿಗೂ ಕಮ್ಯನಿಷ್ಟರ ಸ್ಮೃತಿಪಟಲದಲ್ಲಿ ಹಾಗೇ ಉಳಿದುಕೊಂಡ ನೋವಾಗಿದೆ.

1998 ಆಗಸ್ಟ್ 16 ರಂದು ಬಂದೂಕುದಾರಿಗಳು ಸಾದರ್ ಉಪವಿಭಾಗದ ನರೇಂದ್ರಪುರ ಟಿ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಐದು ಜನ ಬುಡಕಟ್ಟು ಅಲ್ಲದ ಸಿಪಿಐಎಂ ಬೆಂಬಲಿಗರನ್ನು ಕೊಲೆ ಮಾಡಿದರು.

ಪ್ರತ್ಯೇಕತಾವಾದಿಗಳು ಪ್ರಬಲವಾಗಿರುವ ಟಕರ್ಜಾಲ ಮತ್ತು ಕಂಚಾನ್ಮಾಲ ಪ್ರದೇಶದಲ್ಲಿ 1999 ಫೆಬ್ರವರಿ 02 ರಂದು ಎಡಚಳುವಳಿಗೆ ಬೆಂಬಲ ಕೊಡುತ್ತಿದ್ದ 6 ಸಣ್ಣ ಉದ್ಯಮಿಗಳನ್ನು ಕೊಲೆ ಮಾಡಿ ಅವರ ಮನೆಗಳನ್ನು ಸುಟ್ಟು ಹಾಕಲಾಯ್ತು. ಅದರ ಮುಂದುವರಿದ ಭಾಗವಾಗಿ ಸಿಪಿಐಎಂನ ಇಬ್ಬರು ಬುಡಕಟ್ಟು ನಾಯಕರನ್ನು ಕೊಲೆ ಮಾಡಲಾಯ್ತು. 500 ಗುಡಿಸಲುಗಳಿಗೆ ಬೆಂಕಿ ಹಾಕಲಾಯ್ತು. 600 ಜನರು ಆ ಊರನ್ನೇ ತೊರೆದರು ಎಂದು ಪೊಲೀಸ್ ಕಡತದಲ್ಲಿ ದಾಖಲಾಗಿದೆ.

2000 ನೇ ಇಸವಿಯ ಎಪ್ರಿಲ್ 15 ರಂದು ಕಲ್ಯಾಣ್ಪುರ ಗ್ರಾಮದಲ್ಲಿ ಸುಮಾರು 25 ರಷ್ಟಿದ್ದ ಎನ್ ಎಲ್ ಎಫ್ ಟಿ ಉಗ್ರರ ದಾಳಿಗೆ ಹಲವು ಮನೆ ಅಂಗಡಿಗಳು ದ್ವಂಸ ವಾದವು. 12 ಜನರನ್ನು ಗುರುತಿಸಿ ಎಡ ಬೆಂಬಲಿತರು ಅನ್ನೋ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಈ ದಾಳಿಗೆ 7 ಜನ ಗಾಯಗೊಂಡರು.

ಇದಾದ ಬಳಿಕ ಎಪ್ರಿಲ್ 27 ರಂದು ಘಾರ್ಜಿ ಎಂಬ ಊರಲ್ಲಿ ಎನ್ ಎಲ್ ಎಫ್ ಟಿ ಉಗ್ರರು 24 ಗಂಟೆಯಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಅದರಲ್ಲಿ ಸಿಪಿಐಎಂ ನಾಯಕನ ಸಹೋದರನಾಗಿರುವ ನರಾಯ್ ಸರ್ಕಾರ್ ಕೂಡಾ ಸೇರಿದ್ದರು. ಸಿಪಿಐಎಂ ಮುಖಂಡರ ಇಬ್ಬರು ಅಕ್ಕ ತಂಗಿಯರನ್ನು ಉಗ್ರರು ಅತ್ಯಾಚಾರ ಮಾಡಿ ಕೊಲೆ ಮಾಡುವ ಹೀನ ಕೃತ್ಯವನ್ನೂ ನಡೆಸುತ್ತಾರೆ.

ಮೇ 18 ರಂದು ಕೊವೈ ಮತ್ತು ತೆಲಿಯಮುರ ಪ್ರದೇಶದಲ್ಲಿ ಒಂದು ವಾರದ ಕಾಲ ನಡೆದ ಜನಾಂಗಿಯ ಘರ್ಷಣೆಯಲ್ಲಿ 50 ಜನ ಸಾಯುತ್ತಾರೆ. ಅದರಲ್ಲಿ ಹೆಚ್ಚಿನವರು ಬೆಂಗಾಲಿ ದಲಿತರು ಮತ್ತು ಮುಸ್ಲೀಮರಾಗಿದ್ದು ಹಲವರು ಸಿಪಿಐಎಂ ಕಾರ್ಯಕರ್ತರು. ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ಸೃಷ್ಟಿಸಿ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವ ಸಿಐಎ ಪ್ರೇರಿತ ಪ್ರತ್ಯೇಕತಾವಾದಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇರ ಆರೋಪ ಮಾಡಿದ್ದರು.

ಈ ದಾಳಿಗಳ ಸಂಧರ್ಭದಲ್ಲೇ ಟಿಟಿಎಎಡಿಸಿಗೆ ನಡೆದ ಚುನಾವಣೆಯಲ್ಲಿ ಐಪಿಎಫ್ ಟಿ ಪ್ರತ್ಯೇಕತಾವಾದಿಗಳು ಗೆಲುವು ಸಾಧಿಸುತ್ತಾರೆ. ಆಗ ಇನ್ನಷ್ಟೂ ಗಲಾಟೆಗಳಾಗುತ್ತೆ. ಟಿಟಿಎಎಡಿಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸವಿರುವ ಬುಡಕಟ್ಟು ಅಲ್ಲದ ದಲಿತ ಮತ್ತು ಮುಸ್ಲಿಮರನ್ನು ಓಡಿಸಲು ಐಪಿಎಫ್ ಟಿ ನಿರ್ಧರಿಸುತ್ತದೆ. ಅದರ ಭಾಗವಾಗಿ ಬಾಗ್ಬೇರ್, ರತಿಯಾ, ಚಕ್ಮಾ ಘಾಟ್ ನಲ್ಲಿ ಜನವಸತಿ ಪ್ರದೇಶದಲ್ಲಿ ಐಪಿಎಫ್ ಟಿ ಪ್ರೇರಿತ ಎಟಿಟಿಎಫ್ ಉಗ್ರರು ಏಕಕಾಲದಲ್ಲಿ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ 45 ಜನ ಸಾವಿಗೀಡಾಗುತ್ತಾರೆ. 60 ಜನರು ಎನ್ ಎಲ್ ಎಫ್ ಟಿ ಬಂದೂಕುದಾರಿಗಳಿಂದ ತಪ್ಪಿಸಿಕೊಂಡು ಬಾಗ್ಬೇರ್ ನಿಂದ ಕಾಂಚಾಪುರ್ ಗೆ ತೆರಳುತ್ತಿದ್ದರು. ಅವರನ್ನೂ ಸುತ್ತುವರಿದ ಉಗ್ರರು ಮತ್ತೆ 25 ಮುಸ್ಲೀಮರನ್ನು ಕೊಲೆ ಮಾಡುತ್ತಾರೆ.

2000 ನೇ ಇಸವಿಯ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಎನ್ ಎಲ್ ಎಫ್ ಟಿ ಗೆರಿಲ್ಲಾ ಸೇನೆ ದಾಳಿಗೆ 30 ಎಡ ಕಾರ್ಯಕರ್ತರು ಸಾವಿಗೀಡಾಗುತ್ತಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು.

2001 ಕ್ಕೆ ಕಾಲಿರಿಸುತ್ತಿದ್ದಂತೆ 9 ಬುಡಕಟ್ಟು ಜನಾಂಗದವರನ್ನು ಎಡ ಚಳುವಳಿಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ಫಲ್ಗುಂಜ್ಯೊ ಪಾರ ಎಂಬ ಊರಲ್ಲಿ ಕೊಲೆ ನಡೆಸಲಾಯ್ತು. ಮೂರು ದಿನ ಊರಲ್ಲಿ ಕರ್ಫ್ಯೂ ಹೇರಲಾಯ್ತು.

2001 ರ ಮಾರ್ಚ್ 3 ರವರೆಗೆ ಮೂರು ತಿಂಗಳು ಪ್ರತ್ಯೇಕತಾವಾದಿಗಳ ಗನ್ನು ಸ್ಬಲ್ಪ ವಿಶ್ರಾಂತಿ ಪಡೆದಿತ್ತು. ಮಾರ್ಚ್ ಮೂರರಂದು ಸಿಪಿಐಎಂ ಪ್ರಭಾವ ಹೆಚ್ಚಿರುವ ಬಾಂಪುರ್ ನಲ್ಲಿ 13 ಜನರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಸಾವಿಗೀಡಾದವರಲ್ಲಿ 9 ಜನ ಪೊಲೀಸರು.

2002 ಅಕ್ಟೋಬರ್ ತಿಂಗಳಲ್ಲಿ ಪ್ರತ್ಯೇಕತಾವಾದಿ ಗಳು ಆರ್ಮಿ ಡ್ರೆಸ್ ನಲ್ಲಿ ಬಂದು ಧರ್ಮನಗರದಲ್ಲಿ ಎಡ ಕಾರ್ಯಕರ್ತನ ಮನೆ ಮೇಲೆ ದಾಳಿ ಮಾಡಿ ಒಬ್ಬನನ್ನು ಕೊಂದು 15 ಜನರನ್ನು ಕಿಡ್ನಾಪ್ ಮಾಡುತ್ತಾರೆ.

2003 ಮೇ ಯಲ್ಲಿ ಒಟ್ಟು 32 ಜನರನ್ನು ಎಟಿಟಿಎಫ್ ಕೊಲೆ ಮಾಡುತ್ತೆ. ಅದರಲ್ಲಿ ಏಳು ಜನ ಮಕ್ಕಳು, ಎಂಟು ಜನ ಹೆಂಗಸರು ಕೂಡಾ ಕೊಲೆಯಾಗುತ್ತಾರೆ. ಇದೇ ತಿಂಗಳು ಸಮ್ನ ಜಿಲ್ಲೆಯ ಜೋಗೇಶ್ವರ್ ನಗರದಲ್ಲಿ ಸಿಪಿಐಎಂ ರಚನೆ ಮಾಡಿದ್ದ ನಿರಾಶ್ರಿತರ ಕಾಲನಿಗೆ ನುಗ್ಗಿ 20 ಬೆಂಗಾಲಿಗಳನ್ನು ಬುಡಕಟ್ಟು ಪ್ರತ್ಯೇಕತಾವಾದಿಗಳು ಕೊಲೆ ಮಾಡುತ್ತಾರೆ.

ಸಧ್ಯ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಡಳಿತ ನಡೆದುತ್ತಿರುವ ಐಪಿಎಫ್’ಟಿ ಸಹೋದರ ಸಂಘಟನೆ ಎಟಿಟಿಎಫ್ ಮತ್ತು ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿಗಳು ಬಹುತೇಕ ಜಂಟಿ ಕಾರ್ಯಾಚರಣೆ ನಡೆಸುತ್ತಾರೆ. ಬಾಂಗ್ಲಾ ನುಸುಳುಕೋರರ ಕ್ಯಾಂಪ್ ಆಗಿರುವ ಸಚ್ಚಾರಿ ಗ್ರಾಮದಿಂದ ಬಂದ ಎಟಿಟಿಎಫ್ ಉಗ್ರರು ಮಹರ್ಚುರ್ ಮಾರುಕಟ್ಟೆ ಪ್ರದೇಶದ ಗುಡಿಸಲು ಸುಟ್ಟು ಹಾಕಿ ಗುಂಡಿನ ಸುರಿಮಳೆಗೈಯುತ್ತಾರೆ. ಅದರಲ್ಲಿ ಹಲವು ಮಕ್ಕಳನ್ನು ಕ್ಲೋಸ್ಡ್ ರೇಂಜ್ ಶೂಟ್ ಮಾಡಿ ಕೊಲ್ಲಲಾಗುತ್ತದೆ. ಅದೊಂದೇ ರಾತ್ರಿ 9 ಜನ ಸಾವಿಗೀಡಾದರು.

ಇದಾದ ಬಳಿಕ ಸಿಪಿಐಎಂ ಮಹಿಳಾ ನಾಯಕಿ ರಸ್ಮಾಲಾ ದೆಬ್ಬರ್ಮಾ ಅವರನ್ನು ಕೊಲೆ ಮಾಡಲಾಯ್ತು. ಮೇ 07 ಉತ್ತರ ತ್ರಿಪುರಾದ ಕೈಲಾಶ್ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಾಟಿಕ್ರೆಯಲ್ಲಿ ಸಿಪಿಐಎಂ ಕಾರ್ಯಕರ್ತ ನಿಲಿಮೇಶ್ ಪೌಲ್ ಮತ್ತು ಅವರ ಪತ್ನಿ ಅಲ್ಪನಾ ಪೌಲ್ ಅವರನ್ನು ಕೊಲೆ ಮಾಡಲಾಯಿತು.

2004 ಜೂನ್ 8 ರಂದು ದಲೈ ಜಿಲ್ಲೆಯ ಅಂಬಾಸದಲ್ಲಿ ಎನ್ ಎಲ್ ಎಫ್ ಟಿ ಮುಖಂಡ ರಾಣಮಾಯಿ‌ ನೇತೃತ್ವದ ಗುಂಪು ಒಬ್ಬರನ್ನು ಕೊಂದು ಮೂವರನ್ನು ಕಿಡ್ನಾಪ್ ಮಾಡ್ತಾರೆ.

ಜೂನ್ 13 ರಲ್ಲಿ ಕಾನ್ಪುಯಿ ಜಿಲ್ಲೆಯಲ್ಲಿ ಎಡ ಚಳುವಳಿಯನ್ನು ಬೆಂಬಲಿಸುತ್ತಿದ್ದ ಎರಡು ಉದ್ಯಮಿಗಳನ್ನು ಕೊಲೆ ಮಾಡಿ 24 ಜನರನ್ನು ಅಪಹರಿಸಲಾಯಿತು.

2004 ಅಕ್ಟೋಬರ್ 22 ರಂದು ಸಿಪಿಐಎಂ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಆನಂದ್ ರೊಹಾಜ ಮತ್ತು ಅವರ ಪುತ್ರ ಜೋಯ್ ರೊಹಾಜ ಸೇರಿದಂತೆ ನಾಲ್ಕು ಜನರನ್ನು ದಲೈ ಜಿಲ್ಲೆಯಲ್ಲಿ ಎನ್ ಎಲ್ ಎಫ್ ಟಿ ಉಗ್ರರು ಕೊಲೆ ಮಾಡಿದರು. ಇದಲ್ಲದೆ 1993 ರಿಂದ 2000 ಇಸವಿಯವರೆಗೆ ನಡೆದ 389 ದಾಳಿ ಘಟನೆಯಲ್ಲಿ 49 ಸೈನಿಕರು ಹತರಾಗಿದ್ದಾರೆ.

ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಬಂದೂಕು ಹೋರಾಟ ನಡೆಸುತ್ತಿರುವ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಸಿಪಿಐಎಂ ಸರಕಾರದ ಬುಡಕಟ್ಟು ಶಾಸಕರು, ಮಾಜಿ ಶಾಸಕರು, ಸಚಿವರು, ಎಡ ಕಾರ್ಯಕರ್ತರ ಮನೆ ಮಕ್ಕಳನ್ನು ಸುಟ್ಟು ಹಾಕಿದ್ದಾರೆ. ಆದರೆ ಭೂಗತ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ನ ಯುವಕ ಮನೆ ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಿಪಿಐಎಂ ಸರಕಾರ ಭದ್ರತೆ ನೀಡಿದೆ. 25 ವರ್ಷ ಆಡಳಿತ ನಡೆಸುತ್ತಿರುವ ಎಡ ಸರಕಾರ ತನ್ನ ಕಾರ್ಯಕರ್ತರ ಮೇಲೆ ನಿಯಂತ್ರಣವನ್ನು ಸ್ವಲ್ಪ ಸಡಿಲಗೊಳಿಸಿತ್ತಿದ್ದರೂ ಸಹ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಪ್ರಾಬಲ್ಯ ಹೊಂದಿರುವ ಟಕರ್ಜಾಲ, ಸಚಿಯಬಾರಿಯಂತಹ ಗ್ರಾಮಗಳು, ಅವರನ್ನು ಬೆಂಬಲಿಸುವ ಕುಟುಂಬಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಆದರೆ ಸಿಪಿಐಎಂ ಸರಕಾರ ಉಗ್ರರ ದಾಳಿಯನ್ನು ಸಂವಿದಾನಾತ್ಮಕವಾಗಿ ಎದುರಿಸಿತ್ತು. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿತ್ತೇ ಹೊರತು ಎಡ ಕಾರ್ಯಕರ್ತರು ದಾಳಿಕೋರರ ಮಾದರಿಯಲ್ಲೇ ಉತ್ತರ ಕೊಟ್ಟಿಲ್ಲ. ಬುಡಕಟ್ಟು ಉಗ್ರರ ಮೇಲಿನ ದಾಳಿ ಅಮಾಯಕ ಬುಡಕಟ್ಟುಗಳ ಮಾರಣ ಹೋಮಕ್ಕೆ ಕಾರಣವಾಗಬಾರದು ಎಂಬ ಸಿಪಿಐಎಂ ನಿಲುವು ಇದಕ್ಕೆ ಕಾರಣವಾಯ್ತು. ಅಂಬೇಡ್ಕರ್, ಬುದ್ದರನ್ನು ಒಳಗೊಂಡ ಮಾರ್ಕ್ಸ್ ವಾದ ತ್ರಿಪುರಾದ ಎಡಚಳುವಳಿಯನ್ನು ಸಧ್ಯದ ದಿನದಲ್ಲಿ ಸಂಕಷ್ಟಕ್ಕೆ ದೂಡಿದರೂ ಅಂತಿಮವಾಗಿ ಜಯಗಳಿಸುತ್ತದೆ ಎಂಬ ನಿರೀಕ್ಷೆ.

ಬಿಲ್ಲವರ ರಾಮಮಂದಿರ, ಧರ್ಮ ಸಂಸತ್ತು ಮತ್ತು ಧರ್ಮಸ್ಥಳ

Naveen Soorinje


ನವೀನ್ ಸೂರಿಂಜೆ


ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಧರ್ಮ ಸಂಸತ್ತು ನಡೆಯುತ್ತಿದೆ. ನವೆಂಬರ್ 24, 25, 26 ರಂದು ಮೂರು ದಿನಗಳ ಕಾಲ ಹಿಂದೂ ಧರ್ಮದ ಕುರಿತು ಕಾಲಕ್ಷೇಪ ನಡೆಯಲಿದೆ. ಈ ಧರ್ಮಸಂಸತ್ತಿನಲ್ಲಿ ರಾಮ ಮಂದಿರದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿಹಿಂಪ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಯ್ ತೊಗಾಡಿಯಾ ಈಗಾಗಲೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ರಾಮ ಮಂದಿರದ ಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಉಡುಪಿಗೂ ಸಂಬಂಧವೇ ಇಲ್ಲ. ಬಾಬರಿ ಮಸೀದಿ ಕೆಡವುದರ ಭಾಗವಾಗುವುದರ ಮೂಲಕ ರಾಮಮಂದಿರ ಪ್ರಕರಣದಲ್ಲಿ ಸಂಬಂಧ ಬೆಳೆಸಿದ್ದಾರಷ್ಟೆ. ಅದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಿಗೂ ರಾಮ ಮಂದಿರಕ್ಕೂ ನೇರ ಸಂಬಂಧವಿದೆ. ಬಿಲ್ಲವರಿಗೆ ಮಾತ್ರವಲ್ಲ ಕರ್ನಾಟಕದ ಅಷ್ಟೂ ಬಿಲ್ಲವ ಜಾತಿಗಳು, ಉಪಜಾತಿಗಳಿಗೂ ರಾಮ ಮಂದಿರ ಮತ್ತು ಧರ್ಮ ಸಂಸತ್ತಿನ ಸಂಬಂಧವಿದೆ.

ರಾಮ ಮಂದಿರಕ್ಕಾಗಿನ ಧರ್ಮ ಸಂಸತ್ತನನ್ನು ವಿರೋಧಿಸುವುದರ ಮೂಲಕ ಬಿಲ್ಲವರು, ಈಡಿಗರು ತಮ್ಮ ಸ್ವಾಭಿಮಾನದ ರಾಮ ಮಂದಿರವನ್ನು ಮುನ್ನಲೆಗೆ ತರಬೇಕಿದೆ. ಹೊಸ ತಲೆಮಾರಿನ ಬಿಲ್ಲವ ಯುವಕರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.

ಈ ಧರ್ಮ ಸಂಸತ್ತಿನ ರೂವಾರಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಾಗಿದ್ದರೆ ಆಕ್ಷೇಪವಿರಲಿಲ್ಲ. ಅವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಪೇಜಾವರ ಸ್ವಾಮೀಜಿ ಜೊತೆಗೆ ಮುಂಡಾಸುದಾರಿ ಧಾರ್ಮಿಕ ವ್ಯಕ್ತಿ ಕೂಡಾ ಧರ್ಮ ಸಂಸತ್ತಿನ ರುವಾರಿಯಾಗಿದ್ದಾರೆ. ಇದು ಬಿಲ್ಲವರ ಆತ್ಮಾಭಿಮಾನವನ್ನು ಜಾಗೃತಗೊಳಿಸಬೇಕಿದೆ.

ಅದು 1989 ನೇ ಇಸವಿ. ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಚಿಕ್ಕದಾದ ನಿತ್ಯಾನಂದ ಮಂದಿರವೊಂದನ್ನು ಪ್ರಾರಂಭಿಸುತ್ತಾರೆ. ನಾರಾಯಣ ಗುರುಗಳ ಪರಮ ಭಕ್ತರಾಗಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕೇರಳದ ಶಿವಗಿರಿಯಲ್ಲಿ ಆಧ್ಯಾತ್ಮಿಕ ಪಾಂಡಿತ್ಯವನ್ನು ಪಡೆದಿದ್ದರು. ಆಗಷ್ಟೇ ಭೂಸುಧಾರಣೆಯ ಲಾಭವನ್ನು ಪಡೆಯುತ್ತಿದ್ದ ಬಿಲ್ಲವರಲ್ಲಿ ಶಿಕ್ಷಣ, ಉದ್ಯೋಗ, ಸಂಘಟನೆಯ ಜಾಗೃತಿಯನ್ನು ತನ್ನ ಪುಟ್ಟ ಆಶ್ರಮದ ಮೂಲಕ ಮಾಡುತ್ತಿದ್ದರು.

ಬಿಲ್ಲವರು ಬ್ರಾಹ್ಮಣರ ದೇವಸ್ಥಾನಗಳಿಗೆ ನಡೆದುಕೊಳ್ಳುವುದನ್ನು ಗಮನಿಸಿದ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು 2003 ರಲ್ಲಿ ಕನ್ಯಾಡಿಯಲ್ಲಿ ಬೃಹತ್ ರಾಮ ಮಂದಿರ ಕಟ್ಟಲು ಯೋಜನೆ ಸಿದ್ದಪಡಿಸುತ್ತಾರೆ. ಈ ರಾಮ ಮಂದಿರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಿಂದ ಕೇವಲ ನಾಲ್ಕು ಕಿಮಿ ದೂರದಲ್ಲಿರುತ್ತದೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ವೈಭವಪೋತ ರಾಮಮಂದಿರವನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿದ್ದಾರೆ ಎಂದು ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿಗೆ ತಿಳಿಯುತ್ತದೋ ಅಲ್ಲಿಂದ ಇನ್ನಿಲ್ಲದ ಅಡ್ಡಿಗಳು ಪ್ರಾರಂಭವಾಗುತ್ತವೆ. ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಬಿಲ್ಲವರ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿದ ಬಿಲ್ಲವ ಸಮಾಜದ ಪ್ರಮುಖರು, ಜನಾರ್ಧನ ಪೂಜಾರಿ, ವಸಂತ ಬಂಗೇರರಂತಹ ರಾಜಕಾರಣಿಗಳು ಸ್ವಾಮೀಜಿ ಜೊತೆ ನಿಲ್ಲುತ್ತಾರೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ರಾಮ ಮಂದಿರದ ಜೊತೆ ಜನಾರ್ಧನ ಪೂಜಾರಿಯಂತಹ ರಾಜಕಾರಣಿಗಳು ನಿಂತರೋ ಆಗ ಈ ಮುಂಡಾಸುಧಾರಿಗೆ ಆತ್ಮನಂದ ಸ್ವಾಮಿಯನ್ನು ದೈಹಿಕವಾಗಿ ಅಶಕ್ತನನ್ನಾಗಿಸುವುದು ಒಂದೇ ದಾರಿಯಾಗಿ ಉಳಿದಿತ್ತು. ಇಲ್ಲದೇ ಇದ್ದರೆ ತನ್ನ ಪ್ರತಿಷ್ಠಿತ, ಪ್ರಖ್ಯಾತ ದೇವಸ್ಥಾನದ ಆದಾಯಕ್ಕೆ ಬಿಲ್ಲವರ ರಾಮ ಮಂದಿರ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕಾಗಿ ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಅಕ್ಷರಶ ಆತ್ಮಾನಂದ ಸರಸ್ವತಿ ಮೇಲೆ ದಾಳಿ ಮಾಡಿಸಿದರು. ಎಲ್ಲಾ ದಾಳಿಗಳ ಹೊರತಾಗಿಯೂ ಆತ್ಮಾನಂದ ಸರಸ್ವತಿ ಸ್ವಾಮೀಜಿ ದೃತಿಗೆಡಲಿಲ್ಲ. 2003 ರಲ್ಲಿ ಭವ್ಯವಾದ ಕನ್ಯಾಡಿ ರಾಮ ಮಂದಿರ ನಿರ್ಮಾಣವಾಯ್ತು. ಈಗಲೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸುಂದರವಾದ ಬಿಲ್ಲವರ ರಾಮ ಮಂದಿರ ಸಿಗುತ್ತದೆ.

ಇಂತಹ ಸಾಧಕ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬಿಲ್ಲವರು, ಈಡಿಗರ 24 ಉಪಜಾತಿಗಳು ಕುಲಗುರುವಾಗಿ ಒಪ್ಪಿಕೊಳ್ಳುತ್ತದೆ. ಕನ್ನಡ ಕುಲಕೋಟಿ ಗೌರವಿಸುವ, ಕನ್ನಡದ ಮತ್ತೊಂದು ಹೆಸರು ಎಂದು ಬಣ್ಣಿಸಲಾಗುವ ವರನಟ ಡಾ ರಾಜ್ ಕುಮಾರ್ ಕೂಡಾ ಆತ್ಮಾನಂದ ಸರಸ್ವತಿ ಸ್ವಾಮೀಜಿ ಶಿಷ್ಯರಾಗಿದ್ದರು. ಡಾ ರಾಜ್ ಕುಮಾರ್ ಈ ರಾಮಮಂದಿರಕ್ಕೆ ಅಪಾರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ.

ಬಿಲ್ಲವರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ಯಾಡಿ ರಾಮ ಮಂದಿರ ಸ್ಥಾಪನೆಗೆ ಅಡ್ಡಿಯಾಗಿದ್ದ, ಬಿಲ್ಲವರ ಗುರುವೊತ್ತಮ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬದುಕಿನುದ್ದಕ್ಕೂ ಇನ್ನಿಲ್ಲದಂತೆ ಕಾಡಿದ ವ್ಯಕ್ತಿಯ ನೇತೃತ್ವದಲ್ಲಿ ಉತ್ತರ ಪ್ರದೇಶದ ರಾಮಮಂದಿರಕ್ಕಾಗಿ ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯುತ್ತಿದೆ. ಉಡುಪಿ ಮಂಗಳೂರು ಬಿಲ್ಲವರು ಬಹುಸಂಖ್ಯಾತರಾಗಿರೋ ನಾಡು. ಧರ್ಮಸಂಸತ್ತಿನ ಬಹುತೇಕ ಸ್ವಯಂ ಸೇವಕರೂ ಬಿಲ್ಲವರೇ. 2003 ರಿಂದ 2017 ಬಹಳ ದೀರ್ಘ ಸಮಯವಲ್ಲ. ಶೋಷಿತ ಬಿಲ್ಲವ ಸಮುದಾಯವೊಂದು ಅಷ್ಟು ಬೇಗ ಇತಿಹಾಸವನ್ನು ಮರೆಯುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

ಕಮ್ಯುನಿಷ್ಟರು, ಮದರ್ ತೆರೆಸಾ, ಕ್ರಿಶ್ಚಿಯನ್ನರು ಮತ್ತು ಪ್ರತಿಕ್ರಿಯಾತ್ಮಕ ಕೋಮುವಾದ

Naveen Soorinje


ನವೀನ್ ಸೂರಿಂಜೆ


ಆರ್.ಎಸ್.ಎಸ್ ಮತ್ತು ಪಿ.ಎಫ್.ಐ ಚರ್ಚೆಯ ವೇಳೆ ಹಲವು ಚಿಂತಕರು ಒಂದು ಸಾಮಾನ್ಯ ವಾದವನ್ನು ಮುಂದಿಡುತ್ತಾರೆ. ಪಿ.ಎಫ್.ಐ ಮತ್ತು ಆರ್.ಎಸ್.ಎಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ; ಪಿ.ಎಫ್.ಐ ನ ಕೋಮುವಾದ ಕ್ರಿಯೆಗೆ ಪ್ರತಿಕ್ರಿಯೆಯಷ್ಟೇ ಎನ್ನುವುದು. ಇದೇ ಚರ್ಚೆಯನ್ನು ಮುಂದುವರೆಸಿದಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಕ್ರಿಶ್ಚಿಯನ್ ಸಮುದಾಯದಲ್ಲಿ ಯಾಕೆ ಆರ್.ಎಸ್.ಎಸ್ ಗೆ ಪ್ರತಿಕ್ರಿಯೆಯಾಗಿ ಪಿ.ಎಫ್.ಐ ರೀತಿಯ ಪ್ರತಿಕ್ರಿಯಾತ್ಮಕ ಸಂಘಟನೆಗಳು ಬೆಳೆದಿಲ್ಲ?

ಹಲವರಿಗೆ ತಿಳಿದಿರಲಿಕ್ಕಿಲ್ಲ. ಆರ್.ಎಸ್.ಎಸ್, ಪಿ.ಎಫ್.ಐ ರೀತಿಯಲ್ಲಿ ಕ್ರಿಶ್ಚಿಯನ್ನರಲ್ಲೂ ಒಂದು ಪ್ರತಿಗಾಮಿ, ಪ್ರತಿಕ್ರಿಯಾತ್ಮಕ ಸಂಘಟನೆ ಹುಟ್ಟಿಕೊಂಡಿತ್ತು. ಅದರ ಹೆಸರು ಸ್ಯಾಕ್ ! ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ಭಜರಂಗದಳ ದಾಳಿ ಮಾಡಿದ ಸಂಧರ್ಭದಲ್ಲಿ ಈ ಸ್ಯಾಕ್ ಸಂಘಟನೆ ಸ್ವಲ್ಪ ಸದ್ದು ಮಾಡಿತ್ತು. ಆಗ ನೈತಿಕ ಪೊಲೀಸ್ ಗಿರಿಯೂ ಸುದ್ದಿಯಲ್ಲಿತ್ತು. ಹಿಂದೂ ಹುಡುಗಿಯರು ಮುಸ್ಲಿಂ ಯುವಕನ ಜೊತೆ ಇದ್ದರೆ ಭಜರಂಗದಳದ ದಾಳಿ, ಮುಸ್ಲಿಂ ಹುಡುಗಿ ಹಿಂದೂ ಹುಡುಗನ ಜೊತೆ ಇದ್ದರೆ ಪಿ.ಎಫ್.ಐ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಆಗ ಕ್ರಿಶ್ಚಿಯನ್ ಹುಡುಗಿಯರು ಹಿಂದೂ ಮುಸ್ಲಿಂ ಸಮುದಾಯದ ಹುಡುಗರ ಜೊತೆ ಇದ್ದರೆ ನಾವು ಸಹಿಸೋದಿಲ್ಲ ಎಂದು ಸ್ಯಾಕ್ ಹೇಳಿಕೊಂಡಿತ್ತು.

ಇವತ್ತು ಆರ್.ಎಸ್.ಎಸ್ ಅನ್ನು ನಿಷೇಧ ಮಾಡಬೇಕೆಂದು ಪಿ.ಎಫ್.ಐ ಆಗ್ರಹಿಸಿದರೆ, ಪಿ.ಎಫ್.ಐ ಅನ್ನು ನಿಷೇದಿಸಬೇಕು ಎಂದು ಆರ್.ಎಸ್.ಎಸ್ ಆಗ್ರಹಿಸುತ್ತಿದೆ. ಈ ಎರಡೂ ಸಂಘಟನೆಗಳು ನಿಯಂತ್ರಣಕ್ಕೆ ಅರ್ಹವಾಗಿವೆ ಎಂದು ಪ್ರಗತಿಪರರ ವಾದವಾಗಿರುವಂತದ್ದು. ಆದರೆ ಸ್ಯಾಕ್ ಅನ್ನು ನಿಷೇದಿಸಬೇಕು ಎಂದು ಯಾರೂ ಆಗ್ರಹಿಸುವ ಪ್ರಮೇಯವೇ ಬಂದಿಲ್ಲ. ಅದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯದಲ್ಲಿ ಸಹಜವಾಗಿಯೇ ಇರುವ ಆಧುನಿಕತೆ, ಶಿಸ್ತು, ಸ್ವನಿಯಂತ್ರಣ ಮತ್ತು ಮಾನವಪ್ರೇಮ. ಅಂತಹ ಅದಮ್ಯ ಜೀವಪ್ರೇಮ ಮತ್ತು ಶಿಸ್ತಿಗೆ ಕಾರಣ ಅಲ್ಲಿ ಆಗಿಹೋಗಿರುವ ಮದರ್ ತೆರೇಸಾರಂತಹ ಅಸಂಖ್ಯ ಅಸಂಖ್ಯ ಮಾನವ ಪ್ರೇಮಿಗಳು.

ಕಲ್ಲಡ್ಕ ಪ್ರಭಾಕರ ಭಟ್ಟ ಜಗದೀಶ ಕಾರಂತ ಸೇರಿದಂತೆ ಯಾವುದೇ ಹಿಂದುತ್ವವಾದಿಗಳ ಭಾಷಣ ಕೇಳಿದಲ್ಲಿ ಅಲ್ಲೊಂದು ವಾಕ್ಯ ಬರುತ್ತದೆ. ಮುಸ್ಲೀಮರ ರೀಚಾರ್ಜ್ ಅಂಗಡಿಯಲ್ಲಿ ಮೊಬೈಲ್ ರೀಚಾರ್ಜ್ ಮಾಡಬೇಡಿ, ಹಿಂದೂಗಳ ಗೂಡಂಗಡಿಯಲ್ಲಿ ಮುಸ್ಲೀಮರನ್ನು ಹೆಚ್ಚು ಹೊತ್ತು ನಿಲ್ಲಿಸಬೇಡಿ ಎಂಬ ಕ್ಷುಲ್ಲಕ ಮಾತುಗಳು ಸಾಮಾನ್ಯ. ಆದರೆ ಚರ್ಚ್ ದಾಳಿಯ ಸಂಧರ್ಭದಲ್ಲಿ ಇಳಿ ವಯಸ್ಸಿನ ಸನ್ಯಾಸಿನಿಯರ ಮೇಲೆ ಬಾಸುಂಡೆ ಬರುವಂತೆ ಬಾರಿಸಿದರೂ ಅನಾಥಾಲಯಗಳಲ್ಲಿ ಹಿಂದೂಗಳ ಸೇವೆ ಮಾಡಬೇಡಿ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಬೇಡಿ, ಬುದ್ದಿಮಾಂದ್ಯ ಹಿಂದೂ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ ಕೊಡಬೇಡಿ ಎಂಬ ಮಾತುಗಳು ಎಲ್ಲೂ ಕೇಳಿಬರಲಿಲ್ಲ. ಇಂತಹ ಸೇವಾ ಮನೋಭಾವವೇ ಆ ಸಮುದಾಯವನ್ನು ಹಲವು ಸಂಕಟಗಳಿಂದ ಪಾರುಮಾಡಿದೆ.

ಚರ್ಚ್ ಗಳ ಮೇಲೆ ದಾಳಿ ನಡೆದಾಗ ಬೆರಳೆಣಿಕೆಯ ಹುಡುಗರು ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ ಕ್ರಿಶ್ಚಿಯನ್ನರು ಪ್ರತಿದಾಳಿಗಿಳಿಯಲಿಲ್ಲ. ದಾಳಿಗೊಳಗಾದ ಚರ್ಚ್ ಗಳ ಜಾಗದಲ್ಲಿ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಕಲ್ಪಿಸಿಕೊಂಡರೆ ದಕ್ಷಿಣ ಕನ್ನಡದ ಸ್ಥಿತಿ ಊಹಿಸಲೂ ಅಸಾದ್ಯವಾಗಿರುತಿತ್ತು. ಅಲ್ಲಿವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ನರು ಮೊದಲ ಬಾರಿಗೆ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಕೆಲವರು ಕಲ್ಲು ತೂರಾಟ ನಡೆಸಿದ್ದರೂ ಯಾವುದೇ ಚರ್ಚ್ ನ ಮುಖ್ಯಸ್ಥರು ಅದನ್ನು ಬೆಂಬಲಿಸಲಿಲ್ಲ ಮತ್ತು ಮುಂದುವರಿಸಲು ಬಿಡಲಿಲ್ಲ.

ಅವತ್ತು ಚರ್ಚ್ ದಾಳಿ ಸಂಬಂಧ ಬಿಷಪ್ ಅಲೋಶಿಯಸ್ ಪ್ಲಾವ್ ಡಿಸೋಜಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅಷ್ಟರಲ್ಲಿ ಬಿಜೈ ಚರ್ಚ್ ನೊಳಗೆ ಪೊಲೀಸರು ನುಗ್ಗುತ್ತಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ಬೈಕನ್ನೇರಿ ಹೊರಟೆ. ಮಾಜಿ ಸಚಿವ ನಾಗರಾಜ ಶೆಟ್ಟರ ಮನೆ ದಾಟುತ್ತಿದ್ದಂತೆ ಚರ್ಚ್ ಬಳಿಯ ಸ್ಮಶಾನದಲ್ಲಿ ಒಂದು ಗುಂಪು ಕಲ್ಲು ತೂರಾಟ ನಡೆಸಲಾರಂಬಿಸಿತ್ತು. ಕಲ್ಲು ನೇರವಾಗಿ ನನ್ನ ಬೈಕ್ ಡೂಂಗೆ ಬಿದ್ದು ಡೂಮ್ ಪುಡಿಯಾಯ್ತು. ಇದರ ಮಾಹಿತಿ ತಿಳಿದ ಕಿರಿಯ ಫಾದರ್ ಒಬ್ಬರು ನನಗೆ ಕರೆ ಮಾಡಿ ಬೈಕ್ ಡ್ಯಾಮೇಜ್ ನ ಪರಿಹಾರ ಕೊಡುತ್ತೇನೆ ಎಂದಿದ್ದಲ್ಲದೆ ಯುವಕರ ಕೃತ್ಯಕ್ಕೆ ಕ್ಷಮೆ ಕೇಳಿದ್ದರು. “ಮೊದಲು ಕ್ರಿಶ್ಚಿಯನ್ ಯುವಕರಿಗೆ ಪ್ರತಿಭಟನೆಯನ್ನು ಕಲಿಸಬೇಕು. ಮೊದಲ ಬಾರಿ ಬೀದಿಗಿಳಿದಿರೋದ್ರಿಂದ ಹೀಗಾಗಿದೆ. ಸ್ವಲ್ಪ ಎಡಪಂಥೀಯರ ಜೊತೆ ನಿಮ್ಮ ಯುವಕರನ್ನು ಬೆರೆಸಿ” ಅಂದಿದ್ದೆ.

ಆ ನಂತರದ ಬೆಳವಣಿಗೆಯಲ್ಲಿ ಚರ್ಚ್ ದಾಳಿ ಸಂತ್ರಸ್ತರ ಜೊತೆ ನಿಂತಿದ್ದು ಎಡಪಂಥೀಯರು ಮಾತ್ರ. ಕ್ರಿಶ್ಚಿಯನ್ ಸಮುದಾಯವನ್ನು ಅಭದ್ರತೆಯಿಂದ ಹೊರತರುವ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮಾಡುವ ಜವಾಬ್ದಾರಿ ಎಡಪಂಥೀಯರದ್ದೇ ಆಗಿದೆ. ಈ ಸಂಧರ್ಭದಲ್ಲಿ ಕ್ರಿಶ್ಚಿಯನ್ನರ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನುಡಿದ ‘ಕಮ್ಯುನಿಷ್ಟರು ಕ್ರಿಶ್ಚಿಯನ್ನರಂತೆಯೇ ಚಿಂತಿಸುತ್ತಾರೆ’ ಎಂಬ ಮಾತುಗಳು ಉಲ್ಲೇಖನೀಯ. ಈ ಹಿನ್ನಲೆಯಲ್ಲಿ  ಕ್ರಿಶ್ಚಿಯನ್ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನವಂಬರ್ ೬ ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಮದರ್ ತೆರೇಸಾ ವಿಚಾರ ವೇದಿಕೆ ಅಶ್ರಯದಲ್ಲಿ ನಡೆಯಲಿರುವ ಮದರ್ ತೆರೆಸಾ ನೆನಪಿನ ಕಾರ್ಯಕ್ರಮ ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ.